ಶ್ರೀನಿವಾಸ ಪ್ರಭು ಅಂಕಣ – ರಂಗಭೂಮಿ ಪಯಣದ ಆರಂಭದ ದಿನಗಳಲ್ಲಿ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

19

ಸೆಂಟ್ರಲ್ ಕಾಲೇಜ್ ನಲ್ಲಿ ಓದುತ್ತಿರುವಾಗಲೇ ಪರಿಚಯವಾಗಿ ನನ್ನ ರಂಗಭೂಮಿಯ ನಂಟಿಗೆ ಭದ್ರವಾದ ಗಂಟೊಂದನ್ನು ಹಾಕಿ ಬಲಪಡಿಸಿದವನೆಂದರೆ ಅಂದಿನ ಪ್ರಸಿದ್ಧ ಬೆಳಕು ತಜ್ಞ ಪರೇಶ್. ಸೋಶಿಯಾಲಜಿ ವಿಭಾಗದಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪರೇಶ ನಮ್ಮ ‘ಕ್ರಾಂತಿ ಬಂತು ಕ್ರಾಂತಿ’ ನಾಟಕವನ್ನು ನೋಡಿ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದ. ಜಯನಗರ ನ್ಯಾಷನಲ್ ಕಾಲೇಜ್ ನ ಹಳೆಯ ವಿದ್ಯಾರ್ಥಿಯೂ ಆಗಿದ್ದ ಪರೇಶ, ಹಳೆಯ ವಿದ್ಯಾರ್ಥಿಗಳ ಸಂಘದ ಚುಕ್ಕಾಣಿಯನ್ನೂ ಹಿಡಿದಿದ್ದು ಅಲ್ಲಿ ವಿಶೇಷ ಸಂದರ್ಭಗಳಲ್ಲಿ ನಾಟಕಗಳನ್ನು ಮಾಡಿಸುತ್ತಿದ್ದ.

ಹವ್ಯಾಸಿ ರಂಗಭೂಮಿಯ ಅನೇಕ ಪ್ರಮುಖ ತಂಡಗಳ ನಾಟಕಗಳಿಗೆ ಬೆಳಕಿನ ವಿನ್ಯಾಸವನ್ನು ಮಾಡುತ್ತಿದ್ದ ಪರೇಶನ ತಂಡದ ಹೆಸರು SPARK. ಕೇವಲ ನಾಟಕಗಳಷ್ಟೇ ಅಲ್ಲ, ಬ್ಯಾಲೆಗಳು, ರಂಗಪ್ರವೇಶಗಳು, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು… ಎಲ್ಲಕ್ಕೂ ಅದ್ಭುತವಾದ ರೀತಿಯಲ್ಲಿ ಬೆಳಕಿನ ವಿನ್ಯಾಸವನ್ನು ಮಾಡಿ ಪ್ರದರ್ಶನದ ಪ್ರಚಂಡ ಯಶಸ್ಸಿಗೆ ದೊಡ್ಡ ರೀತಿಯಲ್ಲಿ ನೆರವಾಗುತ್ತಿತ್ತು ಪರೇಶನ SPARK ತಂಡ. ಇಂಥ ಅಪರೂಪದ, ಸೃಜನಶೀಲ ತಂತ್ರಜ್ಞ ಪರೇಶನ ಪರಿಚಯವಾಗಿ, ಪರಿಚಯ ಗಾಢ ಸ್ನೇಹಕ್ಕೆ ತಿರುಗಿ ನಾನೂ ಅವನ ತಂಡದ ಒಬ್ಬ ಸದಸ್ಯನಾದೆ. ಪರೇಶ ನ್ಯಾಶನಲ್ ಕಾಲೇಜ್ ನಲ್ಲಿ ಮಾಡಿಸಿದ ‘ಸಾಕ್ರಟೀಸ್ʼ, ‘ಸರ್ವೇಜನಾಃ ಸುಖಿನೋ ಭವಂತು’, ‘ಸದ್ದು ವಿಚಾರಣೆ ನಡೀತಿದೆ’ ಮೊದಲಾದ ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ. ನಂದಿನಿ ಸೇಠ್ (ಆಳ್ವ) ಅವರ ‘ವಿಷಕನ್ಯೆʼ ನೃತ್ಯನಾಟಕ, ರಶ್ಮಿ ಹೆಗಡೆ ಅವರ ರಂಗ ಪ್ರವೇಶ, ಹೋಂ ಸೈನ್ಸ್ ಕಾಲೇಜ್ ನ ಸಾಂಸ್ಕೃತಿಕ ಸಂಜೆ… ಮೊದಲಾದ ಕಾರ್ಯಕ್ರಮಗಳಲ್ಲಿ spark ತಂಡದ ಜೊತೆಗೆ ಕೆಲಸ ಮಾಡಿ ಬೆಳಕಿನ ವಿನ್ಯಾಸದ ಪ್ರಾಥಮಿಕ ಪಾಠಗಳನ್ನು ಕಲಿತೆ. ಇದು ನನ್ನನ್ನು ಬಹುವಾಗಿ ಆಕರ್ಷಿಸಿದ ರಂಗಭೂಮಿಯ ವಿಭಾಗ ಕೂಡಾ.

ಹೀಗೆ ನನ್ನ ರಂಗಭೂಮಿ ಪಯಣದ ಆರಂಭದ ದಿನಗಳಲ್ಲಿ ನನಗೆ ತುಂಬಾ ಪ್ರೋತ್ಸಾಹವನ್ನು ನೀಡಿ ಹುರಿದುಂಬಿಸಿದ್ದೂ ಅಲ್ಲದೆ ‘ನೀನು ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಕೋ.. ನಿನಗೆ ಒಳ್ಳೆಯ ಶೈಲಿಯಿದೆ.. ಜತೆಗೆ ಭಾಷೆಯ ಮೇಲೆ ಹಿಡಿತವಿದೆ..’ ಎಂದು ಪದೇ ಪದೇ ಬರವಣಿಗೆಯತ್ತ ನನ್ನ ಗಮನ ಸೆಳೆಯುತ್ತಿದ್ದ ಪರೇಶ. ಯಾವುದೇ ಕಾರ್ಯಕ್ರಮಕ್ಕೆ ಬರವಣಿಗೆಯ ಅಗತ್ಯವಿದ್ದರೆ, ನಿರೂಪಣೆಯ ಅಗತ್ಯವಿದ್ದರೆ ಕೂಡಲೇ ನನಗೆ ಕರೆ ಮಾಡಿ ಆ ಜವಾಬ್ದಾರಿಯನ್ನು ಒಪ್ಪಿಸುತ್ತಿದ್ದ. ಸದಾ ಚಟುವಟಿಕೆಯಿಂದ ಓಡಾಡುತ್ತಾ, ತಮಾಷೆ ಮಾಡುತ್ತಾ, ಬಿಡುವು ಕೊಡದೆ ಮಾತಾಡುತ್ತಾ, ತಾಂತ್ರಿಕ ಕ್ಷೇತ್ರದಲ್ಲಿ ತನ್ನದೇ ಅವಿಸ್ಮರಣೀಯ ಛಾಪು ಮೂಡಿಸಿದ್ದ ಇಂಥಾ ಸೃಜನಶೀಲ, ಸ್ನೇಹಪರ ಬೆಳಕು ತಜ್ಞ ಪರೇಶ, ಇನ್ನೂ ಬಹಳಷ್ಟು ಸಮಯವಿರುವಂತೆಯೇ ಕತ್ತಲೆಗೆ ತೆರಳಿದ್ದು ಕನ್ನಡ ರಂಗಭೂಮಿಗೆ, ವೈಯಕ್ತಿಕವಾಗಿ ನನಗೆ ಭರಿಸಲಾಗದ ನಷ್ಟ.

ನಾನೇ ಕಂಡುಕೊಂಡ ಹಾಗೆ-ಅದು ಒಳ್ಳೆಯದೋ ಕೆಟ್ಟದ್ದೋ ಕಾಣೆ-ನನ್ನದು ಅತಿಯಾದ ಸ್ವವಿಮರ್ಶೆಗೆ ತೊಡಗುವ ಸ್ವಭಾವ. ‘ನನ್ನ ಅಥವಾ ನನ್ನ ಬರಹಗಳ ಕೊರತೆಗಳನ್ನು ಮತ್ತೊಬ್ಬರು ಎತ್ತಿ ಆಡುವ ತನಕ ಯಾಕೆ ಕಾಯಬೇಕು? ನನಗೆ ನಾನೇ ಕನ್ನಡಿ ಹಿಡಿದು ಕೊಳ್ಳುತ್ತೇನೆ’ ಅನ್ನುವ ನಿಲುವು ನನ್ನದು. ನನಗೆ ಕಾಣುತ್ತಿದ್ದ ಬಿಂಬ ಅಗತ್ಯಕ್ಕಿಂತ ಹೆಚ್ಚು ಪ್ರಖರವಾಗಿದ್ದು ಆ ಕಾರಣವಾಗಿಯೇ ನಾನು ಕೀಳರಿಮೆಯನ್ನು ಅನುಭವಿಸಿರುವುದುಂಟು. ಹಾಗಾಗಿಯೇ ಆ ಸಮಯದಲ್ಲಿ ನಾನು ಬರೆದಿದ್ದ ನೂರಾರು ಕವನಗಳು, ಕಥೆ-ಲೇಖನಗಳು ನನಗೇ ಒಪ್ಪಿತವಾಗದೆ, ಇನ್ನೊಬ್ಬರ ದೃಷ್ಟಿಗೂ ಬೀಳದೆ ಕಸದ ಬುಟ್ಟಿ ಸೇರಿರುವುದೂ ಉಂಟು. ಆ ಒಂದು ಕಾಲಘಟ್ಟದಲ್ಲಿ ನನ್ನ ಪ್ರತಿಯೊಂದು ಕ್ರಿಯೆ-ಪ್ರತಿ ಚಲನವಲನ-ಪ್ರತಿ ಮಾತು-ಪ್ರತಿ ಚಿಂತನೆ… ಎಲ್ಲವೂ ನನ್ನದೇ ವಿಮರ್ಶೆಗೆ ಪಕ್ಕಾಗಿ ನನ್ನನ್ನು ಸೋಲಿಸಿ ಹತಾಶನನ್ನಾಗಿ ಮಾಡುತ್ತಿದ್ದವು. ಇಂಥ ಮನಸ್ಥಿತಿ ನನ್ನನ್ನು ಕಾಡುತ್ತಿದ್ದ ವೇಳೆಯಲ್ಲೇ ನಡೆದ ಕೆಲ ಘಟನೆಗಳು ನನ್ನನ್ನು ಮತ್ತಷ್ಟು ಗಾಸಿಗೊಳಿಸಿದ್ದವು. ನನ್ನ ಹರಯದ ಕೆಲ ವರ್ಷಗಳು ಬಹುಶಃ ನನ್ನ ಬದುಕಿನ ಅತಿ ತಲ್ಲಣದ ದಿನಗಳು.

ನಾನು ಆನರ್ಸ್ ಓದುತ್ತಿದ್ದಾಗಿನಿಂದಲೇ ಒಂದು ಹುಡುಗಿಯನ್ನು – ಅವಳನ್ನು ಜ್ಯೋತಿ ಎಂದು ಕರೆಯುತ್ತೇನೆ – ತುಂಬಾ ಇಷ್ಟಪಟ್ಟಿದ್ದೆ. ಅವಳಿಗೂ ನನ್ನ ಸ್ನೇಹ ಇಷ್ಟವಾಗಿತ್ತು. ಬರಬರುತ್ತಾ ಅವಳನ್ನು ಅದೆಷ್ಟು ಹಚ್ಚಿಕೊಂಡುಬಿಟ್ಟಿದ್ದೆನೆಂದರೆ ಬೇರೆ ಏನನ್ನೂ ಯೋಚಿಸಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಓದಿನ ಕಡೆಗೂ ಗಮನ ಹರಿಸುವುದು ಕಷ್ಟವಾಗಿತ್ತು. ಪುಸ್ತಕದ ಅಕ್ಷರ -ಶಬ್ದಗಳು ವಿಚಾರಗಳಾಗಿ, ಭಾವಗಳಾಗಿ ತಲೆಗಿಳಿದು ದಾಖಲಾಗುತ್ತಿರಲಿಲ್ಲ. ಭಾವನೆಗಳ ಬೀಸಿಗೆ ಈ ಪರಿಯಲ್ಲಿ ಸಿಕ್ಕಿ ಕೊಚ್ಚಿಹೋಗುವುದು ಸರಿಯಲ್ಲವೆಂದು ಒಂದು ತಾರ್ಕಿಕ ಒಳಮನಸ್ಸು ಹೇಳುತ್ತಿದ್ದರೂ ಹತೋಟಿ ದಕ್ಕಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯವರೊಂದಿಗೆ ಮೊದಲಿನ ಹಾಗೆ ಕಲೆತು ಮಾತಾಡುವುದು, ಸಂತೋಷದಿಂದಿರುವುದು ಸಾಧ್ಯವಾಗುತ್ತಿರಲಿಲ್ಲ. ಒಂದು ತರಹದ ತಪ್ಪಿತಸ್ಥ ಭಾವನೆ ಒಂದೆಡೆ ಕಾಡುತ್ತಿದ್ದರೆ ಮತ್ತೊಂದು ಕ್ಷಣದಲ್ಲಿ ‘ಇದರಲ್ಲಿ ತಪ್ಪೇನಿಲ್ಲ.. ಎಲ್ಲಾ ಸಹಜವಾಗಿಯೇ ಇದೆ’ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ.

ಈ ಎಲ್ಲಾ ತುಮುಲ-ಗೊಂದಲಗಳಿಗೆ ಪ್ರಮುಖ ಕಾರಣ ಇಷ್ಟೇ: ಆಹುಡುಗಿ ಅನ್ಯ ಜಾತಿಗೆ ಸೇರಿದವಳು. ಅಣ್ಣ ಒಂದು ಕಾಲಕ್ಕೆ ಎಷ್ಟೇ ಪ್ರಗತಿಪರರಾಗಿದ್ದರೂ ನಂತರದ ದಿನಗಳಲ್ಲಿ ಅವರ ಮನೋಧರ್ಮದಲ್ಲಾಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನಗೆ ಒಂದು ವಿಷಯ ಖಾತ್ರಿಯಾಗಿ ಹೋಗಿತ್ತು: ಅಣ್ಣ ಅನ್ಯಜಾತಿಯ ಹುಡುಗಿಯನ್ನು ಸೊಸೆಯಾಗಿ ಒಪ್ಪಿಕೊಳ್ಳುವುದು ಎಂದಿಗೂ ಸಾಧ್ಯವಿಲ್ಲ. ಅಸಲಿಗೆ 17-18 ರ ಹರಯದ ನನಗೆ ಆಗ ಮದುವೆ-ಸಂಸಾರ ಇತ್ಯಾದಿ ವಿಷಯಗಳ ಬಗ್ಗೆ ಯೋಚಿಸುವ ಅರ್ಹತೆಯೂ ಪ್ರಾಪ್ತವಾಗಿರಲಿಲ್ಲ! ಯಾರೊಂದಿಗೂ ಏನೂ ಮಾತಾಡದೆ, ‘ಇವರುಗಳು ಹೀಗೇ ಪ್ರತಿಕ್ರಿಯಿಸುತ್ತಾರೆ’ ಎಂದು ನಾನೇ ತೀರ್ಮಾನ ಮಾಡಿ, ‘ನನ್ನ ಭಾವನೆಗಳ ಬಲಿಯಾಗುತ್ತಿದೆ.. ನನಗೆ ಭಯಂಕರ ಅನ್ಯಾಯವಾಗುತ್ತಿದೆ’ ಎಂದೆಲ್ಲಾ ನಾನೇ ಆರೋಪಿಸಿಕೊಂಡು ದುರಂತನಾಯಕನಂತೆ ಪರಿತಪಿಸುತ್ತಿದ್ದೆ! ಇದಾವುದರ ಹೊಲಬೂ ಇಲ್ಲದ ಮನೆಯವರು ಮಾತ್ರ, ‘ಇದ್ದಕ್ಕಿದ್ದಹಾಗೆ ನಮ್ಮ ಪ್ರಭುವಿಗೆ ಏನಾಗಿಹೋಯಿತು? ಯಾಕಿಷ್ಟು ಮಂಕಾಗಿಹೋಗಿದ್ದಾನೆ? ಒಂದು ಮಾತಿಲ್ಲ.. ಕಥೆಯಿಲ್ಲ.. ಶೂನ್ಯದಲ್ಲಿ ಕಣ್ಣು ನೆಟ್ಟು ಏನೋ ಯೋಚಿಸುತ್ತಾ ಕೂತುಬಿಟ್ಟಿರುತ್ತಾನೆ.. ಓದಿನ ಕಡೆಗೂ ಗಮನವಿಲ್ಲ..’ ಎಂದು ಚಿಂತಾಕ್ರಾಂತರಾಗಿಬಿಟ್ಟಿದ್ದರು. ಯಾರು ಏನು ಕೇಳಿದರೂ ನಾನು ಬಾಯಿ ಬಿಡುತ್ತಿರಲಿಲ್ಲ. ಎಲ್ಲ ಪ್ರಶ್ನೆಗಳಿಗೂ ನನ್ನ ಮೌನವೇ ಉತ್ತರವಾಗಿತ್ತು. ಇದರ ಬೆನ್ನಿಗೇ ನನ್ನನ್ನು ಕಂಗೆಡಿಸುವ ಮತ್ತೊಂದು ದುರ್ಘಟನೆ ನಡೆದುಹೋಯಿತು.

ಸೆಂಟ್ರಲ್ ಕಾಲೇಜ್ ನಲ್ಲಿ ಎಂ ಎ-ಎಂ ಎಸ್ ಸಿ ಪದವಿಗಳಿಗೆ ಬೇರೆ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಬಂದು ದಾಖಲಾಗುತ್ತಿದ್ದರು. ಹಾಗೆಯೇ ನಮ್ಮ ತರಗತಿಯಲ್ಲೂ ಹೊಸದಾಗಿ ಬಂದು ಸೇರಿದ 10-15 ವಿದ್ಯಾರ್ಥಿಗಳಿದ್ದರು. ಇನ್ನೂ ಅವರೆಲ್ಲರ ಪರಿಚಯವೂ ಸರಿಯಾಗಿ ಆಗದಿದ್ದ ಸಮಯವದು. ಒಂದು ದಿನ ತರಗತಿಗಳು ಮುಗಿದಮೇಲೆ ನಾನು ಲೈಬ್ರರಿಯ ರೆಫರೆನ್ಸ್ ವಿಭಾಗದಲ್ಲಿ ಕುಳಿತು ಒಂದಿಷ್ಟು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದೆ. ಒಬ್ಬ ಹೆಣ್ಣುಮಗಳು ನಾನಿದ್ದಲ್ಲಿಗೆ ಬಂದು ಒಂದು ಕವರ್ ಅನ್ನು ನನ್ನ ಮುಂದಿಟ್ಟು ಸರಸರನೆ ಹೊರಟುಹೋದಳು. ನಾನು ಕತ್ತೆತ್ತಿ ಯಾರೆಂದು ನೋಡುವಷ್ಟರಲ್ಲಿ ಆಕೆ ಮರೆಯಾಗಿದ್ದಳು.

ಕುತೂಹಲದಿಂದ ಕವರ್ ತೆಗೆದು ನೋಡಿದರೆ ಅದರಲ್ಲೊಂದು ಸುದೀರ್ಘ ಪತ್ರ. ತನ್ನನ್ನು ತಾನು ಭಾಗ್ಯಲಕ್ಷ್ಮಿ ಎಂದು ಪರಿಚಯಿಸಿಕೊಂಡಿದ್ದ ಆ ಹೆಣ್ಣುಮಗಳು ಪತ್ರದಲ್ಲಿ ನನ್ನ ವ್ಯಕ್ತಿತ್ವ – ಜಾಣತನ – ಮಾತಾಡುವ ಧಾಟಿ ಎಲ್ಲವೂ ತನಗೆ ತುಂಬಾ ಮೆಚ್ಚುಗೆಯಾಗಿದೆಯೆಂದು ಶ್ಲಾಘಿಸಿ ನನ್ನ ಸ್ನೇಹ ಹಸ್ತಕ್ಕೆ ಕೈ ಚಾಚಿದ್ದಳು. ಹೊಗಳಿಕೆ ಕೊಂಚ ಅತಿ ಅನ್ನುವಂತಿದ್ದರೂ ಶುದ್ಧ ಅಂತಃಕರಣದಿಂದ, ಯಾವ ನಿರೀಕ್ಷೆ-ಒತ್ತಡಗಳೂ ಇಲ್ಲದೆ ಬರೆದಿದ್ದ ನಿರ್ಮಲ, ಪ್ರಾಮಾಣಿಕ ಪತ್ರವದು. ನನ್ನ ಆತ್ಮೀಯ ಗೆಳೆಯರಾಗಿದ್ದ ಶಿವು-ನಾಗರಾಜರಿಗೆ ಆ ಪತ್ರವನ್ನು ತೋರಿಸಿದೆ. ‘ಆಕೆ ಹೊಗಳಿರೋ ಅಷ್ಟು ಸದ್ಗುಣವಂತನೇನಲ್ಲ ನೀನು ಬಿಡು!’ ಎಂದು ಅವರು ತಮಾಷೆ ಮಾಡಿದರೂ ಅದರಲ್ಲಿ ಆಕ್ಷೇಪಾರ್ಹವಾದುದಾಗಲೀ ತಿರಸ್ಕರಿಸುವಂಥದಾಗಲೀ ಏನೂ ಇಲ್ಲವೆಂದೇ ಅವರು ಅಭಿಪ್ರಾಯ ಪಟ್ಟರು. ಆದರೆ ಈ ವೇಳೆಗಾಗಲೇ ನಾನು ಜ್ಯೋತಿಯನ್ನು ಪ್ರೀತಿಸತೊಡಗಿ ಮನಸ್ಸು ಗೊಂದಲದ ಗೂಡಾಗಿತ್ತು.

ಎಲ್ಲದರಲ್ಲೂ – ಕೊನೆಗೆ ಪರಮಪ್ರಿಯವಾದ ಸಿನೆಮಾಗಳಲ್ಲೂ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿದ್ದ ನನಗೆ ಇದಾವುದೋ ಹೊಸ ತಲೆನೋವಿನಂತೆ ಭಾಸವಾಗತೊಡಗಿತು.ಯಾವ ಹೊಸ ಸ್ನೇಹವನ್ನೂ ಒಪ್ಪಿಕೊಳ್ಳುವ ಮನಸ್ಥಿತಿಯೇ ನನಗಿರಲಿಲ್ಲ. ಬಹಳ ಯೋಚನೆ ಮಾಡಿ ಕೊನೆಗೆ, ಸೋದರಿ, ‘ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಆದರೆ ನಾನು ನನ್ನದೇ ಸಮಸ್ಯೆಗಳ ವಿಷವರ್ತುಲದಲ್ಲಿ ಸಿಕ್ಕಿಕೊಂಡು ಪರದಾಡುತ್ತಿದ್ದೇನೆ. ದಯವಿಟ್ಟು ನನ್ನಿಂದ ಏನನ್ನೂ ನಿರೀಕ್ಷಿಸದೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ’ ಎಂದು ಆಕೆ ಬರೆದಿದ್ದ ಪತ್ರದ ಕೊನೆಯಲ್ಲಿ ಇದ್ದ ಸ್ವಲ್ಪ ಜಾಗದಲ್ಲೇ ಬರೆದು ಸಿದ್ಧವಾಗಿಟ್ಟುಕೊಂಡೆ. ಆದರೆ ಆಕೆಗೆ ಅದನ್ನು ತಲುಪಿಸುವುದಾದರೂ ಹೇಗೆ? ಆಕೆಯ ಮುಖಚಹರೆಯೇ ನನ್ನ ಮನಸ್ಸಿನಲ್ಲೂ ದಾಖಲಾಗಿರಲಿಲ್ಲ.

ಕೊನೆಗೆ ಮರುದಿನ ತರಗತಿಯಲ್ಲಿ ಹಾಜರಿ ಕೂಗುವ ವೇಳೆ ಗಮನಿಸಿ ಆಕೆ ಯಾರೆಂಬುದನ್ನು ಖಾತ್ರಿಮಾಡಿಕೊಂಡೆ. ಅಂದೇ ಲೈಬ್ರರಿಯ ರೆಫರೆನ್ಸ್ ವಿಭಾಗಕ್ಕೆ ಎಂದಿನಂತೆ ಹೋದಾಗ ಒಂದು ಮೂಲೆಯ ಟೇಬಲ್ ಮುಂದೆ ಆಕೆ ಕೂತಿರುವುದು ಕಾಣಿಸಿತು.ನನ್ನ ದಿನಚರಿಯನ್ನು ಬಲ್ಲವಳಾಗಿದ್ದು ಬಹುಶಃ ನನಗಾಗಿಯೇ ಕಾಯುತ್ತಿದ್ದಳೋ ಏನೋ. ನಾನು ಸೀದಾ ಆಕೆಯ ಬಳಿ ಹೋಗಿ, ‘ನೀವು ಭಾಗ್ಯಲಕ್ಷ್ಮಿಯವರಲ್ಲವೇ’ ಎಂದೆ. ಆಕೆ ಸುಮ್ಮನೆ ಹೌದೆಂದು ತಲೆಯಾಡಿಸಿದಳು. ನಾನು ಜೇಬಿನಿಂದ ಆಕೆಯ ಪತ್ರವಿದ್ದ ಕವರ್ ಅನ್ನು ತೆಗೆದು ಆಕೆಯ ಮುಂದಿರಿಸಿ, ‘ತೆಗೆದುಕೊಳ್ಳಿ’ ಎಂದಷ್ಟೇ ಹೇಳಿ ಮಾತಿಗೆ ನಿಲ್ಲದೆ ಹೊರಟುಹೋದೆ. ಶಿವು – ನಾಗರಾಜರಿಗೆ ವಿಷಯ ತಿಳಿಸಿ ‘ಒಂದು ಅಧ್ಯಾಯ ಮುಗಿಯಿತು’ ಎಂದು ಸಮಾಧಾನದ ನಿಟ್ಟುಸಿರಿಟ್ಟೆ. ಅಸಲಿಗೆ ಹೊಸ ಅಧ್ಯಾಯ ಆಗ ಶುರುವಾಗಿತ್ತು.

ಇದಾದ ಮರುದಿನ ಆಕೆ ಕಾಲೇಜ್ ಗೆ ಬಂದಿರಲಿಲ್ಲ. ನಾನೂ ಆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. ಅದರ ಮಾರನೆಯ ದಿನ ಚಿದಾನಂದ ಮೂರ್ತಿಗಳ ತರಗತಿ ನಡೆಯುತ್ತಿತ್ತು. ಅಂದೂ ಆಕೆ ಕಾಲೇಜ್ ಗೆ ಬಂದಿರಲಿಲ್ಲ. ಏನು ತೊಂದರೆಯಾಗಿದೆಯೋ ಏನೋ ಎಂದು ಒಂದು ಕ್ಷಣ ಚಿಂತೆಯಾಯಿತು. ಅಷ್ಟರಲ್ಲಿ ತರಗತಿ ಮುಗಿಸಿ ಹೊರಟಿದ್ದ ಚಿದಾನಂದ ಮೂರ್ತಿಗಳು ತಟಕ್ಕನೆ ನಿಂತು, ‘ಮರೆತಿದ್ದೆ… ನಿಮಗೆಲ್ಲಾ ಒಂದು ಕೆಟ್ಟ ಸುದ್ದಿ ತಿಳಿಸಬೇಕಿದೆ’ ಎಂದರು. ಎಲ್ಲರೂ ಆಶ್ಚರ್ಯ-ಆತಂಕಗಳಿಂದ ಅವರ ಮುಖವನ್ನೇ ದಿಟ್ಟಿಸುತ್ತಿದ್ದೆವು.ಮಾತು ಮುಂದುವರೆಸಿದ ಮೇಷ್ಟ್ರು, ‘ನಿನ್ನೆ ನಿಮ್ಮ ಕ್ಲಾಸ್ ಮೇಟ್ ಒಬ್ಬರು ತೀರಿಕೊಂಡಿದ್ದಾರೆ..ಭಾಗ್ಯಲಕ್ಷ್ಮಿ ಅಂತ ಅವರ ಹೆಸರು..’ ಎಂದರು. ಭಾಗ್ಯಲಕ್ಷ್ಮಿ! ನನಗೆ ಪತ್ರ ಕೊಟ್ಟಿದ್ದ ಹೆಣ್ಣುಮಗಳು! ಪಾಪ, ಸಾಯುವಂಥದೇನಾಗಿತ್ತು ಆಕೆಗೆ ಅಂದುಕೊಳ್ಳುವಷ್ಟರಲ್ಲಿ ಬರಸಿಡಿಲಿನ ಹಾಗೆ ಮೇಷ್ಟ್ರ ಮಾತು ಬಂದೆರಗಿತು: ‘ನಿನ್ನೆ ಸೀಮೆಎಣ್ಣೆ ಸುರಿದುಕೊಂಡು ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. such a sad news’ ಎಂದು ಹೇಳಿ ಹೊರಟುಹೋದರು.

ನನಗೆ ಬವಳಿ ಬಂದಂತಾಗಿ ತಲೆ ಗಿರಗಿರ ಸುತ್ತತೊಡಗಿತು. ಅದುವರೆಗಿನ ನನ್ನ ಬದುಕಿನಲ್ಲಿ ನಾನು ಅನುಭವಿಸಿದ ಬಹುದೊಡ್ಡ ಆಘಾತವದು. ಮೈಮೇಲೆ ಹತೋಟಿ ತಪ್ಪಿ ಜೋಲಿ ಹೊಡೆದು ಬೀಳುವುದರಲ್ಲಿದ್ದ ನನ್ನನ್ನು ಪಕ್ಕದಲ್ಲೇ ಇದ್ದ ಶಿವು ಹಿಡಿದುಕೊಂಡು ಬೆಂಚ್ ಮೇಲೆ ಕೂರಿಸಿದ. ಪತ್ರದ ವಿಷಯ ತಿಳಿದಿತ್ತಾದ್ದರಿಂದ ಅವನಿಗೂ ದೊಡ್ಡ ಆಘಾತವೇ ಆಗಿತ್ತು. ಯಾರಿಗೂ ಯಾವ ಸುಳಿವೂ ಸಿಗದಂತೆ ಹೇಗೋ ನಿಭಾಯಿಸಿ ತರಗತಿಯಿಂದ ಎಲ್ಲರೂ ಹೊರಟಮೇಲೆ ನಿಧಾನವಾಗಿ ನನ್ನನ್ನು ಎಬ್ಬಿಸಿಕೊಂಡು ಕಾಲೇಜಿನ ಪಾರ್ಕ್ ಗೆ ಕರೆದುಕೊಂಡು ಹೋದ. ಸುದ್ದಿ ಕೇಳಿ ಆದ ಆಘಾತ, ಮಾನಸಿಕ ಒತ್ತಡ-ಯಾತನೆಗಳನ್ನು ಸಹಿಸಿಕೊಳ್ಳಲಾಗದೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ಅಂದು ಉಳಿದ ಯಾವ ತರಗತಿಗಳಿಗೂ ನಾವು ಹೋಗಲಿಲ್ಲ. ಈ ಪತ್ರದ ವಿಷಯ ಅದುವರೆಗೆ ಗೊತ್ತಿದ್ದದ್ದು ನನ್ನ ತೀರಾ ಆಪ್ತ ವಲಯದ 3-4 ಮಿತ್ರರಿಗೆ ಮಾತ್ರ. ಸರಿ, ಅವರೊಂದಿಗೆ ಮುಂದೇನು ಅನ್ನುವುದರ ಬಗ್ಗೆ ಚಿಂತನ ಮಂಥನ ಪ್ರಾರಂಭವಾಯಿತು.

ಅವರೆಲ್ಲರೂ ಸೇರಿ ನನಗೆ ಸಮಾಧಾನ ಹೇಳಲು ಮಂಡಿಸಿದ ತರ್ಕಸರಣಿಯನ್ನು ಕ್ರೋಢೀಕರಿಸಿ ಹೇಳುವುದಾದರೆ:
ಆಕೆಯ ಆತ್ಮಹತ್ಯೆಗೆ ನನ್ನ ಸ್ನೇಹಹಸ್ತದ ನಿರಾಕರಣೆಯೇ ಕಾರಣ ಎಂದೇನೂ ಖಚಿತವಾಗಿಲ್ಲ… ಮೇಲಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುವಷ್ಟು ಮಹತ್ವದ ಕಾರಣವೂ ಇದಲ್ಲ… ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳಲು ನಮಗೆ ಗೊತ್ತಿಲ್ಲದ ಬೇರೆ ಕಾರಣಗಳೂ ಇದ್ದಿರಬಹುದು. ಹಾಗಾಗಿ ನಾನು ತಪ್ಪಿತಸ್ಥ ಭಾವನೆಯನ್ನು ಆರೋಪಿಸಿಕೊಳ್ಳುವುದು ಅನಗತ್ಯ. ಸರಿಯೇ. ಆದರೆ ಆಕೆ ನನಗೆ ಬರೆದಿದ್ದ ಪತ್ರವನ್ನು ನಾನು ಆಕೆಗೆ ಹಿಂದಿರುಗಿಸಿರುವುದಷ್ಟೇ ಅಲ್ಲ, ಆ ಪತ್ರದ ಹಿಂದೆಯೇ ನನ್ನದೇ ಸ್ವಹಸ್ತಾಕ್ಷರದಲ್ಲಿ ನಾಲ್ಕು ಸಾಲು ಬರೆದು ಕಳಿಸಿದ್ದೇನೆ.. ಒಂದು ವೇಳೆ ಇದು ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿದರೆ ಯಾವ ತಿರುವು ತೆಗೆದುಕೊಳ್ಳುವುದೋ ಹೇಳಲಾಗದು.

ನನ್ನನ್ನು ಅಪರಾಧಿಯಾಗಿಸುವಂತಹ ಯಾವ ಸಾಕ್ಷಿಯೂ ಅಲ್ಲಿಲ್ಲವಾದರೂ, ನನ್ನ ಕಡೆಯಿಂದ ಯಾವ ಅಪರಾಧವೂ ಘಟಿಸಿಯೇ ಇಲ್ಲವಾದರೂ ಠಾಣೆ – ಕೇಸು ಎಂದರೆ ಇಲ್ಲದ ಕಿರಿಕಿರಿಯೇ ಹೌದು. ಹಾಗಾದರೆ ಮುಂದೇನು? ಈ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ಮತ್ತಷ್ಟು ಚರ್ಚೆಯ ನಂತರ, ‘ಸಧ್ಯಕ್ಕೆ ನಾವು ಮಾಡುವಂಥದೇನೂ ಇಲ್ಲ.. ನಾಲ್ಕು ದಿನ ಕಾದು ನೋಡೋಣ.. ಪ್ರಸಂಗ ಏನು ತಿರುವು ತೆಗೆದುಕೊಳ್ಳುತ್ತದೋ ಅದಕ್ಕನುಗುಣವಾಗಿ ಏನು ಮಾಡಬೇಕೆಂದು ನಿರ್ಧರಿಸಿದರಾಯಿತು’ ಎಂದು ಗೆಳೆಯರು ಸಾಂತ್ವನ ಹೇಳಿದರು. ಆ ಕೆಲ ದಿನಗಳಂತೂ ಬಲು ಯಾತನಾಮಯ ದಿನಗಳು. ಭಯ.. ಕಾತರ.. ಅಪರಾಧೀಭಾವ.. ಹತಾಶೆ.. ಎಲ್ಲವೂ ಒಟ್ಟಿಗೇ ಮುತ್ತಿಕೊಂಡು ನನ್ನ ಪರಿಸ್ಥಿತಿ ಚಿಂತಾಜನಕವೇ ಆಗಿಹೋಯಿತು. ಅದೇ ಸಮಯದಲ್ಲಿ ವಿಜಯಕ್ಕ ಬಾಣಂತನಕ್ಕೆಂದು ಊರಿಂದ ಬಂದಿದ್ದಳು.

ಅಣ್ಣ-ಅಮ್ಮ ಇಬ್ಬರೂ ಒಂದು ಪುಟ್ಟ ತೀರ್ಥಯಾತ್ರೆಗೆಂದು ಹರಿದ್ವಾರ-ಹೃಷಿಕೇಶಗಳತ್ತ ಪ್ರಯಾಣ ಬೆಳೆಸಿದ್ದರು. ಮನೆಯಲ್ಲಿ ಸದಾ ಮಂಕು ಕವಿದವನಂತೆ ಕೂತಿರುತ್ತಿದ್ದ ನನ್ನನ್ನು ನೋಡಿ ವಿಜಯಕ್ಕ ಕಂಗಾಲಾಗಿ ಹೋದಳು. ಏನಾಯಿತು ಹೇಳು ಎಂದು ಪರಿಪರಿಯಾಗಿ ಅವಳು ಅಲವತ್ತುಕೊಂಡರೂ ನಾನು ಬಾಯಿ ಬಿಡಲಿಲ್ಲ. ಆದರೆ ಅಷ್ಟಕ್ಕೇ ಅಕ್ಕ ಸುಮ್ಮನಾಗಲಿಲ್ಲ. ಆಣೆ ಪ್ರಮಾಣಗಳನ್ನು ಹಾಕಿ ನನ್ನನ್ನು ಕಟ್ಟಿಹಾಕಿ ನನ್ನ ಬಾಯಿ ತೆರೆಸಿದಳು. ವಿಜಯಕ್ಕ ಯಾವಾಗಲೂ ನನಗೆ ಒಂದು ರೀತಿ ಎರಡನೆಯ ಅಮ್ಮನಂತೇ ಇದ್ದವಳು. ಅವಳ ವಾತ್ಸಲ್ಯ-ಪ್ರೀತಿಗಳೆದುರು ನಾನು ಕರಗಿಹೋದೆ. ನಡೆದದ್ದೆಲ್ಲವನ್ನೂ ಹೇಳಿ ಭೋರೆಂದು ಅತ್ತುಬಿಟ್ಟೆ. ‘ನಿನ್ನದೇನೂ ತಪ್ಪಿಲ್ಲ ಪ್ರಭೂ ಇದರಲ್ಲಿ.. ನೀನು ಹೆದರಿಕೊಳ್ಳೋದಕ್ಕೂ ಏನೂ ಕಾರಣ ಇಲ್ಲ.. ನಾವೆಲ್ಲಾ ನಿನ್ನ ಜೊತೇಗಿದೀವಿ.. ಏನೇ ಪರಿಸ್ಥಿತಿ ಬಂದರೂ ಎದುರಿಸೋಣ.. ಭಾವಂದಿರಿದಾರೆ.. ಅವರೆಲ್ಲಾ ನೋಡ್ಕೋತಾರೆ.. ನೀನು ಮಾತ್ರ ಹೀಗೆ ಕೊರಗ್ತಾ ಇರಬೇಡ.. ನನ್ನ ಕೈಲಿ ನೋಡೊಕಾಗಲ್ಲ’ ಎಂದು ಸಮಾಧಾನ ಮಾಡಿ ಧೈರ್ಯ ತುಂಬಿದಳು.

ಆ ನಂತರವೇ ನನ್ನ ಮನಸ್ಸು ಕೊಂಚ ತಹಬಂದಿಗೆ ಬಂದದ್ದು. ಒಂದಷ್ಟು ದಿನಗಳು ಆತಂಕದಿಂದಲೇ ಕಳೆದ ಮೇಲೆ ಪ್ರಸಂಗ ಬೇರೆ ಯಾವುದೇ ತಿರುವು ಪಡೆದಿಲ್ಲ ಅನ್ನುವುದು ಖಾತ್ರಿಯಾಗಿ ಮತ್ತಷ್ಟು ನಿರಾಳವಾಯಿತು. ಆದರೆ ಮನಸ್ಸಿನ ಪ್ರಕ್ಷುಬ್ದತೆ ಮಾತ್ರ ದೂರವಾಗಲಿಲ್ಲ. ನಾನು ಭಾಗ್ಯಳ ಪತ್ರಕ್ಕೆ ಹಾಗೊಂದು ಉತ್ತರ ಬರೆಯದಿದ್ದರೆ ಆಕೆ ಉಳಿಯುತ್ತಿದ್ದಳೇನೋ ಅನ್ನುವ ಒಂದು ಭಾವ ಮನಸ್ಸನ್ನು ಕೊರೆಯುತ್ತಲೇ ಇತ್ತು. ಒಬ್ಬ ಹೆಣ್ಣುಮಗಳ ಸಾವಿಗೆ ಪರೋಕ್ಷವಾಗಿಯಾದರೂ ನಾನು ಕಾರಣನಾಗಿಬಿಟ್ಟೆನೇ? ಈ ಚಿಂತೆಯ ಭಾರದ ಹೊರೆ ಮಾತ್ರ ಹೆಗಲ ಮೇಲೆ ಭದ್ರವಾಗಿ ತಳವೂರಿಬಿಟ್ಟಿತು… ಇಂದಿಗೂ ಆಗಾಗ್ಗೆ ಭಾಗ್ಯ ಲಕ್ಷ್ಮಿಯ ಮಸಕು ಮುಖ ನೆನಪಿನಾಳದಿಂದ ಧುತ್ತೆಂದು ಜಿಗಿದು ಬಂದು ನನ್ನನ್ನು ಕಾಡುತ್ತಲೇ ಇರುತ್ತದೆ… ನಿನ್ನ ಅಕಾಲಿಕ ಸಾವಿಗೆ ಸಾಸಿವೆಯಷ್ಟಾದರೂ ನನ್ನ ಕಾರಣವಿದ್ದರೆ ಕ್ಷಮೆ ಇರಲಿ ಸೋದರಿ ಎಂದು ಹೃದಯ ಚೀರುತ್ತದೆ… ಈಗಲೂ.. ಇಷ್ಟು ವರ್ಷಗಳ ನಂತರವೂ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: