ಪರದೆಯ ಪಂಜರವನ್ನು ಒಡೆದಾಗ
ಎನ್ ಸುರೇಶ್ ನಾಗಲಮಡಿಕೆ
ತೆಲುಗು ಕಾವ್ಯವು ಇಂದಿಗೂ ವಿಪ್ಲವವನ್ನು ಮುಖ್ಯ ಧಾತುವನ್ನಾಗಿ ಮಾಡಿಕೊಂಡೇ ರಚಿತಗೊಳ್ಳುತ್ತಿದೆ. ಕ್ರಾಂತಿಯು ಆಂಧ್ರದ ಒಟ್ಟು ಸಾಂಸ್ಕೃತಿಕ ಲೋಕದಲ್ಲಿ ಮುಖ್ಯ ಬಿಂದು. ಯಾವೊಬ್ಬ ಮುಖ್ಯ ಕವಿಯೂ ವಿಪ್ಲವಕ್ಕೆ ವಿಮುಖವಾಗಿ ಬರೆದಂತೆ ಕಾಣುವುದಿಲ್ಲ. ತೆಲುಗು ಕಾವ್ಯ ಘಟ್ಟಗಳು ಯಾವ ಬಗೆಯಲ್ಲಿ ವಿಪ್ಲವನ್ನು ಎದುರುಗೊಂಡಿವೆ ಎಂಬುದು ಇನ್ನೂ ಆಳವಾಗಿ ಚರ್ಚೆ ನಡೆಯಬೇಕಾಗಿದೆ. ಶ್ರೀ ಶ್ರೀ ಗ್ರಹಿಸಿರುವ ರೀತಿಗೂ ದಿಗಂಬರ ಕವಿಗಳು ಮುಖಾಮುಖಿಯಾದ ಬಗೆಗೂ ವ್ಯತ್ಯಾಸಗಳಿವೆ. ಇದರ ನಡುವೆ ಸ್ತ್ರೀ ಜಗತ್ತು ಅನೇಕ ಸವಾಲುಗಳನ್ನು ಎದುರುಗೊಳ್ಳಬೇಕಾಯಿತು. ಇದರ ಮಧ್ಯೆ ತೆಲುಗು ಚಲನಚಿತ್ರ ರಂಗವು ಸಾಮಾಜಿಕ ಸ್ಥಿತ್ಯಂತರಗಳನ್ನು ಸರಿಯಾಗಿಯೇ ಎದುರುಗೊಂಡಿದೆ. ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾದ ಕೆಲವು ಚಿತ್ರಗಳು ಇದಕ್ಕೆ ಸಾಕ್ಷಿ. ಕಮ್ಯೂನಿಸ್ಟ್ ಸಿದ್ಧಾಂತ ಜಮೀನ್ದಾರಿ ವಿರೋಧಿ ಚಳುವಳಿಗಳು. ದಲಿತ ಹಿಂದುಳಿದ ಸಮುದಾಯಗಳ ಮೇಲೆ ಮುಖ್ಯ ಸಮುದಾಯಗಳು ನಡೆಸಿದ ಹಿಂಸಾತ್ಮಕ ದಾಳಿ ಇವೆಲ್ಲಾ ಗಮನಿಸಬೇಕಾದ ಅಂಶಗಳು. ಇವೆಲ್ಲವುಗಳ ನಡುವೆ ಮುಸ್ಲಿಂ ಬರಹಗಳಲ್ಲಿ ಗಟ್ಟಿಯಾದದ್ದು ಹೆಚ್ಚು ಬರಲಿಲ್ಲ. ಮುಸ್ಲಿಮರೊಡನೆ ಭಾಂಧವ್ಯ ಸಮಾನತೆ ಅವರ ವಿಭಿನ್ನ ಭಾಷೆ ಇವುಗಳನ್ನು ಚಲನಚಿತ್ರ ಲೋಕ ಚೆನ್ನಾಗಿ ಗ್ರಹಿಸಿದೆ. ಈ ಅಂಶಗಳನ್ನು ಷಾಜಹಾನರಂತ ಕವಯತ್ರಿಯ ಕಾವ್ಯದಲ್ಲಿ ನೋಡಲು ಸಾಧ್ಯವೇ? ಸ್ತ್ರೀವಾದ ಸಿದ್ದಾಂತದ ಚೌಕಟ್ಟಿನಲ್ಲೇ ಭಾಷೆಯನ್ನು ಗಮನಿಸಿದರೆ ಆಗುವ ಅಪಾಯಗಳೇನು ? ಎಂಬ ಪ್ರಶ್ನೆಗಳೂ ಎದುರಾಗುತ್ತವೆ.

ಈಗ ನಮ್ಮ ಮುಂದೆ ತೆಲುಗು ಕವಯತ್ರಿ ಷಾಜಹಾನರ ‘ನಖಾಬ್’ ಎಂಬ ತೆಲುಗು ಕವಿತೆಗಳಿವೆ. ಅವು ಕನ್ನಡದಲ್ಲಿ ಕಾಣುತ್ತಿರುವುದು ಸ. ರಘುನಾಥ್ ಅವರಿಂದ. ಇಲ್ಲಿನ ಅನೇಕ ಕವಿತೆಗಳು ಸ್ವಗತ ಧಾಟಿಯಿಂದಲೇ ಜೀವತುಂಬಿಗೊಂಡಿವೆ, ಇದರ ಹಿಂದಿನ ಶ್ರೀ ಶ್ರೀ ಮತ್ತುದಿಗಂಬರ ಕಾವ್ಯವನ್ನು ಆಳವಾಗಿ ನೋಡಿದರೂ ಸ್ವಗತ ಧಾಟಿ ಕವಿತ್ವಕ್ಕೆ ಮೀಮಾಂಸೆಯ ರಕ್ತ ಮಾಂಸಗಳನ್ನು ತುಂಬಿರುವುದು ನೋಡಬಹುದು. ವಿಪ್ಲವ ಕಾವ್ಯಕ್ಕೆ ಸ್ವಗತದ ಓಟ ಮತ್ತು ಅದರಿಂದ ಹೊರಬರುವ ಸಿಧ್ದಾಂಥಗಳು ತೆಲುಗು ಕಾವ್ಯಕ್ಕೆ ಜೀವ ಎನ್ನಬಹುದು. ಷಾಜಹಾನರ ‘ನಖಾಬ್’ ಎಂಬುದು (ಬುರ್ಖಾ) ಮೇಲುನೋಟಕ್ಕೆ ವಾಚ್ಯವಾದರೂ ಅದರೊಳಗೆ ಅದರೊಳಗೆ ಹಲವು ವ್ಯಂಗಾರ್ಥಗಳು ಸಂಕಲನದ ಉದ್ದಕ್ಕೂ ವ್ಯಾಪಿಸಿಗೊಂಡಿವೆ. ಮುಸ್ಲಿಂ ಭಾವಲೋಕಕ್ಕೆ ಇದೊಂದು ತಡೆ ಎಂಬ ಅರ್ಥದಲ್ಲೂ ಇದರ ಹಿಂದೆ ಮುಸ್ಲಿಂ ಸ್ತ್ರೀಯ ಕನಸುಗಳು, ಸ್ವೇಚ್ಚೆ ಕಮರಿಹೋಗುವುದನ್ನು ಅಭಿವ್ಯಕ್ತಿಸುತ್ತದೆ. ಸಂವೇದನೆ ಒಂದೇ ಆದರೂ ಅನುಭವದ ಲೋಕ ಭಿನ್ನ. ಅದನ್ನು ಒಳಗು ಮಾಡಿಕೊಳ್ಳುವ ಬಗೆ ಹೀಗೆ.
ಕಲ್ಲವಾದರು ಒಡೆವ ಶಕ್ತಿಯಿದೆ ನನಗೆ
ನೀವು ಬಿಗಿದ ಕಬ್ಬಿಣದ ಸಂಕೋಲೆಗಳನ್ನು
ಕಳಚುವ ಧೃತಿ ಇದೆ ನನಗೆ (ಪರದೆ ಸರಿಸಿ ನೋಡು)
ಉರ್ದು ತಾತ್ವಿಕ ಪರಿಭಾಷೆಯನ್ನು ಅವರು ಕವಿತ್ವಕ್ಕೆ ಬಳಸಿಕೊಳ್ಳುವ ಮತ್ತು ಅದರಿಂದ ಒಡ ಮೂಡಿದ ಅನುಭವ ಪ್ರಪಂಚ ಇಲ್ಲಿ ಬೇರೊಂದು ಆಯಾಮವನ್ನು ಪಡೆದುಕೊಂಡಿದೆ. ಮುಸ್ಲಿಂ ಲೋಕದ ‘ಹಲಾಲ್’ ನ್ನು ಷಾಜಹಾನರು ಸ್ವೀಕರಿಸುವ ರೀತಿ ಬೇರೆ. ಆ ಶಬ್ದಕ್ಕೆ ಸಿಟ್ಟು ವ್ಯಕ್ತಪಡಿಸುತ್ತಲೇ ಅದರ ಹಿಂದೆ ಆಡಗಿರುವ ಕ್ರೌರ್ಯವನ್ನು ಹೇಳುತ್ತಾರೆ.
ನಮ್ಮ ತುಟಿಗಳು ಹಲಾಲ್ ನಾಮ ಪಠಿಸುವ ತನಕ
ಇವರು ಬದಲಾಗುವುದಿಲ್ಲ (ಅನಾರ್ಕಲಿ)
ಮುಸ್ಲಿಂ ಸಮುದಾಯದಲ್ಲೇ ಬೇರೆಯಾದ ದೂದೇಕುಲಕ್ಕೆ ಸೇರಿದ ಈಕೆ ಅಸಲಿ ನಕಲಿ ಎಂಬ ಆರೋಪವನ್ನು ಎದುರಿಸಬೇಕಾಗುತ್ತದೆ. ಈ ಸಮುದಾಯದ ಒಳಸಂಕಟಗಳನ್ನು ‘ಲದ್ದಾಘ್ನಿ’ ಕವಿತೆ ಚೆನ್ನಾಗಿ ಹೇಳುತ್ತದೆ.
ನನ್ನ ದೂದೇಕುಲಕ್ಕೆ ಷೋಹರ್ ಆಪಾದಿಸಿಕೊಳ್ಳದಿರುವಾಗ
ಅಸಲೀ ಮುಸ್ಲಿಂ ಮುದ್ರೆಯನ್ನು ಮಾತ್ರ ನಾನು ಭರಿಸಬೇಕೆ? (ಲದ್ಧಾಘ್ನಿ)
ಮುಸ್ಲಿಂ ಲೋಕದಲ್ಲಿ ಒಂದು ರೀತಿಯ ಅಸ್ಪ್ರಶ್ಯತೆಯನ್ನು ಅಂಟಿಸಿಕೊಂಡಿರುವ ದೂದೇಕುಲದ ಭಾವ ಪ್ರಪಂಚವನ್ನು ಮತ್ತಷ್ಟು ಹೇಳುವ ಅವಕಾಶವಿತ್ತು. ಆದರೆ ಅದು ಕ್ವಚಿತ್ತಾಗಿದೆ. ಇಲ್ಲಿನ ಕವಿತೆಗಳಲ್ಲಿ ಒಂಟಿತನವೆಂಬುದು ಹೆಚ್ಚು ಕಾಡುವುದಿಲ್ಲ. ‘ಮುನ್ನುಗ್ಗುವ’ ಮತ್ತು ‘ಮುನ್ನುಗ್ಗಿಸುವ’ ಕಾರ್ಯವಷ್ಟೇ ಮಾಡುತ್ತವೆ. ಇದನ್ನು ‘ಥೂಕರಿಕೆ’ ಎಂಬ ಕವಿತೆಯಲ್ಲಿ ಹೇಳುತ್ತದೆ. ಪರಂಪರೆ ಎಂಬ ಥೂಕರಿಕೆ ಮುಸ್ಲಿಂ ಸ್ತ್ರೀಯ ದೇಹದ ಲಯವನ್ನೇ ಪುರುಷ ಆಕ್ರಮಿಸಿದ್ದಾನೆ.
ನನ್ನನ್ನು ಏಳನೇ ಶತಮಾನದ ಕಮಾಮಿನಿನಾಚೆಯೆ
ತಡೆದೆನೆಂದರೆ
ಎಂಥಹಾ ಮೇಧಾವಿ ಅವನು! (ಥೂಕರಿಕೆ)
ತನ್ನನ್ನು ದುರ್ಗತಿ ತಳ್ಳಿದ್ದ ಧರ್ಮ, ತಂದೆ, ಗಂಡ, ಇವರಲ್ಲದೆ ಅಲ್ಲಾನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.
ಮುವ್ವತ್ತು ಸಲ ತಲಾಖು ಹೇಳಿ
ನೀನಾದರೆ ಮುವ್ವತ್ತು ಮೂರು ಸಲ ನಿಖಾ ಹೆಸರಿನಲಿ
ಬಹಿರಂಗವಾಗಿ ವ್ಯಭಿಚಾರ ಮಾಡಬಹುದು
ದಯಾಮಯನಾದ ಅಲ್ಲಾ ಯಾವ ನಿರ್ಭಂಧವನ್ನೂ ಹೇರುವುದಿಲ್ಲ. (ಖೌಸೆ ಖಿಜಾ)
ಎಂದು ಮುಸ್ಲಿಂ ಪುರುಷ ಲೋಕಧರ್ಮವನ್ನು ತನ್ನ ಕಕ್ಷೆಯಲ್ಲೇ ನಡೆಸಿಕೊಳ್ಳುತ್ತಿರುವ ಬಗ್ಗೆ ಸಿಟ್ಟಿದೆ. ಆದರೆ ಇಂತಹ ಸಿಟ್ಟು ಭಿನ್ನ ರೀತಿ0ುಲ್ಲಿ ಕಾಣಿಸಿಕೊಳ್ಳುವುದಿಲ್ಲ. ‘ನಖಾಬ್’ ನಲ್ಲಿ ಮುಖ್ಯವಾದ ಕವಿತೆ ‘ವಾಹ್ ಬೆಳದಿಂಗಳಲ್ಲಿ ತಾಜ್’ ಇದರಲ್ಲಿ ಸೌಂದರ್ಯವನ್ನು ಮತ್ತು ವಾಸ್ತವದ ಬದುಕು ಮುಖಾಮುಖಿಯಾಗುತ್ತವೆ. ಇದರ ಮಧ್ಯೆ ನುಸುಳುವ ಚಾರಿತ್ರಿಕ ವ್ಯಕ್ತಿಗಳ ವ್ಯಂಗ್ಯ ವಾಸ್ತವಕ್ಕೆ ಹಾಗೂ ಮುಸ್ಲಿಂ ಪ್ರಪಂಚದಲ್ಲಿ ಆಗುತ್ತಿರುವ ಪಲ್ಲಟಗಳನ್ನು ಅಭಿವ್ಯಕ್ತಿಸುತ್ತದೆ. ಒಂದು ಮಹತ್ವದ ಕವಿತೆಗೆ ಬೇಕಾದ ಎಲ್ಲಾ ಪರಿಕರಗಳು ಇಲ್ಲಿವೆ.
ವಾಹ್ ಬೆಳದಿಂಗಳಲ್ಲಿ ತಾಜಮಹಲು
ಕನಿಷ್ಟ ನೋಡಲು ಹೋಗಲಾರದವಳಾಗಿದ್ದೇನೆ.
ಕ್ಯಾ ಅಜೀಬ್ ಬಾತ್ ಹೈ
ನನ್ನ ಹೆಸರು ಷಾಜಹಾನ
ವ್ಯಂಗ್ಯವು ಮೇಲುನೋಟಕ್ಕೆ ಅರ್ಥವಾಗುತ್ತದೆ. ಇಲ್ಲಿನ ಷಜಹಾನ ಗಂಡಲ್ಲ ಹೆಣ್ಣು ಇಷ್ಟು ಹೇಳಿದರೂ ಮುಸ್ಲಿಂ ಕುಟುಂಬದ ಕಕ್ಷೆಯನ್ನು ಮೀರಿ ಇವರ ಕಾವ್ಯ ಚಾಚಿಕೊಳ್ಳುವುದಿಲ್ಲ. ತನ್ನ ಕುಲದ ಸ್ತ್ರೀಯರ ಅಪಹರಣಗಳ ಬಗ್ಗೆ ಕಾವ್ಯ ಇನ್ನೂ ನುಡಿಯಬಹುದಿತ್ತು. ಅದು ಗೌಪ್ಯವಾಗಿದೆ. ಮುಸ್ಲಿಂ ಸ್ತ್ರೀಲೋಕ ಉಳಿದ ಸ್ತ್ರೀಲೋಕದೊಂದಿಗೆ ಸಂವಾದ ನಡೆಸುವುದಿಲ್ಲ. ತನ್ನ ಸುತ್ತಲ ಸಮಾಜದೊಂದಿಗೆಯೂ ಅಷ್ಟೆ. ಹಾಗಾಗಿಯೇ ಅನೇಕ ಕಡೆ ಇವರ ಕವಿತೆಗಳು ಏಕತಾನತೆ0ುನ್ನು ಪಡೆದುಕೊಂಡಿದೆ. ಆದರೆ ಭಾಷೆ. ಲಯ ಮತ್ತು ಶೈಲಿಯಿಂದ ಇವರು ತೆಲುಗು ಮಹಿಳಾಕಾವ್ಯದಲ್ಲಿ ಭಿನ್ನವಾಗಿದ್ದಾರೆ. ಸ ರಘುನಾಥ್ ಅವರು ಇವು ಕನ್ನಡದ್ದೇ ಕವಿತೆಗಳು ಎನ್ನುವಂತೆ ಅನುವಾದಿಸಿದ್ದಾರೆ. ಅವರು ಮತ್ತು ವಿಜಯ್ ರಾಘವನ್ ಇದಕ್ಕೊಂದು ಒಳ್ಳೆಯ ಪ್ರವೇಶಿಕೆಯನ್ನು ಒದಗಿಸಿದ್ದಾರೆ.
ಪುಸ್ತಕದ ವಿವರಗಳು:
ಷಾಜಹಾನರ ನಖಾಬ್ (ತೆಲುಗು ಕವಿತೆಗಳು)
ಕನ್ನಡಕ್ಕೆ ಸ. ರಘುನಾಥ್
ಪ್ರಕಟನೆ : ವಿಹಾ ಪುಸ್ತಕ
ಬೆಲೆ : ರೂ . 50.00
ಪ್ರಕಟಣೆ ವರ್ಷ : 2011






0 Comments