ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 161
ಮಗ ಅನಿರುದ್ಧ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು 2016 ರಲ್ಲಿ. ಮೂರನೆಯ rank ಗಳಿಸಿ ತೇರ್ಗಡೆಯಾದ ಅನಿರುದ್ಧನ ಮುಂದೆ ಇದ್ದದ್ದು ಮುಂದೇನು ಎಂಬ ಪ್ರಶ್ನೆ! ನಾವು ಎಂದೂ ಮಕ್ಕಳ ಮೇಲೆ ನಮ್ಮ ವಿಚಾರಧಾರೆಯನ್ನು ಹೇರಿದವರು ಅಲ್ಲವಾದರೂ ಅವನಿಗೆ ಅವನ ಭವಿಷ್ಯದ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಬಹುದಿತ್ತು..ಆದರೆ ಆ ವಿಭಾಗಗಳಲ್ಲಿ ನಮಗಿದ್ದ ತಿಳುವಳಿಕೆಯೇ ವಿಪರೀತ ಕಡಿಮೆ! ಹಾಗಾಗಿ ಆ ಸಮಯದಲ್ಲಿ ನಮಗೆ ಸೂಕ್ತ ಮಾರ್ಗದರ್ಶನ ದೊರೆಯಬಹುದಾದರೆ ಅದು ಮೂರ್ತಿ ಭಾವ ಅವರಿಂದ ಮಾತ್ರ ಎಂದು ನಾವು ತೀರ್ಮಾನಿಸಿದೆವು. ನಳಿನಿ ಅಕ್ಕ ಹಾಗೂ ಮೂರ್ತಿ ಭಾವ ಮೊದಲಿನಿಂದಲೂ ಅನಿರುದ್ಧನ ವಿದ್ಯಾಭ್ಯಾಸದ ಕುರಿತಾಗಿ ವಿಶೇಷ ಆಸಕ್ತಿ ವಹಿಸಿದ್ದರು ಕೂಡಾ. ಹಾಗಾಗಿ ತಡಮಾಡದೇ ಅವರನ್ನು ಕಾಣಲು ಹೋದೆವು. ಅನಿರುದ್ಧ ಮೂರ್ತಿಭಾವನೊಟ್ಟಿಗೆ ಎಲ್ಲ ಸಾಧ್ಯತೆಗಳನ್ನೂ ಕುರಿತು ಚರ್ಚಿಸಿ ಅವರ ಸಲಹೆ ಪಡೆಯುತ್ತಿದ್ದರೆ ನಾನೂ ರಂಜನಿಯೂ ಮೂಕ ಪ್ರೇಕ್ಷಕರು! ಆ ಚರ್ಚೆಯ ಒಂದು ಸಂಗತಿಯೂ ನಮ್ಮ ತಿಳುವಳಿಕೆಗೆ ದಕ್ಕುವಂಥದ್ದಾಗಿರಲಿಲ್ಲ! ನಮಗಿದ್ದದ್ದು ಒಂದೇ ಧೈರ್ಯ: ಮೂರ್ತಿಭಾವ ಅಂತಿಮವಾಗಿ ಏನು ತೀರ್ಮಾನಿಸುತ್ತಾರೋ ಅದರಿಂದ ಅನಿರುದ್ಧನಿಗೆ ಖಂಡಿತ ಒಳ್ಳೆಯದೇ ಆಗುತ್ತದೆ ಎನ್ನುವುದು! ಭಾವನ ಸಲಹೆಯಂತೆ ಎರಡು ಮೂರು ದಿನಗಳು ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ (iisc) ಕ್ಯಾಂಪಸ್ ನಲ್ಲಿ ಅಡ್ಡಾಡಿ ಭಾವನ ಜೊತೆಯಲ್ಲೇ ಹಲವಾರು ಪ್ರೊಫೆಸರ್ ಗಳನ್ನು ಭೇಟಿಯಾಗಿ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದೆವು. (‘ಚರ್ಚೆ ನಡೆಸಿದರು’ ಹೆಚ್ಚು ಸೂಕ್ತ!) ಅಕ್ಕ—ಭಾವಂದಿರಿಗಂತೂ ಅನಿರುದ್ಧ ಅಕ್ಯಾಡಮಿಕ್ ಆಗಿಯೇ ಮುಂದುವರಿದು ಮಾಸ್ಟರ್ಸ್ ಡಿಗ್ರಿ ಪಡೆದುಕೊಂಡು ಡಾಕ್ಟರೇಟ್ ಅಧ್ಯಯನವನ್ನೂ ಪೂರೈಸಿ ಅಲ್ಲಿಯೇ, ಅಂದರೆ iisc ಯಲ್ಲಿಯೇ ಪ್ರೊಫೆಸರ್ ಆಗಿಬಿಡಬೇಕೆಂಬ ಕನಸಿತ್ತು! ಸುಮಾರು ಒಂದು ವಾರದ ಈ ಬಗೆಯ ಚರ್ಚೆಗಳು ನಡೆದ ಮೇಲೆ CMTI ನಲ್ಲಿ ಪ್ರೊಫೆಸರ್ ಒಬ್ಬರ ಬಳಿಯಲ್ಲಿ ಆರು ತಿಂಗಳ ಕಾಲ ವಿಶೇಷ ತರಬೇತಿಯನ್ನು ಪಡೆದುಕೊಂಡು ನಂತರ iisc ಗೆ ಹೋಗುವುದೆಂದು ನಿರ್ಧಾರವಾಯಿತು. ಅಲ್ಲಿಗೆ ‘ಮಗನ ಭವಿಷ್ಯ ಒಂದು ಖಚಿತವಾದ ಮಾರ್ಗದಲ್ಲಿ ಸರಿಯಾಗಿ ರೂಪುಗೊಳ್ಳುತ್ತಿದೆ’ ಎಂದು ನಾನೂ ರಂಜನಿಯೂ ಸಮಾಧಾನ ಪಟ್ಟುಕೊಂಡೆವು. ನಾಲ್ಕಾರು ವರ್ಷಗಳ ಅಧ್ಯಯನ—ತರಬೇತಿಗಳ ನಂತರ ಮಗ ಸ್ಥಿರವಾಗಿ ನೆಲೆಗೊಳ್ಳುವಂತಾಗುತ್ತದೆ ಎನ್ನುವುದಕ್ಕಿಂತ ಸಮಾಧಾನದ ಸಂಗತಿ ಅಪ್ಪ ಅಮ್ಮಂದಿರಿಗೆ ಬೇರೇನು ಇರಲು ಸಾಧ್ಯ!?
ಆದರೆ ಇಷ್ಟೆಲ್ಲಾ ಆದರೂ ಅನಿರುದ್ಧ ಪೂರ್ಣ ಮನಸ್ಸಿನಿಂದ ಇದನ್ನು ಆರಿಸಿಕೊಳ್ಳುತ್ತಿದ್ದಾನೆಂಬುದರ ಬಗ್ಗೆ ನನಗೊಂದು ಸಣ್ಣ ಅನುಮಾನವಿತ್ತು! ನಾನು ನಿರೀಕ್ಷಿಸಿದ್ದ ಉತ್ಸಾಹ..ಸಂಭ್ರಮ ಅವನಲ್ಲಿ ಉಕ್ಕುತ್ತಿರಲಿಲ್ಲವೆಂಬುದು ನನ್ನ ಅನಿಸಿಕೆಗೆ ಕಾರಣವಾಗಿತ್ತು. ರಂಜನಿಗೂ ಹಾಗೆಂದು ಹೇಳಿದಾಗ ‘ಇರಲಿ ಬಿಡಿ..ಈಗ ಒಪ್ಪಿಕೊಂಡಾಗಿದೆಯಲ್ಲಾ.. ಹೇಗೋ ನಡೆದುಕೊಂಡು ಹೋಗುತ್ತದೆ’ ಎಂದಿದ್ದಳು.
ಮರುದಿನ ಬೆಳಿಗ್ಗೆ ನಾನೂ ರಂಜನಿಯೂ ಅನಿರುದ್ಧನನ್ನು ಸಿ ಎಮ್ ಟಿ ಐ ಗೆ ಕರೆದುಕೊಂಡು ಹೋಗಿ ಅಲ್ಲಿನ ನಿರ್ದೇಶಕರ ಸುಪರ್ದಿಗೆ ಅವನನ್ನು ಒಪ್ಪಿಸಿ ಒಂದಷ್ಟು ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನದ ವೇಳೆಗೆ ಮನೆಗೆ ಮರಳಿ ಬಂದು ಹುಶ್ ಎಂದು ನೆಮ್ಮದಿಯ ಉಸಿರು ಬಿಡುತ್ತಿರುವಂತೆಯೇ ಮೊಬೈಲ್ ಗುರುಗುಟ್ಟಿತು. ಮಗರಾಯನ ಸಂದೇಶ: ” ನನಗೆ ಇಲ್ಲಿ ತೀರಾ ಬೇಸರವಾಗುತ್ತಿದೆ.ಮುಂದುವರಿಯುವುದು ಕಷ್ಟ..ಬಂದು ಕರೆದುಕೊಂಡು ಹೋಗಿ”.
ಅರೆ! ಇದೇನಿದು! ಎಲ್ಲಾ ಒಂದು ನೆಲೆಗೆ ಬಂದಿತೆಂದು ಈಗಷ್ಟೇ ಖುಷಿ ಪಟ್ಟುಕೊಳ್ಳುತ್ತಿದ್ದರೆ ಮಗರಾಯ ಹೀಗೆ ಸಂದೇಶ ಕಳಿಸಿದ್ದಾನೆ!! ಅಂದರೆ ನಮಗೆ ಮೊದಲು ಮೂಡಿದ್ದ ಅನುಮಾನ ಆಧಾರ ರಹಿತವಾದ ಕಲ್ಪನೆಯೇನಲ್ಲ! ಅಂದುಕೊಂಡದ್ದೆಲ್ಲವೂ ಆಗುವುದಿಲ್ಲ , ಯಾವುದು ಹೇಗಾದರೂ ಬದಲಾಗಬಹುದು ಎಂಬುದೇನೊ ಸತ್ಯವೇ ಆದರೂ ತೀರಾ ಇಷ್ಟು ಬೇಗ ಮಗ್ಗುಲು ಪಲ್ಲಟವಾಗಿಬಿಡುವುದೇ! ನನಗೂ ರಂಜನಿಗೂ ಮಗನ ಸಂದೇಶವನ್ನು ಅರಗಿಸಿಕೊಳ್ಳಲಿಕ್ಕೇ ಒಂದಷ್ಟು ಸಮಯವಾಯಿತು! ತಕ್ಷಣವೇ ಹೊರಟು ಮಗನನ್ನು ಮನೆಗೆ ಕರೆದುಕೊಂಡು ಬಂದೆವು. ದಾರಿಯುದ್ದಕ್ಕೂ ನಾವೂ ಏನೂ ಕೇಳಲಿಲ್ಲ..ಅವನೂ ಮಾತಾಡಲಿಲ್ಲ. ಮನೆಗೆ ಬಂದಮೇಲೂ ತುಸು ಹೊತ್ತು ಮೌನ. ನಂತರ ನಾನೇ ಮಾತು ಆರಂಭಿಸಿದೆ.” ಏನೋ ಪುಟ್ಟಣ್ಣಾ, ಅಲ್ಲಿ ಏನಾದರೂ ತೊಂದರೆ ಆಯಿತಾ?” ಎಂದೆ. “ಇಲ್ಲ ಡ್ಯಾಡಿ…ಅಲ್ಲೇನೂ ಪ್ರಾಬ್ಲಂ ಇಲ್ಲ..ಯಾಕೋ ನನಗೇ ಇದೆಲ್ಲಾ ಸರಿಹೋಗೊಲ್ಲ ಅನ್ನಿಸ್ತಿದೆ..ನಾನು ಮೊದಲೇ ನಿಮ್ಮ ಹತ್ರ ಹೇಳಿಬಿಡಬೇಕಿತ್ತು…ಮೂರ್ತಿ ಭಾವ ಬೇಜಾರು ಮಾಡ್ಕೋತಾರೆ ಅಂತ ಹೇಳಲಿಲ್ಲ..sorry.. ನನಗೆ ಈ ಲೈನ್ ನಲ್ಲಿ ಮುಂದುವರಿಯೋಕೆ ಯಾಕೋ ಇಷ್ಟ ಆಗ್ತಿಲ್ಲ..ಮ್ಯೂಸಿಕ್ ಫೀಲ್ಡಲ್ಲೇ ಏನಾದರೂ ಮಾಡಬೇಕೂಂತ ನನಗೆ ತುಂಬಾ ಆಸೆ ಇದೆ. ಏನೇನೋ ಯೋಜನೆಗಳಿವೆ..ಎಲ್ಲಕ್ಕಿಂತ ಮೊದಲು ಸೌಂಡ್ ಇಂಜಿನಿಯರಿಂಗ್ ನಲ್ಲಿ ಒಂದು ವರ್ಷದ ಒಂದು ಒಳ್ಳೇ ಕೋರ್ಸ್ ಇದೆ..ಅದನ್ನು ಮುಗಿಸ್ಕೋತೀನಿ..ಆಮೇಲೆ ಏನು ಮಾಡಬೇಕು ಅನ್ನೋದರ ಬಗ್ಗೇನೂ ಕ್ಲಾರಿಟಿ ಸಿಗುತ್ತೆ…ಒಂದು ವರ್ಷ ನನಗೇಂತ ಬಿಟ್ಟುಬಿಡಿ ಪ್ಲೀಸ್..” ಎಂದು ತನ್ನ ಮನದಿಂಗಿತವನ್ನು ಹೊರಹಾಕಿದ ಅನಿರುದ್ಧ! ಮಕ್ಕಳ ಇಷ್ಟಕ್ಕೆ ವಿರುದ್ಧವಾಗಿ, ಅದರಲ್ಲೂ ಅವು ಮಾರಕವೋ ಘಾತಕವೋ ಆಗದೆ ಧನಾತ್ಮಕವಾಗಿದ್ದಾಗ, ನಾವು ಇಲ್ಲ ಅನ್ನುವ ಪ್ರಶ್ನೆಯೇ ಇಲ್ಲ! ನಮ್ಮ ಮಿತಿಗಳೊಳಗೇ ಸಾಧ್ಯವಾಗುವುದಾದರೆ, ಅವರ ಕನಸುಗಳ ಕತ್ತು ಹಿಸುಕದೆ ಅವುಗಳ ಸಾಕಾರಕ್ಕೆ ಯತ್ನಿಸುವುದೇ ನಮ್ಮ ಕರ್ತವ್ಯ ಎಂದು ಮೊದಲಿನಿಂದಲೂ ನಂಬಿದವರು ನಾವು. ಹಾಗಾಗಿ ಅನಿರುದ್ಧನ ಯಾವ ಅಪೇಕ್ಷೆ ನಿರೀಕ್ಷೆಗಳೂ ನಮಗೆ ‘ಭಾರಿ’ ಅನ್ನಿಸಲಿಲ್ಲ. ಆದರೆ ಮುಖ್ಯವಾದ ಸಮಸ್ಯೆ ಇದ್ದದ್ದು ಮೂರ್ತಿಭಾವನ ಮನಸ್ಸಿಗೆ ನೋವಾಗುತ್ತದಲ್ಲಾ ಅನ್ನುವುದು! ಎರಡೇ ದಿನಗಳ ಹಿಂದೆ ಈ ನಿರ್ಧಾರ ಮಾಡಿದ್ದರೂ ವಿಷಯ ಮುಂದುವರಿಯುತ್ತಿರಲಿಲ್ಲ, ಸಮಸ್ಯೆ ಆಗುತ್ತಿರಲಿಲ್ಲ. ಈಗ ಮುಜುಗರಗಳಾಗುವುದಂತೂ ಖಚಿತ; ಆದರೂ ಆದಷ್ಟೂ ಬೇಗ , ಸಾಧ್ಯವಾದಷ್ಟೂ ಯಾರ ಮನಸ್ಸಿಗೂ ನೋವಾಗದಂತೆ ಪ್ರಸಂಗವನ್ನು ಮುಗಿಸಬೇಕು ಎಂದು ತೀರ್ಮಾನಿಸಿದೆವು. ನಾನೂ ರಂಜನಿಯೂ ಮೊದಲು ಮೂರ್ತಿಭಾವನನ್ನು ಕಂಡು ಅವರಿಗೆ ವಿಷಯ ತಿಳಿಸಿದೆವು. ಬೇಸರವಾದರೂ ಕಿಂಚಿತ್ತೂ ಅದನ್ನು ತೋರಗೊಡದೆ ಭಾವ ಅನಿರುದ್ಧನಿಗೆ ಸ್ಫೂರ್ತಿ ತುಂಬುವಂತೆಯೇ ಮಾತಾಡಿದರು. ಅವರ ಸ್ವಭಾವವೇ ಹಾಗೆ! ಎಂಥ ಸಂದರ್ಭದಲ್ಲೂ ಸಕಾರಾತ್ಮಕವಾಗಿಯೇ ಯೋಚಿಸುತ್ತಾ ಸದಾ ಸ್ಫೂರ್ತಿ-ಉತ್ಸಾಹಗಳನ್ನು ತುಂಬುತ್ತಾ ಉತ್ತೇಜಿಸುವ ಚೈತನ್ಯದ ಚಿಲುಮೆ ಅವರು! ಅವರ ಜತೆ ಮಾತಾಡಿದ ಮೇಲೆ ಮನಸ್ಸು ಎಷ್ಟೋ ಹಗುರವಾಯಿತು. ಅಲ್ಲಿಂದ ಹೊರಟು ಸಿ ಎಂ ಟಿ ಐ ಗೆ ಹೋಗಿ ನಿರ್ದೇಶಕರ ಜೊತೆಯಲ್ಲೂ ಮಾತಾಡಿದೆವು. ಕೆಲ ಅನಿವಾರ್ಯ ಕಾರಣಗಳಿಗಾಗಿ ಸಧ್ಯಕ್ಕೆ ಅನಿರುದ್ಧ ಅಲ್ಲಿ ಮುಂದುವರಿಯಲಾಗುತ್ತಿಲ್ಲ ಎಂದು ಅವರಿಗೆ ಹೇಳಿ ಆದ ಅನಾನುಕೂಲಕ್ಕೆ ಕ್ಷಮೆ ಯಾಚಿಸಿದೆವು. “ವಾಸ್ತವವಾಗಿ ಇಲ್ಲಿ ಸಹಾಯಕ ಸ್ಥಾನ ಯಾವುದೂ ಖಾಲಿ ಇರಲೇ ಇಲ್ಲ..ನಮ್ಮ ಬಿ ಆರ್ ಎಸ್ ಸರ್ (ಮೂರ್ತಿ ಭಾವ) ಮಾತನ್ನ ತೆಗೆದುಹಾಕೋಕಾಗದೆ ನಿಮ್ಮ ಮಗನಿಗೋಸ್ಕರ ಆ ಜಾಗ ಕ್ರಿಯೇಟ್ ಮಾಡಿದ್ವಿ..ಹಾಗಾಗಿ ನೀವೇನೂ ಚಿಂತೆ ಮಾಡಬೇಡಿ..ಮಗನಿಗೆ ನಮ್ಮ ಶುಭಹಾರೈಕೆಗಳನ್ನ ತಿಳಿಸಿಬಿಡಿ” ಎಂದು ನುಡಿಡು ಕೈಕುಲುಕಿ ಸಮಾಧಾನದಿಂದಲೇ ಬೀಳ್ಕೊಟ್ಟರು ನಿರ್ದೇಶಕರು. ಅಲ್ಲಿಗೆ ಹೆಗಲ ಮೇಲಿದ್ದ ಬಲು ದೊಡ್ಡ ಭಾರ ಇಳಿದಂತಾಯಿತು!
ಮರುದಿನವೇ ಅನಿರುದ್ಧನನ್ನು ಜೆ ಪಿ ನಗರದಲ್ಲಿದ್ದ ಆಡಿಯೋ ಲೈಫ್ ವಿದ್ಯಾಸಂಸ್ಥೆಯಲ್ಲಿ “ಸೌಂಡ್ ಇಂಜಿನಿಯರಿಂಗ್” ವಿಷಯದಲ್ಲಿ ವಿಶೇಷ ತರಬೇತಿ ಪಡೆಯಲು ಸೇರಿಸಿಬಂದೆವು. ಅನಿರುದ್ಧನೂ ಈಗ ಪೂರ್ಣಮನಸ್ಸಿನಿಂದ ಉತ್ಸಾಹದಿಂದ ಕಾಲೇಜ್ ಗೆ ಹೋಗತೊಡಗಿದ.
ಇತ್ತ ಮಗಳು ರಾಧಿಕಾ ಕೂಡಾ ಅಷ್ಟು ಲವಲವಿಕೆಯಿಂದಿಲ್ಲ, ಗೆಲುವಾಗಿಲ್ಲ ಎಂದು ನಮಗೆ ಅನ್ನಿಸತೊಡಗಿತು. ಆರ್ಮಿ ಸ್ಕೂಲ್ ನಲ್ಲಿ ಕೆಲಸಕ್ಕೆ ಹೋಗಿಬರುತ್ತಿದ್ದಳು, ನಮ್ಮ ಅಪಾರ್ಟ್ ಮೆಂಟ್ ನಲ್ಲಿಯೇ ಕೆಲ ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಳು..ಆದರೂ ಏನೋ ಅವಳ ಮನಸ್ಸನ್ನು ಬಾಧಿಸುತ್ತಿದೆ ಎಂದು ನಮಗನ್ನಿಸಿತ್ತು. ‘ನಾನು ಮದುವೆಯಾಗುವುದಿಲ್ಲ, ಯಾವುದೇ ಕಾರಣಕ್ಕೂ ಬಲವಂತ ಮಾಡಲೇಬೇಡಿ’ ಎಂದು ರಾಧಿಕಾ ಖಡಾಖಂಡಿತವಾಗಿಯೇ ಹೇಳಿಬಿಟ್ಟಿದ್ದರಿಂದ ನಾವು ಆ ವಿಚಾರವಾಗಿ ಮುಂದುವರಿಯುವಂತೆಯೇ ಇರಲಿಲ್ಲ. ನಮ್ಮ ಸ್ನೇಹಿತರ ಹಾಗೂ ಬಂಧುಗಳ ವಲಯದಲ್ಲಿ ರಾಧಿಕಾಳಿಗೆ ಒಳ್ಳೆಯ ಜೋಡಿಯಾಗಬಹುದಾದ ಹುಡುಗರಿದ್ದರೂ, ಅವರುಗಳಿಗೂ ನಮ್ಮ ಕುಟುಂಬದೊಂದಿಗೆ ಸಂಬಂಧ ಬೆಳೆಸುವ ಮನಸ್ಸಿತ್ತಾದರೂ ರಾಧಿಕಾಳ ಕಠಿಣ ನಿರ್ಧಾರದ ಮುಂದೆ ನಾವು ಅಸಹಾಯಕರಾಗಿದ್ದೆವು. ಬಲವಂತ ಮಾಡಿ ಒಪ್ಪಿಸುವಂತಹ ವಿಷಯ ಅಲ್ಲವೇ ಅಲ್ಲವಾದ್ದರಿಂದ ನಮ್ಮ ಕೈಗಳನ್ನು ಕಟ್ಟಿಹಾಕಿದಂತಾಗಿತ್ತು. ಮನೆಯಲ್ಲಿ ಹಿರಿಯರೆಲ್ಲರೂ ಅವಳ ಮನ ಒಲಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದರೂ ರಾಧಿಕೆ ಮಾತ್ರ ತಾಳ್ಮೆಯಿಂದ ಎಲ್ಲರ ಮಾತುಗಳನ್ನೂ ಕೇಳಿಸಿಕೊಂಡು ಕೊನೆಗೆ, “ನೀವು ಹೇಳೋದೆಲ್ಲಾ ಸರಿಯಾಗಿದೆ..ನನಗೆ ಮದುವೆ ಆಗಬೇಕು ಅಂತ ಅನ್ನಿಸಿದ ದಿನ ನಾನೇ ನಿಮಗೆ ಖಂಡಿತವಾಗಲೂ ಹೇಳ್ತೀನಿ” ಎಂದು ಮುದ್ದಾಗಿ ಹೇಳಿ ವಿಷಯವನ್ನು ತೇಲಿಸಿಬಿಡುತ್ತಿದ್ದಳು! ಹಾಗಾಗಿ ಅವಳ ಬೇಸರ-ವಿಮುಖತೆಗಳಿಗೆ, ಅನ್ಯಮನಸ್ಕತೆಗೆ ಮದುವೆಯ ಹೊರತಾದ ಬೇರೆ ಕಾರಣಗಳೇ ಇವೆಯೆಂಬುದು ನಮಗೆ ಸ್ಪಷ್ಟವಾಗಿತ್ತು.
ಲಂಡನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದಮೇಲೆ ಲಂಡನ್ ಸೆಳೆತ ಅವಳನ್ನು ಕಾಡುತ್ತಿದೆಯೆಂಬುದು ನಮ್ಮ ಮನಸ್ಸಿಗೆ ಬಂದಿತ್ತು. ಆ ಸೆಳೆತಕ್ಕೆ ಸ್ಪಷ್ಟ ಕಾರಣಗಳು ನಮಗೆ ತಿಳಿಯದಿದ್ದರೂ ಕೆಲ ಸಂಗತಿಗಳು ನಮಗೆ ತುಂಬಾ ಗೂಢವೆಂಬಂತೆಯೂ ಯಾವುದೇ ವಿವರಣೆಗೆ ಮೀರಿದ್ದಾಗಿಯೂ ಭಾಸವಾಗುತ್ತಿದ್ದವು. ಅವುಗಳಲ್ಲಿ ಅತಿ ಮುಖ್ಯವಾದದ್ದು ಇಂಗ್ಲೀಷ್ ಭಾಷೆಯ ಮೇಲೆ ಅವಳಿಗಿದ್ದ ಹತೋಟಿ. ಶೈಕ್ಷಣಿಕವಾಗಿ ಎಂದೂ ಅವಳು ಇಂಗ್ಲೀಷ್ ಭಾಷೆ ಸಾಹಿತ್ಯಗಳನ್ನು ಅಧ್ಯಯನ ಮಾಡಿಲ್ಲವಾದರೂ ಅವಳ ಇಂಗ್ಲೀಷ್ ಕವಿತೆ ಕಥೆಗಳಲ್ಲಿರುತ್ತಿದ್ದ ಭಾಷಾ ಪ್ರೌಢಿಮೆ ಎಂಥವರನ್ನೂ ದಂಗುಬಡಿಸುವಂತಿತ್ತು! ಅವಳ ಇಂಗ್ಲೀಷ್ ಕವಿತೆ ಹಾಗೂ ಬರಹಗಳ ಪ್ರಥಮ ಸಂಕಲನಕ್ಕೆ ಡಾ॥ ಸಿ.ಎನ್. ರಾಮಚಂದ್ರನ್ ಅವರು ಮೌಲಿಕ ಮುನ್ನುಡಿಯನ್ನು ಬರೆದುಕೊಟ್ಟಿರುವುದರ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಇಂಗ್ಲೀಷ್ ಪ್ರೊಫೆಸರ್, ಪ್ರಸಿದ್ಧ ನಟ ಜಿ.ಕೆ. ಗೋವಿಂದರಾವ್ ಅವರೂ ಸಹಾ ರಾಧಿಕಾಳ ಬರಹಗಳನ್ನು ಓದಿ ಮೆಚ್ಚಿಕೊಂಡಿದ್ದಲ್ಲದೆ, “ಅವಳಿಗೆ ಸ್ವಲ್ಪ ಸರಳ ಭಾಷೆಯಲ್ಲಿ ಬರೆಯಲು ಹೇಳಿ..ಆಗ ಎಲ್ಲರಿಗೂ ತಲುಪುತ್ತೆ” ಎಂದಿದ್ದರು.
ಬ್ರಿಟಿಷ್ ಲೇಖಕಿ ವರ್ಜೀನಿಯಾ ವುಲ್ಫ್ ರಾಧಿಕಾಳ ಮೆಚ್ಚಿನ ಲೇಖಕಿ. ಲಂಡನ್ ನಲ್ಲಿದ್ದಾಗ ಆ ಲೇಖಕಿ ವಾಸವಾಗಿದ್ದ ಮನೆಯನ್ನು ಹುಡುಕಿಕೊಂಡು ಹೋಗಿ ಅಲ್ಲಿ ತಾಸುಗಟ್ಟಲೆ ಕಳೆದುಬಂದಿದ್ದಳಂತೆ! ಅದಾವ ಪೂರ್ವಜನ್ಮದ ವಾಸನೆ ರಾಧಿಕಾಳನ್ನು ಕಾಡುತ್ತಿದೆಯೋ, ಅದಾವ ಬ್ರಿಟಿಷ್ ಲೇಖಕಿ ತನ್ನ ಮರುಹುಟ್ಟಿನಲ್ಲಿ ನಮ್ಮ ಮಗಳಾಗಿ ಅವತರಿಸಿದ್ದಾಳೋ ಎಂದು ನಾವು ತುಸು ತಮಾಷೆಯಿಂದ, ತುಸು ಅಚ್ಚರಿಯಿಂದ ಉದ್ಗರಿಸಿರುವುದೂ ಉಂಟು! ಈಗಲೂ ಹಾಗೆಯೇ ಸದಾ ಲಂಡನ್ ಕನಸನ್ನೇ ಕಾಣುತ್ತಿದ್ದಾಳೆ..ಅಲ್ಲಿಗೆ ಹೋಗಲು ಹಂಬಲಿಸುತ್ತಿದ್ದಾಳೆ…ಅಂತೆಯೇ ಇಲ್ಲಿನ ಯಾವ ಚಟುವಟಿಕೆಯಲ್ಲೂ ಪೂರ್ಣ ಮನಸ್ಸಿನಿಂದ ತೊಡಗಿಕೊಳ್ಳಲಾಗುತ್ತಿಲ್ಲ ಅವಳಿಗೆ. ಏನೋ ಕಳಕೊಂಡವಳಂತೆ ಅನ್ಯ ಮನಸ್ಕಳಾಗಿರುತ್ತಾಳೆ. ಲಂಡನ್ ಗೆ ಹೋಗುವ ಆಸೆಯೇನೋ ಅವಳನ್ನು ಬಲವಾಗಿ ಕಾಡುತ್ತಿದೆ..ಆದರೆ ಹೋಗಲು ಮಾರ್ಗ ಇರಬೇಕಲ್ಲಾ! ಒಮ್ಮೆ ಹೋಗಿ ಒಂದು ವರ್ಷ ಅಲ್ಲಿ ಓದಿ ಪದವಿ ಪಡೆದು ಬಂದದ್ದಾಯಿತು. ಮತ್ತಿನ್ನೊಮ್ಮೆ ಹೋಗಲಾದೀತೇ? ಹಾಗೆ ಕಳಿಸಿಕೊಡುವ ಆರ್ಥಿಕ ಕ್ಷಮತೆಯೂ ನಮಗಿಲ್ಲವಲ್ಲಾ! ಏನಾದರೂ ಸರಿಯೇ ಇವಳನ್ನು ಈ ವಿಮುಖತೆಯ ಕೋಶದಿಂದ ಹೊರತರಲೇಬೇಕೆಂದು ನಾನೂ ರಂಜನಿಯೂ ತೀರ್ಮಾನಿಸಿದೆವು. ಒಂದು ದಿನ ಅವಳನ್ನು ಕೂರಿಸಿಕೊಂಡು ಹೇಳಿದೆವು: “ಪುಟ್ಟಮ್ಮಾ, ನೀನು ಭರತನಾಟ್ಯ ಪ್ರದರ್ಶನ ನೀಡಿ ತುಂಬಾ ಸಮಯಾನೇ ಆಯಿತು. ಈಗ ಯಾಕೆ ಒಂದು ಪ್ರೋಗ್ರಾಂ ಮಾಡಬಾರದು?”
ಮೊದಮೊದಲು ಅಷ್ಟು ಆಸಕ್ತಿ ಕೆರಳದಿದ್ದರೂ ನಂತರ ನಮ್ಮ ಸಲಹೆಯನ್ನು ಒಪ್ಪಿಕೊಂಡಳು ರಾಧಿಕಾ! ಆ ವೇಳೆಗಾಗಲೇ ಒಂದೆರಡು ವರ್ಷ ಬ್ಯಾಲೆ ನೃತ್ಯ ಪ್ರಕಾರವನ್ನೂ ಅಭ್ಯಾಸ ಮಾಡಿದ್ದ ರಾಧಿಕಾ, “ಫ್ಯೂಷನ್ ರೀತಿಯಲ್ಲಿ ಒಂದೆರಡು ಐಟಂಗಳನ್ನ ಸಿದ್ಧಪಡಿಸಿಕೊಂಡು ಸ್ವಲ್ಪ ಬೇರೆ ರೀತಿಯಾಗಿ ಪ್ರೆಸೆಂಟೇಷನ್ ಮಾಡ್ತೀನಿ” ಎಂದಳು!
ಅವಳ ಈ ಚಿಂತನೆಯ ಫಲಶ್ರುತಿಯೇ
“ಆದ್ಯ—ನೃತ್ಯ ಪ್ರಸ್ತುತಿ”!!






0 Comments