ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಮಗ ಅಪ್ಪನಾದಾಗ…

’ಸಂಕ್ರಮಣ’ ದಲ್ಲಿ ಸಿಕ್ಕ ಉತ್ತರಗಳು

’ಪ್ರತಿ ಹೆಣ್ಣಿಗೂ ಅಮ್ಮ ಹೇಳ್ತಾ ಇದ್ದದ್ದು ಸರಿ ಅನ್ನಿಸುವ ಹೊತ್ತಿಗೆ, ಅವಳನ್ನು ತಪ್ಪು ಎನ್ನುವ ಮಗಳು ಅವಳ ಎದುರಿಗಿರ್ತಾಳೆ’ ಅಂತ ಅರ್ಥ ಬರುವ ಒಂದು ನುಡಿಯನ್ನು ಫೇಸ್ ಬುಕ್ಕಿನಲ್ಲಿ ಹಿರಿಯ ಮಿತ್ರರೊಬ್ಬರು ಹಾಕಿದ್ದರು. ನನಗೆ ಅದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ… ಯಾಕೆಂದರೆ ನನ್ನ ಮುಂದೆ ಮಕ್ಕಳು ಬೆಳೆಯುತ್ತಿರುವಾಗಲೇ ನನಗೆ ನನ್ನ ಅಮ್ಮ ಹೆಚ್ಚು ಅರ್ಥ ಆಗಿದ್ದು. ಮತ್ತು ಆ ಹೊತ್ತಿಗಾಗಲೇ ನನ್ನ ಮುಂದಿನ ಮಕ್ಕಳಿರಲಿ, ನನ್ನ ಕಡೆಯ ತಂಗಿ ಸಹ ನನ್ನದು ತಪ್ಪು ಅಂತ ಹೇಳ್ತಾ ಇದ್ದಳು! ಆದರೆ ನನಗೆ ಒಂದು ಕುತೂಹಲ ಇತ್ತು, ಗಂಡಸರಿಗೂ ಹೀಗೇ ಅನ್ನಿಸುತ್ತಾ, ಹೀಗೇ ಆಗುತ್ತಾ?? ಅಪ್ಪ ಹೇಳುತ್ತಿದ್ದ ಮಾತು ಸರಿ ಅನ್ನಿಸುವ ಹೊತ್ತಿಗೆ ಅವರ ಮನೇಲಿ ಮಗು ಒಂದು ’ಅಪ್ಪ, ನೀನು ಹೇಳೋದು ತಪ್ಪು’ ಅನ್ನುತ್ತಿರುತ್ತಾ ಅಂತ. ನನ್ನ ಈ ಕುತೂಹಲಕ್ಕೆ ಇನ್ನೊಂದು ಹಿನ್ನಲೆಯೂ ಇತ್ತು. ಬಹುಶಃ ಕೆ ರಾಮಾನುಜಂ ಹೇಳಿದ್ದು ಎಂದು ನೆನಪು, ’ಭಾರತದಲ್ಲಿ ಗಂಡು ಮಕ್ಕಳು ಗಂಡಸಾಗುವುದು ತಮ್ಮ ಅಪ್ಪ ಸತ್ತ ನಂತರವೇ’ ಅದುವರೆಗೂ ಅವರು ಮಕ್ಕಳೇ ಅಂತ. ಆ ಮಾತು ಕೇಳಿದ ತಕ್ಷಣ ಒರಟು ಅನ್ನಿಸಿದರೂ ಯೋಚಿಸಿದಂತೆಲ್ಲಾ ಅದರಲ್ಲಿ ವಾಸ್ತವದ ಎಳೆಗಳು ಕಾಣಿಸುತ್ತಿದ್ದವು. ಹಾಗಾಗಿಯೇ ಮಗ ತಾನೇ ಅಪ್ಪನಾದಾಗ ಬದಲಾಗುವ ಆತನ ಮನಸ್ಥಿತಿಯ ಬಗ್ಗೆ ನನಗೆ ಈ ಪ್ರಶ್ನೆಗಳಿದ್ದವು.
ನನ್ನ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಮೊನ್ನೆ, ರಂಗಶಂಕರದಲ್ಲಿ. ಸೂರಿ ಅವರು ಹಿಂದಿಯಿಂದ ಅನುವಾದಿಸಿ, ನಿರ್ದೇಶಿಸಿದ ನಾಟಕ ’ಸಂಕ್ರಮಣ’ ನೋಡುವಾಗ. ಮೂರು ಪಾತ್ರ, ಮೂರೇ ದೃಶ್ಯ ಮತ್ತು ಮೂರು ಸ್ವಗತಗಳು, ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಸಂಕ್ರಮಣ ಸದಾ ಜರುಗುತ್ತಲೇ ಇರುತ್ತದೆ ಎಂದು ತೋರಿಸಲು.
ಶಶಿಧರ್ ಆಡಪ್ಪ ಅವರ ರಂಗಸಜ್ಜಿಕೆಯೇ ವಿಶಿಷ್ಟವಾಗಿತ್ತು, ಎಲ್ಲೆಲ್ಲೂ ಬಿಳಿ ಬಿಳಿ. ಬಿಳಿ ಮೃತ್ಯುವಿಗೆ ಸಂಕೇತ ಅಂತ ಹೇಳುತ್ತಾರೆ, ಆದರೆ ಆ ನಾಟಕದಲ್ಲಿ ಬಿಳಿ ಜೀವನಪ್ರೀತಿಗೆ ಸಂಕೇತವಾಗಿ ಕಂಡಿತ್ತು. ಮನೆಯ ಗೋಡೆ ಒಂದೆಡೆಗೆ ವಾಲಿದಂತೆ, ಅಪ್ಪ ಮಾತನಾಡುವಾಗ ಮನೆ ಕುಸಿಯುತ್ತಿರುವಂತ ಕಂಡರೆ, ಮಗನ ಸ್ವಗತ ನೋಡುವಾಗ ಆ ಕಡೆ ಗಮನವೇ ಹೋಗುತ್ತಿರಲಿಲ್ಲ, ಅಷ್ಟು ಚೆನ್ನಾಗಿ ರಂಗ ಸಜ್ಜಿಕೆ ಹಾಗು ದೃಶ್ಯಗಳು ಮಿಳಿತಗೊಂಡಿದ್ದವು. ನಾಟಕ ಶುರುವಾದಾಗ ಶುರುವಾಗುವ ನೀರು ಹನಿಯುವ ’ಟಪ್, ಟಪ್, ಟಪ್’ ಶಬ್ಧ ನಾಟಕ ಮುಕ್ಕಾಲು ಭಾಗ ಮುಗಿಯುವಾಗ ನಿಲ್ಲುತ್ತದೆ. ಅದುವರೆಗೂ ನೀರಿನ ಹನಿಗೂ ಒಂದು ಪಾತ್ರವಿದೆ ನಾಟಕದಲ್ಲಿ, ಅಪ್ಪನ ಕಿಟಿ ಪಿಟಿಯಲ್ಲಿ ಏಕತಾನದ ’ಟಪ್, ಟಪ್, ಟಪ್’, ಮಗನ ಉತ್ತರದಲ್ಲಿ, ಉಡಾಫೆಯಲ್ಲಿ ಪ್ರತಿಭಟನೆಯ ’ಟಪ್, ಟಪ್, ಟಪ್….’.
ಸಂಕ್ರಮಣವೆಂದರೆ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾಗುವ ಘಟ್ಟ. ಅಲ್ಲಿ ಹಳೆಯದು ಪೂರ್ತಿ ಹೋಗಿರುವುದಿಲ್ಲ, ಹೊಸತು ಪೂರ್ತಿಯಾಗಿ ಸ್ಥಾಪಿತಗೊಂಡಿರುವುದಿಲ್ಲ, ಎರಡೂ ಇರುತ್ತದೆ ಮತ್ತು ಅಲ್ಲಿ ಒಂದು ನಿರಂತರತೆಯೂ ಇರುತ್ತದೆ. ಹಾಗೆ ನೋಡಿದರೆ ಬದುಕಿನ ಪ್ರತಿ ಹಂತವೂ ಒಂದು ಸಂಕ್ರಮಣವೆ. ಆದರೆ ಈ ನಾಟಕದಲ್ಲಿ ಇರುವುದು ಸಂಕ್ರಮಣವಷ್ಟೇ ಅಲ್ಲ, ಆವರ್ತನ ಸಹ. ಬದುಕಿನ ನಿರಂತರತೆ ಇರುವುದೇ ಅದರ ಆವರ್ತನದಲ್ಲಿ ಅಲ್ಲವೇ?
ನಾಟಕ ಶುರುವಾಗುವುದು ರಂಗದ ಮೇಲೆ ಇಳಿವಯಸ್ಸಿನ ಪಾತ್ರಧಾರಿ ಸಿಹಿಕಹಿ ಚಂದ್ರು ಪ್ರವೇಶದಿಂದ. ಈತ ನಮ್ಮ – ನಿಮ್ಮೆಲ್ಲರ ತಂದೆಯಂತೆಯೇ ಜಾಗತೀಕರಣದ ಗಾಳಿ ಬೀಸುವ ಮೊದಲು ಹುಟ್ಟಿದವರು. ಅರೆ ಹೊಟ್ಟೆ ತಿಂದು, ಮೈಲಿ ಗಟ್ಟಲೆ ನಡೆದು, ಶಾಲೆ ಕಲಿತವರು. ಕಾಲೇಜು ತಲುಪಿದಾಗ ಕೈಗೆ ಬಂದ ಸೆಕೆಂಡ್ ಹ್ಯಾಂಡ್ ಸೈಕಲ್ ಹತ್ತಿ ಸಂಭ್ರಮಿಸಿದವರು. ಕೆಲಸ ಸಿಕ್ಕ ಮೇಲಷ್ಟೆ ಬದುಕಿನಲ್ಲಿ ಅಲ್ಪ ಸ್ವಲ್ಪ ಸೆಕ್ಯುರಿಟಿ ಅನುಭವಿಸಿದವರು, ಗೋಧಿ ತಂದು ಮನೆಯಲ್ಲಿ ಒಪ್ಪ ಮಾಡಿಸಿ, ಮಿಶೀನಿಗೆ ಹಾಕಿಸಿಕೊಂಡು ಬಂದವರು, ಚೀಲ ಹಿಡಿದು ಮಾರುಕಟ್ಟೆಯಿಂದ ತರಕಾರಿ ತಂದವರು, ಲೆಕ್ಕವಿಟ್ಟು ಖರ್ಚು ಮಾಡಿ, ಲೆಕ್ಕವಿಟ್ಟು ಹಣ ಉಳಿಸಿ, ಸ್ವಂತದ್ದು ಎಂದು ಮನೆ ಮಾಡಿ ನಿಟ್ಟುಸಿರು ಬಿಟ್ಟವರು. ಆಗ ಅದು ಎಲ್ಲರ ಮನೆಯ ಕಥೆಯೂ ಹೌದು.

ಇಲ್ಲಿ ಅಪ್ಪನೂ ಹಾಗೆ. ಅನ್ನ ಹಳಸಿದ್ದು ಗೊತ್ತಾಗಬಾರದೆಂದು ಬೆಳ್ಳುಳ್ಳಿ ಚಟ್ನಿ ಹಾಕಿ ಅಮ್ಮ ಕಲಸಿಕೊಟ್ಟ ತಂಗಳನ್ನ ತಿಂದು, ಚಪ್ಪಲಿ ಇಲ್ಲದೆ ನಡೆದು ಕಾಲೇಜು ಮುಗಿಸಿದವನು. ಆದರೆ ತಾನು ಪಟ್ಟ ಕಷ್ಟ ತನ್ನ ಮಗನು ಪಡಬಾರದೆಂದು ಮಗನನ್ನು ಸುಖವಾಗಿ ಬೆಳೆಸಿರುತ್ತಾನೆ. ಬೇಕೆನ್ನಿಸಿದ ಮಿಲಿಟರಿ ಡ್ರೆಸ್ಸ್, ಸೂಟು, ಬೂಟು ಎಲ್ಲಾ ಕೊಡಿಸಿ, ತಿನ್ನಲು ಹಾಲು, ಬೆಣ್ಣೆ, , ಮೊಸರು, ಬ್ರೆಡ್ಡು ಜ್ಯಾಮು ಎಲ್ಲವೂ … ಮಗ ಕೇಳಿದ್ದು ಮಗನ ಮುಂದೆ. .. ಆದರೆ ಅಪ್ಪನ ಲೆಕ್ಕಾಚಾರ ಇಲ್ಲಿ ಹೆಚ್ಚುಕಡಿಮೆ ಆಗಿಬಿಡುತ್ತದೆ. ಮಗನ ಎಲ್ಲಾ ಬಯಕೆಗಳನ್ನೂ ಪೂರೈಸುತ್ತಲೇ ಅಪ್ಪ ಮಗ ತನ್ನ ಹಾಗೆಯೇ ಬಡತನದ ಬದುಕಿನ ಬಗ್ಗೆ ಒಂದು ನೈತಿಕ ಹೆಮ್ಮೆ ಉಳಿಸಿಕೊಳ್ಳಬೇಕು ಎಂದು ನಿರೀಕ್ಷಿಸುತ್ತಿರುತ್ತಾನೆ. ಆದರೆ ಆಗುವುದೇ ಬೇರೆ. ಬಡತನದ ಬದುಕು ಮಗನಿಗೆ ಅಪ್ಪ ಬೆಳಗಾದರೆ ಹಾಡುವ ’ಟೇಂವ್, ಟೇಂವ್’ ಪಿಟೀಲಿನ ನಾದದ ಹೊರತು ಮತ್ತೇನೂ ಅಲ್ಲ. ಏಕೆಂದರೆ ಆ ಅನುಭವ ಅವನಿಗೆ ಎಂದೂ ತನ್ನದಾಗಿರುವುದೇ ಇಲ್ಲ.
ತಾನು ಕಟ್ಟಿಸಿದ ಮನೆಯ ಬಗ್ಗೆ ಅಪ್ಪನಿಗೆ ಹೆಮ್ಮೆ, ಆದರೆ ಮಗ ಅದಕ್ಕೆ ಕೊಡಬೇಕಾದಷ್ಟು ಮರ್ಯಾದೆ ಕೊಡದೆ ಇರುವುದರ ಬಗ್ಗೆ ಬೇಸರ, ಸಿಟ್ಟು. ತಾನು ಇರುವುದರಿಂದ, ತಾನು ನಿಗಾ ಇಟ್ಟಿರುವುದರಿಂದ ಈ ಮನೆ ಇನ್ನು ನಿಂತಿದೆ, ತನ್ನ ನಂತರ ಈ ಮನೆ ಕಡೆ ಗಮನ ಕೊಡುವವರು ಯಾರು ಎನ್ನುವ ಚಿಂತೆ.
ಅಪ್ಪನ ಪಾತ್ರದಲ್ಲಿ ಸಿಹಿಕಹಿ ಚಂದ್ರು ನಟನೆ ಅದ್ಭುತ, ಬಾಗು ಬೆನ್ನು, ನಡುಗುವ ದನಿ, ತನ್ನ ಇಡೀ ಬಾಡಿ ಲಾಂಗ್ವೆಜಿನಲ್ಲಿ ಮಗನ ಉಡಾಫೆತನದ ಬಗೆಗಿನ ಸಿಟ್ಟು ಎಲ್ಲಾ ಇದೆ, ಆದರೆ ಅಷ್ಟೇ ಸತ್ಯ ಮಗನನ್ನು ಹೆಸರು ಹಿಡಿದು ಸಂಭೋದಿಸದೆ, ’ಯುವರಾಜರು’, ’ಮಹಾರಾಜರು’ ಎಂದು ಕರೆಯುವಾಗ ದನಿಯಲ್ಲಿ ಇಣುಕುವ ಒಂಚೂರು ಹೆಮ್ಮೆ! ಚಂದ್ರು ಅವರ ಸ್ವಗತ ಮುಗಿಯುವ ವೇಳೆಗೆ ನಮ್ಮೆಲ್ಲರ ಮನಸ್ಸಿನಲ್ಲಿ ಅಪ್ಪನ ಬಗೆಗೆ ಗೌರವ, ಅನುಕಂಪ ಮಗನ ಬಗೆಗೆ ಬೇಸರ ಬೆಳೆದುಕೊಳ್ಳುವಂತೆ ಚಂದ್ರು ಪಾತ್ರದಲ್ಲಿ ಲೀನವಾಗಿ ಹೋಗುತ್ತಾರೆ.
ನಂತರ ರಂಗದ ಮೇಲೆ ಬರುವ ಪಾತ್ರ ಮಗನದು, ಈ ಪಾತ್ರ ಮಾಡಿರುವವರು ಮಂಜುನಾಥ್ ಹೆಗಡೆ. ಇವರ ಮುಂದಿರುವ ಸವಾಲು ದೊಡ್ಡದು. ಯಾಕೆಂದರೆ ಈಗಾಗಲೇ ನೋಡುಗರ ಮನಸ್ಸಿನಲ್ಲಿ ಅಪ್ಪ ಹಾಕಿದ ಮಾತುಗಳು ಒಂದು ಪ್ರಭಾವ ಬೀರಿವೆ, ಅವರ ಮನಸ್ಸು ಈಗ ಖಾಲಿ ಹಾಳೆಯಲ್ಲ, ಅಲ್ಲಿ ಒಂದು ಅಭಿಪ್ರಾಯ ರೂಪುಗೊಂಡಿದೆ. ಈಗ ಅಲ್ಲಿ ಮಗ ತನ್ನ ಪರವಾದ ವಾತಾವರಣ ನಿರ್ಮಿಸಿಕೊಳ್ಳಬೇಕಾಗಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಅಪ್ಪ ಈಗಾಗಲೇ ಹಾಕಿರುವ ಪಾಯದ ಮೇಲೆ ಮಗ ಮನೆ ಕಟ್ಟಿಕೊಳ್ಳಬೇಕಿದೆ, ಅದೂ ತನಗೆ ಬೇಕಾದಂತೆ! ಮಂಜುನಾಥ ಹೆಗಡೆ ಈ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ. ಇವರ ಸ್ವಗತದಲ್ಲಿನ ಸಂಭಾಷಣೆಗಳಲ್ಲಿರುವ ವ್ಯಂಗ್ಯ, ಸತ್ವಯುತವಾದ ಸಾಲುಗಳು ಅದಕ್ಕೆ ಸಹಾಯ ಮಾಡಿದೆಯಾದರೂ, ಅದನ್ನು ವ್ಯಕ್ತ ಪಡಿಸಿದ ರೀತಿ ಪರಿಣಾಮಕಾರಿ.
ಒಂದೊಂದಾಗಿ, ಒಂದೊಂದಾಗಿ ಮಗ ಅಪ್ಪ ಹೇಳಿದ ಮಾತುಗಳು ಹೇಗೆ ಪ್ರಾಕ್ಟಿಕಲ್ ಅಲ್ಲ ಅಂತ ಹೇಳುತ್ತಾ ಹೋಗುತ್ತಾನೆ. ಐಎಸ್ ಐ ಬ್ರ್ಯಾಂಡಿನ ಗೋದಿಹಿಟ್ಟು ಪ್ಯಾಕೆಟ್ಟಿನಲ್ಲಿ ಸಿಗುವಾಗ, ಒಳ್ಳೆ ಅಂಗಡಿ ಇರುವ ಗೋಧಿ ಹುಡುಕಿ, ತಂದು, ಒಪ್ಪ ಮಾಡಿ, ಅದನ್ನು ಆಮೇಲೆ ಮಿಶನ್ನಿಗೆ ಹಾಕಿಸಿಕೊಂಡು ಬರುವುದು ಯಾವ ಪುರುಷಾರ್ಥಕ್ಕೆ? ಮನೆ ಮುಂದೆ ಬರುವ ತರಕಾರಿ ಗಾಡಿಯಲ್ಲಿ ತರಕಾರಿಗಳು ತಾಜಾ ಆಗಿಯೇ ಇರುತ್ತವೆ, ನಾವು ವಾರಕ್ಕೊಮ್ಮೆ ಮಾರ್ಕೆಟ್ಟಿಗೆ ಹೋಗಿ ತರಕಾರಿ ತರುವ ಬದಲು, ಆಯಾ ದಿನದ ತಾಜಾ ತರಕಾರಿ ಆಯಾ ದಿನವೇ ಗಾಡಿಯಲ್ಲಿ ತಕ್ಕೊಂಡರೆ ತಪ್ಪೇನು? ’ಅಯ್ಯೋ ಅವರು ಆ ಕಾಲದಲ್ಲಿ ಕಷ್ಟ ಪಟ್ಟಿದ್ದರು ಅಂದರೆ, ಆ ಕಾಲ ಇದ್ದದ್ದೇ ಹಾಗೆ, ಆಗ ಎಲ್ಲರೂ ಹಾಗೆ ಬದುಕುತ್ತಿದ್ದರು, ಆ ಕಾಲಮಾನದ ಜೀವನ ಶೈಲಿಯೆ ಹಾಗಿತ್ತು, ಅದಕ್ಕೆ ತಾನು ಏನು ಮಾಡಲಿಕ್ಕಾಗುತ್ತೆ, ಮನೇಲಿ ಕರೆಂಟ್ ವ್ಯರ್ಥ ಆಗಬಾರದು ನಿಜ, ಹಾಗಂತ ರೂಂ ನಿಂದ ಬಾತ್ರೂಮಿಗೆ ಹೋಗಬೇಕಾದರೆ, ರೂಮಿನಲ್ಲಿ ಲೈಟ್ ಆರಿಸಿ, ಫ್ಯಾನ್ ಆರಿಸಿ, ಬಾತ್ರೂಮಿಗೆ ಹೋಗಿ ಬಂದು ಆನ್ ಮಾಡೋಕ್ಕಾಗುತ್ತಾ… ’ ಹೀಗೆ ಅವನು ಹೇಳುತ್ತಾ ಹೋದಾಗ ಪ್ರೇಕ್ಷಕರಲ್ಲಿ ಮುಕ್ಕಾಲು ಪಾಲು ಜನ ದೂಸರ ಮಾತಿಲ್ಲದೆ ಅದನ್ನು ಒಪ್ಪಿಕೊಂಡುಬಿಡುತ್ತಾರೆ, ಯಾಕೆಂದರೆ ನಮ್ಮೆಲ್ಲರಲ್ಲಿಯೂ ಒಬ್ಬ ಮಗ ಇದ್ದೇ ಇರ್ತಾನಲ್ಲವ?!
ಅವನಲ್ಲಿ ಉಡಾಫೆ ಇಲ್ಲದಿಲ್ಲ, ಆದರೆ ಹಾಗೆ, ಅಪ್ಪನ ಬಗ್ಗೆ ಪ್ರೀತಿಯೂ ಇದೆ. ಅಪ್ಪನಿಗೆ ಎದುರಾಡಬಾರದೆನ್ನುವ ಎಚ್ಚರ, ಗೌರವ ಸಹ ಇದೆ. ಬೆಳಗ್ಗೆ ಕಾಗೆ-ಗುಬ್ಬಿಗಳಿಗೆ ಊಟ ಹಾಕುವ ಅಪ್ಪ ಹಿಂದಿನ ರಾತ್ರಿಯ ಚಪಾತಿಗಳನ್ನು ಬೆಳಗ್ಗೆಯೇ ಕೈಲಿ ಹಿಡಿದು ಕೂರುತ್ತಾರೆ. ಅಕಸ್ಮಾತ್ ೨-೩ ಚಪಾತಿ ಉಳಿದಿದ್ದರೆ, ’ಈ ಮನೇಲಿ ಯಾರಿಗೂ ಕೈ ಹಿಡಿತ ಇಲ್ಲ’ ಅನ್ನೋ ಬೈಗುಳ, ಅಕಸ್ಮಾತ್ ಚಪಾತಿ ರಾತ್ರಿ ಖಾಲಿ ಆಗಿಬಿಟ್ಟಿದ್ದರೆ ’ಪಕ್ಷಿಗಳಿಗೆ ಹಾಕೋಕೆ ಒಂದ್ ಚಪಾತಿ ಗತಿ ಇಲ್ಲ’ ಅನ್ನೋ ವರಾತ … ಇವೆಲ್ಲಾ ಎಲ್ಲಾ ಮನೆಗಳಲ್ಲಿಯೂ ಆಗೋದೆ, ಎಲ್ಲರೂ ಕಂಡಿರುವುದೇ ಹಾಗಾಗೆ ಮಗನ ಬಗ್ಗೆ ಒಂದು ಅನುಕಂಪ.
ಆದರೆ ಇದಕ್ಕೆ ಒಂದು ವಿಷಾದದ ತಿರುವು ಬರುವುದು ’ಟಪ್, ಟಪ್, ಟಪ್’ ಎಂದು ಸೋರುತ್ತಿದ್ದ ಬಾತ್ ರೂಮಿನ ಫ್ಲಶ್ ಟ್ಯಾಂಕ್ ಸರಿಪಡಿಸಲು, ತಾನೇ ಹೋಗಿ ಅಂಟು ತರುವ ಅಪ್ಪ, ಅದನ್ನು ಸರಿಮಾಡಲು ಸ್ಟೂಲು ಹತ್ತಿ ಬಿದ್ದು, ಸೊಂಟ ಮುರಿದುಕೊಂಡಾಗ. ಅದನ್ನು ಹೇಳುತ್ತಾ ಹೇಳುತ್ತಾ ಗದ್ಗದವಾಗುವ ಮಗನಲ್ಲಿರುವ ಅಪ್ಪನ ಬಗೆಗಿನ ಪ್ರೀತಿ ನಮ್ಮ ಮನಸ್ಸನ್ನು ತಟ್ಟುತ್ತದೆ. ಈ ದೃಶ್ಯ ಮುಗಿವಾಗ, ನಲ್ಲಿಯ ’ಟಪ್, ಟಪ್, ಟಪ್’ ನಿಂತಿರುತ್ತದೆ ….ಹಾಗೆ ಅಪ್ಪನ ಕಿಟಿಪಿಟಿಯ ಟಪ್ ಟಪ್ ಮತ್ತು ಮಗನ ಉಡಾಫೆಯ ಟಪ್ ಟಪ್ ಸಹ…
ಮುಂದಿನ ಕಥೆ ಹೇಳುವುದು ಅಮ್ಮನ ಪಾತ್ರ. ಅಮ್ಮನ ಪಾತ್ರದಲ್ಲಿ ಕಲ್ಪನಾ ನಾಗನಾಥ್, ಅಮ್ಮ ಹೇಳುವುದು ಕಥೆಯ ಮುಂದಿನ ಭಾಗ. ಕಾಲು ಜಾರಿ ಬಿದ್ದು ಸೊಂಟ ಮುರಿದುಕೊಂಡ ಅಪ್ಪನನ್ನು ಸಾಲ ಸೋಲ ಮಾಡಿ ಮಗ ಆಸ್ಪತ್ರೆಗೆ ಸೇರಿಸುತ್ತಾನೆ, ಸೊಂಟಕ್ಕೊಂದು ರಾಡ್ ಕೂರಿಸಬೇಕಾಗಿರುತ್ತದೆ. ಆದರೆ ಆಪರೇಶನ್ ಥಿಯೇಟರ್ ಗೆ ಕರೆದುಕೊಂಡು ಹೋಗುವಷ್ಟರಲ್ಲಿ, ಅದಾಗಲೇ ದುರ್ಬಲವಾಗಿದ್ದ ಅಪ್ಪನ ಹೃದಯ ನಿಂತುಹೋಗುತ್ತದೆ, ಮಗನ ದುಃಖ ಸ್ಪೋಟಗೊಂಡು ಮಗ ಡಾಕ್ಟರನ್ನೇ ಹೊಡೆಯಲು ಹೋಗಿರುತ್ತಾನೆ. ಅಪ್ಪನನ್ನು ಕಳೆದುಕೊಂದು ಆ ಪರಿ ನೊಂದಿರುತ್ತಾನೆ ಮಗ.
ಇಲ್ಲಿ ನನ್ನನ್ನು ಕಾಡಿದ್ದು ’ತಮ್ಮದೇ ಸರಿ’ ಅನ್ನುವ ಹಟ ಅಪ್ಪನಿಗೂ ಇದೆ, ಆ ಅಪ್ಪನ ಮಗನಿಗೂ ಇದೆ, ಆದರೆ ಒಂದು ಸಮನ್ವಯ, ಒಂದು ಫ್ಲೆಕ್ಸಿಬಿಲಿಟಿ ಸಾಧ್ಯವಾಗಿರುವುದು ಅಮ್ಮನಿಗೆ. ಆಕೆಗೆ ಗಂಡನ ನೋವೂ ಅರ್ಥವಾಗುತ್ತೆ, ಮಗನ ಚಡಪಡಿಕೆಯೂ ಅರ್ಥವಾಗುತ್ತೆ. ಬಹುಷಃ ಹೆಣ್ಣಿನ ಈ ಅರ್ಥೈಸಿಕೊಳ್ಳಬಲ್ಲ ಮತ್ತು ಹೊಂದಿಕೊಳ್ಳುವುವ ಗುಣದಿಂದಲೇ ಆಕೆ ಯಾವುದೇ ಸ್ಥಿತಿಯಲ್ಲೂ ಇರಬಲ್ಲವಳಾಗಿಬಿಡುತ್ತಾಳಾ? ಯಾಕೆಂದರೆ ಬದಲಾಗುತ್ತಿರುವ ಈ ಸಮಾಜ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ವಯಸ್ಸಾದ ಹಾಗೆ ಗಂಡ ಹೆಂಡತಿಯ ಮೇಲೆ ಜಾಸ್ತಿ ಅವಲಂಬಿತನಾಗಿರುತ್ತಾನೆ. ಗಂಡ ತನಗಿಂತ ಮೊದಲು ಕಣ್ಮುಚ್ಚಿದರೆ ಹೆಣ್ಣು ಅತ್ತೋ – ಸುರಿದೋ ಹೇಗೋ ಪರಿಸ್ಥಿತಿಗೆ ಹೊಂದಿಕೊಂಡು ಬಿಡುತ್ತಾಳೆ. ಆದರೆ ಇಳಿವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡರೆ ಗಂಡ ಪಡುವ ಪಾಡು ಹೇಳತೀರದು. ಇಲ್ಲಿ ಅಮ್ಮನಿಗೆ ನೋವು, ಸಂಕಟ ಎಲ್ಲಾ ಇದೆ, ಆದರೆ ಸ್ವಭಾವತಃ ಹೆಣ್ಣು ಜೀವನ್ಮುಖಿ, ಬಹಳ ಬೇಗೆ ಯಾವುದೋ ಕೆಲಸ ಹುಡುಕಿ ತನ್ನನ್ನು ಅದರಲ್ಲಿ ತೊಡಗಿಸಿಕೊಂಡು ತಾನಿನ್ನೂ ’ವಾಂಟೆಡ್’ ಎಂದು ಸಿದ್ಧಪಡಿಸಿಕೊಂಡು ಬಿಡಬಲ್ಲ ತಾಕತ್ತು ಹೆಣ್ಣಿಗೆ ಹೆಚ್ಚು ಅನ್ನಿಸುತ್ತದೆ. ಇಲ್ಲೂ ಅಷ್ಟೆ ಅಮ್ಮ ಹೂ ಬತ್ತಿ ಹೊಸೆಯುತ್ತಾ, ಮಗ ಅಂಗಡಿಯಿಂದ ತಂದ ಗೋಧಿ ಒಪ್ಪ ಮಾಡಿ ಕೊಡುತ್ತಾ (ಹೌದು ಮಗ ಈಗ ಅಂಗಡಿಯಿಂದ ಗೋಧಿ ತರ್ತಾ ಇರ್ತಾನೆ!) ಪ್ರಸ್ತುತವಾಗೇ ಇರ್ತಾಳೆ.
ಅಪ್ಪನ ಸಾವು ಹೇಗೆ ಮಗನ ಬಾಳಿನಲ್ಲಿ ಸಂಕ್ರಮಣ ತಂದಿತು, ಅಪ್ಪನ ನಂತರ ಮಗ ಹೇಗೆ ಬದಲಾದ ಎಂದು ಹೇಳುತ್ತಾ ನಾಟಕ ಮುಗಿಯುತ್ತದೆ. ನಾಟಕ ಮುಗಿಯುವಷ್ಟರಲ್ಲಿ ಮಗ ಹೂಬೇಹೂಬು ಅಪ್ಪನಂತೆಯೇ ಆಗಿರುತ್ತಾನೆ, ಅಪ್ಪನಂತೆಯೇ ಯೋಚಿಸುತ್ತಾ, ಅಪ್ಪನಂತೆಯೇ ನಡೆದುಕೊಳ್ಳುತ್ತಾ….
ಆದರೆ ನನಗೆ ಅನ್ನಿಸಿದ್ದು, ಮಗ ಹೇಗೆ ಬದಲಾದ ಅಂತ ಅಮ್ಮನ ಬಾಯಿಯಲ್ಲಿ ವಿವರವಾಗಿ ಹೇಳಿಸದೆ, ಮಗ ಬದಲಾದ ಅಂತ ಮಾತ್ರ ಹೇಳಿಸಿ, ಕೊನೆಯ ದೃಶ್ಯದಲ್ಲಿ ಮಗ ರಂಗದ ಮೇಲೆ ಬಂದಾಗ ಆತನ ಬದಲಾದ ಸ್ವಭಾವವನ್ನು ಅವನಿಂದಲೇ ತೋರಿಸಿದ್ದರೆ ನಾಟಕ ಇನ್ನೂ ಹೆಚ್ಚು ಪರಿಣಾಮಕಾರಿ ಆಗುತ್ತಿತ್ತಲ್ಲವಾ ಅಂತ. ಯಾಕೆಂದರೆ ಅಷ್ಟು ಹೊತ್ತಿಗಾಗಲೇ ನಾಟಕ, ಕಲಾವಿದರು, ನಾಟಕದ ವಸ್ತು ಎಲ್ಲವೂ ಹನಿ ಹನಿಯಾಗಿ ನಮ್ಮನ್ನು ಸೇರಿಕೊಂಡಿತ್ತು. ವಾಚ್ಯವಾಗದೆ ನಟನೆಯಲ್ಲೇ ಮಗ ಆ ಸಂಕ್ರಮಣವನ್ನು ತೋರಿಸಿದ್ದರೆ ಅದು ನೋಡುಗರ ಮನಸ್ಸಿಗೇ ಇನ್ನೂ ಹೆಚ್ಚಾಗಿ ನಾಟುತ್ತಿತ್ತು ಅನ್ನಿಸಿತು.
ಒಂದು ಪ್ರಸ್ತುತವಾದ ಸಂಗತಿಯನ್ನು ಕೈಗೆತ್ತಿಕೊಂಡು ಅದನ್ನೊಂದು ಪರಿಣಾಮಕಾರಿಯಾದ ನಾಟಕ ಮಾದುವುದರಲ್ಲಿ ಸೂರಿ ಮತ್ತು ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಜನರಿಗೆ ದಾಟಿಸುವಲ್ಲಿ ಸಿಹಿ ಕಹಿ ಚಂದ್ರು, ಮಂಜುನಾಥ ಹೆಗಡೆ ಮತ್ತು ಕಲ್ಪನಾ ನಾಗನಾಥ್ ಗೆದ್ದಿದ್ದಾರೆ.
ರಂಗಸಜ್ಜಿಕೆಯಷ್ಟೇ ಸುಂದರವಾಗಿದ್ದಿದ್ದು, ಜಯಂತಿ ಮರಳಸಿದ್ದಪ್ಪನವರ ವಸ್ತ್ರ ವಿನ್ಯಾಸ, ಬಿಳಿ ಎಷ್ಟು ಸುಂದರ…

‍ಲೇಖಕರು avadhi

16 August, 2013

17 Comments

  1. sunil rao

    Abbbaaa!!!
    Modalige nimma smruti ge hatsoff. Ishtu nenapittu ondu naataka chitrisi kodteeralla adakke.
    Appa mattu magana baandhavya yaavattigoo nanna atyanta research huttukolluva sangatigalu.
    Nanna mattu appana baandhayvyada dyotakavaagi, badukinalli appana ondashtu pictures galu taleyalli ulidive.
    Ee naatakadalli aa drushtaanta bahala channagi analyze maadiddare suri avru….natka nodbeku.
    Wonderful writeup…

  2. anu pavanje

    ಅಧ್ಬುತ…..very touching…..

  3. umesh desai

    ನಾನೂ ನೋಡಿದೆ ಈ ನಾಟಕ ಬಹಳ ಹಿಡಿಸ್ತು..ಸ್ವಗತ ಗಳಲ್ಲಿ ನಿರೂಪಣೆ ಮಾಡುತ್ತ
    ೯೦ ನಿಮಿಷ ಪ್ರೇಕ್ಷಕರನ್ನು ಹಿಡಿದುಕೂರಿಸೋದು ಸುಲಭ ಅಲ್ಲ ಬಿಡ್ರಿ..
    ಅಭಿನಯದಲ್ಲಿ ಮಂಜುನಾಥ್ ಹೆಗಡೆ ಹತ್ತಿರವಾದ್ರು..ಅವರಲ್ಲಿ ಬಹಳ ಸಲ ನನ್ನ ಪ್ರತಿರೂಪ ಕಂಡೆ..

  4. Sarala

    sumaru dinagala hinde ee nataka nodi mecchidde. Adare neevu barediruva ee lekhana nanage matte natakavannu kanna munde tanditu. Naavu appa, ammanna sariyaagi artha madikolluvudu tande taayiyarada mele. hecchu conflicts illaddiddaru arthagalu alavaagutta hogi naave avaragi bidutteveno? eegina kaalada makkalige haage agatte anta helodu swalpa kashta anisutte. there is much more than a generation gap with today’s children. alva?

  5. Naveen Sagar

    ಅದ್ಭುತ ಬರಹ. ಧನ್ಯವಾದಗಳು

  6. Anonymous

    ತುಂಬಾ ಚೆನ್ನಾಗಿ ಬರೆದಿದೀರಿ. ಓದ್ತಾ ಓದ್ತಾ ಆಪ್ತವಾಗತ್ತೆ, ಖುಷಿಯಾಗತ್ತೆ.
    THANK YOU…

  7. vanamala

    ತುಂಬಾ ಚೆನ್ನಾಗಿ ಬರೆದಿದೀರಿ. ಓದ್ತಾ ಓದ್ತಾ ಆಪ್ತವಾಗತ್ತೆ… ಖುಷಿಯಾಗತ್ತೆ.
    THANK YOU…

  8. bharathi b v

    Its just awesome Sandhya …

  9. USHA RAI

    Sandhya eshtu chennaagi naatakavannu namma kanna munde katti kottiddeeri. naanu nodadeyoo nodida anubhava padede. ellavannoo manadalli chitrisikonde. thanks.

  10. Vidyashankar Harapanahalli

    “ಪಿತೃ ಹತ್ಯೆಯೆ ಪ್ರಗತಿಗೆ ದಾರಿ…” ಎಂಬ ಮಾತಿದೆ ಸಂಸ್ಕೃತದಲ್ಲಿ. ಅಂದರೆ ಮಗನ ಮನದಲ್ಲಿ ತಂದೆಯ ಅವಲಂಬನೆ ಹೊಗದೆ ಅವನು ಬೆಳೆಯಲಾರ. ಅಪ್ಪ ಅನ್ನುವ ಅಧಾರ ತಪ್ಪಿದಾಗಲೇ ಬಹುತೇಕ ಗಂಡುಗಳು ಸ್ವತಂತ್ರವಾಗಿ ಯೋಚಿಸುವುದು. ಅಪ್ಪನ ಅರ್ಥವಾಗದ ಭಾಗ ಚೆನ್ನಾಗಿ ಅರ್ಥವಾಗುವುದು ಮಗನ ಮುಖಾಂತರವೇ… ಸ್ವಾನುಭವ.
    ಇಂತಹ ಒಳ್ಳೆ ನಾಟಕಕ್ಕೆ ನಮ್ಮನ್ನ ಕರೆಯದೆ ಹೊಗೋದು ಐ.ಪಿ.ಸಿ ಸೆಂಕ್ಷನ್ ಮಹಾನ್ ಅಪರಾಧ ಕಣ್ರಿ… ಕಾಫಿ, ಟೀ, ಜೊತೆ ಈಗ ತಿಂಡಿನೂ ಪೆಂಡಿಂಗೂ… 🙂

  11. shobhavenkatesh

    nataka nodabekenisuva hagide nimma lekhana sandhya

  12. Vidya

    Ondu parinaamakaariyaada Natakada prayogavannu ashte parinaamakaariyaagi, sundaravaagi barahadalli chitrisi odugarige kottiruviri.
    Dhanyavaadagalu, hanchikondaddakke.
    Vidya
    P.S.- can somebody please share how to get Kannada font while commenting to the articles in the commenting box?
    Thank you.

  13. malini guruprasanna

    Tumba chennagide endare kleesheyaagutteno, But aa pada bittu bere holeyuttilla.

  14. veda

    Oh Sandhya nataka nodidashte kushi kodtu nim lekhana

  15. Bhagya

    Beautiful narration of the drama in your writing is superb! As if I was watching an actual drama. Thanks

  16. suguna mahesh

    ಎಷ್ಟು ಚೆನ್ನಾಗಿ ಒಂದು ನಾಟಕದ ಬಗ್ಗೆ ವಿವರಿಸಿದ್ದೀರಿ. ಬೆಳ್ಳಿಗ್ಗೆಯಷ್ಟೆ ಯಾರೋ ಫೇಸ್ಬುಕ್ ನಲ್ಲಿ ಈ ರೀತಿ ಸಾಲು ಹಂಚಿಕೊಂಡಿದ್ದರು “ಅತ್ತೆ ಸತ್ತ ಮೇಲೆ ಸೊಸೆಗೆ ಬುದ್ದಿ ಬಂದಂತೆ”… ಈ ಸಾಲು ನಿಮ್ಮ ವಿವರಯಿಂದ ಮತ್ತಷ್ಟು ನನಪಿಗೆ ಬರುತ್ತಿದೆ.

  17. suseela

    Nataka nodida anubava vaaythu.Estu chennagi baredideeya sandhya! I appreaciate ur analisation. wonderful.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading