ಸಂಧ್ಯಾರಾಣಿ ಕಾಲಂ : ಇ-ಕಾಲದಲ್ಲಿ ಗೌರಮ್ಮನಿಗೆ ಮಡಿಲು ತುಂಬುತ್ತಾ…

sandhya column
ಶ್ರಾವಣ ಎಂದರೆ ಹಸಿರು, ಶ್ರಾವಣ ಎಂದರೆ ಸಂಭ್ರಮ, ಶ್ರಾವಣ ಎಂದರೆ ಮಳೆ, ಶ್ರಾವಣ ಎಂದರೆ ತೌರಿನಿಂದ ಬರುವ ಬಾಗಿನ. ಶ್ರಾವಣ ಎಂದರೆ ’ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ!’ , ಶ್ರಾವಣ ಎಂದರೆ ಆಷಾಡ ಮುಗಿದ ಸಮಯ. ಶ್ರಾವಣ ಎಂದರೆ ಬೇಂದ್ರೆ ಹಾಡು –
ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ
ಬಂತು ಶ್ರಾವಣ ಓ! ಬಂತು ಶ್ರಾವಣ ||
ಶ್ರಾವಣ ಬಂತು ಘಟ್ಟಕ ರಾಜ್ಯ ಪಟ್ಟಕ ಬಾಣ ಮಟ್ಟಕ
ಏರ್ಯಾವ ಮುಗಿಲು ರವಿ ಕಾಣೆ ಹಾಡೆ ಹಗಲು
ಬೆಟ್ಟ ತೊಟ್ಟಾವ ಕುಸುನಿಯ ಅಂಗಿ ಹಸಿರು ನೋಡ ತಂಗಿ ಹೊರಟಾವೆಲ್ಲೋ ಜಂಗಿ
ಜಾತ್ರೆಗೆನೋ ನೆರೆದದ ಇಲ್ಲೇ ತಾನು’..
ಮತ್ತು ಶ್ರಾವಣ ಎಂದರೆ ಗೌರಮ್ಮ ಮನೆಗೆ ಬರುವ ಸಮಯ ಬಂತು ಎಂದೇ ಅರ್ಥ.
ಆ ದಿನಗಳಲ್ಲಿ ಎಲ್ಲರೂ ಅಜ್ಜಿಯ ಮನೆ ಸೇರುತ್ತಿದ್ದೆವು. ಪಾಠ, ಅಟೆಂಡೆನ್ಸು, ಟೆಸ್ಟು… ಉಹೂ ನಾವಿರಲಿ ನಮ್ಮ ಅಪ್ಪ ಅಮ್ಮ ಸಹ ಅದಕ್ಕೆಲ್ಲ ಡೋಂಟ್ ಕೇರ್! ಹಬ್ಬ ಬಂತೆಂದರೆ ಬ್ಯಾಗ್ ಪ್ಯಾಕ್, ಬಸ್ ಹತ್! ಗೌರಿ ಹಬ್ಬಕ್ಕೆ ಹಳ್ಳಿಯ ಅಜ್ಜಿ ಮನೆ, ದೀಪಾವಳಿಗೆ ದೊಡ್ಡಪ್ಪನ ಮನೆ. ದೀಪಾವಳಿ ನಮಗೆ ಹಬ್ಬವಾಗಲು ಶುರುವಾಗುತ್ತಿದ್ದದ್ದು ಊಟದ ಹೊತ್ತಿನಿಂದ. ಆದರೆ ಗೌರಿ ಹಾಗಲ್ಲ. ಗೌರಿ ಹಬ್ಬದ ಸಂಭ್ರಮ ಆಷಾಡ ಮುಗಿದು ಶ್ರಾವಣ ಕಾಲಿಟ್ಟ ತಕ್ಷಣ ಶುರು ಆಗುತ್ತಿತ್ತು. ಆಗೆಲ್ಲಾ ಬೇಕೆಂದಾಗೆಲ್ಲಾ ಹೊಸಬಟ್ಟೆ ಸಿಗುತ್ತಿರಲಿಲ್ಲ, ಗೌರಿ ಹಬ್ಬಕ್ಕೆ ಮತ್ತು ಹುಟ್ಟಿದ ದಿನಕ್ಕೆ ಮಾತ್ರ ಹೊಸ ಬಟ್ಟೆ. ಹೊಸ ಬಟ್ಟೆ, ಗಾಜಿನ ಬಳೆಗಳು, ಟೇಪು, ಟಿಕಳಿ… ಪಟ್ಟಿ ಜೋಡಿಸುತ್ತಿದ್ದೆವು.
ಇದು ನಮ್ಮ ಪಟ್ಟಿ ಆದರೆ ಅಮ್ಮನಿಗೆ ಹೊಸ ಮರಗಳನ್ನು ತಂದು ಅದರಲ್ಲಿ ಬಾಗಿನದ ಸಾಮಾನುಗಳನ್ನು ಜೋಡಿಸಿಡುವ ಕೆಲಸ, ಪುಟ್ಟ ಕನ್ನಡಿ, ಬಾಚಣಿಗೆ, ಕರಿ ಬಳೆ, ಬ್ಲೌಸ್ ಪೀಸು, ಅರಸಿನ, ಕುಂಕುಮ.. ಹೀಗೆ. ಅಜ್ಜಿಯದು ಅದಕ್ಕೂ ಮೀರಿದ ಹಬ್ಬ. ಗೌರಿ ಹಬ್ಬ ಬಂತೆಂದರೆ ಅಜ್ಜಿ ಅಡಿಗೆ ಮನೆ ಒಪ್ಪ ಮಾಡಲು ಶುರು ಮಾದುತ್ತಿದ್ದರು. ಅಟ್ಟದ ಮೇಲಿಂದ ಪಾತ್ರೆಗಳನ್ನು ಇಳಿಸಿ, ನನ್ನ ನಡು ಎತ್ತರ ಇರುತ್ತಿದ್ದ ಪಾತ್ರೆಗಳನ್ನು ಹುಣಿಸೆ ಹುಳಿ ಹಾಕಿ, ತಿಕ್ಕಿ ಫಳ ಫಳ ಅನ್ನಿಸಿ, ಅಡಿಗೆ ಮನೆ ಸಾರಣೆ ಕೆಲಸ ಶುರು. ಮೊದಲು ಸುಣ್ಣದ ಕಲ್ಲು ತರಿಸಿ, ನೆನೆ ಹಾಕಿ, ಬಿಳಿ ಬಟ್ಟೆಯಲ್ಲಿ ಸೋಸಿ, ನಯವಾದ, ಹಾಲಿನಂತಹ ಸುಣ್ಣದ ನೀರು ಸಿದ್ಧವಾಗುತ್ತಿತ್ತು. ಅದಕ್ಕೆ ಬಿಳಿ ಬಟ್ಟೆ ಅದ್ದಿ, ಗೋಡೆಗೆ ಬಳಿದಂತೆಲ್ಲಾ, ಸೌದೆ ಮಸಿಯಲ್ಲಿ ಕಪ್ಪಾಗಿದ್ದ ಗೋಡೆಗಳಿಗೆಲ್ಲಾ ಹಾಲಿನ ಅಭಿಷೇಕ ಆದಂತೆ. ನಂತರ ಸೌದೆ ಒಲೆಯ ಸಾರಣೆ, ಆಮೇಲೆ ಕೆಮ್ಮಣ್ಣಿನಲ್ಲಿ ರಂಗೋಲಿ. ಇಂದಿಗೂ ಸಹ ಸಾರಣೆ ಮಾಡಿಸಿಕೊಂಡು ಬಿಳಿ-ಕೆಂಪು ರಂಗವಲ್ಲಿಯಲ್ಲಿ ಅಲಂಕರಿಸಿಕೊಂಡು, ಕಿನ್ನರ ಲೋಕದ ದೀವಟಿಗೆಯಂತೆ ಉರಿಯುತ್ತಿದ್ದ ಒಲೆ ನನ್ನ ಕಣ್ಣಿನಿಂದ ಮರೆಯಾಗೇ ಇಲ್ಲ.
೧
ಹಬ್ಬದ ದಿನ ಬೆಳಗ್ಗೆ ಎದ್ದು, ಸ್ನಾನ ಮಾಡಿದ ಕೂಡಲೆ ಅಲಂಕಾರದ ಸಂಭ್ರಮ. ಹಳ್ಳಿಯ ಪುರೋಹಿತರ ಮನೆಯಲ್ಲಿ ಗೌರಮ್ಮನನ್ನು ಕೂರಿಸಿರುತ್ತಿದ್ದರು, ಅಲ್ಲಿ ಹೋಗಿ ಗೌರಮ್ಮನಿಗೆ ಪೂಜೆ ಮಾಡಿ, ಹಸಿದಾರದ ಕಂಕಣ ಕಟ್ಟಿಸಿಕೊಂಡು, ಕೇದಾರೇಶ್ವರನ ವ್ರತದ ಕಥೆ ಕೇಳಲು ತಯಾರಿ. ಆ ದಿನ ಅವರ ಮನೆಯಲ್ಲಿ ಆಲದೆಲೆಯಲ್ಲಿ ಕೊಡುತ್ತಿದ್ದ ಕೋಸಂಬರಿ ರುಚಿ ಆಹಾ! ಇದು ಮಕ್ಕಳ ಲೋಕವಾದರೆ ಅಲ್ಲಿ ಇನ್ನೊಂದು ಲೋಕವೂ ಇರುತ್ತಿತ್ತು. ಅಮ್ಮ-ಚಿಕ್ಕಮ್ಮಂದಿರ ಲೋಕ. ಅಲ್ಲಿಗೆ ಎಲ್ಲಾ ನೆಂಟರ ಮನೆ ಹೆಣ್ಣು ಮಕ್ಕಳೂ ಬರುತ್ತಿದ್ದರು, ಗೌರಮ್ಮನ ಕಡೆ ನೋಡುವ ಮೊದಲೇ ಒಮ್ಮೆ ಎಲ್ಲಾ ಹೆಣ್ಣು ಮಕ್ಕಳ ಕಣ್ಣುಗಳೂ ಇನ್ನೊಬ್ಬರ ಮೈ ಮೇಲಿನ ಒಡವೆಯನ್ನು ಕ್ಷಣ ಮಾತ್ರದಲಿ ಸ್ಕಾನ್ ಮಾಡಿಬಿಡುತ್ತಿದ್ದವು. ಎಷ್ಟೇ ಹೊಸದಾದರೂ ಇವರು ಬಾಯಿ ಬಿಟ್ಟು ಹೊಸದಾ ಎಂದು ಕೇಳಿದರೆ ಕೇಳಿ! ಪಾಪ ಧರಿಸಿಕೊಂಡವರು ಹೇಗೋ ಕೊಂಕಣ ಸುತ್ತಿ, ಕೈ ತಿರುವಿ, ಬೆರಳು ಎಳೆದು, ಕತ್ತು ಕೊಂಕಿಸಿ ತಮ್ಮ ಹೊಸ ಒಡವೆ ವಿಷಯ ಸಭೆಯಲ್ಲಿ ಚರ್ಚೆಗೆ ಬರುವಂತೆ ಮಾಡುತ್ತಿದ್ದರು!  ಆಮೇಲೆ ಅರಸಿನ ಕುಂಕುಮಕ್ಕೆ ಕರೆಯುವ, ಒಬ್ಬರ ಮನೆಗೊಬ್ಬರು ಹೋಗುವ ಸಿರಿ. ಒಬ್ಬೊಬ್ಬರ ಮನೆಯಲ್ಲೂ ಅರಸಿನ, ಕುಂಕುಮ, ಎರಡೆರಡು ಗಾಜಿನ ಬಳೆ ಎಂದರೂ ಸಂಜೆ ಹೊತ್ತಿಗೆ ಎರಡೂ ಕೈಗಳ ತುಂಬಾ ಕೆಂಪು ಹಸಿರು ಗಾಜಿನ ಬಳೆ. ಬೇಕೆಂದೇ ಕೈ ಬೀಸಿ ನಡೆದು ಘಲ್ ಘಲ್ ಅನ್ನಿಸುವ ಆಸೆ. ಬಾಲ್ಯ ಕಳೆದದ್ದು, ಹರೆಯ ಬಳೆ ಏರಿಸಿಕೊಂಡಿದ್ದು ಎಲ್ಲಾ ಹೀಗೆಯೇ.
ಅಜ್ಜಿಯ ಕಾಲದಿಂದ ಅಮ್ಮನ ಕಾಲಕ್ಕೆ ಬದಲಾಗುವಷ್ಟರಲ್ಲಿ ಕಾಣೆಯಾಗಿದ್ದು ಅಡಿಗೆಮನೆ ಸಾರಣೆ ಮಾತ್ರ, ಮಿಕ್ಕಂತೆ ಎಲ್ಲವೂ ಥೇಟ್ ಥೇಟ್! ಕ್ವಾರ್ಟರ್ಸ್ನ ಮನೆಗಳಲ್ಲಿರುತ್ತಿದ್ದ ಅಮ್ಮ ಗೋಡೆ ಸಾರಣೆ ಮಾಡುವ ಮಾತೇ ಇರಲಿಲ್ಲ! ಹಾಗೆಂದು ಹಬ್ಬದ ಸಡಗರಕ್ಕೇನಾದರೂ ಮುಕ್ಕಾಗಿತ್ತೇ ಎಂದರೆ ಖಂಡಿತಾ ಇಲ್ಲ. ಅದೇ ಶ್ರಾವಣ ಮಾಸದ ಹಬ್ಬದ ಸಿದ್ಧತೆ, ಅದೇ ಭಾದ್ರಪದದ ಹೋಳಿಗೆ ಕಡುಬು. ಗೌರಿಯನ್ನು ಕೂರಿಸಿದವರ ಮನೆಗೆ ಹೋಗಿ, ಹಸಿದಾರ-ಸೇವಂತಿಗೆಯ ಕಂಕಣ ಕಟ್ಟಿಸಿಕೊಂಡು ಬಂದರೆ ಆಯಿತೆ? ಆಮೇಲೆ ಗೌರಮ್ಮನನ್ನು ಕಳುಹಿಸಿಕೊಡುವ ದಿನ ಬರುತ್ತಿತ್ತು. ಆಗ ತಟ್ಟೆ ತುಂಬಾ ಅಕ್ಕಿ, ಬಳೆ, ಬ್ಲೌಸ್ ಪೀಸು, ಹೂ ತೆಗೆದುಕೊಂಡು ಹೋಗಿ, ಗೌರಮ್ಮನಿಗೆ ಮಡಿಲು ತುಂಬಿ ಥೇಟ್ ತವರು ಮನೆಯಿಂದ ಕಳುಹಿಸಿದಂತೆಯೇ ಕಳಿಸಿಕೊಡುತ್ತಿದ್ದೆವು.
ಆ ಕಾಲಕ್ಕೂ ಈ ಕಾಲಕ್ಕೂ ಕಾವೇರಿ ಸುಮಾರು ದೂರ ಹರಿದಿದ್ದಾಳೆ. ಇದು ಇ-ಕಾಲ ಎನ್ನುವುದನ್ನು ಹಬ್ಬಕ್ಕೆ ತಿಂಗಳಿರುವಾಗಲೇ ಅಮೆಜಾನ್, ಫ್ಲಿಪ್ ಕಾರ್ಟ್, ಜಬಾಂಗ್ ಅಣ್ಣಂದಿರು ನೆನಪು ಮಾಡುತ್ತಲೇ ಇರುತ್ತಾರೆ. ಲೇಖನದ ತಲೆಬರಹ ಓದಿದ ಕೂಡಲೇ ನಾನು ಇ-ಕಾಲ ಮತ್ತು ಗೌರಿ ಹಬ್ಬ ಎರಡೂ ಬೇರೆ ಬೇರೆ ಎಂದು ಹೇಳಲು ಇಷ್ಟೆಲ್ಲಾ ಬರೆಯುತ್ತಿದ್ದೆನೆ ಎಂದು ಕೊಂಡರೆ ಐ ಆಮ್ ಸಾರಿ! ಹಬ್ಬ ಆಗಲೂ ಇತ್ತು, ಈಗಲೂ ಇದೆ. ಆಗಿನ ಕಾಲದಲ್ಲಿ…. ಎನ್ನುತ್ತಾ ನಿನ್ನೆಗಳನ್ನು ವೈಭವೀಕರಿಸುವ ಬದಲು ನಿನ್ನೆಯ ಸಿಹಿಯ ಜೊತೆ ಇಂದನ್ನು ಮನಸಾರೆ ಸವಿಯುವುದರಲ್ಲೇ ನನಗೆ ಹೆಚ್ಚು ಖುಷಿ. ನಾನು ಚಿಕ್ಕವಳಾಗಿದ್ದಾಗಿನಿಂದ ಒಂದು ತಮಾಷೆ ಗಮನಿಸುತ್ತಲೇ ಬಂದಿದ್ದೇನೆ, ನನ್ನ ಅಜ್ಜಿ, ಅವರ ಅಕ್ಕ, ಅಮ್ಮ, ನನ್ನ ಕೆಲವು ಗೆಳತಿಯರು ಎಲ್ಲರೂ ಅವರ ಕಾಲ ಮಾತ್ರ ಸುವರ್ಣ ಕ್ಷಣ ಎಂದು ಪ್ರಾಮಾಣಿಕವಾಗಿ ನಂಬಿರುತ್ತಾರೆ! ಹಾಗೆ ಅಜ್ಜಿಯ ಬಾಲ್ಯಕಾಲ ಮಾತ್ರ ಬಂಗಾರದ್ದು ಎಂದುಕೊಂಡರೆ, ಅಮ್ಮನಿಗೆ ಅವಳ ಬಾಲ್ಯ ಮಾತ್ರ ಯಾಕೆ ಬಂಗಾರವಾಗಬೇಕು? ನನ್ನ ಗೆಳತಿಯೊಬ್ಬಳಿಗೆ ಅವಳ ಬಾಲ್ಯದ ಹಬ್ಬಗಳು ಮಾತ್ರ ಯಾಕೆ ಸತ್ಯ ಅನ್ನಿಸಬೇಕು? ಬಹುಶಃ ಪ್ರತಿಯೊಬ್ಬರಿಗೂ ಒಂದೊಂದು ಬಂಗಾರದ ಕಾಲ ಇರುತ್ತದೆಯೋ ಏನೋ!
images
ನಿನ್ನೆಗಳ ಕಡೆಗೆ ಕಣ್ಣು ನೆಟ್ಟು, ಇಂದುಗಳನ್ನು ಕೈಯಿಂದ ಜಾರಿಸಿಕೊಳ್ಳುವ ಬದಲು ನಿನ್ನೆ ಇಂದುಗಳ ಸಮಪಾಕದಲ್ಲಿ ಬದುಕು ಸುವರ್ಣಸಂಧಿಯಾಗಬೇಕು ಅನಿಸುತ್ತದೆ ನನಗೆ. ಬದುಕು, ಹಬ್ಬ, ಆಚರಣೆ ಎಲ್ಲವೂ ಹರಿಯುವ ನದಿ ಇದ್ದಂತೆ. ನದಿ ಬದಲಾಗುತ್ತಾ ಹೋಗುತ್ತದೆ, ತನ್ನ ಪಾತ್ರಕ್ಕೆ ತಕ್ಕಂತೆ, ಕೊಂಡೊಯ್ದ ಮನೆಗಳ ಪಾತ್ರೆಗಳಿಗೆ ತಕ್ಕಂತೆ. ಹಾಗೆ ಹಬ್ಬ, ಆಚರಣೆ ಎಲ್ಲವೂ. ಅವು ಸಹ ಬದಲಾಗುತ್ತಾ ಹೋಗುತ್ತದೆ, ಕಾಲಕ್ಕೆ ತಕ್ಕಂತೆ, ಮನೆಗಳಿಗೆ ತಕ್ಕಂತೆ, ಮನೆಯವರಿಗೆ ತಕ್ಕಂತೆ.
ಹಬ್ಬ ಮತ್ತು ನಗರದ ಜೀವನ ಎಂದರೆ ಸಾಕು ಕೆಲವರು ಮೂಗು ಮುರಿಯುತ್ತಾರೆ. ಬೆಂಗಳೂರಿನಲ್ಲಿ ಎಂತಹ ಹಬ್ಬ ಎಂದು ಸಾರಾಸಗಟಾಗಿ ಬೆಂಗಳೂರೆಂಬ ಬೆಂಗಳೂರಮ್ಮನ ಮುಖಕ್ಕೆ ಆರತಿ ಎತ್ತಿ ನಿವಾಳಿಸಿಬಿದುತ್ತಾರೆ. ಆದರೆ ಹೊರಗಿನಿಂದ ನೋಡುವವರಿಗೆ ನಗರಗಳು ರೈಲಿನೊಳಗಿಂದ ಕೂತು ಊರು ನೋಡಿದ ಹಾಗೆ. ಅವರು ನಾವು ಊರನ್ನು ನೋಡಿದೆವು ಎಂದುಕೊಂಡ ಘಳಿಗೆಯಲ್ಲಿ ಅವರು ನೋಡಿರುವುದು ರೈಲ್ವೆ ಸ್ಟೇಶನ್ ಮತ್ತು ರೈಲ್ವೆ ಹಳಿಗಳ ಸುತ್ತ ಮುತ್ತ ಮಾತ್ರ, ಮತ್ತು ಊರು ಅದರಾಚೆಗೂ ಹರಡಿಕೊಂಡಿರುತ್ತದೆ. ಬೆಂಗಳೂರನ್ನೇ ಉದಾಹರಣೆ ಆಗಿ ತೆಗೆದುಕೊಂಡರೆ, ಬೆಂಗಳೂರೆಂದರೆ ಕೇವಲ ಎಂ ಜಿ ರೋಡು, ಬ್ರಿಗೇಡು ಅಲ್ಲ. ಇಲ್ಲೇ ಮಲ್ಲೇಶ್ವರ ಇದೆ, ಡಿವಿಜಿ ರಸ್ತೆ ಇದೆ, ಜಯನಗರ ಫೋರ್ತ್ ಪ್ಲಾಕ್ ಇದೆ. ಇ-ಕಾಲದಲ್ಲೂ ಹಬ್ಬ ಇಲ್ಲಿಗೆ ಗೆಜ್ಜೆ ಕಟ್ಟಿಕೊಂಡೇ ಬರುತ್ತದೆ.
ಹಬ್ಬವೆಂದರೆ ಇಲ್ಲಿ ಡಿಸ್ಕೌಂಟು, ಹೊಸ ಸ್ಟಾಕು, ಆಚೀಚೆ ಹೂವಿನಂಗಡಿಯವರ ದೇವಲೋಕದ ಉದ್ಯಾನವನ, ಗಂಧಿಗೆ ಅಂಗಡಿಗಳಲ್ಲಿ ಬಾಗಿನದ ಸಾಮಾನುಗಳ ವ್ಯಾಪಾರ, ಸಿಗ್ನಲ್ಲುಗಳಲ್ಲಿ ಜೋಡಿ ಮರಗಳ ರಿಸೆಪ್ಷನ್ನು! ಗಡಿಬಿಡಿಯಲ್ಲಿ ಅಂಗಡಿಗೆ ಹೋಗಲು ಕಷ್ಟ ಅಂದರೆ ಚಿಂತೆಯೇ ಬೇಡ, ಹಬ್ಬದ ದಿನಸಿ ಅಂಗಡಿಯವನು ಮನೆಗೆ ತಂದುಕೊಟ್ಟಾನು, ಅಂಗಡಿಗೆ ಫೋನ್ ಮಾಡುವ ಕಷ್ಟವೂ ಬೇಡ ಎಂದರೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿ. ಬಟ್ಟೆ, ಬರೆ, ಬ್ಯಾಗು, ಚಪ್ಪಲಿ, ನೇಲ್ ಪಾಲಿಶ್ ಎಲ್ಲವೂ ಸಿಗುತ್ತದೆ ಆನ್ ಲೈನ್ ನಲ್ಲೇ. ಬದಲಾಗಿರುವುದು ಪರಿಕರಗಳು ಮಾತ್ರ, ಅದೇ ಹಬ್ಬ, ಅದನ್ನು ಹಾಗೇ ನಮ್ಮದಾಗಿಸಿಕೊಳ್ಳಬೇಕು.  ಈಗಲೂ ನನಗೆ ಗೌರಿ ಅಂದರೆ ರಂಗೋಲಿ, ಕೈತುಂಬಾ ಗಾಜಿನ ಬಳೆ, ಅಪರೂಪಕ್ಕೆ ಕೆನ್ನೆಗೆ ಹಚ್ಚುವ ಅರಸಿನ, ಮುದ್ದಾದ ಗೌರಮ್ಮನ ಮುಖದಲ್ಲಿ ಇಣುಕುವ ಅಮ್ಮನ ಮುಖ, ಸೀರೆಯ ನಿರಿ…
ಗೌರಿಹಬ್ಬ ಈಗಲೂ ಬರುತ್ತದೆ. ಇ-ಕಾಲದಲ್ಲೂ ಅದು ಹಬ್ಬವೇ. ಹಬ್ಬ ಈಗ ಹಳ್ಳಿಯ ಗಡಿ ದಾಟಿ, ಊರು, ನಗರ, ಪಟ್ಟಣ, ಖಂಡಾಂತರಗಳ ಆಚೆಗೂ ಓಡುತ್ತದೆ. ಹಬ್ಬದ ದಿನ ಅಲಂಕಾರ ಈಗ ಮೊದಲಿಗಿಂತಲೂ ಜೋರಿರುತ್ತದೆ. ಮನೆಯ ಗೃಹಿಣಿಗೆ ದೇವರಕೋಣೆಯನ್ನು ಚಂದಗೊಳಿಸಿ, ಹೂ ಜೋಡಿಸಿ, ದೀಪ ಹಚ್ಚಿದ ಕೂಡಲೇ, ಫೋಟೋ ತೆಗೆದು, ವಾಟ್ಸ್ ಅಪ್ ನಲ್ಲಿ, ಫೇಸ್ ಬುಕ್ಕಿನಲಿ ಕಳಿಸುವ ಆಸೆ, ತಪ್ಪು ಅಂತ ಯಾಕನ್ನಲಿ, ಮೊದಲು ಒಬ್ಬರು ಇನ್ನೊಬ್ಬರನ್ನು ಅರಸಿನ ಕುಂಕುಮಕ್ಕೆ ಅಂತ ಕರೆದು ಮಾಡುತ್ತಿದ್ದದ್ದೂ ಇದೇ ಅಲ್ಲವೆ? ಚಂದ ಅಲಂಕಾರವಾಗಿ, ಒಡವೆ ಧರಿಸಿ, ಹೊಸ ಸೀರೆ ಉಟ್ಟು, ಫೋಟೋ ತೆಗೆದು, ಫೇಸ್ ಬುಕ್ಕಿಗೆ ಹಾಕಿ ಲೈಕು-ಕಾಮೆಂಟುಗಳಿಗಾಗಿ ಕಾಯುವವರಲ್ಲಿ ಪ್ರತಿ ಹಬ್ಬಕ್ಕೂ ಹೊಸ ಒಡವೆ ಧರಿಸಿ, ನಾವು ಗಮನಿಸಿದೆವೋ ಇಲ್ಲವೋ ಎಂದು ಮಗುವಿನ ಕಾತರದಲಿ ಕಾಯುತ್ತಿದ್ದ ರಾಜೇಶ್ವರಿ ಆಂಟಿ ಕಾಣುತ್ತಾರೆ ನನಗೆ. ಹಬ್ಬವೆಂದರೆ ಕೆಲವರಿಗೆ ಪೂಜೆ, ಕೆಲವರಿಗೆ ಅಲಂಕಾರ, ಕೆಲವರಿಗೆ ಊಟ, ನಿದ್ದೆ, ಮನೆ ಬಿಟ್ಟುಬಂದ ಬ್ಯಾಚುಲರ್ ಗಳಿಗೆ ಒಗೆಯಬೇಕಾದ ಬಟ್ಟೆ, ನೋಡಬೇಕಾದ ಸಿನಿಮಾ, ಬಾಕಿ ಉಳಿದ ಕೆಲಸಗಳು. ಊರು ಬಿಟ್ಟು, ಬೇರೆ ಊರಲ್ಲಿ ಕೆಲಸಕ್ಕೆ ಸೇರಿರುವ ಹೆಣ್ಣುಮಕ್ಕಳಿಗೆ ಹಬ್ಬವೆಂದರೆ ಅಮ್ಮ ಎರೆಯುತ್ತಿದ್ದ ಎಣ್ಣೆ ಸ್ನಾನದ ನೆನಪಿನಲ್ಲೇ ಸುರಿದುಕೊಂಡ ನೀರು, ಹೊಸ ಬಟ್ಟೆ, ಮೆಸ್ಸಿನ ಊಟ, ಜೊತೆಗೆ ಸ್ವೀಟು, ವಾಟ್ಸಪ್ಪು ಫೇಸ್ ಬುಕ್ಕಿನಲ್ಲಿ ಹಬ್ಬದ ಶುಭಾಶಯಗಳು. ಮಧ್ಯಾನದ ಊಟದ ಸಮಯಕ್ಕೆ ಕಡ್ಡಾಯವಾಗಿ ನೆನಪಾಗುವ ಅಮ್ಮನ ಅಡಿಗೆ, ರಾತ್ರಿ ಮಲಗುವಾಗ ಹೇಗೋ ತಪ್ಪಿಸ್ಕೊಂಡು ಕಣ್ಣಿಂದ ಜಾರುವ ಒಂದು ಹನಿ ನೀರು. ಹಬ್ಬವೆಂದರೆ ಏನೆಲ್ಲ, ಏನಿಲ್ಲ?
ಆದರೆ ಹಬ್ಬವೆಂದರೆ ಇದಷ್ಟೇ ಅಲ್ಲ ಅನ್ನಿಸಿದ್ದು ಭಾನು ಮುಷ್ತಾಕ್ ಬರೆದ ಈ ಕವಿತೆ ಓದಿದಾಗ :
2
ಕವಿತೆಯ ಹೆಸರು ’ಒದ್ದೆ ಕಣ್ಣಿನ ಬಾಗಿನ’. ಕವನದಲ್ಲಿ ಭಾನು ತಮಗೆ ಪ್ರತಿ ಗೌರಿ ಹಬ್ಬಕ್ಕೂ ಬಾಗಿನ ಕೊಡುತ್ತಿದ್ದ ಚನ್ನಬಸವಣ್ಣನನ್ನು ನೆನಪಿಸಿಕೊಳ್ಳುತ್ತಾರೆ, ಪುಸ್ತಕವನ್ನು ಅವರಿಗೇ ಅರ್ಪಿಸಿದ್ದಾರೆ ಕೂಡ. ಕವಿತೆ ಶುರು ಆಗುವುದೇ ಬಾಗಿನದ ಮೊರಗಳ ನೆನಪಿನೊಂದಿಗೆ :
’ಮೊರ ಅಂದರೆ ಗೊತ್ತಲ್ಲಾ?
ಕೇರುತ್ತೆ ಅದು, ಅಲ್ಲಿ
ಇಲ್ಲಿ ಮತ್ತು ಎಲ್ಲೆಲ್ಲೂ’
ಬಸವರಾಜಣ್ಣನ ಎಡ ಹೆಗಲ ವಲ್ಲಿಯೊಡನೆ ಮಣ್ಣಿನ ಗುಣ ಹೀರಿ ಬೆಳೆದುದನ್ನು ಹೇಳುತ್ತಲೇ ಬಾನು ’ಪ್ರೀತಿಯ ಒಳ ಒರತೆಗಳು ಜಿನುಗುವುದು ಹೀಗೆ ನೋಡಿ’ ಎನ್ನುತ್ತಾರೆ.ಸಾಬರ ಮಗಳು, ಸಾಬರ ಸೊಸೆಗೆ ಹೀಗೆ ಜೋಡಿ ಮರದ, ಅರಸಿನ ಕುಂಕುಮದ ಬಾಗಿನವನ್ನು ಬಸವರಾಜಣ್ಣ ಕೊಡುತ್ತಾರೆ ಸರಿ, ಅದನ್ನು ಆ ಹುಡುಗಿ ಅತ್ತೆ ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ಆ ಮರಗಳು ಆ ಹುಡುಗಿಯ ಎದೆಯಲ್ಲಿ ಹುಟ್ಟಿಸುವ ತಲ್ಲಣಗಳು, ಜೊತೆಯಲ್ಲೇ ಕೊಡುವ ನಂಬಿಕೆ, ವಿಶ್ವಾಸ. ಬಾನು ಕವನ ಮುಗಿಸುವುದು ಹೀಗೆ,
’ಬಸವರಾಜಣ್ಣ…
ನೀವು ಕೊಟ್ಟ ಮೊರ ಹೇಳುತ್ತೆ
ಮಿಡಿಯುತ್ತೆ ಸಹಸ್ರ ಆರೋಪಗಳೆದುರು
ಒಂಟಿಯಾಗಿ ನಿಲ್ಲುತ್ತೆ, ಧ್ವೇಷದ ಎಲ್ಲಾ
ಭಾಷೆಗಳ ಕವಿಚಿ ಹಾಕುತ್ತೆ. ಮುಂಜಾವಿನ
ಹೊಂಬೆಳಕಿನೊಂದಿಗೆ ಪ್ರೀತಿಯ ನಿರ್ಮಲ
ಅಲೆಗಳು ಮೊರದ ತುಂಬಾ
ತೂರುತ್ತಿರುತ್ತವೆ.’
ಇಲ್ಲಿ ಮುಖ್ಯವಾಗುವುದು ಮನುಷ್ಯರ ಎದೆಯೊಳಗಿನ ಜೀವಸೆಲೆಯೇ ಹೊರತು ಬದಲಾಗುವ ಕಾಲಮಾನವಲ್ಲ. ಹಬ್ಬವೆಂದರೆ ಕೇವಲ ಧಾರ್ಮಿಕ ಆಚರಣೆ ಅಲ್ಲ, ಬದುಕಿನ ತುಣುಕು. ಹಾಗಾಗಿಯೇ ಆ ಕಾಲಕ್ಕೂ ಇ-ಕಾಲಕ್ಕೂ ಹಬ್ಬಗಳು ಕೂಸಿನ ಕಾಲಿನ ಒತ್ತು ಗೆಜ್ಜೆಯಂತೆ, ಹದಿಹರೆಯದ ಹುಡುಗಿಯ ಮುಡಿಯಲ್ಲಿನ ಹೂವಿನಂತೆ, ಹಬ್ಬ ಮುಗಿಸಿದ ಹೆಣ್ಣಿನ ಹಣೆಯ ಬೆವರಿನಡಿಯ ಕುಂಕುಮದಂತೆ ನಮ್ಮನ್ನು ಬೆಚ್ಚಗಾಗಿಸುತ್ತಿರುತ್ತವೆ.

‍ಲೇಖಕರು avadhi-sandhyarani

August 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. Ahalya Ballal

    ಹೌದು ಸಂಧ್ಯಾ. ನಾಸ್ಟಾಲ್ಜಿಯಾದ ಪ್ರಭೆ ಸ್ವಲ್ಪ ಕಾಲದವರೆಗೆ. ಆಮೇಲೇನು? ಎಂಬ ಪ್ರಶ್ನೆಯೇ ಮುಖ್ಯ, ಅಲ್ವಾ?
    ಅಂದ ಹಾಗೆ ಇಷ್ಟೊಳ್ಳೇ ಯೋಚನಾಲಹರಿಗಳ ಬಾಗಿನ ನಮಗುಂಟು ಎನ್ನುವುದೇ ಹಬ್ಬ . 🙂

    ಪ್ರತಿಕ್ರಿಯೆ
  2. Shobha venkatesh

    Thumba chennagide…haleyadella namma maneya vaatavarana…samajada vaatavarana chennagi nenapige baruvante madiddini Sandhya..as usual nimma baeravanige great

    ಪ್ರತಿಕ್ರಿಯೆ
  3. jayashree Deshpande

    ಇ ಕಾಲದಲ್ಲೂ ಕಾಲಿಗೆ ಗೆಜ್ಜೆ ಕಟ್ಟಿಕೊ೦ಡೇ ಬೆ೦ಗಳೂರಿನ ಹಲವು ಬಡಾವಣೆಗಳಿಗೆ ಬ೦ದಿಳಿಯುವ ಹಬ್ಬಗಳು…ಮುದ್ದಾದ ಗೌರಮ್ಮನ ಮುಖದಲ್ಲಿಣುಕುವ ಅಮ್ಮನ ಮುಖ, ರಾತ್ರಿ ಮಲಗುವಾಗ ಹೇಗೋ ತಪ್ಪಿಸಿಕೊ೦ಡು ಜಾರುವ ಒ೦ದು ಕಣ್ಣ೦ಚಿನ ಹನಿ..ಎಲ್ಲಿಗೋ, ಎ೦ದಿಗೋ ಕರೆದೊಯ್ದು ಸುತ್ತಾಡಿಸಿಕೊ೦ಡು ಬರಬಲ್ಲ ಸಾಲುಗಳು. ಸಶಕ್ತ ಬರಹ ಅ೦ದರೆ ಹೀಗೆಯೇ !

    ಪ್ರತಿಕ್ರಿಯೆ
  4. umavallish

    ಸಂದ್ಯಾ ಅವರೇ, ಚೆನ್ನಾಗಿದೆ. ”ನಿನ್ನೆ ಇಂದುಗಳ ಸಮಪಾಕದಲ್ಲಿ” ಸುಂದರ ಚಿತ್ರಣ. ನನ್ನ ಬಾಲ್ಯದ ಗೌರಿಹಬ್ಬದ ನೆನಪಿನ ಈಗ ನಾವು ಆಚರಿಸುವ ಗೌರಿ ಹಬ್ಬ ಮಾತ್ರ ಅಲ್ಲ ,ಬೇರೆ ಎಲ್ಲ ಹಬ್ಬಗಳ ಆಚರಣೆ ಮಾರ್ಪಾಡು ನೋಡುವ ದೃಷ್ಟಿಕೋನ, ಸಹಜಚಿತ್ರ, ನಾನು ನೋಡುವಂತೆ ಮಾಡಿದ್ದೀರಿ .ಅದೇನೋ ಪ್ರತಿಸಾಲು, ಇದು ಸರಿ ಇದುಸರಿ ಅನ್ನಿಸುವಂತೆ ನೀವು ಬರೆ ಯುತ್ತೀರಿ. ವಂದನೆಗಳು
    .

    ಪ್ರತಿಕ್ರಿಯೆ
  5. K.Nalla Tambi

    ‘ಹಬ್ಬ ಮುಗಿಸಿದ ಹೆಣ್ಣಿನ ಹಣೆಯ ಬೆವರಿನಡಿಯ ಕುಂಕುಮದಂತೆ ನಮ್ಮನ್ನು ಬೆಚ್ಚಗಾಗಿಸುತ್ತಿರುತ್ತವೆ.’- ಈ ರೀತಿಯ ಅನೇಕ ಸುಂದರ ,ಮನ ಸೆಳೆಯುವ ಸಾಲುಗಳು. ಒಳ್ಳೆಯ ಕಾಲಂ. ಹಬ್ಬ ನಿನ್ನೇ ಇಂದುಗಳನ್ನು ನಿಲ್ಲುವಂತಹದ್ದು. ಎಲೆಯ ಫೋಟೋ ಸುಂದರ್ವಾಗಿದೆ. ಅಭಿನಂದನೆಗಳು, ಸಂಧ್ಯಾ ಅವರೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: