ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ’ಪ್ರೀತಿ ಇಲ್ಲದ ಮೇಲೆ…’

’ಅಕ್ಕು’ ಯಾಕೋ ಬಿಟ್ಟೂ ಬಿಡದಂತೆ ಕಾಡುತ್ತಿದ್ದಾಳೆ, ಸಿಂಬಳ ಸುರಿಯುವ ಮೂಗನ್ನು ಏರಿಸಿಕೊಂಡು, ಜಡ್ಡುಗಟ್ಟಿದ ಜಡೆಯನ್ನು ರೊಯ್ಯನೆ ಹಿಂದಕ್ಕೆ ಬೀಸಿಕೊಂಡು, ಮುಖದ ತುಂಬಾ ’ಏನೀಗ?’ ಎನ್ನುವು ಒಂದು ಸಣ್ಣ ಬಂಡಾಯವನ್ನು ಹೊತ್ತ ಅಕ್ಕು, ಆ ಮನೆಯಲ್ಲಿ ಯಾವ ಬಂಧವಿಲ್ಲದೆ, ಸಂಬಂಧವಿಲ್ಲದೆ, ಕಡೆಗೆ ಯಾವ ಸಂಬಂಧ ಸೂಚಕವೂ ಇಲ್ಲದೆ, ಮನೆಯಲ್ಲಿ ಅಜ್ಜನಿಂದ ಹಿಡಿದು ಸತ್ಯ ಮಾಣಿಯವರೆಗೂ ಕೇವಲ ’ಅಕ್ಕು’ ಅಂತಲೇ ಗುರ್ತಿಸಿಕೊಳ್ಳುವ ಅಕ್ಕು, ಮನೆ ಮಂದಿಯೆಲ್ಲಾ ಆಡಿಕೊಂಡರೂ ಒಂದಿಷ್ಟೂ ಕುಸಿಯದೆ, ಎಲ್ಲರನ್ನೂ ನಾಲಿಗೆಯ ಚಾಟಿಯಿಂದ ಬೀಸುತ್ತಲೇ, ಮೂಲೆಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ, ತನಗೆ ತಾನೆ ಜೋಗುಳ ಹಾಡಿಕೊಳ್ಳುವ ಅಕ್ಕು, ಬಿಟ್ಟು ಹೋದ ಗಂಡ ಮುಂದೆಂದೋ ವಾಪಸ್ಸಾಗಿ ತನ್ನ ’ಗಂಡ’ತನದ ಹಕ್ಕು ಸ್ಥಾಪಿಸಲು ಬಂದಾಗ ದಿಕ್ಕರಿಸಿ ಎದ್ದು ನಿಂತ ಅಕ್ಕು, ಅಕ್ಕು ನನ್ನನ್ನು ಕಾಡಿದ ಹಾಗೆಯೇ ಇನ್ನೊಂದು ಪ್ರಶ್ನೆ ಸಹ ಕಾಡುತ್ತದೆ. ಅಕಸ್ಮಾತ್ ಮನೆಯವರೇ ಭಾವಿಸುವ ಹಾಗೆ ’ಒಂದೆರಡು ಸುತ್ತು ಸಡಿಲ’ ಅಲ್ಲದಿದ್ದರೆ ಅವಳ ಆ ದಿಕ್ಕಾರವನ್ನು, ನಿರಾಕರಣೆಯನ್ನು ಮನೆ ಮಂದಿ ಹಾಗೆ ಸುಮ್ಮನೆ ಒಪ್ಪಿಕೊಳ್ಳುತ್ತಿದ್ದರಾ? ಅವಳ ಆ ’ಅರೆ ಬರೆ ಭ್ರಾಮಕ’ ಸ್ಥಿತಿಯೇ ಅವಳಿಗೆ ಒಲ್ಲದ ದಾಂಪತ್ಯದಿಂದ ದೂರ ನಿಲ್ಲುವ ಧೈರ್ಯ ಕೊಟ್ಟಿತ್ತಾ?
ಅಕ್ಕು ಹೀಗೆ ನನ್ನನ್ನು ಕಾಡಲು ಕಾರಣ, ಅಕ್ಕುವಿನ ಬಿಲ್ ಕುಲ್ ವ್ಯತಿರಿಕ್ತ ಸ್ಥಿತಿ, ಪರಿಸ್ಥಿತಿಯಲ್ಲಿದ್ದ ಮತ್ತೊಬ್ಬ ಹೆಣ್ಣು. ಈಕೆ ಸುಂದರಿ, ವಿದ್ಯಾವಂತೆ ಮತ್ತು ಬುದ್ದಿವಂತೆ. ೧೩ನೆಯ ವಯಸ್ಸಿನಲ್ಲಿ ಮನೆಯವರ ಒತ್ತಾಯಕ್ಕೆ ಹಸೆಮಣೆ ಏರಿದವಳು, ಆರತಕ್ಷತೆಯ ದಿನ ಸೀರೆ ಉಟ್ಟು ಹೇಗೆ ನಡೆಯಬೇಕು ಗೊತ್ತಿಲ್ಲದೆ, ಉಟ್ಟ ಸೀರೆ ಬಿಚ್ಚಿದಾಗ, ಮಂಕಾಗಿ ನಿಂತವಳು, ಬೆಳೆದಂತೆಲ್ಲಾ ತನಗೂ ತನ್ನ ಪತಿಯ ಸ್ವಭಾವಕ್ಕೂ ಎಳ್ಳಷ್ಟೂ ತಾಳ ಮೇಳವಿಲ್ಲದ್ದು ಕಂಡು ತೊಳಲಾಡಿ, ಒದ್ದಾಡಿ, ಮಾನಸಿಕ – ದೈಹಿಕ ಆರೋಗ್ಯ ಕಳೆದುಕೊಂಡವಳು, ಪ್ರಯತ್ನಿಸಿದರೂ ಅವನನ್ನು ಗಂಡನೆಂದು ಒಪ್ಪಿಕೊಳ್ಳಲಾಗದೆ ಅವನ ಜೊತೆ ಸಂಸಾರ ಸಾಧ್ಯವಿಲ್ಲವೆಂದು ನಿರ್ಧಾರ ತೆಗೆದುಕೊಂಡವಳು. ಆಕೆ ರಾಮೇಶ್ವರಿ ವರ್ಮ. (ರಾಮೇಶ್ವರಿ ವರ್ಮ ಅವರ ಬಗ್ಗೆ ನಾನು ಕಳೆದವಾರ ಬರೆದ ಬರಹ ಇಲ್ಲಿದೆ)
ಅಕ್ಕುವನ್ನು ಅನುಕಂಪದಿಂದ ನೋಡುವ ನಮಗೆ, ರಾಮೇಶ್ವರಿಯನ್ನು ಯಾಕೆ ಹಾಗೆ ನೋಡಲಾಗುವುದಿಲ್ಲ? ಯಾವುದು ನಮ್ಮನ್ನು ಅವಳ ಕಡೆ ಒಂದು ಕಟು ವಿಮರ್ಶಾ ದೃಷ್ಟಿಯನ್ನು ಇಟ್ಟುಕೊಳ್ಳುವಂತೆ ಮಾಡುತ್ತದೆ? ಯಾವುದು ನಮಗೇ ಗೊತ್ತಿಲ್ಲದಂತೆ ನಮ್ಮನ್ನು ನ್ಯಾಯಾಧೀಶರ ಪೀಠದಲ್ಲಿ ಕೂರಿಸಿ, ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಲು ಸಂಭ್ರಮಿಸುತ್ತದೆ? ಅದು ನಮ್ಮಲ್ಲಿರುವ ರೂಡಿಗತ ನಂಬಿಕೆ, ಆಚರಣೆಗಳಾ ಅಥವಾ ಆಕೆಯ ಸೌಂದರ್ಯ, ವಿದ್ಯೆ ಮತ್ತು ಆತ್ಮ ವಿಶ್ವಾಸವಾ? ಅಥವಾ ಅವಳು ತಂತಾನೆ ನಿರ್ಧಾರ ತೆಗೆದುಕೊಳ್ಳಬಲ್ಲಳು ಎನ್ನುವುದೇ ನೋಡುವವರ ಕಣ್ಣಿಗೆ ಬಂಡಾಯದ ಕಹಳೆಯಂತೆ ಕೇಳಿಸಿಬಿಡುತ್ತದಾ? ಅದನ್ನು ಪ್ರಶ್ನಿಸಿ, ಖಂಡಿಸಿ, ನಂದಿಸುವುದರಲ್ಲೇ ನಮ್ಮ ವೈಯಕ್ತಿಕ ವಿಜಯ ನಮಗೆ ಕಾಣಿಸುತ್ತದಾ? ಯಾಕೆ ಒಬ್ಬ ಸ್ವಾವಲಂಬಿ ಹೆಣ್ಣು ಬಹುಪಾಲು ಜನರ ಕಣ್ಣಿಗೆ ಅಸಹನೀಯವಾಗಿ ಕಾಣುತ್ತಾಳೆ?
ಇಲ್ಲಿ ನಾನು ರಾಮೇಶ್ವರಿ ವರ್ಮ ಅವರ ನಡುವಳಿಕೆಯನ್ನು ಸಮರ್ಥಿಸಲು ಅಥವಾ ಅದಕ್ಕೆ ಸಮಜಾಯಿಶಿ ಕೊಡಲು ಈ ಮಾತನ್ನಾಡುತ್ತಿಲ್ಲ, ಅದು ಆಕೆಯ ಘನತೆಗೆ ಅವಮಾನ ಎಂದೇ ನಾನು ಭಾವಿಸುತ್ತೇನೆ, ಎಲ್ಲೂ ಯಾವ ಮುಚ್ಚುಮರೆಯಿಲ್ಲದೆ ತನ್ನ ಬದುಕಿನ ಬಗ್ಗೆ ಮಾತನಾಡಿದ ಹೆಣ್ಣು ಆಕೆ. ಎಲ್ಲೂ ತನ್ನ ಸಮರ್ಥನೆಗಿಳಿಯುವುದಿಲ್ಲ, ತನ್ನನ್ನು ಬಲಿಪಶುವಾಗಿ ಚಿತ್ರಿಸಿಕೊಳ್ಳುವುದಿಲ್ಲ, ಗಂಡನನ್ನು ರಾಕ್ಷಸನ್ನಾಗಿ ಮಾಡುವುದಿಲ್ಲ. ನೋಡಿ ಇದು ಹೀಗೆ, ಹೀಗಿತ್ತು, ನನ್ನ ಕೈಲಿ ಆ ಬದುಕು ಸಾಧ್ಯವಾಗುತ್ತಿರಲಿಲ್ಲ, ನಾನು ಹೀಗೆ ಮಾಡಿದೆ ಎಂದು ಅತ್ಯಂತ ಸರಳವಾಗಿ ಹೇಳಿಕೊಳ್ಳುತ್ತಾರೆ. ಅದಕ್ಕಾಗಿ ಕೇಳುಗರ ಅನುಕಂಪವನ್ನು ಆಕೆ ಬೇಡುವುದಿಲ್ಲ.
ಬದುಕಿನ ಯಾವುದೇ ಹಂತದಲ್ಲಾದರೂ ನಿರ್ಧಾರ ತೆಗೆದುಕೊಳ್ಳುವ ಕ್ಷಣಗಳು ಬಹಳ ಬರುತ್ತವೆ, ಆದರೆ ಬಹಳಷ್ಟು ಜನ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಾರೆ, ಅಥವಾ ಅದನ್ನು ಹೀಗನ್ನಬಹುದೇನೋ ನಿರ್ಧಾರ ತೆಗೆದುಕೊಂಡರೆ ಆ ನಂತರ ತಮ್ಮ ನಡೆಗೆ, ನಡುವಳಿಕೆಗೆ ಹೊರಬೇಕಾಗಿ ಬರುವ ಜವಾಬ್ದಾರಿಗೆ ಹೆದರುತ್ತಾರೆ. ಎಲ್ಲವೂ ತಾನೇ ತಾನಾಗಿ ಸರಿ ಹೋಗಲಿ, ಅಥವಾ ಇದಕ್ಕೆ ಸಂಬಂಧಪಟ್ಟ ಇನ್ನೊಂದು ವ್ಯಕ್ತಿ ನಿರ್ಧಾರ ತೆಗೆದುಕೊಂಡು ಆ ಹೊರೆಯಿಂದ ತನ್ನನ್ನು ಮುಕ್ತಗೊಳಿಸಲಿ ಎಂದುಕೊಳ್ಳುತ್ತಾರೆ. ಅಥವಾ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುತ್ತಲೇ ಹೋಗುತ್ತಾರೆ. ಆದರೆ ಅದು ಸಮಸ್ಯೆಯನ್ನು ಮುಂದೂಡಬಹುದೇ ಹೊರತು, ಪರಿಹರಿಸುವುದಿಲ್ಲ.
ರಾಮೇಶ್ವರಿಯವರ ಬದುಕಿನಲ್ಲಿ ಆಗಿದ್ದೂ ಹಾಗೆಯೇ, ಅದೊಂದು ಸಾಮರಸ್ಯವಿಲ್ಲದ ದಾಂಪತ್ಯ. ದೈಹಿಕವಾಗಿಯಾಗಲಿ, ಮಾನಸಿಕವಾಗಿ ಆಗಲಿ ಒಬ್ಬರಿಗೊಬ್ಬರಿಗೆ ತಾಳಮೇಳವೇ ಇಲ್ಲ. ಕಡೆ ಕಡೆಗಂತೂ ಇಬ್ಬರ ನಡುವೆ ಯಾವುದೇ ಸಂಬಂಧ ಇಲ್ಲದೆ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಾ ಇರುತ್ತಾರೆ ಅಷ್ಟೆ. ಹಾಗೆ ಸಾಯುವವರೆಗೂ ಒಂದೇ ಸೂರಿನಡಿಯ ಅಪರಿಚಿತರ ಹಾಗೆ ಅವರು ಬದುಕಿಬಿಡಬಹುದಿತ್ತು, ಅಥವಾ ಬೇರಾಗಿ ಇಬ್ಬರೂ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಲು ಮತ್ತೊಂದು ಪ್ರಯತ್ನ ಮಾಡಬಹುದಿತ್ತು. ಆಕೆಯ ಗಂಡ ಮತ್ತು ಆಕೆ ಇಬ್ಬರೂ ಇಲ್ಲಿ ಸಂತ್ರಸ್ತರೆ. ಈಕೆ ಅದ್ಭುತ ಹೆಣ್ಣಾಗಿರಬಹುದು, ಆದರೆ ಸಾಂಗತ್ಯಕ್ಕೊದಗದ ಹೆಣ್ಣು ಎಷ್ಟು ಅದ್ಭುತವಾಗಿದ್ದರೆ ಏನು ಫಲ, ಆತನೂ ಒಳ್ಳೆಯವನೇ ಆಗಿರಬಹುದು, ಆದರೆ ಈಕೆಗೆ ಸಂಗಾತಿಯಾಗಲಾರದ ಗಂಡ ಹೇಗಿದ್ದರೆ ಏನು? ಇಲ್ಲಿ ಪ್ರಶ್ನೆ ಯಾರು ಕೆಟ್ಟವರು ಅಥವಾ ಯಾರು ಒಳ್ಳೆಯವರು ಎಂದು ಅಲ್ಲ, ಅವರಿಬ್ಬರೂ ಪರಸ್ಪರರಿಗೆ ಸರಿಯಾಗಿದ್ದರಾ, ಇಲ್ಲವಾ ಎನ್ನುವುದು ಇಲ್ಲಿ ಮುಖ್ಯ.

ಹಾಗೆ ಪರಸ್ಪರರಿಗೆ ಸರಿಯಾಗಿಲ್ಲದಾಗ ಜೊತೆಯಿದ್ದು ಇಬ್ಬರ ಮತ್ತು ಸುತ್ತ ಮುತ್ತಲಿನವರೆಲ್ಲರ ಜೀವನವನ್ನೂ ನರಕ ಮಾಡಿಕೊಳ್ಳುವ, ಮಾಡುವ ಬದಲು ಆಕೆ ಬೇರಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೊರಗಿನಿಂದ ನೋಡಿದವರಿಗೆ ಆಕೆ ತುಂಬಾ ಯೋಜನಾಬದ್ಧವಾಗಿ, ಒಂದು ಪ್ಲಾನ್ ಹಾಕಿ ಮದುವೆಯಿಂದ ತಪ್ಪಿಸಿಕೊಂಡಳು ಅನ್ನಿಸಬಹುದು. ಆದರೆ ಆಕೆ ಹಾಗೆ ಪ್ಲಾನ್ ಮಾಡಿದ್ದು ಹೌದಾದರೆ ಆಕೆ ಮೊದಲು ಪ್ಲಾನ್ ಮಾಡಿ ಮಾಡಿದ್ದು ಗಂಡನ ಮರು ಮದುವೆಯನ್ನು, ಗಂಡನಿಗೆ ಇನ್ನೊಂದು ಮದುವೆಯಾಗಿ, ಆ ಸಂಸಾರದಲ್ಲಿ ಆತನಿಗೆ ಒಂದು ಮಗುವಾದ ಮೇಲೆ ಈಕೆ ವಿಚ್ಚೇದನ ಕೇಳುತ್ತಾಳೆ. ಆತ ವಿಚ್ಚೇದನಕ್ಕೆ ಒಪ್ಪುವುದಿಲ್ಲ, ಈಕೆ ಕೋರ್ಟಿನಲ್ಲಿ ಹೊಡೆದಾಡಿ ವಿಚ್ಚೇದನ ಪಡೆಯಬೇಕಾಗುತ್ತದೆ, ಅದು ಬೇರೆ ವಿಷಯ.
ಆದರೆ ಇಲ್ಲಿ ಆಕೆ ತೆಗೆದುಕೊಂಡ ನಿರ್ಧಾರ ಆಕೆಯೊಬ್ಬಳನ್ನೇ ಅಲ್ಲ, ಆತನನ್ನೂ ಬೇಡದ ಮದುವೆಯಿಂದ ಪಾರುಮಾಡಿತು. ನೋಡಿ, ಎರಡನೆಯ ಹೆಂಡತಿ ಆತನ ಜೊತೆ ಸಂಸಾರ ಮಾಡಲಿಲ್ಲವಾ, ಜೊತೇಲಿ ಇರಲಿಕ್ಕಾಗಲಿಲ್ಲ ಅಂದರೆ ಈಕೆಯದೇ ತಪ್ಪು ಅಂತ ಹೇಳುವುದು ಸುಲಭ. ಆದರೆ ನಂತರ ಈಕೆ ಎರಡನೆಯ ಗಂಡನ ಜೊತೆ ಸಾಯುವವರೆಗೂ ಸುಖವಾಗಿ ಸಂಸಾರ ಮಾಡಿದಳು ಎನ್ನುವುದು ಹೇಗೆ ಈಕೆಯ ಮೊದಲನೆಯ ಗಂಡನನ್ನು ಕೆಟ್ಟವನಾಗಿಸುವುದಿಲ್ಲವೋ ಹಾಗೆ, ಎರಡನೆ ಹೆಂಡತಿ ಆತನೊಂದಿಗೆ ಬದುಕಿದಳು ಎನ್ನುವ ಕಾರಣ ಈಕೆಯನ್ನು ಅಪರಾಧಿಯನ್ನಾಗಿಸುವುದಿಲ್ಲ. One of them need not be bad, it is just that they were not good for each other. ಒಂದು ಮದುವೆ ಮುರಿಯಲು ಇಬ್ಬರಲ್ಲಿ ಒಬ್ಬರು ಕೆಟ್ಟವರಾಗಿರಲೇಬೇಕು ಎಂದೇನೂ ಇಲ್ಲ, ಅವರು ಪರಸ್ಪರರಿಗೆ ಸೂಕ್ತವಾಗಿರಲಿಲ್ಲ ಎನ್ನುವುದು ಸಹಾ ಒಂದು ಕಾರಣವಾಗುತ್ತದೆ. ಅದರಲ್ಲೂ ಸಂವೇದನಾಶೀಲತೆ ಇರುವವರಿಗೆ ಅದು ಮುಖ್ಯಕಾರಣವೇ ಆಗುತ್ತದೆ.
ಏನೇ ಆಗಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೊರಗಿನಿಂದ ಹೇಳುವುದು ಸುಲಭ, ಆದರೆ ’ಕೆಂಡದ ಮೇಲೆ ನಡೆಯುವವರಿಗೆ ಮಾತ್ರ ಗೊತ್ತು, ಕೆಂಡ ಅಂಗಾಲನ್ನು ಎಷ್ಟು ಸುಡುತ್ತದೆ’ ಎನ್ನುವ ನೋವು. ಮತ್ತು ಅಷ್ಟು ಸುಲಭವೂ ಅಲ್ಲ ಹೆಣ್ಣೀಗಾಗಲಿ, ಗಂಡಿಗಾಗಲಿ ಒಂದು ಬಂಧವನ್ನು ಕಳಚಿಕೊಳ್ಳುವುದು. ಪರಸ್ಪರ ಪ್ರೀತಿ ಇದ್ದರೆ, ಪರಸ್ಪರರು ಬೇಕು ಮತ್ತು ಬೇಕೇ ಬೇಕು ಅನ್ನಿಸಿದರೆ ಇಡೀ ಜಗತ್ತೇ ವಿರೋಧಿಸಿದರೂ ಜೊತೆಯಲ್ಲೇ ಇರುವ ಪ್ರಯತ್ನ ಮಾಡುತ್ತಾರೆ. ಆದರೆ ಹೊಂದಾಣಿಕೆ ಸಾಧ್ಯವಿಲ್ಲ ಅನ್ನಿಸಿದ ಮೇಲೆ ಬಲುಕಷ್ಟ ಜಗತ್ತಿಗಾಗಿ ಜೊತೆಯಲ್ಲಿರುವುದು. ಅಲ್ಲದೆ ಬಾಗಿಲು ಮುಚ್ಚಿದ ನಂತರ ತೆರೆದುಕೊಳ್ಳುವ ಸ್ವರ್ಗ ಅಥವಾ ನರಕದ ಅಂದಾಜು ಹೊರಗಿನಿಂದ ಬಾಗಿಲು, ಕಿಟಕಿ, ಗೋಡೆಗಳನ್ನು ನೋಡುವವರಿಗೆ ಖಂಡಿತಾ ಇರುವುದಿಲ್ಲ. ಹಾಗಾಗಿ ಈ ವಿಷಯದಲ್ಲಿ ಅವರವವರ ನಿರ್ಧಾರದ ಹೊಣೆ ಮತ್ತು ಹೊಣೆಗಾರಿಕೆಗೆ ಅವರಿಬ್ಬರು ಮತ್ತು ಅವರಿಬ್ಬರೇ ಬಾಧ್ಯರು.
ವಿಚ್ಚೇದನ ಆದ ನಂತರ ಬಾಲನ್ ಅವರೊಡನೆ ಮದುವೆಯಾಗಿ ಈಕೆ ಕಟ್ಟಿಕೊಳ್ಳುವ ಬದುಕು ಎಷ್ಟು ಅದ್ಭುತವಾಗಿರುತ್ತದೆ ಎಂದರೆ, ಅವರಿಬ್ಬರ ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಪರಸ್ಪರ ಪೂರಕವಾಗಿ, ಪರಸ್ಪರರನ್ನು ಒಳಗೊಂಡು, ಪರಸ್ಪರರನ್ನು ಬೆಳೆಸುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಮದುವೆ ಆಕೆಯ ನಿರ್ಧಾರ, ಅವಳ ಮೇಲೆ ಹೇರಲ್ಪಟ್ಟಿದ್ದಲ್ಲ. ಅಕಸ್ಮಾತ್ ನೋವು ಅನುಭವಿಸಲೇ ಬೇಕಾಗಿ ಬಂದರೆ, ಕಪ್ಪ ಕಟ್ಟಲೇಬೇಕಾಗಿ ಬಂದರೆ ನಾವು ನಮ್ಮ ಕ್ರಿಯೆಗಳಿಗೆ ಕಪ್ಪ ಕಟ್ಟುವುದು ಮೇಲು ಅಲ್ಲವಾ?
ಇರಲಿ, ನಾನು ಮೊದಲೇ ಹೇಳಿದ ಹಾಗೆ ಇದು ಒಂದು ಬದುಕನ್ನು ಸಮರ್ಥಿಸಲು ಬರೆದದ್ದಲ್ಲ, ಒಂದು ಜವಾಬ್ಧಾರಿಯುತ ವ್ಯಕ್ತಿತ್ವ, ತನ್ನ ಬದುಕಿನ ಬಗ್ಗೆ ಒಂದು ನಿರ್ಧಾರ ತೆಗೆದುಕೊಂಡಾಗ ಅದನ್ನು ನಾನು ಗೌರವಿಸಿದ ರೀತಿ ಅಷ್ಟೆ. ಅಷ್ಟಕ್ಕೂ ’ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ, ಮೋಡ ಕಟ್ಟೀತು ಹೇಗೆ’, ಬಂಧ ಬಿಗಿದೀತು ಹೇಗೆ? ಹಾ ಅಕ್ಕುವಿನ ಬಗೆಗಿನ ನನ್ನ ಒಂದು ಬೆರಗನ್ನು ಬರೆದು ಈ ಬರಹವನ್ನು ಮುಗಿಸುತ್ತೇನೆ,
ಅಕ್ಕುವಿನ ಬಳಿ ಒಂದು ಟುವಾಲಿರುತ್ತದೆ, ಪುರುಷರು ಬಳಸುವ ಕರವಸ್ತ್ರದಂತಿರುವ ಈ ಒಂದು ಟುವಾಲನ್ನು ಆತ್ಮ ಸಂಗಾತಿ ಮಾಡಿಕೊಂಡು, ಮಡಿಲಲ್ಲಿದ್ದರೆ. ಹೆಗಲ ಮೇಲಿದ್ದರೆ ಮಗು, ಮೂಗು ಒರೆಸಿಕೊಳ್ಳುವ ಕರವಸ್ತ್ರ, ಬಾಗಿಲು ಮುಚ್ಚಿ ಬಂಧನದಲ್ಲಿದ್ದರೂ ಆಕೆ ಕಿಟಕಿಯಿಂದ ಹಾರಿಸುವ ಸ್ವಾಭಿಮಾನದ ಬಾವುಟ, ಸಮಾರಂಭಕ್ಕೆ ಹೋದರೆ ತಿಂಡಿ ಕಟ್ಟಿಕೊಳ್ಳುವ ವಸ್ತ್ರ, ಹೀಗೆ ಟುವಾಲು ಅವಳ ಅನುದಿನದ ಸಂಗಾತಿ ಮಾಡಿಕೊಂಡಿರುತ್ತಾಳೆ ಅಕ್ಕು . ಎಲ್ಲಾ ಸರಿ ಆದರೆ ಅಕ್ಕುವಿಗೆ ಈ ಟುವಾಲ್ ಕೊಟ್ಟವರು ಯಾರು..? ಈ ಟುವಾಲ್ ಕೊಟ್ಟು ಅಕ್ಕುವಿನಂತಹ ಅಕ್ಕುವಿನ ಮನಸ್ಸಿನಲ್ಲಿ ಒಬ್ಬ ಹೆಣ್ಣನ್ನು ಇರಿಸಿ ಹೋದವರು ಯಾರು ….? ಯಾಕೋ ಈ ಟುವಾಲ್ ನನಗೆ ಅಕ್ಕು ಕಥೆಯಲ್ಲಿನ ಕವಿತೆಯಾಗಿ ಕಾಣುತ್ತದೆ. ಹಾ ಪ್ರೀತಿ ಇದ್ದರೆ, ಟುವಾಲ್ ಸಹ ಸಂಗಾತಿಯಾಗುತ್ತದೆ, ಇಲ್ಲದಿದ್ದರೆ…..

‍ಲೇಖಕರು G

4 July, 2014

9 Comments

  1. ಪ್ರೀತಿ

    bahaLa chennaagi barediddeeri sandhya! tallaNisuva baraha…

  2. bharathi b v

    Perfectly written article … Chennagide …

  3. vidyashankar

    ಜಗತ್ತಿನ ವಿರುದ್ಧ ಅದೊಂದು ರೀತಿ ಪ್ರತಿಭಟನೆ… ನೀರ್ಜಿವ ವಸ್ತುಗಳೆ ವಾಸಿ… ಪ್ರಶ್ನಿಸದ, ಟೀಕಿಸದ, ನೋಯ್ಯಿಸದ, ಹಂಗಿಸದ ಸಂಗಾತಿಗಳು

  4. Sushma Moodbidri

    ಪ್ರೀತಿ ಇದ್ದರಷ್ಟೇ ಅದರೊಂದಿಗೆ ಬದುಕು..
    -ಇಷ್ಟವಾಯಿತು ಬರಹ..
    ಬಹಳ ಎನ್ನುವಷ್ಟು…

  5. Jayashree B kadri

    Very moving and thought provoking Madam

  6. vasanthn

    ತುಂಬಾ ಉತ್ತಮ ಬರಹ. ನಿಮ್ಮ ಹಿಂದಿನ ಸಂಚಿಕೆಯ ಬರಹ ಕೂಡ ಅದ್ಬುತ. ಅದರೆ ಪ್ರಶ್ನೆ, ಅದೇ ಒಬ್ಬ ಪುರುಷ ಈ ರೀತಿ ಚಿಂತಿಸಿ ದಾಂಪತ್ಯದಿಂದ ಹೊರ ಬರಲು ಪ್ರಯತ್ನಿಸಿದರೆ (ಪುರುಷ ಸಮಾಜದ ಕೌರ್ಯವನ್ನು ಸಮರ್ಥಿಸುತ್ತಿಲ್ಲ), ಸಮಾಜ, ಆತನ ಕುಟುಂಬ ಅವನನ್ನು ನೋಡುವ ದೃಷ್ಟಿಕೋನವೇ ಬೇರೆ. ಕಷ್ಟವೋ ಸುಖವೋ ಕಟ್ಟಿಕೊಂಡ ಪತ್ನಿಯನ್ನು ಬಾಳಿಸುವುದು ಅವನ ಕೆಲಸ ಎನ್ನುವುದು ನಮ್ಮ ಸಮಾಜ.

  7. Sarala

    nijakku nirdhara tegedu kolluvudakke dhairya baruvudu, courage of conviction iddagale. idanna nimma lekhana bahala chennagi convey maadide Sandhya.

  8. kusumabaale

    One of the best.

  9. lalithasiddabasavaiah

    ನೀವು ಯೋಚಿಸಿರುವ ವಿಧಾನಕ್ಕೆ ನನ್ನ ಸಹಮತವಿದೆ. ಹೀಗೆ ವಿಶ್ಲೇಷಿಸದ ಹೊರತು ಇಂಥಹ ಬಲವಂತ ಮಾಘಸ್ನಾನದ ಪುಣ್ಯಸಂಚಯದಿಂದ ಸ್ತ್ರೀಗೆ ಬಿಡುಗಡೆಯಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading