
ನಾಳಿದ್ದು ಭಾನುವಾರ ’ಜೋಗಿ ರೀಡರ್’ ಬಿಡುಗಡೆ ಆಗುತ್ತಿದೆ. ಏನಿದು ’ಜೋಗಿ ರೀಡರ್’? ಜೋಗಿಯವರ ಇದುವರೆಗಿನ ಪುಸ್ತಕಗಳ ಒಂದು ದಿಕ್ಸೂಚಿ ಇದು. ಅವರ ಬರಹಗಳಲ್ಲಿ ಕಾಡುವ ಭಾಗಗಳನ್ನು ಆರಿಸಿ, ಒಂದೆಡೆಗೆ ಸೇರಿಸಿಟ್ಟ ಪುಸ್ತಕ ಇದು. ಆ ಪುಸ್ತಕಕ್ಕಾಗಿ ನಾನ ಬರೆದ ಪ್ರಸ್ತಾವನೆ ಇದು :
ಜೋಗಿಯ ಜೋಳಿಗೆಯಲ್ಲಿ…
’ನಾನು ಜ್ಯೋತಿಯ ಗಂಡ ಗಿರೀಶ್’ ಎಂದು ಸಭೆಯೊಂದರಲ್ಲಿ ‘ಜೋಗಿ’ ತಮ್ಮನ್ನು ಪರಿಚಯಿಸಿಕೊಂಡಿದ್ದರು. ಅದು ೧೯೯೭-೯೮ ರಲ್ಲಿ, ಹಾಗೆ ಈ ಜ್ಯೋತಿಯ ಗಂಡ ಜಾನಕಿಯೂ ಹೌದು ಎಂದು ಗೊತ್ತಾಯಿತು. ಈ ನಾನಾ ಹೆಸರಿನ ಜೋಗಿ ಬರೆಯದ ವಸ್ತುವೇ ಇಲ್ಲ, ದುಡಿಸಿಕೊಳ್ಳದ ಪ್ರಕಾರವೇ ಇಲ್ಲ ಎನ್ನುವಂತೆ ಬರೆದಿದ್ದಾರೆ. ಅವರ ಬರಹದ ವಿಶೇಷತೆ ಎಂದರೆ ಅವರ ತೆರೆದ ಮನಸ್ಸು. ಯಾವುದೇ ’ಇಸಂ’ ಗಳ ಪಟ್ಟಿ ಕಟ್ಟುಕೊಳ್ಳದೆ, ಯಾವುದೇ ಸಾಹಿತ್ಯ ಚಳುವಳಿಗೆ ತಮ್ಮನ್ನು ಮಿತಿಗೊಳಿಸದೆ ಜೋಗಿ ಬರೆಯುತ್ತಾರೆ. ಅವರ ಬರಹದಲ್ಲಿ ನಮಗೆ ಕಾಣಸಿಗುವುದು ಜಗತ್ತಿನೆಡೆಗೆ ಒದು ಬೆರಗು ಕಣ್ಣು ಮತ್ತು ಆ ಬೆರಗನ್ನು ಸ್ವೀಕರಿಸಿ, ಬರಹವಾಗುವ ಮೊದಲು ಅದಕ್ಕೊಂದು ಕಲೆಯ ಕ್ಯಾನ್ ವಾಸ್ ಒದಗಿಸಿ, ತಮ್ಮ ಗ್ರಹಿಕೆಯ ಉಡುಗೆ ತೊಡಿಸಿ ಅದನ್ನು ಅಕ್ಷರಕ್ಕಿಳಿಸಬಲ್ಲ ಛಾಪು.
ಜೋಗಿ ವಾಚಿಕೆಯನ್ನು ಸಂಪಾದಿಸಲು ನನಗಿರುವ ಅರ್ಹತೆ ಎಂದರೆ ಓದು ಓದು ಮತ್ತು ಓದು. ನಾಲ್ಕನೇ ಕ್ಲಾಸಿನಲ್ಲಿ ಕಾದಂಬರಿಗಳನ್ನು ಓದಲು ಶುರು ಮಾಡಿದವಳು ನಾನು. ಅಂದಿನಿಂದ ಒಂದು ದಿನ ಸಹ ಪುಸ್ತಕ ಓದದೆ ಕಳೆದವಳಲ್ಲ. ಕಥೆ, ಕವನ, ಲೇಖನ, ಜೀವನ ಕಥೆ, ಆತ್ಮ ಕಥನ, ಪತ್ತೇದಾರಿ,ಮರ್ಡರ್ ಮಿಸ್ಟರಿ, ಅಸ್ತಿತ್ವ ವಾದ, ಅಯಾನ್ ರಾಂಡ್, ಪ್ರವಾಸ ಕಥನ ಹೀಗೆ ಆಸಕ್ತಿ ಹುಟ್ಟಿಸುವ ಎಲ್ಲವನ್ನೂ ಓದಿದ್ದೇನೆ. ದೇವನೂರನ್ನೂ ಓದಿದ್ದೇನೆ,ಬೈರಪ್ಪನವರ ಗೃಹಭಂಗ, ಪರ್ವವನ್ನೂ ಓದಿದ್ದೇನೆ, ಇಷ್ಟವಾದದ್ದನ್ನು ಮತ್ತೆ ಮತ್ತೆ ಓದಿದ್ದೇನೆ. ಹೀಗೆ ಬರಹವನ್ನು ಯಾವುದೇ ಹಣೆಪಟ್ಟಿಯಿಲ್ಲದೆ ಸ್ವೀಕರಿಸಬಲ್ಲೆ ಮತ್ತು ಓದಿ ಆಸ್ವಾದಿಸಬಲ್ಲೆ. ಜೋಗಿ ಬರಹವೂ ಹಾಗೇ. ಯಾವುದೇ ಕಣ್ಣು ಪಟ್ಟಿ ಕಟ್ಟಿಕೊಳ್ಳದೆ ಇಷ್ಟವಾದದ್ದನ್ನೆಲ್ಲಾ ಓದುತ್ತಾ ಹೋಗುವುದು ಆಳವಾಗಿ ಒಳಗೆ ಉಳಿದಿದ್ದರ ಬಗ್ಗೆ ಬರೆಯುವುದು.
ಯಾವುದೇ ಸಮಾರಂಭವಾಗಲಿ ಜೋಗಿ ಅಥವಾ ಜಯಂತ ಕಾಯ್ಕಿಣಿಯವರಿದ್ದರೆ ಅವರ ಬಗ್ಗೆ ಮಾತನಾಡುವವರು ಹೇಗಾದರೂ ಮಾಡಿ, ಮಾತಿನ ನಡುವೆ ತೂರಿಸಿ ಹೇಳುವ ವಿಷಯ ಜೋಗಿಯವರ ಬಿಡುವಿಲ್ಲದ ಬರವಣಿಗೆ ಮತ್ತು ಜಯಂತರ ಚಿತ್ರಗೀತೆ ಸಾಹಿತ್ಯ. ಬಹುಶಃ ಅವರು ಜೋಗಿಯವರ ಅಂಕಣ ಬರಹಗಳ ವ್ಯಾಪ್ತಿ ಮತ್ತು ನೋಟವನ್ನು ಅರ್ಥೈಸಿಕೊಂಡಿರುವುದಿಲ್ಲ ಮತ್ತು ಸಿನಿಮಾ ಹಾಡುಗಳ ಸೀಮಿತತೆಯಲ್ಲಿಯೇ ಜಯಂತರ ಕಾವ್ಯಾತ್ಮಕತೆಯ ಝಲಕ್ ಅನ್ನು ಗಮನಿಸಿರುವುದಿಲ್ಲ.
ಮೊದಲೇ ಜೋಗಿಯವರ ಎಲ್ಲಾ ಕೃತಿಗಳನ್ನು ಓದಿದ್ದರೂ ವಾಚಿಕೆಯನ್ನು ಸಂಪಾದಿಸುವ ಕಾರಣಕ್ಕಾಗಿ ಮತ್ತೊಮ್ಮೆ ಎಲ್ಲವನ್ನೂ ಓದಿದೆ, ಓದಲು ಇದ್ದ ಕಾರಣ ಇದಾದರೂ ಅದು ಬದಿಗೆ ಸರಿದು ಓದುವ ಖುಷಿಗೆಂದೇ ಮತ್ತೊಮ್ಮೆ ಎಲ್ಲಾ ಪುಸ್ತಕಗಳನ್ನೂ ಓದಿದೆ, ಹೀಗೆ ಓದುವ ಖುಷಿಗೆಂದೇ ಒಂದು ಪುಸ್ತಕ ತನ್ನನ್ನು ಓದಿಸಿಕೊಳ್ಳುವುದಾದರೆ, ಓದಿದ ಮೇಲೆ ನಮ್ಮಲ್ಲಿ ಪ್ರಶ್ನೆಗಳನ್ನ ಹುಟ್ಟುಹಾಕಿ ನಂತರ ಉತ್ತರದ ಹುಡುಕಾಟ ನಡೆಸಲು ಕಾರಣವಾದರೆ, ಪುಸ್ತಕ ಓದುವ ಮೊದಲಿನ ನಾವು, ಓದಿದ ನಂತರದ ನಾವು ಇಬ್ಬರೂ ಭಿನ್ನ ಅನ್ನಿಸಿದರೆ, ಭಿನ್ನವಾಗಿ ಯೋಚಿಸಬಲ್ಲೆವು ಅನ್ನಿಸಿದರೆ, ಆ ಮಟ್ಟಿಗೆ ಪುಸ್ತಕ ಸಾರ್ಥಕ ಎಂದು ನನ್ನ ಅಭಿಪ್ರಾಯ.
ಇದುವರೆವಿಗೂ ಜೋಗಿ ಬರೆದ ಪುಸ್ತಕಗಳು ೩೨ (೩೦ ಅವರ ಕೃತಿಗಳು ಮತ್ತು ೧ ಅವರ ಸಂಪಾದಿತ ಕೃತಿ, ಸದಾಶಿವ ಅವರ ಆಯ್ದ ಕತೆಗಳು. ಇದರ ಹೊರತಾಗಿ ಅವರ ‘ಬಾಲಿವುಡ್ ಘಾಸಿಪ್’ ಎಂಬ ಅಂಕಣ ಬರಹ ಪುಸ್ತಕ ಲಭ್ಯವಿಲ್ಲದ ಕಾರಣ ಅದರಲ್ಲಿನ ಲೇಖನಗಳನ್ನು ಬಳಸಿಕೊಂಡಿಲ್ಲ).
ಜೋಗಿಯವರ ಬರಹ ಒಂದು ನದಿಯಂತೆ ಪ್ರಾರಂಭವಾಗಿ ಈಗ ಸಾಗರವಾಗಿದೆ. ಅವರು ಬದುಕಿನ ನದಿಯಿಂದ ಅನುಭವಗಳನ್ನು ಮೊಗೆದು ಬರೆದವರು.ಜೋಗಿಯವರ ಬರಹದ ವ್ಯಾಪ್ತಿ ಬಹಳ ವಿಸ್ತಾರವಾದದ್ದು ಮತ್ತು ಅಷ್ಟೇ ವೈವಿಧ್ಯಮಯವಾದದ್ದು. ಅವರು ‘ಲಂಕೇಶ್ ಪತ್ರಿಕೆ’ ಓದುವ ಬಬ್ರುವಾಹನನ ತಂದೆ ಬಗ್ಗೆ ಬರೀತಾರೆ, ತಂದೆಯಿಂದ ಮಗನಿಗೆ ಬಳುವಳಿ ಆಗುವ ಸಾಕ್ಷೀಪ್ರಜ್ಞೆ ಲಂಕೇಶ್ ಬಗ್ಗೆ ಬರೀತಾರೆ. ಸಂದರ್ಶಕನ ಜೊತೆಗೊಂದು ಮುಖಾಮುಖಿ ಕಥೆಯಲ್ಲಿ ಅಸಂಗತ ವನ್ನು ಹೇಳುತ್ತಲೇ, ’ಕಾಲು ಶತಮಾನ’ ಎನ್ನುವ ಕಥೆಯಲ್ಲಿ ಅನಂತಮೂರ್ತಿಯವರ ‘ಭಾರತೀಪುರ’ ಕಥೆಯಲ್ಲಿನ ಒಂದು ಸಾಲನ್ನು ಎತ್ತಿಕೊಂಡು ಅದಕ್ಕೆ ನಾನಾ ಧ್ವನ್ಯಾರ್ಥಗಳನ್ನು ಕೊಡುತ್ತಾ ಹೋಗುತ್ತಾರೆ.
ಇದ್ದಕ್ಕಿದ್ದಂತೆ ’ಸುಬ್ಬಲಕ್ಷ್ಮಿಯವರ ಸುಪ್ರಭಾತ ಎಷ್ಟು ಸೆಕ್ಸಿ’ ಎಂದು ಹೇಳಿ ನಮ್ಮಲ್ಲಿ ಇನ್ನಿಲ್ಲದೆ ಬೆರಗು ಹುಟ್ಟಿಸಿಬಿಡುತ್ತಾರೆ. ’ಲೇಖಕನ ಹೆಸರು’ ಎನ್ನುವ ಕಥೆ ಸಾಧಾರಣವಾಗಿ ಶುರುವಾಗಿ ನಂತರ ಬೆಳೆಯುತ್ತಾ ಹೋಗುವ ರೀತಿಯೇ ಚೆನ್ನ. ಲೇಖಕನ ಹೆಸರನ್ನು ಹುಡುಕುವ ಕಥೆ ಬರಬರುತ್ತಾ ಆ ಹುಡುಕಾಟ ನಡೆಸುವವನನ್ನೇ ಕಥೆಯಾಗಿಸಿಬಿಡುತ್ತದೆ. ಇದು ಕಥೆಯಾಗಲು ಸಾಧ್ಯವೇ ಅನ್ನಿಸುವ ಹೊತ್ತಿಗೆ ಜೋಗಿ ಅದನ್ನು ಕಥೆಯಾಗಿಸಿ ನಮ್ಮ ಮುಂದೆ ಇಟ್ಟುಬಿಡುತ್ತಾರೆ.
’ಜೋಗಿ ಕಥೆಗಳು’ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ ಸುರೇಂದ್ರನಾಥ್ ಅವರು ’ಹೀಗೆ ಕಥೆ ಹೇಳುವ ತಂತ್ರ ಜೋಗಿಗೆ ಸಿದ್ಧಿಸಿದೆ. ಎಷ್ಟರ ಮಟ್ಟಿಗೆ ಎಂದರೆ ಮೂರೇ ಪ್ಯಾರಾಗಳಲ್ಲಿ ಕಥೆಯ ಪಾತ್ರಗಳು ನಮ್ಮ ನಡುವಿನವೇ ಏನೋ ಅನ್ನಿಸಿಬಿಡುತ್ತಾರೆ’ ಎನ್ನುತ್ತಾರೆ. ವಿಶೇಷ ಎಂದರೆ ಇದಕ್ಕೆ ಜೋಗಿ ಎಲ್ಲೂ ಅಬ್ಬರದ ಅಲಂಕಾರಿಕ ಭಾಷೆ ಬಳಸಿಕೊಳ್ಳುವುದಿಲ್ಲ, ಮತ್ತು ಎಲ್ಲೂ ಕಥೆಗಾಗಲಿ, ಪಾತ್ರಗಳಿಗಾಗಲಿ ಅನಗತ್ಯ ತೂಕ, ಗಾಂಭೀರ್ಯ ಹೇರುವುದಿಲ್ಲ. ನಮ್ಮ ನಡುವಿನ ಕಥೆ ಆಯ್ದುಕೊಳ್ಳುತ್ತಲೇ, ನಮ್ಮ ನಡುವಿನ ಪಾತ್ರಗಳ ಹೆಸರು ಹೆಕ್ಕಿಕೊಳ್ಳುತ್ತಲೇ, ಕಥೆಯ ಒಂದು ತಿರುವಿನಲ್ಲಿ ನಮ್ಮನ್ನು ಬೆಚ್ಚಿ ಬೀಳಿಸುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಇವರ ’ಇನ್ನೊಬ್ಬ’ ಕಥೆ. ಕಥೆ ಮುಗಿದ ನಂತರವೂ ಅದರ ಗುಂಗು ನಮ್ಮಲ್ಲಿ ಗುಂಗಿ ಹುಳುವಿನಂತೆ ಕಾಡುತ್ತಲೇ, ಕೊರೆಯುತ್ತಲೇ ಇರುತ್ತದೆ.
ಜೋಗಿಯವರ ಕಥೆಗಳಲ್ಲಿ ನಾವು ಕಾಣುವ ತಾಕಲಾಟ ಎಂದರೆ ಮಹಾನಗರ ಮತ್ತು ಕಾಡಿನ ನಡುವಿನ ಮನೆ, ಉಪ್ಪಿನಂಗಡಿಯ ಲೋಕದ್ದು. You can take the boy out of country but you cannot take out the country out of the boy ಅಂತ ಒಂದು ಮಾತಿದೆ. ಹುಡುಗನನ್ನು ಹಳ್ಳಿಯಿಂದ ಹೊರ ತರಬಹುದೇ ಹೊರತು, ಹಳ್ಳಿಯನ್ನು ಹುಡುಗನಿಂದ ಹೊರತರುವುದು ಸಾಧ್ಯವಿಲ್ಲ ಅಂತ. ಆದರೆ ಜೋಗಿಯ ಒಳಗಿರುವ ಗುರುವಾಯನಕೆರೆ ಮತ್ತು ಉಪ್ಪಿನಂಗಡಿಯೇ ಅವರು ಮಹಾನಗರವನ್ನು ತಮ್ಮದಾಗಿಸಿಕೊಳ್ಳುವ ತಾಕತ್ತು ಮತ್ತು ಅಂಗಳ ಎರಡನ್ನೂ ಒದಗಿಸಿಕೊಟ್ಟಿದೆ. ಅಂಗಳದಲ್ಲಿ ಮಹಾನಗರವನ್ನೂ,ಮನೆಯೊಳಗೆ ಉಪ್ಪಿನಂಗಡಿಯನ್ನೂ ಇಟ್ಟುಕೊಂಡು ಬರೆಯುವುದರಿಂದಲೇ ಅವರ ಕಥೆಗಳಿಗೆ ಆ ಸಾಂದ್ರತೆ ಮತ್ತು ಗಟ್ಟಿತನ ಬಂದಿದೆ. ಹಾಗಾಗಿಯೇ ’ಲೇಖಕ ಬದುಕುವಾಗ ಸಮಾಜದ ನಡುವೆ, ಬರೆಯುವಾಗ ದ್ವೀಪದೊಳಗೆ ಇರಬೇಕು’ಎನ್ನುವುದು ಸಾಧ್ಯವಾಗದೇನೋ ಎನ್ನುವ ಹಳಹಳಿಕೆಯ ನಡುವೆಯೇ ಅವರ ಕಥೆ ಮತ್ತು ಅಂಕಣ ಒಮ್ಮೊಮ್ಮೆ ಅದನ್ನು ಸಾಧ್ಯವಾಗಿಸಿಬಿಡುತ್ತವೆ.
ಅವರ ಒಂದು ಕಥೆಯಲ್ಲಿ ಈ ಮಹಾನಗರದಲ್ಲಿ ಅಚಾನಕ್ಕಾಗಿ ಸಂಧಿಸುವ ಒಂದು ಗಂಡು-ಹೆಣ್ಣು ಅವಳ ಮನೆ ಸೇರುತ್ತಾರೆ. ಪರಸ್ಪರ ಸೇರುತ್ತಾರೆ. ಕಾಫಿ ಬೇಕೆನಿಸಿ ಆತ ಕೆಳಗಿಳಿದು ಹಾಲು ತೆಗೆದುಕೊಂಡು ವಾಪಸ್ ಬರುವಾಗ ಅವನಿಗೆ ಅರಿವಾಗುತ್ತದೆ, ಅವನು ಅವಳ ಹೆಸರನ್ನೇ ಕೇಳಿಲ್ಲ, ಎಷ್ಟನೆಯ ಮಹಡಿ ಎಂದು ಗೊತ್ತಿರಬಹುದಾದರೂ ಅಲ್ಲಿ ಎಷ್ಟನೆಯ ನಂಬರಿನ ಮನೆ ಎಂದು ಗೊತ್ತಿಲ್ಲ,ಹೀಗೆ ಈ ಕಡೆ ಹಾಲು ಕೈಲಿ ಹಿಡಿದುಕೊಂಡು ನಿಂತ ಅವನು ಮತ್ತು ಬರಲಿರುವ ಹಾಲಿಗಾಗಿ ಕಾಯುತ್ತಾ ನಿಂತ ಅವಳ ಕಥೆ ಹೇಳುತ್ತಾರೆ. ಹೀಗೆ ಮಹಾನಗರದ ಅಸ್ತಿಭಾರವಿಲ್ಲದ ಬದುಕಿನ ಬಗ್ಗೆ ಅದರ ಕ್ಷಣಿಕತೆಯ ಬಗ್ಗೆ ನಾವು ಯೋಚಿಸದ ಕನ್ನಡಿ ಹಿಡಿದು ಜೋಗಿ ನಮ್ಮನ್ನು ಬೆಚ್ಚಿಬೀಳಿಸಿಬಿಡುತ್ತಾರೆ. ಅಂತಹುದೇ ಮತ್ತೊಂದು ಕಥೆ, ಕತ್ತಲಲ್ಲಿ ರೈಲು ನಿಂತಾಗ, ಅರೆ ಬರೆ ಕಂಡ ಮುಖವೊಂದರಲ್ಲಿ ಕಂಡ ಅಮ್ಮನ ಹುಡುಕಾಟಕ್ಕೆ ಹೊರಟ ಹುಡುಗನದ್ದು. ಒಂದು ಘಳಿಗೆಯ ನೆರಳು ಬೆಳಕಿನ, ಮುಖದ ಆ ಕ್ಷಣದ ಕವಳಿಕೆಗಳಲ್ಲಿ ಕಂಡ ಮುಖದಲ್ಲಿ ಕಾಣಿಸುವ ಅಮ್ಮನ ನೆರಳನ್ನು ಮತ್ತೆ ಅವನು ಕಾಣಬೇಕೆಂದರೆ ಆ ಎಲ್ಲವೂ ಹಾಗೆ ಸಂಧಿಸಬೇಕು. ಇದರಲ್ಲಿ ಬರುವ ಬದುಕಿನ ರೂಪಕ ನಮ್ಮನ್ನು ಕಾಡುತ್ತದೆ.
ಅವರ ಬರಹದ ಮತ್ತೊಂದು ವಿಶೇಷ, ಅವರ ಭಾಷೆಯ ಸೊಗಸು ಮತ್ತು ಮೂರ್ತತೆ. ಇದು ಅರಿವಾಗುವುದು ಅವರ ‘ಸೂಫಿ ಕಥೆಗಳು’ ಓದಿದಾಗ. ಅಲ್ಲಿರುವ ಎಲ್ಲವೂ ಪುಟ್ಟ ಪುಟ್ಟ ಕಥೆಗಳು. ಆ ಪುಟ್ಟ ಕಥೆಯಲ್ಲಿ, ಕೆಲವೇ ಕೆಲವು ಶಬ್ಧಗಳಲ್ಲಿ ಕಥೆಯನ್ನು ಜೋಗಿ ಹಿಡಿದಿಡುವ ಪರಿ ಅನನ್ಯ.
ಜೋಗಿಯವರ ಮೊದಲ ಕಥಾಸಂಕಲನದಲ್ಲಿ ಒಂದು ಕಥೆ ಬರುತ್ತದೆ, ’ಅದರ ಕಾರಣ ಬೀದಿ…’ ಎಂದು. ಅಲ್ಲಿ ಒಂದು ಘಟನೆ, ’ನಾರಾಯಣ ಸ್ವಾಮಿ ಬೆಂಗಳೂರಿಗೆ ಮರಳಿ ಬರುವ ಪ್ರಸಂಗ’ ಇದೆ. ಆ ಪ್ರಕರಣ ಗುಂಪಿನ ಪ್ರತಿಯೊಬ್ಬರ ಮನಸ್ಸಿಗೂ ಒಂದೊಂದು ರೀತಿ ಕಂಡಿರುತ್ತದೆ. ಇದು ನಾರಾಯಣ ಸ್ವಾಮಿ ಅವರ ಕಥೆಯಲ್ಲ, ಇದು ಅವರೆಲ್ಲರೂ ನಾರಾಯಣ ಸ್ವಾಮಿಯನ್ನು ಅರ್ಥೈಸಿಕೊಂಡ ಕಥೆ. ಕಥೆ ಮುಗಿಯುವಷ್ಟರಲ್ಲಿ ನಮಗನ್ನಿಸೋದು, ಕಥೆ ಇರುತ್ತದೆ ಅಷ್ಟೆ, ಅದು ಓದುವವರ ಮನಸ್ಸಿನಲ್ಲಿ ಪ್ರತ್ಯೇಕ ಕಥೆಯಾಗಿ ಬೆಳೆಯುತ್ತಾ ಹೋಗುತ್ತದೆ. ಅವರವರ ಸಂಸ್ಕಾರ ಮತ್ತು ಗ್ರಹಿಕೆಗಳಿಗೆ ತಕ್ಕಂತೆ.
ಇನ್ನೊಂದು ಕಥೆಯಲ್ಲಿ ಜೋಗಿಯವರೇ ಹೇಳುವ ಹಾಗೆ, ’ಜೊತೆಗೆ ಕತೆಯೆಂದರೆ ಒಂದು ಅದ್ಭುತ ಆರಂಭ, ನಡುವೆ ಆಕಸ್ಮಿಕ ಬೆಳವಣಿಗೆ, ಕೊನೆಯಲ್ಲಿ ಚಕಿತ ಮುಕ್ತಾಯವಿರುವ ಕಥಾನಕವಲ್ಲ ಅಂತ ಇತ್ತೀಚೆಗೆ ಅನ್ನಿಸತೊಡಗಿದೆ…….ಬಹುಶಃ ಯಾರಾದರೂ ಒಳ್ಳೆಯ ಕತೆ ಯಾವುದು ಅಂತ ಹೇಳಿದರೆ ’ಮೊನಾಲಿಸ’ಅನ್ನುವಷ್ಟರ ಮಟ್ಟಿಗೆ ನನ್ನ ಕಥೆಯ ಕುರಿತ ಆಸಕ್ತಿ ಬದಲಾಗಿದೆ’.
ಇದೇ ಭಾವವನ್ನು ಅವರ ಕಾದಂಬರಿ ’ನದಿಯ ನೆನಪಿನ ಹಂಗು’ವಿನಲ್ಲೂ ಕಾಣಬಹುದು ಅಲ್ಲಿ ಕಥೆ ಒಂದು ನದಿಯಂತೆ. ಕಾದಂಬರಿ ಆಗಿರುವುದು ಅದರ ಒಂದು ಭಾಗ ಮಾತ್ರ. ಅದಕ್ಕೆ ಮೊದಲೂ ಸಹ ಕಥೆ ಇತ್ತು, ಮುಂದೆ ಸಹ ಇರುತ್ತದೆ. ದಂಡೆಯಲ್ಲಿ ಕುಳಿತು ನೋಡುವವರ ಪಾಲಿಗೆ ಒಂದೊಂದು ದಿಕ್ಕಿನಿಂದ ಕಥೆ ಒಂದೊಂದು ರೀತಿ ಕಾಣುತ್ತಿರುತ್ತದೆ. ಅಲ್ಲಿ ಅದು ಕಥೆಗಾರನ ಅಥವಾ ಕಾದಂಬರಿಕಾರನ ಕಥೆಯಾಗಿ ಉಳಿಯುವುದಿಲ್ಲ, ಓದುವವರಲ್ಲಿ ಕಥೆ ಬೆಳೆಯುತ್ತಾ ಹೋಗುತ್ತದೆ, ಓದುವವರ ಸಿದ್ಧತೆ, ಸ್ವಭಾವ, ವಯೋಮಾನಕ್ಕನುಸಾರವಾಗಿ. ಜೋಗಿಯವರ ಸುಮಾರು ಕಥೆಗಳು ಹೀಗೆಯೇ ಒಂದೇ ಕಾಲದಲ್ಲಿ ಬೇರೆ ಬೇರೆ ನೋಟದಲ್ಲಿ ನಡೆಯುವ ಕಥೆಗಳಾಗಿರುತ್ತದೆ.
ಕುಮಾರವ್ಯಾಸ ಇವರೊಡನೆ ಸದಾ ಇರುವ ಆತ್ಮಸಖ, ಹೀಗಾಗಿಯೇ ಜೋಗಿಯವರ ಕಥಾಸಮಯ ಈಗಿನ ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳುತ್ತಾ,ಹೊಸ ಹೊಸ ರೂಪದಲ್ಲಿ, ಹೊಸ ಸವಾಲುಗಳಿಗೆ ಹಳೆಯ ಪಾತಳಿಯಲ್ಲಿ ಹೊಸ ಜವಾಬುಗಳನ್ನಿಟ್ಟುಕೊಂಡು ಬರುತ್ತಲೇ ಇರುತ್ತದೆ.
‘ಫೇಸ್ ಬುಕ್.ಕಾಮ್ / ಮಾನಸ ಜೋಶಿ’ ಗೆ ಮುನ್ನುಡಿ ಬರೆದ ಗೋಪಾಲ ಕೃಷ್ಣ ಕುಂಟಿನಿ ಜೋಗಿಯವರ ಅಭಿಮಾನಿ ಒಬ್ಬರು ಹೇಳಿದ ಮಾತನ್ನುನೆನಪಿಸಿಕೊಳ್ಳುತ್ತಾರೆ, ’ಜೋಗಿ ಅವರ ಬರಹಗಳು ನಮ್ಮ ಮನೆಯ ಬೆಕ್ಕಿನ ಹಾಗೆ ಸಾರ್, ನಮ್ಮನ್ನು ಸವರಿಕೊಂಡು ತಾನೂ ಅನುಭವಿಸುತ್ತಾ ನಮಗೂ ಅನುಭವ ನೀಡುತ್ತಾ ಹೋಗುತ್ತವೆ’, ಆದರೆ ಅದು ಅಷ್ಟೇ ಅಲ್ಲ, ಜೋಗಿಯವರ ಕಥೆಗಳ ವಿಶೇಷವೆಂದರೆ ಅದನ್ನು ಈಗ ನೀವು ಓದಿ, ಕಥೆ ದಕ್ಕಿತು ಎಂದುಕೊಂಡು ಪುಸ್ತಕ ಮುಚ್ಚಿಟ್ಟು, ಮತ್ಯಾವಾಗಲೋ ಒಮ್ಮೆ ಓದಿದಾಗ ಅದು ಬೇರೆಯದೇ ಅನುಭವವವನ್ನು ನಮಗೆ ಕಟ್ಟಿಕೊಡುತ್ತದೆ.
ಬಹಳಷ್ಟು ಸಲ ಜೋಗಿಯವರನ್ನೂ ಕಾಡುವ ಒಂದು ಪ್ರಶ್ನೆ ಮತ್ತು ಮರುಕಳಿನುವ ಒಂದು ವಿಶ್ಲೇಷಣೆ ಎಂದರೆ ಬದುಕಿನ ಸುಖ ಇರುವುದು ಪಯಣದಲ್ಲೋ ಅಥವಾ ಗಮ್ಯದಲ್ಲೋ? ಗಮ್ಯ ಮುಖ್ಯ ಆಗದಿದ್ದರೆ, ಗುರಿ ತಲುಪುವ ಭರವಸೆ ಇಲ್ಲದಿದ್ದರೆ ಎಂತಹ ಪಯಣವೂ ಕ್ರಮೇಣ ಬೋರು ಹೊಡೆಸಲು ಶುರು ಮಾಡುತ್ತದೆ, ಆದರೆ ಗಮ್ಯವೇ ಮುಖ್ಯ ಎಂದು ’ ಅತ್ತಿತ್ತ ನೋಡದೆ’ ಹೊರಟರೆ ಗಮ್ಯದ ಬಗೆಗಿನ ನಿರೀಕ್ಷೆ ಅತಿಯಾಗುತ್ತಾ ಹೋಗುತ್ತದೆ. ಇದೇ ತಾಕಲಾಟ ಅವರ ‘ಸೀಳುನಾಲಿಗೆ’ಯಲ್ಲಿನ ‘ಪರ್ಯಾಯ’ ಎನ್ನುವ ಕಥೆಯಲ್ಲಿ ಕಾಣುತ್ತದೆ. ಅಷ್ಟೇ ಅಲ್ಲ ಜೋಗಿಯವರು ನಂತರ ಯಾವಾಗಲೋ ಬರೆದ ಅವರ ಕಥೆ ‘ಯಾಮಿನಿ’ಯ ಮೊಳಕೆ ಸಹ ಈ ಕಥೆಯಲ್ಲಿ ಕಾಣಸಿಗುತ್ತದೆ. ಆ ತಾಕಲಾಟವನ್ನೇ ಒಂದು ಸುಂದರ ಬರಹವನ್ನಾಗಿಸುವ ಜೋಗಿ ಆ ಬರಹವನ್ನು ಕೊನೆಗಾಣಿಸುವುದು ಹೀಗೆ, ’….ಅದಕ್ಕೇ ತಿರುಗಿ ನೋಡಬೇಕು ಅನ್ನಿಸಿದಾಗ,ನಿಂತು ತಿರುಗಿ ನೋಡಿ ಬಿಡಿ’ ಅಂತ!
ಜೋಗಿಯವರ ’ಹಲಗೆ ಬಳಪ’ ಪುಸ್ತಕದ ಮುನ್ನುಡಿಯಲ್ಲಿ ಜಿ ಎನ್ ಮೋಹನ್ ರವರು ಒಂದು ಮಾತು ಹೇಳುತ್ತಾರೆ, ’ಬರಹ ಹೇಗಿರಬೇಕು ಎನ್ನಲೂ, ಏನು ಓದಬೇಕು ಎಂದು ದಿಕ್ಕು ತೋರಿಸಲೂ ಆಗ ಗುರುಗಳಿದ್ದರು. ಇಲ್ಲಿ ಬರಹಗಾರರು ನಿರೂಪಿಸಿರುವ ಕಥನಗಳನ್ನು ಓದಿದರೂ ಅದು ಸುಸ್ಪಷ್ಟ. ಅದು ಗುರುವಾಗಿರಬಹುದು, ಮನೆಯ ಯಾರೊಬ್ಬರೂ ಆಗಿರಬಹುದು, ಆದರೆ ಈ ಎಲ್ಲವೂ ಈಗ ಮುಕ್ಕಾಗುತ್ತಿರುವ ದಿನಗಳಲ್ಲಿ, ಎಲ್ಲವೂ ಅತಿ ವೇಗದಲ್ಲಿ ಎನ್ನುವ ದಿನಗಳಲ್ಲಿ, ಎಲ್ಲವೂ ಚಿಟಿಕೆ ಹೊಡೆಯುವುದರಲ್ಲಿ ಎನ್ನುವ ದಿನಗಳಲ್ಲಿ ಜೋಗಿ ಈ ಪುಸ್ತಕದ ಮೂಲಕ ಗುರುವಾಗುತ್ತಿದ್ದಾರೆ. ಜೋಗಿಯ ಈ ’ಹಲಗೆ ಬಳಪ’ದ ಲಾಭ ಈಗ ಗೊತ್ತಾಗದಿರಬಹುದು; ಆದರೆ ನಾಳೆ ಎಲ್ಲೋ ತಾಕುವ ಕವಿತೆಯ ಸಾಲುಗಳು, ಕಾಡುವ ಕಥೆಗಳು, ನಮ್ಮನ್ನು ಒಂದು ಚಣ ಯೋಚನೆಗೆ ಹಚ್ಚುವ ವಿಮರ್ಶೆ ಎಲ್ಲದರ ಹಿಂದೆ ಜೋಗಿ ಇರುತ್ತಾರೆ, ಅವರ ಈ ‘ಹಲಗೆ ಬಳಪ’ ಇರುತ್ತದೆ ಎನ್ನುವುದು ಸತ್ಯ.’ ನಿಜ. ಬರವಣಿಗೆ ಟೂ ಮಿನಟ್ಸ್ ನೂಡಲ್ ಆಗಿರುವ ಈ ದಿನಮಾನದಲ್ಲಿ ಈ ಪುಸ್ತಕದ ಮಹತ್ವ ಇರುವುದು ಏನೇನು ಓದಬೇಕು ಮತ್ತು ಬರೆಯುವಾಗ ಯಾವುದನ್ನು ಗಮನಿಸಬೇಕು ಎನ್ನುವುದನ್ನು ಸರಳವಾಗಿ, ಉದಾಹರಣೆಗಳ ಮೂಲಕ ಜೋಗಿ ಅನಾವರಣ ಗೊಳಿಸುವ ಪರಿಯಲ್ಲಿ.
ಜೋಗಿಯವರ ಎಲ್ಲಾ ಬರಹಗಳನ್ನೂ ಎದುರಿಗಿಟ್ಟುಕೊಂಡು ಕೂತಾಗ ಅದನ್ನು ಜೋಗಿಯ ಅಂಕಣ ಬರಹ ಮತ್ತು ಇತರ ಬರಹಗಳು ಎಂದು ಪ್ರತ್ಯೇಕಿಸಬಹುದೇನೋ. ಜೋಗಿಯವರ ಕಥೆಗಿಂತಲೂ, ಕಾದಂಬರಿಗಿಂತಲೂ ನಮ್ಮನ್ನು ಕಾಡುವುದೆಂದರೆ, ಆವರಿಸಿಕೊಳ್ಳುವುದೆಂದರೆ ಅವರ ಅಂಕಣ ಬರಹ. ಅಲ್ಲಿ ಕ್ಯಾಮೆರಾಗಿರುವ ಕ್ವಚಿತ್ತತೆಯ ಜೊತೆಜೊತೆಯಲ್ಲಿಯೇ ಒಂದು ಕ್ಷಣ ನಿಂತು ನೋಡುವ ಒಂದು pause ಇದೆ. ಕಥೆ ಓದುವುದು ಹೇಗೆ, ಕವನ ಅನುಭವಿಸುವುದು ಹೇಗೆ ಎನ್ನುವುದರಿಂದ ಹಿಡಿದು, ಈ ಕಾಲಮಾನದಲ್ಲಿ ಬರೆಯುವ ಬರಹಗಾರನ ತಲ್ಲಣಗಳ ಬಗ್ಗೆ, ಯಾವುದೋ ಲಾರಿ ತಾನೇ ತಾನಾಗಿ ಚಲಿಸಿ, ಅಡ್ಡಾದಿಡ್ಡಿ ನಡೆದು, ’ಎಲ್ಲೋ ಬೀಸಿದ ಗಾಳಿ, ಎಲ್ಲೋ ಹಚ್ಚಿಟ್ಟ ಹಣತೆಯನ್ನು ಆರಿಸುವುದರ ಬಗ್ಗೆ’, ಹಠಾತ್ತಾಗಿ ನಗರದ ನಡುವೆ ಕಂಡು ಬರುವ ಒಂಟೆ ನಮ್ಮಲ್ಲಿನ ಸಂದೇಹಗಳನ್ನೂ, ಭಯಗಳನ್ನು ಅನಾವರಣಗೊಳಿಸುವ ಬಗ್ಗೆ…. ಎಲ್ಲದರ ಬಗ್ಗೆಯೂ ಜೋಗಿ ಬರೆಯುತ್ತಾ ಹೋಗುತ್ತಾರೆ.
ಕವಿತೆಯಷ್ಟೇ ಅಲ್ಲ ಕವಿಯನ್ನು ಹೇಗೆ ಓದಬೇಕು ಅನ್ನುವುದನ್ನೂ ಅವರು ನಿಕಷಕ್ಕೊಡ್ಡುತ್ತಾ ಹೋಗುತ್ತಾರೆ. ಕವಿತೆಯ ಸಾಲುಗಳ ಮೂಲೆಯಲ್ಲಿರಬಹುದಾದ ಒಂದು ಮಿಂಚಿಗೆ ದಾರಿ ತೋರಿಸಿ ಅದರ ಬೆಳಕಿನಲ್ಲಿ ಹೇಗೆ ಕವಿತೆ ಸಂಪೂರ್ಣ ಭಿನ್ನ ಧ್ವನಿ ಪಡೆಯಬಹುದು ಎಂದು ಹೇಳುತ್ತಾ ಹೋಗುತ್ತಾರೆ. ಕೆ ಎಸ್ ನ ಅವರ’ಬಿಸಿನೀರಿದೆಯೇ ಮೀನಾ’ ಎನ್ನುವ ಪ್ರಶ್ನೆಗೆ ’ಬೇಕಾದಷ್ಟಿದೆಯಮ್ಮ ಕಣ್ಣಲ್ಲೂ ಜೊತೆಗೆ’ ಎನ್ನುವ ಉತ್ತರ ಹೇಗೆ ನಾವು ಕವನವನ್ನು ನೋಡುವ ರೀತಿಯನ್ನೂ ಕಲಿಯಬೇಕು ಎಂದು ತಿಳಿಸಿಕೊಡುತ್ತದೆ. ಅಡಿಗರನ್ನ, ಕೆ ಎಸ್ ನ ರನ್ನ,ಶಾಲ್ಮಲೆಯ ಪಾಟೀಲರನ್ನ, ಕುರುಪ್ ರನ್ನ, ಡಿ ಆರ್ ನಾಗರಾಜರನ್ನ ಎಲ್ಲರನ್ನೂ ಜೋಗಿ ತಮ್ಮ ಮಾಂತ್ರಿಕ ಬರವಣಿಗೆಯಿಂದ ನಮ್ಮ ಕಣ್ಮುಂದೆ ಕಟ್ಟಿಕೊಟ್ಟುಬಿಡುತ್ತಾರೆ.
ಜೋಗಿಯವರ ಅಗಾಧವಾದ ಓದಿನ ವಿಸ್ತಾರ ನಮಗೆ ಅರಿವಾಗುವುದು ಅವರ ಅಂಕಣಗಳನ್ನು ಓದಿದಾಗಲೇ. ಆದರೆ ಆ ಓದು ಅವರ ಯಾವ ಬರಹದಲ್ಲೂ ಕೇವಲ ಪುನರುತ್ಪತ್ತಿ ಆಗಿಲ್ಲ, ಅವೆಲ್ಲವೂ ಜೋಗಿಯವರ ಮನಸ್ಸಿನಾಳಕ್ಕೆ ಇಳಿದು, ಅಲ್ಲಿರುವ ಗುರುವಾಯನಕೆರೆ, ಉಪ್ಪಿನಂಗಡಿಯನ್ನು ಹಾದು, ಕಾಡಿನ ನೀರವದಲ್ಲಿ ತಂಗಿ, ಜೋಗಿಯವರ ’ನೋಟ’ದ ಮೂಸಿಯಲ್ಲಿ ಕರಗಿ ಒಂದು ಗಟ್ಟಿ ಪಾಕ ಹೊರಬರುತ್ತದೆ, ’ಮಾಹಿತಿಯನ್ನು ಕಲೆಯಾಗಿಸಬಲ್ಲ’ ಕಸುಬುಗಾರಿಕೆ ಜೋಗಿಯವರಿಗೆ ಒಲಿದಿದೆ. ಅದಕ್ಕೆಂದೇ ನನಗೆ ಇಂದಿಗೂ ಜೋಗಿಯವರಿಗಿಂತ ಜಾನಕಿ ಹೆಚ್ಚು ಹತ್ತಿರ…
ಅವರ ’ನದಿಯ ನೆನಪಿನ ಹಂಗು’ ಕಾದಂಬರಿಗೆ ಮುನ್ನುಡಿ ಬರೆದ ಗುರುಪ್ರಸಾದ್ ಕಾಗಿನೆಲೆಯವರು ಹೇಳುವ ಹಾಗೆ, ’ಕೆ ಎಸ್ ನ ಅವರ ಕವಿತೆಯಾಗಲೀ, ಪ್ರಗತಿಶೀಲರ ಕಥೆಯನ್ನಾಗಲೀ ಅಥವಾ ಕುಮಾರವ್ಯಾಸರ ಭಾರತವನ್ನಾಗಲೀ –ಆಯಾ ಕೃತಿಗಳನ್ನು ಮತ್ತೊಮ್ಮೆ ಓದುವಂತೆ ಅದರ ಬಗ್ಗೆ ಬರೆಯಬಲ್ಲರು. ಬರೆದದ್ದು, ಬರೆಸಿಕೊಂಡದ್ದು ಎರಡೂ ಇಷ್ಟವಾಗುವ ಹಾಗೆ ಬರೆಯುವುದು ಅವರಿಗೆ ಸ್ವಭಾವತಃ ಒದಗಿಬಂದಿದೆ…’.
ಇವರ ಈ ಶೈಲಿಯೇ ಇವರ ಕಥೆಗಳನ್ನು ಹತ್ತಿರವಾಗಿಬಿಡುತ್ತದೆ ಮತ್ತು ಕೆಲವೊಮ್ಮೆ ಅದೇ ಕಥೆಯನ್ನು ತೀರಾ ಸರಳಗೊಳಿಸಿಬಿಡುತ್ತದೇನೋ ಎನ್ನುವ ಆತಂಕ ಸಹ ಕಾಡುತ್ತದೆ. ಆದರೆ ’ನದಿಯ ನೆನಪಿನ ಹಂಗು’ ಭಾಷೆಯಲ್ಲಿ, ತಂತ್ರದಲ್ಲಿ ಎಲ್ಲೂ ಭಾರವಾಗದೆ ಮತ್ತು ಆ ಕಾರಣದಿಂದಲೇ ಕಥೆಯಲ್ಲಿ ಲಘುವಾಗದೆ ಗೆಲ್ಲುತ್ತದೆ. ನದಿಯ ಪಾಲಿಗೆ ಅವಳ ಮರೆವು ಅವಳ ವರ, ನೆನಪು ಮರುಕಳಿಸಿದ ಕ್ಷಣ ಅವಳೊಂದು ಚಕ್ರತೀರ್ಥ.
ಹಾಗೆ ನದಿಯಂತೆ ಹರಿಯುತ್ತಲೇ ತನ್ನ ಪಾತ್ರವನ್ನೂ, ಹರಹನ್ನೂ ತಾನೆ ನಿರ್ಧರಿಸುವ ಕಥೆ ‘ಗುರುವಾಯನಕೆರೆ’. ಇಲ್ಲಿ ನೀರವವೂ ಇದೆ, ಮರೆಯಲ್ಲಿ ಗುಪ್ತಗಾಮಿನಿಯಾಗಿ ರೌರವವೂ ಇದೆ. ’ಎತ್ತರದ ಮೂರ್ತಿಗೆ ಅಭಿಷೇಕ ಮಾಡಿದ ಹಾಗೆ ಕತ್ತಲು ನಮ್ಮೂರನ್ನು ಆವರಿಸಿಕೊಳ್ಳುತ್ತಿತ್ತು’ – ಇಂತಹ ಉಪಮೆಗಳ ನಡುವೆ ಗುರುವಾಯನ ಕೆರೆ ಆಳವಾಗುತ್ತಾ ಹೋಗುತ್ತದೆ. ಇಂತಹುದೇ ಸೊಗಸು ಇವರ ‘ಚಿಟ್ಟೆ ಹೆಜ್ಜೆ ಜಾಡು’ ಕಾದಂಬರಿಯಲ್ಲೂ ಇದೆ, ’ಕಣ್ ತುಂಬ ಚಂದ್ರನನ್ನು ತುಂಬಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಾಕುತ್ತಾ ಮಲಗಿದರೆ ಎಚ್ಚರಾಗುವ ಹೊತ್ತಿಗೆ ಚಂದ್ರ ಸೂರ್ಯನಾಗುತ್ತಿದ್ದ, ನಕ್ಷತ್ರಗಳು ಸ್ಕೂಲಿಗೆ ಹೋಗಿರುತ್ತಿದ್ದವು’ ಎನ್ನುವ ಸಾಲುಗಳು ಕಥೆಗಳ ನಡುವೆಯೇ ಕವನದ ಝಲಕ್ ಅನ್ನು ನೀಡಿಬಿಡುತ್ತವೆ.
ಇನ್ನು ಯಾಮಿನಿ…. ನಮ್ಮೆಲ್ಲರ ಆಳದ ಹಂಬಲದ, ಆಸೆಯ, ಹೆದರಿಕೆಯ ಪ್ರತೀಕ’ಯಾಮಿನಿ’. ಅಪರೂಪದ ತಲೆಬರಹಗಳು, ನಿರೀಕ್ಷೆಯ ಚೌಕಟ್ಟಿನಾಚೆಗೇ ಬೆಳೆಯುತ್ತಾ ಹೋಗುತ್ತವೆ. ’ಅವಳು ಬೇಕು’ ಎನ್ನುವ ಬಯಕೆ ಕಡೆಗೆ ’ಅವಳೇ ಬೇಕು’ ಎನ್ನುವ ಹಂಬಲವಾಗುವ ಕಥೆ ಯಾಮಿನಿ. ಅಲ್ಲಿ ಸಾಮೀಪ್ಯದ ಹಂಬಲ ಇದೆ, ಆ ಸಾಮೀಪ್ಯವೇ ಬೇಲಿಯಾಗಿಬಿಡಬಹುದೇನೋ ಅನ್ನುವ ಹೆದರಿಕೆಯೂ ಇದೆ. ಪಡೆಯುವ ಆಸೆ ಮತ್ತು ಕಳೆದುಕೊಳ್ಳುವ ಭಯದ ನಮ್ಮೊಳಗಿನ ತಾಕಲಾಟವೇ ಯಾಮಿನಿ.
ಅದ್ಭುತವಾಗಿ ಪ್ರಾರಂಭವಾಗಿ, ನಿರೀಕ್ಷೆ ಹುಟ್ಟಿಸಿ ಮುಂದೆ ನಡೆಯುತ್ತಲೇ ತಾನೇ ಹುಟ್ಟುಹಾಕಿದ ನಿರೀಕ್ಷೆಯ ಭಾರಕ್ಕೆ ನಡುಗುವ ಹಾಗೆ ‘ಚಿಕ್ಕಪ್ಪ’. ಒಂದು ಊರಿನ,ವಲಯದ ಸ್ಥಿತ್ಯಂತರದ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲು ಇಲ್ಲಿ ಜೋಗಿ ಪ್ರಯತ್ನಿಸುತ್ತಾರೆ. ಅದನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ ಸಹ. ವೈಯಕ್ತಿಕವಾಗಿರುವಾಗ ಸೌಮ್ಯವಾಗಿರುವ ಧರ್ಮಕ್ಕೆ ಒಂದು ಸಾಂಸ್ಥಿಕ ರೂಪ ಬಂದಾಗ ಅದು ಹೇಗೆ ತನ್ನ ಕಬಂಧ ಬಾಹುಗಳನ್ನು ಜನರ ಬದುಕಿನ ಎಲ್ಲಾ ಮಗ್ಗುಲುಗಳೆಡೆಗೂ ಚಾಚುತ್ತದೆ ಎನ್ನುವುದರ ಆರಂಭ ತುಂಬಾ ಚೆನ್ನಾಗಿ ಮೂಡಿಬಂದಿದೆ. ಬಹುಷಃ ಅದು ಕುಸಿಯುವ ಬಗೆಯನ್ನು ಇನ್ನಷ್ಟು ವಿರಾಮವಾಗಿ ನಿರೂಪಿಸಿದ್ದಿದ್ದರೆ ಅದು ಇನ್ನೂ ಗಟ್ಟಿತನದ ಕಾದಂಬರಿ ಆಗಬಹುದಿತ್ತು ಅನ್ನಿಸುತ್ತದೆ.
ಗೋಕುಲದಲ್ಲಿ ಕೊಳಲು ಹಿಡಿದ ಕೃಷ್ಣಾ ಮಧುರೆಯಲ್ಲಿ ಕೊಳಲನ್ನು ಕೆಳಗಿಟ್ಟು ಪಾಂಚಜನ್ಯ, ಸುದರ್ಶನ ಎತ್ತಿಕೊಂಡ. ಗೋಕುಲದಲ್ಲಿ ಉಪ್ಪಿನಂಗಡಿ, ಮಧುರೆಯಲ್ಲಿ ಬೆಂಗಳೂರು ಕಂಡರೆ ಅದು ಕಾಕತಾಳೀಯವಲ್ಲವೇನೋ! ಅವರೇ ಹೇಳುವಂತೆ ಅವರ ಕಥೆಗಳಲ್ಲಿ ಗುರುವಾಯನ ಕೆರೆಯ ನೀರವ ಮತ್ತು ಮಹಾನಗರದ ರೌರವ ಎರಡೂ ಇವೆ. ಆದರೆ ನೀರವ ಹೆಚ್ಚಾಗಿರುವ ಇವರ ಬರಹಗಳು ಮಹಾನಗರದ ರೌರವ ಕಥೆಗಳ ನಡುವೆ ನಡೆದರೂ ಗೆದ್ದುಬಿಡುತ್ತವೆ. ಇದಕ್ಕೆ ಒಂದು ಉದಾಹರಣೆ ಇವರ ಯಾಮಿನಿ. ಅಲ್ಲಿ ಯಾಮಿನಿ ಒಂದು ರೂಪಕ,ನಮ್ಮಲ್ಲಿನ ಬಿಡುಗಡೆಯ ಆಸೆಗೆ ಮತ್ತು ಬಿಡುಗಡೆಯ ಹೆದರಿಕೆಗೆ ಯಾಮಿನಿ ಒಂದು ರೂಪಕ, ಅದಕ್ಕೇ ಯಾಮಿನಿ ತರ್ಕದಾಚೆಗೆ ಇಷ್ಟವಾಗಿಬಿಡುತ್ತದೆ/ತ್ತಾಳೆ.
ಇವರ ಒಂದು ಕಥೆಯಿಂದ ಮತ್ತೊಂದು ಕಥೆಗೆ ರೂಪಾಂತರ ಆಗುವಂತೆ,ಮತ್ಯಾರದೋ ಕಥೆಯ ಒಂದು ಸಾಲೋ, ಒಂದು ಪಾತ್ರವೋ, ಒಂದು ಹೆಸರೋ ಇವರ ಕಥೆಯಲ್ಲಿ ರೂಪಾಂತರಗೊಂಡು ನಮ್ಮಲ್ಲಿ ಬೆರಗು ಹುಟ್ಟಿಸಿಬಿಡುತ್ತದೆ- ಯಾಮಿನಿಯ ರಾಗದ ಆಲಾಪ ಮೊದಲ್ಯಾವುದೋ ಕಥೆಯಲ್ಲಿ ಶುರುವಾದಂತೆ. ನಾಗಮಂಡಲ ಇವರ ಮಾಯಾಕಿನ್ನರಿ ಕಥೆಯಲ್ಲಿ ನಗರ ಬದುಕಿನ ನಾಗಮಂಡಲವಾಗಿಬಿಡುವಂತೆ…
ದೇವರು ಬಹುಶಃ ನಾಸ್ತಿಕರನ್ನು ಕಾಡುವಷ್ಟು ಆಸ್ತಿಕರನ್ನು ಕಾಡುವುದೇ ಇಲ್ಲವೇನೋ! ಆಸ್ತಿಕರು ಒಂದು ಸಲ ಅವ ಇದ್ದಾನೆ ಎಂದು ಒಪ್ಪಿಕೊಂಡರೆ ಮುಗೀತು, ಆಮೇಲೆ ಅವರನ್ನು ಯಾವ ಜಿಜ್ಞಾಸೆಯೂ ಕಾಡುವುದಿಲ್ಲ, ಆದರೆ ನಾಸ್ತಿಕರ ಕಷ್ಟಗಳು ಅಷ್ಟಿಷ್ಟಲ್ಲ! ಅವರು ಪ್ರತಿ ದಿನವೂ, ಪ್ರತಿ ಕ್ಷಣವೂ ದೇವರಿಲ್ಲ ಎನ್ನುವುದನ್ನು ಪ್ರೂವ್ ಮಾಡಲು ಒದ್ದಾಡುತ್ತಲೇ ಇರಬೇಕಾಗುತ್ತದೆ. ಅದಕ್ಕೆ ಒಂದು ಉದಾಹರಣೆ ಅವರ ‘ದೇವರ ಹುಚ್ಚು’ ಪುಸ್ತಕ! ಪುಸ್ತಕದ ಕೊನೆಗಿಂತಲೂ ಇಲ್ಲಿ ನಮ್ಮನ್ನು ಪುಸ್ತಕದ ಪಯಣ ಹೆಚ್ಚು ಕಾಡುತ್ತದೆ, ಪಯಣದುದ್ದದ ಜಿಜ್ಞಾಸೆ ನೆನಪಿನಲ್ಲಿ ಉಳಿಯುತ್ತದೆ.
ಮೊದಲೇ ಹೇಳಿದ ಹಾಗೆ ಇದು ಓದುಗರ ಕಣ್ಣಿಂದ ಜೋಗಿಯವರ ಬರಹವನ್ನು ನೋಡುವ ಪ್ರಯತ್ನ. ಒಬ್ಬ ಓದುಗಳಾಗಿ ನಾನು ಜೋಗಿಯವರ ಬರಹಗಳನ್ನು ಕಂಡ ಬಗೆಯನ್ನು, ನನ್ನನ್ನು ಇಂದಿಗೂ ಕಾಡುವ ಅವರ ಬರಹಗಳಲ್ಲಿ ಕೆಲವನ್ನು ಇಲ್ಲಿ ಆರಿಸಿದ್ದೇನೆ. ಪ್ರವಾಸಕ್ಕೆಂದು ಹೊರಟಾಗ ಕ್ಯಾಮೆರಾ ಹಿಡಿದು ಹೋಗುವುದು ಒಂದು ರೀತಿಯಲ್ಲಿ ಖುಷಿ, ಮತ್ತೊಂದು ರೀತಿಯಲ್ಲಿ ಬಂಧನ. ಆ ಘಳಿಗೆಗಳಿಗೆ ನಿರಂತರತೆಯನ್ನು ಕೊಡುವ ಹೆಮ್ಮೆಯೊಂದಿಗೇ, ಇಡೀ ಪ್ರವಾಸವನ್ನು ಕೇವಲ ಕ್ಯಾಮೆರಾ ಕಣ್ಣಿನಿಂದಲೇ ನೋಡುತ್ತಾ ಕಳೆದುಬಿಟ್ಟೆನಾ..? ಎನ್ನುವ ಆತಂಕ ಸಹ ಕಾಡತೊಡಗುತ್ತದೆ! ಹಾಗಾಗಿ ಇಲ್ಲಿನ ಅಕ್ಷರಗಳನ್ನು ನಾನು ಕ್ಯಾಮೆರಾ ಕೆಳಗಿಟ್ಟು ಮನಸ್ಸಿನ ಕಣ್ಣುಗಳಿಂದ ನೋಡಿದ್ದೇ ಹೆಚ್ಚು. ಅಂತಹ ಒಂದು ಓದುವುದರಿಂದ ಸಿಕ್ಕುವ ’ವಿನಾಕಾರಣ’ ಸಂತೋಷ ನಿಮಗೂ ಸಿಗಲಿ ಎನ್ನುವ ಆಶಯದೊಂದಿಗೆ….
***
ಪುಸ್ತಕ ನಾಳಿದ್ದು ಬಿಡುಗಡೆಯಾಗುತ್ತಿದೆ. ಪುಸ್ತಕದ ಆಹ್ವಾನ ನಿಮಗಾಗಿ :

ಭಾನುವಾರ ಬೆಳಗ್ಗೆ ಸಿಗ್ತೀರಲ್ಲ?


ಪ್ರಿಯ ಸಂಧ್ಯಾ, ಸಹೃದಯತೆ ಎಂದರೇನು? ಎಂಬುದನ್ನು ಅನುಭವಕ್ಕೆ ತಂದ್ಕೋಬೇಕಾದ್ರೆ ನಿಮ್ಮ ಈ ಲೇಖನವನ್ನು ಮನಸಿಟ್ಟು ಓದಿದರಾಯ್ತು!
“ಪ್ರವಾಸಕ್ಕೆಂದು ಹೊರಟಾಗ ಕ್ಯಾಮೆರಾ ಹಿಡಿದು ಹೋಗುವುದು ಒಂದು ರೀತಿಯಲ್ಲಿ ಖುಷಿ, ಮತ್ತೊಂದು ರೀತಿಯಲ್ಲಿ ಬಂಧನ. ಆ ಘಳಿಗೆಗಳಿಗೆ ನಿರಂತರತೆಯನ್ನು ಕೊಡುವ ಹೆಮ್ಮೆಯೊಂದಿಗೇ, ಇಡೀ ಪ್ರವಾಸವನ್ನು ಕೇವಲ ಕ್ಯಾಮೆರಾ ಕಣ್ಣಿನಿಂದಲೇ ನೋಡುತ್ತಾ ಕಳೆದುಬಿಟ್ಟೆನಾ..? ಎನ್ನುವ ಆತಂಕ ಸಹ ಕಾಡತೊಡಗುತ್ತದೆ! ”
ಜೋಗಿ ವಾಚಿಕೆ. ನಿಮ್ಮ ಸಂಪಾದಕತ್ವ.
ಕಹಿ,ನೋವು,ಅಸಹಾಯಕತೆ,ರೋಷ,ದಿಗಿಲು,ಭಯ,ಅಭದತ್ರೆ,ಸಿನಿಕತೆ,ಅರೆಬರೆ ವಿರಕ್ತಿ ಮುಂತಾದವುಗಳನ್ನು ಹುಟ್ಟಿಸುವ ಸುತ್ತಮುತ್ತಲಿನ ಆಗುಹೋಗುಗಳ ನಡುವೆಯೂ ಈ ಭಾನುವಾರ ನಾನು ಇಲ್ಲಿಂದಲೇ ಖುಶಿಪಡ್ತೀನಿ….!
Life is beautiful. Thank you!
All the best sandhya :))
sandhya, jogi baraha gaLa melina nimma samagra notavannu namma munditta nimage vandane…abhinandane…..!
What you have done is really awesome Sandhya maa’m. Thank you.
Fantastic! 🙂
🙂 neevu suggest madiddu andre odlEbEku.. neev barediddantU sariyE sari 🙂
saralavennidlsuvadanna sankeernavaagisuva, aa moolaka moolavanne mattomme saralavaagi arthaisaballa jogi avara lekhanagala samruddha bhaava needuttiddeeri…abhinandane-dhanyavaada eradoo thamage..
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸಂದ್ಯಾರಾಣಿ ಅವರೇ, ಒಳ್ಳೆಯದಾಗಲಿ. ನಾವೂ ಕಾರ್ಯಕ್ರಮಕ್ಕೆ ಖಂಡಿತಾ ಬರುತ್ತೇವೆ…
-ರಮೇಶ್ ಹಿರೇಜಂಬೂರು
– ಈ ನಿಮ್ಮ ಲೇಖನ ಓದುವುದರಿಂದ ಸಿಗುವ ಸಂತೋಷ ವಿನಾಕಾರಣ ಅಲ್ಲ ಅದು ಸಕಾರಣ ಸಂತೋಷ. ಕ್ಯಾಮರಾ ಬಿಂಬಿಸುವ ಚಿತ್ರಕ್ಕೆ ಒಂದು ಸೀಮಿತತೆಯಿರುತ್ತದೆ, ಆದರೆ ಅಕ್ಷರರೂಪದ ಚಿತ್ರಕ್ಕೆ ಅನೇಕ ಆಯಾಮಗಳು. ವ್ಯಕ್ತಿಯಿಂದ ವ್ಯಕ್ತಿಗೆ ಈ ಚಿತ್ರಗಳು ಭಿನ್ನ, ಅವರವರ ಚಿತ್ತಗಳಲ್ಲಿ ಪಡಿಮೂಡುವ ಅವರವರವೆ ಚಿತ್ರಗಳು.
ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ….
uttama baraha ..jogi avara barahagaLa mEle aaskti muudisuva lekhana..!!