ಕೈ ಬಿಡಿಸಿಕೊಂಡ ಮೇಲೂ ಬಿಡಿಸಿಕೊಳದ ಬಂಧಗಳು…
’ಇಲ್ಲ, ಅವಳು ನನ್ನ ಗಂಡನ್ನ stalk ಮಾಡ್ತಾ ಇದ್ದಾಳೆ. ಪಾಕಿಸ್ತಾನದ ಐ ಎಸ್ ಐ ಏಜಂಟ್ ಅವಳು. ಬಿಡಲ್ಲ, ಅವಳನ್ನ ನಾನು ಸುಮ್ಮನೆ ಬಿಡೋಲ್ಲ, ಪಾಕಿಸ್ತಾನದವರೇ ನನಗೆ ಹೇಳಿದ್ದಾರೆ, ಅವಳು ಅವರ ಏಜೆಂಟ್ ಅಂತೆ… ನನ್ನ ಗಂಡನ ಈ ಮೇಲ್ ನ ಅವಳು ಹ್ಯಾಕ್ ಮಾಡಿದ್ದಾಳೆ. ನಾನು ನನ್ನ ಗಂಡನಿಗೆ ಮೇಲ್ ಕಳಿಸಿದರೆ ಅವಳು ಉತ್ತರಿಸುತ್ತಾಳೆ… ಬಿಡೋಲ್ಲ ನಾನು… ಇದು national emergency …’ ಒಂದಕ್ಕೊಂದು ಸಂಬಂಧವೇ ಇಲ್ಲದ, ಯಾವ ತರ್ಕಕ್ಕೂ ಸಿಗದ ಮಾತುಗಳನ್ನು ಅವಳು ಬಡಬಡಿಸುತ್ತಿದ್ದರೆ, ಟಿವಿ ನೋಡುತ್ತಿದ್ದ ನಾನು ದಿಗ್ಭ್ರಾಂತಳಾಗಿದ್ದೆ..
ಸುಮಾರು ೫೨ ವರ್ಷದ, ಆಕರ್ಶಕ ವ್ಯಕ್ತಿತ್ವದ, ಅತ್ಮವಿಶ್ವಾಸಿ ಹೆಣ್ಣು ಅವಳು. ಸುಂದರಿ ಸಹ, ಆದರೆ ನನಗೆ ಅವಳ ಸೌಂದರ್ಯಕ್ಕಿಂತ, ಆತ್ಮವಿಶ್ವಾಸದ ನಡೆ, ಮಾತು ಇಷ್ಟವಾಗಿತ್ತು. ಅವಳು ಹೀಗೆ ಮಾತನಾಡುತ್ತಿದ್ದರೆ ನಾನು ಮೂಕಳಾಗಿದ್ದೆ. ಹೌದು, ನಾನು ಸುನಂದೆಯ ಬಗ್ಗೆ ಮಾತನಾಡುತ್ತಿದ್ದೇನೆ. ಎಷ್ಟೇ ಪ್ರಯತ್ನಿಸಿದರೂ ಅವಳು ನನ್ನನ್ನು ಬಿಡುತ್ತಿಲ್ಲ. ಆಕೆ ಬದುಕಿದ್ದಾಗ ಅವಳು ನನ್ನ ಮಟ್ಟಿಗೆ ಒಬ್ಬ ಪೇಜ್ ೩ ಹೆಣ್ಣು ಅಷ್ಟೆ. ಆದರೆ ಸತ್ತ ಮೇಲೆ ಯಾಕೋ ಅವಳು ನನ್ನ ಗೆಳತಿ ಅನ್ನಿಸಲು ಶುರು ಆಗಿದ್ದಾಳೆ. ಯಾಕೋ ಅವಳ ನೋವನ್ನು ಯಾರೂ ಗುರುತಿಸಲೇ ಇಲ್ಲವೇನೋ ಅನ್ನಿಸ್ತಿದೆ. ಜೊತೆ ಜೊತೆ ಇರುವಾಗ ಒಬ್ಬರು ಸತ್ತರೆ ಬದುಕಿ ಉಳಿದವರಿಗೆ ಒಂದು ತರ್ಕಕ್ಕೆ ಸಿಗದ ಅಪರಾಧಿ ಭಾವ ಕಾಡುತ್ತಲ್ಲವಾ, ಹಾಗೆ ಅವಳಿಲ್ಲದ ಜಗತ್ತಿನಲ್ಲಿ ನಾನು ನಗುವುದು, ಮಾತನಾಡುವುದು, ಏನೂ ಆಗಿಲ್ಲ ಎಂಬಂತೆ ನನ್ನ ಕೆಲಸ ಕಾರ್ಯದಲ್ಲಿ ಮುಳುಗುವುದು ಎಲ್ಲವೂ ಅಪರಾಧಿ ಪ್ರಜ್ಞೆಯನ್ನು ಬಿತ್ತುತ್ತಿದೆ. ಯಾಕೆ ಕಾಡುತ್ತಾಳೆ ಈಕೆ, ಹೀಗೆ?
ತನ್ನ ಹಿಂದೆ ಎರಡು ಮದುವೆ, ಒಂದು ಒಳ್ಳೆಯ ವೃತ್ತಿ ಜೀವನ, ಅದರಲ್ಲಿನ ಸಾಧನೆ, ಎದೆಯೆತ್ತರ ಬೆಳೆದ ಮಗ ಇದ್ದ ಈಕೆ ಬುದ್ಧಿವಂತ, ಸುಂದರ ಶಶಿ ತರೂರ್ ನನ್ನು ವರಿಸಿದಾಗ, ’ಅರೆ ಜಾಣೆ, ಒಳ್ಳೆಯ ಸಂಗಾತಿಯನ್ನೇ ಆರಿಸಿಕೊಂಡಳು ಮತ್ತು ತನ್ನವನನ್ನಾಗಿಸಿಕೊಂಡಳು’ ಅಂತಲೇ ಅನ್ನಿಸಿತ್ತು. ಭಾರವಾದ ಕಣ್ಣಿನ ಮೇಲುರೆಪ್ಪೆ, ಆಳವಾದ ಕಣ್ಣುಗಳು, ಸದಾ ಸಿದ್ಧ ಅನ್ನುವಂತಿದ್ದ ನಗು ಎಲ್ಲವೂ ಅವನನ್ನು ಆಕರ್ಶಕ ಅನ್ನಿಸಿದ್ದವು. ಕೆಲವು ಸಲ ಪೆದ್ದು ಪೆದ್ದಾಗಿ, ತನ್ನ ಸ್ಥಾನಕ್ಕೆ ತಕ್ಕದಲ್ಲದ ಮಾತನಾಡಿ, ಫಜೀತಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದ ಆತನನ್ನು ನೋಡಿದರೆ ಅನುಕಂಪ ಆಗುತ್ತಿತ್ತು. ಹಳೆಯ ಕಾಲದ ನವಾಬರ ರೀತಿ ಕೊಚ್ಚಿಯ ಐಪಿಎಲ್ ಪ್ಗ್ರಾಂಚೈಸಿಯನ್ನು ಹೆಂಡತಿಗೆಂದು ಬಹುಮಾನ ಕೊಟ್ಟು, ಅದರಿಂದ ಮತ್ತಷ್ಟು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದು ಸಹ ಯಾಕೋ ಕ್ಯೂಟ್ ಆಗೇ ಕಂಡಿತ್ತು. ಏನೋ ಹೊಸ ಹೆಂಡತಿಯ ಮೇಲಿನ ಮೋಹಕ್ಕೆ ಬಿದ್ದು ಎಡವಿದ ಅಂತಲೇ ಅನ್ನಿಸಿತ್ತು. ಯಾವಾಗ ಮೋಹ ಕರಗಿ, ವಾಸ್ತವ ಎದುರಾಗಿತ್ತೋ, ಯಾವಾಗ ಸಂಬಂಧದಲ್ಲಿ ಒಂಟಿತನ ಮೂಡಿತ್ತೋ ಗೊತ್ತೇ ಆಗಲಿಲ್ಲ. ಒಂದು ಸಂಬಂಧದಲ್ಲಿರುವಾಗ ಒಂಟಿ ಅನ್ನಿಸಬೇಕಾದರೆ ಅಲ್ಲಿ ಒಬ್ಬರೇ ಇರಬೇಕಿಲ್ಲ, ಮೂರನೆಯವರು ಬಂದರೆ ಸಾಕು, ಅನ್ನುವುದು ಇಲ್ಲಿ ನಿಜ ಆಗಿತ್ತು.
ಸಂಬಂಧಗಳು ಮುರಿಯುವಾಗ ಶಬ್ಧವಾಗುವುದಿಲ್ಲ ಅಂತಾರೆ, ಸುಳ್ಳು ಅದು.. ಸಂಬಂಧಗಳು ಮನದಲ್ಲಿ ಒಡಮೂಡಿದಾಗ ಆಗುವ ಸಂಭ್ರಮಕ್ಕೆ ಒಂದು ಸದ್ದಿರುವಂತೆಯೇ ಸಂಬಂಧಗಳು ಮುರಿಯುವಾಗಲೂ ಸದ್ದಾಗುತ್ತದೆ. ಆಗ ಸರ ಬರ ಹೆಜ್ಜೆ, ಕೈ ಬಳೆಯ ಘಲ್ ಘಲ್, ನಿಂತಲ್ಲೆ ನಿಂತ ಪಾದಗಳ ಮೈಯಲ್ಲಿನ ಗೆಜ್ಜೆಗಳು ಮೌನದಲ್ಲೇ ಮೈ ಮುರಿಯುವ ಸದ್ದು, ಹಾರು ಹೆಜ್ಜೆಯಲ್ಲಿ ನಡೆವಾಗ ಬಟ್ಟೆಯ ಸರಬರ ಸದ್ದಿನಲ್ಲಿ ಆಗುವ ಪಿಸುನುಡಿಯ ಸಂಭ್ರಮ ಕೇಳುವುದಿಲ್ಲವೇ, ಹಾಗೆ ಎಲ್ಲಾ ಮುಗಿದಾಗ ಎಳೆದೆಳೆದು ಹೆಜ್ಜೆ ಹಾಕುವ ಪಾದಗಳಲ್ಲಿ, ಸದ್ದೇ ಇಲ್ಲದೆ ಎದೆ ಸೀಳಿ ಹೊರಬರುವ ನಿಟ್ಟುಸಿರಲ್ಲಿ, ಕಣ್ಣಂಚಿನಲ್ಲಿ ಮೂಡಿ, ಅನೈತಿಕ ಸಂಬಂಧದ ಕೂಸೊಂದು ಕತ್ತಲಲ್ಲೇ ಕತ್ತು ಕಿವುಚಿಸಿಕೊಂಡಂತೆ, ರೆಪ್ಪೆಯಲ್ಲಿ ಮೂಡಿದಲ್ಲೇ ಸದ್ದಿಲ್ಲದೆ ಒರಸಿಕೊಂಡ ಕಣ್ಣೀರು, ಎಲ್ಲ ಪ್ರಯತ್ನ ಮೀರಿ ನುಗ್ಗುವ ಬಿಕ್ಕು…. ಎಲ್ಲಕ್ಕೂ ಸದ್ದಿರುತ್ತದೆ, ಕೇಳುವ ಮನಸಿರಬೇಕು ಅಷ್ಟೆ. ಹೌದು ಸಂಬಂಧಗಳು ಮುರಿಯುವಾಗ ಸಹ ಸದ್ದಾಗುತ್ತದೆ.
ಆದರೆ ಸಂಬಂಧದ ಬಿರುಕು ಇಂತಹ ಆತ್ಮವಿಶ್ವಾಸಿ ಹೆಣ್ಣಿನ ಆತ್ಮವಿಶ್ವಾಸವನ್ನು ಈ ಪರಿ ಹುಡಿ ಮಾಡಿದ್ದು ಹೇಗೆ? ’ನಾನು, ನೀನು ಸಾಧಾರಣ ಹೆಣ್ಣುಗಳು, ಸಂಬಂಧಗಳ ಮಿತಿ, ಅವುಗಳ ಕ್ಷಣಿಕತೆ ನಮಗೆ ಗೊತ್ತು, ಜೊತೆಗೆ ನೂರೆಂಟು ಅಭದ್ರತೆಗಳ ಜೊತೆಗೆ ನಮ್ಮ ಪ್ರತಿದಿನದ ಹೆಣಗಾಟ. ಆದರೂ ಸಂಬಂಧಗಳನ್ನು ಸಂಬಾಳಿಸುವುದು ನಮಗೆ ಬಂದ ಹಾಗೆ ಅಂತಹ ಹೆಣ್ಣಿಗೆ ಯಾಕೆ ಆಗಲಿಲ್ಲ?’, ಗೆಳತಿ ಈ ಪ್ರಶ್ನೆ ಕೇಳುವ ಮೊದಲಿನಿಂದಲೂ ಆ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಕೆ ಇನ್ನಿಲ್ಲ ಅಂದ ದಿನ ರಾತ್ರಿ ಫೋನ್ ಮಾಡಿದ್ದ ಸ್ನೇಹಿತನೊಡನೆ ಮಾತನಾಡುತ್ತಾ ನಾನು ಇದೇ ಪ್ರಶ್ನೆ ಕೇಳಿದ್ದೆ, ’ಯಾವುದು ಜಾಸ್ತಿ ನೋವು ಕೊಡುತ್ತದೆ? ಆ ಜೀವ ಮೋಸ ಮಾಡಿತು ಎನ್ನುವುದಾ ಅಥವಾ ನಾನು ಮೋಸ ಹೋದೆ ಎನ್ನುವುದಾ?’, ಈ ಸಮಯದಲ್ಲಿ ಇದೇನು ಪ್ರಶ್ನೆ ಎನ್ನದೆ, ಪ್ರಶ್ನೆಯ ಹಿಂದೆ ಮೌನವಾಗಿದ್ದ ಇನ್ನೊಂದು ಪ್ರಶ್ನೆಯೂ ಅರ್ಥವಾಯಿತೇನೋ ಎನ್ನುವ ಹಾಗೆ ಅವನು ’ಅವು ಯಾವುವೂ ಅಷ್ಟು ಸರಳ ಅಲ್ಲ.., ಹಾಗ ನಿಶ್ಕರ್ಷ ಮಾಡಲಿಕ್ಕೂ ಆಗುವುದಿಲ್ಲ’ ಅಂದಿದ್ದ. ಆಮೇಲೆ ಎಷ್ಟೇ ಮಾತನಾಡಿದರೂ ಮನಸ್ಸು ಆ ಸಾವಿನ ದುರಂತದ ಸೂತಕವನ್ನು ಚರ್ಮಕ್ಕಂಟಿಸಿಬಿಟ್ಟಿತ್ತು.

ಯಾವುದು ಕಾಡಿರಬಹುದು ಅವಳನ್ನು, ಯಾವುದು ಬಡಿದು ಬಲಿ ಹಾಕಿರಬಹುದು? ಯಾಕೆಂದರೆ ಸಾಧಾರಣವಾಗಿ ಇಂತಹ ಸಂದರ್ಭದಲ್ಲಿ ಯಾವುದೇ ಹೆಣ್ಣು ಎದುರಿಸಬೇಕಾದ ಎಲ್ಲಾ ಪ್ರಶ್ನೆಗಳಿಗೂ, ಪರಿಣಾಮಗಳಿಗೂ ಅವಳು ಎಟುಕುತ್ತಿರಲಿಲ್ಲ. ಅವಳದು ಎನ್ನುವ ಒಂದು ವ್ಯಕ್ತಿತ್ವ ಇತ್ತು, ಸ್ಥಾನ ಮಾನವಿತ್ತು, ಒಳ್ಳೆಯ ಪ್ರಭಾವಿ ಸ್ನೇಹಿತ ವಲಯ ಇತ್ತು, ಆರ್ಥಿಕ ಸುಭದ್ರತೆ ಇತ್ತು, ಬೆಳೆದು ನಿಂತಿದ್ದ ಮಗ ಇದ್ದ, ಆದರೂ ಯಾಕೆ ಅವಳಿಗೆ ಅದನ್ನು ಒಪ್ಪಿಕೊಂಡು ಅದಕ್ಕೆ ಒಗ್ಗಿಕೊಳ್ಳಲು ಆಗಲಿಲ್ಲ? ಅದು ಅವಳ ಆತ್ಮವಿಶ್ವಾಸಕ್ಕಾದ ಅಪಮಾನ ಅನ್ನಿಸಿತ್ತ ಆಕೆಗೆ? ಈ ಸಂದರ್ಭದಲ್ಲಿ ಆಕೆ ತಪ್ಪನ್ನು ಗಂಡನ ಮೇಲೆ ಹಾಕಿ, ’ಇವನು ನನಗೆ ಅನ್ಯಾಯ ಮಾಡಿದ, ಮೋಸ ಮಾಡಿದ’ ಎಂದು ಗೋಳಾಡಲಿಲ್ಲ, ಅವನು ಮೋಸ ಮಾಡಿದ್ದಕ್ಕಿಂತ, ತಾನು ಮೋಸ ಹೋದೆ ಅನ್ನುವ ಹತಾಶೆ ಅವಳನ್ನು ನಿಯಂತ್ರಣ ತಪ್ಪುವಂತೆ ಮಾಡಿತಾ? ನಾನು ಇಲ್ಲಿ ಆಕೆಯ ಸಾವಿನ ಬಗ್ಗೆ ಮಾತನಾಡುತ್ತಿಲ್ಲ, ಅದರ ಕಾರಣಗಳ ಹುಡುಕಾಟ ಇನ್ನೂ ಸಾಗಿದೆ, ಆದರೆ ಸಾಯುವ ಒಂದು ದಿನ ಮೊದಲು ಅವಳು ಟಿವಿ ವಾಹಿನಿ ಒಂದಕ್ಕೆ ಕೊಟ್ಟ ಫೋನ್ ಸಂದರ್ಶನದಲ್ಲಿ ಆಕೆ ಮಾತನಾದಿದ ರೀತಿ ನೋಡಿದರೆ ಈಕೆ ಪೂರ್ಣ ಹತಾಶಳಾಗಿದ್ದಾಳೆ, ಖಿನ್ನತೆ ಇವಳ ಯೋಚಿಸುವ ಶಕ್ತಿಯನ್ನೇ ನುಂಗಿ ಹಾಕಿದೆ ಅನ್ನಿಸಿತು. ಅವಳ ಸಾವಿನಷ್ಟೇ ಇದೂ ನನ್ನನ್ನು ಕಾಡಿದೆ.
ಪ್ರೀತಿ ಎಂದರೆ ನಂಬಿಕೆ, ಜೊತೆಗಿರುವ ವ್ಯಕ್ತಿಯ ಬಗ್ಗೆ ಮಾತ್ರವಲ್ಲ, ಅವರನ್ನು ಪ್ರೀತಿಸಿದ ನಮ್ಮ ಬಗ್ಗೆಯೂ. ಅದನ್ನು ಕಳೆದುಕೊಂಡರೆ ಕಳೆದುಕೊಳ್ಳುವುದು ಆ ವ್ಯಕ್ತಿಯನ್ನು ಮಾತ್ರ ಅಲ್ಲ, ಮತ್ತೆ ನಂಬುವ ಮುಗ್ಧತೆಯನ್ನು ಮತ್ತು ಮತ್ತೆ ಪ್ರೀತಿಸುವ ಧೈರ್ಯವನ್ನು. ಅವೆರಡೂ ಹೋದರೆ ಬದುಕನ್ನು ಸಂಭಾಳಿಸುವುದು ಬಹಳ ಕಷ್ಟ. ತನ್ನೆದಿರು ಕೂತು, ನೀನೇ ಜಗತ್ತು ಎಂದ ಜೀವದ ಜಗತ್ತಿನಲ್ಲಿ ತಾನು ಏನೂ ಅಲ್ಲ ಅಂತ ಅರಿವಾದಾಗ ಆಗುವ ನೋವು, ಹತಾಶೆ, ಹೀಗೆ ಬದುಕನ್ನು ನಿರಾಕರಿಸುವ ಹಾಗೆ ಮಾಡಿಬಿಡುತ್ತದಾ? ನಮ್ಮ ಅಸ್ತಿತ್ವಕ್ಕೆ ಕಾರಣವಾಗಿದ್ದ ವ್ಯಕ್ತಿ ಹೇಗೆ ಒಮ್ಮಿಂದೊಮ್ಮೆಗೇ ಅಪರಿಚಿತನ ರೀತಿ ಕಾಣಿಸತೊಡಗುತ್ತಾನೆ. ಯಾಕೆ ಆ ಘಳಿಗೆಯಲ್ಲಿ, ’ಇವನನ್ನಾ ನಾನು ದೇವರು ಅಂತ ಅಂದುಕೊಂಡು ಆರಾಧಿಸಿದ್ದು’ ಎನ್ನುವಂತೆ ಕಾಣಿಸ ತೊಡಗುತ್ತಾನೆ?
ಇಲ್ಲ ಅದು ದ್ವೇಷವಲ್ಲ, ಅದರಾಚಿಗಿನದು.. ’ಹೈ ಹೋಟೋ ಪೆ ನಾಮ್ ಅಬ್ ಬೀ ಲೇಕಿನ್, ಆವಾಜ್ ಮೆ ಪಡ್ ಗಯೀ ದರಾರೆ…’- ತುಟಿಗಳ ಮೇಲೆ ಇನ್ನೂ ನಿನ್ನ ಹೆಸರಿದೆ, ಆದರೆ ಕರೆಯುವ ದನಿಯಲ್ಲಿ ಬಿರುಕು ಬಿದ್ದಿದೆ – ಅನ್ನಿಸಿಬಿಡುತ್ತದೆ. ನಿರ್ಲಿಪ್ತತೆ ಸಂಬಂಧಗಳಿಗೆ ಶೀತಲತೆಯ ಮಂಜು ಸುರಿದು ಬಿಡುತ್ತದೆ?
ಒಮ್ಮೆ ಪುಸ್ತಕದ ಅಂಗಡಿ ಒಂದರಲ್ಲಿ ಪುಸ್ತಕವನ್ನಾರಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಗುಲ್ಜಾರ್ ಬರೆದ ಪುಸ್ತಕ, ಯಾವುದೇ ಪುಸ್ತಕವಾಗಲಿ, ಅದನ್ನು ಯಾರಿಗೆ ಅರ್ಪಿಸಿದ್ದಾರೆ ಎಂದು ನೋಡುವುದು ನನ್ನ ಸ್ವಭಾವ, ಅದು ನನಗೆ ಲೇಖಕನ ಮನಸ್ಸಿನ ಕಿಟಕಿಯಂತೆ ಕಾಣುತ್ತದೆ, ಹಾಗೇ ನೋಡಿದೆ, ‘To Rakhee, the longest short story of my life’ ಎಂದಿತ್ತು. ಯಾಕೋ ನನಗೆ ಆಮೇಲೆ ಆ ಸಾಲುಗಳನ್ನು ಮರೆಯಲಾಗಲಿಲ್ಲ. ಕ್ವಚಿತ್ತತೆಯೇ ಯಾವುದೇ ಸಂಬಂಧದ ನಿರಂತರ ಸತ್ಯವಾ? ಅದನ್ನು ಒಪ್ಪಿಕೊಳ್ಳುವುದರಿಂದ ಮಾತ್ರ ಬದುಕನ್ನು ಒಪ್ಪಿಕೊಳ್ಳಲು ಸಾಧ್ಯವಾ? ಎಲ್ಲಾ ಸಂಬಂಧಗಳೂ ತಮ್ಮ ಜೊತೆಯಲ್ಲಿ ಒಂದು expiry date ಹೊತ್ತೇ ಬರುತ್ತದಾ? ಬದಲಾಗುವುದು ಸಂಬಂಧವಾ ಅಥವಾ ಅದರ ಸ್ವರೂಪವಾ?
ಈ ಪ್ರಶ್ನೆ ಮೂಡುವುದಕ್ಕೂ ಕಾರಣ ಇದೆ. ಸಂಬಂಧದಲ್ಲಿ ಪ್ರೀತಿಯಷ್ಟೇ, ಪ್ರೇಮದಷ್ಟೇ ಸ್ನೇಹ ಸಹ ಇರುತ್ತದೆ. ಪ್ರೇಮ ಒಂದು ಸೋತಿತು ಎಂದರೆ ಪ್ರೀತಿ ಮತ್ತು ಸ್ನೇಹ ಸಹ ಅನಿವಾರ್ಯವಾಗಿ ಸೋಲೊಪ್ಪಿಕೊಂಡು ಬಿಡಬೇಕಾ? ಪ್ರೇಮ ಕರಗಿದ ನಂತರವೂ ಒಂದು ಸ್ನೇಹ, ಒಂದು ಗೌರವ ಉಳಿಸಿಕೊಳ್ಳಲು ಆಗುವುದಿಲ್ಲವಾ? ಮತ್ತೆ ಗುಲ್ಜಾರ್ ನೆನಪಾಗುತ್ತಾರೆ, ’ಹಾಥ್ ಛೂಟೆ ಥೋ ರಿಶ್ತಾ ನಹಿ ಥೋಡಾ ಕರ್ತೆ ಹೈ…..’, ಬೆಸೆದಿದ್ದ ಕೈ ಬಿಟ್ಟಿತು ಅಂದಾಕ್ಷಣ ಸಂಬಂಧಗಳನ್ನು ಮುರಿದುಕೊಳ್ಳುವುದಿಲ್ಲ…. ಹಾಗೊಂದು ಗೌರವದ ವಿದಾಯ ಪ್ರೀತಿಗೆ ಕೊಡಲು ಸಾಧ್ಯವಾದರೆ ಆಗ ಪ್ರೀತಿ ಗೆಲ್ಲುತ್ತದೆ ಅನ್ನಿಸುತ್ತದೆ. ಕ್ಷಮೆ ಕೊಡುವುದು ಕ್ಷಮೆ ಪಡೆಯುವವನನ್ನೇ ಅಲ್ಲ, ಕ್ಷಮೆ ಕೊಡಬಲ್ಲವರನ್ನೂ ಪೊರೆಯುತ್ತದೆ.
ಒಮ್ಮೆ ನನಗೆ ಒಂದು ಮೆಸೇಜ್ ಬಂದಿತ್ತು. “….ನಾನು ನಂಬಿದೆ ಅಂತೆಯೇ ಪ್ರೀತಿಸಿದೆ. ನಂಬಿಕೆಗೆ ಹೊಡೆತ ಬಿದ್ದಾಗಲೆಲ್ಲ ಕನಲಿದೆ. ಮರೆತೆ, ಪ್ರೀತಿಸಿದೆ. ಮತ್ತೆ ನಂಬಿಕೆಗೆ ಪೆಟ್ಟು, ನೋವು, ಮರೆವು ಮತ್ತೆ ಪ್ರೀತಿ….. ಅದೇ ಶಿಲೆ, ಅದೇ ಪ್ರೀತಿ, ಅದೇ ಉಳಿಪೆಟ್ಟು… ಸತತ ಪ್ರಕ್ರಿಯೆಯಿಂದ ಕೊನೆಗೊಮ್ಮೆ ನಂಬಿಕೆ ಅಪನಂಬಿಕೆಗಳ ಹಂಗು ತೊರೆದು ಪ್ರೀತಿ ಮಾತ್ರ ಉಳಿದುಕೊಂಡಿತು! ದೂರವಿದ್ದೇ ಪ್ರೀತಿಸುವ ರೀತಿಗೆ ನೋವಿನ, ಅಪೇಕ್ಷೆಯ ಹಂಗಿಲ್ಲ ನೋಡಿ ಈಗ… ಅದಕ್ಕೇ ಅನಿಸುತ್ತೆ ತುಂಬಾ ಜನರಿಗೆ ದೇವರನ್ನು ಪ್ರೀತಿಸಲು ಸಾಧ್ಯವಾಗೋದು!!”, ಭಾವುಕತೆ ಮತ್ತು ಸೂಕ್ಷ್ಮತೆಯನ್ನು ಒಡಮೂಡಿಸಿಕೊಂಡ ಗೆಳತಿ ಅವಳು. ಅವಳಿಂದ ಹೀಗೊಂದು ಮೆಸೇಜ್ ಬಂದಾಗ, ಯಾಕೋ ಮನಸ್ಸು ಯೋಚಿಸುವ ಮೊದಲೇ ಕೈ ಟೈಪಿಸಲು ಪ್ರಾರಂಭಿಸಿತ್ತು,.. ’ಹಾ ಗೆಳತಿ, ನಂಬಿಕೆಗೆ ಪದೇ ಪದೇ, ಪದೇ ಪದೇ ಪೆಟ್ಟು ಬಿದ್ದಾಗ ದೂರವಿದ್ದು ಪ್ರೀತಿಸಬಹುದು ಮತ್ತು ದೂರವಿದ್ದೇ ಪ್ರೀತಿಸಬೇಕು..’. ಬರೆದ ಮೇಲೆ ನಾ ಬರೆದ ಸಾಲುಗಳ ಭಾರ ಎದೆಯ ಮೇಲಿಳಿಯತೊಡಗಿತು.
ನಂಬಿಕೆಗೆ ಪದೇ ಪದೇ ಪೆಟ್ಟು ಬಿದ್ದಾಗ ದೂರವಿದ್ದೇ ಪ್ರೀತಿಸಬೇಕು … ಸುನಂದಾ, ನೀನು ಮರೆಯಬಹುದಿತ್ತು, ತೊರೆಯಬಹುದಿತ್ತು, ದೂರವಿದ್ದು ಪ್ರೀತಿಸಬಹುದಿತ್ತು, ಹೀಗೆ ಹೋಗಿ ನಮ್ಮನ್ನೆಲ್ಲಾ ಕಾಡಬಾರದಾಗಿತ್ತು…


kannige kaanaddu ee duraviruva preeti .. naavu bayasuvudu kannige kaanuvudannu… preetisuvudu adanne.. dooravadare drakshi huli enisuttade. huli drakshi yarige taane beku ??
sunanda nirdhaar sariyilla.. baduku ishte alla.. esabeku iddu jaisabeku andidaare daasavarenyaru..
…………………
ತುಂಬ ಚೆನ್ನಾಗಿ ಮೂಡಿದೆ.
-ಅಂತ ಹೇಳಬೇಕೋ ಬೇಡವೋ ಎಂಬ ಗೊಂದಲ.
ಇಲ್ಲಿ ಬಹಳಷ್ಟು ಹೇಳಬಹುದು.ಆದರೆ ಇಲ್ಲಿನ ಸಾವು, ಅದು ತಂದೊಡ್ಡುವ ಸಂಕೀರ್ಣತೆಗಳು ಹಾಗೂ ಅದರ ಹಿಂದಿನ ಬಲಹೀನ ಘಳಿಗೆಗಳು-ಇದ್ಯಾವುದನ್ನೂ ಅಷ್ಟು ಸುಲಭದಲ್ಲಿ ಯಾವುದೋ ಒಂದು ಫಾರ್ಮುಲಾ derive ಮಾಡಿ ಹೇಳಲಾಗದು.ಅದು ಕುರುಡನೊಬ್ಬ ಆನೆಯನ್ನು ವರ್ಣಿಸಿದಂತೆ.ಅದು ಆನೆಯ ಘನತೆಯನ್ನು ಅವಮಾನಿಸಿದಂತೆ. ಜೊತೆಗೆ ಕುರುಡನ ಸ್ಪರ್ಶಜ್ಞಾನವನ್ನೂ…
-Rj
ನಿಜ…ಸೌಂದರ್ಯ, ಶ್ರೀಮಂತಿಕೆ, ಸ್ಥಾನಮಾನ ಎಲ್ಲಾ ಇದ್ದೂ ಸತ್ತ ಸುನಂದಾ ಪುಷ್ಕರ್ ಸಾವು ಕಾಡುತ್ತಲೇ ಇದೆ… ಪ್ರೀತಿ-ಸಂಬಂಧದಲ್ಲಿನ ಅಭದ್ರತೆಗೆ ಸಾವಿಗೆ ನೂಕುವಷ್ಟು, ಬದುಕನ್ನೇ ಕಳೆದುಕೊಳ್ಳುವಷ್ಟು ಶಕ್ತಿ ಇದೆ ಅನಿಸುತ್ತಿದೆ…
ಸಮಯೋಚಿತ ಲೇಖನ….ಕಾಡುವ ಪ್ರಶ್ನೆ ಭಾವಗಳಿಗೊಂದಷ್ಟು ಸಾಂತ್ವನ..
Sandhya
Neevu eshtu chandavaagi mattu sookshmagalu dhvanisuvante barediddeeri andare nanage ee lekhana matte matte kaaduttale ide…
ಇಬ್ಬರಿಗೂ ಇದು ಮೂರನೆಯ ಮದುವೆ. ಹಾಗಿರುವಾಗ ನೀನೆ ನನ್ನ ಬದುಕು ಎಂದ ಕೂಡಲೇ ಅದನ್ನು ನಂಬಲು ಅವರಿಬ್ಬರಿಗೂ ಸಾಧ್ಯಾನ ? ಅದೊಂದು ತಾತ್ಕಾಲಿಕ ಸತ್ಯ ಮಾತ್ರ. ಕೇವಲ affairs ಇಲ್ಲಿ ಕಾರಣ ಆಗಿರದು.
ನಾವೆಲ್ಲ ಒಂದು ಸುದ್ದಿಯಾಗಿ ಓದಿ ಮರೆತುಬಿಡಬಹುದಾದ ವಿಷಯವೊಂದು ಹೀಗೆ ನಿಮ್ಮ ಲೇಖನವಾಗಿ ನನ್ನನ್ನು ಕಾಡಬಹುದು ಎಂದು ಭಾವಿಸಿರಲಿಲ್ಲ.
ಮತ್ತೆ ಮತ್ತೆ ಓದುವಂತೆ ಮಾಡಿ, ಸಾಕು ಎನಿಸಿದ ಮೇಲೂ ಕಾಡುತ್ತಲೇ ಇರುವ ಬರಹ ನೀಡಿದ್ದಕ್ಕೆ ಧನ್ಯವಾದ.
ತೆರೆದಷ್ಟೇ ಬಾಗಿಲು, ನೆನೆದಷ್ಟೇ ನೋವು…ತೆರೆದರಷ್ಟೇ ಬಾಗಿಲು, ನಂಬಿದರಷ್ಟೇ ಪ್ರೀತಿ-ಪಜೀತಿ !
nice writeup but when relations fail life still moves on seen this in many cases..few only resort to the Last option
ಮೇಡಂ..ಯಾಕೋ…ತುಂಬಾ ಕಾಡ್ತಿದೆ ನಿಮ್ಮ ಬರಹ…
ಅದ್ಭುತ….
Adenu preetiyo,mohavo, illa sayoke antane taroor madve aagi mafia kaige sikku kaneyaadalo. ottinalli inyarado rahasya kapadoke taanu baliyadalu aste.
Tumba chennagi barediddera sandhya…
ಪ್ರೀತಿ ಎಂದರೆ ನಂಬಿಕೆ, ಜೊತೆಗಿರುವ ವ್ಯಕ್ತಿಯ ಬಗ್ಗೆ ಮಾತ್ರವಲ್ಲ, ಅವರನ್ನು ಪ್ರೀತಿಸಿದ ನಮ್ಮ ಬಗ್ಗೆಯೂ. ಆ ವ್ಯಕ್ತಿಯನ್ನು ಕಳೆದುಕೊಂಡರೆ, ಕಳೆದುಕೊಳ್ಳುವುದು ಮತ್ತೆ ನಂಬುವ ಮುಗ್ಧತೆಯನ್ನು ಮತ್ತು ಮತ್ತೆ ಪ್ರೀತಿಸುವ ಧೈರ್ಯವನ್ನು. ಅವೆರಡೂ ಹೋದರೆ ಬದುಕನ್ನು ಸಂಭಾಳಿಸುವುದು ಬಹಳ ಕಷ್ಟ. – ಇದು ಸ್ವಲ್ಪ modified, ನನ್ನ version ಅಷ್ಟೇ! As always, kudos to your writing… Yes! Some questions haunt for life!
modaleradara maduveinda padeda anubhavadalli eega bandantha kastavannu databahudittu. Jotjege maga bere idda. Adaru sunanda innilla.
ಸುನಂದಾಳ ಸಾವು ಆತ್ಮಹತ್ಯೆ ಆಗಿದ್ದರೆ – ಇದಕ್ಕಿಂತ ಚೆನ್ನಾಗಿ ಬರೆಯಲು ಸಾಧ್ಯವೇ ಇಲ್ಲವೇನೋ ಎನಿಸುತ್ತದೆ. ಆದರೆ ಇಲ್ಲಿ ಕಾಣುವ, ಕಾಣದ ಕೈಗಳು (ವಿದೇಶಿ?) ಇರುವದರಿಂದ ಈ ನಂಬಿಕೆ, ಪ್ರೀತಿ, ವಿದಾಯ ಎಲ್ಲಾ ಮರೀಚಿಕೆ ಏನೋ? ಸಾವಿಗೆ ಕಾರಣ ಕಂಡುಹಿಡಿದು ತಪ್ಪಿಸ್ಥರಿದ್ದರೆ ಉಗ್ರ ಶಿಕ್ಷೆ ಶೀಘ್ರವಾಗಿ ಆಗಲಿ ಎಂದು ಕೇಳಬಹುದಷ್ಟೆ.
Only tears
ಸಂಧ್ಯಾ, ಮೊಗ್ಗು ಬಿರಿಯುವ ಸದ್ದು, ಇರುಳು ಕವಿಯುವ ಸದ್ದುಗಳಂಥ ನವಿರು ಕೂಡ ಕೇಳಿಸಬಹುದಾದರೆ ಅದು ನಿನಗೆ ಮಾತ್ರ.. Hats Offffff 🙂
“ಪ್ರೀತಿ ಎಂದರೆ ನಂಬಿಕೆ, ಜೊತೆಗಿರುವ ವ್ಯಕ್ತಿಯ ಬಗ್ಗೆ ಮಾತ್ರವಲ್ಲ, ಅವರನ್ನು ಪ್ರೀತಿಸಿದ ನಮ್ಮ ಬಗ್ಗೆಯೂ. ಅದನ್ನು ಕಳೆದುಕೊಂಡರೆ ಕಳೆದುಕೊಳ್ಳುವುದು ಆ ವ್ಯಕ್ತಿಯನ್ನು ಮಾತ್ರ ಅಲ್ಲ, ಮತ್ತೆ ನಂಬುವ ಮುಗ್ಧತೆಯನ್ನು ಮತ್ತು ಮತ್ತೆ ಪ್ರೀತಿಸುವ ಧೈರ್ಯವನ್ನು. ಅವೆರಡೂ ಹೋದರೆ ಬದುಕನ್ನು ಸಂಭಾಳಿಸುವುದು ಬಹಳ ಕಷ್ಟ.” ಇಂಥದ್ದನ್ನು ನೀ ಮಾತ್ರ ಬರೀಬಲ್ಲೆಯಲ್ಲ !!
thumba channagide medum, thank you very much