ಶ್ರೀಪಾದ್ ಭಟ್ ಸೇತುವೆ ರಿಪೇರಿ ಮಾಡುತ್ತಿದ್ದಾರೆ..

ಜಿ ಎನ್ ಮೋಹನ್  

ಶ್ರೀಪಾದ ಭಟ್ಟರು ಇದುವರೆಗೂ ನನಗೆ ಗೊತ್ತಿದ್ದದ್ದು ಖಾಸಗಿಯಾಗಿ. ಮುಖದ ತುಂಬಾ ನಗು ಚೆಲ್ಲಿಕೊಂಡು ನನ್ನ ಮಗಳಿಗೆ ‘ಬೆಳ್ಳಕ್ಕಿಗಳು ಯಾಕೆ ಅಷ್ಟು ಬಿಳಿ?’ ಅಂತ ತುಂಟ ಪ್ರಶ್ನೆ ಎಸೆಯುತ್ತಾ, ಅವಳೊಡನೆ ನೀರಿನಲ್ಲಿ ಆಟವಾಡುತ್ತ, ಮಂಡಗದ್ದೆಯ ಪಕ್ಶಿದಾಮಧಲ್ಲಿ ನಮ್ಮನ್ನೆಲ್ಲಾ ‘ಮಚಾನ್’ ಹತ್ತಿಸಿ ನಾವು ‘ಆಹಾ..!’ ಎನ್ನುವುದನ್ನು ಖುಷಿಯಿಂದ ನೋಡುತ್ತಾ… ಹೀಗೆ ತೀರಾ ತೀರಾ ಖಾಸಗಿಯಾಗಿ

ಆದರೆ ಅದೇ ಶ್ರೀಪಾದ ಭಟ್ಟರು ಈಗ ರಂಗಭೂಮಿಗೆ ಹೊಸ ವ್ಯಾಕರಣವನ್ನೇ ಬರೆಯುತ್ತಿದ್ದಾರೆ. ನಾನು ಬೆಳ್ಳಕ್ಕಿ ಯಾಕೆ ಬಿಳಿ ಅನ್ನುವ ಪ್ರಶ್ನೆ ಬಂದಾಗ ಬೆರಗಾಗಿ, ಕಣ್ಣು ಬಿಟ್ಟುಕೊಂಡು ಅವರನ್ನೇ ನೋಡುತ್ತಿದ್ದ ನನ್ನ ಮಗಳಂತೆ ಈಗ ಅವರನ್ನು ನೋಡುತ್ತಿದ್ದೇನೆ. ಶ್ರೀಪಾದ ಭಟ್ಟರು ಹೈಸ್ಕೂಲಿನ ಟೀಚರ್, ಉರ್ದು ಶಾಲೆಯಲ್ಲಿ ಕನ್ನಡ ಮೇಷ್ಟ್ರು ಇವೆಲ್ಲಾ ನನಗೆ ಗೊತ್ತೇ ಇರಲಿಲ್ಲ.. ಯಾಕೆಂದರೆ ನಾನು ಇಷ್ಟು ವರ್ಷ ಅವರ ಮುಖದಲ್ಲಿ ಸದಾ ತುಳುಕುವ ಆ ಮಗು ನಗೆಯನ್ನು ನೋಡುತ್ತಲೇ ಕಳೆದುಬಿಟ್ಟೆ.

ಶ್ರೀಪಾದ ಭಟ್ಟರು ನನಗೆ ಇಷ್ಟವಾಗಿದ್ದು, ಮನಸ್ಸು ತಟ್ಟಿದ್ದು ಈ ಕಾರಣಕ್ಕಾಗಿಯೇ.. ಮಗುತನಕ್ಕಾಗಿ.
ಪ್ರತಿಯೊಬ್ಬರಲ್ಲೂ ನಿರ್ಮಲ ನಗೆಯ, ನಿಷ್ಕಲ್ಮಶ ಮಗುವನ್ನು ಉಳಿಸಲು ಹೆಜ್ಜೆ ಹಾಕುತ್ತಿರುವುದಕ್ಕಾಗಿ..

ಜಾಗತೀಕರಣ ಬೀಸಿ ಬಂದು ಮನಸ್ಸನ್ನು ಭ್ರಷ್ಟ ಮಾಡಿ, ಇಲ್ಲದ ಲಾಲಸೆ ತುಂಬಿ, ನಾವು ಎಂ ಜಿ ರೋಡ್ ನಲ್ಲಿ ಕೋಲಾ ಕುಡಿಯುವಂತೆ ಮಾಡಿದಾಗ, ಕೆ ಎಫ್ ಸಿ ಯಲ್ಲಿ ಚಿಕನ್ ಬರ್ಗರ್ ಗೆ ಕೈ ಹಾಕುವಂತೆ ಮಾಡಿದಾಗ, ಆನ್ ಲೈನಲ್ಲಿ ಬೇಕಾದಷ್ಟು ಶಾಪಿಂಗ್ ಮಾಡುತ್ತಾ ಕುಳಿತಿದ್ದಾಗ.. ಮೋದಿ ಗುಜರಾತ್ ನಲ್ಲಿ ‘ದಕ್ಷ’ ಆಡಳಿತ ನೀಡಿ, ದೇಶ ಕಾಯಲು ಆಯ್ಕೆಯಾದಾಗ, ಗೋವುಗಳು ಮಾತೆಗಳಾಗಿ ‘ಆಧಾರ್ ಕಾರ್ಡ್’ ಪಡೆಯಲು ಕ್ಯೂ ನಲ್ಲಿ ನಿಂತು ಬೆರಳ ಮುದ್ರೆ, ಕಣ್ಣಿನ ಪಾಪೆಯನ್ನು ಕ್ಯಾಮೆರಾ ಮುಂದೆ ಅಗಲಿಸಿರುವಾಗ, ಅಯೋಧ್ಯೆಯಲ್ಲಿ ರಾಮನೋ, ಅಲ್ಲಾಹುವೋ ಎಂದು ಸುಪ್ರೀಂ ಕೋರ್ಟು ನ್ಯಾಯಾಧೀಶರನ್ನು ಧರ್ಮದ ಮೇಲೆ ಆರಿಸಿ ಬೆಂಚು ಮಾಡಿರುವಾಗಲೂ.. ಕೈನಲ್ಲಿ ಚೂರಿ ಚಾಕು ಬಾಕುಗಳು ಮಾರ್ಯಾದೆಯ ವಸ್ತುಗಳಾಗಿರುವಾಗ, ಮರ್ಯಾದೆ ಮುಖ್ಯ ಎಂದು ಮಗಳನ್ನೇ ಮುಗಿಸುತ್ತಿರುವಾಗ, ಜೈಲಿನಲ್ಲಿರುವ ಕೈದಿಗಳು ಆತ್ಮಹತ್ಯೆ ಮಾಡಿಕೊಂಡ ರೈತನೊಬ್ಬನ ಹೆಂಡತಿ ತಿನ್ನುವ ಅನ್ನಕ್ಕಿಂತ ಹೆಚ್ಚು ತಿನ್ನುತ್ತಿರುವಾಗ..
ಶ್ರೀಪಾದ ಭಟ್ಟರು ತಮ್ಮೊಳಗನ್ನು ಕಲುಷಿತ ಮಾಡಿಕೊಳ್ಳದೆ ಮನುಷ್ಯತ್ವದ ಹುಡುಕಾಟಕ್ಕೆ ಹೊರಟರು.

‘ದಾರಿ ನೂರಾರಿವೆ ಬೆಳಕಿನ ಅರಮನೆಗೆ..’ ಎನ್ನುವಂತೆ ಅವರು ಬೆಳಕಿನ ದಿಕ್ಕಿನತ್ತ ಸಾಗಲು, ತಮ್ಮೊಂದಿಗೆ ಇತರರನ್ನೂ ಆ ಬೆಳಕಿನತ್ತ ಕರೆದೊಯ್ಯಲು ಆಯ್ದುಕೊಂಡದ್ದು ರಂಗಭೂಮಿಯನ್ನು.

ಜನರ ದಂಡಿಲ್ಲದೆ ಜನರ ಜೊತೆ ಇಲ್ಲದೆ, ಜನರ ಜೊತೆ ಮುಖಾಮುಖಿಯಾಗದೆ ರಂಗಭೂಮಿಯಿಲ್ಲ. ಶ್ರೀಪಾದ ಭಟ್ಟರ ಆಲೋಚನೆಗೆ ರೆಕ್ಕೆ ಸಿಕ್ಕುವುದೇ ಜನರೊಂದಿಗೆ. ಹಾಗಾಗಿಯೇ ರಂಗಭೂಮಿಯ ದಾರಿಯಲ್ಲಿ ಜನರ ದಂಡನ್ನು ಕಟ್ಟಿಕೊಂಡು ಸಮಾಜಕ್ಕೆ ಕನ್ನಡಿ ಹಿಡಿಯಹೊರಟದ್ದು ಇವರು. ರಂಗಭೂಮಿ ಎನ್ನುವುದೇ ಪ್ರತಿಭಟನೆ. ಅದಕ್ಕೆ ಪ್ರಶ್ನೆ ಮಾಡಿ ಗೊತ್ತು, ಪ್ರಶ್ನೆ ಹುಟ್ಟು ಹಾಕಿ ಗೊತ್ತು, ಪ್ರಶ್ನೆಗಳ ಸಮೇತವೇ ಸಂಚರಿಸುವಂತೆ ಮಾಡುವುದು ಗೊತ್ತು. ಹಾಗೆ ಪ್ರಶ್ನೆಗಳ ನೆಲದಲ್ಲಿ ನಿಂತವರು ಶ್ರೀಪಾದ ಭಟ್.

ನನಗೆ ಇನ್ನೂ ನೆನಪಿದೆ. ನೆನಪಿದೆ ಅಲ್ಲ.. ನನ್ನೊಡನೆಯೇ ಅದು ಇಂದಿಗೂ ಪಯಣಿಸುತ್ತಾ ಬರುತ್ತಿದೆ. ಅದು ನಾಟಕ, ಬೀದಿ ನಾಟಕ -ಒಂದು ಪ್ರಶ್ನೆ, ಹಲವು ಪ್ರಶ್ನೆ, ಹಲ ಹಲವು ಪ್ರಶ್ನೆಗಳು.. ಎಂದು ಸಾಗುವ ನಾಟಕ ಕೇಳುತ್ತದೆ ಸುಂದರ ತಾಜಮಹಲ್ ಕಟ್ಟಿದವರಾರು? ಷಹಜಹಾನ್? ಅಲ್ಲ.. ದುಡಿದುಡಿದು ಕಷ್ಟಪಡುವ ಶ್ರಮಜೀವಿ.. ಉತ್ತರ ಅದು ಒಂದೇ ಉತ್ತರ..

ಹೌದಲ್ಲಾ.. ಅನಿಸಿತು. ಆ ನಂತರ ನಾನು ಪ್ರಶ್ನೆ ಮಾಡುವ, ಮಾಡಿಕೊಳ್ಳುವ ರೀತಿಯೇ ಬದಲಾಗಿ ಹೋಯಿತು. ಹೌದು, ಒಂದು ನಾಟಕದಿಂದಾಗಿ ಏನೆಲ್ಲಾ..

ಶ್ರೀಪಾದ ಭಟ್ಟರಿಗೆ ಹಾಗೆ ರಂಗಭೂಮಿಯ ಮೂಲಕ ಪ್ರಶ್ನೆ ಕೇಳುವುದು ಗೊತ್ತು. ತಣ್ಣಗೆ ನಿಮ್ಮ ಒಳಗೆ ಒಂದು ತುಮುಲ ಹುಟ್ಟು ಹಾಕುವುದು ಗೊತ್ತು. ಅಷ್ಟೇ ಅಲ್ಲ, ನಿಮ್ಮೊಳಗೆ ಪ್ರಶ್ನೆಗಳನ್ನು ಕೂರಿಸುವುದು ಗೊತ್ತು, ಅಂತೆಯೇ ಅದಕ್ಕೆ ಉತ್ತರ ಪಡೆಯುವ ಧಿಕ್ಕಿನಲ್ಲಿ ನಿಮ್ಮನ್ನು ನಿರಂತರ ಪಯಣಿಗರಾಗಿಸುವುದೂ ಗೊತ್ತು.

ನಾಟಕಗಳ ಮೂಲಕ ಹೊರಟು ಕವಿತೆ, ಕಥೆ, ಬದುಕು ಎಲ್ಲದರಲ್ಲಿಯೂ ಪ್ರಶ್ನೆಗಳ ನಿಲೆ ಹಾಕಿಕೊಳ್ಳಲು ಇವರು ಪ್ರೇರೇಪಿಸಬಲ್ಲರು. ಹಾಗಾಗಿಯೇ ಬ್ರೆಕ್ಟ್ ನ ಕವಿತೆಯ ಮೂಲಕ,  ಎಂದೋ ಸಂದು ಹೋದ ಉಷಾಪಹರಣ ಮೂಲಕ, ಮಾಂಟೋನ ಮಿಸ್ಟೇಕ್ ಮೂಲಕ ಟ್ಯಾಗೂರರ ಚಿತ್ರಾ, ಕೆಂಪು ಕಣಗಿಲೆಯ ಮೂಲಕ, ಮಹಾಭಾರತದ ಹೆಣ್ಣುಗಳ ಮೂಲಕ, ಸಂಗ್ಯಾ ಬಾಳ್ಯಾದ ಗಂಗಿಯ ಮೂಲಕ, ಒಂದು ಪುಟ್ಟ ಸೀಮೆಸುಣ್ಣದಿಂದ ಎಳೆದ ವೃತ್ತದ ಮೂಲಕ, ಬಲಿ ಚಕ್ರವರ್ತಿಯ ಮೂರು ಹೆಜ್ಜೆಯ ದುರಂತದ ಮೂಲಕ,…

ನಾನು ನಾನಾಗಿರುವವರೆಗೆ ಯಾವ ಬಾಗಿಲೂ ತೆಗೆಯುವುದಿಲ್ಲ, ಪ್ರೀತಿಯ ಬಾಗಿಲಾದರೂ ಅಷ್ಟೇ, ರಂಗಭೂಮಿಯ ಬಾಗಿಲಾದರೂ ಅಷ್ಟೇ..ಯಾವಾಗ ನಾನು ಅನ್ನುವುದನ್ನು ನಟ, ಪ್ರೇಕ್ಷಕ ಇಬ್ಬರೂ ಕಳೆದುಕೊಳ್ಳುತ್ತಾರೋ ಆಗ ಬಾಗಿಲು ತೆರೆಯುತ್ತಾ ಹೋಗುತ್ತದೆ. ಅದು ಬರೀ ಬಾಗಿಲಲ್ಲ, ಅರಿವಿನ ಬಾಗಿಲು ಎನ್ನುತ್ತಾರೆ ಶ್ರೀಪಾದ. ‘ಅರಿವ ಮುನ್ನ ಜಗಕೆಲ್ಲಕು ನಾ, ಅರಿತ ಮೇಲೆ ಜಗಕೆಲ್ಲಕು ನೀ..’ ಹಾಡಿಗೆ ಹೀಗೆ ಮಾನವೀಯ ಅರ್ಥ ಹೊಮ್ಮಿಸೋದಿಕ್ಕೆ ಶ್ರೀಪಾದರಿಗೆ ಸಾಧ್ಯ.

ಕೆಡಹುವುದು ಕಟ್ಟುವುದು ಎನ್ನುವುದು ಅಹಂಕಾರವಾಗಿರುವ, ಆ ಕಾರಣಕ್ಕೆ ದೇಶಕ್ಕೆ, ಸಂವೇದನೆಗೆ, ಮನುಷ್ಯತ್ವಕ್ಕೆ ಬೆಂಕಿ ತಗುಲಿರುವಾಗ ಶ್ರೀಪಾದ ಭಟ್ಟರೂ ಕೆಡಹುವುದರಲ್ಲಿ, ಕಟ್ಟುವುದರಲ್ಲಿ ನಿರತರಾಗಿದ್ದಾರೆ. ಅವರು ಕೆಡಹಲು ಕೈ ಹಾಕಿರುವುದು ಸಮಾಜದ ಸ್ಥಾಪಿತ ಸಂಗತಿಗಳನ್ನು. ಕಟ್ಟಲು ಹೊರಟಿರುವುದು ಪಂಪನ ಆಶಯದ ಆ ಮನುಷ್ಯನನ್ನ. ಹಾಗಾಗಿಯೇ ಅವರು ಕೆಡಹುತ್ತಾರೆ ಇದುವರೆಗಿನ ನಮ್ಮ ನಕಾರಾತ್ಮಕ ಆಲೋಚನೆಗಳನ್ನು, ಕಟ್ಟಲು ಉತ್ಸುಕರಾಗಿರುವುದು ಬೆಸೆಯುವಿಕೆಯನ್ನು.

ಎಕ್ಕುಂಡಿ ನನಗೂ ಅಂತೆಯೇ ಶ್ರೀಪಾದ ಭಟ್ಟರಿಗೂ ತುಂಬಾ ಪ್ರಿಯ. ಎಕ್ಕುಂಡಿ ಹೇಳುತ್ತಾರೆ-

‘ದೂರದಲ್ಲಿದ್ದವರನು ಹತ್ತಿರಕೆ ತರಬೇಕು
ಹರಿವ ಹೊಳೆಗೂ ಉಂಟು ಎರಡು ತೋಳು
ನೆಲವನಪ್ಪಿದ ಎರಡು ದಂಡೆಗಳ ಬಾಂಧವ್ಯ
ಬೆಸೆಯಬೇಕಲ್ಲವೇ ನಮ್ಮ ಬಾಳು’

ಎನ್ನುವಂತೆ ಅವರು ಮತ್ತೆ ಮತ್ತೆ ರಂಗಭೂಮಿ ಎಂಬ ಸೇತುವೆಯನ್ನು ಬಳಸಿ, ಬೆಳಸಿ ಎರಡು ದಡಗಳನ್ನೂ ಬೆಸುಗೆ ಹಾಕುವ ಕಾಯಕಕ್ಕೆ ಮುಂದಾಗುತ್ತಾರೆ. ಅವರು ಮಕ್ಕಳ ಕಣ್ಣೊಳಗೆ ಮಿಂಚು ಹರಿಸುವಾಗ, ಅದು ಎದೆಯಲ್ಲಿ ಹೊತ್ತಿಸುವ ಪಂಜೂ ಹೌದು ಅನಿಸುತ್ತದೆ. ಶ್ರೀಪಾದ ಭಟ್ಟರನ್ನು ನೋಡುವಾಗ, ಅವರೊಡನೆ ಮಾತನಾಡುವಾಗಲೆಲ್ಲಾ ನನಗೆ ಆ ಕಣಗಿಲು ಹುಡುಗನದ್ದೇ ನೆನಪು. ಎಕ್ಕುಂಡಿ ಕವಿತೆ ‘ ಕಣಗಲು ಗಿಡದಲ್ಲಿ ಹುಡುಗ’ ದಲ್ಲಿ –

ಬೇಸರದ ಬಿಸಿಲು ಮಧ್ಯಾಹ್ನ ಗೋಪುರದಲ್ಲಿ

ಗಡಿಯಾರ ಬಾರಿಸಿತು ಗಂಟೆಯೊಂದು

ಶಾಲೆ ತಪ್ಪಿಸಿ ಹುಡುಗ, ಗುಡಿಯ ಹಿಂಬದಿಗಿರುವ

ಕಣಗಿಲದ ಗಿಡದಲ್ಲಿ ಕುಳಿತ ಬಂದು

ಇಲ್ಲಿ ಪಾಠಗಳಿಲ್ಲ, ಇಲ್ಲಿ ಸಂಧಿ ಸಮಾಸ

ಇಲ್ಲ ವನಜೂಲಾದ ರೇವು ರೈಲು

ಇಲ್ಲಿ ಸುಳಿಯವು ಕೋನ ತ್ರಿಜ್ಯಗಳ ಹಾವಳಿಯು

ಇಲ್ಲಿ ತೂಕಡಿಕೆಗಳ ದೊಡ್ಡ ಬೈಲು

ಪಾಠಗಳು ನಡೆದಲ್ಲಿ ಮೋಡ ತೇಲುವುದಿಲ್ಲ

ಗಾಳಿ ಬೀಸುವುದಿಲ್ಲ ಎಲೆಗಳಿಲ್ಲ

ಯಾವ ರಾಸಾಯನಿಕ ಕ್ರಿಯೆಗೆ ಒಳಪಡಿಸಿಯೂ

ಮನದಲ್ಲಿ ಸಂತಸದ ಅಲೆಗಲಿಲ್ಲ…

ಶ್ರೀಪಾದ ನನಗೆ ನಿಜಕ್ಕೂ ಹಾಗೆ ಶಾಲೆ ತಪ್ಪಿಸಿಕೊಂಡ ಹುಡುಗನಂತೆ ಕಂಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಗೊತ್ತಾಗಿ ಹೋಗಿದೆ ‘ಪಾಠಗಳು ನಡೆದಲ್ಲಿ ಮೋಡ ತೇಲುವುದಿಲ್ಲ / ಗಾಳಿ ಬೀಸುವುದಿಲ್ಲ ಎಲೆಗಳಿಲ್ಲ / ಯಾವ ರಾಸಾಯನಿಕ ಕ್ರಿಯೆಗೆ ಒಳಪಡಿಸಿಯೂ / ಮನದಲ್ಲಿ ಸಂತಸದ ಅಲೆಗಳಿಲ್ಲ… ಹಾಗಾಗಿಯೇ ಅವರು ಬಯಲನ್ನು ನಂಬಿದ್ದಾರೆ. ರಂಗಭೂಮಿಯ ಬಯಲು. ಸಮಾಜದ ಬಯಲು. ಕಟ್ಟಿಕೊಂಡಿರುವ ಗೋಡೆಗಳನ್ನು ಕೆಡಹುತ್ತಾ ಅವರು ಬಯಲಿನಲ್ಲಿ ನಮ್ಮನ್ನು ಓದಿಸಲು ಬಯಸುತ್ತಾರೆ.

ಅವರು ಸಾವಿರಾರು ಮಕ್ಕಳ ಜೊತೆ ಹಾಡು ಕುಣಿತ ನಡೆಸುವಾಗ ನನಗೆ ಅನಿಸುವುದು ಇವರು ಆ ಸಂಧಿ ಸಮಾಸ. ಕೋನ ತ್ರಿಜ್ಯ. ವೆನೆಜುವೆಲಾದ ರೈಲುಗಳಿಂದ ಇವರು ಎಷ್ಟೊಂದು ಕನಸುಗಣ್ಣುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು

ಅವರೇ ಹೇಳಿದ ಒಂದು ಪುಟ್ಟ ಪ್ರಸಂಗ

‘ಏಯ್! ಎಷ್ಟು ಗಲಾಟೆ ಮಾಡ್ತೀಯ ಬೆಂಚ್ ಮೇಲೆ ನಿಂತುಕೋ.. ಅನ್ನುತ್ತಾರೆ ನಾಲ್ಕು ಗೋಡೆಯ ಒಳಗೆ. ಅದು ಶಿಕ್ಷೆ . ಆದರೆ ರಂಗಭೂಮಿಯ ಬಯಲಲ್ಲಿ ಬೆಂಚ್ ಮೇಲೆ ನಿಂತುಕೋ ಎಂದರೆ ಆತ ರಾಜ. ಅಲ್ಲಿ ಯಾವುದು ಶಿಕ್ಷೆಯೋ ಅದು ಇಲ್ಲಿ ಬಹುಮಾನ. ರಂಗಭೂಮಿಯ ಶಕ್ತಿ ಇರೋದೇ ಇಂತಹ ಸ್ಥಾಪಿತ ಮೌಲ್ಯಗಳನ್ನು ಪಲ್ಲಟಗೊಳಿಸುವುದರಲ್ಲಿ..’

ಪಾಠಗಳು ನಡೆದಲ್ಲಿ ಮೋಡ ತೇಲುವುದಿಲ್ಲ ಎನ್ನುವುದು ಶ್ರೀಪಾದ ಭಟ್ಟರಿಗೆ ಗೊತ್ತಿರುವ ಸತ್ಯಸ್ಯ ಸತ್ಯ. ಹಾಗಾಗಿಯೇ ಅವರ ಮಾತು ಕೇಳಿ, ಇಲ್ಲ  ನಾಟಕ ನೋಡಿ, ಇಲ್ಲ ಅವರೊಡನೆ ಕುಶಾಲು ಮಾಡಿ ಉಹುಂ ಅಲ್ಲಿ ಪಾಠ ಸಿಗುವುದೇ ಇಲ್ಲ. ಅವರು ಕಥೆ ಕಟ್ಟಿ ಕೊಡುತ್ತಾರೆ, ಅದಕ್ಕೆ  ಬಣ್ಣ ಹಚ್ಚುತ್ತಾರೆ, ಹೆಜ್ಜೆ ಗೆಜ್ಜೆ ಎಲ್ಲ ಜೋಡಿಸುತ್ತಾರೆ ಆದರೆ ಅಲ್ಲಿ ಪಾಠ ಇರುವುದಿಲ್ಲ. ಇವರ ಪ್ರತೀ ಕೃತಿಯಲ್ಲೂ ಗುಪ್ತವಾಗಿ ಹರಿಯುವ ಒಬ್ಬ ‘ಶಾಲ್ಮಲೆ’ಯಿದ್ದಾಳೆ. ಅದೇ ಮನುಷ್ಯತ್ವದ ಹುಡುಕಾಟ.

‘ರಂಗಭೂಮಿಗೆ ಶ್ರೀಮಂತ ರೋಗ ತಗುಲುತ್ತಿದೆ’ ಎನ್ನುವ ಶ್ರೀಪಾದ ಭಟ್ಟರ ಆತಂಕ ನನ್ನನ್ನು ಕಾಡಿದೆ ಅವರು ಹೇಳುತ್ತಾರೆ. ರಂಗಭೂಮಿ ಒಂದು ಸಮೂಹದ ಬದುಕನ್ನು ಕಟ್ಟುತ್ತೆ. ಅದಕ್ಕೆ ಅರಿವಿನ ಬೀಜ ನೀಡುತ್ತೆ. ಅಂತಹ ರಂಗಭೂಮಿ ಭ್ರಷ್ಟ ಆದರೆ ಸಮೂಹ ಭ್ರಷ್ಟ ಆಗುತ್ತೆ, ಅಭಿರುಚಿ ಭ್ರಷ್ಟ ಆಗುತ್ತೆ, ಭಾಷೆ ಭ್ರಷ್ಟ ಆಗುತ್ತೆ. ಕಣ್ಣು, ಕಿವಿ, ನಾಲಿಗೆ, ಮನಸ್ಸು ಎಲ್ಲಾ ಭ್ರಷ್ಟ ಆಗುತ್ತೆ ಅಂತ. ಮಹಾಭಾರತದ ಕಥೆ ಹೇಳುತ್ತಾರೆ- ಸಂಧಾನಕ್ಕೆ ಬಂದ ಕೃಷ್ಣನನ್ನು ಭ್ರಷ್ಟ ಮಾಡಲು ದುರ್ಯೋಧನ ನೆಲದ ಮೇಲೆಲ್ಲಾ ಸಂಪತ್ತನ್ನು ಚೆಲ್ಲಾಡುತ್ತಾನೆ, ಹೆಂಗಳೆಯರ ಸಾಲು ನಿಲ್ಲಿಸುತ್ತಾನೆ. ಈಗ ರಂಗಭೂಮಿಯನ್ನು ಭ್ರಷ್ಟಗೊಳಿಸಲು ಕಾರ್ಪೊರೇಟ್ ಸಂಸ್ಥೆಗಳು ಪ್ರವೇಶ ಮಾಡಿ ಆಗಿದೆ. ರಂಗಭೂಮಿಯ ಭೂಮಿ ತತ್ವಕ್ಕೆ ಎಳ್ಳು ನೀರು ಬಿಡಿಸಲು ಸಾಕಷ್ಟು ಪ್ರಯತ್ನ ನಡೀತಿದೆ’ ಅಂತ.

ಶ್ರೀಪಾದರ ಒಳಗೆ ಇರುವ ಕಾಳಜಿಯನ್ನು ನೆನೆದಾಗೆಲ್ಲ ನನಗೆ ನೆನಪಿಗೆ ಬರುವುದು ರಸೂಲ್ ಗಂಚತೋವ್ ಎನ್ನುವ ಕವಿಯ ಸಾಲುಗಳು. ಅವರು ಹೇಳುತ್ತಾರೆ-  ’ಇಲ್ಲಿ ನಮಸ್ಕರಿಸು, ಇವರು ಮಠಾಧೀಶರಾಗಿರಲಿಲ್ಲ, ಚಕ್ರವರ್ತಿಯಾಗಿರಲಿಲ್ಲ, ಕೇವಲ ಮನುಷ್ಯರಾಗಿದ್ದರು’.  ಹಾಗೆ ಶ್ರೀಪಾದ ಭಟ್ಟರು ಮನುಷ್ಯನ ನಿರಂತರ ಹುಡುಕಾಟದಲ್ಲಿದ್ದಾರೆ. ಎದೆ ಎದೆಗಳ ನಡುವೆ ಇರುವ ಮುರಿದ ಸೇತುವೆಯ ರಿಪೇರಿ ಮಾಡುತ್ತಿದ್ದಾರೆ.

ಅಂತಹ ಸೇತುವೆ ಕೆಲಸಗಾರನಿಗೆ ಒಂದು ಪುಟ್ಟ ಕಾಣಿಕೆ ಈ ‘ರಂಗ ಉತ್ಸವ’

 

‍ಲೇಖಕರು avadhi

June 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Deepa hiregutti

    ‘ಏಯ್! ಎಷ್ಟು ಗಲಾಟೆ ಮಾಡ್ತೀಯ ಬೆಂಚ್ ಮೇಲೆ ನಿಂತುಕೋ.. ಅನ್ನುತ್ತಾರೆ ನಾಲ್ಕು ಗೋಡೆಯ ಒಳಗೆ. ಅದು ಶಿಕ್ಷೆ . ಆದರೆ ರಂಗಭೂಮಿಯ ಬಯಲಲ್ಲಿ ಬೆಂಚ್ ಮೇಲೆ ನಿಂತುಕೋ ಎಂದರೆ ಆತ ರಾಜ. ಅಲ್ಲಿ ಯಾವುದು ಶಿಕ್ಷೆಯೋ ಅದು ಇಲ್ಲಿ ಬಹುಮಾನ. ರಂಗಭೂಮಿಯ ಶಕ್ತಿ ಇರೋದೇ ಇಂತಹ ಸ್ಥಾಪಿತ ಮೌಲ್ಯಗಳನ್ನು ಪಲ್ಲಟಗೊಳಿಸುವುದರಲ್ಲಿ..’

    ವಾಹ್!

    ಪ್ರತಿಕ್ರಿಯೆ
    • ಶ್ರೀಧರ ಹೆಗಡೆ ಭದ್ರನ್

      ಶ್ರೀಪಾದ ಭಟ್ಟರಿಗೆ ಸುಯೋಗ್ಯ ಉಡುಗೊರೆ.

      ಪ್ರತಿಕ್ರಿಯೆ
  2. nudi

    ಅವರಂತೆಯೇ ಈ ಬರಹವೂ ಸಹಜವಾಗಿದೆ. ಖುಷಿಯಾಯ್ತು ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: