ಸಂಪು ಕಾಲಂ : "ಟೈಮ್ ಪಾಸ್" ಎನ್ನುವ ಮುನ್ನ…

ಇತ್ತೀಚಿಗೆ ನನ್ನನ್ನು ಕಾಡುತ್ತಿರುವ (ಅಥವಾ ಹೆಚ್ಚು ಅರ್ಥ ಗ್ರಾಹ್ಯವಾಗುತ್ತಿರುವ) ಒಂದು ವಿಚಾರವೆಂದರೆ ನಮ್ಮ ಜೀವನದಲ್ಲಿ ಸಮಯ ಪ್ರಜ್ಞೆಯ ಮಹತ್ವ. ಸಾಧಾರಣವಾಗಿ ಮಾಡುವ ದೈನಂದಿನ ಚರ್ಯೆಗಳು ಅಷ್ಟೇನೂ ಹೊರೆಯಾಗುವುದಿಲ್ಲ. ಅದನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ ನಾವು ಬಹಳ ನಾಜೂಕಾಗಿ ಸಮಯಪಾಲನೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದು ಬಿಡುತ್ತೇವೆ. ಆದರೆ ಯಾವುದಾದರೂ ಅಪರೂಪದ ಕೆಲಸವನ್ನು ಅದರಲ್ಲೂ ಇಷ್ಟೇ ಸಮಯ ಎಂದು ಒಂದು ಅಂತ್ಯ ರೇಖೆ ಗೀಚಿ ನಡೆಸುವ ಕಾರ್ಯಗಳಿವೆಯಲ್ಲಾ ಅವು ನಮಗೆ ಹೊಸ ಪಾಠ ಕಲಿಸಿ ಬಿಡುತ್ತದೆ.
ಆಗ ಮನೆಗೆ ಕಂಪ್ಯೂಟರ್ ಬಂದ ಹೊಸತು. ಈಗಿನ ಮಕ್ಕಳಿಗೆ ಹೇಳಿದರೂ ನಕ್ಕುಬಿಡುವಷ್ಟು ಕೌತುಕ, ಆಶ್ಚರ್ಯಗಳು ಆ ಟೀವಿಯಲ್ಲದ ಪೆಟ್ಟಿಗೆಯಲ್ಲಿ ಕಂಡು ಬಿಟ್ಟಿದ್ದವು. ಶಾಲೆಯಲ್ಲಿ ದೂರದಿಂದ ಬರಿದೆ ನೋಡಲು ಬಿಡುತ್ತಿದ್ದ ಈ ಮಾಯಾ ಪೆಟ್ಟಿಗೆ ಈಗ ನಮ್ಮ ಮನೆಯಲ್ಲೇ! ನೀವು ನಂಬುತ್ತೀರೋ ಇಲ್ಲವೋ, ಕಂಪ್ಯೂಟರ್ ಆನ್ ಮಾಡಿದ ಕೂಡಲೇ ವಿಂಡೋಸ್ ೯೫ (ಆಗಿನದ್ದು) ತೆರೆ ಕಂಡು ಬರುವ ಮ್ಯೂಸಿಕ್ ಕೇಳಲಷ್ಟೇ ಎಷ್ಟೋ ಬಾರಿ ಅದನ್ನು ಆನ್ ಮಾಡುತ್ತಿದ್ದೆ. ಎಲ್ಲವೂ ಅಷ್ಟೇ ಬಿಡಿ, ‘ಹೊಸತರಲ್ಲಿ ಅಗಸ’ನ ಕಥೆಯೇ. ಆಗ ಒಮ್ಮೆ ನನ್ನ ಅಣ್ಣನೊಬ್ಬ ಅದರಲ್ಲಿ ಕೆಲವು ಆಟಗಳನ್ನು ಹೇಳಿಕೊಟ್ಟು ಬಿಡಬೇಕೇ. ಕಂಪ್ಯೂಟರ್ ಗೆ ವೈರಸ್ ಬರುವ ಹಾಗೆ ನನ್ನ ತಲೆಯಲ್ಲಿ ಆ ಗೇಮ್ಸ್ ತುಂಬಿಬಿಟ್ಟಿತು. ಯಾವಾಗ ನೋಡಿದರೂ ಅದೇ. ಹೀಗೆ ಆಟವಾಡುತ್ತಾ ಅದರ ಮುಂದೆ ಕುಳಿತಿರುವಾಗ ನನ್ನ ಹಿತೈಷಿಯೊಬ್ಬರು ಬಂದು “ಏನು ಮಾಡುತ್ತಿದ್ದೀ?” ಎಂದು ಕೇಳಿದರು. ನಾನು, “ಟೈಮ್ ಪಾಸ್” ಎಂದು ಬಿಟ್ಟೆ. ಅವರು ಅದಕ್ಕೆ ನಕ್ಕು, ನನ್ನ ತಲೆಯನ್ನೊಮ್ಮೆ ಮೊಟಕಿ, “ಟೈಮ್ ಇರುವುದೇ ತುಂಬಾ ಕಡಿಮೆ ಅದನ್ನು ಹೀಗೆ ಪೋಲು ಮಾಡಬೇಡ” ಎಂದು ಹೇಳಿ ಹೊರಟು ಹೋದರು. ಆಗ ನನಗೆ ಇವರ ಬಗ್ಗೆಯೇ ಬೇಸರಿಕೆ ಬಂದಿತ್ತು. ಆದರೆ ನಿಧಾನವಾಗಿ ಬೆಳೆಯುತ್ತಾ ಬೆಳೆಯುತ್ತಾ ಅದರ ಮಹತ್ವ ತಿಳಿಯ ಹತ್ತಿದೆ.
ಎಲ್ಲರಿಗೂ ತಿಳಿದ ವಿಷಯವೇ. “ಸಮಯವನ್ನು ಪೋಲು ಮಾಡಬಾರದು” ಎಂದು. ಆದರೆ ಅದು ಮನವರಿಕೆಯಾಗಲು ಎಷ್ಟು ಸಮಯಬೇಕಲ್ಲವೇ. ಮನೋವಿಜ್ಞಾನದ ವಿದ್ಯಾರ್ಥಿನಿಯಾದ ನನಗೆ ಈ ರೀತಿಯ ಕೆಲವು ವಿಷಯಗಳು ಹೆಚ್ಚು ಆಕರ್ಷಿಸುತ್ತವೆ. ಹಲವಾರು ವಿಚಾರಗಳು ನಾವು ತಿಳಿದಿದ್ದರೂ, ಅದು ನಮ್ಮ ಮಸ್ತಕಕ್ಕೆ ಇಳಿದು, ಅರೆದು “ಹೌದಲ್ಲವೇ ಇದು ಸತ್ಯ” ಎನಿಸಬೇಕು, ಅಲ್ಲಿಯವರೆಗೆ ಅದು ಬರಿಯ ಒಂದು ಆದರ್ಶ ನೀತಿಯೋ ಅಥವಾ ಶಾಲೆಯಲ್ಲಿ ಮಾಸ್ತರರು ಪುನರಾವರ್ತಿಸುವ ಕೆಲವು ಸಾಮಾನ್ಯ ವಿಚಾರಗಳಾಗಿ ಉಳಿದು ಹೋಗುತ್ತದೆ.
“ಕಾಡುತಿವೆ ನನ್ನನೀ ಪ್ರಶ್ನೆಗಳು” ಎಂದು ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಒಂದು ಪದ್ಯ ಬರೆದಿದ್ದೆ. ಮೊನ್ನೆ ಯಾವುದಕ್ಕೋ ಕೆಲ ಹಳೆ ಪುಟಗಳನ್ನು ತಿರುವಿ ಕಂಡಾಗ ಇದು ಸಿಕ್ಕಿತ್ತು. ಅದರಲ್ಲೂ ಒಂದು ಸಾಲು ಹೀಗೆ ಬರೆದಿದ್ದೆ “ಪೋಲು ಮಾಡದಿರಿ ಕಾಲವನು”. ಆಶ್ಚರ್ಯವಾಯಿತು. ಏಳನೇ ತರಗತಿಯಲ್ಲಿ ಬರೆದ ಮಾತು ಬರಿಯ ಒಂದು ಪುಸ್ತಕದ ಪುಟವಾಗೇ ಉಳಿದು ಹೋಗಿತ್ತು. ಇದುವರೆವಿಗೂ ಅದು ಪುಟವಾಗಿಯೇ ಉಳಿದಿದೆಯೇ ಹೊರತು ಅದನ್ನು ಇಂದಿಗೂ ಪಾಲಿಸಿಲ್ಲ ಎಂದು.
ಈ ರೀತಿ ಸಾಕಷ್ಟು ಒಳ್ಳೆಯ ವಿಚಾರಗಳು ನಮಗೆ ತಿಳಿದಿದ್ದರೂ ನಾವು ಏಕೆ ಅದನ್ನು ನಮ್ಮ ಜೀವನದಲ್ಲಿಯೇ ಅಳವಡಿಸಿಕೊಳ್ಳುವುದಿಲ್ಲ, “ಆಚಾರ ಹೇಳೋದಕ್ಕೆ ಬದನೇಕಾಯಿ ತಿನ್ನೋದಕ್ಕೆ” ಅನ್ನೋ ಹಾಗೆ, ಎನಿಸಿ ನನ್ನ ಮೇಲೆ ನನಗೇ ಖೇದವೆನಿಸಿತು. ನನ್ನ ಸ್ನೇಹಿತನೊಬ್ಬ ಬಹಳ ‘ಬುದ್ಧಿಜೀವಿ’ಯಂತೆ ಮಾತನಾಡುತ್ತಿದ್ದ. ಅವನ “Do as I say, don’t do as I do” ಎಂಬ ಹೇಳಿಕೆ ನೆನಪಾಯಿತು.
ಆಗ ನನಗೆ ಥಟ್ ಅಂತ ಹೊಳೆದ ವಿಚಾರ. ನಮ್ಮಲ್ಲಿ ಕಳೆದು ಹೋದ ಶಿಸ್ತು. ಶಾಲೆಯ ಪ್ರಾರ್ಥನೆಗೆ ಸರಿಯಾಗಿ ಹೋಗಿ, ಸಾಲಾಗಿ ನಿಂತು, ಸರಿಯಾದ ಸಮಯಕ್ಕೆ ಡಬ್ಬಿ ಮುಚ್ಚಳ ತೆರೆದು, ನಂತರ ಸರಿಯಾದ ಸಮಯಕ್ಕೆ ಮನೆ ಸೇರುವಷ್ಟಕ್ಕೆ ನಮ್ಮ ಶಿಸ್ತಿನ ಅರಿವು ಮುಗಿದು ಹೋಗಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದು, ಕಪಾಟು ಸಾಫಾಗಿಡುವುದು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಇವುಗಳನ್ನೇ ನಾವು ಶಿಸ್ತು ಎಂದು ಪರಿಗಣಿಸಿಬಿಟ್ಟಿದ್ದೇವೆ. ಇದಕ್ಕೆ ಸರಿಯಾಗಿ ಮಿಲ್ಟ್ರಿ ಟೈಮ್ ನಂತೆ ಸಮಯ ಪಾಲಿಸುತ್ತಿದ್ದರೆ ಅವರು ಶಿಸ್ತಿನ ವ್ಯಕ್ತಿಗಳಾಗುತ್ತಾರೆ. ಇಲ್ಲದೆ ಹೋದರೆ ಅವರು ಅಶಿಸ್ತಿನ ಮನುಷ್ಯ ಎನಿಸಿಕೊಳ್ಳುತ್ತಾರೆ. ನಿಜವಾದ ಶಿಸ್ತು ಎಂದರೆ ಇದಲ್ಲ.
ಜಿಮ್ ರಾನ್ ಅನ್ನುವ ಒಬ್ಬ ಖ್ಯಾತ ಉದ್ಯಮಿ, ಬರಹಗಾರ ಹೇಳುತ್ತಾನೆ: “Discipline is the bridge between goals and accomplishments” ಎಂದು. ಅಂದರೆ, ಶಿಸ್ತು ಎನ್ನುವುದು ನಮ್ಮ ಗುರಿಗೂ ಅದನ್ನು ಪೂರ್ಣಗೊಳಿಸುವ ತುಡಿತ ಅಥವಾ ಪೂರ್ಣತೆಗೂ ನಡುವಿನ ಸೇತುವೆ ಎಂದು. ನಮಗೆ ಸೇತುವೆಯ ಅವಶ್ಯಕತೆ ಇರುವುದು ಯಾವಾಗ ಹೇಳಿ, ಒಂದು ದಡದಿಂದ ಇನ್ನೊಂದು ದಡ ಮುಟ್ಟಲು. ಇನ್ ಅದರ್ ವರ್ಡ್ಸ್, ನಮ್ಮ ಕನಸುಗಳ ರಂಗಮಂಚದಿಂದ ಅದು ಸಾಕಾರಗೊಳ್ಳುವ ನಿಲ್ದಾಣಕ್ಕೆ ತಲುಪಲು. ಈ ಗುರಿತಲುಪುವ ಆಸೆಯೇ ನಮ್ಮಲ್ಲಿ ಅದಕ್ಕಾಗಿ ಒಂದು ಮನೆ ಮಾಡಿಬಿಡುತ್ತದೆ. ಆ ಮನೆಯಲ್ಲಿ ಅದಕ್ಕೆ ಬೇಕಾದ ಪರಿಕರಗಳನ್ನೆಲ್ಲಾ ಇಟ್ಟು ಬಿಡುತ್ತದೆ. ಈ ‘ಪರಿಕರ’ಗಳೇ ನಾವು ಪಾರಿಭಾಷಿಕವಾಗಿ ಕರೆಯುವ ‘ಶಿಸ್ತು’ ಆಗುತ್ತವೆ. ಆದರೆ ನಮ್ಮ ಮನಸ್ಸು ಸ್ವಲ್ಪ ಖೋಡಿ, “ಶಿಸ್ತಿನಿಂದಿರು” ಎಂದು ಹೇಳಿ ನೋಡಿ, ಮುನಿಸಿಕೊಳ್ಳುತ್ತದೆ. ಅದೇ “ನಿನ್ನ ಆಸೆಗಳನ್ನು ಸಾಕಾರಗೊಳಿಸಲು ಹೀಗೆ ಮಾಡು” ಎಂದು ಹೇಳಿ, ನಂಬಿ ನೆಚ್ಚಿಬಿಡುತ್ತದೆ. ನಮಗೆ ಒತ್ತಾಸೆ ಕೊಡುತ್ತದೆ. ಇದಕ್ಕೆ ಮಕ್ಕಳ ಮನೋವಿಜ್ಞಾನದ ಒಂದು ಉದಾಹರಣೆ ಅತ್ಯಂತ ಸೂಕ್ತ. ನೀವು ಗಮನಿಸಿದ್ದರೆ, “ಅತ್ಯಂತ ಶಿಸ್ತಾಗಿ ಬೆಳೆಸುತ್ತೇವೆ” ಎನಿಸಿಕೊಳ್ಳುವ ಮಕ್ಕಳೇ ಸಾಕಷ್ಟು ಅಶಿಸ್ತಿನಿಂದ ಇರುತ್ತಾರೆ. ಆದ್ದರಿಂದ ನಮ್ಮ ಮನಸ್ಸನ್ನು ಟ್ಯೂನ್ ಮಾಡುವುದನ್ನು ನಾವು ಕಲಿಯಬೇಕು. ಶಿಸ್ತು, ಸಮಯ ಪ್ರಜ್ಞೆ ಎಂದು “ಟೈಮ್ ಪಾಸ್” ಮಾಡುವ ಮುನ್ನ, ನಮ್ಮ ಜೀವನದ ಗುರಿ ಏನು, ಅದನ್ನು ಹೇಗೆ ಪಡೆಯಬೇಕು ಎಂದು ಗಮನಹರಿಸೋಣ. ಆಗ ತಂತಾನೇ ಶಿಸ್ತು ನಮಗೆ ಒಲಿಯುತ್ತದೆ.

‍ಲೇಖಕರು G

February 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Vinaya

    Na nanna swalpa samayavanna nimma baraha
    Odoke kottidini 🙂 nivu free iddaga vapas kottu
    Bidi akkayya 😉 chennagide akka

    ಪ್ರತಿಕ್ರಿಯೆ
  2. Gopaal Wajapeyi

    ಅವತ್ತು ‘ಸರಿಯಾದ’ ಸಮಯಕ್ಕೆ ‘ಸರಿಯಾಗಿ’ ಯೋಚಿಸಲು ಹಚ್ಚಿತು ಸಂಯುಕ್ತಾ ನಿಮ್ಮೀ ‘ಸರಿಯಾದ’ ಲೇಖನ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: