ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾ ರಾಣಿ ಕಾಲಂ: ಪ್ರೇಮ ಎಂದರೆ ಅದೂ ಸಹ ಒಂದು ಹಾಯ್ಕು!

ಬದಲಾದ ಕಾಲಮಾನ, ಬದಲಾದ ವಯೋಮಾನದಲ್ಲಿ Love!

ನನಗೆ ಫೆಬ್ರವರಿ ತಿಂಗಳ ಹದಿನಾಲ್ಕನೆ ತಾರೀಖು ಬಂತೆಂದರೆ ಇನ್ನಿಲ್ಲದ ಕೋಪ, ದುಃಖ! ಹೂವು, ಚಾಕೋಲೇಟ್, ಗ್ರೀಟಿಂಗ್ ಎಲ್ಲಕ್ಕೂ ಎರವಾದ ನನ್ನ ವ್ಯಾಲೆಂಟೈನ್ ದಿನಗಳ ಬಗ್ಗೆ ಇನ್ನಿಲ್ಲದ ಅನುಕಂಪ!! ಅಫ್ ಕೋರ್ಸ್ ನಮ್ಮ ಕಾಲೇಜು ದಿನಗಳಲ್ಲಿ ಪ್ರೇಮಕ್ಕೆ ಒಂದೇ ದಿನ ಅನ್ನುವ ಮೀಸಲಾತಿ ಏನೂ ಇರಲಿಲ್ಲ ಬಿಡಿ! ಮೊದಲ ಸಲ ಸಹಪಾಠಿಯೊಬ್ಬ ತಂಗಿಯ ಕೈಲಿ ಇಷ್ಟಗಲದ ಗುಲಾಬಿ ಹೂ ಕಳಿಸುವಾಗ ಅದು ಫೆಬ್ರವರಿ ತಿಂಗಳ ೧೪ನೇ ತಾರೀಖು ಆಗಿರಲಿಲ್ಲ! ಎಂದೂ ಏನೂ ಬಾಯ್ಬಿಟ್ಟು ಹೇಳದ ನನ್ನ ಸೀನಿಯರ್ ನನ್ನೆಡೆಗೇ ಕಣ್ಣು ನೆಟ್ಟು ಕಾಲೇಜ್ ಡೇ ದಿನ ’ಬಹಾರೋ ಫೋಲ್ ಭರ್ ಸಾವೋ, ಮೇರಾ ಮೆಹಬೂಬ್ ಆಯಾ ಹೈ..’ ಅಂತ ಹಾಡಿದಾಗ ಕ್ಯಾಲೆಂಡರ್ ನ ಮುಲಾಜು ಯಾರಿಗಿತ್ತು ಹೇಳಿ?! ಆದರೂ ಬದುಕು ಮತ್ತೊಂದು ಫೆಬ್ರವರಿ ೧೪ ರ ಹೊಸ್ತಿಲಲ್ಲಿ ನಿಂತಿದ್ದಾಗ, ಈ ನಡುವಯಸ್ಸಿನಲ್ಲಿ ಪ್ರೇಮದ ಬಗ್ಗೆ ನಮ್ಮ ನಿರೀಕ್ಷೆಗಳು, ಅರ್ಥಗಳು ಬದಲಾಗುತ್ತವೆಯಾ ಅಂತ ಯೋಚಿಸಿದಾಗ ಬರೆದದ್ದು ಈ ಲೇಖನ..
ಅಂದು ಆ ತುಂಬಿದ ಹಾಲಿನಲ್ಲಿ ಕನ್ನಡದ ಮೊದಲ ಶತಾವಧಾನ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದ ಎಲ್ಲಾ ವಿದ್ವತ್ಪೂರ್ಣ ಪ್ರಶ್ನೆ, ಉತ್ತರ, ಚಾಟೋಕ್ತಿಗಳ ನಡುವೆ ಅವಧಾನಿಗಳು ಹೇಳಿದ ಇದೊಂದು ಪ್ರಾಸ್ತಾವಿಕ ಸಂಗತಿ ಮಾತ್ರ ಯಾಕೋ ಮನದಲ್ಲಿ ಉಳಿದುಬಿಟ್ಟಿತು. ಅವರು ಹೇಳಿದ್ದು ಹೀಗೆ, ’Life of Pie’ ಚಿತ್ರ ನೋಡಿದ ನನ್ನ ಗೆಳೆಯರ ಮಗ ಒಬ್ಬ ’ಒಂದು ಹುಲಿಯ ಜೊತೆ, ಒಬ್ಬ ಬಾಲಕ ಹಾಗೆ ದಿನಗಟ್ಟಲೆ ಹಡಗಿನಲ್ಲಿರೋದು ಸಾಧ್ಯವಾ?’ ಎಂದು ಕೇಳಿದ. ಆಗ ನಾನು ’ಅದು ಸಾಧ್ಯ ಎಂದು ನೀನು ಒಪ್ಪಿಕೊಂಡು ಬಿಟ್ಟರೆ ಚಿತ್ರ ನಿನಗೆ ಹೆಚ್ಚು ಅರ್ಥಪೂರ್ಣ ಮತ್ತು ಸಹನೀಯ ಆಗುತ್ತೆ, ಆಗ ನೀನು ಅದನ್ನು ಪೂರ್ಣವಾಗಿ ಅಸ್ವಾದಿಸಬಹುದು’ ಎಂದೆ ಅಂದರು. ಅರೆ ಹೌದಲ್ಲ, ಜೀವನದ ಕೆಲವು ಸಾಧ್ಯತೆಗಳನ್ನು ತರ್ಕದ ಒರೆಗೆ ಹಚ್ಚಿ, ತೀಡದೆ ಒಪ್ಪಿಕೊಂಡು ಬಿಟ್ಟರೆ, ಬದುಕನ್ನು ಇನ್ನೂ ಸೊಗಸಾಗಿ ಅಸ್ವಾದಿಸಬಹುದಲ್ಲಾ ಅನ್ನಿಸಿತು! ಇದು ಪ್ರೇಮದ ವಿಷಯದಲ್ಲೂ ಸತ್ಯವೇ? ’ಪ್ರೇಮ ತರ್ಕಾತೀತ’, ಒಪ್ಪುತ್ತೇನೆ, ಆದರೆ ಪ್ರೇಮ ನಿಯಮಾತೀತವೆ?
ಯಾರೋ ಒಬ್ಬ ಮಹಾನುಭಾವ ಹೇಳಿದಹಾಗೆ ಬದುಕಿನಲ್ಲಿ I am not ok, you are not ok ಎನ್ನುವ ಶೈಶವಾವಸ್ಥೆ, I am ok, you are not ok ಎನ್ನುವ ದಾರ್ಷ್ಟ್ಯ, you are ok, I am not ok ಎನ್ನುವ ಕೀಳರಿಮೆ ಮತ್ತು ಇವೆಲ್ಲವನ್ನೂ ದಾಟಿದ ಪ್ರೌಢತೆ ಬಂದಾಗ I am Ok, you are also ok ಎನ್ನುವ ಪಕ್ವತೆ ಬರುತ್ತಂತಲ್ಲ, ಅದು ಪ್ರೇಮದ ಬಗ್ಗೆ ನಮ್ಮ ಮನೋಭಾವಕ್ಕೂ ಸಲ್ಲುತ್ತದಾ?
ಕಾಲಮಾನಕ್ಕನುಗುಣವಾಗಿ ಮತ್ತು ನಮ್ಮ ವಯೋಮಾನಕ್ಕನುಗುಣವಾಗಿ ಪ್ರೇಮದ ವ್ಯಾಖ್ಯೆ ಮತ್ತು ವ್ಯಾಖ್ಯಾನಗಳು ಬದಲಾಗುತ್ತಾ ಹೋಗುತ್ತದೆ. ನನ್ನ ಕಾಲೇಜ್ ದಿನಗಳ ಹೊತ್ತಿಗೆ ರಾಜ್ ಕುಮಾರ್ ಅಂದ್ರೆ ’ಅಣ್ಣಾವ್ರು’! ಆಗ ಅನಂತ ನಾಗ್ ನ ಜೇನು ಕಣ್ಣು ಮತ್ತ್ಯಾರ ಕಣ್ಣಲ್ಲೋ ಇಣಿಕಿ, ಶಂಕರ್ ನಾಗ್ ಒರಟುತನ, ಬಿರುಸು ನಡಿಗೆ ಮತ್ಯಾರ ಕಣ್ಣಲ್ಲೋ ಕಂಡು ದಿಲ್ ಧಡಕ್ ಅನ್ನಿಸಿದ್ದು ಹೌದು. ನಾನು ಕೋಲಾರ ಜಿಲ್ಲೆಯವಳು, ಅಲ್ಲಿ ತೆಲುಗು ಚಿತ್ರಗಳು ಸಹ ನಮ್ಮವೇ. ಚಿರಂಜೀವಿಯ ಹೀ ಮ್ಯಾನ್ ಇಮೇಜ್ ಇಷ್ಟ ಆಗ್ತಿದ್ದ ಕಾಲದಲ್ಲಿ ಗೀತಾಂಜಲಿ ಬಂತು. ಮಣಿರತ್ನಂ ನಾಗಾರ್ಜುನನನ್ನು ಎಂತಹ ಅದ್ಭುತ ಪ್ರೇಮಿಯನ್ನಾಗಿ ಚಿತ್ರಿಸಿದ್ದರು ಅಂದರೆ, ತನ್ನ ಹುಡುಗಿಯನ್ನು ಹೂವಿನ ರೀತಿ ಎದೆಗಪ್ಪಿಕೊಂಡು ’ಓ ಪಾಪ, ಲಾಲಿ’ ಅಂತ ಲಾಲಿ ಹಾಡಿದ ನಾಗಾರ್ಜುನ ಬೆಳಗಾಗುವಷ್ಟರಲ್ಲಿ most wanted! ಜೊತೆಗೆ ಆಗಷ್ಟೆ ಬರ್ತಿದ್ದ ಯಂಡಮೂರಿ ಕಾದಂಬರಿಗಳು, ಆಗ ಪ್ರೇಮ ಅಂದರೆ ಒಂದು ಅಮೂರ್ತ ಭಾವ, ವಿವರಣೆಗೆ ನಿಲುಕದ ಆದರೆ ಬೆಳಗಾಗುವಷ್ಟರಲ್ಲಿ ನನಗೂ ಬೇಕೇ ಬೇಕು ಅನ್ನಿಸುವ ಬೆಚ್ಚನೆಯ ಅನುಭೂತಿ. ಆಗ ಪ್ರೇಮಕ್ಕೆ ಸ್ಪರ್ಶದ ಹಂಗಿರಲಿಲ್ಲ, ಪ್ರೇಮಕ್ಕಿರುವ ದೈಹಿಕ ಆಯಾಮ ಇನ್ನೂ ಅರ್ಥವಾಗಿರಲಿಲ್ಲ. ಫೇಸ್ ಬುಕ್ಕಿನಲ್ಲಿ ಸ್ನೇಹಿತ ರಾಘವೇಂದ್ರ ಜೋಶಿ ಬರೆದ ಹಾಗೆ
’ತಬ್ಬುವುದಕ್ಕೆ ಹುಟ್ಟಿದ್ದಲ್ಲ,
ಮುಟ್ಟುವುದಕ್ಕೂ
ಸೃಷ್ಟಿಯಾಗಿದ್ದಲ್ಲ,
ಅದನ್ನು ನೋಡು,
ಬರೀ ನೋಡು,
ಅಲ್ಲೊಂದು ದೃಶ್ಯ
ಕಂಡಿದ್ದಾದರೆ –
ಅದೇ ಹಾಯ್ಕು!’
ಆಗ ಪ್ರೇಮ ಎಂದರೆ ಅದೂ ಸಹ ಒಂದು ಹಾಯ್ಕು! ’ಪ್ರೀತಿ ಆಕಸ್ಮಿಕ, ಅಗಲಿಕೆ ಅನಿವಾರ್ಯ, ನೆನಪೊಂದೇ ಶಾಶ್ವತ’, ’ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೆ ಜೀವನ’ ಇಂತಹ ಕೊಟೇಶನ್ ಗಳನ್ನು ಗುಡ್ಡೆ ಹಾಕಿಕೊಂಡು,’ನನಗೆ ಇದು ಬೇಕು ಎನ್ನುವುದು ಸ್ವಾರ್ಥ ಮತ್ತು ಸ್ವಾರ್ಥ ಒಳ್ಳೆಯ ಗುಣ ಅಲ್ಲ’ ಎಂದು ಪ್ರಾಮಾಣಿಕವಾಗಿ ನಂಬಿಕೊಂಡು ಪ್ರೇಮಕ್ಕೆ ಸಂಬಂಧಿಸಿದ ಭಾವನೆಗಳನ್ನು ಭಾವಲೋಕದಲ್ಲಿ ಪಾರ್ಕ್ ಮಾಡಿ, ಕಾಲು ತೊಳೆದುಕೊಂಡು ಮನೆ ಒಳಗೆ ಬರ್ತಿದ್ದೆವು! ಆದರೆ ಪ್ರೇಮ ಯಾರಪ್ಪನ ಮಾತು ಕೇಳ್ತಿತ್ತು ಹೇಳಿ?! ಎಂದೋ ಮನೆ ಮುಂದೆ ರಂಗೋಲಿ ಹಾಕುವಾಗಲೋ, ಲೈಬ್ರರಿಯಲ್ಲಿ ಪುಸ್ತಕ ತೆಗೆದುಕೊಳ್ಳಲು ಹೋಗುವಾಗಲೂ, ಕಾಲೇಜಿನಲ್ಲಿ ಕಣ್ಣರಳಿಸಿ ಪಾಠ ಕೇಳುವಾಗಲೋ, ಯಾವಾಗಲೋ ಬಂದು ಬಾಗಿಲು ಬಡಿದು ಹೋಗಿಬಿಡ್ತಿತ್ತು! ಆದರೆ ಆಗಿನ್ನೂ ಸುಖ, ಸಂತೋಷ ವ್ಯಕ್ತಿ ಕೇಂದ್ರಿತ ಆಗಿರದೆ ಕುಟುಂಬ ಹಾಗು ಸಮಾಜ ಕೇಂದ್ರಿತ ಆಗಿದ್ದರಿಂದ ಈ ಪ್ಲೆಟೋನಿಕ್ ಲವ್ ಮತ್ತು ಪ್ಯೂರ್ ಲವ್ ಸಿದ್ಧಾಂತ ಜನಪ್ರಿಯವಾಗಿತ್ತಾ ಅಂತ ಒಂದು ಕುತೂಹಲ ನನಗೆ!
ಆ ಹಂತವನ್ನು ದಾಟಿದ ದಿನಗಳಲ್ಲಿ ಒಮ್ಮೆ ಚಂದ್ರಶೇಖರ ಆಲೂರರ ಒಂದು ಪ್ರಬಂಧ ಓದಿದ್ದೆ, ’ಪ್ರೇಮದ ಹಂಗಿಲ್ಲದ ಕಾಮ ಮತ್ತು ಕಾಮದ ಹಂಗಿಲ್ಲದ ಪ್ರೇಮ ಎರಡೂ ಅಪೂರ್ಣ’ ಅಂತ. ಆಗಲೇ ನನ್ನ ಗೆಳತಿಯೊಬ್ಬಳು ತನ್ನ ಪ್ರೇಮಿ ಮತ್ತು ಪ್ರೇಮದ ಬಗ್ಗೆ ಹೇಳುತ್ತಾ, ’ಆದರೆ ನಮ್ಮಿಬ್ಬರದೂ ಪ್ಲೆಟೋನಿಕ್ ಪ್ರೇಮ, ಎಂದೂ ಅದು ದೈಹಿಕ ಮಟ್ಟಕ್ಕಿಳಿಯಲಿಲ್ಲ’ ಎಂದಾಗ ಅವಳ ದಾಂಪತ್ಯ ಮತ್ತು ಪ್ರೇಮ ಎರಡೂ ಅಪೂರ್ಣ ಅನ್ನಿಸಿದ್ದು ಸುಳ್ಳಲ್ಲ. ಯಾಕೆಂದರೆ ಆ ಹೊತ್ತಿಗಾಗಲೇ ಪ್ರೇಮ ಕೇವಲ ದೇಹಕ್ಕೆ ಅಥವಾ ಮನಸ್ಸಿಗೆ ಸೀಮಿತವಾಗಿರುವುದಲ್ಲ ಎಂಬುದರ ಅರಿವಾಗಿತ್ತು. ಇಲ್ಲಿ ನನ್ನ ಗೆಳತಿ ಹಾಗು ರಂಗಕರ್ಮಿ ಜಯಲಕ್ಷ್ಮಿ ಪಾಟೀಲ್ ಹೇಳಿದ ಮಾತನ್ನು ಹೇಳಲೇಬೇಕು, ’ಪ್ರೀತಿ ಅಂದರೆ ಪ್ರೀತಿ ಅಷ್ಟೆ. ಪ್ರತಿಯೊಂದು ಸಂಬಂಧಕ್ಕೆ ತಕ್ಕಂತೆ ಅದರ ಭಾವ … ಆದರೆ ಗಂಡು ಹೆಣ್ಣಿನ ಪ್ರೀತಿಯಲ್ಲಿ ದೈಹಿಕ ಸಂಪರ್ಕ ಬರುತ್ತದಾದ್ದರಿಂದ ಉಳಿದೆಲ್ಲಾ ಪ್ರೀತಿಗಳಿಗೂ ಮಿಗಿಲಾದ ಒಂದು ಪೊಸೆಸ್ಸಿವ್ ನೆಸ್ಸ್ ಆ ಪ್ರೀತಿಯಲ್ಲಿ ಇರುತ್ತದೆ, ಆ ಕಾರಣಕ್ಕಾಗಿ ಪ್ರೀತಿಸುವವರ ಮಟ್ಟಿಗೆ ಆ ಪ್ರೀತಿ ವಿಶಿಷ್ಟವಾಗುತ್ತದೆ’ ಅಂತ. ಈ possessiveness ದೈಹಿಕ ಸಾಂಗತ್ಯ ಇಲ್ಲದಾಗಲೂ ಇರಬಹುದು, ದೈಹಿಕವಾಗಿ ಹತ್ತಿರಾದ ಮೇಲೆ ಅದು ಕೇವಲ ಸಂಬಂಧವಾಗಿ ಉಳಿಯದೆ ಪ್ರೇಮವಾಗಿ ಉಳಿಯಬೇಕಾದರೆ ಒಂದು ಬದ್ಧತೆ ಬೇಕಾಗುತ್ತದೆ, ಪ್ರೇಮ ಒಂದು loyalty ಕೇಳುತ್ತದೆ. ಎಲ್ಲಾ ಸಂಬಂಧಗಳ ನಡುವೆಯೂ ಇದು ಮಾತ್ರ ನನ್ನದು ಮತ್ತು ಕೇವಲ ನನ್ನದು ಎನ್ನುವ ಒಂದು ನಂಬಿಕೆ ಅದನ್ನು ಪ್ರೇಮವಾಗಿಸುತ್ತದೆ.
ಎದುರಿನ ಹುಡುಗನ ನೋಟ, ನಿಲುವು, ತುಂಟತನ ಗಮನಿಸುವ ಅಡಾಲಸೆನ್ಸ್ ಈ ಹೊತ್ತಿಗೆ ಪ್ರೌಢತೆಯ ಹಂತ ತಲುಪಿ ಒಂದು ನಂಬಿಕೆ, ಒಂದು ಭರವಸೆಯನ್ನು ಬೇಡುತ್ತಿರುತ್ತದೆ. ಪ್ರೀತಿಸುವ ಜೀವ ಕೊಡುವ ಸಮಯ, ಸಾಂತ್ವನ, ಸಾಂಗತ್ಯ ಪ್ರೌಢ ಸಂಬಂಧಗಳಲ್ಲಿ ಮುಖ್ಯವಾಗುತ್ತಾ ಹೋಗುತ್ತದೆ.
ಬದುಕಿನ ಬಗ್ಗೆ ಅದಮ್ಯ ಜೀವನ ಪ್ರೀತಿ ಚಿಮ್ಮಿಸುವ ಗೆಳತಿ ಭಾರತಿ, ಪ್ರೇಮದ ಬಗ್ಗೆ ಹೇಳುತ್ತಾ, “ಆಗ ಪ್ರೇಮ ಅಂದ್ರೆ, ಹೇಳಲಾಗದ ನವಿರು, ಒಳಗೊಳಗಿನ ಪುಳಕ, ಬರೆದು ಕೊಡಲಾಗದ ಪತ್ರ, ಅವನ ಕಂಡ ಕೂಡಲೇ ಎದೆಯಲ್ಲಿ ನಡುಕ! ಈಗ ಲವ್ ಅಂದ್ರೆ ಒಂದು ಎಸ್ಸೆಮ್ಮೆಸ್ಸು, ತಕ್ಷಣದ ಯೆಸ್ ಅಥವಾ ನೋ, ದರ್ಶಿನಿಯಲ್ಲಿ ನಿಂತು ಇಡ್ಲಿ ಅಮುಕಿ ಗಂಟಲಿಗಿಳಿಸಿ ನೀರು ಕುಡಿದು ಮುಂದಿನ ಕೆಲಸಕ್ಕೆ ಓಡುವ ಧಾವಂತ’ ಅಂತ ಹೇಳಿದರೂ ಅವಳ ಕಣ್ಣಿನ ಮಗು ಬೆರಗು ಈ ಕ್ಷಣಕ್ಕೆ ಪ್ರೇಮ ಅನ್ನುವುದು ಒಂದು ಸಾಕ್ಷಾತ್ಕಾರವಾಗಿ ಭೂಮಿಗೆ ಇಳಿದೇಬಿಡುತ್ತದೆ ಮತ್ತು ತಾನು ಅದನ್ನು ಸೆರಗಿನಲ್ಲಿ ಹಿಡಿದು ಗಂಟು ಹಾಕಿಯೇ ಸಿದ್ಧ ಎಂದು ಸವಾಲು ಹಾಕುತ್ತಿರುತ್ತದೆ. ನಿಜ, ಪ್ರೇಮ ಕಾಲಾತೀತ..
ಆದರೆ ಪ್ರೌಢ ವಯಸ್ಸಿನಲ್ಲಿ ಪ್ರೇಮ ಎಂದರೆ ಒಂದು ಪಕ್ವತೆ, ಒಂದು ಬದ್ಧತೆ. ’ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು.’ ಅಂದ ಸಂಗಾತಿ ಮಲ್ಲಿಗೆ ತರದೆ ಹೋದರೂ ಪರವಾಗಿಲ್ಲ, ಆದರೆ ವಾಪಸ್ಸಾದವನ ಕೈ ಖಾಲಿ ಇದ್ದು, ಅವನೊಡನೆ ಮಲ್ಲಿಗೆ ಪರಿಮಳ ಇದ್ದರೆ ಆಗ ಸಹಿಸಿಕೊಂಡು ಕಾಯುವುದು ಕಷ್ಟ! ಇಲ್ಲಿ ವಸ್ತಾರೆ ಕವಿತೆ ನೆನಪಾಗುತ್ತದೆ,
ಪ್ರೀತಿಯೆನ್ನುವುದು ನಂಬಿಕೆಯಾದರೆ
ನಮ್ಮ ಅಪನಂಬಿಕೆಗಳ ಪಾಡೇನು
ತುಂಬದ ಬಿಂದಿಗೆ ಸ್ಥಿರವೇನು
ನಮ್ಮ ತಂಬಿಗೆ ಸ್ಥಿರವೇನು …
ಕಾರಂತರ ’ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯಲಿ ಪೊಮ್ಮ, ದುಗ್ಗಿ ಎನ್ನುವ ದಂಪತಿಯ ಪ್ರಸ್ತಾಪ ಬರುತ್ತದೆ. ಆಕೆಗೆ ವಯಸ್ಸಾಗಿದೆ, ನಡೆಯಲೂ ಶಕ್ತಿಯಿಲ್ಲ, ಆದರೆ ಪೊಮ್ಮ ಅವಳನ್ನು ಮಗುವಂತೆ ಕಾಯುತ್ತಾನೆ, ಊಟ ಮಾಡಿಸುತ್ತಾನೆ, ಆಸರೆಯಾಗುತ್ತಾನೆ. ನನ್ನ ಮಟ್ಟಿಗೆ ಅಲ್ಟಿಮೇಟ್ ಲವ್ ಸ್ಟೋರಿ ಅಂದರೆ ಅದು… ಮತ್ತೊಮ್ಮೆ ಅದೇ ಭಾವ ನೆನಪಾಗಿದ್ದು ರಮಣರ ’ಮಿಥುನಂ’ ಕಥೆ ಆದರಿಸಿ ಬಂದ ತೆಲುಗಿನ ’ಮಿಥುನಂ’ ಚಿತ್ರ ನೋಡಿದಾಗ. ಇಡೀ ಚಿತ್ರ ಸುತ್ತುವುದು ಮಾಗಿದ ದಾಂಪತ್ಯದ ದಂಪತಿಗಳು ಸುತ್ತ, ಲಕ್ಷ್ಮಿ ಮತ್ತು ಎಸ್ ಪಿ ಬಾಲಸುಬ್ರಮಣ್ಯಂ ಎಂತಹ ಅದ್ಭುತ ದಾಂಪತ್ಯ ಗೀತೆಯನ್ನು ನಮ್ಮ ಮುಂದೆ ಕಟ್ಟಿಕೊಡುತ್ತಾರೆಂದರೆ ನಾವು ಆ ಚಿತ್ರದ ಫ್ರೇಮಿನೊಳಕ್ಕೆ ಸೇರಿಹೋಗಿ ಬಿಡುತ್ತೇವೆ. ಅವರ ಪ್ರೀತಿ, ನಗು, ಹರಟೆ, ಪರಸ್ಪರ ಕಾಲೆಳೆದುಕೊಳ್ಳುವುದು, ಆ ವಯಸ್ಸಿನಲ್ಲೂ ನಲುಗದ ಅವರ ತುಂಟತನ, ನಾಚಿಕೆ …. ಹಬ್ಬದ ದಿನ ಊಟ ಮಾಡಿ, ’ತಾಂಬೂಲ’ ಎಂದು ಅಜ್ಜ ಕೇಳಿದಾಗ, ’ಬಳ್ಳೀಲಿದೆ ಕಿತ್ತುಕೊಂಡು ಬನ್ನಿ ಅಂತ ಕಳಿಸಿ, ವೀಳ್ಯೆದೆಲೆ ಬಳ್ಳಿಯಲ್ಲೇ ತಾಂಬೂಲ ಕಟ್ಟಿ, ಲವಂಗ ಚುಚ್ಚಿಟ್ಟು ಸರ್ಪ್ರೈಸ್ ಕೊಡೋ ಅಜ್ಜಮ್ಮ, ಹೊಲದಲ್ಲಿ ದೃಷ್ಟಿ ಬೊಂಬೆ ಬೇಕಲ್ಲ ಅಂತ ಹೆಂಡತಿ ಕೇಳಿದರೆ, ಪ್ರೀತಿಯ ದನಿಯಲ್ಲಿ, ’ದಿನಾ ಸಂಜೆ ಕೂದಲು ಬಿಟ್ಟುಕೊಂಡು ನೀನೆ ಒಂದ್ ಅರ್ಧ ಗಂಟೆ ನಿಲ್ಬಾರ್ದೇನೆ’ ಅಂತ ಕಾಲೆಳೆಯುವ ಅಜ್ಜ! ಇಡೀ ಬದುಕನ್ನು ಒಂದು ಸಂಬಂಧಕ್ಕಾಗಿ ಮೀಸಲಿಟ್ಟರೆ ಆಗ ಅಂತಹ ಘಳಿಗೆ ದಕ್ಕುತ್ತದಾ? ಚಿತ್ರದ ಕೊನೆಯಲ್ಲಿ ಸ್ಥಬ್ಧನಾಗಿ ಮಲಗಿದ ಗಂಡನ ಪಕ್ಕದಲ್ಲಿ ಕೂತ ಹೆಂಡತಿ, ’ನಾನು ಮೊದಲು ಹೋಗಿ, ನೀವು ಹಿಂದೆ ಉಳಿದುಬಿಡುತ್ತೀರೇನೋ ಅಂತ ಭಯವಾಗ್ತಾ ಇತ್ತು, ಹಾಗಾಗಿದ್ದರೆ ನಿಮ್ಮನ್ನ ಯಾರು ನೋಡ್ಕೋತಾ ಇದ್ದರು, ಮಧ್ಯ ರಾತ್ರಿ ಎದ್ದು ’ಯಾಕೋ ಹೊಟ್ಟೆ ಹಸೀತಿದೆ’ ಅಂದರೆ ಯಾರು ಅಡಿಗೆ ಮಾಡಿ ಬಡಿಸ್ತಿದ್ದರು, ನಿಮಗೆ ಗುಡುಗು ಅಂದ್ರೆ ಭಯ, ಸಿಡಿಲು ಅಂದ್ರೆ ಭಯ, ಆದರೆ ಅದನ್ನು ಬಾಯಿಬಿಟ್ಟು ಹೇಳದೆ ಯಾರು ನಿಮ್ ಜೊತೆ ಜೊತೆ ಇರ್ತಾ ಇದ್ರು, ದಿನಾ ದೇವರಲ್ಲಿ ಪ್ರಾರ್ಥಿಸ್ತಾ ಇದ್ದೆ, ’ದೇವರೆ ನನಗಿಂತ ಮೊದಲು ಅವರನ್ನೇ ಕರೆದುಕೋ ತಂದೆ’ ಅಂತ ಅನ್ನುವ ಹೆಂಡತಿ ಎಷ್ಟು ಅಮ್ಮ ಅನ್ನಿಸಿಬಿಡುತ್ತಾಳೆ. ವ್ರತ ಮುಗಿಸಿ ನಮಸ್ಕಾರ ಮಾಡಿದ ಹೆಂಡತಿಗೆ ’ಅಖಂಡ ಸೌಭಾಗ್ಯವತಿ ಭವ’ ಎಂದು ಆಶೀರ್ವದಿಸಲು ಹೋಗಿ, ನಿಲ್ಲಿಸಿ ’ಆಯುಷ್ಮತಿ ಭವ’ ಎಂದು ಹೇಳುವ ಗಂಡ ಮಗುವಿನಂತೆ ಕಂಡು ಬಿಡುತ್ತಾನೆ …

ಬದಲಾದ ಕಾಲಮಾನದಲ್ಲಿ ಪ್ರೇಮ ಅಂದರೆ ಬದುಕಿನ ಒಂದು ಭಾಗ, ಅದು ಬದುಕಲ್ಲ. ಮತ್ತು ಬದುಕಿನ ಪ್ರಯಾರಿಟಿಗಳಲ್ಲಿ ಪ್ರೇಮಕ್ಕೆ, ಸಂಬಂಧಕ್ಕೆ ಒಂದು ಸ್ಥಾನ ಇದೆಯೇ ಹೊರತು ಅದೇ ಅಸ್ತಿತ್ವವಲ್ಲ. ಆದರೆ ಈ ಬದಲಾದ ಕಾಲಮಾನ ಮತ್ತು ವಯೋಮಾನದಲ್ಲೂ ವ್ಯಾಲೆಂಟೈನ್ಸ್ ಡೇ ದಿನ ರಚ್ಚೆ ಹಿಡಿಯುವ ಮನಸ್ಸಿಗೆ ಏನೆನ್ನಬೇಕು?! ಪ್ರೀತಿಯ ಬಗ್ಗೆ ಯೋಚಿಸುತ್ತಾ ಹೋದಂತೆ ಹೊಳೆಯುತ್ತಾ ಹೋದ ಭಾವಗಳು ಅಲ್ಲ, ಭಾವಗಳ ಕೊಲಾಜ್ ಇದು, ಈ ಚಿತ್ರ ಇನ್ನೂ ಪೂರ್ಣವಾಗಿಲ್ಲ ಎಂದು ಮಾತ್ರ ಹೇಳಬಲ್ಲೆ!
ಕಾಲದ ಮಿತಿಯನ್ನು ಸೋಲಿಸಿ ಜೊತೆಯಲ್ಲಿ ಉಳಿದು, ’ಕಾವಾರಿದ ನಂತರವೂ ಕಾಪಿಟ್ಟುಕೊಂಡ ಒಲವು’ಗಳಿಗೆ ನನ್ನ ಅಭಿನಂದನೆಗಳು ಮತ್ತು ಅಂತಹ ಒಲವು ಎಲ್ಲರ ನಸೀಬಿನಲ್ಲೂ ಇರಲಿ ಎನ್ನುವ ಹಾರೈಕೆಗಳು.
(ಸಖಿ ಪಾಕ್ಷಿಕದಲ್ಲಿ ಪ್ರಕಟವಾಗಿದ್ದ ಬರಹ)

‍ಲೇಖಕರು avadhi

5 April, 2013

12 Comments

  1. ಹರಿ

    ಮೈ-ಮನಗಳ ಸುಳಿಯಲ್ಲಿ ಓದಿ ವರ್ಷಗಳೇ ಕಳೆದಿದ್ದರೂ “ಪೊಮ್ಮ-ದುಗ್ಗಿ”ಯ ಪಾತ್ರಗಳು ಮನದಲ್ಲಿ ಇನ್ನೂ ಜೀವಂತ. ಕಾಣದ ಕಾರಂತರಿಗೆ ಕೈಯೆತ್ತಿ ಮುಗಿವೆ.
    ಹಾಗೆ “ಕಾಮದ ಹಂಗಿಲ್ಲದ ಪ್ರೇಮ ಅಪೂರ್ಣವೇ?” ಅವರವರ ಭಾವಕ್ಕೆ ಅವರವರ ಭಕುತಿಗೆ.

  2. Anitha Naresh manchi

    kaavarida nantara ulivude nijavaada olaveno alwaa 🙂

  3. samyuktha

    “ಯಾರೋ ಒಬ್ಬ ಮಹಾನುಭಾವ ಹೇಳಿದಹಾಗೆ ಬದುಕಿನಲ್ಲಿ I am not ok, you are not ok ಎನ್ನುವ ಶೈಶವಾವಸ್ಥೆ, I am ok, you are not ok ಎನ್ನುವ ದಾರ್ಷ್ಟ್ಯ, you are ok, I am not ok ಎನ್ನುವ ಕೀಳರಿಮೆ ಮತ್ತು ಇವೆಲ್ಲವನ್ನೂ ದಾಟಿದ ಪ್ರೌಢತೆ ಬಂದಾಗ I am Ok, you are also ok ಎನ್ನುವ ಪಕ್ವತೆ ಬರುತ್ತಂತಲ್ಲ, ಅದು ಪ್ರೇಮದ ಬಗ್ಗೆ ನಮ್ಮ ಮನೋಭಾವಕ್ಕೂ ಸಲ್ಲುತ್ತದಾ?”….
    entaha maatu!

  4. Badarinath Palavalli

    ಪ್ರೀತಿ ಕಣ್ಣಲ್ಲಿ ಮಿಥುನದ ಮೂಲಕ ಸಕಾರಾತ್ಮಕ ಬದುಕನ್ನು ರೂಢಿಸಿಕೊಳ್ಳಲು ಪ್ರಚೋದಿಸುವ ಬರಹ.

  5. ಶ್ರೀನಿವಾಸ ಡಿ.ಶೆಟ್ಟಿ

    ಕಾಲಮಾನಕ್ಕನುಗುಣವಾಗಿ ಪ್ರೇಮದ ವ್ಯಾಖ್ಯಾನ ಬದಲಾಗುವವು. ಪ್ರೇಮದ ಪರಿಭಾಷೆ ಇಂಥದ್ದೇ ಎಂದು ಹೇಳಲು ಆಗದು.

  6. Ambresh nayak

    Madam, mellage shuruvagidda naduka, padagallannu kannadusithale, ommele mere meeri konege thampenisitu…. vandanegalu….

  7. bharathi bv

    Loved this write up sadhya !

  8. Anjali Ramanna

    balu chennaagide Sandhya Rani 🙂

  9. Prasad DV

    chendada baraha Sandhyaravare 🙂 howdu preetiyendare ondu haayku 🙂
    – Prasad DV

  10. ಅಶೋಕ ಶೆಟ್ಟರ್

    ಮತ್ತೊಮ್ಮೆ, ನಿಮ್ಮ ಬರಹದ ಸರಳತೆಯೇ ಅದರ ಸೌಂದರ್ಯ…

  11. suvarnababu

    ವಸುದೇಂದ್ರರ ಮಿಥುನ ಪುಸ್ತಕದಲ್ಲಿ ಲೇಖನ ಓದಿದ್ದೆ ಅದು ಸಿನಿಮಾ ಆಗಿ ಬಂದಿದ್ದು ತಿಳಿಯಲಿಲ್ಲ ಲೇಖನ ಚೆನ್ನಾಗಿದೆ

  12. ಎನ್ ಸಂಧ್ಯಾ ರಾಣಿ

    ಧನ್ಯವಾದಗಳು 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading