ಸಂಪು ಕಾಲಂ : ’ಕನ್ನಡವೆನೆ…’

ಕನ್ನಡಾನಾ… ಒಹ್ ನೋ!

ಅದೊಂದು ಹೊಸ ಆಟ, ಕನ್ನಡ ಅಕ್ಷರಗಳ ಆಟ. ಈ ಬಗೆಯದ್ದು ಇದುವರೆವಿಗೂ ಕನ್ನಡದಲ್ಲಿ ಕಾಣೆ! ಇದರ ಬಗ್ಗೆ ಟಿವಿಯಲ್ಲಿ ಕೇಳಿ ಮೆಚ್ಚಿದ್ದ ನಾನು, ಒಂದು ಪುಸ್ತಕ ಪ್ರದರ್ಶನದಲ್ಲಿ ಮಾರಾಟಕ್ಕಿದ್ದುದ ಕಂಡು ಪುಳಕಗೊಂಡೆ. ಇದರ ತಯಾರಿಕೆಯಲ್ಲಿ ಅನುಭವಿಸಿರಬಹುದಾದ ಸವಾಲುಗಳನ್ನು, ಜಟಿಲತೆಗಳನ್ನೂ ನೆನೆದು, ಇದರ ಕರ್ತೃವನ್ನು ಕಾಣಬೇಕೆಂಬ ಆಸೆ ಮೂಡಿದ್ದಕ್ಕೂ, ಆಕೆ ಅಲ್ಲೇ ಪ್ರತ್ಯಕ್ಷವಾಗಿ ಕಂಡದ್ದಕ್ಕೂ ಸಮವಾಯಿತು. ನನ್ನ ಮುಖ ಅರಳಿತು. ಸುಮಾರು ನಲವತ್ತೈದರ ಮೇಲಿನ ಪ್ರಾಯವಿರಬಹುದು. ಒಮ್ಮೆಲೇ ಆಕೆಯ ಬಳಿಗೆ ಹೋಗಿ, “ನೀವು ತುಂಬಾ ಒಳ್ಳೆಯ ಕೆಲಸ ಮಾಡಿರುವಿರು, ಇದು ಕನ್ನಡಕ್ಕೆ ಕೊಡುಗೆ, ನಿಮ್ಮನ್ನು ಭೇಟಿ ಮಾಡಬೇಕೆಂದಿದ್ದೆ, ಇಲ್ಲೇ ಸಿಕ್ಕಿದ್ದು ಸಂತೋಷವಾಯಿತು, ನಿಮ್ಮ ಭಾಷಾಭಿಮಾನಕ್ಕೆ ವಂದನೆ ಮತ್ತು ಅಭಿನಂದನೆಗಳು…..” ಎಂದು ಒಂದೇ ಉಸಿರಿನಲ್ಲಿ, ಉತ್ಸಾಹದಲ್ಲಿ ಮಾತಾಡಿಬಿಡುವ ಎಂದು ಆಕೆಯತ್ತ ಹೊರಟೆ. ಆಕೆಯತ್ತ ನಗುಮೊಗದಿಂದಲೇ, “ಮೇಡಂ, ಇದು ಖರೀದಿಗಿದೆಯೇ ಅಥವಾ ಪ್ರದರ್ಶನವಷ್ಟೇನೇ?” ಎಂದು ಕೇಳಿದೆ. ಆಕೆ ಥಟ್ಟನೆ, “ಎಸ್, ಇಟ್ ಇಸ್ ಫಾರ್ ಸೇಲ್” ಎನ್ನಬೇಕೆ! ನನ್ನ ಉತ್ಸಾಹ ಕೊಂಚ ಕುಂದಿದರೂ, “ಆದರೇನಂತೆ ನಾ ಇಂಗ್ಲಿಷ್ ನಲ್ಲಿ ಮಾತನಾಡುವುದಿಲ್ಲವೇ” ಎಂದು ಚೇತರಿಸಿಕೊಂಡು, ಮತ್ತೆ ಕನ್ನಡದಲ್ಲಿ ಉತ್ತರ ಕೊಟ್ಟರೆ ಬಹುಷಃ ಆಕೆಗೆ ಖುಷಿಯಾಗಬಹುದು ಎಂದು ತಿಳಿದು, “ಎಷ್ಟು ಮೇಡಂ?” ಎಂದೆ. “ಓನ್ಲಿ ತ್ರೀ ಫಿಫ್ಟಿ” ಎಂದರು. ಅರೆ! ಇರಲಿ, ಮತ್ತೆ, “ಇದನ್ನು ನೀವೇ ತಯಾರು ಮಾಡಿದ್ದಾ ಮೇಡಂ?” ಎಂದೆ. “ಎಸ್, ಇಟ್ ಇಸ್ ಮೈ ಓನ್ ಕ್ರಿಯೇಶನ್” ಎಂದರು. ನನ್ನ ತಾಳ್ಮೆ ಮಿತಿ ಮೀರಿತ್ತು. “ಮೇಡಂ, ನಿಮ್ಮ ಕ್ರಿಯೇಶನ್ ಅದ್ಭುತವಾಗಿದೆ. ಇದು, ನಾವು ನೀವು ಹೆಮ್ಮೆ ಪಡಬೇಕಾದ ವಿಷಯ. ಆದರೆ, ದಯವಿಟ್ಟು, ಕನ್ನಡದಲ್ಲಿ ಮಾತನಾಡುವವರ ಜೊತೆಗಾದರೂ ಕನ್ನಡದಲ್ಲಿ ಮಾತನಾಡಿ, ಬಿ ಪ್ರೌಡ್ ಅಬೌಟ್ ಇಟ್!” ಎಂದೆ. ಆಕೆ ಸಂಕೋಚದಿಂದ ನಗುತ್ತ ಕೊಟ್ಟ ಉತ್ತರ ಏನು ಗೊತ್ತೇ?, “ಎಲ್ಲರೂ ಇಂಗ್ಲಿಷ್ ನೇ ಬಯಸುತ್ತಾರೆ, ನನ್ನ ವ್ಯಾಪಾರ ನಡೀಬೇಕಲ್ಲ ಮೇಡಂ” ಎಂದು!

ಭಾನುವಾರದ ಚರ್ಯೆ ಎಂಬಂತೆ, ನನ್ನಾತನೊಂದಿಗೆ ಜಯನಗರದ ಒಂದು ಪುಸ್ತಕ ಪ್ರದರ್ಶನಕ್ಕೆ ಹೊರಟೆ. ಅದು ಹಳೆಯ ಪುಸ್ತಕಗಳು ಅರ್ಧ ಬೆಲೆಗೂ ಕಡಿಮೆಗೆ ಮಾರಾಟಕ್ಕೆ ದೊರೆಯುವ ಸ್ಥಳ. ಮತ್ತಿನ್ನು ಕೇಳಬೇಕೆ, ಹುರುಪಿನಿಂದ ಧಾವಿಸಿಯಾಗಿತ್ತು. ಪುಟ್ಟ ಅಂಗಡಿಯಲ್ಲಿ ಎಲ್ಲೆಲ್ಲೂ ಪುಸ್ತಕ, ಸಂದಿ ಗೊಂದಿಗಳಲ್ಲಿ, ಮೇಜಿನ ಮೇಲೆ, ಕೆಳಗೆ ಪುಸ್ತಕಗಳು. ಒಂದಾದರೂ ಕನ್ನಡ ಪುಸ್ತಕ ಸಿಗಬೇಡವೆ! ಕೋಪಗೊಂಡು, ಆ ಅಂಗಡಿಯವನ ಬಗ್ಗೆ ಅಸಹನೆಯಿಂದ, “ಏನಪ್ಪಾ, ನಿನ್ನ ಅಂಗಡಿಯಲ್ಲಿ ಒಂದಾದರೂ ಕನ್ನಡ ಪುಸ್ತಕವಿಲ್ಲವಲ್ಲ, ಯಾಕೆ? ನೀನಿರುವ ಸ್ಥಳ ಯಾವುದು?” ಎಂದು ಸ್ವಲ್ಪ ಜೋರಾಗಿಯೇ ಗದಮಾಯಿಸಿದೆ. ಅದಕ್ಕೆ ಅವನು, ನಿರಾಳವಾಗಿಯೇ, “ಏನ್ ಮಾಡಕಾಯ್ತದೆ ಅಕ್ಕಾ, ನಮಗೆ ಬಿಸನೆಸ್ಸು, ಕನ್ನಡ ಬುಕ್ಕು ನಮಗೆ ಗಿಟ್ಟಲ್ಲ. ಯಾರೂ ಕೊಂಡ್ಕೋಣಾಕಿಲ್ಲ” ಎಂದು ತಲೆ ಮೇಲೆ ಹೊಡೆದಂತೆ ಉತ್ತರಿಸಿದ. ಆ ಹುಡುಗನ ಮಾತು ಕೇಳಿ, ಹಿಂದೊಮ್ಮೆ ಚಿಕ್ಕ ಪ್ರಾಯದಲ್ಲಿ, ಆಗಷ್ಟೇ ಇಂಗ್ಲಿಷ್ ಕಲಿಯುತ್ತಿದ್ದ ನಾನು, ಒಬ್ಬಳು ಕಾನ್ವೆಂಟ್ ಹುಡುಗಿಯ ಮುಂದೆ, “ನನಗೆ ಭಯವಾಗ್ತಿದೆ” ಎನ್ನಲು ಹೋಗಿ, “ಐ ಆಮ್ ಅಫ್ಫ್ರಯಿಂಗ್” (I am afrying) ಎಂದು ಉತ್ತರಕೊಟ್ಟದ್ದು ನೆನೆಸಿಕೊಂಡಾಗ ಎಷ್ಟು ಅವಮಾನವಾಗುತ್ತದೋ ಅಷ್ಟೇ ಅವಮಾನವಾಯಿತು! ಆತ ನೂರಕ್ಕೆ ನೂರು ಪಾಲು ನ್ಯಾಯವಾಗಿಯೇ ಇದ್ದಾನೆ. ಕುಣೀಲಾರದ ಮುದುಕಿ ನೆಲ ಡೊಂಕು ಅಂದ ಹಾಗೆ, ದೋಷ ನಮ್ಮಲ್ಲೇ ಇದ್ದು ಆತನನ್ನು ದೂಷಿಸಿದರೆ ಏನು ಪ್ರಯೋಜನ. ಏನೋ ಉದ್ಧರಿಸಲು ಹೋದರೆ, ಆತನ ಹೊಟ್ಟೆ ಪಾಡು ಹೇಗೆ!

ಗಿರಿನಗರದ ಬಳಿ ಒಂದು ಪುಸ್ತಕದಂಗಡಿ. ಅಲ್ಲಿ ಒಬ್ಬ ತಂದೆ ತನ್ನ ಮಗಳಿಗೆ ದೀನನಾಗಿ ಹೇಳಿದ್ದು ಹೀಗೆ, “ಪುಟ್ಟಾ ಇಲ್ಲಿ ಎಲ್ಲಾ ಕನ್ನಡ ಪುಸ್ತಕಗಳೇ ಕಣೋ…ನಿನಗೆ ಬೇಕಾದ್ದು ಯಾವುದೂ ಇಲ್ಲ!”. ಅಷ್ಟ್ಯಾಕ್ರೀ! ನಮ್ಮೆಲ್ಲರ ಅಚ್ಚುಮೆಚ್ಚಿನ ಖ್ಯಾತ ಕನ್ನಡ ಪುಸ್ತಕದಂಗಡಿ, “ಕನ್ನಡದಲ್ಲಿ ಮಕ್ಕಳಿಗೆ ಕ್ರಿಯೇಟಿವ್ ಪುಸ್ತಕಗಳಿಲ್ಲ, ನೀವೇನಾದ್ರು ಮಾಡ್ರೀ” ಎಂದರೆ, “ಮೇಡಂ, ನೀವೊಬ್ರೇ ಕೇಳ್ತಿರೋದು” ಎಂದು ನಕ್ಕರು. ನಮ್ಮಲ್ಲಿ ಸಾಕಷ್ಟು ಮಂದಿಗೆ ಕನ್ನಡ ಪುಸ್ತಕ ಬೇಡ! ಕನ್ನಡ ಭಾಷೆಯೂ ಬೇಡ. “ಪೇ ಫೈನ್ ಇಫ್ ಯು ಸ್ಪೀಕ್ ಇನ್ ಕನ್ನಡ” ಎಂಬ ಸಲಹೆಗಳನ್ನು ಉಚಿತವಾಗಿ ಕೊಡುವ ಶಾಲೆಗಳ ಬಳುವಳಿ ಎಂಬಂತೆ, ಸ್ವಲ್ಪ ಕ್ಲಿಷ್ಟ ಪದ ಕಂಡರೆ ಮುಖ ಹರಳೆಣ್ಣೆ. ಎ ಬಿ ಸಿ ಡಿ ಗಳಲ್ಲಿ, ಒತ್ತು-ದೀರ್ಘಗಳ ರಂಗೋಲಿಗಳಿಲ್ಲ. “ಇಂಗ್ಲಿಷ್ ಇಸ್ ಸೊ ಈಜಿ ಯು ನೋ”, ಎಂಬ ಮಾತು ಸಹಜವಾಗಿಯೇ ಬಿಡುತ್ತದೆ ಅಲ್ಲವೇ!

“ಕನ್ನಡ ಅಕ್ಷರ ಎಷ್ಟಿದೆ ಅಂತ ಎಲ್ಲಾ ಗೊತ್ತಮ್ಮಾ, ಚೂರೂ ತಪ್ಪದೆ ಹೇಳ್ತೀನಿ ನೀನೆ ಕೇಳಮ್ಮ”, “ಗೇರ್ ಗೇರ್ ಮಂಗಣ್ಣ”, “ತೋಟಕೆ ಹೋಗೋ ತಿಮ್ಮ”, “ಉಂಡಾಡಿ ಗುಂಡ”, “ನಾನು ಕೋಳಿಕೆ ರಂಗ”…..ಇವುಗಳು ಹುಡುಕಿದರೂ ಸಿಗದಷ್ಟು ಕಡಿಮೆಯಾಗಿ, “ಡಿಂಗ್ ಡಾಂಗ್ ಬೆಲ್”, “ಲಂಡನ್ ಬ್ರಿಜ್ ಇಸ್ ಫಾಲಿಂಗ್ ಡೌನ್”, “ಐ ಆಮ್ ಅ ಲಿಟಲ್ ಟೀ ಪಾಟ್” ಇತ್ಯಾದಿ ಚೆಂದದ ಹಾಡುಗಳು, ಪುಸ್ತಕಗಳೇ ಹೆಚ್ಚು ಬಿಕರಿ! ಇವೆಲ್ಲವೂ ನಮಗೆ ಏನು ಸೂಚಿಸುತ್ತದೆ ಗೆಳೆಯರೇ? ಗೋಳಾಕಾರದ ಜಗತ್ತನ್ನು ಚಪ್ಪಟೆ ಮಾಡಲು ಹೋಗುತ್ತಿರುವ ನಮ್ಮೆಲ್ಲರ ಪ್ರಯತ್ನದ ಸೈಡ್ ಎಫೆಕ್ಟ್ ಎಂಬಂತೆ, ನಮ್ಮದಾದ ಭಾಷೆಯ ಸೊಗಡು, ಕಂಪನ್ನು ಮರೆಯಾಗಿಸುತ್ತಿದ್ದೇವೆ. ನಾವು ಆನಂದಿಸಿದಂತೆ ಆ ಬಾಲ್ಯದ ಕ್ಷಣಗಳನ್ನು ಇನ್ನೂ ಸುಲಭವಾಗಿಯೇ ಅನುಭವಿಸಬಹುದಾದಂತಹ ಇಂದಿನ/ಮುಂದಿನ ಮಕ್ಕಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದೇವೆ.

ಇಂಗ್ಲಿಷ್ ಕಲಿಯಬಾರದು ಎಂದು ನಾನು ಖಂಡಿತ ಹೇಳುತ್ತಿಲ್ಲ. ಅದೊಂದು ಸುಂದರ ಭಾಷೆ. ಕಲಿತು, ನುರಿತು, ಬಿ.ಎಂ.ಶ್ರೀ ರವರು ಹೇಳಿರುವಂತೆ “ಅವಳ ಉಡುಗೆ ಇವಳಿಗಿಟ್ಟು, ಇವಳ ತೊಡುಗೆ ಅವಳಿಗಿಟ್ಟು”, ಅದರ ರಸವನ್ನು ಅನುಭೂತಿಸಬೇಕು. ಆದರೆ, ಯಾವುದೋ ಒಂದು ಭಾಷೆಯ ಬಗೆಗಿನ, ಅಥವಾ ಆ ಭಾಷೆಗೆ ಅಂಟಿರುವ ಸಂಸ್ಕೃತಿಯ ಬಗೆಗಿನ ಪ್ರೀತಿ ವ್ಯಾಮೊಹಗಳಿಂದ, ನಮ್ಮದೇ ಆದ, ನಮ್ಮ ಮನೆಯಂಗಳದ ಮಾತಾದ ಕನ್ನಡ ಭಾಷೆಯನ್ನು ಅವಜ್ಞತೆಯಿಂದ ನೋಡುವುದು ಎಷ್ಟು ಸರಿ! ನಗರ ಜೀವನಕ್ಕಂತೂ ನಾನಾಡುತ್ತಿರುವ ಈ ಮಾತುಗಳು ಪ್ರಸ್ತುತ. ಇದನ್ನು ತಡೆಯಬೇಕು, ಮುಂದಾಗಬಹುದಾದಂತಹ ಅನಾಹುತವನ್ನು ಚಿವುಟಬೇಕು. ಅದಕ್ಕೆ, ಕೆಲ ಹಿರಿಯರು ಹೇಳುವಂತೆ ಕನ್ನಡ ಮಾಧ್ಯಮವೇ ಪರಿಹಾರವೆಂಬುದು ಹೌದೆನಿಸಿದರೂ, ಈಗಿನ ವಿದ್ಯಮಾನಗಳಿಗೆ, ಬೆಳವಣಿಗೆಗೆ ಎಷ್ಟು ಪ್ರಸ್ತುತ ಎಂಬ ಜಿಜ್ಞಾಸೆ ಉಂಟಾಗುತ್ತದೆ.

ಮೊಟ್ಟ ಮೊದಲು ನಾವು ಕನ್ನಡವನ್ನು ಪ್ರಾಯೋಗಿಕವಾಗಿಸಬೇಕು, ಮಕ್ಕಳಲ್ಲಿ ಕನ್ನಡದ ಬಗೆಗಿನ ಆಸಕ್ತಿಯ ಬೀಜವನ್ನು ಬಿತ್ತಬೇಕು. ಯಾರಾದರೂ ಕನ್ನಡ ಮಾತನಾಡಿದರೆ ಕಣ್ಣ ಸನ್ನೆ ಮಾಡುವುದ ತಪ್ಪಿಸಬೇಕು. ಕನ್ನಡ ಮಾತನಾಡಲು ಹೆಮ್ಮೆ ಪಡಬೇಕು. ಯಾರಾದರೂ ಬೇರೆ ಭಾಷೆಯಲ್ಲಿ ಮಾತನಾಡಿದಾಗ, ಕನ್ನಡದಲ್ಲಿ ಉತ್ತರಿಸಲು ಹಿಂಜರಿಯಬಾರದು. ಸ್ವಲ್ಪ ಶುಧ್ಧ ಕನ್ನಡ ಮಾತನಾಡಿದರೆ “ನೀವು ಕ.ರ.ವೇ ನವರಾ?” ಎಂದು ನಗೆಪಾಟಲು ಮಾಡುತ್ತಾರೆ. “ನೀನ್ ಬಿಡು ಕನ್ನಡ ಪಂಟರ್” ಎಂದು ಕಿಂಡಲ್ ಮಾಡುತ್ತಾರೆ. ಇದರಿಂದ ನಾವು ಮತ್ತಷ್ಟು ಕುಗ್ಗಿ, ಮೇನ್ ಸ್ಟ್ರೀಮ್ ಗೆ ಸೇರಲು ನೋಡುತ್ತೇವೆ. ಇವೆಲ್ಲಾ ಬೆಳವಣಿಗೆಗಳೂ ನಮಗೆ ತಿಳಿಯದೆ ನಮ್ಮ ಉಪಪ್ರಜ್ಞೆಯಲ್ಲಿ ಜಾಗೃತವಾಗಿರುತ್ತದೆ. ಈ ಅಪೌರುಷ ಮನೋಭಾವನೆಯನ್ನು ತಡೆಗಟ್ಟಲು ನಾವು ಕನ್ನಡ ಬಳಸಲು ಪ್ರಾರಂಭಿಸಬೇಕು. ನೆರೆ ಹೊರೆ ಭಾಷೆಯ ಇಲ್ಲಿನ ಜನರಿಗೂ ಕನ್ನಡ ಕಲಿಸುವಂತಾಗಬೇಕು. ಇದು ಅವರೊಂದಿಗಿನ ಬಾಂಧವ್ಯ ಬೆಸೆಯಲೂ ಸಹಕಾರಿಯಾಗುತ್ತದೆ. ನನ್ನ ಬಹಳ ಒಳ್ಳೆ ತಮಿಳ್ ಸ್ನೇಹಿತ ಒಬ್ಬ ಒಮ್ಮೆ ಹೇಳಿದ್ದ, “ಬೆಂಗಳೂರಿನಲ್ಲಿ ಕನ್ನಡ ನನಗೆ ಅವಶ್ಯಕವಾದದ್ದಲ್ಲ, ಆದ್ದರಿಂದ ನಾನು ಅದನ್ನು ಕಲಿಯಲ್ಲ” ಎಂದು. ಅದೇ ನಾನು ಅವರ ಊರಿನಲ್ಲಿ, ಈ ಮಾತು ಹೇಳಲು ಬರೀ ಊಹಿಸಿ ನೋಡಿದೆ, ಸಾಧ್ಯವಾಗಲಿಲ್ಲ! ಆದರೆ ಅವನಿಂದ ನಾನು ಸಾಕಷ್ಟು ತಮಿಳು ಕಲಿತೆ. ನಾವು ನಮ್ಮ ಭಾಷೆಗೆ ಒಂದು ಅನಿವಾರ್ಯತೆ ಉಂಟು ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆಯೇ ಎಂಬ ನಿಲುವೂ ಇದರಿಂದ ಮೂಡುತ್ತದೆ.

ಇಷ್ಟೆಲ್ಲಾ ಮಾತನಾಡಿದ ನಾನೂ, ಬಸ್ಸಿನಲ್ಲಿ ಸೀಟಿಗಾಗಿ “ಕ್ಯಾನ್ ಯು ಮೂವ್ ಪ್ಲೀಸ್” ಎಂದದ್ದು, ಬಟ್ಟೆಯಂಗಡಿಯಲ್ಲಿ ಆತ, “ಮೇಡಂ, ಹಿಂದಿ ಇಂಗ್ಲಿಷ್” ಎಂದಾಗ, “ಎ ಕಿತನಾ ಹೈ” ಅಂದದ್ದೂ, ಸ್ವಲ್ಪ ‘ದೊಡ್ಡ’ ಮಳಿಗೆಗೆ ಹೋದಾಗ ಇಂಗ್ಲಿಷ್ ತಾನಾಗಿಯೇ ಬಾಯಿಂದ ಹೊಮ್ಮಿದ್ದು, ಅಷ್ಟೇ ಸತ್ಯ! ಇದು ಒಂದು ಸಂಸ್ಕೃತಿಯ ಪರಿವರ್ತನೆಯನ್ನು ಬಿಂಬಿಸುತ್ತಿದೆ. ನಮಗೆ ತಿಳಿಯದಂತೆ ನಾವೆಲ್ಲರೂ ‘ಇಂಗ್ಲಿಷ್’ ವ್ಯಾಮೋಹ(ಅಥವಾ ವ್ಯಸನ)ಕ್ಕೆ ಸಿಲುಕಿದ್ದೇವೆ. ಇದನ್ನು ತಪ್ಪಿಸಲು ಕೈ ಜೋಡಿಸೋಣವೇ? ಕನ್ನಡವನ್ನು ಮಾತನಾಡಲು ಹೆಮ್ಮೆ ಪಡೋಣ. ನಮ್ಮ ಭಾಷೆಯನ್ನು ಗೌರವಿಸೋಣ, ಆಗ ಜಗತ್ತು ನಮ್ಮನ್ನು ಗೌರವಿಸುತ್ತದೆ.

ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

 

‍ಲೇಖಕರು G

November 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

31 ಪ್ರತಿಕ್ರಿಯೆಗಳು

  1. Mohan V Kollegal

    ಒಳ್ಳೆಯ ಲೇಖನ ಅಕ್ಕ… ನೀವು ಹೇಳಿದಂತೆ ಕನ್ನಡ ಮಾತನಾಡಿದರೆ ‘ಆಡಿಕೊಳ್ಳುವ’ ಪರಿಸ್ಥಿತಿಯೂ ಇದೆ. ಜೊತೆಗೆ, ಕನ್ನಡವನ್ನು ಪ್ರೀತಿಸಿ ಎಂದರೆ ಇತರೆ ಭಾಷೆಗಳನ್ನು ದ್ವೇಷಿಸಿ ಎಂಬ ಮನೋಭಾವನೆ ಅನೇಕರು, ಅನೇಕ ಸಂಘಟನೆಗಳಲ್ಲಿದೆ. ಅದೊಂದು ದುರಂತ. ನಾವು ಕನ್ನಡಿಗರು ಎಂಬುದು ಎಷ್ಟು ಹೆಮ್ಮೆಯ ವಿಚಾರ, ಜೊತೆಗೆ ಭಾರತೀಯರು ಎನ್ನುವುದೂ ಅಷ್ಟೇ ಹೆಮ್ಮೆಯ ವಿಚಾರವಾಗಬೇಕು. ನೆರೆಮನೆಯ ತಾಯಿ ರೇಷ್ಮೆ ಸೀರೆ ಉಟ್ಟಿರುವಾಗ, ನಮ್ಮ ಅಮ್ಮ ಹರುಕು ಸೀರೆಯುಟ್ಟಿದ್ದರೂ, ನಮಗೆ ನಮ್ಮ ತಾಯಿ ಗೌರವವೇ ಆಸ್ಥೆ. ಹಾಗಂತ ನೆರೆಮನೆಯಮ್ಮನನ್ನು ಒದೆಯುವುದೂ ಸರಿಯಲ್ಲ. ಜ್ಞಾನದ ವಿಸ್ತಾರಕ್ಕಾಗಿ, ಪ್ರಪಂಚವನ್ನು ಕಿರಿದು ಮಾಡಿಕೊಳ್ಳುವ ದೃಷ್ಟಿಯಿಂದ, ಹೊಟ್ಟೆಪಾಡೆಂಬ ಅನಿವಾರ್ಯತೆಯಿಂದ ಇತರೆ ಭಾಷೆ ಕಲಿತರೆ ತಪ್ಪಿಲ್ಲ. ಆದರೆ, ಅವಶ್ಯಕತೆ ಇಲ್ಲದ ಸಮಯದಲ್ಲಿ ಇತರೆ ಭಾಷೆ ಉಪಯೋಗಿಸುವುದು ಅಸಹ್ಯವೇ ಸರಿ. ಕೆಲವು ಚಿತ್ರನಟಿಯರಂತು ತಲೆಯ ಮೇಲೆ ನೂರು ಕೇಜಿ ಭಾರ ಹೊತ್ತವರಂತೆ ಕನ್ನಡ ಮಾತನಾಡುತ್ತಾರೆ. ‘ಅತಿಯಾದ ದುಃಖವೇ ಆಗಲಿ, ಸುಖವೇ ಆಗಲಿ, ಕೂಗಾಟ, ಚೀರಾಟ, ಹತಾಶೆಗಳೆಲ್ಲ ಅಡೆತಡೆಯಿಲ್ಲದೆ ಹೊರಹೊಮ್ಮುವುದು ಮಾತೃಭಾಷೆ ಮೂಲಕ ಮಾತ್ರ, ಇತರೆ ಭಾಷೆ ಮಾತನಾಡಿಕೊಂಡರು ಮನಸ್ಸು ಮೊದಲು ಮಾತೃಭಾಷೆಯ ಮೂಲಕವೇ ನಾಲಗೆಗೆ ವಿಚಾರ ವಿನಿಮಯ ಮಾಡುತ್ತದೆ’

    ಪ್ರತಿಕ್ರಿಯೆ
  2. Gopaal Wajapeyi

    ಸಂಯುಕ್ತಾ… ಮತ್ತೊಂದು ವಿಚಾರಪೂರ್ಣ ಲೇಖನ… ನಮಗೆಲ್ಲ ಕನ್ನಡ ಗಾದೆಗಳ ಮೂಲಕ ಬದುಕಲು ಕಲಿಸಿದರು ನಮ್ಮ ಪಾಲಕರು, ಪೋಷಕರು ಮತ್ತು ಮಾಸ್ತರುಗಳು. ದಿನಕ್ಕೆರಡಾದರೂ ಗಾದೆಗಳು ಅವರ ಮಾತಿನಲ್ಲಿ ಸುಮ್ಮನೇ ಹಾದುಹೋಗುತ್ತಿದ್ದವು. ‘ಕೈ ಕೆಸರಾದರೆ ಬಾಯ್ ಮೊಸರು’, ‘ಹನಿ ಹನಿ ಕೂಡಿದರೆ ಹಳ್ಳ… ತೆನೆ ತೆನೆ ಕೂಡಿದರೆ ರಾಶಿ,’ ‘ಧ್ವನಿಯಂತೆ ಪ್ರತಿಧ್ವನಿ’ ಮುಂತಾದವನ್ನೆಲ್ಲ ಕೇಳುತ್ತಲೇ ನಾವು ಬದುಕು ಕಟ್ಟಿಕೊಂಡವರು. ಇದ್ದುದರಲ್ಲೇ ನೆಮ್ಮದಿ ಕಂಡವರು. ”ಕನ್ನಡ ನಮ್ಮ ಮನೆ. ಅದು ನಮ್ಮ ಅನ್ನ, ಉಸಿರು, ನೀರು ಎಲ್ಲ… ಇಂಗ್ಲಿಷ್ ಮತ್ತು ಇನ್ನಿತರ ಭಾಷೆಗಳು ನಮ್ಮ ಮನೆಗೆ ಕಿಟಕಿಗಳ ಹಾಗೆ,” ಎಂಬುದು ನಮ್ಮ ಹಿರಿಯರು ಹೇಳಿಕೊಟ್ಟ ಪಾಠ. ಗಾಳಿಯ ದಾಳಿ ಜಾಸ್ತಿಯಾದರೆ ಕಿಟಕಿಯನ್ನು ಮುಚ್ಚಬೇಕು ಅಲ್ಲವೇ?

    ಪ್ರತಿಕ್ರಿಯೆ
    • samyuktha

      ಹೌದು ವಾಜಪೇಯಿ ಸರ್. ಗಾಳಿ ಜೋರಾದಾಗ ಕಿಟಕಿಯನ್ನು ಮುಚ್ಚಿ ಬೀಗ ಹಾಕುವುದು ನಮ್ಮ ಕರ್ತವ್ಯ ನಿಜ!

      ಪ್ರತಿಕ್ರಿಯೆ
  3. ಮಂಜುನಾಥ ಕೊಳ್ಳೇಗಾಲ

    ಇಂಗ್ಲಿಷಿನ ಗುಲಾಮರಿಗೆ ತೆಗೆದು ಬಿಟ್ಟಹಾಗಿದೆ. ಸಾಕಷ್ಟು ಕನ್ನಡದ ವಾತಾವರಣದಲ್ಲೇ ಜೀವಿಸಿದ್ದ ನನಗೆ ಸುಮಾರು ದಿನ ಇವೆಲ್ಲಾ ಉತ್ಪ್ರೇಕ್ಷೆ ಎನ್ನಿಸಿತ್ತು. ಆದರೆ ಬೆಂಗಳೂರಿನ ’ಹೈ-ಫೈ’ ವಾತಾವರಣ ನೋಡಿದ ಮೇಲೆ, ಕನ್ನಡಕ್ಕೆ ಪ್ರತ್ಯಕ್ಷ ನಿಷೇಧಗಳನ್ನು ಅನೇಕ ಕಡೆ ನೋಡಿದ ಮೇಲೆ ಕನ್ನಡಿಗರಿಗೆ ತಮ್ಮ ಕನ್ನಡತನದ ಬಗೆಗೇ ಕೀಳರಿಮೆ ಮೂಡಿಸುವ ವಾತಾವರಣ ಕಂಡು ಅಸಹ್ಯವಾಗತೊಡಗಿತು.

    ಪ್ರಪಂಚದ ಜ್ಞಾನವನ್ನೆಲ್ಲಾ ಕನ್ನಡದಲ್ಲೇ ಕಲಿಯಬಹುದಾದರೆ ಅದು ಒಂದು ಅತ್ಯುತ್ತಮ ಸ್ಥಿತಿ. ಆದರೆ ಸಧ್ಯಕ್ಕಂತೂ ಅದು ಶತಮಾನಗಳಾಚೆಗಿನ ಕನಸೇ ಸರಿ. ಆದ್ದರಿಂದ ನಮಗಿಷ್ಟವಿರಲಿ ಇಲ್ಲದಿರಲಿ ಉನ್ನತ ಶಿಕ್ಷಣದ ಬಹುಪಾಲು ಇಂಗ್ಲಿಷಿನಲ್ಲೆ ಇರುವುದು ಅನಿವಾರ್ಯ. ಆದ್ದರಿಂದ ಇಂಗ್ಲಿಷ್ ಕಲಿಕೆಯೂ ಅನಿವಾರ್ಯ. ಹಾಗೆಂದ ಮಾತ್ರಕ್ಕೆ ಮಕ್ಕಳು ಕೆಮ್ಮುವುದು-ಸೀನುವುದನ್ನೂ ಇಂಗ್ಲಿಶಿನಲ್ಲೇ ಮಾಡಬೇಕೆಂದುಕೊಳ್ಳುವುದು ಹುಂಬತನ. ಈ ಭಾವನೆಗೆ ಕಾರಣವೆಂದರೆ ಇಂಗ್ಲಿಷ್ ಈ ನೆಲದ ಭಾಷೆಯಲ್ಲದ್ದರಿಂದ ಸಹಜವಾಗಿಯೇ ಅದನ್ನು ಕಲಿಯುವುದು ಕಷ್ಟವೆನಿಸುತ್ತದೆ. ಈ ’ಕಷ್ಟ’ದ ಪರಿಕಲ್ಪನೆಯೇ ಇಂಗ್ಲಿಷಿನ ಅನಿವಾರ್ಯತೆಯನ್ನು ಮತ್ತಷ್ಟು ಭಯಾನಕಗೊಳಿಸುತ್ತದೆ. ಅದಕ್ಕೆಂದೇ ಮಕ್ಕಳಿಗೆ ಬಹು ’ಬೇಗ’ ಇಂಗ್ಲಿಷ್ ಶಿಕ್ಷಣ ಶುರುಮಾಡಿಬಿಡಬೇಕೆಂಬ ಆತುರ ಶುರುವಾಗುತ್ತದೆ. ಇವತ್ತಿನ ಪೈಪೋಟಿಯ ಯುಗದಲ್ಲಿ ಈ ’ಬೇಗ’ ಬಹು ಬೇಗಬೇಗ ಶುರುವಾಗುತ್ತಿದೆ. ಎಷ್ಟೆಂದರೆ ಇನ್ನೂ ಡಯಫರ್ ಹಾಕಿಕೊಳ್ಳುವ ಕಂದಮ್ಮಗಳ ಜೊತೆಗೂ ಅವರ ಕಾನ್ವೆಂಟ್ ಶಿಕ್ಷಿತ ಅಮ್ಮಂದಿರು ಇಂಗ್ಲಿಷಿನಲ್ಲೇ ತೊದಲುಮಾತಾಡುವಷ್ಟು! ಇದರಿಂದಾಗಿ ಇಡೀ ಒಂದೆರಡು ತಲೆಮಾರೇ ಇಂಗ್ಲಿಷಿನ ಪ್ರಭಾವಕ್ಕೆ ಸಿಕ್ಕಿಬಿಟ್ಟಿವೆ. ದಿನದ ಬಹುಪಾಲು ಇಂಗ್ಲಿಷಿನಲ್ಲೇ ಉಸಿರಾಡುವ ಇವು, ಆಗೊಮ್ಮೆ ಈಗೊಮ್ಮೆ ಹಳೇಕಾಲದ ಅಜ್ಜಿ-ತಾತನೊಡನೆ ಮಾತಾಡಬೇಕಾದಾಗ ಮಾತ್ರ ಕನ್ನಡ ಬಳಸುತ್ತವೆ. ಆ ಕನ್ನಡವೋ, ಅದರ ಉಚ್ಚಾರಣೆಯೋ, ದೇವರಿಗೇ ಪ್ರೀತಿ. ಇಷ್ಟಾದರೂ ಕನ್ನಡ ಕಲಿಕೆಗೆ ಇವುಗಳಿಗೆ ಗುರುವೆಂದರೆ FM ಕನ್ನಡ ಚಾನಲ್ಲುಗಳು, ಆಗೀಗ ನೋಡುವ ದರಿದ್ರ ಕನ್ನಡ TV ಚಾನಲ್ಲುಗಳು. ಇನ್ನು ಇವುಗಳ ಕನ್ನಡ ಚಂದವನ್ನು ಊಹಿಸಿಕೊಳ್ಳಬಹುದಲ್ಲವೇ?

    ಎಲ್ಲಾ ಇಂಗ್ಲಿಷುಮಯವಾದುದರಿಂದ, ಸರ್ಕಾರೀ ಕಡ್ಡಾಯದ ಕನ್ನಡ ಪೇಪರು ಕೇವಲ ಪಾಸಾಗಲೇ ಬೇಕಾದ ಅನಿವಾರ್ಯವಾಗಿಬಿಟ್ಟಿತು. ಇನ್ನು ಈ ಕನ್ನಡ ಕ್ಲಾಸುಗಳಲ್ಲಿ ಕುಮಾರವ್ಯಾಸನನ್ನೋ ಬೇಂದ್ರೆಯನ್ನೋ ಅಡಿಗರನ್ನೋ ಉತ್ಸಾಹದಿಂದ ಹೇಳಿಕೊಡುವ ಮೇಷ್ಟರನ್ನೆಲ್ಲಿ ತರೋಣ? ಹೇಳಿಕೊಡುತ್ತೇನೆಂದರೂ ಆಸಕ್ತಿಯಿಂದ ಕೇಳುವ ಹುಡುಗರನ್ನೆಲ್ಲೆ ತರೋಣ. ಇದನ್ನ ಸ್ವತಃ ಹೀಗೆ ಪಾಠ ಮಾಡಲು ಹೋಗಿ ಪೆಚ್ಚುಬಿದ್ದ ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಇದರಲ್ಲಿ ಎಕ್ಸಾಮಿಗೆ ಯಾವ ’ಕ್ವಶ್ಚನ್’ ಬರುತ್ತೆ, ಎಷ್ಟು ಮಾರ್ಕಿಗೆ ಬರುತ್ತೆ ಗುರುತು ಹಾಕಿಸಿಬಿಡಿ ಸಾಕು ಸಾರ್, ಇವೆಲ್ಲಾ ಎ಼ಕ್ಸಾಮಲ್ಲಿ ಕೇಳೊಲ್ಲ ಅಂತಾವೆ ಮಕ್ಕಳು, ಆಕಳಿಸುತ್ತಾ.

    ಈ ಪರಿಸ್ಥಿತಿ ಬದಲಾಗಬೇಕಾದರೆ ನಾನು ಅನೇಕ ಕಡೆ ಹೇಳಿಕೊಂಡು ಬಂದಿರುವ ಮಾರ್ಪಾಡುಗಳು ಇವು:

    ೧. ಕೊನೇ ಪಕ್ಷ ಏಳನೆಯ ತರಗತಿಯವರಗೆ ಕನ್ನಡ ಮಾಧ್ಯಮ ಖಡ್ಡಾಯವಾಗಬೇಕು. ಅನ್ಯಭಾಷಿಕ ಮಕ್ಕಳು ಇದ್ದರೆ ಅವರಿಗೆ ಇದರಿಂದ ವಿನಾಯಿತಿ ಕೊಡುವ ಬದಲು, ಕನ್ನಡ ಮಾಧ್ಯಮದಲ್ಲಿ ಕಲಿಯಲು ಅನುಕೂಲವಾಗುವಂತೆ ಅವರಿಗೆ ವಿಶೇಷ ಕನ್ನಡ ತರಬೇತಿಯ ವ್ಯವಸ್ಥೆಯಿರಬೇಕು.
    ೨. ಎಲ್ಕೇಜಿ ಯುಕೆಜಿಯನ್ನೂ ಒಳಗೊಂಡು ಕನಿಷ್ಟ ನಾಲ್ಕನೆಯ ತರಗತಿಯವರೆಗೆ ಮಕ್ಕಳಿಗೆ ಕನ್ನಡವನ್ನಲ್ಲದೇ ಬೇರೆ ಯಾವ ಭಾಷೆಯನ್ನೂ ಕಲಿಸತಕ್ಕದ್ದಲ್ಲ (ನಾವೀಗ ಎಲ್ಕೇಜಿಯಿಂದಲೇ ಇಂಗ್ಲಿಷನ್ನು ಕಲಿಸುವುದನ್ನು ನೋಡುತ್ತೇವೆ. ಇದು ಮಕ್ಕಳ ಸ್ಥಳೀಯತೆಗೆ, ತನ್ಮೂಲಕ ವ್ಯಕ್ತಿತ್ವಕ್ಕೆ ಬಹು ದೊಡ್ಡ ಪೆಟ್ಟು)
    ೩. ಪದವಿ ಮುಗಿಸುವರೆಗೆ, ಅಥವ ಕೊನೆಯ ಪಕ್ಷ ಪಿಯುಸಿ ವರೆಗಾದರೂ ಮಕ್ಕಳು ಕನ್ನಡವನ್ನು ಮುಖ್ಯ ಪೇಪರಾಗಿ ಕಲಿಯಲೇ ಬೇಕು.
    ೪. ಐದನೆಯ ತರಗತಿಯಿಂದಾಚಿಗೆ ಇಂಗ್ಲಿಷನ್ನು ಒಂದು ಪೇಪರಾಗಿ (ಮಾಧ್ಯಮವಾಗಿ ಅಲ್ಲ) ಕಲಿಸಬೇಕು. ಇಲ್ಲಿನ ಇಂಗ್ಲಿಷ್ ಶಿಕ್ಷಣ ಉತ್ಕೃಷ್ಟವಾಗಿರಬೇಕು.
    ೫. ಇನ್ನು ಆರನೆಯ ತರಗತಿಯಿಂದಾಚಿಗೆ ಮಕ್ಕಳು ಮತ್ತೊಂದು ಭಾಷೆಯನ್ನು (ಐಚ್ಛಿಕವಾಗಿ ಅದು ಹಿಂದಿಯೋ, ಸಂಸ್ಕೃತವೋ ಯಾವುದಾದರೂ ಆಗಿರಬಹುದು) ಕಲಿಯಬೇಕು.

    ನಾನು ಹೇಳಿದ್ದು ಈಗ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರವನ್ನೇ ಬಹುಪಾಲು ಹೋಲುತ್ತದೆ. ವ್ಯತ್ಯಾಸವೆಂದರೆ ಖಾಸಗೀ ಶಾಲೆಗಳಲ್ಲಿ ಇದನ್ನು ಖಡ್ಡಾಯಗೊಳಿಸಬೇಕು, ಮತ್ತು ಈ ಶಾಲೆಗಳು ಮಕ್ಕಳ ಮೇಲೆ ಬೇರೆ ಕಲಿಕೆಗಳನ್ನು ಹೇರುವುದನ್ನು ನಿಲ್ಲಿಸಬೇಕೆಂಬುದು. ಖಾಸಗೀ ಮತ್ತು ಸರ್ಕಾರಿ ಶಾಲೆಗಳ ಪಠ್ಯ ಕ್ರಮ ಮತ್ತು ಶಿಕ್ಷಣ ಕ್ರಮದಲ್ಲಿ ಏಕರೂಪತೆಯಿರಬೇಕೆಂಬುದು ಮುಖ್ಯ. ಇದರಿಂದ ಮಕ್ಕಳಲ್ಲಿ ಬರುವ ಕೀಳರಿಮೆ/ಮೇಲರಿಮೆಗಳು ಮಾಯವಾಗುತ್ತದೆ, ಬಾಲ್ಯದಲ್ಲಿ ಕನ್ನಡದ ವಾತಾವರಣ, ಕನ್ನಡ ಕಲಿಕೆ ಗಟ್ಟಿಗೊಳ್ಳುತ್ತದೆ.

    ಪ್ರತಿಕ್ರಿಯೆ
  4. samyuktha

    ನಿಮ್ಮ ಮಾತು ಅಕ್ಷರಶಃ ನಿಜ ಮಂಜುನಾಥ್ ಅವರೇ. ಆದರೆ, ತಾರ್ಕಿಕವಾಗಿ ನೋಡಿದರೆ, ನೀವು ಪ್ರಸ್ತುತ ಪಡಿಸಿರುವ ಮೊದಲನೇ ಅಂಶ ಎಷ್ಟು ಸಮಂಜಸ ಅಥವಾ ಸಾಧ್ಯ ಎಂಬುದು ನನ್ನ ಜಿಜ್ಞಾಸೆ! ಕನ್ನಡವನ್ನು ಮಾಧ್ಯಮವಾಗಿ ಕಲಿಸಬೇಕು ಹೌದು. ಆದರೆ ಬೆಂಗಳೂರಿನಂತಹ ಮೆಟ್ರೋ ಪಾಲಿಟನ್ ನಗರದಲ್ಲಿ ಇದು ನಡೆಯುವ ಮಾತೆ?

    ನನಗನ್ನಿಸುವುದು ಇಷ್ಟು. ನೀವು ಹೇಳಿರುವ ಮೊದಲನೇ ಅಂಶ ತಲುಪುವ ಮುನ್ನ ಅಥವಾ ಅದಕ್ಕೆ ಪೂರ್ವ ಸಿದ್ಧತೆಯೂ ಎಂಬಂತೆ, ನಾವು ಮಕ್ಕಳಲ್ಲಿ/ಪೋಷಕರಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಬೇಕು. ಯಾವಾಗ ನಾವು ಯಾವುದೇ ಒಂದು ವಿಚಾರವನ್ನು ಖಡ್ಡಾಯ ಮಾಡುತ್ತೇವೋ, ಅದಕ್ಕೆ ವಿರೋಧದ ಅಲೆ ಏಳುವುದು ಮಾನವ ಸಹಜ. ಆದ್ದರಿಂದ, ನಮ್ಮಂತಹ ಎಣಿಕೆಗೆ ಸಿಗುವಷ್ಟು ಮಂದಿ ಕನ್ನಡ ಭಾಷಾ ಪ್ರೇಮಿಗಳು ಮಾಡಬೇಕಾದ್ದು ಏನೆಂದರೆ ಮಕ್ಕಳಲ್ಲಿ ಕನ್ನಡ ಆಸಕ್ತಿ ಮೂಡಿಸಬೇಕು. ಇದು ಯಾವ ಹಂತ ತಲುಪಬೇಕೆಂದರೆ, ಮುಂದೆ ಅವರೇ ಕನ್ನಡ ಓದಲು ಮುಂದಾಗಬೇಕು.

    ನನ್ನಲ್ಲಿ ಕೆಲವರು ಬಂದು ಕೇಳುವುದುಂಟು. “ನೀವು ಕನ್ನಡ ಓದುತ್ತೀರಿ ಬರೆಯುತ್ತೀರಿ. ನನಗೆ ಓದಬೇಕೆಂದಿದೆ, ಆದರೆ ಏನು ಹೇಗೆ ಗೊತ್ತಿಲ್ಲ, ತಿಳಿಸಿ” ಎಂದು. ಇಂತಹವರು ನಮ್ಮ ಸಹಾಯಕ್ಕೆ ಬರುವಂತಹ ಜನ. ಇವರಿಂದ ಪ್ರಾರಂಭಿಸಿ, ನಾವು ಭಾಷಾಸಕ್ತಿ ಬೆಳೆಸಬೇಕು; ಮಕ್ಕಳಿಗೆ ಬೋಧನೆಯ ಮೂಲಕ, ಹಿರಿಯರು/ಪೋಷಕರಿಗೆ ಭಾಷೆಯ ಬಗೆಗಿನ ಜ್ಞಾನದ ಮೂಲಕ. ಹೀಗೆ ಮಾಡಲು ಏನಾದರೂ ಉಪಾಯಗಳಿದ್ದಲ್ಲಿ, ಅದನ್ನು ಈ ವೇದಿಕೆಯಲ್ಲಿ ನಾವೆಲ್ಲರೂ ಚರ್ಚಿಸಬಹುದು.

    ಪ್ರತಿಕ್ರಿಯೆ
  5. ಇಂದುಶೇಖರ ಅಂಗಡಿ

    ಮೇಡಂ, ಕಾರ್ಯನಿಮಿತ್ತ ಹೆಂಡತಿ-ಮಕ್ಕಳನ್ನು ಊರಲ್ಲಿ ಬಿಟ್ಟು ಹೊರದೇಶಕ್ಕೆ ಕೆಲಸಕ್ಕೆ ಬಂದಿರುವ ಇಲ್ಲಿ, ಕಂಪನಿಯ ಫ್ಲಾಟ್ ನಲ್ಲಿ ನಾನು, ನನ್ನ ಮೂರು ಜನ ಸಹೋದ್ಯೋಗಿಗಳೊಂದಿಗೆ ವಾಸಿಸುತ್ತಿದ್ದೇನೆ. ಅವರಲ್ಲಿ ಒಬ್ಬ ತಮಿಳಿಗ, ಇನ್ನೊಬ್ಬ ಮಲೆಯಾಳಿ, ಹಾಗೂ ಮತ್ತೊಬ್ಬ ನಮ್ಮ ಕೋಲಾರದವ.ನಾನು ಧಾರವಾಡದ ಕಡೆಯ ಒಂದು ಹಳ್ಳಿಯವ. ನನ್ನ ಮುವರೂ ಸಹೋದ್ಯೋಗಿಗಳು ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದು ಹೆಂಡತಿ ಮಕ್ಕಳು ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ.( ಎಲ್ಲರಿಗೂ ಸೆಟಲ್ ಆಗಲು ನಮ್ಮ ಬೆಂಗಳೂರೇ ಬೇಕು ನೋಡ್ರಿ.) ತಮಿಳಿಗನಿಗೆ ಸ್ವಲ್ಪವೂ ಕನ್ನಡ ಬರುವದಿಲ್ಲ. ಬೆಂಗಳೂರಿನಲ್ಲಿ ಎಲ್ಲರೂ ತಮಿಳಿನಲ್ಲಿ ವ್ಯವಹರಿಸುವದರಿಂದ ತನಗೆ ಕನ್ನಡ ಕಲಿಯುವ ಪ್ರಮೇಯವೇ ಬಂದಿಲ್ಲ. ಅದರ ಅವಶ್ಯಕತೆಯೂ ತನಗೆ ಇಲ್ಲಾ ಎಂದು ಹೇಳುತ್ತಾನೆ. ಮಲೆಯಾಳೀ ಮಿತ್ರನಿಗೂ ಕನ್ನಡ ಬರುವದಿಲ್ಲಾ. ಅವನೂ ಸಹಾ ಬೆಂಗಳೂರಿನಲ್ಲಿರಲು ತಮಿಳು ಅಥವಾ ಇಂಗ್ಲೀಷು ಸಾಕು ಅನ್ನುತ್ತಾನೆ. ಇನ್ನು ಕೋಲಾರದವ, ತಾನು ಉರ್ದು ಮೀಡಿಯಂನಲ್ಲಿ ಓದಿದ್ದರಿಂದ ಕನ್ನಡ ಕಲಿತಿಲ್ಲಾ ಎಂದು ಹೇಳುತ್ತಾನೆ. ಹಾಗೂ ಬೆಂಗಳೂರಿನಲ್ಲಿ ಕನ್ನಡದ ಅವಶ್ಯಕತೆಯೇ ಇಲ್ಲಾ ಎಂದು ಅವರಿಗೆ ತಮಿಳಿನಲ್ಲಿ ಹೇಳುತ್ತಿರುತ್ತಾನೆ. ನಾನು ಅವರೆಲ್ಲರಿಗೆ ಚನ್ನಾಗಿ ಝಾಡಿಸಿ,ಮ್ಗೂವರಿಗೂ ಕನ್ನಡ ಕಲಿಸುತ್ತಿದ್ದೇನೆ.
    ಕನ್ನಡವನ್ನು ಮುಂದಿನ ಪೀಳಿಗೆಗೆ ಒಯ್ಯಬೇಕೆಂದರೆ ನಾವು ನಮ್ಮ ಸುತ್ತಲಿನವರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು, ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಪತ್ರಿಕೆಗಳನ್ನೇ ತರಿಸಿ ಮಕ್ಕಳಿಂದ ಓದಿಸಬೇಕು.ವಿಶೇಷವಾಗಿ ಅಮ್ಮಂದಿರು ತಮ್ಮ ಮಕ್ಕಳಿಗೆ ಕನ್ನಡದ ಪರಿಸರ ಒದಗಿಸಬೇಕು….

    ಪ್ರತಿಕ್ರಿಯೆ
    • samyuktha

      ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಇಂದುಶೇಖರ್ ಅವರೇ! ಮತ್ತು ನೀವು ಹೇಳಿದ ಮಾತು ನಿಜ. ತಾಯಿಯಿಂದಲೇ ಮೊದಲು ಮನೆಯಲ್ಲಿ ಕನ್ನಡ ಪ್ರಾರಂಭವಾಗಬೇಕು.

      ಪ್ರತಿಕ್ರಿಯೆ
  6. Badarinath Palavalli

    ಆಕೆಯ ಇಂಗ್ಲೀಷ್ ವ್ಯಾಪಾರೀ ನೀತಿ ತುಂಬಾ ನಡೆಯೋದಿಲ್ಲ ಬಿಡೀ ಸಂಪು.

    ಕನ್ನಡವೇ ನಮ್ಮ ಉಸಿರಾಗಲಿ ಗೆಳತಿ.
    lets talk in Kannada!

    ಪ್ರತಿಕ್ರಿಯೆ
    • samyuktha

      ಕನ್ನಡಾಭಿಮಾನ ಎಂದರೆ “ಕನ್ನಡದ ಹೊರತು ಮತ್ಯಾವ ಭಾಷೆಯೂ ಸಲ್ಲ” ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಅದಕ್ಕೆ ಹೊರತಾಗಿ ನೀವು ಇಂಗ್ಲಿಷ್ ನಲ್ಲಿ “ಕನ್ನಡ ಮಾತನಾಡೋಣ” ಎಂದಿರುವುದು ಈ ದ್ವಂದ್ವಕ್ಕೆ ಹೊರತಾದ್ದೆ. ಧನ್ಯವಾದ ಪಲವಳ್ಳಿ.

      ಪ್ರತಿಕ್ರಿಯೆ
  7. Mahesh

    ಕನ್ನಡ ಮಾತನಾಡಿದರೆ ಬಡವರಾಗಿಬಿಡುತ್ತೇವೆ ಎಂದು ಕನ್ನಡಿಗರಿಗೆ ಅನಿಸಿರಬೇಕು, ಅಥವಾ ಬದಲಾದ ಜಗತ್ತಿನಲ್ಲಿ ಕನ್ನಡ ಅಪ್ರಸ್ತುತವಾಗಿದೆ, ಮತ್ತು ಬದುಕಿಸುವ ಶಕ್ತಿಯನ್ನು ಕಳೆದುಕೊಂದಿರಬೇಕು . ನಿಧಾನವಾಗಿ ಕನ್ನಡ ಜಡತ್ವವನ್ನು ಹೊಂದಿ, ಮೃತ ಭಾಷೆಯಾಗಲೂ ಬಹುದು. ಇಂದು ನಾವು ಬದುಕಲು ಕನ್ನಡ ಒಂದು ಹೊರೆಯಾದರೆ, ಅದನ್ನು ನಾವು ಯಾಕೆ ಇಟ್ಟುಕೊಳ್ಳಬೇಕು?

    ಪ್ರತಿಕ್ರಿಯೆ
    • samyuktha

      ಮಹೇಶ್ ಅವರೇ, ನಿಮ್ಮ ಮಾತು ನಾನು ಸಂಪೂರ್ಣ ಅಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ಷಮಿಸಿ. ಆದರೆ, ನನಗನ್ನಿಸಿದ್ದು ಇಷ್ಟು: ನಮಗೆ ಬದುಕೇ ಒಂದು ಹೊರೆಯಾದರೆ, ಬದುಕನ್ನು ತ್ಯಜಿಸುತ್ತೆವೆಯೇ?

      ಪ್ರತಿಕ್ರಿಯೆ
      • Mahesh

        ಮನುಷ್ಯ ತನ್ನ ಬದುಕಿಗಾಗಿ ಹಿಂದೆ ಹಲವಾರು ಸಾಧನಗಳನ್ನು ಕಂಡುಹಿಡಿದಿದ್ದ ಮತ್ತು ಬಳಸಿಕೊಂಡಿದ್ದ. ಭಾಷೆಯೆಂಬುದು ಜ್ಞಾನ ಪ್ರಸಾರಕ್ಕಾಗಿ ಮಾಡಿಕೊಂಡ ಒಂದು ಸಾಧನ ಅಷ್ಟೇ. ಶತಮಾನಗಳ ಹಿಂದೆ ನಮ್ಮ ಪೂರ್ವಜರು ಉಪಯೋಗಿಸಿದ ಸಾಧನಗಳನ್ನು ಇಂದು ನಾವು ಉಪಯೋಗಿಸುವದಿಲ್ಲ. ಆದರೆ ಅವುಗಳನ್ನು ಮ್ಯೂಸಿಯಂನಲ್ಲಿ ಇಟ್ಟು, ಅವುಗಳನ್ನು ನೋಡಿ ನಮ್ಮ ಪೂರ್ವಜರ ಕುರಿತು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಕನ್ನಡ ಭಾಷೆಯೂ ಸಹ ಅಂತಹ ಒಂದು ಸಾಧನವಾಗಿದ್ದರಿಂದ, ಯಾವಾಗ ತನ್ನ ಉಪಯುಕ್ತತೆಯನ್ನು ಕಳೆದುಕೊಳ್ಳುತ್ತದೆಯೋ ಆವಾಗ ಮ್ಯೂಸಿಯಂ ಕಡೆ ಮುಖ ಮಾಡುವದರಲ್ಲಿ ಯಾವುದೇ ಅನುಮಾನವಿಲ್ಲ. ಇದೊಂದು ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ ಅಲ್ವಾ ಮೇಡಂ? ನಾಳೆ ಇಂಗ್ಲಿಷ್ ಭಾಷೆಗೆ ಅನ್ನ ಕೊಡುವ ಸಾಮರ್ಥ್ಯ ಕಡಿಮೆಯಾದಲ್ಲಿ ಇಂಗ್ಲಿಷ್ ಗೆ ಕೂಡ ಇದೇ ಪರಿಸ್ಥಿತಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

        ಪ್ರತಿಕ್ರಿಯೆ
        • samyuktha

          ನೀವು ಹೇಳಿದ್ದು ನಿಜವಿರಬಹುದು. ನಿಮ್ಮ ತರ್ಕದಲ್ಲಿಯೇ ಯೋಚಿಸಿ ನೋಡೋಣ. ಆವಾಗಲೂ, ಯಾವುದೇ ಒಂದು ಭಾಷೆಯ ಹುಟ್ಟು ಅಥವಾ ಸಾವಿಗೆ ತನ್ನದೇ ಆದ ಕಾಲಮಾನವಿರುತ್ತದೆ. ಆದರೆ ನಮಗೆ ತಿಳಿದೇ “ಅಯ್ಯೋ ಸಾವು ಖಂಡಿತ ಅಲ್ಲವೇ” ಎಂದು ನಾವು ಔಷದೊಪಚಾರವನ್ನು ಕಡಿಮೆ ಮಾಡುತ್ತವೆಯೇ? ನಾವು ಕನ್ನಡಿಗರಾಗಿ ಹೀಗೆ ಆಲೋಚಿಸಿ ಕೈ ಕಟ್ಟಿ ಕೂರುವುದು ಸರಿಯೇ? ನಮ್ಮ ಕೈಲಾದಷ್ಟು ವರ್ಷಗಳು, ಶತಮಾನಗಳು ನಮ್ಮ ಭಾಷೆ ತನ್ನ ಜ್ಯೋತಿ ಪ್ರಕಾಶಿಸಬೇಕು ಎಂಬ ಹಂಬಲವಿರಬೇಕಲ್ಲವೇ?

          ಪ್ರತಿಕ್ರಿಯೆ
  8. niharika

    ಈ ಕಿಂಡಲ್ ಅನ್ನೋದು ಕೂಡ ಕನ್ನಡ ಶಬ್ದ ಅಲ್ಲ ಆಲ್ವಾ ಮೇಡಂ ? ಅದು ನಮಗೆ ತಮಿಳಿನಿಂದ ಎರವಲಾಗಿ ಬಂದಿರೋದಲ್ವಾ ? ಆದರೆ ಈ ಬೆಂಗಳೂರು ಕನ್ನಡದಲ್ಲಿ ಈ ಶಬ್ದ ಅದೆಷ್ಟು ಸಲೀಸಾಗಿ ಅದು ಕನ್ನಡದ್ದೇ ಶಬ್ದವೇನೋ ಅನ್ನುವಷ್ಟು ಸಲೀಸಾಗಿ ಬೆರೆತು ಹೋಗಿದೆಯಲ್ಲಾ ?

    ಪ್ರತಿಕ್ರಿಯೆ
    • samyuktha

      ನಿಹಾರಿಕ ಅವರೇ, ನಿಮ್ಮ ಅವಲೋಕನಕ್ಕೆ ಸೈ. ನಿಜ ಅದು ಕನ್ನಡ ಪದವಲ್ಲ, ಆದರೆ ಅದು ತಮಿಳು ಪದ ಸಹ ಅಲ್ಲ. ಅದು ಇಂಗ್ಲಿಷ್ ಪದ. Kindle ಅಂದರೆ ‘to arouse’, ‘to stir, irritate’ ಎಂದು ಅರ್ಥ. ಅದು ಸಾಧಾರಣ ಈಗ ಕಂಗ್ಲಿಷ್ ಆಗಿ ಉಳಿದಿದೆ.

      ಪ್ರತಿಕ್ರಿಯೆ
  9. Pushparaj Chauta

    ಒಂದೊಳ್ಳೆಯ ಆರ್ಟಿಕಲ್ ಓದಿದೆಯೆಂದು, ಈವನ್ ಐ ಕ್ಯಾನ್ ಪ್ರೌಡ್ಲೀ… ಕಮೆಂಟ್ ಮಾಡಬಲ್ಲೆ! ಎನಿ ಹೌ, ಚಂದದ ಲೇಖನ.

    ಇದು ನಮ್ಮ ಇಂದಿನ ಪರಿಸ್ಥಿತಿ. ಆಂಗ್ಲದ ಅತಿವ್ಯಾಮೋಹ, ಪಾಶ್ಚಿಮಾತ್ಯ ಸಂಸ್ಕೃತಿಗಳ ಅನುಕರಣೆ ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು ಸತ್ಯ.

    ಪ್ರತಿಕ್ರಿಯೆ
  10. Guruprasad Kurtkoti

    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ! ಈ ಥರ ಕಟು ಅನುಭವಗಳು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಇಂಥದೇ ಒಂದು ಅನುಭವವನ್ನ ನನ್ನ ಬ್ಲಾಗಿನಲ್ಲಿ ಹಂಚಿಕೊಂಡಿದ್ದೇನೆ. ಸಮಯ ಸಿಕ್ಕಾಗ ಓದಿ. http://kurtkoti.blogspot.in/2012/09/blog-post.html

    ಪ್ರತಿಕ್ರಿಯೆ
  11. kanikiaraju

    nannomme dharwada kaleginalli oduvaaga hecchina snehita mattu snehiteyarige English mattu Hindi vyamoha iddadu sahaja. bengaloorinda banda nanage ashcharyavada sangathiyendare, aa kaalejina padde haikla prakara…first Englishge mahatva second Hindi nantara Kannada mathadthidru…nanna kannada snehitarannu kadeganisidru…nange english kannada saragavagi bandru…kanndada snehithara saluge..odanata..prithi…samvedene thumba hidisithu. avarella kannda hrudayigalagiddaru…innu kelavaru kannada programme nodlikke bandu kannada premigaldru…innu kelavru namma henmakala ‘attention’ seleyalu..kannada thodaluthidru…iganthu paristhithi ‘kanglish’ agbhitide. adkke kannada bhashege kodalipettu biddiruvudara jothege…kannada alivu ulivina aathanka hechchagthide. kannda optional thegedukonda nanu, omme namma meshtru baruva munche hige barede, ‘kannada ennada…ekkada nivu pakkad…kya don’t know’ endu baredakshana..snehita snehithara nage chappale joragithu…eno sadhane madidange bandu kuthkonde.

    ಪ್ರತಿಕ್ರಿಯೆ
  12. niharika

    ಕ್ಷಮಿಸಿ ಸಂಯುಕ್ತಾ ಅವರೇ ನನಗೆ ಇಂಗ್ಲಿಷ್ ”kindle ” ನ ಅರ್ಥ ಚೆನ್ನಾಗಿ ಗೊತ್ತಿದೆ ಅದರ ಅರ್ಥ to arouse , to incite or to inspire a feeling ಹಾಗೂ ನೀವು ಹೇಳಿದಂತೆ”irritate” ಅಲ್ಲ.
    ಇಲ್ಲಿ ಪ್ರಸ್ತಾಪವಾದದ್ದು ಕಿಂಡಲ್ ಎನ್ನುವ ಪದ. ಇದು ತಮಿಳಿನಿಂದ ಬೆಂಗಳೂರು ಕನ್ನಡಿಗರಿಗೆ ಆಮದಾದ ಪದ.ಇದನ್ನು ತಮಿಳಿನಲ್ಲಿ ಕಿಂಡಲ್ ಎಂದೇ ಬರೆಯುತ್ತಾರೆ. ಇದರ ಅರ್ಥ ತಮಿಳಿನಲ್ಲಿ ಹೀಗಿದೆ ” it is a colloquial term used in language Tamil to imply any of the following: teasing, taunting, needling, poking fun, taking a dig, attempt at sarcasm,” ನಾನು ತಮಿಳನ್ನು ಚೆನ್ನಾಗಿ ಬಲ್ಲ ಮತ್ತು ಕಲಿತವರಿಂದ ಈ ವಿಷಯವನ್ನು ಚರ್ಚಿಸಿಯೇ ನನ್ನ ಅಭಿಪ್ರಾಯವನ್ನು ಇಲ್ಲಿ ಹಾಕಿದ್ದು. ಮತ್ತೆ ಈ ತಮಿಳು ”ಕಿಂಡಲ್” ಇಂಗ್ಲಿಷ್ ನಿಂದ ಅಮದಾಗಿದೆ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. ಬೆಂಗಳೂರು ಕನ್ನಡಿಗರು ತಮ್ಮ ಕನ್ನಡದಲ್ಲಿ ಪ್ರಯೋಗಿಸುತ್ತಿರುವುದು ಈ ತಮಿಳಿನ ಕಿಂಡಲ್ ಹೊರತು ಇಂಗ್ಲಿಷ್ ನ ”kindle ಅಲ್ಲ ಎಂಬುದು ತಮಿಳು ಪದ ಕಿಂಡಲ್ ನ ಅರ್ಥ ನೋಡಿದರೆ ತಿಳಿಯುತ್ತದೆ.
    ಇಲ್ಲಿ ನಾವು ಬೆಂಗಳೂರು ಕನ್ನಡಿಗರು ಹೀಗೆ ಬೇರೆ ರಾಜ್ಯದಿಂದ ಬಂದ ಶಬ್ದಗಳನ್ನು,ಕೆಲವು ವಾಕ್ಯಗಳನ್ನು ಉದಾಹರಣೆಗೆ ”ಅದು ಬಂದು” ಏನಾಯ್ತು ಅಂದ್ರೆ” ಎನ್ನುವ ನಮ್ಮದಲ್ಲದ ಒಂದು ಅಸಂಬದ್ಧ ವಾಕ್ಯ ರಚನೆಯನ್ನು ನಮ್ಮದೇ ಎನ್ನುವಂತೆ ಉಪಯೋಗಿಸುತ್ತಿರುವುದರ ಬಗ್ಗೆ ನನ್ನ ಅಸಹನೆ . (ಈ ವಿಷಯದೆ ಬಗ್ಗೆ ನಿಮ್ಮ ಲೇಖನದಲ್ಲಿ ಪ್ರಸ್ತಾಪವಿಲ್ಲ ಆದರೆ ನಾನು ಈ ಭಾಷಾ ಆಮದು ಸಂಸ್ಕೃತಿಯ ಬಗ್ಗೆ ವಿಶದೀಕರಿಸುವಾಗ ಇದನ್ನು ಬಳಸಿಕೊಂಡೆ ಅಷ್ಟೇ) ಯಾವುದೇ ಭಾಷೆ ವಿಕಾಸವಾಗುವುದು(evolve ) ಇಂತಹ ”ಎರವಲುಗಳಿಂದಲೇ”ಎಂದು ಭಾಷಾಶಾಸ್ತ್ರ ಹೇಳುತ್ತದೆ.ಆದರೆ ನನ್ನ ವ್ಯಗ್ರತೆ ಇರುವುದು ನಾವು ಇಂತಹ ಆಮದುಗಳಿಗೆ ಮುಕ್ತವಾಗಿ ತೆರೆದುಕೂಳ್ಳಲು ತೋರುವ ಉತ್ಸಾಹವನ್ನು ನಮ್ಮದೇ ಭಾಷೆಯನ್ನುಸುಲಲಿತವಾಗಿ ಉಪಯೋಗಿಸುವಲ್ಲಿ ಯಾಕೆ ತೋರುವುದಿಲ್ಲ ಎನ್ನುವುದರಲ್ಲಿ..

    ಪ್ರತಿಕ್ರಿಯೆ
    • samyuktha

      ಕ್ಷಮಿಸಿ ನಿಹಾರಿಕಾ ಅವರೇ. ನನಗಿದು ಗೊತ್ತಿರಲಿಲ್ಲ. ವಿಚಾರ ತಿಳಿಸಿದ್ದಕ್ಕೆ ಧನ್ಯವಾದ. ನಿಮ್ಮ ವ್ಯಗ್ರತೆ ಅಥವಾ ಅಸಹನೆ ನನಗೆ ಅರ್ಥವಾಗುತ್ತದೆ. ‘ಬಂದುಬಿಟ್ಟಿ’, ‘ಮಾಡುಬಿಟ್ಟಿ’ ಎಂಬ ಮಾತುಗಳನ್ನು ಕಂಡರೆ ನನಗೂ ಹಾಗೆ ಅನ್ನಿಸುತ್ತದೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: