’ಒಂದು ಕಥೆಯನ್ನೋ, ಕಾದಂಬರಿಯನ್ನೋ, ಕಾವ್ಯವನ್ನೋ ಓದುವುದು ಹೇಗೆ’ ಎಂದು ಕೇಳಿದರೆ ನಾನು ಬಹುಶಃ ದಾಹದಲ್ಲಿರುವಾಗ ಗ್ಲಾಸಿನ ಚಂದ ಗಮನಿಸದೆ ಗಟ ಗಟನೆ ನೀರು ಕುಡಿದ ಹಾಗೆ, ಸಮುದ್ರ ನೋಡಲು ಹೋದಾಗ ಪಾದದ ಜೊತೆ ಬಟ್ಟೆಯೂ ಒದ್ದೆಯಾದರೆ ಎಂದು ಚಿಂತಿಸದೆ ತೆರೆಗಳನ್ನು ಕರೆಯುವ ಹಾಗೆ, ಮೊದಲ ಮಳೆಗೆ ನಮ್ಮನ್ನು ಒಡ್ಡಿಕೊಂಡ ಹಾಗೆ, ಪ್ರೀತಿಯಲ್ಲಿ ಬಿದ್ದ ಹಾಗೆ ಎಂದು ಹೇಳಿಯೇನು. ಹೌದು ಓದುವುದೆಂದರೆ ಹಾಗೆ, ಮೊದಲು ಮುಖ್ಯವಾಗುವುದು ಓದಿನ ವಿಷಯ, ಅದರ ಆಳ, ಅದಕ್ಕೆ ಅಕ್ಷರಗಳನ್ನು ತೊಡೆಸಿದ ಸೊಬಗು, ಕಟ್ಟಿದ ಬಿಗಿ, ಕಸುಬುದಾರಿಕೆಯ ಚಂದ. ಬರೆದವರು ಯಾರು ಎನ್ನುವುದು ಆ ನಂತರ ಬರುವ ವಿಷಯ. ಆ ಕಥೆಯ ಪಾತ್ರಗಳು ಪಾತ್ರಗಳಾಗಿ ಬದುಕಿವೆಯಾ, ಅಥವಾ ಬರೆದವರ ವಿಚಾರದ ಮುಂದುವರಿಕೆಯಾಗಿಯೇ ಎಲ್ಲಾ ಪಾತ್ರಗಳೂ ಇವೆಯಾ ಇದು ನಂತರ ಕ್ರಮ ಕ್ರಮವಾಗಿ ಯೋಚಿಸಬೇಕಾದ ವಿಷಯ. ಇಲ್ಲಿ ಕಥೆಗಾರನ ಯೋಚನಾ ಕ್ರಮ, ನಂಬಿಕೆ, ಆಚರಣೆ ಪಾತ್ರಗಳಿಗೂ ಇರಲೇಬೇಕಿಲ್ಲ, ಹಾಗೆ, ಪಾತ್ರಗಳ ಮಾತು, ವಿಚಾರ, ನಡವಳಿಕೆಗಳ ಜವಾಬ್ದಾರಿಯನ್ನು ಕಥೆಗಾರ ಸಹ ಹೊರಬೇಕಿಲ್ಲ. ಅದಕ್ಕೆ ಯಾವುದೇ ಕಥಾ ಸಂಕಲನ, ಕವನ ಸಂಗ್ರಹ ಅಥವಾ ಕಾದಂಬರಿ ಓದುವಾಗ ನಾನು ಮೊದಲು ಮುನ್ನುಡಿ ಓದುವುದಿಲ್ಲ. ಮೊದಲು ಅದನ್ನು ನನ್ನ ಕಣ್ಣಿಂದಲೇ ನೋಡಬೇಕಾಗುತ್ತದೆ, ಅದನ್ನು ಓದಿದಾಗ ನನ್ನ ಸ್ಪಂದನೆ ಕೇವಲ ನನ್ನದೇ ಆಗಿರಬೇಕಾಗುತ್ತದೆ. ಮೊದಲೇ ಮುನ್ನುಡಿ ಓದಿಬಿಟ್ಟರೆ ನಾನು ಆ ಕನ್ನಡಕದೊಳಗಿಂದಲೇ ಪುಸ್ತಕವನ್ನು ಓದುತ್ತೀನೇನೋ ಎನ್ನುವ ಭಯ ನನಗೆ. ಅದಕ್ಕೇ ಪುಸ್ತಕ ಓದಿ, ಆ ನಂತರ ಮುನ್ನುಡಿ ಓದುತ್ತೇನೆ.
ಹೀಗೆ ಬರಹಗಾರ ಮತ್ತು ಬರಹವನ್ನು ಪ್ರತ್ಯೇಕಿಸಿ ಓದುವುದರಿಂದ ಇನ್ನೂ ಒಂದು ನಿರಾಳತೆ ಇದೆ. ನಾವು ಬರಹವನ್ನು ಯಾವುದೇ ಪೂರ್ವಾಗ್ರಹ ಇಟ್ಟುಕೊಳ್ಳದೆ ನಮ್ಮದಾಗಿಸಿಕೊಳ್ಳಬಹುದು. ಯಾವುದೇ ಬರಹವನ್ನು ಬರಹಗಾರನ ಕಾರಣಕ್ಕಾಗಿ ಸಮರ್ಥಿಸಿಕೊಳ್ಳಲೇಬೇಕಾದ ಅನಿವಾರ್ಯತೆ ನಮಗಿರುವುದಿಲ್ಲ, ಹಾಗೆಯೇ ಬರಹಗಾರನ ಕಾರಣದಿಂದ ಬರಹವನ್ನು ಗುಮಾನಿಯಿಂದ ನೋಡಿ ವಿಶ್ಲೇಷಿಸಬೇಕಿಲ್ಲ.
ಹಾಗಾದರೆ ಪುಸ್ತಕ ಓದಿದಾಗ ನನ್ನಲ್ಲಿ ಬರುವ ಸ್ಪಂದನೆ ಸಂಪೂರ್ಣವಾಗಿ ಮತ್ತು ಸ್ವತಂತ್ರವಾಗಿ ನನ್ನದೇ ಎಂದರೆ ಅದೂ ಪೂರ್ಣ ಸತ್ಯವಲ್ಲ. ಅದು ನನ್ನ ಇದುವರೆಗಿನ ಓದು, ಜೀವನ, ಮಾಡಿದ ಚರ್ಚೆಗಳು, ಆಲಿಸಿದ ಭಿನ್ನ ಭಿನ್ನ ವಾದಗಳು ಎಲ್ಲವೂ ನನ್ನಲ್ಲಿ ಬೆರೆತು, ಮಥಿಸಿ ನಂತರ ನನ್ನಲ್ಲಿ ಉಳಿದ ಕೆನೆಯ ಪ್ರತಿಬಿಂಬ. ನನ್ನಲ್ಲೇ ಮೂಡಿದುದು ಮತ್ತು ನನ್ನಲ್ಲಿ ಉಳಿದದ್ದು, ಬೆಳೆದದ್ದು ಸೇರಿ ನನ್ನ ಸ್ಪಂದನೆಯನ್ನು ರೂಪಿಸುತ್ತದೆ.
ಇದು ಕಥೆ ಕಾದಂಬರಿಗಳ ಮಟ್ಟಿಗಾಯಿತು. ಆದರೆ ವೈಚಾರಿಕ ಬರಹಗಳಿಗೆ ಇದು ಅನ್ವಯಿಸುವುದಿಲ್ಲ, ವೈಚಾರಿಕ ಬರಹ ಮತ್ತು ಮಾತು ಲೇಖಕನಿಂದ ಒಂದು ಬದ್ಧತೆಯನ್ನು ಬಯಸುತ್ತದೆ. ಆ ಜವಾಬ್ದಾರಿಯನ್ನು ಬರೆದವರು ಹೊರಬೇಕಾಗುತ್ತದೆ. ಹಾಗಾಗಿ ಆಗ ಬರಹ ಮತ್ತು ಬರಹಗಾರ ಎರಡೂ ಒಂದೇ ನೆಲೆಯಲ್ಲಿರಬೇಕಾಗುತ್ತದೆ.
ಇರಲಿ ಈ ಯಾವ ಯೋಚನೆಯಿಲ್ಲದೆ ನಾನು ಓದಿದ ಒಂದು ಕಥೆಯ ಬಗ್ಗೆ ಬರೆಯಬೇಕು, ಈ ಎಲ್ಲಾ ಯೋಚನೆ ಶುರು ಆಗಿದ್ದು ಆ ಕಥೆಯನ್ನು ಓದಿದ ನಂತರ. ಆ ಸಂಕಲನದ ಕಥೆಗಳೂ ಅವುಗಳಲ್ಲಿದ್ದ ಪ್ರಶ್ನೆ, ತನ್ನೊಳಗಿನ ಹುಡುಕಾಟ, ತನ್ನತನದ ಹುಡುಕಾಟ, ತನ್ನೊಳಗಿನ ಇಬ್ಬರ ನಡುವಿನ ನಿರಂತರ ಸಂಘರ್ಷಗಳಿಂದಲೇ ಇಷ್ಟವಾಗಿದ್ದವು.
ಅದರಲ್ಲೊಬ್ಬ ಬುದ್ಧನಂತವನ ಕಥೆ. ನಡುರಾತ್ರಿಗೆದ್ದು, ಬಟ್ಟೆಬರೆ ಎಲ್ಲವನ್ನೂ ಸೂಟ್ ಕೇಸಿಗೆ ತುಂಬಿ, ಮೂಲೆಯಲ್ಲಿದ್ದ ಪ್ಲಾಸ್ಟರ್ ಆಫ್ ಪ್ಯಾರೀಸ್ ಬುದ್ಧನ ಕಡೆಗೆ ನೋಡಿ ೧೨ ರ ಟ್ರೇನು ಹಿಡಿಯಲು ಧಾವಿಸುವವನು. ಆದರೆ ಕಥೆ ಇಲ್ಲಿಂದ ಶುರು ಆಗುವುದೂ ಇಲ್ಲ, ಇಲ್ಲಿಗೆ ನಿಲ್ಲುವುದೂ ಇಲ್ಲ. ಕಥೆಯಲ್ಲಿ ಒಂದು ಸಾಲು ಬರುತ್ತದೆ ’೧೫ನೇ ವಯಸ್ಸಿನವರೆಗೂ ರಾಜ, ಆಮೇಲೆ ಖೋಜ’ ಎಂದು. ಇಲ್ಲಿ ’ಖೋಜ’ ಎನ್ನುವುದು ಆತನ ಲೈಂಗಿಕತೆಗೆ ಸಂಬಂಧಿಸಿದ ವಿಷಯವಲ್ಲ, ಆತ ಇನ್ನೊಬ್ಬರಿಗಾಗಿ ತನ್ನತನವನ್ನು ಕೊಂದು ಬೇರ್ಯಾರೋ ಆಗಿ ಬದುಕುವುದಕ್ಕೆ ಸಂಬಂಧಿಸಿದ್ದು. ಹದಿನೈದನೇ ವಯಸ್ಸಿನವರೆಗೂ ಸರಿಯಾಗಿ ಓದದ ರಾಜಣ್ಣ ಹದಿನೈದರ ನಂತರ ’ಇದ್ದಕ್ಕಿದ್ದಂತೆ ಓದಿ ಎಷ್ಟು ಬುದ್ಧಿವಂತನಾಗುತ್ತಾನೆ’, ಆದರೆ ಅದೇ ಸಮಯದಿಂದ ತನ್ನ ಕಣ್ಣಿಗೆ ತಾನು ಖೋಜಣ್ಣನಾಗಿ ಕಾಣಿಸಲು ಶುರು ಆಗುತ್ತಾನೆ. ಗೆಳೆಯರಿಗಾಗಿ, ಮೈಮುರಿಯ ಹೊಡೆದ ಅಪ್ಪನಿಗಾಗಿ, ಹೆಡ್ಮಾಸ್ಟರ ಹೊಗಳಿಕೆಗಾಗಿ ಹುಡುಗ ತಾನು ಖೋಜಣ್ಣನಾಗಿರುವುದೇ ಸುಖ ಎಂದುಕೊಂಡು ಬಿಡುತ್ತಾನೆ. ಹಾಗೆಯೇ ಓದಿ, ಕಾಲೇಜಿನಲ್ಲಿ ಪಾಠ ಕಲಿಸುವ ಮೇಷ್ಟ್ರಾಗಿ, ಪಿ ಎಚ್ ಡಿ ಮಾಡುತ್ತಾ, ಪಿ ಎಚ್ ಡಿ ಮಾರ್ಗದರ್ಶಕ ಪ್ರೊಫೆಸರರ ಕಣ್ಣಿನಲ್ಲಿ ಜಾಣನಾಗಿ, ಸಹೋದ್ಯೋಗಿಯ ಕಣ್ಣಿನಲ್ಲಿ ಅಸೂಯೆ ಹುಟ್ಟಿಸುವ ಈ ರಾಜಣ್ಣನಲ್ಲಿ ಒಂದು ಜಿಜ್ಞಾಸೆ ಶುರು ಆಗಿದೆ. ವೈಚಾರಿಕವಾಗಿ ಪ್ರಖರನಾದಂತೆಲ್ಲಾ, ವೈಯಕ್ತಿಕವಾಗಿ ಟೊಳ್ಳಾಗುತ್ತಾ ಇರುವೆನೇನೋ ಎನ್ನುವ ಸಂದೇಹ ರಾಜಣ್ಣನನ್ನು ಕಾಡತೊಡಗುತ್ತದೆ.

ಅವನ ಕಾಲಿನಲ್ಲೆದ್ದ ಎಕ್ಸಿಮಾದ ತುರಿಕೆಯಂತೆ ಆ ಜಿಜ್ಞಾಸೆ ಅವನನ್ನು ನಿರಾಳವಾಗಿಡಲು ಬಿಡುವುದಿಲ್ಲ. ಅವನು ಎಲ್ಲ ಮರೆತೆ ಎಂದುಕೊಂಡಾಗ ಮತ್ತೆ ತುರಿಕೆ ಶುರುವಾಗುತ್ತದೆ, ಮತ್ತೆ ಪ್ರಶ್ನೆಗಳೇಳುತ್ತವೆ. ಅವನಿಗೆ ಎಲ್ಲದರ ಬಗ್ಗೆ ದ್ವಂದ್ವ, ಎಲ್ಲದರ ಬಗ್ಗೆ ತನ್ನ ’ನಿಜದ ತಾನು’ ಮತ್ತು ’ತೋರಿಕೆಯ ತಾನು’ ಹೇಗೆ ಪ್ರತಿಕ್ರಯಿಸುತ್ತೇವೆ ಎನ್ನುವುದರ ಬಗ್ಗೆ ಗೊಂದಲ. ತನ್ನ ನಡುವಳಿಕೆಯನ್ನು ಇವನು ಒಂದೇ ಸಮಯದಲ್ಲಿ ತನ್ನ ಕಣ್ಣುಗಳಿಂದ ಮತ್ತು ತನ್ನ ಸುತ್ತಲಿನವರ ಕಣ್ಣಿಂದ ನೋಡುತ್ತಿರುತ್ತಾನೆ, ಅವರ ಕಣ್ಣಿನಲ್ಲಿ ತಾನು ಏನು ಎನ್ನುವುದೂ ಅವನಿಗೆ ಮುಖ್ಯವಾಗಿರುವುದರಿಂದ ತನ್ನ ಕಣ್ಣಿನ ನೋಟಕ್ಕೆ ಒಂದು ಪಟ್ಟಿ ಕಟ್ಟಲು, ಪ್ರಯತ್ನಿಸುತ್ತಾ, ಅಲ್ಲೂ ಸೋಲುತ್ತಾ ಒದ್ದಾಡುತ್ತಿರುತ್ತಾನೆ. ಅವನು ಮಾಡುತ್ತಿರುವ ಕೆಲಸ, ನಡೆಸುತ್ತಿರುವ ಸಂಶೋದನೆ ಅವನಿಗೆ ಆಸಕ್ತಿ ಹುಟ್ಟಿಸುತ್ತಿಲ್ಲ, ತಮ್ಮಿಬ್ಬರದ್ದೂ ದೈಹಿಕ ಹಂಗನ್ನು ತೊರೆದ ’ಪವಿತ್ರ ಪ್ರೇಮ’ ಎಂದು ಹೇಳುತ್ತಲೇ ತನ್ನ ಉಪಾಧ್ಯಾಯರ ಮಗಳ ತುಟಿಯನ್ನು ಹೀರಿ, ಕಾಮವನ್ನು ಧಿಕ್ಕರಿಸುತ್ತಲೇ, ಅದಕ್ಕಾಗಿ ಹಪಹಪಿಸುವ ಅವನ ಸಮಸ್ಯೆ ಎಂದರೆ ಆತ ತನ್ನ ಒಳದನಿಗೂ ಕಿವುಡಾಗಲಾರ, ಜಗತ್ತಿನ ದನಿಗೂ ಕಿವುಡಾಗಲಾರ. ಹಾಗೆಂದು ಒಂದು ನಿರ್ಣಯ ತೆಗೆದುಕೊಂಡು ಅದಕ್ಕೆ ಬದ್ಧನಾಗಿ ಬದುಕಲಾರ, ಅವನಿಗೆ ಅದೂ ಬೇಕು, ಇದೂ ಬೇಕು.
ಈ ಗೊಂದಲದಲ್ಲಿರುವಾಗಲೇ ಇವನಿಗೆ ಒಂದು ದಿನ ಕಾಲೇಜಿಗೆ ಹೊರಡಬೇಕು ಎಂದುಕೊಳ್ಳುವಾಗ ತನ್ನ ಗಡಿಯಾರ ನಿಂತಿದೆ ಎಂದು ಗೊತ್ತಾಗುತ್ತದೆ. ಇನ್ನಿಲ್ಲದ ಉಮೇದಿನಿಂದ ’ತನ್ನ ಪಿ ಎಚ್ ಡಿ ಪ್ರಬಂಧವನ್ನು ಟೇಬಲ್ಲಿನಿಂದ ಸರಿಸಿ ಬೀರುವಿನೊಳಗಿಟ್ಟು’, ಗಡಿಯಾರ ಬಿಚ್ಚುತ್ತಾ, ಅದನ್ನು ರಿಪೇರಿ ಮಾಡುತ್ತಾ, ಅದರ ಚಲನಶೀಲತೆಗೆ ಮೋಹಗೊಳ್ಳುತ್ತಾನೆ. ಆ ನಂತರ ತುಂಬಾ ದಿನಗಳಿಂದ ಗಮನಿಸದೆ ಇದ್ದ ತನ್ನ ಸೈಕಲ್ಲಿನ ಸೇವೆಗೆ ನಿಲ್ಲುತ್ತಾನೆ. ಇಡೀ ದಿನ ಅವನು ಕಾಲೇಜಿನ ಕಡೆ ಹೋಗುವುದಿಲ್ಲ, ಹಾಗೆ ನಿರ್ಜೀವವಾದ ಪದಗಳ ಜೊತೆ ಹೆಣಗುವುದಕ್ಕಿಂತ ಈ ಚಲಿಸುವ ಯಂತ್ರಗಳ ಜೊತೆ ಮಾತಿಗೆ ನಿಲ್ಲುವುದು ಅವನಿಗೆ ಜೀವಂತಿಕೆ ಅನ್ನಿಸಿಬಿಡುತ್ತದೆ. ಆ ದಿನ ಅವನು ’ರಾಜ’ನಾಗಿಯೇ ಬದುಕುತ್ತಾನೆ. ಅದೇ ಉಮೇದಿನಲ್ಲಿಯೇ ಮರುದಿನ ಕಾಲೇಜಿಗೆ ಹೋಗುತ್ತಾನೆ, ಇವನ ಬದಲಾದ ಮುಖ ಮತ್ತು ವ್ಯವಹಾರ ಪ್ರೊಫೆಸರರನ್ನು ಗೊಂದಲಗೊಳಿಸಿದರೆ, ಸಹೋದ್ಯೋಗಿ ಶಾಮಣ್ಣನಿಗೆ ದಿಕ್ಕೇ ತೋಚದಂತೆ ಮಾಡುತ್ತದೆ. ರಾಜಣ್ಣನ ದೃಷ್ಟಿಯಲ್ಲಿ ಪ್ರೊಫೆಸರು ಒಂದು ವಾಚು ’ಮಾರುವ’ ಅಂಗಡಿ ಇಟ್ಟು, ಶ್ಯಾಮಣ್ಣ ಅಲ್ಲಿ ’ಮಾರಾಟಗಾರ’ನಾಗಿ, ತಾನು ಅಲ್ಲೇ ಪಕ್ಕದಲ್ಲಿ ವಾಚು ’ರಿಪೇರಿ’ ಮಾಡುವ ಅಂಗಡಿ ಇಡುವುದೇ ಶ್ರೇಷ್ಠ ಅನ್ನಿಸಿಬಿಡುತ್ತದೆ. ಆಗಾಗ ತಲೆ ಎತ್ತಲು ಪ್ರಯತ್ನಿಸುತ್ತಿರುವ ಖೋಜಣ್ಣನನ್ನು ಇವನು ಮೆಟ್ಟಿ ಸುಮ್ಮನಿರಿಸುತ್ತಿರುತ್ತಾನೆ. ದಿನದ ಕೊನೆಯಲ್ಲಿ ಅವನಿಗೆ ಕೂಡಲೆ ಹೋಗಿ ತನ್ನ ಪ್ರೇಮ ಅರುಂಧತಿಯನ್ನು ನೋಡಬೇಕು ಅನ್ನಿಸಿಬಿಡುತ್ತದೆ. ಅವಳ ಖೋಜಣ್ಣನ ಮುಖವಾಡದಲ್ಲಿಲ್ಲದ ತನ್ನನ್ನು ಒಪ್ಪಿಕೊಂಡುಬಿಟ್ಟರೆ ಹಾಗೇ ಬದುಕಿಬಿಡಬಹುದು ಎಂದುಕೊಳ್ಳುತ್ತಾನೆ. ಬುದ್ಧನ ರೀತಿ, ಎಲ್ಲವನ್ನೂ ಸೂಟ್ ಕೇಸಿಗೆ ತುಂಬಿ, ತನ್ನ ಕೋಣೆಗೆ ಬೀಗ ಹಾಕಿ, ಬೀಗ ಗಟ್ಟಿಯಾಗಿದೆಯಾ ಎಂದು ಮತ್ತೊಮ್ಮೆ ಪರೀಕ್ಷಿಸಿ ಹೊರಟೇ ಬಿಡುತ್ತಾನೆ. ಒಂದು ವ್ಯತ್ಯಾಸವೆಂದರೆ ಇಲ್ಲಿ ಅವನು ಅವಳಿಂದ ದೂರವಾಗಿ ಪ್ರಪಂಚದತ್ತ ಹೋಗುತ್ತಿಲ್ಲ, ಪ್ರಪಂಚದಿಂದ ದೂರಾಗಿ ಅವಳತ್ತ ಹೋಗಿ, ಆ ಮೂಲಕ ತನ್ನ ಪ್ರಪಂಚವನ್ನು ಮತ್ತೆ ಪಡೆದುಕೊಳ್ಳುವುದರತ್ತ ಇವನ ಪ್ರಯತ್ನ.
ನವ್ಯಕಾಲದ ’ನಾನು’ ವಿನ ಹುಡುಕಾಟ ಇಲ್ಲಿ ತೀವ್ರವಾಗಿದೆ. ಇಲ್ಲಿ ರಾಜನಿಗೆ ತನ್ನ ಸಮಸ್ಯೆ ಏನು ಎನ್ನುವುದು ಗೊತ್ತು, ಆ ’ಅರಿವು’ ಇಲ್ಲದಿರುತ್ತಿದ್ದಿದ್ದರೆ ಅವನು ಸುಖವಾಗಿ ಬದುಕಿಬಿಡುತ್ತಿದ್ದ, ಆ ಅರಿವು ಅವನನ್ನು ಸುಮ್ಮನಿರಲು ಬಿಡುತ್ತಿಲ್ಲ, ಹಾಗೆಯೇ ಅವನ ವ್ಯಕ್ತಿತ್ವದಲ್ಲಿ ಆ ಅರಿವಿನ ನೆರವಿನಿಂದ ಉಳಿದದ್ದನ್ನು ಧಿಕ್ಕರಿಸಿ ನಿಲ್ಲುತ್ತೇನೆ ಎನ್ನುವ ಗಟ್ಟಿತನವಿಲ್ಲ, ಅದು ಅವನನ್ನು ನಿರಂತರವಾಗಿ ಆಸರೆ ಹುಡುಕುವಂತೆ ಮಾಡುತ್ತದೆ. ಹಾಗಾಗಿಯೇ ಅವನ ಜೀವನದಲ್ಲಿ ಹೊರಗೆ ಮತ್ತು ಒಳಗೆ ಸಂಘರ್ಷ ಅನಿವಾರ್ಯ. ಅವನ ಯೋಚನಾಲಹರಿ ಬುದ್ದಿಜನ್ಯವಾದದ್ದು, ಹೃದಯಜನ್ಯವಲ್ಲ, ಹೀಗಾಗಿ ಅದು ಅವನಿಗೆ ಸಹಜವಲ್ಲ. ಅದನ್ನು ಹೃದಯಜನ್ಯವಾಗಿಸಿಕೊಂಡು ಅರಿವನ್ನು, ಜೀವನರೀತಿಯಾಗಿ ಬದಲಾಯಿಸಿಕೊಳ್ಳಲು ಅರುಂಧತಿ ನೆರವಾಗಬಹುದು ಎಂದುಕೊಂಡು ಅವಳನ್ನು ಹುಡುಕಿಕೊಂಡು ಹೊರಟಿದ್ದಾನೆ. ’ಬೇರೆಯವರ ಕಣ್ಣಿನಲ್ಲಿ ಆಕರ್ಷಕವಾಗಿ ಕಾಣಲೆಂದು ನನ್ನನ್ನು ಬಲಿಗೊಟ್ಟೆಯಲ್ಲ! ಸಾಮಾಜಿಕ ಗೌರವಕ್ಕಾಗಿ ನನ್ನನ್ನು ಹುಗಿದುಬಿಟ್ಟೆಯಲ್ಲ! ಅರುಂಧತಿಗೆ ಮುತ್ತು ಕೊಡಲು ಪ್ರಯತ್ನಿಸಿದರೂ ನೀನು ಅಡ್ಡ ಬಂದೆಯಲ್ಲ!….’ ಎಂದು ಪ್ರಶ್ನಿಸುತ್ತಾ, ಖೋಜಣ್ಣನನ್ನು ಖಂಡಿಸುತ್ತಾ ರಾಜಣ್ಣಾ ಹೊರಡುತ್ತಾನೆ.
ಆ ಹುಡುಗಿಗೆ ಆತ ಇದುವರೆಗೂ ತಮ್ಮದು ’ಪವಿತ್ರ’ವಾದ ಪ್ರೇಮ, ಮದುವೆಯ ಕೆಸರಿನಲ್ಲಿ ಬೀಳಬಾರದು ಎಂದು ಆದರ್ಶ ಬೋದಿಸಿರುವುದರಿಂದ ಅವಳು ಇವನೊಡನೆ ಸಂಸಾರವನ್ನು ಕಲ್ಪನೆ ಮಾಡಿಕೊಂಡಿರುವುದಿಲ್ಲ. ಯಾವುದೋ ಆವೇಶದಲ್ಲಿ ನಾನೂ ಮದುವೆಯಾಗದೆ ಉಳಿಯುತ್ತೇನೆ ಎಂದಿದ್ದ ಹುಡುಗಿ ಈಗ ಮದುವೆಗೆ ಸಿದ್ಧಳಾಗಿದ್ದಾಳೆ, ಅವಳ ಮದುವೆ ನಿಶ್ಚವಾಗಿದೆ ಎನ್ನುವ ಸೂಚನೆ ಆಕೆಯ ತಂದೆಯ ಮಾತಿನಲ್ಲಿರುತ್ತದೆ. ಅವಳಿಗಾಗಿ ಕಾದು, ಕಾದು, ಕಡೆಗೂ ಪ್ರಸ್ತಾಪ ಮಾಡೇ ಬಿಡುತ್ತಾನೆ. ಹುಡುಗಿ ಹಿಂಜರಿಯುತ್ತಾಳೆ. ಅಲ್ಲಿಯವರೆಗೂ ನಿರಂತರವಾಗಿ ’ಮೃದು ಮಾತಿನ’ ಖೋಜಣ್ಣನನ್ನು ಕಂಡು ಪರಿಚಯ ಇದ್ದವಳಿಗೆ ಈ ರಾಜಣ್ಣ ಹೊಸಬ. ಇವನೊಡನೆ ಹೇಗೆ ವ್ಯವಹರಿಸುವುದು ಎನ್ನುವುದೇ ಅವಳಿಗೆ ಗೊತ್ತಿಲ್ಲ. ಹಾಗಾದರೆ ’ಗುಡ್ ಬೈ’ ಎಂದು ಹೇಳಿ, ನಕ್ಕು ಆತ ಹೊರಟುಬಿಡುತ್ತಾನೆ. ಇಲ್ಲಿ ನಕ್ಕದ್ದು ರಾಜಣ್ಣನೋ ಅಥವಾ ಖೋಜಣ್ಣನೋ ಎನ್ನುವುದು ನನ್ನನ್ನು ತುಂಬಾ ಕಾಡಿತು.
ಹೌದು ಖೋಜಣ್ಣ ಗೆದ್ದಿದ್ದ, ಊರಿಗೆ ಹಿಂದಿರುಗಿದವ ನೋಡಿದರೆ ವಾಚು ಮತ್ತೆ ನಿಂತಿತ್ತು, ತನ್ನ ಈ ಅನುಭವವನ್ನು ಒಂದು ಕಥೆಯಾಗಿಸಿದರೆ ಹೇಗೆ ಎಂದುಕೊಳ್ಳುತ್ತಾ ’ರಗ್ಗನ್ನು ಎಳೆದುಕೊಂಡು ಮತ್ತೆ ಕೌಂಚಿ’ ಮಲಗುವುದರಲ್ಲಿ ಕಥೆ ಮುಗಿಯುತ್ತದೆ.
ಈ ಕಥೆಯ ಪ್ರಶ್ನೆಗಳು, ಅದರಲ್ಲಿನ ದ್ವಂದ್ವ, ತನ್ನತನದ ಹುಡುಕಾಟ, ತಾನು ತಾನಾಗಿ ನಿಲ್ಲಲಾರದ್ದಕ್ಕೆ ನೋವು, ತನ್ನ ಒಳದನಿಯನ್ನು ಹತ್ತಿಕ್ಕಲಾರದ್ದಕ್ಕೆ ಬರುವ ಹತಾಶೆ, ತನ್ನತನವನ್ನು ಬದುಕಲಾರದ ಸೋಲು ಕಥೆಯನ್ನು ಮತ್ತೆ ಮತ್ತೆ ಓದಿಸಿಕೊಳ್ಳುತ್ತಲೇ ಇದೆ. ಪ್ರತಿ ಸಲ ಓದಿದಾಗಲೂ ಕಥೆ ಹೊಸದೇನನ್ನೋ ಕೊಡುತ್ತಿದೆ.
ಕಥೆಯ ಹೆಸರು : ಖೋಜರಾಜ
ಸಂಕಲನ : ಪ್ರಶ್ನೆ
ಕಥೆಯನ್ನು ಬರೆದವರು ಅದ್ಭುತವಾದ ಸಣ್ಣಕಥೆಗಳನ್ನು ಬರೆದ ಯು ಆರ್ ಅನಂತಮೂರ್ತಿ.
ಕಥೆ ಬರೆದದ್ದು ೧೯೬೩ರಲ್ಲಿ ಅಂದರೆ ಸುಮಾರು ೫೮ ವರ್ಷಗಳ ಹಿಂದೆ. ಆದರೆ ಕಥೆ ಎತ್ತುವ ಪ್ರಶ್ನೆಗಳು, ತೋರಿಸುವ ವಾಸ್ತವ ಇಂದಿನ ಮಟ್ಟಿಗೂ ಎಷ್ಟು ಸತ್ಯ ಎನ್ನುವುದು ನನ್ನನ್ನು ಕಾಡುತ್ತಲೇ ಇದೆ.
ಸಂಧ್ಯಾರಾಣಿ ಕಾಲಂ : ಕಾಲವಾದರೂ ಕಾಡುವ ಕಥೆ
ನಿಮಗೆ ಇವೂ ಇಷ್ಟವಾಗಬಹುದು…

ಸಂಧ್ಯಾ ಅಕ್ಕ, ಎಂದಿನಂತೆ ಬರಹ ಸೂಪರ್. ಇತ್ತೀಚೆಗಷ್ಟೇ ಕಣಜದಲ್ಲಿ ಈ ಕತೆ ಓದಿದ್ದೆ. ಕತೆ ಓದಿದಾಗ ಮಲಯಾಳಂ ಸಿನಿಮಾ ಸ್ಪಟಿಕಂ (ಸ್ಪಡಿಕಂ ಎಂದು ಉಚ್ಚರಿಸಲಾಗುತ್ತದೆ) ನೆನಪಿಗೆ ಬಂದಿತ್ತು. ಮನಮುಟ್ಟುವ ಕತೆಯನ್ನು ತುಂಬ ಸರಳವಾಗಿ ನಿಮ್ಮ ಬರಹದಲ್ಲಿ ಹಿಡಿದಿಟ್ಟಿದ್ದೀರಿ. ಧನ್ಯವಾದಗಳು
ರಾಜಣ್ಣನಾಗಿ ಮಾತ್ರ ಬದುಕುವ ಪುಣ್ಯವಿರಬೇಕು …
powerful and gripping short story
ಚಂದ ಎಂದಿನಂತೆ 🙂
ಒಂದು ಪಾತ್ರದ ಆಳಕ್ಕೆ ಹೋಗಿ, ಅನುಭವಿಸಿ ಬರೆದಾಗ ಖೋಜರಾಜನಂತಹ ಕಥೆಯಾಗಬಹುದಾದಂತೆ ಅಷ್ಟೇ ತನ್ಮಯತೆಯಿಂದ ಓದಿದಾಗ ಇಂತಹ ಬರಹವಾಗಬಹುದು.
~ಅನೀಲ
Tumba chandavaada baraha.
Super!
ಕಥೆಯ ವಿಶ್ಲೇಷಣೆ ಇಷ್ಟವಾಯಿತು 🙂
ತುಂಬಾ ಚೆನ್ನಾಗಿದೆ..