ಶ್ರೀನಿವಾಸ ಪ್ರಭು ಅಂಕಣ: I have a very bad news for you

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 108

ನನ್ನ ಸೇರೆಗಾರ ರಂಗಪ್ಪ ಪಾತ್ರದ ಮೊದಲ ದೃಶ್ಯದ ಚಿತ್ರೀಕರಣ ಅಂದು ಮುಂಜಾನೆಯೇ ಆರಂಭವಾಗುವುದಿತ್ತು.ಅಲ್ಲಿಗೆ ಮೇಕಪ್ ವಿಭಾಗದ ಮುಖ್ಯಸ್ಥರಾಗಿ ಬಂದಿದ್ದವರು ಪ್ರಸಿದ್ಧ ಮೇಕಪ್ ಕಲಾವಿದ ಎನ್.ಕೆ.ರಾಮಕೃಷ್ಣ.ನನ್ನ ಪಾತ್ರದ ಚಿತ್ರೀಕರಣದ ಮೊದಲ ದಿನ ಬೆಳಿಗ್ಗೆ ಮೇಕಪ್ ಗಾಗಿ ರಾಮಕೃಷ್ಣ ಅಲಿಯಾಸ್ ರಾಮಣ್ಣನ ಮುಂದೆ ಹೋಗಿ ಮುಖವನ್ನೊಡ್ಡಿ ಕುಳಿತೆ.

‘ಸೇರೆಗಾರನ ಪಾತ್ರವಲ್ಲವೇ’ ಎಂದು ತನ್ನೊಳಗೇ ಗುನುಗಿಕೊಂಡ ರಾಮಣ್ಣ ಒಂದೆರಡು ಚಣ ನನ್ನ ಮುಖವನ್ನೇ ದಿಟ್ಟಿಸಿದ.’ಕೂದಲಿಂದು ಯೋಚನೆಯಿಲ್ಲ..ಜುಟ್ಟಿನ ವಿಗ್ ಬರುತ್ತೆ’ ಎಂದು ಮತ್ತೊಂದು ಬಾರಿ ಗುನುಗಿಕೊಂಡು ಮತ್ತೊಮ್ಮೆ ಮುಖವನ್ನು ನೋಡಿ ಒಂದು ಬ್ರಷ್ ಕೈಗೆತ್ತಿಕೊಂಡು ಹುಬ್ಬನ್ನು ಕೊಂಚ ತಿದ್ದಿದ.ಜುಟ್ಟಿನ ವಿಗ್ ಕೂಡಿಸಿ ಮಟ್ಟಸವಾಗಿ ಬಾಚಿ “ಇಷ್ಟೇ ಸಾಕು ಕಣೋ..ಜಾಸ್ತಿ ಮೇಕಪ್ ಬೇಡ.. ಗುಡ್ ಲಕ್ ” ಎಂದು ಹೇಳಿ ಕೈಕುಲುಕಿ ಕಳಿಸಿಯೇ ಬಿಟ್ಟ!

ನಾನೂ ಸಂತೋಷದಿಂದ ಪಂಚೆ—ಅಂಗಿಗಳನ್ನು ಧರಿಸಿಕೊಂಡು ಚಿತ್ರೀಕರಣಕ್ಕೆ ಹೋದೆ.ನನ್ನದು ಒಂದೇ ದೃಶ್ಯ ಅಂದು ಚಿತ್ರೀಕರಣಗೊಂಡದ್ದು.ಎಲ್ಲಾ ಸುಸೂತ್ರವಾಗಿ ಆಯಿತೆಂದು ಗಿರೀಶರೂ ಖುಷಿ ಪಟ್ಟುಕೊಳ್ಳುತ್ತಿರುವಾಗಲೇ ಒಂದು ಅಪಸ್ವರ ಊರಿನವರ ಕಡೆಯಿಂದ ತೂರಿಬಂತು: “ಬಿಸಿಲು ಮಳೆ ಅನ್ನದೆ ಮೂರುಹೊತ್ತೂ ಊರೂರು ಸುತ್ತೋ ಸೇರೆಗಾರ ಇಷ್ಟು ಬಣ್ಣ ಹೇಗಿದ್ದಾನು? ಜೊತೇಗೆ ಮೂರು ಹೊತ್ತೂ ಕವಳ ಜಗಿದು ಜಗಿದು ಬಾಯಿ ಎಲ್ಲಾ ಕೆಂಪಾಗಿರಬೇಕು..ಹಲ್ಲು ಹೊಲಸಾಗಿರಬೇಕು..ಇವರು ನೊಡಿದ್ರೆ ಪಟ್ಟಣದ ಶಿಸ್ತುಗಾರನೊಬ್ಬ ಹಳ್ಳಿಯವನ ದಿರಿಸು ತೊಟ್ಟ ಹಂಗಿದೆ ಅಷ್ಟೇ”!

ಎಲ್ಲಾ ಸೇರೆಗಾರರೂ ಒಂದೇ ನಮೂನೆಯವರಾಗಿರಬೇಕೆಂಬ ಲಿಖಿತ ನಿಯಮವೇನೂ ಇಲ್ಲದಿದ್ದರೂ ಆ ಗ್ರಾಮದವರು ಹಾಗೊಂದು ಸಂಗತಿಯನ್ನು ಗಮನಿಸಿದ್ದು ಅರ್ಥಪೂರ್ಣವಾಗಿಯೇ ಇದೆ ಎಂದು ಗಿರೀಶರಿಗೆ ಅನ್ನಿಸಿತು.ಸರಿ, ಮರುದಿನದಿಂದಲೇ ಶುರುವಾಯಿತು ನನ್ನನ್ನು ‘ಅಂದಗೆಡಿಸುವ’ ಕೆಲಸ! ಮುಖದ ಬಿಳುಪನ್ನು ಮುಚ್ಚುವಂತೆ ಮಾಸಲು ಕಪ್ಪು ಬಣ್ಣವನ್ನು ಲೇಪಿಸಲಾಯಿತು! ಕೈಕಾಲುಗಳ ತೆರೆದು ತೋರುವ ಭಾಗಗಳಿಗೆಲ್ಲಾ ಅದೇ ಮಾಸಲು ಕಪ್ಪುಬಣ್ಣವನ್ನೇ ಹಚ್ಚಲಾಯಿತು.ಅಂದರೆ ಮೇಕಪ್ ಕೋಣೆಯಲ್ಲಿ ಅಕ್ಷರಶಃ ನನ್ನ “ಮೈಕಪ್ಪಾಗಿಸುವ” ಕೆಲಸ ನಡೆಯಿತೆನ್ನಬಹುದು!

ಒಂದೂವರೆನಿಮಿಷದಲ್ಲಿ ನನ್ನ ಪಾತ್ರದ ಮೇಕಪ್ ಆಗಿಹೋಗುತ್ತದೆಂದು ಹಿಂದಿನ ದಿನವಷ್ಟೇ ಸಂಭ್ರಮ ಪಟ್ಟಿದ್ದೆ! ಮರುದಿನವೇ ಪರಿಸ್ಥಿತಿ ತಿರುಗು ಮುರುಗಾಗಿ ಮಾಸಲು ಕಪ್ಪು ಬಣ್ಣವನ್ನು ಹದವಾಗಿ ಎಲ್ಲೆಡೆ ಒಂದೇ ನಮೂನೆಯಲ್ಲಿ ನನ್ನ ಮೈಗೆ ಲೇಪಿಸಲು ಅರ್ಧ ತಾಸೇ ಬೇಕಾಗತೊಡಗಿತು! ಪಾತ್ರಕ್ಕೆ ಅಗತ್ಯವಿದ್ದರೆ ಎಂತಹ ರೂಪಾಂತರಕ್ಕೂ ಕಲಾವಿದರು ಸಿದ್ಧರಾಗಿರಬೇಕು ಅನ್ನುವುದು ನಾಟಕಶಾಲೆಯಲ್ಲಿ ಕಲಿತ ಮೊದಲ ಪಾಠವಾದ್ದರಿಂದ ಅದರಿಂದ ನನಗೇನೂ ಕೆಟ್ಟೆನಿಸಲಿಲ್ಲ.ಆ ಕ್ಷಣದಲ್ಲೇ ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ನನ್ನ ‘ನಿರ್ಜೀವ’ ಕಿರುಚಿತ್ರಕ್ಕಾಗಿ ‘ಮುಖದ ಬಿಳಿಯ ಬಣ್ಣವನ್ನು ಸ್ವಲ್ಪ ಕುಂದಿಸಬೇಕು’ ಎಂದು ಹೇಳಿದ್ದಕ್ಕೆ ಸುತರಾಂ ಒಪ್ಪದೆ ಪಾತ್ರವನ್ನೇ ಬಿಟ್ಟುಹೋದ ನನ್ನ ಸಹೋದ್ಯೋಗಿಯ ನೆನಪು ನುಗ್ಗಿ ಬಂತು!!”ಛೆ..ಎಂಥಾ ಕೆಲಸ ಆತ್ರೀ! ಸೇರೆಗಾರಂಗೆ ಒಂಚೂರು ಗ್ಲಾಮರ್ ಇದ್ದಿದ್ರ ಹೆಗ್ಗಡಿತೀನ ಬಲೇಗೆ ಹಾಕ್ಕೊಳ್ಳೋಕೆ ಸರsಳ ಆಗತಿತ್ತು..ಈಗ ಊರವರ ದೆಸೇಂದ ಒಟ್ಟಾ ಡಿ ಗ್ಲಾಮರೈಸ್ ಆಗಿಬಿಟ್ರಲ್ಲಾ” ಎಂದು ಗಿರೀಶ್ ನಕ್ಕಿದ್ದೇ ನಕ್ಕಿದ್ದು!

ಸೇರೆಗಾರನ ಪಾತ್ರನಿರ್ವಹಣೆಯಲ್ಲಿ ಎದುರಾದ ಮತ್ತೊಂದು ಮುಖ್ಯ ಸವಾಲೆಂದರೆ ಆ ಪಾತ್ರ ಆಡುತ್ತಿದ್ದ ಭಾಷೆ.ಗಟ್ಟದ ಕೆಳಗಿನವರ ಹಾಗೂ ಗಟ್ಟದ ಮೇಲಿನವರ ಆಡುಮಾತಿನ ಮಿಶ್ರಣದಂತಹ ಒಂದು ನುಡಿಕಟ್ಟು ಸೇರೆಗಾರರದ್ದು.ಆ ಮಾತಿನ ವಿಶೇಷ ಲಯವನ್ನು ಹಾಗೂ ವಿಶಿಷ್ಟ ಪದ ಪ್ರಯೋಗಗಳನ್ನು ಗುರುತಿಸಿಕೊಟ್ಟು ಸೇರೆಗಾರನ ಪಾತ್ರಕ್ಕೆ ಒಂದು ಅಧಿಕೃತತೆಯನ್ನು ತಂದುಕೊಡಲು ನೆರವಾದವರು,ಆ ಭಾಷೆಯ ಬಗ್ಗೆ ಚೆನ್ನಾಗಿ ಅರಿತಿದ್ದ ನಮ್ಮ ಛಾಯಾಗ್ರಾಹಕ ಎಸ್.ರಾಮಚಂದ್ರ ಅವರು.

‘ಕಾನೂರು ಹೆಗ್ಗಡಿತಿ’ ಚಿತ್ರೀಕರಣದ ಸಮಯದಲ್ಲಿಯೇ ಆ ಬಾರಿಯ ಜ್ಞಾನಪೀಠ ಪ್ರಶಸ್ತಿ ಯಾರಿಗೆ ಸಲ್ಲಬೇಕೆಂಬುದರ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಸಧ್ಯದಲ್ಲೇ ಆಯ್ಕೆಯ ವಿಧಿ ವಿಧಾನ ಪ್ರಕ್ರಿಯೆಗಳು ಪೂರ್ಣಗೊಂಡು ಪ್ರಶಸ್ತಿ ಭಾಜನರ ಹೆಸರು ಬಹಿರಂಗಗೊಳ್ಳುವುದಿತ್ತು. ನಮ್ಮ ಚಿತ್ರದ ನಿರ್ದೇಶಕ ಗಿರೀಶ್ ಕಾರ್ನಾಡರ ಹೆಸರೂ ಸಹಾ ಪ್ರಶಸ್ತಿಗಾಗಿ ಸೂಚಿತರಾದವರ ಪಟ್ಟಿಯಲ್ಲಿದ್ದುದರಿಂದ ನಾವೆಲ್ಲರೂ ಅತ್ಯಂತ ಕುತೂಹಲ —ಕಾತರದಿಂದ ಆಯ್ಕೆಯ ಘೋಷಣೆಯನ್ನು ಎದುರುನೋಡುತ್ತಿದ್ದೆವು.

ನನಗೆ ಆ ದಿನ ತುಂಬಾ ಚೆನ್ನಾಗಿ ನೆನಪಿದೆ: ಆ ದಿನಕ್ಕೆ ಒಂದೆರಡು ದಿನ ಮುಂಚಿತವಾಗಿ ಚಿತ್ರೀಕರಣವನ್ನು ನೋಡಿಕೊಂಡು ಹೋಗಲು ಗಿರೀಶರ ಆಪ್ತ ಶ್ರೀನಿವಾಸ ಕಪ್ಪಣ್ಣ ಅವರು ಬಂದಿದ್ದರು.ಆ ದಿನ ಮುಂಜಾನೆಯಿಂದಲೇ ಏನೋ ಒಂದಷ್ಟು ಮಾತುಕತೆಗಳು..ಗುಸುಗುಸು ಪಿಸುಪಿಸು ನಡೆಯುತ್ತಿದ್ದಂತೆ ನನಗೆ ಭಾಸವಾಯಿತು. ಮೊಬೈಲ್ ಅದಾಗಲೇ ಪ್ರಾರಂಭವಾಗಿ ಮೂರ್ನಾಲ್ಕು ವರ್ಷಗಳೇ ಕಳೆದಿದ್ದರೂ ನಮ್ಮ ಚಿತ್ರೀಕರಣ ನಡೆಯುತ್ತಿದ್ದ ಪ್ರದೇಶದಲ್ಲಿ ನೆಟ್ ವರ್ಕ್ ಸರಿಯಾಗಿ ಸಿಗದೇ ಬಹಳವೇ ತೊಂದರೆಯಾಗುತ್ತಿತ್ತು.ಅಂದು ಶೂಟಿಂಗ್ ಪ್ರಾರಂಭವಾಗಿ ಒಂದು ದೃಶ್ಯದ ಚಿತ್ರೀಕರಣ ಮುಗಿದ ಮೇಲೆ ಗಿರೀಶರು ‘ನಾ ಸ್ವಲ್ಪ ಹೊರಗೆ ಹೋಗಿ ಬರ್ತೇನೆ..ನೀವೆಲ್ಲಾ ರಿಲ್ಯಾಕ್ಸ್ ಮಾಡಿಕೊಳ್ರಿ’ ಎಂದವರೇ ಕಾರ್ ಹತ್ತಿ ಹೊರಟುಬಿಟ್ಟರು.

ಎಲ್ಲರಿಗೂ ‘ಏನೋ ನಡೆಯುತ್ತಿದೆ’ ಎಂಬುದು ಅರಿವಿಗೆ ಬರುತ್ತಿದೆ;ಆದರೆ ಏನೆಂದು ಸ್ಪಷ್ಟವಾಗಿ ತಿಳಿಯುತ್ತಿಲ್ಲ!
ಬಹುಶಃ ಜ್ಞಾನಪೀಠ ಪ್ರಶಸ್ತಿಯ ಕುರಿತಾಗಿಯೇ ಇರಬೇಕೆಂಬುದು ಎಲ್ಲರ ಅನುಮಾನವಾಗಿದ್ದು ಒಂದಿಬ್ಬರು ಜೋರಾಗಿಯೇ ತಮ್ಮ ಇಂಗಿತವನ್ನು ಸ್ಪಷ್ಟಪಡಿಸಿದಾಗ ಫಕ್ಕನೇ ಅನುಮೋದಿಸಿದವರು ಕಪ್ಪಣ್ಣ! “ಖಂಡಿತವಾಗಿ! ಅದೇ ವಿಚಾರ! ಈ ಬಾರಿ ಜ್ಞಾನಪೀಠ ಪ್ರಶಸ್ತಿ ಕನ್ನಡದ—ಗಿರೀಶರ ಮುಡಿಗೇರಿದೆ! ಕೊನೆಯ ಕ್ಷಣದ ಸ್ಪಷ್ಟೀಕರಣಕ್ಕಾಗಿ ಗಿರೀಶರು ದೆಹಲಿಗೆ ಫೋನ್ ಮಾಡಿಬರೋದಕ್ಕೆ ಹೋಗಿದ್ದಾರೆ” ಎಂದಾಗ ನಮ್ಮ ಸಂಭ್ರಮ ಹೇಳತೀರದು!

ಅರೆ! ಎಂಥ ಐತಿಹಾಸಿಕ ಕ್ಷಣದಲ್ಲಿ ನಾವು ಗಿರೀಶರ ಒಟ್ಟಿಗಿದ್ದೇವೆ! ಆದರೆ ತಮಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ ಸಿಹಿ ಸುದ್ದಿಯನ್ನು ಸ್ವತಃ ತಾವೇ ತರುತ್ತಿರುವ ಗಿರೀಶರನ್ನು ಅಭಿನಂದಿಸಲು ಒಂದು ಹೂ ಗುಚ್ಛವೂ ದೊರೆಯದಂಥ ಕಾಡಿನ ನಡುವೆ ನಾವು ಅಸಹಾಯಕರಾಗಿ ನಿಂತಿದ್ದೇವೆ! ಏನು ಮಾಡುವುದೆಂದು ನಾವು ಚಿಂತಿಸುತ್ತಿರುವಾಗಲೇ ಕಪ್ಪಣ್ಣ ಒಂದು ಉಪಾಯ ಹೇಳಿಕೊಟ್ಟರು! ಅದರಂತೆ ಅಲ್ಲಿದ್ದ ಕಾಡುಗಿಡಗಳಿಂದಲೇ ಒಂದಷ್ಟು ಹೂಗಳನ್ನು ಸಂಗ್ರಹಿಸಿ ಸೇರಿಸಿ ಕಟ್ಟಿ ಹೂ ಗೊಂಚಲನ್ನು ಹುಡುಗರು ಸಿದ್ಧಪಡಿಸಿದರು. ಅದೇ ವೇಳೆಗೆ ಗಿರೀಶರು ತುಸು ದೂರದಲ್ಲಿ ಕಾರಿನಿಂದ ಇಳಿದು ಬರುತ್ತಿರುವುದು ಕಾಣಿಸಿತು. ಮೊದಲೇ ಎಲ್ಲರೂ ಮಾತಾಡಿಕೊಂಡು ಗಿರೀಶರು ಹತ್ತಿರ ಬರುವವರೆಗೆ ಸುಮ್ಮನಿದ್ದು ಅವರು ಬಳಿಬಂದೊಡನೆ ಕಪ್ಪಣ್ಣ ಅವರ ಸೂಚನೆಯ ಮೇರೆಗೆ ಎಲ್ಲರೂ ಒಟ್ಟಿಗೆ ಜೋರಾಗಿ “ಅಭಿನಂದನೆಗಳು ಗಿರೀಶ್ ಸರ್” ಎಂದು ಕೂಗಿ ಹೂ ಗುಚ್ಛವನ್ನು ಕೈಗಿಟ್ಟಾಗ ಒಂದುಕ್ಷಣ ಕಕ್ಕಾಬಿಕ್ಕಿಯಾಗಿಬಿಟ್ಟರು ಗಿರೀಶ್!

ಆ ಕ್ಷಣದ ಅವರ ಮುಖದ ಭಾವವನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸಲಾಗಲಿಲ್ಲವೇ ಎಂದು ನೆನೆದು ಈಗಲೂ ಬೇಸರವಾಗುತ್ತದೆ! ಕನ್ನಡಕ್ಕೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಅಮೋಘ ಏಳನೆಯ ಬಾರಿಗೆ ಲಭಿಸಿದೆ;ಈ ಗೌರವಕ್ಕೆ ಪಾತ್ರರಾದ ಶ್ರೇಷ್ಠ ನಾಟಕಕಾರ ಗಿರೀಶರು ಆ ಸುದ್ದಿ ಬಂದ ಆ ಒಂದು ರೋಮಾಂಚಕ ಕ್ಷಣದಲ್ಲಿ ನಮ್ಮೊಟ್ಟಿಗಿದ್ದಾರೆ;ಅವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಾವು ಅಭಿನಯಿಸುತ್ತಿದ್ದೇವೆ! ಎಂಥ ಹೆಮ್ಮೆಯ ಸಂಗತಿ! ಅಂದೆಲ್ಲಾ ಇದೇ ಸಂತಸ—ಸಂಭ್ರಮದಲ್ಲೇ ಕಳೆದುಹೋಯಿತು.ರಾತ್ರಿ ಗಿರೀಶರೇ ಪಾರ್ಟಿಯ ವ್ಯವಸ್ಥೆ ಮಾಡಿದ್ದರು.

ಅಲ್ಲೂ ಒಂದು ಪುಟ್ಟ ಸ್ವಾರಸ್ಯದ ಘಟನೆ! ಪಾರ್ಟಿ ಆರಂಭವಾಗಿ ಅರ್ಧ ತಾಸೂ ಕಳೆದಿರಲಿಲ್ಲವೇನೋ..ನಿಧಾನವಾಗಿ ರಂಗೇರತೊಡಗಿತ್ತು.ಕೆಲ ಗೆಳೆಯರು ‘ಹಯವದನ’, ಜೋಕುಮಾರಸ್ವಾಮಿ’ ಮೊದಲಾದ ನಾಟಕಗಳ ಹಾಡುಗಳನ್ನು ಹೇಳಲು ಗಂಟಲು ಸರಿ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.ನಾನು,”ನೆಲದಲ್ಲಿ ಬೇರಿಳಿಯುವ ಮುನ್ನ ನಕ್ಷತ್ರದಲ್ಲಿ ಟೊಂಗೆ ಬಿಚ್ಚುವುದಾದರೂ ಹೇಗೆ ಬರನಿ?”..ಈ ಮೊದಲಾದ ತುಘಲಕ್ ನಾಟಕದ ನನ್ನ ಪರಮ ಪ್ರೀತಿಯ ಸಂಭಾಷಣೆಗಳನ್ನು ಹೇಳುತ್ತಾ ಸಂಭ್ರಮಿಸುತ್ತಿದ್ದೆ.

ಎಲ್ಲರೂ ಪಾರ್ಟಿಯ ಸೋಗಿನ ಒಂದು ಸುದೀರ್ಘ ಸಾಂಸ್ಕೃತಿಕ ಸಂಜೆಗೆ ಸಜ್ಜಾಗುತ್ತಿದ್ದ ಸುಮುಹೂರ್ತ ಅದು.ಇದ್ದಕ್ಕಿದ್ದ ಹಾಗೆ ಗಿರೀಶರು ಗ್ಲಾಸ್ ಕೆಳಗಿಟ್ಟು,”okay…i am folding up! ಮುಂಜಾನಿ ಲಗೂನ ಕೆಲಸ ಚಾಲೂ ಮಾಡಬೇಕಲ್ಲಾ! ಹೋಗಿ ಊಟಮಾಡಿ ರೆಸ್ಟ್ ತೊಗೋರಿ” ಎಂದು ತಮ್ಮ ಆಳದನಿಯಲ್ಲಿ ಬಾಂಬ್ ಸಿಡಿಸಿದಾಗ ನಾವೆಲ್ಲಾ ಪೆಚ್ಚಾಗಿ ಹೋದೆವು! ಅಯ್ಯೋ! ಒಂದು ಸುದೀರ್ಘ ಸುಂದರ ಗೋಷ್ಠಿಯ ಕನಸು ಹೀಗೆ ಗೋಣು ಮುರಕೊಂಡು ಧೊಪ್ಪೆಂದು ಕೆಳಗೆ ಬೀಳುವುದೇ! ತಂಡದ ನಾಯಕರೇ ಫರಮಾನು ಹೊರಡಿಸಿದ ಮೇಲೆ ಕೇಳುವುದೇನಿದೆ? ಸಪ್ಪೆಮೋರೆ ಹಾಕಿಕೊಂಡು ‘ಶುಭರಾತ್ರಿ’ ಎಂದು ಸೋತದನಿಯಲ್ಲಿ ಉಸುರುತ್ತಾ ಎದ್ದು ಹೊರಟೆವು.

ನಾನು ಬಾಗಿಲ ಬಳಿ ಬರುತ್ತಿದ್ದಂತೆ ಗಿರೀಶರು, “ಶ್ರೀನಿವಾಸ್ , ಒಂದು ನಿಮಿಷ” ಎಂದು ನನ್ನನ್ನು ತಡೆದು ನಿಲ್ಲಿಸಿದರು.ನಿಂತು ಪ್ರಶ್ನಾರ್ಥಕವಾಗಿ ಅವರನ್ನೇ ನೋಡಿದೆ. ಮತ್ತೊಂದು ಭಯಂಕರ ಬಾಂಬ್ ಸಿಡಿಯಿತು: ” ನಾಳೆ ಮುಂಜಾನೆ ನಿಮ್ಮದೇ ಫಸ್ಟ್ ಸೀನ್.ನೀವು ಹೆಗ್ಗಡಿತೀನ ಸೆಡ್ಯೂಸ್ ಮಾಡೋ ದೃಶ್ಯ.ಬಹುಶಃ ಇಡೀ ದಿನ ಅದೊಂದೇ ಸೀನ್ ಶೂಟ್ ಮಾಡೋದಕ್ಕೆ ಬೇಕಾಗಬಹುದು..pretty lengthy scene..ಲಗೂನ ಎದ್ದು ತಯಾರಾಗಿಬಿಡ್ರಿ”.

ಅಂಥದೊಂದು ದೃಶ್ಯವಿದೆಯೆಂಬುದು ನನಗೆ ಮೊದಲೇ ಗೊತ್ತಿದ್ದ ವಿಷಯವಾದರೂ ನಾಳೆಯೇ ಆ ದೃಶ್ಯದ ಚಿತ್ರೀಕರಣ ಎಂದು ಗಿರೀಶ್ ಅವರು ಹೇಳಿದಾಗ ಎದೆ ಧಸಕ್ಕೆಂದಿತು. ಅದೇನೊ,ಅಂಥ ದೃಶ್ಯಗಳಲ್ಲಿ,ತುಂಬಾ ಸಲಿಗೆಯ ಆಪ್ತ ದೃಶ್ಯಗಳಲ್ಲಿ ನಟಿಸುವುದೆಂದರೆ ನನಗೆ ಮೊದಲಿನಿಂದಲೂ ಕೊಂಚ ಮುಜುಗರವೇ ಹೌದು! ಒಬ್ಬ ಒಳ್ಳೆಯ ನಟನಿಗೆ ಅಂಥ ಯಾವ ಹಿಂಜರಿಕೆಗಳೂ ಅಳುಕುಗಳೂ ಇರಬಾರದು..ಅವನ ಮನಸ್ಸು ಬೇಕಾದ್ದನ್ನು ಬರೆದುಕೊಳ್ಳುವ ಖಾಲಿ ಹಲಗೆಯಂತಿರಬೇಕು..ಇತ್ಯಾದಿ ಇತ್ಯಾದಿ ಪಾಠಗಳನ್ನು ನಾನೇ ಸ್ವತಃ ನನ್ನ ವಿದ್ಯಾರ್ಥಿಗಳಿಗೆ ಸಾಕಷ್ಟು ಸಲ ಬೋಧಿಸಿದ್ದರೂ ನನ್ನದೇ ವಿಷಯಕ್ಕೆ ಬಂದಾಗ ಇದೊಂದು ಹಿಂಜರಿಕೆಯನ್ನು ಮೆಟ್ಟುವುದು ನನಗೆ ಕಷ್ಟವಾಗಿತ್ತು.

ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ನನಗೆ ಬೇರೆ ಅನೇಕ ವಿಷಯಗಳಲ್ಲಿನ ಜಿಗುಟುತನದಿಂದ ಪಾರಾಗುವುದು ಸಾಧ್ಯವಾಗಿತ್ತಾದರೂ ಇದೊಂದು ಸಂಕೋಚ—ನಾಚಿಕೆಯ ವಜ್ರಕೋಶವನ್ನು ಭೇದಿಸುವುದು ಏಕೋ ದುಸ್ತರವಾಗಿತ್ತು.ಅಂದು ರಾತ್ರಿ ಆ ಸಂಕೋಚದ ಭಯದ ಕಾರಣವಾಗಿಯೇ ನಿದ್ದೆಯೇ ಹತ್ತಲಿಲ್ಲ!

ಮರುದಿನ ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಚಿತ್ರೀಕರಣಕ್ಕೆ ಹೋದೆ. ಬಹುಶಃ ನನ್ನ ಮುಜುಗರ—ಸಂಕೋಚಗಳು ಮುಖದ ಮೇಲೇ ಅಚ್ಚೊತ್ತಿಬಿಟ್ಟಿದ್ದವೋ ಏನೋ..ನಾನು ತುಸು ಹೊತ್ತು ಗೆಳೆಯರ ಛೇಡಿಕೆಗೆ ವಸ್ತುವಾಗಿಬಿಟ್ಟೆ. ಗಿರೀಶರೂ ನನ್ನ ಅಳುಕನ್ನು ಗಮನಿಸಿ ನಟನಾದವನ ಮುಕ್ತ ಮನಸ್ಸಿನ ಬಗ್ಗೆ ಒಂದೆರಡು ಮಾತು ಹೇಳಿ ವಿಶ್ವಾಸ ತುಂಬಿದರು. ಎಲ್ಲಕ್ಕಿಂತ ಹೆಚ್ಚಾಗಿ ಜತೆಯಲ್ಲಿದ್ದವರೆಲ್ಲರೂ ಸುಶಿಕ್ಷಿತರೂ ಸುಸಂಸ್ಕೃತರೂ ಆದ ಆತ್ಮೀಯರೇ ಆಗಿದ್ದದ್ದು ನಾನು ನನ್ನ ಸಂಕೋಚದ ಕೋಶದಿಂದ ಹೊರಬರಲು ನೆರವಾಯಿತು.ಅದಕ್ಕಿಂತ ಮುಖ್ಯವಾಗಿ ನನ್ನ ಜೊತೆ ನಟಿಸುತ್ತಿದ್ಡ ಹೆಣ್ಣುಮಗಳಿಗೆ ಒಂದಿಷ್ಟೂ ಮುಜುಗರ—ಕಸಿವಿಸಿಗಳಾಗದಂತೆ ಎಚ್ಚರ ವಹಿಸಬೇಕಿತ್ತು!

ಅದೃಷ್ಟವಶಾತ್ ಹೆಗ್ಗಡಿತಿಯ ಪಾತ್ರ ನಿರ್ವಹಿಸುತ್ತಿದ್ದ ಪ್ರತಿಭಾವಂತ ನಟಿ ತಾರಾ ಅವರೊಂದಿಗೆ ಆ ಮುಂಚೆಯೇ ಕೆಲ ಧಾರಾವಾಹಿ—ಚಲನಚಿತ್ರಗಳಲ್ಲಿ ಅಭಿನಯಿಸಿ ಅವರೊಟ್ಟಿಗೆ ಹತ್ತಿರದ ಗೆಳೆತನವೇ ಇದ್ದದ್ದು ನನ್ನಲ್ಲಿ ವಿಶ್ವಾಸ ಮೂಡಲು ಮತ್ತೊಂದು ಪ್ರಮುಖ ಕಾರಣವಾಯಿತು. ಬೆಳಗಿನಿಂದ ಸಂಜೆಯವರೆಗೆ ಅದೊಂದೇ ದೃಶ್ಯದ ಚಿತ್ರೀಕರಣ ನಡೆಯಿತು.ತಂಡದ ಎಲ್ಲರ ಸಹಕಾರ—ಉತ್ತೇಜನಗಳಿಂದಾಗಿ ಅಂತೂ ಇಂತೂ ಆ ದೃಶ್ಯದ ಚಿತ್ರೀಕರಣ ಮಾಡಿ ಮುಗಿಸಿದೆ! ನನ್ನ ಅಳುಕು—ಹಿಂಜರಿಕೆಗಳು ನನ್ನ ಮುಖದಲ್ಲಿ ಒಂದಿಷ್ಟೂ ಕಾಣದಂತೆ ಎಚ್ಚರ ವಹಿಸಬೇಕಿತ್ತು.

ಸಧ್ಯ..ಹಾಗೇನೂ ಆಗಲಿಲ್ಲ! ಗಿರೀಶರೂ ಕೂಡಾ “ಸೀನ್ ಛೊಲೋ ಬಂತು” ಎಂದು ಖುಷಿಪಟ್ಟರು.ಮರುದಿನ ಅದೇ ದೃಶ್ಯದ ಚಿತ್ರೀಕರಣ ಹಿಂದಿ ಧಾರಾವಾಹಿಗಾಗಿ ಭಾಗೀರಥಿ ಬಾಯಿಯವರೊಂದಿಗೆ ನಡೆಯಿತು.ಧಾರಾವಾಹಿ—ಅದೂ ದೂರದರ್ಶನದ ಧಾರಾವಾಹಿಯಾದ್ದರಿಂದ ‘ಸೆನ್ಸಾರ್ ‘ ನವರ ಕತ್ತರಿ ಹೆಚ್ಚೇ ಹರಿತವಾಗಿರುತ್ತದೆಂಬುದರ ಅರಿವಿದ್ದದ್ದರಿಂದ ದೃಶ್ಯವನ್ನು ಹೆಚ್ಚಾಗಿ ಲಂಬಿಸದೆ ಸೂಚ್ಯವಾಗಿ ಕೆಲವೇ ಶಾಟ್ ಗಳಲ್ಲಿ ಚಿತ್ರಿಸಿ ಮುಗಿಸಲಾಯಿತು.

ಅಬ್ಬಾ! ಅಳುಕು—ಒತ್ತಡಗಳಲ್ಲಿ ಮುಳುಗೇಳುವಂತೆ ಮಾಡಿದ್ದ ದೃಶ್ಯದ ಚಿತ್ರೀಕರಣ ಮುಗಿಸಿ ನಾನೂ ಹಗುರಾಗಿಬಿಟ್ಟೆ.
ಮರುದಿನ ಮುಂಜಾನೆ ಎಂದಿನಂತೆ ಸಿದ್ಧನಾಗಿ ಚಿತ್ರೀಕರಣಕ್ಕೆ ಹೋದೆ. ಗಿರೀಶ್ ಅವರು , ಛಾಯಾಗ್ರಾಹಕ ಎಸ್.ರಾಮಚಂದ್ರ ಅವರು,ಸಹಾಯಕ ನಿರ್ದೇಶಕರಾದ ಚೈತನ್ಯ—ಸಾವಂತ್ , ಒಂದಿಬ್ಬರು ಸ್ಥಳೀಯ ಹಿರಿಯರೊಂದಿಗೆ ಏನೋ ಗಂಭೀರವಾದ ಚರ್ಚೆಯಲ್ಲಿ ಮುಳುಗಿಬಿಟ್ಟಿದ್ದರು.ನಡುವೆ ಹೋಗುವುದು ಅಷ್ಟು ಸಮಂಜಸವಲ್ಲವೆಂದು ನಾನು ಉಳಿದ ಕಲಾವಿದರೊಂದಿಗೆ ದೂರವೇ ಉಳಿದೆ.

ತುಸುಹೊತ್ತಿನ ಚರ್ಚೆಯ ನಂತರ ಗಿರೀಶ್ ಅವರು ರಾಮಚಂದ್ರರೊಟ್ಟಿಗೆ ನಮ್ಮತ್ತಲೇ ಬಂದರು.ಇಬ್ಬರೂ ಸ್ವಲ್ಪ ಒತ್ತಡದಲ್ಲಿದ್ದವರಂತೆಯೇ ಕಂಡರು! ಹತ್ತಿರ ಬರುತ್ತಿದ್ದಂತೆ,”ಸರಿ ಬಿಡಿ ರಾಮೂ, ಮತ್ತೇನು ಮಾಡ್ಲಿಕ್ಕಾಗ್ತದ? ನಾಳೇನೇ ಮುಗಿಸಿಬಿಟ್ಟು ನಾಡಿದ್ದರಿಂದ ಕಾಡಿನ ಕಡೆ ಹೋಗೋಣು” ಎಂದರು.ಆ ವೇಳೆಗೆ ನಮ್ಮ ಬಳಿ ಬಂದಿದ್ದ ರಾಮಚಂದ್ರ ಅವರು,”ನನಗೇನೂ ಪ್ರಾಬ್ಲಂ ಇಲ್ಲ ಗಿರೀಶ್…ತೊಂದರೆ ಇರೋದೆಲ್ಲಾ ನಮ್ಮ ಪ್ರಭುಗಳಿಗೇನೇ” ಎಂದು ನುಡಿದು ತುಂಟನಗೆ ಬೀರಿದರು.

ನಾನು ಏನೂ ಅರ್ಥವಾಗದೇ ಅವರ ಮುಖವನ್ನೇ ದಿಟ್ಟಿಸಿದೆ.ಗಿರೀಶ್ ಅವರು ಬಲು ಗಂಭೀರ ದನಿಯಲ್ಲಿ, “ನೀವು ಹೇಳೋದೂ ಖರೆ..” ಎಂದು ನನ್ನತ್ತ ತಿರುಗಿ, “ಶ್ರೀನಿವಾಸ್ , I have a very bad news for you” ಎಂದು ಮತ್ತೂ ಗಂಭೀರ ದನಿಯಲ್ಲಿ ನುಡಿದಾಗ ನಾನು ಆತಂಕದಿಂದ ತಲ್ಲಣಿಸಿ ಹೋದೆ!!!

‍ಲೇಖಕರು avadhi

August 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೋಪಾಲಕೃಷ್ಣ

    ಪ್ರತಿ ಅಧ್ಯಾಯವೂ ಕಣ್ಣೆ ದುರು ನಡೆದ ಹಾಗೆ ಅನಿಸುವ ಮಟ್ಟಿಗೆ ಚಿತ್ರಣ ಕೊಡುತ್ತಿದ್ದೀರಿ. ಓದಲು ಖುಷಿ ಆಗುತ್ತೆ.

    ಪ್ರತಿಕ್ರಿಯೆ
  2. ಪ್ರಜ್ವಲ್

    ಗಿರೀಶ್ ಕಾರ್ನಾಡರ ಮೂಲಕ ಕನ್ನಡಕ್ಕೆ ಸಂದದ್ದು ಏಳನೇ ಜ್ಞಾನಪೀಠ ಪ್ರಶಸ್ತಿ ಅಲ್ವಾ ಸಾರ್? ಅಂಕಣದಲ್ಲಿ ಎಂಟನೆಯದು ಅಂತ ಬಹುಶಃ ಗಡಿಬಿಡಿಯಲ್ಲಿ ಬರೆದಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: