ಸಂಧ್ಯಾರಾಣಿ ಕಾಲಂ : ’ಆನು ಒಲಿದಂತೆ ಹಾಡುವೆ….’

’ಬರಹ ನಮ್ಮಲ್ಲಿನ ’ಈಗೋ’ವನ್ನು ಕಡಿಮೆ ಮಾಡುತ್ತದೆ’, ಒಮ್ಮೆ ನನ್ನ ಬರಹಕ್ಕೆ ಪ್ರತಿಕ್ರಯಿಸಿದವರೊಬ್ಬರು ಹೀಗೆ ಬರೆದಿದ್ದರು. ಆದರೆ ನನಗೆ ಅನ್ನಿಸಿದ್ದು ಅಲ್ಲ, ಬರಹ ನಮ್ಮನ್ನು ಹೆಚ್ಚು ಪ್ರಾಮಾಣಿಕರನ್ನಾಗಿಸುತ್ತದೆ ಎಂದು. ಬರಹ ನಮ್ಮನ್ನು ನಮಗೆ ಮುಖಾಮುಖಿಯಾಗಿಸುತ್ತದೆ. ಪ್ರೇಮದಲ್ಲಿನ ಉತ್ಕಟತೆ ಮತ್ತು ಪ್ರಾಮಾಣಿಕತೆ ಬರಹದಲ್ಲೂ ಬಂದಾಗ ಬರಹ ಜೀವಂತವಾಗುತ್ತದೆ. ಆ ಪ್ರಾಮಾಣಿಕತೆ ಕಳೆದುಹೋದ ದಿನ ಬರಹ ಕಾಗದದ ಹೂವಾಗಿ ಬಿಡುತ್ತದೆ. ಪ್ರಾಮಾಣಿಕತೆಯೊಂದೇ ಪದಗಳನ್ನು ಬರಹವಾಗಿಸುವುದಿಲ್ಲ, ನಿಜ. ಆದರೆ ಪ್ರಾಮಾಣಿಕತೆಯಿಲ್ಲದೆ ಬರಹ ಕೇವಲ ಪದಗಳಾಗಿಬಿಡುತ್ತದೆ. ಹಾಗಿರುವಾಗ ’ಆನು ಒಲಿದಂತೆ ಹಾಡುವೆ…’ ಎನ್ನುವುದು ಆತ್ಯಂತಿಕ ಸತ್ಯ ಎನ್ನುವುದು ನನ್ನ ಭಾವನೆ ಆಗಿತ್ತು. ಆದರೆ ಅದು ಸತ್ಯದ ಒಂದು ಭಾಗ ಎನ್ನುವುದು ನಂತರ ಅನುಭವಕ್ಕೆ ಬಂದ ಸತ್ಯ.
ಆನು ಒಲಿದಂತೆ ಹಾಡುವೆ ಎನ್ನುವಂತೆಯೇ ನಮ್ಮಲ್ಲಿ ಬಹಳಷ್ಟು ಜನರ ಬರಹಗಳು ಪ್ರಾರಂಭವಾಗಿದ್ದು.  ಅದು ಸಹಜ ಪ್ರಕ್ರಿಯೆಯೂ ಹೌದು, ಮೊದಲ ಹೆಜ್ಜೆಯೂ ಹೌದು. ಹುಟ್ಟಿದ ಕೂಸು ತನ್ನ ಕೈಬೆರಳು, ಕಾಲ್ಬೆರಳು, ನೆರಳು ನೋಡಿ ನೋಡಿ ಸಂಭ್ರಮಗೊಳ್ಳುವಂತೆ, ಪರಿಚಯ ಮಾಡಿಕೊಳ್ಳುವಂತೆ, ತನ್ನದಾಗಿಸಿಕೊಳ್ಳುವಂತೆ. ಬರಹ ನಮ್ಮೊಂದಿಗಿನ ನಮ್ಮ ಸಂವಾದ. ಆದರೆ ಅದು ಕೇವಲ ಅಷ್ಟೇ ಆಗಿದ್ದಾಗ ಅದು ಕೇವಲ ನಮ್ಮ ಹಾಡಾಗಿ ಮಾತ್ರ ಉಳಿದುಬಿಡುತ್ತದೆ. ಮಗು ಬೆಳೆದಂತೆ ಅಮ್ಮನನ್ನು, ಅಪ್ಪನನ್ನು, ಮನೆಯವರನ್ನು, ಓಣಿಯವರನ್ನು, ಊರಿನವರನ್ನು ತನ್ನ ಜಗತ್ತಿನ ಭಾಗವಾಗಿ ಮಾಡಿಕೊಳ್ಳುತ್ತಾ ಹೋದಹಾಗೆ, ಬರಹ ಆಮೇಲೆ ಸಮಷ್ಟಿಯ ಹಾಡಾಗಬೇಕು.
ನಾವು ಬರೆಯುವಾಗ, ಬದುಕುವಾಗ ಅಂತಹ ಇನ್ನೊಂದು ಎಚ್ಚರ ನಮ್ಮನ್ನು ಕಾಯಬೇಕು. ಮೊನ್ನೆ ಒಂದು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದೆ. ಅಲ್ಲಿ ನನ್ನ ಸತ್ಯಕ್ಕೆ ಇನ್ನೊಂದು ಸಾಲು ಸೇರ್ಪಡೆಯಾಗಿತ್ತು. ’ಆನು ಒಲಿದಂತೆ ಹಾಡುವೆ……. ನಿನಗೆ ಕೇಡಿಲ್ಲದಂತೆ…’. ನಿಜ ನಾವು ಹಾಡುವ ಹಾಡು ಇನ್ನೊಬ್ಬರಿಗೆ ಕೇಡನ್ನುಂಟುಮಾಡಬಾರದು. ನನ್ನ ಹಾಡು ಇನ್ನೊಬ್ಬರನ್ನು ನೋಯಿಸಬಾರದು, ಅವಹೇಳನ ಮಾಡಬಾರದು. ಬದುಕು ಸಹ ಹಾಗೆಯೇ ಅಲ್ಲವೆ? ನಮ್ಮ ಬದುಕನ್ನು ಕಟ್ಟಿಕೊಳ್ಳುವ, ಬದುಕುವ ಹಕ್ಕು ನಮಗಿರುತ್ತದೆ. ನಮ್ಮ ಬದುಕು ನಮ್ಮದೇ ನಿಯಮಗಳಿಗನುಗುಣವಾಗಿದ್ದರೆ ಬದುಕು ಬದುಕಲು ಯೋಗ್ಯವಾಗಿರುತ್ತದೆ. ಆದರೆ ಹಾಗೆ ಬದುಕುವಾಗಲೂ ನಮಗೆ ಒಂದು ಎಚ್ಚರ ಇರಬೇಕು, ಹಾಗೆ ಕಟ್ಟಿಕೊಂಡ ಬದುಕು ಇನ್ನೊಬ್ಬರಿಗೆ ಕೇಡುಂಟುಮಾಡಬಾರದು. ಆ ಅಧಿಕಾರ ನಮಗಿರುವುದಿಲ್ಲ. ’ನಿನಗೆ ಕೇಡಿಲ್ಲದಂತೆ…’ ಈ ಸಾಲು ಬರಹಕ್ಕೂ, ಬದುಕಿಗೂ ಅನ್ವಯವಾಗುತ್ತದೆ.
ಬರಹ ಒಂದು ಲೋಲುಪತೆಯ ಸಂಭ್ರಮವಲ್ಲ, ವಾಸ್ತವಿಕತೆಯನ್ನು ಮರೆಯಿಸುವ, ಮರೆಯಾಗಿಸುವ ಮತ್ತಲ್ಲ. ಅದೊಂದು ಎಚ್ಚರ. ಒಂದು ಹೊಣೆ. ಅಂದು ಈ ಸಾಲು ಕೇಳಿದ ಮೇಲೆ ಆ ಸಾಲು ಮತ್ತಷ್ಟು ಕಂಪನಗಳನ್ನು ಮೂಡಿಸುತ್ತಿತ್ತು. ಮನಸ್ಸನ್ನು ಮತ್ತಷ್ಟು ಮಥಿಸುತ್ತಿತ್ತು. ಇದರ ಜೊತೆಯಲ್ಲಿ ಇದಕ್ಕೂ ಮಿಕ್ಕಿ ಇನ್ನೇನೋ ಇದೆ ಅನ್ನಿಸುತ್ತಿತ್ತು. ’ಆನು ಒಲಿದಂತೆ ಹಾಡುವೆ, ನಿನಗೆ ಕೇಡಿಲ್ಲದಂತೆ…’, ಇದರ ಜೊತೆಗೆ ಆ ಹಾಡಿನಲ್ಲಿ ನನ್ನ ರಾಗದ ಜೊತೆಜೊತೆಗೆ ಇನ್ನೊಬ್ಬರ ಭಾವವೂ ಜೊತೆಯಾದರೆ ಆಗ ಅದು ನನ್ನೊಬ್ಬಳ ಹಾಡಾಗಿ ಉಳಿಯದೆ, ಇನ್ನೊಬ್ಬರ ಹಾಡೂ ಸಹ ಆಗುತ್ತದೆ ಅನ್ನಿಸಿತು. ಹಾಗೆ ನಮ್ಮ ಹಾಡಿನಲ್ಲಿ ಸ್ವರಗಳು ಸೇರುತ್ತಾ ಹೋದ ಹಾಗೆ ಅದು ಅವರೆಲ್ಲರ ಹಾಡಾಗುತ್ತಾ ಹೋಗುತ್ತದೆ. ನಿನ್ನೆ  ಒಂದು ಸಂದರ್ಶನದಲ್ಲಿ ನಿರ್ದೇಶಕ ಬಿ ಎಂ ಗಿರಿರಾಜ್ ಅವರು ’ಕಲೆ ಎನ್ನುವುದು ಧ್ವನಿ ಇಲ್ಲದವರ ಪಾಲಿನ ಧ್ವನಿಯಾಗಬೇಕು’ ಎಂದಿದ್ದೂ ಬಹುಶಃ ಇದೇ ಅರ್ಥದಲ್ಲಿರಬೇಕು.
ಹಾಗಾದರೆ ಕಲೆಗೆ ಮಾತ್ರವೇ ಯಾಕೆ ಆ ಎಚ್ಚರ ಇರಬೇಕು ಎನ್ನುವ ಪ್ರಶ್ನೆ ಸಹ ಮೂಡುತ್ತದೆ. ಕಲೆಯ ಕೆಲಸ ಬೋಧಿಸುವುದೇ ಅಥವಾ ಕನ್ನಡಿಯಾಗುವುದೇ ಎಂದರೆ, ಉತ್ತರ ಕಲೆಯ ಕೆಲಸ ಬೋಧಿಸುವುದು ಖಂಡಿತಾ ಅಲ್ಲ. ಆದರೆ ಕಲೆ ಹಾಗೆ ಒಂದು ಎಚ್ಚರವನ್ನು, ಒಂದು ನೋಟವನ್ನು ನಮಗೆ ಕೊಡುತ್ತಾ ಹೋದಾಗಲೇ ಅದು ಸಾರ್ಥಕವಾಗುತ್ತಾ ಹೋಗುತ್ತದೆ. ಆ ಕಲೆ ಬರಹವಾಗಿರಬಹುದು, ನಾಟಕವಾಗಿರಬಹುದು, ಚಲನ ಚಿತ್ರವಾಗಿರಬಹುದು…
ಕಲೆ ಆ ಎಚ್ಚರ ಮೂಡಿಸಬೇಕು ಎನ್ನುವುದಾದರೆ, ವಿದ್ಯಾಭ್ಯಾಸ ಮತ್ತೇನು ಮಾಡುತ್ತದೆ? ಆ ಕೆಲಸ ನಮ್ಮ ವಿದ್ಯಾಭ್ಯಾಸದ್ದಲ್ಲವಾ? ಬ್ರಿಟಿಶರ ಕಾಲದಲ್ಲಿ ವಿದ್ಯಾಭಾಸ ಎಲ್ಲರ ಮನೆ ಅಂಗಳವನ್ನೂ ದಾಟಿ, ಬಾಗಿಲು ಬಡಿಯಿತು. ಎಲ್ಲರ ಪಾಲಿಗೂ ಅದು ಲಭ್ಯ ಎನ್ನುವಂತಾಯಿತು. ಆಗ ಬ್ರಿಟಿಶರಿಗೆ ಆಡಳಿತಕ್ಕೆ ಬೇಕಾಗಿದ್ದ ಖಾರಕೂನರ ಅಗತ್ಯ ಪೂರೈಸಲೂ ಅದು ಬೇಕಾಗಿತ್ತು. ಇಂಡಿಯನ್ ಸಿವಿಲ್ ಸರ್ವೀಸ್ ಹಾಗಾಗೇ ಪ್ರಾರಂಭವಾದ ವ್ಯವಸ್ಥೆ. ಸ್ವಾತಂತ್ರ್ಯದ ನಂತರದ ಸಮಯದಲ್ಲಿ ಭಾರತ ಸೋಷಲಿಸಂ ಜೊತೆಗೆ ನಡಿಸಿದ ಹಲವಾರು ಪ್ರಯೋಗಗಳ ನಂತರ ಜಾಗತೀಕರಣ ಭಾರತವನ್ನು ಪ್ರವೇಶಿಸಿತು. ಅದು ಬಂದಾಗ ಅದು ತರುವ ಅಪಾಯಗಳಿಗಿಂತ ಆಕರ್ಷಕವಾಗಿ ಕಂಡದ್ದು ಅದು ತರಬಹುದಾದ ಆರ್ಥಿಕ ಸಾಧ್ಯತೆಗಳು. ಆದರೆ ಅದರ ಜೊತೆಜೊತೆಯಲ್ಲಿಯೇ ಬಂದ ಇನ್ನೊಂದು ಅಪಾಯವನ್ನು ನಾವು ಆಗ ಗ್ರಹಿಸಲಿಲ್ಲ. ಬ್ರಿಟಿಶರು ಭಾರತಕ್ಕೆ ಬಂದಾಗ ಬಂದದ್ದು ಒಂದು ಈಸ್ಟ್ ಇಂಡಿಯಾ ಕಂಪನಿ, ಆದರೆ ಈಗ ಹಲವಾರು ಈಸ್ಟ್ ಇಂಡಿಯಾ ಕಂಪನಿಯ ರೂಪಗಳು ಒಳಗೆ ಬಂದಾಗಿತ್ತು, ಅವರು ಭಾರತವನ್ನು ಹೆಬ್ಬಾಗಿಲ ಮೂಲಕವೇ ಪ್ರವೇಶಿಸಿದ್ದರು. ಇಡೀ ವ್ಯವಸ್ಥೆಯೇ ಅವರಿಗೆ ಅಗತ್ಯವಾದ ಸಲಕರಣೆಗಳನ್ನು ಒದಗಿಸಲು ಸಜ್ಜಾಗಿ ನಿಂತುಬಿಟ್ಟಿತು.
ಬ್ರಿಟಿಶರ ಕಾಲದ ವಿದ್ಯಾಭ್ಯಾಸ ಹೇಗೆ ಆಡಳಿತಕ್ಕೆ ಕ್ಲರ್ಕ್ ಗಳನ್ನು ತಯಾರು ಮಾಡಲು ನಿಂತಿತ್ತೋ ಹಾಗೆ ಜಾಗತೀಕರಣದ ನಂತರದ ವಿದ್ಯಾಭ್ಯಾಸ ವ್ಯವಸ್ಥೆ ಈ ಹೊಸ ಈಸ್ಟ್ ಇಂಡಿಯಾ ಕಂಪನಿಗಳ ಸಮೂಹಕ್ಕೆ ಕೆಲಸಗಾರರನ್ನು ಒದಗಿಸಲು ಸಜ್ಜಾಗಿ ನಿಂತುಬಿಟ್ಟಿತು. ಯಾವುದೇ ಮನುಷ್ಯನ ಮಿದುಳು ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ, ಒಂದು ಬುದ್ಧಿಮತ್ತೆ ಮತ್ತೊಂದು ಭಾವಕೋಶ. ಹಾಗಾಗೇ ಐಕ್ಯೂ ಅಂದರೆ ಇಂಟಲಿಜೆಂಟ್ ಕೋಶಂಟ್ ಎಷ್ಟು ಮುಖ್ಯವೋ ಈಕ್ಯೂ ಅಂದರೆ ಇಮೋಶನಲ್ ಕೋಶೆಂಟ್ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಹೊಸ ವಿದ್ಯಾಭ್ಯಾಸ ವ್ಯವಸ್ಥೆ ಮಕ್ಕಳ ಐಕ್ಯೂವನ್ನು ಉದ್ಧೀಪಿಸಲು ಸರ್ವ ಪ್ರಯತ್ನಗಳನ್ನೂ ಮಾಡುತ್ತಾ, ಅವರ ಇಕ್ಯೂವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಮಕ್ಕಳು ಅಂಕಗಳನ್ನು ಉತ್ಪಾದಿಸುವ ರೋಬೋಟ್ ಗಳಾಗಿ ಕಾಣುತ್ತಿರುವ ಈ ಸಮಯದಲ್ಲಿ ಇಡೀ ವ್ಯವಸ್ಥೆಯ ಸಮತೋಲನವನ್ನು ಕಾಪಾಡಲು, ಮಕ್ಕಳ ಭಾವಜಗತ್ತನ್ನು ಶ್ರೀಮಂತಗೊಳಿಸಲು ಸಾಹಿತ್ಯದ ಜವಾಬ್ದಾರಿ ಈ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿಯೇ ಅವುಗಳ ಕಡೆಗಿನ ನಮ್ಮ ನಿರೀಕ್ಷೆಯೂ.
ಹಾಗೆ ಹಲವರ ಮೌನಕ್ಕೆ ದನಿಯಾದ ಕಲೆ ನಮ್ಮ ಎದುರಾದಾಗ ಅದು ನಮ್ಮದೇ ಹಾಡಾಗಿಬಿಡುತ್ತದೆ. ಹೇಗೆ ’ರೊಟ್ಟಿ ವಿಸ್ತಾರದಲ್ಲಿ ಭೂಮಿಗಿಂತ ಮಿಗಿಲು, ಇದರ ವಿಸ್ತಾರ ಮುಗಿಲಿಗಿಂತ ದಿಗಿಲು’ ಎನ್ನುವ ಎರಡು ಸಾಲುಗಳು ಬದುಕಿನ ವಾಸ್ತವವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆಯೋ ಹಾಗೆ ಅದು ನಮ್ಮನ್ನು ಹಲವಾರು ದನಿಗಳಿಗೆ ಕಿವಿಯಾಗಿಸುತ್ತದೆ. ಇಲ್ಲಿ ನನಗೆ ಕೆ ಎಸ್ ನರಸಿಂಹಸ್ವಾಮಿಗಳ ಒಂದು ಕವಿತೆ ನೆನಪಾಗುತ್ತಿದೆ. ಅದು ಒಂದು ಕವಿಯ ಹಾಡಿನ ಬಗೆಗಿನ ಕವಿತೆ.
’ಮರೆತ ಹಾಡು’ ಇದು ಕವಿತೆಯ ಹೆಸರು.
’ಎಂದೊ ನನ್ನ ಕಿಂದರಿಯಲಿ
ತಾವು ಕೇಳಿದೊಂದು ಹಾಡು
ನನ್ನದೆಂದು ತಿಳಿದ ಮಂದಿ
ನನ್ನ ಕರೆದರು…’.
ಆ ಹಾಡು ಹಾಡಲೆಂದು ಕವಿ ಕಿಂದರಿಯನ್ನು ಹಿಡಿದುಕೊಂಡು ಹೊರಡುತ್ತಾನೆ. ಸಂಜೆಯಾಗುತ್ತದೆ, ತೋಪಿನಲ್ಲಿ ಬುತ್ತಿಯುಂಡ ಮೇಲೆ ಜನರೆಲ್ಲಾ ಕವಿಯ ಸುತ್ತ ಕುಳಿತು ಆ ಹಾಡನ್ನು ಹಾಡಲು ಕೇಳುತ್ತಾರೆ. ಕಿಂದರಿಯನ್ನು ಶೃತಿ ಮಾಡಿಕೊಂಡ ಕವಿ ಹಾಡು ಹಾಡುತ್ತಾನೆ. ಕೇಳಿದ ಜನ ತಲೆದೂಗುತ್ತಾರಾದರೂ, ತಾವು ಕೇಳಿದ್ದು ಈ ಹಾಡನ್ನಲ್ಲ, ಅದನ್ನು ನುಡಿಸು ಎಂದು ಕೇಳುತ್ತಾರೆ. ಕವಿ ಮತ್ತೊಂದು ಹಾಡನ್ನು ಹಾಡುತ್ತಾನೆ, ಜನ ಇದಲ್ಲ ಅನ್ನುತ್ತಾರೆ, ಕವಿ ಇನ್ನೊಂದು ಹಾಡನ್ನು ಹಾಡನ್ನು ಹಾಡುತ್ತಾನೆ, ಉಹೂ, ಜನ ಕೇಳುತ್ತಿರುವುದು ಅದನ್ನೂ ಅಲ್ಲ. ಕವಿ ಅಧೀರನಾಗುತ್ತಾ ಹೋಗುತ್ತಾನೆ. ಅವಮಾನವಾದರೂ ಸರಿ ಎಂದು, ಆ ಹಾಡು ಯಾವುದು ಎಂದು ಕೇಳುತ್ತಾನೆ. ’ಅರೆ ನಿನ್ನ ಹಾಡನ್ನು ನೀನೆ ಮರೆತೆಯಾ? ಕಿಂದರಿಯಲ್ಲಿ ಹುಡುಕು ಸಿಗಬಹುದು’ ಎಂದು ಒಬ್ಬರು ಹಾಸ್ಯ ಮಾಡುತ್ತಾರೆ. ಹೀಗೆ ಕವಿ ಕಳೆದುಹೋದ ತನ್ನದೇ ಹಾಡಿನ ಹುಡುಕಾಟದಲ್ಲಿರುವಾಗ ರಾತ್ರಿ ಜಾರುತ್ತಾ ಹೋಗುತ್ತದೆ.
ಇದ್ದಕ್ಕಿದ್ದಂತೆ ಕವಿಗೆ ಜ್ಞಾನೋದಯವಾಗುತ್ತದೆ. ಅದು ಈಗ ತನ್ನ ಹಾಡಾಗಿ ಉಳಿದಿಲ್ಲ ಎನ್ನುವುದು ಅರಿವಾಗುತ್ತದೆ.
’ನಾನು ಮರೆತ ಹಾಡು ಇವರ
ಹೃದಯದೊಳಗೆ ಸೇರಿಹೋದ
ಸುದ್ದಿ ನನ್ನ ಕಿವಿಗೆ ಬಿದ್ದು ಬೆಳಕು ಹರಿಯಿತು’.
ಹೌದು ಆ ಹಾಡು ಈಗ ಕವಿಯ ಹಾಡಾಗಿ ಉಳಿದಿಲ್ಲ, ಅದು ಎಲ್ಲರ ಹಾಡಾಗಿ ಹೋಗಿದೆ. ಎಷ್ಟು ಜನ ಇದ್ದರೋ ಅಷ್ಟು ರೂಪಗಳನ್ನು ತಾಳಿದೆ. ಕವಿ ’ಆನು ಒಲಿದಂತೆ / ನಿನಗೆ ಕೇಡಿಲ್ಲದಂತೆ’ ಹಾಡಿದ ಹಾಡು ಜಗದ ಹಾಡಾಗುವುದು ಹೀಗೆ.

***

ಮಾತೆಲ್ಲಾ ಮುಗಿದ ಮೇಲೆ
ಅಂಕಣಕ್ಕೆಂದು ಮೇಲಿನ ಬರಹವನ್ನು ನಿನ್ನೆ ಬರೆದಾಗ ಸಂಜೆ ಅಂತಹದ್ದೇ ಒಂದು ಹಾಡನ್ನು ಭೇಟಿಯಾಗುತ್ತೇನೆ ಎನ್ನುವ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಅಸಲಿಗೆ ಅಲ್ಲಿಗೆ ಯಾವ ನಿರೀಕ್ಷೆಯನ್ನಿಟ್ಟುಕೊಂಡೂ ನಾನು ಹೋಗಿರಲಿಲ್ಲ. ಕೆ ಎಚ್ ಕಲಾಸೌಧದಲ್ಲಿ ನಾಟಕ ಬೆಂಗಳೂರು ಹಬ್ಬದ ಕೊನೆಯ ದಿನವಾದ ನಿನ್ನೆ ಕೆ ಎಸ್ ಡಿ ಎಲ್ ಚಂದ್ರು ಅವರ ರೂಪಾಂತರ ತಂಡದಿಂದ ಜಂಬಣ್ಣ ಅಮರಚಿಂತ ಅವರು ರಚಿಸಿ, ಸಿದ್ದರಾಮ ಕೊಪ್ಪರ್ ಅವರು ನಿರ್ದೇಶಿಸಿದ ’ವರಾಹ ಪುರಾಣ’ ನಾಟಕ ಇತ್ತು. ನಾಟಕದ ಬಗ್ಗೆ ನನಗೆ ಹೋಗುವಾಗ ಗೊತ್ತಿದ್ದದ್ದು ಒಂದೇ, ನಾಟಕದಲ್ಲಿ ರಾಮಚಂದ್ರ ಹಡಪದ್ ಹಾಡುಗಳಿವೆ ಎಂದು. ಹಡಪದ್ ಅವರ ದನಿಯಲ್ಲಿ ದುಃಖದ ಛಾಯೆ ಇರುವ ಹಾಡುಗಳೂ ಸಹಾ ವಿಷಾಧ ಪರ್ವವನ್ನೇ ಹೊತ್ತು ತರುತ್ತದೆ. ಆ ಹಾಡುಗಳನ್ನು ಕೇಳಲೆಂದು ಹೋಗಿದ್ದವಳಿಗೆ ಎದುರಾದದ್ದು ಒಂದು ಎಂದೂ ಮರೆಯಲಾಗದ ಹಾಡು.
ಹಂದಿ ಸಾಕುವ ಕೊರಮರ ತಾಂಡ್ಯದ ಕಥೆ ಅದು. ಊರ ಜನಗಳ ಸಂಭ್ರಮಕ್ಕೆ ತಲೆಯ ಮೇಲೆ ಬಿಜಲಿಯ ದೀಪ ಹೊರುವ, ಊರಾಚೆ ಬದುಕುವ ಅವರ ಲೋಕದಲ್ಲಿ ತೀರದ ಕತ್ತಲು. ಅಲ್ಲಿನ ಲೋಕ ನನಗೆ ಅಪರಿಚಿತ, ಆ ಭಾಷೆ ನನಗೆ ಹೊಸದು. ಅಲ್ಲಿನ ರೀತಿ ನೀತಿಗಳು ನಾನು ಕಲ್ಪಿಸಲೂ ಆಗದಷ್ಟು ಬರ್ಭರವಾದವುಗಳು. ಹಂದಿ ಸಾಕುವ ತಾಂಡ್ಯದಲ್ಲಿ ಪಶುಗಳಂತೆ ಬದುಕುತ್ತಿರುವ ಜನ, ಪಶುಗಳಿಗಿಂತ ಕಡೆಯಾದ ಬದುಕನ್ನು ಬದುಕುತ್ತಿರುವ ಅಲ್ಲಿನ ಹೆಂಗಸರು. ಊಳಿಗಮಾನ್ಯ ಪದ್ಧತಿ, ರಾಜಕೀಯ, ಧರ್ಮ, ಅಧಿಕಾರ ಎಲ್ಲವೂ ಅವರನ್ನು ಶೋಷಿಸುತ್ತಿರುತ್ತದೆ. ಅವರ ಆ ಎಲ್ಲಾ ಸಂಕಟಗಳನ್ನೂ ಅನುಭವಿಸಿದ ನಂತರವೂ ಅದಕ್ಕೂ ಮಿಗಿಲಾದ ಸಂಕಟ ಆ ಹೆಂಗಸರಿಗೆ.
ಮನೆಯಲ್ಲಿ ಸಾಕಿದ ಹಂದಿಗಳಿಗೂ ಆ ಹೆಣ್ಣುಗಳಿಗೂ ವ್ಯತ್ಯಾಸವೇ ಇಲ್ಲ. ಅಲ್ಲಿ ಎಲ್ಲರೂ ಶೋಷಿತರೇ, ಆದರೆ ಆ ಶೋಷಿತರೂ ಸಹ ಅಲ್ಲಿನ ಹೆಂಗಸರ ಶೋಷಕರಾಗಿರುವುದು ವ್ಯವಸ್ಥೆಯ ಕ್ರೌರ್ಯ ಮತ್ತು ವಿಪರ್ಯಾಸ. ಅಲ್ಲಿ ಸಿಟ್ಟು ಬಂದರೆ ಗಂಡ ಮುಲಾಜಿಲ್ಲದೆ ತನ್ನ ಹಂದಿಯನ್ನು ಮಾರಿದ ಹಾಗೆ ಹೆಂಡತಿಯನ್ನು ಮಾರಿಬಿಡಬಹುದು. ಕೊಳ್ಳುವ ಗಿರಾಕಿ ಥೇಟ್ ಸಾಕುಪ್ರಾಣಿಯನ್ನು ಕೊಳ್ಳುವ ಮೊದಲು ಮಾಡಿದಂತೆಯೇ ಕೊಳ್ಳುವ ಸರಕನ್ನು ಮುಟ್ಟಿ, ಪರೀಕ್ಷಿಸಿ, ಚೌಕಾಸಿ ಮಾಡಿ ಬೆಲೆ ಕಟ್ಟುತ್ತಾನೆ. ಅಲ್ಲಿ ಹೆಣ್ಣಿಗೆ ಆಯ್ಕೆಯ ಪ್ರಶ್ನೆಯೇ ಇಲ್ಲ. ಗಂಡ ಮಾರಿದರೆ ಅವಳು ಒಪ್ಪಿಕೊಳ್ಳಬೇಕು, ಕೊಂಡವನ ಹಿಂದೆ ನಡೆಯಬೇಕು. ಯಾಕೋ ನಾಟಕ ನೋಡುತ್ತಾ ನೋಡುತ್ತಾ ತಲ್ಲಣಿಸಿ ಹೋದೆ. ಇದು ಸಮಾಜದ ಅಂಚಿಗೆ ನೂಕಲ್ಪಟ್ಟವರ ಕಥೆ, ದನಿ ಇಲ್ಲದವರ ಮೂಕ ಹಾಡಿಗೆ ದನಿಯಾದ ಕಥೆ.
ನಾಟಕದಲ್ಲಿ ಪಾತ್ರಧಾರಿಗಳು ನಟಿಸಿರಲಿಲ್ಲ, ತಾವೇ ಪಾತ್ರಗಳಾಗಿದ್ದರು. ಅವರ ಮಾತು, ನಿಲುವು, ನಿಟ್ಟುಸಿರು, ಮೌನ ಎಲ್ಲವೂ ತೆರೆಗಳಂತೆ ನಮ್ಮನ್ನು ಅಪ್ಪಳಿಸುತ್ತಿತ್ತು. ಪಾತ್ರಧಾರಿಗಳ ಜೊತೆಯಲ್ಲಿಯೇ ಪಾತ್ರವಾಗಿದ್ದು ಅಲ್ಲಿನ ಸಂಗೀತ. ಹಡಪದ್ ಅವರ ದನಿಯಲ್ಲಿ ಹಾಡುಗಳು ನಾಟಕಕ್ಕೆ ಪೂರಕವಾಗಿ, ನಮ್ಮಲ್ಲಿ ಅನುರಣನಗೊಳ್ಳುತ್ತಿದ್ದವು. ನಾವು ನಾಟಕದಲ್ಲಿ, ನಾಟಕ ನಮ್ಮಲ್ಲಿ ಹನಿಹನಿಯಾಗಿ ಇಳಿಯುತ್ತಿತ್ತು. ನಾಟಕ ಮುಗಿದಾಗ ನೋಡುವವರ ಮನಸ್ಸಿನಲ್ಲಿ ಹೇಳಲಾಗದ ಸಂಕಟ.
ನನ್ನದಲ್ಲದ ಆ ಹಾಡು, ನನ್ನ ಭಾವಕೋಶದ ಭಾಗವಾದ ಹಾಡಾಗಿದ್ದು ಹೀಗೆ.
ನಿಜ, ’ಆನು ಒಲಿದಂತೆ ಹಾಡುವ ಹಾಡು’ ಜೊತೆಗೆ ದನಿ ಇಲ್ಲದವರ ಪಾಲಿನ ದನಿಯೂ ಆದಾಗ ಅದು ಎಲ್ಲರ ಹಾಡಾಗುತ್ತದೆ. ಬರೆಯುವಾಗ ಆ ಒಂದು ಎಚ್ಚರ ನಮ್ಮನ್ನು ಕಾಯುತ್ತಿರಲಿ…

‍ಲೇಖಕರು G

February 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Hema Sadanand Amin

    mechchide. sandyaravare, odisutta hogthade, arivu mudisutta hogthade.

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ತುಂಬಾ ಚೆನ್ನಾಗಿದೆ; ಲೇಖನ.

    ಪ್ರತಿಕ್ರಿಯೆ
  3. ramachandra G Hadapad

    ಧನ್ಯವಾದಗಳು ಸಂಧ್ಯಾ ಮ್ಯಾಮ.

    ಪ್ರತಿಕ್ರಿಯೆ
  4. samyuktha

    ನಿಮ್ಮ ಪ್ರತಿಬಾರಿಯ ಲೇಖನಕ್ಕಿಂತ ಭಿನ್ನವಾಗಿ, ನಿಮ್ಮ ಬರಹದ ಹೊಸ ಶೈಲಿಯನ್ನು ತೋರುತ್ತಿದೆ ಈ ಬರಹ. ಬಹಳ ಚೆನ್ನಾಗಿದೆ.

    ಪ್ರತಿಕ್ರಿಯೆ
  5. ಡಾ.ಶಿವಾನಂದ ಕುಬಸದ

    ತುಂಬ ಇಷ್ಟವಾದ ಲೇಖನ.
    ಮನ ತಟ್ಟಿತು.

    ಪ್ರತಿಕ್ರಿಯೆ
  6. ಲಕ್ಷ್ಮೀಕಾಂತ ಇಟ್ನಾಳ

    barahada Ala, vistaragalu oohateetha. mana tattuva vicharagalu. hats off.

    ಪ್ರತಿಕ್ರಿಯೆ
  7. Anil Talikoti

    ಆನುವಿನಿಂದ ಆರಂಭಿಸಿ ಸಮಷ್ಟಿಯವರೆಗೆ ವಿಸ್ತರಿಸಿದ ನಿಮ್ಮ ಹೊಣೆಯ ಹಾಡು ಅರ್ಥಪೂರ್ಣವಾಗಿದೆ.

    ಪ್ರತಿಕ್ರಿಯೆ
  8. ಹನುಮಂತ ಹಾಳಿಗೇರಿ

    ಈ ಸಲದ ಬರಹ ತುಂಬಾ ಭಿನ್ನ ಎನಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: