
‘ಅವಧಿ’ಯಲ್ಲಿ ಪ್ರಕಟವಾದ ಶೇಕ್ಸ್ ಪಿಯರನ ಹೆಂಡತಿ ಕುರಿತ ಅಂಕಣ ಈಗ ನಾಟಕದ ರೂಪ ತಳೆದಿದೆ.
ಸಾಕಷ್ಟು ಗಮನ ಸೆಳೆದ ಈ ಅಂಕಣ ಬರೆದವರು ಉದಯ ಇಟಗಿ.
ಈಗ ಈ ನಾಟಕ ಪುಸ್ತಕವಾಗಿ ಹೊರಬಂದಿದೆ. ಅದಕ್ಕೆ ಲಕ್ಷ್ಮಿ ಚಂದ್ರಶೇಖರ್ ಬರೆದ ಮುನ್ನುಡಿ ಇಲ್ಲಿದೆ-

ಲಕ್ಷ್ಮೀ ಚಂದ್ರಶೇಖರ್
ಶೇಕ್ಸಪಿಯರನ ಜೀವನದ ಬಗ್ಗೆ ನಮಗೆ ತಿಳಿದಿರುವುದರಲ್ಲಿ ಊಹಾಪೋಹಗಳೇ ಹೆಚ್ಚು. ತನ್ನ ಪಾತ್ರಗಳ ಮನದಾಳವನ್ನು ಶೋಧಿಸಿ ಅವರ ಭಾವನೆಗಳ ಹೃದಯಸ್ಪರ್ಶಿ ಚಿತ್ರಣ ಕೊಡುವ ಆ ಅಪ್ರತಿಮ ನಾಟಕಕಾರ ಅವನ ಅಭಿಮಾನಿಗಳ ದೃಷ್ಟಿಯಲ್ಲಿ ಒಳ್ಳೆಯ ಗಂಡನಾಗದೇ ಇರಲು ಸಾಧ್ಯವೇ ಇಲ್ಲ. ಅವನು ಹದಿನೆಂಟನೆಯ ಪ್ರಾಯದಲ್ಲಿಯೇ ತನಗಿಂತ ಎಂಟು ವರ್ಷ ಹಿರಿಯಳನ್ನು ಮದುವೆಯಾಗಿ ಮೂರೇ ವರ್ಷದಲ್ಲಿ ಹೆಂಡತಿ, ಮೂರು ಮಕ್ಕಳನ್ನು ಬಿಟ್ಟು ಲಂಡನ್ನಿಗೆ ಓಡಿ ಹೋಗಲು ಅವನ ಹೆಂಡತಿಯ ಆ್ಯನ್ ಹ್ಯಾಥ್ ವೇ ಕಾಟವೇ ಕಾರಣವಾಗಿರಬೇಕು ಎಂಬದು ಹಲವರ ಆಧಾರ ರಹಿತ ವಾದವಾಗಿದೆ.
ಇಂಥ ಆಧಾರ ರಹಿತ ವಾದಕ್ಕೆ ಪ್ರತಿವಾದವಾಗಿ ಉದಯ ಇಟಗಿಯವರ ‘ಶೇಕ್ಸಪಿಯರನ ಶ್ರೀಮತಿ’ ಕೃತಿ ಹೊರಹೊಮ್ಮಿದೆ. ಶೇಕ್ಸಪಿಯರನ ಕಾಲದ ಸ್ಟ್ಯಾಟ್ ಫೊರ್ಡ್ ಹಾಗೂ ಸುತ್ತಮುತ್ತಲ ಪ್ರದೇಶದ ಚರ್ಚು, ಕೋರ್ಟಿನ ಕಡತಗಳು, ಲೇವಾದೇವಿ, ವ್ಯಾಪಾರ, ಭೂಮಾಲಿಕತ್ವ ಕುರಿತ ರೆಕಾರ್ಡುಗಳು, ಅಂದಿನ ಹೆಂಗಸರ ಜೀವನ, ದುಡಿಮೆ, ಆಚಾರ ವಿಚಾರಗಳನ್ನು ಸಂಶೋಧಿಸಿ ಬರೆದ ಕೃತಿಗಳನ್ನು ಆಧರಿಸಿದ ಈ ನಾಟಕ ಶೇಕ್ಸಪಿಯರನ ವೈವಾಹಿಕ ಜೀವನವನ್ನು ಇದ್ದಕ್ಕಿದ್ದಂತೆ ತೆರೆದಿಡುತ್ತದೆ.
ಜೊತೆಗೆ ಹೆಂಡತಿಯಿಂದ ಅವನಿಗೆ ದೊರೆತಿರಬಹುದಾದ ಸಹಕಾರ, ಒಂಟಿಯಾಗಿ ಅವಳು ಜೀವನವನ್ನು ಎದುರಿಸಿದ ರೀತಿ, ತನ್ನ ದುಡಿಮೆಯಿಂದಲೇ ಮಕ್ಕಳನ್ನು ಬೆಳೆಸಿದ ಒಬ್ಬ ಗಟ್ಟಿ ಹೆಣ್ಣಿನ ಚಿತ್ರಣ ನೀಡುತ್ತದೆ. ಗಂಡನ ಕೀರ್ತಿಯ ನೆರಳಲ್ಲಿ ಮಸುಕಾದ ಹೆಂಡತಿಯ ತ್ಯಾಗ, ನೋವು, ನಲಿವುಗಳ ಮೇಲೆ ಬೆಳಕು ಚೆಲ್ಲುವ ‘ಶೇಕ್ಸಪಿಯರನ ಶ್ರೀಮತಿ’ ಒಂದು ಉತ್ತಮ ರಂಗಕೃತಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.

ಶೇಕ್ಸಪಿಯರನನ್ನು ಅವನ ಶ್ರೀಮತಿಯ ಕಂಗಳಿಂದ ನೋಡುವ ಈ ಪ್ರಯತ್ನ ಹೊಸತನದಿಂದ ಕೂಡಿದ್ದು ನಮಗೆ ಗೊತ್ತಿರದ ಶೇಕ್ಸಪಿಯರ್ ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತಾನೆ. ಶೇಕ್ಸಪಿಯರನ ಬಗೆಗೆ ಹೊಸ ನೋಟಗಳಿಂದ ಕೂಡಿದ ಇಂಥ ಕೃತಿಯನ್ನು ಕೊಟ್ಟ ಉದಯ ಇಟಗಿಯವರನ್ನು ನಾನು ಅಭಿನಂದಿಸುತ್ತೇನೆ.
ನಾನು ಇನ್ನೊಂದು ಸಂತೋಷದ ವಿಷಯವನ್ನು ನಿಮಗೆ ಹೇಳಲೇಬೇಕು. ಈಗ್ಗೆ ಐದಾರು ತಿಂಗಳ ಹಿಂದೆಯಷ್ಟೇ ಫೇಸ್ಬುಕ್ಕಲ್ಲಿ ನನಗೆ ಉದಯ ಇಟಗಿಯವರ ಪರಿಚಯವಾಯಿತು. ಪರಿಚಯವಾಗಿ ಒಂದೆರೆಡು ದಿನಕ್ಕೆ ಅವರು ಮೆಸೆಂಜರ್ ನಲ್ಲಿ ‘ಮೇಡಮ್, ಶೇಕ್ಸಪಿಯರನ ಕುರಿತಾಗಿ ಅವನ ಹೆಂಡತಿ ಹೇಳುವಂಥ ಒಂದು ಏಕವ್ಯಕ್ತಿ ನಾಟಕವನ್ನು ಬರೆದಿರುವೆ. ಅದನ್ನು ನೀವು ಅಭಿನಯಿಸಲಾಗುತ್ತದಾ? ನೋಡಿ.’ ಎಂದು ನನಗೆ ಒಂದು ಮೆಸ್ಸೇಜ್ ಕಳಿಸಿದರು. ನಾನು ತಕ್ಷಣ ‘ಸ್ಕ್ರಿಪ್ಟ್ ಕಳಿಸಿಕೊಡಿ, ನೋಡುವೆ.’ ಎಂದು ನನ್ನ ಈಮೇಲ್ ಕೊಟ್ಟು ಅವರಿಗೆ ಮರು ಉತ್ತರಿಸಿದೆ.
ಆ ಪ್ರಕಾರ ಅವರು ಕಳಿಸಿಕೊಟ್ಟರು. ನಾನದನ್ನು ಓದಿದ ತಕ್ಷಣ ಅವರಿಗೆ ‘ನನಗೆ ನಿಮ್ಮ ನಾಟಕ ಬಹಳ ಇಷ್ಟವಾಯಿತು. ಶ್ರೀಮತಿ ಶೇಕ್ಸಪಿಯರಳಾಗಿ ಅಭಿನಯಿಸಲು ಸಿದ್ಧನಿದ್ದೇನೆ. ನಾನಿದನ್ನು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಮಾಡುವೆ.’ ಎಂದು ತಿಳಿಸಿ ಈಮೇಲ್ ಮಾಡಿದೆ. ಈ ನಿರ್ಧಾರದ ನಂತರ ಉದಯ ಇಟಗಿಯವರೊಂದಿಗೆ ಮುಂದಿನ ಮಾತುಕತೆ ನಡೆಸಿ, ನಿರ್ದೇಶಕರನ್ನೂ ಹುಡುಕಿ ಏಪ್ರೀಲ್ 23, 2021 ರಂದು ಮೊದಲ ಪ್ರದರ್ಶನವನ್ನು ರಂಗಶಂಕರದಲ್ಲಿ ಕೊಡಬೇಕೆಂದು ಎಲ್ಲ ತಯಾರಿಯನ್ನು ಮಾಡಿಕೊಂಡೆ. ಆದರೆ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದರಿಂದ ಈ ಪ್ರದರ್ಶನವನ್ನು ಮುಂದೂಡಬೇಕಾಯಿತು.

ಕೊರೋನಾ ಕಾವು ತಗ್ಗಿದ ನಂತರ ‘ಶೇಕ್ಸಪಿಯರನ ಶ್ರೀಮತಿ’ಯಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದೇನೆ. ನಾನೊಬ್ಬ ಇಂಗ್ಲೀಷ್ ಪ್ರಾಧ್ಯಾಪಕಿಯಾಗಿ ಶೇಕ್ಸಪಿಯರನನ್ನು ಚನ್ನಾಗಿ ಅಧ್ಯಯನ ಮಾಡಿರುವೆ, ಅನೇಕ ನಾಟಕಗಳನ್ನು ಬೋಧಿಸಿರುವೆ. ಆ ಮೂಲಕ ಶೇಕ್ಸಪಿಯರನ ಪಾತ್ರಗಳನ್ನು ಆಸ್ವಾದಿಸಿದ್ದೇನೆ. ಇದೀಗ ಅವನ ಹೆಂಡತಿಯಾಗಿ ಅಂದರೆ ‘ಶೇಕ್ಸಪಿಯರನ ಶ್ರೀಮತಿ’ ಯಾಗಿ ರಂಗದ ಮೇಲೆ ಕಾಣಿಸಿಕೊಳ್ಳುವದು ನನಗೆ ಅತ್ಯಂತ ಖುಷಿ ಕೊಟ್ಟಿದೆ.






0 Comments