
’ನೀನು ಹೋಗಿ ಮೂರೂವರೆ ಗಂಟೆ ಆಯ್ತು, ಏನು ಮಾಡ್ತಾ ಇದ್ದೆ?’, ನಾನು ಹುಬ್ಬು ಗಂಟಿಕ್ಕಿ ಕೇಳುತ್ತಿದ್ದೆ. ’ಇಲ್ಲಾ ಮೇಡಂ ಪೋಲೀಸ್ನೋರು ಕರ್ಕೊಂಡೋಗಿ ಕೂರಿಸ್ಕೊಂಡಿದ್ರು’, ಅವನು ನಿರಾಳವಾಗಿ ಹೇಳುತ್ತಿದ್ದ. ಏನೋ ಮಾತನಾಡಲೆಂದು ನನ್ನ ಆಫೀಸಿಗೆ ಬಂದಿದ್ದ ಗೆಳತಿ ಪಕ್ಕನೆ ಅವನೆಡೆಗೆ ತಿರುಗಲು ಬಯಸುತ್ತಿದ್ದ ಕುತ್ತಿಗೆಯನ್ನು ಬಲವಂತವಾಗಿ ನೇರವಾಗಿಟ್ಟುಕೊಂಡು ನನ್ನನ್ನೇ ನೋಡುತ್ತಿದ್ದಳು. ಅವಳ ಹೆಗಲಿನ ಬಿಗಿ, ಹುಬ್ಬುಗಳ ನಡುವಿನ ಆತಂಕ, ಇನ್ನೇನು ಈ ಕ್ಷಣ ಓಡಬೇಕೆಂದರೆ ತಯಾರು ಎನ್ನುವಂತೆ ಅವಳ ಕಾಲುಗಳು ನೆಲವನ್ನು ಒತ್ತಿ ಹಿಡಿದ ರೀತಿ ಎಲ್ಲಾ ಎದುರಲ್ಲಿ ಕೂತಿದ್ದ ನನಗೆ ಕಾಣುತ್ತಲೇ ಇತ್ತು. ಯಾಕೋ ಅವಳನ್ನು ಕೆಣಕೋಣ ಅನ್ನಿಸಿ ಎದುರು ನಿಂತ ಹುಡುಗನ ಕಡೆ ತಿರುಗಿ ನನ್ನ ವಿಚಾರಣೆ ಮುಂದುವರಿಸಿದೆ..
’ಯಾಕೊ, ಯಾವ್ದಾದ್ರು ಹಳೆ ಕೇಸ್ ಇತ್ತಾ?’. ’ಇಲ್ಲ ಮೇಡಂ ರಾತ್ರಿಯಿಂದ ಎಲ್ಲಾ ರೌಂಡ್ ಅಪ್ ಮಡ್ತಾ ಇದಾರಂತೆ… ಅಭೀನೂ ಎತ್ತಾಕ್ಕೊಂಡು ಹೋಗಿದಾರಂತೆ’ ಅವನೆಂದ. ’ಸರಿ, ನೀನು ಡೆಲಿವರಿ ಕೊಡೋಕ್ಕೆ ತಗೊಂಡು ಹೋಗಿದ್ದ ನೀರಿನ ಕ್ಯಾನುಗಳೆಲ್ಲಿ?’. ’ಅದು, ಅವರು ಅಲ್ಲೇ ಇಟ್ಟು ಹೋಗು ಅಂದ್ರು ಮೇಡಂ, ಮುಂದಿನವಾರ ಹೋಗಿ ಕಾಲಿ ಕ್ಯಾನುಗಳನ್ನು ತಂದುಬಿಡುತ್ತೇನೆ.’
ಇಷ್ಟು ಹೊತ್ತಿಗಾಗಲೆ ನನ್ನ ಗೆಳತಿ ಬೆಳಗ್ಗೆ ಹಾಲು, ಪೇಪರ್ ತೆಗೆದುಕೊಳ್ಳಲು ಬಾಗಿಲು ತೆರೆದರೆ, ಎದುರಿಗೆ ಅನ್ಯಗ್ರಹದ ಜೀವಿಯೊಂದು ಎದುರಿಗೆ ನಿಂತಿದ್ದರೆ ಅನುಭವಿಸುವ ಭಯ, ಆತಂಕ, ಒಂದು ಥ್ರಿಲ್ ಎಲ್ಲಾ ಏಕೀಭವಿಸಿ ಹರಳುಗಟ್ಟಿದಂತೆ ಕೂತಿದ್ದಳು.
ಆ ಆಫೀಸಿನಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಪ್ರತಿ ದಿನ ಸುಮಾರು ೩೦ ರಿಂದ ೪೦ ಕಡೆ ನೀರಿನ ಕ್ಯಾನುಗಳ ಪೂರೈಕೆ ಆಗಬೇಕಿತ್ತು. ಒಂದೊಂದು ನೀರಿನ ಕ್ಯಾನ್ ಸುಮಾರು ೨೦-೨೨ ಕಿಲೋ ತೂಕ, ಕೆಲವು ಸಲ ಆ ಕ್ಯಾನುಗಳನ್ನು ಮೊದಲ, ಎರಡನೆಯ ಮಹಡಿಗೆ ಕೊಂಡು ಹೋಗಬೇಕಾಗುತ್ತಿತ್ತು. ಸಾಕಷ್ಟು ಗಟ್ಟಿ ಮುಟ್ಟಾಗಿರುವ ಹುಡುಗರೇ ಆ ಕೆಲಸಕ್ಕೆ ಬೇಕಾಗಿತ್ತು. ಆಗ ನಾನು ನೋಡಿದ ಆ ಡೆಲಿವರಿ ಹುಡುಗರ ಬಗ್ಗೆ ಒಂದು ಧಾರಾವಾಹಿಯನ್ನೇ ಬರೆಯಬಹುದು.
ಒಬ್ಬ ಹುಡುಗ ಬೆಳಗ್ಗೆ ಇಸ್ತ್ರಿ ಅಂಗಡಿಯಲ್ಲಿ ಕೆಲಸ ಮಾಡಿ, ಹಗಲೆಲ್ಲಾ ಇಲ್ಲಿ ದುಡಿದು, ಸಂಜೆ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದ. ಒಮ್ಮೆ ಪರೀಕ್ಷೆಯಲ್ಲಿ ೫೯% ಬಂದಿತ್ತು ಅಂತ ಅಳ್ತಾ ಕೂತಿದ್ದ. ಇಸ್ಮಾಯಿಲ್ ಎನ್ನುವ ಗುಲ್ಬರ್ಗಾದ ಹುಡುಗ ಇನ್ನಿಲ್ಲದ ಸಜ್ಜನ. ತಲೆ ಎತ್ತಿ ನೋಡುತ್ತಿರಲಿಲ್ಲ, ದನಿ ಏರಿಸಿ ಮಾತನಾಡುತ್ತಲೇ ಇರಲಿಲ್ಲ. ಒಂದೇ ಸಮಸ್ಯೆ ಎಂದರೆ ಮಸೀದಿಯಲ್ಲಿ ’ಅಲ್ಲಾ’ ಕೂಗುವ ಯಾವುದೇ ಸಮಯದಲ್ಲಿ ಅವನನ್ನು ಮಸೀದಿಯ ಸುತ್ತಮುತ್ತಲ ಸ್ಥಳಗಳಿಗೆ ಕಳಿಸಿದರೆ ಮನುಷ್ಯ ಎರಡು ಗಂಟೆ ಗಾಯಬ್! ಇದು ಪ್ರತಿ ದಿನದ ಕಥೆ. ಅವನ ಪ್ರಾರ್ಥನೆಯ ಸಮಯ ನೋಡಿಕೊಂಡು ನಮ್ಮ ಡೆಲಿವರಿ ಪ್ಲಾನ್ ಮಾಡಬೇಕಿತ್ತು! ಉತ್ತರ ಕರ್ನಾಟಕದಿಂದ ಬಂದಿದ್ದ ಒಬ್ಬ ಹುಡುಗ ನಾವು ಕೆಲಸದ ಹುಡುಗರಿಗೆಂದು ಮಾಡಿದ್ದ ಮನೆಗೆ ಹೋದವನು ಮರುದಿನ ಬಂದು ಚಿಕ್ಕ ಮುಖ ಮಾಡಿಕೊಂಡು ಊರಿಗೆ ಹೋಗುವುದಾಗಿ ಹಟ ಹಿಡಿದಿದ್ದ. ಅವನು ಕೊಟ್ಟ ಕಾರಣ, ’ಪ್ಲಾಸ್ಟಿಕ್ ಬಕೆಟ್ ನಾಗ್ ನೀರು ಕೊಡ್ತಾರ್ರಿ, ನಾವು ಅಷ್ಟು ಕೀಳೇನ್ರೀ’. ನಮ್ಮ ಮನೆಯಲ್ಲೂ ಉಪಯೋಗಿಸುವುದು ಪ್ಲಾಸ್ಟಿಕ್ ಬಕೆಟ್ಟೇ ಅಂತ ನಾನು ಪ್ರಮಾಣ ಮಾಡಿ ಹೇಳಬೇಕಾಯಿತು!
ಇನ್ನೊಬ್ಬ ಹುಡುಗ ಒಂದು ದಿನ ಒಂದು ಹಿಡಿ ತುಂಬಾ ದರ್ಬೆ ಹಿಡಿದು ಬಂದು ಗಂಭೀರವಾಗಿ ’ಈ ಎಲ್ಲಾ ಕ್ಯಾನುಗಳ ಮುಚ್ಚಳ ತೆಗೀಬೇಕು ಮೇಡಂ’ ಅಂದ. ನನಗೆ ಅರ್ಥವೇ ಆಗಲಿಲ್ಲ, ಯಾಕಪ್ಪ ಅಂದೆ, ’ಇನ್ನರ್ಧ ಗಂಟೆಗೆ ಗ್ರಹಣ ಶುರು ಆಗುತ್ತೆ ಮೇಡಂ, ದರ್ಬೆ ಹಾಕದ ನೀರನ್ನ ಪಾಪ ಗೊತ್ತಿಲ್ಲದವರಿಗೆ ಹಾಗೆ ಕೊಡೋಕಾಗುತ್ತಾ ಮೇಡಂ, ದರ್ಬೆ ಹಾಕಿಡ್ತೀನಿ, ಆಗ ನೀರಿಗೆ ದೋಷ ಅಂಟಲ್ಲ’ ಅಂದ. ಸೀಲ್ ಮಾದಿದ ನೀರಿನ ಮುಚ್ಚಳ ತೆಗೆಯದಂತೆ ಅವನನ್ನು ಸುಮ್ಮನಾಗಿಸಬೇಕೆಂದರೆ ನಾನು ಕಲಿತ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಯಿತು! ಇನ್ನೊಬ್ಬ ಹುಡುಗ ಆ ವಯಸ್ಸಿನಲ್ಲೇ ರೌಡಿ ಶೀಟರ್ ಆಗಿದ್ದ, ಕೆಲಸಕ್ಕೆ ಬಂದ ಮೊದಲ ದಿವಸ ಅದನ್ನು ಒಂದು ಕ್ವಾಲಿಫಿಕೇಶನ್ ಎನ್ನುವಂತೆ ಹೇಳಿ, ಆಮೇಲೆ ಆ ಡಿಗ್ರಿಗೆ ಇಲ್ಲಿ ಮಾನ್ಯತೆ ಇಲ್ಲ ಅಂತ ಗೊತ್ತಾಗಿ ಸುಮ್ಮನಾಗಿದ್ದ. ಅವನ ಜೊತೆಯಲ್ಲೇ ಇದ್ದ ಇನ್ನೊಬ್ಬ ಹುಡುಗ ನಮ್ಮ ಜೊತೆಯಲ್ಲಿ ಎಷ್ಟೋ ಸೌಮ್ಯವಾಗಿರುತ್ತಿದ್ದ. ಆದರೆ ಅವನು ಹೊರಗೆ ಕೂತಿದ್ದಾಗ ಯಾವ ಪೋಲೀಸ್ ಕಾನ್ಸ್ಟೇಬಲ್ ಹಾದು ಹೋದರೂ ಇವನನ್ನು ಕರೆದು ಒಂದು ಆವಾಜ್ ಹಾಕಿ ಹೋಗುತ್ತಿದ್ದ, ಯಾಕೆ ಅಂತ ಅರ್ಥವೇ ಆಗುತ್ತಿರಲಿಲ್ಲ ನಮಗೆ, ಪೋಲಿಸರು ಹಾದು ಹೋದರೆ ಸಾಕು ಇವನು ಅವರ ಕಡೆ ಗುರಾಯಿಸುತ್ತಾ ಇದ್ದ. ಅದು ಅವನಿಗೂ ಗೊತ್ತಾಗುತ್ತಿರಲಿಲ್ಲ, ಆಮೇಲಾಮೇಲೆ ತಲೆ ಬಗ್ಗಿಸಿ ಕೂರೋದು ಅಭ್ಯಾಸ ಮಾಡಿಕೊಂಡ.

ಅಲ್ಲಿ ನೋಡಿದಷ್ಟು ವೈವಿಧ್ಯಮಯ ವ್ಯಕ್ತಿಗಳನ್ನೂ, ಸಾಮಾನ್ಯವಾಗಿ ಎದುರಿಸದ ಸಂದರ್ಭಗಳನ್ನೂ ನಾನು ನೋಡಿದ್ದೇ ಅಲ್ಲಿ. ಮೊದಲು ವಿವರಿಸಿದ ಘಟನೆ ನಡೆದ ದಿನ ಆಫೀಸ್ ಮುಗಿಸಿ ನಾನು, ನನ್ನ ಗೆಳತಿ ಹೊರಟಾಗ ಆ ಹುಡುಗ ’ಮೇಡಂ ನನ್ನ ಅಶೋಕ ಪಿಲ್ಲರ್ ಹತ್ರ ಡ್ರಾಪ್ ಮಾಡ್ತೀರಾ’ ಅಂದ. ನಾನು ಅದೇ ದಾರಿಯಲ್ಲಿ ಓಡಾಡುತ್ತಿದ್ದಿದ್ದರಿಂದ, ಆಗಾಗ ಅವನನ್ನು ಅಲ್ಲಿ ಇಳಿಸಿ ಹೋಗುವುದಿತ್ತು. ಸರಿ ಬಾ ಅಂದೆ, ಗಾಡಿಯಲ್ಲಿ ಮುಂದಿನ ಸೀಟಿನಲ್ಲಿ ನಾನು, ಹಿಂದೆ ಅವನು. ನಮ್ಮ ಆಫೀಸಿನಿಂದ ಅಶೋಕ ಪಿಲ್ಲರ್ ಹತ್ತು ನಿಮಿಷದ ಹಾದಿ, ಆದರೆ ಆ ಅಲ್ಪ ಸಮಯದಲ್ಲಿ ನನ್ನ ಗೆಳತಿ ಬೆವೆತು ಹೋಗಿದ್ದಳು. ಅವನು ಇಳಿದು ಹೋದ ತಕ್ಷಣ ನನ್ನನ್ನು ತರಾಟೆಗೆ ತೆಗೆದುಕೊಂಡಳು. ’ಅದು ಹೇಗೆ ಒಬ್ಬ ರೌಡಿ ಶೀಟರ್ ನ ಜೊತೆ ಒಂದೇ ಗಾಡಿಲಿ ಬರ್ತೀಯಾ, ಅದು ಹೇಗೆ ಅವನ ಜೊತೆ ಆಫೀಸಿನಲ್ಲಿ ಕೆಲಸ ಮಾಡ್ತೀಯ’ ಅಂತ. ನಿಜ ಹೇಳುತ್ತೇನೆ, ಸಾಧಾರಣವಾಗಿ ತೆಗೆದುಕೊಳ್ಳೋ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದನ್ನು ಬಿಟ್ಟರೆ ನನಗ್ಯಾವತ್ತು ಅವರ ಜೊತೆ ಕೆಲಸ ಮಾಡುವುದು ಹೆದರಿಕೆ ಅನ್ನಿಸಿರಲಿಲ್ಲ. ಯಾವ ಘಟ್ಟದಲ್ಲೂ ನನಗೆ ಅವನು ಆಫೀಸಿನಲ್ಲಿ ಸುತ್ತ ಮುತ್ತ ಓಡಾಡುತ್ತಿದ್ದರೆ ನಾನು ಹುಷಾರಾಗಿರಬೇಕು ಅಂತ ಸಹ ಅನ್ನಿಸಿರಲಿಲ್ಲ. ಮತ್ತು ನನಗೆ ಹಣಕಾಸಿನ ವಿಷಯದಲ್ಲಿ ಲೆಕ್ಕ ಸರಿಯಾಗಿ ಕೊಡದೆ ಮೋಸ ಮಾಡಿದ ಆಫೀಸ್ ಅಸಿಸ್ಟೆಂಟ್ ಡಿಗ್ರಿ ಮಾಡಿದ್ದ, ಪ್ರತಿ ದಿನ ಹುಬ್ಬಿನ ನಡುವೆ ಕುಂಕುಮ ಇಟ್ಟುಕೊಂಡೇ ಆಫೀಸಿಗೆ ಬರುತ್ತಿದ್ದ ಮತ್ತು ಪ್ರತಿ ವರ್ಷ ತೀರ್ಥಯಾತ್ರೆ ಮಾಡುತ್ತಿದ್ದ. ಎಲ್ಲಾ ಕಪ್ಪು ಬಿಳುಪಲ್ಲ ಮತ್ತು ಯಾವುದೇ ಸತ್ಯ ಅಂತಿಮವೂ ಅಲ್ಲ, ಸಂಪೂರ್ಣವೂ ಅಲ್ಲ ಎನ್ನುವುದು ನನಗೆ ಅರಿವಾಗಿತ್ತು.
ಬಹಳ ಹಿಂದೆ, ನಾನು ’ಅವರು ತಪ್ಪಿತಸ್ಥರು ಎಂದು ಸಾಬೀತಾಗುವವರೆಗೂ ಅವರನ್ನು ಸಂಪೂರ್ಣವಾಗಿ ನಂಬುತ್ತೇನೆ’ ಎಂದುಕೊಳ್ಳುತ್ತಿದ್ದಾಗ ನನ್ನ ಗೆಳೆಯ ನನಗೆ ಒಂದು ಕಥೆ ಹೇಳಿದ್ದ. ’ಒಂದು ಸಲ ಒಬ್ಬಾತ ಬಂದು ಊರಿನ ಜನರೆದಿರು ಊರಾಚೆ ಇರುವ ಎರಡು ಗುಡ್ಡಗಳ ನಡುವೆ ಹಗ್ಗ ಕಟ್ಟಿ, ಹಗ್ಗದ ಸಹಾಯದಿಂದ ಒಂದು ಬೆಟ್ಟದ ತುದಿಯಿಂದ ಇನ್ನೊಂದು ಬೆಟ್ಟದ ತುದಿಗೆ ಹೋಗುತ್ತಿದ್ದೀನಿ, ಅಂದನಂತೆ, ಕೆಲವರು ಮಾತ್ರ ಅವನನ್ನ believe ಮಾಡಿದ್ರಂತೆ. ಆಮೇಲೆ ಅವನು ನೀವು ಯಾರದ್ರೂ ಬನ್ನಿ ನಿಮ್ಮನ್ನು ಬೆನ್ನಿಗೆ ಕಟ್ಟಿಕೊಂಡು ಹೋಗ್ತೀನಿ ಅಂದನಂತೆ. ಆಗ believe ಮಾಡಿದ್ದವರಲ್ಲಿ ಒಬ್ಬರೋ, ಇಬ್ಬರೋ ನಂಬಿದರಂತೆ, ಅದು Trust. ಹಾಗಾಗಿ ಎಲ್ಲರನ್ನೂ believe ಮಾಡು ತಪ್ಪಲ್ಲ, ಆದರೆ Trust ಮಾಡುವಾಗ ಹುಷಾರು” ಅಂದಿದ್ದ. ಹಾಗೆ ನಂಬಿಕೆ ಸಹ ಸಂಪೂರ್ಣವಲ್ಲ ಮತ್ತು ಅಂತಿಮವಲ್ಲ ಎಂದು ನನಗೆ ಅರ್ಥವಾಗಿತ್ತು.
ಹೀಗೆ ಸತ್ಯ ಸಂಪೂರ್ಣವಲ್ಲ, ಅದು ರಿಲೇಟಿವ್ ಎನ್ನುವುದು ನನಗೆ ಮತ್ತೆ ನೆನಪಿಗೆ ಬಂದದ್ದು ಇಂದು ಟಿವಿಯಲ್ಲಿ ಸೈನೆಡ್ ಚಲನಚಿತ್ರ ನೋಡುವಾಗ. ಅಲ್ಲಿ ಒಕ್ಕಣ್ಣಿನ ಶಿವಾರಸನ್ ನಮಗೆ ಉಗ್ರವಾದಿಯಾಗಿ ಕಂಡಿರುವುದು ಎಷ್ಟು ನಿಜವೋ ತಮಿಳರ ಕಣ್ಣಿಗೆ ಸ್ವಾತಂತ್ರ್ಯ ಹೋರಾಟಗಾರನಾಗಿ ಕಂಡಿರುವುದು ಸಹ ಅಷ್ಟೇ ಸತ್ಯ ಅಲ್ಲವಾ ಅನ್ನಿಸಿತು. ಯುದ್ಧದಲ್ಲಿ ಯಾರು ಗೆದ್ದರು ಅನ್ನುವುದರ ಮೇಲೆ ಯಾರು ಸ್ವಾತಂತ್ರ್ಯ ಹೋರಾಟಗಾರರು, ಯಾರು ದಂಗೆಕೋರರು ಎನ್ನುವುದು ತೀರ್ಮಾನ ಆಗುತ್ತದೆ.
ಸಮಾಜ ಬದಲಾಗಿದೆ, ಸಮಾಜದ ಮೌಲ್ಯಗಳು ಬದಲಾಗಿವೆ, ನಾವು ಯೋಚಿಸಬಲ್ಲೆವು, ನಿರ್ಧಾರ ತೆಗೆದುಕೊಳ್ಳಬಲ್ಲೆವು ಎಂದು ತಲೆ ಎತ್ತಿ ಹೇಳುತ್ತೇವೆ. ಆದರೆ ಆ ನಿರ್ಧಾರದ ಪರಿಣಾಮವನ್ನು ಮಾತ್ರ ಯಾಕೆ ಇನ್ನೊಬ್ಬರ ಹೊಣೆಯನ್ನಾಗಿ ಮಾಡುತ್ತೇವೆ? ಒಂದು ಬಲಾತ್ಕಾರ ಆಗಿದ್ದಾಗ ಅಲ್ಲಿ ಪುರುಷನನ್ನು ಅಪರಾಧಿಯನ್ನಾಗಿ ನಿಲ್ಲಿಸುವುದು ಒಂದು ರೀತಿ. ಆದರೆ ಬದಲಾದ ಸಾಮಾಜಿಕ ವ್ಯವಸ್ಥೆಗಳಲ್ಲಿ, ಬದುಕಿನಲ್ಲಿ, ಜೊತೆ ಜೊತೆ ಓಡಾಡುವಾಗ, ಎಲ್ಲಾ ಸ್ನೇಹ ಸಲಿಗೆಯಲ್ಲಿ ಓಡಾಡಿ, ಪರಸ್ಪರ ಸಮ್ಮತಿಯಿಂದಲೇ ಸಲಿಗೆಯಿಂದ ಮುಂದುವರಿದು ಆಮೇಲೆ ಎಲ್ಲಾ ತಪ್ಪು ಆತನದೇ ಎಂದು ಹೇಳಿ, ತನ್ನನ್ನು ಮುಗ್ಧೆಯನ್ನಾಗಿಸಿಕೊಂಡು, ಆ ಘಳಿಗೆಯಿಂದ ಹಾಕುತ್ತಿದ್ದ ನವನವೀನ ಬಟ್ಟೆಗಳನ್ನು ತ್ಯಜಿಸಿ ಸೀರೆ ಉಟ್ಟು ಮಾಧ್ಯಮಗಳ ಮುಂದೆ ಹಾಜರಾಗುವುದು ಸಹ ಅತ್ಯಂತ ಹಾಸ್ಯಾಸ್ಪದ ಅಲ್ಲವೆ? ನಾವು ಬರುವ ಸಾಮಾಜಿಕ ಹಿನ್ನಲೆಯಿಂದಾಗಲೀ, ಧರಿಸುವ ಬಟ್ಟೆಗಳಿಂದಾಗಲಿ, ಓದಿದ ಅಥವಾ ಓದದ ಓದಿನಿಂದ ಬರುವುದಿಲ್ಲ, ಒಳಿತು ಕೆಡುಕುಗಳನ್ನು ಹಾಗೆ ನಿರ್ಧರಿಸುವುದೂ ಸಾಧ್ಯವಿಲ್ಲ. ಹಾಗಿರುವಾಗ ನಾವು ನಮ್ಮ ಸತ್ಯವನ್ನೇ ಎಲ್ಲರ ಸತ್ಯ ಎಂದು ಸಾಧಿಸುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ನಮ್ಮ ನಂಬಿಕೆಗಳನ್ನು, ಮೌಲ್ಯಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ, ಆದರೆ ಆ ಸತ್ಯಗಳು ಎಲ್ಲರ ಸತ್ಯಗಳಲ್ಲ ಎನ್ನುವುದರ ಅರಿವೂ ನಮಗೆ ಇರಬೇಕು ಅಲ್ಲವೇ? ಹಾಗಿದ್ದಾಗ ಮಾತ್ರ ಭಿನ್ನ ಮತ ಹಾಗು ಭಿನ್ನ ವಿಚಾರಗಳ ನಡುವೆಯೂ ಒಂದು ಸಹಬಾಳ್ವೆ ಸಾಧ್ಯವಾಗುತ್ತದೆ. ಸತ್ಯದಂತಹ ಸತ್ಯಕ್ಕೂ ಒಂದು ಮಾರ್ಜಿನ್ ಇಟ್ಟೇ ನೋಡಬೇಕಾಗುತ್ತದೆ ಮತ್ತು ತಪ್ಪು ಸರಿಗಳ ನಿರ್ಧಾರಕ್ಕೆ ಬರಲು ಅವಸರ ಪಡದಂತೆ ತಾಳುವ ಮನೋಭಾವ ಬೇಕಾಗುತ್ತದೆ.
ಯಾವುದೇ ಕೆಲಸ ಮಾಡುವುದಕ್ಕೆ ಹೇಗೆ ಕಾರಣಗಳಿರುತ್ತವೆಯೋ ಹಾಗೆ ಮಾಡದೇ ಇರುವುದಕ್ಕೂ ಕಾರಣಗಳಿರುತ್ತವೆ. ಆದರೆ ಕಾರಣಗಳು ಬಹು ಸಾರಿ ಅಮುಖ್ಯವಾಗಿಬಿಡುತ್ತವೆ. ನಮಗೆ ಆ ಕೆಲಸ ಮಾಡಬೇಕು ಅಂತಿದ್ದರೆ ಅದಕ್ಕೆ ತಕ್ಕ ಕಾರಣಗಳನ್ನು ಆರಿಸಿಕೊಳ್ಳುತ್ತೇವೆ, ಮಾಡುವುದು ಬೇಡ ಅಂತಿದ್ದರೆ ಅದಕ್ಕೆ ಪೂರಕವಾದ ಕಾರಣಗಳನ್ನು ಹೆಕ್ಕಿಕೊಳ್ಳುತ್ತೇವೆ. ಕಾರಣಗಳು ಯಾವಾಗಲೂ ರಿಲೆಟಿವ್.
ಸಂಧ್ಯಾರಾಣಿ ಕಾಲಂ : ಸತ್ಯ ಎನ್ನುವುದು ಯಾವಾಗಲೂ Relative ಮಾತ್ರ
ನಿಮಗೆ ಇವೂ ಇಷ್ಟವಾಗಬಹುದು…

Sikkkkaaaaapatte ishtavaythu
ಅಪೇಕ್ಷೆಗೆ ತಕ್ಕಂತೆ ಸಾಪೇಕ್ಷ ಆಗುತ್ತಾ ಹೋಗುವ ಘಟನೆ, ಬದುಕು, ಸಂಬಂಧ, ನಿಲುವು, ಒಲವಿನ ಅತ್ಯುತ್ತಮ ಚಿತ್ರ . ಥ್ಯಾಂಕ್ಸ್ ಸರಾ.
This is exactly what Ayn Rand says. What is moral premises? where do you stand and judge?
ಬಹಳ ಸತ್ಯವಾದ ಮಾತು, ಅವರವರ ಪಾಲಿಗೆ ಅವರವರು ಸತ್ಯ,,,, ಮನಮುಟ್ಟಿದ ಬರಹ,,,
ಇನ್ನೊಂದು ಬಹಳ ದಿನಗಳಿಂದ ಕಾಡುವ ಪ್ರಶ್ನೆ, “ಕೆಲವರು ಹೇಳುತ್ತಾರೆ ಸಾರ್ವಕಾಲಿಕ ಸತ್ಯ ಎಂಬ ನುಡಿಯನ್ನ” ಈ ಸಾರ್ವಕಾಲಿಕ ಸತ್ಯದ ಬಗ್ಗೆಯೂ ಬರೆಯುವಿರ ಸಂಧ್ಯಕ್ಕ ,,,,
ಧನ್ಯವಾದಗಳು
-ಜೀ ಕೇ ನ
“ಯುದ್ಧದಲ್ಲಿ ಯಾರು ಗೆದ್ದರು ಅನ್ನುವುದರ ಮೇಲೆ ಯಾರು ಸ್ವಾತಂತ್ರ್ಯ ಹೋರಾಟಗಾರರು, ಯಾರು ದಂಗೆಕೋರರು ಎನ್ನುವುದು ತೀರ್ಮಾನ ಆಗುತ್ತದೆ………” ಅತ್ಯಂತ ಇಷ್ಟವಾದ ಸಾಲು.
ಹೌದು..ಇಲ್ಲಿ “ಎಲ್ಲವೂ” ರಿಲೆಟಿವ್..ಒಳ್ಳೆಯ ಲೇಖನ…
ಕುರುಡರು “ಕಂಡ” ಆನೆಯ ಚಿತ್ರವೂ ಚೆಂದ.
ಹಾಗೆ ನೋಡಿದರೆ ಪ್ರಪಂಚದ ಎಲ್ಲವೂ ಸಾಪೇಕ್ಷವೆ, ಸತ್ಯದ ಸೆಲ್ಫಲೈಫು ಸ್ವಲ್ಪವೆ. ಆದರೂ ಯಾಕೋ ಆ ನಿಲುವಿನಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೆ ಹೆಚ್ಚೆನೋ ಅನಿಸುತ್ತದೆ ಹಾಗೂ ಆ ನಿಲುವಿನಲ್ಲಿ ಮೂಲಭೂತವಾದ ಸತ್ಯವನ್ನು ಸಾವಿನತ್ತ ತಳ್ಳುವದಕ್ಕೆ ಇಂಬು ನೀಡಿದಂತೆ ಅನಿಸುತ್ತದೆ. ಗೋಡ್ಸೆ ಕಣ್ಣಲ್ಲಿ ಗಾಂಧಿ, ಓಸಾಮ ಕಣ್ಣಲ್ಲೆ ಓಬಾಮದ ಬಗ್ಗೆ ಆಕರ್ಷಕವಾಗಿ ಬರೆಯುವವರು ಆ ಕಾಲಕ್ಕೆ ಎಷ್ಟೇ ಚೆನ್ನಾಗಿ ‘ಹೌದು, ಇದು ಕೂಡಾ ನಿಜ’ ಎಂದು ನಂಬಿಸಬಲ್ಲವರಾದರೂ ನನಗೇನೋ ಅಂತಿಮ ವಿಜಯ್ ಸತ್ಯದ್ದೆ ಅನಿಸುತ್ತದೆ – ಇ ‘ಸತ್ಯ’ ವನ್ನು ಡಿಪೈನ್ ಮಾಡಿ, ರಿಪೈನ್ ಮಾಡುವದೇ ಮನುಷ್ಯತ್ವವದ ಗುರಿ ಅಲ್ಲವೆ?
~ಅನೀಲ
ವಿಚಾರ ಪ್ರಚೋದಕ ಮಾತುಗಳು ಸಂಧ್ಯಾ ಜಿ. ನಿನ್ನೆಯ ಸತ್ಯ, ನಾಳೆಯೂ ಅದೇ ಇರುತ್ತದೆ ಎನ್ನುವುದು ಅವರವರ ಭಾವಕೋಶಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ನೆಲೆಗಳನ್ನು, ಸ್ಥರಗಳನ್ನು ಅವಲಂಬಿಸಿರುತ್ತದೆ, ನೀವಂದಂತೆ, ಅದು ರಿಲೇಟಿವ್ ಮಾತ್ರ. ಹಿಂದಿನ ಮೌಲ್ಯಗಳು ಇಂದು ಕಣ್ಣಮುಂದೆಯೇ ಮೂಲೆಗುಂಪಾಗುವುದನ್ನು ದಿನವೂ ಕಾಣುತ್ತಿದ್ದೇವೆ, ನಾಳೆ ಇನ್ನೇನೊ ಎಂಬುದು ಕೂಡ ದೊಡ್ಡ ಪ್ರಶ್ನಾರ್ಥಕ. ತುಂಬ ದೊಡ್ಡ ವಿಚಾರವನ್ನೇ ಮಂಡಿಸಿದ್ದೀರಿ,….ಒಳಗೆ ಇನ್ನೂ ಇಳಿಯುತ್ತಿರುವುದು….. ಬರಹದ ಜೀವಂತಿಕೆಗೆ ಸಾಕ್ಷಿ.
ಕೊನೆಯ ಸಾಲುಗಳನ್ನು ಪದೆಪದೇ ಓದಿಕೊಂಡೆ..
ಇಷ್ಟವಾಯ್ತು..