
ಗುಲ್ಜಾರ್ ಎಂದರೆ ಹಾಗೆ, ಹುಣ್ಣಿಮೆ ರಾತ್ರಿಯಲಿ ಕಿಟಕಿಯಾಚೆ ಕಣ್ಣು ನೆಟ್ಟು ಟ್ರೇನಿನಲಿ ಕೂತ ಹಾಗೆ, ಅವನಿಗೆ ಕೈ ಬೀಸಿ ಬಂದು ಮಲಗಿದ ಮೇಲೆ ಮತ್ತು ನಿದ್ದೆ ಬರುವ ಮೊದಲು ಬರುವ ನೆನಪುಗಳ ಹಾಯಿ ದೋಣಿಯ ಹಾಗೆ, ಪುಸ್ತಕದ ನಡುವೆ ಇಟ್ಟ ನವಿಲುಗರಿಯ ಹಾಗೆ. ಯಾವುದೇ ವಸ್ತು, ಯಾವುದೇ ವಿಷಯ, ಯಾವುದೇ ಕ್ಷಣ ಕೈಗೆತ್ತಿಕೊಂಡು ಅವರು ಅದನ್ನೊಂದು ಶಿಲ್ಪವಾಗಿಸಬಲ್ಲರು. ಪುಸ್ತಕದ ಮೊದಲ ಕವಿತೆ ಓದಲು ಶುರು ಮಾಡಿದವಳು, ಮುಂದೆ ಒಂದು ಹೆಜ್ಜೆ ಇಟ್ಟಿಲ್ಲವೆಂದರೆ ನಂಬಬೇಕು ನೀವು. ಮೊದಲ ಕವಿತೆ ಪುಸ್ತಕಗಳ ಮೇಲೆ. ಅರೆ ಪುಸ್ತಕಗಳ ಮೇಲೆ ಏನು ಕವಿತೆ ಬರೆಯುವುದು ಅನ್ನಿಸಿತಾ ನಿಮಗೆ? ನನಗೂ ಹಾಗೆ ಅನ್ನಿಸಿತು. ಆ ಅನುಮಾನ ಇಟ್ಟುಕೊಂಡೇ ಓದಲು ಶುರು ಮಾಡಿದೆ. ಆ ಕವಿತೆ ನನ್ನನ್ನು ತಾಕಿದ ಪರಿಗೆ, ಆಗಿಂದಾಗ್ಗೆ ಕವಿತೆ ನನ್ನಲ್ಲಿ ಕನ್ನಡವಾಗುತ್ತಾ ಹೋಯಿತು.
ಪುಸ್ತಕಗಳು
ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ
ಅವು ಇಣುಕುತ್ತವೆ,
ದಿಟ್ಟಿಸುತ್ತವೆ ಎಷ್ಟೋ ಆಸೆಯಿಂದ.
ಈಗ ತಿಂಗಳಾನುಗಟ್ಟಲೆ ಭೇಟಿಯಾಗುವುದಿಲ್ಲ ನಾವು
ಅವುಗಳ ಜೊತೆ ಉತ್ಕಟತೆಯಲಿ
ಕಳೆದ ಸಂಜೆಗಳೀಗ
ಕಂಪ್ಯೂಟರಿನ ಪರದೆಯ ಮುಂದೆ ಸರಿಯುತ್ತಿವೆ.
ಒದ್ದಾಡುತ್ತಿವೆ ಅವು, ಆ ಪುಸ್ತಕಗಳು
ಇತ್ತೀಚಿಗೆ ನಿದ್ದೆಯಲ್ಲೂ ನಡೆಯುತ್ತವಂತೆ
ದಿಟ್ಟಿಸುತ್ತಿರುತ್ತವೆ ಆಸೆಯಿಂದ.
ಅವು ಕಟ್ಟಿಕೊಟ್ಟ ಆ ಎಲ್ಲಾ ಎಚ್ಚರಗಳು
ಎಂದೂ ಬ್ಯಾಟರಿಯ ಸೆಲ್ ಮುಗಿಯದ ಆ ಎಲ್ಲಾ ಎಚ್ಚರಗಳು
ಕಾಣುತ್ತಿಲ್ಲ ಇತ್ತೀಚಿಗೆ ಮನೆಯ ಕೋಣೆಗಳಲ್ಲಿ.
ಅವು ಬಿಗಿಯಾಗಿಸುತ್ತಿದ್ದ ಆ ಬಂಧ – ಸಂಬಂಧ
ಎಲ್ಲದರ ಬೆಸುಗೆ ಸಡಿಲವಾಗುತ್ತಿವೆ ಈಗ.
ಯಾವಾಗಲಾದರೊಮ್ಮೆ ಪುಟ ತಿರುಗಿಸಿದರೆ
ಪುಟಗಳ ನಡುವಿಂದ ಜಾರುತ್ತದೆ ನಿಟ್ಟುಸಿರೊಂದು.
ಎಷ್ಟೋ ಪದಗಳ ಅರ್ಥಗಳು ಕಳಚಿಬಿದ್ದಿವೆ
ನಿಂತಿದ್ದಾವೆ ಪದಗಳು ಎಲೆಗಳನ್ನು ಕಳಚಿಕೊಂಡು
ಮುದುರಿ ನಿಂತ ಮೋಟು ಬೊಡ್ಡೆಯ ಹಾಗೆ
ಅಲ್ಲೀಗ ಯಾವುದೇ ಅರ್ಥಗಳು ಮೊಳೆಯುವುದಿಲ್ಲ,
ಎಷ್ಟೋ ನಂಬಿಕೆಗಳು ಒಡೆದು ಹರಡಿಹೋಗಿವೆ
ಪಿಂಗಾಣಿ ಅಡಿ ಊರಿ, ಮಣ್ಣಿನ ಕುಡಿಕೆಗಳು
ಬಿದ್ದು, ಒಡೆದು, ಮನೆಯಾಚೆ ಗುಡಿಸಿ ಎಸೆದ ಹಾಗೆ.
ಬೆರಳು ಒಂದೊಂದು ಪುಟವ ಸ್ಪರ್ಷಿಸಿದಾಗಲೂ
ನಾಲಿಗೆಗೆ ಒಂದೊಂದು ರುಚಿ ಆವರಿಸಿಕೊಳ್ಳುತ್ತಿತ್ತು,
ಈಗ ಬೆರಳುಗಳು ’ಕ್ಲಿಕ್’ ಅನಿಸಿದರೆ ಸಾಕು
ಪರದೆಯ ಮೇಲೆ ಚಿತ್ರಗಳ ಮೆರವಣಿಗೆ.
ಆದರೆ ಪುಸ್ತಕಳೊಡಗಿನ ಆ ಸಾಮಿಪ್ಯ, ಸಾಂಗತ್ಯ
ದೂರಾಗಿದೆ ಈಗೀಗ,
ಎದೆ ಮೇಲೆ ಅವುಗಳನ್ನೊರಗಿಸಿಕೊಂಡು
ಕಳೆದ ಆ ಎಲ್ಲಾ ಮಧ್ಯಾಹ್ನಗಳು,
ಮಡಿಲಲ್ಲಿ ಮಲಗಿಸಿಕೊಂಡು
ಕಳೆದ ಆ ಮುಸ್ಸಂಜೆಗಳು,
ಮೊಣಕಾಲ ಮೇಲೆ ತೂಗುತ್ತಾ
ತಲೆ ತಗ್ಗಿಸಿ ಜಪಿಸಿದ ಆ
ಪ್ರಾರ್ಥನೆಯಂತಹ ಕ್ಷಣಗಳು..
ನಿಜ ಅರಿವಿನ ಜಗತ್ತು ಇದೆ
ಈಗಲೂ ನಮ್ಮೊಡನೆ,
ಆದರೆ ಪುಟಗಳ ನಡುವೆ ಒತ್ತಿಟ್ಟ
ಆ ಗುಲಾಬಿ ಹೂ,
ಕಣ್ಮುಚ್ಚಿ ಉಸಿರೆಳೆದರೆ ಆತ್ಮಕ್ಕೆ ತಾಕುತ್ತಿದ್ದ
ಆ ಪರಿಮಳ, ಅದು ಕಳೆದು ಹೋಗಿದೆ
ಪುಸ್ತಕಗಳ ಕೊಡುತ್ತಾ, ಕೇಳುತ್ತಾ,
ಬೀಳಿಸುತ್ತಾ, ಎತ್ತಿ ಎದೆಗೊತ್ತಿಕೊಳ್ಳುತ್ತಾ
ಬೆಸೆಯುತ್ತಿದ್ದ, ಬೊಗಸೆಗಿಡುತ್ತಿದ್ದ ಆ ಪ್ರೀತಿ
ಅದು, ಅದು ನಾವು ಕಳೆದುಕೊಂಡಿರುವುದು.

ಹೌದೆ, ಅದನ್ನೇ ನಾವು ಕಳೆದುಕೊಂಡಿರುವುದು, ಅಥವಾ ಅದಷ್ಟನ್ನೇ ನಾವು ಕಳೆದುಕೊಂಡಿರುವುದು? ಅತ್ತಿತ್ತ ಸುತ್ತಲಿನ ಮನೆಗೊಂದರಂತೆ ಬರುತ್ತಿದ್ದ ಸುಧಾ, ಪ್ರಜಾಮತ, ವನಿತಾ, ಮಯೂರ, ತುಷಾರಗಳು ವಠಾರದ ಮಕ್ಕಳ ಹಾಗೆ ಎಲ್ಲೆಂದರಲ್ಲಿ ಓಡಾಡಿ, ಆ ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ, ಈ ಮನೆಯಲ್ಲಿ ಸಂಜೆ ಆಡಿ, ರಾತ್ರಿ ಮನೆಗೆ ಅಪ್ಪಂದಿರು ಹೆಜ್ಜೆಯಿಡುವ ವೇಳೆಗೆ ಗಪ್ಪೆಂದು ಮನೆಗೆ ಬಂದು ಹೊಸಿಲು ದಾಟದ ಮುಖದಲ್ಲಿ ಸ್ಟೂಲಿನ ಮೇಲೆ ಓರಣವಾಗಿ ಕೂಡುತ್ತಿದ್ದ ಆ ಪುಸ್ತಕಗಳು. ಇವರ ಪುಸ್ತಕದ ಹೊಸರುಚಿ ಅದ್ಯಾವುದೋ ಮನೆಯ ಅಡಿಗೆ ಮನೆಯಲ್ಲಿ ಘಮಘಮ. ಅವರ ಪುಸ್ತಕದ ರಂಗೋಲಿ ಇವರ ಅಂಗಳದಲ್ಲಿ, ಕಡೆಯ ಪುಟದಲ್ಲಿ ನಡೆಯುತ್ತಿದ್ದ ಪ್ರಶ್ನೆ ಉತ್ತರಗಳು, ಪುಸ್ತಕದ ಹಾಳೆಯ ನಡುವಲ್ಲಿದ್ದ ಚೀಟಿಯಲಿ ಬಿಡಿಸಿರುತ್ತಿದ್ದ ಪ್ರೀತಿಯ ಕಥೆ, ಕವನಗಳು,. ಪುಸ್ತಕವೇ ನೆಪವಾಗಿ ಮನೆ ಮನೆಗೆ ಹರಿಯುತ್ತಿದ್ದ ಆ ಎಲ್ಲಾ ಝರಿಗಳು. ಕಳೆದುಕೊಂಡಿರುವುದು ಏನೇನು?
ಬದಲಾವಣೆಯೊಂದೇ ಶಾಶ್ವತವಾದ ಪ್ರಪಂಚದಲ್ಲಿ ಕ್ಯಾಲೆಂಡರಿನ ಹಾಳೆಗಳಂತೆ ಇಂದುಗಳೆಲ್ಲಾ ತಾರೀಖಿನ ಬೆನ್ನು ಹತ್ತಿ ನಿನ್ನೆಗಳಾಗಿಬಿಡುತ್ತವೆ. ಹೊಸತನ್ನು ಆವಾಹಿಸಿಕೊಳ್ಳುತ್ತಾ, ಬಾಚುತ್ತಾ ಹಳೆಯದಕ್ಕೆ ಜಾಗವೇ ಸಾಲುವುದಿಲ್ಲ. ಮೊದಲು ಅಟ್ಟ ಏರುತ್ತವೆ, ಅಲ್ಲೂ ಸಾಗದೆ ಕಡೆಗೆ ಹೊಸಿಲು ದಾಟುತ್ತವೆ.
ಅಜ್ಜ ಒಂದು ಕಬ್ಬಿಣದ ತಂತಿಯ ಒಂದು ತುದಿಯನ್ನು ಗಂಟು ಮಾಡಿ, ಇನ್ನೊಂದು ತುದಿಯನ್ನು ಕೊಕ್ಕೆಯಾಗಿಸಿ ಕೋಣೆಯ ಮೂಲೆಯ ತೊಲೆಗೆ ನೇತುಹಾಕಿರುತ್ತಿದ್ದರು. ಅದರ ಉದ್ದಕ್ಕೂ ಹರಿದ, ಆದರೆ ’ಎಂದೂ ಬ್ಯಾಟರಿ ಖಾಲಿ ಆಗದ’ ಪತ್ರಗಳು. ನಾಲ್ಕು ಮೂಲೆಗೆ ಕಪ್ಪು ಬಣ್ಣ ಹಚ್ಚಿಕೊಂಡು ಬರುತ್ತಿದ್ದ ಸಾವಿನ ಕಾರ್ಡುಗಳಿಗೆ ಮಾತ್ರ ಒಳಗೆ ಪ್ರವೇಶವಿರಲಿಲ್ಲ. ಮಿಕ್ಕಂತೆ ಉದ್ದಕ್ಕೂ ಕಾರ್ಡು, ಇನ್ ಲ್ಯಾಂಡ್ ಲೆಟರ್ ಸಾಲುಗಳು. ಅಲ್ಲೊಂದು ಇಲ್ಲೊಂದು ಬಿಳಿ ಟೆಲಿಗ್ರಾಂ ಹಾಳೆಗಳು, ಒಂದೊಂದು ಪುಟದಲ್ಲೂ ಅಮ್ಮನ, ಚಿಕ್ಕಮ್ಮನ, ಸೋದರ ಮಾವಂದಿರ ಬಾಲ್ಯದ ತುಣುಕುಗಳು, ಯಾಕೋ ಒಂದು ಮೊಳದ ಆ ತಂತಿ ಪತ್ರಗಳಿಗೆ ಕಡಿಮೆ ಆಗುತ್ತಲೇ ಇರಲಿಲ್ಲ. ಮೆಮೊರಿ ಖಾಲಿ ಆಯಿತು ಎಂದು ಯಾರೂ ಡಿಲೀಟ್ ಬಟನ್ ಒತ್ತಲೇ ಇಲ್ಲ. ಆ ತಂತಿಯ ಪತ್ರ ಓದಿದಂತೆಲ್ಲಾ ಹೊಸ ಹೊಸ ಪದಗಳು ಸಿಗುತ್ತಿದ್ದವು, ಅರ್ಥ ಹೇಳಲು ಅಜ್ಜ ಇದ್ದರು.
ಪುಸ್ತಕಗಳು, ಪದಗಳು, ವಾಕ್ಯಗಳು, ಸಂಬಂಧಗಳು ಎಲ್ಲವೂ… ಬಳಸದ್ದೆಲ್ಲಾ ತುಕ್ಕು ಹಿಡಿಯುವುದು ಜಗದ ನಿಯಮ. ಹಾಗೆ ತುಕ್ಕು ಹಿಡಿದದ್ದಕ್ಕೆ ಸೀಮೆ ಎಣ್ಣೆ ಹಚ್ಚಿ, ತಿಕ್ಕಿ, ಒಣಗಿಸಿ, ಬಿಸಿಲಿಗಿಡುವ ಬದಲು ಅಟ್ಟ ಹತ್ತಿಸುವುದು ಸುಲಭವಾಗಿಬಿಟ್ಟಿದೆ. ಒಮ್ಮೆ ಅಂಕಣದಲ್ಲಿ ಬರೆದ ಒಂದು ಬರಹದಲ್ಲಿದ್ದ ’ಮಂದಲಿಗೆ’ ಪದ ನೋಡಿ ಜೋಗಿ, ’ಅರೆ, ಈ ಪದ ಸಿಕ್ಕಿ ಎಷ್ಟು ದಿನ ಆಗಿತ್ತು’ ಅಂದಿದ್ದರು. ಆಮೇಲೆ ಕೂತು ನೆನಪಿಸಿಕೊಂಡೆ, ಎಷ್ಟು ಪದಗಳನ್ನು ಮರೆತೇ ಬಿಟ್ಟಿದ್ದೇವೆ ನಾವು. ಹೆಣ್ಣುಮಕ್ಕಳು ಹಬ್ಬದ ದಿನ ಚಂದ ಸಿಂಗಾರವಾದರೆ ದೊಡ್ಡಜ್ಜಿ ಹೇಳುತ್ತಿದ್ದರು, ’ಏನು ಮೋಪಾಗಿದ್ದೀಯ ನೋಡು’ ಅಂತ. ಮೊನ್ನೆ ಇದ್ದಕ್ಕಿದ್ದಂತೆ ಆ ಪದ ನೆನಪಾಗಿ ಎಷ್ಟು ಖುಷಿಯಾಗಿ ಬಿಟ್ಟಿತು. ಹಾಗೆ ಕುಯಿಲಾದ ಮೇಲೆ ರಾಗಿ ರಾಶಿ ಹಾಕುತ್ತಿದ್ದ ಕಣ, ದೀಪಾವಳಿ ಮುಗಿದ ಮೇಲೆ ಹೊಸ ದವಸ ತಂದು ಮಾಡುತ್ತಿದ್ದ ’ಹೊಸಕ್ಕಿ’ ಸಂಭ್ರಮ, ಮಾತು ತಪ್ಪಿ, ನಾಲಿಗೆ ಕಚ್ಚಿ ಹೇಳುತ್ತಿದ್ದ ’ಊಫಿ, ಊಫಿ’… ಎಲ್ಲಿ ಹೋಗಿಬಿಟ್ಟವು ಆ ಎಲ್ಲಾ ಪದಗಳು? ನಾವು ನೋಡನೋಡುತ್ತಿದ್ದಂತೆ ಎಷ್ಟು ಪದಗಳು ಅಟ್ಟ ಹತ್ತಿ, ಕಬ್ಬಿಣದ ತಂತಿ ಹೊಕ್ಕು, ಹೊಸಿಲು ದಾಟಿ ಮನೆಬಿಟ್ಟು ಹೊರಟುಬಿಟ್ಟವು. ಥೇಟ್ ಗುಡಿಸಿ ಎಸೆದ ಮಣ್ಣ ಕುಡಿಕೆಗಳ ಹಾಗೆ.
ಅಮಿತವ್ ಗೋಶ್ ಬರೀತಾರೆ, ’ಒಂದು ಪದವನ್ನ ಹೇಗೆ ಕಳ್ಕೋತೇವೆ ನಾವು? ಆಟವಾಡುತ್ತಿದ್ದ ಮಗು ಎಲ್ಲೋ ಇಟ್ಟು ಮರೆತ ಆಟಿಗೆಯಂತೆ ನೆನಪಿನಾಳದಲ್ಲೆಲ್ಲೋ ಕೂತಿರುತ್ತದಾ ಅದು, ಯಾರಾದರೂ ಬಂದು, ಕಟ್ಟಿದ್ದ ಜೇಡರ ಬೆಲೆ ಬಿಡಿಸಿ, ದೂಳೊರಸಿ, ಮತ್ತೆ ಕೈಗೆತ್ತಿಕೊಳ್ಳಬಹುದೆಂದು ಕಾಯುತ್ತಾ?”. ಗೊತ್ತಿಲ್ಲ. ಆದರೆ ಹಾಗೆ ನೆನಪಿನಾಳದಲ್ಲೆಲ್ಲೋ ಕಳೆದುಹೋದ ಪದಗಳು ಸಿಕ್ಕಿದಂತೆಲ್ಲಾ ನಮ್ಮ ನಿನ್ನೆಗಳ ಒಂದು ಗಂಟು ನಮ್ಮ ಕೈಗೆ ಮತ್ತೆ ಸಿಗುತ್ತದೆ.
ಮೊನ್ನೆ ಫೇಸ್ ಬುಕ್ಕಿನಲ್ಲಿ ಯಾರೋ ಬರೆದಿದ್ದರು, ದೂರ ನೆನಪನ್ನು ತೀಕ್ಷ್ಣವಾಗಿಸುತ್ತದೆ, ಆದರೆ ಸಾಮಿಪ್ಯ ಅದನ್ನು ಆಳವಾಗಿಸುತ್ತದೆ ಅಂತ. ಮತ್ತದೇ ನಿನ್ನೆ, ಇಂದುಗಳ ಪ್ರಶ್ನೆ. ಯಾವುದು ತೀಕ್ಷ್ಣ, ಯಾವುದು ಆಳ, ಯಾವುದು ರಮ್ಯ, ಯಾವುದು ವಾಸ್ತವ? ನಮ್ಮ ಒದ್ದಾಟ ಹೇಳಿ, ನಿತ್ಯಜೀವನಕ್ಕೆ ಜೊತೆಯಾಗುವ ಕಂಪ್ಯೂಟರ್ ಅನ್ನು ಬಿಡಲಾರೆವು, ಪುಸ್ತಕದ ಘಮವನ್ನು ಮರೆಯಲಾರೆವು.
ನಾವೇ ಬೇಡ ಎಂದು ಕೈಬಿಡಿಸಿಕೊಂಡ ನೆನ್ನೆಗಳು, ತಾವು ನಮ್ಮ ಕೈ ಬಿಡಿಸಿಕೊಂಡಾಗ ಯಾಕೆ ಅಷ್ಟು ಸಂಕಟವಾಗುತ್ತದೆ. ಬೇಡ ಹೋಗೆಂದವರೂ ಅವು ದೂರಾದಾಗ ಯಾಕೆ ಅವು ಬೇಕೆ ಬೇಕು ಅನ್ನಿಸಿಬಿಡುತ್ತವೆ? ಯಾಕೆ ಮುಚ್ಚಿದ ಬಾಗಿಲಿನ ಆಚೆಯಿಂದ ನೆನಪುಗಳು ಆಸೆಯಿಂದ ದಿಟ್ಟಿಸುತ್ತವೆ? ಯಾಕೆ ಪದಗಳ ಹಿಂದೆ ಅರ್ಥಗಳು ಹೊಸಿಲು ದಾಟುವುದಿಲ್ಲ? ದೇಹ ಕಳೆದುಕೊಂಡ ಆತ್ಮಗಳಂತೆ ಯಾಕೆ ಸುತ್ತಾಡುತ್ತಿರುತ್ತವೆ ನಮ್ಮ ಸುತ್ತ ಮುತ್ತ?
ಸಂಧ್ಯಾರಾಣಿ ಕಾಲಂ : ಗುಲ್ಜಾರ್ ಕವಿತೆ ಮತ್ತು ಮುಚ್ಚಿದ ಬಾಗಿಲ ಆಚೆಯಿಂದಲೇ ದಿಟ್ಟಿಸುವ ನೆನಪುಗಳು
ನಿಮಗೆ ಇವೂ ಇಷ್ಟವಾಗಬಹುದು…

ಥು ಅದ್ಯಾಕಿಷ್ಟು ಚೆನ್ನಾಗಿ ಬರ್ದಿದೀಯ ಸಂಧ್ಯಾ … ಒಂದೊಂದು ಪದಾನೂ ಕುಸುರಿ ಚಿತ್ತಾರ …
Beautiful… Now a days its ‘KINDLE’ 😉
ಮುಂದೊಂದು ದಿನ ಇ ಬರಹಗಳು , ಈ ಓದು ಹೊರಟು ಹೋಗಿ ಡೈರೆಕ್ಟ ಆಗಿ ಕಣ್ಣಿಂದ ಮಿದುಳಿಗೆ (ಕಣ್ಣ್ಯಾದರೂ ಯಾಕೆ ಬೇಕು ಅದಕ್ಕೆ?) ಮೆಟಾಡಾಟಾ ಹೋಗುತ್ತದೋ ಏನೋ? ನಿಮ್ಮ ಈ ಬರಹದಿಂದ ಬೆಳಗು ನಿಚ್ಚಳವಾಯಿತು -ಅನುಪಮ ಬರಹ.
~ಅನಿಲ
Mana muttuva baraha.
nimma kalam odi kaledu hoda kalakke hode.adella nammade anisike annuvashtu namage helalu barad vishyavannu adeshtu sulalitavagi barediddira andre namma manassanne yavattu bandu kaddu kondu hodrappa anta enisitu.collegege pustaka hididu hogta adu nelakke biddare adannu ettikotta huduagana kannalli kannittu nodo hudugi,hage shuru ago prema adella elli hoito anta annisitu
Tumba channagi ede meadm. padagala balake sukmadalli kusuri kelasa madive ree
as usual beautiful article.patragala kabinnada kokkeyu yesto jana marithiddare nimma lekhana mathe kokke hakide aa nenapugalige sandhya
lekhana kaviteyaagide..sundara kavite…
ಮೊನ್ನೆ ಫೇಸ್ ಬುಕ್ಕಿನಲ್ಲಿ ಯಾರೋ ಬರೆದಿದ್ದರು, ದೂರ ನೆನಪನ್ನು ತೀಕ್ಷ್ಣವಾಗಿಸುತ್ತದೆ, ಆದರೆ ಸಾಮಿಪ್ಯ ಅದನ್ನು ಆಳವಾಗಿಸುತ್ತದೆ ಅಂತ. ಮತ್ತದೇ ನಿನ್ನೆ, ಇಂದುಗಳ ಪ್ರಶ್ನೆ. ಯಾವುದು ತೀಕ್ಷ್ಣ, ಯಾವುದು ಆಳ, ಯಾವುದು ರಮ್ಯ, ಯಾವುದು ವಾಸ್ತವ? ನಮ್ಮ ಒದ್ದಾಟ ಹೇಳಿ, ನಿತ್ಯಜೀವನಕ್ಕೆ ಜೊತೆಯಾಗುವ ಕಂಪ್ಯೂಟರ್ ಅನ್ನು ಬಿಡಲಾರೆವು, ಪುಸ್ತಕದ ಘಮವನ್ನು ಮರೆಯಲಾರೆವು.
ನಾವೇ ಬೇಡ ಎಂದು ಕೈಬಿಡಿಸಿಕೊಂಡ ನೆನ್ನೆಗಳು, ತಾವು ನಮ್ಮ ಕೈ ಬಿಡಿಸಿಕೊಂಡಾಗ ಯಾಕೆ ಅಷ್ಟು ಸಂಕಟವಾಗುತ್ತದೆ. ಬೇಡ ಹೋಗೆಂದವರೂ ಅವು ದೂರಾದಾಗ ಯಾಕೆ ಅವು ಬೇಕೆ ಬೇಕು ಅನ್ನಿಸಿಬಿಡುತ್ತವೆ? ಯಾಕೆ ಮುಚ್ಚಿದ ಬಾಗಿಲಿನ ಆಚೆಯಿಂದ ನೆನಪುಗಳು ಆಸೆಯಿಂದ ದಿಟ್ಟಿಸುತ್ತವೆ? ಯಾಕೆ ಪದಗಳ ಹಿಂದೆ ಅರ್ಥಗಳು ಹೊಸಿಲು ದಾಟುವುದಿಲ್ಲ? ದೇಹ ಕಳೆದುಕೊಂಡ ಆತ್ಮಗಳಂತೆ ಯಾಕೆ ಸುತ್ತಾಡುತ್ತಿರುತ್ತವೆ ನಮ್ಮ ಸುತ್ತ ಮುತ್ತ?
ಮನಮುಟ್ಟುವ ಮನಕಾಡುವ ಚಿಂತನೆ ..ನಮಗೆ ಗೊತ್ತಿಲ್ಲದ ಹಾಗೆnaavu ನಮ್ಮನ್ನು ನಮ್ಮ ಚಿಂತನೆಗಳನ್ನು ಆಶೆಗಳನ್ನು ಕಳೆದು ಕೊಂಡಿದ್ದೇವೆ ಪುಸ್ತಿಕೆ ಕೊಡುವ ಕುಶಿ ಆನಂದ ಥ್ರಿಲ್ ಎಲ್ಲವುಗಳಿಂದ ಹಂತ ಹಂತ ವಾಗಿ ದೂರ ಸರಿಯುತ್ತಿದ್ದೆವೇನೋ ಎನ್ನುವ ಭಯ ಆತಂಕ ಕೂಡ ಕಾಡುತ್ತಿದೆ ,,ಆದರು ಅದೊಂದು ಮನಸಿಗೆ ಬೇಸರವಾದಾಗ ನಾನು ಹಿಡಿದು ಓದುವ ಘಾಲಿಬ್ ಕಾವ್ಯ..ಬೆನ್ದ್ರೆ ಕಾವ್ಯ ..ಒಶೊ ಚಿಂತನೆ ,ಕಗ್ಗನ ಕಾವ್ಯ ಹೀಗೆ ಹೀಗೆ ಇನ್ನು ಹಲವು ಬರಹಗಾರ ಕಾವ್ಯ ಕೊಡುವ ಕುಶಿಯೇ ಅವರ್ಣನೀಯ.. ನಾನು ಇಂದಿಗೂ ಪುಸ್ತಿಕೆಗಳು ನನ್ನ ಅತ್ತ್ಯುತ್ತಮ ಸ್ನೇಹಿತ ನೆಂದೇ ನಮ್ಬಿದ್ದೆನೆ.. ನಿಮ್ಮ ಬರಹ ಇಂದಿನ ನಗ್ನ ಸತ್ಯದ ಚಿನ್ತನೆ.. ನಾವು ಅದೆಲ್ಲಿ ಕಳೆದು ಹೋಗುತ್ತಿದ್ದೇವೆ ಎಂದು ಒಂದಿಸ್ತು ಘಮ್ಬೀರವಾಗಿ ಆಲೋಚಿಸಿದರೆ ಸಾಕು ..ನಮಗೆ ಪುಸ್ತಿಕೆ ಉತ್ತರಿಸುತ್ತದೆ…..