ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾ ರಾಣಿ ಕಾಲಂ : ಈ ಅವಮಾನವನ್ನು ದೇವನೂರವರಿಗೆ ಹೇಳಿದವರು ಯಾರು?

“ಬಾರೆ, ನಮ್ಮ ಅತ್ತಿಗೆ ಇವತ್ತು ಪುಳಿಯೋಗರೆ ಮಾಡಿದಾರೆ’”, ಸುಜಾತ ಹೀಗಂದಾಗ ನಾನು ಥಟ್ಟನೆ ಎದ್ದು ನಿಂತಿದ್ದೆ. ಆಗ ನಾನು ಮಿಡ್ಲ್ ಸ್ಕೂಲ್ ಹುಡುಗಿ. ಯಾವಾಗಲೋ ಒಮ್ಮೆ ಸುಜಾತ ತಂದ ಪುಳಿಯೋಗರೆ ತಿಂದಿದ್ದ ನಾನು ಅದರ ರುಚಿಗೆ ದಾಸಾನುದಾಸಿ ಆಗಿಹೋಗಿದ್ದೆ! ಅವತ್ತು ನನಗೆ ಸಿಕ್ಕಿದ್ದು ಬರೀ ೩-೪ ತುತ್ತು ಪುಳಿಯೋಗರೆ ಅಷ್ಟೆ. ಹಾಗಾಗಿ ಅದನ್ನು ಊಟಕ್ಕೆ ಅಂತ ಹೊಟ್ಟೆ ತುಂಬುವ ತನಕ ತಿನ್ನುವ ಆಸೆಗೆ ನಾಲಿಗೆಯಲ್ಲಿ ಆಗಲೆ ನೀರೊಡೆಯುತ್ತಿತ್ತು. ಅವಳು ಕರೆದ ಕೂಡಲೇ ಬ್ಯಾಗು ಕೈಗೆತ್ತಿಕೊಂಡು ಹೊರಡಲು ಸಿದ್ಧಳಾಗಿಬಿಟ್ಟಿದ್ದೆ.
ನಾನು ಏಳನೇ ತರಗತಿ ಓದಿದ್ದು ಹಳ್ಳಿಯಲ್ಲಿ, ನನ್ನ ಅಜ್ಜಿ ಮನೆಯಲ್ಲಿ. ಅಲ್ಲೇ ಈಕೆ ನನ್ನ ಗೆಳತಿಯಾಗಿದ್ದು. ಇಷ್ಟಗಲ ಕಣ್ಣು, ಸದಾ ನಗುತ್ತಿದ್ದ ಮುಖ, ಕಣ್ಣಿಗೆ ದಪ್ಪಕ್ಕೆ ತೀಡಿ, ತುದಿಯಲ್ಲಿ ಕೊಂಚ ಮೇಲೇರಿರುತ್ತಿದ್ದ ಕಾಡಿಗೆ, ದೊಡ್ಡದಾಗಿ ಪುಡಿಕುಂಕುಮ ಇಟ್ಟ ಹಣೆ. ಅವಳು ನಕ್ಕರೆ ಅವಳ ಹಣೆಯ ಮೇಲಿನ ಕುಂಕುಮ ಸಹ ನಗುತ್ತಿತ್ತು.
ಅದೇ ಮೊದಲ ಬಾರಿ ನಾನು ಅವಳ ಮನೆಗೆ ಹೋಗಿದ್ದು. ಇಷ್ಟೆತ್ತರ ಹೊಸಿಲು, ದಾಟಿ ಒಳಗೆ ಹೆಜ್ಜೆ ಇಟ್ಟರೆ ಎಡಗಡೆಗೆ ಹಸು ಕಟ್ಟಿದ್ದ ಕೊಟ್ಟಿಗೆ. ಬಲಗಡೆಗೆ ಅವರ ಅಣ್ಣ ಪೋಸ್ಟ್ ಮಾಸ್ಟರ್ ಆಗಿದ್ದ ಪೋಸ್ಟ್ ಆಫೀಸ್ ರೂಂ. ಅಲ್ಲಿಂದ ಒಳಗೆ ಹೋದರೆ ದೊಡ್ಡ ಪಡಸಾಲೆ, ಮಧ್ಯೆ ನಾಲ್ಕು ಕಂಬಗಳು, ಅವುಗಳ ನಡುವೆ ಅರ್ಧ ಅಡಿಯಷ್ಟು ನೆಲ ಎತ್ತರಿಸಿ ಆದ ಜಗಲಿ. ಅಲ್ಲೇ ಸುಜಾತ ಮಂದಲಿಗೆ ಹಾಸಿದಳು. ನಾನು ಕಂಬಕ್ಕೊರಗಿ ಕೂತೆ. ಅವಳು ಒಳಗಡೆ ಹೋಗಿ ಏನೋ ಹೇಳಿ, ಕೈಕಾಲು ತೊಳೆಯಲು ಹೋದಳು.
ಅವರ ಅತ್ತಿಗೆ ಒಂದು ಬಾಳೆ ಎಲೆಯಲ್ಲಿ ಪುಳಿಯೋಗರೆ ತೆಗೆದುಕೊಂಡು ಬಂದರು. ನನ್ನ ಮುಂದೆ ಬಗ್ಗಿ ಕೈ ನೆಲಕ್ಕೆ ತಾಕದಂತೆ, ಇಷ್ಟು ಎತ್ತರದಿಂದಲೇ ನನ್ನ ಮುಂದೆ ಎಲೆ ಹಾಕಿದರು. ಒಂದೆರಡು ಕಡಲೆ ಬೀಜ ಎಲೆಯ ಆಚೀಚೆ ಉರುಳಾಡಿತ್ತು. ಯಾಕೋ ಏನೋ ಏನೂ ಅರ್ಥವಾಗದಿದ್ದರೂ ಮನಸ್ಸು ಪೆಚ್ಚಾಗಿತ್ತು. ಅಲ್ಲಿಯವರೆಗೆ ಅಪ್ಪನ ಜೊತೆ ಊರು, ಪಟ್ಟಣಗಳಲ್ಲೇ ಬೆಳೆದ ನನಗೆ ಈ ರೀತಿಯ ನಡುವಳಿಕೆ ಹೊಸದು. ಅಲ್ಲಿಯವರೆಗೂ ನನಗೆ ಸಾಮಾಜಿಕ ಅಸಮಾನತೆಯ ಪರಿಚಯ ಆಗಿರಲಿಲ್ಲ.
ಇದು ಅಪಮಾನ ಎಂದು ಅರ್ಥವಾಗುವ ಮೊದಲೇ ಮನಸು ಮುದುಡಿ ಹೋಗಿತ್ತು. ಸುಜಾತ ಬಂದವಳೇ ಅಲ್ಲೇ ಎದುರಲ್ಲಿ ಕುಳಿತು ತಿಂಡಿ ತಿನ್ನತೊಡಗಿದಳು. ಯಾಕೋ ನನಗೆ ಅನ್ನ ನುಂಗುವುದೇ ಕಷ್ಟ ಆಗ್ತಾ ಇತ್ತು. ಮತ್ತೆ ಬಡಿಸಲು ಬಂದ ಅತ್ತಿಗೆಗೆ ಬೇಡ ಸಾಕು ಅಂದೆ. ಮೊದಲು ತಂದಿಟ್ಟಿದ್ದಷ್ಟು ತಿಂದು ಮುಗಿಸಿ, ಕೈ ತೊಳೆಯುವುದು ಎಲ್ಲಿ ಎಂದು ಅತ್ತಿತ್ತ ನೋಡಿದೆ. ಅಲ್ಲೇ ಕೂತು ಬತ್ತಿ ಹೊಸೆಯುತ್ತಿದ್ದ ಸುಜಾತಾಳ ಅಮ್ಮ, ’ಎಲೆ ಮಡಿಸಿ ಹಿತ್ತಲಲ್ಲಿ ಹಾಕಿಬಿಡು, ಹಾಗೇ ಅಲ್ಲಿ ಸಗಣಿ ಇದೆ, ತಂದು ಗೋಮೆ ಮಾಡಿಬಿಡಮ್ಮ’ ಅಂದರು. ಅಲ್ಲಿಯವರೆಗೇ ನಾನು ಆ ಹೆಸರೇ ಕೇಳಿರಲಿಲ್ಲ ತಬ್ಬಿಬ್ಬಾಗಿ ನೋಡುತ್ತಿದ್ದೆ. ಅವರಮ್ಮ ಬತ್ತಿ ಹೊಸೆಯುತ್ತಲೇ ಇದ್ದರು. ಸುಜಾತ ಕಣ್ಸನ್ನೆಯಲ್ಲೇ ಕರೆದಳು. ಎಲೆ ಮುದುರಿ ಹಿಡಿದುಕೊಂಡು ಅವಳನ್ನು ಹಿಂಬಾಲಿಸಿದೆ. ಹಿತ್ತಲಲ್ಲಿ ಗೋಮಯ ಅಂದ್ರೆ ಏನು ಅಂತ ಹೇಳಿದಳು. ಒಂದಿಷ್ಟೂ ಪ್ರತಿಭಟಿಸದೆ ಅದನ್ನು ನಾನು ಯಾಕೆ ಮಾಡಿದೆ ಅಂತ ಇವತ್ತಿಗೂ ನನಗೆ ಅರ್ಥ ಆಗುತ್ತಿಲ್ಲ. ಗೋಮಯ ಮಾಡಿ ಕೈ ತೊಳೆದುಕೊಂಡವಳ ಕಣ್ಣಲ್ಲಿ ನೀರು. ಘಂ ಅನ್ನುತ್ತಿದ್ದ ಪುಳಿಯೋಗರೆ ವಾಸನೆ ಮರೆಸುತ್ತಿದ್ದ ಸಗಣಿ ವಾಸನೆ ಕೈಲಿ. ಯಾಕೋ ತುಂಬಾ ಅವಮಾನವಾಗಿತ್ತು. ಅವಳಿಗೆ ಹೋಗಿ ಬರುತ್ತೇನೆ ಅಂತ ಸಹ ಹೇಳದೆ, ಬರೀ ತಲೆ ಅಲ್ಲಾಡಿಸಿ ಹೊರಟೆ.
ಅಜ್ಜಿ ಮನೆಗೆ ಹೋಗುವ ದಾರಿಯುದ್ದಕ್ಕೂ ಇನ್ನಿಲ್ಲದ ದುಗುಡ, ತಲ್ಲಣ. ಮನೆಗೆ ಬಂದವಳೇ ಸುಮ್ಮನೆ ಮಂಕಾಗಿ ಕೂತುಬಿಟ್ಟಿದ್ದೆ. ’ಯಾಕೆ ಹಾಗೆ ಕೂತಿದೀಯ ಊಟಾನೂ ಮಾಡದೆ, ಏನಾಯ್ತು’ ಅಂತ ಅಜ್ಜಿ ರಮಿಸಿದ ಮೇಲೆ ಬಿಕ್ಕಳಿಸುತ್ತಲೇ ಎಲ್ಲಾ ಹೇಳಿದೆ. ಅಲ್ಲೇ ಇದ್ದ ದೊಡ್ಡ ಮಾವ, ’ಇನ್ಯಾವತ್ತು ಅವರ ಮನೆಗೆ ಹೋಗಬೇಡ ನೀನು’ ಅಂದಿದ್ದರು. ಅಜ್ಜಿ ಮಾತ್ರ ಥಣ್ಣಗಿನ ದನಿಯಲ್ಲಿ “ಅದು ಅವರವರ ಮನೆ ಶಾಸ್ತ್ರ, ಸಂಪ್ರದಾಯ, ಈಗ ನಾನು ಮನೇಲಿ ಮುನಿಯಮ್ಮನಿಗೆ ತಟ್ಟೆ ಹಾಕಿ ಬಡಿಸ್ತೀನಾ’ ಎಂದುಬಿಟ್ಟರು. ನಾನು ಒಂದು ಕ್ಷಣ ಮಾತೇ ಇಲ್ಲದೆ ಕೂತುಬಿಟ್ಟೆ.

ಮುನಿಯಮ್ಮ ಮಡಿವಾಳರ ಹೆಂಗಸು. ದಿನಾ ಬೆಳಗ್ಗೆ ಬಂದು, ದೊಡ್ಡ ಮಕ್ಕರಿಯಲ್ಲಿ ಮೈಲಿಗೆ ಬಟ್ಟೆ ತೆಗೆದುಕೊಂಡು ಹೋಗಿ, ಒಗೆದು, ಒಣಗಿಸಿ ಸಾಯಂಕಾಲ ತಂದುಕೊಡುತ್ತಿದ್ದಳು. ಅವಳ ಮೊಮ್ಮಗಳು ಸಹ ನನ್ನ ಕ್ಲಾಸಿನಲ್ಲೇ ಓದುತ್ತಿದ್ದಳು. ಮುನಿಯಮ್ಮ ಬಟ್ಟೆ ಮಕ್ಕರಿಯಲ್ಲಿ ಒಂದು ಸಿಲವಾರದ ಕ್ಯಾರಿಯರ್ ತರ್ತಾ ಇದ್ದಳು. ಅದಕ್ಕೆ ಅಜ್ಜಿ ಬೆಳಗ್ಗೆ ಮಾಡಿದ್ದ ತಿಂಡಿ, ಇಲ್ಲದಿದ್ದರೆ ಸಾರು ಹಾಕುತ್ತಿದ್ದರು.
ಅರೆ, ಅಜ್ಜಿ ಸಹ ಸಾರನ್ನು ಮೇಲಿಂದಲೇ ಸುರಿಯುತ್ತಾರಲ್ಲವಾ? ನಾನು ನೋಡುತ್ತಿದ್ದ ಹಾಗೆ ಸಾರು ಎಷ್ಟೋ ಸಲ ಮುನಿಯಮ್ಮನ ಮೈಮೇಲೆ ಸಿಡಿಯುತ್ತಾ ಇದ್ದದ್ದು ನೆನಪಾಯ್ತು. ಒಮ್ಮೊಮ್ಮೆ ಮುನಿಯಮ್ಮನ ಜೊತೆ ಬರುತ್ತಿದ್ದ ಮೊಮ್ಮಗಳು ಪದ್ಮಾ ಮುಖ ಆಗೆಲ್ಲಾ ಮಂಕಾಗುತ್ತಿದ್ದದ್ದು ನೆನಪಾಯ್ತು. ಯಾಕೋ ನನಗೆ ನನ್ನ ಬಗ್ಗೆಯೇ ಅವಮಾನ ಅನ್ನಿಸಲು ಶುರು ಆಯ್ತು. ಆಮೇಲೆ ಕಣ್ಣಲ್ಲಿ ನೀರು ಬರಲಿಲ್ಲ.
ಮರುದಿನ ಮುನಿಯಮ್ಮ ಬಂದಾಗ ಅಜ್ಜಿ ತಿಂಡಿಕೊಡು ಅಂತ ಹೇಳಿದರು. ತಟ್ಟೆ ದೂರ ಹಿಡಿದುಕೋ ಅಂತ ಸೇರಿಸಿದರು. ಹಿಂದಿನ ದಿನದ ಅನುಭವ ನೆನಪಿನಲ್ಲಿತ್ತಲ್ಲ, ಹಾಗಾಗಿ ತಟ್ಟೆಯನ್ನು ಕ್ಯಾರಿಯರ್ ಗೆ ತಾಕಿಸಿಯೇ ಚಿತ್ರಾನ್ನವನ್ನು ಕ್ಯಾರಿಯರ್ ಗೆ ಹಾಕಿದೆ. ’ಅಯ್ಯೋ ದೂರ ಇಡ್ಕೋಳಮ್ಮ, ಕ್ಯಾರಿಯರ್ ಮೇಲೇನೇ ಇಡ್ತೀಯಲ್ಲ’ ಅಂತ ಮುನಿಯಮ್ಮ ಜೋರಾಗೇ ಹೇಳಿ ನಾನು ಅಜ್ಜಿ ಹತ್ರ ಬೈಸಿಕೊಂಡಿದ್ದೆ. ಆಮೇಲೊಮ್ಮೆ ಮುನಿಯಮ್ಮ ಬರದೆ, ಬಟ್ಟೆ ತಗೊಂಡು ಹೋಗಲು ಪದ್ಮ ಬಂದಿದ್ದಳು. ಅವತ್ತು ನಾನೇ ಸಾರು ತೆಗೆದುಕೊಂಡು ಹೋದೆ. ಮುಖ ಬಗ್ಗಿಸಿಕೊಂಡ ಪದ್ಮ ಕ್ಯಾರಿಯರ್ ಹಿಡಿದ ಕೈ ಚಾಚಿದಳು. ಒಂದು ಕೈಯನ್ನು ಅವಳ ಕೈಮೇಲೆ ಇಟ್ಟು, ಇನ್ನೊಂದು ಕೈಲಿ ಸಾರಿನ ಬಟ್ಟಲು ಕ್ಯಾರಿಯರ್ ಮೇಲಿಟ್ಟು ಮೆಲ್ಲನೆ ಸಾರು ಬಗ್ಗಿಸಿದೆ. ಸಾರು ಪೂರ ಬಗ್ಗಿಸುವವರೆಗೂ ಪದ್ಮ ತಲೆ ಎತ್ತಲಿಲ್ಲ. ಆಮೇಲೆ ’ಬರ್ತೀನಮ್ಮಿ’ ಅಂತ ನನ್ನ ಕಣ್ಣಿಗೆ ಕಣ್ಣು ನೆಟ್ಟು, ತಲೆಯಾಡಿಸಿ ಹೋದಳು.
ಅವಳಿಗೂ ನನ್ನ ವಯಸ್ಸೇ. ಜೀವನದಲ್ಲಿ ನಾನು ಆ ರೀತಿ ಬೇರೆಯವರಿಂದ ’ಮುಟ್ಟಿಸಿ ಕೊಳ್ಳದಂತೆ’ ಊಟ ಮಾಡಿದ್ದು, ನನ್ನ ಎಲೆಯಿದ್ದ ಜಾಗವನ್ನು ಹಾಗೆ ಗೋಮಯ ಮಾಡಿದ್ದು ಒಂದೇ ಒಂದು ಸಲ. ಅದಕ್ಕಾಗಿ ನನಗೆ ಆದ ನೋವು, ದುಗುಡ, ಅದನ್ನು ಮೀರಿದ ಅವಮಾನ ಅಷ್ಟಿಷ್ಟಲ್ಲ. ಮುಂದೇ ಯಾವತ್ತೂ ನಾನು ಸುಜಾತ ಅವರ ಮನೆಯ ಹೊಸಿಲು ದಾಟಲಿಲ್ಲ. ನನಗೇ ಗೊತ್ತಿಲ್ಲದಂತೆ ಆ ಮನೆ ನನ್ನ ಪಾಲಿಗೆ ಅಸ್ಪೃಶ್ಯ ಆಗಿ ಹೋಗಿತ್ತು. ಹಾಗಿರುವಾಗ ಹಳ್ಳಿಯ ಸುಮಾರು ಮನೆಗಳಲ್ಲಿ, ಹೋದಾಗೆಲ್ಲಾ ಹಾಗೆ ನಡೆಸಿಕೊಳ್ಳಲ್ಪಡುವ ಪದ್ಮಳ ನೋವು ಬೇರೆ ಸಂದರ್ಭದಲ್ಲಿ ನನಗೆ ಅರ್ಥವಾಗುವ ಯಾವುದೇ ಸಾಧ್ಯತೆ ಇರಲಿಲ್ಲ…
ಇದಾಗಿ ಸುಮಾರು ಒಂದು ವಾರ ಆಗಿರಬೇಕು, ಮಧ್ಯಾನ್ಹದ ಬಿಡುವಿನಲ್ಲಿ ಪದ್ಮ ಅಳುಕುತ್ತಲೇ ಕೇಳಿದ್ದಳು, ’ಮುದ್ದೆ, ಉಳ್ಳಿ ಸಾರು ತಂದಿದ್ದೆ, ತಿಂತೀಯಾ’ ಅಂತ. ’ಹೂ’ ಅಂದೆ. ಕಾರದ ಉಂಡೆ ಸಾರಿಗೆ ಕಲಿಸಿ, ಟಿಫನ್ ಕ್ಯಾರಿಯರ್ ನನ್ನ ಮುಂದೆ ಹಿಡಿದಳು. ನಾನು ಒಂದೆರಡು ತುತ್ತು ಮುದ್ದೆ ತಿಂದೆ. ’ಆ ಮುದ್ದೆ ಸಾರು’ ನನ್ನ ಜೀವನದ ಅತ್ಯಂತ ರುಚಿಕರ ಊಟ ಎಂದು ನಾನಿಲ್ಲಿ ಹೇಳುವುದಿಲ್ಲ, ಯಾಕೆಂದರೆ ನಿಜಕ್ಕೂ ಆ ರುಚಿಯ ನೆನಪು ನನಗಿಲ್ಲ. ಖಾರ ಖಾರ ಇತ್ತು ಅಂತ ಮಾತ್ರ ನೆನಪು. ಆದರೆ, ಊಟ ಆದ ಮೇಲೆ ಪದ್ಮ ನನ್ನತ್ತ ನೋಡಿ ನಕ್ಕ ಬಿಳಿ ನಗುವನ್ನು ಮಾತ್ರ ನಾನು ಇಂದಿಗೂ ಮರೆತಿಲ್ಲ..
ಹಾಗೇ ಇನ್ನೊಂದು ಅವಮಾನ ಅನ್ನಿಸಿದ ನೆನಪು ಅಂದರೆ ಅಜ್ಜಿಯ ಊರಿಗೆ ಹೋಗಿದ್ದಾಗ ತಿಂಗಳ ಮೂರು ದಿನ ಪಡುತ್ತಿದ್ದ ಬಲವಂತದ ಅಸೃಶ್ಯತೆಯ ನೆನಪು. ಅಲ್ಲಿ ಪಡಸಾಲೆಯಿಂದ ಬಚ್ಚಲು ಮನೆಗೆ ಹೋಗಬೇಕಾದರೆ, ಊಟ ಮಾಡುವ ’ನಡುವೆ ’ (ಅಡಿಗೆ ಮನೆ ಮತ್ತು, ಬಚ್ಚಲು ಮನೆಯ ನಡುವಿನ ಪಡಸಾಲೆ) ಯನ್ನು ದಾಟಿ ಹೋಗಬೇಕು. ಅಲ್ಲೇ ದೇವರಗೂಡು. ಹಾಗಾಗಿ ಆ ದಿನಗಳಲ್ಲಿ ಅಲ್ಲಿಗೆ ಪ್ರವೇಶವಿಲ್ಲ. ಇನ್ನೊಂದು ದಾರಿ ಎಂದರೆ, ಬೀದಿ ಬಾಗಿಲು ದಾಟಿ, ಮನೆಯನ್ನು ಬಳಸಿ, ಹಿತ್ತಲಿನ ಗೇಟು ತೆಗೆದು ಅಲ್ಲಿಂದ ಹೋಗುವುದು. ಅಜ್ಜಿ ಮನೆಯ ಒಂದು ಬದಿ ಫ್ಲೋರು ಮಿಲ್ಲು, ಇನ್ನೊಂದು ಕಡೆ ಚಿಲ್ಲರೆ ಅಂಗಡಿ, ಎದುರಲ್ಲೇ ಬಸ್ ಸ್ಟ್ಯಾಂಡ್. ಹಾಗೆ ಬಚ್ಚಲು ಮನೆಗೆ ಹೋಗುವಾಗೆಲ್ಲಾ ಇಡೀ ಊರಿಗೆ ಗೊತ್ತಾಗುವಂತೆ ಮೆರವಣಿಗೆ ಹೋಗುವ ಕ್ರಿಯೆಗೆ ತಲೆ ಹೋಗುವಂತಾಗುತ್ತಿತ್ತು. ಬಚ್ಚಲು ಮನೆಗೆ ಹೋಗುವುದನ್ನು ತಡೆಯಬಹುದು, ಆದರೆ ಊಟ ತಿಂಡಿ ಆದ ಮೇಲೆ ತಟ್ಟೆ ಲೋಟ ತೊಳೆಯಲು ಅದರ ಸಮೇತ ಹೋಗುವುದು ಅಂದರೆ, ಎಂಥಹ ನಾಚಿಕೆಗೇಡು ಅನ್ನಿಸಿಬಿಡ್ತಿತ್ತು. ಅದೊಂದು ತಿಂಗಳಿಗೊಮ್ಮೆ ಮನೆಯಲ್ಲೇ ಅಸ್ಪೃಶ್ಯರಾಗುವ ಹಂಗಾಮಿ ನರಕ. ಇದರ ಸೈಡ್ ಎಫೆಕ್ಟ್ ಅಂದರೆ, ಆ ದಿನಗಳಲ್ಲಿ ಊರಲ್ಲೂ ಯಾರ ಮನೆಗೂ ಹೋಗೋ ಹಾಗಿಲ್ಲ, ಅಷ್ಟರಲ್ಲಿ ನಾನು ಅಪ್ಪ ಇರುವ ಊರಿನಲ್ಲೇ ಶಾಲೆಗೆ ಸೇರಿದ್ದೆ. ರಜೆಯಲ್ಲಿ ಮಾತ್ರ ಅಜ್ಜಿ ಮನೆ. ಅಜ್ಜಿ ಮನೆ ಅಂದರೆ ಕುಣಿದು ತಯಾರಾಗುತ್ತಿದ್ದ ನನಗೆ ಆ ದಿನಗಳಲ್ಲಿ ಮಾತ್ರ ಅಜ್ಜಿ ಮನೆ ಬಿಟ್ಟು ನಮ್ಮ ಮನೆಗೆ ಓಡಿಹೋಗಿಬಿಡಬೇಕು ಅನ್ನಿಸಿಬಿಡುತ್ತಿತ್ತು.
ಯಾವುದೇ ನೋವು, ಅವಮಾನ ಕೇವಲ ಅರಿವಿನ ಮಟ್ಟದಲ್ಲಿಲ್ಲದೆ, ನಮ್ಮದೇ ಅನುಭವಕ್ಕೆ ಬಂದಾಗ ಅದು ನಮ್ಮನ್ನು ತಾಕುವ ತೀವ್ರತೆಯೇ ಬೇರೆ. ಕೇವಲ ಓದಿನ, ಮಾತಿನ ರೂಪದಲ್ಲಿ ನಾನು ಇಂತಹ ಅಸಮಾನತೆಗೆ ತೆರೆದುಕೊಂಡಿದ್ದಿದ್ದರೆ, ಆ ವಯಸ್ಸಿನಲ್ಲಿ ಅದು ನನ್ನ ಮೇಲೆ ಇಷ್ಟು ಮಟ್ಟದ ಪರಿಣಾಮ ಬೀರುತ್ತಿತ್ತೋ ಇಲ್ಲವೋ ಹೇಳಲಾರೆ. ಆದರೆ ಜೀವನದಲ್ಲಿ ಒಮ್ಮೆ ನಾನು ಅನುಭವಿಸಿದ ಅವಮಾನ ಇನ್ನೂ ನನ್ನನ್ನು ಕಾಡುತ್ತದೆ ಎಂದರೆ, ಅದನ್ನು ಹುಟ್ಟಿನ ಕಾರಣಕ್ಕೆ ಹೊತ್ತ ಹೊರೆಯಾಗಿ ಜೀವನ ಪೂರ್ತಿ ಅನುಭವಿಸಿದವರ ಪಾಡು ಹೇಗಿರಬೇಕು? ಇಂದಿನ ಈ ಕಾಲಮಾನದಲ್ಲೂ ಕೇವಲ ದಲಿತೆಯೊಬ್ಬಳು ಪಂಚಾಯತಿ ಯ ಅಧ್ಯಕ್ಷಳಾಗಿದ್ದಕ್ಕೆ, ನಡು ಬೀದಿಯಲ್ಲಿ ಅವಳ ಕೊಲೆ ಆಗುತ್ತದೆ. ನನ್ನ ಪ್ರಾಣಕ್ಕೆ ಬೆದರಿಕೆ ಇದೆ, ನನಗೆ ರಕ್ಷಣೆ ಬೇಕು ಎಂದು ಅವಳು ರಾಜ್ಯದ ರಾಜಧಾನಿಗೆ ಕಳಿಸಿದ ಯಾವ ಪತ್ರವೂ ಅವಳನ್ನು ಕಾಪಾಡುವುದಿಲ್ಲ. ದಲಿತನೊಬ್ಬ ಸವರ್ಣೀಯ ಹುಡುಗಿಯನ್ನು ಪ್ರೀತಿಸಿದ ’ಅಪರಾಧಕ್ಕೆ’ ವಯಸ್ಸಾದ ಅವನ ತಾಯಿಯನ್ನು ಮಾನಭಂಗ ಮಾಡಲಾಯಿತು ಎನ್ನುವುದು ದಿನಪತ್ರಿಕೆಗೆಗಳಲ್ಲಿ ಕೇವಲ ಸುದ್ದಿಯಾಗಿಬಿಡುತ್ತದೆ. ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರಿಗೆ ಬೆದರಿಕೆ ಒಡ್ಡಿ ಬರಿ ಕೈಗಳಲ್ಲಿ ಆಸ್ಪತ್ರೆಯ ಸೀವೇಜ್ ಗುಂಡಿ ಶುದ್ಧ ಮಾಡಲು ಹೇಳಿದ್ದು ಕೇಳಿ ನಮಗೆ ನಾಚಿಕೆಯೂ ಆಗುತ್ತಿಲ್ಲ.
ಅವರ ನೋವು ಸತ್ಯ ಎಂದು ಅರ್ಥವಾಗಲು ನನಗೆ ಯಾವುದೇ ಸಂಶೋಧನೆಯ ನೆರವು ಬೇಕಿಲ್ಲ.ಮತ್ತು ಆ ನೋವಿನಲ್ಲಿ ಬಯಸದೆಯೇ, ಅರಿವಿಲ್ಲದೆಯೇ ನನ್ನದೆಲ್ಲೋ ಪಾಲು ಇರಬಹುದೆಂಬ ಅಳುಕು ಇಂದಿಗೂ ನನ್ನನ್ನು ಬಿಟ್ಟಿಲ್ಲ. ಪದ್ಮ ಎಲ್ಲಿದ್ದಾಳೋ ನನಗೆ ಗೊತ್ತಿಲ್ಲ, ನಾನು ಅಂದು ಸ್ಪರ್ಶಿಸಲು ಸಾಧ್ಯವಾಗಿದ್ದು ಅವಳನ್ನು ಮಾತ್ರ. ಹಾಗೆ ನನ್ನನ್ನು ತಾಕಿ ನನ್ನೊಂದಿಗೆ ಉಳಿದುಕೊಂಡಿರುವುದು, ಒಂದು ಕ್ಷಮೆ ನನ್ನ ಪಾಲಿಗೆ ದಕ್ಕಿರುವುದೂ ಸಹ ಅವಳಿಂದ ಮಾತ್ರ.
ಆ ಒಂದು ಘಟನೆಯಿಂದ ನನಗೆ ಆ ಅಸ್ಪೃಶ್ಯತೆಯ ಎಲ್ಲಾ ನೋವೂ ದಕ್ಕಿದೆ ಎಂದು ಹೇಳುವ ಧಾರ್ಷ್ಟ್ಯ ನನಗಿಲ್ಲ. ಆದರೆ ಆ ನೋವಿನ ಇರುವಿಕೆಯ ಅರಿವು ನನಗಾಗಿದೆ. ಆ ಅರಿವನ್ನು ಗಾಢವಾಗಿಸಿದ್ದು ಮಾತ್ರ ದೇವನೂರರು. ಅವರ ಪುಸ್ತಕ ಓದುವಾಗ ನೋಟ್ಸ್ ಮಾಡಿಕೊಳ್ಳಲೆಂದು ಪೆನ್ಸಿಲ್ ಕೈಲಿ ಹಿಡಿದು ಕೂತವಳಿಗೆ ಮತ್ತೆ ಅನ್ನಿಸಿದ್ದು ಅದೇ ಮಾತು. ಇದು ಅರಿವಿನ ಮಟ್ಟದಲ್ಲಿ ನನ್ನದಾಗುವ ಪುಸ್ತಕವಲ್ಲ, ಅದಕ್ಕೆ ಬೇಕಾದ್ದು ಮನಸ್ಸು ಅಂತ. ಪುಸ್ತಕದಲ್ಲಿ ಒಂದು ಅಧ್ಯಾಯ ಇದೆ, ’ಹೆಣ್ಣು ಜಾತಿ ಮತ್ತು ದಲಿತ ಜಾತಿ’ ಅಂತ. ಅದರಲ್ಲಿ ಮಹಾದೇವ ಬರೀತಾರೆ, ’ಒಟ್ಟಿನಲ್ಲಿ ದಲಿತರು ಯೋಗ್ಯರಾಗಬೇಕಾದರೆ ಅವರು ದೀನರಾಗಿರಬೇಕು. ಹೆಂಗಸೂ ಯೋಗ್ಯಳಾಗಿರಬೇಕಾದರೆ ಅವಳೂ ದೀನಳಾಗಿರಬೇಕು’ ಅಂತ. ಯಾಕೋ ನನ್ನ ಮುಂದೆ ಎಸೆದ ಆ ಎಲೆ, ಚೆಲ್ಲಾಡಿದ ಕಡಲೆ ಬೀಜ, ಸಿಲವಾರ ಪಾತ್ರೆಗೆ ಎತ್ತಿ ಸುರಿಯುತ್ತಿದ್ದ ಸಾರು, ತಟ್ಟೆ, ಲೋಟ ಹಿಡಿದು, ಕಾಂಪೌಂಡ್ ಬಳಸಿ ತಲೆಬಗ್ಗಿಸಿ ಹೋಗುತ್ತಿದ್ದ ನಾನು ಎಲ್ಲಾ ನೆನಪಾಗಿಬಿಟ್ಟಿತು.
ಅದು ಸರಿ, ನನ್ನದೊಂದೇ ಪ್ರಶ್ನೆ. ನಾನು ಯಾರಿಗೂ ಹೇಳದ ಹೆಣ್ಣಿನ ಈ ಅಸ್ಪೃಶ್ಯತೆಯ ಅವಮಾನವನ್ನು ದೇವನೂರವರಿಗೆ ಹೇಳಿದವರು ಯಾರು?
 

‍ಲೇಖಕರು avadhi

5 July, 2013

60 Comments

  1. Aravind

    Very appropriate and timely write up

  2. Anonymous

    ನಾನು ಸ್ಕೂಲಿನಲ್ಲಿರುವಾಗ ನನಗೊಬ್ಬಳು ಮಾಧ್ವ ಬ್ರಾಹ್ಮಣರ ಗೆಳತಿ. ಅವಳ ಮನೆಗೆ ಸ್ಮಾರ್ತ ಬ್ರಾಹ್ಮಣರಾದ ನಾವು ಹೋದರೆ ಅಚ್ಚ ಬೆಳ್ಳಗಿನ ಪಿಂಗಾಣಿ ತಟ್ಟೆ ಕೈಗೆ ಕೊಟ್ಟು ಮೇಲಿಂದ ಒಗ್ಗರಣೆ ಅವಲಕ್ಕಿ ಎತ್ತಿ ಹಾಕುತ್ತಿದ್ದರು. ಅದನ್ನು ತಿಂದು ಬಂದ ಎಷ್ಟೋ ವರ್ಷಗಳ ನಂತರವೂ ಈಗಲೂ ನಿನ್ನ ರೀತಿಯದ್ದೇ ಅವಮಾನ ಕಾಡುತ್ತದೆ ಸಂಧ್ಯಾ. ನಾನು ಅಕ್ಕನ ಮದುವೆಗೆ ಮಾಡಿದ್ದ ಫೇಣಿ ತೆಗೆದುಕೊಂಡು ಹೋಗಿ ಕೊಟ್ಟರೆ ‘ಫೇಣಿ ಎಷ್ಟು ಚೆನ್ನಾಗಿದೆ ..ಆದ್ರೆ ತಿನ್ನೋ ಹಾಗಿಲ್ವೇ’ ಅಂದವರಿಗೆ ಮಡಿ-ಮೈಲಿಗೆಯ ಪ್ರಾಥಮಿಕ ಜ್ಞಾನ ಕೂಡ ಇಲ್ಲದ ನಾನು ‘ಯಾಕೆ ತಿನ್ನೋ ಹಾಗಿಲ್ಲ’ ಅಂತ ಮುಗ್ಧವಾಗಿ ಪ್ರಶ್ನಿಸಿದ್ದೆ. ನಮ್ಮ ಮನೆಯಲ್ಲಿ ಎಲ್ಲ ಜಾತಿಯ ಜನರಿಗೂ ಮುಕ್ತ ಪ್ರವೇಶ .. ಅಸಲಿಗೆ ಅವರಾಗೇ ಹೇಳದ ಹೊರತು ಯಾವ ಜಾತಿ ಅಂತ ಕೇಳುವ ಗೋಜಿಗೂ ಹೋಗುತ್ತಿರಲಿಲ್ಲ ನಾವು. ಆಗ ಆ ಗೆಳತಿಯ ಅಮ್ಮ ‘ಸ್ಮಾರ್ತರ ಮನೇಲಿ ಮಾಡಿದ್ದನ್ನ ನಾವು ತಿನ್ನಲ್ಲ ಕಣೇ’ ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದು ನಿಜಕ್ಕೂ ಒಳ್ಳೆಯದಾಯ್ತು … ಇವತ್ತು ನನಗೆ ಶೋಷಿತರು ಮೇಲು ಜಾತಿಯನ್ನು ಬಯ್ಯುವಾಗ ಯಾಕೆ ಬಯ್ಯುತ್ತಾರೆ ಅನ್ನುವುದರ ಸಣ್ಣ ಅರಿವು ಮೂಡಿಸಿದ ಘಟನೆ ಇದು. ಒಂದು ಸಣ್ಣ ಪುಡಿ ಘಟನೆ ನನ್ನನ್ನು ಅಷ್ಟೊಂದು ಅವಮಾನಕ್ಕೀಡು ಮಾಡಿದರೆ, ಇನ್ನು ಪಾಪ ಶೋಷಿತರ ಪಾಡು ಹೇಗಿರಬೇಕು …

  3. bharathi b v

    ನಾನು ಸ್ಕೂಲಿನಲ್ಲಿರುವಾಗ ನನಗೊಬ್ಬಳು ಮಾಧ್ವ ಬ್ರಾಹ್ಮಣರ ಗೆಳತಿ. ಅವಳ ಮನೆಗೆ ಸ್ಮಾರ್ತ ಬ್ರಾಹ್ಮಣರಾದ ನಾವು ಹೋದರೆ ಅಚ್ಚ ಬೆಳ್ಳಗಿನ ಪಿಂಗಾಣಿ ತಟ್ಟೆ ಕೈಗೆ ಕೊಟ್ಟು ಮೇಲಿಂದ ಒಗ್ಗರಣೆ ಅವಲಕ್ಕಿ ಎತ್ತಿ ಹಾಕುತ್ತಿದ್ದರು. ಅದನ್ನು ತಿಂದು ಬಂದ ಎಷ್ಟೋ ವರ್ಷಗಳ ನಂತರವೂ ಈಗಲೂ ನಿನ್ನ ರೀತಿಯದ್ದೇ ಅವಮಾನ ಕಾಡುತ್ತದೆ ಸಂಧ್ಯಾ. ನಾನು ಅಕ್ಕನ ಮದುವೆಗೆ ಮಾಡಿದ್ದ ಫೇಣಿ ತೆಗೆದುಕೊಂಡು ಹೋಗಿ ಕೊಟ್ಟರೆ ‘ಫೇಣಿ ಎಷ್ಟು ಚೆನ್ನಾಗಿದೆ ..ಆದ್ರೆ ತಿನ್ನೋ ಹಾಗಿಲ್ವೇ’ ಅಂದವರಿಗೆ ಮಡಿ-ಮೈಲಿಗೆಯ ಪ್ರಾಥಮಿಕ ಜ್ಞಾನ ಕೂಡ ಇಲ್ಲದ ನಾನು ‘ಯಾಕೆ ತಿನ್ನೋ ಹಾಗಿಲ್ಲ’ ಅಂತ ಮುಗ್ಧವಾಗಿ ಪ್ರಶ್ನಿಸಿದ್ದೆ. ನಮ್ಮ ಮನೆಯಲ್ಲಿ ಎಲ್ಲ ಜಾತಿಯ ಜನರಿಗೂ ಮುಕ್ತ ಪ್ರವೇಶ .. ಅಸಲಿಗೆ ಅವರಾಗೇ ಹೇಳದ ಹೊರತು ಯಾವ ಜಾತಿ ಅಂತ ಕೇಳುವ ಗೋಜಿಗೂ ಹೋಗುತ್ತಿರಲಿಲ್ಲ ನಾವು. ಆಗ ಆ ಗೆಳತಿಯ ಅಮ್ಮ ‘ಸ್ಮಾರ್ತರ ಮನೇಲಿ ಮಾಡಿದ್ದನ್ನ ನಾವು ತಿನ್ನಲ್ಲ ಕಣೇ’ ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದು ನಿಜಕ್ಕೂ ಒಳ್ಳೆಯದಾಯ್ತು … ಇವತ್ತು ನನಗೆ ಶೋಷಿತರು ಮೇಲು ಜಾತಿಯನ್ನು ಬಯ್ಯುವಾಗ ಯಾಕೆ ಬಯ್ಯುತ್ತಾರೆ ಅನ್ನುವುದರ ಸಣ್ಣ ಅರಿವು ಮೂಡಿಸಿದ ಘಟನೆ ಇದು. ಒಂದು ಸಣ್ಣ ಪುಡಿ ಘಟನೆ ನನ್ನನ್ನು ಅಷ್ಟೊಂದು ಅವಮಾನಕ್ಕೀಡು ಮಾಡಿದರೆ, ಇನ್ನು ಪಾಪ ಶೋಷಿತರ ಪಾಡು ಹೇಗಿರಬೇಕು …

  4. Satyanarayana BR

    ಹೌದು ದೇವನೂರರ ಪುಸ್ತಕ ಓದುತ್ತಿದ್ದಾಗ ನಮ್ಮನ್ನು ನಾವು ಮುಟ್ಟಿನೋಡಿಕೊಳ್ಳುವ, ನಮ್ಮೊಳಗನ್ನು ತಡಕಿ ನೋಡಿಕೋಳ್ಳುವ ಅನುಭವವಗಳಾಗಿವೆ. ಆದ್ದರಿಂದಲೇ ಆ ಪುಸ್ತಕ ಮತ್ತೆ ಮತ್ತೆ ಓದಿಸಿಕೊಳ್ಳುತ್ತಿದೆ. ನಿಮ್ಮ ಬರಹವೊಂದು ಉತ್ತಮ ಪ್ರತಿಸ್ಪಂದನೆ. ಅಭಿನಂದನೆಗಳು

  5. Annapoorna

    ಸಂಧ್ಯಾ, ನೀವು ಸಂವೇದನಾಶೀಲ ಬರಹಗಾರ್ತಿ ಎಂಬುದಕ್ಕೆ ಈ ಲೇಖನವೇ ಸಾಕ್ಷಿ. ಆದರೆ ಅವಸರದಲ್ಲಿ ಅದು ಅವಮಾನ ಇದು ಅವಮಾನ ಎಂದು ತೀರ್ಪು ಕೊಡುವ ಪ್ರವೃತ್ತಿ ಕಳವಳ ಹುಟ್ಟಿಸುತ್ತಿದೆ.

    • ಸಂಧ್ಯಾ ರಾಣಿ

      ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಯೂ. ಆದರೆ ಮುಂದಿನ ಭಾಗ ಅರ್ಥ ಆಗಲಿಲ್ಲ ಅನ್ನಪೂರ್ಣ. ಇಲ್ಲಿ ಯಾವುದು ಅವಮಾನ ಅಲ್ಲ ಎಂದು ನಿಮ್ಮ ಅಭಿಪ್ರಾಯ?
      ಸಂಧ್ಯಾ ರಾಣಿ.

  6. sindhu

    ಪ್ರಿಯ ಸಂಧ್ಯಾರಾಣಿ,
    ಮನಮುಟ್ಟುವ ಬರಹ.
    ಈ ನಿಮ್ಮ ಅಭಿಪ್ರಾಯ ನನ್ನದೂ ಕೂಡ.
    “ಆ ಒಂದು ಘಟನೆಯಿಂದ ನನಗೆ ಆ ಅಸ್ಪೃಶ್ಯತೆಯ ಎಲ್ಲಾ ನೋವೂ ದಕ್ಕಿದೆ ಎಂದು ಹೇಳುವ ಧಾರ್ಷ್ಟ್ಯ ನನಗಿಲ್ಲ. ಆದರೆ ಆ ನೋವಿನ ಇರುವಿಕೆಯ ಅರಿವು ನನಗಾಗಿದೆ. ಆ ಅರಿವನ್ನು ಗಾಢವಾಗಿಸಿದ್ದು ಮಾತ್ರ ದೇವನೂರರು.”
    ಹುಟ್ಟಿನಿಂದ ಬ್ರಾಹ್ಮಣಳಾದ ನನಗೆ ನನ್ನ ಮಿತಿಯಲ್ಲೇ ಈ ಬಗೆಯ ಕೆಲವು ಅನುಭವಗಳು ಆಗಿವೆ.
    ಅದು ದೇವನೂರು ಇರಲಿ ಅಥ್ವಾ ಇನ್ನು ಯಾರೆ ಈ ಅಸ್ಪ್ರಶ್ಯತೆಯ ನೋವುಂಡವರ ಅಭಿವ್ಯಕ್ತಿಯಿರಲಿ ಅದನ್ನು ಅರ್ಥ ಮಾಡಿಕೊಳ್ಳಲು, ಮರುಗಲು, ನಾನು ಅಂಥದೊಂದು ತಪ್ಪು ಹೆಜ್ಜೆ ಇಡದಿರಲು ಸಹಾಯಮಾಡಿವೆ.
    ಎದೆಗೆ ಬಿದ್ದ ಅಕ್ಷರದ ಈ ವಾಕ್ಯ ಸಾರ್ವಕಾಲಿಕ ಸತ್ಯ, “’ಒಟ್ಟಿನಲ್ಲಿ ದಲಿತರು ಯೋಗ್ಯರಾಗಬೇಕಾದರೆ ಅವರು ದೀನರಾಗಿರಬೇಕು. ಹೆಂಗಸೂ ಯೋಗ್ಯಳಾಗಿರಬೇಕಾದರೆ ಅವಳೂ ದೀನಳಾಗಿರಬೇಕು’
    ಇದು ಸುಟ್ಟಗಾಯದ ಹಾಗಿನ ಸತ್ಯ. ಹಸಿಯಾಗಿದ್ದಾಗ ಉರಿಸುತ್ತದೆ. ಒಣಗಿದ್ದಾಗ ಮುದುಡಿಸುತ್ತದೆ.
    ಪ್ರೀತಿಯಿಂದ,
    ಸಿಂಧು

  7. Renuka Nidagundi

    ಚೆಂದವಾದ ಬರಹ. ನಮ್ಮ ಬಾಲ್ಯದಲ್ಲಿ ಬೇರೆಯವರ ಮನೆಯಲ್ಲಿ ತಿಂದು ಬಂದದ್ದನ್ನು ಹೇಳಿದರೆ ಅಮ್ಮ, ಊದಿನಕಡ್ದಿ ತುದಿಯಿಂದ ನಾಲಿಗೆ ತುದಿಗೆ ಬರೆಕೊಟ್ಟು ನಮ್ಮನ್ನು ಶುದ್ಧಗೊಳಿಸುತ್ತಿದ್ದ ವಿಧಾನ ನೆನಪಾಯಿತು 🙂 ಆದರೆ ನಮ್ಮನೆ ಊಟಕ್ಕ್ಕಿಂತ ಒಕ್ಕಲಿಗರ ಮನೆಯ ರೊಟ್ಟಿ- ರಂಜಕ, ಕರಿಂಡಿ, ಮುಳಗಾಯಿ ಪಲ್ಲೆಯೇ ಇಷ್ಟವಾಗುತ್ತಿತ್ತು.

  8. nagraj.harapanahalli

    ಸಂಧ್ಯಾ ಮೇಡಂ..ನನ್ನ ಕೆಲವು ಪತ್ರಿಕಾ ಸ್ನೆಹಿತರು ಇದ್ದರೆ..ಅವರಿಗೆ ಜಾತಿ ಮೀರಲಾಗುತ್ತಿಲ್ಲ. ಮಾನವೀಯತೆ .. ಮಾತು…ನಾಲಿಗೆಗೆ ಸೀಮಿತವಾಗಿದೆ. ಸಾಹಿತ್ಯ ದೂರ. ವೈಚಾರಿಕ ಲೇಖನ ಓದಲ್ಲ. ಕೊನೆಯ ಪಕ್ಷ ನಾಗೇಶ್ ಹೆಗೆಡೆ ಅವರ ಲೇಖನ ಓದಲ್ಲ. ಎಲ್ಲಾ ಅವರೇ ಹೇಳುವ ಕರ್ಮ ಸಿದ್ಡಾಂತವನ್ನ …ಅವರ ಬದುಕಿನ ಶೈಲಿಗೆ ಅನ್ವಯಿಸಬಹುದೇನೋ. ಒಟ್ಟಿನಲ್ಲಿ ಬದಲಾವಣೆ ಅವರಿಗೆ ಬೇಕಿಲ್ಲ.

  9. nagraj.harapanahalli

    ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಪೂರ್ಣಚಂದ್ರ ತೇಜಸ್ವಿ ಹೇಳುತ್ತಿದ್ದ ಹಾಗೆ ಅಂತರ್ ಜಾತಿ ವಿವಾಹಿತರಿಗೆ ನೌಕರಿಯಲ್ಲಿ ಮೀಸಲಾತಿ (ಒಂದು ತಲೆಮಾರಿಗೆ) ಯನ್ನು ಸರ್ಕಾರ ನಿಗದಿ ಮಾಡಿದಲ್ಲಿ , ಸ್ವಲ್ಪ ಬದಲಾವಣೆಗೆ ಮುನ್ನುಡಿ ಬರೆಯಬಹುದೇನೋ…

  10. prathibha nandakumar

    ಸಂಧ್ಯಾ , ನಾನು ಬೆಳೆದು ಬಂದ ಮನೆಯ ಪರಿಸರ ಹೇಗಿತ್ತೆಂದರೆ ಇದಕ್ಕೆ ತದ್ವಿರುದ್ಧವಾಗಿ ಸಂಪೂರ್ಣ ಬಿಚ್ಚುಮನಸ್ಸಿನ ಅಖಂಡ ಸಮಾನತೆಯ ಮನೆಯಲ್ಲಿ. ಗಾಂಧಿವಾದಿಗಳಾದ ನಮ್ಮ ಮನೆಯಲ್ಲಿ ಗಣೇಶ ಹಬ್ಬಕ್ಕೆ ಸಾಬರು ಕ್ರಿಸ್ಚಿಯನ್ ಗೆಳೆಯರು ಪಕ್ಕದ ಮನೆಯ ಗೌಡರು ಅಗಸರವಳು ಎಲ್ಲರೂ ಬರುತ್ತಿದ್ದರು ನಾವೆಲ್ಲಾ ಒಟ್ಟಿಗೇ ಕೂತು ಒಂದೇ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದೆವು. ನಮ್ಮ ತಂದೆ ತಾಯಿ ಅತ್ಯಂತ ಸರಳ ಮನಸ್ಸಿನವರಾಗಿದ್ದರು ನಮಗೂ ಅದನ್ನೇ ಕಲಿಸಿದರು. ತಿಂಗಳ ರಜೆ ಅನ್ನೋ ಪರಿಕಲ್ಪನೆಯೆಲ್ಲ ನಮಗೆ ಗೊತ್ತೇ ಇರಲಿಲ್ಲ. ತಿಂಗಳ ಅಷ್ಟೂ ದಿನಗಳು ನಮ್ಮಮ್ಮನೇ ಅಡಿಗೆ ಮಾಡುತ್ತಿದ್ದರು. ನಾವೂ ಯಾವುದೇ ಎಗ್ಗಿಲ್ಲದೇ ಬೆಳೆದೆವು. ನಾವು ಏಳು ಹೆಣ್ಣುಮಕ್ಕಳು ನಾಲ್ಕು ಗಂಡುಮಕ್ಕಳು. ಇದೆಲ್ಲ ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಮಾತು. ಅಂದಿನಿಂದ ಇಂದಿನವರೆಗೆ ನಮ್ಮ ಮನೆಯಲ್ಲಿ ಜಾತಿ ಮತ ದೇಶ ಯಾವುದೇ ಭೇಧವಿಲ್ಲದೇ ಮದುವೆಗಳಾಗಿವೆ, ಹದಿನೆಂಟು ಮೊಮ್ಮಕ್ಕಳು ಹುಟ್ಟಿ, ಆರು ಮರಿಮಕ್ಕಳು ಆಗಿದ್ದಾರೆ. ನಾನೂ ಪ್ರೀತಿಸಿ ಮದುವೆಯಾದೆನೇ ಹೊರತು ಜಾತಿ ನೋಡಿ ಅಲ್ಲ.
    ಹೀಗೆ ಬೆಳೆದ ನನಗೆ ಕನ್ನಡ ಸಾಹಿತ್ಯ ವಲಯದ ಕೆಲವು ದಿಗ್ಗಜರು ‘ನೀನು ಬ್ರಾಹ್ಮಣ ಹೆಣ್ಣು,ನಿನಗೆ ಸಮಾನತೆ ಗೊತ್ತಿಲ್ಲ ‘ ಎನ್ನುವ ಆರೋಪ ಹೊರಿಸಿದಾಗ ಇದೇ ರೀತಿ ಆಘಾತ ಅನುಭವಿಸಿ ಕಂಗಾಲಾಗಿದ್ದೆ. ಅವಮಾನ ಯಾವುದೇ ರೀತಿಯಲ್ಲಿ ಆದರೂ ಅವಮಾನವೇ. ದೇವನೂರರೂ ಕೂಡಾ ನನಗೆ ಮುನ್ನುಡಿ ಬರೆದುಕೊಡಲು ನಿರಾಕರಿಸಿದ್ದು ಇದೇ ಕಾರಣಕ್ಕಿರಬಹುದೇ ಅನ್ನುವ ಕಲ್ಪನೆಯೇ ನನಗೆ ಜ್ವರ ಬರುವಷ್ಟು ಹೆದರಿಕೆ ಹುಟ್ಟಿಸುತ್ತದೆ. ಅಪರಾಧಿಗಳನ್ನು ದೂಷಿಸಿ ಆದರೆ ಸಾರಾಸಗಟಾಗಿ ಎಲ್ಲರನ್ನೂ ತಳ್ಳಿಹಾಕುವುದು ಸರಿಯೇ ? ಬಹಳ ದಿನಗಳಿಂದ ಕಾಡುತ್ತಿದ್ದ ಸಂಗತಿ ಇದು. ಪ್ರತಿಭಾ ನಂದಕುಮಾರ್ .

    • ಸಂಧ್ಯಾರಾಣಿ

      ನನ್ನ ಲೇಖನ ಓದಿ, ಸ್ಪಂದಿಸಿದ್ದಕ್ಕೆ ಥ್ಯಾಂಕ್ಸ್ ಪ್ರತಿಭಾ ಮೇಡಂ. ನಮ್ಮ ಮನೆಯಲ್ಲಿ ನೀವು ಹೇಳಿದಂತಹುದೇ ವಾತಾವರಣ ಇತ್ತು. ನನ್ನ ತಂಗಿಯದೂ ಅಂತರ್ಜಾತಿ ಮದುವೆಯೇ. ಆದರೆ ನನ್ನ ಅಜ್ಜಿಯ ಮನೆಯಲ್ಲಿ ವಾತಾವರಣ ಹಾಗಿರಲಿಲ್ಲ, ಹಳ್ಳಿಯ ಎಲ್ಲಾ ಕಟ್ಟುಪಾಡುಗಳೂ ಇದ್ದ ಊರು, ಮನೆ ಅದು. ನಾನೇ ಕಂಡ ಹಾಗೆ ಅಲ್ಲಿದ್ದ ಒಂದೇ ಹೋಟಲ್ ನಲ್ಲಿ ದಲಿತರು ಹೊರಗೆ ಕೂತು, ಟೀ ಕುಡಿಯಬೇಕಿತ್ತು, ಅದಕ್ಕಾಗೇ ೪-೫ ಲೋಟಗಳಿಟ್ಟಿದ್ದರು, ಹೊರಗೆ. ಟೀ ಕುಡಿದು ಅವರು ಲೋಟ ತೊಳೆದು ಹೋಗಬೇಕಿತ್ತು. ಇದನ್ನೆಲ್ಲಾ ಪ್ರತಿ ದಿನ ನೋಡುತ್ತಿದ್ದರೂ ಆ ಅವಮಾನದ ಭಾವ ನನ್ನನ್ನು ತಾಕಿರಲೇ ಇಲ್ಲ, ನಾನು ಅದಕ್ಕೆ ಒಳಗಾಗುವವರೆಗೂ.
      ನೀವು ಹೇಳಿದ ಮಾತು ನಿಜ ಮೇಡಂ, ನನ್ನ ಒಬ್ಬ ಬ್ರಾಹ್ಮಣ ಗೆಳತಿ ಇದ್ದಾಳೆ, ಅವಳಷ್ಟು ಮುಕ್ತ ಮನೋಭಾವದ ಹೆಣ್ಣನ್ನು ನಾನು ನೋಡೇ ಇಲ್ಲ. ಹಾಗಾಗಿ ಜಾತಿಗೂ ಮನೋಭಾವಕ್ಕೂ ನಾನೆಂದೂ ನಂಟು ಹಾಕಲಾರೆ. ಹಾಗೆ ನಿಮ್ಮನ್ನು ಓದಿಕೊಂಡೇ ಬಂದ ನಾನು ನಿಮಗೂ, ಜಾತಿಗೂ ಸಹ ಗಂಟು ಹಾಕಲಾರೆ 🙂

      • prathibha nandakumar

        thanks sandhya

    • Aravind

      ದೇವನೂರರೂ ಕೂಡಾ ನನಗೆ ಮುನ್ನುಡಿ ಬರೆದುಕೊಡಲು ನಿರಾಕರಿಸಿದ್ದು ಇದೇ ಕಾರಣಕ್ಕಿರಬಹುದೇ ಅನ್ನುವ ಕಲ್ಪನೆಯೇ ನನಗೆ ಜ್ವರ ಬರುವಷ್ಟು ಹೆದರಿಕೆ ಹುಟ್ಟಿಸುತ್ತದೆ. What a pathetic statement from Prathibha. Cannot even believe it is the same Prathibha, the wonderful writer, made this comment. Devanooru has every right to reject your request if he feels so. I think you badly need some Crocin :). You will remain my favorite poet. But this thinking of yous certainly will flash in front of my eyes whenever I start reading you now on.

      • prathibha nandakumar

        aravind…. dont go all emotional. i love him more than you do… we are discussing a point here and i too have felt discrimination against me at a very crucial point in life because of my caste.

      • prathibha nandakumar

        also i had to give up a job to which i was 100% committed because of the discrimination. i am still hurt by that.

  11. Datta Raj

    ಯಾವುದೇ ನೋವು, ಅವಮಾನ ಕೇವಲ ಅರಿವಿನ ಮಟ್ಟದಲ್ಲಿಲ್ಲದೆ, ನಮ್ಮದೇ ಅನುಭವಕ್ಕೆ ಬಂದಾಗ ಅದು ನಮ್ಮನ್ನು ತಾಕುವ ತೀವ್ರತೆಯೇ ಬೇರೆ.

  12. jagadishkoppa

    ಸಂಧ್ಯಾರಾಣಿಯವರೇ, ನನ್ನ ಪತ್ನಿ ಅದ್ಭುತವಾಗಿ ಪುಳಿಯೊಗರೆ ಮಾಡ್ತಾಳೆ ದಯವಿಟ್ಟು ಒಮ್ಮೆ ಧಾರವಾಡಕ್ಕೆ
    ಬನ್ನಿ.
    ನಾನು ಎಂಟನೇ ತರಗತಿ ಓದುತ್ತಿದ್ದಾಗ, 1969ರಲ್ಲಿ ನನಗೆ ಗಣಿತದ ಮೇಷ್ಟರಾಗಿದ್ದ ನಾರಾಯಣ ರಾವ್ ಎಂಬ ಮೈಸೂರಿನ ಯುವಕ ನನ್ನನ್ನು ಮತ್ತು ಗೆಳೆಯರನ್ನು ಮೈಸೂರಿನ ಶೀವರಾಮಪೇಟೆಯಲ್ಲಿದ್ದ ಅವರ ಮನೆಗೆ ಕರೆದು ಊಟಹಾಕಿಸಿದರು. ಆ ದಿನ ಊಟ ಬಡಿಸಿದ ಅವರ ಅಜ್ಜಿ ನಮ್ಮ ಕೈಯಲ್ಲಿ ಬಾಳೆಎಲೆ ಎತ್ತಿಸಿ ಚರಂಡಿಗೆ ಹಾಕಿಸಿದರ. ನಂತರ ಊಟ ಮಾಡಿದ ಜಾಗವನ್ನು ಸಗಣಿಕೊಟ್ಟು ಸಾರಿಸಿದರು ಇದನ್ನು ನೋಡುತ್ತಿದ್ದ ನಮ್ಮ ಮೇಷ್ಟ್ರ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಅಂದಿನಿಂದ, ಈವರೆಗೂ ಯಾರಾದ್ರು ಬ್ರಾಹ್ಮಣ ಮಿತ್ರರು ಮನೆಗೆ ಊಟಕ್ಕೆ ಕರೆದರೆ, ” ನನ್ನ ಕೈಲಿ ಬಾಳೆ ಎಲೆ ಎತ್ತಿಸಿ ಹಾಕ್ಸೊಲ್ಲ ತಾನೆ? ” ಎಂದು ತಮಾಷೆಯ ನೆಪದಲ್ಲಿ ಅವರ ಮನೆಯ ವಾತಾವರಣವನ್ನು ಧೃಡಪಡಿಸಿಕೊಳ್ಳತ್ತೀನಿ.

    • ಸಂಧ್ಯಾರಾಣಿ

      ಕೊಪ್ಪ ಸರ್ ಅಡ್ವಾನ್ಸ್ ಥ್ಯಾಂಕ್ಯೂ ಪುಳಿಯೋಗರೆಗೆ! ಕೆಲವು ನೆನಪುಗಳನ್ನು ಮರೆಯುವುದು ಎಷ್ಟು ಕಷ್ಟ ಅಲ್ಲವಾ?

  13. Datta Raj

    ಈ ರೀತಿಯ ಅವಮಾನ ಗಳಳು ಕೇವಲ ಜಾತಿಯ ಕಾರಣದಿಂದ ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳಿಗಾಗಿ(ಕೆಲವರಿಗೆ) ಅನುಭವಕ್ಕೆ ಬರುತ್ತವೆ. ಇನ್ನೊಬ್ಬರನ್ನು ತುಳಿಯಲು ಜಾತಿ ಒಂದು ನೆಪ ಮಾತ್ರ. ಜಾತಿಯಂತಹ ಅನೇಕ ನೆಪಗಳನ್ನು ಸೃಷ್ಟಿಸಿಕೊಂಡು ಬಂದಿರುವುದು ಆ ಮನುಷ್ಯ ಸಹಜ ಕುತ್ಸಿತ ಮನೊಭಾವವೇ ಹೊರತು ಮತ್ತೆನಲ್ಲ. ಈ ತೆಲುಗು ಸಿನೆಮಾಗಳಲ್ಲಿ ವಿಲನ್ ಗಳನ್ನ ಮೊದಲ ದೃಶ್ಯದಲ್ಲಿ ಅಂತ್ಯಂತ ಕ್ರೂರಿಯಂತೆ ಮತ್ತು ಮಹಾನ್ ಶಕ್ತಿಶಾಲಿಯಂತೆ ತೊರಿಸಲಾಗುತ್ತದೆ. ಯಾಕೆಂದರೆ ಆ ಚಿತ್ರದ ಹೀರೋ ಆ ಶಕ್ತಿಶಾಲಿಯಾದ ಖಳನನ್ನು ಸೇದೆಬಡಿದಾಗ ನಾಯಕನ ಸಾಮಾರ್ಥ್ಯ ಉತ್ತುಂಗಕ್ಕೆರಿದಂತೆ. ವಿಲನ್ ವೀಕ್ ಇದ್ರೆ ಹೀರೋ ವೀಕ್. ವಿಲನ್ ಒಳ್ಳೆಯವನಾಗಿದ್ದರೆ ಹೀರೋ ಗೆ ಫೈಟ್ ಮಾಡುವ ಅವಕಾಶವೆ ಇರೊದಿಲ್ಲ. ಗ್ರೇಟ್ ಆಗಿ ಪೋಸ್ ಕೊಡೋಕೆ ಆಗೊದಿಲ್ಲ. ಹೀಗಾಗಿ ವಿಲನ್ ಕೆಟ್ಟವನು ಮತ್ತು ಅತೀ ಬಲಶಾಲಿ ಆಗಿರ್ತಾನೆ. ಆಗಲೇ ಪ್ರೇಕ್ಷಕರಿಗೆ ಮನೋರಂಜನೆ ಸಿಗೊದು. ಹೀಗೆ ನಮ್ಮ ಪಕ್ಕದವರನ್ನು ಕೀಳು ಮಟ್ಟದಲ್ಲಿ ಟ್ರೀಟ್ ಮಾಡುವುದರ ಮೂಲಕ ತಮ್ಮನ್ನು ತಾವು ಶ್ರೇಷ್ಠ ಅಂತ ಭಾವಿಸಿಕೊಳ್ಳುವ ಆತ್ಮರತಿ ಮಾನವನಲ್ಲಿ ಅತ್ಯಂತ ಸಹಜವಾಗಿ ಇರುವ ಗುನ. ನಮ್ಮ ಪೂರಿವ್ಕರು ಇದರಿಂದ ಹೊರತಾಗಿರಲಿಲ್ಲ. ಹೀಗಾಗಿ ಬೇರೆ ಯಾವುದೋ ಕಾರಣಕ್ಕೆ ಇದ್ದ ವರ್ಣ ವಿಭಜನೆ ಮತ್ತು ಆಚಾರ ವಿಚಾರಗಳನ್ನು ಅವುಗಳ ಮೂಲ ಉದ್ದೇಶ ಅರ್ಥ ತಿಳಿಯದೆ.. ”ಸಿಕ್ಕಿದ್ದೇ ಚಾನ್ಸು” ಅಂತ ಆ ಅಸ್ತ್ರಗಳನ್ನು ಹೀಗೆ ಸಹಜೀವಿಗಳನ್ನು ಕೀಳಾಗಿ ಕಂಡು ತಮ್ಮನ್ನು ತಾವು ವಿಜ್ರುಂಭಿಸಿ ಕೊಳ್ಳುವ ಹಪಹಪಿ. ಇದಕ್ಕೆ ಯಾವ ಶಾಸ್ತ್ರವೂ ಕಾರಣವಲ್ಲ. ಧರ್ಮವೂ ಕಾರಣವಲ್ಲ. ಮಾನವ ಎಲ್ಲವನ್ನು ತನ್ನು ಅನುಕೂಲಕ್ಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾನೆ.
    ಭಾರತಿ ಬಿವಿ ಯವರು ಹೇಳಿದ ಘಟನೆಯನ್ನೇ ಉದಾಹರಣೆಯಾಗಿ ತೊಗೊಳ್ಳಿ ಅಲ್ಲಿ ‘ಸ್ಮಾರ್ತರ ಮನೇಲಿ ಮಾಡಿದ್ದನ್ನ ನಾವು ತಿನ್ನಲ್ಲ ಕಣೇ’ ಅಂತ ಹೇಳಿದ ಆ ಸ್ನೇಹಿತೆ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರನ್ನು ಕೂರಿಸಿಕೊಂಡು ”ಸ್ಮಾರ್ತರು ಅಂದ್ರೆ ಏನು ಮಾಧ್ವರು ಅಂದ್ರೆ ಏನು? ” ಸ್ಮಾರ್ತರ ಮನೇಲಿ ಮಾಡಿದ್ದನ್ನ ನೀವು ತಿನ್ನಲು ಯೋಗ್ಯ ಅಲ್ಲ ಅಂತ ನಿಮಗೆ ಯಾರು ಹೇಳಿದ್ದು ?” ಅಂತ ಕೇಳಿದ್ದರೆ ಆ ಮನೆಯಲ್ಲಿ ಯಾರ ಬಳಿಯೂ ಈ ಎರಡು ಪ್ರಶ್ನೆಗಳಿಗೆ ಉತ್ತರ ಇರುತ್ತಿರಲಿಲ್ಲ. ಇಂದಿಗೂ ಕೂಡ ಅವರಲ್ಲಿ ಅಥವಾ ಅಂಥವರಲ್ಲಿ ಅದಕ್ಕೆ ಉತ್ತರವಿಲ್ಲ ಬಿಡಿ..
    ವರ್ಣದ ನಿಜ ಅರ್ಥ, ಮಡಿ ಮೈಲಿಗೆಗಳ ಹಿಂದಿನ ಉದ್ದೇಶ ಮುಂತಾದ ಯಾವುದೂ ಗೊತ್ತಿಲ್ಲದ ಜನ ಹೀಗೆ ವರ್ತಿಸುತ್ತಾರೆ. ಅದರಿಂದ ಶೋಷಣೆಗೊಳಗಾದ ಜನ ಸಂಪೂರ್ಣವಾಗಿ ಒಂದು ದೇಶ, ಜಾತಿ, ಧರ್ಮ ಮುಂತಾದವುಗಳನ್ನು ಸಾಮೂಹಿಕವಾಗಿ ವಿರೊಧಿಸತೊಡಗುತ್ತಾರೆ. ಆ ವಿರೋಧ ಕೆಲವೊಮ್ಮೆ ಜೀವನ ಪರ್ಯಂತ ಉಳಿದುಕೊಂಡು ಬಿಡುತ್ತದೆ.

  14. Somashekhar

    ಸಂಧ್ಯಾರಾಣಿ , ಅತ್ಯಂತ sensitive ಮತ್ತು ಮನಮುಟ್ಟುವ ಬರಹ . ನೀವು ಬಳಸಿರುವ ‘ಮಂದಲಿಗೆ ‘ ಪದ ನೋಡಿ ಖುಷಿಯಾಯಿತು . ಇಂತಹ ಅನೇಕ ಪದಗಳನ್ನು ಮರತೇಬಿಟ್ಟಿದ್ದಿವಿ ಅನ್ಸುತ್ತೆ . ಎಲ್ಲೆಡೆಯೂ dominate ಮಾಡುವ ಪುರುಷರ ಬರಹಗಳ ನಡುವೆ ನಿಮ್ಮ ಲೇಖನಗಳ ವಿಶಿಷ್ಟವಾಗಿ ಕಾಣುತ್ತವೆ . ಇದೇ ಮಾತನ್ನು ಭಾರತೀಯವರ ಬರಹಗಳಿಗೂ ಅನ್ವಯಿಸಬಹುದು

  15. Santhosh Shetty

    ಲೇಖನ ಉತ್ತಮವಾಗಿದೆ,ಅನುಭವವನ್ನು ನವೀರಾಗಿ ತೆರೆದಿಟ್ಟಿದ್ದೀರಿ..ಆದರೆ ೨ ಸಮಸ್ಯೆಗಳನ್ನು ಇದರಲ್ಲಿ ಗಮನಿಸಬಹುದು.. ೧. ನಿಮ್ಮ ಅನುಭವವನ್ನು ಅವಮಾನ ಎಂದು ಮಾರ್ಪಡಿಸಿ ಹೇಳುವ ಮುನ್ನ ಅದು ಅವರವರ ಸಂಪ್ರದಾಯ ಎಂದು ಏಕೆ ಅನ್ನಿಸಲಿಲ್ಲ, ಏಕೆಂದರೆ ಅದು ನಿಮ್ಮ ಮನೆಯಲ್ಲೂ ಇತ್ತು..
    ೨. ಲೇಖನದ ಕೊನೆಗೆ ಅಸಂಬದ್ದವಾಗಿ ದೇವನೂರು ರವರ ಹೆಸರನ್ನು ತಂದಿದ್ದೀರಿ..ಅಂದರೆ ನಿಮ್ಮ ಲೇಖನಕ್ಕೆ ನ್ಯಾಯಸಮ್ಮತತೆ ಒದಗಿಸಲು ಅವರ ಹೆಸರು ಬೇಕಾಗುತ್ತದೆಯೆ? ನಿಮ್ಮ ಅನುಭವವನ್ನು ಬರೆದು ಹಾಗೆಯೇ ಮುಗಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ನಂಬಿಕೆ.

    • ಸಂಧ್ಯಾರಾಣಿ

      ಸಂತೋಷ್ ಶೆಟ್ಟಿ ಅವರೆ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಆದರೆ ನಿಮಗೆ ಸಮಸ್ಯೆಯಾಗಿ ಕಂಡದ್ದು ನನಗೆ ಸಮಸ್ಯೆಯಾಗಿ ಕಾಣುತ್ತಿಲ್ಲ. ಮೊದಲನೆಯದಾಗಿ ಇಲ್ಲಿ ನನ್ನ ಅನುಭವವನ್ನು ಇಲ್ಲಿ ನಾನು ಅವಮಾನ ಎಂದು ’ಮಾರ್ಪಡಿಸಿ’ ಹೇಳುತ್ತಿಲ್ಲ. ನನಗೆ ನಿಜವಾಗಿಯೂ ಆಗಿದ್ದಿದ್ದು ಅವಮಾನವೇ. ನನ್ನ ಅಜ್ಜಿಗೆ ಅದು ಅವರ ಸಂಪ್ರದಾಯವಾಗಿ ಕಂಡಿತ್ತು, ಆದರೆ ನನಗಲ್ಲ. ನನಗೆ ಅನ್ನವನ್ನು ನನ್ನೆದುರು ಎಸೆಯುವುದು ಅವಮಾನವೇ ಆಗಿತ್ತು, ಮತ್ತು ಅದು ನನ್ನ ಅಜ್ಜಿಮನೆಯಲ್ಲೇ ಆದರೂ ತಪ್ಪು ಅನ್ನಿಸಿತ್ತು. ಅದನ್ನು ನಾನು ಮುಂದೆ ನನ್ನ ಜೀವನದಲ್ಲಿ ಎಂದೂ ಆಚರಿಸದಂತೆ ತಡೆಯುವ ಎಚ್ಚರಿಕೆ ಆಗಿತ್ತು ಅದು.
      ಎರಡನೆಯದಾಗಿ ಈ ಎಲ್ಲಾ ನೆನಪುಗಳೂ ಮತ್ತೆ ಮರುಕಳಿಸಿದ್ದು ದೇವನೂರರ ಪುಸ್ತಕ ಓದಿದಾಗ. ಈ ಅನುಭವದ ಹಿನ್ನಲೆಯಲ್ಲಿ ಆ ಪುಸ್ತಕ ನನಗೆ ಇನ್ನೂ ಹೆಚ್ಚು ಅರ್ಥಪೂರ್ಣ ಅನ್ನಿಸಿತ್ತು.

      • Annapoorna

        ಸಂಧ್ಯಾ, ಈ ಘಟನೆ ಜರುಗಿದಾಗ ನಿಮಗೆ ಆಗಿದ್ದು ನೋವು. ಅಂದಿನ ಆ ನೋವನ್ನು ಇಂದು “ಸಾಮಾಜಿಕ ಅಸಮಾನತೆ” ಎಂದು ಅರ್ಥೈಸಿ ಅವಮಾನವಾಗಿಸಿಕೊಂಡಿದ್ದೀರಿ.

        • ಸಂಧ್ಯಾರಾಣಿ

          ಅನ್ನಪೂರ್ಣ ಆ ಘಟನೆ ಸಹಜ ಮತ್ತು ಸರಿ ಅನ್ನಿಸಿದ್ದರೆ ಆಗ ನನಗೆ ನೋವು ಮಾತ್ರ ಆಗಿರುತ್ತಿತ್ತು. ಆದರೆ ಅದು ತಪ್ಪು ಅಂತ ಗೊತ್ತಿದೆ. ಆದ್ದರಿಂದ ಅದನ್ನು ಅವಮಾನವನ್ನಾಗಿ ’ಅರ್ಥೈಸಿ’ ಕೊಂಡಿಲ್ಲ. ನೋವು ತಿಂದವರು, ಅವಮಾನವನ್ನು ಅನುಭವಿಸಿದವರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು ಅಲ್ಲವಾ?

          • ಸಹನಾ

            “ಅವಮಾನವನ್ನು ಅನುಭವಿಸಿದವರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು ಅಲ್ಲವಾ?” ಈ ರೀತಿಯ ಸಾಲುಗಳು ಮುಂದೆ ಮಾತನಾಡಲೇ ಅವಕಾಶ ನೀಡಲಾರದು ಅಲ್ವಾ!!. ‘ಸಾಮಾಜಿಕ ಅನುಭವ’ objective ಅಲ್ಲ (ಅನುಭವಗಳಲ್ಲಿ ನೈಸರ್ಗಿಕ ಮತ್ತು ಸಾಮಾಜಿಕ ವಿಂಗಡಣೆಗಳಿವೆ. ಬೆಂಕಿ ಸುಡುತ್ತದೆ, ಮಂಜುಗಡ್ಡೆ ತಣ್ಣಗೆ ಕೊರೆಯುತ್ತದೆ, ಒಡೆದರೆ ನೋವಾಗುತ್ತದೆ… ಇವು ನೈಸರ್ಗಿಕ ಅನುಭವ ಮತ್ತು ಸಾರ್ವತ್ರಿಕವಾಗಿ ಎಲ್ಲೆಡೆ ಅನ್ವಯವಾಗಬಹದು. ಅದೇ, ಶೋಷಣೆ, ಅವಮಾನ, ಬಹುಮಾನ, ಶ್ರೇಷ್ಟತಾ ಭಾವ, ಕುಗ್ಗಿದ ಭಾವ ಇವು ಸಾಮಾಜಿಕ/ಸಾಂಸ್ಕೃತಿಕವಾದುದು.) ಅದು ಯಾವರೀತಿಯ ಸಾಮಾಜಿಕ/ಸಾಂಸ್ಕೃತಿಕ ಮೌಲ್ಯಗಳ ನೆಲೆಯಿಂದ ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಿಂತಿದೆ.
            ನಿಮ್ಮ ಅನುಭವದ ಘಟನೆಗಳು ಇಲ್ಲಿಯ ಸಮಾಜದ ಸರ್ವೇಸಾಮಾನ್ಯ ಘಟನೆಗಳಾಗಿದ್ದು ಆ ಸಮಾಜದ ಭಾಗವಾಗಿರುವ ಎಲ್ಲರಿಗೂ(ಕನಿಷ್ಟ ಮಹಿಳೆಯರಿಗಾದರೂ) ಅದೇ ರೀತಿಯ ಅನುಭವ (ಅವಮಾನದ ಅನುಭವ)ವಾಗುತ್ತದೆಯೇ? ಇಲ್ಲವೇ ನಿಮ್ಮರೀತಿಯ (ಸಾಮಾಜಿಕ ಮೌಲ್ಯಗಳನ್ನು) ಹೊಂದಿರುವವರಿಗೆ ಮಾತ್ರವೇ ಆಗುತ್ತಿದ್ದು ಉಳಿದ ಇತರರಿಗೆ ಅದೊಂದು ಅವಮಾನದ ಸಂಗತಿ ಎಂದೆನುಸುವುದಿಲ್ಲವೇ? ಎಲ್ಲರಿಗೂ ಅವಮಾನವೇ ಎಂದಾದಲ್ಲಿ ಅವರೆಲ್ಲರೂ ಅದನ್ನು ಹೇಡಿಗಳಂತೆ ಸಹಿಸಿಕೊಂಡು ಹೋಗುತ್ತಿದ್ದಾರೆ ತಮ್ಮಿಂದ (ತಮ್ಮಂತವರಿಂದ) ಮಾತ್ರ ಅದನ್ನು ಮೀರಿ ವರ್ತಿಸಲು ಸಾಧ್ಯವಾಗಿದೆಯೇ? ತಮ್ಮ ಉಧಾಹರಣೆಯನ್ನೇ ನೋಡುವುದಾದರೆ (ನನ್ನ ಅನುಭವದಲ್ಲೂ ಹೀಗೆಯೇ ಆಗಿದೆ) ಈ ರೀತಿ ಮೀರಿ ವರ್ತಿಸಿದರೆ (ಸಣ್ಣಪುಟ್ಟ ಹಿರಿಯರ ಮೂದಲಿಕೆಗಳನ್ನು ಹೊರತಾಗಿ) ಯಾವುದೇ ದೊಡ್ಡ ಪ್ರತಿರೋಧ ಇಲ್ಲವೇ ನಿಯಂತ್ರಣವನ್ನು ಹೇರುವುದು ಕಾಣುವುದಿಲ್ಲ. ಅಂದ ಮೇಲೆ ಇವನ್ನು ಮೀರಿ ವರ್ತಿಸುವುದು ಬಹುಸುಲಭ. ಹಾಗಿದ್ದರೂ ಅವರೆಲ್ಲರೂ ಹೇಡಿಗಳ ರೀತಿಯಲ್ಲಿ ಅವಮಾನಗಳನ್ನು ಸಹಿಸಿಕೊಂಡು ಅವನ್ನು ಅನುಭವಿಸಬೇಕಾದ ಅಗತ್ಯವೇನು? ನಿಮ್ಮ ಅವಮಾನದ ಅನುಭವಕ್ಕೂ ನಿಮ್ಮ ಶಿಕ್ಷಣದಲ್ಲಿ ಕಲಿತ (ಅನ್ಯ ಸಂಸ್ಕೃತಿಯ) ಸಾಮಾಜಿಕ ಮೌಲ್ಯಗಳಿಗೂ ಏನಾದರೂ ಸಂಬಂದವಿದೆಯೇ? ಈ ಸಾಮಾಜಿಕ ಮೌಲ್ಯಗಳೇ ಸಾರ್ವತ್ರಿಕ ಶ್ರೇಷ್ಟ ಎನ್ನುವುದೇನಾದರೂ ಕಂಡುಕೊಂಡಿದ್ದೀರಾ? ಅದನ್ನು ಅಳೆಯಲು ಅದೇ ಸಂಸ್ಕೃತಿಯ ಮೌಲ್ಯಗಳನ್ನೇ ಮಾನದಂಡವನ್ನಾಗಿ ಬಳಸಿದ್ದೀರಾ ಇಲ್ಲವೇ ಯಾವುದಾದರೂ objective ಆದ ಮಾನದಂಡವಿದೆಯೇ? ನನಗೆ ಗೊತ್ತಿರುವ ಹಾಗೆ ಸಾಂಸ್ಕೃತಿಕ/ಮೌಲ್ಯಗಳನ್ನು ಅಳೆಯಲು ಇದುವರೆಗೂ ಸಮಾಜವಿಜ್ಞಾನದ ಯಾವ ಶಾಖೆಯಲ್ಲೂ ಯಾವುದೇ ವೈಜ್ಞಾನಿಕ ಮತ್ತು nutral ಆದ ಮಾನದಂಡವಿಲ್ಲ. ಇರುವ ಮಾನದಂಡಗಳೆಲ್ಲವೂ ಪಶ್ಚಿಮ ಸಂಸ್ಕೃತಿಯ ಮಾನದಂಡಗಳೇ!!! ಹೀಗಿರುವಾಗ ನಮ್ಮ ಸಾಮಾಜಿಕ/ಸಾಂಸ್ಕೃತಿ ಸಂವೇಧನೆಯ ಬರವಣಿಗೆಗಳ ಚೌಕಟ್ಟು ಈ ಮಾನದಂಡಗಳೇ ಆದಾಗ ನಮ್ಮ ಬರವಣಿಗೆಗಳಲ್ಲಿ ಅಭಿವ್ಯವಕ್ತವಾಗುವ ಅನುಭವಗಳೂ ಅದರ ಫಲಿತವನ್ನೇ ಪ್ರತಿನಿಧಿಸುತ್ತವೆ. ಹೀಗೆ ನಮ್ಮ ಸಂವೇಧನೆಯ ಮಿತಿಯೂ ಆಗುತ್ತದೆ. ದುರಂತ ನೋಡಿ, ನಮ್ಮ ಅನುಭವ ನಮ್ಮದಲ್ಲ ಈ ಸಾಂಸ್ಕೃತಿಕ ಚೌಕಟ್ಟಿನ ಮೌಲ್ಯಗಳಿಂದ ಮೂಡುವುದು ಅದು ಅವಮಾನವಾದರೂ ಸರಿ, ಹೆಮ್ಮೆಯಾದರೂ ಸರಿ…

  16. Mushtaq

    ಅತ್ಯುತ್ತಮ ಬರಹ ಸಂಧ್ಯಾ ಮೇಡಂ,
    ನಮಗಾದ ಅವಮಾನವನ್ನ ಎಷ್ಟು ಬಯಸಿದರೂ ಮರೆಯಲಿಕ್ಕಾಗೋದಿಲ್ಲ . ಅದು ಏಕಾಂತದಲ್ಲಿ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಎಷ್ಟು ಸಾವರಿಸಿದರೂ ಪುನರಾವರ್ತಿಸುತ್ತದೆ. ಜಾತಿ ಪ್ರಕಾರವಲ್ಲದಿದ್ದರೂ ಇತರ ಕಾರಣಗಳಿಗಾಗಿ ನನಗೂ ಇಂತಹಾ ಅನವಶ್ಯಕ ಗೊಂದಲ ಪೂರಿತ ಅವಮಾನಗಳಾಗಿವೆ. ಅಂತರ್ಧರ್ಮ, ಅಂತರ್ದೇಶ, ಬಡವ-ಸಿರಿವಂತರ ಅಂತರ ಮತ್ತು ಇನ್ನೂ ಹೆಚ್ಚಿಗೆ ಹೇಳೋದಾದರೆ ಕೀಳರಿಮೆ ಹಾಗೂ ಮೇಲರಿಮೆಗಳ ಗೊಂದಲಗಳೂ ಮನುಷ್ಯನನ್ನು ಅವಮಾನಕ್ಕೀಡು ಮಾಡುತ್ತದೆ. ದೇವನೂರರು ಸಮಾಜದ ಸ್ಥಿತಿ-ಗತಿಗಳನ್ನು ಅಧ್ಯಯನ ಮಾಡಿಯೇ ದಲಿತರು ಮತ್ತು ಹೆಣ್ಮಕ್ಕಳು ಯೋಗ್ಯರಾಗಬೇಕಾದರೆ ದೀನರಾಗಬೇಕೆಂದು ಬರೆಯುತ್ತಾರೆ. ಹೌದು, ನಮ್ಮ ಸಮಾಜ ಅದನ್ನೇ ಒಪ್ಪಿಕೊಂಡು ಬಿಟ್ಟಿದೆ. ಆದರ್ಶವಾದಿಯಾದರೆ ಮಾತ್ರ ಈ ಪರಿಸ್ಥಿತಿ ಬದಲಾಗುವುದಿಲ್ಲ ಬದಲಿಗೆ ಮನುಕುಲವೆಲ್ಲಾ ಒಂದೇ ಎಂಬ ಪರಿಕಲ್ಪನೆಯುಲ್ಲ ಸಾಮಾಜಿಕ ಕ್ರಾಂತಿ ನಡೆಯಬೇಕು.

  17. Anjali Ramanna

    Sandhya endinante ninna baraha atee adbhuta! kannada saahityalOkada kusumagaLalli neenu obbaLu anta Avadhiyalli bandaddu, swalpavoo utprEkshe alla! Keep it up maa ! 🙂

    • ಸಂಧ್ಯಾರಾಣಿ

      Thank you Anjali Ramanna, ನಿನ್ನ ಎಂದಿನಂತಹ ಕಾಮೆಂಟ್ ಹಿಂದಿನ ತುಂಬು ಪ್ರೀತಿಗೆ ಧನ್ಯೋಸ್ಮಿ!

  18. ನಾಗರಾಜ್ ಹೆತ್ತೂರ್

    ಅದ್ಭುತ ಬರಹ ಮೇಡಂ.

  19. ಮಹದೇವ ಹಡಪದ

    ಬಹಳ ಒಳ್ಳೆಯ ಬರಹ… ಖರೇ ಮ್ಯಾಡಮ್
    ನಾಟ್ಯಶಾಸ್ತ್ರದಲ್ಲಿ ಸಾಧಾರಣೀಕರಣದ ಒಂದು ಮಾತು ಬರುತ್ತದೆ. ನಿಮ್ಮ ಬರಹವೂ ನಮ್ಮ ಅನುಭವ ಜಗತ್ತನ್ನು ಮತ್ತೊಂದು ಪದರಲ್ಲಿ ಕಾಡಿತು…

  20. Anil Talikoti

    ಅವಮಾನದ ಮಾನದಂಡಕ್ಕೆ ನಿಮ್ಮ ಈ ಹೇಳಿಕೆ ಅತ್ಯಂತ ಸರಿಯಾದದ್ದು ‘ಯಾವುದೇ ನೋವು, ಅವಮಾನ ಕೇವಲ ಅರಿವಿನ ಮಟ್ಟದಲ್ಲಿಲ್ಲದೆ, ನಮ್ಮದೇ ಅನುಭವಕ್ಕೆ ಬಂದಾಗ ಅದು ನಮ್ಮನ್ನು ತಾಕುವ ತೀವ್ರತೆಯೇ ಬೇರೆ’. ಇನ್ನೂವರೆಗೂ ಈ ಸಮಸ್ಯೆ ಜ್ವಲಂತವಾಗಿದೆ ಎಂಬುವದೆ ನಾಚಿಕೆಗೇಡು. ಬರಹಗಳಿಂದ ಇದನ್ನು ಬಗೆಹರಿಸಬಹುದಾಗಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತಲ್ಲವೇ? ಈ ಸಾರಿ ಬೆಂಗಳೂರಿಗೆ ಬಂದಾಗ ಹೇಗಾದರು ಮಾಡಿ ದೇವನೂರರ ಎಲ್ಲ ಬರಹಗಳನ್ನು ಓದಬೇಕು ಎಂದುಕೊಂಡಿದ್ದೆ -ಆದರೆ ಇಲ್ಲಿ ಪ್ರತಿಭಾ ನಂದಕುಮಾರ ಹೇಳಿರುವದು ‘ದೇವನೂರರೂ ಕೂಡಾ ನನಗೆ ಮುನ್ನುಡಿ ಬರೆದುಕೊಡಲು ನಿರಾಕರಿಸಿದ್ದು ಇದೇ ಕಾರಣಕ್ಕಿರಬಹುದೇ’ ಎನ್ನುವ ಮಾತು , ಮೊನ್ನೆ ಎಲ್ಲೋ ದೇವನೂರರೆ ಬರೆದಿದ್ದು ‘ಅಂಬೇಡ್ಕರ ಅವರನ್ನು ಸರಿಯಾಗಿ ಚಿತ್ರಿಸಿಲ್ಲದ್ದಕ್ಕೆ ಕದ್ದು ಮುಚ್ಚ್ಚಿ ಗಾಂಧಿ ನೋಡಬೇಕಾಯಿತು’ ಎಂಬುವದು ಇಂತಹ ಹೀನ ಅಮಾನವಿಯತೆಯ ಆಚರಣೆ,ನಡುವಳಿಕೆಗಳನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ವಿಫಲವಾಗುತ್ತಿರುವದಕ್ಕೆ ಸ್ವಲ್ಪ ಮಟ್ಟಿಗೆ ಕಾರಣವೇನೋ ಅನಿಸುತ್ತಿದೆ. ನನಗೆ ಸಧ್ಯಕ್ಕೆ ತಿಳಿದಿರುವ ಒಂದೆ ದಾರಿಯೆಂದರೆ ಆರ್ಥಿಕ ಸಮಾನತೆ ಎನಿಸುತ್ತದೆ. ಅದೊಂದೇ ಇದೆಲ್ಲವನ್ನು ಸಂಪೂರ್ಣವಾಗಿ ತೊಡೆದುಹಾಕಬಲ್ಲದು.
    -ಅನಿಲ ತಾಳಿಕೋಟಿ

  21. Anonymous

    ಹಲೋ ಸಂಧ್ಯಾ,
    ಶೋಷಣೆ ಆಗಬೇಕೆಂದಾದರೆ,ಆಗುತ್ತಿದೆ ಎಂದಾದರೆ… ಅದು ಮೇಲ್ಜಾತಿಯವರಿಂದಲೇ ಆಗುತ್ತದೆ ಎಂಬ ಸಾಮಾನ್ಯ ಅಭಿಪ್ರಾಯ ಎಷ್ಟೊಂದು ಅನುಚಿತ ಗೊತ್ತಾ? ಬಹುಶಃ ಈ ಅವಮಾನಕ್ಕೆ ಮುಖ್ಯ ಕಾರಣಗಳಾಗುವ ನಮ್ಮ ಬಯಕೆಗಳು, ಇಷ್ಟಗಳು,ಪ್ರೀತಿ,ಪುಳಿಯೊಗರೆ….ಇತ್ಯಾದಿಗಳು ನಮಗ್ಯಾರಿಗೂ ಮುಖ್ಯ ಎನ್ನಿಸುವುದೇ ಇಲ್ಲ.ಶೋಷಣೆ ಅಧೋಮುಖವಾಗಿದೆ,ಅದು ಬಲವಾಗಿದೆ ಎನ್ನುವುದಕ್ಕಿಂತಲೂ ಅದು ಊರ್ದ್ವಮುಖವಾಗಿಯೂ ಇದೆ ಮತ್ತು ಕಲ್ಪಿಸಿಕೊಳ್ಳಲಾರದಷ್ಟೂ ಹೀನಾಯವಾಗಿದೆ.ಮತ್ತೂ ಘೋರವೆಂದರೆ ನಿಶಬ್ದವಾಗಿದೆ.
    ಸಂಧ್ಯಾ…ಮೇಲ್ಜಾತಿಯವರ ಶೋಷಣೆಯ ಮುಖ ಸರಿ. ಇನ್ನು ಸವರ್ಣೀಯ ಹುಡುಗಿಯರನ್ನು ಸೇಡಿಗಾಗಿ ಮದುವೆಯಾಗಿ ,ನಡುನೀರಲ್ಲಿ ಕೈಬಿಟ್ಟ ದಲಿತ ಮತ್ತು ಹಿಂದುಳಿದ ವರ್ಗದ ಹುಡುಗರು ಇದ್ದಾರೆ. ಇನ್ನು ಸವರ್ಣೀಯ ಹುಡುಗಿಯರು ಜಾತಿಯ ಚೌಕಟ್ಟು ಮೀರಿ , ದಲಿತ ಹುಡುಗರನ್ನು ಮದುವೆ ಯಾದರೆ , ಅವರನ್ನ ಗೋಳು ಹೊಯ್ದುಕೊಳ್ಳುವ ಮನಸ್ಥಿತಿಯ ದಲಿತ ಹುಡುಗರು ಇದ್ದಾರೆ. ಬದುಕಿನ ಮೇಲ್ಮಟ್ಟಕ್ಕೆ ಉನ್ನತೀಕರಣಗೊಳ್ಳಲು ತಯಾರಿಲ್ಲದ ಹುಡುಗರು ಯಾಕಾಗಿ ಸವರ್ಣೀಯ ವರ್ಗದ ಹುಡುಗಿಯರನ್ನು ಮದುವೆಯಾದರೂ , ಸೇಡಿಗಾಗಿಯೇ …ಈ ಕುರಿತು ಕೆಲ ತಾಜಾ ಉದಾಹರಣೆ ನೀಡಿದರೆ ಮೈನಡುಗುತ್ತ್ದೆ
    ಸವರ್ಣೀಯ ಹುಡುಗಿ ,ತನ್ನ ಗೌಡಿಕೆಮನೆತನದ ಆಚರಣೆಗಳಿಂದ ರೋಸಿ,ಸಮಾಜ,ಪರಿಸರ ಮತ್ತು ಸಾಹಿತ್ಯದ ಪ್ರಭಾವದಿಂದ ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಿ, ಮನೆ ಸಮಾಜವನ್ನು ಎದುರಿಸಿ,ಆಂತರಿಕ ಮಾನಸಮ್ಮಾನಗಳನ್ನು ಬದಿಗಿಟ್ಟು , ಮುದ್ದಾದ ಮಕ್ಕಳನ್ನು ಹಡೆದು , ಹುಡುಗನಿಗೆ ಓದಿಸಿ,ನೌಕರಿ ಕೊಡಿಸಿಯೂ ಸಹ ಆತ ಕೀಳರಿಮೆಯಿಂದ ಬಳಲುತ್ತಿದ್ದರೆ ,ತನ್ನ ಒಳಪದರಿಗೆ ಅವಳನ್ನ ಕರೆದುಕೊಳ್ಳದೆ,ತಾನೂ ಅವಳ ಸನ್ನಿಧಿಗೆ ಬರದೆ….ಒಂಟಿಯಾಗಿಸಿ ಅವಮಾನಿಸುವ,ಶೋಷಿಸುವ ಪರಿಗೆ, ಮಕ್ಕಳೊಂದಿಗೆ ತತ್ತರಿಸುತ್ತಿರುವ… ,ಉನ್ನತ ಹುದ್ದೆಯಲ್ಲಿದ್ದರೂ ನಿಭಾಯಿಸಲಾಗದೆ,ಸಮಾಜದ ವಕ್ರದೃಷ್ಟಿಗೆ ಒಂಟಿಯಾಗಿ ಬಲಿಯಾಗುತ್ತಿರುವ,ಆದಾಗ್ಯೂ ಬದುಕಲ್ಲದ ಬದುಕನ್ನ ಬದುಕುತ್ತಿರುವ,ಆದರ್ಶದ ಬೆನ್ನು ಹತ್ತಿದ, ಭಾವನೆಗಳ ಬೆನ್ನು ಹತ್ತಿದ ಹುಡುಗಿ ಏನು ಮಾಡಬೇಕು…? ಹಾಗಂತ ದಲಿತರು , ಸವರ್ಣೀಯರು ಪ್ರೀತಿಸಿ ಮದುವೆ ಯಾಗಬಾರದೇ?; ಮನುಷ್ಯ ಮೂಲತಃ ನೀಚ ನಾಗಿದ್ದು,ಆತ ಸಂಸ್ಕಾರ ಗೊಳ್ಳದಿದ್ದರೆ, ಉನ್ನತ ಮನಸ್ಥಿಗೆ ಏರಲು ಸಿದ್ದನಿರದಿದ್ದರೆ,ತನ್ನನ್ನ ತಾನು ತಿದ್ದಿಕೊಳ್ಳದಿದ್ದರೆ …. ಎಲ್ಲವೂ ಅರ್ಥ ಹೀನ ವಾಗಿಬಿಡಬಹುದು.
    ಇದಕ್ಕೆ ಉತ್ತರಿಸುವಿರಾ?

  22. ವಿದ್ಯಾ.ಕುಂದರಗಿ.

    ಹಲೋ ಸಂಧ್ಯಾ,
    ಶೋಷಣೆ ಆಗಬೇಕೆಂದಾದರೆ,ಆಗುತ್ತಿದೆ ಎಂದಾದರೆ… ಅದು ಮೇಲ್ಜಾತಿಯವರಿಂದಲೇ ಆಗುತ್ತದೆ ಎಂಬ ಸಾಮಾನ್ಯ ಅಭಿಪ್ರಾಯ ಎಷ್ಟೊಂದು ಅನುಚಿತ ಗೊತ್ತಾ? ಬಹುಶಃ ಈ ಅವಮಾನಕ್ಕೆ ಮುಖ್ಯ ಕಾರಣಗಳಾಗುವ ನಮ್ಮ ಬಯಕೆಗಳು, ಇಷ್ಟಗಳು,ಪ್ರೀತಿ,ಪುಳಿಯೊಗರೆ….ಇತ್ಯಾದಿಗಳು ನಮಗ್ಯಾರಿಗೂ ಮುಖ್ಯ ಎನ್ನಿಸುವುದೇ ಇಲ್ಲ.ಶೋಷಣೆ ಅಧೋಮುಖವಾಗಿದೆ,ಅದು ಬಲವಾಗಿದೆ ಎನ್ನುವುದಕ್ಕಿಂತಲೂಅದು ಊರ್ದ್ವಮುಖವಾಗಿಯೂ ಇದೆ ಮತ್ತು ಕಲ್ಪಿಸಿಕೊಳ್ಳಲಾರದಷ್ಟೂ ಹೀನಾಯವಾಗಿದೆ.
    ಮೇಲ್ಜಾತಿಯವರ ಶೋಷಣೆಯ ಮುಖ ಸರಿ. ಇನ್ನು ಸವರ್ಣೀಯ ಹುಡುಗಿಯರನ್ನು ಸೇಡಿಗಾಗಿ ಮದುವೆಯಾಗಿ ,ನಡುನೀರಲ್ಲಿ ಕೈಬಿಟ್ಟ ದಲಿತ ಮತ್ತು ಹಿಂದುಳಿದ ವರ್ಗದ ಹುಡುಗರು ಇದ್ದಾರೆ. ಇನ್ನು ಸವರ್ಣೀಯ ಹುಡುಗಿಯರು ಜಾತಿಯ ಚೌಕಟ್ಟು ಮೀರಿ , ದಲಿತ ಹುಡುಗರನ್ನು ಮದುವೆ ಯಾದರೆ, ಅವರನ್ನ ಗೋಳು ಹೊಯ್ದುಕೊಳ್ಳುವ ಮನಸ್ಥಿತಿಯ ದಲಿತ ಹುಡುಗರು ಇದ್ದಾರೆ. ಬದುಕಿನ ಮೇಲ್ಮಟ್ಟಕ್ಕೆ ಉನ್ನತೀಕರಣಗೊಳ್ಳಲು ತಯಾರಿಲ್ಲದ ಹುಡುಗರು ಯಾಕಾಗಿ ಸವರ್ಣೀಯ ವರ್ಗದ ಹುಡುಗಿಯರನ್ನು ಮದುವೆಯಾದರೂ , ಸೇಡಿಗಾಗಿಯೇ …ಈ ಕುರಿತು ಕೆಲ ತಾಜಾ ಉದಾಹರಣೆ ನೀಡಿದರೆ ಮೈನಡುಗುತ್ತ್ದೆ
    ಸವರ್ಣೀಯ ಹುಡುಗಿ ,ತನ್ನ ಗೌಡಿಕೆಮನೆತನದ ಆಚರಣೆಗಳಿಂದ ರೋಸಿ,ಸಮಾಜ,ಪರಿಸರ ಮತ್ತು ಸಾಹಿತ್ಯದ ಪ್ರಭಾವದಿಂದ ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಿ, ಮನೆ ಸಮಾಜವನ್ನು ಎದುರಿಸಿ,ಆಂತರಿಕ ಮಾನಸಮ್ಮಾನಗಳನ್ನು ಬದಿಗಿಟ್ಟು , ಮುದ್ದಾದ ಮಕ್ಕಳನ್ನು ಹಡೆದು , ಹುಡುಗನಿಗೆ ಓದಿಸಿ,ನೌಕರಿ ಕೊಡಿಸಿಯೂ ಸಹ ಆತ ಕೀಳರಿಮೆಯಿಂದ ಬಳಲುತ್ತಿದ್ದರೆ ,ತನ್ನ ಒಳಪದರಿಗೆ ಅವಳನ್ನ ಕರೆದುಕೊಳ್ಳದೆ,ತಾನೂ ಅವಳ ಸನ್ನಿಧಿಗೆ ಬರದೆ….ಒಂಟಿಯಾಗಿಸಿ ಅವಮಾನಿಸುವ,ಶೋಷಿಸುವ ಪರಿಗೆ, ಮಕ್ಕಳೊಂದಿಗೆ ತತ್ತರಿಸುತ್ತಿರುವ… ,ಉನ್ನತ ಹುದ್ದೆಯಲ್ಲಿದ್ದರೂ ನಿಭಾಯಿಸಲಾಗದೆ,ಸಮಾಜದ ವಕ್ರದೃಷ್ಟಿಗೆ ಒಂಟಿಯಾಗಿ ಬಲಿಯಾಗುತ್ತಿರುವ,ಆದಾಗ್ಯೂ ಬದುಕಲ್ಲದ ಬದುಕನ್ನ ಬದುಕುತ್ತಿರುವ, ಆದರ್ಶದ ಬೆನ್ನು ಹತ್ತಿದ , ಭಾವನೆಗಳ ಬೆನ್ನು ಹತ್ತಿದ ಹುಡುಗಿ ಏನು ಮಾಡಬೇಕು…? ಹಾಗಂತ ದಲಿತರು , ಸವರ್ಣೀಯರು ಪ್ರೀತಿಸಿ ಮದುವೆ ಯಾಗಬಾರದೇ?; ಮನುಷ್ಯ ಮೂಲತಃ ನೀಚ ನಾಗಿದ್ದು , ಆತ ಸಂಸ್ಕಾರ ಗೊಳ್ಳದಿದ್ದರೆ , ಉನ್ನತ ಮನಸ್ಥಿಗೆ ಏರಲು ಸಿದ್ದನಿರದಿದ್ದರೆ,ತನ್ನನ್ನ ತಾನು ತಿದ್ದಿಕೊಳ್ಳದಿದ್ದರೆ …. ಎಲ್ಲವೂ ಅರ್ಥ ಹೀನ ವಾಗಿಬಿಡಬಹುದು.

  23. Pramod

    ಶೋಷಣೆ, ಅವಮಾನ ನೆವರ್ ಎ೦ಡಿ೦ಗ್ ಫಿನೋಮಿನ. ಅ೦ದು ಮೇಲ್ಜಾತಿ ಕೀಳ್ಜಾತಿ ನಡುವಿತ್ತು. ಇ೦ದು ಹಣ, ಅ೦ತಸ್ತಿಗೆ ಬ೦ದಿದೆ. ನಾಳೆ ಇನ್ನೊ೦ದು ತರಹ. ಮುಖವಾಡ ಬೇರೆ. ಶೋಷಣೆ ನಿರ೦ತರ, ವಿಪರ್ಯಾಸ.

  24. Anonymous

    ದೇವನೂರ ಮಹಾದೇವ ಯಾರಿಗೂ ಮುನ್ನುಡಿ ಬರೆದಿಲ್ಲ. ಅದು ಅವರ ಇಷ್ಟ. ತಮಗೆ ಒಗ್ಗದ್ದರಿಂದ ಅವರು ಸದಾ ದೂರ.ಪೀತ ಕಣ್ಣುಗಳಿಗೆ ಎಲ್ಲವೂ ಹಳದಿಯಾಗೇ ಕಾಣುತ್ತವೆ!

    • ವಿಜಯ್

      ಇತ್ತ ಇದ್ದವರಿಗೆ ಅತ್ತ ಹಳದಿ..ಅತ್ತ ಇದ್ದವರಿಗೆ ಇತ್ತ ಹಳದಿ..ಆದರೂ ಸಂಬಂಜ ಅನ್ನೋದು ದೊಡ್ಡದು ಕಣ್ಲಾ..:). ಈ ದೇಶವನ್ನು ಕಾಡಿದ್ದು ಇಬ್ಬರು ಒಬ್ಬ ಮನು, ಮತ್ತೊಬ್ಬ ವಾತ್ಸಾಯನ ಮುನಿ (ಈ ಸಾಹೇಬರು ಲಕ್ಕಿ..ಇವರ ಬಗ್ಗೆ ಒಬ್ಜೆಕ್ಷನ್ ಮಾಡುವವರು ಕಡಿಮೆ..ನಮ್ಮ ನಾಗರಾಜವರು ಕೂಡ ಒಬ್ಜೆಕ್ಷನ್ ಮಾಡಲಿಲ್ಲ!) …ಶತ ಶತಮಾನಗಳಿಂದ ಜನಮಾನಸದಲ್ಲಿ ಇವರು ಬೀಡು ಬಿಟ್ಟು ಈಗಿರುವ ಎಲ್ಲ ಸಮಸ್ಯೆ ಸೃಷ್ಟಿಸಿದರು..ಇಲ್ಲಾ ಅಂತೀರಾ?

    • prathibha nandakumar

      same applies to a lot of others too….! my point was that. and read it carefully again…

    • prathibha nandakumar

      dear anonymous i love him more than you do… and he is my best friend!! i was only making a point here ….

      • Anonymous

        ದೇವನೂರರನ್ನು ಇಷ್ಟಪಡುವವರು ಬಹಳಷ್ಟು ಜನ ಇದ್ದಾರೆ.ನನ್ನ ಇಷ್ಟವನ್ನಾಗಲೀ ನಿಮ್ಮ ಇಷ್ಟವನ್ನಾಗಲೀ ತಕ್ಕಡಿ ಇಟ್ಟು ತೂಗಿದ್ದರೆ ಯಾರದು ಹೆಚ್ಚು ಎಂದು ನಿಧಱರಿಸಬಹುದಿತ್ತು!ಆದರೆ ಅದು ಮುಖ್ಯವೇ ಅಲ್ಲ. ಅವರಿಗೆ ಬೆಸ್ಟ್ ಫ್ರೆಂಡ್ ಯಾರು ಅಂತ ಕೇಳಿ ನೋಡಿ! ಅವರು ನಿಮಗೆ ಮುನ್ನುಡಿ ಬರೆಯದೇ ಇರಲು ಜಾತಿ ಕಾರಣ ಅಲ್ಲ ಅಷ್ಟೇ.ಅವರು ಬ್ರಾಹ್ಮಣರಲ್ಲದವರಿಗೂ…ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ದಲಿತರಿಗೂ ಮುನ್ನುಡಿ ಬರೆದಿಲ್ಲ! ಅವರನ್ನು ಸರಿಯಾಗಿ ಅಥಱಮಾಡಿಕೊಂಡವರಿಗೆ ಅವರು ಮುನ್ನುಡಿ ಬರೆಯದಿರುವ ಕಾರಣ ಗೊತ್ತಿರುತ್ತೆ! ಅವರನ್ನು ಅನುಮಾನಿಸುವುದು ಮುಗ್ಧ ಮಗುವನ್ನು ಅನುಮಾನಿಸಿದಷ್ಟೇ ಅವಿವೇಕದ ಕೆಲಸ.

        • prathibha nandakumar

          ಅನಾಮಿಕರೇ … ನಾನು ಹೇಳಿದ್ದು ಅದನ್ನೇ … ಒಂದು ಸರಳ ಕಲ್ಪಿತ ಅನುಮಾನವನ್ನೂ ಸಹ ಸಹಿಸಲಾಗದ ಜನರ ನಡುವೆ ನಾವು ಬದುಕುತ್ತಿದ್ದೇವೆ.ಅದರ ಬಗ್ಗೆ ನಾನೇ ಅವರ ಜೊತೆ ಎಷ್ಟೋ ಸಲ ಸಲಿಗೆಯಿಂದ ಗುದ್ದಾಡಿದ್ದೇನೆ. ಸರಳ ಕಲ್ಪಿತ ಅಂತ ಹೇಳಿದ್ದು ಅದಕ್ಕೇ. “ಅವರನ್ನು ಅನುಮಾನಿಸುವುದು ಮುಗ್ಧ ಮಗುವನ್ನು ಅನುಮಾನಿಸಿದಷ್ಟೇ ಅವಿವೇಕದ ಕೆಲಸ.” ನನ್ನ ನಂಬಿಕೆಯನ್ನು ಅನುಮಾನಿಸಿದಾಗ ನನಗಾದ ಸಂಕಟ ಇಷ್ಟೇ ಇರುತ್ತದೆ.

          • Anonymous

            ನಿಮ್ಮ ವಿತಂಡವಾದಕ್ಕೆ ಹಠಮಾರಿತನಕ್ಕೆ ಯಾವ ಮದ್ದೂ ಇಲ್ಲ!ನೀವೇ ಏನೆಲ್ಲ ಕಲ್ಪಿಸಿಕೊಂಡು ಅವಮಾನಿತರಾಗುತ್ತೀರೋ ಸುಖಿಸುತ್ತೀರೋ ಅದು ನಿಮ್ಮ ಹಣೆಬರಹ! ಗುಡ್ ಬೈ.

          • prathibha nandakumar

            idanne naanu nimagU helidare?

  25. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಸಂಧ್ಯಾರಾಣಿಯವರೇ, ನಮ್ಮ ಸಮಾಜದಲ್ಲಿರುವ ಘೋರ ಅಮಾನವೀಯ ಪದ್ಧತಿಯನ್ನು ನೆನಪಿಸಿಕೊಂಡಿರುವುದು ಚೆನ್ನಾಗಿದೆ ಮತ್ತು ಪ್ರಸ್ತುತವೂ ಆಗಿದೆ .
    ನಾನು ಒಬ್ಬ ಸ್ಮಾರ್ತ ಬ್ರಾಹ್ಮಣ . ನನ್ನ ಒಬ್ಬ ಮಾಧ್ವ ಗೆಳೆಯರು (ಜಾತಿವಾದಿಗಳಲ್ಲ )- “ನಮ್ಮಜ್ಜಿ ಊಟ ಮಾಡುವಾಗ ಸ್ಮಾರ್ತರು ಮಾತನಾಡಿದ ಧ್ವನಿ ಕೇಳಿದರೆ ಸಾಕು ಕೈ ತೊಳ್ಕೊಂಡ್ ಬಿಡ್ತಾರೆ “. ಅಂತ ಹೇಳಿದಾಗ ನನಗೂ ಹಾಗೆಯೇ ಮನಸ್ಸಿಗೆ ಆಘಾತವಾದಂತಾಗಿ ,ಸಿಟ್ಟುಗೊಂಡೆ . ‘ಎಷ್ಟು ಕೊಬ್ಬು !’ ಅಂತ ಅಂದ್ಕೊಂಡೆ . ಆದರೆ ಹಾಗೆ ಹೇಳ್ಲಿಲ್ಲ ಅಷ್ಟೇ . ನೀವು ಹೇಳಿದ ಹಾಗೆ ಅಲ್ಲಿಯವರೆಗೆ ಈ ಭೇದಭಾವದ ನೋವು ಅರಿವಿನ ಮಟ್ಟದಲ್ಲೇ ಇತ್ತೇ ಹೊರತು ಅನುಭವದ ಮಟ್ಟದ ಮನಸ್ಸಿನ ಯಾತನೆಯಾಗಿರಲಿಲ್ಲ .
    ಸ್ವಾಮಿ ವಿವೇಕಾನಂದರು ,” ಅಸ್ಪುಶ್ಯತೆ ಎಂಬ ಈ ಪದ್ಧತಿ ಭಾರತವನ್ನು ಪ್ರಪಂಚದ ಇತರ ದೇಶಗಳ ಎದುರು ತಲೆತಗ್ಗಿಸುವಂತೆ ಮಾಡಿದೆ ” “ಜನಸಾಮಾನ್ಯರನ್ನು ಕಡೆಗಣಿಸಿದ್ದು ಅತಿ ದೊಡ್ಡ ರಾಷ್ಟ್ರೀಯ ಪಾಪವೆಂದು ನಾನು ಪರಿಗಣಿಸುತ್ತೇನೆ ಅದು ನಮ್ಮ ಅವನತಿಯ ಕಾರಣಗಳಲ್ಲೊಂದು . “ಎಂದು ಸ್ಪಷ್ಟವಾಗಿ ಹೇಳಿದ್ದಾರೆ .
    ಇದು ಅರ್ಥವಾಗುವುದು ಬಹಳ ಕಷ್ಟ . ಅರಿವು ಮತ್ತು ಮಾನವೀಯ ಮನಸ್ಸಿನಿಂದ ಮಾತ್ರ ಸಾಧ್ಯ . ಜಾಗತೀಕರಣದ ಪರಿಣಾಮವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಇಂದಿನ ಬಂಡವಾಳಶಾಹಿ ಸನ್ನಿವೇಶದಲ್ಲಿ ಸತ್ಯದ ಅರಿವಾಗಲಿ ಹೃದಯ ವೈಶಾಲ್ಯವಾಗಲಿ ಮರೀಚಿಕೆಯಷ್ಟೇ .
    ಅಂಬೇಡ್ಕರ್ ರವರ ಸಿಂಹಧ್ವನಿ ಮತ್ತೆ ಮತ್ತೆ ಮೊಳಗುತ್ತಿರಬೇಕು . ದಲಿತರು ಹಿಂದುಳಿದವರು ಸಶಕ್ತರಾಗಬೇಕು . ತಮ್ಮನ್ನು ಕೀಳಾಗಿ ನೋಡುವವರ ಕೊರಳಪಟ್ಟಿ ಹಿಡಿದು ಪ್ರಶ್ನಿಸಬೇಕು . ಶೂದ್ರರು ಮತ್ತು ಅತಿ ಶೂದ್ರರು ಈ ಘೋರ ಅಂತರ ಕಾಲಾನುಗತವಾಗಿ ಬೆಳೆದುಕೊಂಡು ಬಂದ ವಂಚನೆಯೆ ಹೊರತು ಯಾವ ವಿಧಿ ನಿಯಾಮಕವು ಅಲ್ಲ ಎಂಬುದನ್ನು ಖಚಿತವಾಗಿ ಅರ್ಥಮಾಡಿಕೊಂಡು ಅದರ ವಿರುದ್ಧ ಆತ್ಮವಿಶ್ವಾಸದಿಂದ ಹೋರಾಡಬೇಕು . ಹೀಗೆಯೇ ಒಂದಷ್ಟು ಶತಮಾನಗಳು (ಮೇಲ್ವರ್ಗದವರ ಸ್ವಾರ್ಥಸಾಧನೆ ಇದ್ದೆ ಇರುತ್ತದೆ !) ಸಾಗಿದರೆ ಏನಾದರೂ ಸಮಾನತೆ ಸಾಧ್ಯವಾದೀತು! .

    • ವಿಜಯ್

      .ಕೆಳಗೆ ಒಂದು ಕಮೆಂಟಿನಲ್ಲಿ (ಭಾರತಿಯವರದು) ಸ್ಮಾರ್ತ ಬ್ರಾಹ್ಮಣರಿಗೆ ಮಾಧ್ವ ಬ್ರಾಹ್ಮಣರು ಅವಮಾನ ಮಾಡಿದರೆ, ಇಲ್ಲಿ ಮಾಧ್ವರಾದ ಲಕ್ಷ್ಮಿನಾರಾಯಣರಿಗೆ ಸ್ಮಾರ್ತರು ಅವಮಾನ ಮಾಡಿದ್ದಾರೆ.. ಹೀಗಿದ್ದಾಗೂ “ಅಂಬೇಡ್ಕರ್ ರವರ ಸಿಂಹಧ್ವನಿ ಮತ್ತೆ ಮತ್ತೆ ಮೊಳಗುತ್ತಿರಬೇಕು . ದಲಿತರು ಹಿಂದುಳಿದವರು ಸಶಕ್ತರಾಗಬೇಕು . ತಮ್ಮನ್ನು ಕೀಳಾಗಿ ನೋಡುವವರ ಕೊರಳಪಟ್ಟಿ ಹಿಡಿದು ಪ್ರಶ್ನಿಸಬೇಕು” ಎಂಬ ಉಚಿತ ಸಲಹೆಯನ್ನು ಲಕ್ಷ್ಮಿನಾರಾಯಣರು ಕೆಳವರ್ಗದ ಬಂಧುಗಳಿಗೆ ಕೊಟ್ಟಿದ್ದಾರೆ!. ನಿನ್ನೆ ಮತ್ತೊಂದು ಲೇಖನದಲ್ಲಿ (ಮೋಹನ ಕೊಳ್ಳೆಗಾಲರದ್ದು), ಮೇಲ್ವರ್ಗದ ವಿರುದ್ಧ ಉಗ್ರ ಹೋರಾಟ ನಡೆಸುವ ಗೆಳೆಯನ ಮನೆಯಲ್ಲಿರುವ ವೈರುಧ್ಯದ ಚಿತ್ರಣವಿದೆ..ಯಾರಾದರೂ ಬ್ರಾಹ್ಮಣರವನು ಮನೆಗೆ ಬಂದರೆ, ಕೆಡುಕಾಗಬಾರದೆಂದು ಮನೆ ತೊಳೆಯುವವರ ಬಗ್ಗೆಯೂ ಕೇಳಿದ್ಧೇನೆ. ಮೋಹನ ಹೇಳಿದ ಹಾಗೆ ಬಿಟ್ಟೆನೆಂದರೆ……..
      ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ತರಹದ ಅವಮಾನ ಅನುಭವಿದೆಯೇ (ಜಾತಿ,ರೂಪ,ಅಂತಸ್ತು,ಬುದ್ಧಿವಂತಿಕೆ,ಲಿಂಗ) ಯಾರಾದರೂ ಮೇಲೆ ಬಂದಿದ್ದಾರೆಯೋ ಎಂಬುದೊಂದು ಸಮೀಕ್ಷೆ ಮಾಡಬೇಕು. ಈ ‘ಅವಮಾನ’ವನ್ನು ಅಳೆಯಲು ಒಂದು ಅಳತೆಗೋಲು ಮಾಡಿಕೊಳ್ಳಬೇಕು..ಯಾವೊಂದು ಅವಮಾನ ಇಲ್ಲದೇ ಸುಖರೂಪದಿಂದ ಮೇಲೆ ಬಂದು, ಇದ್ದು, ಬದುಕು ಮುಗಿಸಿ ಹೋದವನಿಗೆ ಮರಣೋತ್ತರವಾಗಿ ಒಂದು ಲೈಪ್ ಟೈಮ ಅಚೀವಮೆಂಟ ಅವಾರ್ಡ ಕೊಡಬೇಕು.
      [ಹೀಗೆಯೇ ಒಂದಷ್ಟು ಶತಮಾನಗಳು (ಮೇಲ್ವರ್ಗದವರ ಸ್ವಾರ್ಥಸಾಧನೆ ಇದ್ದೆ ಇರುತ್ತದೆ !) ಸಾಗಿದರೆ ಏನಾದರೂ ಸಮಾನತೆ ಸಾಧ್ಯವಾದೀತು! .]
      ನನ್ನ ನಿರೀಕ್ಷೆಯೂ ಅದೇ .. ಸುಮಾರು ನೂರು ವರುಷಗಳ ನಂತರ ‘ನನ್ನ ಕಡೆ ಎಡಗಣ್ಣಿನಿಂದ ನೋಡಿ ಮಾತನಾಡಿ ಅವಮಾನ ಮಾಡಿದ’ ಎಂಬ ಸಾಮಾಜಿಕ-ಮನೊ-ದೈಹಿಕ ಸಮಸ್ಯೆ ಬರಲಾರದು ಎಂಬ ಬಲವಾಗಿಲ್ಲದ ನಂಬಿಕೆ ನನಗಿದೆ.

  26. sugunamahesh

    ಎಂದಿನಂತೆ ನಿಮ್ಮ ಲೇಖನ ಬಹಳ ಚೆನ್ನಾಗಿದೆ…. ನಿಮ್ಮ ಅನುಭವ ನಿಜಕ್ಕೂ ಎಷ್ಟೋ ಜನರ ಬೇಸರದ ಸಂಗತಿಯೂ ಹೌದು.. ಈಗೀಗ ಇಂತಹ ಆಚಾರಗಳು ಬದಲಾಗುತ್ತಿವೆ.

  27. ಶಮ, ನಂದಿಬೆಟ್ಟ

    “ಯಾವುದೇ ನೋವು, ಅವಮಾನ ಕೇವಲ ಅರಿವಿನ ಮಟ್ಟದಲ್ಲಿಲ್ಲದೆ, ನಮ್ಮದೇ ಅನುಭವಕ್ಕೆ ಬಂದಾಗ ಅದು ನಮ್ಮನ್ನು ತಾಕುವ ತೀವ್ರತೆಯೇ ಬೇರೆ.”
    And Sandhya I second Anjali….. Not just 100% ..10000000000000000000000000%… 🙂

  28. Amaresh

    The incident described is insignificant and doesn’t measure up to the reaction of the author and most readers. It is not hard for anyone to cherry pick incidents from their life and give them a color of social inequality and discrimination. I’ll give you some incidents for you to think. 1) Consider a poor Billava student from a remote village of Dakshina Kannada district who comes to Mysore for graduate studies. He seeks admission into the Dalit hostel and is instantly denied admission because he is not a Dalit. He feels hurt by the discrimination and writes a piece in Avadhi deploring caste system in India which denies deserving students like him a place in Dalit hostel. 2) Consider a middleclass Lingayat student from Davanagere who is studying in 2nd PUC. His best friend is a Dalit classmate who is also the son of a well-placed government officer. In both PUC exam as well as CET, the Lingayat student gets much higher score than his Dalit classmate. However, after the CET counseling, the Dalit student gets admission into the much coveted Computer Science program in PESIT whereas the Lingayat student has managed only to get admission into Civil Engineering program in the unheard Ranebennur college. The Dalit student comes to his Lingayat friend with a box of Dharawad pheda with the smile of a winner. The Lingayat student feels he is being insulted – despite scoring more than his Dalit friend, he has got a lower seat and his friend is deliberately rubbing salt on the wound by giving sweets. He swallows the hurt, and ten years later he writes in Avadhi about how the caste system ruined his career and life.
    My question is this. How would you react to the above incidents?

    • Aravind

      Any form of insult is deplorable. Amaresh’s experience is many people’s experience too. And it is as appalling as the one thrust by so-called upper caste on lower caste.
      But, Amaresh, while describing your experience you sound as if you find the experience of self as quite Significant. But you term the incident from article as insignificant. Quite surprising!!!!

  29. suvarnababu

    ಸಂಧ್ಯಾ ಮೇಡಂ ಸದ್ಯ ನಮ್ಮಪ್ಪ ನಮಗೆ ಜಾತಿ ಭೇದ ಕಲಿಸಲಿಲ್ಲ ನಾವು ನಮ್ಮ ಮಕ್ಕಳಿಗೆ ಕಲಿಸಲಿಲ್ಲ ಮದುವೆಯಾದ ಹೊಸದರಲ್ಲಿ ಅತ್ತೆ ಮನೆಯಲ್ಲಿ ವಿಪರೀತ ಸಾಂಪ್ರದಾಯ ಮಡಿ ಮೈಲಿಗೆ ಇದ್ದುದರಿಂದ ನಾವು ಬೇರೆ ಮನೆ ಮಾಡುವ ಹಾಗಾಯಿತು ಯಜಮಾನರು ಹಾಗಿಲ್ಲ ಬಿಡಿ.

  30. ಪು. ಸೂ . ಲಕ್ಷ್ಮೀನಾರಾಯಣ ರಾವ್

    ಪ್ರಿಯ ಅಮರೇಶ್ ,
    ನೀವು ಭಾವಿಸಿದ ಹಾಗೆಯೇ ಅನೇಕ ಮಂದಿ ಅಭಿಪ್ರಾಯ ಪಡುವುದನ್ನು ನಾನು ಕಂಡಿದ್ದೇನೆ . ಮೀಸಲಾತಿಯಿಂದಾಗಿ ನಾನೂ ಸಹ ಕೆಲವು ಅವಕಾಶಗಳನ್ನು ಕಳೆದುಕೊಂಡಿದ್ದೇನೆ . ಆದರೂ ಮೀಸಲಾತಿಯ ಅಗತ್ಯ ಇನ್ನೂ ಇದೆ ಎಂದು ನಂಬುತ್ತೇನೆ . ಜಾತಿ ಮತ್ತು ವರ್ಣ ವ್ಯವಸ್ಥೆಯಿಂದಾಗಿ ಈ ದೇಶದ ಬಹುಸಂಖ್ಯಾತರು ಶಿಕ್ಷಣದಿಂದ ಮತ್ತು ತನ್ಮೂಲಕ ಅನೇಕ ಅವಕಾಶಗಳಿಂದ ವಂಚಿತರಾಗಿದ್ದಾರೆ . ಈ ಅನ್ಯಾಯ ಸಹಸ್ರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವುದನ್ನು ನಮ್ಮ ಇತಿಹಾಸದ ಪ್ರಾಮಾಣಿಕವಾದ ಅಧ್ಯಯನದಿಂದ ತಿಳಿಯಬಹುದಾಗಿದೆ . ಈ ರೀತಿ ನಿಸ್ವಾರ್ಥವಾದ ,ನಿಷ್ಪಕ್ಷವಾದ ,ಮಾನವೀಯವಾದ ವಿಶ್ಲೇಷಣೆ ಕೈಗೊಂಡಾಗ ಹೆಚ್ಚು ಅಂಕ ಗಳಿಸಿದವರು ‘ಪ್ರತಿಭೆಗೆ ಅನ್ಯಾಯವಾಗ್ತಿದೆ ‘ಅಂತ ಬಹುಶಃ ಕೂಗಲಾರರು .
    ಇಲ್ಲಿ ಬರೆಯುತ್ತಿರುವವರು ತಮ್ಮ ತಮ್ಮ ಅನುಭವಗಳ ಮುಖಾಂತರ ನಮ್ಮ ಸಮಾಜದಲ್ಲಿರುವ ಶ್ರೇಣೀಕರಣ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಮತ್ತು ಹಾಗೆ ಅರ್ಥ ಮಾಡಿಕೊಂಡದ್ದನ್ನು ಅಭಿವ್ಯಕ್ತಿಸುತ್ತಿದ್ದಾರೆಯೇ ವಿನಾ ಅದಕ್ಯಾವುದೋ ಸಾಮಾಜಿಕ ಮೌಲ್ಯದ ಬಣ್ಣ ಕಟ್ಟುತ್ತಿಲ್ಲ . ಪ್ರತಿಯೊಂದು ಅನುಭವವೂ ಮುಖ್ಯ . ಎಷ್ಟು ತೀವ್ರವಾದುದು ಎಷ್ಟು ಗಾಢವಾದುದು ಅನ್ನುವುದು ಬೇರೆ . ಯಾವುದೂ insignificant ಅಲ್ಲ.
    ವಿಜಯ್ ರವರು ತಿಳಿಸಿದ ಹಾಗೆ ಶೋಷಣೆಯು ಎಲ್ಲ ಕಾಲಗಳಲ್ಲೂ ಇರುತ್ತದೆ. ನಾನಾ ತರದ ಶೋಷಣೆಗಳು ಇರುತ್ತವೆ . ಆದರೆ ಈ ಜಾತಿ ಪದ್ಧತಿಯಿಂದಾಗಿರುವ ಶೋಷಣೆಯನ್ನು ಎಡಗಣ್ಣಿನಿಂದ ನೋಡಿದಾಗ ಆಗುವ ಅವಮಾನದೊಂದಿಗೆ ಸಮೀಕರಿಸುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ .
    ಅಂಬೇಡ್ಕರ್ ರವರು ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೆ ಅಸ್ಪ್ರುಶ್ಯತೆಯ ಪದ್ಧತಿಯಲ್ಲಿ ಈಗ ಆಗಿರುವ ಅಲ್ಪಸ್ವಲ್ಪ ಸುಧಾರಣೆಯೂ ಸಹ ಆಗುತ್ತಿರಲಿಲ್ಲ ಎಂಬುದು ವಿಜಯ್ ರಂತವರಿಗೆ ನಂಬಲಾಗದ ಕಟು ಸತ್ಯ . ಬುದ್ಧನಾದಿಯಾಗಿ ಬಸವ ,ಕನಕ ,ಕಬೀರ್ ಮುಂತಾದ ನೂರಾರು ಮಂದಿಯ ಈ ಕುರಿತ ಮಾತುಗಳ್ಯಾವುವು ನಮ್ಮ ಪೂರ್ವೀಕರ ಮೇಲೆ ಯಾವ ಪರಿಣಾಮವನ್ನು ಬೀರಲಿಲ್ಲ ಎಂಬುದು ವಾಸ್ತವ . ಇವರ ಮೃದು ವಚನಗಳು ತಾರದ ಬದಲಾವಣೆಗಳನ್ನು ಅಂಬೇಡ್ಕರ್ ರವರ ಉಗ್ರವಾದ ಮಾತುಗಳು ತಂದದ್ದು ಈಗ ನಮ್ಮ ಮುಂದೆ ಇರುವ ಸತ್ಯ .

    • ವಿಜಯ್

      @ಲಕ್ಷ್ಮಿನಾರಾಯಣ ರಾವ್..
      [ಜಾತಿ ಮತ್ತು ವರ್ಣ ವ್ಯವಸ್ಥೆಯಿಂದಾಗಿ ಈ ದೇಶದ ಬಹುಸಂಖ್ಯಾತರು ಶಿಕ್ಷಣದಿಂದ ಮತ್ತು ತನ್ಮೂಲಕ ಅನೇಕ ಅವಕಾಶಗಳಿಂದ ವಂಚಿತರಾಗಿದ್ದಾರೆ . ಈ ಅನ್ಯಾಯ ಸಹಸ್ರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವುದನ್ನು ನಮ್ಮ ಇತಿಹಾಸದ ಪ್ರಾಮಾಣಿಕವಾದ ಅಧ್ಯಯನದಿಂದ ತಿಳಿಯಬಹುದಾಗಿದೆ .]
      ಇತಿಹಾಸದ ಪ್ರಾಮಾಣಿಕ ಅಧ್ಯಯನವನ್ನು ಮಾಡಹೊರಟವರು ವರ್ತಮಾನದ ಪ್ರಾಮಾಣಿಕ ಅಧ್ಯಯನವನ್ನು ಮಾಡಿದ್ದೀರಾ? ನಿಜವಾದ ಶೋಷಿತರಿಗೆ ಸಿಗಬೇಕಾದ ಅವಕಾಶವನ್ನು ಬಲಿತ ದಲಿತರು ಕಬಳಿಸುವುದು ನಿಮಗೆ ಕಾಣಿಸುವುದಿಲ್ಲವೆ? ಇನ್ನೂ ಕೆನೆಪದರು ಮೀಸಲಾತಿ ಬೇಕು ಅಂತ ಬಡಿದು ಕೊಳ್ಳುವುದು ಕಾಣಿಸುವುದಿಲ್ಲವೆ? ಒಂದು ಹಂತಕ್ಕೆ ಮುಟ್ಟಿದ ಮೇಲೆ ಪ್ರತಿಭೆ ಬೆಳೆಸಿಕೊಳ್ಳಲು ಬರುವುದಿಲ್ಲವೆ? ವಿಶ್ವವಿದ್ಯಾಲಯದ ಕುಲಪತಿಯಾಗಲು ಕೂಡ ಜಾತಿ ಬೇಕೆ?
      ಕೆ.ಪಿ.ಎಸ್.ಸಿಯಲ್ಲಿ ಡಾ.ಮೈತ್ರಿ ಯವರಿಗೆ ಸಿಗಬೇಕಾದದ್ದನ್ನು ಕಸಿದುಕೊಂಡವರು ಯಾರು? (ಕೆ.ಪಿ.ಎಸ್.ಸಿ ಅಂತ ಪರೀಕ್ಷೆಯಲ್ಲಿ ತಮ್ಮ ವರ್ಗದವರಿಗೆ ಉದ್ದೇಶಪೂರ್ವಕವಾಗಿ ಜಾಸ್ತಿ ಅಂಕ ಕೊಟ್ಟು, ಅವರನ್ನು ಜನರಲ್ ಕೆಟಗರಿಗೆ ದೂಡಿ, ಅಲ್ಲಿ ಜನರಲ್ ಕೆಟಗರಿಯ ಸೀಟುಗಳನ್ನು ಕಸಿಯುವುದು ಕೂಡ ಇದೆ).. ಈಗ ವರ್ತಮಾನದಲ್ಲಿ ಶಿಕ್ಷಣ,ಉದ್ಯೋಗಾವಕಾಶಗಳಿಂದ ಎಷ್ಟು ಜನ ವಂಚಿತರಾಗಿದ್ದಾರೆ? ಇಷ್ಟು ಅವಕಾಶ ಇದ್ದಾಗಲೂ ಅವರಾಗಿ ಮುಂದೆ ಬಾರದಿದ್ದರೆ ಶಿಕ್ಷಣದ ಮಹತ್ವದ ಬಗ್ಗೆ ಅವರನ್ನು ಒಲಿಸುವ ಕೆಲಸ ಮಾಡಬೇಕಾದವರು ಯಾರು? ಈ ವರ್ಗಗಳಲ್ಲಿ ಶಿಕ್ಷಣ ಪಡೆದು ಮೇಲೆ ಹೋದವರು, ತಮ್ಮ ಊರುಗಳ ಉಳಿದ ಬಂಧುಗಳನ್ನು ಮೇಲೆತ್ತುವ ಪ್ರಯತ್ಣ ಮಾಡಿದ್ದಾರೆಯೆ, ಶಿಕ್ಷಣ ಪ್ರೀತಿಯನ್ನು ಬೆಳೆಸಿದ್ದಾರೆಯೆ? ಇಲ್ಲವೆಂದರೆ ಇದರಲ್ಲಿ ಯಾರ ಸ್ವಾರ್ಥ ಅಡಗಿದೆ?
      [ಆದರೆ ಈ ಜಾತಿ ಪದ್ಧತಿಯಿಂದಾಗಿರುವ ಶೋಷಣೆಯನ್ನು ಎಡಗಣ್ಣಿನಿಂದ ನೋಡಿದಾಗ ಆಗುವ ಅವಮಾನದೊಂದಿಗೆ ಸಮೀಕರಿಸುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ .]
      ನಾವು ಯಾವ ಮಟ್ಟಿಗೆ ‘ಸಂವೇದನಾ’ಶೀಲರಾಗಿದ್ದೆವೆ ಈಗ ಎನ್ನುವುದಕ್ಕೆ ಕೆಳಗಿನ ಕೆಲವು ಕಮೆಂಟ್ ಓದಿದರೆ ಗೊತ್ತಾಗುತ್ತದೆ. ನಾನು ಬರೆದಿದ್ದು ಮುಂದೆ ಹೇಗಾಗ ಬಹುದು ಎಂಬುದು ನನ್ನ ಊಹೆ. ಬಾಯಲ್ಲಿ, ಬರವಣಿಗೆಯಲ್ಲಿ ಜಾತಿಗಳನ್ನು ಕೊಲ್ಲಬೇಕು ಅನ್ನುವವರೇ ಅವುಗಳನ್ನು ಅಪ್ಪಿ ಹಿಡಿದಿರುವ ಪರಿ ನೋಡಿದರೆ..ಇದು ಸತ್ಯವಾದರೂ ಆಶ್ಚರ್ಯವಿಲ್ಲ.
      ಮೇಲ್ವರ್ಗದವರನ್ನು (ಅದರಲ್ಲೂ ಸಾಫ್ಟ್ ಟಾರ್ಗೆಟ್ ಆದ ಬ್ರಾಹ್ಮಣರನ್ನು) ಸಿಕ್ಕ ಸಿಕ್ಕ ಅವಕಾಶಗಳಲ್ಲಿ ಬಯ್ಯುವುದು ಮತ್ತು ಅದೇ ಧ್ವನಿಯಲ್ಲಿ ‘ಹೃದಯವಂತರಾಗಬೇಕು, ಮಾನವೀಯತೆ ತೋರಬೇಕು’ ಎಂಬಂತಹ ಉಪದೇಶಗಳನ್ನು ಹರಿಯಬಿಡುವುದು ಎಷ್ಟು ಸಾಧು ಸ್ವಾಮಿ? ಒಂದು ಕಾಲದಲ್ಲಿ ಅನ್ಯಾಯ ಆಗಿದ್ದು ಹೌದು..ಒಪ್ಪಿಕೊಳ್ಳೋಣ..ಆದರೆ ಈ ಅನ್ಯಾಯದ ನ್ಯಾಯವಾಗಿ ಬದಲಾಗಲು ಒಂದು ಸಮಯಮಿತಿ ಇಲ್ಲವೆ? ಅಂಬೇಡ್ಕರ್ ವರು ಮೀಸಲಾತಿ ಎಷ್ಟು ವರ್ಷಗಳ ಕಾಲ ಇರಬೇಕೆಂದಿದ್ದರು? ಆ ಮಿತಿಯ ಮೂರು ಪಟ್ಟು ಹೆಚ್ಚಿಗೆ ಕಾಲ ಕಳೆದ ನಂತರವೂ ಇನ್ನೂ ಮನು ಜಪ ಮಾಡುತ್ತಾ, ಅನ್ಯಾಯ ಅನ್ಯಾಯ ಎನ್ನುತ್ತ ಬಸವಣ್ಣನ ಕಾಲವನ್ನು ನೆನೆಸಿ ಕೊರೆಯುವವರು ಇದ್ದಾರೆಂದರೆ ಈ ಕತೆ ಕೊನೆಯಾಗುವುದು ಯಾವಾಗ?
      [ಅಂಬೇಡ್ಕರ್ ರವರು ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೆ ಅಸ್ಪ್ರುಶ್ಯತೆಯ ಪದ್ಧತಿಯಲ್ಲಿ ಈಗ ಆಗಿರುವ ಅಲ್ಪಸ್ವಲ್ಪ ಸುಧಾರಣೆಯೂ ಸಹ ಆಗುತ್ತಿರಲಿಲ್ಲ ಎಂಬುದು ವಿಜಯ್ ರಂತವರಿಗೆ ನಂಬಲಾಗದ ಕಟು ಸತ್ಯ . ]
      ಕೊಂಚ ಮಟ್ಟಿಗೆ ಒಪ್ಪೋಣ..ಆದರೆ ಈ ‘ರೆ’ ಗಳ ಕಲ್ಪನೆಯಿಂದ ಮುಕ್ಕಿ ಪಡೆಯುವುದು ಒಳ್ಳೆಯದು..ಇದು ಗಾಂಧೀಜಿ ಹುಟ್ಟಿರದಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಎಂಬ ಊಹೆಯಷ್ಟೆ ಸತ್ಯ. ಈ ದೇಶ ನಿಂತ ನೀರಾಗಿತ್ತು, ಪಶ್ಚಿಮದವರು, ಅವರ ಶಿಕ್ಷಣ ನಮಗೆ ಬೆಳಕು ತೋರಿತು ಎಂಬುದು ನಮ್ಮ ‘ಪ್ರಗತಿಪರ,ಪ್ರಜ್ಞಾವಂತ,ಸಾಕ್ಷಿಪ್ರಜ್ಞೆ’ಗಳ ಸಿದ್ಧಾಂತವಷ್ಟೆ.
      @ಮೋಹನ ಕೊಳ್ಳೆಗಾಲ
      ಸ್ವಜಾತಿ, ಸ್ವಪಂಗಡಗಳಲ್ಲಿ ವಿವಾಹವಾಗಲು ನನ್ನ ಪ್ರಕಾರ ಇರುವ ಕಾರಣಗಳೆಂದರೆ ಒಂದೆ ತರಹದ ಆಚಾರ-ವಿಚಾರ ಮತ್ತು ಆಹಾರ ಪದ್ಧತಿ. ಎಷ್ಟು ಪಂಗಡ-ಜಾತಿಗಳಲ್ಲಿ ಈ ಸಾಮ್ಯತೆಗಳು ಇವೆ ಎಂದು ನೋಡಿ.ಉದಾಹರಣೆಗೆ ಮಾಂಸಾಹಾರ ತನ್ನ ಹಕ್ಕು ಎನ್ನುವವನು ಮತ್ತು ಕಟ್ಟಾ ಸಸ್ಯಾಹಾರಿ ಒಂದಾಗಿ ಯಾವುದೇ ಸಮಸ್ಯೆಯಿಲ್ಲದೆ, ತ್ಯಾಗ ಮಾಡದೇ ಬಾಳಬಹುದೆ? ಮೊದಲು ಈ ವಿಷಯಗಳಲ್ಲಿ ಸಾಮ್ಯತೆ ಇರುವ ಒಳಪಂಗಡಗಳು ಒಂದಾಗಬೇಕು.

      • ಪು. ಸೂ . ಲಕ್ಷ್ಮೀನಾರಾಯಣ ರಾವ್

        ವಿಜಯ್ ರವರೆ ,
        ಮೊದಲನೆಯದಾಗಿ ನಿಮ್ಮ ನೇರವಾದ ನುಡಿಗಳಿಗಾಗಿ ವಂದನೆ.
        ನಿಮ್ಮ ಮಾತುಗಳ ರೀತಿಯ ವಾದಗಳನ್ನು ಮೇಲ್ಜಾತಿಯ ನನ್ನ ಅನೇಕ ಬಂಧುಗಳು ,ಮಿತ್ರರು ಆಡುವುದನ್ನು ಅನೇಕ ಸಾರಿ ಎದುರಿಸಿದ್ದೇನೆ . ದಲಿತ ,ಹಿಂದುಳಿದವರ ಬದುಕಿನ ನೇರ ಪರಿಚಯವಿದ್ದಿದ್ದರೆ ನಿಮ್ಮಂತಹವರು ಈ ರೀತಿ ಮಾತನಾಡುತ್ತಿರಲಿಲ್ಲ ಅಂತ ಅನ್ನಿಸುತ್ತೆ .
        ದಯವಿಟ್ಟು ಹಳ್ಳಿಗಳಲ್ಲಿನ ಕೆಲವು ಹೊಲಗೇರಿಗಳಿಗೆಭೇಟಿ ನೀಡಿರಿ ,ಅವರೊಡನೆ ಈ ಪ್ರಶ್ನೆಗಳನ್ನು ಹಾಕಿರಿ ಅಥವಾ ಅವರ ಪರಿಸ್ಥಿತಿಯ ಬಗ್ಗೆ ಸಂಭಾಷಿಸಿರಿ. (ವಾಸ್ತವವಾಗಿ ಒಮ್ಮೆ ನನ್ನ ಮಗಳಿಗೆ ‘ಈ ಸಲ ನಾವು ಊರಿಗೆ ಹೋದಾಗ ಹೊಲೆಗೇರಿ ಒಳಗೆ ತಿರುಗಾಡಿ ಬರೋಣ’ ಅಂತ ಹೇಳಿದ್ದೆ.)
        ‘ಅವರಾಗಿ ಮುಂದೆ ಬಾರದಿದ್ದರೆ’ ‘ಒಂದು ಹಂತಕ್ಕೆ ಬಂದ ಮೇಲೆ ಪ್ರತಿಭೆ ಬೆಳೆಸಿಕೊಳ್ಳಲು ಬರುವುದಿಲ್ಲವೇ?’ ಇತ್ಯಾದಿ ಮಾತುಗಳು ನಿಮ್ಮ ಚತುರತೆಯನ್ನು ಏಕಪಕ್ಷೀಯ ಅವಲೋಕನಾ ವಿಧಾನವನ್ನು ತೋರುತ್ತದೆ.
        ನಾನೂ ಮತ್ತು ನನ್ನ ತಮ್ಮ ಈ ಬೆಂಗಳೂರಿನಲ್ಲಿ ವಾಸಿಸಲು ಒಂದು ವಿದ್ಯಾರ್ಥಿ ನಿಲಯದಲ್ಲಿ ಉಚಿತವಾದ ವಸತಿ ವ್ಯವಸ್ಥೆಯನ್ನು ನನ್ನ ‘ಪ್ರವರ’ (ಆಂಗೀರಸ, ಅಂಬರೀಷ, ಯೌವ್ವನಾಶ್ವ…)ವನ್ನು ಹೇಳುವುದರ ಮೂಲಕ ಗಿಟ್ಟಿಸಿದ್ದೆ. ಪ್ರವರ, ಗೊತ್ರಗಳಿಲ್ಲದವರನ್ನು ಅರ್ಥೈಸಿಕೊಳ್ಳಲು ಕನ್ನಡದಲ್ಲಿನ ಬಂಡಾಯ ಮತ್ತು ದಲಿತ ಸಾಹಿತ್ಯಗಳನ್ನಾದರೂ ಅಧ್ಯಯನ ಮಾಡಿರಿ (ಮೇಲ್ಜಾತಿಗಳಲ್ಲೂ ಎಷ್ಟೇ ಕುಮ್ಮಕ್ಕು ನೀಡಿದರೂ ಅಪ್ಪಾ ಪೋಲಿಗಳಾಗುವ ಯುವಕರಿಲ್ಲವೇ)
        ಜಾತಿ ಭೇದದ ಅಮಾನವೀಯತೆಯ ಬಗ್ಗೆ ಮಾತನಾಡುವಾಗ ವರ್ತಮಾನದ ಭ್ರಷ್ಟ ಸನ್ನಿವೇಶಗಳನ್ನು ಥಳುಕು ಹಾಕುವುದು ವಿಷಯಾಂತರವಾಗುತ್ತದೆ. ಇತ್ತೀಚಿಗೆ ಅರವತ್ತು ವರ್ಷಗಳಿಂದ ಜಾರಿಯಲ್ಲಿರುವ ಸ್ವಲ್ಪ ಶೇಕಡಾವಾರು ಮೀಸಲಾತಿಯ ಬಗ್ಗೆ ವಿರೋಧವನ್ನು ವ್ಯಕ್ತ ಪಡಿಸುವವರು ಸಾವಿರಾರು ವರ್ಷಗಳ ಕಾಲ 100% ಮೀಸಲಾತಿಯನ್ನು ಒಂದೇ ಜಾತಿಯವರು ಪಡೆದುಕೊಂಡು ಅದರ ಕಾರಣವಾಗಿ ಉತ್ತಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕ ಪ್ರಗತಿಯ ಬದುಕನ್ನು ರೂಪಿಸಿಕೊಂಡಿದ್ದಾರಲ್ಲಾ – ಇದೇ ಪರಿಸ್ಥಿತಿ ಉಳಿದವರಿಗೆ ಸಿಗದೇ ಹೋಯಿತಲ್ಲಾ, ಸಿಕ್ಕಿದ್ದಿದ್ದರೆ (‘ರೆ’ ಬೇಕಾಗತ್ತೆ) ಹೇಗಿರಬಹುದಾಗಿತ್ತು ಎಂದು ಮಾಡುವ ಯೋಚನೆಯನ್ನು ದಯಮಾಡಿ ಅರ್ಥ ಮಾಡಿಕೊಳ್ಳಿ.

        • ವಿಜಯ್

          @ ಶ್ರೀಲಕ್ಷ್ಮಿನಾರಾಯಣ ರಾವ್..
          ನಾನು ಇರುವುದು ಹಳ್ಳಿಯಲ್ಲಿಯೇ..ಉತ್ತರಕನ್ನಡ ಜಿಲ್ಲ್ಲೆಯ ಒಂದು ಹಳ್ಳಿ. ಆದರೂ ನಿಮ್ಮ ಸಲಹೆಗೆ ಧನ್ಯವಾದಗಳು. ನನಗನಿಸಿದಂತೆ ನಿಮ್ಮ ಹೊಲಗೇರಿಯ ಕಲ್ಪನೆಗಳು ನೀವು ಹಳ್ಳಿ ಬಿಟ್ಟು ಬೆಂಗಳೂರಿಗೆ ಹೋದ ಕಾಲಕ್ಕೆ ಮತ್ತು ಬಂಡಾಯ, ದಲಿತಸಾಹಿತ್ಯಕ್ಕೆ ಸೀಮಿತವಾಗಿ ಸ್ತಬ್ಧಗೊಂಡಿವೆ. ನಿಮ್ಮ ಈ [ವಾಸ್ತವವಾಗಿ ಒಮ್ಮೆ ನನ್ನ ಮಗಳಿಗೆ ‘ಈ ಸಲ ನಾವು ಊರಿಗೆ ಹೋದಾಗ ಹೊಲೆಗೇರಿ ಒಳಗೆ ತಿರುಗಾಡಿ ಬರೋಣ’ ಅಂತ ಹೇಳಿದ್ದೆ] ಮಾತನ್ನು ನೋಡಿದರೆ, ಸ್ಲಂಡಾಗ್ ಮಿಲಿಯನೇರ್ ನೋಡಿ ಭಾರತಕ್ಕೆ ಬಂದ ವಿದೇಶಿಯರನ್ನು ಧಾರಾವಿಯ ಕೊಳಗೇರಿಗಳಿಗೆ ಕರೆದುಕೊಂಡು ಹೋಗಿ, ಅದನ್ನೇ ಭಾರತ ಎಂದು ತೋರಿಸುವ ಸ್ಲಂ ಟೂರಿಸಂ ನೆನಪಾಯಿತು. ನೀವು ಭೂತವನ್ನೇ ನೋಡುತ್ತ ವರ್ತಮಾನವನ್ನು ಮರೆತುಬಿಟ್ಟಿದ್ದೀರಿ. ಖಂಡಿತವಾಗಿಯೂ ಹೋಗಿ ತಿರುಗಾಡಿ ಬನ್ನಿ..ಆಗಲಾದರೂ ನಿಮ್ಮ ಕಲ್ಪನೆ ಬಸವಣ್ಣನವರ ಕಾಲದಿಂದ ಈಗಿನ ಕಾಲಕ್ಕೆ ಬರಬಹುದು.
          [ಜಾತಿ ಭೇದದ ಅಮಾನವೀಯತೆಯ ಬಗ್ಗೆ ಮಾತನಾಡುವಾಗ ವರ್ತಮಾನದ ಭ್ರಷ್ಟ ಸನ್ನಿವೇಶಗಳನ್ನು ಥಳುಕು ಹಾಕುವುದು ವಿಷಯಾಂತರವಾಗುತ್ತದೆ.]
          ಬೃಷ್ಟಾಚಾರ ಮತ್ತು ತಮ್ಮ ಜನರನ್ನೇ ಹತ್ತಿಕ್ಕುವಲ್ಲಿ ಯಾರು ಭಾಗಿಯಾಗಿದ್ದರು ಎಂಬುದು ನಿಮಗೆ ಅರ್ಥವಾಗಿದ್ದಲ್ಲಿ ಆಗ ಇದು ವಿಷಯಾಂತರವೆನಿಸುತ್ತಿರಲಿಲ್ಲ..ಉಳಿದ ವಾಕ್ಯಗಳನ್ನು ಬರೆಯುತ್ತಿರಲಿಲ್ಲ.
          [‘ಅವರಾಗಿ ಮುಂದೆ ಬಾರದಿದ್ದರೆ’ ‘ಒಂದು ಹಂತಕ್ಕೆ ಬಂದ ಮೇಲೆ ಪ್ರತಿಭೆ ಬೆಳೆಸಿಕೊಳ್ಳಲು ಬರುವುದಿಲ್ಲವೇ?’ ಇತ್ಯಾದಿ ಮಾತುಗಳು ನಿಮ್ಮ ಚತುರತೆಯನ್ನು ಏಕಪಕ್ಷೀಯ ಅವಲೋಕನಾ ವಿಧಾನವನ್ನು ತೋರುತ್ತದೆ. ]
          ಇವತ್ತು ಸರಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದರೂ ಅದು ನಿಜವಾಗಿ ತಲುಪಬೇಕಾದವರನ್ನು ಬಿಟ್ಟು ಯಾರಿಗೆ ತಲುಪುತ್ತಿದೆ? ವರ್ತಮಾನದಲ್ಲಿ ಹಿಂದುಳಿದವರನ್ನು ಹಿಂದುಳಿದವರನ್ನಾಗಿಯೇ ಉಳಿಸುತ್ತಿರುವಲ್ಲಿ ಯಾರ ಪಾತ್ರ ಎಷ್ಟಿದೆ ಎಂಬ ಬಗ್ಗೆ ಒಮ್ಮೆ ವಿಚಾರ ಮಾಡಿ. ದಯಮಾಡಿ ಒಮ್ಮೆ ಈ ಮನುಷ್ಯನ ಬಗ್ಗೆ ಓದಿ ..ಈ ವಿಡಿಯೊ ನೋಡಿ..ಹಿಂದುಳಿದ ಸಮಾಜಕ್ಕೆ ವರ್ತಮಾನದಲ್ಲಿ ಬೇಕಾದವರು ಶ್ರೀ ಆನಂದಕುಮಾರ ರಂಥವರು. ಇವರ ಬಗ್ಗೆ ನಾನು ಹಿಂದೊಮ್ಮೆ ಕಮೆಂಟ್ ಹಾಕಿದ್ದೆ..ಮತ್ತೆ ಹಾಕುತ್ತಿದ್ದೇನೆ..ಏಕೆಂದರೆ ಇಂಥವರ ಕಾರ್ಯ ಸಾಕಷ್ಟು ಜನರಿಗೆ ತಿಳಿಯಬೇಕು ಯಾವಾಗಲೂ.ಹಳ-ಹಳಿಸುತ್ತ ಕೂಡುವವರ ನಡುವೆ, ದಲಿತರಿಗೆ ಮಧ್ಯದಂಗಡಿ ಲೈಸನ್ಸ್ ಕೊಡಿ ಎನ್ನುವವರೆಲ್ಲರ ನಡುವೆ ಇವರೊಂದು ಆದರ್ಶ.
          ವಿಡಿಯೊ : http://www.youtube.com ಟೈಪ್ ಮಾಡಿಕೊಳ್ಳಿ /watch?v=4C1n73EG_RU
          ವೆಬ್ಸೈಟ್ : http://super30.org/

  31. ಜಿ.ಎನ್ ನಾಗರಾಜ್

    ಸಂಧ್ಯಾರವರೇ ನಿಮ್ಮ ಲೇಖನವನ್ನು ತಡವಾಗಿ ಓದಿದೆ.ನಿಮ್ಮ ಅನುಭವವನ್ನು ಪ್ರಾಮಾಣಿಕವಾಗಿ ಮನ ಮುಟ್ಟುವಂತೆ ಸಾದರಪಡಿಸಿದ್ದೀರಿ.ಆದಕ್ಕೆ ಬಂದಿರುವ ಪ್ರತಿಕ್ರಿಯೆಗಳೂ ಕೆಲವನ್ನು ಹೊರತುಪಡಿಸಿ ಸಹೃದಯ ಮನಸ್ಸಿನಿಂದ ಮೂಡಿ ಬಂದಿವೆ.ಆದರೆ ಎರಡು ಮುಖ್ಯ ಅಂಶಗಳನ್ನು ಗಮನಿಸಬೇಕೆಂದು ನನಗೆ ತೋರುತ್ತದೆ.ಒಂದು ಭಾರತಿಯವರೆಂದಂತೆ ಮಾಧ್ವ-ಸ್ಮಾರ್ತ,ಬ್ರಾಹ್ಮಣ-ಶೂದ್ರ, ಚಾತುರ್ವಣ್ಯ-ಪಂಚಮ ಅಥವಾ ಅಸ್ಪೃಶ್ಯರ ನಡುವಿನ ಬೇಧಗಳ ನಡುವೆ ಇರುವ ನೋವು ಮತ್ತು ಅವಮಾನ ಒಂದೇ ಅಲ್ಲ.ಅವುಗಳಲ್ಲಿ ಅಜ ಗಜಾಂತರ ವ್ಯತ್ಯಾಸವಿದೆ. ಅವುಗಳಲ್ಲಿ ಅತ್ಯಂತ ಅಮಾನವೀಯವಾದ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಬೇರೆಲ್ಲರೂ ಸೇರಿ ಶ್ರಮಿಸುವ ದಾರಿಯಲ್ಲೇ ಅವರೊಳಗಿನ ಬೇಧಗಳನ್ನು ನಿವಾರಿಸಿಕೊಳ್ಳುವುದು ಸಾಧ್ಯ ಹಾಗೂ ಸುಲಭವಾಗುತ್ತದೆ.” ಮಾನವರಾಗೋಣ ನಾವು ಮಾನವರಾಗೋಣ ” ಎಂಬುದು ಸಾಧ್ಯವಾಗುತ್ತದೆ.ಎರಡು- ಇಂತಹ ಎಲ್ಲ ಬರಹಗಳಲ್ಲಿ ನೋವು, ಅವಮಾನದ ಅಭಿವ್ಯಕ್ತಿಯ ಜೊತೆಗೆ ಅದರ ಪರಿಹಾರದ ಬಗ್ಗೆ ಚರ್ಚೆಯನ್ನು ಒಯ್ಯುವ ದಿಕ್ಕಿನತ್ತ ಸೂಚನೆಯಿರುವುದು ಅವಶ್ಯಕತೆಯಿದೆಯೇನೋ .’ನಮ್ಮದೇ ಅನುಭವವಾದರೆ ಮಾತ್ರ ‘ ಎಂಬದು ‘ಗುತ್ತಿ’ಯ ವಿಷಯದಲ್ಲಿ ನಿಜ ಇರಬಹುದು. ಆದರೆ ‘ಚೋಮ’ನ ವಿಷಯದಲ್ಲಿ. ಬೇರೊಬ್ಬರ ಅನುಭವವೂ ಅದರೆಲ್ಲಾ ಗಾಢತೆಯಲ್ಲಿ ನಮ್ಮದಾಗಲು ಸಾಧ್ಯ. ನಾವು ‘ಮಾನವ’ರಾಗಿ ಆ ಅನುಭವವನ್ನು ಅರಿವಿನ ನೆಲೆಯಿಂದ ಭಾವನೆಯ ನೆಲೆಗೆ ತೀವ್ರವಾಗಿ ತಂದುಕೊಂಡಾಗ.ಅಲ್ಲದಿದ್ದರೆ ಸಾಹಿತ್ಯವೆಂಬುದಕ್ಕೆ ಅರ್ಥವೇ ಇರುತ್ತಿರಲಿಲ್ಲ. ಶಿವರಾಮ ಕಾರಂತರಿಗೆ ಸಾಧ್ಯವಾದದ್ದು ಎಲ್ಲರಿಗೂ ಸಾಧ್ಯವಾಗಬೇಕು.ಆದರೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ನಮ್ಮ ಮುಂದಿನ ಪ್ರಶ್ನೆ.

  32. arpita

    dasarege ajji manege hodaga banni marada ele koTTu doDDOrige namaskarista idde.aagobba ajja baMdru avrigu koTTu namaskariside.tuMbaa mujugara paTkoMDru avru.nanna sutta niMta maneyavarella nakkaru.avanu keLu jaati avnigella namaskara maDtiyalla aShTu gottagalV aMta.idre enaytu avru doDDORalva adikke maaDIde aMta uttariside.idu nanna modala anubhava,illivaregu saakaShTu aagive.pratibhaTisutta,kaNNIriDutta,jagaLavaDuttale baMdiruve.

  33. Mohan V Kollegal

    ಅಕ್ಕ… ತಡವಾಗಿ ಓದುತ್ತಿರುವುದಕ್ಕೆ ಕ್ಷಮೆ ಇರಲಿ… ಈ ವಿಚಾರಗಳು ಶತ ಶತಮಾನಗಳಿಂದಲೂ ಹಬೆಯಾಡುತ್ತಿದ್ದರೂ ಇಂದಿಗೂ ಪ್ರಸ್ತುತವೇ ಹೌದು. ‘ಭಾರತ ಪ್ರಜ್ವಲಿಸುತ್ತಿದೆ’ ಎಂದು ಹೇಳುವ ಕೆಲವು ನಾಯಕರು, ಇಂತಹ ವಿಚಾರಗಳು ಇಂದಿಗೆ ಪ್ರಸ್ತುತವೇ ಎಂದು ಕೇಳುವುದುಂಟು. ಆದರೆ, ಪಟ್ಟಣಗಳನ್ನು ದಾಟಿ ಪಕ್ಕದ ಹಳ್ಳಿಗಳಿಗೆ ಬಂದರೆ ಇಂತಹ ವಿಚಾರಗಳು ಇನ್ನೂ ಹಾಸುಹೊಕ್ಕಾಗಿ ಮಲಗಿದೆ. ನೀವು ಹೇಳಿದಂತೆ ಅನುಭವಿಸಿದವರೇ ಬಲ್ಲರದರ ಕಹಿ. ಯಾವುದೇ ಕಾರ್ಯಕ್ರಮಗಳಿಗೂ ಸೇರಿಸಿಕೊಳ್ಳದೇ, ಊರಿನಲ್ಲಿ ಇದ್ದರೂ ಇಲ್ಲದಂತೆ ಬದುಕುವ ಜನರು ಹುಟ್ಟಿನಿಂದ ಅನುಭವಿಸುವ ನೋವುಗಳು ಇಂದಿಗೂ ಅಷ್ಟೇ ಜೀವಂತ. ನಮ್ಮ ಜೊತೆಯಲ್ಲಿಯೇ ಓದಿಕೊಂಡು, ಬೆಳೆದ ನಮ್ಮ ಎಷ್ಟೋ ಗೆಳೆಯರು ಇಂದಿಗೂ ನಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ, ಹೆಣ ತೇಲಾಡುವ ಗಂಗಾಜಲಕ್ಕೆ ಮರ್ಯಾದೆ ಕೊಡುವ ಜನ ನಮ್ಮ ಮನೆಗಳಲ್ಲಿ ನೀರನ್ನೂ ಕುಡಿಯುವುದಿಲ್ಲ. ಅವರ ಮನೆಗಳಿಗೆ ಹೋದರೆ ಹೆಚ್ಚೆಂದರೆ ಪಡಸಾಲೆಯಲ್ಲಿ ಕೂರಿಸುತ್ತಾರೆ. ಇದನ್ನೆಲ್ಲಾ ಧಿಕ್ಕರಿಸಿ ಬದಲಾದ ಕೆಲವು ಜನ ಇವುಗಳನ್ನೆಲ್ಲಾ ಅಲ್ಲಗಳೆಯಬಹುದು, ಆದರೆ ಉಳಿದಂತೆ ಅದು ಇನ್ನೂ ಜೀವಂತವಾಗಿದೆ. ಒಬ್ಬ ದಲಿತ ಹುಡುಗ/ಹುಡುಗಿ ಮೇಲ್ಜಾತಿಯ ಹುಡುಗಿ/ಹುಡುಗನನ್ನು ಮದುವೆಯಾಗಲು ಮುಂದಾಗಲಿ, ಆಗ ಈ ಬದಲಾದವರೂ ತಲ್ಲಣಗೊಳಲ್ಪಡುತ್ತಾರೆ. ಅಸ್ಪೃಶ್ಯತೆ, ಜಾತಿ ಎನ್ನುವುದು ಮನಸ್ಸಿಗೆ ಸಂಬಂಧಿಸಿದ ಒಂದು ಖಾಯಿಲೆ. ಅದು ನೀವು ಹೇಳಿದಂತೆ ನಿಮ್ಮ ಮನೆಯಲ್ಲಿಯೂ ಗುಮ್ಮನಂತೆ ಕುಳಿತಿತ್ತು. ಮೇಲೆ ನಿಂತು ತುಳಿಯುವವರು ಎಲ್ಲಾ ಕಡೆಯೂ ಇದ್ದಾರೆ. ಅಲ್ಲಿ ಶತ ಶತಮಾನಗಳಿಂದ ಬದಲುಗೊಂಡು ಬಂದ ಮನಸ್ಸೇ ಕಾರಣ. ಹೊರತು ಒಂದೇ ಬಣ್ಣದ ರಕ್ತ ಹೊಂದಿರುವ ಮನುಷ್ಯ ಇವುಗಳನ್ನೆಲ್ಲಾ ಧಿಕ್ಕ್ರಿಸಬೇಕು. ಅಂಬೇಡ್ಕರ್ ರವರು ಹೇಳುತ್ತಾರೆ, ‘ಜಾತಿ ತಾರತಮ್ಯ ಕೊನೆಯಾಗುವುದು ಅಂತರ್ಜಾತಿ ವಿವಾಹದಿಂದ ಮಾತ್ರ, ರಕ್ತ ರಕ್ತ ಕೂಡಿಕೊಳ್ಳುವುದಲ್ಲದೇ ಈ ಮಾನಸಿಕ ರೋಗ ವಾಸಿಯಾಗುವುದಿಲ್ಲ’ ಎಂದು.

  34. Anonymous

    sandhya, ella manegaloo hagiruvudilla… nannadoo halli. ella oorina thara nuru jathi..nannappa nannamma college mettilu hattidavarenalla… aadare nanu manege karedu taruttidda noorentu jatiya gelatiyarigendoo jati kelidavaralla..obbara maneyalli mattobbaru uliyuttiddevu,harate tindi ella maamoolu.. nanu yara manege hogi enu kottaroo tinnalu abhyantaraviralilla… except non veg.. so jathi annuvudondu nanage arthavagiddu meesalathiya karala mukhagalannu svataha anubhavisidamele..yake ondu jathiyalli huttidavarellaroo manaveeyathe illadavaremba sagatu heelike.. indigoo sringeriya nanna tavaru ella ‘manushyarigu ‘mukta annalu nanage tumba hemme.

  35. Somalinga Kharge

    “ಸಾವಿರಾರು ವರ್ಷಗಳ ಕಾಲ 100% ಮೀಸಲಾತಿಯನ್ನು ಒಂದೇ ಜಾತಿಯವರು ಪಡೆದುಕೊಂಡು ಅದರ ಕಾರಣವಾಗಿ ಉತ್ತಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕ ಪ್ರಗತಿಯ ಬದುಕನ್ನು ರೂಪಿಸಿಕೊಂಡಿದ್ದಾರಲ್ಲಾ ”
    ಆಹಾ ಇದು ನೋಡಿ ಮಾತಿನ ಮೋಡಿ! ಇಂತಹ ಮಾತುಗಳಿಂದ ಅವಧಿಯ ಚರ್ಚೆಗಳಿಗೆ ರಂಗು ಏರುತ್ತದೆ! ಭೇಷ್!

  36. ಸತೀಶ್ ನಾಯ್ಕ್

    ಒಂದಾರು ತಿಂಗಳ ಹಿಂದೆ ತಮಿಳು ನಾಡಿನ ಧರ್ಮಪುರಿಯ ಬಳಿ ಒಂದು ಹಳ್ಳಿಯಲ್ಲಿ, ಚೆನ್ನಾಗಿ ಓದಿಕೊಂಡ ಒಬ್ಬ ಹುಡುಗಿ ಹುಡುಗಿ ಪ್ರೀತಿಸಿ ಓಡಿ ಹೋಗಿದ್ರು ಅನ್ನೋ ಕಾರಣಕ್ಕೆ ಆ ಹಳ್ಳಿಯಲ್ಲಿ ದೊಡ್ಡ ಗಲಾಟೆ ಆಗಿ ಸುಮಾರು ಎಂಭತ್ತು ಮನೆಗಳಿಗೆ ಬೆಂಕಿ ಹಚ್ಚಿ ಸುಟ್ಟು.. ನೂರಿನ್ನೂರು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗುವಂತೆ ಹೊಡೆದಿದ್ದರು.
    ಕಾರಣ ಓಡಿ ಹೋದ ಜೋಡಿಯಲ್ಲಿ ಹುಡುಗ ಬ್ರಾಹ್ಮಣರವನು ಹುಡುಗಿ ಕೀಳು ಜಾತಿಯವಳು. ಆ ಹುಡುಗ ಹುಡುಗಿ ಮಾಡಿದ ಒಂದು ಕೆಲಸಕ್ಕೆ, ಹಾಗೆ ಇಡೀ ಊರಿಗೂರೇ ಹೊತ್ತು ಉರಿಯೋ ಒಂದು ಕೃತ್ಯ ಇದೆಯಲ್ಲ.. ಅದು ನಮ್ಮನ್ನೆಲ್ಲ ಈಗಲೂ ಅದೆಷ್ಟೋ ಶತಮಾನಗಳ ಆಚೆಗೆ ಕೊಂಡು ಹೋಗಿ ನಿಲ್ಲಿಸ್ತದೆ. ಸರ್ಕಾರ ಸುಟ್ಟ ಆ ಅಷ್ಟೂ ಮನೆಯ ವಾರಾಸುದಾರರಿಗೆ ಅಲ್ಪ ಸ್ವಲ್ಪ ಸವಲತ್ತು ನೀಡಿ.. ಈ ಕೃತ್ಯ ದೊಡ್ದದಾಗದಂತೆ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ತಡೆದಿತ್ತು. ಸರ್ಕಾರವೂ ಅಲ್ಲಿನ ಮೇಲ್ಜಾತಿಯ ಪರವಾಗಿಯೇ ನಿಂತದ್ದು ಎನ್ನುವ ಅಂಶಗಳು ಹಿನ್ನಲೆಯಲ್ಲಿ ಕೇಳಿ ಬರುತ್ತಿದ್ದವು.
    ಅಕಸ್ಮಾತ್ ಹುಡುಗಿ ಬ್ರಾಹ್ಮಣರ ಕಡೆಯವಳಾಗಿದ್ದರೆ ಘಟನೆಯ ಸ್ವರೂಪ ಬೇರೆಯದೇ ಆಗಿರುತ್ತಿತ್ತೇನೋ. ಎದೆ ಹೊಡೆದುಕೊಂಡು.. ನಾಲಿಗೆ ಹುರಿದುಕೊಂಡು, ಬಾಯಿ ಹರಕೊಂಡು ಜಾತಿ ಪದ್ದತಿಯ ಕುರಿತಾಗಿ, ಮೇಲು ಕೀಳು ತಾರತಮ್ಯದ ಕುರಿತಾಗಿ, ಎಷ್ಟು ಕಿರುಚಿ ಹೋರಾಡಿದರೂ ವಿಷಯ ಬೂದಿ ಮುಚ್ಚಿದ ಕೆಂಡವಾಗಬಹುದೇ ಹೊರತು ಆ ವ್ಯವಸ್ಥೆ ಅಷ್ಟು ಬೇಗ ಅಳಿದು ಹೋಗಲಿಕ್ಕಿಲ್ಲ.
    ಇವತ್ತು ಜಾತಿಯನ್ನ ಹೊಡೆದೋಡಿಸುವುದರ ಕಡೆ ಸರಿಯಾದ ಅವಕಾಶವೆಂದರೆ ಆರ್ಥಿಕ ಸುಧಾರಣೆ.. ಆದರೆ ಆರ್ಥಿಕ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಸಮಾನತೆ ಕಂಡು ಕೊಳ್ಳುವುದು ಅದಕ್ಕಿಂತಲೂ ದುಸ್ತರ.
    ಅಸ್ಪೃಶ್ಯತೆ, ತಾರತಮ್ಯತೆ ಇವುಗಳೆಲ್ಲ ಕಲಿಯುಗದ ಚಿರಂಜೀವಿಗಳೇನೋ..??

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading