ಸಂತೆಯ ಸರಕಾಗದೇ ಉಳಿದ ಗಟ್ಟಿ ಕಾಳುಗಳು

d-s-ramaswamy

ಡಿ.ಎಸ್.ರಾಮಸ್ವಾಮಿ

 

ನೆಪಕ್ಕೆ ಮಾತ್ರ ಮುಗುಳ್ನಗುವುದಿಲ್ಲ ನಾವು

ನಗುತ್ತಲೇ ಇರುತ್ತೇವೆ, ಬೆದರುತ್ತದೆ ಸಾವೂ

 

ತಡಕಾಡುತ್ತೇವೆ ನಿಮ್ಮಲ್ಲಿ ಅಂತರ್ಜಲದ ತಾವು

ತಡಬಡಾಯಿಸಬೇಕು ನೋಡಿಕೊಂಡು ನಿಮ್ಮನ್ನೇ ನೀವು

ಇವು ಮಮತಾ ಅರಸೀಕೆರೆ ಅವರ  ‘ಸಂತೆ ಸರಕು’ ಸಂಕಲನದ ‘ ಕೊಲ್ಲದಿರಲಿ ಹಗೆ’ ಕವಿತೆಯ ಸಾಲುಗಳು. ಮೇಲ್ನೋಟಕ್ಕೆ ಅಂತ್ಯಪ್ರಾಸದ ಸಾಧಾರಣ ರಿದಂ ಕಂಡರೂ ಪದ್ಯದ ಆಂತರ್ಯದಲ್ಲಿ ಅಡಗಿರುವ ಆಶಯ  ಮಾನವೀಯವಾದದ್ದು. ಮಮತಾ ಅರಸೀಕೆರೆ ಸಾಮಾಜಿಕ ಜಾಲತಾಣಗಳಲ್ಲಿ ಚಿರಪರಿಚಿತ ಹೆಸರು. ಸಂಘಟನೆ, ಕಮ್ಮಟ, ತಿರುಗಾಟ, ಕವಿಗೋಷ್ಠಿ ಎಂದು ಊರೂರು ತಿರುಗುತ್ತಲೇ ಇರುವ ಮಮತಾ ಅದು ಯಾವಾಗ ಈ ಪದ್ಯಗಳನ್ನು ಬರೆಯುವಷ್ಟು ವ್ಯವಧಾನವನ್ನು ಇಟ್ಟುಕೊಂಡಿದ್ದರೋ ಆಶ್ಚರ್ಯವಾಗುತ್ತಿದೆ.ಏಕೆಂದರೆ ಇಲ್ಲದ ಉಸಾಬರಿಯಲ್ಲೇ ಸದಾ ನಿರತವಾಗುವ ಮನಸ್ಸಿಗೆ ಕವಿತೆ ಕಟ್ಟಲು ಧ್ಯಾನಿಸಲು ಅವಕಾಶವಾದರೂ ಎಲ್ಲಿರುತ್ತದೆ. ಆದರೆ ಅದನ್ನು ಆಗುಗೊಳಿಸಿ ಮಮತಾ ಆಶ್ಚರ್ಯ ಅಸೂಯೆಗಳನ್ನು ಹುಟ್ಟಿಸಿದ್ದಾರೆ.

mamata arasikereಸಂಕಲನದ ಶೀರ್ಷಿಕೆ ” ಸಂತೆ ಸರಕು” ಅನ್ನುವ ಪದಗುಚ್ಛ  ವರ್ತಮಾನದ ಸಂದರ್ಭದಲ್ಲಿ ಮುಖ್ಯವಾಗಿ ಕಾಣುತ್ತಿದೆ. ಇಡೀ ಜಗತ್ತೇ ಒಂದು ಸಂತೆಯಾಗಿರುವ ಸಂದರ್ಭವಿದು. ಮೊದಲೆಲ್ಲ ಸರಕುಗಳನ್ನು ಕೊಳ್ಳಲೋ ಇಲ್ಲ ಮಾರಲೋ ಸಂತೆಯೆಂಬುದು ಅವಕಾಶವಾಗಿತ್ತು. ಆದರೆ ಸದ್ಯದ ವರ್ತಮಾನದಲ್ಲಿ ಸಂತೆಯೇ ಒಂದು ಸರಕಾಗಿ ಮಾರ್ಪಟ್ಟಿರುವ ಸನ್ನಿವೇಶದಲ್ಲಿ  ಕೊಳ್ಳುಬಾಕತನವನ್ನೇ ಬಂಡವಾಳ ಮಾಡಿಕೊಂಡಿರುವ ಬಹು ರಾಷ್ಠ್ರೀಯ  ಕಂಪನಿಗಳು ಮಾಲ್ ಸಂಸ್ಕೃತಿಯನ್ನು ಹೇರಿ ಮೂಲ ವಿಸ್ಮಯಗಳನ್ನೇ ನಾಶಪಡಿಸಿರುವ ಕಾಲವಿದು. ಇಂಥ ಸಂದರ್ಭಗಳಿಗೆ ನಮ್ಮ ಲೇಖಕರು ಕವಿಗಳು ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಲೋಕ ಗಮನಿಸುತ್ತಿರುತ್ತದೆ. ಲೋಕದ ಈ ಗಮನಿಸುವಿಕೆಯನ್ನು ಅರಿತಿರುವ ಮಮತಾ ತಮ್ಮ ಈ ಸಂಕಲನದುದ್ದಕ್ಕೂ ಲೋಕ ಸಂಗತಿಗಳಿಗೆ ತಮ್ಮ ಟಿಪ್ಪಣಿಯನ್ನು ಕವಿತೆಯ ಮಾಧ್ಯಮದಲ್ಲಿ ಸ್ಪಂದಿಸಿದ್ದಾರೆ.

ನವೋದಯದ ಲಯ ಲಯವಾಗಿ, ನವ್ಯದ ಪ್ರತಿಮೆಗಳೆಲ್ಲ ಧೂಳು ಹಿಡಿದು, ಬಂಡಾಯದ ಧ್ವನಿಗಳು ಗುನುಗುಗಳಾಗಿರುವ ಸದ್ಯದ ಪದ್ಯಕ್ಕೆ ಅಂತರಂಗದ ಅನ್ನಿಸಿಕೆಗಳೇ ವರ್ತಮಾನದ ಕಾವ್ಯದ ಹಾದಿಗಳು. ಇದನ್ನು ದೈನಿಕಗಳು ಪ್ರಕಟಿಸುತ್ತಿರುವ ಭಾನುವಾರದ ಸಂಚಿಕೆಗಳಲ್ಲಿ, ಬ್ಲಾಗು, ಫ಼ೇಸ್ ಬುಕ್, ವಾಟ್ಸ್ ಯಾಪ್ ಗಳಲ್ಲಿ ಕಾಣಬಹುದು.

ಮಮತಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವಿಹರಿಸುತ್ತಲೇ ಇರುವವರಾದ್ದರಿಂದ ಸದ್ಯದ ಪದ್ಯದ ಹಾದಿ ಅವರಿಗೆ ಸುಲಭದಲ್ಲಿ ಒಲಿದಿದೆ. ಸಂಕಲನದಲ್ಲಿರುವ ನಲವತ್ತು ರಚನೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ರಚನೆಗಳನ್ನು ಕವಿತೆಗಳೆನ್ನಲು ಅಡ್ಡಿಯೇನಿಲ್ಲ. ಏಕೆಂದರೆ ಗದ್ಯವನ್ನೇ ತುಂಡಾಗಿಸಿ ಪದ್ಯವೆಂದು ಹರಡುತ್ತಿರುವವರ ನಡುವೆ ಈ ಯುವ ಕವಯತ್ರಿಯ ಸಾಲುಗಳು ನಿಜ ಕಾವ್ಯವಾಗಿ ಅರಳಿರುವುದು ಹೆಚ್ಚುಗಾರಿಕೆಯೇ.

ಕಾಲ ಬಂಡಿಯ / ಕೀಲಿಲ್ಲದ ಚಕ್ರ / ಅಡ್ಡಾದಿಡ್ಡಿ ಸಾಗುವ / ಪಥಕೆ ಗುರಿ / ತಲುಪುವ / ಭರವಸೆ ಕಡಿಮೆ  (ಅರ್ಥವಾಗದ್ದು ಕ್ಷೇಮವೇ ಇರಬೇಕು) ಎನ್ನುವ ಸಾಲುಗಳು ಈಕೆ ಬದುಕನ್ನು ಧ್ಯಾನಿಸುತ್ತಿದ್ದಾಳೆ ಮತ್ತು ಲೋಕ ಜ್ಞಾನದ ಅರಿವಿನಲ್ಲೇ ಬದುಕು ಸಾಗಿಸುತ್ತಿದ್ದಾಳೆ ಅನ್ನುವುದರ ಕುರುಹಾಗಿ ಕಂಡರೆ ನೋಡೆ ಸಖಿ / ಕುಸಿದು ಬಿದ್ದಾಗಲೆಲ್ಲ / ಎತ್ತಲು ಹತ್ತಾರು ಕೈಗಳು / ಜೊತೆಗೆ ಹಿರಿಮೆ / ಗಿಟ್ಟಿಸಿಕೊಂಡ ಅವತಾರಗಳು (ಅವತಾರಗಳು) ಸೂಕ್ಷ್ಮವಾಗಿ ಪುರುಷ ಅಹಂಕಾರವನ್ನು ಪ್ರಶ್ನಿಸಿದ ಎಚ್ಚರದ ಸಾಲುಗಳಾಗಿವೆ. ‘ ದೀಪ ಮತ್ತು ಕಣಿವೆ ಸೀಳು’ ‘ ಲಹರಿ’ ತಹತಹಿಕೆ’ ‘ ನನ್ನದೀ ಸಮಯ’ ಕವಿತೆಗಳಾಗಿ ಗಮನ ಸೆಳೆಯುತ್ತವೆ. ಕೊಲೆಯೂ ಒಂದು ಕಲೆ- ಈ ಸಂಕಲನದ ಬಹುಮುಖ್ಯ ಪದ್ಯ. ಫೆಮಿನಿಸಂನ್ನು ಹೊಸ ರೀತಿಯಲ್ಲಿ ಇಲ್ಲಿ ಕವಯತ್ರಿ ಪ್ರಕಟಿಸಿದ್ದಾರೆ. ತಪ್ಪಿಸಿಕೊಳ್ಳಲು ನೆವಗಳಿರುವಂತೆಯೇ ಕೊಲ್ಲಲೂ ಸಾಕಷ್ಟು ತರ್ಕಗಳಿವೆಯೆಂದು ಈಕೆ ಪ್ರತಿಪಾದಿಸಿದ್ದಾರೆ. ದೀಪಾವಳಿಯ ಬೆರಗಿನಲ್ಲಿ ‘ಸಾಲು ಹಣತೆಗಳು’ ಪದ್ಯದ ಕೆಲವು ಸಾಲುಗಳನ್ನಿಲ್ಲಿ ಪರಿಶೀಲಿಸಬಹುದು.

ಪುಟ್ಟ ಹಣತೆಗಳಿಂದಾಗಿ

ಕಾಯುವ ಕ್ಷಣ

ಕಿರಿದೆನ್ನಿಸುತ್ತದೆ

ಮತ್ತೊಮ್ಮೆ ತೈಲ ಬೇಕು

ಬತ್ತಿಯೂ ಬೇಕು

ಬೇಡಿಕೆ ಹಿರಿದೆನ್ನಿಸುತ್ತದೆ

ಗಾಢ ಪ್ರಕಾಶಕ್ಕಲ್ಲ

ಬೆಳಕು ಮಿಂಚಿದರೆ ಸಾಕು

ನಿನ್ನ ಕಣ್ಗಳಲ್ಲಿ

ಅವರಿವರಲ್ಲಿ

ಅನಂತರ ಒಂದು

ಮಿಂಚುಹುಳು

ಕಾಣಿಸಿದರೂ ಸಾಕು

ಇನ್ನೊಂದು ಕವಿತೆ “ಹತ್ಯಾಚಾರ” ಸುರುವಾಗುವುದು ಹೀಗೆ-

ಆಕೆ ಕಿಟಾರನೆ ಕಿರುಚುತ್ತಾಳೆ

ಅಂಗಲಾಚುತ್ತಾಳೆ

ಕುದುರೆಯೇರಿ ಬರುವುದಿಲ್ಲ

ರಾಜಕುಮಾರ ರಕ್ಷಣೆಗೆ

ಕೃಷ್ಣ ನೆನಪಾಗುತ್ತಾನೆ

ತಕ್ಷಣಕ್ಕೆ

ಅಕ್ಷಯ ವಸ್ತ್ರ ಸುಳ್ಳೆನಿಸಿಬಿಡುತ್ತದೆ

ಆ ಕ್ಷಣಕ್ಕೆ

ನಿಜಕ್ಕೂ ಇಲ್ಲಿ ಕವಯತ್ರಿ ಪರಂಪರೆಯನ್ನು ನೆನೆಯುತ್ತಲೇ ನಿರಂತರ ನಡೆಯುತ್ತಿರುವ ಹೆಣ್ಣಿನ ಮೇಲಿನ ಅತ್ಯಾಚಾರವನ್ನು ಹೇಳುತ್ತಲೇ

ಹುರಿದು ಮುಕ್ಕುತ್ತಿವೆ

ಮೃಗಗಳು

ಭೂಮಿ ಬಗೆಯಲು

ಬಳಕೆಯಾಗುತ್ತಿವೆ

ಹಾರೆ ಪಿಕಾಸಿಗಳು

ವ್ಯರ್ಥ ಹೋರಾಟ ಸಾಗಿದೆ.

ಎಂದು ಮುಂದುವರಿಸುವಾಗ ‘ಗಂಡುತನ’ ತಲೆತಗ್ಗಿಸಬೇಕು

“ನೀನಿರುವುದು ಬೇಡ” ಸಂಕಲನದ ಮುಖ್ಯ ಪದ್ಯಗಳಲ್ಲೊಂದು ಎನ್ನುವ ತೀರ್ಮಾನಕ್ಕೆ ಬರಲು ಕಾರಣ:

ನನ್ನ ಪದ್ಯದ ಪದಗಳಲ್ಲಿ

ನೀನಿರುವುದು ಬೇಡ

ಪದಗಳಿಗೆ ನೋವಾದೀತು

ನನ್ನ ಹಾಡಿನಲ್ಲಿಯೂ ಬೇಡ

ಹದ ತಪ್ಪೀತು

ಸಾಮಾನ್ಯ ಹೆಣ್ಣೊಬ್ಬಳು ಗಂಡಿನ ಮೇಲಿನ ಸಿಟ್ಟನ್ನು ಹೀಗೆ ಕಾರಿಕೊಳ್ಳುತ್ತಿದ್ದಾಳೆಂದು ಅಂದುಕೊಂಡು ಮುಂದುವರಿದರೆ

ಚಿತ್ತದ ಚಿತ್ರವಾಗುವುದು ಬೇಡ

ರಂಗೋಲಿ ಅಳಿಸಿಹೋದೀತು

ಭಾವ ಕೋಶದಲಿ

ನಿನ್ನ ನೆನಪುಗಳ ಮೆರವಣಿಗೆಗೆ

ಅಂಗಳ ಮೈಲಿಗೆಯಾದೀತು

ಎನ್ನುವ ದಾಷ್ಟ್ಯ ತೋರುತ್ತಾರೆ. ಮುಂದುವರಿದಂತೆ

ಹಾದಿಯಲಿ ಹೆಜ್ಜೆ ಗುರುತು ಬೇಡ

ಗೆಜ್ಜೆ ಸದ್ದು ಕೇಳದಾದೀತು

ನಾ ನಿನ್ನ ಹಿಂಬಾಲಿಸುವ

ಹಂಬಲ ಬೇಡ

ಅಕ್ಕನ ಕಾಂಬ ಗುರಿ

ಮಾಸಿಹೋದೀತು

ಅನ್ನುವಲ್ಲಿಗೆ ಈ ಕವಯತ್ರಿ ನಡೆಯಲು ಬಯಸಿರುವ ಹಾದಿ ಸ್ಪಷ್ಟವಾಗಿ ಕಾಣಿಸಿ ಓದುಗ ತಲೆದೂಗುತ್ತಾನೆ.

ಮೊದಲ ಸಂಕಲನದ ಮೂಲಕವೇ ಸಾಕಷ್ಟು ಭರವಸೆ ಮೂಡಿಸಿರುವ ಮಮತಾ ತಮ್ಮ ತಿರುಗಾಟ, ಸಂಘಟನೆ, ನಾಟಕ ಪ್ರದರ್ಶನಗಳ ನಡುವೆ ಕೊಂಚ ಬಿಡುವು ಮಾಡಿಕೊಂಡು ತಮ್ಮ ಅನುಭವಗಳಿಗೇ ಕಿವಿ ಕೊಟ್ಟಲ್ಲಿ ಕಾವ್ಯದ ಹಲವು ಆಯಾಮಗಳು ತಮಗೆ ತಾವೇ ಹೊಳೆದಾವು ಮತ್ತು ಕವನ ರಚನೆಗೆ ಅಗತ್ಯವಿರುವ ಸ್ವೋಪಜ್ಞತೆ ಮತ್ತು ಪ್ರತಿಮೆ ರೂಪಕಗಳು ದಕ್ಕಿಯಾವು ಎನ್ನುವುದು ಈ ಸಂಕಲನದ ಮೊದಲ ಓದಿಗೆ ದಕ್ಕಿದ ಸಂಗತಿಗಳು.

‍ಲೇಖಕರು Admin

October 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: