ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಬಂಧದ ಬಯಕೆ ಮತ್ತು ಬಂಧನದ ಭೀತಿ


ಮೊನ್ನೆ ಫೇಸ್ ಬುಕ್ಕಿನಲ್ಲಿ ಒಂದು ಸ್ಟೇಟಸ್ ನೋಡಿದೆ. ಕಪ್ಪು ಬಾನಿನ ನಡುವೆ ಫಕ್ಕನೆ ಬೆಳಕಿನ ಎಳೆ ಹೊಳೆದಂತೆ ಮಿಂಚುವ ಹೈಕುಗಳನ್ನು ಬರೆದು ಹಾಕುವ ರಾಘವೇಂದ್ರ ಜೋಷಿ ಅವರು ಬರೆದದ್ದು, ಅವರ ಹೈಕು ಕವಿತೆಗಳಂತೆಯೇ ಕಾವ್ಯಾತ್ಮಕ ಬರಹ :
“ಈಗ ಸುಮ್ಮನೇ ಒಮ್ಮೊಮ್ಮೆ ಯೋಚಿಸುತ್ತೇನೆ.
ಪ್ರೈಮರಿಯಲ್ಲಿ ಏನೇನೋ ತರಲೆ ಮಾಡುತ್ತಿದ್ದೆ.ಮನೆಗೆ ಕಂಪ್ಲೇಂಟುಗಳು ಬರುತ್ತಿದ್ದಂತೆ ಅಕ್ಕನಿಗೆ ಏನೋ ಒಂದು ಹೇಳುತ್ತಿದ್ದೆ. ಅವಳಿಗೆ ಅವೆಲ್ಲ ತರಲೆ ಗೊತ್ತಾಗಿದ್ದರೂ ಕೂಡ ನನ್ನನ್ನು ನಂಬುತ್ತಿದ್ದಳು. ಅಥವಾ ನಂಬಿದ್ದಾಳೆಂದು ನಾನು ನಂಬಿಸಿಕೊಳ್ಳುತ್ತಲಿದ್ದೆ.
ಹೊತ್ತು ಕಳೆದ ಮೇಲೆ ಗೊತ್ತಾಗುತ್ತ ಬಂತು:
ಸಂಬಂಧ-ಯಾವುದೇ ಆಗಿರಲಿ,ಅಲ್ಲಿ ಒಂದು ಅಗೋಚರ ‘ಬಂಧ’ ಇರುತ್ತದೆ.ಬಂಧದಲ್ಲಿ ಜಗಳ ನಡೆಯುತ್ತದೆ. ಮುನಿಸು ನಡೆಯುತ್ತದೆ. ಹಠ,ಮೌನವೂ ನಡೆಯುತ್ತದೆ.ಜೊತೆಗೆ ಅಪಾಯಕಾರಿಯಲ್ಲದ ಸಣ್ಣಪುಟ್ಟ ರಹಸ್ಯಗಳೂ..
ಯಾವಾಗ ಬಂಧದಲ್ಲಿ “ನ” ಬಂತೋ-ಅದು ಬಂಧನವಾಗುತ್ತ ಹೋಗುತ್ತದೆ.
ಕೊನೆಗೆ,ಏನೇ ಛುಪ್ಪಾಛುಪ್ಪಿ ನಡೆದರೂ ಕೂಡ ಅಲ್ಲಿ ನಮ್ಮ ಕಣ್ಣುಗಳೇ ನಮ್ಮ ಪ್ರಾಮಿಸರಿ ನೋಟುಗಳು! ಮಾತು ಸೋಲುವ ಘಳಿಗೆಗಳಲ್ಲಿ ಮಿದುಳೇನೋ ಜಾಣತನದ ಉತ್ತರ ಹೇಳಬಯಸುತ್ತದೆ.ಆದರೆ ಕಣ್ಣು? ಅದೊಂದು ಕಾಡುಪಾಪ;ಅದೊಂದು ಮೂಕಪ್ರಾಣಿ..
 
ಸುಮ್ಮನೇ ಯೋಚಿಸುತ್ತೇನೆ:
ಕಣ್ಣುಮುಚ್ಚಿ
ಹಾಲು ಕುಡಿದರೆ
ಜಗತ್ತಿಗೆ ಗೊತ್ತಾಗದು
ಅಂದುಕೊಳ್ಳುತ್ತದೆ ಬೆಕ್ಕು.
ಎಷ್ಟೋ ಸಲ ಅದು
ನಿಜವಾಗಲೂಬಹುದು.
ಆದರೆ,
ಪ್ರತೀಸಲವೂ
ಪಾತ್ರೆಗೆ ಹೇಗೆ
ವಂಚಿಸುವದು?”
ತುಂಬಾ ಇಷ್ಟವಾಯಿತು, ಲೈಕ್ ಬಟನ್ ಒತ್ತಿ, ಕಾಮೆಂಟ್ ಮಾಡಲೆಂದು ಕೂತವಳು, ಯಾವುದೋ ಫೋನ್ ಬಂದು, ಮತ್ತ್ಯಾವುದೋ ಕೆಲಸಬಿದ್ದು, ಕಾಮೆಂಟ್ ಮಾಡಲಾಗಲೇ ಇಲ್ಲ. ಆಮೇಲೆ ಮನೆಯಲ್ಲಿ ಮತ್ತೆ ಕಾಮೆಂಟ್ ಮಾಡಬೇಕೆಂದು ಕೂತಾಗ ಇಡೀ ಬರಹದಲ್ಲಿ ಒಂದೆರಡು ಸಾಲುಗಳು ಸಂಪೂರ್ಣ ಬೇರೆ ಪ್ರಶ್ನೆಯನ್ನೇ ಧ್ವನಿಸಿ ನನ್ನನ್ನು ಯೋಚನೆಗೆ ಹಚ್ಚಿದವು.- ’

“ಸಂಬಂಧ-ಯಾವುದೇ ಆಗಿರಲಿ,ಅಲ್ಲಿ ಒಂದು ಅಗೋಚರ ‘ಬಂಧ’ ಇರುತ್ತದೆ.ಬಂಧದಲ್ಲಿ ಜಗಳ ನಡೆಯುತ್ತದೆ. ಮುನಿಸು ನಡೆಯುತ್ತದೆ. ಹಠ,ಮೌನವೂ ನಡೆಯುತ್ತದೆ.ಜೊತೆಗೆ ಅಪಾಯಕಾರಿಯಲ್ಲದ ಸಣ್ಣಪುಟ್ಟ ರಹಸ್ಯಗಳೂ..
ಯಾವಾಗ ಬಂಧದಲ್ಲಿ “ನ” ಬಂತೋ-ಅದು ಬಂಧನವಾಗುತ್ತ ಹೋಗುತ್ತದೆ.”
ನಿಜ ಬಂಧನ ಉಸಿರುಗಟ್ಟಿಸುತ್ತದೆ, ಬಂಧನ ನಮ್ಮಲ್ಲಿ ಕೈ ಕಳಚಿಕೊಂಡು ಓಡುವ ಅಭೀಪ್ಸೆಯನ್ನು ಹುಟ್ಟುಹಾಕುತ್ತದೆ, ಬಂಧನ ನಮ್ಮಲ್ಲಿನ ನಮ್ಮನ್ನು ಕೊಂದು ಹಾಕುತ್ತದೆ. ಎಲ್ಲಾ ನಿಜ. ಆದರೆ ಯಾಕೋ ಅದು ಅಷ್ಟೇ ಅಲ್ಲಾ ಅನ್ನಿಸಿತು.
ಪ್ರತಿ ’ಬಂಧ’ದಲ್ಲೂ ’ನ’ ಸೈಲೆಂಟ್ ಆಗಿರುತ್ತದೆ. ಕೆಲವು ಪದಗಳಲ್ಲಿ ಹುದುಗಿರುವ ಧ್ವನಿಯ ಹಾಗೆ, ಹೆಸರುಗಳಲ್ಲಿ ಅಡಗಿರುವ ಭಾವದ ಹಾಗೆ, ಮೌನದಲ್ಲೂ ಅಡಗಿರುವ ಎಚ್ಚರದ ಹಾಗೆ. ’ಬಂಧ’ದಲ್ಲಿ ’ನ’ ಸೈಲೆಂಟ್, ಅಂದರೆ ಸ್ಪಷ್ಟವಾಗಿ ಉಚ್ಛಾರವಾಗುವುದಿಲ್ಲ, ಹಾಗೆಂದು ಇಲ್ಲದೆಯೂ ಇರುವುದಿಲ್ಲ, ನಾಲಿಗೆಯಲ್ಲಿ ಬಾರದೆ ಉಳಿದರೂ ಉಸಿರಿನ ಏರಿಳಿತದಲ್ಲಿ ವ್ಯಕ್ತವಾಗುವ ಹಾಗೆ. ಕಣ್ಣಿಗೆ ಕಾಣದಿದ್ದರೂ ಆತ್ಮಕ್ಕೆ ತಾಕುವ ಹಾಗೆ. ಯಾವುದೇ ಬಂಧದಲ್ಲೂ ಒಂದು ’ನ’ ಇದ್ದೇ ಇರುತ್ತದೆ, ಹಾಗೆ ಇರುವಿಕೆಯೆ ಆ ಬಂಧಕ್ಕೊಂದು ನಿರಂತರತೆಯನ್ನೂ, ವಾಸ್ತವಿಕತೆಯನ್ನು ಕೊಡುತ್ತದೆ. ಅವ್ಯಕ್ತ ಬಂಧಕ್ಕೊಂದು ಮೂರ್ತತೆ ಬರುವುದು ಒಂದು ಸಣ್ಣ ಬಂಧನದಿಂದ. ಅದಿಲ್ಲದ ಯಾವುದೇ ಬಂಧಕ್ಕೆ ಬಂಧನದ ಭೀತಿಯೂ ಇರುವುದಿಲ್ಲ, ಹಾಗೆ ನಾಳೆಯ ನಂಬಿಕೆಯೂ.
ಆಕೆ ಒಬ್ಬ ಸಂವೇದನಾಶೀಲ ಹೆಣ್ಣು, ಅವನೂ ಅಷ್ಟೆ. ಅವಳಿಗೆ ಮೋಸ ಮಾಡಬೇಕೆಂದು ಕನಸಿನಲ್ಲೂ ಎಣಿಸದವ, ಸ್ವಭಾವತಃ ಮೃದು ಸ್ವಭಾವದವನೇ. ಇಬ್ಬರೂ ಜೊತೆಗೂಡಿ ಹೆಜ್ಜೆ ಹಾಕುವ ಮೊದಲು ಸ್ಪಷ್ಟವಾಗಿಯೇ ಹೇಳಿದ್ದ, ’ಯಾವುದೇ ಬೈಂಡಿಂಗ್’ ಇಲ್ಲ ಅಲ್ಲವಾ? ಪ್ರೀತಿ ಒಂದು ಬಿಡುಗಡೆ, ಬಂಧನವಲ್ಲ ಎಂದೇ ಮನಸಾ ನಂಬಿದ್ದ ಇವಳೂ ಅದಕ್ಕೆ ಒಪ್ಪಿದಳು, ಆದರೆ ಬಹುಷಃ ಅವಳ ಮನಸ್ಸಿನಲ್ಲೂ ಕಾಲ ಕಳೆದಂತೆ ಇದು ಮತ್ತೇನೋ ಆಗಿ ಬದಲಾದೀತು ಅನ್ನುವ ನಿರೀಕ್ಷೆ ಇತ್ತೋ ಏನೋ, ಕಾಯುತ್ತೇನೆ ಎಂದು ಕೊಂಡಳು, ಬಂಧ ಅವಳನ್ನು ಬದಲಾಯಿಸಿತು, ಒಂದಿಷ್ಟು ’ನ’ ಬಯಸಿತು, ಆದರೆ ಅವನು ತನ್ನ ಮಾತಿನಂತೆಯೇ ಉಳಿದ, ಅವನು ಬದಲಾಗಲಿಲ್ಲ. ಬರಬರುತ್ತಾ ಯಾವುದೇ ಬಂಧನವಿಲ್ಲದ ಬಂಧ ಅವಳಿಗೆ ಅತಂತ್ರ ಅನ್ನಿಸತೊಡಗಿತು, ಅದನ್ನು ಒಂದಿಷ್ಟು ಬಿಗಿಗೊಳಿಸಲು ಅವಳು ಇಟ್ಟ ಪ್ರತಿ ಹೆಜ್ಜೆ ಅವನಿಗೆ ಬಂಧನ ಅನ್ನಿಸತೊಡಗಿತು, ಅವನನ್ನು ತನ್ನವನನ್ನಾಗಿ ಉಳಿಸಿಕೊಳ್ಳಲು ಅವಳು ಮಾಡಿದ್ದೆಲ್ಲಾ ಅವನಿಗೆ ಪೊಸೆಸಿವ್ ನೆಸ್ ಅನ್ನಿಸಿ, ಉಸಿರುಕಟ್ಟತೊಡಗಿತು. ಅವನು ಚಿಪ್ಪಿನೊಳಗೆ ಸರಿಯ ತೊಡಗಿದ. ಅವಳು ನೆಲೆಯಿಲ್ಲದಂತೆ ಚಡಪಡಿಸತೊಡಗಿದಳು. ಇಲ್ಲಿಯವರೆಗೂ ಎಲ್ಲವೂ ನಿರೀಕ್ಷಿತವೇ, ಆದರೆ ಮುಂದೆ ನಡೆದದ್ದೇ ಬೇರೆ…

ಯಾವುದೇ ಗೋಡೆಗಳಿಲ್ಲದ, ಬಾಗಿಲು, ಕಿಟಕಿಗಳಿಲ್ಲದ ಬಯಲು ಅವಳನ್ನು ಕಂಗೆಡಿಸಿತು, ಅವಳು ತನ್ನನ್ನು ಹಿಡಿದಿಡುವ, ತನ್ನ ಹಿಡಿತಕ್ಕೆ ಸಿಗದ ಬಯಲಿನಿಂದ ಆಚೆ ಹೆಜ್ಜೆ ಇಟ್ಟು ಒಂದು ಪುಟ್ಟ ಮನೆ ಹೊಕ್ಕಳು, ಇನ್ನೊಂದು ಸಂಬಂಧವನ್ನು ತನ್ನದಾಗಿಸಿಕೊಂಡಳು. ಆದರೆ ಆಮೇಲೆ ಅವನು ಒದ್ದಾಡಿದ ರೀತಿ ಇತ್ತಲ್ಲ… ಅವಳನ್ನು ಅವನು ಅಷ್ಟು ಅದಮ್ಯವಾಗಿ ಪ್ರೀತಿಸುತ್ತಿದ್ದ ಅಂತ ಬಹುಷಃ ಅವನಿಗೂ ಗೊತ್ತಿರಲಿಕ್ಕಿಲ್ಲ. ಅವಳು ಮನೆ ಸೇರಿ ಆಗಿತ್ತು, ಇವನು ಬಯಲಿನಲ್ಲೇ ನಿಂತಿದ್ದ ಒಬ್ಬನೇ, ಅವನು ನಿರಾಕರಿಸಿದ್ದ ’ಬೈಂಡಿಂಗ್’ ಅವನನ್ನೂ ಪೊರೆಯುತ್ತಿತ್ತು ಅನ್ನುವದು ಅವನಿಗೆ ಅರಿವಾಗುವುದರ ಒಳಗೆ ಆಕೆ ಬಿಡುಗಡೆ ಪಡೆದು ದೂರ ನಡೆದಾಗಿತ್ತು.
ಇದೇ ಭಾವದ ನೆಲೆಯ ಮೇಲೆ ಬಂದ ಚಿತ್ರ ಗುಲ್ಜಾರರ ಇಜಾಜತ್, ನಾಸಿರುದ್ದೀನ್ ಶಾ, ರೇಖಾ, ಜೀವ ಬಿಡುವಷ್ಟು ಚಂದದ ಹಾಡುಗಳು, ಅದ್ಭುತ ಛಾಯಾಗ್ರಹಣ, ಎಲ್ಲಕ್ಕಿಂತ ಮಿಗಿಲಾಗಿ ಆ ಚಿತ್ರದಲ್ಲಿದ್ದ ಸಂವೇದನೆ… ಮದುವೆ ಆದರೂ ಮದುವೆಯ ಯಾವುದೇ ಕಟ್ಟುಪಾಡುಗಳಿಗೆ ತನ್ನನ್ನು ಒಗ್ಗಿಸಿಕೊಳ್ಳದ, ಗೆಳತಿಯನ್ನು ಮರೆಯಲಾಗದ ಗಂಡ. ತಾನು ಆ ಬಂಧನಕ್ಕೆ ಒಡ್ಡಿಕೊಳ್ಳದಿದ್ದರೂ ಹೆಂಡತಿ ಆ ಬಂಧವನ್ನು ಗೌರವಿಸಬೇಕು, ಗೌರವಿಸುತ್ತಾಳೇ, ತನಗಾಗಿ ಕಾಯಬೇಕು, ಕಾಯುತ್ತಾಳೆ ಎಂದು ಒಳಗೊಳಗೆ ಒಂದು ನಂಬಿಕೆಯನ್ನೂ, ನಿರೀಕ್ಷೆಯನ್ನೂ ಇಟ್ಟುಕೊಂಡಿರುವ ಗಂಡ. ಆದರೆ ಹಾಗಾಗದೆ, ಅವನಿಗೆ ಬೇಡದ ಬಂಧವನ್ನು ತಾನು ಬಂಧನವಾಗಿಸಿಕೊಳ್ಳದೆ ಹೆಂಡತಿ ಮನೆಬಿಟ್ಟು ಹೊರಟಾಗ ಅವನಿಗೆ ಆಘಾತವಾಗುತ್ತದೆ. ಬಂಧನ ಬೇಡವೆಂದರೆ ಅದು ತನಗಷ್ಟೇ ಅಲ್ಲ, ಅವಳಿಗೂ ಅನ್ವಯವಾಗುತ್ತದೆ ಎನ್ನುವುದರ ಅರಿವೇ ಅವನಿಗೆ ಇರುವುದಿಲ್ಲ. ತಾನು ಗೌರವಿಸದ ಸಂಬಂಧವನ್ನು ಅವಳು ಯಾಕೆ ಗೌರವಿಸಬೇಕು ಎನ್ನುವುದು ಅವನಿಗೆ ಅರ್ಥವಾಗುವ ವೇಳೆಗೆ ಅವನು ಒಬ್ಬನೇ ನಿಂತಿರುತ್ತಾನೆ, ಅವನ ಸ್ವಾತಂತ್ರ್ಯದ ಜೊತೆಯಲ್ಲಿ, ಆಗ ನಿರಾಳತೆಯನ್ನು ಕೊಟ್ಟಿದ್ದ ಅದೇ ಬಿಡುಗಡೆ ಈಗ ಹೊರೆಯಾಗಿ ಕಾಣತೊಡಗುತ್ತದೆ.
ಯಾವುದೋ ಚಿತ್ರದ ಒಂದು ದೃಶ್ಯ ನೆನಪಾಯಿತು, ಹುಡುಗ ತನ್ನ ಹುಡುಗಿಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ, ಅವಳು ಕೊಸರುತ್ತಾಳೆ, ’ಐ ಲವ್ ಯೂ ಕಣೆ’ ಅನ್ನುತ್ತಾನೆ, ’ನೀವು ಹುಡುಗರು ಈ ’ಐ ಲವ್ ಯೂ’ ಅನ್ನೋದು ’ಅದಕ್ಕೇ’ ಅಂತ ನನಗೆ ಗೊತ್ತು ಬಿಡು’ ಅಂದಾಗ, ಅವನು ಉತ್ತರಿಸುತ್ತಾನೆ, ’ನನ್ನ ’ಐ ಲವ್ ಯೂ’ ನಲ್ಲಿ ನಾನು, ನೀನು, ನಿನ್ನ ಖುಷಿ, ನಿನ್ನ ಶಾಪಿಂಗ್, ನಮ್ಮ ಮಗು ಸ್ಕೂಲು, ನಿಮ್ಮ ಅಮ್ಮ ಊರಿಂದ ಬಂದರೆ ಹೋಗಿ ಕರ್ಕೊಂಡು ಬರೋದು ಎಲ್ಲಾ ಇರುವಂತೆ, ’ಅದೂ’ ಕೂಡ ಇದೆ’ ಅಂತ. ಬಂಧನ ಬಂಧವಾಗಿ ಸಹನೀಯವಾಗುವುದು ಹೀಗೆ ಅದನ್ನು ಒಪ್ಪಿಕೊಳ್ಳುವುದರಿಂದ ಅದು ತನ್ನೊಂದಿಗೆ ಏನೆಲ್ಲವನ್ನೂ ಒಟ್ಟಾಗಿ ತರುತ್ತದೆ ಎನ್ನುವುದರಿಂದ ಇರಬಹುದಾ? ಬಂಧನದ ಇನ್ನೊಂದು ಅರ್ಥ ಭದ್ರತೆಯೂ ಹೌದ?
ಇಂದು ಅದೇ ಫೇಸ್ ಬುಕ್ಕಿನಲ್ಲಿ ಆಕರ್ಷ ಕಮಲ ಬರೆದ ಸಾಲುಗಳನ್ನು ಓದಿದೆ.
………………………………..
 
I no longer cry alone,
I no longer fight alone,
I no longer shop alone,
I no longer take random walks,
Nor do I stare at empty spaces anymore,
You have brought in many changes
But nothing has changed!
ಪ್ರತಿಯೊಬ್ಬರಲ್ಲಿಯೂ ಇರುವ ಸಾಂಗತ್ಯದ ಬಯಕೆ ಬಂಧದಲ್ಲಿರುವ ಬಂಧನವನ್ನು ಸಹನೀಯಗೊಳಿಸುತ್ತದಾ? ಬದುಕಿಗೆ ಬಂಧ ಬೇಕು, ಬಂಧವನ್ನು ಗಟ್ಟಿಗೊಳಿಸಲು ಒಂದು ಬಂಧನವೂ ಬೇಕು, ಅದಿಲ್ಲದ ಯಾವುದೇ ಬಂಧಕ್ಕೆ ಬಂಧ ಇರುವುದಿಲ್ಲ. ’ಪ್ರತಿ ದಿನ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ಸಂಜೆ-ರಾತ್ರಿಗೊಂದೊಂದು ಫೋನ್ ಮಾಡೋದು ನನಗಾಗಲ್ಲ’ ಎಂದು ರೇಗುವ ಹುಡುಗನಿಗೂ ತಾನು ಫೋನ್ ಮಾಡಿದಾಗ ಹುಡುಗಿ ಫೋನ್ ತೆಗೆಯದಿದ್ದರೆ ಸಿಟ್ಟು ಬರುತ್ತದೆ, ಫೋನ್ ಜಾಸ್ತಿ ಹೊತ್ತು ಎಂಗೇಜ್ ಇದ್ದರೆ ಪ್ರಶ್ನೆ ಹುಟ್ಟುತ್ತದೆ. ತಾನು ಕೊಡದ ಭರವಸೆಯನ್ನು, ತಾನು ಕೇಳುವ ಹಕ್ಕು ಸಹ ಇರುವುದಿಲ್ಲ ಅನ್ನುವುದು ಅರ್ಥವೇ ಆಗುವುದಿಲ್ಲ. ಹಾಗೆ ಆ ಒಂದು ’ನ’ ಇಬ್ಬರಲ್ಲಿಯೂ ಪರಸ್ಪರ ನಂಬಿಕೆ, ಸ್ವಲ್ಪ ಹಕ್ಕು, ಪ್ರೀತಿ, ಧೈರ್ಯವನ್ನು ಹುಟ್ಟುಹಾಕುತ್ತದಾ?
ಸಂಬಂಧದಕ್ಕೆ ಮುಕ್ತತೆಯೂ ಬೇಕು, ಹಾಗೆ ಒಂದು ಸಣ್ಣ ಬಂಧವೂ. ಬಂಧನವಿಲ್ಲದ ಸಂಬಂಧ ಚದುರಿಹೋಗುತ್ತದೆ, ಬಂಧನ ಬಿಗಿಯಾದರೆ ಬಾಡಿಹೋಗುತ್ತದೆ. ಅದನ್ನು ಕೈ ಜಾರದಂತೆ, ಕೈಯೊಳಗೆ ಮುದುಡದಂತೆ ಕಾಪಿಡುವುದರಲ್ಲಿದೆ ಸಂಬಂಧದ ಜೀವ.
ಬದುಕಿಗೆ ಬಂಧವೂ ಇರಲಿ, ಬಂಧನವೂ…. ಹಸಿದಾರದಲ್ಲಿ ಜಾಜಿ ಹೂ ಸೇರಿಸಿ, ಬಿಡಿಸಿ ಹೋಗದಂತೆ ಕಟ್ಟಿ ಮಾಲೆ ಮಾಡಿದಂತೆ, ಉಸಿರು ಕಟ್ಟಿಸದಂತೆ ಮಗುವನ್ನು ಹಗೂರವಾಗಿ ಎತ್ತಿಕೊಂಡು ಬೀಳದಂತೆ ಎದೆಗಪ್ಪಿಕೊಂಡಂತೆ, ಆಕಾಶದಗಲಕ್ಕೂ ಹಾರುವ ಗಾಳಿ ಪಟಕ್ಕೂ ನೆಲಕ್ಕೂ ಸೂತ್ರ ಜೀವ ಹರಿಸಿದಂತೆ…
 

‍ಲೇಖಕರು G

14 February, 2014

12 Comments

  1. Swarna

    ಅವ್ಯಕ್ತ ಬಂಧಕ್ಕೊಂದು ಮೂರ್ತತೆ ಬರುವುದು ಒಂದು ಸಣ್ಣ ಬಂಧನದಿಂದ….ಹೌದು..

  2. Rj

    “ಅವ್ಯಕ್ತ ಬಂಧಕ್ಕೊಂದು ಮೂರ್ತತೆ ಬರುವುದು ಒಂದು ಸಣ್ಣ ಬಂಧನದಿಂದ. ಅದಿಲ್ಲದ ಯಾವುದೇ ಬಂಧಕ್ಕೆ ಬಂಧನದ ಭೀತಿಯೂ ಇರುವುದಿಲ್ಲ, ಹಾಗೆ ನಾಳೆಯ ನಂಬಿಕೆಯೂ..”
    Beautiful.ಸಂಬಂಧಗಳ ಬಗ್ಗೆ ನೀವು ಚೆಂದ ಮಾಡಿ ಬರೆಯಬಲ್ಲಿರಿ.. 🙂
    -Rj

  3. Suamthi Deepa Hegde

    ತುಂಬಾನೇ ಇಷ್ಟ ಆಯ್ತು ಈ ಸಾಲು….
    ಹಸಿದಾರದಲ್ಲಿ ಜಾಜಿ ಹೂ ಸೇರಿಸಿ, ಬಿಡಿಸಿ ಹೋಗದಂತೆ ಕಟ್ಟಿ ಮಾಲೆ ಮಾಡಿದಂತೆ, ಉಸಿರು ಕಟ್ಟಿಸದಂತೆ ಮಗುವನ್ನು ಹಗೂರವಾಗಿ ಎತ್ತಿಕೊಂಡು ಬೀಳದಂತೆ ಎದೆಗಪ್ಪಿಕೊಂಡಂತೆ, ಆಕಾಶದಗಲಕ್ಕೂ ಹಾರುವ ಗಾಳಿ ಪಟಕ್ಕೂ ನೆಲಕ್ಕೂ ಸೂತ್ರ ಜೀವ ಹರಿಸಿದಂತೆ…
    ಇಡೀ ಬರಹದ ಜೀವ ಈ ಕೊನೆಯ ಸಾಲಿನಲ್ಲಿದೆ…. 🙂

  4. Sumathi Deepa Hegde

    ತುಂಬಾನೇ ಇಷ್ಟ ಆಯ್ತು ಈ ಸಾಲು….
    ಹಸಿದಾರದಲ್ಲಿ ಜಾಜಿ ಹೂ ಸೇರಿಸಿ, ಬಿಡಿಸಿ ಹೋಗದಂತೆ ಕಟ್ಟಿ ಮಾಲೆ ಮಾಡಿದಂತೆ, ಉಸಿರು ಕಟ್ಟಿಸದಂತೆ ಮಗುವನ್ನು ಹಗೂರವಾಗಿ ಎತ್ತಿಕೊಂಡು ಬೀಳದಂತೆ ಎದೆಗಪ್ಪಿಕೊಂಡಂತೆ, ಆಕಾಶದಗಲಕ್ಕೂ ಹಾರುವ ಗಾಳಿ ಪಟಕ್ಕೂ ನೆಲಕ್ಕೂ ಸೂತ್ರ ಜೀವ ಹರಿಸಿದಂತೆ…
    ಇಡೀ ಬರಹದ ಜೀವ ಈ ಕೊನೆಯ ಸಾಲಿನಲ್ಲಿದೆ…. 🙂

  5. ಸುಮ ಮುದ್ದಾಪುರ್

    ಸಂಬಂಧದಕ್ಕೆ ಮುಕ್ತತೆಯೂ ಬೇಕು, ಹಾಗೆ ಒಂದು ಸಣ್ಣ ಬಂಧವೂ. ತುಂಬಾ ಚೆನ್ನಾಗಿದೆ

  6. suseela

    U described the words BANDA & Na very well sandhya.How true it is!very nice sandhya.

  7. mankavi143@gmail.com

    ಮನಮುಟ್ಟುವ ಲೇಖನ

  8. Jayashree B kadri

    So nice sandhya madam. intense, deep yet practical..

  9. Vaman Gopalrao Kulkarni

    *****!!!!!

  10. bharathi b v

    Tumba ishtavaythu …

  11. GORURSHIVESH

    uttama lekhana…….

  12. ಶಮ, ನಂದಿಬೆಟ್ಟ

    “ಅವ್ಯಕ್ತ ಬಂಧಕ್ಕೊಂದು ಮೂರ್ತತೆ ಬರುವುದು ಒಂದು ಸಣ್ಣ ಬಂಧನದಿಂದ. ಅದಿಲ್ಲದ ಯಾವುದೇ ಬಂಧಕ್ಕೆ ಬಂಧನದ ಭೀತಿಯೂ ಇರುವುದಿಲ್ಲ, ಹಾಗೆ ನಾಳೆಯ ನಂಬಿಕೆಯೂ..”
    “ಬದುಕಿಗೆ ಬಂಧವೂ ಇರಲಿ, ಬಂಧನವೂ…. ಹಸಿದಾರದಲ್ಲಿ ಜಾಜಿ ಹೂ ಸೇರಿಸಿ, ಬಿಡಿಸಿ ಹೋಗದಂತೆ ಕಟ್ಟಿ ಮಾಲೆ ಮಾಡಿದಂತೆ, ಉಸಿರು ಕಟ್ಟಿಸದಂತೆ ಮಗುವನ್ನು ಹಗೂರವಾಗಿ ಎತ್ತಿಕೊಂಡು ಬೀಳದಂತೆ ಎದೆಗಪ್ಪಿಕೊಂಡಂತೆ, ಆಕಾಶದಗಲಕ್ಕೂ ಹಾರುವ ಗಾಳಿ ಪಟಕ್ಕೂ ನೆಲಕ್ಕೂ ಸೂತ್ರ ಜೀವ ಹರಿಸಿದಂತೆ…”
    Sooooooooooooooooooooooper.. ಸಂಬಂಧಗಳ ಬಗ್ಗೆ ಪ್ರತಿ ಸಾರ್ತಿ ನೀ ಬರೆದಾಗೆಲ್ಲ ನಾ ಅಂದುಕೊಳ್ಳೋದು ಇಷ್ಟು ಚೆಂದಗೆ ಬರೆಯಲು ನನಗೂ ಬರಲಿ ಅಂತಷ್ಟೇ 🙂 😉

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading