ಸಂದರ್ಶನ ಎಂಬ ಖಾಲಿ ಬಯಲಿನ ನಡುವೆ..

ಸಂದೀಪ್ ಈಶಾನ್ಯ

 

ಟಿ.ವಿಯಲ್ಲಿ ಪ್ರಸಾರವಾಗುವ ಪತ್ರಿಕೆ ಹಾಗೂ ವಿಶೇಷಾಂಕಗಳಲ್ಲಿ ಪ್ರಕಟವಾಗುವ ಸಂದರ್ಶನಗಳನ್ನು ಓದುವಾಗ ವಿಚಿತ್ರವಾದ ಅನುಭವಗಳು ನಮ್ಮನ್ನು ಸೇರಿಕೊಳ್ಳುತ್ತಿರುತ್ತವೆ. ನಮ್ಮ ಮೈಮೇಲಿನ ಗಾಯಗಳಿಗೆ ಓದುಗರಾದ ನಾವುಗಳು ಯಾರದೋ ಮಾತುಗಳಲ್ಲಿ ಮುಲಾಮನ್ನು ಹುಡುಕುತ್ತಿರುವಂತೆ ಭಾಸವಾಗುತ್ತದೆ.

ಎಂದೋ ಮಾಡಿದ ನಿರ್ಧಾರಗಳು ನಮ್ಮ ಇಡೀ ಬದುಕಿನ ಪ್ರಯಾಣವನ್ನೇ ಬದಲಿಸಿದಂತೆ, ಯಾರೋ ಧಿಕ್ಕರಿಸಿದ್ದ ಸಂಬಂಧಗಳು ಮತ್ತೊಂದು ಸಂಬಂಧದ ಮೂಲಕ ಅನ್ಯಲೋಕದ ಬಾಗಿಲುಗಳನ್ನು ತೆರೆದು ಒಳಗೆ ಸ್ವಾಗತಿಸಿಬಿಟ್ಟಿರುತ್ತದೆ. ಈ ಕಾರಣಕ್ಕೆ ಸಂದರ್ಶನಗಳು, ಅಲ್ಲಿನ ಕಟುಸತ್ಯದಂತಹ ಮಾತುಗಳು ವಿಶೇಷ ಎನಿಸುತ್ತವೆ. ಆ ಕ್ಷಣಕ್ಕೆ ಹೇಳದೆ ಉಳಿಸಿಕೊಂಡ ಮಾತುಗಳು ಅರಿವಿಲ್ಲದೆ ಹೊರಬರುತ್ತವೆ. ತಪ್ಪಿನುಡಿದ ಮಾತಿಗೆ ಹೆದರಿ ನಾಲಗೆಯನ್ನು ಕಚ್ಚಿಕೊಳ್ಳುವಾಗಿನ ಸಂಕಟ, ತಪ್ಪಿಹೋದ ಮೆಟ್ರೋ ರೈಲನ್ನು ನೋಡಿ ಅಯ್ ಎಂದು ಕೈ ಹಿಸುಕಿಕೊಳ್ಳುವ ಘಳಿಗೆಯಲ್ಲೂ ಸಾಧ್ಯವಿದೆ.

ಹೀಗೆ ನಮ್ಮ ನೋವು, ಸಂಕಟ, ಗುಟ್ಟು, ಆಸೆ, ಅಹಂ ಎಲ್ಲವೂ ಅರಿವಿಲ್ಲದೆ, ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ ಹೊರಬರುತ್ತಿರುತ್ತವೆ. ಹೀಗಾಗಿ ಮತ್ತೊಬ್ಬರ ಪ್ರಶ್ನೆಗೆ ಉತ್ತರಿಸುವ, ಮುಚ್ಚಿಟ್ಟುಕೊಳ್ಳುವ, ಅವಿತುಕೊಳ್ಳುವ ಪ್ರಯತ್ನಗಳನ್ನು ಮಾಡುವ ಸಂದರ್ಶನಗಳು ವಿಚಿತ್ರದಷ್ಟೇ ವಿಶೇಷವೂ ಹೌದು.

 

 

2006ರಲ್ಲಿ ಇರಾನ್‍ನ ಮಕ್ಕಳ ಸಿನಿಮಾವೊಂದು ಬಹುದೊಡ್ಡ ಸುದ್ದಿಯಾಗಿತ್ತು. ಇರಾನ್ ಸರ್ಕಾರದ ನೀತಿಗಳನ್ನು ಸೂಕ್ಷ್ಮವಾಗಿ ರೂಪಕಗಳ ಮೂಲಕವೇ ಮಣಿಸಿದ್ದ ಆ ಸಿನಿಮಾ ಇರಾನ್ ಸರ್ಕಾರದ ಸಿಟ್ಟಿಗೆ ಕಾರಣವಾಗಿದ್ದರೂ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿತ್ತು. ಸಿನಿಮಾದ ಪ್ರಚಾರಕ್ಕೆ ಹಣವಿಲ್ಲದ ಚಿತ್ರತಂಡ ಸಿನಿಮಾದಲ್ಲಿ ನಟಿಸಿದ್ದ ಆ ಇಬ್ಬರು ಬಡಹುಡುಗರನ್ನೇ ರಾಯಭಾರಿಗಳಂತೆ ಕರೆದುಕೊಂಡು ದೇಶ-ವಿದೇಶಗಳ ಫಿಲ್ಮ್‌ ಫೆಸ್ಟ್ ಗಳಲ್ಲಿ ಭಾಗವಹಿಸುವ ಮೂಲಕ ಸಿನಿಮಾವನ್ನ ಎಲ್ಲರಿಗೂ ತಲುಪಿಸುವ ಪ್ರಯತ್ನ ಮಾಡಿತ್ತು. ಅದನ್ನು ಕಲೆಯನ್ನೇ ನಂಬಿದವರ ಸಾಂಘಿಕ ಹೋರಾಟ ಎನ್ನಬಹುದು.

ಬೆಳಗಿನ ರೊಟ್ಟಿಗೆ ಮನೆಯ ಮುದುಕಿ ಬುಟ್ಟಿಹೆಣೆಯುತ್ತ ದುಡಿದರೆ, ಮಧ್ಯಾಹ್ನದ ಊಟಕ್ಕೆ ಅಮ್ಮ, ರಾತ್ರಿಯ ಊಟಕ್ಕೆ, ಹಬ್ಬದ ಮಾಂಸಕ್ಕೆ ಅಪ್ಪ ದುಡಿಯಬೇಕಿತ್ತು. ಅಂತಹ ಕ್ಲಿಷ್ಟ ಬಡತನದ ಮನೆಯನ್ನು ದಾಟಿ ಬಂದಿದ್ದ ಆ ಇಬ್ಬರು ಹುಡುಗರು ಸಿನಿಮಾದಲ್ಲಿ ನಟಿಸಿದ್ದ ಕಾರಣದಿಂದ ಐದಾರು ದೇಶಗಳನ್ನು ಸುತ್ತಿ ಬಂದಿದ್ದರು. ನುಣುಪು ರಸ್ತೆಗಳು, ಯಾವುದೋ ಐಷಾರಾಮಿ ಹೊಟೇಲ್‍ನ ಊಟ, ಸೂಟ್ ಧರಿಸಿದವರು ಕುಲುಕಿದ ಕೈಗಳು, ಗೊಂಬೆಯಂತಹ ಹುಡುಗಿಯರು ನೀಡಿದ ಮುತ್ತುಗಳನ್ನು ಸವಿದು ವಾಪಸ್ ತಮ್ಮ ದೇಶ ಇರಾನ್‍ಗೆ ಮರಳಿದ್ದರು. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಹುಡುಗರನ್ನು ಸಂದರ್ಶನಕ್ಕೆ ಹೊಂಚುಹಾಕಿ ಕಾದಿದ್ದವು. ಕಡೆಗೆ ಟಿವಿಯೊಂದರ ಸಂದರ್ಶನದಲ್ಲಿ ಆ ಇಬ್ಬರು ಹುಡುಗರು ಕಾಣಿಸಿಕೊಳ್ಳಬೇಕಾಯ್ತು.

ನಿಮಗೆ ಮೊದಲ ಬಾರಿಗೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್‌ ನಂತಹ ದೇಶಗಳನ್ನು ನೋಡಿದಾಗ ಅನಿಸಿದ್ದು ಏನು? ನಿಮಗೆ ಫಿಲ್ಮ್‌ ಫೆಸ್ಟ್ ನಲ್ಲಿ ಪ್ರಶಸ್ತಿ ಬಂದಿದ್ದಕ್ಕೆ ಏನು ಹೇಳುತ್ತೀರಿ? ಎಂದು ಸಂದರ್ಶಕಿ ಪ್ರಶ್ನಿಸಿದ್ದಕ್ಕೆ, ಆ ಇಬ್ಬರು ಹುಡುಗರು ನಿರಾಳವಾಗಿ ನಕ್ಕುಬಿಟ್ಟಿದ್ದರು. ಆ ಯಾವುದೂ ನಮಗೆ ಮುಖ್ಯವೇ ಅಲ್ಲ ಎನ್ನುವಂತೆ ಅವಳನ್ನೇ ಮಿಕಿಮಿಕಿ ನೋಡುತ್ತಾ ಕುಳಿತುಬಿಟ್ಟಿದ್ದರು.

ಹುಡುಗನೊಬ್ಬ, ನನಗೆ ಏರೋಪ್ಲೇನ್ ನೋಡಿ ಖುಷಿಯಾಯ್ತು. ಆಕಾಶದಲ್ಲಿ ಹಾರುವಾಗ ಮಾತ್ರ ಅದಕ್ಕೆ ಚಕ್ರಗಳಿರುವುದಿಲ್ಲ, ಅದು ಸುಮ್ಮನೇ ನಿಂತಿರುವಾಗ ಅದಕ್ಕೆ ಎಷ್ಟು ದೊಡ್ಡ ಚಕ್ರಗಳಿರುತ್ತವೆ ಗೊತ್ತಾ! ಎಂದು ಆಶ್ಚರ್ಯ ತುಂಬಿದ ದನಿಯಲ್ಲಿ ಸಂದರ್ಶಕಿಯನ್ನೇ ಮರುಪ್ರಶ್ನಿಸಿದ್ದರೆ, ಮತ್ತೊಬ್ಬ ಹುಡುಗ ನಮಗೆ ಸಿನಿಮಾ ಹಾಲ್‍ನಲ್ಲಿ ಕೂರುವುದಕ್ಕೆ ಕುರ್ಚಿಗಳನ್ನು ಮೊದಲೇ ಕಾದಿರಿಸಿದ್ದರು!. ಅದನ್ನು ಅಪ್ಪನಿಗೆ ಹೇಳಿದಾಗ ಅವನು ಸಂಭ್ರಮಿಸಿದ್ದ ಎಂದು ಹೇಳಿಕೊಂಡಿದ್ದ.

ಸಂಭ್ರಮಗಳೇ ಹೀಗೆ, ಅದಕ್ಕೆ ಕಾರಣಗಳು ಯಾವಾಗಲೂ ಭಿನ್ನವಾಗಿರುತ್ತವೆ. ”Happiness is the state of mind” ಎನ್ನುವುದು ಇದೇ ಕಾರಣಕ್ಕೆ ಇರಬಹುದು. ತಮಿಳಿನ ‘ಕಾಕಾ ಮುಟ್ಟೈ’ ಸಿನಿಮಾದಲ್ಲಿ ನಟಿಸಿದ್ದ ಇಬ್ಬರು ಸಾಮಾನ್ಯ ಮನೆಯ ಹುಡುಗರು ಸಿನಿಮಾದ ಚಿತ್ರೀಕರಣ ಮುಗಿಯುವಷ್ಟರಲ್ಲಿ ಆ ಸಿನಿಮಾದ ನಿರ್ಮಾಪಕನೂ ಆಗಿದ್ದ ನಟ ಧನುಷ್ ಕಡೆಗಿದ್ದ ಆ ಮೊದಲ ಕುತೂಹಲವನ್ನು ಸಂಪೂರ್ಣವಾಗಿ ಕಳೆದುಕೊಂಡುಬಿಟ್ಟಿದ್ದರಂತೆ.

ಹೀಗೆ ಬರೀ ಯುದ್ಧ, ಬಾಂಬ್‍ ದಾಳಿ, ಅಪಹರಣ, ಶಿಕ್ಷಣದ ಕೊರತೆ ಹೀಗೆ ಮೇಲಿಂದ ಮೇಲೆ ಗಾಯಗಳನ್ನು ಮಾಡಿಕೊಳ್ಳುತ್ತಲೇ ಕುಂಟುತ್ತಿರುವ ಇರಾನ್‍ ಮತ್ತು ಅದೇ ನೋವಿನಲ್ಲಿ ಬಳಲುತ್ತ ಬದುಕಿರುವ ಮಾಧ್ಯಮದ ಸಂದರ್ಶಕಿಗೆ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್‍ನಂತಹ ದೇಶಗಳು ಬಿಡುಗಡೆಯ ತಾಣವಾಗಿ ಕಂಡಿದ್ದರೆ, ಏರೋಪ್ಲೇನ್‍ನ ಚಕ್ರಗಳು ಮತ್ತು ಕಾದಿರಿಸಿದ್ದ ಕುರ್ಚಿಗಳು ಆ ಇಬ್ಬರು ಹುಡುಗರನ್ನು ಸೆಳೆದುಬಿಟ್ಟಿದ್ದವು. ಆ ಮಕ್ಕಳ ಮೂವತ್ತು ನಿಮಿಷಗಳ ಆ ಸಂದರ್ಶನದಲ್ಲಿ ಮುಗ್ಧತೆಯ ಹೊಳೆಯೇ ಹರಿದುಹೋಗಿತ್ತು.

ನಮ್ಮನ್ನು ನಾವೇ ಸೀಳಿಕೊಂಡು ಒಳಗನ್ನು ಕಾಣುವ ಘಳಿಗೆ ಧಕ್ಕಬೇಕು. ನಿಜಕ್ಕೂ ಅದೊಂದು ಚಂದದ ಅನುಭವ. 2016ರಲ್ಲಿ ಬಹುಭಾಷಾ ನಟ ಪ್ರಕಾಶ್‍ ರಾಜ್ ಪ್ರಜಾವಾಣಿಯ ಹಿರಿಯ ಪತ್ರಕರ್ತ ರಘುನಾಥ್ ಚ.ಹ ಅವರಿಗೆ ದೀಪಾವಳಿ ವಿಶೇಷಾಂಕಕ್ಕೆ ನೀಡಿದ ವಿಶೇಷ ಸಂದರ್ಶನವಿದೆ. ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೇಲ್‍ನ ರೂಮ್‍ನಲ್ಲಿ ಕುಳಿತು ನೀಡಿದ್ದ ಸಂದರ್ಶನದಲ್ಲಿ ಪ್ರಕಾಶ್‍ ರಾಜ್ ತಮ್ಮನ್ನು ತಾವೇ ಸೀಳಿಕೊಂಡು ಆಂತರ್ಯದ ಮಾತುಗಳನ್ನಷ್ಟೇ ಹೇಳಿದ್ದಾರೆ ಎನ್ನುವ ಮಾತುಗಳ ಅಕ್ಷರರೂಪದ ಸಂದರ್ಶನವನ್ನು ಓದಿದ ನಮಗೂ ಆ ಅನುಭವ ಒಂದಿಷ್ಟು ದಕ್ಕಬಹುದು.

”ನಾನು ಒಳ್ಳೆಯ ನಟ ಎನ್ನುವುದು ನನಗೆ ಗೊತ್ತಾಗಿದೆ. ಇದು ಅಪಾಯ. ಇನ್ನು ನಾನು ಆದಷ್ಟು ಎಚ್ಚರವಾಗಿರಬೇಕು. ಫಿಲ್ಮ್‌ಫೇರ್, ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳು ನನ್ನ ನಟನೆಗೆ ಸಿಕ್ಕಿವೆ. ಭಾಷೆಯ ಹಂಗಿಲ್ಲದೆ ಎಷ್ಟೋ ನಿರ್ದೇಶಕರು ನೀವೇ ಈ ಪಾತ್ರವನ್ನು ಮಾಡಬೇಕು ಎನ್ನುತ್ತಾರೆ. ಆದರೆ ಈಗ ನನಗೆ ಅನಿಸೋದು ಇಷ್ಟೇ. ನಾಯಕಿಯನ್ನು ರೇಪ್ ಮಾಡುವ, ನನಗಿಂತ ವಯಸ್ಸಿನಲ್ಲಿ ಸಣ್ಣವನಾಗಿರುವ ನಾಯಕನಿಂದ ಹೊಡೆಸಿಕೊಳ್ಳುವ, ಯಾವುದೋ ಗ್ಯಾಂಗ್‍ಸ್ಟರ್ ಪಾತ್ರವನ್ನು ಇನ್ನುಮುಂದೆ ನಾನು ಮಾಡಬಾರದು ಎನ್ನುವ ಅರಿವಾಗಿದೆ”.

”ನನ್ನ ಮಗಳ ಜೊತೆ ಕೂತು ನೋಡುವುದಕ್ಕೆ ಮುಜುಗರವಾಗುವ ಸಿನಿಮಾಗಳನ್ನು ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಈ ಕಾರಣಕ್ಕೆ ತೆಲುಗಿನಲ್ಲಿ ಸೀತಮ್ಮ ವಾಕಿಟ್ಲೋ ಸಿರಿಮಲ್ಲೆಚೆಟ್ಟು, ಕನ್ನಡದಲ್ಲಿ ಒಗ್ಗರಣೆ, ಇದೊಳ್ಳೆ ರಾಮಾಯಣದಂತಹ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡೆ. ನನಗೆ ವಸುಧೇಂದ್ರ ಅವರ ತಗಣಿ ಕತೆಯನ್ನ ಸಿನೆಮಾ ಮಾಡಬೇಕು ಎನ್ನುವ ಆಸೆ ಇದೆ. ಯಶವಂತ ಚಿತ್ತಾಲರ ಕತೆಗಳಲ್ಲಿ ಅವರ ಹನೇಹಳ್ಳಿ ಏಕೆ ಪದೇ ಪದೇ ಬರುತ್ತದೆ ಎನ್ನುವ ಪ್ರಶ್ನೆ ಈಗಲೂ ಇದೆ. ರೈತನಾಗಬೇಕು. ಭೂಮಿಯ ಒಡನಾಟವನ್ನು ಇಟ್ಟುಕೊಳ್ಳಬೇಕು” ಎನ್ನುತ್ತ ತಮ್ಮೊಂದಿಗೆ ತಾವೇ ಮಾತನಾಡಿಕೊಂಡಿರುವಂತೆ ಸಂದರ್ಶನದ ಉದ್ದಕ್ಕೂ ಮಾತನಾಡಿದ್ದಾರೆ ಪ್ರಕಾಶ್‍ರಾಜ್.

ನಾನು ಒಳ್ಳೆಯ ಕವಿ ಎನ್ನುವುದು ಗೊತ್ತಾದ ಕ್ಷಣವೇ ಬರೆಯುವುದನ್ನು ನಿಲ್ಲಿಸಿಬಿಡುತ್ತೇನೆ ಎಂದಿದ್ದರು ಪಾಕಿಸ್ತಾನದ ಕವಿ ಅಹಮದ್ ಫರಾಜ್. ನಟ ಪ್ರಕಾಶ್‍ ರಾಜ್‍ರ ಮಾತುಗಳನ್ನು ಕೇಳಿದಾಗಲೂ ನನಗೆ ಕವಿ ಅಹಮದ್ ಫರಾಜ್ ಅವರ ಮಾತುಗಳೇ ಮತ್ತೊಂದು ಆಯಾಮದಿಂದ ಅರ್ಥವಾಗಿತ್ತು. ಸಾಯುವ ಮೊದಲು ಓದಲೇಬೇಕಾದ ಪುಸ್ತಕಗಳ ರಾಶಿಯೇ ಮನೆಯಲ್ಲಿದೆ, ನೋಡಲೇಬೇಕಾದ ಹಳ್ಳಿಗಳಿವೆ, ತಿನ್ನಲೇಬೇಕಾದ ಖಾದ್ಯಗಳಿವೆ. ನಾನು ರೈತನಾಗಿ ಮಣ್ಣಿನಲ್ಲಿ ಹೊರಳಾಡಬೇಕು ಎಂದಿದ್ದರು ಪ್ರಕಾಶ್‍ರಾಜ್.

ಆ ಎಲ್ಲ ಮಾತುಗಳು ನಮ್ಮನ್ನು ನಾವೇ ಸೀಳಿಕೊಂಡು ನೋಡುವ ಕ್ರಮವಿರಬಹುದಾ! ಈ ಅನುಮಾನ, ಪ್ರಶ್ನೆ ಅದನ್ನು ಓದಿದ ಮೊದಲ ದಿನವೂ ಇತ್ತು, ಈಗಲೂ ಉಳಿದಿದೆ. ಇದೇ ಕಾರಣಕ್ಕೆ ಆ ಸಂದರ್ಶನವನ್ನ ಮತ್ತೆ ಮತ್ತೆ ಓದುತ್ತೇನೆ. ಅರಿವು ಎನ್ನುವುದು ಸಲೀಸಾಗಿ ದಕ್ಕುವುದಿಲ್ಲವಲ್ಲ.

ನಮಗೆ ಮಾಡಿದ ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಮಯ ಬೇಕು. ಅಥವಾ ಸಮಯವೇ ನಮಗೆ ಅಗತ್ಯವಿದ್ದಾಗ ತಪ್ಪುಗಳ ಅಸಲಿ ಅರ್ಥಗಳನ್ನು ತೆರೆದು ತೋರಬಹುದು. ಇಂತಹ ಅನುಭವಗಳನ್ನೇ ದೊಡ್ಡವರು ಬಹುದೊಡ್ಡ ಪದಪುಂಜಗಳಲ್ಲಿ ವಿವವರಿಸುತ್ತಾರೆ. ಭಾಷಣಗಳನ್ನೇ ಪುಸ್ತಕವನ್ನಾಗಿಸಿ ವ್ಯಾಪಾರ ಮಾಡುತ್ತಾರೆ. ಇದಕ್ಕೆ ಕೆಲವರು ಮಾಗಿದ ಜೀವ, ಜ್ಞಾನಿ, ಆಧ್ಯಾತ್ಮಿಕ ಜೀವಿ ಎನ್ನುವ ಮಾತುಗಳಲ್ಲಿ ಉದಾಹರಿಸುತ್ತಾರೆ.

ವಿವೇಕ್ ಶಾನಭಾಗ್ ತಮ್ಮ ‘ಘಾಚರ್ ಘೋಚರ್’ ಕಾದಂಬರಿಯಲ್ಲಿ ”ದೊಡ್ಡವರು ಹೇಳುವ ಮಾತುಗಳಿಗೆ ನಿಜಕ್ಕೂ ದೊಡ್ಡ ಅರ್ಥಗಳೇನಿರುವುದಿಲ್ಲ. ಅದು ನಮ್ಮಂತಹ ಸಣ್ಣವರ ಮನಸ್ಸಿನಲ್ಲಿ ಹೊಳೆದು ದೊಡ್ಡ ಅರ್ಥಗಳನ್ನು ಪಡೆದುಕೊಳ್ಳುತ್ತವೆ” ಎನ್ನುವಂತಹ ಮಾತನ್ನು ಹೇಳಿದ್ದಾರೆ. ನನ್ನ ಪಾಲಿಗೆ ಇದು ಬಹುತೇಕ ಸತ್ಯ. ಹೆಜ್ಜೆಯ ಊರಲುದಾರಿ ಗೊತ್ತಾಗಬೇಕಾದರೆ ನೋವಿರಬೇಕು. ಅಂತಹ ನೋವಿಗೆ ದೊಡ್ಡ ಅರ್ಥಗಳು ತಾನಾಗೇ ಗೋಚರವಾಗುತ್ತದೆ.

ಇಂಡಿಯನ್ ಕ್ರಿಕೆಟ್ ಟೀಮ್‍ನ ಮಾಜಿ ನಾಯಕ ಸೌರವ್ ಗಂಗೂಲಿ ಇಂತಹ ಊರಲು ದಾರಿಯ ನೋವಿನ ಬಗ್ಗೆ ಹೇಳಿಕೊಂಡಿರುವುದು ಮತ್ತೊಂದು ರೀತಿಯ ಬದುಕನ್ನು ತೋರಬಹುದು. ಆ ಕ್ಷಣದ ಕೋಪ. ಅಂತಹ ಕೋಪವೇ ನೀಡುವ ಸಂಭ್ರಮಗಳು ಎಷ್ಟೋ ವರ್ಷಗಳ ನಂತರ ಬಹುದೊಡ್ಡ ಸಂಕಟವಾಗಿ ಕಾಣುವುದುಂಟು. ಇದೇ ಹಾದಿಯಲ್ಲಿ ಸೌರವ್ ಗಂಗೂಲಿ ಕೂಡ 2018ರ ಮಾರ್ಚ್ ತಿಂಗಳನ ‘ದಿ ವೀಕ್’ ಪತ್ರಿಕೆಯಲ್ಲಿ ಪತ್ರಕರ್ತೆ ಬರ್ಕಾ ದತ್‍ಗೆ ನೀಡಿದ್ದ ಸಂದರ್ಶನದಲ್ಲಿಯೂ ಕಾಣುತ್ತದೆ.

”2002ರ ಇಂಗ್ಲೆಂಡ್ ವಿರುದ್ಧದ ನ್ಯಾಟ್‍ವೆಸ್ಟ್ ಸೀರಿಸ್‍ನಲ್ಲಿ ಗೆಲುವು ಸಾಧಿಸಿದ ನಂತರ ನಾನು ಟೀ ಶರ್ಟ್ ಕಳಚಿ ಸಂಭ್ರಮಿಸಿದ್ದು ತಪ್ಪು ಎನ್ನುವುದು ಈಗ ಪದೇ ಪದೇ ನೆನಪಾಗುತ್ತದೆ. ನಾನು ನನ್ನ ಸಂಭ್ರಮವನ್ನು ಮತ್ತೊಂದು ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿಕೊಳ್ಳಬಹುದಿತ್ತು. ಅದಕ್ಕೆ ಎಲ್ಲಾ ಅವಕಾಶವಿದ್ದರೂ ನಾನು ಇದೇ ಹಾದಿಯನ್ನು ಆಯ್ದುಕೊಂಡಿದ್ದು ಈಗ ಬೇಸರವಾಗುತ್ತಿದೆ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇಂಗ್ಲೆಂಡ್‌ನ ಆಲ್‍ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಮುಂಬೈನ ವಾಂಖೆಡೆ ಮೈದಾನದಲ್ಲಿ ಭಾರತೀಯರಿಗೆ ಮಾಡಿದ್ದನ್ನೇ ನೀವು ಅವರ ನೆಲದಲ್ಲಿ ಮಾಡಿದ್ದೀರಿ ಅದರಲ್ಲಿ ಯಾವ ತಪ್ಪಿದೆ! ಎನ್ನುವ ಪತ್ರಕರ್ತೆ ಬರ್ಕಾ ದತ್ ಮಾತಿಗೆ, ”ಇಂತಹ ಸಮಾಧಾನದ ಮಾತುಗಳು ನಮ್ಮನ್ನು ರಕ್ಷಿಸಬಾರದು. ನನಗೆ ನನ್ನ ಆವತ್ತಿನ ನಡೆ ತಪ್ಪು ಎನಿಸಿದೆ ಎಂದಿದ್ದರು ಸೌರವ್.‌ ಈ ಎಲ್ಲವನ್ನು ಗಂಗೂಲಿ ತಮ್ಮ A Century is not enough ಪುಸ್ತಕದಲ್ಲೂ ಬರೆದುಕೊಂಡಿದ್ದಾರೆ. ಆದರೆ, ಅದುವರೆಗೂ ದೊರೆಯದೆ ಬಚ್ಚಿಟ್ಟುಕೊಂಡಿದ್ದ ನಿರಾಳವೊಂದು ಆ ಸಂದರ್ಶನದಲ್ಲಿ ನೋವುಗಳನ್ನು ತೋಡಿಕೊಂಡ ನಂತರ ಗಂಗೂಲಿಗೆ ದಕ್ಕಿರಬಹುದಾ? ಗೊತ್ತಿಲ್ಲ!

ಸಂದರ್ಶನವೆಂದರೆ ಪತ್ರಿಕೆ ಅಥವಾ ಟಿ.ವಿಗೆ ಒಬ್ಬರ ಎದುರು ಕೂತೇ ಹೇಳಬೇಕಾಗಿಲ್ಲ. ಸಾಧ್ಯವಾದ ಕಡೆಯಲ್ಲಿ ಬಿಡುಗಡೆಯಾಗುವುದು ಕೂಡ ಅಂತಹದೇ ಭಾವವನ್ನು ಹುಟ್ಟುಹಾಕುತ್ತದೆ. ಇಂಟರ್‌ನೆಟ್‍‍‍‍‍ನಲ್ಲಿ ಅತಿ ಹೆಚ್ಚು ಗೂಗಲ್‍ ಸರ್ಚ್ ಆಗುವ ಪೋರ್ನ್ ಸ್ಟಾರ್‌ಗಳ ಪೈಕಿ ಕೀರನ್ ಲೀ, ಚಾರ್ಲ್ಸ್ ಡೇರಾ, ಸ್ಯಾಸ ಗ್ರೇ, ಮೀಯಾ ಕಲೀಫಾ ಮತ್ತು ಸನ್ನಿ ಲಿಯೋನೆ ಟಾಪ್ ಟೆನ್‌ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ವರ್ಷ ನ್ಯೂಯಾರ್ಕ್‍ನ ವಾರಪತ್ರಿಕೆಯೊಂದು ಮೂವತ್ತನಾಲ್ಕು ವರ್ಷದ ಸ್ಯಾಸ ಗ್ರೇಳನ್ನು ಸಂದರ್ಶನ ಮಾಡಿತ್ತು. ಸಂದರ್ಶನ ಉದ್ದಕ್ಕೂ ಸ್ಯಾಸ ಗ್ರೇ ಬಳಸುವ ಕಾರು, ದುಬಾರಿ ಮನೆ, ಅಂತರಾಷ್ಟ್ರೀಯ ಮಟ್ಟದ ಗೆಳೆಯರು, ಪೋರ್ನ್ ಲೋಕಕ್ಕೆ ಬಂದ್ದಿದರ ಕಾರಣ, ಸಂಪಾದಿಸಿದ ಹಣ, ಕೀರ್ತಿ ಹೀಗೆ ಹಳಸಲು ಮಾತುಗಳನ್ನೇ ಕೇಳುವ ಮೂಲಕ ಸಂದರ್ಶನವನ್ನು ಅಂತ್ಯಗೊಳಿಸಲಾಗಿತ್ತು.

ಆದರೆ, ನನಗೆ ಈಗಲೂ ಮುಖ್ಯ ಎನಿಸುವುದು ಆ ಸಂದರ್ಶನವಲ್ಲ. ಬದಲಿಗೆ ಅದೇ ಪತ್ರಿಕೆಯ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿದ್ದ ಸ್ಯಾಸ ಗ್ರೇ ಮತ್ತು ಸಂದರ್ಶಕನ ನಡುವಿನ ಅನೌಪಚಾರಿಕವಾಗಿ ಮಾತುಕತೆಯ ಭಾಗ. ”ನಾನೊಬ್ಬಳು ಅಭೂತಪೂರ್ವ ಸುಂದರಿ ಎಂದು ಈ ಹಿಂದೆ ನಂಬಿಕೊಂಡಿದ್ದೆ. ಆದರೆ ಆ ಸೆಕ್ಸ್ ಲೋಕ ನಮ್ಮನ್ನು ಹಿಂಡಿಬಿಡುತ್ತದೆ.‌ ಈಗ ನಾನು ಅದ್ಬುತ ಸುಂದರಿ ಎನ್ನುವ ಯಾವ ನಂಬಿಕೆಯೂ ಉಳಿದಿಲ್ಲ ಎಂದಿದ್ದ ಸ್ಯಾಸ ಗ್ರೇ, ನನಗೆ ಈ ಯಾವ ಕೀರ್ತಿಯೂ ಒಂದೇ ಒಂದು ನಿಮಿಷ ಹೆಚ್ಚಿನ ನಿದ್ರೆಯನ್ನು ತಂದುಕೊಡುವುದಕ್ಕೆ ಶಕ್ತವಾಗಿಲ್ಲ. ನನಗೆ ಇರುವ ಬಹುದೊಡ್ಡ ಆಸೆಯೆಂದರೆ ನಾನು ತಾಯಿಯಾಗಬೇಕು ಎನ್ನುವುದಷ್ಟೇ” ಎಂದಿದ್ದಳು ಸ್ಯಾಸ.

ಹಾಗಾದರೆ ಈ ಸಂದರ್ಶನದ ಆತ್ಮ ಯಾವುದು? ಈ ಸಂದರ್ಶನದ ಔಪಚಾರಿಕ ಮತ್ತು ಅನೌಪಚಾರಿಕ ಭಾಗಗಳು ಯಾವುದು! ನೋ ಆನ್ಸರ್.

ಇಂಗ್ಲೀಷ್ ಪತ್ರಿಕೆಯೊಂದು ಕಾರ್ಟೂನ್ ಗೆರೆಗಳ ಮೂಲಕ ಬಾಲಿವುಡ್ ನಟಿ ‘ಮಲ್ಲಿಕಾ ಶರಾವತ್ ಬಟ್ಟೆಗಳನ್ನು ಒಗೆಯುವುದಕ್ಕೆ ಒಂದು ಮಿಕ್ಸಿ ಸಾಕು’ ಎಂದು ಗೇಲಿ ಮಾಡಿತ್ತು. ಆ ಪತ್ರಿಕೆಯ ನಡೆಗೆ ತಿಂಗಳ ನಂತರ ಮಾಧ್ಯಮದ ಸಂದರ್ಶನವೊಂದರಲ್ಲಿ ಉತ್ತರಿಸಿದ್ದ ಮಲ್ಲಿಕಾ ಶರಾವತ್, ‘ನಾನು ನನ್ನ ಬಟ್ಟೆಗಳನ್ನು ಒಗೆಯುವುದಕ್ಕೆ ಮಿಕ್ಸಿಯನ್ನು ಕೊಳ್ಳುವುದಕ್ಕೆ ಖರ್ಚು ಮಾಡುವ ಹಣದಲ್ಲಿ ಕಾರ್ಟೂನ್ ಬರೆದವನ ಹಣವೂ ಸೇರಿದೆ ಬಿಡಿ’ ಎಂದು ತಣ್ಣಗಾಗಿದ್ದಳು. ಹೀಗೆ ಸಂದರ್ಶನಗಳು ನಮ್ಮನ್ನು ಯಾರದೋ ಲೋಕಕ್ಕೆ ಸೆಳೆದು ಹೂತುಬಿಡುತ್ತವೆ. ನೋವಿನ ಬದುವಿನ ಹೊಂಡವನ್ನು ದಾಟಿಬರುವುದು ಸಲೀಸಲ್ಲವಲ್ಲ.

ಚಿಕ್ಕವಳಿದ್ದಾಗ ನನ್ನ ಅಮ್ಮ ನನ್ನನ್ನು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಂಡಿದ್ದಳು. ವಯಸ್ಸಿಗೆ ಬಂದು ಸಿನಿಮಾದಲ್ಲಿ ಬೆಳೆಯುತ್ತಿರುವಾಗ ಎಂ.ಜಿ.ಆರ್ ನನ್ನನ್ನು ರೂಲ್ ಮಾಡಿದ್ದರು. ನನಗೆ ಅವಕಾಶ ದೊರೆತಿದ್ದರೆ ನಾನು ಒಬ್ಬ ಒಳ್ಳೆಯ ಸ್ಕೂಲ್ ಟೀಚರ್ ಆಗುತ್ತಿದ್ದೆ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಿಬಿಸಿ ವಾಹಿನಿಯಲ್ಲಿ ಹೇಳಿಕೊಂಡಿದ್ದರ ಅಸಲಿ ಅರ್ಥ ಏನಿರಬಹುದು ಎನ್ನುವುದನ್ನು ಆಲೋಚಿಸುತ್ತಿರುವಾಗಲೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದ್ದ ಸಂಗೀತ ನಿರ್ದೇಶಕ ಹಂಸಲೇಖಾ ”ನೋವುಗಳೇ ನನ್ನ ಸೃಜನಶೀಲತೆಯ ಮೂಲ, ಆ ಎಲ್ಲವನ್ನು ಹೊರಗಿಟ್ಟು ನಾನು ಏನು ಮಾಡಲಿ. ಸಾಧ್ಯವಿಲ್ಲ ಬರುವುದಕ್ಕೆ ಎಂದಿದ್ದರು”. ಹಂಸಲೇಖಾರ ಮಾತಿನ ನಿಜವಾದ ಅರ್ಥ ಏನಿರಬಹುದು ಎನ್ನುವುದೂ ಇಂದಿಗೂ ಕಾಡುತ್ತದೆ.

ಮನುಷ್ಯನೊಳಗಿನ ನಿಗೂಢಲೋಕ ತೆರೆದುಕೊಂಡಷ್ಟು ನಿಜಕ್ಕೂ ಗಾಢವಾಗಿರುತ್ತವೆ. ಹೀಗಾಗಿ ಯಾವುದೋ ಸಂದರ್ಶಗಳ ಮೂಲಕ ಏನನ್ನೋ ಹುಡುಕುತ್ತಿರುತ್ತೇನೆ. ಕೆಲವು ಸಿಕ್ಕುತ್ತವೆ. ಹಲವು ತಪ್ಪುತ್ತವೆ. ಮತ್ತೆ ಕೆಲವು ದಕ್ಕುತ್ತವೆ. ಇನ್ನೂ ಕೆಲವು ದೂರವೇ ಉಳಿದುಕೊಂಡಿರುತ್ತವೆ.

‍ಲೇಖಕರು avadhi

September 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sumangala GM

    ತುಂಬ ಚೆನ್ನಾಗಿ ಬರೆದಿದ್ದೀರಿ. ಓದಿಸಿದ್ದಕ್ಕೆ ಥ್ಯಾಂಕ್ಸ್!

    ಪ್ರತಿಕ್ರಿಯೆ
    • Gangadhar Kolgi

      ಉತ್ತಮ ಬರಹ, ತುಂಬಾ ಕಾಲ ಕಾಡುವಂಥದ್ದು, ವಂದನೆಗಳು

      ಪ್ರತಿಕ್ರಿಯೆ
  2. T S SHRAVANA KUMARI

    ನಿಜ, ಸಂದರ್ಶನಗಳು ತೆರೆದು ತೋರುವುದೇನು?!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: