“ಜೀನ್ಸ್ ತೊಟ್ಟ ದೇವರು” ಮೂಡಿಸಿದ ಹೆಜ್ಜೆ ಗುರುತುಗಳು
ಸಂದೀಪ್ ಈಶಾನ್ಯ
ಈ ಶತಮಾನ ಅತಿ ವೇಗದಲ್ಲಿದೆ. ಎಲ್ಲರೂ ಪಕ್ಕದಲ್ಲಿರುವವರನ್ನು ತಮ್ಮ ಮೊಣಕೈನಿಂದ ತಿವಿದು ಕೆಡುವುತ್ತ ಸುಮ್ಮನೆ ಎಂದರೆ ಸುಮ್ಮನೇ ಓಡುತ್ತಿದ್ದೇವೆ. ಹೀಗೆ ಜೀನು ತೆಗೆದ ಕುದುರೆಯಂತೆ ಓಡುತ್ತಿರುವವರಲ್ಲಿ ಎರಡು ವರ್ಗಗಳಾಗಿ ಗುರುತಿಸಬಹುದು. ಒಂದು ಯೌವನದ ಹಾದಿಯಲ್ಲಿ ಕ್ರಮಿಸುತ್ತಿರುವವರು, ಮತ್ತೊಬ್ಬರು ವೃದ್ಧಾಪ್ಯದಲ್ಲೂ ತಮಗಾದಷ್ಟು ವೇಗವಾಗಿ ಅವರೊಂದಿಗೆ ಓಡುತ್ತಿರುವವರು.
ಆದರೆ ಈ ಇಬ್ಬರನ್ನೂ ತಡೆ ಹಿಡಿದು ಅವರ ಗುರಿಯ ವಿಚಾರ ಮಾಡಿದರೆ, ಇಬ್ಬರೂ ಜೋರಾಗಿ ಏದುಸಿರು ಬಿಡುತ್ತ ಹೇಳುವ ಅವರ ಉತ್ತರ ಹೀಗಿರುತ್ತದೆ “ಗೊತ್ತಿಲ್ಲ”.
ಈಗ ಎಲ್ಲವೂ ಶ್ರಮ ರಹಿತವಾಗುತ್ತಿದೆ. ಇದಕ್ಕೆ ಪ್ರಸ್ತುತ ಜನರ ಮೌಖಿಕ ಪದಕೋಶದಲ್ಲಿ ಬದಲಾವಣೆ, ಆಧುನಿಕ ಕ್ರಾಂತಿ, ಬೆಳವಣಿಗೆ ಎನ್ನುವಂತಹ ಅಪಾರ್ಥಕ್ಕೆ ಒಳಗಾದ ಸ್ವಅರ್ಥಗಳೂ ಇವೆ. ಒರಳು ಕಲ್ಲು, ಒನಕೆ, ಬೀಸುವ, ಕುಟ್ಟುವ ಕಲ್ಲುಗಳನ್ನು ಮಿಕ್ಸರ್, ಗ್ರೈಂಡರ್ ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳು ಸಮಾನವಾಗಿ ದಶಕಗಳ ಹಿಂದೆಯೆ ಹಂಚಿಕೊಂಡಿವೆ.
ದೋಸೆ, ಚಪಾತಿ ತಿನ್ನುವುದಕ್ಕದಾರೂ ಬಳಸುತ್ತಿದ್ದ ಕೈ ಬೆರಳುಗಳೀಗಾ ಚಮಚ, ಫೋರ್ಕ್ ಬೇಕೆನ್ನುತ್ತಿವೆ. ಇನ್ನು ನಮಗೆ ಹಲ್ಲುಜ್ಜುವುದಕ್ಕೂ ಸಮಯವಿಲ್ಲ. ಟೂತ್ ಬ್ರಶ್, ಟೂತ್ ಪೇಸ್ಟ್ ಬಳಸಬಾರದು, ಬಳಸಿದರೆ ಈ ತಲೆಮಾರಿನವರ ಎದುರು ಮೂರ್ಖರಾಗುತ್ತೇವೆ. ಈಗ ನೀಲಿ ಬಣ್ಣದ ದ್ರವಾಂಶವೊಂದಿದೆ. ನಾವು ಅದರಲ್ಲೊಮ್ಮೆ ಬಾಯಿ ಮುಕ್ಕಳಿಸಿದರೆ ಸಾಕು, ನಮ್ಮ ಹಲ್ಲುಗಳು ಫುಲ್ ಕ್ಲೀನ್ ಆಗಿಬಿಡುತ್ತವಂತೆ.ಇಷ್ಟೇ ಅಲ್ಲ ನಾವು ಟಾಯ್ಲೆಟ್ ಬಳಸಿದರು ಅದಕ್ಕೆ ನೀರು ಹಾಕುವ ಪರಿಪಾಠವೂ ಮರೆಯಾಗಿದೆ. ಯಾಕೆಂದರೆ ನೀರಾಕುವುದಕ್ಕೆ, ಟ್ಯಾಪ್ ತಿರುಗಿಸದೆ ಕೈ ತೊಳೆಯುವುದಕ್ಕೆ ಸೆನ್ಸಾರ್ ತಂತ್ರಜ್ಞಾನವಿದ್ದರೆ, ಹೀಗೆ ಒದ್ದೆಯಾದ ಕೈ ಒಣಗಿಸಲು ಹ್ಯಾಂಡ್ ಡ್ರೈಯರ್ ಇದೆ.
ಹಾಗಾದರೆ ಮನುಷ್ಯನ ಕೆಲಸ ಏನು?
ಹೀಗೆ ಪಟ್ಟಿ ಬೆಳೆಯುತ್ತ ಹೋದಂತೆ ಮನುಷ್ಯ ಆಧುನಿಕತೆಯ ಇಕ್ಕಳಕೆ ಸಿಲುಕಿ ಶ್ರಮಾಧಾರಿತ ಬದುಕಿನಿಂದ ದೂರವಾಗುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಕೆಲವೇ ವರ್ಷಗಳ ಹಿಂದೆ ಪ್ರಮುಖವಾಗಿ ಬಳಕೆಯಾಗುತ್ತಿದ್ದ ಮನೆಯ ಅದೆಷ್ಟೋ ವಸ್ತುಗಳೀಗ ಆ್ಯಂಟಿಕ್ ಪೀಸ್ ನಂತೆ ಗೋಚರವಾಗುತ್ತವೆ. ಅದೇ ಈ ತಲೆಮಾರಿನ ಪ್ರಾರಬ್ಧ. ಇಂದು ಕಲೆ, ಸಾಹಿತ್ಯ ಸಿನೆಮಾ ಎನ್ನುವಂತಹ ಕಲಾ ಪ್ರಕಾರಗಳು ಸಹ ಇದೇ ದಾಟಿಯಲ್ಲಿರುವಂತಹವು.
ನೈಜತೆಯ ಪೋಷಾಕಿನಲ್ಲಿದ್ದರೂ ಅಲ್ಲಿ ಕೃತಕತೆಯ ಠಾವು ಸಾಮಾನ್ಯವಾಗೇ ಹೆಚ್ಚಾಗಿರುತ್ತದೆ. ನನ್ನ ಓದುಗರು, ನೋಡುಗರು ಅಲ್ಲೆಲ್ಲೋ ಇದ್ದಾರೆ ನಾನು ಅವರಿಗಾಗಷ್ಟೇ ಬರೆಯುತ್ತಿದ್ದೇನೆ, ಅವರಿಗಾಗಷ್ಟೇ ಸಿನೆಮಾ ಮಾಡುತ್ತಿದ್ದೇನೆ ಎನ್ನುವ ಹುಂಬತನಗಳೇ ಹೆಚ್ಚು, ಇದೊಂದು ದಾವಂತ. ಕಾವ್ಯಗಳನ್ನು ಕವಿಯಾದವನು ಒತ್ತಾಯಿಸಬಾರದು, ಕಾವ್ಯಗಳೇ ಕವಿಯನ್ನು ಒತ್ತಾಯಿಸಬೇಕು. ಬರವಣಿಗೆ ಎನ್ನುವುದು ಸೃಷ್ಟಿ ಕ್ರಿಯೆಯಷ್ಟೇ ಸತ್ಯ.
ಹೆಣ್ಣೊಂದು ತನಗಿರಿವಿಲ್ಲದಂತೆ ಮೈ ನೆರೆದು, ಕಾಲಾಂತರಕ್ಕೆ ಗಂಡೊಂದಕ್ಕೆ ಮನಸಾರೆ ತನ್ನ ಇಡೀ ದೇಹವನ್ನು ಅರ್ಪಿಸಿಕೊಂಡು, ನರಳಿ, ಹಿಗ್ಗಿ, ಬೆವತು, ಸಾವರಿಸಿಕೊಂಡು ತನ್ನೊಳಗೆ ಹೊಸ ಜೀವ ಒಂದನ್ನು ಕಾಪಿಟ್ಟುಕೊಂಡು ಅದೊಂದು ದಿನ ಪ್ರಸವ ವೇದನೆಯಂತ ಕಠಿಣ ನೋವನ್ನುಂಡು ತಾಯಿಯ ಪಟ್ಟಕ್ಕೇರುತ್ತಾಳಲ್ಲ ಅದು ನಿಜವಾದ ಸೃಷ್ಠಿ ಕ್ರಿಯೆ. ಕವಿ ಅಥವಾ ಕಲಾವಿದನ ಸಾಹಿತ್ಯ ಸೃಷ್ಠಿಕ್ರಿಯೆ ಇದಕ್ಕಿಂತ ಭಿನ್ನವಾಗೇನೂ ಇಲ್ಲಾ.
ಕವಿಯಾದವನು ತಾನು ಕಂಡಿದ್ದು, ತನಗೆ ಕಾಡಿದ್ದು, ಕಾಣಬೇಕಾಗಿರುವುದು, ಅನುಭವಿಸಿದ್ದು ಹೀಗೆ ಹತ್ತಾರು ವಲಯಗಳಿಂದ ತನ್ನತ್ತ ತೂರಿಬಂದದ್ದರ ಉರಿಗೆ ಒಳಗಾಗಬೇಕು, ಕಾವ್ಯಗಳು ಬೀರುವ ಪ್ರಭೆಗೆ ಧೃತಿಗೆಡದೆ ಮೈಯೊಡ್ಡಿ ಮಾಗಬೇಕು.
ಆಗಷ್ಟೇ ಸಾಮಾನ್ಯ ಮನುಷ್ಯನಾದವನು ಕವಿಯಾಗಬಲ್ಲ, ಉತ್ತಮ ಕಾವ್ಯ ಎನ್ನುವುದು ಜನ್ಮ ತಳೆಯುವುದೂ ಅಲ್ಲಿಯೇ. ಹಾಗೆ ಮೈಯೊಡ್ಡಿ ಶರಣಾದವನೇ ನಿಜವಾದ ಕವಿ. ಹಾಗೆ ಮಾಗಿದ ಸಾಲುಗಳೇ ನಿಜವಾದ ಕಾವ್ಯ ಎನ್ನುವುದು ನನ್ನ ಬಲವಾದ ನಂಬಿಕೆ.
ಇಲ್ಲದಿದ್ದರೆ ಅವೆಲ್ಲಾ ಕೇವಲ ಬೌದ್ಧಿಕಜನ್ಯದ ಸರಕುಗಳಾಗಿಬಿಡುವ ಅಪಾಯವಿದೆ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಬರೆಯುತ್ತಿರುವ ಬಹುತೇಕರ ಸಮಸ್ಯೆ ಇದು. ಫೇಶ್ಬುಕ್ಕಿನ ಲೈಕ್ಸ್ ಕಾಮೆಂಟ್ಸ್ ಗಳು ಹುಸಿ ಕವಿತ್ವದ ಭಾವನೆಯನ್ನುಂಟುಮಾಡುತ್ತಿವೆ ಎನಿಸುತ್ತದೆ. ಈ ಎಲ್ಲರ ನಡುವೆಯೇ ಚೆಂದದ ಪದ್ಯಗಳನ್ನು ಬರೆಯುವವರೂ ಇದ್ದಾರೆ. ಈ ತಲೆಮಾರಿನ ಕವಿ ಏನಾದರು ಬರೆಯಲು ಸಾಧ್ಯವಾದೀತು ಎಂದರೆ ತನ್ನ ಸುತ್ತಮುತ್ತಲಿನ ಪರಿಕರಗಳನ್ನೇ ಆಯ್ದುಕೊಳ್ಳಬೇಕು, ಅಂತಹ ಬರಹಕ್ಕೇ ದೀರ್ಘವಾಗಿ ಚಲಿಸುವ ಚೈತನ್ಯ ಹೆಚ್ಚು. ಯಾಕೆಂದರೆ ಕವಿಯಾದವನು ಗತದಲ್ಲಿ ಬದುಕಿ ಬರೆಯುವವನಲ್ಲ. ಬದಲಿಗೆ ಪ್ರಸ್ತುತ ಹಾಗೂ ವಾಸ್ತವದಲ್ಲಿ ಬದುಕುಬೇಕಾದವನು. ಈ ದಿಕ್ಕಿನಲ್ಲಿ ನೋಡಿದಾಗ ಕಾವ್ಯ ಕಡಮೆಯ “ಜೀನ್ಸ್ ತೊಟ್ಟ ದೇವರು” ಕವನ ಸಂಕಲನ ಬಹುತೇಕ ಪದ್ಯಗಳು ಎಲ್ಲೂ ಬೂಟಾಟಿಕೆಯ ಅಥವಾ ಮತ್ತೊಬ್ಬರನ್ನು ನಿಬ್ಬೆರಗಾಗಿಸಲು ಹಟತೊಟ್ಟು ಕುಳಿತು ಬರೆದ ಪದ್ಯಗಳು ಎನಿಸುವುದಿಲ್ಲ. ಇಲ್ಲಿ ಕಾವ್ಯ ಬಳಸಿಕೊಂಡಿರುವ ಎಲ್ಲಾ ವಸ್ತುಗಳು ಪ್ರತಿನಿತ್ಯ ಈಕೆಯೊಂದಿಗೆ ಜೊತೆ ನಿಲ್ಲುವಂತವು, ಕೆಲವು ಪದೇ ಪದೇ ಸ್ಪರ್ಶಕ್ಕೆ ಹಾತೊರೆಯುವಂತವೂ, ಜೊತೆಗೆ ಸ್ವತಃ ಕಾವ್ಯಳೇ ಈ ಎಲ್ಲವನ್ನು ತಾನೇ ಹತ್ತಾರು ಬಾರಿ ಮುಟ್ಟಿ ಮೂಸಿ ಕಂಡಿರುವಂತಹವು, ಹೀಗಾಗಿ ಈ ಪದ್ಯಗಳನ್ನು ಪ್ರಸ್ತುತದ ಸಾಲಿನಲ್ಲಿಟ್ಟು ನಿರಾಳವಾಗಿ ನೋಡಬಹುದು.
ಕಾವ್ಯ ಕಡಮೆಯ ಕೆಲವು ಪದ್ಯಗಳಲ್ಲಿ ಅದೆಷ್ಟೋ ಗಂಭೀರ ವಿಚಾರಗಳು ಸಾಮಾನ್ಯವಾಗಿಯೂ, ಅತಿ ಸಾಮಾನ್ಯ ವಿಚಾರಗಳು ಅತ್ಯಂತ ದೈತ್ಯವಾಗಿಯೂ ಕಾಣಿಸಿಕೊಂಡಿವೆ. ಉದಾಹರಣೆಗೆ “ನನ್ನ ದೇವರು” ಎಂಬ ಪದ್ಯದಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸಬಹುದು.
“ನಾವು ಕಂಡೆ ಇರದ ಪುರದ
ತಿರುವಿನಿಂದ ಎದ್ದು ಬರುವನು
ನನ್ನ ದೇವರು”
ಎಂದು ಆರಂಭವಾಗುವ ಪದ್ಯ ದೇವರ ಬಗೆಗಿನ ಮಾಮೂಲಿ ಕಲ್ಪನೆಯನ್ನು ಮೀರಿ ಹೊಸ ಅರ್ಥಕ್ಕೆ ಹುಡುಕುತ್ತಿದೆ ಎನಿಸುತ್ತದೆ. ಇಲ್ಲಿನ ದೇವರು ಹೊಸ ಮಾದರಿಯಲ್ಲೂ ಕಾಣಿಕೊಳ್ಳುತ್ತಾನೆ. ಹೀಗೆ ಯಾವುದೋ ತಿರುವಿನಿಂದ ಬಂದ ದೇವರು ಮಗುವಿನಂತೆ ರಚ್ಚೆ ಹಿಡಿಯಬಲ್ಲ, ಸನ್ ಗ್ಲಾಸ್ ತೊಡಬಲ್ಲ, ಹೀಗೆ ಆಧುನಿಕಗೊಳ್ಳುತ್ತಲೆ ತನ್ನದೆನ್ನನ್ನೋ ಕಳಚಿಕೊಂಡು ಸಾಮಾನ್ಯನಾಗುವತ್ತ ಹೊರಳಬಲ್ಲ. ಇದೇ ಹೊತ್ತಿಗೆ ಇದು ಇನ್ನಷ್ಟು ಗಟ್ಟಿಯಾಗುವುದು ಅವನು ಜರಿದು ಬಂದ ಹಾಲು, ತುಪ್ಪ, ನೈವೇದ್ಯಗಳ ಉಲ್ಲೇಖದಿಂದ. ಇಲ್ಲಿ ಎಲ್ಲವನ್ನು ನೀಡುವ ಹಳೆಯ ದೇವರೇ ಹೊಸ ಪೋಷಾಕಿಗೆ ಹಾತೊರೆಯುವ ಹಂಬಲವಿದೆ. ಇದು ಇನ್ನಷ್ಟು ಬೆಳೆಯುವುದು
ಒಂಟಿಕಾಲಿನ ಅವನು ಜಾರುತ್ತಾನೆ ಒಮ್ಮೊಮ್ಮೆ
ಜಾರಬಾರದೆಂದರೆ ಹೇಗೆ?
ದೇವರಾದದ್ದೆ ಹಾಗೆ.
ಎನ್ನುವ ಸಾಲುಗಳಿಂದ. ಇಲ್ಲಿ ದೇವರು ಎನ್ನುವ ಕಲ್ಪನೆಯೊಂದು ತಾನೇ ರೂಪಾಂತರವಾಗುವ ಉಪಮೆಯನ್ನು ಹೊಂದಿದೆ. ಇಡೀ ಪದ್ಯದಲ್ಲಿ ಕಾವ್ಯ ಎನ್ನುವುದು ಅವತರಿಸಿ ಬಿಡುವುದೂ ಇಲ್ಲಿಯೇ.
ಇನ್ನು ಸಂಕಲನದ ಮತ್ತೊಂದು ಪದ್ಯವಾದ “ಎಳೆಯ ದೇವರು” ಪದ್ಯಕ್ಕೂ ಈ ಪದ್ಯಕ್ಕೂ ಅಂತಹ ಘನ ವ್ಯತ್ಯಾಸವೇನೂ ಇಲ್ಲಾ. “ನನ್ನ ದೇವರು” ಪದ್ಯದ ಪ್ರಬುದ್ಧತೆಯ ಮ್ಯಾನಿಫೆಸ್ಟೋ ಎಂದು ಆ ಪದ್ಯವನ್ನು ನೋಡಬಹುದು ಅಷ್ಟೆ. ಇಲ್ಲಿಯೂ ಬಹುತೇಕ ಭಾವರ್ಥಗಳು ಪುನಾರರ್ವತನೆಯಾಗಿವೆ.
ಇದರಂತೆ ಈ ಸಂಕಲನದ ಅತ್ಯುತ್ತಮ ಪದ್ಯಗಳಲ್ಲಿ ” ಕಾರು ಮತ್ತು ಅನ್ನ” ಪ್ರಮುಖ ಪದ್ಯ. ಇಲ್ಲಿಯೇ ನಿಜಕ್ಕೂ ಆಧುನಿಕತೆಯ ಕರಾಳತೆ ದಾಖಲಾಗಿರುವುದು. ದುಬಾರಿ ಕಾರುಗಳು ಈ ತಲೆಮಾರಿನ ಮಾನವನ ಲಾಲಸೆಗಳ ಕುರುಹುಗಳಾಗಿದ್ದರೆ, ಗೋಧಿ, ರಾಗಿ ಹಾಗೂ ಭತ್ತದ ತೆನೆಗಳು ಭವಿಷ್ಯದಲ್ಲಿ ಎದುರಿಸಬೇಕಾಗಿರುವ ವಾಸ್ತವದತ್ತ ಬೆರಳು ಮಾಡಿ ತೋರಿಸುತ್ತಲೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿವೆ. ಇದೇ ಸಾಲಿಗೆ ಸೇರುವ ಮತ್ತೊಂದು ಅತ್ಯುತ್ತಮ ಪದ್ಯ ಎಂದರೆ “ಚಿಕ್ಕ ಚೆಡ್ಡಿ” ಇಲ್ಲಿಯೂ ವ್ಯಕ್ತವಾಗಿರುವುದು ತಲೆಮಾರುಗಳ ನಡುವಿನ ಕಂದರಗಳೆ ಆದರೂ ಇದು ಮತ್ತೊಂದು ಬಗೆಯದು.
ಕಾವ್ಯಳ ಪದ್ಯಗಳು ಕೇವಲ ಆಧುನಿಕತೆಯನ್ನು ಅಳೆಯುವ ಮಾಪನವಾಗಷ್ಟೇ ಉಳಿದುಕೊಂಡಿಲ್ಲ ಎನ್ನುವುದೇ ವಿಶೇಷ. ಇಲ್ಲಿ ಸೂಕ್ಷ್ಮವಾದ, ಹದವಾದ ಒಂದು ಹೆಣ್ಣಿನ ಒಳನೋಟವೂ ಇದೆ. ಆಕೆ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾಳೆ, ನಗುತ್ತಾಳೆ, ಕೆಲವೊಮ್ಮೆ ಬಿಕ್ಕುತ್ತಾಳೆ.
“ಕಣ್ಣಿರಿಗೂ ಒಂದು ಬಣ್ಣ ಇರುತ್ತಿದ್ದರೆ” ಪದ್ಯದಲ್ಲಿ ಈ ಎಲ್ಲಾ ಗುಣಗಳು ಸಾಬೀತಾಗುತ್ತವೆ. ಇಡೀ ಪದ್ಯದಲ್ಲಿ ಅದೊಂದು ತಾಜತನವಿದೆ. ಕಾವ್ಯ ದೈನಂದಿನ ವಸ್ತುಗಳನ್ನೇ ಪರಿಕರವಾಗಿ ಬಳಸಿಕೊಂಡು ತನ್ನೊಳಗಿನ ಕಣ್ಣೀರಿಗೆ ಬಣ್ಣ ಕಟ್ಟುತ್ತ ಅದು ಕಾಣುವ, ಕಾಣಿಸಬೇಕೆಂದಿರುವ ರೂಪಗಳನ್ನು ತೋರಿಸುತ್ತಾಳೆ. ಆದರೆ ಇದು ಹೆಣ್ಣೊಬ್ಬಳು ಒಳಗಿನಿಂದಲೇ ಮಾಗುವ ಹಂತದ ಕವಿತೆ. ಇಲ್ಲಿ ಕಾವ್ಯ ಹತ್ತಾರು ಜನರ ಪ್ರತಿನಿಧಿಯಾಗಿಯೂ ನಿಲ್ಲಬಲ್ಲಳು. ಇದೇ ಪದ್ಯದ ಗೆಲವೂ ಆಗಬಹುದು.
ಇಡೀ ಸಂಕಲನದಲ್ಲಿ ಓದುಗ ಬಹುತೇಕ ಜಾಗಗಳಲ್ಲಿ ತನ್ನನ್ನು ತಾನೇ ಕಂಡುಕೊಳ್ಳುತ್ತಾನೆ. ಇದು ಓದುಗ, ಸಮಾಜ ಹಾಗೂ ಕವಿ ಮೂವರನ್ನು ಒಳಗೊಂಡ ತ್ರಿಭುಜಕಾರದ ಕೋನ. ಇಲ್ಲಿ ಯಾರೊಬ್ಬರು ಎಲ್ಲಿಯೇ ಅಲೆದರು ತಪ್ಪದೆ ಎದುರುಗೊಳ್ಳುತ್ತಾರೆ. ಇದು ಅಪ್ಪಟ ಕಾವ್ಯಮನಸಿನ ತುಡಿತದ ಕವಿಗಷ್ಟೇ ಇದು ನಿಲುಕುವಂತಾದ್ದು.
ಕಾವ್ಯಳ ಪದ್ಯಗಳಲ್ಲಿ ವಿಶ್ಲೇಷಣೆಗೆ ಸಿಗದ ಸಿಕ್ಕರೂ ನನ್ನ ಅಸಲಿ ರೂಪ ಇದಲ್ಲ ಎಂದು ವಿಮರ್ಶಕನನ್ನೆ ಅವಕ್ಕಾಗಿಸುವ, ಸರ್ರನೆ ಜಾರಿಹೋಗುವ ವಿಚಾರ ಸೂಕ್ಷ್ಮಗಳು ಸಾಕಷ್ಟು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೊಸ ತಲೆಮಾರಿನ ಕವಿಗೆ ಬರೆಯುವುದಕ್ಕೆ ಇದೇ ವಸ್ತುಗಳೆಂದು ಇರುವುದಿಲ್ಲ. ಹಾಗೆ ಇರಲೂ ಬಾರದು. ಆದರೆ “ಜೀನ್ಸ್ ತೊಟ್ಟ ದೇವರು” ಸಂಕಲನದಲ್ಲಿ ನನ್ನ ವಸ್ತುಗಳು ಇಷ್ಟೇ ಎಂದು ಕವಿ ಸಾರಿಕೊಂಡಂತಿದೆ. ಇಲ್ಲಿ ಒಂದೇ ಬಗೆಯ ಹತ್ತಾರು ರೂಪಕಗಳು ಅನೇಕ ಪದ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗೆಂದ ಮಾತ್ರಕ್ಕೆ ಒಂದೇ ಬಗೆಯ ಸಾಲುಗಳು ಬೇರೆ ಪದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅಪರಾದವೇನೂ ಅಲ್ಲಾ, ಆದರೆ ಅದು ಹೊಮ್ಮಿಸುವ ಭಾವರ್ಥಗಳಲ್ಲಿ ವ್ಯತ್ಯಾಸವಿರಬೇಕು.
ಉದಾಹರಣೆಗೆ ” ತಂದೂರಿ ಸಂಬಂಧ “, “ಪ್ರೇಮದಲ್ಲಿ ಬೇಯುವುದು” ಹಾಗೂ ” ಸೂಜಿ ಮೊನೆ” ಈ ಮೂರು ಪದ್ಯಗಳು ವಿವಿಧ ನೆಲಗಟ್ಟಿನಲ್ಲಿ ಮೈದಾಳಿದ್ದರೂ ಅವು ತಮ್ಮಷ್ಟಕ್ಕೆ ಏನೂ ಅಲ್ಲಾ. ಇಲ್ಲಿ ಕಾವ್ಯಗಳು ಹೆಚ್ಚು ಸ್ವತಂತ್ರವಾಗಿಲ್ಲ. ನಯವಾಗಿ ಹೊರಬಂದ ಕವಿತೆಗಳು ಎನಿಸುವುದಿಲ್ಲ. ಈ ಎಲ್ಲಾ ಪದ್ಯಗಳು ಕಾಣಿಸಿಕೊಳ್ಳುವ ರೂಪಗಳು ಮಾತ್ರ ಒಂದೇ ಬಗೆಯದು.
“ತಂದೂರಿ ಸಂಬಂಧ ” ಪದ್ಯದ ಸಾಲುಗಳು ಧ್ವನಿಸುವ ಅರ್ಥಕ್ಕಿಂತ “ಪ್ರೇಮದಲ್ಲಿ ಬೇಯುವುದು” ಪದ್ಯದ ಸಾಲುಗಳು ವಿಭಿನ್ನವೇನೂ ಅಲ್ಲಾ..
“ಒಂದು ಸಂಬಂಧ ಜೀವಂತವಾಗಿರಬೇಕೆಂದರೆ
ಬೇಯಬೇಕು ತಂದೂರಿಯಲ್ಲಿ
ಜ್ವಲಂತ ಉರಿಯಬೇಕು ಪ್ರೇಮದಲ್ಲಿ
ಇಲ್ಲಾ ದ್ವೇಷದಲ್ಲಿ”
ಈ ಎಲ್ಲಾ ಸಾಲುಗಳು ಹದವಾಗುವ ಪ್ರಕ್ರಿಯೆಯ ದಾರಿಯ ನಾಮಫಲಕಗಳಂತಿರುವ ಸಾಲುಗಳು. ಎರಡು ಸಜೀವ ದೇಹಗಳ ನಡುವೆ ಏರ್ಪಡುವ ಹುಸಿಕೋಪ, ಮುನಿಸು, ಸಿಟ್ಟು, ಬಯಕೆ, ಕಾತುರ, ಕಾಳಜಿ, ಪ್ರೀತಿ, ಆಸೆ, ಅಸೂಯೆ , ಕಾಮ ಹೀಗೆ ಮನುಷ್ಯನ ಅಂತರಾಳದಲ್ಲಿ ಹೊಮ್ಮುವ ಜ್ವಲಂತ ಭಾವನೆಗಳ ಬಗ್ಗೆ ಒಂದಿಷ್ಟನ್ನ ತನ್ನದೇ ಧಾಟಿಯಲ್ಲಿ ಹೇಳುತ್ತವೆ. ಆದರೆ ಇದರಂತೆ “ಪ್ರೇಮದಲ್ಲಿ ಬೇಯುವುದು” ಪದ್ಯದ ಸಾಲುಗಳನ್ನು ಗಮನಿಸಿದರೆ ಇದೇ ಸಾಲುಗಳು ಮತ್ತೊಂದು ರೂಪಕಗಳೊಂದಿಗೆ ಪುನಾರವರ್ತನೆಯಾಗಿದೆ.
“ಪ್ರೇಮದಲ್ಲಿ ಬೇಯುವುದೆಂದರೆ
ಅನ್ನ ಬೆಂದ ಹಾಗೆ
ಹಠಮಾರಿ ಅಕ್ಕಿ ಉರಿಮಾರಿ ಜಲದೊಡನೆ
ಉಕ್ಕಿ ಬತ್ತಿ ತುಸುತುಸುವೇ ಮಿದುವಾಗುತ್ತ
ಅರಳಿ ನೋವಿನಲ್ಲಿ ಅನ್ನವಾಗುವಾಗ ಸೋಜಿಗ”
ಈ ಪದ್ಯದ ಸಾಲುಗಳು ಹೇಳುತ್ತಿರುವುದು ಅದೇ ಮಾತುಗಳನ್ನು. ಇಲ್ಲಿ ಒಂದಿಷ್ಟು ಆಳಕ್ಕಿಳಿದು ನೋಡಿದರೆ ಕಾವ್ಯಳ ಒಡಲೊಳಗೆ ಈ ಸಾಲುಗಳು ಟಿಸಿಲೊಡೆದಿರುವ ಬಗೆ ಅಚ್ಚರಿ ಎನಿಸುತ್ತದೆ. ಇವೆರಡರಲ್ಲಿ ಕಾವ್ಯ ಸೃಜಿಸಿರುವುದು ” ಅನ್ನ ಬೇಯುವುದೆಂದರೆ” ಪದ್ಯದಲ್ಲೇ ಎನ್ನಬಹುದು. ನಿಜ, ಆದರೆ ಈ ನಡುವೆ ದೊರಕಿದ ಸಮಯದಲ್ಲಿ ಕವಿಯ ಬೆಳವಣಿಗೆ ಕಾಣುವುದಿಲ್ಲ ಎನ್ನಬಹುದು.
ಇದರೊಂದಿಗೆ ಕಾವ್ಯಳು ಪದ್ಯಗಳೊಂದಿಗೆ ತಾನು ಉಳಿದುಕೊಳ್ಳಲು ನಡೆಸುವ ಸೆಣಸಾಟ, ಭಯ, ಅಕ್ಕರೆ, “ಕಾವ್ಯ ಮತ್ತು ಕೊಲೆಗಾರ” ಹಾಗೂ “ಪದ್ಯ ಮತ್ತು ಒಗ್ಗರಣೆ” ಪದ್ಯಗಳಲ್ಲಿ ನಿಚ್ಚಳವಾಗಿದೆ. ಇನ್ನು “ನಡೆಯಲಾರೆ ಹುಲ್ಲು ಹಾಸಿನ ಮೇಲೆ ” ಹಾಗೂ “ಗಾಜಿನ ಸೇತುವೆ” ಎಂಬಂತ ಸಾಚಾ ಹೆಣ್ಮನ ಪದ್ಯವೂ ಸಂಕಲನದ ಅಂದ ಹೆಚ್ಚಿಸಿದೆ. ಈ ಪದ್ಯಗಳಲ್ಲೂ ಅದದೇ ಭಾವರ್ಥಗಳು ಮರುಕಳಿಸಿವೆ.
ಆದರೆ ಕಾವ್ಯಗಳು ರಚನೆಯ ದೃಷ್ಠಿಯಲ್ಲಿ
ಶುಷ್ಕವಾಗಿದ್ದರೆ ಸಪ್ಪೆಯಾಗಿಬಿಡುವ ಅಥವಾ ಚಲನೆ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಇದಕ್ಕೆಂದೆ ಚಿಲಿ ಕವಿ ಪ್ಯಾಬ್ಲೋ ನೆರೂಡ ಅಶುದ್ಧ ಕಾವ್ಯಗಳು ಎಂಬ ಗದ್ಯ ಬರಹ ಬರೆದಿದ್ದ, ನಿನಗದೂ ಸಿಕ್ಕರೆ ಓದು. ನಿನ್ನ ಕಾವ್ಯ ಶೈಲಿಗೆ ಮತ್ತಷ್ಟು ಪುಷ್ಟಿ ದೊರಕಬಹುದು. ಇಲ್ಲಿ ಅನಿಸಿದನ್ನಷ್ಟೇ ಬರೆದಿಟ್ಟ ಶೈಲಿಯ ಪದ್ಯಗಳು ಸಾಕಷ್ಟಿವೆ. ಅವುಗಳನ್ನು ಪಟ್ಟಿ ಮಾಡುವುದು ಉದ್ಧಟತನವಾದೀತು. ನಾನು ಆ ಕೆಲಸಕ್ಕೆ ಮುಂದಾಗುವುದಿಲ್ಲ. ನಿಜ ಹೇಳಬೇಕೆಂದರೆ ಕಾವ್ಯಗಳನ್ನು ತದೇಕಚಿತ್ತದಿಂದ ಓದಬಲ್ಲೆ ಅಷ್ಟೆ ,ಅದರ ವಿಮರ್ಶೆ ಅಥವಾ ಅಭಿಪ್ರಾಯ ಕುರಿತು ಬರೆಯುವ ಕೆಲಸ ತುಸು ಕಷ್ಟವಾದದ್ದು. ನೀನೆ ಮತ್ತೊಮ್ಮೆ ಎಲ್ಲವನ್ನು ಖಾಲಿ ಕೋಣೆಯಲ್ಲಿ ಕುಳಿತು ಓದು. ನಂತರ ಸಮಯ ಕೊಡು, ಏನಾದರೂ ತಿದ್ದಬೇಕು ಎನಿಸಿದರೆ ಒಂದಿಷ್ಟು ಸಮಯದ ನಂತರ ತಿದ್ದು, ಮತ್ತೊಂದಷ್ಟು ಸಮಯದ ನಂತರ ಅವನ್ನು ಓದು, ತಿದ್ದಬೇಕು ಎನಿಸಿದರೆ ಮತ್ತೊಮ್ಮೆ ತಿದ್ದು, ಹೀಗೆ ಪದ್ಯಗಳು ತಿದ್ದಿಸಿಕೊಂಡು ಕಡೆಗೆ ಇಲ್ಲಿ ತಿದ್ದಲು ಏನು ಉಳಿದ್ದಿಲ್ಲ ಎನಿಸಿದಾಗ ಹಾಳೆಯ ಮೇಲೆ ಉಳಿಯುವ ಸಾಲುಗಳೇ ದಿಟವಾದ ಕಾವ್ಯ, ಅಥವಾ ಸಾಹಿತ್ಯ…ಹೀಗೆ ಒಡಮೂಡಿ ಬಂದ ಪದ್ಯಗಳು ಯಾರ ವಿಮರ್ಶೆಯ ಉತ್ಪ್ರೇಕ್ಷೆಯನ್ನು ಬಯಸುವುದಿಲ್ಲ. ಯಾಕೆಂದರೆ ಅದು ನಿನ್ನದೇ ಆತ್ಮವೊಂದರ ತುಣುಕಾಗಿರುತ್ತದೆ ಅದಕ್ಕೆ.
ಕಡೆಯದಾಗಿ ಭಾಷೆಯ ಬಗ್ಗೆ ಹೇಳುವುದಾದರೆ ನಿಜಕ್ಕೂ ತಲೆದೂಗಬೇಕು. ಸಾಹಿತ್ಯದೆಡೆಗೆ ನಿನಗಿರುವ ಆಸಕ್ತಿ ಪ್ರಮಾಣಿಕವಾದದ್ದು, ಹೀಗೆ ಬರೆಯುತ್ತಿರು. ನಿನ್ನಿಂದ ಇನ್ನು ಆರೋಗ್ಯಕರ ಬರವಣಿಗೆಯನ್ನು ಅಪೇಕ್ಷಿಸಿದರೆ ತಪ್ಪಾಗಲಾರದು. ನಿನಗದು ಸಾಧ್ಯ. ಇಷ್ಟೆಲ್ಲಾ ಬಗೆಯ ಪದ್ಯಗಳನ್ನು ಬರೆಯಬಹುದು ಎಂದು ನನಗೆ ಕಳಿಸಿಕೊಟ್ಟ ಪದ್ಯಗಳಿವೆ ಇಲ್ಲಿ. ಬೆಂಗಳೂರಿನ ಟಾಫ್ರಿಕ್ ನಲ್ಲಿ ಸಿಕ್ಕಿಬಿದ್ದಾಗೆಲ್ಲಾ, ನಿನ್ನ ಪದ್ಯಗಳು ಜತೆಯಾಗಿವೆ. ದಾರಿಯುದ್ದಕ್ಕೂ ಓದಿ ಸುಖಿಸಿದ್ದೇನೆ. ಅದಕ್ಕೆ ನಾನು ಖುಣಿ.
ಬೆಂಗಳೂರಿನಲ್ಲಿ ಕೆಲಸ ಹಿಡಿಸದೇ ಇದ್ದರೂ ಹೊಸತನಕೆ ಅರ್ಪಿಸಿಕೊಂಡಿರುವೆ. ಕೆಲಸ ಹಿಡಿಸಿಲ್ಲ,ಆದರೂ ಹೊಂದಿಕೊಳ್ಳತ್ತೇನೆ. ಬದುಕಿನುದ್ದಕ್ಕೂ ಸಾಹಿತ್ಯ, ನಾಟಕ, ಹೋರಾಟಗಳಲ್ಲಿ ಭಾಗವಹಿಸಿ ಬಂದವನು ಏಕಾಏಕಿ ಕ್ರೀಡಾ ವರದಿಗಾರನಾಗುವುದು, ಆ ಬಗ್ಗೆ ಅಪೂರ್ಣ ಸಾಲುಗಳಲ್ಲಿ ಸುಳ್ಳುಗಳು ಎನಿಸುವಂತ ಸಾಲುಗಳನ್ನು ಬರೆಯುವುದು ತುಸು ಕಷ್ಟದ ಕೆಲಸ. ನನಗೆ ಮಯೂರು, ಮುಕ್ತಛಂದದಂತ ಸಾಹಿತ್ಯಿಕ ಪತ್ರಿಕೆಯಲ್ಲಿ ಕೆಲಸ ಮಾಡಲು ತುಂಬಾ ಇಷ್ಟ, ಕರಸ್ಪಾಂಡೆನ್ಸ್ ನಲ್ಲಿ ಇಂಗ್ಲಿಷ್ ಎಂ ಎ ಮಾಡುವ ಇರಾದೆಯಿದೆ. ಮುಂದೆ ಅತ್ತಲೇ ಹೋಗುವೆ.
ಇಲ್ಲಿ ಮೈತ್ರಿ ಹಾಗೂ ರಾಜಶೇಖರ ಬಂಡೆ ಜತೆಗಿದ್ದಾರೆ. ಸ್ನೇಹಕ್ಕೆ ಇವರಷ್ಟೇ ಇರೋದು.ಖುಷಿಯಿದೆ ಇವರ ಜತೆ ಇರುವುದಕ್ಕೆ.ಇದರಂತೆ ನಾನು ಹೊಸ ಪದ್ಯಗಳನ್ನು





Beautiful writeup Sandeep.