ಸಂಚಾರಿ ಥಿಯೇಟರ್ ಈ ಬಾರಿಯ ಮಕ್ಕಳ ಶಿಬಿರದಲ್ಲಿ ನಾಟಕವೊಂದನ್ನು ಶಿಬಿರದ ಮುಕ್ತಾಯಕ್ಕೆ ಸಿದ್ಧಪಡಿಸಲಿದೆ. ಈ ನಾಟಕವನ್ನು ನಮ್ಮವರೇ ಆದ ಚಂದ್ರಕೀರ್ತಿ ನಿರ್ದೇಶಿಸುತ್ತಿದ್ದಾರೆ. ಚಂದ್ರಕೀರ್ತಿ ಪ್ರೇಮಾಕಾರಂತರ “ಬೆನಕ ಮಕ್ಕಳ ನಾಟಕ ಕೇಂದ್ರ”ದ ಕೂಸು. ಬಾಲ್ಯದಲ್ಲಿಯೇ ರಂಗಭೂಮಿಯತ್ತ ಮುಖ ಮಾಡಿದ ಈ ಹುಡುಗ ಈಗ ಇಲ್ಲೇ ನೆಲೆ ಕಂಡುಕೊಳ್ಳಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾನೆ.
“ಸಿಂದಬಾದ್” ನಾಟಕದ ಮೂಲಕ ಪಾದಾರ್ಪಣೆ ಮಾಡಿ, ಅಳಿಲು ರಾಮಾಯಣ, ಕಕೇಶಿಯನ್ ಚಾಕ್ ಸರ್ಕಲ್, ಹುಚ್ಚು ದೊರೆ ಮತ್ತು ಮೂವರು ಮಕ್ಕಳು, ಬೊಮ್ಮನ ಹಳ್ಳಿಯ ಕಿಂದರಿ ಜೋಗಿ, ಮಾಮಾಮೋಶಿ ಮುಂತಾದ ಮಕ್ಕಳ ನಾಟಕಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಬೆಳೆದ ಚಂದ್ರಕೀರ್ತಿ ನಂತರ ಬೆನಕ, ಕ್ರಿಯೇಟೀವ್ ಥಿಯೇಟರ್, ಸಮುದಾಯ ತಂಡದ ನಾಟಕಗಳಲ್ಲೂ ಅಭಿನಯಿಸುತ್ತಾ, ಸಂಚಾರಿ ಥಿಯೇಟರ್ ನ ಎಲ್ಲಾ ನಾಟಕಗಳಲ್ಲೂ ನಟನಾಗಿ, ವಿನ್ಯಾಸಗಾರನಾಗಿ, ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾರೆ.

ಅರಹಂತ, ನರಿಗಳಿಗೇಕೆ ಕೋಡಿಲ್ಲ, ಶ್ರೀದೇವಿ ಮಹಾತ್ಮೆ, ನಾಟಕಗಳಲ್ಲಿ ನಟನಾಗಿ, ಕಮಲಮಣಿ ಕಾಮಿಡಿ ಕಲ್ಯಾಣ ನಾಟಕಕ್ಕೆ ವಸ್ತ್ರ ವಿನ್ಯಾಸಗಾರನಾಗಿ, ವ್ಯಾನಿಟಿ ಬ್ಯಾಗ್ ನಾಟಕಕ್ಕೆ ತಂತ್ರಜ್ಞರಾಗಿ ಕೆಲಸ ಮಾಡಿರುವ ಕೀರ್ತಿ ರಂಗಭೂಮಿಯ ಚಟುವಟಿಕೆಗಳ ಪ್ರಚಾರದ ಕೆಲಸಗಳಿಗೆ ಯಾವಾಗಲೂ ಹೊಸ ದಾರಿ ಹುಡುಕುವ ಉತ್ಸಾಹ ಇಟ್ಟುಕೊಂಡಿರುತ್ತಾರೆ. ಏನಾದರೂ ಸರಿ ಹೊಸದಾಗಿ ಮಾಡಬೇಕು ಎಂದು ಚಡಪಡಿಸುತ್ತಲೇ ಚಂದ್ರಕೀರ್ತಿ ಶಾಲೆಗಳಲ್ಲಿ ಮಕ್ಕಳಿಗೆ ರಂಗಭೂಮಿಯನ್ನು ಕಲಿಸುವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಸಂಚಾರಿ ಮಕ್ಕಳಿಗೆ ನಾಟಕ ಕಲಿಸುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಆಲ್ ದಿ ಬೆಸ್ಟ್ ಕೀರ್ತಿ!
ಸಂಚಾರಿ ಥಿಯೇಟರ್ ನಲ್ಲಿ ಚಂದ್ರಕೀರ್ತಿ
ನಿಮಗೆ ಇವೂ ಇಷ್ಟವಾಗಬಹುದು…





ಒಳ್ಳೆಯದಾಗಿ ಚಂದ್ರ ಕೀರ್ತಿ…