ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯಾರಾಣಿ ಕಾಲಂ : ಈ ಹುಡುಗನ ’ಅಜೀಬು ದುನಿಯಾ’ದಲ್ಲಿ ಕಳೆದುಹೋಗುತ್ತಾ…


ಒಂದು ಕವನ ಓಡುತ್ತಿದ್ದೆ.
‘ಕರೆಂಟು ಹೋಗಿ ಅರ್ಧ ಗಂಟೆಯಾಗಿತ್ತು
ಸೊಳ್ಳೆಗಳ ಕಾಟಕ್ಕೆ ಹೆದರಿ ಮನೆ ಹೊರಗಡೆ
ಅಪ್ಪ ನಾನು ಕಟ್ಟೆ ಮೇಲೆ….
 
ಮಾತು ಬರದ ಮಳ್ಳಿಗನಂತೆ ನಾನು,
ಮಗ ಮಾತಾಡಲಿ ಎಂದು ಅಪ್ಪ,
ಸೊಳ್ಳೆ ಮಾತ್ರ ಗುಯ್ ಗುಟ್ಟುತಲಿತ್ತು
ಮೌನದ ಮೇಲೆ ಬರೆಯಿಟ್ಟಂತೆ
 
ಅಮ್ಮ, “ರೀ ದೋಸೆ ರೆಡಿ ಮಗನ್ನ ಕರ್ಕೊಂಡ್ ಬನ್ನಿ”
 
ದೋಸೆ ತಿನ್ನಲು ಶಕ್ತಿ ಕಾಯ್ದಿಟ್ಟುಕೊಂಡವನಂತೆ
ಮೆಲ್ಲಗೆ ಅಡಿಗೆ ಮನೆಗೆ ನುಸುಳಿದೆ…
ಅಪ್ಪ ಅಲ್ಲೇ ಕೂತಿದ್ದರು, ಕೇಳಲಾಗದ ನಾನು
ಹೇಳಲಾಗದ ಅವರೂ,
ನಡುವೆ ಕಿವಿಯಲ್ಲಿ ಸೊಳ್ಳೆ….’
– ಪ್ರವರ ಕೊಟ್ಟೂರ್
ಈ ಕವಿತೆ ಓದಿದವಳು, ಕೊನೆಯ ಸಾಲನ್ನು ಮುಗಿಸಿದ ಮೇಲೆ ಸ್ವಲ್ಪ ಹೊತ್ತು ಮೌನವಾಗಿ ಕೂತೆ, ಆಮೇಲೆ ಮತ್ತೊಮ್ಮೆ ಓದಲು ಶುರು ಮಾಡಿದೆ…. ಕವನದ ಜತೆ ಜತೆಯಲ್ಲಿಯೇ ಕವಿಯ ಹೆಸರನ್ನೂ ನೆನಪಿಟ್ಟುಕೊಂಡೆ. ಆಮೇಲೆ ಈ ಹುಡುಗ ಪರಿಚಯವಾದ, ಸಂಕೋಚದ ಜತೆ ಜತೆಯಲ್ಲಿಯೇ ಆತ್ಮೀಯತೆಯನ್ನೂ ಧರಿಸಿದ್ದ ಹುಡುಗ. ಆಮೇಲಿಂದ ಪ್ರವರ ಮತ್ತು ಪ್ರವರನ ಕವಿತೆಗಳು ಎರಡೂ ತಮ್ಮ ಮುಗ್ಧತೆಯಿಂದಲೇ ನನ್ನ ದುನಿಯಾದಲ್ಲೂ ನೆಲೆನಿಂತರು.
ಮೊನ್ನೆ ಪ್ರವರ ಕೊಟ್ಟೂರು, ರಾಜೇಂದ್ರ ಪ್ರಸಾದ್ ಮತ್ತು ಶರತ್ ಚಕ್ರವರ್ತಿ ಎಂಬ ತ್ರಿಮೂರ್ತಿ ಗೆಳೆಯರ ಪುಸ್ತಕಗಳು ಬಿಡುಗಡೆ ಆದವು. ಯಾವುದನ್ನೂ ವಿಪರೀತ ಗಂಭೀರವಾಗಿ ತೆಗೆದುಕೊಳ್ಳದ, ಮಹತ್ವಾಕಾಂಕ್ಷಿಯಾಗಿ ಕನಸು ಕಟ್ಟದ, ತಂಪಾದ ವ್ಯಕ್ತಿತ್ವದ ಪ್ರವರ ಪುಸ್ತಕ ಮಾಡಿದ್ದರೆ ಅದು ಸ್ನೇಹಿತರ ಒತ್ತಾಸೆಯಿಂದಲೇ ಇರಬೇಕು! ಅದಕ್ಕೆ ಈತ ಇಟ್ಟ ಹೆಸರೂ ಸಹ ವಿಶಿಷ್ಟವಾಗಿತ್ತು, ’ಅಜೀಬು ದುನಿಯಾ’! ಈ ಹುಡುಗನ ಅಜೀಬು ದುನಿಯಾದೊಳಗೊಮ್ಮೆ ಇಣುಕು ಹಾಕಬೇಕು ಎಂದು ಹೊರಟವಳಿಗೆ ಆ ದುನಿಯಾ ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ ಎಂದು ಗೊತ್ತಾಗಿರಲಿಲ್ಲ. ಹಾಗೆ ಮತ್ತೆ ಮತ್ತೆ ಓದಿಸಿಕೊಂಡ ಪುಸ್ತಕವನ್ನು ಈ ಬರಹದ ಮೂಲಕ ಅಕ್ಷರವಾಗಿಸಿ, ಮತ್ತಷ್ಟು ಕವಿತೆಗಳಿಗೆ ಮನಸ್ಸನ್ನು ಖಾಲಿ ಮಾಡಿಕೊಳ್ಳಲು ಬರೆಯಲು ಕೂತಿದ್ದೇನೆ.

’ತೊಂಬತ್ತನೇ ಇಸವಿಯಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಹುಟ್ಟಿದ’ ಹುಡುಗರು ನೋಡಿದ ಜಗತ್ತು ನಾವು ನೋಡಿದ ಜಗತ್ತಿಗಿಂತ ಭಿನ್ನ. ಸರಳ ಬದುಕು, ಉನ್ನತ ಯೋಚನೆ ಮಾದರಿಯಾಗಿದ್ದ ಕಾಲ ಸರಿದು ಹೋಗಿತ್ತು. ಹಣ ಮಾಡದಿರುವುದು ದಡ್ಡತನ ಎಂದು ಕಾಣಲು ಶುರುವಾಗಿತ್ತು. ’ಬೇಡ’ ಎನ್ನುವುದು ಹೇಡಿತನವಾಗಿ ಕಾಣತೊಡಗಿತ್ತು. ಹರ್ಷದ್ ಮೆಹ್ತಾ ಜಾಣನಾಗಿ ಕಾಣತೊಡಗಿದ್ದ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳು ಬಲಗಾಲಿಟ್ಟು ಭಾರತದ ಹೊಸಲು ದಾಟಿದ್ದವು. ಆಗ ಹುಟ್ಟಿದ ಹುಡುಗರು ಬೆಳೆಯುವಷ್ಟರಲ್ಲಿ ಅವರಿಗೆ, ಅವರ ಸಿಟ್ಟಿಗೆ ಒಂದು ವೇದಿಕೆ ಒದಗಿಸಲು ಯಾವುದೇ ಶಕ್ತ ಚಳುವಳಿಗಳು ಇರಲಿಲ್ಲ. ಆಗ ಸುಮಾರು ಜನ ಹುಡುಗರು ತಮ್ಮೊಳಗಿನ ಸಿಟ್ಟನ್ನು, ಆವೇಶವನ್ನು ಪದಗಳಾಗಿಸತೊಡಗಿದರು. ಅನೇಕ ಶಕ್ತ ಕವಿತೆಗಳು ಈ ಸಮಯದಲ್ಲಿ ಮೂಡಿಬಂದವು. ಸಾಂಘಿಕ ಸ್ವರೂಪ ಸಿಗದಿದ್ದರೂ ಆ ಸಿಟ್ಟು, ವೈಯಕ್ತಿಕವಾಗಿ ಒಂದೊಂದು ಕಿಡಿಯಾಗೇ ಉಳಿದವು. ಅಂತಹುದೇ ಒಂದು ಆಕ್ರೋಶದ ಕಿಡಿಯನ್ನು ಸದಾ ನಂದದಂತೆ ಎದೆಯಲ್ಲಿಟ್ಟುಕೊಂಡು ಬಂದವನು ಪ್ರವರ.
ಅದೇಕೋ ಗೊತ್ತಿಲ್ಲ, ನಡುರಾತ್ರಿಯಲ್ಲಿ ಈತ ಬರೆದು ಫೇಸ್ ಬುಕ್ಕಿನಲ್ಲಿ ಹಾಕುತ್ತಿದ್ದ ಕವನಗಳು ತಮ್ಮ ತೀವ್ರತೆಯಿಂದ ನಮ್ಮನ್ನು ಅಲ್ಲಾಡಿಸಿಹಾಕುತ್ತಿದ್ದವು. ಈ ಹುಡುಗ ಬೆಳಗಿನ ಹೊತ್ತು ಬರೆದ ಕವನಗಳಿಗಿಂತ, ರಾತ್ರಿಯಲ್ಲಿ, ಎಷ್ಟೋ ಸಲ ನಡುರಾತ್ರಿ ಕಳೆದ ಮೇಲೆ ಬರೆದು ಹಾಕುತ್ತಿದ್ದ ಕವನಗಳಿಗೆ ಇನ್ನಿಲ್ಲದ ತೀವ್ರತೆ ಇರುತ್ತಿತ್ತು.
ಈ ಹುಡುಗನನ್ನು ಕತ್ತಲಿನಷ್ಟೇ ತೀವ್ರವಾಗಿ ಪ್ರೇಮ ಕಾಡುತ್ತದೆ, ಮುಗಿಲು ಕಾಡುತ್ತದೆ. ನೆಲಕ್ಕೆ ಬೇರು ಬಿಡುತ್ತಲೇ ಮುಗಿಲಿಗಾಗಿ ಕನಸುವ, ಹೈ ಚಾಚುವ ಹುಡುಗನ ಕೈಯಲ್ಲಿ ಮುಗಿಲು ಮತ್ತು ಕವನ ಜೊಂಪೆ, ಜೊಂಪೆ. ಆಮೇಲೆ ಪ್ರವರನನ್ನು ಅಷ್ಟೇ ಕಾಡುವುದು ಅಪ್ಪ. ಹೌದು, ಪ್ರವರ ಅಪ್ಪನ ಬಗ್ಗೆ ಬರೆಯಲು ಕೂತರೆ, ಕವನ, ಬರಹ, ಪ್ರಬಂಧ ಎಲ್ಲದರಲ್ಲೂ ಕಾಣುವುದು ಶುದ್ಧ ಅಂತಃಕರಣ. ಅಮ್ಮನ ಬಗ್ಗೆ ಬರೆದಷ್ಟೇ ಅಂತಃಕರಣದಿಂದ ಈತ ಅಪ್ಪನ ಬಗ್ಗೆ ಬರೆಯುತ್ತಾನೆ.
ಬಂಡಾಯದ ಕಾವ್ಯದಂತೆ ಗೋಚರಿಸುತ್ತಾನೆ ನನ್ನಪ್ಪ
ಹಿಡಿ ಮಳೆಯ ಸಾಂತ್ವನವಿಲ್ಲದೆಯೇ
ಬಿರಿದಿತ್ತು ಭೂಮಿ,
ರಣ ಬಿಸಿಲು
ನುಸಿ ಮಣ್ಣು, ಹುಸಿ ಹಸಿರು
ಒಯಸಿಸ್ಸಿನಾ ದಾಹ,
ಮೂಳೆ ಹೊತ್ತೋಡುತಿದ್ದ
ಬಡಕಲು ನಾಯಿ….
ಆದರೂ
ಜಾಲಿ ಗಿಡ ಮುಳ್ಳು ಹೊತ್ತು
ಕಲ್ಲಿನ ಬುಡಕ್ಕೆ ಅಂಟಿ
ಉಸುರಾಡುತಿತ್ತು…
 
ಮತ್ತೆ ಇನ್ನೊಂದು ಕವನದಲ್ಲಿ
 
ಮೊನ್ನೆ ಮೊನ್ನೆಯಷ್ಟೇ
ಕೆನ್ನೆ ಮೇಲೆ ನಿನ್ನ ಐದೂ ಬೆರಳುಗಳು
ಮೂಡಿದ್ದುದನ್ನು ಕನ್ನಡಿಯಲಿ
ನೋಡಿಕೊಂಡು ಅತ್ತುಬಿಟ್ಟಿದ್ದೆ,
ಜೋರಾಗಿ ಬಿಕ್ಕಳಿಸುವಾಗ
ಒತ್ತಾಯವಾಗಿ ನೀರು ಕುಡಿಸಿದ್ದರು..
ಬಳೆ ಸದ್ದು ಕಿವಿಯಲ್ಲಿತ್ತು
ಅಮ್ಮ ಇರಬೇಕು…
 
ರಾತ್ರಿ ಪಾಪಸ್ ಕಳ್ಳಿಯ ನೆರಳು
ನೋಡಿ ದೆವ್ವವೆಂದು ಹೆದರಿದ್ದೆ
ಉಚ್ಚೆ ಹೊಯ್ಯಿಸಲು ನನ್ನ ಜೊತೆ
ನಿದ್ದೆಗಣ್ಣಲಿ ನೀನಿದ್ದೆ,
ಎದುರು ಮನೆ ಐನಾರಪ್ಪನ
ಹೂಸಿನ ಸದ್ದಿಗೆ
ಇಬ್ಬರೂ ಜೋರಾಗಿ ನಕ್ಕಿದ್ದೆವು
 
ಓದುವಾಗ ಪುಸ್ತಕದ ಮೇಲೆ
ಹಾಗೆ ಮಲಗಿದ್ದೆ,
ನೀನೆ ಕೈಯ್ಯಲ್ಲಿ ಬಾಚಿಕೊಂಡು
ಮಂಚದ ಮೇಲೆ ಹಾಕಿ
ಹೊಚ್ಚಿದ್ದೆ,
ನಾನೂ ಬೆಚ್ಚಗೆ ಮಲಗಿದ್ದೆ.
ಅಲ್ಪ ಸ್ವಲ್ಪ ಎಚ್ಚರವಿದ್ದೆ
ಮಲಗಿದವನಂತೆ ನಾಟಕವಾಡಿದ್ದೆ ಅಷ್ಟೆ.
 
ಥೂ ಅದೆಷ್ಟು ಬೇಗ
ಬೆಳೆದುಬಿಟ್ಟೆ,
 
ಕನ್ನಡಿಯಲ್ಲಿ ಕೆನ್ನೆ ಮುಟ್ಟಿ
ನೋಡಿಕೊಳ್ಳುವ ನನ್ನ ಪ್ರತಿಬಿಂಬ
ಗೊಣಗುತ್ತದೆ ನಿನ್ನ ಕೈಬೆರಳಚ್ಚಿಲ್ಲವೆಂದು,
 
ನಿನ್ನ ಬುಜದೆತ್ತರಕ್ಕೆ
ನಾನು ಬೆಳೆಯಲೇಬಾರದಿತ್ತು!
ಬೆಳೆದುಬಿಟ್ಟೆ,
ನಿನ್ನ ಹೆಗಲ ಮೇಲಾಡುವ ಆಸೆ
ಇನ್ನೂ ಇದೆ
ಅಮ್ಮ ಬಯ್ಯುತ್ತಾಳೆ
ಕತ್ತೆ ವಯಸ್ಸಾಯ್ತೆಂದು
ಅದಕ್ಕೇ ಸುಮ್ಮನಿದ್ದೇನೆ
 
ಇಷ್ಟು ಬೇಗ ಬೆಳೆಯಬಾರದಿತ್ತು
ನಾನು
ನಿನ್ನ ಬುಜದೆತ್ತರಕ್ಕೆ
 
ಅತ್ಯಂತ ಸರಳವಾಗಿ ಬರೆದ ಈ ಕವನ ಯಾಕೋ ಓದಿ ಮುಗಿಸುವಷ್ಟರಲ್ಲಿ ಕಣ್ಣಲ್ಲಿ ಹನಿಮೂಡಿಸಿಬಿಡುತ್ತಿತ್ತು. ’ಅವಧಿ’ಯಲ್ಲಿ ಪ್ರಕಟವಾಗಿದ್ದ ಈ ಕವನ ಓದಿದ ಪ್ರವರನ ತಂದೆ ಕುಂವೀ
’ಪ್ರವರ,
ನಿನ್ನ ಕವಿತೆಯನ್ನು ಓದಿದೆ …
ಕರುಳಲ್ಲಿ ಕತ್ತರಿಯಾಡಿದಂತಹ ಅನುಭವ ..
ನಿನ್ನ ಕೆನ್ನೆ ಮೇಲಿನ ನನ್ನ ಬೆರಳ ಗುರುತುಗಳನ್ನು ಉಪಸಂಹರಿಸಿಕೊಳ್ಳುವಂತಿದ್ದರೆ..
ನೀನು ನಿನ್ನನು ಹೆತ್ತವರ ಎತ್ತರಕ್ಕೂ ಮೀರಿ ಬೆಳೆಯಬೇಕು, ಇದು ಎಲ್ಲಾ ಹೆತ್ತವರ ಆಸೆ.
ಗಾಯಗಳು ಕವಿತೆಯ ರೂಪ ಪಡೆದಾಗಲೇ ಅವುಗಳ ಮಾಲಕರು ಹೆಮ್ಮೆ ಪಡುವುದು …
ಅಲ್ಲವೇ?
-ಕುಂ ವೀ’
 
ಎಂದು ಬರೆದಿದ್ದರು.

ಚಿತ್ರ ರಚನೆ : ಚಿತ್ರ ಮಿತ್ರ

ಎಲ್ಲೂ ಬಲವಂತವಾಗಿ ತನ್ನ ಕವನವನ್ನು ’ಟೆಕ್ನಿಕಲ್’ ಆಗಿ ಸಿಂಗರಿಸಲು ಹೋಗದ ಈ ಹುಡುಗನ ಕವನಗಳು ಕಾವ್ಯವಾಗುವುದು ಅದರ ಸರಳತೆಯಲ್ಲಿ ಮತ್ತು ಪ್ರಾಮಾಣಿಕತೆಯಲ್ಲಿ.
’ಖಾಲಿಯಾಗಸಕ್ಕೆ ಮೌನ ಕಟ್ಟಿ ಎಳೆದಂತೆ
ಸೋತ ಬೊಗಸೆಯಲ್ಲಿ ಕುಪ್ಪೆ ಕುಪ್ಪೆ ಮೋಡ
ತಾಕಿದಂತೆ, ಕರಗಿದಂತೆ
ನಡುಗುತ್ತಲೇ ಸುರಿದುಕೊಂಡೆ ಎದೆಗೆ ಮುರಿದ ಕಪ್ಪೇ ಚಿಪ್ಪು ಬಾಚಿ…’ ಎಂದು ಬರೆಯುತ್ತಲೇ ಕಪ್ಪೆಚಿಪ್ಪನ್ನು ಎದೆಗೆ ಸುರಿದುಕೊಂಡು, ಅದಕ್ಕೆ ಮುತ್ತು ಸೇರಿಸಿ, ಕವಿತೆ ಕಟ್ಟಿದ ಹುಡುಗನ ಕವನದಲ್ಲಿ ’ಪಾಚಿಗಟ್ಟಿದ ಬಂಡೆ, ಹೂವೇಕೆ ಅರಳಲಿಲ್ಲ?’ ಎನ್ನುವ ಮುಗ್ಧತೆಯೂ ಇರುತ್ತಿತ್ತು.
ಇಪ್ಪತ್ತರ ಹುಮ್ಮಸ್ಸಿನ ಹುಡುಗನ ಕವನದಲ್ಲಿ, ಹೆಣ್ಣು, ಪ್ರೀತಿ, ಪ್ರೇಮ, ಬಯಕೆ, ಕಾಮನೆ ಏನೇ ಬಂದರೂ ಅದು ಸಹಜವೇ. ಆದರೆ ಅದಕ್ಕೊಂದು ಚಂದದ ಅನುಭೂತಿಯ ಸಾಥ್ ಸಿಕ್ಕರೆ ಅದು
’ನನ್ನೆದೆಯೊಳಗೆ ಗಾಳಕ್ಕೆ ಸಿಕ್ಕಿಸಿದ
ಹೃದಯವನ್ನು ತೆಗೆದು ಬಿಡು,
ನೀನಿರುವಷ್ಟು ದಿನ ಕವಿತೆಗಳು
ಕಿಸೆಯೊಳಗಿನ ಚಿಲ್ಲರೆ’
ಎನ್ನುವ ಪ್ರತಿಮೆಯನ್ನು ಕಟ್ಟಿಕೊಟ್ಟುಬಿಡುತ್ತವೆ.
’ಹಸಿ ಹಸಿ ಮೈಯ ತಬ್ಬಲು
ಯಾರೋ ಕಣ್ಣು ರೆಪ್ಪೆಗಳ ಮುಚ್ಚಿದ ಸದ್ದು,
ಕತ್ತಲ ಹೊರತು ಇದ್ದದ್ದು ನಾವೇ ತಾನೆ,
ನಿನ್ನ ನಾಚಿಕೆ ಇರಬೇಕು’, ಈ ಇಂತಹ ಸಾಲುಗಳು ಎದೆಯೊಳಗೊಂದು ಕಂಪನ ಹುಟ್ಟಿಸಿ, ತುಟಿಗೊಂದು ನಗೆಯನ್ನು ಅಂಟಿಸಿಬಿಡುತ್ತವೆ.
ಆದರೆ ಪ್ರವರನ ಪದ್ಯಗಳು ಕೇವಲ ಪ್ರೇಮಿಸುವುದರ ಉತ್ಕಟತೆಯನ್ನಷ್ಟೇ ಅಲ್ಲ ಹಸಿವಿನ ಅಸಹಾಯಕತೆಯನ್ನು, ಬದುಕಿನ ಸಂಕೀರ್ಣತೆಯನ್ನು, ಕೆಂಪು ದೀಪದ ಓಣಿಯ ನಿರ್ದಯತೆಯನ್ನೂ ಸಹ ಅಷ್ಟೇ ತೀವ್ರವಾಗಿ ಕಟ್ಟಿಕೊಡುತ್ತವೆ. ಈ ಪುಸ್ತಕದಲ್ಲಿನ ’ಯಾರ ಕೆರದಲ್ಲಿ ಯಾರದೋ ಮೈಯ ತೊಗಲು’, ’ಇರುವೆ ಮುತ್ತಿಕೊಂಡ ಕೇರೇಹಾವು’, ’ಭೂತ ಮತ್ತು ವರ್ತಮಾನ’, ’ಬೇರು ಮತ್ತು ರೆಕ್ಕೆ’, ’ಬುದ್ಧನಿಗೊಂದು ಸವಾಲು’, ಆ ದಾರಿಯ ಕೆಂಪು ಹೂ’, ’ರೈಲು ನಿಲ್ದಾಣ’, ’ಹೂವು ಮಾರುವ ಹುಡುಗಿ’ ಇತ್ಯಾದಿ ಇಂತಹ ಕವಿತೆಗಳು.
’ಕುಣಿಕೆ ಚೀಲದಲ್ಲಿದ್ದ ಮೊಬೈಲಿಗೆ
ಎರಡುಕಡ್ಡಿ ಸಿಗ್ನಲ್ಲು ಸಿಕ್ಕಿತಾದರೂ…
ಮೊಲೆಹಾಲು ಉಣುತಿದ್ದ ಹಸುಗೂಸ
ಗುಡಿಸಲಿಗೆ
ಬೆಳಕು ಮಾತ್ರ ಅಲೆಯಲಿಲ್ಲ’….., ಹಾಗೆ , ’ಭೂತ ಮತ್ತು ವರ್ತಮಾನ’ ಕವಿತೆಯಲ್ಲಿನ
’ಈ ನಾಣ್ಯದಲ್ಲಿನ ಮುಖ
ವಿಕಾರವಾಗಿದೆ,
ಇತಿಹಾಸಕ್ಕೆ ದೇಹ ಮಾತ್ರ
ಮುಖವಿಲ್ಲ
ಮುಖವಾಡಗಳ ಬೇಕಿದ್ದಲ್ಲಿ
ತೊಡಿಸಿಕೊಳ್ಳಬಹುದು’
ಎನ್ನುವ ಸಾಲುಗಳು ತಮ್ಮ ಪ್ರೌಡತೆಯಿಂದ ನಮ್ಮಲ್ಲಿ ಒಂದು ಗೌರವ ಹುಟ್ಟಿಸಿಬಿಡುತ್ತವೆ.
ಈ ಹುಡುಗನ ಕವಿತೆ ಕಟ್ಟುವ ಕುಶಲತೆಗೆ, ಇನ್ನಷ್ಟು, ಮತ್ತಷ್ಟು ಓದಿನ ಮೆರುಗು ಸಿಗಬೇಕು. ಒಮ್ಮೊಮ್ಮೆ ಕವನ ಹುಟ್ಟುವ ಮೊದಲು ಮನದಲ್ಲಿದ್ದ ಗೊಂದಲ, ಹಾಗೆ ಕವಿತೆಯೊಳಗೆ ಇಳಿದುಬಿಡುವ ಅಪಾಯವನ್ನು ಈತ ತಪ್ಪಿಸಿಕೊಳ್ಳಬೇಕು.
ಇವನೇ ಬರೆದ ಹಾಗೆ,
’ಬದುಕೆಂದರೆ ಬರೀ
ಬದುಕುವುದಲ್ಲ!
ನೆಲವ ಕಚ್ಚಿ ಕೆದಕಬೇಕು
ರೆಕ್ಕಿ ಬಿಚ್ಚಿ ಹಾರಬೇಕು’
ಎನ್ನುವ ಅರಿವು ಇವನನ್ನು ಕಾಯಲಿ ಎಂದು ಹಾರೈಸುತ್ತೇನೆ.
 

‍ಲೇಖಕರು G

24 January, 2014

15 Comments

  1. chalam

    ಪ್ರವರ ….ನನ್ನನ್ನು ಕಾಡುವ ಕವಿ.ಆತನ ವ್ಯಕ್ತಿತ್ವವೇ ಒಂದು ಅಸಾದಾರಣ ಬಂಡಾಯಕವಿತೆ.ಅತನ ನೋಟದಲ್ಲಿರುವ ಬಹುಷಃ ಆತನಿಗೇ ಗೊತ್ತಿರದ ಸಾತ್ವಿಕ ಆಕ್ರೋಶ ಆತ್ಮೀಯತೆಯ ಸಂಗದಲ್ಲಿದೆ.ಚೆನ್ನಾಗಿ ಪರಿಚಯಿಸಿದ್ದೀರಿ
    .ಧನ್ಯವಾದಗಳು.

  2. Rajendra Prasad

    Nimma Kavya priti hige irali Sandhyakka… :)Pravarana kavitegala kuritu Bahuteka nimma maatugale nannavu kooda agive.. ashtu saamyate ide. 🙂 🙂

  3. sindhu

    Thanks Sandhya, for such a poetic “parichaya”. ishta aaytu.
    ajeebu duniyakke kaNNu hachchabeku.
    sindhu

  4. sudha chidanand gowd

    congrats pravara.
    thanks sandya for good words about him.

  5. vinaya

    ಪ್ರವರ ಕೊಟ್ಟೂರು ಅವರ ಅಜೀಬು ದುನಿಯಾ ಪುಸ್ತಕ ಓದಿದ ಮೇಲೆ ಹುಟ್ಟಿದ ಪದಗಳು ;ವಿಮರ್ಶೆಯಲ್ಲ
    ಪ್ರವರ ಜೀ ವಿಮರ್ಶೆಯೆಂದರೆ ಕವನಗಳ ವಾಸ್ತವವ ಹೇಳುವುದು ಎಂದಲ್ಲ , ನನಗರ್ಥವಾದ ಸಾಲುಗಳ ನನ್ನ ದನಿಯಲ್ಲಿ ಹೇಳುವುದು ಅಂದುಕೊಂಡಿದ್ದೇನೆ .ಅಜೀಬು ದುನಿಯಾದ ಬರಹಗಾರ ಬದುಕಿನ ಪಾತಾಳಕ್ಕಿಳಿದು ಭೂಸ್ವರ್ಗದಿoದ ನಮ್ಮನೂ ಅಲ್ಲಿಗೆಳೆದು ನೋಡ್ರೀ ಇದೇ ಜೀವನ ಅಂತ ತೋರಿಸುವುದು ಬೆನ್ನ ಹಿಂದಿನ ಹರಿದ ವಸ್ತ್ರಗಳ ಕಾಡುವಿಕೆಗಿoತಾ ಹಸಿವಿನ ಗೋಜಲು,ಹೊಟ್ಟೆಯ ಒಣ ಪದರುಗಳ ಕೆರಳಿಸುವುದು ಮನ ಮುಟ್ಟುತ್ತದೆ.. ರಾತ್ರಿ ಪದ್ಯಗಳ ”ಒಂದಷ್ಟು ಜನ ರಾತ್ರಿಗೂ ,ಮತ್ತಷ್ಟು ಜನ ಹಗಲಿಗೂ ಬದುಕುತ್ತಾರೆ ”ಎನ್ನುವಲ್ಲಿನ ಸತ್ಯ ತೆರೆದ ಬೀದಿಯ ಹಸಿ ಬಿಸಿ ಸಮಾಜದ ಮಡಿಯಾಚೆಯ ಹಸಿವೆಗೆ ಸಾಕ್ಷಿ .. ”ಸೂರ್ಯನ ಅಷ್ಟೂ ಬೆಳಕು ಉರಿಯನ್ನ ಬಡಕಲೆದೆಯಲ್ಲಿ ಬಚ್ಚಿಟ್ಟುಕೊಂಡ ಸಹಸ್ರ ಬುದ್ಧರು ಒಮ್ಮೆಲೇ ರೆಕ್ಕೆ ಬಿಚ್ಚಿ ಮಿಂಚು ಹುಳಗಳಾಗಿ ಹಾರಿದರು …”ಪದಗಳು ಕಸಿವಿಸಿ ದಾಟಿ ಅಂತರoಗಕ್ಕಿಳಿವ ಮೊದಲೇ ಉಳಿದ ಪದಗಳು ಹೇಳು ತ್ತವೆ ಕವಿ ಮನಸನ್ನು… ”ರೆಕ್ಕೆ ಬಿಡಿಸಿಟ್ಟ ಹಗಲು ”ಬದುಕಿನ ಅನಿವಾರ್ಯತೆಗಳ ಹೇಳುತ್ತಾ ನಾಳೆಗೆ ಬದುಕಬೇಕಾದ ನಾಟಕೀಯತೆಗಳ ಕಂಬನಿ ಕಥೆಗೂ ಉಳಿಯದ ಛಾಯೆಯನ್ನ ಬಿಡಿಸುತ್ತದೆ .
    ””ಮೈ ತೆರೆದು ನಿಂತಿದೆ ಕಾವ್ಯ”,”ಮೋಟು ಬೀಡಿಗೆ ಕಡ್ಡಿ ಗೀರುವ ಖಯಾಲಿ ಅವಳಿಗೆ ”ಯಾರ ಕೆರದಲ್ಲೋ ಯಾರದೋ ಮೈಯ್ಯ ತೊಗಲು ” ಬರಹಗಾರನ ಪ್ರಭುದ್ಧತೆಯನ್ನ ಬಿಡಿಸಿ ಮನದ ಒಳಗಿಳಿದು ಬಣ್ಣದ ಗೆರೆಗಲಾಗ ತೊಡಗುತ್ತವೆ ನಮ್ಮೊಳಗೇ ಚಿಂತನೆಯ ಬೆಂಕಿ ಹಚ್ಚಿ ಮತ್ತೊಮ್ಮೆ ತಿರುಗಿ ನೋಡು ಬದುಕನ್ನ ಎನ್ನುತ್ತವೆ .. ಓದಿ ಬದಿಗಿಡುವoತಿರದೇ ಕಾಡುವ ಕವಿತೆಗಳು .. ಅಕ್ಷರಗಳ ಪರಿಧಿ ಮೀರಿ ಕತ್ತಿಯಲುಗಿನ ಹಾಗೆ ಬದುಕಿನ ಪ್ರಶ್ನೆ ಗಳಿಗೆ ಕತ್ತು ಹಿಡಿದು ಉತ್ತರ ಕೇಳುತ್ತಾ ನಾಳೆಗೂ ಇರಬೇಕು ಹೀಗೆ ಎನ್ನುವ ಛಲ ಹುಟ್ಟಿಸುತ್ತದೆ. .
    ಕಾವ್ಯಗಳ ನಾಡಿಗೆ ಹೊಕ್ಕರೆ ಒಂದೊಂದೂ ಬೃಹದಾಕಾರ ಅಜೀಬು ದುನಿಯಾದ ಮರ್ಜಿಯೂ ಹಾಗೇ ಏನೋ ? ವಿರಹದ ಉರಿಯ ಮಧುರ ಅಪ್ಪುಗೆಯಿಂದ ಮೈಥುನದ ಪೂರ್ಣತೆವರೆಗೆ ಕರೆದು ಮತ್ತೊಮ್ಮೆ ಅಪ್ಪ ನಿನ್ನಷ್ಟು ಎತ್ತರ ಬೆಳೆಯಬಾರದಿತ್ತು ಎಂದು ಕೂಸಿನoತೆ ಪಿಸುಗುಟ್ಟುತ್ತದೆ .. ಕವನಗಳ ವಿಸ್ತಾರಾಳಗಳು ನನ್ನ ಮೀರಿದ್ದು ಎನ್ನುವ ಅರಿವಿದ್ದರೂ ಬರೆಯುವಾಸೆಯಾಯಿತು ..ನಿದ್ದೆಯಿನ್ದೆಬ್ಬಿಸಿ .. ಕತ್ತಲಿಗೆ ಹೊಂದಿಕೊಂಡ ಕವಿಯಂತೆ ಕತ್ತಲಲ್ಲಿ ಹೊಸ ಅರಿವುಗಳ ತಿರುವು ಹುಟ್ಟುವುದೇನೋ ಎನ್ನುವ ಕುತೂಹಲವನ್ನ ಹೊಟ್ಟೆಗಿಳಿಸುತ್ತದೆ ..
    ಪ್ರವರ ಜೀ ವಯಸಿನಲ್ಲಿ ಚಿಕ್ಕವರಾದರೂ ಬದುಕಿನ ಮಜಲುಗಳಲ್ಲಿ ಮುಳುಗೆದ್ದು ಮೂರಳತೆ ತೆಗೆದು ಎಲ್ಲಾ ಪ್ರಶ್ನಿಸಿ ನಿಂತ ಸಂತನ ಎದೆಗುದಿಯಂತೆ ಬಟ್ಟಬಯಲಿನ ನಡುವೆ ಪ್ರಶ್ನೆಗಳ ಬಲೆ ಹಾಕಿ ಉತ್ತರಿಸಿ ಎಂದು ಸಮಾಜವನ್ನ ಗದಗುಟ್ಟಿಸುವ ಧೈರ್ಯ ತೋರುತ್ತಾರೆ .. ಒಳ್ಳೆಯ ಕವನಗಳಿಗಿರಬೆಕಾದ ಎಲ್ಲಾ ಎಲ್ಲಾ ಎತ್ತರಗಳನ್ನ ಮೀರಿ ತನ್ನತನದ ಹಿರಿತನ ತೋರುವ ಶುದ್ಧ ತನ್ನದೇ ಸ್ವರ ತೋರುವ ಅಜೀಬು ದುನಿಯಾ ಮತ್ತಷ್ಟು ಬರೆಸಿಕೊಳ್ಳುವ ,,ಪ್ರಶ್ನಿಸಿಕೊಳ್ಳುವ ಮತ್ತಷ್ಟು ಬೇಕೆನ್ನುವ ಓದುಗ ದೊರೆ ದೊರೆಸಾನಿಯರನ್ನ ಆಜ್ಞೆ ಹುಟ್ಟಿಸುವ ಗತ್ತು ಹೊರಡಿಸುತ್ತದೆ ಬರೆಯಿರಿ ಮತ್ತಷ್ಟು ಬೇಕು ನಮಗೆ … ಓದಿ ಕೆಳಗಿಡಲಾರದ ಜೀವನದ ಜೀವ ಹುಟ್ಟಿಸುವ ಕವನಗಳೆoದು …. ಮೊದಲ ಪುಸ್ತಕಕ್ಕೆ ಅದ್ಭುತ ಬರಹ .

  6. amardeep.p.s.

    ಮೇಡಂ , ನಿಮ್ಮ ಅಭಿಪ್ರಾಯ ಅನಿಸಿಕೆ ನೂರರಷ್ಟು ಸತ್ಯ. ನಿನ್ನೆ ರಾತ್ರಿ ಪ್ರವರನೊಂದಿಗೆ ಮಾತಾಡಿದೆ ಆ ಹುಡುಗನ ಬೆರಗಿನ ಮಾತು, ವಿನಯದ ಬಗ್ಗೆ ಬಹಳ ಮೆಚ್ಚುಗೆ ಹುಟ್ಟುತ್ತೆ…. ಕಾವ್ಯದಂತೆ ಅವನ ಸ್ನೇಹವು ಇಷ್ಟವಾಗಿಬಿಟ್ಟಿತು…..

  7. umasekhar

    Congrats pravara volleya padyagaligagi. padyagalannu bahu chennagi arthaisiddeya sandhya. good.

  8. ಹನುಮಂತ ಅನಂತ ಪಾಟೀಲ, ರಿಪ್ಪನ್ ಪೇಟೆ

    – ಅಜೀಬು ದುನಿಯಾ ಕೃತಿಯ ವಿಮರ್ಶೆ ಮೂಲ ಕೃತಿಯನ್ನು ಓದ ಬೇಕೆನ್ನುವ ಆಕಾಂಕ್ಚೆಯನ್ನು ಮೂಡಿಸಿದೆ.

  9. ಶರತ್ ಚಕ್ರವರ್ತಿ.

    ಅವನ ಸಾಲುಗಳಲ್ಲಿ ನಿಜವಾಗಿಯೂ ಮುಳುಗೆದ್ದಾಗ ಸಿಕ್ಕ ನೋಟಗಳು ಮತ್ತೆ ನೆನೆಪಿಸಿಕೊಂಡಂತಾಯ್ತು. ಧನ್ಯವಾದಗಳು ಸಂಧ್ಯಕ್ಕ. ಕಾರ್ಟೂನ್ ಕೂಡ ತುಂಬಾ ಚನಾಗಿದೆ.

  10. sunil rao

    Lekhana bahala ishta aaytu..
    Haageye padyagaloo…adara bhaavavoom…ajeebu duniyaadalli…kaledukondaddu…padedu kaledaddu…
    Beautiful

  11. Anonymous

    he sandhya, esht chennagi barediddaane e huduga , bhaalaa ishta aytu – lalitha siddhabasavaiah

  12. Santhoshkumar LM

    Super!

  13. bharathi b v

    oduttaa iddeeni … aagaaga … matte matte …..

  14. Anonymous

    ಚೆನ್ನಾಗಿ ಬರೆದಿದ್ದೀರಿ…ಹಾಗೇನೇ ತ್ರಿಮೂರ್ತಿಗಳು ಪ್ರವರ ರಾಜೇಂದ್ರ ಶರತ್ ರವರಿಗೆ ಕಂಗ್ರಾಟ್ಸ್….

  15. ಶಮ, ನಂದಿಬೆಟ್ಟ

    ಬದುಕೆಂದರೆ ಬರೀ
    ಬದುಕುವುದಲ್ಲ!
    ನೆಲವ ಕಚ್ಚಿ ಕೆದಕಬೇಕು
    ರೆಕ್ಕಿ ಬಿಚ್ಚಿ ಹಾರಬೇಕು’
    ಪ್ರವರನಿಗೆ ಶೂಭವಾಗಲಿ.. ಮತ್ತಷ್ಟು ಬರೆಯಲಿ; ಬೆಳೆಯಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading