ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಹೀಗೆ ಕೆಲವು ಗಮ್ಯದ ಗ್ಯಾರೆಂಟಿ ಬೇಡದ ಪಯಣಗಳು


 
“ನೀನು ನನ್ನ ಎಲ್ಲಿಂದ ಕರೆದುಕೊಂಡು ಬಂದೆಯೋ ಮತ್ತೆ ಅಲ್ಲಿಗೆ
ವಾಪಸ್ ಹೊಗೋದು ಬೇಡ ನನಗೆ,
ನೀನು ಕೊನೆಗೆ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುವೆಯೋ ಅಲ್ಲಿಗೆ
ತಲುಪುವುದೂ ಬೇಡ ನನಗೆ..
ಆದರೆ ಹೋಗುತ್ತಿರುವ ಈ ದಾರಿ.. ಅದು ನನಗೆ ತುಂಬಾ ಇಷ್ಟ ಆಗ್ತಾ ಇದೆ. “
ಸಂಭಾಷಣೆಯನ್ನು ಕೇಳಿದ ಮನಸ್ಸು, ಸಂಭಾಷಣೆಯ ಜೊತೆ ಮುಂದೆ ಸಾಗುವ ಬದಲು ಯಾಕೋ ಈ ಪದಗಳಲ್ಲಿ ಬಂಧಿಯಾಗಿಬಿಟ್ಟಿತ್ತು. ಅದೊಂದು ವಿಳಾಸವೇ ಇಲ್ಲದ ಕಾಗದ, ಹೆಸರೇ ಗೊತ್ತಿಲ್ಲದ ಪ್ರಯಾಣ. ಆಕೆ ಒಬ್ಬ ಶ್ರೀಮಂತ ಉದ್ಯಮಿಯ ಮಗಳು, ಮನೆಯಲ್ಲಿದ್ದರೆ ಮದುವೆಗೆ ಸಿದ್ಧವಾಗುತ್ತಿದ್ದ ನವವಧು, ಮನೆಯಲ್ಲಿನ ಒಡವೆ, ವಜ್ರ, ರೇಶಿಮೆ, ಮೆಹಂದಿ, ಸಂಗೀತದ ಬಂಧನಕ್ಕೆ ತಲೆ ಚಿಟ್ಟುಹಿಡಿದು, ಭಾವಿ ಪತಿಯೊಡನೆ ಹೆದ್ದಾರಿಯಲ್ಲಿ ಒಂದು ಡ್ರೈವ್ ಗೆಂದು ಬರುವ ಹುಡುಗಿ, ಯಾವುದೇ ಉದ್ದೇಶ ಇಲ್ಲದ ಅಪಹರಣಕ್ಕೆ ಸಿಕ್ಕಿ ಅವನೊಂದಿಗೆ ಪ್ರಯಾಣ ಶುರು ಮಾಡಿರುತ್ತಾಳೆ.
ಇನ್ನು ಇವನೋ ಬಾಡಿಗೆ ಅಪರಾಧಿ, ಅಪರಾಧವನ್ನೇ ವೃತ್ತಿಯನ್ನಾಗಿ ಮಾಡಿಕೊಂಡವ, ಅವರು ಪಯಣಿಸುತ್ತಿರುವ ವಾಹನದ್ದೂ ಅದೇ ಅತಂತ್ರ ಪರಿಸ್ಥಿತಿ. ಮುಂದಿನ ಊರು ಮುಟ್ಟುವ ಯಾವುದೇ ಭರವಸೆ ಇಲ್ಲ. ಮುಂದಿನ ಊರಿನಲ್ಲಿ ಅವರನ್ನು ಯಾವುದೇ ಮನೆಯ ಅಂಗಳ ಕಾಯುತ್ತಿಲ್ಲ. ಆದರೆ ಅವರ ಪಯಣದ ದಾರಿ ಮಾತ್ರ ಈ ಲೋಕದ್ದಲ್ಲವೇ ಅಲ್ಲ ಅನ್ನುವಂತಹ ಹಾದಿ. ಹಾದಿ ಮುಂದೆ ಸಾಗುತ್ತಿರುತ್ತದೆ, ಆದರೆ ಅವರಿಬ್ಬರೂ ಮನಸ್ಸಿನಲ್ಲೆಲ್ಲೋ ಸೆರೆಯಾದ ನಿನ್ನೆಗಳ ಹಾದಿಯಲ್ಲಿ ಪಯಣಿಸುತ್ತಿರುತ್ತಾರೆ. ಕಡೆಗೆ ಒಬ್ಬರಿಗೊಬ್ಬರು ಅರ್ಥವಾಗುವುದು ಆ ಮನಸ್ಸಿನಾಳದ ನಿನ್ನೆಯ ಪಯಣದಲ್ಲಿ. ಹಾಗಾಗೆ ಆ ಪಯಣಕ್ಕೆ ’ನಿನ್ನೆ’ ಇದೆ, ’ಇಂದು’ ಇದೆ, ಆದರೆ ’ನಾಳೆ’ ಇಲ್ಲ.
ಪಯಣ ಮತ್ತು ಗಮ್ಯ ಇವೆರಡರಲ್ಲಿ ಯಾವುದು ಮುಖ್ಯ ಎಂದು ಯಾರಾದರೂ ನನ್ನನ್ನು ಕೇಳಿದರೆ ನಾನು ತಡವರಿಸುತ್ತೇನೆ. ಯಾವುದು ಮುಖ್ಯ ಎಂದು ಹೇಗೆ ಹೇಳುವುದು? ಗಮ್ಯವೇ ಮುಖ್ಯ ಎಂದರೆ ಮನಸ್ಸೇ ಇಲ್ಲದ ಯಂತ್ರವಾಗುತ್ತೇವೆ, ಪಯಣವೇ ಮುಖ್ಯ ಎಂದರೆ ನಾಳೆಯ ಬಗ್ಗೆ ಯೋಚಿಸದ ದಡ್ಡರಾಗುತ್ತೇವೆ. ಬದುಕಿನ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾಗಲೇ ಒಂದು ಗಮ್ಯ ಗುರ್ತಿಸಿಕೊಂಡು, ನಾವು ಇಡುವ ಪ್ರತಿ ಹೆಜ್ಜೆಯೂ ಆ ಗಮ್ಯದೆಡೆಗೆ ನಮ್ಮನ್ನು ಕೊಂಡೊಯ್ಯುತ್ತಿದೆಯಾ ಎಂದು ನಿರ್ಧರಿಸಿಕೊಂಡು ಹೆಜ್ಜೆ ಹಾಕುವುದು ಬದುಕುವ ಮಾರ್ಗ ಎಂದು ಎಲ್ಲಾ ಮ್ಯಾನೇಜ್ ಮೆಂಟ್ ಗುರುಗಳೂ, ಹಿತೈಶಿಗಳೂ, ಜಾಣ ಸ್ನೇಹಿತ ಸ್ನೇಹಿತೆಯರೂ ಹೇಳುತ್ತಲೇ ಇರುತ್ತಾರೆ. ಸರಿ ಅವರು ಹೇಳುವುದು. ಆದರೆ ಬದುಕಿಗೆ ಈ ಪಾಠ ಹೇಳುವ ಮೊದಲು, ಮನಸ್ಸಿಗೆ ಅದು ನಾಟಬೇಕಲ್ಲ? ಅಥವಾ ಎಲ್ಲಾ ಬದುಕುಗಳಿಗೂ ಹಾಗೆ ನಾಳೆಯ ಬಗ್ಗೆ ಯೋಚಿಸುವ, ಸಮಾಧಾನದಲ್ಲಿ ಯೋಜಿಸುವ ಮನಸ್ಥಿತಿ ಕೊಡುವ ’ಇಂದು’ ಇರಬೇಕಲ್ಲ? ನಾಳೆಯ ಬಗೆಗಿನ ಕನಸು ಕಾಣಬೇಕೆಂದರೆ ಮೊದಲು ಇಂದು ಕಣ್ಣುಗಳಿಗೆ ನಿದ್ದೆಯ ಅದೃಷ್ಟ ಇರಬೇಕು ಅಲ್ಲವೇ?
ಹಾಗೆ ಇರದಾಗ ಬಹುಶಃ ಮೇಲಿನ ಸಾಲುಗಳು ಮಾತಾಗಬಹುದೇನೋ..
ಎಲ್ಲಾ ಸಂಬಂಧಗಳಿಗೂ ನಿಲ್ದಾಣದ ಹೆಸರು ಹೇಳಿ ಟಿಕೆಟ್ಟು ತೆಗೆದುಕೊಂಡು ಪ್ರಯಾಣ ಮಾಡುವ ನಸೀಬಿರುವುದಿಲ್ಲ. ಟಿಕೆಟು ತೆಗೆದುಕೊಂಡು ಮಾಡುವ ಪಯಣಗಳಿಗೆ ಒಂದು ಗುರಿ ಇರುತ್ತದೆ, ತಲುಪುವ ಊರಿನ ಬಗ್ಗೆ ಭರವಸೆ ಇರುತ್ತದೆ, ದಾರಿಯಲ್ಲಿ ಯಾರೇ ಬಂದರೂ, ತಡೆದು ನಿಲ್ಲಿಸಿದರೂ ಟಿಕೇಟು ತೋರಿಸಿ ಹಕ್ಕಿನಿಂದ ಪ್ರಯಾಣ ಮುಂದುವರಿಸುತ್ತೇನೆ ಎನ್ನುವ ಆತ್ಮ ವಿಶ್ವಾಸ ಇರುತ್ತದೆ. ಆದರೆ ಟಿಕೆಟಿಲ್ಲದೆ ಪಯಣಿಸುವವರಿಗೆ ಈ ಯಾವುದೇ ಸವಲತ್ತುಗಳಿರುವುದಿಲ್ಲ.. ಯಾವಾಗ ಇಳಿಯಬೇಕಾಗುತ್ತದೋ ಗೊತ್ತಿಲ್ಲ, ಹಾಗೆ ಇಳಿದಾಗ ಯಾವ ಪರಿಸ್ಥಿತಿಯಲ್ಲಿ ಇರುತ್ತೇವೆಯೋ ಅದೂ ಸಹ ಗೊತ್ತಿಲ್ಲ. ಕಿಟಕಿಯಾಚೆ ಕಣ್ಣ ಅಳವಿಗೆ ಸಿಕ್ಕ ಸಿರಿಯನ್ನು ನೋಡುತ್ತಿರುವಾಗಲೂ ಯಾರಾದರೂ ಬಂದು ಟಿಕೆಟ್ ಎಲ್ಲಿ ಎಂದು ಕೇಳಿಬಿಡುತ್ತಾರೇನೋ ಎನ್ನುವ ಆತಂಕ ಎದೆಯಲ್ಲಿ ಹೊಡೆದುಕೊಳ್ಳುತ್ತಲೇ ಇರುತ್ತದೆ. ಎಳೆದುಕೊಂಡ ಉಸಿರು ಎದೆಯಲ್ಲಿ ಉಳಿಯುವವರೆಗು ಮಾತ್ರ ಸತ್ಯ, ಉಸಿರು ಬಿಟ್ಟ ಮೇಲೆ ಮತ್ತೆ ಉಸಿರು ಎಳೆದುಕೊಳ್ಳುವವರೆಗೂ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ಕೈ ಬೀಸುವ ಕ್ಷಣ ಮೊದಲು, ಬೆಸೆದ ಕೈ ಬೆರಳು ಬಿಡಿಸಿಕೊಳ್ಳುವ ಮೊದಲು, ’ಮತ್ತೆ ಯಾವಾಗ?’ ಎಂದು ಪ್ರಶ್ನೆ ಕೇಳಬಹುದು, ಆದರೆ ಉತ್ತರಕ್ಕಾಗಿ ಕಾಯುವ ಹಾಗಿಲ್ಲ. ಅಲ್ಲಿರುವುದೆಲ್ಲಾ ಆಯಾ ಕ್ಷಣಕ್ಕೆ ನವೀಕರಣಗೊಂಡು ಆಯಾ ಕ್ಷಣಕ್ಕೆ ಮಾತ್ರ ಉಸಿರು ಪಡೆಯುವ ಸಂಬಂಧಗಳು, ಅವಕ್ಕೆ ನಾಳಿನ ನೆಚ್ಚಿಗೆ ಇಲ್ಲ.

ನಿಜ ಟಿಕೇಟಿಲ್ಲದೆ ಪ್ರಯಾಣ ಮಾಡುವುದು ಅಪರಾಧ. ಸಿಕ್ಕಿ ಬಿದ್ದರಂತೂ ಸರಿಯೇ ಸರಿ, ದಂಡ ತೆರಲೇಬೆಕು. ಆದರೆ ಇಲ್ಲಿ ಸಿಕ್ಕಿ ಬೀಳದಿದ್ದರೂ ಕಡೆಗೆ ಶಿಕ್ಷೆ ತಪ್ಪುವುದಿಲ್ಲ, ಇಲ್ಲಿನ ಆಟದ ನಿಯಮ ಒಂದೇ, ಪ್ರಶ್ನಿಸುವಂತಿಲ್ಲ ಮತ್ತು ಬಾಯಿಬಿಡುವಂತಿಲ್ಲ.
ಅದು ಗೊತ್ತಿದ್ದರೆ ಟಿಕೇಟಿಲ್ಲದ ಬಂಡಿ ಹತ್ತಬೇಕೇಕೆ?? ಏನು ಮಾಡುವುದು, ’ಮನೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಬಹುದೆ?’. ಇರುವ ಧರೆ ಹತ್ತಿ ಉರಿವಾಗ ಆ ಕ್ಷಣಕ್ಕೆ ತೋಚುವುದೊಂದೇ, ಇಲ್ಲಿಂದ ಹೊರಡಬೇಕು, ಇಲ್ಲಿಂದ ಹೊರಡಬೇಕು… ಉಸಿರಾಡಬೇಕೆಂದರೆ ಇಲ್ಲಿಂದ ಹೊರಡಬೇಕು… ಹಾಗೆ ಉಸಿರುಕಟ್ಟಿದ ಅವಸರದಲ್ಲಿ ಹೊರಟಾಗ, ಟಿಕೆಟ್ ಸಿಕ್ಕಿದ ಮೇಲೆಯೇ ಪಯಣ ಶುರು ಮಾಡುತ್ತೇವೆ ಎಂದು ಕಾಯುವುದು ಹೇಗೆ? ಅಲ್ಲದೆ ಹಾಗೆ ಇಲ್ಲಿಂದ ಹೊರಟರೆ ಸಾಕು ಎಂದು ಪ್ರಾರಂಭಿಸಿದ ಪಯಣ ಎಲ್ಲಿಗೆ ಕರೆದುಕೊಂಡು ಹೋಗುವುದೋ ಆ ಘಳಿಗೆಯಲ್ಲಿ ಯಾರಿಗೆ ಗೊತ್ತಿರುತ್ತದೆ? ’ಎ ಕಹಾ ಆ ಗಯೆ ಹಮ್, ಯೂಹಿ ಸಾತ್ ಸಾತ್ ಚಲ್ ಕೆ’ – ’ನಡೆಯುತ್ತಾ ನಡೆಯುತ್ತಾ ಇದೆಲ್ಲಿಗೆ ಬಂದುಬಿಟ್ಟೆವು ನಾವು’ ಎಂದು ನೋಡುವ ವೇಳೆಗಾಗಲೇ ವಾಪಸ್ಸು ಸುಲಭವಾಗಿ ಹೆಜ್ಜೆ ಹಾಕಲಾಗದಷ್ಟು ದೂರಕ್ಕೆ ನಡೆದಾಗಿಬಿಟ್ಟಿರುತ್ತದೆ. ವಾಪಸ್ಸು ಬರುವ ಮನಸ್ಸಿರುವುದಿಲ್ಲ, ಹಾಗೊಂದು ವೇಳೆ ಬಂದರೂ ಹಿಂದಿರುಗಲು ಅಲ್ಲಿ ಏನೂ ಉಳಿದಿರುವುದಿಲ್ಲ.
ಎಲ್ಲಿ ಜಾರಿತೋ ಮನವು
ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ
ಏಕೆ ನಿಲ್ಲದಾಯಿತೊ….
…..
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಸೊಂಪು
ತಂದು ಚೀರುವೆದೆಯ ಭಾವ
ಹೇಳಲಾರೆ……
ತಾಳಲಾರೆ..

ಹೇಳಲಾರದ, ಹಾಗೆಂದು ಹೇಳದೆ ಎದೆಯಲ್ಲಿ ಬಚ್ಚಿಟ್ಟುಕೊಳ್ಳಲಾರ ನೆನಪುಗಳು ಅವು. ವಸಂತದಲ್ಲಿ ರಮ್ಯವಾಗಿ ಕಾಣುವ ಈ ಪಯಣ ಮಾಗಿಯಲ್ಲಿ ದುರ್ಭರವಾಗಿ ಬಿಡುತ್ತದೆ. ಒಬ್ಬರೇ ನಡೆಯುವ ಅಭ್ಯಾಸ, ಧೈರ್ಯ ತಪ್ಪಿರುತ್ತದೆ, ಆದರೆ ಜೊತೆಯಲ್ಲಿ ಈ ಘಳಿಗೆಯಲ್ಲಿ ಇದ್ದವರು ಮರುಕ್ಷಣ ಇರುವ ನಂಬಿಕೆ ಇರುವುದಿಲ್ಲ. ಹೊರಟು ಬರುವಾಗ ಯಾರಿಗೂ ಹೇಳಿ ಬಂದಿರುವುದಿಲ್ಲ, ಯಾರೂ ಕೈ ಬೀಸಿ ಕಳುಹಿಸಿಕೊಟ್ಟಿರುವುದಿಲ್ಲ, ನಾವಿರುವ, ನಡೆದಿರುವ ಹಾದಿಯ ವಿಳಾಸ ಸಹ ಹೇಳಿರುವುದಿಲ್ಲ, ಹಾಗಾಗಿ ನಮ್ಮನ್ನು ಕಾಯುವವರೂ ಯಾರೂ ಇರುವುದಿಲ್ಲ,
“ ಹಿಂದೆ ಒಂದು ವಿಳಾಸವಿತ್ತು
ಈಗ ಒಂದು ವಿಳಾಸವಿದೆ
ನಾಳೆಗಾದರೂ ಒಂದು ಗುರುತಿರಬೇಕು
ಎಂದು ಯೋಚಿಸುವಷ್ಟು
ಪುರುಸೊತ್ತಾದರೂ ಎಲ್ಲಿತ್ತು
ಕರೆದೊಯ್ಯಲು ಯಾವುದೋ ಒಂದು
ಬಸ್ಸು ಸಿದ್ಧವಿದ್ದಾಗ.”
ಬಸ್ಸು ಹತ್ತುವಾಗ ಎಲ್ಲವೂ ನಮ್ಮ ನಿಯಂತ್ರಣದಲ್ಲೇ ಇದೆ ಎಂದು ಕೊಳ್ಳುತ್ತೇವೆ. ಮಧ್ಯ ಯಾವಾಗ ಬೇಕಾದರೂ ಹಗ್ಗ ಎಳೆದು, ಬಸ್ಸು ನಿಲ್ಲಿಸಿ ಇಳಿದುಬಿಡುತ್ತೇವೆ ಎನ್ನುವ ಆತ್ಮವಿಶ್ವಾಸದಲ್ಲೇ ಹೊರಟಿರುತ್ತೇವೆ. ಆದರೆ,
“ಬೇಕೆಂದಾಗ ಓಡುವ ಬಸ್ಸನ್ನಾದರೂ
ನಿಲ್ಲಿಸುತ್ತೇನೆ ಎಂದು ಮಾತ್ರ ಗೊತ್ತಿತ್ತು
ಬೇಕಾದ ಸೂತ್ರ ಎಳೆದರೆ ಸಾಕು ಎಂದು ಗೊತ್ತಿತ್ತು
ಆದರೆ ಕಣ್ಣುಗಳ ಜೊತೆ
ಇದ್ದಾಗ ಬಸ್ಸು ನಿಲ್ಲುವುದಿಲ್ಲ ಎಂದು
ನನಗಾದರೂ ಎಲ್ಲಿ ಗೊತ್ತಿತ್ತು?”
ಹೌದು, ಈ ಪಯಣದಲ್ಲಿ ಹೊರಟು ಬಂದ ಜಾಗದ ಗುರುತಿರುತ್ತದೆ, ಆದರೆ ತಲುಪುವ ಜಾಗ ನಮ್ಮ ಕೈಯಲ್ಲಿರುವುದಿಲ್ಲ.
ರಾಸ್ತಾ ಭೀ ಉನ್ ಕೀ
ಮಂಜಿಲ್ ಭೀ ಉನ್ ಕಿ
ಕಾರ್ ವಾನ್ ಭೀ ಉನ್ ಕೀ
ಮೆ ಅಕೆಲಿ ಹೀ ಥಿ
ಫಿರ್ ರಸ್ತಾ ಬದಲ್ ನೆ ಕ ಫೈಸ್ಲಾ ಭೀ ಉನ್ ಕೀ…
(ಹೋಗುವ ರಸ್ತೆ ಯಾವುದು ಎಂದು ನಿರ್ಧರಿಸಿದವನು ಅವನು
ಮುಟ್ಟುವ ಗುರಿ ಯಾವುದು ಎಂದು ನಿರ್ಧರಿಸಿದವನು ಅವನು
ಪಯಣದ ಗುಂಪಿನ ಆಯ್ಕೆಯೂ ಅವನದೆ
ಸುಮ್ಮನೆ ಒಬ್ಬಳೇ ಹೊರಟಿದ್ದೆ ನಾನು,
ಕಡೆಗೆ ನನ್ನ ರಸ್ತೆಯನ್ನು ಬಿಟ್ಟು ಬೇರೆ ಹಾದಿಯಲಿ ಹೆಜ್ಜೆ ಹಾಕುವ ನಿರ್ಧಾರವೂ ಅವನದೆ..)
ಆದರೆ ಎಷ್ಟೋ ಸಲ ಇದೂ ಪೂರ್ತಿ ನಿಜ ಅಲ್ಲ. ಹಾಗೆ ಇದ್ದಕ್ಕಿದ್ದಂತೆ ಚಲಿಸುತ್ತಿರುವ ಬಸ್ಸಿನಿಂದ ಅಲ್ಲಿವರೆಗೂ ಜೊತೆಗೆ ಬಂದವರನ್ನು ಇಳಿಸುವ ನಿರ್ಧಾರ ಒಬ್ಬರದೇ ಆಗಿರುವುದೂ ಸಹ ಇಲ್ಲ. ಈ ಪ್ರಯಾಣದಲ್ಲಿ ಇಬ್ಬರೂ ಗಾಡಿಯಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುವವರೇ ಆಗಿರುತ್ತಾರೆ, ಸ್ಟೇರಿಂಗ್ ಇಬ್ಬರ ಕೈಯಲ್ಲೂ ಇರುವುದಿಲ್ಲ, ಅದೇ ಈ ಪ್ರಯಾಣದ ರಮ್ಯತೆ ಮತ್ತು ದುರಂತ.
ಹಾಗೆ ಟಿಕೆಟ್ ಇಲ್ಲದ, ಗಮ್ಯದ ಗ್ಯಾರೆಂಟಿ ಬೇಡದ ಪಯಣಗಳಿಗಾಗಿ ಈ ಸಾಲುಗಳು…
 

‍ಲೇಖಕರು G

28 February, 2014

15 Comments

  1. bharathi

    Dina nithya intha hattu halavu eduragathve badukinalli … ottinalli edeyondu gattiyirabeku, ashte ….

    • ಸಂಧ್ಯಾರಾಣಿ

      ನಿಜ…

  2. Sushma Moodbidri

    ಮನಸ್ಸಿನಾಳಕ್ಕೆ ನಾಟಿದ ಬರಹಕ್ಕೆ ಪ್ರತಿಕ್ರಿಯೆ ನೀಡದೇ ಹೋಗುವಷ್ಟು ಮೂಕರಾಗಿ ಬಿಡುತ್ತೇವೆ ಕೆಲವೊಮ್ಮೆ..
    ಅಂತಹ ಮೂಕ ಸ್ಥಿತಿ ನನ್ನದು..
    ಇಷ್ಟವಾದ ಬರಹ

    • ಸಂಧ್ಯಾರಾಣಿ

      ಸುಷ್ಮಾ….

  3. Raghunandan K

    ಕೆಲವು ಸಂಬಂಧಗಳಿಗೆ ವರ್ತಮಾನ ಮಾತ್ರ ಇರುತ್ತೆ, ಅಷ್ಟೆ ಇದ್ದರೆ ಮಾತ್ರ ಅದು ನಾಳೆಯ ಪಾಲಿಗೆ ಮಧುರ ನೆನಪು… ಟಿಕೆಟ್ ಇಲ್ಲದ ಪ್ರಯಾಣ ಹೆಜ್ಜೆಗಳಲ್ಲಿ ನಡೆಯುತ್ತದೆ, ಹೆಜ್ಜೆ ತಪ್ಪುವವರೆಗೆ, ದಾರಿ ಕವಲೊಡೆಯುವವರೆಗೆ… ನಿಜ, ಎದೆ ಗಟ್ಟಿಯಿರಬೇಕು ಅಷ್ಟೆ…
    ಸಂಬಂಧಗಳ ಕುರಿತ ಅಕ್ಷರ ಸರಣಿಯಲ್ಲಿ ಮತ್ತೊಂದು ಆಪ್ತ ಬರಹ…
    ಇಷ್ಟವಾಯಿತು.

    • ಸಂಧ್ಯಾರಾಣಿ

      Thank you raghunandan

  4. sindhu

    Sandhyaa,
    The joy, once last, is pain! (PB Shelley)
    nim post chenaagide.

    • ಸಂಧ್ಯಾರಾಣಿ

      Dont cry that its over, smile that it happened! (yaro gottilla)! Thank you sindhu

  5. Anjali Ramanna

    ಇತ್ತೀಚಿನ ಸಿನೆಮಾಗಳಲ್ಲಿ ಮೌನವನ್ನು ಪ್ರೇಕ್ಷಕನ ಆಳಕ್ಕಿಳಿಸಿದ ಪ್ರಯತ್ನದಲ್ಲಿ ಗೆದ್ದ ಸಿನೆಮಾ ಇದೇ ಅನ್ನಿಸುತ್ತೆ. ನನಗಂತೂ ಇಷ್ಟವಾಯಿತು. ನಾಯಕಿಯ ಕಥೆ ಇಂದಿನ ಜ್ವಲಂತ ಸಮಸ್ಯೆ, ಆ ಕಾರಣ ಅದಕ್ಕೆ ಒತ್ತುಕೊಟ್ಟಿಸರುವುದನ್ನು ಒಪ್ಪಲೇಬೇಕಾಗುತ್ತೆ. ಆದರೆ ನಾಯಕ ಕಳೆದುಕೊಂಡಿರುವುದನ್ನು ಇನ್ನಷ್ಟು ಗಾಢವಾಗಿ ಕಟ್ಟಿಕೊಟ್ಟಿದ್ದಿದ್ದರೆ ನಾಯಕಿಯ ಸಮಸ್ಯೆಯನ್ನು ಹುಟ್ಟುಹಾಕುವ ಕೊಳಕು ಮನಸ್ಸುಗಳು ಯಾವುದರ ಅಭಾವದಿಂದ ಹುಟ್ಟುತ್ತವೆ ಎನ್ನುವುದನ್ನು ತಿಳಿದಿಕೊಳ್ಳಲು ಸ್ವಲ್ಪ ದಾರಿ ಮಾಡಿಕೊಡುತ್ತಿತ್ತು ಅನ್ನಿಸಿತು ! ಒಟ್ಟಿನಲ್ಲಿ A good movie I enjoyed thoroughly ….. And about your writing… Sandhya is there anything left for me to say it again and again ?! 🙂 🙂
    Anjali Ramanna

    • ಸಂಧ್ಯಾರಾಣಿ

      ಹೌದು ಅಂಜಲಿ, ಚಿತ್ರದ ಕೆಲವು ದೃಶ್ಯಗಳಂತೂ ಇನ್ನಿಲ್ಲದಂತೆ ಕಲಕಿದವು. ಥಿಯೇಟರ್ ಬಿಟ್ತು ಹೊರಬಂದ ಮೇಲೂ ನಮ್ಮೊಂದಿಗೆ ಬಂದ ಚಿತ್ರ.

  6. Anil Talikoti

    Really nice article, but, pardon my ignorance what movie is this about?
    -Anil

    • ಸಂಧ್ಯಾರಾಣಿ

      ನಮಸ್ತೆ ಅನಿಲ್. ಇದು ಇತ್ತೀಚಿಗೆ ಬಿಡುಗಡೆಯಾದ ’ಹೈ ವೆ’ ಚಿತ್ರದ ದೃಶ್ಯ. ಚಿತ್ರ ಇಡಿಯಾಗಿ ಸಫಲ ಅನ್ನಿಸದೇ ಇರಬಹುದು, ಆದರೆ ಕೆಲವು ಸನ್ನಿವೇಶಗಳು, ಛಾಯಾಗ್ರಾಹಣ ಮತ್ತು ನಟನೆ ತುಂಬಾ ಚೆನ್ನಾಗಿದೆ.

  7. malini guruprasanna

    Eshto bari gamyada kanasu kanutta payanada sukha, alli hekkabahudada aneka sangatigalu nammannu tattuvude illa. Haage nodidare SAAVU nammellara gamya allave?. Haagendu BADUKU needuva sukhavannu kadeganisalaadeete ? nange nimma article tumba ishta aaitu. Movie noduva hambalavannu huttihakide. Thanks Sandhya avare.

  8. ಗುಡ್ಡಪ್ಪ

    ಈ ಅಂಕಣದ ಪ್ರತಿ ಬರಹವನ್ನು ನೋಡಿದಾಗ ಅನಿಸಿದ್ದು.. ಲೇಖಕಿಯವರು ಏನೇ ವಿಷಯವಿರಲಿ ಅದನ್ನು ಪುಷ್ಟಿಕರಿಸಲು ಹಿಂದಿ ಸಿನೆಮಾ,ಹಿಂದಿ ಹಾಡುಗಳು,ಸಿನೆಮಾದ ವ್ಯಕ್ತಿಗಳನ್ನು ಅತಿಯಾಗಿ ಅವಲಂಭಿಸಿದ್ದಾರೆ ಎನಿಸುತ್ತದೆ..ಒಂದು ಹಂತದವರೆಗೆ ಇದು ಸರಿ ಅನಿಸಬಹುದು. ಅತಿಯಾದಬ ಇ ಅವಲಂಬನ ಯೋಗ್ಯವಲ್ಲ. ನಮ್ಮ ಕನ್ನಡದಲ್ಲಿಯೇ ಹುಡುಕಿ ಎತ್ತಿ ಹೇಳಬಹುದಾದ ನೂರೆಂಟು ವಿಷಯಗಲಿರುವಾಗ..

  9. ಶಮ, ನಂದಿಬೆಟ್ಟ

    Yes Sandhya..
    Happiness is found along the way; not at the end.
    ಒಟ್ಟಿನಲ್ಲಿ “ಪಯಣ” ಎಂಬ ಪರಿಕಲ್ಪನೆ, ಕನಸೇ ನೂರು ಭಾವ ಹುಟ್ಟಿಸಬಲ್ಲ ನನ್ನಂತ ತಿರುಗಾಲು ತಿಪ್ಪಿಗೆ ಇದು ಎಷ್ಟಿಷ್ಟವಾಗಿರಬೇಕು ನೋಡು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading