ಒಂದು ರಾತ್ರಿ ದೇವಸ್ಥಾನದಲ್ಲಿ ಭಕ್ತರೆಲ್ಲಾ ಮನೆಗೆ ಹೋಗಿ, ಪೂಜಾರಿ ಸಹ ಪ್ರಾಂಗಣದ ಬಾಗಿಲು ಹಾಕಿ ಹೋದ ಮೇಲೆ ದೇವಸ್ಥಾನದ ಮೆಟ್ಟಿಲ ಶಿಲೆ ದೇವರ ವಿಗ್ರಹದ ಜೊತೆ ಮಾತಿಗಿಳಿಯಿತಂತೆ. ತುಂಬಾ ದುಖಃದಿಂದ ಅದು ದೇವರ ವಿಗ್ರಹವನ್ನು, ’ಅಲ್ಲಾ ನಾನೂ, ನೀನು ಇಬ್ಬರೂ ಒಂದೇ ಕಡೆ ಹುಟ್ಟಿದೆವು, ಪಕ್ಕ ಪಕ್ಕದಲ್ಲೇ ಬೆಳೆದೆವು, ಆದರೆ ಈಗ ನೋಡು, ನಿನ್ನನ್ನು ಪ್ರತಿ ದಿವಸ ಅಭಿಷೇಕ ಮಾಡಿ, ಅಲಂಕಾರ ಮಾಡಿ, ಪೂಜೆ ಮಾಡ್ತಾರೆ, ಘಮಘಮಿಸುವ ಹೂ, ಸಾಂಬ್ರಾಣಿ, ಧೂಪ ಹತ್ತಿಸಿ, ದೀಪ ಬೆಳಗಿಸುತ್ತಾರೆ. ಹಗಲು, ಸಂಜೆ ರುಚಿಯಾದ ನೈವೇದ್ಯ ಅರ್ಪಿಸುತ್ತಾರೆ. ಕಡೆಗೆ ನಿನ್ನ ಮೇಲೆ ಬಾಡಿದ ಹೂವನ್ನು ಸಹ ರಸ್ತೆಗೆ ಬಿಸಾಕದೆ, ಗಿಡದ ಮೇಲೆ ಯಾರೂ ತುಳಿಯದ ಜಾಗದಲ್ಲಿ ಹಾಕ್ತಾರೆ. ಅದೇ ನನ್ನ ಪರಿಸ್ಥಿತಿ ನೋಡು. ಪ್ರತಿ ದಿನ ನೂರಾರು ಜನ ನನ್ನನ್ನು ಮೆಟ್ಟುತ್ತಾ ನಡೆಯುತ್ತಾರೆ, ಬಿಸಿಲೆನ್ನದೆ, ಮಳೆಯೆನ್ನದೆ ನಾನು ಹೊರಗೆ ಬಿಸಾಕಲ್ಪಟ್ಟಿದ್ದೇನೆ. ಇದ್ಯಾವ ನ್ಯಾಯ ಹೇಳು’ ಅಂತ ಕೇಳಿತಂತೆ.
ಆಗ ಮೂರ್ತಿಯ ಶಿಲೆ ಹೇಳಿತಂತೆ, ’ಸ್ವಲ್ಪ ನಮ್ಮ ಮೊದಲಿನ ದಿನಗಳನ್ನು ನೆನಸಿಕೋ… ಆಗ ಉಳಿಯ ಪೆಟ್ಟು ಬಿದ್ದಾಗ ನೀನು ಪೆಡಸುಗೊಂಡು, ತಡೆಯದೆ ಪುಡಿಯಾಗುತ್ತಾ ಹೋದೆ, ನಾನು ಅಷ್ಟೂ ಉಳಿಯ ಪೆಟ್ಟುಗಳಿಗೆ ನನ್ನನ್ನು ತೆರೆದುಕೊಳ್ಳುತ್ತಾ, ಒಪ್ಪಿಸಿಕೊಳ್ಳುತ್ತಾ, ತಿದ್ದಿಕೊಳ್ಳುತ್ತಾ, ನೇರ್ಪಾಗುತ್ತಾ ಹೋದೆ. ನನ್ನ ಧಾರಣ ಶಕ್ತಿ ನನ್ನನ್ನು ಇಲ್ಲಿಗೆ ತಂದಿದೆ’ ಅಂತ.
ಮೊದಲ ಸಲ ಈ ಕಥೆ ಕೇಳಿದಾಗ ನಾನಿನ್ನೂ ಸ್ಕೂಲ್ ಹುಡುಗಿ. ಯಾಕೋ ಆ ಕಥೆ ನನಗೆ ತುಂಬಾ ಇಷ್ಟವಾಗಿ ಹೋಗಿತ್ತು. ಸಹನೆ, ತಾಳ್ಮೆ ಬದುಕಿನ ದೊಡ್ಡ virtue ಅನ್ನಿಸಿಬಿಟ್ಟಿತ್ತು. ಬಹುಷಃ ನಮ್ಮನ್ನು ಬೆಳೆಸುವ ರೀತಿಯೂ ಇದಕ್ಕೆ ಕಾರಣ ಅನ್ನಿಸುತ್ತದೆ. ನೆನಪು ಮಾಡಿಕೊಳ್ಳಿ ೨೦ – ೨೫ ವರ್ಷಗಳ ಹಿಂದೆ ಬರ್ತಿದ್ದ ಕಾದಂಬರಿಗಳು, ಸಿನೆಮಾಗಳು ಹೇಗಿದ್ದವು ಅಂತ? ಹೆಣ್ಣು, ಅದು ತಾಯಿ, ಪತ್ನಿ, ತಂಗಿ, ಮಗಳು ಯಾರೇ ಆಗಿರಬಹುದು, ಆಕೆ ಒಳ್ಳೆಯವಳಾಗಬೇಕಾದರೆ ಕಂಪಲ್ಸರಿ ತ್ಯಾಗ ಮಾಡಲೇಬೇಕು. ಆದರೆ ಈಗ ಅನ್ನಿಸುತ್ತದೆ ದೇವರ ವಿಗ್ರಹವಾಗುವುದು ಯಾವ ಪುರುಷಾರ್ಥಕ್ಕೆ ಅಂತ. ಪಾಪ, ಯಾರೂ ಜೊತೆಯಿಲ್ಲದೆ, ಗರ್ಭಗುಡಿಯ ಹೊಸಿಲು ದಾಟದೆ, ಕೂತಲ್ಲೇ ಇರಬೇಕು ಅಂದರೆ ಎಷ್ಟು ಕಷ್ಟ. ಎತ್ತರದಲ್ಲಿರುವುದು ಎಲ್ಲರಿಗೂ ಕಾಣುತ್ತದೆ, ಒಂಟಿಯಾಗಿರುವುದು ಗೊತ್ತಾಗುವುದೇ ಇಲ್ಲ ಅಂದ ಹಾಗೆ.
ಆಗ ಒಂದು ಸಿನೆಮಾ ಬಂದಿತ್ತು, ಬೆಂಕಿಯಲ್ಲಿ ಅರಳಿದ ಹೂವು. ಅದರಲ್ಲಿ ಹೀಗೆ ಮನೆಯ ಹಿರಿಯ ಮಗಳಾದ ಸುಹಾಸಿನಿ, ಮನೆ, ಅಣ್ಣ, ಅತ್ತಿಗೆ, ಅಣ್ಣನ ಮಕ್ಕಳು, ವಿಧವೆ ತಂಗಿ, ಇನ್ನೊಬ್ಬ ಓದುತ್ತಿರುವ ತಂಗಿ ಎಲ್ಲರ ಜವಾಬ್ದಾರಿ ತಗೋತಾಳೆ. ತನ್ನನ್ನು ಪ್ರೀತಿಸುತ್ತಿದ್ದವನಿಗೆ ಯಾವುದೇ ಕಮಿಟ್ ಮೆಂಟ್ ಕೊಡದ ಕಾರಣ ಅವನು ಕಡೆಗೆ ವಿಧವೆ ತಂಗಿಯನ್ನು ಮದುವೆ ಆಗ್ತಾನೆ. ನಮಗೆಲ್ಲಾ ಅವಳು ದೊಡ್ಡ ವಿಲನಿ. ಆದರೆ ತಂಗಿ ಈಗೀಗ ಪ್ರಾಕ್ಟಿಕಲ್ ಅನ್ನಿಸುತ್ತಾಳೆ. ಅವಳು ತೆಗೆದುಕೊಂಡ ನಿರ್ಧಾರದಿಂದ ಅಕ್ಕನಿಗೆ ಒಬ್ಬಳ ಜವಾಬ್ದಾರಿ ಆದರೂ ಕಮ್ಮಿ ಆಯಿತು ಅಲ್ಲವಾ?!
ಕಥೆ ಮುಂದುವರೆದು ಅಣ್ಣನಿಗೆ ಜವಾಬ್ದಾರಿ ಬಂದು ಇವಳು ತನ್ನನ್ನು ಪ್ರೀತಿಸುತ್ತಿದ್ದ ತನ್ನ ಬಾಸ್ ನನ್ನು ಮದುವೆ ಆಗಲು ಒಪ್ಪಿಕೊಳ್ಳುತ್ತಾಳೆ. ಮದುವೆ ದಿನ ಅಣ್ಣನ ಕೊಲೆ ಆಗುತ್ತದೆ, ಇವಳು ತನ್ನ ಅತೀ ತ್ಯಾಗದ ಪರಿಣಾಮದಿಂದ ತನ್ನ ಬಾಸ್ ಜೊತೆಗೆ ತನ್ನ ಪುಟ್ಟ ವಯಸ್ಸಿನ ತಂಗಿಯ ಮದುವೆ ಮಾಡಿಸುತ್ತಾಳೆ. ಅರೆ ಯಾಕೆ, ಇವಳು ಮದುವೆ ಆಗಿ, ಮಿಕ್ಕವರನ್ನೂ ಸ್ವಾವಲಂಬಿಗಳನ್ನಾಗಿ ಮಾಡಬಹುದಿತ್ತಲ್ಲ ಅಂತ ಈಗ ಅನ್ನಿಸುತ್ತದೆ. ಇವಳ ನಿರ್ಧಾರದಿಂದ ತನ್ನ ವಯಸ್ಸಿನ ಎರಡರಷ್ಟು ವಯಸ್ಸಿನ ಗಂಡನ್ನು ಮದುವೆಯಾದ ಆ ಪುಟ್ಟ ಹುಡುಗಿಯನ್ನು ಕಂಡರೆ ಈಗ ಪಾಪ ಅನ್ನಿಸುತ್ತದೆ.
ತಾಯಿಯ ಮಡಿಲು ಚಿತ್ರ ನೆನಸಿಕೊಳ್ಳಿ,.. ಮನೆಯ ಮಕ್ಕಳಿಗೆ ವಾಸ್ತವ ಪರಿಸ್ಥಿತಿಯ ಅರಿವು ಮೂಡಿಸದೆ, ತಾನೊಬ್ಬಳೇ ತನಗೆ ಸರಿಕಂಡ ನಿರ್ಧಾರ ಮಾಡಿದ ಹಿರಿ ಮಗಳು, ಅದರಲ್ಲಿ ಇನ್ನಿಲ್ಲದಂತೆ ಸೋತು, ಕಡೆಗೆ ಮನೆ ಮಂದಿಯೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಆಗಿನ ಕಾದಂಬರಿಗಳಾದರೂ ಇನ್ನೇನು, ತಮಾಷೆ ಅಂದರೆ, ಹೀಗೆ ಮಹಿಳೆಯರನ್ನು ತ್ಯಾಗಮಯಿಗಳನ್ನಾಗಿ ಉತ್ಪ್ರೇಕ್ಷಿಸುವುದರಲ್ಲಿ ಹೆಚ್ಚಿನ ಪಾಲು ಮಹಿಳಾ ಲೇಖಕಿಯರದೇ! ತ್ರಿವೇಣಿಯವರ ಕೆಲವು ಕಾದಂಬರಿಗಳಲ್ಲಿ ಹೆಣ್ಣಿನ ಸ್ವತಂತ್ರ ಪ್ರವೃತ್ತಿ ಕಂಡರೂ, ಅವು ಕಡೆಗೆ ಅನಿವಾರ್ಯವಾಗಿ ಸೋಲಲೇಬೇಕು, ಓದಬೇಕು ಅನ್ನುವುದೊಂದೇ ಆಸೆಯನ್ನಾಗಿಸಿಕೊಂಡ ಹೆಣ್ಣು ಮದುವೆಯಾದ ಮೇಲೂ ತನ್ನ ಆಸೆಯನ್ನು ಪೋಷಿಸಲು ಹೋರಾಡಿದರೆ ಅದು ಸಂಸಾರದಲ್ಲಿ ’ಅಪಸ್ವರ’ವಾಗಿ, ಕಡೆಗೆ ’ಅಪಜಯ’ವಾಗಿ ಕೊನೆಯಾಗುತ್ತದೆ. ಆ ಮಟ್ಟಿಗೆ ಉಷಾ ನವರತ್ನ ರಾಂ ಪರವಾಗಿಲ್ಲ. ಇನ್ನು ಸಾಯಿಸುತೆ ಮತ್ತು ಎಚ್ ಜಿ ರಾಧಾದೇವಿಯರು ಹೆಣ್ಣು ಅಂದರೆ ತ್ಯಾಗದ ಮೂಸೆಗೆ ಹಾಕಿ, ಬಿಸಿಲಿಗೂ ಇಡದೆ, ನೆರಳಿಗಿಟ್ಟು ಒಣಗಿಸಿದಂತವರು!

ಅಲ್ಲ ಸಮಾಜದ ಪ್ರತಿಬಿಂಬ ಸಾಹಿತ್ಯವಾ ಅಥವಾ ಸಾಹಿತ್ಯದ ಪರಿಣಾಮ ಸಮಾಜವಾ? ಆಗಿನ ಸಮಾಜ ಹಾಗೆ ಇದ್ದದ್ದಕ್ಕೆ ಆಗ ಬರುತ್ತಿದ್ದ ಚಲನ ಚಿತ್ರಗಳು, ಕಥೆ ಕಾದಂಬರಿಗಳು ಹಾಗೆ ಬರುತ್ತಿದ್ದವಾ ಅಥವಾ ಆಗಿನ ಕಥೆ ಕಾದಂಬರಿಗಳ, ಸಿನೆಮಾಗಳ ಪ್ರಭಾವದಿಂದ ಒಳ್ಳೆಯ ಹುಡುಗಿಯರೆಂದರೆ ಹೀಗೆ ಇರಬೇಕು ಅನ್ನುವ ರೋಲ್ ಮಾಡಲ್ ಇತ್ತಾ?
ಇತ್ತೀಚೆಗೆ ಮಿತ್ರಾ ವೆಂಕಟ್ರಾಜು ಅವರ ಕಥಾ ಸಂಕಲನದಲ್ಲಿ ’ಬಿಳಿ ನೈಲಾನ್ ಸೀರೆ’ ಅನ್ನುವ ಕಥೆ ಓದುತ್ತಿದ್ದೆ. ಅಲ್ಲಿ ಹೀಗೆ, ಮನೆಯ ದೊಡ್ಡ ಮಗಳು ತಾನು ಮದುವೆಯಾಗದೆ ಸಂಸಾರದ ಚುಕ್ಕಾಣಿ ಹಿಡಿಯುತ್ತಾಳೆ. ಆದರೆ ಮಿತ್ರಾ ಅವಳನ್ನು ದೇವತೆಯಾಗಿಸಿಲ್ಲ, ಅವಳು ಮನುಷ್ಯಳೇ, ತನ್ನ ವ್ಯರ್ಥವಾಗುತ್ತಿರುವ ಜೀವನ ಹಾಗು ಯೌವನದ ಬಗ್ಗೆ ಅಸಹನೆ ಇದೆ. ಮತ್ತು ಅದು ವ್ಯಕ್ತವಾಗುವ ರೀತಿಯನ್ನು ಮಿತ್ರಾ ತುಂಬಾ ಸಹಜವಾಗಿ ಮತ್ತು ಸೂಕ್ಷ್ಮವಾಗಿ ಹೇಳುತ್ತಾರೆ. ಅವಳ ರೀತಿ ಸರಿಯಾ ತಪ್ಪ ಅನ್ನುವುದನ್ನು ನಾನು ಇಲ್ಲಿ ಚರ್ಚಿಸುತ್ತಿಲ್ಲ, ಅವಳನ್ನು ದೇವತೆಯನ್ನಾಗಿಸದೆ, ಮನುಷ್ಯಳನ್ನಾಗಿ ಚಿತ್ರಿಸಲಾಗಿದೆ ಅನ್ನುವುದು ನನ್ನನ್ನು ಸೆಳೆದ ವಿಷಯ.
ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಆಂಟಿ ಇದ್ದರು, ಮದುವೆಯಾದಾಗ ಗಂಡನಿಗೆ ಬರುತ್ತಿದ್ದ ಸಣ್ಣ ಸಂಬಳದಲ್ಲೇ ಮೂರು ಮಕ್ಕಳ ಮನೆ ನಿಭಾಯಿಸುತ್ತಿದ್ದರು, ಬಂದ ನೆಂಟರನ್ನೆಲ್ಲಾ ನೋಡಿಕೊಳ್ಳುತ್ತಿದ್ದರು, ತನಗಾಗಿ ಏನನ್ನೂ ಹಟ ಮಾಡಿ ಕೇಳುತ್ತಿರಲಿಲ್ಲ, ಹೊಸ ಸೀರೆ, ಒಡವೆ, ಇಲ್ಲ ಏನೂ ಕೇಳಲೇ ಬೇಡಿ. ಆದರೆ ಮಕ್ಕಳನ್ನು ಮಾತ್ರ ಬೇಕಾದದ್ದು ಕೊಟ್ಟೇ ಬೆಳಸಿದರು. ಇವರಿಗೆ ಹುಷಾರಿರಲಿ ಬಿಡಲಿ, ಹಬ್ಬ ಅಂದರೆ ಹೋಳಿಗೆ ಆಗಲೇ ಬೇಕು. ಒಮ್ಮೆಯಂತೂ ಓಡುವ ಮಿಕ್ಸಿಯ ಬ್ಲೇಡಿಗೆ ಕೈ ಬೆರಳು ಸಿಕ್ಕಿ ಹಾಕಿಕೊಂಡು ಚರ್ಮ ಎದ್ದು, ಒಳಗಿನ ಮಾಂಸ ಕಾಣುವಂತಾಗಿತ್ತು. ಆದರೆ ಇವರ ಕರ್ತವ್ಯ ಪ್ರಜ್ಞೆ ಯಾವ ಮಟ್ಟ ಮುಟ್ಟಿತ್ತು ಎಂದರೆ, ಆ ಪರಿಸ್ಥಿತಿಯಲ್ಲಿ ಪುಟ್ಟ ಮಗಳಿಗೆ ಹೇಳಿ ಹೋಳಿಗೆ ತಟ್ಟಿಸಿಕೊಂಡು, ಇವರು ಕೂತು ಒಂದೂವರೆ ಸೇರು ಬೇಳೆ ಒಬ್ಬಟ್ಟು ಮಾಡಿದ್ದರು. ಕೊಡಿ, ನಾವು ಸಿದ್ಧ ಮಾಡಿ ಕೊಡುತ್ತೇವೆ ಎಂದು ಅಮ್ಮ ಕೇಳಿದರೂ ಇಲ್ಲ, ಅದೇ ಊರಿನಲ್ಲಿರುವ ಅವರ ನಾದಿನಿಗೆ ಫೋನ್ ಮಾಡೋಣವ ಅಂದರೂ ಕೇಳುತ್ತಿಲ್ಲ. ಇದು ಎಲ್ಲಿಗೆ ಹೋಗಿ ಮುಟ್ಟಿತೆಂದರೆ ಅವರು ತಮ್ಮ ಕಷ್ಟವನ್ನು ಎಂಜಾಯ್ ಮಾಡ್ತಾ ಇದ್ದಾರೇನೋ ಅನ್ನಿಸಿಬಿಡ್ತಾ ಇತ್ತು ಒಮ್ಮೊಮ್ಮೆ.
ಮತ್ತು ಅದನ್ನ ಪದೇ ಪದೇ, ಎಲ್ಲರೆದುರಿಗೂ ಹೇಳಿಕೊಳ್ಳೋದೂ ಅವರಿಗೆ ಒಂದು ಅಭ್ಯಾಸವೇನೋ ಅನ್ನೋ ಹಾಗೆ ಆಗಿ ಹೋಯ್ತು. ಹೆಣ್ಣು ಅಂದರೆ, ಹೆಂಡತಿ ಅಂದರೆ, ತಾಯಿ ಅಂದರೆ ತ್ಯಾಗ ಮಾಡುತ್ತಲೇ ತಮ್ಮ ಹಿರಿಮೆಯನ್ನು ಸಾಬೀತುಪಡಿಸಿಕೊಳ್ಳಬೇಕು ಅನ್ನುವಂತೆ. ದಿನ ಕಳೆದಂತೆ ಮಕ್ಕಳಿಗೆಲ್ಲಾ ಮದುವೆ ಆಯಿತು, ಸೊಸೆಯಂದಿರು ಮನೆಗೆ ಬಂದರು. ಅವರ್ಯಾರೂ ಈ ತ್ಯಾಗ, ಕಷ್ಟ ಸಹಿಷ್ಣುತೆಯ ಪ್ರಮಾಣ ವಚನ ಸ್ವೀಕರಿಸಿರಲಿಲ್ಲವಾದ್ದರಿಂದ ಇವರು ಹಾಕಿಕೊಟ್ಟ ನಿಯಮಾವಳಿಗಳಲ್ಲಿ ಬದುಕುವುದು ಅವರಿಗೆ ಅನಿವಾರ್ಯವಾಗಿರಲಿಲ್ಲ. ಸರಿ ಇನ್ನೇನು, ಇವರಿಗೆ ಮತ್ತೆ ಅದೇ ಕೆಲಸ, ಅದೇ ಬೆಳಗ್ಗೆ ಸೂರ್ಯನೊಡನೆ ಏಳುವುದು, ಅದೇ ಉಳಿದ ಅನ್ನ ತಿನ್ನುವುದು.
ಇವ್ಯಾವುದನ್ನೂ ಯಾರೂ ಅವರ ಮೇಲೆ ಯಾರೂ ಹೇರಿರಲಿಲ್ಲ, ಅವೆಲ್ಲವನ್ನೂ ಅವರು ತಾವಾಗೇ ಒಪ್ಪಿಕೊಂಡೇ ಖುಷಿಯಾಗೇ ಅನುಭವಿಸುತ್ತಿದ್ದರು. ಕೊನೆ ಕೊನೆಗೆ ಅವರನ್ನು ನೋಡಿದರೇ ನಮಗೆ ಸಂಕಟ ಆದ ಹಾಗೆ ಅನ್ನಿಸ್ತಿತ್ತು, ಯಾಕೆ ಹೀಗೆ? ಕಡೆಗೆ ಅವರು ಜೀವನದಲ್ಲಿ ಪಡೆದದ್ದಾದರೂ ಏನು? ಹಾಗೆ ಕಳೆದುಕೊಳ್ಳುತ್ತಾ ಹೋಗಿ, ಕೇವಲ ಅವರಿವರ ಹತ್ತಿರ ಮೆಚ್ಚಿಗೆ ತೆಗೆದುಕೊಳ್ಳುವುದೇ ಬದುಕಾ? ಅವರು ಜೀವನದಲ್ಲಿ ಪಡೆದ ಸುಖವಾದರೂ ಏನು?

ಒಮ್ಮೆ ಯೋಚಿಸಿ, ನಮ್ಮ ಅಜ್ಜಿ, ಅಮ್ಮಂದಿರೆಲ್ಲಾ ಹೀಗೆ ಯೋಚಿಸಿದವರಲ್ಲವಾ? ಅವರ ತ್ಯಾಗದಿಂದಲೇ ನಾವು ಅವರನ್ನು ಕಟ್ಟಿ ಹಾಕುತ್ತಿದ್ದೇವಾ? ಅಥವಾ ಸಣ್ಣ ಪುಟ್ಟ ಸ್ವಾರ್ಥ ಅಂದರೆ ಅದು ಅಷ್ಟು ದೊಡ್ಡ ಪಾಪವಾ? ಯಾಕೆ ಸಮಾಜದ ನಿರೀಕ್ಷೆಗಳು ಅವರನ್ನು ಕಟ್ಟಿ ಹಾಕಬೇಕು? ಮೊದಲಿಗೆ ಅವರೂ ಒಬ್ಬ ಸ್ವತಂತ್ರ ವ್ಯಕ್ತಿ ಅಲ್ಲವಾ?
ಸಣ್ಣ ಸಣ್ಣ ಖುಷಿ, ಸಣ್ಣ ಸಣ್ಣ ಆಸೆಗಳು, ಒಂದು ಸಿನೆಮಾ ನೋಡುವುದೋ, ಒಂದು ದಿನ ಅಡಿಗೆ ಏನೂ ಮಾಡದೆ ಸುಮ್ಮನಿರುವುದೋ, ಕಡೆಗೆ ತಲೆಗೆ ಒಂದು ಡೈ ಮಾಡಿಕೊಳ್ಳುವುದೋ, ಗೆಳತಿಯರೊಡನೆ ಒಂದು ಸುತ್ತಾಟ, ನಾಟಕ, ಮಾತುಕಥೆ … ಒಟ್ಟಿನಲ್ಲಿ ಅವರಿಗಿಷ್ಟವಾದ ಏನೋ ಒಂದು. ಯಾವಾಗಲೂ ದೇವರಾಗಲು ಜೀವನವನ್ನು ಸವೆಸದೆ ಮನುಷ್ಯರಾಗುವುದರಲ್ಲೂ ಎಷ್ಟು ಸುಖ ಇದೆ ಅಲ್ಲವಾ? ಮಕ್ಕಳಿಗೆ ಮನೆಯಲ್ಲಿದ್ದ ಊಟ ಬಡಿಸಿ, ತಾನು ನೀರು ಕುಡಿದು, ಸೆರಗಿನಂಚಿನಿಂದ ಕಣ್ಣೀರು ಒರೆಸಿಕೊಳ್ಳುವ ತಾಯಿಯನ್ನು ದೇವತೆ ಎಂದೇ ಪೂಜಿಸಿ ಪರವಾಗಿಲ್ಲ, ಆದರೆ ಹಾಗೆ ಆಕೆ ಇಲ್ಲ, ಆಕೆಗೂ ಆಸೆ, ವ್ಯಕ್ತಿತ್ವ ಇದೆ ಎಂದಾಗ ಅವಳನ್ನು ಮನುಷ್ಯಳನ್ನಾಗಿ ಆದರೂ ಗೌರವಿಸಬೇಕು ಅಲ್ಲವಾ?
ಮೊನ್ನೆ ತಾನೆ ಮದರ್ಸ್ ಡೇ ಆಯಿತು, ನಾವು ಅಮ್ಮನಿಗೆ ಕೊಡುವ ಗಿಫ್ಟ್ ಅಂದರೆ ಆಕೆಯನ್ನು, ಆಕೆಯ ವ್ಯಕ್ತಿತ್ವವನ್ನು ಗೌರವಿಸುವುದು, ನಮಗೆ ತಾಯಿ ಆಗುವುದಕ್ಕೂ ಮೊದಲು ಮತ್ತು ಅದಕ್ಕೂ ಮೀರಿ ಆಕೆ ಒಬ್ಬಳು ವ್ಯಕ್ತಿ ಎಂದು ಗುರುತಿಸಿ ಒಪ್ಪಿಕೊಳ್ಳುವುದು ಅನ್ನಿಸುತ್ತಿದೆ ನನಗೆ. ನೀವೇನಂತೀರಿ?
ಸಂಧ್ಯಾರಾಣಿ ಕಾಲಂ : ದೇವರೇ, ದೇವರಾಗುವುದು ಎಷ್ಟು ಕಷ್ಟ!
ನಿಮಗೆ ಇವೂ ಇಷ್ಟವಾಗಬಹುದು…

ಒಂದು ರಾತ್ರಿ ದೇವಸ್ಥಾನದಲ್ಲಿ ಭಕ್ತರೆಲ್ಲಾ ಮನೆಗೆ ಹೋಗಿ…. ಕಥೆ ಇಷ್ಟವಾಯಿತು.
ತುಂಬಾ ಇಷ್ಟ ಆಯ್ತು ಸಂಧ್ಯಾ.
ನಿಮ್ಮ ಸಹನೆ ಮತ್ತು ತಾಳ್ಮೆಯ ಪ್ರತಿ ನಡೆಯೋ ಅನುಭವಕ್ಕೆ ಬ೦ದಿದೆ….
good one 🙂
ಮೇಡ೦,
ಲೇಖನ ಚೆನ್ನಾಗಿ ಬರೆದಿದ್ದೀರಿ.
ದೇವರ ಈ ಕಷ್ಟದ ಬಗೆಗೆ ನಾನೂ ಒ೦ದು
ಪುಟ್ಟ ಅನಿಸಿಕೆ ಬರೆದಿದ್ದೆ ನಮ್ಮ ಬಿಇಎ೦ಎಲ್ ವಾರ್ಷಿಕೋತ್ಸವದ
ಸ೦ಧರ್ಭದಲ್ಲಿ. ಮತ್ತೆ ಮೈಲ್ ಮಾಡುತ್ತೇನೆ.
ವಿಶ್ವಾಸಿ
ಶ್ರೀನಿಧಿ
ಸಹಿಸಿ ಅದನ್ನು ಸಾರಿ ಸಾರಿ ಹೇಳುವುದು ತುಂಬಾ ಜನರ ಸ್ವಭಾವ.
ನನಗೂ ಅದೇ ಅನುಮಾನ ಸಹಿಸುವುದ್ಯಾಕೆ ? ಮತ್ತೆ ಅದರ ಬಗ್ಗೆ ಪ್ರಚಾರ ಯಾಕೆ ?
ಚೆನ್ನಾಗಿದೆ
swarna’s comment is perfect
ಯೋಚನೆಗೆ ಹಚ್ಚಿ, ಬದಲಾವಣೆಗೆ ಅಥವಾ ಸಹಜ ಮನುಷ್ಯತ್ವದೆಡೆಗೆ ಪ್ರೇರೇಪಿಸುವ ಲೇಖನ.
ವಿಚಾರದ ನಿರೂಪಣೆ ಬಹಳ ಆಪ್ತವಾಗಿದೆ ಮೇಡಂ… 🙂
’ಕಷ್ಟವನ್ನು ಎಂಜಾಯ್ ಮಾಡುವುದು’ ಈ ಮಣ್ಣಿನ ’ಕರ್ಮಯೋಗ’ದ ಫಲವೇ?! 🙂
True! Well said Sandhya…
True,… tumbaa ishta aytu…
ತ್ಯಾಗ ಅನ್ನುವದಕಿಂತ ಹೊಣೆಗಾರಿಕೆಯಲಿ ಹೆಣ್ಣು ತನ್ನತನವನ್ನು ಕಳೆದುಕೊಳ್ಳುತಿದ್ದಳು.ಒಟ್ಟೂ ಕುಟುಂಬ ಇದ್ದುದರಿಂದ ಹಾಗೂ ಮಕ್ಕಳ ಸಂಖ್ಯೆ ಅವಳನ್ನು ಆವರಿಸಿಕೊಂಡಿತ್ತು ತನ್ನ ಬಗ್ಗೆ ಯೋಚನೆ ಮಾಡಲು ಅವಳಿಗೆ ಸಮಯದ ಅಭಾವ ಇತ್ತೇನೋ ಎಂದು ಅನಿಸುತ್ತೆ.
ಸಂಧ್ಯಾ,
ನಿಮ್ಮ ಬರವಣಿಗೆ ಮನಸ್ಸೊಳಗೆ ಹೊಕ್ಕಿಬಿಡುವುದಕ್ಕೆ ಬಲವಾದ ಕಾರಣವಿದೆ – ನಿಮ್ಮ ಪದಗಳು ಹೇಳಬೇಕಾದ್ದನ್ನು ತಿಣುಕದೆ, ಆರ್ಭಟಿಸದೆ, ಹೇರದೆ ನೇರವಾಗಿ ಎದುರಿಗಿಟ್ಟುಬಿಡುತ್ತವೆ. ನಿಮ್ಮನ್ನು ಓದಿದ ಮೇಲೆ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಅಂಕಣಬರಹಗಳಿಗೇ ಮಾದರಿ ನಿಮ್ಮ ಕಾಲಂ.
ನಮ್ಮ ಅಮ್ಮಂದಿರು, ಮನೆಯ ಹಿರಿಹೆಂಗಸರು ಈ ತ್ಯಾಗಮಯಿ ಎಂಬ ಪಟ್ಟಿ ಹೊರಿಸಿಕೊಂಡು ಪಡುವ ಪಾಡುಗಳನ್ನು ಅದ್ಭುತವಾಗಿ ವಿವರಿಸಿದ್ದೀರಿ. ಪ್ರತಿ ಮನೆಯಲ್ಲಿಯೂ ಇಂಥ ಹೆಣ್ಣುಮಕ್ಕಳು ಇಲ್ಲದೇ ಇಲ್ಲ. ನನಗೆ ಸಾಮಾಜಿಕ ಕಾದಂಬರಿಗಳಲ್ಲಿನ ಇಂಥ ಪಾತ್ರಗಳ ಕಥೆ ಓದಿದಾಗಲೆಲ್ಲ ಕೋಪ ಒದ್ದುಕೊಂಡು ಬರುತ್ತ ಇತ್ತು. ಇನ್ನೊಂದು ವಿಷಯ ಎಂದರೆ ತಮ್ಮ ಆಕಾಂಕ್ಷೆಗಳಿಗೆ ಪ್ರಾಮುಖ್ಯತೆ ನೀಡುವ, ಮುನ್ನುಗ್ಗಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ವ್ಯಕ್ತಿತ್ವವಿರುವ ಹೆಣ್ಣುಮಕ್ಕಳು(ನಿಜಜೀವನದಲ್ಲೂ, ಹಳೆ ಸಾಮಾಜಿಕ ಕಾದಂಬರಿಗಳಲ್ಲು)ಅವಹೇಳನೆಗೆ ಗುರಿಯಾಗುತ್ತಾರೆ. ನೀವು ಹೇಳುವ ಹಾಗೆ ’ಒಳ್ಳೆಯ ಹುಡುಗಿ’ಯ ರೋಲ್ ಮಾಡಲಿನ ಪ್ರಭಾವ ನಿಜವಾಗಿಯೂ ಇದ್ದೇ ಇದೆ.
ಉದಾಹರಣೆಗೆ, ವಿಕ್ಟೋರಿಯನ್ ಕವಿ ಕವೆಂಟ್ರಿ ಪ್ಯಾಟ್ಮೋರ್ ತನ್ನ ಹೆಂಡತಿಯನ್ನು ‘ಪರಿಪೂರ್ಣ ಮಡದಿ’ಯೆಂದು ವರ್ಣಿಸಿ ಬರೆದ ಕವಿತೆ ’ದ ಏಂಜೆಲ್ ಇನ್ ದ ಹೌಸ್’ಇಪ್ಪತ್ತನೆಯ ಶತಮಾನದಲ್ಲೂ ಜನಪ್ರಿಯವಾಗಿತ್ತು. ಹೆಣ್ಣು ಹೇಗಿರಬೇಕೆನ್ನುವುದಕ್ಕೆ ಈ ಕವಿತೆಯನ್ನು ಉದಾಹರಿಸಲಾಗುತ್ತಿತ್ತು. ಅದು ಹೀಗೆ ಸಾಗುತ್ತದೆ:
Man must be pleased; but him to please
Is woman’s pleasure; down the gulf
Of his condoled necessities
She casts her best, she flings herself.
How often flings for nought, and yokes
Her heart to an icicle or whim,
Whose each impatient word provokes
Another, not from her, but him;
While she, too gentle even to force
His penitence by kind replies,
Waits by, expecting his remorse,
With pardon in her pitying eyes;
And if he once, by shame oppress’d,
A comfortable word confers,
She leans and weeps against his breast,
And seems to think the sin was hers;
Or any eye to see her charms,
At any time, she’s still his wife,
Dearly devoted to his arms;
She loves with love that cannot tire;
And when, ah woe, she loves alone,
Through passionate duty love springs higher,
As grass grows taller round a stone.
sariyagi heliddeeri sandhya. I agree with you entirely. hennu manushyalagi baalodu rudi maadikondare bereyavaru tanannau ondu pedestal mele ittu nodabekilla anta arthavagatte. A woman should enjoy all her roles and not become a martyr for her family, friends etc.
ellaru nanu helabekadannu heli mugisiddare. tumba chennagide .
ಎತ್ತರದಲ್ಲಿರುವುದು ಎಲ್ಲರಿಗೂ ಕಾಣುತ್ತದೆ, ಒಂಟಿಯಾಗಿರುವುದು ಗೊತ್ತಾಗುವುದೇ ಇಲ್ಲ ಅಂದ ಹಾಗೆ….. adbhutha saalu mattu baraha. Nannade maathugalu echo aagtiro haage ansithu
Your personality as a whole is epitomized in this write up Sandy! Loved it 🙂
Anjali Ramanna
sandhya.. tumba chennagi barediddeeri.
ಲೇಖನ ಓದಿ ಪ್ರತಿಕ್ರಯಿಸಿದ, ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು.
hmm.. houdalwaa..
ಸಂಧ್ಯಾರಾಣಿ ಜಿ, ಮೂರನೇ ಸರ್ತಿ ಓದಿದೆ ನೋಡ್ರಿ. ಬಹಳ ಚನ್ನಾಗಿ ಆಪ್ತತೆ ತುಂಬಿದ ಬರಹ. ಊರಲ್ಲಿಯ ಬಡ ತಮ್ಮನ ಹತ್ತಿರ ದಿನವೂ ಎದ್ದು ಬಿದ್ದು, ಮನೆಗೆಲಸದವಳ ಹಾಗೆ ಕೆಲಸಮಾಡುವ, ತನಗೆ ತಾನು ಬಿಡುವಿಲ್ಲದೆ ತೊಡಗಿಕೊಳ್ಳುವ ಅವ್ವ ನೆನಪಾಗುತ್ತಾಳೆ ಪದೇ ಪದೇ. ನನ್ನಲ್ಲಿದ್ದರೆ ಖಂಡಿತ ಖುಷಿಯಾಗಿರುತ್ತಾಳೆ ಎಂದೇನೂ ಖಾತ್ರಿ ಕೊಡದಿದ್ದರೂ, ಹಳ್ಳಿಯಲ್ಲಿಗಿಂತ ಕೊಂಚ ನೆಮ್ಮದಿ ನೀಡಲು ಹೆಣಗುತ್ತಿರುತ್ತೇನೆ. ಕೇಳುವುದಿಲ್ಲ, ಊಹೂಂ. ಸುತರಾಂ ಬರಲೊಪ್ಪಳು.ಅವಳಿಗೆ ನಾನು ನನ್ನ ಹೆಂಡತಿ ಕೆಲಸಕ್ಕೆ ಹಚ್ಚದಿರುವುದೇ ಅವಳ ಬೇಜಾರು. ಸುಮ್ಮನೆ ಎಷ್ಟೂಂತ ಖಾಲಿ ಕೂಡಬೇಕು ಎಂಬ ಅಳಲು ಅವಳದು. ಬಡ ತಮ್ಮನೇ ಅವಳ ನೆಮ್ಮದಿಯ ನೆಲೆ, ನೆಲ. ಎಲ್ಲಿಯಾದರೂ ನೆಮ್ಮದಿಯಾಗಿರಲಿ ಎಂದುಕೊಂಡರೂ, ಅವಳು ಪಡುವ ಪಡಿಪಾಟಲು ತಮ್ಮನಿಗೂ ಇಷ್ಟವಿಲ್ಲ. ಆದರೂ ಬದುಕಿನ ಬಂಡಿಯನ್ನು ತನ್ನಿಷ್ಟದಂತೆ ಎಳೆಯುತ್ತ ಇದ್ದಾಳೆ ಬೆಳಗಾಂವಿಯ ಹಳ್ಳಿಯಲ್ಲಿ. ಇದೆಲ್ಲವನ್ನು ತಮ್ಮ ಬರಹ ನೆನಪು ಮಾಡಿಸಿಕೊಟ್ಟಿತು.
sandya mam, u wonderfuly analysed the practicality, I fully agree practicality is different and vedantha is different. rather than insubstantial we have to be practicle. I feel we have to think pros and cons and decide are we here want to be god/devil. always thyaga won’t yeilds good result. we girls means can’t we eligeble to have happy and comfortable life? we should not hurt others that is humanity but considering that it doesn’t mean that we have to hurt ourselves.
nice
ಬಹಳ ಆಪ್ತವಾದ ಹಾಗೂ practical ಬರಹ. ನಗರಗಳಿಗಿಂತಲೂ ಗ್ರಾಮೀಣ ಭಾಗದ ಮಹಿಳೆಯರು ಅರಿಯಬೇಕಾಗಿರುವ ಹಾಗೂ ಅವರಿಗೆ ಅವಶ್ಯವಿರುವ ವಿಷಯ.ನಮ್ಮ ಹಳ್ಳಿಗಳಲ್ಲಿ ಇಂದಿಗೂ ಪತ್ನಿ-ತಾಯಿ ಅಂದರೆ Take it granted ಅಂತಾ ತಿಳಿದುಕೊಂಡಿದ್ದಾರೆ. ಆದರ್ಶ ಮಹಿಳೆ ಅಂದರೆ ತ್ಯಾಗಮೂರ್ತಿ ಆಗಿರಲೇಬೇಕೆಂಬ ಅಲಿಖಿತ ನಿಯಮವಿದೆ. ಇದು ತೊಲಗಲೇಬೇಕು. ನಮ್ಮ ಅತ್ತಿಗೆಯರು,ಚಿಕ್ಕಮ್ಮ-ದೊಡ್ಡಮ್ಮಂದಿರು ಇದರಿಂದ ಹೊರಬಂದು ತಮ್ಮನ್ನು ತಾವೇ ಮನೆಯ ಜಂಜಾಟವನ್ನೆಲ್ಲಾ ತಾವೇ ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುವದನ್ನು ನಿಲ್ಲಿಸಲೇಬೇಕು. ಮನೆಯವರೆಲ್ಲರೂ ಇವರಿಗೆ ಸಹಕಾರ ಹಾಗೂ ಪ್ರೋತ್ಸಾಹ ಕೊಡಬೇಕಾಗಿದೆ. ಸೋದರತ್ತೆ(ತಂದೆಯ ಅಕ್ಕ-ತಂಗಿ)ಯರು,ವಿಧವೆಯಾದ ಕಾರಣಕ್ಕೋ ಅಥವಾ ಗಂಡ ಬಿಟ್ಟ ಕಾರಣಕ್ಕೊ ಮನೆಯಲ್ಲಿದ್ದರೆ ಅವರನ್ನು ಆಳಿನಂತೆ ದುಡಿಸಿಕೊಳ್ಳ್ಳುವದೂ ನಿಲ್ಲಬೇಕಾಗಿದೆ. “ಕೆರೆಗೆ ಹಾರ”ದ ಭಾಗೀರತಿ ಈಗಿನ ಹೆಣ್ಣುಮಕ್ಕಳಿಗೆ ಆದರ್ಶವಾಗುವ ಅವಶ್ಯಕತೆ ಇಲ್ಲಾ…ಕಾಲ ಬದಲಾಗಿದೆ.ಅದಕ್ಕೆ ತಕ್ಕಂತೆ ಸಮಾಜವೂ ಬದಲಾಗಬೇಕು.
sandhyakka.houdalwa anistu.bahala chennagide.avadhi ge nanu bareebekide.barreela?
kerege haara bhagirathi nenapadalu
nija..vaastvavannu tereditta baraha..hrudaya tattitu..
ಉತ್ತಮವಾಗಿದೆ.