ಶ್ರೇಯಾ ಓದಿದ ‘ಟೀಚರ್ ಡೈರಿ’

ಶ್ರೇಯಾ ರವಿ ಬಡಿಗೇರ

‘ಮಕ್ಕಳು ಓದಿದ ಟೀಚರ್ ಡೈರಿ’ ಈ ಮಕ್ಕಳ ಕಾದಂಬರಿಯ ಹೆಸರೇ ವಿಭಿನ್ನವಾಗಿರುವ ಹಾಗೆ ಈ ಪುಸ್ತಕವೂ ಕೂಡ ವಿಭಿನ್ನವಾಗಿಯೇ ಇದೆ. ಅದೇ ರೀತಿ ಕೃತಿ ಓದಲು ಕೂಡ ತುಂಬಾ ವಿಭಿನ್ನವಾಗಿಯೇ ಇದೆ. ಏಕೆಂದರೆ ಈ ಕೃತಿಯಲ್ಲಿರುವ ಶಿಕ್ಷಕಿ ವಿದ್ಯಾರ್ಥಿಗಳ ನಡುವಿನ ಸಂಬಂಧ, ಮಾತುಕತೆ, ಅದರಲ್ಲಿರುವ ತುಂಟಾಟಗಳು, ನೀತಿ ಪಾಠಗಳು ತಪ್ಪುಗಳನ್ನು ತಿದ್ದಿಕೊಳ್ಳುವ ಗುಣ ಹೀಗೆ ನಾವು ಈ ಪುಸ್ತಕವನ್ನು ಓದಿ ತುಂಬಾ ಕಲಿಯುವುದಿದೆ. ನಮ್ಮ ಆಡು ಭಾಷೆಯನ್ನೇ ಬಳಸಿದ್ದು ನನಗೆ ಖುಷಿಯಾಗಿದೆ.

ನಮ್ಮ ವಯಸ್ಸಿನ ಮಕ್ಕಳು ಹೇಗೆ ಇರುತ್ತಾರೆ? ಅವರ ಭಾವನೆಗಳು, ಅವರ ಮನಸ್ಸು, ಎಲ್ಲವನ್ನೂ ಚೆನ್ನಾಗಿ ತೋರಿಸಿದ್ದಾರೆ. ಟೀಚರ ಡೈರಿ ಮಕ್ಕಳಿಗೆ ಸಿಕ್ಕಾಗ ಮಕ್ಕಳಿಗೆ ಅಷ್ಟೇ ಅಲ್ಲ, ಓದುಗರಲ್ಲಿಯೂ ಕೂಡ ಆ ಡೈರಿಯಲ್ಲಿ ಏನಿರಬಹುದು ಎಂಬ ಕುತೂಹಲ ಉಂಟಾಗುತ್ತದೆ. ಒಂದು ಸಲ ನೀಲಕಂಠ ಶಕುಂತಲಾ ದಂಪತಿ ಮತ್ತು ಅವರ ಆಪ್ತರಾದ ರುಸ್ತುಂ ಸರ್ ಯಲ್ಲಮ್ಮನ ಗುಡ್ಡದ ಜಾತ್ರೆಗೆ ಹೋಗಿರುತ್ತಾರೆ. ಆಗ ಅಲ್ಲಿ ಒಬ್ಬ ಮಹಿಳೆ ಈ ಕೂಸನ್ನು ಸ್ವಲ್ಪ ಹೊತ್ತು ಇಟ್ಟುಕೊಳ್ಳಿ ಎಂದು ಕೊಟ್ಟು ಮರಳಿ ಬರುವುದೇ ಇಲ್ಲ. ಆಗ ಆ ಕೂಸನ್ನು ನೀಲಕಂಠ ಶಕುಂತಲಾ ದಂಪತಿ ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಾರೆ. ಮತ್ತು ಆ ಮಗುವಿನ ಓದಿನ ಖರ್ಚು ವೆಚ್ಚವನ್ನು ರುಸ್ತುಂ ಸರ್ ನೋಡಿಕೊಳ್ಳುತ್ತಾರೆ. ಆ ಮಗುವಿನ ಹೆಸರೇ ಶಾಲಿನಿ. ರುಸ್ತುಂ ಸರ್ ಎಂದರೆ ಶಾಲಿನಿಗೆ ಅಪ್ಪನಿಗಿಂತಲೂ ಮಿಗಿಲು. ಅದಕ್ಕೆ ಅವರನ್ನು ಪಪ್ಪಾ ಎಂದು ಕರೆಯುತ್ತಿದ್ದಳು.

ಶಾಲಿನಿ ಬಾಲ್ಯದಲ್ಲಿ ಚೆನ್ನಾಗಿ ಓದುತ್ತಿದ್ದಳು ಆದರೆ ತುಂಬಾ ಹಟವಾದಿ ಹುಡುಗಿಯಾಗಿದ್ದಳು. ಮನಸ್ಸು ಬಂದರೆ ಕೆಲಸ ಮಾಡುವುದು, ಇಲ್ಲದಿದ್ದರೆ ಇಲ್ಲ ಎನ್ನುವ ಸ್ವಭಾವದವಳಾಗಿದ್ದಳು. ಶಾಲಿನಿಗೆ ಮೊದಲು ಕ್ರೀಡೆಯಲ್ಲಿ ಆಸಕ್ತಿ ಇರುವುದಿಲ್ಲ. ಆಮೇಲೆ ಕ್ರೀಡೆಯಲ್ಲಿ ಆಸಕ್ತಿ ಬಂದು ಅವರ ಪಿ.ಇ. ಟೀಚರ್ ಹತ್ತಿರ ಖೋ-ಖೋ ಆಟದ ಬಗ್ಗೆ ಒಂದಿಷ್ಟು ಸಹಲಹೆಗಳನ್ನು ಪಡೆದು ಅವಳ ಶ್ರಮದಿಂದ ಆಟವನ್ನು ಗೆದ್ದಳು. ಇದರಿಂದ ನಮಗೂ ಕೂಡ ಕ್ರೀಡೆಯಲ್ಲಿ ಆಸಕ್ತಿ ಮತ್ತು ಛಲ ಹುಟ್ಟುತ್ತದೆ. ಶಾಲಿನಿ ‘ನಾನು ಆಟ ಆಡುತ್ತೇನೆ’ ಎಂದಾಗ ಅಣುಕಿಸಿದ ಸುನಂದಾ ಅವಳ ಆಟದ ವೈಖರಿಯನ್ನು ನೋಡಿ ತಾನೇ ಬಂದು ಶಾಲಿನಿ ಹತ್ತಿರ ಕ್ಷಮೆ ಕೇಳುತ್ತಾಳೆ.

ಶಾಲಿನಿ ರಸ್ತುಂ ಸರ್ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸುತ್ತಾಳೆ. ನಂತರ ಅವರ ತಂದೆ ಅವಳು ಮುಂದೆ ಓದಲು ನಿರಾಕರಿಸುತ್ತಾರೆ. ಆದರೆ ರುಸ್ತುಂ ಸರ್ ಶಾಲಿನಿ ಓದಿನ ಬಗ್ಗೆ ತಿಳಿಸಿ ಅವರ ಮನವೊಲಿಸಿ ಓದಲು ಒಪ್ಪಿಗೆ ಕೊಡಿಸುತ್ತಾರೆ. ಓದಿನಲ್ಲಿ ಆಸಕ್ತಿ ಇರುವ ಶಾಲಿನಿ ಚೆನ್ನಾಗಿ ಓದಿ ಶಾಲಿನಿ ಟೀಚರ್ ಆಗುತ್ತಾರೆ. ಅವರಿಗೆ ವಿದ್ಯಾರ್ಥಿಗಳೆಂದರೆ ತುಂಬಾ ಇಷ್ಟ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಅವರು ಟೀಚರ್ ಆಗಿದ್ದಾಗ ಫಕ್ಕೀರ ಎನ್ನುವ ಒರಟು ಹುಡುಗನನ್ನು ಮಮತೆಯಿಂದ ಒಳ್ಳೆಯ ಹುಡುಗನನ್ನಾಗಿ ಪರಿವರ್ತಿಸುತ್ತಿರುತ್ತಾರೆ.

ಫಕ್ಕೀರನ ತಾಯಿ ಶಾಂತಕ್ಕ ಶಾಲಿನಿ ಟೀಚರರನ್ನು ಭೇಟಿಯಾದಾಗಲೆಲ್ಲ ಅವರನ್ನು ಪಾದದಿಂದ ತಲೆಯವರೆಗೂ ದಿಟ್ಟಿಸಿ ನೋಡುತ್ತಾರೆ. ಏಕೆಂದರೆ ಶಾಂಕತಕ್ಕನಿಗೆ ಶಾಲಿನಿ ಟೀಚರ್‌ ನ ನೋಡಿದರೆ ಅವರ ಅಪ್ಪನನ್ನು ನೋಡಿದಂತಾಗುತ್ತದೆ. ಶಾಲಿನಿ ಟೀಚರ್ ಆದ ಮೇಲೆ ಫಕ್ಕೀರನನ್ನು ಮಾತ್ರ ಅಲ್ಲ ಅವರನ್ನು ಬೆಳೆಸಿ ಓದಿಸಿದ ವಯಸ್ಸಾದ ರುಸ್ತುಂ ಸರ್‌ನನ್ನು ಕೂಡ ಶಾಲಿನಿ ಟೀಚರ್ ನೋಡಿಕೊಳ್ಳುತ್ತಾರೆ.

ಈ ಎಲ್ಲಾ ವಿಷಯವೂ, ಒಂದು ದಿನ ಶಾಲಿನಿ ಟೀಚರ್ ಊರಿಗೆ ಹೋದಾಗ ತಮ್ಮ ಮನೆಯನ್ನು ಸ್ವಲ್ಪ ಸ್ವಚ್ಛಗೊಳಿಸಲು ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೆ ಹೇಳಿರುತ್ತಾರೆ. ಆಗ ಆ ನಾಲ್ಕು ಜನ ವಿದ್ಯಾರ್ಥಿಗಳು ಅವರ ಮನೆ ಬೀಗ ತೆಗೆದು ಸ್ವಚ್ಛಗೊಳಿಸಲು ಹೋದಾಗ ಆ ‘ಮಕ್ಕಳು ಓದಿದ ಟೀಚರ್ ಡೈರಿ’ಯಲ್ಲಿ ಇದೆ. ಇದರಲ್ಲಿ ಇನ್ನೂ ಒಂದು ವಿಶೇಷ ಎಂದರೆ ಕಸ್ತೂರಿ ಎಂಬ ವಿದ್ಯಾರ್ಥಿನಿಯ ತೊದಲು ಮಾತುಗಳನ್ನು ಓದುವಾಗ ಖುಷಿಯಾಗುತ್ತದೆ.

ಒಂದು ದಿನ ಶಾಲಿನಿ ಟೀಚರ್ ಶಾಲೆಯಲ್ಲಿ ‘ನನ್ನ ಜೀವನ, ನನ್ನ ಬರಹ’ ಎನ್ನುವ ಸ್ಪರ್ಧೆಯಲ್ಲಿ ಈ ಮಕ್ಕಳು ಬಹುಮಾನವನ್ನು ಪಡೆದುಕೊಂಡರು. ಆನಂತರ ಅವರು ಶಾಲಿನಿ ಟೀಚರ್‌ಗೆ ಗೊತ್ತಿಲ್ಲದಂತೆ ಡೈರಿ ಓದಿದ್ದಕ್ಕಾಗಿ ಕ್ಷಮೆ ಕೇಳುತ್ತಾರೆ. ಆಗ ಟೀಚರ್ ವಿದ್ಯಾರ್ಥಿಗಳಿಗೆ ‘ನೀವೂ ದಿನಾಲೂ ಡೈರಿಯಲ್ಲಿ ನಿಮ್ಮ ಮನಸ್ಸಿನ ವಿಷಯಗಳನ್ನು ಬರೆಯಿರಿ. ಅದು ಒಳ್ಳೆಯ ಹವ್ಯಾಸ’ ಎಂದು ಹೇಳುತ್ತಾರೆ.

ಈ ಕೃತಿಯಿಂದ ನಾವು ಮಾನವೀಯ ಮೌಲ್ಯಗಳನ್ನು ಗೌರವಿಸಬೇಕು. ತಾಳ್ಮೆಯಿಂದ ಬದುಕಿನಲ್ಲಿ ಒಳ್ಳೆಯದನ್ನು ಸಾಧಿಸಬೇಕೆಂಬ ಛಲವನ್ನು ಕಲಿಯಬಹುದು ಮತ್ತು ನಾವೂ ಪ್ರತಿದಿನ ಡೈರಿಯನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂಬ ಪ್ರೇರಣೆ ನೀಡುತ್ತದೆ. ಈ ಕೃತಿಗೆ ಶ್ರೀ ಜಿ. ಬಿ ಹೊಂಬಳ ಸರ್ ಅವರ ೭೭ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀ ವೈ. ಜಿ. ಭಗವತಿ ಸರ್ ಅವರು ಬರೆದಿರುವ ‘ಮಕ್ಕಳು ಓದಿದ ಟೀಚರ ಡೈರಿ’ ಈ ಮಕ್ಕಳ ಕಾದಂಬರಿಗೆ ‘ಜಿ. ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ’ ಸಿಕ್ಕಿದ್ದಕ್ಕೆ ಸಾರ್ಥಕತೆ ಎನಿಸುತ್ತದೆ.

‍ಲೇಖಕರು Admin

December 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: