ಗೋಪಾಲ ವಾಜಪೇಯಿ ಕಾಲಂ : 'ಆಗಮನ'ದಿಂದ 'ಹಣ್ಣೆಲೆ'ಯ ತನಕ…

ಸುಮ್ಮನೇ ನೆನಪುಗಳು – 44

1980ರ ದಶಕ ಕನ್ನಡದ ಹವ್ಯಾಸಿ ರಂಗಭೂಮಿಯ ಮಟ್ಟಿಗೆ ನಿಜಕ್ಕೂ ‘ಸಂಭ್ರಮದ ಶ್ರಾವಣ.’ ಆಗ ನಡೆದಷ್ಟು ಚಟುವಟಿಕೆಗಳು ಹಿಂದೂ ನಡೆದಿರಲಿಲ್ಲ, ಮುಂದೆಯೂ ನಡೆದವೆಂದು ಹೇಳಲು ಆಗದು. ಅದಾಗಲೇ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರ ಜೊತೆ ಸೇರಿ, ‘ಎನ್ನೆಸ್ಡೀ’, ‘ನೀನಾಸಂ’ಗಳಿಂದ ದಂಡಿಯಾಗಿ ಬಂದ ಪ್ರತಿಭಾವಂತರು ನಾಡಿನಾದ್ಯಂತ ಒಂದು ರೀತಿಯ ಹೊಸ ವಾತಾವರಣವನ್ನೇ ಸೃಷ್ಟಿಸಿಟ್ಟರು. ಹಿಂದೆಲ್ಲ ಕೇವಲ ಶಿಕ್ಷಕರಿಗೆ ಸೀಮಿತವಾಗಿದ್ದ ‘ರಂಗ ತರಬೇತಿ ಶಿಬಿರ’ಗಳು ಈಗ ಎಲ್ಲರಿಗಾಗಿ ನಡೆಯತೊಡಗಿದವು. ಗ್ರಾಮೀಣ ರಂಗಾಸಕ್ತರಿಗೆ ಆಧುನಿಕ ರಂಗಭೂಮಿಯ ಪರಿಚಯ, ಮತ್ತು, ನಗರ ಪ್ರದೇಶಗಳ ರಂಗಕರ್ಮಿಗಳಿಗೆ ಜಾನಪದ ರಂಗಭೂಮಿ ಹಾಗೂ ರಂಗತಂತ್ರಗಳ ಪರಿಚಯದಂಥ ಮಹತ್ವದ ಕೆಲಸ ನಡೆಯತೊಡಗಿದ್ದು ಆಗಲೇ. ಜಾನಪದ ತಂತ್ರಗಳೊಂದಿಗೆ ಆಧುನಿಕ ಸೌಲಭ್ಯ ತಂತ್ರಗಳನ್ನು ಮೇಳೈಸುವ ಪ್ರಯೋಗಗಳು ಶುರುವಾದವು. ಈ ಕಾರಣದಿಂದಾಗಿ ನಾಟಕ ರಚನೆಯ ತಂತ್ರಗಳೂ ಹೊಸ ಹಾದಿ ಹಿಡಿದವು. ಬರೆಯುವವರು ಹೊಸ ಅರಿವು ಮೂಡಿಸಿಕೊಂಡರು. ರಂಗಾಸಕ್ತರಿಗೆ ನಾಟಕ ಓದುವುದು, ಅದರ ಬಗ್ಗೆ ಚರ್ಚಿಸುವುದು ಮುಂತಾದವುಗಳೆಲ್ಲ ಪ್ರಯೋಗೇತರ ಚಟುವಟಿಕೆ ಎನಿಸಿದವು. ನೇಪಥ್ಯದ ಬಗ್ಗೆ ಅರಿವು ಮೂಡಿತು. ಕೆಲವರು ಅದರಲ್ಲೇ ಆಸಕ್ತಿ ಹೆಚ್ಚಿಸಿಕೊಂಡರು.
ಈ ರಂಗ ತರಬೇತಿ ಶಿಬಿರಗಳು ಹೆಚ್ಚಾದಂತೆಲ್ಲ ಹೊಸ ನಾಟಕಗಳ ರಚನೆಗೆ ಹೆಚ್ಚು ಇಂಬು ದೊರೆಯಿತು. ನಮ್ಮಂಥ ಕೆಲವು ಸಮಾನ ಮನಸ್ಕರು, ಸಮ ವಯಸ್ಕರು ಒಂದು ಕೈ ನೋಡಿಯೇ ಬಿಡೋಣ ಎಂದು ನಾಟಕ ರಚನೆಗೆ ಮುಂದಾದದ್ದು ಆಗಲೇ. ಕನ್ನಡದ್ದೇ ನೆಲದ ಮೂಲ ನಾಟಕಗಳು, ಅನ್ಯ ಭಾಷೀಯ, ಅನ್ಯ ದೇಶೀಯ ನಾಟಕಗಳ ಅನುವಾದಗಳು, ಮತ್ತು ಅನುವಾದ ಎನ್ನಿಸದಂತೆ ನಮ್ಮ ನೆಲದ ಗುಣಕ್ಕೆ, ನಮ್ಮ ಬದುಕಿಗೆ, ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಮಾಡಿದ ರೂಪಾಂತರಗಳು… ಹೀಗೆಯೇ ನಾಟಕ ರಚಿಸುವವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.
ನನಗೆ 1978-80ರ ಅವಧಿಯಲ್ಲಿ ಒಂದೆರಡು ಬಂಗಾಲಿ ನಾಟಕಗಳನ್ನು ರೂಪಾಂತರ ಮಾಡಲು ಪ್ರೇರಣೆಯಾಗಿದ್ದವರು ಚಿತ್ತರಂಜನ ಚಟರ್ಜೀ. ನಾವಿಬ್ಬರೂ ನಿತ್ಯ ಸಂಜೆ ಎರಡು ತಾಸು ಒಂದೆಡೆ ಸೇರುತ್ತಿದ್ದೆವು. ಮೊದಲ ದಿನ ಅವರು ತಾವು ತಂದ ಬಂಗಾಲಿ ನಾಟಕದ ಕಥಾವಸ್ತು ಏನೆಂಬುದನ್ನು ವಿವರಿಸುತ್ತಿದ್ದರು. ಮರುದಿನ ಅದನ್ನು ಯಾವ ರೀತಿಯಲ್ಲಿ ಕನ್ನಡಕ್ಕೆ ರೂಪಾಂತರಿಸಬಹುದು ಎಂಬ ಬಗ್ಗೆ ಚರ್ಚೆ-ಚಿಂತನೆ. ‘ರೂಪಾಂತರ ಯಾಕೆ?’ ಅಂದರೆ ಬಂಗಾಲಿಗಳ ಹೆಸರುಗಳು, ಜೀವನ ವಿಧಾನ, ಅಲ್ಲಿಯ ರೀತಿ-ರಿವಾಜುಗಳು ಎಲ್ಲವೂ ನಮಗಿಂತ ಭಿನ್ನ. ಅವನ್ನು ಹಾಗೆಯೇ ಇಟ್ಟರೆ ನಮ್ಮ ಸಾಮಾನ್ಯ ಪ್ರೇಕ್ಷಕನಿಗೆ ಅನಗತ್ಯ ಗೊಂದಲ. ಒಂದು ವೇಳೆ ಆ ಇಡೀ ಕಥೆಯನ್ನು ಆಯಾ ಪಾತ್ರಗಳನ್ನು, ನಮ್ಮ ನೆಲದವೇ ಎಂಬಂತೆ ರೂಪಿಸಿದರೆ, ನಮ್ಮದೇ ಭಾಷೆಯನ್ನು ಆ ಪಾತ್ರಗಳು ಆಡುವಂತಾದರೆ ಆಗಿನ ಸೊಗಸೇ ಬೇರೆ. ನಾವಿಬ್ಬರೂ ಸೇರಿ ರೂಪಾಂತರಿಸಿದ್ದ ‘ಕನಸಿನೊಂದಿಗೆ…’ ಎಂಬ ನಾಟಕ (ಮೂಲದಲ್ಲಿ ಅದರ ಹೆಸರು ‘ಸ್ವಪ್ನ ನಿಯೇ’) ಹುಬ್ಬಳ್ಳಿಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆ ನಂತರ ಚಟರ್ಜೀಯವರ ನೆರವಿನೊಂದಿಗೆ ‘ಹೀಂಗೊಂದೂರಾಗ ಒಬ್ಬ ರಾಜಾ…’ ಎಂಬ ಹೆಸರಿನಲ್ಲಿ ರೂಪಾಂತರಿಸಿದ್ದು ಉತ್ಪಲ್ ದತ್ತರ ‘ಎಬಾರ್ ರಾಜಾರ್ ಪಾಲಾ…’ ನಾಟಕ. ಆ ಎಲ್ಲ ರೂಪಾಂತರಗಳಿಗೂ ‘ಮೂಲ ಇಂಥವರದು’ ಎಂದು ಸ್ಪಷ್ಟವಾಗಿ ನಮೂದಿಸಿಯೇ ಮುಂದುವರಿಯುತ್ತಿದ್ದೆವು. ಅಷ್ಟೇ ಅಲ್ಲ, ಆಯಾ ಕೃತಿಗಳ ಮೂಲ ಲೇಖಕರು ಬದುಕಿದ್ದರೆ ಅವರಿಗೆ ರೂಪಾಂತರದ ವಿಚಾರ ತಿಳಿಸಿ, ಅನುಮತಿಯನ್ನೂ ಪಡೆದುಕೊಳ್ಳುತ್ತಿದ್ದೆವು. ಮುಂದೆ ಕಾರಣಾಂತರಗಳಿಂದ ಚಟರ್ಜೀಯವರ ತಂಡದಿಂದ ನಾವು ಹೊರಬರಬೇಕಾಗಿ ಬಂತು. ಆದರೂ ಚಟರ್ಜೀಯೊಂದಿಗಿನ ನಮ್ಮ ಸಂಬಂಧಕ್ಕೇನೂ ಚ್ಯುತಿ ಬರಲಿಲ್ಲ.
ನಾವು ಮೂವರು (ರಾಘವೇಂದ್ರ ಹುನಗುಂದ, ಸೇತುಮಾಧವ ಮಾನ್ವಿ ಮತ್ತು ನಾನು) ಹುಬ್ಬಳ್ಳಿಯಲ್ಲಿ ‘ಅಭಿನಯ ಭಾರತಿ’ಯನ್ನು ಕಟ್ಟಿದೆವಲ್ಲ 1981ರಲ್ಲಿ… ಆ ಮೇಲೆ ನಿರಂತರವಾಗಿ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲೇಬೇಕು… ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ನಾವೇ ಮಾಡಿಕೊಳ್ಳಬೇಕು… ಅದು ಪರಸ್ಪರ ಸಹಕಾರದಿಂದ ಇನ್ನಷ್ಟು ಹಗುರಾಗುತ್ತದೆ ಎಂಬುದು ಗೊತ್ತಾಗಲು ಬಹಳ ಸಮಯ ಬೇಕಾಗಲಿಲ್ಲ. ಸಮೀಪದ ಊರುಗಳಲ್ಲಿ ಎಲ್ಲಾದರೂ ನಾಟಕಗಳಿದ್ದರೆ ನಾನು ಮತ್ತು ಹುನಗುಂದ ತಪ್ಪದೇ ಹೋಗುತ್ತಿದ್ದೆವು. ಇದರಿಂದ ನಮಗೆ ದೊರೆತದ್ದು ಎಲ್ಲೆಡೆಯ ರಂಗ ಕರ್ಮಿಗಳ ಸ್ನೇಹಲಾಭ. ಹಾಗೆ ಪರಿಚಯವಾದವರೇ ಬೆಳಗಾವಿಯ ಗೆಳೆಯ ಶ್ರೀಪತಿ ಮಂಜನಬೈಲು. ಈಗ ನಮ್ಮಿಬ್ಬರ ಸ್ನೇಹಕ್ಕೆ ಬರೋಬ್ಬರಿ ಮೂರು ದಶಕಗಳ ವಯಸ್ಸು. ಇಬ್ಬರೂ ಏಕವಚನದ ಗೆಳೆಯರು.

ರಾಘವೇಂದ್ರ ಹುನಗುಂದ ಅವರಿಗೆ ಬೆಳಗಾವಿಗೆ ವರ್ಗವಾದಾಗ, ಅಲ್ಲಿ ಅವರು ಶ್ರೀಪತಿ ಮಂಜನಬೈಲು ಅವರ ‘ರಂಗಸಂಪದ’ ತಂಡದೊಂದಿಗೆ ಗುರುತಿಸಿಕೊಂಡರು. ಹುನಗುಂದ ಅವರಿಗೆ ಪ್ರಕಾಶ ಸಂಯೋಜನೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಆ ದಿಶೆಯಲ್ಲಿ ಸ್ವಪ್ರಯತ್ನದಿಂದ ಮುಂದುವರಿದು ಕೌಶಲವನ್ನು ಸಾಧಿಸಿದವರು ಅವರು. ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮತ್ತು ಗದಗುಗಳಲ್ಲಿ ಜಯತೀರ್ಥ ಜೋಶಿಯ ಯಾವುದೇ ನಾಟಕ ಇದ್ದರೂ ಅಲ್ಲಿ ರಾಘವೇಂದ್ರ ಹುನಗುಂದ ಅವರದೇ ಪ್ರಕಾಶ ಸಂಯೋಜನೆ. ಬೆಳಗಾವಿಯಲ್ಲಿ ಒಂದೆರಡು ಏಕಾಂಕ ನಾಟಕಗಳನ್ನೂ ಅವರು ನಿರ್ದೇಶಿಸಿದ್ದರು. ಕಥೆಗಳನ್ನು ನಾಟಕವಾಗಿ ರೂಪಾಂತರಿಸುವ ಅವರ ಜಾಣ್ಮೆ ನನಗೆ ಮೆಚ್ಚಿನದು. ಹಾಗೆ ಅವರು ರೂಪಾಂತರಿಸಿ ನಿರ್ದೆಶಿಸಿದ ಏಕಾಂಕ ‘ಭಗೀರಥ’. ನೀರಿನ ಸಮಸ್ಯೆಯ ಕುರಿತಾದದ್ದು.
ಏಕಾಂಕ ನಾಟಕ ಅಂದಕೂಡಲೇ ನನಗೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ‘ಮಾಮಾ ವರೇರಕರ್ ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ’ ನೆನಪಿಗೆ ಬರುತ್ತದೆ. ಐವತ್ತರವತ್ತು ಏಕಾಂಕಗಳು ಆ ಸ್ಪರ್ಧೆಗೆ ಬರುತ್ತಿದ್ದವಂತೆ. ಹತ್ತು ಹದಿನೈದು ದಿನಗಳ ವರೆಗೆ ಆ ಸ್ಪರ್ಧೆ ನಡೆದದ್ದೂ ಇದೆ.
‘ಮಾಮಾ ವರೇರಕರ್’ ಎಂದೇ ಖ್ಯಾತರಾಗಿದ್ದವರು ಬಿ. ವಿ. ವರೇರಕರ್. ಅವರು ಕಳೆದ ಶತಮಾನದ ಆದ್ಯ ಮರಾಠಿ ನಾಟಕಕಾರರಲ್ಲೊಬ್ಬರು. 1914ರಿಂದ ನಾಟಕ ಬರೆಯಲು ಆರಂಭಿಸಿ 1960ರ ವರೆಗೂ ಲೇಖನ ವ್ಯವಸಾಯವನ್ನು ಮುಂದುವರೆಸಿದವರು. 1923ರಲ್ಲಿ ಅವರು ಬರೆದ ‘ತುರಂಗಾಚ್ಯಾ ದಾರಾತ್’ (ಸೆರೆಮನೆಯ ಬಾಗಿಲಲ್ಲಿ), ಮತ್ತು 1927ರಲ್ಲಿ ಬರೆದ ‘ಸತ್ತ್ಯೇಚಾ ಗುಲಾಮ್’ (ಸತ್ತೆಯ ಗುಲಾಮ) ನಾಟಕಗಳು ನೋಡುಗರಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದಂಥವು. ಅಂಥ ಆದ್ಯ ನಾಟಕಕಾರನ ಹೆಸರಿನಲ್ಲಿ ನಡೆಯುವಂಥದು ‘ಮಾಮಾ ವರೇರಕರ್ ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ.’
ನಮ್ಮ ಹುನಗುಂದ ಒಂದೆರಡು ಬಾರಿ ಆ ಸ್ಪರ್ಧೆಯ ನಾಟಕಗಳನ್ನು ನೋಡಲು ಹೋಗಿದ್ದಾರೆ. ಮರಾಠಿಗರಲ್ಲಿರುವ ರಂಗಭೂಮಿಯ ಬಗೆಗಿನ ಪ್ರೀತಿ, ಶಿಸ್ತು, ಸಿದ್ಧತೆ ಮತ್ತು ಬದ್ಧತೆಗಳನ್ನು ಕಂಡು ಅವಾಕ್ಕಾಗಿದ್ದಾರೆ. ಮತ್ತು ಅಲ್ಲಿ ಆಡಲ್ಪಟ್ಟ ಏಕಾಂಕಗಳ ಪೈಕಿ ತಮಗೆ ಇಷ್ಟವಾದ ಒಂದೆರಡರ ಹಸ್ತಪ್ರತಿಯನ್ನು ಹಿಡಿದುಕೊಂಡು ಬಂದಿದ್ದಾರೆ. ‘ಓದಿ, ರೂಪಾಂತರ ಮಾಡ್ರಿ,’ ಎಂದು ನನಗೆ ಕೊಟ್ಟಿದ್ದಾರೆ. ಆ ಪೈಕಿ ಒಂದು – ‘ಚೀವೂ ತಾಯಿ, ಚೀವೂ ತಾಯಿ ದಾರ್ ಉಘಡ್…’ ನಿರುದ್ಯೋಗ ಸಮಸ್ಯೆಯನ್ನು ಕುರಿತ ಒಂದು ವಿಡಂಬನೆ. ಎಂಟೋ ಹತ್ತೋ ಪಾತ್ರಗಳು ಅಷ್ಟೇ. ನಾನದನ್ನು ‘ಗುಬ್ಬಕ್ಕಾ ಗುಬ್ಬಕ್ಕಾ ಬಾಗ್ಲಾ ತಗೀ…’ ಎಂಬುದಾಗಿ ರೂಪಾಂತರಿಸಿದೆ. ಅದರ ಹತ್ತೋ ಹನ್ನೆರಡೋ ಪ್ರಯೋಗಗಳು ಆದ ನೆನಪು. ಕಾಲೇಜಿನ ಆಟ-ಪಾಠಗಳೊಂದಿಗೆ ಶುರುವಾಗುವ ಈ ಏಕಾಂಕ ಕೊನೆ ಕೊನೆಗೆ ಗಂಭೀರವಾಗುತ್ತ ಸಾಗುತ್ತದೆ. ಕೊನೆಯಲ್ಲಂತೂ ಕಣ್ಣು ಒದ್ದೆಯಾಗುತ್ತದೆ.
ಆಮೇಲಾಮೇಲೆ ನನಗೆ ಮಿತ್ರ ತಂಡಗಳಿಂದ ನಾಟಕಗಳ ಅನುವಾದ ಇಲ್ಲವೇ ರೂಪಾಂತರಗಳ ಕೆಲಸವೇ ಬರತೊಡಗಿತು. ಗೆಳೆಯರ ವಿನಂತಿಯನ್ನು ತಳ್ಳಿ ಹಾಕುವಂತಿರಲಿಲ್ಲ. ಇನ್ನು ನಾವೇ ಕಟ್ಟಿದ ಹುಬ್ಬಳ್ಳಿಯ ‘ಅಭಿನಯ ಭಾರತಿ’ಯ ಮಟ್ಟಿಗಂತೂ ನಾನು ‘ಆಸ್ಥಾನ ಪಂಡಿತ’. ತಂಡ ಕೈಗೆತ್ತಿಕೊಳ್ಳುವ ಯಾರದೇ ಯಾವುದೇ ನಾಟಕವಿದ್ದರೂ ನಾನದನ್ನು ತಿದ್ದಿ ತೀಡಿ ನೇರ್ಪಡಿಸಿಕೊಡಬೇಕು.
1985ರಲ್ಲಿರಬೇಕು… ಜಯತೀರ್ಥ ಜೋಶಿ ನನಗೆ ರಶಿಯದ ಲೇಖಕ ನಾಟಕಕಾರ ನಿಕೊಲೋಯ್ ಗೊಗೊಲ್ ಬರೆದ ‘ದಿ ಗವರ್ನಮೆಂಟ್ ಇನಸ್ಪೆಕ್ಟರ್’ ಎಂಬ ನಾಟಕವನ್ನು ತಂದು ಕೊಟ್ಟು, ”ಇದನ್ನ ಇಲ್ಲೀದs ಯಾವುದಾದರೂ ಒಂದು ಮಹಾನಗರ ಪಾಲಿಕೆಯ ಹಿನ್ನೆಲೆ ಇಟಗೊಂಡು ನಾಟಕಾ ಬರದುಕೊಡ್ರಿ…” ಅಂತ ಹೇಳಿ ಅದ್ಯಾವುದೋ ಊರಿಗೆ ಹೋದರು. ಆತ ಅಲ್ಲಿಂದ ವಾಪಸ್ಸು ಬಂದ ಮೇಲೆ ಯಾವುದಾದರೂ ತಂಡಕ್ಕೆ ಅದನ್ನು ‘ಕೈಗೆತ್ತಿ’ಕೊಳ್ಳಬಹುದು ಎಂದುಕೊಂಡು ಓದಿಗೆ ಕೂತೆ.
ತಿಂಗಳೊಪ್ಪತ್ತಿನ ನಂತರ ಜೋಶಿ ವಾಪಸ್ಸು ಬಂದರಾದರೂ ಅದರ ಬಗ್ಗೆ ಚಕಾರವೆತ್ತಲಿಲ್ಲ. ನಾನು ಸುಮ್ಮನಾಗಿಬಿಟ್ಟೆ. ಆದರೆ ‘ನನ್ನೊಳಗೆ’ ಕೂತಿದ್ದ ಆ ನಾಟಕದ ವಸ್ತು ಒಂದೇ ಸಮನೆ ಹೊರಬರಲು ಹಾತೊರೆಯುತ್ತಿತ್ತು. ಹೀಗೇ ಮುಂದೊಮ್ಮೆ ಬೆಳಗಾವಿಗೆ ಹೋದಾಗ ಶ್ರೀಪತಿ ಮಂಜನಬೈಲು, ”ಒಂದ್ ಹೊಸಾ ನಾಟಕ ಬೇಕು. ಸಜೆಸ್ಟ್ ಮಾಡೋ ಗೆಳಿಯಾ…” ಅಂದ. ನಾನು ‘ದಿ ಗವರ್ನಮೆಂಟ್ ಇನಸ್ಪೆಕ್ಟರ್…’ ನಾಟಕದ ಬಗ್ಗೆ ಹೇಳಿದೆ. ಕಥೆ ಕೇಳಿದ ಕೂಡಲೇ,
”ಹೂಂ… ಎಲ್ಲೆದ? ಸ್ಕ್ರಿಪ್ಟ್ ಕೊಡು,” ಅಂತ ದುಂಬಾಲು ಬಿದ್ದ.
”ಇನ್ನೂ ಬರದಿಲ್ಲಾ,” ಅಂದೆ.
”ಲಗೂ ಬರೀಯಲಾ ಮತ್ತ…”
”ಮನ್ಯಾಗ ಕೂತು ಇಂಥಾವೆಲ್ಲಾ ಬರೀಲಿಕ್ಕೆ ಆಗೂದುಲ್ಲಾ… ಚಿಂಯ್ಯಾ ಪಿಂಯ್ಯಾ ಕಾಟ… ”
”ಹಾಂಗಿದ್ರ ಇಲ್ಲೇ ಬಂದು ಬಿಡು…”
ಆಯಿತು. ನಾನು ಬೆಳಗಾವಿಗೆ ಹೋಗಿ ನಾಟಕವನ್ನು ರೂಪಾಂತರ ಮಾಡಿಕೊಡುವುದು ಎಂದಾಯಿತು. ಆದರೆ ದಿನವೂ ಹುಬ್ಬಳ್ಳಿಯಿಂದ ಅಲ್ಲಿಗೆ ಹೋಗುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ… (ನಮ್ಮ ಕಚೇರಿ ಆಗಿನ್ನೂ ಶ್ಯಾಮರಾಯರ ಪೀಡೆಗೆ ಒಳಗಾಗಿರಲಿಲ್ಲ.) ಬೆಳಗಾವಿಗೆ ಹೋಗಿ ವಾಪಸ್ ಬರಲು ಕನಿಷ್ಠ ಐದಾರು ಗಂಟೆ ಬೇಕು. ಆದ್ದರಿಂದ, ಶನಿವಾರ ರಾತ್ರಿ ಬೆಳಗಾವಿ ಸೇರಿಕೊಳ್ಳುವುದು. ರವಿವಾರವಿಡೀ ಬರೆಯುತ್ತಲೇ ಇರುವುದು. ಸೋಮವಾರ ಬೆಳಗಿನಲ್ಲಿ ಸ್ನಾನ ತಿಂಡಿ ಮುಗಿಸಿ, ಹುಬ್ಬಳ್ಳಿ ತಲಪಿ, ನೇರವಾಗಿ ಕೆಲಸಕ್ಕೆ ಹೋಗುವುದು.

ಇನ್ನೊಂದು ಮಜವಾದ ಸಂಗತಿಯನ್ನು ನಿಮಗಿಲ್ಲಿ ಹೇಳಬೇಕು. ಶನಿವಾರ ರಾತ್ರಿ ನಾನು ಬೆಳಗಾವಿಗೆ ಹೋಗುತ್ತಿದ್ದೆನಲ್ಲ ; ಊಟ ಮುಗಿಸಿ ಬರೆಯಲು ಕೂತರೆ ಮಲಗುವುದು ಬೆಳಗಿನ ಮೂರೋ ನಾಲ್ಕೋ ಗಂಟೆಗೆ. ಮತ್ತೆ ಬೆಳಿಗ್ಗೆ ಎಂಟರ ಹೊತ್ತಿಗೆ ಎದ್ದು ಬೆಳಗಿನ ವಿಧಿಗಳನ್ನೆಲ್ಲ ಮುಗಿಸುವ ಹೊತ್ತಿಗೆ ಶ್ರೀಪತಿ ಒಂದು ಫ್ಲಾಸ್ಕ್ ತುಂಬಾ ಚಹ, ಹೊಟ್ಟೆ ತುಂಬುವಷ್ಟು ಉಪ್ಪಿಟ್ಟು, ಮತ್ತೊಂದಿಷ್ಟು ಕುರುಕಲು ತಿಂಡಿಯೊಂದಿಗೆ ಹಾಜರಾಗಬೇಕು. ಸ್ವಲ್ಪ ಹೊತ್ತು ಕೂತಿದ್ದು ನಂತರ ಹೊರಗಿನಿಂದ ಬಾಗಿಲಿಗೆ ಬೀಗ ಜಡಿದು ಹೋಗಿಬಿಡಬೇಕು. ಆತ ಮತ್ತೆ ಬರುವುದು ಮಧ್ಯಾಹ್ನ ಊಟದ ಹೊತ್ತಿಗೇನೇ.
ಒಂದು ರೀತಿ ನಾನಾಗಿಯೇ ವಿಧಿಸಿಕೊಂಡ ‘ಬಂಧನ’ದಲ್ಲಿದ್ದುಕೊಂಡು, ನಾಲ್ಕು ವಾರಗಳ ಕಾಲ ಬರೆದು ಮುಗಿಸಿದ ಮೇಲೆ, ಒಮ್ಮೆ ಸೋಮವಾರ, ಕಚೇರಿಗೆ ಯಾವುದೋ ಹಬ್ಬದ ರಜೆ ಬಂತು. ನಮಗೆ ನಾಟಕದವರಿಗೆ ಎಲ್ಲಿಯ ಹಬ್ಬ, ಎಲ್ಲಿಯ ಹರಿದಿನ? ಪ್ರಯೋಗದ ದಿನಗಳೇ ನಮ್ಮ ಪಾಲಿಗೆ ‘ಮಹಾ’ ಉತ್ಸವ. ಎರಡು ದಿನಗಳ ತನಕ ಕೂತ ಜಾಗ ಬಿಟ್ಟು ಸರಿಯದೇ ರೂಪಾಂತರದ ಮೊದಲ ಕರಡು ಪ್ರತಿಯನ್ನು ಬರೆದು ಮುಗಿಸಿದೆ. ಇನ್ನು ಅದನ್ನು ತಿದ್ದಿ, ಸೂಕ್ತ ಬದಲಾವಣೆಯೊಂದಿಗೆ ಪರಿಷ್ಕರಿಸುವ ಕೆಲಸ. ಅದಕ್ಕೆ ಮತ್ತೆರಡು ದಿನ ಬೇಕು. ಅದೂ ಆಯಿತು. ಪಕ್ಕಾ ಸ್ಕ್ರಿಪ್ಟ್ ಸಿದ್ಧವಾಯಿತು. ನಾನಿದಕ್ಕೆ ಕೊಟ್ಟ ಹೆಸರು ‘ಆಗಮನ…’ ಸಂಕ್ಷೇಪದಲ್ಲಿ ಅದರ ಕತೆಯನ್ನಿಷ್ಟು ಹೇಳಿಬಿಡುತ್ತೇನೆ.
ಆ ಊರಿಗೆ ಯಾವುದೇ ಹೊತ್ತಿನಲ್ಲೂ ಸಾಹೇಬರ ಆಗಮನವಾಗಬಹುದು ಎಂಬ ಸಂದೇಶ ಅಲ್ಲಿಯ ಮೇಯರ್ ಮತ್ತು ಆತನ ಸುತ್ತಲಿನ ಜನಕ್ಕೆ ನಡುಕ ಹುಟ್ಟಿಸುತ್ತದೆ. ಅವರೆಲ್ಲ ಮಹಾ ಭ್ರಷ್ಟರು. ಎಂಥ ಕಟ್ಟುನಿಟ್ಟಿನ ಸಾಹೇಬನನ್ನೂ ಬುಟ್ಟಿಯಲ್ಲಿ ಹಾಕಿಕೊಳ್ಳಬಲ್ಲೆವೆಂಬ ವಿಶ್ವಾಸದ ಭಂಡರು. ಅಂಥವರ ಎದೆಗಳಲ್ಲಿ ಈಗ ಅವಲಕ್ಕಿ ಕುಟ್ಟುವಿಕೆ ಶುರುವಾಗುತ್ತದೆ. ಬರುವ ಸಾಹೇಬ ಬಲು ಕೋಪಿಷ್ಠ. ಕಾನೂನು ಬಿಟ್ಟು ಆಚೀಚೆ ಸರಿಯುವಂಥವನಲ್ಲ. ಅಂಥವನನ್ನು ಹೇಗೆ ಒಲಿಸಿಕೊಳ್ಳುವುದು, ಹೇಗೆ ಓಲೈಸುವುದು ಎಂದೆಲ್ಲ ಅವರು ತಲೆಕೆಡಿಸಿಕೊಂಡು ಕೂತಿರುವಾಗ, ”ಸಾಹೇಬರ ಆಗಮನವಾಗಿದೆ…” ಎಂಬ ಸುದ್ದಿ ಹೊತ್ತು ತರುತ್ತಾರೆ ಖಂಡೇರಾಯ, ಬಂಡೇರಾಯ. ಅವರೆಲ್ಲರ ಜಂಘಾಬಲವೇ ಉಡುಗಿಹೋಗುತ್ತದೆ. ಮೇಯರ್ ಅವರಿಬ್ಬರನ್ನೂ ಕೇಳುತ್ತಾನೆ :
”ಹ್ಯಾಂಗ್ ಅನಸ್ತಾನ್ರೀ ಮನಶ್ಯಾ…?”
”ಅಬಾಬಾಬಾಬಾ… ಏನ್ ತೇಜಸ್ಸು…”
”ಭರ್ತೀ ವಯಸ್ಸು…”
”ನನಗೇನಾರ ಒಬ್ಬ ಮಗಳಿದ್ದಿದ್ರ ಅವರಿಗೇ ಕೊಡತಿದ್ದೆ ನೋಡ್ರಿ…”
”ಏ… ಖರೆ ಬಿಡ್ರಿ… ಹಂಗs ಇದ್ದಾರವ್ರು ಕಾಮಣ್ಣನಂಗ…”
ಅವರ ಮಾತು ಕೇಳಿ ಮೇಯರ್ ಹಣೆ ಹಣೆ ಬಡೆದುಕೊಳ್ಳುತ್ತಿದ್ದರೆ ಆತನ ಪತ್ನಿಗೆ ಬೇರೆಯದೇ ಯೋಚನೆ.
”ರೀ… ಹೋಗಿ ನೋಡಿಕೊಂಡ ಬರ್ರೀ ಆ ಸಾಹೇಬನ್ನ… ನಮ್ಮ ಮಗಳಿಗೆ ಯೋಗ್ಯ ಅನಿಸೀದ್ರ…”
ಮೇಯರ್ ಒಂದು ಕ್ಷಣ ಅವಾಕ್ಕಾಗುತ್ತಾನೆ. ಹೆಂಡತಿಯನ್ನು ಮೆಚ್ಚುಗೆಯಿಂದ ನೋಡುತ್ತಾನೆ.
”ಆತು… ಬರೇ ‘ನೋಡಿ’ಕೊಂಡ್ ಅಲ್ಲಾ, ‘ಮನವೊಲಿಸಿ’ ಕರಕೊಂಡs ಬರತೀನಿ…” ಎಂಬ ಆತ್ಮ ವಿಶ್ವಾಸದೊಂದಿಗೆ ತನ್ನವರ ಜತೆಗೂಡಿ ಹೊರಟುಬಿಡುತ್ತಾನೆ.

ಇದು ಒಂದು ‘ಮಿಸ್ಟೇಕನ್ ಐಡೆಂಟಿಟಿ’ಯ ಅವಾಂತರಗಳ ಕಥೆ. ಸಾಹೇಬನ ಹೆಸರಿನಲ್ಲಿ ಬಂದು ಲಾಭ ಮಾಡಿಕೊಂಡು ಹೋದವನ ಕಥೆ. ಇದು ‘ದಿ ಇನಸ್ಪೆಕ್ಟರ್ ಜನರಲ್…’ ಹೆಸರಿನ ಇಂಗ್ಲಿಷ್ ಚಿತ್ರವಾಗಿ ತೆರೆಕಂಡು ಹಲವು ದಶಕಗಳೇ ಕಳೆದಿವೆ. ಹಿಂದಿ ಚಿತ್ರರಂಗದಲ್ಲಿಯೂ ಈ ಕಥೆ ಅನೇಕ ಚಿತ್ರಗಳಿಗೆ ವಸ್ತುವಾಗಿದೆ. ಆ ಪೈಕಿ ಶ್ರೇಷ್ಠ ಉದಾಹರಣೆ ಎಂದರೆ ಬಸು ಚಟರ್ಜೀ ನಿರ್ದೇಶನದ ಅಮೋಲ್ ಪಾಲೇಕರ್ ಅಭಿನಯದ ‘ಚಿತ್ ಚೋರ್’. ರವೀಂದ್ರ ಜೈನ್ ಸಂಗೀತ ಮತ್ತು ಜೇಸುದಾಸ್ ಹಾಡುಗಳಿಂದಾಗಿ ಈ ಚಿತ್ರ ನಮ್ಮ ಮನದಲ್ಲಿ ಮನೆ ಮಾಡಿ ಕೂತುಬಿಟ್ಟಿದೆ. ಕನ್ನಡದಲ್ಲಿ ನಾಗತಿಹಳ್ಳಿ ಚಂದಶೇಖರ್ ಇದೇ ವಸ್ತುವನ್ನೇ ‘ಉಂಡೂ ಹೋದ ಕೊಂಡೂ ಹೋದ…’ ಎಂಬ ಚಿತ್ರವಾಗಿ ನಮಗೆ ನೀಡಿದರು. ಇನ್ನು ನಾಟಕವಾಗಿಯೂ ಇದು ಭಾರತೀಯ ಭಾಷೆಗಳಿಗೆ ರೂಪಾಂತರಗೊಂಡಿದೆ. ಮರಾಠಿಯಲ್ಲಿ ಇದು ‘ಅಮಲ್ದಾರ್’ ಎಂಬ ಹೆಸರಿನ ನಾಟಕವಾಗಿ ಇದು 1952ರಷ್ಟು ಹಿಂದೆಯೇ ರಂಗವನ್ನೇರಿದೆ. ಇದನ್ನು ರೂಪಾಂತರಿಸಿದವರು ಮರಾಠಿಯ ಖ್ಯಾತ ವಿಡಂಬನಕಾರ ಪು.ಲ. ದೇಶಪಾಂಡೆ. ಮರಾಠಿಯ ಇನ್ನೊಬ್ಬ ಮಹಾನ್ ನಟ ನೀಳೂ ಫುಲೆ ‘ಅಮಲ್ದಾರ್’ ನಾಟಕದಲ್ಲಿ ಮೇಯರ್ ಆಗಿ ಅಭಿನಯಿಸಿದರೆಂದು ನೆನಪು. ಇನ್ನು ಕನ್ನಡಕ್ಕೆ ಬಂದರೆ, ಹೆಗ್ಗೋಡಿನ ‘ನೀನಾಸಂ’ ತಂಡಕ್ಕೆ ಕೆ.ವಿ. ಅಕ್ಷರ ಇದನ್ನು ‘ಸಾಹೇಬರು ಬರುತ್ತಾರೆ…’ ಎಂಬ ಹೆಸರಿನ ನಾಟಕವಾಗಿ ಬರೆದು ನಿರ್ದೇಶಿಸಿ ಕಾಲು ಶತಮಾನ ಕಳೆದುಹೋಗಿದೆ.
ಬೆಳಗಾವಿಯ ‘ರಂಗಸಂಪದ’ ಕಲಾವಿದರೆದುರು ಒಂದು ಸಂಜೆ ನಾನು ‘ಆಗಮನ’ ನಾಟಕವನ್ನು ಓದಿದೆ. ಮರುದಿನದಿಂದಲೇ ಅದರ ತಾಲೀಮು ಶುರು ಮಾಡಲು ತಂಡದ ಪದಾಧಿಕಾರಿಗಳು ನಿರ್ಧರಿಸಿಬಿಟ್ಟರು. ನಿರ್ದೇಶನದ ಹೊಣೆಯನ್ನು ಹೆಗಲಿಗೇರಿಸಿಕೊಂಡವರು ಗೆಳೆಯ ಶ್ರೀಪತಿ ಮಂಜನಬೈಲು.
ಇನ್ನೂ ಒಂದು ವಿಷಯವನ್ನು ನಾನಿಲ್ಲಿ ನಿಮಗೆ ತಿಳಿಸಿಬಿಡುತ್ತೇನೆ : ಈ ನಾಟಕದಲ್ಲಿ ಮೇಯರ್ ಪಾತ್ರದಲ್ಲಿ ರಘುನಾಥ ನಾಡಿಗೇರ, ಮೇಯರ್ ಪತ್ನಿಯ ಪಾತ್ರದಲ್ಲಿ ಶ್ರೀಮತಿ ನಾಡಿಗೇರ ಮತ್ತು ಮಗಳ ಪಾತ್ರದಲ್ಲಿ ಕಿರುತೆರೆಯ ಕಲಾವಿದೆ ಮೇಘಾ ನಾಡಿಗೇರ ಅಭಿನಯಿಸಿದ್ದರು. ಬೆಳಗಾವಿಯ ‘ರಂಗಸಂಪದ’ ತಂಡ ರಾಜ್ಯದ ಒಳ ಹೊರಗೆ ಈ ನಾಟಕದ ಅನೇಕ ಪ್ರಯೋಗಗಳನ್ನು ನೀಡಿತು.
ಇದೇ ನಾಟಕವನ್ನು ಮುಂದೆ ಹುಬ್ಬಳ್ಳಿಯಲ್ಲಿ ನಡೆದ ‘ಸಪ್ತಮಂಡಲ ನಾಟಕೋತ್ಸವ-1986’ದ ಅಂಗವಾಗಿ ಹುಬ್ಬಳ್ಳಿಯ ‘ಅಭಿನಯ ಭಾರತಿ’ ನಿರ್ಮಿಸಿ ಪ್ರಯೋಗಿಸಿತು. ಈ ಪ್ರಯೋಗವನ್ನೂ ಶ್ರೀಪತಿ ಮಂಜನಬೈಲು ಅವರೇ ನಿರ್ದೇಶಿಸಿದ್ದರು. ಇದರಲ್ಲಿ ಮೇಯರ್ ಪಾತ್ರ ಮಾಡಿದ್ದವರು ರಜನೀಕಾಂತ್ ಹುನಗುಂದ ಎಂಬ ಅದ್ಭುತ ನಟ. ಹುಬ್ಬಳ್ಳಿಯ ಮೈಸೂರ್ ಕಿರ್ಲೊಸ್ಕರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ರಜನೀಕಾಂತ್ ಹುನಗುಂದ ಮೂಲತಃ ಒಬ್ಬ ಮರಾಠಿ ನಟ. ಆದರೆ ನಾವು ‘ತಾಮ್ರಪತ್ರ’ದ ಸಂದರ್ಭದಲ್ಲಿ ಅವರನ್ನು ಕನ್ನಡ ನಾಟಕಗಳಿಗೆ ಎಳೆದು ತಂದಿದ್ದೆವು. ಮಿತಭಾಷಿ. ಒಮ್ಮೆಲೇ ಪಾತ್ರದ ಆತ್ಮವನ್ನು ಪ್ರವೇಶಿಸಿಬಿಡಬಲ್ಲ ಸಾಮರ್ಥ್ಯ ಅವರದು. ‘ಆಗಮನ’ದ ಮೇಯರ್ ಅವರಾದರೆ, ನಾನು ಆತನ ಬಲಗೈಬಂಟರಲ್ಲೊಬ್ಬನಾದ ಬಂಡೇರಾಯನ ಪಾತ್ರದಲ್ಲಿ ಕಾಣಿಸಿಕೊಂಡೆ.

-೦-೦-೦-೦-೦-

ಮಾತು ಮಾತಿಗೆ ‘ಪ್ರಾದೇಶಿಕ ರಂಗಭೂಮಿ… ಪ್ರಾದೇಶಿಕ ರಂಗಭೂಮಿ’ ಎಂದೆನ್ನುತ್ತಿದ್ದ ಜಯತೀರ್ಥ ಜೋಶಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ನಾಟಕ ವಿಭಾಗದ ವಿಶೇಷಾಧಿಕಾರಿಯಾಗಿ ನೇಮಕಗೊಂಡರು. ಅವರು ಧಾರವಾಡದಿಂದ ಹೊರಡುವ ಮೊದಲು ಒಂದು ಸಣ್ಣ ಬೀಳ್ಕೊಡುಗೆ ಕೂಟ. ಆವತ್ತು ಕೊನೆಯ ವರೆಗೂ ಆಸಾಮಿ ಯಾಕೋ ನನ್ನಿಂದ ದೂರದೂರವೇ. ನಾನೇ ಬಳಿಗೆ ಹೋಗಿ, ”ಯಾಕ್ರೀ… ನನ್ನ ಮರತ್ರೇನು?” ಅಂತ ನಕ್ಕೆ. ಜೋಶಿ ಒಮ್ಮೆ ತೀಕ್ಷ್ಣವಾಗಿ ನೋಡಿ, ”ನಿಮ್ಮ ಬಗ್ಗೆ ಒಂದು ಅಸಮಾಧಾನ ಅದ…” ಅಂದರು.
”ಅಸಮಾಧಾನ ಯಾಕ ಅಂತ ಗೊತ್ತಾಗ್ಲಿಲ್ಲಾ…” ಅಂದೆ.
”ನನಗ ಬರದುಕೊಡ್ರಿ ಅಂತ ಕೊಟ್ರ, ನೀವು ಆ ನಾಟಕಾನ ಬ್ಯಾರೆಯವರಿಗೆ ಕೊಟ್ರಿ…” ಅಂತ ‘ಆಗಮನ’ದ ವಿಚಾರ ಎತ್ತಿದರು.
”ಓಹೋ… ಶ್ರೀಪತಿ ‘ಬ್ಯಾರೆ’ಯವರೇನು? ಗೊತ್ತಿದ್ದಿಲ್ಲ ಬಿಡ್ರಿ ನನಗ…” ಅಂತ ನಕ್ಕೆ.
”ಮತ್ತs ಅಲ್ಲೇನ್ರೀ…? ಎರಡು ಒಳ್ಳೇ ಸ್ಕ್ರಿಪ್ಟು ನನ್ನ ಕೈಯಿಂದ ತಪ್ಪಿ ಹೋದೂವಲ್ಲಾ…”
”ಎರಡು…? ಒಂದs ಅಲ್ಲೆನ್ರೀ…?”
”ಒಂದಲ್ಲಾ… ಎರಡು. ಆ ಜಿ. ಎಚ್. ರಾಘವೇಂದ್ರ ಅವರಿಗೆ ‘ಬಾಗ್ಲಾ ತಗೀರೆಪೋ ಬಾಗ್ಲಾ…’ ಕಥೀ ಹೇಳಿದೆ. ಅವರು ನಾಟಕಾ ಬರದ್ರು, ವಿಜಾಪುರಕ್ಕ ಕೊಟ್ರು. ಗೊಗೊಲ್ ನಾಟಕಾ ರೂಪಾಂತರಾ ಮಾಡ್ರಿ ಅಂತ ನಿಮಗ ಕೊಟ್ರ, ನೀವು ಅದನ್ನ ಗಪ್ ಚುಪ್ ಮಾಡಿ ಮುಗಿಸಿ ಬೆಳಗಾವಿಯವರಿಗೆ ಕೊಟ್ರಿ…”
”ಈಗಾರೇ ಏನಾತ್ ಬಿಡ್ರಿ. ಮುಗದs ಹೋತೇನು ಇಲ್ಲಿಗೆ ನಮ್ಮ ಸಂಬಂಧಾ? ನೀವು ಕೊಡೋದು, ನಾನು ಬರಿಯೋದು ಇದ್ದದ್ದs…”
”ನಿಮ್ಮನ್ನ ನಂಬೀದ್ರ ಅಷ್ಟs…”
ಅಂತೆಲ್ಲ ಎಗರಾಡಿ ಆ ದಿನ ನಮ್ಮಿಂದ ಬಿಸಿಯಾಗಿ ಬೀಳ್ಕೊಂಡ ಜಯತೀರ್ಥ ಜೋಶಿ ಮುಂದೆ ಕೆಲವೇ ದಿನಗಳಲ್ಲಿ ರಂಗಭೂಮಿಯಲ್ಲಿ ಹೆಚ್ಚಿನ ಅಧ್ಯಯನಕ್ಕೆಂದು ಲಂಡನ್ ಬಳಿಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯಕ್ಕೆ ಹೋದರು.
ಇತ್ತ ನಮಗರಿವಿಲ್ಲದೆಯೇ ಸಂಕಟದ ಕಾಲ ಆರಂಭವಾಗಿಬಿಟ್ಟಿತು. ಹನ್ನೆರಡು ವರ್ಷಗಳ ನ್ಯಾಯಾಂಗ ಹೋರಾಟದಲ್ಲಿ ಜಯಗಳಿಸಿದ ಶ್ಯಾಮರಾಯರ ತಂಡ ‘ಸಂಯುಕ್ತ ಕರ್ನಾಟಕ’ವನ್ನು ನಡೆಸುತ್ತಿದ್ದ ಲೋಕ ಶಿಕ್ಷಣ ಟ್ರಸ್ಟಿನ ಆಡಳಿತ ಸೂತ್ರವನ್ನು ವಹಿಸಿಕೊಂಡಿತು. ಶುರುವಾಯಿತು ವರ್ಗಾಂತರ ಪರ್ವ. ನಮ್ಮ ಪಾಲಿನ ಗಂಡಾಂತರ ಪರ್ವ. (ಅದನ್ನು ‘ನಮ್ಮ ಹೆಂಡಂದಿರ ಪಾಲಿನ ಗಂಡಾಂತರ ಪರ್ವ’ ಅಂತ ನಾವೆಲ್ಲಾ ನಮ್ಮ ನಮ್ಮೊಳಗೇ ಚೇಷ್ಟೆ ಮಾಡಿಕೊಳ್ಳುತ್ತಿದ್ದೆವು.) ಅದು ಅದಲು-ಬದಲಿನ ಕಾಲ. ಕದಲಿಸಿ ಕಿತ್ತೊಗೆಯುವ ಕಾಲ. ನನಗೂ ಜಿ. ಎಚ್. ಅವರಿಗೂ ‘ಎದ್ದಲಗಾಟ’ದ ಭಯ ಶುರುವಾಯಿತು. ಸಿದ್ಧ-ಸನ್ನದ್ಧ ಸೈನಿಕನಂತೆ ನಾವು ಬ್ಯಾಗು ‘ರೆಡಿ ಮಾಡಿಕೊಂಡೇ’ ಕೂತೆವು.

-೦-೦-೦-೦-೦-

ಅದಾಗಿ ಕೆಲವು ತಿಂಗಳುಗಳಲ್ಲೇ ಕರ್ನಾಟಕ ನಾಟಕ ಅಕಾಡೆಮಿಯ ಹೊಸ ಅಧ್ಯಕ್ಷರು ಮತ್ತು ಸದಸ್ಯರುಗಳ ಪಟ್ಟಿ ಹೊರಬಿತ್ತು. ನಾನು ಧಾರವಾಡ ಜಿಲ್ಲೆಯ ಸದಸ್ಯ. ಆ ಕುರಿತು ಶ್ಯಾಮರಾಯರೇನೂ ತಕರಾರು ತೆಗೆಯಲಿಲ್ಲ. ಮೊದಲ ವರ್ಷದ ಕಾರ್ಯಕ್ರಮಗಳಲ್ಲಿ ನಾನು ಹುಬ್ಬಳ್ಳಿಯ ‘ಅಭಿನಯ ಭಾರತಿ’ಗೆ ಒಂದು ಮಕ್ಕಳ ರಂಗ ತರಬೇತಿ ಶಿಬಿರವನ್ನು ಪಡೆದೆ. ‘ಚಿಗುರು’ ಎಂಬ ಹೆಸರಿನ ಐದು ವಾರಗಳ ಆ ಬೇಸಿಗೆ ರಂಗ ಶಿಬಿರದಲ್ಲಿ 40 ಮಕ್ಕಳು ಭಾಗವಹಿಸಿದ್ದರು. ಬೆಳಿಗ್ಗೆ ಎರಡು ಗಂಟೆ, ಸಂಜೆ ಎರಡು ಗಂಟೆ ಮಕ್ಕಳಿಗೆ ತರಬೇತಿ. ‘ಚಿಣ್ಣ-ಬಣ್ಣ’ ರೆಪರ್ಟರಿಯ ಇಕ್ಬಾಲ್ ಅಹ್ಮದ್ ಶಿಬಿರದ ನಿರ್ದೇಶಕ. 1988ರ ಮಾರ್ಚ್ 27, ‘ವಿಶ್ವ ರಂಗಭೂಮಿ ದಿನ’ದಂದು ಉದ್ಘಾಟನೆಗೊಂಡ ಈ ಶಿಬಿರದಲ್ಲಿ ಪ್ರತಿ ವಾರ ‘ವಾರಾಂತ್ಯ ಪ್ರದರ್ಶನ’ವಾಗಿ ಮಕ್ಕಳಿಂದ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು.
ಈ ಒಳಗಾಗಿ ರಾಘವೇಂದ್ರ ಹುನಗುಂದ ನನಗೆ ‘ರೀಡರ್ಸ್ ಡೈಜೆಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಕಥೆಯ ಕಟಿಂಗ್ ತಂದುಕೊಟ್ಟರು. ನೊಬೆಲ್ ಪಾರಿತೋಷಕ ವಿಜೇತ ಯಿದ್ದಿಶ್ ಕತೆಗಾರ ಐಜಾಕ್ ಬಾಶೆವಿಕ್ ಸಿಂಜರ್ ಬರೆದ ‘ದಿ ಫೂಲ್ಸ್ ಪ್ಯಾರಡೈಜ್…’ ಎಂಬ ಕಥೆ ಅದು. ಕೂತು ಓದಿದೆವು. ರಂಜಕವಾಗಿತ್ತು, ಬೋಧಕವೂ ಆಗಿತ್ತು. ಮಕ್ಕಳ ಮನಸ್ಸಿನಲ್ಲಿ ಹಿರಿಯರಾದವರು ಏನೇನೋ ಕಲ್ಪನೆಗಳು ಹುಟ್ಟುವಂತೆ ಮಾಡಿ, ಅವರನ್ನು ಭ್ರಾಮಕ ಲೋಕಕ್ಕೆ ಕೊಂಡೊಯ್ದುಬಿಡುವುದರ ದುಷ್ಪರಿಣಾಮಗಳನ್ನು ಚೆನ್ನಾಗಿ ಬಿಂಬಿಸುವಂಥ ಕಥೆ. ಜತೆಗೆ ಪರಿಶ್ರಮವಿಲ್ಲದ ಜೀವನಕ್ಕೆ ಕಟ್ಟುಬಿದ್ದರೆ ಏನಾಗುತ್ತದೆ ಎಂಬುದನ್ನು ಸೂಚ್ಯವಾಗಿ ತಿಳಿಸುವ ಕಥೆಯಿದು. ಶಿಬಿರದ ಮಕ್ಕಳಿಗಾಗಿ ಅದನ್ನು ನಾಟಕವಾಗಿ ರೂಪಾಂತರಿಸಬೇಕು ಎಂಬುದು ಹುನಗುಂದರ ಒತ್ತಾಸೆ.
”ನಲವತ್ತು ಮಕ್ಕಳಿದ್ದಾರೆ ಶಿಬಿರದಲ್ಲಿ. ಎಲ್ಲರನ್ನೂ ಬಳಸಿಕೊಳ್ಳುವ ರೀತಿಯಲ್ಲಿ ಈ ನಾಟಕದ ರಚನೆಯಾಗಬೇಕು. ಸ್ವಲ್ಪ ಕೀಟಲೆ, ಸ್ವಲ್ಪ ತಮಾಷೆ, ಹಾಡು-ಕುಣಿತಗಳ ಮೂಲಕ ಮುಂದುವರಿದು ಗಂಭೀರವಾಗುತ್ತ ಹೋಗಬೇಕು. ಆ ಗಾಂಭೀರ್ಯದಲ್ಲೂ ನಮಗೆ ಹಾಸ್ಯದ ಲೇಪ ಕಂಡು ಬರಬೇಕು…” ಇದು ನಮ್ಮಿಬ್ಬರ ಮಾತಿನ ಫಲಿತಾಂಶ.
ಕಥೆ ಇಷ್ಟೇ : ಆತ ಒಬ್ಬ ಅಗಾಧ ಶ್ರೀಮಂತನ ಏಕಮಾತ್ರ ಮಗ. ಇನ್ನೂ ಹತ್ತರೊಳಗಿನ ಹುಡುಗ. ತಾಯಿಯಿಲ್ಲದ ತಬ್ಬಲಿ. ಅಪ್ಪನಿಗೆ ನಾಲ್ಕಾರು ನಮೂನೆಯ ವ್ಯವಹಾರಗಳು. ಮಗನನ್ನು ಮಾತಾಡಿಸುವುದಕ್ಕೂ ಆತನಿಗೆ ಪುರಸೊತ್ತಿಲ್ಲ. ಮಗನಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಿಬಿಟ್ಟರೆ ಸಮಸ್ಯೆ ಬಗೆಹರಿದುಹೋಗುತ್ತದೆ ಎಂದಾತನ ಭಾವನೆ. ಆ ಮುಗ್ಧ ಮನಸ್ಸಿನ ಮೇಲೆ ಅದೆಂಥ ಪರಿಣಾಮವಾಗುತ್ತದೆ ಎಂಬುದನ್ನಾತ ಯೋಚಿಸಿಯೇ ಇಲ್ಲ. ಅದಕ್ಕಾಗಿ ಆತ ವಿಧವೆಯಾದ ತನ್ನ ಅಕ್ಕನನ್ನು ಜತೆಗಿರಲು ಕೇಳಿದ್ದಾನೆ. ಮಕ್ಕಳಿಲ್ಲದ ಆಕೆ ಒಪ್ಪಿ ಬಂದಿದ್ದಾಳೆ. ಆ ಹುಡುಗನನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ಆಕೆಯ ಮುದ್ದು ಆತನನ್ನು ಇನ್ನಷ್ಟು ‘ಮೊದ್ದು’ ಮಾಡಿದೆ ; ಆಲಸಿಯನ್ನಾಗಿಸಿದೆ. ಆದರೇನಂತೆ? ಅಪ್ಪನಾಗಲೀ, ಅವ್ವನಾಗಲೀ ಇಬ್ಬರಲ್ಲಿ ಒಬ್ಬರಾದರೂ ಇರಬೇಕು. ಆತನ ಗೆಳೆಯರಿಗೆಲ್ಲ ಅಪ್ಪನೂ ಇದ್ದಾನೆ, ಅವ್ವನೂ ಇದ್ದಾಳೆ. ತನಗೆ ಅಪ್ಪ ಇದ್ದರೂ ಇಲ್ಲದ ಹಾಗೆ. ಆ ನೋವು ಆತನೊಳಗಿದೆ. ಆ ಕಾರಣದಿಂದ ಆತ ಗೆಳೆಯರನ್ನೂ ಭೇಟಿಯಾಗುತ್ತಿಲ್ಲ, ಶಾಲೆಗೂ ಹೋಗುತ್ತಿಲ್ಲ. ಅವನನ್ನು ಹೇಗಾದರೂ ಮಾಡಿ ಶಾಲೆಗೇ ಕಳಿಸಬೇಕು ಎಂಬುದು ಆತನನ್ನು ನೋಡಿಕೊಳ್ಳುತ್ತಿರುವ ಸೋದರತ್ತೆಯ ವಿಚಾರ. ಸದಾ ಊಟ, ತಿಂಡಿ, ನಿದ್ದೆಯಲ್ಲೇ ಕಾಲ ಕಳೆಯುವ ಅವನಿಗೆ ”ಶಾಲೆಗೆ ಹೋಗು,” ಎಂದು ದುಂಬಾಲು ಬೀಳುತ್ತಾಳೆ ಸೋದರತ್ತೆ.
”ಹೋಗಿ ಏನ್ ಮಾಡ್ಬೇಕು?” ಅಂತ ಆತ.
”ಕಲಿಯಬೇಕು, ಕಲಿತು ಜಾಣನಾಗಬೇಕು. ದೊಡ್ಡವನಾಗಿ ಅಪ್ಪನ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುವಷ್ಟು ಬೆಳೆಯಬೇಕು,” ಅಂತ ಆಕೆಯ ಬುದ್ಧಿಮಾತು. ”ಅದರಿಂದೇನಾಗುತ್ತದೆ?” ಎಂಬುದು ಆತನ ಮರುಪ್ರಶ್ನೆ.
”ಅಪ್ಪನ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ನೀನು ಇನ್ನಷ್ಟು ಶ್ರೀಮಂತನಾಗ್ತೀ…” ಅಂತ ಆಕೆ ಹೇಳಿದರೆ,
”ಇನ್ನಷ್ಟು ಶ್ರೀಮಂತನಾದರೆ ಏನು ಪ್ರಯೋಜನ…?” ಅಂತ ಪುಟ್ಟನ ಮರು ಸವಾಲು.
”ನೀನು ಬೇಕು ಬೇಕಾದ ದೇಶಗಳನ್ನು ಸುತ್ತಿ, ಬೇಕು ಬೇಕಾದ್ದನ್ನು ತಿನ್ನಬಹುದು…”
”ಸರಿ. ಆಮೇಲೆ?”
”ಆಮೇಲೆ ಯಾವ ಚಿಂತೆಯೂ ಇಲ್ಲದೇ, ಆರಾಮಾಗಿ ಮಲಗಿ ಸುಖವಾಗಿ ನಿದ್ರೆ ಮಾಡಬಹುದು…”
ಪುಟ್ಟ ಪಕಪಕನೆ ನಕ್ಕುಬಿಡುತ್ತಾನೆ.
”ಅಯ್ಯ… ಈಗ ನಾನು ಅದನ್ನೇ ಮಾಡ್ತಿದ್ದೀನಲ್ಲಾ… ಅದಕ್ಕೆ ಸುಮ್ಸುಮ್ನೇ ಅಷ್ಟೆಲ್ಲಾ ಯಾಕೆ ಕಷ್ಟಪಡಬೇಕು…?”
”ಅದು ಹಾಗಲ್ಲ ಮರೀ… ಕಷ್ಟಪಟ್ರೆ ನಿನಗೆ ಸಿಗೋದು ಸ್ವರ್ಗಸುಖ… ಸ್ವರ್ಗಸುಖ…”
”ಸ್ವರ್ಗಸುಖ…?! ಹಾಗಂದ್ರೇನು? ‘ಸ್ವರ್ಗ’ ಅಂದ್ರೇನು?”
ಆತನ ಪ್ರಶ್ನೆಗೆ ಉತ್ತರಿಸಲು ಹೋಗಿ ಎಡವಟ್ಟು ಕೆಲಸ ಮಾಡಿಟ್ಟುಬಿಡುತ್ತಾಳೆ ಆತನ ಸೋದರತ್ತೆ. ‘ಸ್ವರ್ಗ’ದ ಬಗ್ಗೆ ಅತಿರಂಜಿತವಾದ ಕಥೆಗಳನ್ನು ಹೇಳಿ ಆತನ ತಲೆ ಕೆಡಿಸಿಬಿಡುತ್ತಾಳೆ.
”ಹಾಗಾದರೆ ನಾನು ಸ್ವರ್ಗಕ್ಕೆ ಹೋಗ್ತೀನಿ,” ಅಂತ ಆತ. ”ಇಲ್ಲಪ್ಪಾ, ಸತ್ತವರು ಮಾತ್ರ ಸ್ವರ್ಗಕ್ಕೆ ಹೋಗಬಹುದು,” ಅಂತ ಸೋದರತ್ತೆ.
ಹಾಗಿದ್ದರೆ ಅಲ್ಲಿ ಸತ್ತು ಹೋಗಿರುವ ತನ್ನ ತಾಯಿ ಸಿಗಬಹುದು; ಅಲ್ಲಿಗೆ ಹೋದರೆ ತಾನು ಆಕೆಯೊಂದಿಗೆ ಆರಾಮಾಗಿ ಇರಬಹುದು ಎಂಬ ಭ್ರಮೆಯನ್ನೇ ಬಲಿಸಿಕೊಂಡು ಮಾನಸಿಕ ರೋಗಿಯಾಗುತ್ತಾನೆ ಪುಟ್ಟ.
ಆತನ ಸ್ವರ್ಗದ ಹುಚ್ಚನ್ನು ಬಿಡಿಸಲು ಮನೋರೋಗ ತಜ್ಞರು ಹೂಡುವ ನಾಟಕವೇ ಈ ನಾಟಕದ ಹೈಲೈಟ್.
ಕಾಲುಭಾಗ ಬರೆದು ಮುಗಿಸುವ ಹೊತ್ತಿಗೆ ಅದಾರು ‘ಒಂಟಿ ಸೀನು’ ಸೀತರೋ… ಶ್ಯಾಮರಾಯರು ನನ್ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ ಆರ್ಡರು ಕೈಸೇರಿತು. ಅಪ್ಪಣೆಯನ್ನು ಶಿರಸಾವಹಿಸಲೇಬೇಕು. ರಾಜಧಾನಿಗೆ ಹೋಗಿ ಸೇರಿದ ಮೇಲೆ ಹಗಲೆಲ್ಲ ಕೆಲಸ, ರಾತ್ರಿ ಎಲ್ಲ ಈ ನಾಟಕದ ಬರವಣಿಗೆ. ಸಾಕಷ್ಟು ಹಾಡುಗಳೊಂದಿಗೆ ಸ್ಕ್ರಿಪ್ಟನ್ನು ಮುಗಿಸಿ ಹುಬ್ಬಳ್ಳಿಗೆ ಹೊತ್ತು ಹಾಕಿದೆ.
1988ರ ಎಪ್ರಿಲ್ 30ರಂದು, ‘ಪುಟ್ಟನ ಸ್ವರ್ಗ’ದ ಎರಡು ಪ್ರಯೋಗಗಳನ್ನು ಮಕ್ಕಳು ಅಚ್ಚುಕಟ್ಟಾಗಿ ನಿರ್ವಹಿಸಿದವೆಂಬ ಸುದ್ದಿಯನ್ನು ಮರುದಿನದ ಪತ್ರಿಕೆಯಲ್ಲಿ ನೋಡಿ ಸಂತಸಪಡಬೇಕಾಯಿತು.
ಈ ನಾಟಕದ ಯಶಸ್ಸಿಗೆ ದುಡಿದವರು ವಿ. ಜಿ. ಕುಲಕರ್ಣಿ, ಪ್ರಮೋದ್ ಶಿಗ್ಗಾಂವ್, ಅರವಿಂದ ಕುಲಕರ್ಣಿ, ಕೆ.ಜಿ. ಗ್ರಾಮಪುರೋಹಿತ ಮತ್ತು ವಿಶ್ವನಾಥ ಕುಲಕರ್ಣಿ ಮುಂತಾದವರು. ಈ ನಾಟಕದ ಹಾಡುಗಳಿಗೆ ‘ದನಿ’ಯಾದರಂತೆ ಬಸಲಿಂಗಯ್ಯ ಹಿರೇಮಠ,

-೦-೦-೦-೦-೦-

‘ಸಂಯುಕ್ತ ಕರ್ನಾಟಕ’ವೆಂಬ ಬಾಣಲೆಯಲ್ಲಿದ್ದ ನಾವು ಅದರ ‘ಬಿಸಿ’ ಹೆಚ್ಚತೊಡಗಿದಾಗ ಒದ್ದಾಡಿದ್ದಿದೆಯಲ್ಲ, ಅಂಥ ಸ್ಥಿತಿ ಎಂಥ ಶತ್ರುವಿಗೂ ಬರಬಾರದು. ಮುಷ್ಕರದಲ್ಲಿ ಭಾಗವಹಿಸಿದ್ದೆವೆಂಬ ಕಾರಣಕ್ಕೆ ನಮ್ಮ ಮೇಲೆ ಆಡಳಿತ ವರ್ಗದ ಕಣ್ಣು ನೆಟ್ಟುಕೊಂಡೇ ಇತ್ತು. ನಾನು ಹೆಚ್ಚೂ ಕಡಿಮೆ ರಂಗದಿಂದ ದೂರವೇ ಉಳಿದುಬಿಟ್ಟಿದ್ದೆ. ಆದರೆ, ಒಂದೆರಡು ಸಿನೆಮಾಗಳ ಕೆಲಸವನ್ನು ಒಪ್ಪಿಕೊಂಡೆ.
‘ಸಂಗ್ಯಾ ಬಾಳ್ಯಾ’ ಚಿತ್ರದ ಸಂಬಂಧದಲ್ಲಿ ಬೆಂಗಳೂರಲ್ಲಿ ಸುಂದರಕೃಷ್ಣ ಅರಸ್ ಜೊತೆ ಚರ್ಚೆ. ಗಾಂಧೀ ನಗರದ ಒಂದು ಹೋಟಲಲ್ಲಿ ರೂಮು. ಅವತ್ಯಾಕೋ ಅಲ್ಲಿಗೆ ಕೆ.ಎ.ಎಸ್. ಅಧಿಕಾರಿ ಎಲ್. ಎಸ್. ಸುಧೀಂದ್ರ ಬಂದಿದ್ದಾರೆ. ಅವರು ತುಂಬಾ ಚಾಣಾಕ್ಷ. ಯಾವ ಯಾವ ರೂಮಿನಲ್ಲಿ ಯಾವ ಯಾವ ಸಿನೆಮಾ ಜನ ಇದ್ದಾರೆ ಎಂದು ಕೌಂಟರಿನಲ್ಲಿ ಕೇಳಿ ತಿಳಿದುಕೊಂಡಿದ್ದಾರೆ. ಸುಂದರಕೃಷ್ಣ ಅರಸ್ ಅವರನ್ನು ಕಾಣಲೆಂದು ನಮ್ಮ ರೂಮಿಗೆ ನುಗ್ಗಿದ್ದಾರೆ.
ಕೆ.ಎ.ಎಸ್. ಅಧಿಕಾರಿಯಾಗಿದ್ದರೂ ಎಲ್. ಎಸ್. ಸುಧೀಂದ್ರ ಅವರದು ಅಪಾರ ರಂಗಪ್ರೇಮ. ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಆಗಿಯೂ, ಕರ್ನಾಟಕ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೋರೇಷನ್ನಿನ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. ಸುರೇಶ ಹೆಬ್ಳಿಕರ್ ಅವರ ಹಲವು ಚಿತ್ರಗಳಲ್ಲಿ ಕಂಡ ವಿಶಿಷ್ಟ ಮುಖ ಅವರದು. ಸುಧೀಂದ್ರ ಅದ್ಭುತ ಹಾಸ್ಯಪ್ರವೃತ್ತಿಯವರು. ದಾವಣಗೆರೆ ಜಿಲ್ಲೆಯ ಕೊಂಡಜ್ಜಿಯಲ್ಲಿ ನಡೆದ ನಾಟಕ ರಚನಾ ಶಿಬಿರವನ್ನು (1983) ಯಶಸ್ವಿಯಾಗಿ ನಡೆಸಿಕೊಂಡು ಹೋದವರು. ಅಲ್ಲಿದ್ದಷ್ಟೂ ದಿನ ನಮಗೆ ಒಂದು ಕ್ಷಣವೂ ಬೇಸರವಾಗದ ಹಾಗೆ ಸದಾ ನಗುತ್ತಲೇ ನಗಿಸುತ್ತಲೇ ಇರುತ್ತಿದ್ದರು. 1982ರ ಸುಮಾರಿಗೆ ಹುಬ್ಬಳ್ಳಿಗೆ ಒಮ್ಮೆ ಬಂದಾಗ, ನೇರ ನನ್ನ ಮನೆಗೆ ಬಂದು ತಾವೇ ಪರಿಚಯ ಮಾಡಿಕೊಂಡ ಸರಳ ಜೀವಿ ಸುಧೀಂದ್ರ. ಅಂದಿನಿಂದಲೇ ಅವರ ಗೆಳೆಯರ ಬಳಗದಲ್ಲಿ ನಾನೂ ಒಬ್ಬನಾಗಿಬಿಟ್ಟೆ.
ಅವತ್ತು ಬಂದರಲ್ಲ ಸುಧೀಂದ್ರ… ನಮ್ಮ ಮಾತು ಹಾಗೆಯೇ ಶಂಕರ್ ನಾಗ್ ಕಡೆಗೆ ತಿರುಗಿದೆ. (1989ರಲ್ಲಿ ಶಂಕರ್ ‘ನಾಗ ಮಂಡಲ’ ನಾಟಕ ನಿರ್ದೇಶಿಸಿದಾಗ ಸುಧೀಂದ್ರ ನಿತ್ಯವೂ ಸಂಜೆ ತಾಲೀಮು ನಡೆಯುತ್ತಿದ್ದ ಚಿತ್ರಕಲಾ ಪರಿಷತ್ತಿನ ಕಡೆ ಬರುತ್ತಿದ್ದರು.) ಆ ವಿಚಾರ ಮಾತಾಡುತ್ತ ಹಾಗೆಯೇ ಸಿಂಗಸಂದ್ರದ ಶಂಕರ್ ನಾಗ್ ಫಾರ್ಮ್ ಹೌಸಿನಲ್ಲಿ ನಡೆಯುತ್ತಿದ್ದ ಪಾರ್ಟಿಗಳ ವಿಚಾರದ ಪ್ರಸ್ತಾಪ ಬಂದಿದೆ.
”ಈಗ ಅಲ್ಲಿ ಯಾರಿದ್ದಾರೆ?” ಅಂತ ಸುಧೀಂದ್ರ ಅವರನ್ನು ಕೇಳಿದೆ.
”ಅರೂ ಮೇಡಂ ಅಲ್ಲಿಯೇ ಇರ್ತಾರೆ…” ಅಂದರು ಸುಧೀಂದ್ರ.
ಅರುಂಧತಿ ನಾಗ್ ರಂಗಭೂಮಿಯ ಆತ್ಮೀಯರ ಪಾಲಿಗೆ ನೆಚ್ಚಿನ ‘ಅರೂ ಮೇಡಂ’. ‘ನಾಗ ಮಂಡಲ’ ನಾಟಕ ಪ್ರಯೋಗ ಸಂಬಂಧದಲ್ಲಿ ಅವರ ಭೇಟಿ ದಿನವೂ ಆಗುತ್ತಿತ್ತು. ಶಂಕರ್ ಇದ್ದಾಗ ಒಂದೆರಡು ಸಂದರ್ಭಗಳಲ್ಲಿ ಫಾರ್ಮ್ ಹೌಸಿಗೆ ಹೋದವ ಅರುಂಧತಿಯವರ ಆತಿಥ್ಯವನ್ನೂ ಸ್ವೀಕರಿಸಿದ್ದೆ.
ಆದರೆ, ಶಂಕರ್ ಹೋದ ಮೇಲೆ ಅರುಂಧತಿಯವರನ್ನು ಹೇಗೆ ಮಾತಾಡಿಸುವುದು? ಹೇಗೆ ಕಾಣುವುದು? ಎಂದು ತಿಳಿಯದೆ ಸುಮ್ಮನಿದ್ದೆ. ಅವತ್ತು ಸುಧೀಂದ್ರ ಅರೂ ಮೇಡಂ ವಿಚಾರ ಪ್ರಸ್ತಾಪಿಸಿದರಲ್ಲ… ಕೂಡಲೇ ”ಮಾತಾಡ್ತೀರೇನು ಅರೂ ಮೇಡಂ ಜೊತೆ?” ಅಂತ ಕೇಳಿದರು. ”ಆಯಿತು,” ಎಂದೆ.
ಇದು ಸರಿಯಾಗಿ 22 ವರ್ಷಗಳ ಹಿಂದಿನ ಮಾತು. ಆಗ ಫೋನ್ ಎಂದರೆ ಲ್ಯಾಂಡ್ ಲೈನ್ ಒಂದೇ. ಮೊಬೈಲು ಆಗಿನ್ನೂ ಹುಟ್ಟಿರದ ಪದ. ಅಲ್ಲಿಂದಲೇ ಸಿಂಗಸಂದ್ರದ ಶಂಕರ್ ಫಾರ್ಮ್ ಹೌಸಿಗೆ ಫೋನ್ ಹಚ್ಚಿದ್ದಾರೆ ಸುಧೀಂದ್ರ. ನನ್ನ ಬಗ್ಗೆ ಹೇಳಿ, ”ಮಾತಾಡಿ”, ಅಂತ ರಿಸೀವರ್ ಹಸ್ತಾಂತರಿಸಿದ್ದಾರೆ.
ಅರುಂಧತಿಯವರದು ಆಗಲೂ ಅದೇ ಮೊದಲಿನ ಆತ್ಮೀಯತೆ. ”ನಾವೆಲ್ಲಾ ರಂಗಭೂಮಿಯ ಜನ. ಒಟ್ಟಾಗಿ ಏನಾದರೂ ಮಾಡ್ತಾನೆ ಇರಬೇಕು,” ಅಂದಿದ್ದಾರೆ. ”ಮತ್ತೆ ಬಂದಾಗ ಫೋನ್ ಮಾಡಿ,” ಅಂತ ಹೇಳಿದ್ದಾರೆ.
ಮುಂದೆ ಸಿನೆಮಾ ಸಂಬಂಧದಲ್ಲಿ ಕದ್ದು ಮುಚ್ಚಿ ಬೆಂಗಳೂರಿಗೆ ಬಂದಾಗಲೆಲ್ಲ ಅವರೊಂದಿಗೆ ಫೋನಿನಲ್ಲಿ ಮಾತಾಡುತ್ತಿದ್ದೆ. ಒಂದೊಮ್ಮೆ ಹಾಗೆ ‘ಹಲೋ’ ಅಂದಾಗ ಅರುಂಧತಿಯವರು, ”ಸರಿಯಾದ ಟೈಮಿಗೆ ಸಿಕ್ರಿ ನೀವು… ಎಲ್ಲಿದ್ದೀರಿ? ನಮ್ಮ ಮನೆಗೆ ಬನ್ನಿ… ಶಿವೂನ್ನ ಕಳಿಸ್ತೇನೆ. ಇವತ್ತು ಸಂಜೆ ಭೇಟಿ ಆಗೋಣ…” ಅಂತೆಲ್ಲ ಹೇಳಿ ನಾನು ಉಳಿದಿರುವ ಹೋಟಲಿನ ವಿಳಾಸ ಪಡೆದಿದ್ದಾರೆ.
ಅವತ್ತು ಸಂಜೆ ದೊಡ್ಡದೊಂದು ವ್ಯಾನಿನಲ್ಲಿ ಶಿವೂ ಯಾನೆ ಶಿವರಾಜ್ ನಾನುಳಿದಲ್ಲಿಗೆ ಬಂದಿದ್ದಾರೆ. ನನ್ನ ಮತ್ತು ಉದಯ ಮರಕ್ಕಿಣಿಯ ಆತ್ಮೀಯ ಗೆಳೆಯ ಈ ಶಿವರಾಜ್. ಸದಾ ಹಸನ್ಮುಖಿ. ”ನಡೀರಿ ಗೋವಾ… ಫಾರ್ಮ್ ಹೌಸಿಗೆ ಹೋಗೋಣ,” ಅಂದಿದ್ದಾರೆ.
ನನಗಿದ್ದ ಸಮಸ್ಯೆ ಎಂದರೆ ಅಂದೇ ರಾತ್ರಿ ನಾನು ವಾಪಸ್ ಹುಬ್ಬಳ್ಳಿಗೆ ಹೋಗಬೇಕು. ಮರುದಿನ ಆಫೀಸಿನಲ್ಲಿ ಕಾಣದಿದ್ದರೆ ಕೂಡಲೇ ಶ್ಯಾಮರಾಯರಿಗೆ ವರದಿ ಹೋಗುತ್ತದೆ. ಹಾಗೇನಾದರೂ ಆದರೆ ನಾನು ಸಸ್ಪೆಂಡ್ ಆಗೋದಂತೂ ಗ್ಯಾರಂಟಿ. ಶಿವರಾಜರಿಗೆ ಎಲ್ಲವನ್ನೂ ವಿವರಿಸಿ ಹೇಳಿದೆ.
”ನಾಳೆ ಬೆಳಿಗ್ಗೆ ನೀವು ಹುಬ್ಬಳ್ಳಿಯಲ್ಲಿರ್ತೀರಿ. ಆ ಯೋಚನೆ ಬಿಡಿ. ಮೊದಲು ಗಾಡಿ ಹತ್ತಿ,” ಅಂತ ಒತ್ತಾಯದಿಂದ ನನ್ನನ್ನು ಸಿಂಗಸಂದ್ರದ ಫಾರ್ಮ್ ಹೌಸಿಗೆ ಕರೆದೊಯ್ದಿದ್ದಾರೆ. ಗಾಂಧೀ ನಗರದಿಂದ ಸಿಂಗಸಂದ್ರ ಕನಿಷ್ಠ 25 ಕಿಲೋಮೀಟರ್ ದೂರ.
ನನಗೆ ಈ ಶಿವರಾಜ್ 35 ವರ್ಷಗಳಷ್ಟು ಹಳೆಯ ಗೆಳೆಯ. ಅವರ ‘ಸಾಮರ್ಥ್ಯ’ ಮತ್ತು ‘ಸಂಪರ್ಕ’ದ ಬಗ್ಗೆ ಚೆನ್ನಾಗಿ ಗೊತ್ತು. ಎಂಥ ಕೆಲಸವೂ ಅವರಿಗೆ ದುಸ್ತರವಲ್ಲ. ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಈ ಶಿವರಾಜ್ ಎಂದರೆ ಎಲ್ಲರ ಮುಖ ಅರಳುತ್ತದೆ. ಅವರ ಆ ನಗುವೇ ಎಲ್ಲ ಕೆಲಸವನ್ನೂ ಮಾಡಿ ಮುಗಿಸಿಬಿಡುತ್ತದೆ.
ನಾವು ಶಂಕರ್ ನಾಗ್ ಫಾರ್ಮ್ ಹೌಸ್ ತಲಪಿದಾಗ ಸಂಜೆ ಏಳು ಗಂಟೆ. ನನಗೆ ಅಲ್ಲೆಲ್ಲ ‘ಕಾಣು’ತ್ತಿದ್ದದ್ದು ಶಂಕರ್… ‘ಕೇಳು’ತ್ತಿದ್ದದ್ದು ಆತನ ದನಿ… ಆತನ ನಗು… ಆತ ಅಲ್ಲೆಲ್ಲ ಗಾಳಿಯಾಗಿ ಸಂಚರಿಸುತ್ತಿರುವಂತೆಯೇ ಭಾಸ…
ನಾನು ಅವರ ಮನೆಯನ್ನು ಪ್ರವೇಶಿಸಿದೆ. ಅರೂ ಮೇಡಂ ಆತ್ಮೀಯವಾಗಿ ಬರಮಾಡಿಕೊಂಡರು.
ಅಸಲು ಹಕೀಕತ್ತು ಏನೆಂದರೆ ಆಗ ಅರುಂಧತಿ ನಾಗ್ ಅವರು ರಂಗಕರ್ಮಿ ಗಾಯತ್ರಿಯ (ಪುಟ್ಟಿ) ನೆರವಿನೊಂದಿಗೆ ಮರಾಠಿಯ ‘ತರುಣ್ ತುರ್ಕ್ ಮ್ಹಾತಾರ ಅರ್ಕ್’ ನಾಟಕವನ್ನು ಕನ್ನಡಕ್ಕೆ ತರುವ ಯತ್ನದಲ್ಲಿದ್ದರು. ಬೆಂಗಳೂರಿನ ‘ಸಂಕೇತ್ ನಾಟಕ ತಂಡ’ದಿಂದ ಆ ನಾಟಕವನ್ನು ಪ್ರದರ್ಶಿಸುವ ಇರಾದೆ ಅವರದು. ಆದರೆ ಕಾರಣಾಂತರಗಳಿಂದ ಅನುವಾದ ಕಾರ್ಯ ಕುಂಠಿತಗೊಂಡಿತ್ತು. ನನಗೆ ಮರಾಠಿ ಅಷ್ಟಿಷ್ಟು ಗೊತ್ತು ಎಂಬ ವಿಚಾರ ಅರುಂಧತಿಯವರಿಗೆ ಗೊತ್ತಿತ್ತು. ಆವತ್ತು ನಾನಲ್ಲಿಗೆ ಹೋದಾಗ ಅವರು ಮೊದಲು ಮಾಡಿದ ಕೆಲಸವೆಂದರೆ ಆ ಮರಾಠಿ ನಾಟಕದ ಪ್ರತಿಯನ್ನು ಕೈಗಿತ್ತು, ”ಇದನ್ನ ಬೇಗ ಮುಗಿಸಿ ಕೊಡಿ,” ಅಂತ ಹೇಳಿದ್ದು ಮತ್ತು ಒಂದಷ್ಟು ತಿಂಡಿಯನ್ನು ಕೊಟ್ಟು ಉಪಚರಿಸಿದ್ದು. ನಾನು ಹಸ್ತಪ್ರತಿಯನ್ನು ಹಾಗೇ ನನ್ನ ಬ್ಯಾಗಿನಲ್ಲಿಟ್ಟುಬಿಟ್ಟೆ. ಅದನ್ನು ನೋಡುವಷ್ಟೂ ಸವಡಿರಲಿಲ್ಲ. ವಾಪಸ್ಸು ಮೆಜೆಸ್ಟಿಕ್ ತಲಪಿ ಹುಬ್ಬಳ್ಳಿಯ ಬಸ್ ಹಿಡಿಯಬೇಕಿತ್ತಲ್ಲ… ಶಿವರಾಜ್ ನನ್ನನ್ನು ಟೈಮ್ ಶೀರ್ ಬಸ್ ಸ್ಟ್ಯಾಂಡಿಗೆ ಬಿಟ್ಟರು.

-೦-೦-೦-೦-೦-

ಪ್ರೊ. ಮಧುಕರ್ ತೋರಡಮಲ್… ಮರಾಠಿಯ ಸುಪ್ರಸಿದ್ಧ ಕಥೆಗಾರ, ನಾಟಕಕಾರ ಮತ್ತು ನಟ. ‘ತುಂಬಡ್ಯಾ’ ಮುಂತಾದ ಕಥಾಸಂಕಲನಗಳನ್ನೂ, ‘ಕಾಳೇ ಬೇಟ್, ಲಾಲ್ ಬತ್ತಿ’, ‘ಲವ್ ಬರ್ಡ್ಸ್’ ಮುಂತಾದ ನಾಟಕಗಳನ್ನೂ ಅವರು ನೀಡಿದ್ದಾರೆ. ಮರಾಠಿ ಚಿತ್ರರಂಗದಲ್ಲಿ ಚಿತ್ರಕಥೆ, ನಟನೆ ಮುಂತಾದವುಗಳಲ್ಲಿಯೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.

ಪ್ರಸ್ತುತ ‘ತರುಣ್ ತುರ್ಕ್ ಮ್ಹಾತಾರ ಅರ್ಕ್’ ಕಾಲೇಜೊಂದರ ಸುತ್ತ ಹೆಣೆದ ಕಥೆ. ಮಧ್ಯವಯಸ್ಕ ವಿಧುರನೊಬ್ಬ ವಿದ್ಯಾರ್ಥಿಯಾಗಿ ಆ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾನೆ. ಅಲ್ಲಿಯ ಹುಡುಗರ ಹಾಸ್ಟೆಲ್ಲಿನಲ್ಲೆ ಆತನಿಗೆ ಒಂದು ಕೋಣೆ ಮಂಜೂರಾಗಿದೆ. ತನ್ನ ಹಳೆಗಾಲದ ಪ್ರೇಯಸಿ ಅಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಳೆಂಬ ಕಾರಣಕ್ಕೇ ಆತ ಅಲ್ಲಿಗೆ ಬಂದದ್ದು. ಆಕೆ ಗಂಭೀರಸ್ವಭಾವದ ಸುಂದರಿ. ಐವತ್ತನ್ನು ದಾಟಿದ ಮರೆಗುಳಿ ಪ್ರೊಫೆಸರ್ ಒಬ್ಬ ಅವಳ ಬೆನ್ನು ಬಿದ್ದಿದ್ದಾನೆ. ಆಟ ಆ ಹಾಸ್ಟೆಲ್ಲಿನ ವಾರ್ಡನ್ ಕೂಡ. ಆ ವಿಧುರ ತನ್ನ ವಿನೋದ ಸ್ವಭಾವ ಮತ್ತು ಸಹಕಾರ ಮನೋಭಾವದಿಂದಾಗಿ ವಿದ್ಯಾರ್ಥಿಗಳ ಮನವೊಲಿಸಿಕೊಳ್ಳುತ್ತಾನೆ. ತರುಣರ ಉತ್ಸಾಹ ಮತ್ತು ವಯಸ್ಸಾದವರ ಅನುಭವ ಎರಡೂ ಆತನಲ್ಲಿ ಮೇಳೈಸಿವೆ. ಪ್ರೇಮಿಗಳಾದ ವಿದ್ಯಾರ್ಥಿ ಜೋಡಿಯೊಂದಕ್ಕೆ ಈತ ಫ್ರೆಂಡ್, ಗೈಡ್ ಮತ್ತು ಫಿಲಾಸಫರ್. ಆ ಉಪನ್ಯಾಸಕಿಗೆ ಮರೆಗುಳಿ ಪ್ರೋಫೆಸರನ ಕಾಟದಿಂದ ಪಾರಾಗಬೇಕಿದೆ. ಆ ಹುಡುಗರೆಲ್ಲ ಸೇರಿ ಏನೋ ಒಂದು ನಾಟಕ ಮಾಡಿ ಆ ವಿದುರ ಮತ್ತು ಆ ಉಪನ್ಯಾಸಕಿಯನ್ನು ಒಂದುಗೂಡಿಸುತ್ತಾರೆ.
ನಾಟಕಕಾರ ಪ್ರೊ. ಮಧುಕರ್ ತೋರಡಮಲ್ ಸ್ವತಃ ಈ ನಾಟಕದಲ್ಲಿ ಮರೆಗುಳಿ ಪ್ರೊಫೆಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರಂತೆ. ನಾನು ನೋಡಿದ ಒಂದು ಪ್ರಯೋಗದ ವೀಡಿಯೋದಲ್ಲಿ ಈ ಪಾತ್ರವನ್ನು ಖ್ಯಾತ ಹಾಸ್ಯ ನಟ ವಿಜೂ ಖೋಟೇ ಅಭಿನಯಿಸಿದ್ದರು.
ಓದಿ ನೋಡಿದೆ. ಈ ಮೂರಂಕಿನ ನಾಟಕವನ್ನು ಹಾಗೆ ಹಾಗೆಯೇ ಕನ್ನಡಕ್ಕೆ ತರ್ಜುಮಿಸಲಾಗದು ; ಅವಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ; ಅದು ನಮ್ಮ ಪ್ರೇಕ್ಷಕರಿಗೆ ಹಿಡಿಸುವಂತಾಗಬೇಕು ಎನಿಸಿತು. ನಾನು ‘ಹಸಿರೆಲೆ ಹಣ್ಣೆಲೆ’ ಎಂಬ ಹೆಸರಿನಲ್ಲಿ ಅದನ್ನು ರೂಪಾಂತರಿಸಿ ಪಕ್ಕಾ ಪ್ರತಿ ಮಾಡಿ ಬೆಂಗಳೂರಿಗೆ ಕಳಿಸಿಕೊಟ್ಟೆ. ಅರುಂಧತಿ ನಾಗ್ ಮತ್ತು ‘ಸಂಕೇತ್ ನಾಟಕ ತಂಡ’ದ ಎಲ್ಲರೂ ರೂಪಾಂತರವನ್ನು ಮೆಚ್ಚಿಕೊಂಡರು. ಅರುಂಧತಿ ನಾಗ್ ಮತ್ತು ಎಸ್. ಸುರೇಂದ್ರನಾಥ್ (ಸೂರಿ) ಆ ನಾಟಕವನ್ನು ನಿರ್ದೇಶನದಲ್ಲಿ 1992ರ ನವೆಂಬರಿನಲ್ಲಿ ‘ಹಸಿರೆಲೆ ಹಣ್ಣೆಲೆ’ ನಾಟಕದ ಪ್ರಯೋಗಗಳು ಆರಂಭವಾದವು. ಇದರಲ್ಲಿಯ ಮಧ್ಯವಯಸ್ಕ ವಿದುರನ ಪಾತ್ರದಲ್ಲಿ ರಮೇಶ್ ಭಟ್, ಮರೆಗುಳಿ ಪ್ರೊಫೆಸರ್ ಪಾತ್ರದಲ್ಲಿ ಎಸ್. ಸುರೇಂದ್ರ ನಾಥ್, ಹಾಗೂ ನೇತ್ರಾನಂದ್ ಎಂಬ ಹೆಣ್ಣಿಗ ವಿದ್ಯಾರ್ಥಿಯ ಪಾತ್ರದಲ್ಲಿ ಸುಂದರ್ (ಕಿರುತೆರೆಯ ಸುಪ್ರಸಿದ್ಧ ನಟ) ಅಭಿನಯಿಸಿದರು. ‘ಸಂಕೇತ್ ನಾಟಕ ತಂಡ’ದ ಈ ಪ್ರಯೋಗಗಳನ್ನು ನನಗೆ ನೋಡಲು ಆಗಲೇ ಇಲ್ಲ. ಆದರೆ ನೋಡಿದವರೆಲ್ಲ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಂತೂ ನಿಜ.

-೦-೦-೦-೦-೦-

ಬಹಳ ದಿನಗಳ ನಂತರ ಆ ನಾಟಕದ ಹಸ್ತಪ್ರತಿಯೊಂದು ನನಗೆ ದೊರಕಿತು. ಆಗಲೇ ನಾನು ‘ಈಟೀವಿ’ ಸೇರಿ ಹೈದರಾಬಾದಿಗೆ ಸ್ಥಳಾಂತರಿಸಿ ಆಗಿತ್ತು. ಅಲ್ಲಿಗೆ ಧಾರಾವಾಹಿಯೊಂದರ ಚಿತ್ರೀಕರಣಕ್ಕೆಂದು ಬಂದಿದ್ದ ಗೆಳೆಯ ಏಣಿಗಿ ನಟರಾಜ ಸಂಕೇತ್ ನಾಟಕ ತಂಡದ ‘ಹಸಿರೆಲೆ ಹಣ್ಣೆಲೆ’ ಪ್ರಯೋಗವನ್ನು ನೋಡಿದ್ದನಂತೆ. ತನಗೆ ಆ ಹಸ್ತಪ್ರತಿ ಬೇಕು ಎಂದ. ಕೊಟ್ಟೆ.
ಏಣಿಗಿ ನಟರಾಜ ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ದ 2002 ವರ್ಷದ ಪ್ರಯೋಗವಾಗಿ ‘ಹಸಿರೆಲೆ ಹಣ್ಣೆಲೆ’ಯನ್ನು ಪ್ರಯೋಗಿಸಿದ. 2002ರ ಜೂನ್ 16ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಮೊದಲ ಪ್ರಯೊಗ. ಆ ಪ್ರಯೋಗವನ್ನು ನೋಡಲೆಂದು ಹೈದರಾಬಾದಿನಿಂದ ಧಾರವಾಡಕ್ಕೆ ಹೋದ ನನ್ನನ್ನು, ನಾಟಕ ಮುಗಿದ ಮೇಲೆ ವೇದಿಕೆಗೆ ಕರೆದರು. ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರು ನನಗೊಂದು ಪುಷ್ಪಗುಚ್ಚವನ್ನಿತ್ತು, ”ಭಪ್ಪರೆ… ಭಾಳ ಚೊಲೋ ಬರದೀರಿ ನಾಟಕಾನ…” ಅಂತ ಬೆನ್ನು ತಟ್ಟಿದರು.
ಒಂದು ಕ್ಷಣ ನಾನು ಮೈಮರೆತೆ.
ಹಾಂ… ತೀರ ಇತ್ತೀಚೆ ಕನ್ನಡದಲ್ಲಿ ರವಿಚಂದ್ರನ್ ‘ಕ್ರೇಜೀ ಲೋಕ’ ಎಂಬೊಂದು ಸಿನೆಮಾ ಬಂತು. ಅದರ ಕಥೆ ಹೆಚ್ಚೂ ಕಡಿಮೆ ‘ತರುಣ್ ತುರ್ಕ್ ಮ್ಹಾತಾರ ಅರ್ಕ್’ ಕಥೆಯನ್ನೇ ಹೋಲುತ್ತಿತ್ತು…
 
 

‍ಲೇಖಕರು avadhi

April 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Dr. Vasanthkumar Perla

    ಪ್ರಿಯ ವಾಜಪೇಯಿಯವರೇ,
    ಪ್ರತಿಯೊಂದಕ್ಕು ಒಂದೊಂದು ’ಕಾಲ’ (ಸಮಯ) ಅಂತ ಇರುತ್ತೆ ಅನ್ನಿಸುತ್ತೆ. ಆಯಾ ಕಾಲಘಟ್ಟದಲ್ಲಿ ಅವು ಬೇಕಷ್ಟು ಕೆಲಸ ಮಾಡಿ ಜನಮಾನಸದಲ್ಲಿ ಬೇರೂರಿ ಅನಂತರ ಇಳಿತಾಯದ(downfall)ಸೂಚನೆಗಳನ್ನು ತೋರಿಸುತ್ತವೆ. ಕನ್ನಡ ಹವ್ಯಾಸಿ ರಂಗಭೂಮಿಗೆ ಸಂಬಂಧಿಸಿದಂತೆಯೂ ಈ ಮಾತು ನಿಜ ಅನ್ನಿಸುತ್ತದೆ. ಕಳೆದ ಶತಮಾನದ ಅರವತ್ತು, ಎಪ್ಪತ್ತು ಮತ್ತು ಎಂಬತ್ತರ ದಶಕದ ಉಛ್ರಾಯದ ಬಳಿಕ ಅಂತಹ ಏರೆತ್ತರ ತಲಪಲು ಕನ್ನಡ ರಂಗಭೂಮಿಗೆ ಈಗ ಸಾಧ್ಯವಾಗುತ್ತಿಲ್ಲ ಎಂಬ ಮಾತಲ್ಲಿ ಸ್ವಲ್ಪ ಮಟ್ಟಿಗೆ ಹುರುಳಿದೆ ಅನ್ನಿಸುತ್ತದೆ. ಟಿ.ವಿ. ಆಗಮನ, ಪ್ರತಿಭಾವಂತರ ಕೊರತೆ, ಸಮಾಜದಲ್ಲಿ ಆಗುತ್ತಿರುವ ಬೇರೆ ಬೇರೆ ರೀತಿಯ ಬದಲಾವಣೆಗಳು ಅದಕ್ಕೆ ಕಾರಣವಿರಬೇಕು.
    ಅಥವಾ ಈ ರೀತಿಯ ಹಳವಂಡಗಳು ಪ್ರತಿಯೊಂದು ತಲೆಮಾರಿನಲ್ಲೂ ಇರುತ್ತವೋ ಏನೋ! ತಾವು ತಾವು ಕಂಡದ್ದು, ಅನುಭವಿಸಿದ್ದು ಶ್ರೇಷ್ಠ ಎಂಬ ಭಾವನೆ ಸಹಜವೋ ಏನೋ! ಇರಲಿ, ತಮ್ಮ ನೆನಪಿನ ಕೋಶಗಳ ಬಿಚ್ಚೋಣ ಮತ್ತು ಆಪ್ತ ಬರೆವಣಿಗೆ ಮುಂದುವರಿಯಲಿ!
    -ಡಾ.ವಸಂತಕುಮಾರ ಪೆರ್ಲ

    ಪ್ರತಿಕ್ರಿಯೆ
  2. shadakshari.Tarabenahalli

    ತುಂಬಾ ಖುಷಿಯಾಗಿದ್ದು…
    ಡಾ. ಪಾಟೀಲ ಪುಟ್ಟಪ್ಪ ಅವರು ನನಗೊಂದು ಪುಷ್ಪಗುಚ್ಚವನ್ನಿತ್ತು, ”ಭಪ್ಪರೆ… ಭಾಳ ಚೊಲೋ ಬರದೀರಿ ನಾಟಕಾನ…” ಅಂತ ಬೆನ್ನು ತಟ್ಟಿದರು.
    ತುಂಬಾ ಇಷ್ಟ ಆಗಿದ್ದು…
    ”ಮನ್ಯಾಗ ಕೂತು ಇಂಥಾವೆಲ್ಲಾ ಬರೀಲಿಕ್ಕೆ ಆಗೂದುಲ್ಲಾ… ಚಿಂಯ್ಯಾ ಪಿಂಯ್ಯಾ ಕಾಟ… ”
    ಯಾಕೋ ನನ್ನ ಬಾವನೆ ವ್ಯಕ್ತಪಡಿಸಲಾಗುತ್ತಿಲ್ಲಾ….!!! ಖುಷಿ ಪಡೋದೋ? ಅಥವಾ..ಗೊತ್ತಿಲ್ಲಾ..:)
    ತೀರ ಇತ್ತೀಚೆ ಕನ್ನಡದಲ್ಲಿ ರವಿಚಂದ್ರನ್ ‘ಕ್ರೇಜೀ ಲೋಕ’ ಎಂಬೊಂದು ಸಿನೆಮಾ ಬಂತು. ಅದರ ಕಥೆ ಹೆಚ್ಚೂ ಕಡಿಮೆ ‘ತರುಣ್ ತುರ್ಕ್ ಮ್ಹಾತಾರ ಅರ್ಕ್’ ಕಥೆಯನ್ನೇ ಹೋಲುತ್ತಿತ್ತು…

    ಪ್ರತಿಕ್ರಿಯೆ
  3. bharathi

    Wajapeyi sir sundara neNapugalu …rangabhoomiya kathe ishtondu thanmayatheyinda nannedru idthaa hogthiddira …kushiyaythu

    ಪ್ರತಿಕ್ರಿಯೆ
  4. bharathi bv

    Wajapeyi sir eshtondu sundara rangabhoomiya nenapugalu … kushiyagutte odthidre

    ಪ್ರತಿಕ್ರಿಯೆ
  5. prajna

    ನಿಮ್ಮ ಈ ಸೀರೀಸ್, ಇಲ್ಲಿಯವರೆಗೆ ಬಂದ ಎಲ್ಲವನ್ನೂ ಸೇರಿಸಿದರೆ, ಒಂಥರ ಕಣಜ ಇದ್ದಂಗಿದೆ ಸರ್. ಮತ್ತು, ಶಾಮರಾಯರೆಂಬ ವ್ಯಕ್ತಿತ್ವದ ಬಗ್ಗೆ ವಿಚಿತ್ರ ಬಗೆಯ ಇಮೇಜ್ ಹುಟ್ಟಿಕೊಂಡಿದೆ ಮನಸ್ಸಿನಲ್ಲಿ!!
    -ಪ್ರಜ್ಞಾ ಔರಂಗಾಬಾದ್

    ಪ್ರತಿಕ್ರಿಯೆ
  6. Badarinath Palavalli

    ಕನ್ನಡದ ನಾಟಕಗಳ ಒಂದು ತಲೆಮಾರನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ನಿಮ್ಮದು. ಅಂದು ದೇದೀಪ್ಯಮಾನವಾಗಿದ್ದ ರಂಗವು ಇಂದು ಆಧುನಿಕ ಮಾದ್ಯಮಗಳಿಂದ ತುಸು ಮಂಕಾಗಿದೆ ಎನಿಸಿದರೂ ನಾಟಕಗಳ ತೂಕವೇ ಬೇರೆ. ಇದು ನಿಮ್ಮ ಹೆಜ್ಜೆ ಗುರುತುಗಳೇ ಆದರೂ ಕರ್ನಾಟಕ ಹವ್ಯಾಸೀ ನಾಟಕ ರಂಗದ ಇತಿಹಾಸವೂ ಆಗಿದೆ ಎನ್ನುವುದು ತಮ್ಮ ಶ್ರೇಷ್ಟತೆಗೆ ಹಿಡಿದ ದೀವಿಗೆ.

    ಪ್ರತಿಕ್ರಿಯೆ
  7. Pushparaj Chowta

    ಗೋವಾ ಸರ್,
    ಸುಮ್ಮನೇ ನೆನಪುಗಳ ಅಂಕಣ ಬಹುಶಃ ನಮ್ಮಂಥ ಯುವಕರಿಗೆ ಸ್ಪೂರ್ತಿಯಾಗಿ ನಿಲ್ಲುವಂತಾದ್ದು, ಆ ದಿನಗಳ ನಿಮ್ಮ ಕ್ರಿಯಾಶೀಲತೆ, ಉತ್ಸಾಹ, ಹುರುಪುಗಳು ನಮಗೆ ದಾರಿದೀಪ. ಆಲಸ್ಯದ ಮೇರುಮಟ್ಟಕ್ಕೆ ಹತ್ತಿರುವ ನಮ್ಮ ಯುವಜನತೆ ಸುಮ್ಮನೇ ನೆನಪುಗಳ ಒಳಹೊಕ್ಕು ಏನನ್ನಾದರೂ ಸಾಧಿಸುವ ಚಲ ತೋರಬೇಕು, ಪ್ರಯತ್ನ ನಮ್ಮದು, ಫಲ ಸಿಕ್ಕೀತು.

    ಪ್ರತಿಕ್ರಿಯೆ
  8. lalitha siddabasavaiah

    ಈ ವಯಸ್ಸಾದವರ ಚಾಳಿಯೇ ಇದೇನೋ , ಯಾರ ನೆನಪುಗಳನ್ನೂ ನಮ್ಮವೇ ಎನ್ನುವ ಹಾಗೆ ಆನಂದಿಸಿವುದು ಹ್ಹ ಹ್ಹಾ…. ಸರ್ , ಭಾಳಾ ಖುಷಿಯಾಯ್ತು

    ಪ್ರತಿಕ್ರಿಯೆ
  9. CHANDRASHEKHAR VASTRAD

    ಗದಗಿನ ತೋಂಟದಾರ್ಯ ಮಠದ ಜಾತ್ರಿಯೊಳಗ ತಿರಿಗ್ಯಾಡಿ ಬಂಧಂಗ ಆತು.ಅಬಬಬಬಾ ! ಎಷ್ಟ ಜನಾ ಏನ್ ಕಥಿ! ಹತ್ತೂರ ಮಾಲು ರಥಬೀದಿಯೊಳಗ ಒಬ್ರೆ ಹರವಕೊಂಡು ಕುಂತಿರಲ್ರಿ! ಹೌದೌದು ಅನಬೇಕು, ಹಂಗೈತಿ ವರ್ಣನಾ.ಮನಸಿಗಿ ಭಾಳ ಖುಶಿ ಆಯ್ತ್ರಿ ಗೋವಾ.

    ಪ್ರತಿಕ್ರಿಯೆ
  10. Mohan V Kollegal

    ‘ಆಗಮನ’ದಿಂದ ‘ಹಣ್ಣೆಲೆ’ಯ ತನಕ… ಆಹಾ… ಶೀರ್ಷಿಕೆಯೇ ಎಷ್ಟು ಚೆನ್ನಾಗಿದೆ… ಮಲಗುವ ಸಮಯದಲ್ಲಿ ನಿಮ್ಮ ಹಣ್ಣೆಲೆಯ ಅನುಭವಗಳನ್ನು ಓದಿ ನಿರಾಳನಾದೆ. ಖುಷಿಯಾಯಿತು… 🙂

    ಪ್ರತಿಕ್ರಿಯೆ
  11. ಸತೀಶ್ ನಾಯ್ಕ್

    ಬಹಳ ಚೆಂದದ ಅನುಭವಗಳು ಸಾರ್.. ಉಂಡು ಹೋದ ಕೊಂದು ಹೋದ ಚಿತ್ರದ ಹಿಂದೆ ಇಂಥದ್ದೊಂದು ಇತಿಹಾಸವಿರುವುದರ ಸುಳಿವಿರಲಿಲ್ಲ. ನೀವು ಸವೆದು ಬಂದ ಸವಿದು ಬಂದ ಪ್ರತೀ ಹಾದಿಯೂ ಮೂಡಿಸಿರುವ ಗುರುತುಗಳು ಅಚ್ಚರಿಯ ಜೊತೆ ಅತೀವ ಸಂತೋಷವನ್ನು ಉಂಟು ಮಾಡುತ್ತವೆ. ಖುಷಿಯಾಯ್ತು ಸರ್.. 🙂

    ಪ್ರತಿಕ್ರಿಯೆ
  12. Sripathi Manjanabailu

    You have re-winded my memories of the yestar years, by reading your article. Thanks.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: