ಸಂಪು ಕಾಲಂ : ಗುಮ್ಮನ ಕರೆಯದಿರೆ!

ಗುಮ್ಮನ ಕರೆಯದಿರೆ….!

ಸಿನೆಮಾ ನೋಡೋ ಹುಚ್ಚು ಗೋಪಿಗೆ. ಒಮ್ಮೆ ನೈಟ್ ಶೋ ನೋಡಲೇಬೇಕು ಎಂದು ಹೊರಟ. ಸ್ನೇಹಿತನೊಬ್ಬ, “ಹುಷಾರು ಮಗಾ, ಹೇಳಿ ಕೇಳಿ ಆ ಏರಿಯ ಕತ್ಲು, ಅಲೆಲ್ಲಾ ಹಾವುಗಳು ಜಾಸ್ತಿ ಅಂತೆ” ಅಂದು ಬಿಟ್ಟ. ಗೋಪಿಗೆ ಸಿನೆಮಾ ನೋಡಲೇಬೇಕು ಅನ್ನೋ ತವಕ ಆದರೆ ಕತ್ಲು, ಹಾವು ಭಯ. ಭಯ, ಆಸೆಗಳ ಸೆಣಸಾಟದಲ್ಲಿ ಆ ತಕ್ಷಣಕ್ಕೆ ಗೆದ್ದದ್ದು ಆಸೆ! ಸರಿ, ಗೋಪಿ ಹೊರಟೇ ಬಿಟ್ಟ ಸಿನೆಮಾ ನೋಡಲು. ಮನಸ್ಸು ಮಾಡಿ ಒಬ್ಬನೇ ಹೊರಟ ಗೋಪಿಗೆ ಮನದ ತುಂಬಾ ಭಯ ಆತಂಕ. ಸಣ್ಣ ಸಪ್ಪಳವಾದರೂ ಮೈ ನಡುಕ. ರಾತ್ರಿಯ ತಂಪಲ್ಲೂ ಹೆದರಿಕೆಗೆ ಬೆವರಿ ಮುದ್ದೆಯಾಗಿದ್ದ ಗೋಪಿ. ದೂರದಲ್ಲಿದ್ದ ಸಣ್ಣ ಬೀದಿ ದೀಪಕ್ಕೂ ಮುಪ್ಪಾಗಿ ಕರೆಂಟ್ ಹೋಗಬೇಕೆ! ಈಗ ಸಂಪೂರ್ಣ ಕತ್ತಲು, ಗೋಪಿಯ ಮನಸ್ಸು ಕೂಡ. ಇನ್ನೊಂದು ಐವತ್ತು ಹೆಜ್ಜೆ ಹಾಕಿದರೆ ಸಿನೆಮಾ ಹಾಲು ಸಿಕ್ಕೇ ಬಿಡುತ್ತದೆ ಎಂದು ಭಾರವಾಗಿ ಹೆಜ್ಜೆ ಹಾಕಿದ. ಅಷ್ಟರಲ್ಲೇ ಕಾಲಿಗೆ ಏನೋ ಸಿಕ್ಕಿ, “ಅಯ್ಯೋ ಹಾವು!” ಎಂದು ಮರಗಟ್ಟಿಹೋದ ಹೋದ ಗೋಪಿ, ತನ್ನ ಜೀವ ಅಲ್ಲಿಯೇ ತೊರೆದಿದ್ದ! ಬೆಳಕಾದಾಗ ಜನ ಕಂಡದ್ದು ಗೋಪಿಯ ಭಯಸ್ಮಿತ ಕಳೇಬರ ಹಾಗು ಅವನ ಕಾಲಿಗೆ ಸಿಕ್ಕ ಒಂದು ತೆಂಗಿನ ಚಿಪ್ಪು!

ಇದು ನಾನು ಎಂದೋ ಕೇಳಿ ಮರೆತಿದ್ದ ಸತ್ಯ ಘಟನೆ. ಈಗ ಯಾಕೆ ಹೇಳಿದೆ ಅಂದರೆ, ‘ಗೋಪಿ’ ಇದಾನಲ್ಲ ಅವನನ್ನು ನೆನೆಸಿಕೊಳ್ಳಲು (ಅಥವಾ ಮರೆಯಲು?!). ಈ ಗೋಪಿ ನಮ್ಮೆಲ್ಲರಲ್ಲೂ ಇದ್ದಾನೆ. ಇನ್ ಫ್ಯಾಕ್ಟ್, ನಮ್ಮೆಲ್ಲರ ಜೀವನದ ಒಂದು ಮುಖ್ಯ ಭಾಗ. ನಮ್ಮೆಲ್ಲ ನಿರ್ಣಯಗಳೂ, ನಿರ್ಧಾರಗಳೂ ‘ಗೋಪಿ’ಯ ಮುಖಾಂತರವೇ ಆಗಬೇಕು. ಈ ‘ಗೋಪಿ’ ಒಬ್ಬ ವ್ಯಕ್ತಿ ಅಲ್ಲ. ಅದೊಂದು ‘ಪ್ರಕ್ರಿಯೆ’ ಅಥವಾ ‘ಪರಿಚೆ’ (ಇಂಗ್ಲೀಷಿನ ಟ್ರೈಯಟ್ ಎನ್ನಬಹುದು). ‘ಗೋಪಿ’ ಯಾರೆಂದು ತಿಳಿಯಿತಲ್ಲ? ನಮ್ಮಲ್ಲಿರುವ ‘ಭಯ’ ಎನ್ನುವ ಭೂತ. ಕತ್ತಲು, ಬೆಳಕು, ಚಳಿ, ಮಳೆ, ಜನ, ಗುಂಪು, ಬದುಕು, ಮನಸ್ಸು ಹೀಗೆ ನಮ್ಮಲ್ಲಿ ಅಡಗಿ ಕುಳಿತಿರುವ ಈ ಭಯಕ್ಕೆ ಹಲವಾರು ಮುಖಗಳು. ಬೇಡವೆಂದರೂ ಹಟಮಾಡಿ, ನಮ್ಮ ಉಸಿರ ಬಸಿಯುವ ಈ ಭಯವನ್ನು ನಾವು ನಿರ್ಭಯವಾಗಿ ಬೆಳೆಯಲು ಬಿಡುತ್ತೇವೆ, ನಿರ್ಭಿಢತೆಯಿಂದ ನಮ್ಮನ್ನಾವರಿಸಲು ನಾವೇ ಗೇಟ್ ಪಾಸ್ ಕೊಡುತ್ತೇವೆ.

ನನ್ನಪ್ಪ ಹೇಳುತ್ತಿದ್ದ ಹಳೆಯ ಒಂದು ಘಟನೆ! ಸಂಜೆಗತ್ತಲ ಸಮಯ. ಹಳ್ಳಿಯ ಖಾಲಿ ರಸ್ತೆ, ಮಸುಕು ಬೆಳಕು. ಗಾಳಿಯ ಭರೋ ಸದ್ದು, ಸುತ್ತಲಿನ ನಿಸರ್ಗದ ಬಯಲು ಬಿಟ್ಟರೆ ಬೇರೇನೂ ಇಲ್ಲ. ಅಪ್ಪ ಆಗ ವಿಧ್ಯಾರ್ಥಿ. ಹೀಗೆ ನಡೆಯುತ್ತಾ ಬರುತ್ತಿರುವಾಗ ಇದ್ದಕ್ಕಿದ್ದಂತೆ ದೂರದಲ್ಲಿ ಯಾರೋ ಹೆಂಗಸು ತನ್ನ ತಲೆಯ ಮೇಲೆ ಬುತ್ತಿ ಹೊತ್ತು ಊರ ಹೊರಗೆ ನಡೆಯುತ್ತಿದ್ದಂತೆ ಕಾಣುತ್ತದೆ. “ಅರೆ! ಇಷ್ಟು ಕತ್ತಲಲ್ಲಿ, ಬುತ್ತಿ ಹೊತ್ತು ಅದೂ ಊರ ಹೊರಗೆ, ಒಂಟಿ ಹೆಣ್ಣು ನಡೆಯುತ್ತಿರುವುದು ಅಂದರೆ?!…..” ಅಪ್ಪನ ಮನಸಿನ ‘ಭಯ’ ತನ್ನ ಬಟ್ಟೆ ಕಳಚಿ ಹೊರಬಂದು ಮುಸಿನಗುತ್ತಿದ್ದ. “ಅದೇನು ದೆವ್ವವಿರಬಹುದಾ, ಅಥವಾ ನಿಜವಾಗಲೂ ಒಂದು ಹೆಣ್ಣೇ?” ಎಂದು ಆಲೋಚಿಸುತ್ತಲೇ, ಹೆಜ್ಜೆ ಗತಿ ನಿಧಾನವಾದಾಗ, ಇದ್ದಕ್ಕಿದ್ದಂತೆ ಆ ಹೆಣ್ಣಿನ ಚಿತ್ರ ಮಸುಕಾಗಿ, ವಿರೂಪಗೊಂಡಂತೆ ಅನಿಸಿತು. ಕಣ್ಣುಜ್ಜಿ ಮತ್ತೆ ಸರಿಯಾಗಿ ನೋಡಿದರೆ, ಈಗ ಇನ್ನೂ ವಿಚಿತ್ರ! ಒಬ್ಬ ಕೌ ಬಾಯ್ ನಂತಹ ಕುದುರೆ ಸವಾರ ತನ್ನತ್ತ ಬರುತ್ತಿದ್ದಾನೆ ಎನಿಸಿತು. ಈಗ ಅಪ್ಪನ ಭಯ ಮಿತಿಮೀರಿತ್ತು. ಎದೆ ಢವ ಢವ! “ಅಯ್ಯೋ ಜೀವವೇ ಇದು ನಿಜವಾಗಿಯೂ, ದೆವ್ವವೇ, ಇನ್ನು ಇಲ್ಲಿಂದ ಕಾಳುಕೀಳಬೇಕು” ಎಂದು ಏದುಸಿರು ಬಿಡುವಾಗಲೇ ಗೊತ್ತಾದದ್ದು, ಅದೊಂದು ಎಕ್ಕದ ಗಿಡ, ಮತ್ತೆರಡು ಕಲ್ಲುಗಳು ಮತ್ತು ಅವುಗಳೊಂದಿಗೆ ಆಟವಾಡುತ್ತಿರುವ ಗಾಳಿ ಎಂದು!

ಇದನ್ನು ಆಗೆಲ್ಲಾ ಕೇಳಿ, ನಕ್ಕು, ಪದೇ ಪದೇ “ಅಪ್ಪಾ ಅದೇ ಆ ಎಕ್ಕದ ಗಿಡದ ಕಥೆ ಹೇಳು” ಎಂದು ಹೇಳಿಸಿ, ಕೇಳಿ ಎಂಜಾಯ್ ಮಾಡಿದ್ದೆ. ಈಗ ಅದನ್ನು ನೆನೆದರೆ, ಅದು ಒಂದು ಒಳ್ಳೆಯ ಸೈಕಲಾಜಿಕಲ್ ಸ್ಟಡಿ ಆಗಿ ಕಣ್ಣ ಮುಂದೆ ನಿಲ್ಲುತ್ತದೆ. ಈ ರೀತಿಯ ಅನಿಸಿಕೆ ಅನುಮಾನಗಳ ಕಾರಣ ನಮ್ಮ ಬೆಳವಣಿಗೆಯ ಜೊತೆಗೆ ನಾವು ಕಲಿತ, ಕಲಿಸಲ್ಪಟ್ಟ ಪೂರ್ವಾಗ್ರಹಿತ ಭಯ, ಆತಂಕಗಳು. ಆ ಕತ್ತಲ ರಾತ್ರಿಯಲ್ಲಿ ಅಪ್ಪ ಹೊರಗೆ ಹೋದದ್ದೇ ಈಗಿನ ಕಾಲದ, ಅದರಲ್ಲೂ ಸಿಟೀ ಹುಡುಗರಿಗೆ ಆಶ್ಚರ್ಯ, ಭಯಗಳ ಕಚಗುಳಿಯಿಡುತ್ತದೆ ಎಂದರೆ ಸುಳ್ಳಲ್ಲ. ಈ ಭಯ ಅನ್ನುವುದು ಕಾಲ, ವಯೋಮಾನಗಳ ಅನುಗುಣವಾಗಿ ಬದಲಾಗುವಂಥದ್ದು.

ಈ ಭಯದ ಉಗಮ ಅಥವಾ ‘ತರಬೇತಿ’ ನಮಗೆ ಹಸಿ ಹಸಿ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಪುಟ್ಟ ಮಗುವಿಗೆ ಯಾವ ಭಯವೂ ಇರುವುದಿಲ್ಲ, (ಈ ಮಾತನ್ನು ನೆನೆದಾಗಲೆಲ್ಲಾ ನನಗೆ ‘ಬೇಬೀಸ್ ಡೇ ಔಟ್’ ಚಿತ್ರ ಕಣ್ಣ ಮುಂದೆ ಬರುತ್ತದೆ). ಇದಕ್ಕೆ ಪೂರಕವಾಗಿ ನೆನಪಾದ ಒಂದು ಪ್ರಸಂಗ ಹೇಳಿಬಿಡುತ್ತೇನೆ. ನನ್ನ ಸಂಬಂಧಿಕರ ಮಗುವೊಂದು, ಮುದ್ದು ಮುಖದ, ಗುಳಿ ಕೆನ್ನೆಯ ಪೋರ, ಹಿರಿಯರಿಗೇ ಭಯ ಮೂಡಿಸುವಂತಹ ದಪ್ಪ ಕೋರೆ ಹಲ್ಲುಗಳ ದೊಡ್ಡ ನಾಯಿಯೊಂದಿಗೆ ಕೇಕೆ ಹಾಕುತ್ತ ಆಟವಾಡುತ್ತಿತ್ತು. ಅದನ್ನು ಈ ಮಗು ಮುಟ್ಟುವುದು, ಆ ದೈತ್ಯಾಕಾರದ ನಾಯಿ ತನ್ನ ಹೆಬ್ಬಾಲವನ್ನು ಈ ಮಗುವಿನ ಮುಖಕ್ಕೆ ರಪ್ ಅಂತ ಖುಷಿಯಲ್ಲಿ ಬಡಿಯುವುದು, ಮತ್ತೆ ಈ ಮಗು ಕಿಲಕಿಲನೆ ನಗು! ಇದನ್ನು ಕಂಡು ನನ್ನನ್ನೂ ಸೇರಿ ಅಲ್ಲಿ ನೆರೆದ ಒಂದಷ್ಟು ಮಂದಿ ಹೆದರಿ ಓಡಿ ಮಗುವನ್ನು ಹಿಂದೆಳೆದಿದ್ದೆವು. ಮಗುವಿನೊಂದಿಗೆ ಅತ್ಯಂತ ಆಪ್ಯಾಯತೆಯಿಂದ ಆಟವಾಡುತ್ತಿದ್ದ ಆ ದೈತ್ಯ ನಾಯಿಯೂ ಮಗುವಂತೆ ಕಂಡದ್ದೂ ಹೌದು! ಆದರೆ, ಅಲ್ಲಿ ಕೆಲಸ ಮಾಡಿದ್ದು ನಮ್ಮ ಭಯ, ಆತಂಕ. “ಅಯ್ಯೋ, ಆ ನಾಯಿ ಮಗುವಿಗೆ ಏನಾದರೂ ಮಾಡಿಬಿಟ್ಟರೆ?” ಎಂಬಂತಹ ಅತ್ಯಂತ ಸಹಜವಾದ ಆತಂಕ. ಇದು ಬರಿ ಒಂದು ಮೆಲೋಗ್ಗರಣೆಯ ಉದಾಹರಣೆ. ಇನ್ನು ನಾವು ಮಕ್ಕಳಲ್ಲಿ ಇಲ್ಲದ ಭಯ ಹೇಗೆ ಹುಟ್ಟಿಸುತ್ತೇವೆ ಎಂದರೆ, ಆ ತುಂಟ ಮಕ್ಕಳನ್ನು ಹತೋಟಿಯಲ್ಲಿಡಲು ನಮಗೊಂದು ಸುಲಭೋಪಾಯ ಬೇಕು. “ನೋಡು, ಬೇಗ ತಿನ್ನಬೇಕು, ಇಲ್ಲ ಅಂದ್ರೆ ಗುಮ್ಮ ಬರ್ತಾನೆ” ಅಂತ ಒಂದು ಹೊಸ ಕ್ಯಾರೆಕ್ಟರ್ ಹುಟ್ಟಿಸೋದು, ಇದರಿಂದ ಮಕ್ಕಳು ನಮ್ಮ ಮಾತನ್ನು ಕೇಳುತ್ತಾರೆ. ಹೀಗೆ ಈ ಗುಮ್ಮ, ಗೊಗ್ಗಯ್ಯ ಇಂತಹ ಅಭೂತಪೂರ್ವ ಪಾತ್ರಗಳು ಅಥವಾ ಲಕ್ಷಣಗಳು ನಮ್ಮಲ್ಲಿ ಜೀವವಿರುವವರೆಗೂ ಬೇರೂರಿ ಬಿಡುತ್ತದೆ.

ನಾನಾಗಲೇ ಹೇಳಿದಂತೆ ಈ ಗುಮ್ಮ ನಮ್ಮ ಬೆಳವಣಿಗೆಗೆ ಅನುಗುಣವಾಗಿ ಅದರ ರೂಪ ಆಕಾರಗಳನ್ನೂ ಬದಲಾಯಿಸುತ್ತಾ ತಾನೂ ಬೆಳೆಯುತ್ತದೆ. ಒಬ್ಬ ಕಾರ್ಪೋರೆಟ್ ಉದ್ಯಮಿಗೆ ತನ್ನ ‘ಕ್ಲೈಂಟ್’ ಎಂಬ ಗುಮ್ಮ ಸದಾ ಕಾಡುತ್ತಾನೆ. ಒಬ್ಬ ಕಾಲೇಜು ವಿಧ್ಯಾರ್ಥಿಗೆ ಮಾರ್ಕ್ಸು, ರಾಂಕು, ಹುಡುಗಿ ಇತ್ಯಾದಿ ಗುಮ್ಮಗಳಿರುತ್ತಾರೆ. ಕೆಲವರಿಗೆ ದೆವ್ವ ಭೂತಗಳ ಭಯ. ಕೆಲವರಿಗೆ ದೇವರ ಭಯ. ದೇವರು ಭಯದಿಂದಲೇ ಹುಟ್ಟಿದ್ದು ಎಂದು ಕಾರಂತರು ಪ್ರತಿಪಾದಿಸುತ್ತಾರೆ. ಇದು ಮತ್ತೊಂದು ದೊಡ್ಡ ವಿಚಾರ. ಯೋಚನೆ ಮಾಡಿದರೆ ಸರಿ ಅನ್ನಿಸುವುದೂ ಹೌದು. ಸುಮ್ಮನೆ ಆಲೋಚಿಸಿ, ನಮಗೆ ಹೆದರಿಕೆಯಾದಾಗ “ದೇವರೇ” ಅನ್ನುತ್ತೇವೆ. “ಕಾಪಾಡಪ್ಪಾ” ಎಂದು ಮೊರೆ ಹೋಗುತ್ತೇವೆ. ಈ ರೀತಿ ಆದಾಗ, ಆ ದೇವರು ಇದ್ದಾನೋ, ಕಾಪಾಡುತ್ತಾನೋ ಇಲ್ಲವೋ, ಅಂತೂ ನಮಗೊಂದು ಮಾನಸಿಕವಾದ ಕಂಫರ್ಟ್ ಸಿಗುತ್ತದೆ. ನಮಗೆ ಧೈರ್ಯ ಬರುತ್ತದೆ. “ಆ ದೇವರಿದ್ದಾನೆ, ನೋಡ್ಕೋತಾನೆ” ಅಂದಾಗ, ನೆಮ್ಮದಿಯ ನಿಟ್ಟುಸಿರು. ಇರಲಿ. ಇನ್ನು ನಮ್ಮಲ್ಲಿ ಕೆಲವರಿಗೆ ಕಾರ್ಪೋರೆಟ್ ಭಯ ಆವರಿಸಿರುತ್ತದೆ. ಇದನ್ನು ‘ಕಾರ್ಪೋರೆಟ್’ ಎಂದು ಕರೆದದ್ದಕ್ಕೂ ಕಾರಣವಿದೆ. ಇದೇನೆಂದರೆ, ನಮ್ಮಲ್ಲಿ ನಾಗರೀಕತೆ, ಕೃತಕತೆ ಹೆಚ್ಚಿದಂತೆ ನಾವು ಹೆಚ್ಚು ಸೊಫಿಸ್ಟಿಕೇಟ್ ಆಗಿ ವರ್ತಿಸಬೇಕೆಂದು ನಮ್ಮ ನಡೆ ನುಡಿ ತಿದ್ದುತ್ತಿರುತ್ತೇವೆ. “ನಾನು ಸರಿಯಾಗಿದ್ದೇನೆಯೇ?”, “ಸರಿಯಾಗಿ ಮಾತನಾಡುತ್ತಿದ್ದೇನೆ ತಾನೇ”, “ಅಯ್ಯೋ ಅವರೆನೆಂದುಕೊಂಡರೋ!” ಎಂಬಿತ್ಯಾದಿ ಅನಪೇಕ್ಷಿತ ಆತಂಕ, ತಬ್ಬಿಬ್ಬುಗಳಿಗೆ ಬಲಿಯಾಗುತ್ತೇವೆ. ಇದರಿಂದ ನಮ್ಮ ಆತ್ಮವಿಶ್ವಾಸ ಕುಂದುತ್ತದೆ.

‘ಭಯ’ ಎಂಬ ಪೆಡಂಭೂತವು ತನ್ನ ದಿವ್ಯ ಬಾಹುಗಳನ್ನು ನಮ್ಮತ್ತ ಯಾವಾಗಲೂ ಚಾಚಿರುತ್ತದೆ. ಈ ‘ಭಯ’ ಎಂಬ ಫ್ಯಾಕ್ಟರ್ ಬೇಕೋ ಬೇಡವೋ ಅಂತೂ ನಮ್ಮಲ್ಲಿನ ಒಂದು ಬೈ ಪ್ರಾಡಕ್ಟ್ ಆಗಿ ನೆಲಕಚ್ಚಿರುವುದು ಸತ್ಯ. ಆದ್ದರಿಂದ ಇದನ್ನು ನಮಗೆ ಬೇಕಾದಂತೆ, ನಮ್ಮ ಬೆಳವಣಿಗೆಗೆ ಪೂರಕವಾಗಿ ಬೆಳೆಸಿ ಟ್ಯೂನ್ ಮಾಡುವುದು ನಮ್ಮ ಕೈಗೆ ಸಿಗಬೇಕಾದ ಗುಟ್ಟಿನ ಅಸ್ತ್ರ. ಹೌದು, ಕೆಲವೊಮ್ಮೆ ಭಯ ಬೇಕು. ಸ್ವಾತಂತ್ರ್ಯ ಹೇಗೆ ಸ್ವೇಚ್ಛೆಯಾಗಬಾರದೋ ಹಾಗೆ ಭಯ ಬೇಡ ಧೈರ್ಯ ಇರಬೇಕು ಎಂದು ಹರಿಯುವ ಹೊಂಡಕ್ಕೆ ತಲೆ ಕೊಡುವುದಲ್ಲ. ನಮ್ಮಲ್ಲಿನ ಭಯ, ದಿಗಿಲುಗಳನ್ನು ನಾವು ಶ್ರಧ್ಧೆ, ಸ್ವೋಪಜ್ಞತೆ ಹಾಗು ತಾಳ್ಮೆಯಾಗಿ ಮಾರ್ಪಡಿಸಬೇಕು. ಬೇಡದ, ಕ್ಷುಲ್ಲಕ ವಿಚಾರಗಳಿಗೆ ಭಯ ಪಡುವ ಬದಲು ನಮ್ಮಲ್ಲಿನ ಭಯವನ್ನು ಒಂದು ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು. ಆಗ ಅದು ಅತ್ಯಂತ ಉಪಯೋಗಕಾರೀ ಗುಣವಾಗಿ ರೂಪುಗೊಳ್ಳುತ್ತದೆ. ಯಾವುದೇ ಕೆಲಸಕ್ಕೆ ಬ್ರೇಕ್ ಹಾಕುವ ‘ಭಯ’ವನ್ನು, ಧೈರ್ಯವಿದೆ ಎಂದು ಬ್ರೇಕ್ ಮುರಿಯುವ ಬದಲು, ದಾರಿಗನುಸಾರವಾಗಿ, ಮಿತವಾಗಿ ಉಪಯೋಗಿಸಿ ಗಾಡಿ ಓಡಿಸಿದರೆ ಅದು ನಮಗೆ ಆಗುವ ಅಪಾಯ ತಪ್ಪಿಸುತ್ತದೆ ಹಾಗು ಯಶಸ್ವೀ ಪಯಣವು ನಮ್ಮದಾಗುತ್ತದೆ.

 

‍ಲೇಖಕರು G

November 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. bharathi bv

    Hmm .. nija , balyadindle bhayada beeja bitti bidtivi .. namge gottillada haage … chenda bardidira ..

    ಪ್ರತಿಕ್ರಿಯೆ
  2. Badarinath Palavalli

    ಆಂತರ್ಯದ ಭಯ ಪೋಷಣೆ ನಮ್ಮದೇ ತಪ್ಪು. ಇದನ್ನು ಎಷ್ಟು ಚೆನ್ನಾಗಿ ಹೇಳಿದ್ದೀರಿ ಸಂಪು.

    ಆತ ಭಯಸ್ಥ ಎಂದರೆ ದೇವರಿಗೆ ಹೆದರುತ್ತಾನೋ? ಅಥವ ಹೆಂಡತಿಗೋ ಎನ್ನುವ ಅನುಮಾನ ನಮಗೆ ಬರುತ್ತದೆ! 😀

    ಒಳ್ಳೆಯ ಭಯ ವಿಮೋಚನಾ ಬರಹ.

    ಪ್ರತಿಕ್ರಿಯೆ
  3. Sathish Naik

    ಭಯದ ಕುರಿತಾಗಿ ಒಳ್ಳೆಯ ಲೇಖನ ಮೇಡಂ..

    ಬಾಲ್ಯದಿಂದಲೂ ನಾವೂ ಇಂಥ ಅನೇಕ ಭಯಗಳನ್ನ ಮತ್ತೊಬ್ಬರಿಂದ ಹೊರೆಸಿಕೊಂಡು.. ಮತ್ತೊಬ್ಬರಿಗೆ ಹೊರೆಸುತ್ತಲೇ ಬೆಳೆದವರು. ಕೆಲವೊಂದು ವಿಚಾರಗಳ ಮಟ್ಟಿಗೆ ಈಗ ನಾವು ಭಯ ಮುಕ್ತರು ಅನ್ನೋ ಬೋರ್ಡ್ ಗಳನ್ನ ಧಾರಾಳವಾಗಿ ಹಾಕಿ ಕೊಳ್ಳಬಹುದು. ಆದರೆ ಕೆಲವು ಭಯ ಮಾತ್ರ ನಕ್ಷತ್ರಿಕನ ಹಾಗೆ.. ಅವು ಬೆನ್ನು ಬಿಡೋಕೆ ಶಾಯದ್ ದೈವ ಪ್ರೇರಣೆಯೇ ಆಗಬೇಕೆನೋ..?? ಲೇಖನ ತುಂಬಾ ಇಷ್ಟ ಆಯಿತು ಮೇಡಂ..

    ಪ್ರತಿಕ್ರಿಯೆ
  4. paresh saraf

    “ಭಯ” ದ ಹುಟ್ಟಿನ ಬಗ್ಗೆ ಸವಿವರ ಲೇಖನ ಚೆನ್ನಾಗಿದೆ..

    ಪ್ರತಿಕ್ರಿಯೆ
  5. Gopaal Wajapeyi

    ‘ಬೀದಿ ದೀಪಕ್ಕೂ ಮುಪ್ಪಾಗಿ’…! ಅಬ್ಬಾ… ಎಂಥಾ ಕಲ್ಪನೆ…! ಸಂಯುಕ್ತಾ, ಇಂಥ ವಾಕ್ಯಗಳೇ ನಿಮ್ಮ ಲೇಖನವನ್ನು ಓದಿಸಿಕೊಂಡು ಸಾಗುತ್ತ, ಒಂದು ಪ್ರೌಢವಾದ, ಗಂಭೀರವಾದ ವಿಚಾರದತ್ತ ನಮ್ಮನ್ನು ಸೆಳೆದೊಯ್ಯುತ್ತವೆ. ಹಗ್ಗ ‘ಹಾವಾಗಿ’ ಕಾಣುವ (ಕಾಡುವ?) ಸ್ಥಿತಿಯನ್ನು ನಾವೆಲ್ಲಾ ಒಂದು ಹಂತದಲ್ಲಿ ಹಾದು ಬಂದವರೇ…
    ಇಂಥ ಸ್ಥಿತಿಯತ್ತ ಮಕ್ಕಳನ್ನು ದೂಡುವ ಕೆಲಸವನ್ನು ತಮಗರಿವಿಲ್ಲದಂತೆ ದೊಡ್ದವರೇ ಮಾಡಿರುತ್ತಾರೆ. ಮಕ್ಕಳನ್ನು ನಿರ್ಭಯರನ್ನಾಗಿ ಬೆಳೆಸಬೇಕೆಂದು ವಾದಿಸುವವರು ಕೂಡ ಒಂದಿಲ್ಲೊಂದು ಹಂತದಲ್ಲಿ ಮಕ್ಕಳಲ್ಲಿ ಏನಾದರೂ ಭಯವನ್ನು ಬಿತ್ತಿರುತ್ತಾರೆ…
    ಸಂಯುಕ್ತಾ, ‘ಸಂಪು ಕಾಲಂ’ ನನ್ನ ಮಟ್ಟಿಗೆ ಸಂಪಾಗಿ ಓದುವ ಕಾಲಮ್…

    ಪ್ರತಿಕ್ರಿಯೆ
  6. Swarna

    ಪದಗಳ ಬಳಕೆ ಸುಂದರವಾಗಿದೆ, ಚೆನ್ನಾಗಿದೆ.

    ಪ್ರತಿಕ್ರಿಯೆ
  7. RR

    ನನಗೆ ನನ್ನ ಬಾಲ್ಯದ ಹಳ್ಳಿ ಜೀವನ ನೆನಪು ಮಾಡಿಸಿದ್ದಕ್ಕೆ ತುಂಭಾ ಸಂತೋಷವಾಯಿತು ಸಂಪುರವರೆ.

    ಪ್ರತಿಕ್ರಿಯೆ
  8. Pushparaj Chauta

    ಕೆಲ ಭಯಗಳು ಇನ್ನೂ ಹೋಗಿಲ್ಲ.. ಹಾಗೇ ಇವೆ.. ನಿಮ್ಮ ಬರಹದೊಳಗಿನ ಭರವಸೆ ಸಲಹೆಗಳ ಭಯಕ್ಕಾದರೂ ಹೋದೀತೇನೋ ಕಾದು ನೋಡೋಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: