ಅರ್ಪಣೆ
’ಮೇಘನಾ, ಗೋವಿಂದ್ ಮತ್ತು ಪ್ಲೂಟೋ’
ಮೇಘನಾ ಅವರ ಮಗಳು ಬೋಸ್ಕಿ ಅಂತ ಗೊತ್ತಿತ್ತು ನನಗೆ, ಗೋವಿಂದ ಅವರ ಅಳಿಯ, ಸರಿ ಈ ಪ್ಲೂಟೋ ಯಾರು? ಅವರ ಸ್ನೇಹಿತನಾ, ಸಹಾಯಕನಾ ಅಥವಾ ಅವರ ಮನೆ ಮುದ್ದು ನಾಯಿ ಮರಿಯಾ. ಯಾಕೋ ಈ ವಿಷಯ ಮೊದಲು ಇತ್ಯರ್ಥ ಆಗಿ ಬಿಡಬೇಕು ಅನ್ನಿಸ್ತು ನನಗೆ. ಸರಿ ಈ ಬಗ್ಗೆ ಗುಲ್ಜಾರ್ ಏನಾದರೂ ಹೇಳಿದ್ದಾರಾ ಅಂತ ಓದುತ್ತಾ ಹೋದೆ. ’ಪ್ಲೂಟೋ.. ಸೌರಮಂಡಲದ ಕುಟುಂಬದಿಂದ ಹೊರದಬ್ಬಿಸಿಕೊಂಡ ಪ್ಲೂಟೋ… ಮನೆಯಲ್ಲೇ ಇದ್ದ ಮನೆ ಮಗನನ್ನು ಒಂದು ಬೆಳಗ್ಗೆ ಇದ್ದಕಿದ್ದಂತೆ ಹೊರದಬ್ಬಿದಂತೆ, ಇನ್ನು ಇಂದಿನಿಂದ ನಿನಗೂ ಈ ಮನೆಗೂ ಯಾವ ಸಂಬಂಧವೂ ಇಲ್ಲ ಅನ್ನುವಂತೆ ಸೌರಮಂಡಲದ ಹೆಸರಪಟ್ಟಿಯಿಂದ ನಿರ್ದಾಕ್ಷಿಣ್ಯವಾಗಿ ಹೊರದಬ್ಬಿದರಲ್ಲ ಆ ಪ್ಲೂಟೋ… ಅವನನ್ನು ಕಂಡರೆ ನನಗೆ ನನ್ನದೇ ನೆನಪಾಯಿತು….’ ಗುಲ್ಜಾರ್ ಬರೆದಿದ್ದರು. ಆ ಕ್ಷಣದಿಂದ ಗುಲ್ಜಾರ್ ರನ್ನು ನಾನು ಇನ್ನೂ ಹೆಚ್ಚು ಪ್ರೀತಿಸಲಾರಂಭಿಸಿದೆ. ಇಂತಹ ಸಂವೇದನೆಗಳೇ ಮನುಷ್ಯನನ್ನು ಕವಿಯಾಗಿಸೋದು, ಕವಿಯನ್ನು ಗುಲ್ಜಾರ್ ಆಗಿಸೋದು.
’ಗುಲ್ಜಾರ್, ಪಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ!’. ಮೊಬೈಲ್ ನೆಟ್ ವರ್ಕ್ ಆಗೊಮ್ಮೆ ಈಗೊಮ್ಮೆ ಕಣ್ಣು ಮಿಟುಕಿಸಿ ಹೋಗುತ್ತಿದ್ದ ಚಿಕ್ಕಮಗಳೂರಿನ ಆ ತೋಟದ ಮನೆಯಲ್ಲಿದ್ದ ನನಗೆ ಆ ೨೪ ಗಂಟೆಗಳಲ್ಲಿ ಬಂದಿದ್ದು ಇದೊಂದೇ ಮೆಸೇಜ್. ಸ್ನೇಹಿತ ಸಂವರ್ಥ ಕಳಿಸಿದ್ದು. ಮೊಬೈಲ್ ಅನ್ನು ಕ್ಯಾಮೆರಾ ಆಗಿ ಬಳಸುತ್ತಿದ್ದ ನನಗೆ ಅದು ಒಂದು ಫೋನ್ ಎಂಬುದನ್ನು ನೆನಪಿಸಲೋ ಎಂಬಂತೆ ಬಂದ ಈ ಒಂದು ಸಂದೇಶ ಬಿಟ್ಟರೆ ನನ್ನ ಮೊಬೈಲ್ ನೀರವ. ಆದರೆ ಬಂದ ಈ ಒಂದು ಸಂದೇಶ ತಂದ ಸಡಗರ, ಸಂಭ್ರಮ ಅಷ್ಟಿಷ್ಟಲ್ಲ. ಕಾಕತಾಳೀಯವೆಂದರೆ ಅಲ್ಲಿಗೆ ನಾನು ತೆಗೆದುಕೊಂಡು ಹೋಗಿದ್ದ ಒಂದೇ ಪುಸ್ತಕ ಗುಲ್ಜಾರ್ ಕವಿತೆಗಳ ಅನುವಾದ! ಕವಿತೆಗಳ ಅನುವಾದವೆಂದರೆ ಒಂದು ಹಿಂಜರಿಕೆಯಿಂದಲೇ ಕೈಗೆತ್ತಿಕೊಳ್ಳುತ್ತೇನೆ ನಾನು, ಆದರೆ ಈ ಪುಸ್ತಕವನ್ನು ಕೊಳ್ಳಲು ಇದ್ದ ಒಂದು ಬಲವಾದ ಕಾರಣ ಪುಸ್ತಕದ ಎಡಬದಿಯಲ್ಲಿ ಹಿಂದಿ ಲಿಪಿಯಲ್ಲಿ ಗುಲ್ಜಾರ್ ಅವರ ಮೂಲ ಕವನ ಇದ್ದರೆ, ಬಲಬದಿಯಲ್ಲಿ ಇಂಗ್ಲಿಷ್ ಅನುವಾದ. ಹೀಗಾಗಿ ಪುಸ್ತಕ ನನ್ನದಾಗಿತ್ತು. ಈ ಖುಷಿಯ ಸುದ್ದಿಯನ್ನು ಏನು ಮಾಡುವುದು ಅಂತ ತೋಚಲಿಲ್ಲ! ಸಂಪರ್ಕ ಇದ್ದಿದ್ದರೆ ಅದನ್ನು ಸುದ್ದಿ ಮಾಡಿ, ಹಂಚಿಕೊಂಡು, ಖುಷಿಯನ್ನು ಗುಣಿಸಿಕೊಂಡು… ಅದೇನು ಮಾಡಲಾಗದ ಅಸಹಾಯಕತೆಯಲ್ಲಿ ಗುಲ್ಜಾರ್ ಗೇ ಮೊರೆ ಹೋದೆ. ಪುಸ್ತಕ ಕೈಲಿ ಹಿಡಿದು ಕೂತೆ. ಆಗ ಕಂಡದ್ದು ಈ ಸಾಲು.
ಆ ಸಾಲುಗಳನ್ನು ಓದಿದ ಮೇಲೆ, ಇನ್ನೂ ಗುಲ್ಜಾರ್ ಬೇಕು ಅನ್ನಿಸಿತು. ಸುಮಾರು ಹತ್ತು ವರ್ಷಗಳ ಮೊದಲು ಗುಲ್ಜಾರ್ ಜೀವನ ಚರಿತ್ರೆಯನ್ನು ಮಗಳು ಮೇಘನಾ ಬರೆದಿದ್ದಳು. ಅ ಕಾಲಕ್ಕೆ, ನನ್ನ ಆಗಿನ ಪರ್ಸಿನ ತೂಕಕ್ಕೆ ಅದೊಂದು ಭಾರಿ ಬೆಲೆಯ ಪುಸ್ತಕ. ಆದರೆ ಬಿಡುವ ಮಾತೇ ಇಲ್ಲ ಅಂತ ಸುಮಾರು ಖರ್ಚುಗಳನ್ನು ಬಿಡುತ್ತೇನೆ ಎಂದು ನನಗೆ ನಾನೇ ಆಣೆ ಹಾಕಿಕೊಂಡು ಕೊಂಡ ಪುಸ್ತಕ. ಕೈಗೆ ಬಂದ ತಕ್ಷಣ ಹಳದಿ ಬಣ್ಣದ ಬೆಲೆಯ ಪಟ್ಟಿ ಕಿತ್ತು ಹಾಕಿದ್ದೆ, ಯಾರಾದ್ರೂ ನೋಡಿದ್ರೆ ಗ್ಯಾರೆಂಟಿ ನನ್ನ ಈ ಖರೀದಿಯನ್ನು ರೇಗಿಸ್ತಾರೆ ಅಂತ! ಆ ಪುಸ್ತಕ ಆಗಲೆ ಓದಿದ್ದೆ, ಅದನ್ನು ಮತ್ತೊಮ್ಮೆ ಓದಬೇಕು ಅನ್ನಿಸಿ ಮನೆಗೆ ಹಿಂದಿರುಗಿದವಳೆ ಪುಸ್ತಕ ಮತ್ತೆ ಹಿಡಿದು ಕೂತೆ.. ಮತ್ತೆ ಕಳೆದುಹೋದೆ.
ಗುಲ್ಜಾರ್ ಪ್ರತಿಭೆ ಎರಡು ಆಯಾಮದಲ್ಲಿ ಅನಾವರಣಗೊಳ್ಳುತ್ತದೆ, ಒಂದು ಗಡಿಯಾರದ ಯಾವುದೇ ಒಂದು ಕ್ಷಣವನ್ನು, ಕ್ಯಾಮೆರಾದ ಯಾವುದೋ ಒಂದು ಚಿತ್ರವನ್ನು, ಹಾಡಿನ ಯಾವುದೋ ಒಂದು ಸ್ವರವನ್ನು ಕೈಗೆತ್ತಿಕೊಂಡು ಅದನ್ನೊಂದು ಅಸಾಧಾರಣ ಕಲಾಕೃತಿ ಆಗಿಸಬಲ್ಲ ಅವರ ಪ್ರತಿಭೆ, ಇನ್ನೊಂದು ಅವರ ಪ್ರತಿ ರಚನೆಯಲ್ಲಿ, ಪ್ರತಿ ಹಾಡಿನಲ್ಲಿ, ಕವನದಲ್ಲಿ, ಚಿತ್ರಗಳಲ್ಲಿ ಇರುವ ಮಾನವ ಸಂಬಂಧಗಳ, ಅದರ ಎಳೆಗಳ ಹುಡುಕಾಟ. ನನ್ನನ್ನು ಸೆಳೆಯುವುದು ಸಹ ಅವರ ಅದೇ ಹುಡುಕಾಟ. ಹಾಗಾಗಿ ನನ್ನ ಈ ಲೇಖನ ಅವರಲ್ಲಿನ ಸಂವೇದನೆಗಳ ಹುಡುಕಾಟ. ಒಂದು ಅದ್ಭುತ ಕವಿತೆಗೆ ಬೆಳದಿಂಗಳ ಉಡುಗೆ ತೊಡಿಸಿದರೆ ಅದು ಗುಲ್ಜಾರ್. ಆ ಕವನದ ಸಾಲುಗಳು, ಸಾಲುಗಳ ಅರ್ಥ, ಸಾಲುಗಳ ನಡುವಿನ ಗರ್ಭಸ್ಥ ಮೌನ ಎಲ್ಲಾ ನಿಮಗೆ ದಕ್ಕಿದಷ್ಟು, ನೀವು ನಿಮ್ಮದಾಗಿಸಿಕೊಂಡಷ್ಟು.
ಪುಸ್ತಕ ಬೋಸ್ಕಿ ಬರೆದದ್ದು, ಅಪ್ಪನ ಬಗ್ಗೆ ಅಪಾರ ಪ್ರೀತಿ ಮತ್ತು ಅಪ್ಪನನ್ನು ಅಪ್ಪನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬಲ್ಲ, ಒಪ್ಪಿಕೊಳ್ಳಬಲ್ಲ, ಅಪ್ಪನಿಗೂ ಒಂದು ಸ್ವಂತ ಸ್ಥಳ ಬಿಟ್ಟುಕೊಟ್ಟು ಗೌರವಿಸಿ, ಪ್ರೀತಿಸಬಲ್ಲ ಮಗಳು ಬೋಸ್ಕಿ,
ನಾನು ಸುರಕ್ಷಿತವಾಗಿದ್ದೇನೆ ಅಂತ ಗೊತ್ತು,
ನನ್ನ ಸುತ್ತಾ ಅಪ್ಪನ ತೋಳುಗಳಿವೆ,
ನಾ ನಡೆಯುವ ಹಾದಿ ಸರಿ ಎಂದು ಗೊತ್ತು,
ನನ್ನ ಹಿಡಿಯಲ್ಲಿ ಅಪ್ಪನ ಕಿರುಬೆರಳಿದೆ.
ಅಪ್ಪ ಸೆಲ್ಯುಲಾಯ್ಡ್ ನಲ್ಲಿ ಕೈಯಾಡಿಸ್ತಾರೆ
ಹಾಗಾಗಿ ನಾ ನೋಡಬಲ್ಲೆ.
ನಾನು ಬರೆಯಬಲ್ಲೆ ಎಂದು ಗೊತ್ತು
ಯಾಕೆಂದರೆ ಅದೇ ಶಾಯಿ ಹರಿಯುತ್ತದೆ ನನ್ನಲ್ಲೂ.
ನಾನು ಮಾಡಬಲ್ಲೆ ಎಂದು ಗೊತ್ತು
ಯಾಕೆಂದರೆ ಅದನ್ನು ಅಪ್ಪ ನಂಬಿದ್ದಾನೆ
ನಾನು ಇದ್ದೇನೆ ಎಂದು ಗೊತ್ತು
ಯಾಕೆಂದರೆ ಅಪ್ಪ ಇದ್ದಾನೆ
ಈ ಸಾಲುಗಳು ಮೊದಲ ಸಲದಂತೆ ಈ ಸಲವೂ ನನ್ನನ್ನು ಅಲ್ಲಾಡಿಸಿ ಹಾಕಿದ್ದವು. ಒಂದು ಕ್ಷಣದಲ್ಲಿ ನಾನು ಬೋಸ್ಕಿಯ ಜಾಗದಲ್ಲಿದ್ದೆ.. ೧೦ ವರ್ಷಗಳ ಬಳಿಕ ಮತ್ತೆ ಆ ಪುಸ್ತಕ ಓದಿದೆ, ಬೋಸ್ಕಿಯ ಕಣ್ಣುಗಳಿಂದ ಅವರನ್ನು ನೋಡಲು, ನಡುನಡುವೆ ಅವಳ ಕಣ್ಣು ನನ್ನದಾಗುತ್ತಿತ್ತು, ನನ್ನ ಕಣ್ಣು ಅವಳದಾಗುತ್ತಿತ್ತು.
ಸಣ್ಣವಯಸ್ಸಿನಲ್ಲೇ ಅಮ್ಮನನ್ನು ಕಳೆದುಕೊಂಡ ಗುಲ್ಜಾರ್ ಗೆ ಅಮ್ಮನ ಮುಖದ ನೆನಪೂ ಇಲ್ಲ. ಸಂತೆಯಲ್ಲಿ ಯಾವಾಗಲೋ ಸಂಬಂಧಿಕರೊಬ್ಬರು ’ಅಕೋ ನೋಡು, ನಿಮ್ಮಮ್ಮ ಹಾಗಿದ್ದರು’ ಎಂದು ತೋರಿದ ಒಂದು ಮುಖದ ಅಚ್ಚನ್ನು ಮನದಲ್ಲಿ ಉಳಿಸಿಕೊಂಡುಬಂದ ಗುಲ್ಜಾರ್ ಗೆ ಕನಸ್ಸಿನಲ್ಲಿ ಅಮ್ಮ ಬರುವುದು ಅದೇ ಮುಖದಲ್ಲಿ, ಆಮೇಲೆ ಮರು ಮದುವೆ ಆದ ಅಪ್ಪ, ಮನೆ ತುಂಬಾ ಮಕ್ಕಳು, ಆಗ ತಾನೆ ಆಗಿದ್ದ ಭಾರತ ವಿಭಜನೆಯ ಕಾರಣದಿಂದ ಮನೆ ತುಂಬಿದ್ದ ನೆಂಟರು. ಇವನೊಬ್ಬನ ಜವಾಬ್ದಾರಿ ಆದರೂ ತಗ್ಗಲಿ ಎಂದು ದೂರದ ಬಾಂಬೆಗೆ ಅಣ್ಣನ ಮನೆಗೆ ಇವನನ್ನು ಕಳಿಸಿಬಿಡುತ್ತಾರೆ, ಹನ್ನೊಂದರ ಬಾಲಕನ್ನು.. ಥೇಟ್ ಪ್ಲೂಟೋವನ್ನು ನೂಕಿದಂತೆಯೇ.. ಅಣ್ಣನ ಮದುವೆ ಆಗುತ್ತದೆ, ಗುಲ್ಜಾರ್ ಗೆ ಆಹ್ವಾನ ಇರುವುದಿಲ್ಲ, ಅಪ್ಪ ತೀರಿಹೋಗುತ್ತಾರೆ, ಇವರಿಗೆ ಸುದ್ದಿ ಮುಟ್ಟಿಸಬೇಕು ಎಂದು ಯಾರಿಗೂ ಅನ್ನಿಸುವುದೇ ಇಲ್ಲ. ಥೇಟ್ ಸೂತ್ರ ಹರಿದ ಗಾಳಿಪಟ ಆಗಿಬಿಡುತ್ತಾರೆ ಇವರು, ರಾಖಿ ಇವರ ಬಾಳಿನಲ್ಲಿ ಬರುವವರೆಗೂ, ಬೋಸ್ಕಿ ಇವರ ಮಡಿಲಿಗೆ ಬರುವವರೆಗೂ. ಅವರ ಮಟ್ಟಿಗೆ ಮನೆಯ ಕಲ್ಪನೆ ಒಂದು ಪಾಳು ಬಿದ್ದ ಆವರಣ. ಮುಂದೆ ಈ ಪುಸ್ತಕ ಬರೆಯುವಾಗ ಮಗಳು ಬೋಸ್ಕಿ ಕೇಳುತ್ತಾಳೆ ನಿನ್ನ ಸಿನಿಮಾದಲ್ಲಿ ಬಹುತೇಕ ಮನೆಗಳು ಯಾಕೆ ಪಾಳು ಪಾಳಾಗಿರುತ್ತವೆ ಅಂತ.. ಗುಲ್ಜಾರ್ ಮೌನವಾಗುಳಿಯುತ್ತಾರೆ.
ಯಾವುದೇ ಸಂಬಂಧಗಳ ಆಸರೆ ಇಲ್ಲದೆ ಬೆಳೆದ ಗುಲ್ಜಾರ್ ಆಮೇಲೆ ಕೈಗೆ ಸಿಕ್ಕ ಪ್ರತಿ ಸಂಬಂಧವನ್ನು ಎದೆಗೊತ್ತಿಕೊಳ್ಳುತ್ತಾರೆ, ವರ್ಷಗಳಾದರೂ ಅದನ್ನು ಕಾಪಾಡಿಕೊಳ್ಳುತ್ತಾರೆ… ಮೊದಲ ದಿನಗಳಲ್ಲಿ ಹತ್ತಿರವಾದ ಮೀನಾಕುಮಾರಿಯೊಡನೆ ಇವರದು ಶಾಯರಿಗಳ ನೆರಳಲ್ಲಿ ಶುರುವಾದ ಬಾಂಧವ್ಯ … ಅದರ ಬಗ್ಗೆ ಮಾತನಾಡಲು ಬೋಸ್ಕಿಗೂ ಮೊದಲು ಸಂಕೋಚವಾಗುತ್ತದೆ, ಆದರೆ ಮಗಳಲ್ಲಿ ಗೆಳತಿಯನ್ನು ಸಹ ಕಂಡಿದ್ದ ಗುಲ್ಜಾರ್ ಅದನ್ನು ಯಾವುದೇ ಅಪರಾಧಿ ಭಾವನೆ, ಸಂಕೋಚ ಇಲ್ಲದೆ ಮಗಳಲ್ಲಿ ಹೇಳಿಕೊಳ್ಳುತ್ತಾರೆ. ಆ ದಿನಗಳಲ್ಲಿ ಮೀನಾ ಕುಮಾರಿಯದು ಕೈಕೊಡುತ್ತಿದ್ದ ಆರೋಗ್ಯ, ಪ್ರತಿ ಸಲ ರಂಜಾನ್ ತಿಂಗಳಲ್ಲಿ ೩೦ ದಿನ ಉಪವಾಸ ಮಾಡುತ್ತಿದ್ದ ಮೀನಾ, ತನ್ನ ಆರೋಗ್ಯ ಅದಕ್ಕೆ ಸಹಕರಿಸುತ್ತಿಲ್ಲ ಎಂದು ಒದ್ದಾಡುವಾಗ, ನಿನ್ನ ಬದಲು ನಿನ್ನ ಹೆಸರಿನಲ್ಲಿ ನಾನು ಉಪವಾಸ ಇರುತ್ತೇನೆ ಎಂದು ರೋಜಾ ಶುರು ಮಾಡುವ ಗುಲ್ಜಾರ್ ಅದನ್ನು ಮೀನಾ ಕುಮಾರಿ ಇನ್ನಿಲ್ಲವಾದ ಮೇಲೂ ನಿಲ್ಲಿಸುವುದಿಲ್ಲ, ವರ್ಷ, ವರ್ಷ ಪ್ರತಿ ವರ್ಷ ಒಂದು ವ್ರತದಂತೆ, ಆರಾಧನೆಯಂತೆ ಉಪವಾಸ ನಡೆಸಿಕೊಂಡೇ ಬರುತ್ತಾರೆ, ಮತ್ತೆ ಅವರ ಆರೋಗ್ಯ ಕೈಕೊಟ್ಟು ವೈದ್ಯರು ಬರಿಹೊಟ್ಟೆಯಲ್ಲಿ ಮಾತ್ರೆ ತೆಗೆದುಕೊಳ್ಳಬಾರದು ಎಂದು ಹೇಳುವವರೆಗೂ…
ಮೀನಾ ಕುಮಾರಿ ಆಗಿರಬಹುದು, ಗೆಳೆಯ ರೂಹಿ ಆಗಿರಬಹುದು, ಪ್ರತಿ ವರ್ಷ ರಾಖಿ ಕಟ್ಟುವ, ಇವರು ಪ್ರೀತಿಯಿಂದ ’ಬಾಬ’ ಎಂದು ಕರೆಯುವ ಜಯಾಬಾಧುರಿ ಆಗಿರಬಹುದು, ೩೦ ವರ್ಷಗಳ ಡ್ರೈವರ್ ಸುಂದರ್ ಆಗಿರಬಹುದು, ಸಂಜೀವ್ ಕುಮಾರ್, ’ಡ್ಯಾಡಿ’ ಎಂದು ಕರೆಯುವ ತಬು ಆಗಿರಬಹುದು, ವಿನೋದ್ ಖನ್ನ, ಪಂಚಮ್ ದಾ ಎಲ್ಲರೂ… ಆ ಎಲ್ಲಾ ಸಂಬಂಧಗಳನ್ನೂ ಇವರು ಕಾಪಾಡಿಕೊಳ್ಳುತ್ತಾರೆ. ಆ ಎಲ್ಲರದೇ ಒಂದು ತೂಕವಾದರೆ ಬೇರಾದ ಮೇಲೂ ದೂರಾಗದ ಪತ್ನಿ ರಾಖಿಯೊಡನೆ ಇವರು ಕಾಪಾಡಿಕೊಂಡು ಬಂದ ಸಂಬಂಧವೇ ಇನ್ನೊಂದು ತೂಕ.
ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗ ಮದುವೆಯಾಗುತ್ತಾರೆ. ಮಗು ಆಗುತ್ತದೆ, ಯಾವುದೋ ಚಿತ್ರದ ಚಿತ್ರೀಕರಣಕ್ಕೆಂದು ಗಂಡ, ಹೆಂಡತಿ ಮಗಳು ಭೂಲೋಕದ ಸ್ವರ್ಗ ಕಾಶ್ಮೀರಕ್ಕೆ ಹೋಗುತ್ತಾರೆ, ಆದರೆ ಬರುವಾಗ ಸ್ವರ್ಗವನ್ನು ಅಲ್ಲೇ ಬಿಟ್ಟು ಬಂದಿರುತ್ತಾರೆ… ಇಬ್ಬರೂ ದೂರಾಗುತ್ತಾರೆ. ಆ ಕ್ಷಣಗಳನ್ನು ಗುಲ್ಜಾರ್ ನೆನಸಿಕೊಳ್ಳುವುದು ಹೀಗೆ ..
ಊರಲ್ಲಿ ಎಲ್ಲಾ ದೀಪಗಳು ಆರಿದ್ದವು
ಬಾಗಿಲು ಮುಚ್ಚಿದ ಕೋಣೆಯಲ್ಲಿ ಸುಮಾರು ಹೊತ್ತಿನವರೆಗೂ ಏನೂ ಕಾಣುತ್ತಿರಲಿಲ್ಲ.
ನೀನು ಹೋದ ದಿನ ಸಹ ಹೀಗೆಯೇ,
ಎಷ್ಟೋ ಹೊತ್ತಿನ ನಂತರ
ಕತ್ತಲಿಗೆ ಕಣ್ಣು ಹೊಂದಿಕೊಂಡಮೇಲೆ
ಬಾಗಿಲ ಆಕೃತಿ ಕಣ್ಣಿಗೆ ಬಿತ್ತು…
ಆದರೆ ದೂರಾಗಿದ್ದು ಅವರ ದಾಂಪತ್ಯ ಮಾತ್ರ, ಸ್ನೇಹವಲ್ಲ, ಪರಸ್ಪರ ಕೈಬಿಡಿಸಿಕೊಂಡಿದ್ದು ಗಂಡ ಹೆಂಡತಿ ಮಾತ್ರ, ಬೋಸ್ಕಿಯ ಅಪ್ಪ ಅಮ್ಮ ಅಲ್ಲ. ಬೇರಾದ ಮೇಲೂ ಒಂದು ಅದ್ಭುತ ಸ್ನೇಹವನ್ನು, ಸಂಸಾರವನ್ನು ಉಳಿಸಿಕೊಂಡವರು ಅವರಿಬ್ಬರು. ಇಷ್ಟು ವರ್ಷಗಳ ಬಳಿಕವೂ, ಎಲ್ಲರ ನಡುವೆಯೂ ಅವರು ಪರಸ್ಪರರನ್ನು ಕರೆಯುವುದು ’ಶೋನಾ’ ಎಂದೇ, ಶೋನಾ ಎಂದರೆ ಬೆಂಗಾಲಿಯಲ್ಲಿ ಮುದ್ದಿನಿಂದ ಕರೆಯುವ ಹೆಸರು. ಇಂದಿಗೂ ರಾಖಿ ಮಾಡುವ ಮೀನಿನ ಅಡಿಗೆಯ ಒಂದು ಭಾಗ ಗುಲ್ಜಾರ್ ಮನೆಗೆ ಬರುತ್ತದೆ, ಇಂದಿಗೂ ಸಹ ಗುಲ್ಜಾರ್ ಎಲ್ಲೇ ಹೋಗಲಿ ಮಗಳಿಗೆ, ಹೆಂಡತಿಗೆ ಅಲ್ಲಿಂದ ಬಟ್ಟೆ ತರುತ್ತಾರೆ, ಗುಲ್ಜಾರ್ ಈಗಲೂ ಸಹ ಹೈದರಾಬಾದಿಗೆ ಹೊರಟರು ಎಂದರೆ ಎರಡು ಅಳತೆಯ ಬಳೆಗಳು ಅವರನ್ನು ತಲುಪುತ್ತವೆ, ಚೂಡಿಬಜಾರಿನಲ್ಲಿ ಬಳೆ ಕೊಳ್ಳುವಾಗ ಅಳತೆಗೆಂದು, ಒಂದು ಬೋಸ್ಕಿಯದು, ಮತ್ತೊಂದು..
ದೂರಾದ ಮೇಲೂ ಸಹ ಬೋಸ್ಕಿಗೆ ಎರಡು ಮನೆಗಳು ಸಿಗುತ್ತವೆ, ಇಷ್ಟ ಇರುವಷ್ಟು ದಿನ ಅಮ್ಮನ ಮನೆ, ಬೇಕೆಂದಾಗ, ಬೇಕೆಂದಷ್ಟು ದಿನ ಅಪ್ಪನ ಮನೆ. ಮುದ್ದು ಮಾಡುವ ಅಪ್ಪ, ಅಪ್ಪ ಮಗಳಿಬ್ಬರಿಗೂ ಶಿಸ್ತು ಕಲಿಸುವ ಅಮ್ಮ. ಎಷ್ಟೋ ವರ್ಷಗಳ ಬಳಿಕ ಬೋಸ್ಕಿಯ ಮದುವೆ ನಿಶ್ಚಯವಾದಾಗಲೂ ಅಷ್ಟೆ, ಅಪ್ಪ ಮದುವೆಯ ಜವಾಬ್ದಾರಿ ಹೊರುತ್ತಾರೆ, ಅಮ್ಮ ಮನೆಯಲ್ಲಿನ ಜವಾಬ್ದಾರಿ ನೋಡಿಕೊಳ್ಳುತ್ತಾರೆ, ಅವರಿಬ್ಬರು ಪರಸ್ಪರ ಗಂಡ ಹೆಂಡತಿಯನ್ನು ಕಳೆದುಕೊಂಡಿದ್ದರೂ ಬೋಸ್ಕಿಗೆ ಅಪ್ಪ ಅಮ್ಮ ಇಬ್ಬರನ್ನೂ ಉಳಿಸಿರುತ್ತಾರೆ. ’ಹಾಥ್ ಚೂಟೆ ತೊ ರಿಶ್ತಾ ನಹಿ ಚೋಡಾ ಕರ್ತೆ ಹೈ, ವಕ್ತ್ ಕಿ ಶಾಖ್ ಸೆ ಲಮ್ಹೆ ನಹಿ ತೋಡಾ ಕರ್ತೆ ಹೈ’ (ಕೈ ಬಿಡಿಸಿಕೊಂಡ ಮೇಲೂ ಸಂಬಂಧಗಳನ್ನು ಕಳಚಿಕೊಳ್ಳಬಾರದು, ಕಾಲದ ರೆಂಬೆಯಿಂದ ಕ್ಷಣಗಳನ್ನು ಕಿತ್ತು ಎಸೆದು ಬಿಡಬಾರದು) ಅಂದ್ರೆ ಇದೇನಾ?
ಅಮ್ಮಂದಿರು ಮಕ್ಕಳನ್ನು ಬೆಳೆಸುವುದು ಬೇರೆ ಆದರೆ ಗುಲ್ಜಾರ್ ಮಗಳನ್ನು ಬೆಳಸಿದ ರೀತಿ ಇದೆಯಲ್ಲಾ…. ಕೆಲಸ ಕೆಲಸ ಎಂದುಕೊಂಡರೆ, ಆ ಕೆಲಸದ ನಡುವೆಯೂ ಇವರು ಮಗಳನ್ನು ಅಮ್ಮನಂತೆಯೇ ಸಾಕುತ್ತಾರೆ. ಶೂಟಿಂಗ್ ಗೆ ಹೋಗಬೇಕಾ, ಕಥೆ ಬರೆಯಲು ಹೋಗಬೇಕಾ, ಲೊಕೇಶನ್ ಗೆ ಹೋಗಬೇಕಾ, ಲಗೇಜ್ ಪ್ಯಾಕ್ ಮಾಡು, ಮಗಳನ್ನು ಎತ್ತಿಕೋ, ಜೈ ಅಂತ ಹೊರಡೋದೆ. ಮುಂದೆ ಯಾವಾಗಲೂ ಬೋಸ್ಕಿ ಅವರನ್ನ ಕೇಳ್ತಾಳೆ, ’ಸಣ್ಣ ಮಗು ನಾನು, ತುಂಟಿ ಬೇರೆ, ನಿನಗೆ ಕೆಲಸದಲ್ಲಿ ಅಡಚಣೆ ಆಗ್ತಾ ಇರಲಿಲ್ವಾ ಅಪ್ಪಾ’ ಅಂತ, ಇದೇನು ಪ್ರಶ್ನೆ ಎನ್ನುವಂತೆ ಅವಳನ್ನು ನೋಡಿ ಅವರು ಹೇಳ್ತಾರೆ, ’ನಮ್ಮದೇ ಅಸ್ತಿತ್ವದ ಒಂದು ಭಾಗ ನಮಗೆ ಅಡಚಣೆ ಹೇಗಾಗುತ್ತೆ ಮಗಳೆ’ ಅಂತ.
ಮಗಳಿಗೆ ಹದಿಮೂರು ವರ್ಷಗಳಾಗಿ, ಅವಳ ನೆನಪುಗಳನ್ನು ಅವಳೇ ಕಟ್ಟಿಕೊಳ್ಳಬಹುದು ಎಂದು ಖಾತ್ರಿ ಆಗುವವರೆಗೂ ಅವಳ ಪಾಲಿನ ನೆನಪುಗಳನ್ನೆಲ್ಲ ಅವಳಿಗೆಂದು ಕಾಯ್ದಿಡುತ್ತಾ ಹೋಗುತ್ತಾರೆ. ಅದೂ ಹೇಗೆ? ಪ್ರತಿ ವರ್ಷ ಅವಳ ಹುಟ್ಟುಹಬ್ಬಕ್ಕೆ ಅವಳ ಆ ಒಂದು ವರ್ಷದ ಸುತ್ತಲೂ ಕಥೆ ಹೆಣೆದು, ಅದನ್ನು ಒಂದು ಪುಸ್ತಕವನ್ನಾಗಿಸಿ ಹುಟ್ಟಿದ ಹಬ್ಬದ ದಿನ ಅದನ್ನು ಅವಳಿಗೆ ಕೊಡುತ್ತಾರೆ. . ಬೋಸ್ಕಿಯ ಹೆಸರಿನ ಮೊದಲ ಪುಸ್ತಕ ಶುರು ಆಗುವುದು ಅಮ್ಮನ ಗರ್ಭದ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಬಂದ ದಿನದಿಂದ…
ಬೋಸ್ಕಿಗೆ ಒಂಟಿತನ ಅನ್ನಿಸಬಾರದು ಎಂದು ಮಲ ತಂಗಿ, ತಮ್ಮಂದಿರ ಕುಟುಂಬವನ್ನು ಹತ್ತಿರ ಕರೆದುಕೊಳ್ಳುತ್ತಾರೆ, ಮನೆಯಲ್ಲಿ ಯಾವಾಗಲೂ ಮಕ್ಕಳಿರುವಂತೆ ನೋಡಿಕೊಳ್ಳುತ್ತಾರೆ, ತಮ್ಮ ಪ್ರತಿ ಸ್ನೇಹವೂ ಕುಟುಂಬವನ್ನು ಒಳಗೊಳ್ಳುವಂತೆ ನೋಡಿಕೊಳ್ಳುತ್ತಾರೆ…. ತಮಗೆ ಸಿಗದ ಬಾಲ್ಯವನ್ನು ಮಗಳಿಗೆ ಕಟ್ಟಿಕೊಡಲು ಪ್ರತಿ ಘಳಿಗೆ ಪ್ರಯತ್ನಿಸುತ್ತಲೇ ಇರುತ್ತಾರೆ.
ಬೆಳೆಯುವಾಗ ಬೋಸ್ಕಿ ಮಹಾ ಕುಸುಬಿಷ್ಟೆ. ಅವಳನ್ನು ಒಪ್ಪಿಸುವುದು, ಅವಳ ಮನಸ್ಸೊಪ್ಪುವಂತೆ ಅವಳನ್ನು ಶಾಲೆಗೆ ರೆಡಿ ಮಾಡುವುದು ಎಂದರೆ ಕೆಲಸದವಳಿಗೆ ಜೀವ ಬಿದ್ದು ಹೋಗಬೇಕು! ಎರಡು ಜಡೆ ಹಾಕಬೇಕು, ಅದೂ ಹೇಗೆ, ಎರಡೂ ಜಡೆಗಳೂ ಕಿವಿಗಳಿಂದ ಒಂದೇ ಅಂತರದಲ್ಲಿರಬೇಕು, ಎರಡೂ ಪರಸ್ಪರ ಸಮಾನ ಎತ್ತರದಲ್ಲಿರಬೇಕು, ಇಲ್ಲ ಅಂದರೆ ಜಡೆ ಬಿಚ್ಚಿಯೇ ಸಿದ್ಧ. ನೋಡೋಷ್ಟು ನೋಡಿ, ಒಂದು ದಿನ ಗುಲ್ಜಾರ್ ತಾವೇ ಕಣಕ್ಕಿಳಿದುಬಿಡುತ್ತಾರೆ. ಅಚ್ಚುಕಟ್ಟಾಗಿ ಮಧ್ಯ ಬೈತಲೆ ತೆರೆದು, ಸಿಕ್ಕುಬಿಡಿಸಿ, ಜಡೆ ಹೆಣೆದೇ ಬಿಡುತ್ತಾರೆ, ಅಂದಿನಿಂದ ಮಗಳನ್ನು ತಯಾರು ಮಾಡುವುದು ಅವರದೇ ಕೆಲಸ. ಪ್ರತಿ ದಿನ ಮಗಳನ್ನು ಶಾಲೆಗೆ ಬಿಡುತ್ತಿದ್ದವರು ಅವರು, ಎಷ್ಟೇ ಕೆಲಸ ಇದ್ದರು ಸಂಜೆ ನಾಲ್ಕಕ್ಕೆ ಅವರು ಬೋಸ್ಕಿ ಶಾಲೆಯ ಬಳಿ, ಅವಳನ್ನು ಕರೆದೊಯ್ಯಲು. ಮಗಳು ಬಾಲ ಭಾಷೆಯಲ್ಲಿ ಬರೆದ ಸಣ್ಣ ಸಣ್ಣ ಪತ್ರಗಳಲ್ಲಿ ಪ್ರತಿಯೊಂದೂ ಅವರ ಬಳಿ ಈಗಲೂ ಇದೆ. ಆಗ ಬೋಸ್ಕಿ ಬರೆದ, ಗೋಡೆಯ ಮೇಲೆ ಗೀಚಿದ ಯಾವುದೇ ರೇಖೆಯನ್ನು ಅವರು ಅಳಿಸುವುದಿಲ್ಲ..
ಈ ರೇಖೆಗಳನ್ನು ಅಳಿಸಬೇಡಿ
ಅವು ಹಾಗೇ ಇರಲಿ
ಗುಲಾಬಿ, ಮೃದು ಬೆರಳುಗಳಲ್ಲಿ
ನನ್ನ ಕಂದ ಎಳೆದ
ಗೆರೆಗಳು ಅವು.
ಅವುಗಳಿಗೆ ಒಂದು ಆಕಾರ
ಇಲ್ಲದಿದ್ದರೇನು?
ಆ ಗೆರೆಗಳಲಿ
ನನ್ನ ಮಗಳ ಬೆರಳುಗಳನ್ನು ಕಾಣುತ್ತೇನೆ
ಅಲ್ಲಿ ನಾನು
ನನ್ನ ಅಸ್ತಿತ್ವವನ್ನು ಕಾಣುತ್ತೇನೆ.
ಸಿಂಡ್ರೆಲಾ ಬಗ್ಗೆ ಅಪಾರ ಪ್ರೀತಿ ಇದ್ದ ಬೋಸ್ಕಿಗೆ ಆ ಕಥೆಯ ಸುಮಾರು ೧೫ ಅವತರಣಿಕೆಗಳನ್ನು ತಾವು ಹೋದ ಕಡೆಯಿಂದೆಲ್ಲಾ ಹುಡುಕಿ ತಂದುಕೊಡುತ್ತಾರೆ, ಅಷ್ಟೇ ಅಲ್ಲ, ಅವಳಲ್ಲಿ ಪುಸ್ತಕಗಳ ಬಗ್ಗೆ, ಓದುವುದರ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸುತ್ತಾರೆ.
ಅವರು ಎಂದೂ ಮಗಳಿಗೆ ಅಪ್ಪ ಎನ್ನುವ ಅಧಿಕಾರದಲ್ಲಿ ಬುದ್ಧಿ ಹೇಳಲು ಹೋಗುವುದೇ ಇಲ್ಲ, ಅವರದು ಸಿಂಪಲ್ ತರ್ಕ, ’ನನ್ನ ವಯಸ್ಸು ಎಷ್ಟೇ ಆಗಿರಬಹುದು, ನಿನಗೆ ಒಂದು ವರ್ಷ ಎಂದರೆ, ಅಪ್ಪನಾಗಿ ನನಗೂ ಒಂದೇ ವರ್ಷ ವಯಸ್ಸು, ಇಬ್ಬರೂ ಜೊತೇಲೇ ಕಲೀಬೇಕು ಅಲ್ವಾ’ ಅಂತ. ಒಮ್ಮೆ ಇವರ ಮನೆಯ ಡ್ರೈವರ್ ಏನೋ ವಿಷಯಕ್ಕೆ ಸುಳ್ಳು ಹೇಳಿ, ಬೋಸ್ಕಿ ಹೇಳಿದ್ದಕ್ಕೆ ಹಾಗೆ ಮಾಡಿದೆ ಅನ್ನುತ್ತಾನೆ. ಇವಳು ಇಲ್ಲ ಅನ್ನುತ್ತಾಳೆ. ಗುಲ್ಜಾರ್ ’ನೀನು ಹೇಳೋದು ನಿಜಾನ? ’ ಅನ್ನುತ್ತಾರೆ. ’ನಾನು ಸುಳ್ಳು ಹೇಳಲ್ಲ ಅಪ್ಪ’ ಅನ್ನುತ್ತದೆ ಮಗು. ಅವಳ ಆ ಮಾತು, ನೋಟ ಗುಲ್ಜಾರ್ ರನ್ನು ಹೇಗೆ ಕಾಡಿರುತ್ತದೆ ಎಂದರೆ, ಮುಂದೆಂದೂ ಅವರು ಮಗಳನ್ನು ಆ ಪ್ರಶ್ನೆ ಕೇಳುವುದೇ ಇಲ್ಲ… ಅವಳು ಏನನ್ನೋ ಹೇಳದೆ ಮುಚ್ಚಿಡುತ್ತಿದ್ದಾಳೆ ಎಂದು ಗೊತ್ತಿರುವಾಗಲು..
ಇಂದಿಗೂ ಇವಳ ಎಲ್ಲಾ ಬರಹಗಳ, ಇವಳ ಚಿತ್ರಗಳ ಬಗೆಗಿನ ಬರಹಗಳ, ಇವಳ ಸಾಧನೆಗಳ, ಬದುಕಿನ ಮುಖ್ಯ ಘಟ್ಟಗಳನ್ನು ಅವರು ದಾಖಲಿಸುತ್ತಲೇ ಇದ್ದಾರೆ. ನಿಜ ಪ್ರೇಮ ನಾಮ ಪದವಲ್ಲ, ಕ್ರಿಯಾ ಪದ.
ಮಗಳ ಮದುವೆಯ ದಿನ, ಅಳುವುದಿಲ್ಲ ಎಂದು ಮಗಳಿಗೆ ಮಾತು ಕೊಟ್ಟಿದ್ದರೂ ಅವರ ನಿಯಂತ್ರಣವನ್ನು ಮೀರಿ ಕಣ್ಣೀರ ಹನಿಗಳು ಅವರ ಕಣ್ಣುಗಳಿಂದ ತಪ್ಪಿಸಿಕೊಂಡು ಜಾರುತ್ತಲೇ ಇರುತ್ತವೆ. ’ಅಪ್ಪಾ ನಾನೆಲ್ಲಿ ಹೋಗ್ತೀನಿ, ಇದೇ ಊರಲ್ಲಿ ಇರ್ತೀನಲ್ಲ, ಸ್ವಲ್ಪ ದಿನ ಅಷ್ಟೇ, ಮತ್ತೆ ಬಂದು ನಿಮ್ಮ ಕಾರು ತಗೊಂದು ಹೋಗಲಾ ಅಪ್ಪ ಅಂತ ಬೆನ್ನು ಬೀಳ್ತೀನಿ ನೋಡಿ’..’ಅದು ಹಾಗಲ್ಲ ಮಗಳೆ, ನಾಳೆಯಿಂದ ಪ್ರತಿ ದಿನ ಬೆಳಗಾಗುತ್ತದೆ, ನೀನು ಎದ್ದೆಯಾ, ಕೆಲಸಕ್ಕೆ ತಯಾರಾದೆಯಾ ಅಂತ ಯೋಚಿಸುತ್ತಲೇ ನಾನು ನಿನ್ನ ಕೋಣೆಗೆ ಚಹಾ ಕಳಿಸುತ್ತೇನೆ, ಆದರೆ ನಾಳೆಯಿಂದ ನೀನು ಅಲ್ಲಿರುವುದಿಲ್ಲ.. ಅದು ನನ್ನನು ಕೊಲ್ಲುತ್ತದೆ’ ಎನ್ನುತ್ತಾರೆ.
ಯಾಕೋ ಆಮೇಲೆ ಸುಮಾರು ಹೊತ್ತು ನನಗೆ ಓದು ಮುಂದುವರಿಸಲಾಗುವುದಿಲ್ಲ …
ಫಾಲ್ಕೆ ಪ್ರಶಸ್ತಿ ಬಂದಿದೆ, ಅಭಿನಂದನೆಗಳು ಗುಲ್ಜಾರ್ ಜೀ, ಆದರೆ ಬೋಸ್ಕಿಯ ಈ ಪುಸ್ತಕ ಯಾವ ಪ್ರಶಸ್ತಿಗಿಂತ ಕಡಿಮೆ ಹೇಳಿ?




Beautiful writeup.
Nimage gulzar yaakishtu iahta anta eega artha aaytu.
ಆಪ್ತ ಬರಹ. ಪ್ರೇಮ ನಾಮಪದವಲ್ಲ ಕ್ರಿಯಾಪದ, ಹಾಗೆಯೇ ಮಳೆ ನಿಂತ ಮೇಲೂ ಹನಿ ತೊಟ್ಟಿಕ್ಕುವಂತೆ ಈ ಬರಹವ ಓದಿ ಮುಗಿಸಿದ ಮೇಲೂ ಎದೆಬಾಗಿಲ ಕದ ತಟ್ಟುತ್ತಲೇ ಇರುತ್ತದೆ.
pade pade ammanna kano haage aaytu. Tumba tumba aaptavada baraha madam
Beautiful 🙂 ತಾಯಿಯಂತಹ ತಂದೆ ಗುಲ್ಜಾರ್
gulzaarji abhinandanegaLu…nanna hrudayakke hattirada kavi..! uttama baraha samatuukadinada kudida aatmiya lekhana…!!!!!!!!
ಬದುಕಿನ ಸಣ್ಣ ಖುಷಿಯನ್ನು ಅನುಭವಿಸುವವರು ಹಾಗೂ ಕಷ್ಟ ಸುಖಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಸ್ವೀಕರಿಸುವವರು ಕಥೆ ಕವನಗಳನ್ನು ಇದು ನನ್ನದೇ ಅನ್ನುವ ರೀತಿಯಲ್ಲಿ ಬರೆಯುತ್ತಾರೆ.
‘ಒಂದು ಅದ್ಭುತ ಕವಿತೆಗೆ ಬೆಳದಿಂಗಳ ಉಡುಗೆ ತೊಡಿಸಿದರೆ ಅದು ಗುಲ್ಜಾರ್’ ಆ ಬೆಳದಿಂಗಳ ಸೆರೆ ಹಿಡಿದು ಓದುಗರಿಗೆ ಕೊಡುವುದಾದರೆ ನಿಮ್ಮ ಈ ಲೇಖನ. ಇದು ‘ಕಾಲಂ’ ಅಲ್ಲಾ, ಕಾಲವನ್ನೆ ಕಡೆದಿಡುವ ಕಾವ್ಯ.
~ಅನಿಲ
ನಿಮ್ಮ ಬರಹಗಳಲ್ಲಿ ವಿಷಯದೊಳ ಹೊಕ್ಕಿ ಆಪ್ತತೆಯನ್ನು ಹನಿಸುವ ನಿಮ್ಮ ಸಂವೇದನಾ ಸಾಮರ್ಥ್ಯ ಹೊಟ್ಟೆ ಕಿಚ್ಚು ಹುಟ್ಟಿ ಸುತ್ತದೆ.
ಚೆಂದದ ಬರಹ … ನಿಮ್ಮ ಶೈಲಿ ಆಪ್ತ ಮತ್ತು ಹೊಸ ಸ್ಪಂದನೆಗಳಿಂದ ಕೂಡಿದ್ದು ಓದು ಪ್ರೀತಿಗೆ ಕಾರಣವಾಗುತ್ತದೆ
Yaako kannalli neeru ….
ಗುಲ್ಜಾರ್ ಬಗ್ಗೆ ಅಣುವಷ್ಟು ಗೊತ್ತಿಲ್ಲದ ನನಗೆ, ನಿಮ್ಮ ಬರಹ ಗುಲ್ಜಾರ್ ಕಡೆಗೊಂದು ಕುತೂಹಲದ, ಅಕ್ಕರೆಯ ಕಣ್ಣನಿಡುವಂತೆ ಮಾಡಿದೆ…
ಅದರಲ್ಲೂ
”
ನಾನು ಸುರಕ್ಷಿತವಾಗಿದ್ದೇನೆ ಅಂತ ಗೊತ್ತು,
ನನ್ನ ಸುತ್ತಾ ಅಪ್ಪನ ತೋಳುಗಳಿವೆ,
ನಾ ನಡೆಯುವ ಹಾದಿ ಸರಿ ಎಂದು ಗೊತ್ತು,
ನನ್ನ ಹಿಡಿಯಲ್ಲಿ ಅಪ್ಪನ ಕಿರುಬೆರಳಿದೆ.
ಅಪ್ಪ ಸೆಲ್ಯುಲಾಯ್ಡ್ ನಲ್ಲಿ ಕೈಯಾಡಿಸ್ತಾರೆ
ಹಾಗಾಗಿ ನಾ ನೋಡಬಲ್ಲೆ.
ನಾನು ಬರೆಯಬಲ್ಲೆ ಎಂದು ಗೊತ್ತು
ಯಾಕೆಂದರೆ ಅದೇ ಶಾಯಿ ಹರಿಯುತ್ತದೆ ನನ್ನಲ್ಲೂ.
ನಾನು ಮಾಡಬಲ್ಲೆ ಎಂದು ಗೊತ್ತು
ಯಾಕೆಂದರೆ ಅದನ್ನು ಅಪ್ಪ ನಂಬಿದ್ದಾನೆ
ನಾನು ಇದ್ದೇನೆ ಎಂದು ಗೊತ್ತು
ಯಾಕೆಂದರೆ ಅಪ್ಪ ಇದ್ದಾನೆ”
ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಿದ್ದೇನೆ..
ತೃಪ್ತಿಯಾಗುತ್ತಿಲ್ಲಾ…
ಥಾಂಕ್ಯು ಮತ್ತೊಂದು ಚಂದದ, ಕಾಡುವ ಬರಹಕ್ಕೆ..
Very insightful and sensitive portrayal.
ಗುಲ್ಜಾರ ಅಂದರೆ ಅದೊಂದು ಜಾದೂ, ಮನಸ್ಸನ್ನು ಆವರಿಸಿ, ಅರಳಿಸುವ ಅಪೂರ್ವ ಸುಗಂಧದ ಪರಿಮಳ, ಬದುಕನ್ನು ಅಪ್ಪುತ್ತ, ಅದರೊಂದಿಗೆ ಮಾತಿಗೆ ತೊಡಗುತ್ತ,ಮತ್ತೇನೊ ಹುಡುಕುತ್ತ, ಶತಮಾನಗಳನ್ನಲ್ಲ ಕ್ಷಣಗಳಲ್ಲೆ ಅನುಭವಿಸಿಬಿಟ್ಟರೆ ಹೇಗೆ? ಎಂದೆನ್ನುತ್ತ ಕ್ಷಣಗಳನ್ನು ಯುಗವೆಲ್ಲ ಅನುಭವಿಸಲೆಳಸುವ ಗಾರುಡಿಗ ಇನ್ನೊಂದೆಡೆ. ಮಾಂತ್ರಿಕ ಮೋಡಿಗಾರ! ಇಂತಹ ಜಾದೂವೊಂದು ನಮ್ಮ ಕಾಲದಲ್ಲಿ ಇತ್ತು ಎನ್ನುವುದೇ ನಮ್ಮೆಲ್ಲರ ಭಾಗ್ಯ…. ಮುಂದಿನ ನಮ್ಮ ಭೇಟಿಯಲ್ಲಿ ನಿಮ್ಮ ಬಗ್ಗೆ ಒಂದು ಮಾತು ಬಂದು ಹೋಗಲಿದೆ ಸಂಧ್ಯಾಜಿ. ….
Ah. loved reading this Sandhya Rani. Great..
Wha..kya bath hi….grt article. …respected.