ಮೇವುಂಡಿ, ವಿದ್ಯಾಸಾಗರ ಬಾಲ ಪುರಸ್ಕಾರ
ಸಂಧ್ಯಾ ಸಾಹಿತ್ಯ ವೇದಿಕೆ ಪ್ರತಿವರ್ಷ ನೀಡುವ “ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ” ಕ್ಕೆ ಬೆಂಗಳೂರಿನ ಶ್ರೀಮತಿ ಶೈಲಜಾ ಕಂಜರ್ಪಣೆ, “ವಿದ್ಯಾಸಾಗರ ಬಾಲ ಪುರಸ್ಕಾರ”ಕ್ಕೆ ಶಿವಮೊಗ್ಗಾದ ಕುಮಾರ ಅಂತಃಕರಣ ಆಯ್ಕೆಯಾಗಿದ್ದಾರೆ ಎಂದು ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ರವಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾಸಾಗರ ಬಾಲ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾಥರ್ಿ ಕುಮಾರ ಅಂತಃಕರಣ ಶಿವಮೊಗ್ಗಾದ ಸೇಕ್ರೇಡ್ ಹಾರ್ಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿ ಓದುತ್ತಿದ್ದಾನೆ. ಕ್ರೀಡೆ, ಸಾಹಿತ್ಯ, ಸಾಮಾನ್ಯ ಜ್ಞಾನ, ವಿಜ್ಞಾನ, ಇತಿಹಾಸ, ವ್ಯಕ್ತಿಗಳ ಜೀವನಚರಿತ್ರೆ ಹೀಗೆ ಪ್ರತಿಯೊಂದರ ಕುರಿತು ಪುಸ್ತಕಗಳನ್ನು ಓದುವ ಹವ್ಯಾಸವಿರುವ ಅಂತಃಕರಣ ತನ್ನದೇ ಪುಟ್ಟ ಗ್ರಂಥಾಲಯವನ್ನು ಹೊಂದಿದ್ದಾನೆ. ಓದಿನೊಂದಿಗೆ ಸಾಹಿತ್ಯ ರಚನೆಯಲ್ಲಿಯೂ ತೊಡಗಿದ್ದಾನೆ. ಈವರೆಗೆ ಅಂತಃಕರಣ ನಲವತ್ತೆರಡು ಅಂಕಣ ಲೇಖನಗಳು, ನಲವತ್ತು ಕವಿತೆಗಳು, ಹತ್ತು ಕತೆಗಳು ಮತ್ತು ಎರಡು ಕಿರುಕಾದಂಬರಿಗಳನ್ನು ರಚಿಸಿದ್ದಾನೆ. ಇವರ ಬರಹಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಬರಹಕ್ಕೆ ವಿದ್ಯಾಸಾಗರ ಬಾಲಪುರಸ್ಕಾರ ಬಂದಿದೆ.
ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರಕ್ಕೆ ಆಯ್ಕೆಯಾದ ಶ್ರೀಮತಿ ಶೈಲಜಾ ಕಂಜರ್ಪಣೆ ಇವರ “ಐದು ರೂಪಾಯಿ” ಕಥೆಗೆ ಪುರಸ್ಕಾರ ನೀಡಲಾಗಿದೆ, ಮೂಲತಾ ಹಾಸನ ಜಿಲ್ಲೆಯ ಅರಕಲಗೂಡು. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಇವರ ಕಥೆಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. “ಪ್ರೇಮಾ ಭಟ್” ದತ್ತಿನಿಧಿ ಬಹುಮಾನ ಲಭಿಸಿದೆ. ಪತಿ ಕೆ.ಪಿ. ಸುರೇಶ ಅವರೊಂದಿಗೆ ಕಂಜರ್ಪಣೆಯಲ್ಲಿ ಕೃಷಿ, ಹೈನುಗಾರಿಕೆಯಲ್ಲಿ ದುಡಿದ್ದಾರೆ.
ಪುರಸ್ಕಾರವನ್ನು ನವೆಂಬರ್: 8 ಮತ್ತು 9 ಶನಿವಾರ ಹಾಗೂ ರವಿವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆಯುವ ” ಸಂಧ್ಯಾ ಮಕ್ಕಳ ಕಾವ್ಯೂತ್ಸವ” ಸಮಾರಂಭದಲ್ಲಿ ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ರವಿ ಹಿರೇಮಠ ತಿಳಿಸಿದ್ದಾರೆ.







ಅಭಿನಂದನೆಗಳು..