ಸಂಪು ಕಾಲಂ : ಆ ಮಲಯಾಳಿ ಹುಡುಗನಿಗೆ ಥ್ಯಾಂಕ್ಸ್!

ಆ ಮಲಯಾಳೀ ಹುಡುಗನಿಗೆ ಥ್ಯಾಂಕ್ಸ್!

ನಮ್ದು ಹೇಳಿ ಕೇಳಿ ಮೆಟ್ರೋ ಸಿಟಿ. ಸುತ್ತ ಮುತ್ತ ಬಹುಭಾಷಿಗರಿದ್ದು, ಬೆಂಗಳೂರಿಗರೆಲ್ಲರೂ ಒಂದಕ್ಕಿಂತ ಹೆಚ್ಚು ಭಾಷೆಯ ಪ್ರವೀಣತೆಯನ್ನು ಪಡೆಯುವ ಅವಕಾಶ ಒದಗುವಂತಾಗಿದೆ. ಇದರಲ್ಲಿ ಸಮಬೆಸಗಳೆರಡೂ ಇವೆ ಎಂಬುದು ಬೇರೆಯ ಪ್ರಶ್ನೆಯೇ ಹೌದು. ಆದರೆ ಈ ರೀತಿ ವಿವಿಧ ಭಾಷಿಗರ ನಡುವೆ ಕೆಲಸ ಮಾಡುವುದು ಬೇರೆಯೇ ಮಜಾ ಬಿಡಿ. ಕೆಲಸದ ಜೊತೆಗೆ ಅವರ ಸ್ನೇಹವಷ್ಟೇ ಅಲ್ಲದೆ ಹೊಸ ಸಂಸ್ಕೃತಿಯ, ಹೊಸ ಭಾಷಾಧ್ಯಯನದ ಪರಿಭಾಷೆಗಳೂ ನಮಗೆ ಪರಿಚಯವಾಗುತ್ತದೆ. ಈ ನಿಟ್ಟಿನಲ್ಲಿ ನನಗೆ ಕೇರಳದ ಬೆಡಗಿನ ಮೇಲೆ, ಮಲಯಾಳಂ ಭಾಷೆಯ, ಸಂಗೀತ-ಸಾಹಿತ್ಯದ ಬಗೆಗೆ ಒಲವು ಬೆಳೆದದ್ದೇ ನನ್ನ ಮಲಯಾಳೀ ಸಹೋದ್ಯೋಗಿ ಒಬ್ಬನಿಂದ. ಹಾಗೆಯೇ, ನನಗೆ ಕನ್ನಡ ಭಾವಗೀತೆಗಳ ಬಗೆಗಿನ ಒಲವು ಇಮ್ಮಡಿಸಿದ್ದೂ ಈ ಮಲಯಾಳೀ ಹುಡುಗನಿಂದ ಎಂದರೆ ಆಶ್ಚರ್ಯ ಬೇಡ!

ಆತ ಆಗಷ್ಟೇ ಕಾಲೇಜು ಮುಗಿಸಿ ಇಂಟರ್ನ್ ಆಗಿ ನಮ್ಮ ಆಫೀಸಿಗೆ ಸೇರಿದ ಮಲಯಾಳೀ ತರುಣ. ಆತನಿಗೆ ಅಗಾಧವಾದ ತಾಂತ್ರಿಕ ಜ್ಞಾನ ಆದರೆ ಮಲಯಾಳಂ ಹೊರತು ಇತರ ಭಾಷೆಗಳ ಬಗೆಗೆ ಅಲಕ್ಷ್ಯ, ಅನಾಸಕ್ತಿ. ಇದಕ್ಕೆ ತದ್ವಿರುಧ್ಧವಾದ ನಮ್ಮ ಭಾಗಶಃ ಕನ್ನಡಿಗರು ಬಿಟ್ಟರೆ ಉಳಿದವರೆಲ್ಲಾ ಹೀಗೇ ಅನಿಸುತ್ತೆ ಅಲ್ಲವೇ! ಇರಲಿ. ಅತ್ಯಂತ ಚೂಟೀ ಹುಡುಗನಾದ ಇವನಿಗೆ ಕೊಟ್ಟಿರುವ ಕೆಲಸ ಕಿರುಬೆರಳಲ್ಲಿ ಮುಗಿಸುತ್ತಿದ್ದ. ನಂತರ ಪ್ರಾರಂಭವಾಗುತ್ತಿತ್ತು ಅವನ ‘ಕ್ಯಾರಳ’, ‘ಮಳಯಾಳಂ’ ಗುಣಗಾನ, ಮತ್ತು ಬೆಂಗಳೂರು, ಕನ್ನಡದ ಅವಹೇಳನ. ಮುನ್ನಾರ್, ತೆಕ್ಕಡಿ, ಅಲೆಪ್ಪಿ ಅಷ್ಟೇ ಮೇಲುನೋಟಕ್ಕೆ ತಿಳಿದಿರುವ ನನಗೆ ಅದರ ಹೊರತಾಗಿಯೂ ಇರುವ, ಅವನ ಭಾಷೆಯಲ್ಲಿಯೇ ಹೇಳಬೇಕಾದರೆ “ಗಾಡ್ಸ್ ಓನ್ ಕಂಟ್ರಿ” ಆಗಿರುವ ಕೇರಳದ ಪರಿಚಯವಾಯಿತು. ‘ಚೇರ ರಾಜವಂಶ’ ದಿಂದ ಬಂದ ‘ಚೇರಲಂ’ ಎಂಬ ದ್ರಾವಿಡ ಭಾಷೆಯಿಂದ ‘ಕೇರಳಂ’ ಆಗಿದೆ ಎಂಬ ವಿಷಯ ತಿಳಿದದ್ದು ಈತನಿಂದಲೇ. ನಮ್ಮಲ್ಲಿರುವ ಪಂಥಾಭಿಮಾನ, ಮತೀಯತೆ ಸಹಾ ಕೇರಳದಲ್ಲಿ ಸಾಕಷ್ಟು ಕಡಿಮೆ ಎಂದು ಸಬೂತುಗಳ ಸಮೇತ ವಿವರಿಸಿ ಬೀಗುತ್ತಿದ್ದ. ಅವರಲ್ಲಿರುವಷ್ಟು ವಿದ್ಯಾಭ್ಯಾಸವಾಗಲೀ, ಮಹಿಳಾ ಸಬಲೀಕರಣವಾಗಲೀ ಭಾರತದಲ್ಲೇ ಇಲ್ಲ ಎಂಬುದು ಇವನ ವಾದ. ಈ ಮಾಹಿತಿಗಳಲ್ಲಿ ಸಾಕಷ್ಟು ಸತ್ಯವಿರಬಹುದು. ಆದರೆ ಜೀವನದಲ್ಲಿ ‘ಮಲಯಾಳಂ/ಕೇರಳ’ವೇ ಪರಮ ಸುಖ, ಬೇರೆಲ್ಲವೂ ನಿಷ್ಪ್ರಯೋಜಕ ಎನ್ನುವ ಮಟ್ಟದ ಕೂದಲು ಸೀಳುವ ಸ್ಪಷ್ಟೀಕರಣದ ಅವನ ಪ್ರಯತ್ನದಲ್ಲಿ ನನಗೆ ಕಂಡದ್ದು ಎರಡು ವಿಚಾರಗಳು.

ತಾಯಿಯನ್ನು ಬಿಟ್ಟು ಬಂದ ಮಗುವಿಗೆ, ಆ ಕ್ಷಣದಲ್ಲಿ ತಾಯಿ ದೇವರಿಗಿಂತಲೂ ಮಿಗಿಲಾಗಿ ಕಂಡುಬಿಡುತ್ತಾಳೆ. ತನ್ನ ತಾಯ ಹೊರತು ಜಗತ್ತಿನಲ್ಲಿ ಮತ್ತೇನೂ ಬೇಡ ಅನ್ನುವ ಹಂತ ತಲುಪಿ, ಅದನ್ನು ದಾಟಿ ಹೊರಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ರೀತಿಯಾಗಿ ಆ ನನ್ನ ಮಲಯಾಳೀ ಗೆಳೆಯನಿಗೆ ತನ್ನ ‘ತಾಯ’ ಬೆಚ್ಚಗಿನ ಕಾವಿನ ಹೊರಗೆ ಬಂದು ಒಂಟಿತನ ಆವರಿಸಿರಬಹುದು. ಅದಕ್ಕಾಗಿ ಹೀಗೆ ಮಾತನಾಡುತ್ತಿರಬಹುದು. ಈ ಹುಡುಗನಿಂದಷ್ಟೇ ಅಲ್ಲದೆ ಇತರರಿಂದಲೂ ಮನವರಿಕೆಯಾದ ಮತ್ತೊಂದು ಅಂಶವೆಂದರೆ ‘ಭಾಷಾಭಿಮಾನ’ಕ್ಕೂ ‘ಭಾಷಾಂಧತೆ’ಗೂ ಇರುವ ಅಂತರ, ಹಾಗೂ ಈ ಅಂತರವನ್ನು ಅರಿವಿಲ್ಲದಂತೆಯೇ ಇಲ್ಲವಾಗಿಸುವ ಪ್ರಯತ್ನ. ಭಾಷಾಂಧತೆ ಹೆಚ್ಚು ಕಂಡು ಬರುವುದು ಕನ್ನಡೇತರರಲ್ಲಿ ಎಂಬ ಒಂದು ಅಂಕಿ ಅಂಶದಲ್ಲಿ ಕನ್ನಡಿಗರ ಭಾಷಾಭಿಮಾನದ ಕೊರತೆಯೂ ಇರಬಹುದು ಎಂಬ ಅಂಬೋಣ.

ಸುಶ್ರಾವ್ಯವಾದ ಮಲಯಾಳೀ ಲೈಟ್ ಮ್ಯೂಸಿಕ್ ನನಗೆ ಕೇಳಿಸುತ್ತಾ, ನಾನು ಅದನ್ನು ಸುಖಿಸುತ್ತಿರುವಾಗಲೇ, “ಇದು ಸಿನೆಮಾ ಹಾಡು ಅಲ್ಲ, ಈ ರೀತಿಯಾದ ಸಿನೆಮಾವಲ್ಲದ ಒಳ್ಳೆಯ ಹಾಡುಗಳು ಮಲಯಾಳಂ ಹೊರತು ಬೇರೆ ಭಾಷೆಯಲ್ಲಿ ಇಲ್ಲ”, ಎಂದು ತಿಳಿಯಾಗಿಯೇ ಮೂದಲಿಸಿದ. ಲಘುವಾಗಿ ನಕ್ಕು ಕನ್ನಡವನ್ನು, ನಮ್ಮ ನಾಡನ್ನೂ ಟೀಕಿಸುವ ಈ ಹುಡುಗನಿಗೆ ಅಷ್ಟೇ ಲಘುವಾಗಿ ನಮ್ಮ ಭಾಷೆಯ ಬಗೆಗೆ, ಸಂಸ್ಕೃತಿಯ ಬಗೆಗೆ ಅರಿವು ಮೂಡಿಸಬೇಕು ಎಂದು ತೀರ್ಮಾನಿಸಿದೆ. ನಮ್ಮಲ್ಲಿ ಲೈಟ್ ಮ್ಯೂಸಿಕ್ ಎನಿಸಿಕೊಂಡಿರುವ ‘ಭಾವಗೀತೆ’ ಗಳ ಬಗೆಗೆ ಈತನಿಗೆ ತಿಳಿಸೋಣ, ಅದರಿಂದಲೇ ಪ್ರಾರಂಭವಾಗಲಿ ನಮ್ಮ ‘ಜಾಗೃತಿ ಜಾಥಾ’ ಎನಿಸಿ ನನ್ನ ಮೊಬೈಲ್ನಲ್ಲೇ ಸಾಕಷ್ಟು ಸಮಯದಿಂದ ತಣ್ಣಗೆ ಕೂತ ಭಾವಗೀತೆಗಳನ್ನು ಕೇಳತೊಡಗಿದೆ, ಜೊತೆಗೇ ಈ ಗೀತೆಗಳ ಬಗ್ಗೆ ಅಧ್ಯಯನ ಶುರುವಾಯಿತು. ಆಗ ಮೊಟ್ಟ ಮೊದಲಿಗೆ ನನಗೆ ಅನಿಸಿದ ವಿಷಯ, ಇಂಗ್ಲಿಷ್ ಭಾಷೆಯ ತರ್ಜುಮೆಯಾಗಿ ‘ಲೈಟ್ ಮ್ಯೂಸಿಕ್’ ಆದ ‘ಭಾವಗೀತೆ’ಯು ಯಾವುದೇ ಅರ್ಥದಲ್ಲಿ ‘ಲೈಟ್’ ಆಗಿಲ್ಲ ಎಂದು! ನಮ್ಮ ಮನಸ್ಸಿನ ‘ಭಾವನೆ’ಗಳನ್ನು ಮೀಟುವಂತಹ ‘ಭಾವಗೀತೆ’ಗೆ, ಇಂಗ್ಲಿಷ್ ನಲ್ಲಿ ‘ಲೈಟ್ ಮ್ಯೂಸಿಕ್’ ಅಂದು ಬಿಟ್ಟರೆ ಸರಿಯೇ! ಮತ್ತದನ್ನು ಹೇಗೆ ಕರೆಯಬಹುದು? ಹುಡುಕಿ ಹುಡುಕಿ ಸುಸ್ತಾದೆ, ಯಾವುದೇ ಪದ ‘ಭಾವ’ ಅನ್ನುವುದಕ್ಕೆ ಸಮವಾಗಲಿಲ್ಲ. ಪ್ರೇಮ, ವಿರಹ, ಕಾಮ, ಕೋಪ, ವಾತ್ಸಲ್ಯ, ಅಹಂಕಾರ, ಧೈರ್ಯ, ಭಯ, ಭಕ್ತಿ, ಈ ರೀತಿ ಯಾವುದೇ ಮನಸಿನ ರಸಗಳಿಗೂ, ಎಲ್ಲ ‘ಭಾವ’ಕ್ಕೂ ಅರ್ಥ ಕೊಡುವ ‘ಭಾವಗೀತೆಗಳು’ ನಮ್ಮ ಕನ್ನಡದಲ್ಲಿ ಸಾಕಷ್ಟಿವೆ. ಈ ಹಾಡುಗಳನ್ನು ನಾನು ಸಾಕಷ್ಟು ಬಾರಿ ಕೇಳಿ ಮನಸೋತಿದ್ದರೂ, ಪುನಃ ಮರಳಿ ಕೇಳಿದರೂ ಅದೇ ರೋಮಾಂಚನ, ಪುಳಕ, ಭಾವೋದ್ರೇಕ! ಈ ರೀತಿಯ ಎಂದೂ ಬತ್ತದ, ಮೊಗೆದಷ್ಟೂ ಸಿಗುವ ಭಾವದೀಪ್ತವಾದ ಅಗಾಧ ಸಾಹಿತ್ಯ ಸೃಷ್ಟಿ ನಮ್ಮ ಕನ್ನಡದಲ್ಲಿ ಇದೆ.

ಸಾಂದರ್ಭಿಕವಾಗಿ ಮೈ ಮರೆಸುವ ಸಿನೆಮಾ ಸಾಹಿತ್ಯ, ಗೀತೆಗಳು ಅನೇಕ. ಆದರೆ ಸಮಯ ಕಳೆದಂತೆ, ನಾವು ಬೆಳೆದಂತೆ ಅವು ಹಳತಾಗುತ್ತವೆ, ರುಚಿ ಅಳಿಸಿ ಹೋಗುತ್ತದೆ. ಆದರೆ ‘ಭಾವಗೀತೆಗಳು’ ಹಾಗಲ್ಲ. ಎಷ್ಟು ಬಾರೀ ಕೇಳಿದರೂ, ಕೇಳುತ್ತಲೇ ಇರಬಹುದಾದ ಸಾಹಿತ್ಯ ರಚನೆ, ಗೀತ ಮಾಧುರ್ಯ. ಇದಕ್ಕಾಗಿ ನಾವು ಕವಿ ಹಾಗೂ ಸಂಗೀತಕಾರ ಇಬ್ಬರಿಗೂ ಋಣಿಯಾಗಿರಬೇಕು. “ತನುವು ನಿನ್ನದು ಮನವು ನಿನ್ನದು”, ‘ಓ ನನ್ನ ಚೇತನ”, “ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾವ್ವ”, “ಘಮಘಮ ಘಮಾಡಸ್ತಾವ ಮಲ್ಲಿಗೀ”, “ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ”, “ಬಾ ಸವಿತಾ”, “ಏಲಾವನ”,”ಅಮ್ಮಾ ನಿನ್ನ ಎದೆಯಾಳದಲ್ಲಿ”, “ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ”, “ಯಾವ ಮೋಹನ ಮುರಳಿ ಕರೆಯಿತು”, “ಸ್ತ್ರೀ ಎಂದರೆ ಅಷ್ಟೇ ಸಾಕೆ” ಇತ್ಯಾದಿ ಅನೇಕಾನೇಕ ಹಾಡುಗಳು ಕೇಳಿದಷ್ಟೂ ಸವಿ, ಹಳೆಯ ವೀಣೆಯಂತೆ ಮಾಗಿದಷ್ಟೂ ಮಧುರ. ಪಟ್ಟಿ ಮಾಡ ಹೊರಟರೆ ಒಂದು ದಿನವೆಲ್ಲ ಸಾಲದೇ ಬರಬಹುದು. ಕೆಲವು ಸಾಹಿತ್ಯಿಕ ಚಳುವಳಿಗಳು, ಅಥವಾ ಪಂಥಗಳಿಗೆ ಈ ಭಾವಗೀತೆಗಳು ‘ಐಶಾರಾಮ’ ಎನಿಸುತ್ತದೆ. ಇದು ಸಾಮಾಜಿಕವಾಗಿ ನಿಜವಿದ್ದರೂ ಇರಬಹುದು. ಆದರೆ ವ್ಯಕ್ತಿಗತ ಅಥವಾ ಮಾನಸಿಕ ಮನಮಿಡಿತಗಳಿಗೆ, ಅವುಗಳ ಬೆಳವಣಿಗೆಗಳಿಗೆ ಈ ಭಾವಗೀತೆಗಳು ರೂವಾರಿಯಾಗುತ್ತವೆ. ಸಂವೇದನಾಶೀಲತೆ ಅಥವಾ ಬದುಕಿನ ಬಗೆಗಿನ ಒಂದು ತಾದಾತ್ಮ್ಯತೆಯ ಪುನರಾಕೃತಿಗೆ ಈ ಬೆಳವಣಿಗೆ ಸ್ಪಂದಿಸುತ್ತದೆ.

ಕೊನೆಗೂ ಆ ಹುಡುಗನಿಗೆ ಒಂದು ಕ್ಲಾಸ್ ಮಾಡಿಯೇ ಬಿಟ್ಟೆ. ನಮ್ಮ ಭಾಷೆಯ ಬಗೆಗಿನ ಒಲವು ಇತರ ಭಾಷೆಯ ಬಗೆಗಿನ ದ್ವೇಷವಾಗಿ ಪರಿವರ್ತನೆಯಾಗಬಾರದು ಹೌದಲ್ಲವೇ ಎಂದು ಅವನಿಗೆ ತಿಳಿಸುತ್ತಾ, ನಾನೂ ಕಲಿತೆ. ಏನರ್ಥವಾಯಿತೋ ಇಲ್ಲವೋ, ಅಂತೂ ಈಗ ನನ್ನ ಬಳಿ ಕೆಲವು ಅವಹೇಳನಾಕಾರೀ ಮಾತುಗಳು ಸ್ಥಬ್ಧ. ಒಟ್ಟಿನಲ್ಲಿ, ಭಾವಗೀತೆಗಳ ಬಗೆಗಿನ ಒಲವು, ಗೌರವ ನನ್ನಲ್ಲಿ ಹೆಚ್ಚಿಸಿದ್ದಷ್ಟೇ ಅಲ್ಲದೆ, ಭಾಷಾಧ್ಯಯನದಲ್ಲಿ, ಅದರ ಚಿಂತನೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುವುದಕ್ಕೆ ಸಾಕಷ್ಟು ಸಹಾಯ ಮಾಡಿದ ಆ ಮಲಯಾಳೀ ಹುಡುಗನಿಗೆ ಥ್ಯಾಂಕ್ಸ್!

 

‍ಲೇಖಕರು G

December 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Ganesh Nempe

    ಅದು ‘ಯಾವ ಮೋಹನ ಮುರಲಿ’ ಆಗ್ಬೇಕು ಅಲ್ವಾ? ಮುರಲಿಗೂ, ಮುರಳಿಗೂ ವ್ಯತ್ಯಾಸ ಇದೆ. ಮುರಲಿ ಅಂದರೆ ಕೊಳಲು, ಮುರಳಿ ಅಂದರೆ ಕೃಷ್ಣ ಅಂತ ತುಂಬಾ ವರ್ಷಗಳ ಹಿಂದೆ ಎಲ್ಲೊ ಓದಿದ ನೆನಪು. ಕನ್ನಡದ ಬಗ್ಗೆ ಮಾತಾಡ್ತಾ ಇದ್ದೀರಾ ಹಾಗಾಗಿ ಇಂತಹ ಆಭಾಸಗಳು ಆಗೋದು ಬೇಡ ಅಂತ ಅಷ್ಟೇ…

    ಪ್ರತಿಕ್ರಿಯೆ
    • Ganesh Nempe

      ಕ್ಷಮೆ ಕೇಳುವಂತಹ ತಪ್ಪೇನೂ ಆಗಿಲ್ಲ ಬಿಡಿ. ಅಂದಹಾಗೆ ನಿಮ್ಮ ಲೇಖನಗಳು ಚೆನ್ನಾಗಿ ಮೂಡಿ ಬರುತ್ತಿವೆ. ಅಭಿನಂದನೆಗಳು.

      ಪ್ರತಿಕ್ರಿಯೆ
  2. D.Ravivarma

    ‘ಭಾವಗೀತೆಗಳು’ ಹಾಗಲ್ಲ. ಎಷ್ಟು ಬಾರೀ ಕೇಳಿದರೂ, ಕೇಳುತ್ತಲೇ ಇರಬಹುದಾದ ಸಾಹಿತ್ಯ ರಚನೆ, ಗೀತ ಮಾಧುರ್ಯ. ಇದಕ್ಕಾಗಿ ನಾವು ಕವಿ ಹಾಗೂ ಸಂಗೀತಕಾರ ಇಬ್ಬರಿಗೂ ಋಣಿಯಾಗಿರಬೇಕು. “ತನುವು ನಿನ್ನದು ಮನವು ನಿನ್ನದು”, ‘ಓ ನನ್ನ ಚೇತನ”, “ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾವ್ವ”, “ಘಮಘಮ ಘಮಾಡಸ್ತಾವ ಮಲ್ಲಿಗೀ”, “ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ”, “ಬಾ ಸವಿತಾ”, “ಏಲಾವನ”,”ಅಮ್ಮಾ ನಿನ್ನ ಎದೆಯಾಳದಲ್ಲಿ”, “ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ”, “ಯಾವ ಮೋಹನ ಮುರಳಿ ಕರೆಯಿತು”, “ಸ್ತ್ರೀ ಎಂದರೆ ಅಷ್ಟೇ ಸಾಕೆ” ಇತ್ಯಾದಿ ಅನೇಕಾನೇಕ ಹಾಡುಗಳು ಕೇಳಿದಷ್ಟೂ ಸವಿ, ಹಳೆಯ ವೀಣೆಯಂತೆ ಮಾಗಿದಷ್ಟೂ ಮಧುರ. ಪಟ್ಟಿ ಮಾಡ ಹೊರಟರೆ ಒಂದು ದಿನವೆಲ್ಲ ಸಾಲದೇ ಬರಬಹುದು. ಕೆಲವು ಸಾಹಿತ್ಯಿಕ ಚಳುವಳಿಗಳು, ಅಥವಾ ಪಂಥಗಳಿಗೆ ಈ ಭಾವಗೀತೆಗಳು ‘ಐಶಾರಾಮ’ ಎನಿಸುತ್ತದೆ. ಇದು ಸಾಮಾಜಿಕವಾಗಿ ನಿಜವಿದ್ದರೂ ಇರಬಹುದು. ಆದರೆ ವ್ಯಕ್ತಿಗತ ಅಥವಾ ಮಾನಸಿಕ ಮನಮಿಡಿತಗಳಿಗೆ, ಅವುಗಳ ಬೆಳವಣಿಗೆಗಳಿಗೆ ಈ ಭಾವಗೀತೆಗಳು ರೂವಾರಿಯಾಗುತ್ತವೆ. ಸಂವೇದನಾಶೀಲತೆ ಅಥವಾ ಬದುಕಿನ ಬಗೆಗಿನ ಒಂದು ತಾದಾತ್ಮ್ಯತೆಯ ಪುನರಾಕೃತಿಗೆ ಈ ಬೆಳವಣಿಗೆ ಸ್ಪಂದಿಸುತ್ತದೆ.
    ಕೊನೆಗೂ ಆ ಹುಡುಗನಿಗೆ ಒಂದು ಕ್ಲಾಸ್ ಮಾಡಿಯೇ ಬಿಟ್ಟೆ. ನಮ್ಮ ಭಾಷೆಯ ಬಗೆಗಿನ ಒಲವು ಇತರ ಭಾಷೆಯ ಬಗೆಗಿನ ದ್ವೇಷವಾಗಿ ಪರಿವರ್ತನೆಯಾಗಬಾರದು ಹೌದಲ್ಲವೇ ಎಂದು ಅವನಿಗೆ ತಿಳಿಸುತ್ತಾ, ನಾನೂ ಕಲಿತೆ. ….. niima barahada modige naanu marulaade….niivu helida ii melina haadugalella naanu aagagge gunuguduttene… innu patti doddadidde… ratnamaala prakash haadiruva attitta nodadiru,attu horalaadadiru… aahaaha mallige baruvene ninnallige…lnkesh,kambaara cinemada haadugalu…ilidu baa taye ilidubaa…ratnanapadagalu… hiige hige patti bahudoddadide… naavu ondistu geleyaru ommomme ondu katteyallo.bayalallo kutu ii haadugalannu ondu sanna partiya jote haadikolluttirutteve… mattomme nimage pritipurvaka vandanegalu….
    ravi varma hosapete…

    ಪ್ರತಿಕ್ರಿಯೆ
  3. Gopaal Wajapeyi

    ಬಹುಭಾಷಿಕರಿರುವ ಕಡೆ ಕೆಲಸ ಮಾಡುವಾಗಿನ ಮಜವೇ ಬೇರೆ. ಅಲ್ಲಿ ಅವರನ್ನು ನಾವು, ನಮ್ಮನ್ನು ಅವರು ಅರಿತುಕೊಳ್ಳಲು ಒಂದು ಅನುಕೂಲಕರ ವಾತಾವರಣ ತಂತಾನೇ ಸೃಷ್ಟಿಯಾಗಿಬಿಟ್ಟಿರುತ್ತದೆ. ಅದನ್ನು ಅರಿತು, ಅವರೊಡನೆ ಬೆರೆತರೆ ಆಹಾ… ಅದೆಂಥಾ ಆನಂದ ! ನಾನು ‘ಈಟೀವಿ’ಯಲ್ಲಿ ಕೆಲಸ ಮಾಡುತ್ತ ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿದ್ದಾಗ ನನಗೆ ಮರಾಠಿ, ತೆಲುಗು, ಹಿಂದಿ, ಅಸ್ಸಾಮಿ, ಬಂಗಾಳಿ, ಒಡಿಯಾ, ಗುಜರಾತಿ ಮತ್ತು ಉರ್ದು ಭಾಷೆಯ ಚಾನಲ್ ಗಳಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಸ್ನೇಹ ದೊರೆಯಿತು. ಅವರ ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ ಹಾಗೂ ವಿಶೇಷ ಅಡಿಗೆಗಳ ಕುರಿತು (ನಾನು ತಿನ್ನಬಾಕ) ಅವರೆಲ್ಲರೊಂದಿಗೆ ಚರ್ಚಿಸುತ್ತಿದ್ದೆ. ಅವರ ಹಾಡುಗಳನ್ನು ನಾನು ಕೇಳುತ್ತಿದ್ದೆ. ನಮ್ಮ ಭಾವಗೀತಗಳನ್ನು ಅವರಿಗೆ ಕೇಳಿಸುತ್ತಿದ್ದೆ.
    ಭಾಷೆ ತಿಳಿಯದಿದ್ದರೂ ಆ ‘ಭಾವ’ ಅವರ ಮುಖದಲ್ಲಿ ನನಗೆ ಸ್ಪಷ್ಟಗೊಚರವಾಗುತ್ತಿತ್ತು.
    ಹೌದು, ಅದು ನಿಜಕ್ಕೂ ‘ಭಾವಗೀತೆ’ಯೇ. ಅದಕೆ ಬೇರೆ ಹೆಸರು ಯಾಕೆ…?

    ಪ್ರತಿಕ್ರಿಯೆ
  4. Swarna

    ಈಗ ನಾನು ಹೊರಟೆ ನೀವು ಹೇಳಿದ ಹಾಡುಗಳನ್ನ ಕೇಳೋಕೆ 🙂
    ಚೆನ್ನಾಗಿದೆ

    ಪ್ರತಿಕ್ರಿಯೆ
  5. Sunil Rao

    this malayaLi language has a supa accent…
    during our class hours we have a journalism lecturer….who is malayaali…
    she pronounces sooo well that our notes would become araamse rubbish he he he just lemme not take any discourse here

    article is nice as usual :)))

    ಪ್ರತಿಕ್ರಿಯೆ
  6. ಸುಧಾ ಚಿದಾನಂದಗೌಡ

    ಮಲಯಾಳಿಗಳೆಂದರೆ ನನ್ನ ಮಟ್ಟಿಗೆ ಅಪರಚಿತ ಆತ್ಮೀಯರು. ಆತ್ಮೀಯರು ಏಕೆಂದರೆ ಮೌಂಟ್ ಕಾರ್ಮೆಲ್ ನಲ್ಲಿ ಓದುವಾಗ ಎಲ್ಲ ಲೆಕ್ಷರರ್ ಗಳು ಮಲಯಾಳಿಗಳು. ನಾನಿದ್ದ ಹಾಸ್ಟೆಲ್ ವಾರ್ಡನ್ ಆಗಿದ್ದ ನನ್ ಕೂಡ ಮಲಯಾಳಿ. ಎರಡುವರ್ಷ ಪಿಯುಸಿ ಮುಗಿವವರೆಗೆ ಅವರೊಂದಿಗೆ ಕಾಲೇಜ್ ಕುಟುಂಬ ನಡೆಸಿದ್ದೇನೆ.ಆದರೂ ಅವರು “ಅಪರಚಿತರು” ಏಕೆಂದರೆ ಅವರ್ಯಾರೂ ಒಂದಕ್ಷರ ಕನ್ನಡ ಮಾತನಾಡಿದವರಲ್ಲ.ನನಗೂ ಮಲಯಾಳಿ ಒಂದಕ್ಷರ ಬರುವುದಿಲ್ಲ. ಕಲಿಯಲಿಲ್ಲ.ಎಲ್ಲರ ಸೈನ್ಸ್ ಉಪನ್ಯಾಸಗಳೂ ಸೂಪರ್ಬ್..ಅವರನ್ನು ನೆನೆಸಬೇಕೋ, ಮರೆಯಬೇಕೊ ತಿಳಿಯತ್ತಿಲ್ಲ.ಲೇಖನ ಚೆನ್ನಾಗಿದೆ ಸಂಯುಕ್ತಾ.

    ಪ್ರತಿಕ್ರಿಯೆ
  7. Badarinath Palavalli

    ಮಲಯಾಳೀ ಸಹೋದ್ಯೋಗಿಯ ಕನ್ನಡ ಭಾವಗೀತೆಗಳ ಪ್ರೇಮ, ನಮ್ಮವರಿಗೇ ಯಾವಾಗ ಮೂಡುತ್ತದೋ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: