ಶ್ರೀನಿವಾಸ ಪ್ರಭು ಅಂಕಣ- ವಿಮರ್ಶೆಗಳಿಂದಾಗಿ ಕೊರಗುವುದು ಕಡಿಮೆಯಾದದ್ದು ಅನ್ನಿ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

54

ಒಂದು ಸಂಜೆ ರಿಹರ್ಸಲ್ ಗೆಂದು ಕಲಾಕ್ಷೇತ್ರಕ್ಕೆ ಬಂದು ವಿಶ್ರಾಂತಿ ಗೃಹದತ್ತ ಹೆಜ್ಜೆ ಹಾಕುತ್ತಿದ್ದಾಗ ಟಿಕೆಟ್ ಮಾರುವ ಸ್ಥಳದ ಹಿಂಬದಿಗಿದ್ದ ಒಂದು ಪುಟ್ಟ ಕೋಣೆಯಿಂದ “ಜಬ್ ದಿಲ್ ಹೀ ಟೂಟ್ ಗಯಾ ಹಮ್ ಜೀಕೇ ಕ್ಯಾ ಕರೇಂಗೇ” ಹಾಡಿನ ಸಾಲುಗಳು ಒಂದು ಹಿತವಾದ ಧ್ವನಿಯಲ್ಲಿ ಅಲೆ ಅಲೆಯಾಗಿ ತೇಲಿ ಬಂತು! ಅರೆ! ನನಗೆ ಪ್ರಿಯವಾದ ಸೈಗಲ್ ರ ಹಾಡು! ಇಷ್ಟು ಚೆನ್ನಾಗಿ ಹಾಡುತ್ತಿರುವವರಾದರೂ ಯಾರು ಎಂಬ ಕುತೂಹಲದಿಂದ ಮೆಲ್ಲಗೆ ಹೋಗಿ ಅರೆಮುಚ್ಚಿದ್ದ ಕೋಣೆಯ ಬಾಗಿಲನ್ನು ಸರಿಸಿ ನೋಡಿದೆ. ನಾಡಿನ ಪ್ರಖ್ಯಾತ ಬೆಳಕು ತಜ್ಞ ವಿ.ರಾಮಮೂರ್ತಿಗಳು ಮುಂದಿದ್ದ ಹಾರ್ಮೋನಿಯಂ ಮೇಲೆ ಬೆರಳುಗಳನ್ನು ಆಡಿಸುತ್ತಾ ತನ್ಮಯರಾಗಿ ಹಾಡುತ್ತಿದ್ದಾರೆ! ಅಪರೂಪಕ್ಕೆ ಅವರ ತುಟಿಗಳ ನಡುವೆ ಸಿಗರೇಟ್ ಉರಿಯುತ್ತಿಲ್ಲ! ಮೆಲ್ಲನೆ ಒಳಹೋಗಿ ಅವರ ಮುಂದೆ ಕುಳಿತೆ.

ಹಾಡು ಮುಗಿಸಿದೊಡನೆ ಅವರು ಸಿಗರೇಟ್ ಹಚ್ಚಿಕೊಂಡು ನನ್ನತ್ತ ತಿರುಗಿ,”ಏನ್ರೀ ಪ್ರಭೂ..ರಿಹರ್ಸಲ್ ಗೆ ಬಂದ್ರಾ?” ಎಂದರು. ಹೌದೆಂದು ತಲೆಯಾಡಿಸಿ ಅವರ ಸಂಗೀತದ ನಂಟಿನ ಬಗ್ಗೆ ವಿಚಾರಿಸಿದೆ. ಶುರುವಾಗಿಯೇ ಹೋಯಿತು ನಿರರ್ಗಳ ವಾಗ್ಝರಿ! “ಮೊದಲಿನಿಂದಲೂ ನನಗೆ ಸಂಗೀತದಲ್ಲಿ ವಿಪರೀತ ಆಸಕ್ತಿ; ಎಳಮೆಯಲ್ಲಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದೇನೆ; and do you know? ಕಾಳಿಂಗರಾವ್ ಅವರ ಜತೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಭಾವಗೀತೆಗಳನ್ನ ಹಾಡಿದೇನೆ” ಎಂದವರೇ ಒಂದೆರಡು ಭಾವಗೀತೆಗಳ ಪಲ್ಲವಿಗಳನ್ನು ಹಾಡಿಯೂ ತೋರಿಸಿಬಿಟ್ಟರು! ಮತ್ತೆ ಎಡೆಬಿಡದೆ ಮಾತು ಮುಂದುವರಿಯಿತು: ” ಬರೀ ಹಾಡೋದಲ್ರೀ…i have composed music for many lyrics..ಉದಾಹರಣೇಗೆ ಕೇಳಿ ನಾನು ಮಾಡಿರೋ ಟ್ಯೂನ್ಸ್..”

ಮತ್ತೆರಡು ಮೂರು ಹಾಡುಗಳ ತುಣುಕುಗಳ ಗಾಯನ! ನಿಜಕ್ಕೂ ಅವರು ಮಾಡಿದ್ದ ಸ್ವರ ಸಂಯೋಜನೆ ಆಕರ್ಷಕವಾಗಿತ್ತು..ಥಟ್ಟನೆ ಸೆಳೆಯುವಂತಿತ್ತು! ವಾಸ್ತವವಾಗಿ ರಾಮಮೂರ್ತಿಗಳ ಪರಿಚಯ ನನಗೆ ದೆಹಲಿಯ ಶಾಲೆಯ ದಿನಗಳಲ್ಲೇ ಆಗಿತ್ತು. ನಮ್ಮ ಶಾಲೆಯ ಪದವೀಧರರೇ ಆಗಿದ್ದ ರಾಮಮೂರ್ತಿಗಳಿಗೆ ದೆಹಲಿಯಲ್ಲಿ ತುಂಬಾ ದೊಡ್ಡ ಹೆಸರಿತ್ತು. ಆಗಾಗ್ಗೆ lighting workshops ನಡೆಸಲು ಅಥವಾ ಯಾವುದಾದರೂ ದೊಡ್ಡ ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡಿಕೊಡಲು ರಾಮಮೂರ್ತಿಗಳು ದೆಹಲಿಗೆ ಬರುತ್ತಿದ್ದರು. ಅವರು ಬಂದರೆಂದರೆ ಸಾಕು,ಎರಡು ಕಾರಣಕ್ಕೆ ನಮಗೆ ಹಬ್ಬ! ಒಂದು, ಅವರು ತಮ್ಮ ಅನೇಕ ಸ್ವಾರಸ್ಯಕರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೆಂಬುದು; ಮತ್ತೊಂದು, ಅವರಿದ್ದಷ್ಟು ದಿನವೂ ನಮಗೆ ಅಲ್ಲೇ ಸಮೀಪದಲ್ಲಿದ್ದ ಮಲಯಾಳಿ ಹೋಟಲ್ ನಲ್ಲಿ ಪರಮ ರುಚಿಕಟ್ಟಾದ ಅನ್ನ—ಸಾಂಬಾರ್—ರಸಂ ಊಟ ಕೊಡಿಸುತ್ತಿದ್ದರೆಂಬುದು! ಸದಾ ಚಟುವಟಿಕೆಯಿಂದ ಪುಟುಪುಟು ಓಡಾಡುತ್ತಾ ತುಟಿಗಳ ನಡುವೆ ಸದಾ ಸಿಗರೇಟ್ ಉರಿಸುತ್ತಾ ಬಿಡುವಿಲ್ಲದಂತೆ ಮಾತಾಡುತ್ತಲೇ ಇದ್ದ ಪುಟ್ಟ ಆಕೃತಿಯ ವಿ. ರಾಮಮೂರ್ತಿಗಳನ್ನು ನಾನು ವಿರಾಮವಿಲ್ಲದ ಮೂರ್ತಿಗಳೆಂದೇ ಕರೆಯುತ್ತಿದ್ದೆ! ಇಂಥಾ ಆತ್ಮೀಯ ಹಿರಿಯ ಮಿತ್ರರು ಬಹಳ ಒಳ್ಳೆಯ ಸಂಗೀತ ಸಂಯೋಜಕರೂ ಹೌದು ಎಂದು ಅರಿವಾಗುತ್ತಿದ್ದಂತೆ ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಯಿತು! ಅರಸುತ್ತಿದ್ದ ಬಳ್ಳಿ ಕಾಲಿಗೆ ತೊಡರುವುದೆಂದರೆ ಇದೇ ಅಲ್ಲವೇ! “ಮೂರ್ತಿ ಜೀ,ಈಗ ನಾನು ಮಾಡಿಸ್ತಿರೋ ಗುಳ್ಳೇನರಿ ಅನ್ನೋ ಹೊಸ ನಾಟಕದಲ್ಲಿ 11 ಹಾಡುಗಳಿವೆ. ಈ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿಕೊಡೋದಕ್ಕೆ ಸಾಧ್ಯವೇ?” ಎಂದು ನಾನವರನ್ನು ಕೇಳಿದೆ. “ಖಂಡಿತಾ ಮಾಡಿಕೊಡ್ತೀನ್ರೀ! ನಡೀರಿ..ಈಗಲೇ ಕೆಲಸ ಶುರು ಮಾಡೇಬಿಡೋಣ” ಎಂದವರೇ ನನ್ನೊಂದಿಗೆ ತಾಲೀಮು ನಡೆಯುತ್ತಿದ್ದ ಜಾಗಕ್ಕೆ ಬಂದೇಬಿಟ್ಟರು! ನಾಟಕದ ಕಥಾವಸ್ತುವನ ಬಗ್ಗೆ ಅವರಿಗೆ ಒಂದಷ್ಟು ವಿವರಗಳನ್ನು ನೀಡಿ, ಒಟ್ಟಾರೆ ಸಂಗೀತ ರೂಪುಗೊಳ್ಳಬೇಕಾದ ರೀತಿಯ ಬಗ್ಗೆ ಚರ್ಚಿಸಿ ಅವರಿಗೊಂದು ಹಸ್ತಪ್ರತಿಯನ್ನು ಕೊಟ್ಟುಕಳಿಸಿದೆ. ಮಹಾ ಶಿಸ್ತಿನ ವ್ಯಕ್ತಿಯೆಂದೇ ಹೆಸರಾಗಿದ್ದ ಮೂರ್ತಿಗಳು ಮೂರೇ ದಿನದಲ್ಲಿ ಅಷ್ಟೂ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿಕೊಂಡು ಬಂದು ನಮ್ಮ ಗಾಯಕರಿಗೆ ಕಲಿಸತೊಡಗಿದರು!

‘ಗುಳ್ಳೆ ನರಿ’ ನಾಟಕ ಈಗಾಗಲೇ ಹೇಳಿರುವಂತೆ ಬೆನ್ ಜಾನ್ಸನ್ ನ vol pone ನಾಟಕದ ರೂಪಾಂತರ. ಬೆನ್ ಜಾನ್ಸನ್ ಶೇಕ್ಸ್ ಪಿಯರ್ ನ ಸಮಕಾಲೀನನಾಗಿದ್ದವನು; ಪ್ರಾರಂಭದ ದಿಸೆಯಲ್ಲಿ ದುರಂತನಾಟಕಗಳನ್ನೇ ರಚಿಸಿದರೂ ಅದರಲ್ಲಿ ಯಶಸ್ಸು ಕಾಣದೇ ನಂತರ ‘satire’ ಪ್ರಕಾರವನ್ನು ಆರಿಸಿಕೊಂಡು ಹಲವಾರು ಶ್ರೇಷ್ಠ ನಾಟಕಗಳನ್ನು ರಚಿಸಿ ಮನ್ನಣೆ ಗಳಿಸಿದವನು.

“ಸದಾ ಹಣದ ಬೆನ್ನು ಹತ್ತಿ ಹೋಗುತ್ತಿರುವ ನಾವು ಅದನ್ನು ಗಳಿಸಿಕೊಳ್ಳುವ ಆತುರದಲ್ಲಿ ಏನೇನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ ಅನ್ನುವುದನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಂಡಿಲ್ಲ.ಈ ಭೋಗ ಸಂಸ್ಕೃತಿಯ ಧಾವಂತದ ಪಶ್ಚಾತ್ ಪರಿಣಾಮಗಳನ್ನು ಬೆನ್ ಜಾನ್ಸನ್ ಎಷ್ಟು ಸೊಗಸಾಗಿ ಕಂಡುಕೊಂಡಿದ್ದ ಅನ್ನುವುದು ಅವನ vol pone ನಾಟಕದಲ್ಲಿ ನಮಗೆ ಢಾಳಾಗಿ ಗೋಚರಿಸುತ್ತದೆ. “(ಡಾ॥ನರಹಳ್ಳಿ ಬಾಲಸುಬ್ರಹ್ಮಣ್ಯ)

ಈ ನಾಟಕದಲ್ಲಿ ಬರುವ ಅತಿ ಮುಖ್ಯ ಪಾತ್ರಗಳೆಂದರೆ ನರಿಯಣ್ಣ, ಪತಂಗಿ, ಹದ್ದಪ್ಪ, ಕಾಕಾರಾಯ, ಗಿಡುಗಯ್ಯ, ಹರಿಣಿ ಹಾಗೂ ಚಂದ್ರ. ಶ್ರೀನಿವಾಸ ಮೇಷ್ಟ್ರು ನರಿಯಣ್ಣನಾಗಿ, ರಿಚರ್ಡ್ ಜಿ ಲೂಯಿಸ್ ಹದ್ದಪ್ಪನಾಗಿ,ಸುಧೀಂದ್ರ ಕಾಕಾರಾಯನಾಗಿ, ಸಾಯಿ ಪ್ರಕಾಶ್ ಗಿಡುಗಯ್ಯನಾಗಿ, ಗಾಯತ್ರಿ (ಪುಟ್ಟಿ) ಹರಿಣಿಯಾಗಿ ಹಾಗೂ ಫಣೀಂದ್ರ ಚಂದ್ರನಾಗಿ ಅಭಿನಯಿಸುವುದೆಂದು ನಿರ್ಧಾರವಾಯಿತು. ಆದರೆ ಪತಂಗಿಯ ಪಾತ್ರ ನಿರ್ವಹಣೆಗೆ ಸೂಕ್ತ ಕಲಾವಿದ ದೊರೆಯದೆ ಕೊಂಚ ಯೋಚನೆಯಾಗತೊಡಗಿತು. ಪತಂಗಿಯದೊಂದು ವಿಶಿಷ್ಟ ಪಾತ್ರ. ಕ್ಷಣಕ್ಕೊಂದು ಬಣ್ಣ ಬದಲಿಸುತ್ತಾ, ಅರಳು ಹುರಿದಂತೆ ಮಾತಾಡುತ್ತಾ, ಪಾದರಸದಂತೆ ಅಡ್ಡಾಡುತ್ತಾ ಇಡೀ ನಾಟಕದಲ್ಲಿ ವ್ಯಾಪಿಸಿಕೊಂಡಿರುವ ಈ ಪಾತ್ರ ನಿರ್ವಹಣೆಗೆ ಒಬ್ಬ ಬಹಳ ಒಳ್ಳೆಯ ನಟನ ಅಗತ್ಯವಿತ್ತು ನನಗೆ.

ಆಗ ಅಕಸ್ಮಾತ್ತಾಗಿ ನನಗೆ ನೆನಪು ಬಂದವನೇ ರಂಗಭೂಮಿಯಲ್ಲಿ ನಚ್ಚಿ ಎಂದೇ ಖ್ಯಾತನಾದ ಟಿ.ಎನ್.ನರಸಿಂಹನ್. ಒಳ್ಳೆಯ ಬರಹಗಾರ—ನಿರ್ದೇಶಕ—ನಟನಾಗಿ ತನ್ನದೇ ಛಾಪು ಮೂಡಿಸಿ ಬಹುಮುಖ ಪ್ರತಿಭಾವಂತನೆಂದು ಹೆಸರಾಗಿದ್ದ ಈ ನಚ್ಚಿಯದು ಅಷ್ಟೇ ವಿಲಕ್ಷಣ ಸ್ವಭಾವ. ಇದ್ದಕ್ಕಿದ್ದಂತೆ ಸಿಟ್ಟಿಗೆದ್ದು ಮೊರೆದು ಮರುಕ್ಷಣದಲ್ಲೇ ಅಟ್ಟಹಾಸ ಮಾಡಿಕೊಂಡು ನಗಬಲ್ಲವನಾಗಿದ್ದ, ಯಾರನ್ನು ಬೇಕಾದರೂ ಮುಲಾಜಿಲ್ಲದೆ ಛೇಡಿಸಬಲ್ಲವನಾಗಿದ್ದಈ ನಚ್ಚಿಗೆ ಹೆದರುತ್ತಿದ್ದವರೇ ಹೆಚ್ಚು! ಅದೇನೋ,ಈ ನಚ್ಚಿ ನನಗಿಂತ ಸಾಕಷ್ಟು ಹಿರಿಯನೇ ಆಗಿದ್ದರೂ ನನಗೆ ಬಲು ಬೇಗ ಆಪ್ತನೂ ಆತ್ಮೀಯನೂ ಆಗಿಬಿಟ್ಟಿದ್ದ. ಪತಂಗಿಯ ಪಾತ್ರಕ್ಕೆ ನಚ್ಚಿ ಅತ್ಯಂತ ಸೂಕ್ತ ಆಯ್ಕೆ ಅನ್ನಿಸಿಬಿಟ್ಟಿತು ನನಗೆ. ಆ ವೇಳೆಗಾಗಲೇ ಶಂಕರ್ ನಾಗ್ ರೊಂದಿಗೆ ಸಂಕೇತ್ ತಂಡ ಕಟ್ಟಿ ನಾಟಕ ಹಾಗೂ ಸಿನೆಮಾ ಚಟುವಟಿಕೆಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದ್ದ ನಚ್ಚಿ ಪತಂಗಿಯ ಪಾತ್ರ ನಿರ್ವಹಿಸಲು ಒಪ್ಪಿಕೊಳ್ಳುವುದರ ಬಗ್ಗೆ ಅನುಮಾನವಿದ್ದರೂ ಏನಾದರಾಗಲಿ ಎಂದು ಒಂದು ದಿನ ನಚ್ಚಿಯನ್ನು ಕೇಳಿಯೇ ಬಿಟ್ಟೆ.ಒಂದು ಒಳ್ಳೆಯ ಪಾತ್ರದಲ್ಲಿ ಅಭಿನಯಿಸಲು ಅವನೂ ಅಷ್ಟೇ ಕಾತರದಿಂದ ತುಡಿಯುತ್ತಿದ್ದ ಎಂದು ಕಾಣುತ್ತದೆ;ನಾನು ಕೇಳಿದ ಕೂಡಲೇ ಎರಡನೆಯ ಮಾತೇ ಇಲ್ಲದೆ ‘ಪತಂಗಿ’ಯಾಗಲು ಒಪ್ಪಿಕೊಂಡೇ ಬಿಟ್ಟ! ಎದುರಾಗುವ ಸಮಸ್ಯೆಗಳೆಲ್ಲಾ ಇಷ್ಟೇ ಸಲೀಸಾಗಿ ಪರಿಹಾರವಾಗುವುದಾದರೆ ಬದುಕು ಎಷ್ಟು ಸೊಗಸು ಎನ್ನಿಸಿ ನಾನಂತೂ ಸಂತಸದಿಂದ ಕುಣಿದಾಡಿಬಿಟ್ಟೆ.

ಗುಳ್ಳೆನರಿ ನಾಟಕದ ತಾಲೀಮು ಉತ್ಸಾಹ—ಸಂಭ್ರಮಗಳಿಂದ ಆರಂಭವಾಯಿತು. ಎಲ್ಲರೂ ನುರಿತ ಕಲಾವಿದರೇ ಆದ್ದರಿಂದ ತಂತಮ್ಮ ಪಾತ್ರಗಳನ್ನು ಅರ್ಥಮಾಡಿಕೊಂಡು ಲೀಲಾಜಾಲವಾಗಿ ಅಭಿನಯಿಸತೊಡಗಿದರು.ಸುಧಿ—ನಚ್ಚಿ—ರಿಚಿಯರಂತೂ ತಾಲೀಮಿನ ನಡುವೆ ಸಮಯಸ್ಫೂರ್ತಿಯಿಂದ ಒಂದಷ್ಟು ಹೊಸ ಮಾತು—ಕ್ರಿಯೆಗಳನ್ನು ಸೇರಿಸುತ್ತಾ ನಾಟಕ ಇನ್ನಷ್ಟು ಕಳೆಗಟ್ಟುವಂತೆ ಮಾಡುತ್ತಿದ್ದರು.ಈ ವೇಳೆಗೆ ನಮ್ಮತಂಡದ ಗೋಪಾಲಕೃಷ್ಣ ಒಳ್ಳೆಯ ಸಂಘಟಕನಾಗಿ ರೂಪುಗೊಂಡಿದ್ದ.ಈ ಗೋಪಾಲಕೃಷ್ಣನೇ ಮೊಟ್ಟಮೊದಲ ಬಾರಿಗೆ ಸಿಕ್ಕು ನಾಟಕದಲ್ಲಿ ಮಾಣಿಯ ಪಾತ್ರ ಮಾಡಿದ್ದು! ಅಲ್ಪ ಸಮಯದಲ್ಲೇ ವಿಪರೀತ ಎತ್ತರವಾಗಿ ಬೆಳೆದು ಮಾಣಿ ಪಾತ್ರನಿರ್ವಹಣೆಯ ಅರ್ಹತೆಯನ್ನು ಕಳೆದುಕೊಂಡ ಮೇಲೇ ಅವನ ಜಾಗಕ್ಕೆ ರಘುನಂದನ್ ಬಂದು ಮುಂದೆ ಮಾಣಿ ರಘು ಎಂದೇ ಖ್ಯಾತನಾದದ್ದು! ಇರಲಿ. ಗುಳ್ಳೆನರಿ ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಾವು ವಸ್ತ್ರ ವಿನ್ಯಾಸಕರೊಬ್ಬರನ್ನು ನೇಮಿಸಿ ಪಾತ್ರಗಳಿಗೆ ಸೂಕ್ತ ಉಡುಗೆ ತೊಡುಗೆಗಳ ವ್ಯವಸ್ಥೆಯಾಗುವಂತೆ ಮಾಡಿದೆವು! ಬಹಳ ಸೊಗಸಾದ ರೀತಿಯಲ್ಲಿ ಪಾತ್ರಗಳ ಉಡುಗೆ ತೊಡುಗೆಗಳ ವಿನ್ಯಾಸವನ್ನು ಸಿದ್ಧಗೊಳಿಸಿ ನಾಟಕ ರಂಗದ ಮೇಲೆ ಮತ್ತಷ್ಟು ಕಳೆಗಟ್ಟಲು ನಮಗೆ ನೆರವಾದವರು ಅನ್ನಪೂರ್ಣ ಎಂಬ ರಂಗಕಲಾವಿದೆ. ರಾಮಮೂರ್ತಿಗಳ ಸಂಗೀತ ನಿರ್ದೇಶನದಲ್ಲಿ ಸೊಗಸಾಗಿ ಮೂಡಿಬಂದಿದ್ದ ಹಾಡುಗಳಿಗೆ ಜೀವ ತುಂಬಲು ಅಬ್ಬೂರು ವೆಂಕಟರಾಂ,ಶ್ರೀನಾಥ್ ,ಶಿವಶಂಕರ್ , ಹಾರ್ಮೋನಿಯಂ ಸತೀಶ್ ಮೊದಲಾದ ಮೇಳದ ಕಲಾವಿದರು ಸನ್ನದ್ಧರಾಗಿದ್ದರು..ನಿಜ ಹೇಳಬೇಕೆಂದರೆ ರಿಹರ್ಸಲ್ಸ್ ಮುಗಿಸಿದ ಮೇಲೂ ಯಾರಿಗೂ ಮನೆಗೆ ಹೋಗಲು ಮನಸ್ಸಾಗುತ್ತಿರಲಿಲ್ಲ! ಅಷ್ಟು ಸೊಗಸಾಗಿ,ವರ್ಣರಂಜಿತವಾಗಿ ನಮ್ಮ ತಾಲೀಮಿನ sessions ನಡೆಯುತ್ತಿತ್ತು!

ಹೀಗೇ ಒಂದಷ್ಟು ದಿನಗಳ ಅವಿರತ ತಾಲೀಮಿನ ನಂತರ ಪ್ರದರ್ಶನದ ದಿನಗಳು ಹತ್ತಿರ ಬಂದೇ ಬಿಟ್ಟವು. ಇನ್ನೆರಡು ದಿನಗಳಿಗೆ ನಾಟಕ ಪ್ರದರ್ಶನ…ನಾಟಕ ಪೂರ್ತಿ ಸಿದ್ಧವಾಗಿ ಒಂದೇ ಓಟದಲ್ಲಿ ಮೊದಲಿಂದ ಕೊನೆಯವರೆಗೂ ಸಾಗುವ ಹಂತಕ್ಕೆ ಬಂದಿದೆ..ಅಂದು ಸಂಜೆ ತಾಲೀಮಿನ ಸಮಯಕ್ಕೆ ನಚ್ಚಿ ಬರಲಿಲ್ಲ!ತಾಲೀಮು ಆರಂಭವಾಗುತ್ತಿದ್ದುದು 6.30 ರ ಸುಮಾರಿಗೆ.ಏಳು ಗಂಟೆಯಾಯಿತು..ಏಳೂವರೆ ಆಯಿತು.. ನಚ್ಚಿಯ ಸುಳಿವಿಲ್ಲ! ನಚ್ಚಿ—ಪತಂಗಿ—ಇಲ್ಲದೇ ನಾಟಕ ಪ್ರಾರಂಭವಾಗುವಂತೆಯೇ ಇಲ್ಲ! ಈಗಿನ ಹಾಗೆ ಮೊಬೈಲ್ ಇತ್ಯಾದಿ ಯಾವ ಸೌಕರ್ಯಗಳೂ ಇಲ್ಲದಿದ್ದ ಆ ದಿನಗಳಲ್ಲಿ ಕಾಯುವುದು ಬಿಟ್ಟು ನಮಗೆ ಬೇರೆ ದಾರಿಯೇ ಇರಲಿಲ್ಲ. ನನಗೇಕೋ ಭಯವಾಗತೊಡಗಿತು—ಅಕಸ್ಮಾತ್ ನಚ್ಚಿ ಶೂಟಿಂಗ್ ನಿಮಿತ್ತವೋ ಮತ್ತೇನು ಕಾರಣಕ್ಕೋ ಹೊರಟುಹೋಗಿದ್ದರೆ!..ತಲೆ ಧಿಮ್ಮೆನ್ನತೊಡಗಿತು. ವಾಸ್ತವವಾಗಿ ನಮ್ಮ ತಂಡದವನಲ್ಲದ ಅವನಿಗೆ ಮುಖ್ಯ ಪಾತ್ರ ಕೊಟ್ಟು ಕರೆಸಿದ್ದೇ ಕೆಲವರಿಗೆ ಅಷ್ಟು ಇಷ್ಟವಾಗಿರಲಿಲ್ಲ..ಈಗ ಇಂಥದೊಂದು ಪ್ರಸಂಗ ಎದುರಾದರೆ ಅವರ ಬೇಸರ ವ್ಯಕ್ತವಾಗದೇ ಇರುತ್ತದೆಯೇ? ಮತ್ತಷ್ಟು ಹೊತ್ತಿನ ಮೌನ ನಿರೀಕ್ಷಣೆಯ ನಂತರ, ಎಂಟು ಗಂಟೆಯ ಸುಮಾರಿಗೆ ನಾನು ಮನದಲ್ಲೇ ಒಂದು ನಿರ್ಧಾರ ಮಾಡಿಕೊಂಡು ಎದ್ದುನಿಂತು ,” ಬನ್ನಿ..ರಿಹರ್ಸಲ್ ಪ್ರಾರಂಭಿಸೋಣ” ಎಂದೆ. ಎಲ್ಲರ ಪ್ರಶ್ನಾರ್ಥಕ ದೃಷ್ಟಿ ನನ್ನ ಮೇಲಿರುವುದನ್ನು ಗಮನಿಸಿ,”ಬನ್ನಿ..ನಚ್ಚಿ ಬಂದಿಲ್ಲ ಅಷ್ಟೇ..ಪತಂಗಿ ಇಲ್ಲಿದಾನೆ” ಎಂದು ನನ್ನನ್ನೇ ತೋರಿಸಿಕೊಂಡು ಪ್ರಥಮ ದೃಶ್ಯದ ತಾಲೀಮಿನ ಆರಂಭಕ್ಕೆ ಸಿದ್ಧನಾದೆ. ನಾಟಕವನ್ನು ನಾನೇ ಬರೆದದ್ದರಿಂದ,ಅಷ್ಟು ದಿನ ಸತತವಾಗಿ ಅಭ್ಯಾಸ ಮಾಡಿಸಿದ್ದರಿಂದ ಇಡೀ ನಾಟಕವೇ ಹೆಚ್ಚುಕಡಿಮೆ ನನಗೆ ಕಂಠಸ್ಥವಾಗಿತ್ತು.

ಆದರೂ ಬಹು ದೊಡ್ಡ ಸವಾಲನ್ನು, ಒತ್ತಡ—ಆತಂಕಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇನೆ ಎನ್ನಿಸತೊಡಗಿ ಒಳಗೊಳಗೇ ನಡುಕ ಶುರುವಾಯಿತು.ಎರಡು ದಿನಗಳ ತಯಾರಿಯಲ್ಲಿ ಪತಂಗಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲಾದೀತೇ? ಎಂಬ ಅನುಮಾನ ಕಾಡುತ್ತಿತ್ತು! ಆದರೂ ಏನೇ ಕಾರಣಕ್ಕೂ ಪ್ರದರ್ಶನ ರದ್ದಾಗಬಾರದೆಂಬ ದೃಢ ಸಂಕಲ್ಪದಿಂದ ಪತಂಗಿಯ ಪಾತ್ರಕ್ಕೆ ಸಿದ್ಧನಾಗತೊಡಗಿದೆ. ಆ ದಿನದ ತಾಲೀಮು ಚೆನ್ನಾಗಿಯೇ ಆಯಿತು.ತಾಲೀಮು ಮುಗಿಸಿ ಇನ್ನೇನು ಹೊರಡಬೇಕು,ಆ ವೇಳೆಗೆ ಸರಿಯಾಗಿ ನಚ್ಚಿಯ ಆಪ್ತ ಗೆಳೆಯ ಶಂಕರನ ಆಗಮನವಾಯಿತು! “ಏನು ಕೆಟ್ಟ ಸುದ್ದಿ ತಂದಿರುವನೋ” ಎಂಬ ಆತಂಕ ನಮ್ಮೆಲ್ಲರ ಮುಖದಲ್ಲಿ ಮನೆ ಮಾಡಿತ್ತು. ಶಂಕರ ತಂದ ಸುದ್ದಿಯ ಸಾರವಿದು: ನಚ್ಚಿಗೆ ವೈರಲ್ ಜ್ವರ ಮೆಟ್ಟಿಕೊಂಡು ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದಾನೆ; ಚಿಂತಿಸುವ ಅಗತ್ಯವಿಲ್ಲ—ಶತಾಯ ಗತಾಯ ಪ್ರದರ್ಶನಕ್ಕೆ ಬಂದೇ ಬರುತ್ತಾನೆ; ನಾಳೆ ಯೂ ಒಂದು ದಿನ ವಿಶ್ರಾಂತಿಯ ಅಗತ್ಯವಿರುವುದರಿಂದ ನಾಡಿದ್ದು—ಅಂದರೆ ಪ್ರದರ್ಶನದ ದಿನ ಬೆಳಿಗ್ಗೆ ಒಂದು ತಾಲೀಮಿಗೆ ಎಲ್ಲರೂ ಬರಲು ಸಾಧ್ಯವಾಗಿಬಿಟ್ಟರೆ ಅನುಕೂಲವಾಗುತ್ತದೆ.”

ಎರಡನೆಯ ಮಾತಿಲ್ಲದೆ ಎಲ್ಲ ಕಲಾವಿದರೂ ತಂತಮ್ಮ ಕಛೇರಿಗಳಿಗೆ ರಜೆಯನ್ನಾದರೂ ಹಾಕಿ ತಾಲೀಮಿಗೆ ಬರಲು ಒಪ್ಪಿಗೆ ನೀಡಿದರು.ನನಗಾದರೋ ಒಳಗೊಳಗೇ ಆತಂಕ:ಒಂದು ವೇಳೆ ನಚ್ಚಿಗೆ ಜ್ವರ ಇಳಿಯದೇ ಪಾತ್ರ ನಿರ್ವಹಿಸಲು ಸಾಧ್ಯವಾಗದೇ ಹೋಗಿಬಿಟ್ಟರೆ! ಏನೇ ಆಗಲಿ ನಾನು ಸಂಪೂರ್ಣ ಸಿದ್ಧನಾಗಿರುವುದು ಒಳಿತು ಎನ್ನಿಸಿ ಮನಸ್ಸಿನಲ್ಲೇ ಮತ್ತೆ ಮತ್ತೆ ಸಂಭಾಷಣೆಗಳನ್ನು ಹೇಳಿಕೊಳ್ಳತೊಡಗಿದೆ. ಮರುದಿನವೂ ನಾನೇ ಪತಂಗಿಯಾಗಿ ಅಭಿನಯಿಸಿ ಎಲ್ಲರಿಗೂ ತಾಲೀಮು ನೀಡಿದೆ.ವಿಪರೀತ ಪರಿಸ್ಥಿತಿಯಲ್ಲಿ ತಕ್ಕಮಟ್ಟಿಗಾದರೂ ಪತಂಗಿಯ ಪಾತ್ರವನ್ನು ನಿಭಾಯಿಸಬಲ್ಲೆನೆಂಬ ಆತ್ಮವಿಶ್ವಾಸ ಮೂಡಿತು.

ಪ್ರಥಮ ಪ್ರದರ್ಶನದ ದಿನ 10 ಗಂಟೆಗೆ ತಾಲೀಮು ಎಂದು ನಿಗದಿಯಾಗಿತ್ತು. ನಚ್ಚಿಯೂ ಹತ್ತುಗಂಟೆಗೆ ಸರಿಯಾಗಿ ಕಲಾಕ್ಷೇತ್ರಕ್ಕೆ ಬಂದಿಳಿದ.ಮೂರುದಿನಗಳಿಂದ ಜ್ವರದ ತಾಪದಿಂದ ಬಳಲಿಹೋಗಿದ್ದ ಅವನ ಸ್ವರೂಪವನ್ನು ನೋಡಿ ಅಯ್ಯೋ ಎನ್ನಿಸಿತು.”ಹೆಚ್ಚಿಗೆ ಆಯಾಸ ಮಾಡಿಕೊಳ್ಳದೇ ರಿಹರ್ಸಲ್ ಮಾಡು..ಪ್ರವೇಶ—ನಿರ್ಗಮನದ ಜಾಗಗಳನ್ನು ಗುರುತುಮಾಡಿಕೋ..ಮಾತುಗಳನ್ನ ಸಹ ಕಲಾವಿದರಿಗೆ ಎತ್ತಿಕೊಡುವುದರ ಕಡೆ ಗಮನ ಕೊಡು ಸಾಕು..” ಎಂದು ನಚ್ಚಿಗೆ ಹೇಳಿ ತಾಲೀಮು ಆರಂಭಿಸಿದೆ. ಆಯಾಸಗೊಂಡಿದ್ದರೂ ನಚ್ಚಿ ಚೊಕ್ಕವಾಗಿ ಅಭಿನಯಿಸಿ ಭರವಸೆ ಮೂಡಿಸಿದ.

ಅಂದು ಸಂಜೆ ಪ್ರಥಮ ಪ್ರದರ್ಶನ..ಕಲಾಕ್ಷೇತ್ರ ತುಂಬಿತ್ತು. ಎಲ್ಲರಿಗೂ ಶುಭಹಾರೈಸಿ ನಾನು ಲೈಟಿಂಗ್ ಕ್ಯಾಬಿನ್ ಗೆ ಹೋಗಿ ಕುಳಿತೆ. ಒಂದು ಸಣ್ಣ ಆತಂಕ ಮಾತ್ರ ಒಳಗೊಳಗೇ ಕಾಡುತ್ತಿತ್ತು. ಪುಣ್ಯವಶಾತ್ ಯಾವ ಅಡ್ಡಿ—ಆತಂಕಗಳೂ ಎದುರಾಗದೆ ಪ್ರಥಮ ಪ್ರದರ್ಶನ ಸೊಗಸಾಗಿ ಮೂಡಿಬಂತು.ಪ್ರಾರಂಭದ ದೃಶ್ಯದಿಂದಲೇ ನಾಟಕಕ್ಕೆ ಪ್ರೇಕ್ಷಕರು ಅದ್ಭುತವಾಗಿ ಸ್ಪಂದಿಸತೊಡಗಿದರು.ಎಲ್ಲಾ ಕಲಾವಿದರೂ ಅಮೋಘವಾಗಿ ಅಭಿನಯಿಸಿ ಪ್ರೇಕ್ಷಕರು ನಗೆಗಡಲಿನಲ್ಲಿ ಮುಳುಗೇಳುವಂತೆ ಮಾಡಿಬಿಟ್ಟರು. ನಚ್ಚಿಯಂತೂ ಪತಂಗಿಯ ಪಾತ್ರಕ್ಕಾಗಿಯೇ ಹುಟ್ಟಿಬಂದವನಂತೆ ಕಾಣುತ್ತಿದ್ದ! ನಚ್ಚಿಯ ಗೆಳೆಯ ಶಂಕರ ರಂಗಸ್ಧಳದ ಈ ಬದಿಯಿಂದ ಆ ಬದಿಗೆ ಆ ಬದಿಯಿಂದ ಈ ಬದಿಗೆ ಓಡಾಡುತ್ತಾ ನೇಪಥ್ಯಕ್ಕೆ ಬರುತ್ತಿದ್ದ ನಚ್ಚಿಗೆ ಆಯಾಸ ಪರಿಹಾರಾರ್ಥವಾಗಿ ಗ್ಲುಕೋಸ್ ನೀರು ಕುಡಿಸುತ್ತಿದ್ದ! ರಾಮಮೂರ್ತಿಯವರ ಸಂಯೋಜನೆಯ ಹಾಡುಗಳಂತೂ ರಾಮಣ್ಣ—ಶ್ರೀನಾಥರ ಮಧುರ ಕಂಠದಿಂದ ಹೊರಹೊಮ್ಮಿ ನೇರ ಪ್ರೇಕ್ಷಕರ ಹೃದಯಕ್ಕೇ ಲಗ್ಗೆ ಇಟ್ಟವು! ‘ಕಾಗೆ ಹಾಡು’ ಹಾಗೂ ‘ಬಾರೆ ಬಾರೆ ರಂಗಮಂಚಕೆ’ ಹಾಡುಗಳನ್ನು ನಾಟಕ ನೋಡಿ ಹೊರಬರುತ್ತಿದ್ದ ಪ್ರೇಕ್ಷಕರು ಗುನುಗಿಕೊಳ್ಳುತ್ತಿದ್ದುದು ಮತ್ತಷ್ಟು ಖುಷಿಗೆ ಕಾರಣವಾಯಿತು. ಅಂದು ಹಾಗೂ ಮರುದಿನ ‘ಗುಳ್ಳೇನರಿ’ ನಾಟಕ ಅತ್ಯಂತ ಯಶಸ್ವಿಯಾಗಿ ತುಂಬಿದ ಗೃಹಗಳಿಗೆ ಪ್ರದರ್ಶನಗೊಂಡು ಹಿಟ್ ನಾಟಕಗಳ ಗುಂಪಿಗೆ ಸೇರ್ಪಡೆಯಾಗಿ ಹೋಯಿತು!

ಪ್ರಥಮ ಪ್ರದರ್ಶನಗಳಾದ ನಂತರ ಗುಳ್ಳೆನರಿ ನಾಟಕದ ಮರು ಪ್ರದರ್ಶನಗಳಿಗೆ ಪ್ರಾಯೋಜಕರಿಂದ ಸಾಕಷ್ಟು ಆಹ್ವಾನಗಳು ಬರತೊಡಗಿದರೂ ನಚ್ಚಿಗೆ ಮರು ಪ್ರದರ್ಶನಗಳಿಗೆ ಸಮಯ ಹೊಂದಿಸಿಕೊಳ್ಳುವುದು ವಿಪರೀತ ಕಷ್ಟವಾಗಿ ಬೇರೆ ದಾರಿಯೇ ಇಲ್ಲದೆ ನಾನೇ ಪತಂಗಿಯ ಪಾತ್ರನಿರ್ವಹಣೆಗೆ ಸಿದ್ಧನಾದೆ. ಅತ್ಯಲ್ಪ ಸಮಯದಲ್ಲೇ ನಾಡಿನಾದ್ಯಂತ ಗುಳ್ಳೆನರಿ ನಾಟಕದ ಅನೇಕ ಪ್ರದರ್ಶನಗಳಾದುವು.ಒಂದು ಪ್ರದರ್ಶನವನ್ನು ನೋಡಿದ ಹಿರಿಯ ನಟ ಅಂಕಲ್ ಲೋಕನಾಥ್ ಅವರು ನಾಟಕವನ್ನು ಬಹುವಾಗಿ ಮೆಚ್ಚಿಕೊಂಡು ಒಂದು ಕಿವಿಮಾತನ್ನೂ ಹೇಳಿದರು:” ಒಂದೆರಡು ಕಡೆ ಮಾತು—ಹಾವಭಾವಗಳು ಮಿತಿಯನ್ನು ದಾಟಿದ ಹಾಗೆ ಭಾಸವಾಗುತ್ತೆ..ಬೇಡ ಕಣೋ ಮರಿ..ಚೆನ್ನಾಗಿ ಕಾಣೋಲ್ಲ”. ಮರುಪ್ರದರ್ಶನದಲ್ಲೇ ಅಂಕಲ್ ಅವರು ಹೇಳಿದ ಹಾಗೆ ತಿದ್ದುಪಡಿ ಮಾಡಿಕೊಂಡೆ.

ಪ್ರಥಮ ಪ್ರದರ್ಶನವನ್ನೇ ನೋಡಿದ ನನ್ನ ಮೆಚ್ಚಿನ ನಿರ್ದೇಶಕ ಪ್ರಸನ್ನ ಅವರು, “ನಾಟಕ ತುಂಬಾ ಚೆನ್ನಾಗಿ ಬಂತು.. ಆದರೆ ವೈದ್ಯ ವೃತ್ತಿ ಹಾಗೂ ವಕೀಲಿ ವೃತ್ತಿಕ್ಷೇತ್ರಗಳಲ್ಲಿ ನಡೆಯುವ ಶೋಷಣೆಯನ್ನು ಕುರಿತಾಗಿ ಮಾತಾಡುವ ಸನ್ನಿವೇಶದಲ್ಲಿ ಮೊನಚು ಕಡಿಮೆಯಾದ ಹಾಗೆ ಭಾಸವಾಗಿ ವಿಷಯವನ್ನು ತೇಲಿಸಿದ ಹಾಗಾಯಿತು” ಎಂದು ಅಭಿಪ್ರಾಯ ಪಟ್ಟರು. ಮರು ಪ್ರದರ್ಶನದಿಂದಲೇ ಆ ಭಾಗಗಳನ್ನು ಗಟ್ಟಿ ಮಾಡಿ ಆ ಕೊರತೆ ನೀಗುವ ಹಾಗೆ ಮಾಡಿದೆ. ಇಂಥ ಸೃಜನಾತ್ಮಕ ವಿಮರ್ಶೆ—ಅಭಿಪ್ರಾಯಗಳು ನಾಟಕದ ಗುಣಮಟ್ಟವನ್ನು ಹೆಚ್ಚಿಸಿ ನಾಟಕವನ್ನು ಮತ್ತೊಂದು ಎತ್ತರಕ್ಕೆ ಒಯ್ಯುವುದು ಶಕ್ಯವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲೋಸುಗ ಈ ಮಾತುಗಳನ್ನು ನೆನೆಸಿಕೊಂಡೆನಷ್ಟೇ. ಪತ್ರಿಕೆಗಳಲ್ಲಿಯೂ ‘ಗುಳ್ಳೆನರಿ’ ನಾಟಕವನ್ನು ಮೆಚ್ಚಿಕೊಂಡು ಸಾಕಷ್ಟು ವಿಮರ್ಶೆಗಳು ಪ್ರಕಟವಾದವು. ಕೆಲವನ್ನು ಗಮನಿಸುವುದಾದರೆ:
“ಆಸ್ತಿ ಸಂಪಾದನೆಯ ವ್ಯಾಮೋಹಕ್ಕೆ ಹಾಗೂ ದುರಾಸೆಯ ದೌರ್ಬಲ್ಯಕ್ಕೆ ಬಲಿಯಾದ ಮನುಷ್ಯರ ಮಾನ ಮರ್ಯಾದೆಗೆಟ್ಟ ನಡತೆಯ ವಿಡಂಬನೆಯೇ ವಸ್ತುವಾಗಿರುವ ಗುಳ್ಳೆನರಿ’, ಪ್ರೇಕ್ಷಕರ ಮನಸೆಳೆದ ನಾಟಕ.”

“Gullenari-a good job indeed! when natyadarpana presented ‘gullenari’,an adopted version of johnson’s ‘vol pone’, the wholesome comedy looked as good as the original. It was a very competent production…Narasimhan and Sudhindra were positively brilliant in their roles and they kept the play alive throughout.”

ಮತ್ತೋರ್ವ ವಿಮರ್ಶಕರು “ವಿಡಂಬನೆ ಮಾತ್ರವಾಗಿ ಉಳಿಯುವ ಗುಳ್ಳೆನರಿ” ಎಂದು ಅಭಿಪ್ರಾಯಿಸಿದ್ದು ನನಗೆ ಸ್ವಲ್ಪ ಸೋಜಿಗವನ್ನುಂಟುಮಾಡಿತು. ಹೌದು, ನಾವು ಪ್ರಸ್ತುತ ಪಡಿಸಿದ್ದೇ ಒಂದು ವಿಡಂಬನಾತ್ಮಕ ನಾಟಕವನ್ನು! ಅಂದಮೇಲೆ ಅದನ್ನೊಂದು ದೋಷವೆಂಬಂತೆ ಬಿಂಬಿಸುವುದು ಸಾಧುವೇ? ಭತ್ತವ ಬಿತ್ತಿ ರಾಗಿ ಬೆಳೆಯಲಾದೀತೇ? “ಹಾಡು ಕುಣಿತಗಳ ರಂಜನೆ ಮಾತ್ರ” ಎಂದು ಮತ್ತೊಬ್ಬರು ಟೀಕಿಸಿದ್ದರು. ವಾಸ್ತವವಾಗಿ, “ಹಾಡು—ಕುಣಿತ—ವ್ಯಂಗ್ಯ—ತಮಾಷೆಗಳನ್ನು ಹೇರಳವಾಗಿ ಬಳಸಿಕೊಂಡು ಮನರಂಜಕವಾಗಿ ವಿಷಯವನ್ನು ನಿರೂಪಿಸುವ ಪ್ರಯತ್ನ ಈ ಪ್ರಯೋಗದಲ್ಲಿದೆ” ಎಂದು ನಾನೇ ಕರಪತ್ರದಲ್ಲಿ ಹೇಳಿಕೆ ಕೊಟ್ಟಿದ್ದೆ! ಅಂದರೆ ರಂಜನೀಯ ವೈನೋದಿಕಗಳನ್ನು ಮಾಡಲೇಬಾರದೇ? ಅದು ರಂಗಭೂಮಿಯಲ್ಲಿ ನಿಷಿದ್ಧವೇ? ನಾವು ಒಂದು ಉದ್ದೇಶವನ್ನು ಇಟ್ಟುಕೊಂಡು ಒಂದು ನಾಟಕವನ್ನು ಪ್ರಸ್ತುತಿ ಪಡಿಸಿದಾಗ ಆ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯೋಗವನ್ನು ವಿಮರ್ಶಿಸಬೇಕೋ ಅಥವಾ ನಾಟಕ ಹೀಗೆಯೇ ಇರಬೇಕೆಂದು ತಾವೇ ರೂಪಿಸಿಕೊಂಡಿರುವ ಮಾನದಂಡಗಳ ಕನ್ನಡಕವನ್ನು ತೊಟ್ಟು ನನ್ನ ಪ್ರಯೋಗವನ್ನು ವಿಮರ್ಶಿಸಬೇಕೋ?ವಿಡಂಬನಾತ್ಮಕ ನಾಟಕಕ್ಕೆ ದುರಂತನಾಟಕದ ಸ್ಪರ್ಶ ಕೊಡಲಾದೀತೇ ಅಥವಾ ಒಂದು ಶುದ್ಧಾಂಗ ‘ಕಾಮಿಡಿ’ ಅಥವಾ ‘satire’ ಪ್ರಕಾರದ ನಾಟಕದಲ್ಲಿ ಗಂಭೀರ ಸಾಮಾಜಿಕ ಪ್ರಶ್ನೆಗಳ ಚರ್ಚೆಗೆ ಪ್ರಯತ್ನಪೂರ್ವಕವಾಗಿ ಎಡೆ ಮಾಡಿಕೊಡಲಾದೀತೇ? ಎಂಬಂತಹ ಪ್ರಶ್ನೆಗಳು ನನ್ನನ್ನು ಕಾಡಿದ್ದು ನಿಜ.

ಒಂದು ಒಳ್ಳೆಯ—ಯಶಸ್ವೀ ಪ್ರಯೋಗವನ್ನು ನೀಡಿದ ನಂತರವೂ ಅನಗತ್ಯ ಅಪಸ್ವರಗಳು ಹೊರಟರೆ ಬೇಸರವಾಗದೆ ಇರುತ್ತದೆಯೇ?!ನಂತರ, “ನನ್ನ ಮೊದಲ ವಿಮರ್ಶಕ ನಾನೇ; ಹಾಗೆಯೇ, ಯಾವುದೇ ಸೃಜನಾತ್ಮಕ ವಿಮರ್ಶೆಗಳನ್ನು ಮುಕ್ತವಾಗಿ ಸ್ವೀಕರಿಸಿ ಸಾಧ್ಯವಾದಲ್ಲೆಲ್ಲಾ ಬದಲಾವಣೆಗಳನ್ನು ಅಳವಡಿಸಿಕೊಂಡು ಉಳಿದವಕ್ಕೆ ವಿಶೇಷ ಗಮನ ನೀಡದೇ ನನ್ನ ಪಾಡಿಗೆ ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದು ಹೆಚ್ಚು ಸೂಕ್ತ” ಎಂದು ನನಗೆ ನಾನೇ ಖಾತ್ರಿ ಮಾಡಿಕೊಂಡೆ. ತದನಂತರವೇ ವಿನಾಕಾರಣದ ಟೀಕೆ ಅಥವಾ ಪೂರ್ವಗ್ರಹ ಪೀಡಿತ ವಿಮರ್ಶೆಗಳಿಂದಾಗಿ ಕೊರಗುವುದು ಕಡಿಮೆಯಾದದ್ದು ಅನ್ನಿ!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

June 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: