ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಹೀಗೊಬ್ಬ ಶಾಪಗ್ರಸ್ತ ಸುಂದರಿಯೂ, ಅವಳ ನಿರಾಕರಣೆಯೂ…


“ಅಪ್ಪನ ಮೇಲೆ ಬೇಸರವಾ’?
ಇಲ್ಲ, ಹಾಗೇನು ಇಲ್ಲ…. ನಾನು ಪಾಪು ಆಗಿರುವಾಗಲೇ ಅವರು ನಮ್ಮನ್ನು ಬಿಟ್ಟುಹೋಗಿದ್ದರು.
ಅಪ್ಪನ್ನ ಭೇಟಿ ಮಾಡೇ ಇಲ್ಲವಾ?
ಇಲ್ಲ..
ಒಂದೇ ಊರಲ್ಲಿದ್ದರೂ?
ಉಹೂ… ಅಂದ್ರೆ ಅವರು ಅವರ ಮಕ್ಕಳನ್ನು (ಬೇರೆ ಹೆಂಡತಿಯ) ಶಾಲೆಗೆ ಡ್ರಾಪ್ ಮಾಡೋಕೆ ಬರ್ತಾ ಇದ್ರಲ್ಲ, ಅವಾಗ ನೋಡ್ತಾ ಇದ್ದೆ..
ಅವರು ಮಾತಾಡಿಸ್ತಾ ಇರಲಿಲ್ಲವಾ?
ಇಲ್ಲ… ಅವರಿಗೆ ನಾನು ಗೊತ್ತೇ ಇರಲಿಲ್ಲವಲ್ಲ..

ಅಮ್ಮನಿಗೆ ಅಪ್ಪನ ಮೇಲೆ ತುಂಬಾ ಸಿಟ್ಟಿರಬೇಕು ಅಲ್ಲವಾ?
ಛೆ, ಹಾಗೇನಿಲ್ಲಪ್ಪ, ಅವಳು ಅಪ್ಪನನ್ನ ತುಂಬಾ, ವಿಪರೀತ, ತೀವ್ರವಾಗಿ ಪ್ರೀತಿಸ್ತಾ ಇದ್ದಳು… ಅವರ ಪ್ರೇಮ ಅದ್ಭುತ..”
ಪ್ರಶ್ನೆ ಕೇಳುತ್ತಿದ್ದ ಸಿಮಿ ಗರೆವಾಲ್ ಇರಲಿ, ಕಾರ್ಯಕ್ರಮ ನೋಡುತ್ತಿದ್ದ ನಾನು ಸಹ ಆ ಶಾಪಗ್ರಸ್ತ ಸುಂದರಿಯನ್ನು ಅನುಕಂಪದಿಂದ ನೋಡುತ್ತಿದ್ದೆ… ನನ್ನ ಕಣ್ಣಿಗೆ ಅವಳು ಎಲ್ಲರ ನಡುವೆ ಜಾರಿ ಬಿದ್ದ ಮಗು, ಬಿಂಕಕ್ಕೆ ಕಣ್ಣೀರು ತಡೆದಿಟ್ಟ ಹಾಗೆ, ಹಸಿವು ಹೊಟ್ಟೆಯಲ್ಲಿ ಸುಡುತ್ತಿದ್ದರೂ ಹಬ್ಬದಡಿಗೆ ಮಾಡಿದ ಪಕ್ಕದ ಮನೆಯವರೆದುರು, ’ನಮ್ಮನೇಲಿ ಅಡಿಗೆ ಎಷ್ಟು ಚೆನ್ನಾಗಿತ್ತು ಗೊತ್ತಾ’ ಎಂದು ಬಡಬಡಿಸಿದ ಪುಟ್ಟ ಪೋರನ ಹಾಗೆ ಕಾಣಿಸಿದಳು. ಅವಳು ರೇಖಾ, ಹಿಂದಿ ಚಿತ್ರರಂಗದ ಎವರ್ ಗ್ರೀನ್ ಸುಂದರಿ. ಸಿಮಿ ಗರೆವಾಲ್ ಳ ಕಾರ್ಯಕ್ರಮದಲ್ಲಿ ಅವಳೆದುರಿನ ಖುರ್ಚಿಯಲ್ಲಿ ಕೂತು ಅನೌಪಚಾರಿಕ ಮಾತುಕಥೆಯಾಡಲು ಬಂದವಳು. ಸುಂದರಿ, ಅದ್ಭುತ ನಟಿ, ಆದರೆ ಅಂತಹ ನಟಿಯ ’ನಟನೆ’ಯನ್ನು ಕ್ಯಾಮೆರಾ ನಿರ್ದಾಕ್ಷಿಣ್ಯವಾಗಿ ತೋರುತ್ತಿತ್ತು.
ಅದಕ್ಕೂ ೨೦ ವರ್ಷಕ್ಕೆ ಮೊದಲು ಸಿಮಿ ಆಕೆಯ ಸಂದರ್ಶನ ಮಾಡಿದ್ದಳಂತೆ, ಅಲ್ಲಿ ಎಷ್ಟೋ ಪ್ರಾಮಾಣಿಕವಾಗಿ, ಲವಲವಿಕೆಯಿಂದ ಉತ್ತರಿಸುತ್ತಿದ್ದ ಈಕೆ ಈಗ ಕೇವಲ ’ಸರಿ’ ಉತ್ತರಗಳನ್ನೇ ನೀಡುತ್ತಿದ್ದಳು, ಆಗ ಅವಳ ಕಣ್ಣು, ಕೆನ್ನೆಯ ತಿರುವು, ತುಂಬಿದ ಗಲ್ಲ ಎಲ್ಲದರಲ್ಲಿ ಜೀವನ ನರ್ತಿಸುತ್ತಿತ್ತು. ಈಗ ಅವಳದು ಪ್ರಪಂಚವನ್ನು ’ಕಂಡ’ ಕಣ್ಣುಗಳು. ನನಗೆ ಅವಳದೇ ಚಿತ್ರದ ’ಜುಸ್ತುಜೂ ಜಿಸ್ ಕಿ ಥಿ ಉಸ್ ಕೋ ತೊ ನಾ ಪಾಯ ಹಮ್ ನೆ, ಇಸ್ ಬಹಾನೆ ಸೆ ಮಗರ್ ದೇಖ್ ಲಿ ದುನಿಯಾ ಹಮ್ ನೆ’ (ಯಾವುದಕ್ಕಾಗಿ ಹಂಬಲಿಸಿದ್ದೆನೋ ಅದು ನನಗೆ ಕಡೆಗೂ ಸಿಗಲೇ ಇಲ್ಲ, ಆದರೆ ಆ ನೆಪದಲ್ಲಿ ನನಗೆ ಈ ದುನಿಯಾ ಏನು ಎನ್ನುವುದು ಅರ್ಥ ಆಯಿತು…) ಹಾಡು ನೆನಪಾಗುತ್ತಿತ್ತು.
ಅಪ್ಪನ ಕುರಿತಾದ ಪ್ರಶ್ನೆ ಒಂದಕ್ಕೇ ಅಲ್ಲ, ಎಲ್ಲದ್ದಕ್ಕೂ ಆಕೆ ಹೀಗೆ ಕಣ್ಣಿಗೆ ಹೊಡೆಯುವಂತೆ ಎದ್ದು ಕಾಣುತ್ತಿದ್ದ ಹುಸಿ ಉತ್ತರಗಳನ್ನೇ ಕೊಡುತ್ತಿದ್ದಳು… ವಿನೋದ್ ಮೆಹ್ರಾನ ಜೊತೆಗಿನ ಮದುವೆ, ಅಮಿತಾಬ್ ನ ಜೊತೆಗಿನ ’ಸಿಲ್ ಸಿಲಾ’, ಚಿತ್ರರಂಗಕ್ಕೆ ಬಂದಾಗ ಅವಳ ಮನಸ್ಥಿತಿ ಎಲ್ಲಕ್ಕೂ…
ಅವಳೊಬ್ಬಳು ಒಂಟಿತನವನ್ನೇ ಸಂಗಾತಿಯಾಗಿ ಪಡೆದ ಹೆಣ್ಣು. ಅಮ್ಮ ಪುಷ್ಪವಲ್ಲಿ, ಅಪ್ಪ ಜೆಮಿನಿ ಗಣೇಶನ್. ಪುಷ್ಪವಲ್ಲಿಯನ್ನು ಮದುವೆ ಆಗುವ ವೇಳೆಗಾಗಲೇ ಆತ ವಿವಾಹಿತ. ಮದುವೆ ಆಗಿ, ಆರು ಮಕ್ಕಳ ನಂತರ ಮುದ್ದು ಮುಖದ ಕಲಾವಿದೆ ಸಾವಿತ್ರಿಗಾಗಿ, ಈ ಮನೆ, ಹೆಂಡತಿ, ಮಕ್ಕಳು ಎಲ್ಲರನ್ನೂ ಬಿಟ್ಟು ಹಿಂದೆ ತಿರುಗದೆ ನಡೆದು ಹೋದ. ಮನೆಗೆ ಹಿರಿಯ ಮಗ ಇದ್ದೂ ಇಲ್ಲದಂತೆ. ಪುಷ್ಪವಲ್ಲಿ, ಆರು ಮಕ್ಕಳ ತಾಯಿ, ನಟಿಯಾಗಿ ತನ್ನ ಕಾಲ ಮುಗಿಯಿತು ಅನ್ನಿಸಿದಾಗ ಅವಳ ಕಣ್ಣು ಬಿದ್ದಿದ್ದು ೯ ನೆಯ ತರಗತಿ ಓದುತ್ತಿದ್ದ ಮಗಳು ಭಾನುರೇಖಾ ಮೇಲೆ. ಅಷ್ಟು ಜನರ ಹೊಟ್ಟೆಪಾಡಿನ ಭಾರ ಹದಿನೈದರ ಈ ಪುಟ್ಟ ಹುಡುಗಿಯ ಹೆಗಲಿಗೆ.
ಎರಡು ತೆಲುಗು ಚಿತ್ರಗಳು, ಕನ್ನಡದಲ್ಲಿ ನಟಿಸಿದ ’ಗೋವಾದಲ್ಲಿ ಸಿಐಡಿ ೯೯೯ ನಂತರ, ಹಿಂದಿ ಚಿತ್ರ ’ಸಾವನ್ ಬಾದೋಂ’ಗಾಗಿ ಮುಂಬೈಗೆ ಹೋದ ಎಳೆ ಹುಡುಗಿಯ ಜೊತೆ ಅಮ್ಮನೂ ಬಂದಿರಲಿಲ್ಲ. ಬೆನ್ನ ಹಿಂದೆ ಕಾಯುವ ಯಾವ ದೊಡ್ಡ ಹೆಸರೂ ಇಲ್ಲ. ಅಲ್ಲಿನ ಭಾಷೆ, ಜನ, ಪರಿಸರ ಎಲ್ಲಾ ಹೊಸತು, ಸಣ್ಣ ವಯಸ್ಸು, ವಿದ್ಯೆ ಅಥವಾ ಅದರಿಂದ ಬರುವ ಆತ್ಮವಿಶ್ವಾಸ ಇಲ್ಲ, ಜೊತೆಗೆ ಮುರಿದ ಮನೆಯಿಂದ ಬಂದವಳೆಂಬ ಹಿಂಜರಿಕೆ, ಇಲ್ಲಿ ಏನೇ ಆಗಲಿ, ಬಿಟ್ಟು ಹೋಗಲಾರೆ, ಹೋಗಲು ಅಮ್ಮ ಬಿಡುವುದಿಲ್ಲ ಎನ್ನುವ ಅಸಹಾಯಕತೆ. ಚಿತ್ರರಂಗ ಅವಳನ್ನು ಹೇಗೆಲ್ಲಾ ನಡೆಸಿಕೊಂಡಿರಬಹುದು ಎಂದು ಊಹಿಸಲೂ ಹೆದರಿಕೆ ಆಗುತ್ತದೆ. ಹಿಂದಿಯ ತುಣುಕೂ ಬಾರದ ಹುಡುಗಿಯ ಬಗ್ಗೆ ಸ್ಟುಡಿಯೋದಲ್ಲಿ ಹೇಗೆಲ್ಲಾ ಅಶ್ಲೀಲವಾಗಿ ಮಾತಾಡಿಕೊಳ್ಳುತ್ತಿದ್ದರು ಎನ್ನುವುದು ಆಕೆ ಮುಂದೆಂದೋ ಭಾಷೆ ಕಲಿತಾಗ ಗೊತ್ತಾಯ್ತಂತೆ.

ಆಗಾಗ ಹುಡುಗಿ ಗಂಟೆಗಟ್ಟಲೆ ಸೆಟ್ ನಿಂದ ಮಾಯವಾಗಿ ಬಿಡುತ್ತಿದ್ದಳು. ಆತ್ಮಹತ್ಯೆಯ ಪ್ರಯತ್ನಗಳನ್ನು ಮಾಡಿದ್ದಳು, ಹದಿನೈದರ ಹುಡುಗಿಯ ಕಣ್ಣ ಸುತ್ತಲೂ ಕಪ್ಪು ವರ್ತುಲಗಳು, ಸೋತ ಮುಖ, ದಣಿದ ದೇಹ, ಆಗಿನ ಅವಳ ಫೋಟೋ ನೋಡಿದರೆ ಎದೆಯಲ್ಲಿ ಸಂಕಟವಾಗುತ್ತಿತ್ತು.
ಅವಳ ಆತ್ಮಹತ್ಯೆಯ ಬಗ್ಗೆ ಸಿಮಿ ಮಾತನಾಡಿದಾಗ ಪುಟ್ಟ ಹುಡುಗಿಯಂತೆ, ’ಇಲ್ಲ ಅದು ಹಾಗಲ್ಲ, ಏನು ಗೊತ್ತ ನನಗೆ ಹಾರುವುದು ಅಂದರೆ ಒಂಥರಾ ಫ್ಯಾಸಿನೇಷನ್, ಬಾಲ್ಕನಿಯ ಮೇಲೆ ನಿಂತಾಗ ಹಕ್ಕಿಯಂತೆ ಹಾರಬೇಕು ಅನ್ನಿಸ್ತಿತ್ತು ಅಷ್ಟೆ, ಆತ್ಮಹತ್ಯೆ ಮಾಡಿಕೋಬೇಕು ಅಂತ ಅಲ್ಲ’ ಎಂದು ಅವಳನ್ನುತ್ತಿದ್ದರೆ ನನ್ನ ಕಣ್ಣಲಿ ಕದಲುತ್ತಿದ್ದುದು ಅದೇ ಹಸಿದುಕೊಂಡೇ ಹೊಟ್ಟೆ ತುಂಬಿತು ಎಂದ ಪುಟ್ಟ ಹುಡುಗನ ಚಿತ್ರ. ಈಗ ಆಕೆಗೆ ಸುಮಾರು ೬೦ ವರ್ಷ ವಯಸ್ಸು, ಅವಳ ಕಂಗಳಲ್ಲಿ ಬಾಲ್ಯದ ಕಳೇಬರ ಒಮ್ಮೊಮ್ಮೆ ಕಂಡು ಬೆಚ್ಚಿಬೀಳಿಸುತ್ತದೆ. ತನಗೆ ದೊರಕದ್ದ್ಯಾವುದೂ ತನಗೆ ಬೇಕಾಗಿರಲಿಲ್ಲ, ತಾನು ಎಂದೂ ಏನೂ ಕಳೆದುಕೊಂಡೇ ಇಲ್ಲ ಎನ್ನುವುದನ್ನು ಒಪ್ಪಿಸಲು ಈಕೆ ಹರಸಾಹಸ ಪಡುತ್ತಿದ್ದರೆ ಮನಸ್ಸು ಚುರ್ ಅನ್ನುತ್ತಿತ್ತು.
ಹೀಗೆ ಹದಿನೈದಕ್ಕೆ ಚಿತ್ರರಂಗಕ್ಕೆ ಬಂದ ಹುಡುಗಿಗೆ ನಟನೆ ಒಂದು ಕೆಲಸ ಅಷ್ಟೆ. ಅದನ್ನವಳು ಎಂದೂ ಗಂಭೀರವಾಗಿ ತೆಗೆದುಕೊಂಡದ್ದೇ ಇಲ್ಲ. ವಿನೋದ್ ಮೆಹ್ರ ಜೊತೆ ಮದುವೆ, ವಿಚ್ಛೇದನ, ತನ್ನ ಬೇಜವಾಬ್ದಾರಿ ನಡವಳಿಕೆ, ಪರಮ ಅಶಿಸ್ತು, ಎಲ್ಲದರ ನಡುವೆಯೇ ಅವಳ ಜೀವನಕ್ಕೆ ಬಂದದ್ದು ಅಮಿತಾಭ್. ಆ ಪ್ರೇಮ ಫಲಿಸಲಿ, ಬಿಡಲಿ, ಆ ಸಂಬಂಧ ಅವಳನ್ನು ಪ್ರಬುದ್ಧಳನ್ನಾಗಿಸಿತು. ಅವಳ ತೂಕಕ್ಕೆ ಸಿಕ್ಕ ಅಂಕೆ, ಆಹಾರ, ನಡೆ-ನುಡಿ, ದನಿ, ದನಿಯ ಮೃದುತ್ವ, ಮಾತಿನಲ್ಲಿಯ ಸಣ್ಣ ನಿಲುಗಡೆ ಎಲ್ಲದರಲ್ಲೂ ಆತ ಇದ್ದ, ಅವಳ ಜೀವನ ಕ್ರಮವೇ ಬದಲಾಗಿ ಹೋಯಿತು. ಒಂದಕ್ಷರ ಹಿಂದಿ ಬರದ ಹುಡುಗಿ ಅದ್ಭುತ ಉರ್ದು ಕಲಿತಳು. ಉಮ್ರಾವ್ ಜಾನ್ ಚಿತ್ರದಲ್ಲಿ ಅವಳ ನಡೆ, ನುಡಿ ಎಲ್ಲವೂ ಎಷ್ಟು ಪರ್ಫೆಕ್ಟ್ ಇತ್ತು ಎಂದರೆ ಮುಂದೆ ಅದೇ ಪಾತ್ರ ಮಾಡಿದಾಗ ಐಶ್ವರ್ಯಳಂತಹ ಐಶ್ವರ್ಯ ಅವಳ ಮುಂದೆ ಸಪ್ಪೆಯಾಗಿ ಕಂಡಿದ್ದಳು. ಭಾವವನ್ನು ಎದೆಗೆ ಗುರಿ ಇಟ್ಟಂತೆ ಬೀಸುವ ಕಣ್ಣು, ಆ ಮಂದ್ರ ದನಿ ಎಲ್ಲವೂ ಅವಳಲ್ಲಿನ ಸುಂದರಿಯನ್ನು ಎದುರಿಗೆ ನಿಲ್ಲಿಸಿದ್ದವು. ಕಂಬಳಿ ಹುಳ ಚಿಟ್ಟೆಯಾದ ಕಥೆ ಇದು.

ಅಮಿತಾಭ್ ಜೊತೆ ಅವಳ ಸಂಬಂಧ ಫಲಿಸಲಿಲ್ಲ. ಶೋಭಾ ಡೇ ಬರೆದ ’ಸ್ಟಾರಿ ನೈಟ್ಸ್’ ಪುಸ್ತಕದ ನಾಯಕಿಯಲ್ಲಿ ಇವಳ ನೆರಳನ್ನು ಜನ ಕಂಡರು. ಫಿಲ್ಮಿ ಪತ್ರಕರ್ತ ಮೋಹನ್ ದೀಪ್ ಇವಳ ಬದುಕಿನ ಹಸಿ ಬಿಸಿ ಎಳೆಗಳ ದುಖಾನು ಹರವಿ ’ಯುರೇಖ’ ಎಂಬ ಪುಸ್ತಕ ಬರೆದ. ಮನೆಯಲ್ಲಿ ತಂಗಿಯರ ಮದುವೆ ಆಗಿತ್ತು, ಅವರೆಲ್ಲಾ ದೂರಾಗಿದ್ದರು, ಒಂಟಿ ಉಳಿದವಳಿಗೆ ಬದುಕು ಕಲಿಸಿದ್ದು ಒಂದೇ ಪಾಠ, ಯಾರನ್ನೂ ನಂಬಬೇಡ, ನಂಬಿದರೆ ಪ್ರೀತಿ, ನಂಬಿದರೆ ಮೋಸ, ನಂಬಿದರೆ ಒಂಟಿತನ ಅಂತ. ಆಗ ಅವಳು ಮಡಿಲಿಗೆಳೆದುಕೊಂಡಿದ್ದು ನಾಯಿ ಮರಿಗಳನ್ನ. ’ಪಿಸ್ಟಿ’ ಎನ್ನುವ ಹೆಸರಿನ ಲಾಸಾ ಆಪ್ಸೋ ತಳಿಯ ನಾಯಿ ಮರಿ ಅಂದರೆ ಇವಳಿಗೆ ಮಡಿಲ ಮಗುವಿನಂತೆ. ಹಾಗೇ ಸಾಕಿದ್ದಳು. ಅವಳ ಪಾಲಿಗೆ ಬಹುಷಃ ಸಂಪೂರ್ಣವಾಗಿ ತನ್ನದು ಅನ್ನಿಸಿದ ಸಂಬಂಧ ಅದೊಂದು ಮಾತ್ರ.. ಅವಳ ಮಾತು ಎಲ್ಲರನ್ನೂ ತಾಕಲೆಂದೇ ಹೊರಬರುತ್ತಿತ್ತು, ಆದರೆ ಯಾರಿಗೂ ಕಾಣಬಾರದೆಂದು ಅವಳು ಮುಚ್ಚಿಟ್ಟುಕೊಂಡಿದ್ದ ಮೌನ ಮಾತ್ರ ಎಲ್ಲರ ಎದೆಯೊಳಕ್ಕೆ ಇಳಿಯುತ್ತಿತ್ತು.
ಸಿಮಿಯ ಕಾರ್ಯಕ್ರಮದ ಪೂರ ಘನ ಗಾಂಭೀರ್ಯದಿಂದ ಕೂತ ಇವಳಿಗೆ ಒಂದು ಸರ್ಪರೈಸ್ ಎಂದು ಸಿಮಿ ಆ ನಾಯಿ ಮರಿಯೊಂದಿಗೆ ಆಟವಾಡುತ್ತಿದ್ದ ವೀಡಿಯೋ ತೋರಿಸಿದಾಗ ಇಡೀ ದೇಹವನ್ನು, ಹೃದಯವನ್ನು, ಕಡೆಗೆ ಆತ್ಮವನ್ನು ಸಹ ಹಿಮಗಟ್ಟಿಸಿಕೊಂಡು ಕೂತಿದ್ದ ಈ ಕಿನ್ನರಿಯ ಕಣ್ಣಿಂದ ಅವಳಿಗೇ ಅರಿವೇ ಇಲ್ಲದಂತೆ ಕಣ್ಣೀರು ಜಾರುತ್ತಿತ್ತು. ಅಮ್ಮ, ಅಪ್ಪ, ವಿನೋದ್, ಅಮಿತಾಭ್ ನ ಕೈ ಜಾರಿದ ಪ್ರೇಮ, ನಂತರ ಮದುವೆ ಆದ ಮುಖೇಶ್ ಅಗರ್ ವಾಲ್ ಆತ್ಮಹತ್ಯೆ ಯಾವುದೂ ಅಲ್ಲಾಡಿಸದ ಇವಳ ನಡವಳಿಕೆಯನ್ನು ಆ ಹಿಡಿತೂಕದ ನಾಯಿ ಮರಿ ಕರಗಿಸಿತ್ತು. ನನಗೆ ಆಗ ಮಾತ್ರ ರೇಖಾಳಲ್ಲಿಯ ಭಾನುರೇಖ ಕಂಡಳು.
ಕಾರ್ಯಕ್ರಮ ಮುಗಿದಾದ ಮೇಲೂ ನನ್ನನ್ನು ಕಾಡುತ್ತಿದ್ದುದು, ಕಣ್ಣಿಗೆ ರಾಚುವ ನಿಜದ ಎದುರಿನಲ್ಲೇ ಅದನ್ನು ನಿರಾಕರಿಸುವ ಮನಸ್ಸಿನ ಆಟ. ಹಾಗೆ ಸತ್ಯವನ್ನು ನಿರಾಕರಿಸುವ ಮೂಲಕ ನಾವು ಸಮಾಧಾನ ಪಡಿಸುವುದು ಎದುರಿನವರನ್ನಾ ಅಥವಾ ನಮ್ಮನ್ನಾ? ಈ ಪ್ರಶ್ನೆ ಆಗಾಗ ನನ್ನನ್ನು ಕುಟುಕುತ್ತಲೇ ಇರುತ್ತದೆ. ಇಂತಹ ನಿರಾಕರಣೆಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಮನಸ್ಸಿಗೆ ಒಪ್ಪದ, ಮನಸ್ಸನ್ನು ಒಪ್ಪಿಸಲಾಗದ, ಎದುರಿನವರನ್ನು ಒಪ್ಪಿಸಲಾರದ ಯಾವುದೇ ಘಟನೆಯನ್ನು ನಿರಾಕರಿಸಿಯೋ ಅಥವಾ ಅದರ ಸಾಂದ್ರತೆಯನ್ನು, ಪರಿಣಾಮವನ್ನು ಕಡಿಮೆ ಮಾಡಿಯೋ ಅಥವಾ ಇನ್ನೂ ಕೆಲವೊಮ್ಮೆ ನಮ್ಮ ನಡುವಳಿಕೆಯ ಜವಾಬ್ದಾರಿಯನ್ನು ನಾವು ಹೊರಲು ನಿರಾಕರಿಸಿ ಅದು ಇನ್ನೊಬ್ಬರ ಯಾವುದೋ ಕ್ರಿಯೆಯ ಪ್ರತಿಕ್ರಿಯೆ ಎಂದೋ ಸಾಧಿಸಿ ನಾವು ಸತ್ಯವನ್ನು, ನಮ್ಮ ಜವಾಬ್ದಾರಿಯನ್ನು ಸಾರಾಸಗಟಾಗಿ ನಿರಾಕರಿಸಿಬಿಡುತ್ತೇವೆ. ಈ ನಿರಾಕರಣೆ ಕೆಲವೊಮ್ಮೆ ಬೇರೆಯವರ ಕ್ರಿಯೆಗೆ ಸಂಬಂದಿಸಿದ್ದಾಗಿರುತ್ತದೆ. ನಾವು ಅತ್ಯಂತ ಪ್ರೀತಿಸುವ ಜೀವ ನಮ್ಮ ಕಣ್ಣೆದುರಲ್ಲೇ ತಪ್ಪು ಮಾಡುತ್ತ ಹೋದಾಗಲೂ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿ ಅದರ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳುತ್ತೇವಲ್ಲ ಹಾಗೆ. ಇನ್ನೂ ಕೆಲವೊಮ್ಮೆ ಅವರ ತಪ್ಪುಗಳಿಗೆ ಬೇರೆಯವರನ್ನು ಕಾರಣವಾಗಿಸುತ್ತೇವಲ್ಲ ಹಾಗೆ. ಇಲ್ಲಿ ನಮಗೆ ಆ ಜೀವದ ತಪ್ಪನ್ನು ಒಪ್ಪಿಕೊಳ್ಳುವುದಕ್ಕಿಂತ ಅದಕ್ಕೆ ನೆಪಗಳನ್ನು ಕಾರಣವಾಗಿಸುವುದರಲ್ಲೇ ಬದುಕು ಸರಳ ಅನ್ನಿಸತೊಡಗಿರುತ್ತದೆ.
ಇನ್ನೂ ಕೆಲವೊಮ್ಮೆ ಬೇರೆಯವರ ನಡೆ ನುಡಿಯನ್ನಲ್ಲ, ನಮ್ಮದನ್ನೇ ನಾವು ನಿರಾಕರಿಸುತ್ತೇವೆ. ಎಂದೋ ಮನಶ್ಯಾಸ್ತ್ರದ ಪುಸ್ತಕದಲ್ಲಿ ಓದಿದ ಹಾಗೆ, ನಿರಾಕರಣೆಯನ್ನು ಸ್ಥೂಲವಾಗಿ ಮೂರು ಥರದಲ್ಲಿ ವಿಂಗಡಿಸಬಹುದಂತೆ. ಸಾಮಾನ್ಯ ನಿರಾಕರಣೆ, ಘಟನೆಯ ಪರಿಣಾಮವನ್ನು ಕುಗ್ಗಿಸಿ, ಆ ಮೂಲಕ ನಮ್ಮ ಕ್ರಿಯೆಯ ಪರಿಣಾಮವನ್ನು ತೆಳುವಾಗಿಸುವುದು, ಅಥವಾ ನಮ್ಮೆಲ್ಲ ಕ್ರಿಯೆಗೆ ಮತ್ತ್ಯಾರದೋ ಕ್ರಿಯೆ ಕಾರಣ ಎಂದು ಪ್ರತಿಪಾದಿಸುತ್ತಾ ಆ ಮೂಲಕ ನಮ್ಮ ನಡವಳಿಕೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು.
ಆದರೆ ಇಲ್ಲಾಗಿದ್ದೇ ಬೇರೆ, ಇಲ್ಲಿ ರೇಖಾ ಎಲ್ಲೂ ತನ್ನನ್ನು ತಾನು ಸಮರ್ಥಿಸಿಕೊಳ್ಳಲೇ ಇಲ್ಲ, ಎಂದೂ ಪ್ರೀತಿಸದ, ಮಾತನಾಡಿಸದ ಅಪ್ಪನನ್ನು ಸಮರ್ಥಿಸಿಕೊಂಡಳು, ಹದಿನೈದರ ಮಗಳನ್ನು ಶಾಲೆ ಬಿಡಿಸಿ, ದುಡಿಯಲು ಕಳಿಸಿದ ಅಮ್ಮನನ್ನು ಸಮರ್ಥಿಸಿಕೊಂಡಳು, ಫಲಿಸದ ಪ್ರೇಮವನ್ನು, ದೂರಾದ ಪ್ರೇಮಿಯನ್ನು, ಬಾಲ್ಯ ಕದ್ದ ಮನೆಯವರ ಕ್ರೌರ್ಯವನ್ನು, ಮುರಿದುಬಿದ್ದ ಮದುವೆಯನ್ನು ಎಲ್ಲವನ್ನೂ ಎಲ್ಲರನ್ನೂ ಸಮರ್ಥಿಸಿಕೊಂಡಳು. ’ಸರಿ’ ಎಲ್ಲಾ ’ಸರಿ’ ಆದರೆ ಇಷ್ಟೆಲ್ಲಾ ’ಸರಿ’ಗಳ ನಡುವೆಯೂ ನನ್ನ ಮನಸ್ಸಲ್ಲಿ ಯಾಕೆ ಮಾತೇ ಇಲ್ಲದೆ, ಯಾವುದೇ ಸಮರ್ಥನೆಯನ್ನು ನೀಡದೆ, ಮೌನವಾಗಿ ಅವಳ ಕಣ್ಣಿಂದ ಜಾರಿ, ಕೆನ್ನೆಯಲ್ಲಿ ಹರಿದ ಕಣ್ಣೀರು ನಿಲ್ಲಬೇಕು? ಯಾಕೆ ’ಪಿಸ್ಟಿ’ ಎನ್ನುವ ಆ ನಾಯಿಮರಿ ಅವಳ ಏಕಾಂತದ ಸಂಗಾತಿಯಾಗಿ ಕಾಣಬೇಕು?
ಯಾಕೆ ನಿರಾಕರಣೆಗಿಂತ ಸತ್ಯದ ಒಪ್ಪಿಗೆ ನಮ್ಮಲ್ಲಿ ಗಟ್ಟಿಯಾಗಿ ನಿಂತುಬಿಡುತ್ತದೆ?

‍ಲೇಖಕರು G

21 February, 2014

20 Comments

  1. Rj

    ತುಂಬ ಇಷ್ಟಪಟ್ಟು ಓದಿಸಿಕೊಂಡ ಬರಹ.
    ನಿಮ್ಮ ಒಳಗಣ್ಣು ಎಷ್ಟು ಸೂಕ್ಷ್ಮ ಅಂತ ಗಾಬರಿಯಾಗುತ್ತದೆ! 🙂
    – Rj

  2. bharathi b v

    Its JUST perfect …!!!!!!!

  3. Sandhya, Secunderabad

    Ha…adeshtu chennagi barediddiri Sandhya! Tumba novaaguttade Rekha’lannu TV’ya parade meLe nodidaagalella…’Baduke neeneke Heege’ anta keLuvantaaguttade…

  4. amardeep.ps

    tumba ishtavaayitu madam…..

  5. Sushma Moodbidri

    ರೇಖಾಳ ಒಳಗಿನ ಭಾನುರೇಖಾ ಹೀಗೆಲ್ಲವಾ..?
    ನಿಮ್ಮ ಸೂಕ್ಷ್ಮತೆ ಗ್ರಹಿಸುವ ಪರಿಗೆ ಬೆರಗಾಗಿದ್ದೇನೆ…

  6. Sowmya

    Eshtu adbhutavaagi barediddera sandhya. Tumbaaaaaa ishtavaayitu…..

  7. Renuka Nidagundi

    ಯಾಕೋ ನೋವಾಯಿತು…ಇಷ್ಟವಾಯಿತು ಸಂಧ್ಯಾ

  8. Usha Rai

    Abbaa enthaha samvedanaasheela baraha! I endorse Bharathi’s words Its Just perfect!!

  9. Jayashree B kadri

    Oh my God! how nicely you write. plain wonderful!

  10. sindhu

    ಸೂಕ್ಷ್ಮಗ್ರಾಹೀ ಬರಹ ಸಂಧ್ಯಾ.
    ಸಂಜೆಯ ಒಡಲಲ್ಲಿ ಚೆಲ್ಲಿದ ಎಲ್ಲ ಬಣ್ಣಗಳನ್ನೂ (ಬೆಳಿಗ್ಗೆ ಮುಂಚೆ ಸಿಕ್ಕಿದ್ದನ್ನೂ ಸೇರಿಸಿ) ಒಪ್ಪವಾಗಿ ಓದಲು ಹರವಿಟ್ಟ ಹಾಗೆ…!
    ಪ್ರೀತಿಯಿಂದ,ಸಿಂಧು

  11. Prabhakar Nimbargi

    Avalu tanna tande-taayi, tanna jeevanadalli aada pratiyondu ghataneyannu samarthisuvadellavannoo virodhaarthakavaagi nodidre, ade satya enisuttade! Vidhiya viparyaasavidu. Intaha adbhuta nati, na bhooto na bhavishyati embantiro natiya jeevanave ondu viparyasagala kante! Bahu sookshmavaagi avla bhaavanegalannu hididitteedira!

  12. Ram Konanur

    ತುoಬಾ ಇಷ್ಟ ಆಯಿತು ನಿಮ್ಮ ಬರಹ.

  13. h a patil

    – ನಟಿ ರೇಖಾಳ ಬಗೆಗೆ ನೀವು ಬರೆದದ್ದೆಲ್ಲ ಸರಿ ಆದರೆ ಆಕೆಯ ಬದುಕು ನೇರ್ಪುಗಳ್ಳದೆ ಇರುವಲ್ಲಿ ಆಕೆಯದೆ ಆದ ಸ್ವಯಂಕೃತಾಪರಾಧವೂ ಇದೆ. ಅಮಿತಾಬ ಬಚ್ಚನ್, ವಿನೋದ ಮೆಹ್ರಾ ಮುಂತಾದವರಲ್ಲದೆ ಆಕೆ ತನ್ನ ಕಾಲದ ಸಹೋದ್ಯೋಗಿ ನಟರಾದ ಶತೃಘ್ನಸಿನ್ಹಾ, ಮಹೇಂದ್ರ ಸಂದು ಮುಂತಾದವರ ಜೊತೆಗೆ ಸಹ ಆಕೆಯ ಹೆಸರು ಕೇಳಿ ಬರುತ್ತಿತ್ತು, ಸಾವನ್ ಬಾಧೋ ಚಿತ್ರಕ್ಕೆ ಮೊದಲೆ ನಟ ಬಿಶ್ವಜೀತ ನಿರ್ಮಾಣ ಮತ್ತು ಅಭಿಒನಯದ ಚಿತ್ರದಲ್ಲಿ ಚುಂಬನ ದೃಶ್ಯವೊಂದರಲ್ಲಿ ಆಕೆ ಪಾಲ್ಗೊಂಡಿದ್ದು, ಅಮಿತಾಬ್ ಹೆಸರಿನ ಜೊತೆಗೆ ಆಕೆಯ ಹೆಸರು ತಳಕು ಹಾಕಿಕೊಳ್ಳುವ ಮೊದಲು, ಮದುವೆಯಾಗದೆ ಮಗು ಪಡೆಯುವ ತನ್ನ ಹಂಬಲವನ್ನು ಆಕೆ ಪ್ರಿಂಟ್ ಮೀಡಿಯಾದಲ್ಲಿ ನೀಡಿದ್ದು ಮುಂತಾದ ಆಗಿನ ಕಾಲಕ್ಕೆ ಆಕೆ ನೀಡುತ್ತಿದ್ದ ಬಿಂದಾಸ ಹೇಳಿಕೆಗಳು, ಜೊತೆಗೆ ಆಕೆ ಜೀವನವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಆಕೆನ ಈಗಿನ ದುರಂತ ಸ್ಥಿತಿಗೆ ಕಾರಣವಾಗಿರಬಹುದೆ, ಸಿನೆಮಾ ರಂಗದ ಎಷ್ಟು ಜನ ನಟಿಯರು ಸುಂದರ ಬದುಕನ್ನು ಕಟ್ಟಿಕೊಂಡಿಲ್ಲ. ಅವಳ ವೈಯಕ್ತಿಕ ಬದುಕಿನ ಕಥೆ ಏನೇ ಇರಲಿ ಆಕೆಯೊಬ್ಬ ನಿಜ ಅರ್ಥದ ಅಭಿನೇತ್ರಿ. ಆಕೆಯ ಆಭಿನಯದ ಉಮ್ರಾವೋ ಜಾನ್ ನಮ್ಮ ದೇಶದ ಹಿಂದಿಯ ಸಾರ್ವಕಾಲಿಕ ಚಿತ್ಚರಗಳ ಪೈಕಿ ಒಂದು. ಆಕೆಯ ಆ ಚಿತ್ರದ ಕೊನೆಯಲ್ಲಿ ಬರುವ ಉಮ್ರಾವೋಳ ದುರಂತ ಬದುಕಿನ ಸನ್ನಿವೇಶ ಆಕೆಯ ವರ್ತಮಾನದ ಬದುಕಿಗೆ ಅನ್ವಯಿಸುವಂತಿದೆ, ಹೀಗಾಗಿ ಆಕೆ ಅತನ್ನ ಅಭಿನಯದ ಸತ್ವವನ್ನೆಲ್ಲ ಕ್ರೋಢೀಕರಿಸಿಕೊಂಡು ಆ ಚಿತ್ರದಲ್ಲಿ ಆಭಿನಯಿಸಿದಳೇನೋ ಎನಿಸುತ್ತದೆ. ಅವಳ ಏಕಾಂತ ನಿರ್ಲಿಪ್ತ ಬದುಕಿನ ಬಗೆಗೆ ಸಿನೆಮಾ ಪ್ರೇಮಿಗಳೆಲ್ಲರ ಮರುಕವಿದೆ ಜೊತೆಗೆ ಗೌರವವಿದೆ.

  14. umasekhar

    ninna baraha vodi simiya p[rogramme nenapayitu. Jeevanadalli preetigagi kadavalu rekha shabariyanthe. lekhana vodi bejarayitu hage khushiayitu.

  15. Anil Talikoti

    ಬದುಕು ಸಮಾಂತರ ರೇಖೆಯಾಗೆ ಊಳಿದ ರೇಖಾಳ ವಕ್ರತೆಯನ್ನು ಎಷ್ಟು ಸುಂದರವಾಗಿ ಎಳೆದಿದ್ದಿರಿ -ತುಂಬಾ ಚೆನ್ನಾಗಿದೆ
    -Anil

  16. kusumabaale

    Aa ardhasatyada grahike ,vivarane oshtavaaytu.

  17. anu pavanje

    “bearing in dignity”…….!!!

  18. Anonymous

    Magnificient article exposing Rekha’s inner life! Hats off Sandhya Rani madam.

  19. Ramesh Megaravalli

    Magnificient article exposing Rekha’s inner life

  20. ಶಮ, ನಂದಿಬೆಟ್ಟ

    “ಹಿಂದಿಯ ತುಣುಕೂ ಬಾರದ ಹುಡುಗಿಯ ಬಗ್ಗೆ ಸ್ಟುಡಿಯೋದಲ್ಲಿ ಹೇಗೆಲ್ಲಾ ಅಶ್ಲೀಲವಾಗಿ ಮಾತಾಡಿಕೊಳ್ಳುತ್ತಿದ್ದರು ಎನ್ನುವುದು ಆಕೆ ಮುಂದೆಂದೋ ಭಾಷೆ ಕಲಿತಾಗ ಗೊತ್ತಾಯ್ತಂತೆ.” – ಯಾಕೋ ಕಣ್ಣು ತೇವಗೊಳಿಸಿತು.
    ಅಂದ ಹಾಗೆ ನಿನ್ನ ಸೂಕ್ಷ್ಮಗ್ರಾಹಿತ್ವವನ್ನು ಮಾತ್ರ ನನಗೆ ಕೊಡೋ ಅಂತ ಕೇಳಿದರೆ ಕೊಟ್ಟು ಬಿಡುವೆಯಾ ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading