
ರವೀಂದ್ರ ಕಲಾಕ್ಷೇತ್ರದ ಒಳ ಆವರಣ, ಅತ್ಯಂತ ಸರಳವಾಗಿ, ಆತ್ಮೀಯವಾಗಿದ್ದ ಒಂದು ಸಂಜೆ, ಇದ್ದವರೆಲ್ಲಾ ಅತ್ಮೀಯರೇ, ಸಮಾನ ಮನಸ್ಕರೇ. ಹೊರಗೆ ಹನಿಯುತ್ತಿದ್ದ ಮಳೆ, ನಿಧಾನವಾಗಿ ಮೇಲೇಳುತ್ತಿದ್ದ ಒದ್ದೆ ಮಣ್ಣಿನ ಘಮ, ಎಲ್ಲಾ ನಯ ನಾಜೂಕಿನ ಬಿಗಿ ಕಳಚಿಟ್ಟು ನೆಲದ ಮೇಲೆ ಕೂತಿದ್ದ, ಅಲ್ಲಲ್ಲಿ ನಿಂತಿದ್ದ ಸ್ನೇಹಿತರು, ವೇದಿಕೆ ಅನ್ನುವ ವೇದಿಕೆಯ ಹಂಗಿಲ್ಲದೆ ಅಲ್ಲೇ ನಿಂತು ಆತ್ಮೀಯತೆಯಿಂದ ಮಾತಾಡುತ್ತಿದ್ದವರು… ಸಂಸ ರಂಗಪತ್ರಿಕೆ ’ತಳ ಸಂಸ್ಕೃತಿಯ ನೆಲೆ’ಯಲ್ಲಿ ಏರ್ಪಡಿಸಿದ್ದ ಸಮಾರಂಭ, ಯಾಕೋ ಸಮಾರಂಭ ಎನ್ನುವ ಪದವೇ ಅದಕ್ಕೆ ಭಾರ ಅನ್ನುವಷ್ಟು ಇನ್ ಫಾರ್ಮಲ್ ಆಗಿದ್ದ ಸಂಜೆ.
ರಂಗ ಗೀತೆ, ರಂಗ ಸಾಧಕರಿಗೆ ಸನ್ಮಾನ, ಸಮಾನ ಮನಸ್ಕರ ಒಂದಿಷ್ಟು ಮಾತು, ಒಂದು ನಾಟಕ.. ಒಟ್ಟಿನಲ್ಲಿ ಈ ಸಂಜೆಗೊಂದು ಗುಂಗು, ನೆನಪು ಖಾತ್ರಿ ಎಂದುಕೊಂಡು ಹೋಗಿದ್ದು ಅಲ್ಲಿಗೆ. ಅಲ್ಲಿ ಮಾತಾಡಿದವರೆಲ್ಲಾ ಹೃದಯದಿಂದ ಮಾತನಾಡಿದವರೇ, ಭಾಷೆಗೆ ಯಾವ ಅಲಂಕಾರವೂ ಇರಲಿಲ್ಲ, ಹಾಗೆ ಅದು ಎಲ್ಲರನ್ನೂ ತಾಗುತ್ತಿತ್ತು, ನಮ್ಮದಾಗುತ್ತಿತ್ತು.
ಆಗ ಮಾತನಾಡುತ್ತಾ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ ಒಂದು ಘಟನೆಯನ್ನು ಹೇಳುತ್ತಾ ಹೋದರು, ನನ್ನಲ್ಲಿ ಸುಮಾರು ದಿನಗಳಿಂದ ಇದ್ದ ಒಂದು ಹುಡುಕಾಟಕ್ಕೆ ಒಂದು ಆಕಾರ ಬರತೊಡಗಿತ್ತು. ಅವರು ಹೇಳಿದ ಘಟನೆ ಸೋಬಾನೆ ಹಾಡು ಹಾಡುವ ಅಜ್ಜಿಯ ಬಗ್ಗೆ, ಜಾನಪದ ಜಾತ್ರೆ ಸಂದರ್ಭದಲ್ಲಿ ರಾಜಧಾನಿಗೆ ಬಂದು, ಮುಖ್ಯ ಮಂತ್ರಿಯ ಸಮ್ಮುಖದಲ್ಲಿ, ಸೋಬಾನೆ ಪದ ಹಾಡಿ ಸೈ ಅನಿಸಿಕೊಂಡ ಅಜ್ಜಿಯ ಬಗ್ಗೆ. ಆ ಅಜ್ಜಿಯ ಹಾಡಿಗೆ ಮನಸೋತ ಕಪ್ಪಣ್ಣ ಊರಿಗೆ ಹೋದಾಗ ಜಾತ್ರೆಯಲ್ಲಿ ಆ ಅಜ್ಜಿಯನ್ನು ಕಂಡು, ’ಎಷ್ಟು ಚನ್ನಾಗಿ ಹಾಡಿದೆಯವ್ವ’ ಎಂದು ಕಾಲಿಗೆ ನಮಸ್ಕಾರ ಮಾಡಿ ಬಂದಿದ್ದಾರೆ. ಅಜ್ಜಿಯ ಕಲೆಗೆ, ಕಪ್ಪಣ್ಣನವರ ಕಲಾಪ್ರೇಮಕ್ಕೆ ಸಲಾಂ ಅಂತ ಅನ್ನಿಸುತ್ತಾ ಇತ್ತಲ್ಲ, ಅಷ್ಟರಲ್ಲಿ ಕತೆಗೊಂದು ತಿರುವು ಕೊಟ್ಟರು ಕಪ್ಪಣ್ಣ. ಇದಾದ ಒಂದೇ ವಾರಕ್ಕೆ ಆ ಅಜ್ಜಿ ಅಳುತ್ತಾ ಇವರ ಮನೆಗೆ ಬಂದಳಂತೆ, ಯಾಕೆ, ಏನು ಎಂದು ವಿಚಾರಿಸಿದಾಗ ಹೊರಬಂದ ವಿಷಯ ಇದು : ಆಕೆಯ ಊರಿನಲ್ಲಿ ಪಂಚಾಯತಿ ಸೇರಿಸಿ, ಅಜ್ಜಿಯನ್ನು ಬೈಯ್ದು, ಬಹಿಷ್ಕಾರ ಹಾಕುತ್ತೇವೆ ಎಂದು ಹೇಳಿದ್ದರಂತೆ, ಕಾರಣ?
ಅವರ ವಾದ ಇದು, ’ದಲಿತಳಾದ ನೀನು ಅದು ಹೇಗೆ ಸೀನಪ್ಪನ ಹತ್ತಿರ ಕಾಲು ಮುಟ್ಟಿಸಿಕೊಂಡೆ’? ಮನಸ್ಸು ಕಿವುಚಿದಂತಾಯ್ತು. ಆಕೆಯ ಯಾವುದೇ ಭಾಗವಹಿಸುವಿಕೆ ಇಲ್ಲದೆ, ವಯಸ್ಸಾದ ಅಜ್ಜಿಗೆ ಮಾಡಿದ ಒಂದು ನಮಸ್ಕಾರ ಹೇಗೆ ಆಕೆಯನ್ನು ಅಟ್ಟಾಡಿಸುತ್ತಿತ್ತು ನೋಡಿ. ಜಾತಿ ಪ್ರಜ್ಞೆಯಷ್ಟೇ ನನ್ನನ್ನು ಕಾಡಿದ ಇನ್ನೊಂದು ವಿಷಯ, ಆಕೆಯಲ್ಲಿದ್ದ ಆ ಅದ್ಭುತ ಕಲೆ, ರಾಜಧಾನಿಯಲ್ಲಿ ಮುಖ್ಯಮಂತ್ರಿಗಳಿಂದ ಅವಳಿಗೆ ಸನ್ಮಾನ ಮಾಡಿಸಿದ್ದ ಕಲೆ, ಇಲ್ಲಿ ಎಲ್ಲರೂ ಮೆಚ್ಚಿ ಅಹುದಹುದು ಎಂದ ಕಲೆ ಅಲ್ಲಿ ಚಲಾವಣೆಯೇ ಇಲ್ಲದ ನಾಣ್ಯ ಆಗಿ ಹೋಗಿತ್ತಲ್ಲ… ಆಕೆಯ ಕಲೆಯ ಭಾಷೆ ಅಲ್ಲಿ ಯಾರಿಗೂ ಬರುತ್ತಲೇ ಇರಲಿಲ್ಲ, ಅವರು ಕಲಿತದ್ದೆಲ್ಲಾ ಸಂಪ್ರದಾಯದ ರೂಢಿ ಭಾಷೆ ಮಾತ್ರ.
’ಎದೆ ಎದೆಗಳ ನಡುವೆ ಇರುವ ಸೇತುವೆಗಳು ಕುಸಿದಾಗ’, ಸಂವಹನದ ಸಾಧನವಾದ ಭಾಷೆ ನೆಲೆ ಕಳೆದುಕೊಳ್ಳುವಾಗ ನಿಂತಲ್ಲೇ ಅಚಾನಕ್ ಆಗಿ ಉದ್ಭವವಾಗುವ ಕಂದಕಗಳು ಇವು, ನಮ್ಮವರೇ ಅಪರಿಚಿತರಾದಂತೆ, ನಮ್ಮ ಹಾಡಿನ ಪದಗಳೆಲ್ಲಾ ಖಾಲಿ ಆದಂತೆ, ನಡು ನದಿಯಲ್ಲಿ, ತೆಪ್ಪ ನಡೆಸುತ್ತಾ ನಡೆಸುತ್ತಾ ನೀರಿನೊಂದಿಗಿನ ಭಾಷೆ ಮರೆತಂತೆ.
ಪಂಡಿತ್ ರವಿಶಂಕರರ ಸಿತಾರ್ ಕೇಳುತ್ತಿದ್ದರೆ ನನಗೆ ಪ್ರತಿ ಸಲ ಅದು ಪ್ರಾರ್ಥನೆಯಂತೆಯೇ ಕೇಳಿಸಿದೆ, ಆದರೆ ಮತ್ತ್ಯಾರಿಗೋ ಅವರ ವೈಯಕ್ತಿಕ ಜೀವನದ ಅವಘಡಗಳೇ ಕಂಡರೆ ಏನು ಮಾಡುವುದು? ಬೋದಿಲೇರ್ ನನ್ನು ಜಗತ್ತು ಹುಚ್ಚೆದ್ದು ಓದಿದೆ, ಆದರೆ ಫ್ರಾನ್ಸ್ ನ ಮಟ್ಟಿಗೆ ಆತ ಅಸ್ಪೃಶ್ಯನೇ, ಇಲ್ಲಿರುವುದು ಯಾರ ಗ್ರಹಿಕೆ ತಪ್ಪು – ಯಾರದು ಸರಿ ಅನ್ನುವ ನೈತಿಕ ಪ್ರಶ್ನೆಯಲ್ಲ. ಯಾರಿಗೆ ಯಾವುದು ಮುಖ್ಯವೋ, ಯಾರಿಗೆ ಯಾವ ಭಾಷೆ ಬರುತ್ತದೆಯೋ ಅವರು ಅದನ್ನು ಮತ್ತು ಅದನ್ನು ಮಾತ್ರ ಗ್ರಹಿಸಿಕೊಳ್ಳುತ್ತಾರೆ ಅಷ್ಟೆ. ವ್ಯಕ್ತಿಯ ವ್ಯಕ್ತಿತ್ವದಷ್ಟೇ ಮುಖ್ಯ ಅವನು ಎದುರಾಗುವ ಜೀವಗಳ ಗ್ರಹಿಕೆ ಮತ್ತು ಗ್ರಹಿಸುವ ಶಕ್ತಿ.
ನಮ್ಮ ಮಾತನ್ನೇ ಅರ್ಥ ಮಾಡಿಕೊಳ್ಳದವರ, ಮಾಡಿಕೊಳ್ಳ ಬಯಸದವರ ನಡುವೆ ಮಾತೆಷ್ಟು ಅರ್ಥಹೀನ? ಕವಿತೆ ಎದುರಾಗಿದ್ದಾಗ ಕವಿತೆ ಓದದೆ, ಸಾಲಿನ ನಡುವಿನ ವ್ಯಾಕರಣಾ ಚಿಹ್ನೆಯನ್ನು ಸರಿ ಪಡಿಸುವವರೆದುರಿಗೆ ಕವಿತೆ ಎಷ್ಟು ಬಲಹೀನ?

ಇದ್ದಕ್ಕಿದ್ದಂತೆ ಬೇರೆ ಜಗತ್ತಿಗೆ ಬಂದು, ಭಾಷೆ ಬರದೆ ಕಳೆದೇ ಹೋದ ಮಾಂತ್ರಿಕನ ನೆನಪಾಗುತ್ತಿದೆ ನನಗೆ.. ನಾನು ಕತ್ತಲೆ – ಬೆಳಕು ಲೋಕದ ಮಾಂತ್ರಿಕ ಮೂರ್ತಿಯವರ ಬಗ್ಗೆ ಮಾತನಾಡುತ್ತಿದ್ದೇನೆ. ಮೊನ್ನೆ ಅವರ ನೆನಪಿನ ಲೇಖನ ಒಂದಕ್ಕೆ ಒಬ್ಬರು (ಕ್ಷಮಿಸಿ, ಹೆಸರು ಮರೆತಿದ್ದೇನೆ) ಪ್ರತಿಕ್ರಯಿಸಿದ್ದು ಹೀಗೆ, ’ಅವರೊಬ್ಬ ಮಾಂತ್ರಿಕ, ಒಂದು ಬಟ್ಟಲಲ್ಲಿ ಕತ್ತಲನ್ನು, ಒಂದು ಬಟ್ಟಲಲ್ಲಿ ಬೆಳಕನ್ನೂ ಇಟ್ಟುಕೊಂಡು ಕುಂಚವನ್ನು ಒಮ್ಮೆ ಅಲ್ಲಿ, ಒಮ್ಮೆ ಇಲ್ಲಿ ಅದ್ದಿ, ಅದ್ಭುತ ದೃಶ್ಯಗಳನ್ನು ಸೃಷ್ಟಿಸುತ್ತಿದ್ದ ಕಲಾವಿದ’ ಅಂತ. ಬಹುಷಃ ಮೂರ್ತಿಯವರನ್ನು ಒಂದು ಸಾಲಿನಲ್ಲಿ ಇದಕ್ಕಿಂತ ಅದ್ಭುತವಾಗಿ ವರ್ಣಿಸಲು ಸಾಧ್ಯವೇ ಇಲ್ಲವೇನೋ. ಆದರೆ ಈ ಮಾಂತ್ರಿಕನ ಮಂತ್ರದಂಡ ಬಣ್ಣದ ಲೋಕದಲ್ಲಿ ಯಾಕೆ ತನ್ನ ದನಿಯನ್ನೇ ಕಳೆದುಕೊಂಡುಬಿಟ್ಟಿತು? ಕ್ಯಾಮೆರಾ ತಾಂತ್ರಿಕವಾಗಿ ಬೆಳೆದ ಹಾಗೆ, ಯಾಕೆ ಈ ಮಾಂತ್ರಿಕನ ಭಾಷೆಯನ್ನು ಜನ ಮರೆಯುತ್ತಾ ಹೋದರು?? ಮೂರ್ತಿ ಯಂತಹ ಮೂರ್ತಿ ಇಲ್ಲಿಗೆ ಬಂದ ಮೇಲೆ ಕೈಯಲ್ಲಿ ಕೆಲಸ ಇಲ್ಲದೆ ಕೂರುತ್ತಾರೆ, ’ಹೂವು ಹಣ್ಣು’ ಚಿತ್ರ ಬಂದದ್ದು, ಹೋದದ್ದು ಎರಡೂ ಎಲ್ಲೂ ಕಂಪನ ಸೃಷ್ಟಿಸಲೇ ಇಲ್ಲ. ಮೂರ್ತಿ ಕತ್ತಲು ಬೆಳಕಿನಲ್ಲಿ ಮಹಾಕಾವ್ಯ ಸೃಷ್ಟಿಸುತ್ತಿದ್ದರು, ಆದರೆ ನೋಡುಗರು ಆ ಭಾಷೆಯನ್ನೆ ಮರೆತು ಹೋಗಿದ್ದರು. ತಾಂತ್ರಿಕತೆಯ ಭಾಷೆ, ಕಸುಬುದಾರಿಕೆಯನ್ನು ಮೂಕಾಗಿಸಿಬಿಟ್ಟಿತ್ತು. ಬಣ್ಣಗಳ ಬಯಸುವ ಕಣ್ಣಿನೆದುರಲ್ಲಿ ಕಪ್ಪು, ಬಿಳಿ ನಡುವಿನ ಎಲ್ಲಾ ಬಣ್ಣಗಳೂ ಪೇಲವವಾಗಿ ಹೋಗಿದ್ದವು…
ಒಮ್ಮೆ ಹೋಟಲಿನಲ್ಲಿ ಕಾಫಿ ಕುಡಿಯುತ್ತಾ ಕೂತಿದ್ದೆ, ಪಕ್ಕದ ಟೇಬಲ್ ನಲ್ಲಿ ಆಕೆ ಮತ್ತು ಆತ. ಅವನ್ಯಾಕೋ ತೀರಾ ಬೇಸರದಲ್ಲಿದ್ದ, ’ನಾನು ಯಾರಿಗಾಗಿ ಬದುಕಬೇಕು, ಇತ್ತೀಚಿಗೆ ಸಿಕ್ಕಾಪಟ್ಟೆ ಆತ್ಮಹತ್ಯೆಯ ಯೋಚನೆ ಬರ್ತಿದೆ’ ಅಂತಿದ್ದ, ಇವಳು ಜಗತ್ತಿನೆಲ್ಲಾ ಪ್ರೀತಿ ತುಂಬಿದ ದನಿಯಲ್ಲಿ ’ನೀನಿಲ್ಲದಿದ್ದರೆ ನಾನೂ ಸತ್ತು ಹೋಗುತ್ತೇನೆ’ ಅಂದಳು. ’ನೀನು ಸಿನಿಮಾ ಭಾಷೆ ಮಾತನಾಡಬೇಡ’ ಥಟ್ಟನೆ ಸಿಡಿದ ಅವನು. ಅವಳು ಹೇಳುವಾಗ ಅಷ್ಟು ಪ್ರಾಮಾಣಿಕವಾದ ಸಾಲು, ಈ ಪ್ರತಿಕ್ರಿಯೆಯ ನಂತರ ಬಹುಷಃ ಅವಳಿಗೂ ಸಿನಿಮೀಯ ಅನ್ನಿಸಿಬಿಡ್ತೇನೋ, ಹುಡುಗಿ ಮೌನವಾದಳು. ಯಾಕೋ ಆ ಹುಡುಗಿಯನ್ನು ಕೂರಿಸಿಕೊಂಡು ಹೇಳಬೇಕು ಅನ್ನಿಸಿತು, ’ಹುಡುಗಿ ಅವನ ಜಗತ್ತಿನ ಭಾಷೆಯೇ ಬೇರೆ, ನಿನ್ನ ಊರಿನ ಮಾತೇ ಬೇರೆ. ಅವನ ಊರಿನಲ್ಲಿ ಚಲಾವಣೆಯಾಗದ ನಾಣ್ಯ ನಿನ್ನ ಬಳಿ ಕೊಪ್ಪರಿಗೆ ಇದ್ದರೂ ಬಂದ ಭಾಗ್ಯವೇನೆ’ ಅಂತ.
ಒಮ್ಮೆ ಯೋಚಿಸಿ, ನಿಮ್ಮಲ್ಲಿ ಅದ್ಭುತವಾದ ಕಂಠ ಇದೆ, ಲಯ ಜ್ಞಾನ ಇದೆ, ಹಾಡುವ ಪಾಂಡಿತ್ಯ ಇದೆ, ಆದರೆ ಹಾಡನ್ನು ಸವಿಯದವರೇ ಇರುವ ಗುಂಪಿನ ನಡುವೆ ಇದ್ದಾಗ ನೀವೆಷ್ಟು ಪರದೇಸಿಗಳು.. ಎದೆ ತುಂಬ ಪ್ರೀತಿ ಇಟ್ಟುಕೊಂಡು ಕೊಡಲೆಂದು ತುದಿಕಾಲಲ್ಲಿ ನಿಂತಿರುವಾಗ ಆ ಪ್ರೀತಿಯೇ ಬೇಡವಾಗಿರುವವರು ಎದುರಿಗಿದ್ದಾಗ ನೀವೆಷ್ಟು ದೌರ್ಭಾಗ್ಯರು… ಪಡೆದುಕೊಳ್ಳುವ ಕೈ ಇಲ್ಲದಾಗ, ಕೊಡಲು ಸಿದ್ಧವಾದ ತುಂಬು ನದಿಗೂ, ಜೀವಸೆಲೆಯೇ ಬತ್ತಿದ ನದಿಗೂ ಏನು ವ್ಯತ್ಯಾಸ? ಕೊಡುವ ತೃಪ್ತಿ ಸಿಗಬೇಕಾದರೆ ಪಡೆದುಕೊಳ್ಳುವವರೂ ಬೇಕಲ್ಲವೆ, ನಿಮ್ಮ ಮನಸ್ಸು ಅರಿಯಲು ಮನಸ್ಸಿನ ಭಾಷೆ ಆಲಿಸುವವರೂ ಇರಬೇಕಲ್ಲವೆ? ನನ್ನ ಹಾಡು ಗೆಲ್ಲುವುದು ಕೇವಲ ನನ್ನಿಂದ ಮಾತ್ರ ಅಲ್ಲ, ಕೇಳಿ ತಲೆದೂಗಬಲ್ಲ ಆ ಕಿವಿಗಳಿಂದ ಸಹ…
ಸಂವಹನದ ಭಾಷೆಗಳೆಲ್ಲಾ ಸತ್ತು ಹೋದಾಗ ಉಳಿಯುವುದು ಒಂದೇ ಭಾವ…
’ಹಿಂದೆ ಹೇಗೆ ಚಿಮ್ಮುತಿತ್ತು, ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ, ಯಾವ ಶಂಕೆ ಭೀತಿ..
….
ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ
ಸುರಿದಿದೆ ಈಗ ವಿಷ ಮಾತು ಮಾತಿನಲ್ಲಿ…’
ಒಂದು ಕವನದಲ್ಲಿ ಜಾವೇದ್ ಅಕ್ತರ್ ಅವಳ ಬಗ್ಗೆ ಬರೆಯುತ್ತಾ ಹೇಳುತ್ತಾರೆ ’ಅವಳಿಗೆ ನನ್ನ ಭಾಷೆ ಅರ್ಥವಾಗುತ್ತಿತ್ತು’ ಅಂತ. ಇಲ್ಲಿ ಭಾಷೆ ಲೌಕಿಕದ್ದಲ್ಲ, ಭಾವನೆಗಳ ಜಗತ್ತಿನದು. ಮತ್ತೆ ಆ ಸಂಜೆಯ ಬಗ್ಗೆ ಹೇಳುವುದಾದರೆ ಅಲ್ಲಿ ಎಲ್ಲರಿಗೂ ಅಲ್ಲಿ ಮಾತನಾಡುತ್ತಿದ್ದ ಭಾಷೆ ಅರ್ಥವಾಗುತ್ತಿತ್ತು.. ಪ್ರಕಾಶ್ ಶೆಟ್ಟಿ ಮತ್ತು ತಂಡದವರ ರಂಗ ಗೀತೆಗಳು, ಸಂಸ ಪತ್ರಿಕೆಯ ಸುರೇಶ್ ರಿಂದ ಹಿಡಿದು ವಿಶ್ರಾಂತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ರವರು, ವಿಶು ಕುಮಾರ್, ಚಂದ್ರಕಾಂತ ಪೋಕಳೆಯವರು, ಚಂದ್ರಿಕಾರವರು, ಪ್ರಶಸ್ತಿ ಪಡೆದ ಜಿ ಎನ್ ಮೋಹನ್ ಮತ್ತು ಚೌಗಳೆಯವರು ಎಲ್ಲರೂ ಅದೇ ಭಾಷೆ ಮಾತನಾಡುತ್ತಿದ್ದರು ಮತ್ತು ಅಲ್ಲಿದ್ದ ಎಲ್ಲರಿಗೂ ಆ ಭಾಷೆ ಅರ್ಥ ಆಗುತ್ತಿತ್ತು… ಮಳೆ ಹನಿ ಹನಿಯಾಗಿ ಮಣ್ಣಿನೊಳಗಿಳಿದ ಹಾಗೆ, ಮಣ್ಣು ಎಲ್ಲವನ್ನೂ ಪಡೆದು ತನ್ನ ಘಮದಿಂದ ಮಾತೇ ಇಲ್ಲದೆ ಉತ್ತರ ಕೊಟ್ಟಹಾಗೆ…
ಅಂತಹ ಒಂದು ಸಂಜೆಯನ್ನು ಸಾಧ್ಯವಾಗಿಸಿದ ಸಂಸ ರಂಗ ಪತ್ರಿಕೆಯ ತಂಡಕ್ಕೆ ನನ್ನ ಅಭಿನಂದನೆಗಳು ಮತ್ತು ಧನ್ಯವಾದಗಳು.
ಸಂಧ್ಯಾರಾಣಿ ಕಾಲಂ : ಮನವ ತಾಗುವ ಭಾಷೆ ಕಲಿಸವ್ವ, ಭಾಷೆ ಅರಿಯುವ ಮನವ ಉಳಿಸವ್ವ
ನಿಮಗೆ ಇವೂ ಇಷ್ಟವಾಗಬಹುದು…

Nice writeup Sandhyaji,I remembered Nietzsche saying “And those who were seen dancing were thought to be insane by those who could not hear the music”.
Adbhuta:-)
Loved reading it Sandhya!
ಯಾರಿಗೆ ಯಾವುದು ಮುಖ್ಯವೋ, ಯಾರಿಗೆ ಯಾವ ಭಾಷೆ ಬರುತ್ತದೆಯೋ ಅವರು ಅದನ್ನು ಮತ್ತು ಅದನ್ನು ಮಾತ್ರ ಗ್ರಹಿಸಿಕೊಳ್ಳುತ್ತಾರೆ ಅಷ್ಟೆ.
ಒಂದಿಷ್ಟು ಗ್ರಹಿಕೆಗಳ ಸಾಧ್ಯವಾಗಿಸಿದ ಬರಹ.
ಇಷ್ಟವಾಯಿತು.
Pleasent reading your writing as usual. ಭಾಷೆ ಸೇತುವೆ, ನಡೆದವರು ನಾವೆ, ಕೈಹಿಡಿದಾಗ ಸಮನ್ವಯ ಭಾವ, ಹಿಂದುಮುಂದಾಗಿ ಕೈಬಿಟ್ಟಾಗ ಅಪರಿಚಿತರಾದೆವಾ?
ನೀವು ಎಲ್ಲವನ್ನೂ ನೋಡುವ ..ಅರ್ಥೈಸುವ ಕಲೆಯೇ ಅದ್ಭುತ… ನಿಮ್ಮ ಬರಹ ಓದುವಾಗ ನಿಮ್ಮ ಭಾವಲಾಲಿತ್ಯ ಬರಹದಲ್ಲಿನ ವಿಚಾರಗಳನ್ನೂ ಮಸುಕುಗೊಳಿಸುವಸ್ಟು ಮೋಡಿ ಮಾಡುತ್ತದೆ.
nice
ಸಂಧ್ಯಾಕ್ಕ ,
ಸಾಮಾನ್ಯಕ್ಕೆ ಎಲ್ಲರೂ ವಾಸನೆ ಎನ್ನುವ ಪದ ಊಪಯೋಗಿಸುತ್ತಾರೆ ಆಗೆಲ್ಲಾ ನಾನು ಮೈಲ್ ಹಾಕಿ ವಿರೋಧ ವ್ಯಕ್ತಪಡಿಸಿದ್ದು ಇದೆ , ಸೂಪರ್ ಸಣ್ಣ ವಿಷಯಕ್ಕೆ ನೀವು ಕೊಟ್ಟ ಗಮನ , ಉಳಿದಂತೆ , ರಂಗಾ ಅಂತ ಕೂಗಿ ಅಟೆಂಡ್ಡೆ ನ್ಸ್ ತಗೊಂಡಿದ್ದರೆ ಎಸ್ ಸರ್ / ಮೇಡಂ ಎಂದು ಕೂಗಿ ಖಂಡಿತ ಹೇಳ್ತಾ ಇದ್ದೆ .
ಮಣ್ಣು ಎಲ್ಲವನ್ನೂ ಪಡೆದು ತನ್ನ ಘಮದಿಂದ ಮಾತೇ ಇಲ್ಲದೆ ಉತ್ತರ ಕೊಟ್ಟಹಾಗೆ
Sogasada lekhana
Wonderful write up
Loved it SANDYAA AKKA.. how true all the lines mentioned here.. i read twice this article..
Liked the article. Thank you.
“ಕೊಡುವ ತೃಪ್ತಿ ಸಿಗಬೇಕಾದರೆ ಪಡೆದುಕೊಳ್ಳುವವರೂ ಬೇಕಲ್ಲವೆ, ನಿಮ್ಮ ಮನಸ್ಸು ಅರಿಯಲು ಮನಸ್ಸಿನ ಭಾಷೆ ಆಲಿಸುವವರೂ ಇರಬೇಕಲ್ಲವೆ?” ಅದ್ಭುತವಾದ ಬರಹವಿದು – ಕಲೆಯ ಭಾಷೆ ಅರಿವಾಗದವರ ನಡುವೆ ಬದುಕು ಭಾರ.
-ಅನಿಲ
ಮೇಡಂ,
ನೀವು ಬಳಸುವ ಭಾಷೆ ಅದ್ಭುತ. ನಿಮ್ಮ ಗದ್ಯ ಅಲ್ಲಲ್ಲಿ ಪದ್ಯವಾಗುತ್ತಾ ಮಳೆಯು ಮಣ್ಣಿನೊಳಗೆ ಇಳಿದು ಘಮಿಸತೊಡಗಿದಂತೆ ಅದು ನಮ್ಮ ಎದೆಯೊಳಕ್ಕೆ ಇಳಿದು ಭಾವಗೀತೆಯಾಗಿ ಹಾಡತೊಡಗುತ್ತದೆ. Hats off to you and your article!
ನನಗೇ ಬರೆದ ಹಾಗನಿಸಿತು ಯಾಕೋ!
ಹೌದೇ ಹೌದು… ಕೊಡುತ್ತೇನೆಂದು ಕಾದು ನಿಂದರೂ ಪಡಕೊಳ್ಳುವವರಿಲ್ಲದಾಗ ಕಾಡುವ ಭಾವ ಭಾಷೆಗೆ ನಿಲುಕದ್ದು..
“ಎದೆಗೂ ಎದೆಗೂ ನಡುವಿದೆ ಹಿರಿಗಡಲು
ಮುಟ್ಟಲಾರೆವೇನು ಸೇತುವೆ ಕಟ್ಟಲಾರೆವೇನು?”
ಎಷ್ಟು ಸತ್ಯವಲ್ಲವಾ ಕವಿಮಾತು.. ಭಾಷೆ ಭಾವ ಎರಡನ್ನೂ ನವಿರಾಗಿ ಎದೆಯೊಳಗಿಳಿಸುವ ನಿನ್ನ ಕಲಾವಂತಿಕೆಗೆ ಲವ್ಸೂಊಊಊಊಊಊಊಊಉಉ 🙂
super :)))