ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಯುತ ಟಿ ಎನ್ ಸೀತಾರಾಮ್ ಅವರಿಗೆ..

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ

ತೇಜಸ್ವಿನಿ ಹೆಗಡೆ

ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ,
ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ನೀವು ಪಾತ್ರ ಚಿತ್ರಣವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ರೀತಿ.. ಅವುಗಳನ್ನು ಬೆಳೆಸುವ ರೀತಿ, ಸಂಭಾಷಣೆಗಳಲ್ಲಿನ ಚುರುಕುತನ, ನವೀನತೆ ಅಷ್ಟೇ ಅಲ್ಲಾ ನಿಮ್ಮ ಧಾರಾವಾಹಿಗಳಲ್ಲಿ ಅಭಿನಯಿಸುವ ನಟ/ನಟಿಯರಿಂದ ನೀವು ಹೊರಹೊಮ್ಮಿಸುವ ನಟನಾಸಾಮರ್ಥ್ಯ, ಎಲ್ಲಕ್ಕಿಂತ ಮುಖ್ಯವಾಗಿ ಶೀರ್ಷಿಕೆ ಗೀತೆಗಳೊಳಗಿನ ಮಾಧುರ್ಯ, ಅರ್ಥವತ್ತಾದ ಸಾಹಿತ್ಯ… ಎಲ್ಲವೂ ನನಗೆ ಬಲು ಮೆಚ್ಚು. ಮನಃಪೂರ್ವಕವಾಗಿ ನಾನು ನಿಮ್ಮ ನಿರ್ದೇಶನದ ಧಾರಾವಾಹಿಗಳನ್ನು ಹೊಗಳಿದ್ದೇನೆ… ಮೆಚ್ಚಿದ್ದೇನೆ.

ಆದರೆ…… ಅದ್ಯಾಕೋ ಎಂತೋ “ಮಹಾಪರ್ವ” ಧಾರಾವಾಹಿಯಲ್ಲಿನ “ಮಂದಾಕಿನಿ” ಪಾತ್ರ ಮಾತ್ರ ಯಾಕೋ ಸರಿಯಾದ ಸಂದೇಶವನ್ನು ಸಮಾಜಕ್ಕೆ, ಅಂಗವಿಕಲರಿಗೆ ನೀಡುತ್ತಿಲ್ಲ ಎನ್ನುವ ಮನದಾಳದ ಅನಿಸಿಕೆ ನನ್ನದು. ನಾನೂ ಓರ್ವ ಹುಟ್ಟಾ ಅಂಗವಿಕಲೆಯಾಗಿದ್ದು, ವ್ಹೀಲ್ ಚೇರ್ ಉಪಯೋಗಿಸುತ್ತಿರುವ.. ಅದಿಲ್ಲದೇ ಹೊರ/ಹೊಳ ಜಗತ್ತನ್ನು ಸಂಚರಿಸಲಾಗದ, ಆದರೆ ಅದೊಂದು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲೂ ಇತರ ಸಾಮಾನ್ಯರಂತೇ ಬದುಕನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಿರುವ ವ್ಯಕ್ತಿ. ಆರು ವರುಷದ ಮಗಳ ತಾಯಿ.
ಹಾಗಾಗಿ ವ್ಹೀಲ್‌ಚೇರ್ ಬೌಂಡೆಡ್ ವ್ಯಕ್ತಿಗಳ ಸಮಸ್ಯೆ, ಅವರ ಹೋರಾಟ, ಅವರ ಸವಾಲುಗಳು ಹೇಗೆ ಚೆನ್ನಾಗಿ ಗೊತ್ತೋ ಹಾಗೇ ಅವರಿಂದ ಎಲ್ಲಾ ರೀತಿಯ ಮನೆಗೆಲಸಗಳು, ಉನ್ನತ ವಿದ್ಯಾಭ್ಯಾಸಗಳು, ಹೊರ-ಒಳ ಜಗತ್ತಿನ ಕೆಲಸಕಾರ್ಯಗಳು “ಮನಸ್ಸು ಇದ್ದರೆ.. ಸದೃಢವಾಗಿದ್ದರೆ” ಸಾಧ್ಯ ಅನ್ನೋದನ್ನು ನಂಬಿದವಳು.. ಅಂತೆಯೇ ನಡೆದವಳು.. ಇನ್ನೂ ನಡೆಯುತ್ತಿರುವವಳು. ಬಟ್ಟೆ, ಪಾತ್ರೆ, ಅಡುಗೆ, ಮನೆಯವರ ಬೇಕು ಬೇಡಗಳು, ಎಲ್ಲಾ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿದವಳು.. ಈಗಲೂ ನಿರ್ವಹಿಸುತ್ತಿರುವವಳು. ಇದನ್ನೆಲ್ಲಾ ನಾನು ನನ್ನ ಮೆರೆಸುಲೋಸುಗ ಖಂಡಿತ ಹೇಳುತ್ತಿಲ್ಲ. ನನಗೆ ಯಾರ ಅನುಕಂಪ ಅಥವಾ ಅತಿ ಹೊಗಳಿಕೆಯಂತೂ ಖಂಡಿತ ಬೇಕಾಗಿಲ್ಲ.
ಮೊದಲಿನಿಂದಲೂ ನನಗೆ ಸರಿ ಕಾಣದ್ದು ಮಂದಾಕಿನ ಪಾತ್ರ ಚಿತ್ರಣ. ಓರ್ವ ಅಂಗವೈಕಲ್ಯವುಂಟಾದ ವ್ಯಕ್ತಿಯ ಚಿತ್ರಣ ನಿಮ್ಮಿಂದ ಯಾವ ರೀತಿ ಬರುವುದೆಂದು ಬಹು ಉತ್ಸುಕಳಾಗಿದ್ದೆ ಮೊದಮೊದಲು. ಆದರೆ ಕ್ರಮೇಣ ಅಸಹನೆ ತುಂಬತೊಡಗಿತು. ಮಂದಾಕಿನಿ ಸದಾ ನಿಸ್ಸಾಯಕಳಾಅಗಿ ಕೂತಿರೋದು…. “ನನ್ನಿಂದಂತೂ ಯಾವ ಕೆಲಸವೂ ಮಾಡಿಕೊಡಾಲು ಆಗುತ್ತಿಲ್ಲ….” ಅನ್ನೋ ಮಾತನ್ನೇ ಪದೇ ಪದೇ ಆಗಾಗ ಹೇಳುವುದು… ಅಲ್ಲದೇ, ಅದರಲ್ಲೂ ನಿನ್ನೆಯ ಅಂದರೆ ೦೨-೦೮-೨೦೧೩ ಶುಕ್ರವಾರದ ಕಂತಿನಲ್ಲಿ ಒಂದು ತಪ್ಪು ಸಂದೇಶವನ್ನು ಸಾರುವ ಮಾತನ್ನು ಅವಳ ಸ್ವಂತ ಮಗಳಾದ, ಅತೀವ ಸೂಕ್ಷ್ಮ ಮನಸ್ಸಿನ ಪರಿಣಿತಳ ಬಾಯಿಯಿಂದಲೇ ಹೇಳಿಸಿದ್ದು ಮಾತ್ರ ಒಪ್ಪಿಕೊಳ್ಳಲೇ ಆಗಲಿಲ್ಲ.

“ನೀನು ಯಾವಾಗಲೂ ವ್ಹೀಲ್‌ಚೇರನಲ್ಲೇ ಕೂತಿರ್ತಿಯಲ್ಲಾ.. ಅದ್ಕೇ ನಿಂಗೇ ಅಂತ ಮಾಯಾಮೃಗ ಸಿ.ಡಿ. ತಂದಿದ್ದೀನಿ..” ಅಂತ ಮಗಳು ತಾಯಲ್ಲಿ ಹೇಳಿದ್ದು ನೋಡಿ ಮೊದಲು ಸಿಟ್ಟು ಬಂದರೂ ಮರುಕ್ಷಣ ನಗುವೂ ಬಂತು. ಇಲ್ಲಿ “ನೀನು ಸದಾ ವ್ಹೀಲ್‍ಚೇರ್‌ನಲ್ಲೇ ಕೂತಿರ್ತೀಯಲ್ಲಾ ಅದ್ಕೇ ತಂದೇ” ಅನ್ನೋ ಒಂದು ಪುಟ್ಟ ವಾಕ್ಯದ ಅವಶ್ಯಕತೆ ಇರಲಿಲ್ಲ. ನಿಜ, ಸಾಮಾನ್ಯವಾಗಿ ಸಮಾಜದ, ಜನರ ಎಲ್ಲರ ವಿಚಾರಧಾರೆಯೂ ಇದೇ ಆಗಿದೆ. ಸಮಾಜ ಅಂಗವಿಕಲರು, ವ್ಹೀಲ್‌ಚೇರ್‌ನಲ್ಲಿ ಇರುವವರ ಪ್ರತಿ ಅಪಾರ, ಅನವಶ್ಯಕ ಅನುಕಂಪವನ್ನಷ್ಟೇ ತೋರುತ್ತಿರುತ್ತದೆ. ಅವರಿಂದ ಏನೇನು ಸಾಧ್ಯ ಅನ್ನೋದನ್ನು ಯೋಚಿಸುವುದು ತೀರಾ ಕಡಿಮೆ ಜನ.
ಇಲ್ಲಿಯೂ ಅದೇ ಆಗುತ್ತಿರುವುದು. ಮಂದಾಕಿನ ವ್ಹೀಲ್‌ಚೇರ್‌ನಲ್ಲೇ ಕುಳಿತು ಎಷ್ಟೆಲ್ಲಾ ಕೆಲಗಳನ್ನು ಮಾಡಬಹುದು ಯೋಚಿಸಿ? ತರಕಾರಿ ಹೆಚ್ಚೋದು, ಅಡಿಗೆ ಮಾಡೋಡು (ಅಡಿಗೆ ಕಟ್ಟೆಯನ್ನು ತುಸು ತಗ್ಗಿಸಿ.. ಕುಳಿತಲ್ಲೇ…) ಪುಸ್ತಕ ಓದುವ ಹವ್ಯಾಸವಿರೋದನ್ನು ಹೇಳಿದ್ದೀರಿ.. ಬರೆಯೋದು, ಅದರಲ್ಲೇ ಪ್ರಗತಿ ಸಾಧಿಸೋದು… ಗಿಡಗಳಿಗೆ ನೀರುಣಿಸೋದು… ಎಲ್ಲವೂ ಸಾಧ್ಯ. ಹೀಗಿರೋವಾಗ ಅದರಲ್ಲೇ ಕುಳಿತು ಬೋರಾಗೊತ್ತೆ ಹಾಗಾಗಿ ಸಿ.ಡಿ. ಅಂತ ಮಗಳು ಅನ್ನೋದು.. ನನ್ನಿಂದ ಎನೂ ಆಗೊಲ್ಲಾ ಅನ್ನೋ ರೀತಿಯ ಮಾತುಗಳನ್ನು ಮಂದಾಕಿನಿ ಆಡೋದು ತುಂಬಾ ಅಸಹನೆ ತುಂಬುತ್ತದೆ. ಇದು ಇತರೆಲ್ಲಾ ನೋಡುಗರಿಗೆ ಏನೂ ಅನ್ನಿಸದೇ ಇರಬಹುದು.. ಸಾಮಾನ್ಯದಲ್ಲಿ ಸಾಮಾನ್ಯವೆಂದೇ ಹೇಳಬಹುದು ಆದರೆ ಇದರಿಂದ ಸಮಾಜಕ್ಕೆ, ಅಂಗವಿಕಲರಿಗೆ ತಪ್ಪು ಸಂದೇಶ ಹೋಗುವುದು ಎನ್ನುವುದು ನನ್ನ ಅಭಿಪ್ರಾಯ.
ನಿಮ್ಮ ಧಾರಾವಾಹಿ ಎಂದರೆ ಅದಕ್ಕೆ ಅಪಾರ ಪ್ರೇಕ್ಷಕ ವರ್ಗವಿದೆ. ನಿರೀಕ್ಷೆಗಳಿವೆ. ಮೆಚ್ಚುಗೆ ಇದೆ. ಅಭಿಮಾನಿಗಳಿದ್ದಾರೆ (ನನ್ನನ್ನೂ ಸೇರಿಸಿ). ಹೀಗಿರುವಾಗ ಅಂಗವಿಕಲರೆಂದರೆ ನಿಸ್ಸಹಾಯಕರು, ಕೆಲಸ ಮಾಡಲಾಗದವರು.. ಕುಳಿತಲ್ಲೇ ಕುಳಿತು ಬೋರ್ ಹೊಡಿಯುತ್ತಿರುವವರೆಂದು ಜನಸಾಮಾನ್ಯರಿಗೂ… ಅಂತೆಯೇ “ನನ್ನಿಂದ ಏನೂ ಆಗೊಲ್ಲಾ ನಿಜ.. ನನಗೆ ಎಲ್ಲವುದಕ್ಕೂ ಇತರರ ಸಹಾಯ ಅನಿವಾರ್ಯ… ಛೇ..” ಅನ್ನೋ ಸ್ವ-ಅನುಕಂಪ ಪಡೋ ಅಂಗವಿಕಲರಿಗೆ ಪುಷ್ಟಿಕೊಡೋ ರೀತಿ ಇದೆ ಎಂದೆನಿಸಿತು. (ನನಗೆ ಖಂಡಿತ ಅನುಕಂಪ ಮೂಡಿದ್ದು ಹೌದು.. ನನ್ನ ಮೇಲೆ ಅಲ್ಲವೇ ಅಲ್ಲಾ.. ಈ ಆಲೋಚನೆಯ ಮೇಲಷ್ಟೇ.).

ನಿಮ್ಮ ಧಾರಾವಾಹಿಗಳ ಕಟ್ಟಾ ಅಭಿಮಾನಿಯಾಗಿ, ಅಂಗವಿಕಲರ ಸಹಚಾರಿಣಿಯಾಗಿ…. ಮಹಾಪರ್ವವನ್ನು ತಪ್ಪದೇ ವೀಕ್ಷಿಸುತ್ತಿರುವ ಓರ್ವ ವೀಕ್ಷಗಳಾಗಿ, ದಯವಿಟ್ಟು ಇನ್ನಾದರೂ “ಅಂಗವೈಕಲ್ಯತೆ”ಯನ್ನು ಪ್ರೊಜೆಕ್ಟ್ ಮಾಡುತ್ತಿರುವ ಈ ರೀತಿಯ ಋಣಾತ್ಮಕ ಚಿತ್ರಣವನ್ನು ಬಿಟ್ಟು, ಧನಾತ್ಮಕತೆಯನ್ನು ಹೆಚ್ಚು ಕಾಣಿಸುವ ಚಿತ್ರಣ ಮೂಡಿಬರಲೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ನೀವು ಆ ಪಾತ್ರವನ್ನು ಅಸಾಮಾನ್ಯಳಂತೇ ಬಿಂಬಿಸಬೇಕೆಂದು ಖಂಡಿತ ಕೇಳುತ್ತಿಲ್ಲ…. ಅತಿ ಯಾವತ್ತೂ ಸಲ್ಲ ಕೂಡ. ಸಾಮಾನ್ಯವನ್ನೇ ತೋರಿಸಿ.. ಏನೆಲ್ಲಾ ಸಾಮಾನ್ಯ, ಸಹಜ, ಸಾಧ್ಯವೆನ್ನುವುದನ್ನಷ್ಟೇ ತೋರಿಸಿ…. ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ…. ಹಾಗೇ ಆಶಿಸುತ್ತೇನೆ. 🙂
 
ವಂದನೆಗಳು.
ಆದರಾಭಿಮಾನಗಳೊಂದಿಗೆ,
ತೇಜಸ್ವಿನಿ ರಾಮಕೃಷ್ಣ ಹೆಗಡೆ.
 

‍ಲೇಖಕರು G

4 August, 2013

21 Comments

  1. D.Ravivarma

    ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ…. ಹಾಗೇ ಆಶಿಸುತ್ತೇನೆ. 🙂
    haudu idu appata satya….

  2. sunil rao

    Yes. Absolutely…

  3. ಎಂ. ಬೈರೇಗೌಡ

    ತೇಜಸ್ವಿನಿ ಅವರೆ,
    ವೈಕಲ್ಯ ಬರುವುದು ಅಂಗಕ್ಕೇ ಹೊರತು ಆತ್ಮಸ್ಥೈರ್ಯಕ್ಕಲ್ಲ… ನಿಮ್ಮ ಮಾತುಗಳು ಸರಿಯಾಗಿವೆ.
    ಎರಡೂ ಕೈಗಳಿಲ್ಲದ ನನ್ನ ಗೆಳತಿಯೊಬ್ಬಳು ಕಾಲಿನಲ್ಲೇ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ತೆಗೆದುಕೊಂಡಿದ್ದಾಳೆ
    ನಮ್ಮ ಮನೆಯ ಬಳಿ ಒಬ್ಬರು ತಮಗಿರುವ ಒಂದೇ ಕೈಯಿಂದ ಪುಸ್ತಕದ ಅಂಗಡಿ ನಡೆಸುತ್ತಿದ್ದಾರೆ. ಮಾಲತಿ ಹೊಳ್ಳ ಎಂತಹ ಸಾಧನೆ ಮಾಡಿದ್ದಾರೆ. ನನ್ನ ಅಂಧ ವಿದ್ಯಾರ್ಥಿಯೊಬ್ಬ ಇಡೀ ಸಂವಿದಾನವನ್ನೇ ಗೀತರೂಪಕವಾಗಿ ಅಳವಡಿಸುವ ಯತ್ನದಲ್ಲಿದ್ದಾನೆ. ಹೀಗೆ ಸಾಧಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
    ಹಾಗಾಗಿ ಅಂಗವೈಕಲ್ಯ ಆಕಸ್ಮಿಕವಾಗಿ ಆದ ಊನವೇ ಹೊರತು ಶಾಪವಲ್ಲ. ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲುವ ನಿಮ್ಮ ದಿಟ್ಟತನಕ್ಕೆ ಸಲಾಂ

  4. anupama prasad

    ಒಬ್ಬ ಸೂಕ್ಷ್ಮ ಸಂವೇದನೆಯುಳ್ಳ ಪಾತ್ರವಾಗಿ ಬಿಂಬಿತವಾಗುತ್ತಿರುವ ಪರಿಣೀತಾಳ ಬಾಯಿಯಲ್ಲಿ ಹೇಳಿಸಿದ `ಆ ಮಾತು’ ನನ್ನಲ್ಲೂ ಅಸಹನೆಯನ್ನು ಹುಟ್ಟುಹಾಕಿತು ತೇಜಸ್ವಿನಿ ಅವರೆ. ನಾವು ಮನೆಯಲ್ಲಿ ನಮ್ಮೊಳಗೇ ಚರ್ಚಿಸಿ ಸುಮ್ಮನಾಗಿದ್ದೆವು. ಅದರಲ್ಲೂ ನೀವು ಸ್ವತಃ ಅಂತಹ ಸಮಸ್ಯೆಯನ್ನು ಮೀರಿ ಬದುಕು ನಡೆಸಿತ್ತಿರುವವರು. ಬಹಳ ಪ್ರಬುದ್ಧವಾದ ಸ್ವಾಭಿಮಾನಿಯೊಬ್ಬರ ನೋಟ ನಿಮ್ಮದು. ನಿಮ್ಮ ಬಗ್ಗೆ ತುಂಬ ಅಭಿಮಾನವೆನಿಸುತ್ತದೆ. ನಾನು ನೋಡಿದ ಹಾಗು ನೋಡುತ್ತಿರುವ ಧಾರಾವಾಹಿ ಎಂದರೆ `ಮುಕ್ತ’ಅದರ ಬಳಿಕ `ಮುಕ್ತಮುಕ್ತ’ ಅದಾದ ಮೇಲೆ ಈಗ `ಮಹಾಪರ್ವ’. ಟಿ.ಎನ್.ಎಸ್.ನಿರ್ದೇಶನದ ಧಾರಾವಾಹಿಯನ್ನು ಪ್ರತಿಯೊಂದು ಸಂಭಾಷಣೆಗೆ ಮಾತ್ರವಲ್ಲ ಪ್ರತಿಯೊಂದು ನಿಟ್ಟುಸಿರಿಗೂ ಮಹತ್ವ ಕೊಟ್ಟು ನೊಡುವ ಒಂದು ವರ್ಗ (ವಿದ್ಯಾರ್ಥಿಗಳನ್ನೂ ಸೇರಿಸಿ)ಇದೆ.ಅಂತಹ ಸಮಾಜಮುಖೀ ಹಾಗು ಜೀವಪರ ಕಾಳಜಿಯ ಚಿಂತನೆಗಳು ಟಿ.ಎನ್.ಎಸ್. ಧಾರವಾಹಿಗಳದು.
    ಅನುಪಮಾ ಪ್ರಸಾದ್.

    • Shivappa Nayak

      Madam, please don’t expect perfect idealist characters in tv serials when you cant find them in real world. No human being in the world will meet your standards. You people are unnecessarily nitpicking Seetaram sir. Mandakini you want to see need not be the Mandakini that fits the story best. Please give some margin to the director to develop the story.

      • Shivappa Nayak

        Very strange! People have forgotten the serial Minchu and the handicapped character in it. She was a positive personality.

        • Shivappa Nayak

          Kathyayini is the handicapped person in Minchu.

  5. lalitha siddabasavaiah

    very well said tejaswini, u r absolutely correct

  6. mmshaik

    angaviklate kaaNuvvara kaNNalliruttde asTe..!! nice tajaswini..well said!!!!

  7. Shivappa Nayak

    Madam, I understand your concern and empathize with you. But you must remember that the serial has just begun and there is lot more in the pipeline. The Mandakini you see in the first episodes will not be the Mandakini you will see later, please believe me! She has an important role to play in the story and she is not a side role. I’m sure you’ll see a more assertive and dynamic Mandakini soon. Please wait till then. Let the story evolve in its own sweet pace. 😛

  8. samyuktha

    well said! 🙂

  9. umesh desai

    ನಿಮ್ಮ ಮಾತು ಒಪ್ಪಿದೆ.. ಮಂದಾಕಿನಿ ಪಾತ್ರ ನಿರ್ವಹಿಸಿರುವ ಜೆಪಿ ಮೇಡಮ್ ರ ಅಭಿಪ್ರಾಯವೇನಿರಬಹುದು
    ತಿಳಿಯುವ ಕುತೂಹಲವಿದೆ.

  10. Shivappa Nayak

    Seetaram Sir, please make a Dalit or a Muslim or a Christian the chief minister in Maha Parva. And please let the chief minister be young, not more than 45 years old.

    • Anupama Kavalakki

      mahaaparva beleyuttiddante mandaakini avaru wheel chair bandhanadinda mukhtaraagi chief minister aagtaare nodtiri.

  11. Sumangala

    ತೇಜಸ್ವಿನಿ ಹೆಗಡೆಯವರ ಅಭಿಪ್ರಾಯಕ್ಕೆ ನನ್ನದು ಪೂರ್ಣ ಸಹಮತವಿದೆ. ಧಾರಾವಾಹಿಗಳನ್ನೇ ನೋಡದ ನಾನು ನ್ಯೂಸ್ ಬ್ರೌಸ್ ಮಾಡುತ್ತ ಆ ಶುಕ್ರವಾರ (2/8/2013) ‘ಮಹಾಪರ್ವ’ ಸ್ವಲ್ಪ ಹೊತ್ತು ನೋಡಿದೆ, ಈ ಹಿಂದೆ ಮಂದಾಕಿನಿಯವರ ಪಾತ್ರದಲ್ಲಿ ನಿರ್ದೇಶಕರು ಯಾವ ಮಾತುಗಳನ್ನು ಹೇಳಿಸಿದ್ದರು ನನಗೆ ತಿಳಿಯದು, ಆದರೆ ಅಂದು ‘ವ್ಹೀಲ್ ಚೇರ್ ನಲ್ಲಿ ಕೂತಿರ್ತೀಯಲ್ಲ, ಅದಕ್ಕೇ ಮಾಯಾಮೃಗ ಡಿವಿಡಿ’ ಎಂದು ಕೊಟ್ಟಿದ್ದನ್ನು ನೋಡಿ (ಕೇಳಿ) ನನಗೆ ಕಸಿವಿಸಿಯೆನ್ನಿಸಿತ್ತು. ವ್ಹೀಲ್ ಚೇರ್ ನಲ್ಲಿದ್ದುಕೊಂಡೇ ಸಹಜ ಜೀವನ ನಡೆಸುವ ಹಲವರು ನಮ್ಮ ನಡುವೆ ಇದ್ದಾರೆ, ಅವರನ್ನು ಅವರ ಹಾಗೇ ಕಂಡು ಗೌರವಿಸೋಣ, ಅನುಭಾವದಿಂದ ಪ್ರೀತಿಯಿಂದ ಇರೋಣ… ತೇಜಸ್ವಿನಯವರ ಮನದ ಮಾತು ಓದುತ್ತಿರುವಾಗ ವ್ಹೀಲ್ ಚೇರ್ ನಲ್ಲಿ ಕುಳಿತೇ ಪ್ಯಾರಾ ಒಂಲಿಂಪಿಕ್ಸ್ ನಲ್ಲಿ 12 ಪದಕ ಗಳಿಸಿದ ನಾರ್ವೆಯ ಕಿರ್ಸ್ಟಿ ಹೂವೇನ್ ಅವರನ್ನು ಕಳೆದ ಫೆಬ್ರವರಿಯಲ್ಲಿ ನಾನು ಭೇಟಿಯಾದಾಗ, ಅವರು ಹೇಳಿದ ಮಾತು ನೆನಪಾಯಿತು, “ನಾನು ಸೋ ಕಾಲ್ಡ್ ನಾರ್ಮಲ್ ವ್ಯಕ್ತಿಗಳು ಮಾಡುವ ಎಲ್ಲ ಕೆಲಸವನ್ನೂ ಮಾಡ್ತೀನಿ. ಮನುಷ್ಯರು ಕಟ್ಟಿದ ಮೆಟ್ಟಿಲು ಹತ್ತಲು ಮಾತ್ರ ಆಗದು… ಆದರೆ ನಿಸರ್ಗದಲ್ಲಿ ಮೆಟ್ಟಿಲುಗಳಿಲ್ಲ, ಅಲ್ಲಿ ಇಳಿಜಾರುಗಳು-ಏರುಗಳು ಮಾತ್ರ, ಅಲ್ಲಿ ನನ್ನ ಗಾಲಿಕುರ್ಚಿಗೆ ಯಾವುದೇ ಸಮಸ್ಯೆಯಿಲ್ಲ” ಎಂದಿದ್ದರು ಕಿರ್ಸ್ಟಿ. ಅವರು ಕ್ರಾಸ್ ಕಂಟ್ರಿ ಸ್ಕೀಯಿಂಗ್ ಮತ್ತು ಐಸ್ ಸ್ಲೆಡ್ಜ್ ಸ್ಪೀಡ್ ರೇಸಿಂಗ್ ನಲ್ಲಿ 1988 ಮತ್ತು 1992ರ ಪ್ಯಾರಾಓಲಂಪಿಕ್ಸ್ ನಲ್ಲಿ ಒಟ್ಟು 12 ಪದಕಗಳನ್ನು ಗೆದ್ದಿರುವ ಕಿರ್ಸ್ಟಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ಮನೆಗೆಲಸಗಳನ್ನು ಸಂಗಾತಿ ರೋರ್ ನೆರವಿನಿಂದ ಅವರೇ ನಿಭಾಯಿಸುತ್ತಾರೆ. ಕಿರ್ಸ್ಟಿಯವರ ಕುರಿತು ಯಾರಿಗಾದರೂ ತಿಳಿದುಕೊಳ್ಳುವ ಕುತೂಹಲವಿದ್ದರೆ ಮಾರ್ಚ್ 7ರ ಸುಧಾದಲ್ಲಿ ಪ್ರಕಟವಾದ ಲೇಖನ ನೋಡಬಹುದು (ಪುಟ 36, ಲಿಂಕ್ ಇಲ್ಲಿದೆ – http://sudhaezine.com/svww_index1.php). ದೈಹಿಕ ಸವಾಲುಗಳನ್ನು ಎದುರಿಸುವ (ಹಾಗೆಯೇ ಮಾನಸಿಕ ಸವಾಲುಗಳನ್ನು ಎದುರಿಸುವ) ವ್ಯಕ್ತಿಗಳಿಗೆ ಬಳಕೆಸ್ನೇಹಿ ರೀತಿಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಒಂದು ಆರೋಗ್ಯವಂತ ಮತ್ತು ಇನ್ ಕ್ಲುಸಿವ್ ಸಮಾಜದ ಜವಾಬ್ದಾರಿ ಮತ್ತು ಈ ಇನ್ ಕ್ಲುಸಿವ್ನೆಸ್ ಅನ್ನು ಸಮಾಜದಲ್ಲಿ ಬೆಳೆಸುವಲ್ಲಿ ಮಾಧ್ಯಮದ ಜವಾಬ್ದಾರಿಯೂ ಇದೆ ಎಂಬ ಅಭಿಪ್ರಾಯ ನನ್ನದು. ಹೀಗಿರುವಾಗ ದೈಹಿಕ ಅಥವಾ ಮಾನಸಿಕ ಸವಾಲುಗಳನ್ನು ಎದುರಿಸುವ ವ್ಯಕ್ತಿಗಳಲ್ಲಿ ಮತ್ತಷ್ಟು ಕೀಳರಿಮೆ ಬೆಳೆಸುವ ರೀತಿಯಲ್ಲಿ ಮಾಧ್ಯಮದ ಪ್ರಸಾರಗಳು ಇರಬಾರದು.

  12. Tejaswini Hegde

    ನನ್ನ ಈ ಪುಟ್ಟ ಪತ್ರಕ್ಕೆ ಬಹು ಶೀಘ್ರವಾಗಿ ಸೂಕ್ತ ರೀತಿಯಲ್ಲೇ ಶ್ರೀಯುತ ಟಿ.ಎನ್.ಎಸ್ ಅವರು ಸ್ಪಂದಿಸಿದ್ದು, ಅವರ ಪ್ರತಿಕ್ರಿಯೆಯಿಂದ ಅವರು ಸಾಮಾನ್ಯ ವೀಕ್ಷಕರ ಅಭಿಪ್ರಾಯಕ್ಕೆ ಮಹತ್ವ ಕೊಟ್ಟು ಸ್ಪಂದಿಸುವ ಸಹೃದಯರೆಂದು ತಿಳಿದು ಸಂತೋಷವಾಯಿತು. ತುಂಬಾ ಧನ್ಯವಾದಗಳು ಸ್ಪಂದಿಸಿ ಪ್ರತಿಕ್ರಿಯಿಸಿದ ಟಿ.ಎನ್.ಸರ್ ಅವರಿಗೂ ಹಾಗೂ ನನ್ನ ಲೇಖನದೊಳಗಿನ ಮೂಲ ಆಶಯವನ್ನು ಅರಿತು ಪ್ರಕಟಿಸಿದ ಅವಧಿಗೂ… 🙂
    ಟಿ.ಎನ್.ಎಸ್ ಅವರ ಪ್ರತಿಕ್ರಿಯೆಯನ್ನೂ ಕೊನೆಯಲ್ಲಿ ಹಾಕಿರುವೆ….
    ಈ ಒಂದು ಧಾರಾವಹಿ ಎಂದೇ ಅಲ್ಲಾ… ಸಾಮಾನ್ಯವಾಗಿ ಜನರ, ಸಮಾಜದ ಮನಸ್ಸು, ವಿಚಾರಧೋರಣೆ ಹೇಗಿರುತ್ತದೆ.. ಯಾವ ರೀತಿ ಅದು ಬದಲಾಗಬೇಕೆಂದು ಕಾಣಿಸಲೂ ನಾನೀ ಪುಟ್ಟ ಪ್ರಯತ್ನವನ್ನು ಮಾಡಿದ್ದು. ಸ್ಪಂದಿಸಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.
    ಟಿ.ಎನ್.ಎಸ್ ಅವರ ಪ್ರತಿಕ್ರಿಯೆ
    …………………………….
    ತೇಜಸ್ವಿನಿ ಹೆಗಡೆ ಅವರಿಗೆ ನಮಸ್ಕಾರ
    ಬ್ಲಾಗ್ ನಲ್ಲಿ ನಿಮ್ಮ ಲೇಖನ ಓದಿದೆ
    ನಿಮ್ಮ ಅಭಿಪ್ರಾಯ ಖಂಡಿತ ಸ್ವಾಗತಾರ್ಹ
    ಕಥೆ ಮುಗಿಯುವವರೆಗೆ ಕಾದು ನೋಡಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ
    ಅಸಹಾಯಕರು ಯಾವುದೋ ನಿರ್ಣಾಯಕ ಕ್ಷಣದಲ್ಲಿ ಜಯ ಸಾಧಿಸುವುದು ನನ್ನ ಕಥೆಯ ರೀತಿ. ಇದೇ ರೀತಿ ಅಸಹಾಯಕರಾಗಿದ್ದ
    ನನ್ನ ಹತ್ತಿರದ ವ್ಯಕ್ತಿಯೊಬ್ಬರು ಅನುಕಂಪ ಬಯಸುತ್ತಿದ್ದುದು ನನಗೆ ಗೊತ್ತು
    ಅವರು ಅದನ್ನು ಮೀರಿ ನಿಂತ ಕ್ಷಣದ ಚಿತ್ರಣ ನನ್ನ ಕಥೆ
    ನಿಮ್ಮ ಬಗ್ಗೆ ನನಗೆ ಅಪಾರ ಗೌರವ ಇದೆ. ನಿಮ್ಮ ಅಭಿಪ್ರಾಯ ಅತ್ಯಂತ ಪ್ರಾಮಾಣಿಕ ಎಂದು ನನಗೆ ಗೊತ್ತು
    ನನಗೆ ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಸೂಕ್ಷ್ಮ ಮನಸಾಗಲಿ, ಅಂತಹ ಅಗತ್ಯವಾಗಲಿ ನನಗೆ ಇಲ್ಲ
    ನಮಸ್ಕಾರ
    ……………….

  13. ಜಿ.ಎನ್ ನಾಗರಾಜ್

    ನಾನು ಅಂಗವಿಕಲರ ನಡುವೆ ಕೆಲಸ ಮಾಡುತ್ತಿರುವವನು. ತೇಜಸ್ವಿನಿಯರ ಮಾತು ಒಪ್ಪತಕ್ಕದ್ದೇಅಂಗವಿಕಲತೆ ಇರುವುದು ಈ ದೃಶ್ಯದಲ್ಲಿ ಹೇಳಲ್ಪಟ್ಟಂತೆ ಪಾತ್ರಕ್ಕಲ್ಲ. ಮನೆಗೆ, ರಸ್ತೆಗೆ,ಸಾರ್ವಜನಿಕರು ಬಳಸುವ ಕಟ್ಟಡಗಳಿಗೆ. ಅಲ್ಲೆಲ್ಲಾ ಚಲಿಸುವ ಕುರ್ಚಿಯಲ್ಲಿಯೇ ಓಡಾಡಬಹುದಾದ ಪರಿಸ್ಥಿತಿ ಇದ್ದರೆ (ಹೊಸ್ತಿಲು ಇತ್ಯಾದಿ ಅಡ್ಡಿಗಳು ಇಲ್ಲದಿದ್ದರೆ ),ಟೇಬಲ್, ಅಡಿಗೆ ಮಾಡುವ ಪ್ಲಾಟ್ ಫಾರ್ಮ್ ಆ ಕುರ್ಚಿಯಲ್ಲಿಯೇ ಕುಳಿತು ಕೆಲಸ ಮಾಡಬಹುದಾದ ಕಡಿಮೆ ಎತ್ತರದಲ್ಲಿದ್ದರೆ ಅಡಿಗೆ ಮಾಡಲೇನು ಕಷ್ಟ. ಹಾಗೆಯೇ ನಗರದಲ್ಲಿ ಅಕ್ಸೆಸಿಬಿಲಿಟಿ ಇದ್ದರೆ ಎಲ್ಲ ಕಡೆಗೂ ಓಡಾಡಿ ಕೆಲಸ, ಅಂಗಡಿ,ಸಿನೆಮಾ ಎಲ್ಲವನ್ನೂ ಮಾಡಿಕೊಳ್ಳಲೇನು ಕಷ್ಟ.ಹೈಕೋರ್ಟು ಕಟ್ಟಡ ಅಕ್ಸೆಸಿಬಲ್ ಇದ್ದರೆ ವಕೀಲರಾಗಿ ಕೆಲಸ ಮಾಡಲೂ ಕಷ್ಟ ಏನು? ಆ ಕೆಲಸ ಸೀತಾರಾಂರವರೇ ಮಾಡಬೇಕೆಂದು ಎಲ್ಲಿದೆ ? ಆದ್ದರಿಂದ ಅಂಗವಿಕಲತೆ ಇರುವುದು ಸಮಾಜಕ್ಕೆ, ಅದರ ಮನಸ್ಸಿಗೆ.ಈ ಅಂಗವಿಕಲತೆಯೇ ಈ ಧಾರಾವಾಹಿಯಲ್ಲಿಯೂ ಬಿಂಬಿತವಾಗಿದೆ.

  14. Tejaswini Hegde

    ಟಿ.ಎನ್. ನಾಗರಾಜ್ ಅವರೆ,
    ನಿಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತವಿದೆ… ಈ ಬಗ್ಗೆ ನನ್ನ ಬ್ಲಾಗ್‌ನಲ್ಲಿ ಬಹು ಹಿಂದೆ ಸವಿವರವಾಗಿ ಬರೆದಿದ್ದೆ.. ನಮ್ಮ ಹಕ್ಕು ಹೇಗೆ ನಮ್ಮಿಂದ ಅರಿತೋ ಅರಿಯದೇಯೋ ವಂಚಿಸಲ್ಪಡುತ್ತಿದ್ದೆ… ನಮ್ಮ ದೇಶ ಇನ್ನೂ ಅಂಗವಿಕಲರ ಪಾಲಿಗೆ ಅದೆಷ್ಟು ಹಿಂದುಳಿದಿದೆ? ಏನೇನು ಬದಲಾವಣೆಗಳು ಅತ್ಯಗತ್ಯ.. ಆವಶ್ಯಕತೆಗಳೇನು? ನನ್ನ ಜೊತೆ ನಡೆದಿದ್ದ ಒಂದು ಸಣ್ಣ ಕಹಿ ಘಟನೆಯ ವಿರುದ್ಧ ಹೋರಾಟವನ್ನೂ ಮಾಡಿದ್ದೆ… ಎಲ್ಲವನ್ನೂ ಬರೆದಿದ್ದೆ… ಪ್ರಕಟಿಸಿದ್ದೆ. ಅದರ ಎರಡು ಲಿಂಕ್‌ಗಳಿ ಈ ಕೆಳಗಿನಂತಿವೆ….
    http://www.manasa-hegde.blogspot.in/2008/12/blog-post.html &
    http://www.manasa-hegde.blogspot.in/2008/12/blog-post_12.html

  15. ಉದಯಕುಮಾರ್ ಹಬ್ಬು

    ತೇಜಸ್ವಿನಿ ಹೆಗಡೆಯವರೆ,ನಿಮ್ಮ ಅಭಿಪ್ರಾಯ ಸರಿಯೇನೋ ಹೌದು. ಆದರೆ ಸಾಮಾನ್ಯವಾಗಿ ಸೀತಾರಾಮರ ಧಾರಾವಾಹಿಗಳಲ್ಲಿ ಓರ್ವ ಅಂಗವಿಕಲೆಯಯ ಪಾತ್ರ ಇದ್ದೇ ಇರುತ್ತದೆ. ಮತ್ತು ಆ ಪಾತ್ರವು ಗಟ್ಟಿ ಪಾತ್ರವೆ ಆಗಿರುತ್ತದೆ. ಸಾಮಾನ್ಯವಾಗಿ ನಿಜ ಜೀವನದಲ್ಲಿ ಇಂತಹ ಅನುಕಂಪದ ಮಾತುಗಳನ್ನೇ ನಾವು ಅಂಗವಿಕಲರಪರವಾಗಿ ಜನರ ಬಾಯಿಂದ ಕೇಳುತ್ತೇವೆ. ಧಾರವಾಹಿಗಳ ಪಾತ್ರಗಳು ಆದರ್ಶ ಪಾತ್ರಗಳಾಗಿರಬೇಕೆಂದು ಬಯಸುವುದು ತಪ್ಪಾಗುತ್ತದೆಯಲ್ಲವೇ? ಏನೇ ಆಗಲಿ, ನಿಮ್ಮ ಆತ್ಮಾಭಿಮಾನಕ್ಕೆ ನಾನು ಗೌರವಪೂರ್ವಕವಾಗಿ ವಂದಿಸುತ್ತೇನೆ. ಧಾರಾವಾಹಿಗಳು ನಿರ್ದೇಶಕನ ಮುಖವಾಣಿ ಎಂದು ತಿಳಿಯುವುದು ತಪ್ಪಾಗುತ್ತದೆ ಎಂಬುದು ನನ್ನ ಗ್ರಹಿಕೆ. ಸ್ವಲ್ಪ ಕಾದು ನೋಡಿ.ಉದಯಕುಮಾರ ಹಬ್ಬು, ಕಿನ್ನಿಗೋಳಿ

    • murhy

      ದುರಂತ ಇದು.
      ಇದುವರೆಗೆ ಹತ್ತಿಪ್ಪತ್ತು ಸೀರಿಯಲ್ ಮಾಡಿರುವ ಟಿಎನ್ಎಸ್ರಂಥ ಘನತೆವೆತ್ತ ವ್ಯಕ್ತಿಯ ಒಂದೇ ಒಂದು ಡೈಲಾಗ್ ಕೇಳಿ, ಒಂದು ಎಪಿಸೋಡು ನೋಡಿ ಇಷ್ಟುದ್ದದ ಆಕ್ಷೇಪಣೆ ಬರೆಯುತ್ತಾರೆ. ಇಂಥವರಿಗೆ ನಿರ್ದೇಶಕನ ಮೇಲೆ ಅಪನಂಬಿಕೆಯೋ ….

  16. ಪ್ರಶಾಂತ್

    ತೇಜಸ್ವಿನಿ ಹೆಗಡೆಯವರ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತ ಇದೆ. ಪರಿಣಿತ ಪಾತ್ರದ ಮೂಲಕ ’ನೀನು ವೀಲ್ ಚೇರ್ ಮೇಲೆ ಕುಳಿತಿರುತ್ತೀಯ ಅಲ್ಲಾ” ಎಂಬ ಮಾತು ಅನಪೇಕ್ಷಿತವೆನಿಸಿತು. ತೇಜಸ್ವಿನಿಯವರ ಸಮತೋಲಿತ ಬರಹದ ಹಿಂದಿನ ಸಂವೇದನೆಯನ್ನು ಅರ್ಥೈಸಿಕೊಳ್ಳದ ಕೆಲವು ಅಭಿಪ್ರಾಯಗಳು ಅರ್ಹ ಟೀಕೆಗಳೆನಿಸುವುದಿಲ್ಲ.
    ಹಾಗೆಯೆ ಸೀತರಾಮ್ರವರ ಉತ್ತರ ನಿಜಕ್ಕು ಸಮಾದಾನ ಭಾವ ಮೂಡಿಸಿದೆ.

Trackbacks/Pingbacks

  1. ಟಿ ಎನ್ ಸೀತಾರಾಂ ಅವರ ಉತ್ತರ .. « ಅವಧಿ / avadhi - [...] ಪ್ರಕಟಿಸಿದ್ದವು. (ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ). ಆ ಪತ್ರಕ್ಕೆ ಸೀತಾರಾಂ ಅವರು ನೀಡಿರುವ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading