
ಎನ್ ರವಿಕುಮಾರ್ / ಶಿವಮೊಗ್ಗ
ಶ್….
ಕೂಸು ಮಲಗಿದೆ
ಸದ್ದಾಡಬೇಡಿ
ಎಳೆ ಎಸಳ ಕೆನ್ನೆಗಳಿಗೆ
ಮತ್ತೆ ಮತ್ತೆ ಮುತ್ತಿಟ್ಟು ಕಾವು ಕೊಡುತ್ತಿದ್ದಾಳೆ
ಹಾಲ ಪಸೆ ಆರಿಲ್ಲದ ತುಟಿಗಳಿಗೆ
ತುಟ್ಟಿ ಹೊತ್ತಿ ಉಸಿರು ತುಂಬುತ್ತಿದ್ದಾಳೆ
ಎಡಗೈ ಬಲಗೈಗಳು ಬಿಡುವಿಲ್ಲದೆ
ಬೀಸುತ್ತಾ ನೊಣ,ಸೊಳ್ಳೆಗಳ
ನೂಕುತ್ತಿದ್ದಾಳೆ
ಈ ಜೀವ ಕಣ ಮಿಸುಕಾಡಿದರೆ ಸಾಕು
ಮರು ಕ್ಷಣವೇ ನನ್ನ ಜೀವ ನಿಂತರೂ ನಿಲ್ಲಲಿ
ಶ್….
ಕೂಸು ಮಲಗಿದೆ
ಸದ್ದಾಡಬೇಡಿ…
ದೇವರುಗಳನ್ನೆಲ್ಲಾ ಕೂಗಿ ಕರೆದಿದ್ದಾಳೆ
ದಿಕ್ಕು ದಿಕ್ಕಿಗೂ ಮೊರೆಯಿಟ್ಟು
ಅಲ್ಯಾರೋ ಪವಾಡ ಪುರುಷನಿದ್ದಾನಂತೆ
ಕೂಗಳತೆ ದೂರದಲ್ಲಿ ಸರಯೂ ನದಿಯ ದಡದಲ್ಲಿ
ಮರುಭೂಮಿಯ ಖರ್ಜೂರದ ಮರದಲ್ಲಿ
ಜೆರುಸಲೆಂನ ಕಡಿದಾದ ಬೆಟ್ಟದಲ್ಲಿ
ಹುಡಕ ಹೋದವರು
ಬರಿಗೈಲಿ ಬಂದಿದ್ದಾರೆ
ಥೂ….
ಆ ದೇವಲೋಕಗಳೆಲ್ಲಾ
ಬರಡಾಗಿ,ಮಡುವಾಗಿ
ಮಕ್ಕಳಿಲ್ಲದಂತಾಗಲಿ
ಅವನು ರಾಜನಂತೆ
ಅವನ ದರ್ಬಾರು ನನ್ನೊಡಲ
ಉರಿಬೆಂಕಿಯಲ್ಲಿ
ಸುಟ್ಟು ಬೂದಿಯಾಗಲಿ
ಚಣ ಗಾಳಿಯೂ ಕೊಡದ
ನಿನ್ನ ಪಾಳು ಸಾಮ್ರಾಜ್ಯ.
ಅವಳ ಶಾಪಕ್ಕೆ ಕಲ್ಲು ಸಿಡಿದು
ಕಣ್ಣೀರಿಟ್ಟಿದೆ
ಶ್….
ಕೂಸು ಮಲಗಿದೆ
ಸದ್ದಾಡಬೇಡಿ
ಒಡ್ಡೋಲಗದ ದಾರಿಯಲ್ಲಿ
ಅವಳ ಕರುಳಚೀಲ ಚೀತ್ಕರಿಸಿ
ಅಲೆದಾಡುತ್ತಿದೆ
ಧೀರ್ಘ ನಿದ್ದೆಯ ಕೂಸ ಪಯಣದ ಮಣದುಃಖ
ಮಡುಗಟ್ಟಿ
ಸತ್ತ ಆತ್ಮಗಳ ದರ್ಬಾರಿನಲ್ಲಿ
ಈಗ ಹೆಣಗಳದ್ದೇ ಸಾಲು ಸಾಲು
ಮೆರವಣಿಗೆ
ಶ್…
ಕೂಸು ಮಲಗಿದೆ
ಸದ್ದಾಡಬೇಡಿ
ಒಂದನಿ ಕಣ್ಣೀರಿಟ್ಟು
ಕೈಮುಗಿಯಿರಿ.





ಪದ್ಯ ಚೆನ್ನಾಗಿದೆ.
ಗೋರಖಪುರ ಮಕ್ಕಳ ದುರಂತ ಕಂಡು ಬರೆದ ಕಣ್ಣೀರ ಹನಿಗಳು…
*ವ್ಯತ್ಯಾಸ
ನಿತ್ಯವೂ ಒಂದು ಬಂಡಿ
ಅನ್ನ, ಒಂದೇ ನರಹತ್ಯೆ
ಬಯಸುತ್ತಿದ್ದನಂತೆ
ಪುರಾಣಕಾಲದ ಬಕಾಸುರ;
ವಾರೊಪ್ಪತ್ತಿನಲ್ಲಿ ಎಂಬತ್ತು
ಹಸುಳೆಗಳ ಹತ್ಯೆಮಾಡಿಬಿಟ್ಟಿತಲ್ಲ
ಉತ್ತರಪ್ರದೇಶ ಸರಕಾರ
*ಹಸು(ಳೆ)
ಉತ್ತರಪ್ರದೇಶದಲ್ಲಿ ಹಸುಗಳನ್ನು
ಕೊಂದ ನೆಪವೊಡ್ಡಿ ಮನುಷ್ಯರನ್ನು
ಹಾಡಹಗಲೇ ಕೊಲ್ಲಲಾಗುತ್ತದೆ
ಸಾರ್ವಜನಿಕವಾಗಿ;
ಎಂಬತ್ತು ಹಾಲುಗಲ್ಲದ ಹಸುಳೆಗಳನ್ನೇ
ಕೊಂದರೂ ಸಿಎಂ ಕುರ್ಚಿಯಲ್ಲಿ
ಮುಂದುವರಿದಿದ್ದಾರೆ
ಆದಿತ್ಯನಾಥ ಯೋಗಿ!
*ವ್ಯತ್ಯಾಸ
ಉತ್ತರಪ್ರದೇಶದ ಜನ
ಹಿಂದೊಮ್ಮೆ ಅಂದರು
ಸಂಸಾರಿಗಿಂತ
ಸನ್ಯಾಸಿ ಸಿಎಂ
ಹೆಚ್ಚು ವಾಸಿ;
ಅದಕ್ಕೋ ಏನೋ
ಅಲ್ಲಿ ಆಮ್ಲಜನಕ ಸಿಗದೇ
ವಾರೊಪ್ಪತ್ತಿನಲ್ಲಿ
ಎಂಬತ್ತು ಮಕ್ಕಳು
ಕೈಲಾಸವಾಗಿ!
*ಚಿಂತೆ
ಆಮ್ಲಜನಕ ಸಿಗದೇ
ಎಂಬತ್ತು ಮಕ್ಕಳ
ಕಳೆದುಕೊಂಡಳು
ಭಾರತಮಾತೆ;
ಸೂತಕದ ಮನೆಯಲ್ಲಿ
ಸ್ವಾತಂತ್ರ್ಯೋತ್ಸವ
ಹೇಗೆ ಆಚರಿಸಲಿ
ಎಂಬುದೇ ದೊಡ್ಡ ಚಿಂತೆ!
#ಕಲಿಗಣನಾಥ ಗುಡದೂರು