ಶ್ರೀನಿವಾಸ ಪ್ರಭು ಅಂಕಣ: ಮತ್ತೆ ಸೆಡ್ಯೂಸ್ ಮಾಡೋ ಸೀನ್..!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 109
——————
ನನ್ನ ಮುಖದ ಮೇಲೆ ಢಾಳಾಗಿ ಹೊಡೆದು ಕಾಣುತ್ತಿದ್ದ ಆತಂಕವನ್ನು ಗಮನಿಸಿ ನಗುತ್ತಾ ಗಿರೀಶ್ ನುಡಿದರು: “ಅಷ್ಟೇನೂ ಗಾಬರಿ ಆಗಬೇಡ್ರಿ! ಅಷ್ಟು complicated ವಿಚಾರ ಏನಲ್ಲ ಅದು…ಮೊನ್ನೆ ಮಾಡಿದಿವಲ್ಲಾ..ನೀವು ಹೆಗ್ಗಡಿತೀನ ಸೆಡ್ಯೂಸ್ ಮಾಡೋ ಸೀನ್.. ಅದನ್ನ reshoot ಮಾಡಬೇಕಾಗದ ಅಷ್ಟೇ”. “ಅಷ್ಟೇ”!! ಗಿರೀಶರಿಗೆ ಅದು ಎಷ್ಟು ‘ಅಷ್ಟೇ’ ಅನ್ನುವಷ್ಟು ಸರಳ ವಿಷಯವಾಗಿತ್ತೋ ಅಷ್ಟು ನನಗಾಗಿರಲಿಲ್ಲ!

“ಸೀನ್ ಚೆನ್ನಾಗಿ ಬಂದಿದೆ ಅಂತ ನೀವೇ ಹೇಳಿದ್ರಲ್ಲಾ ಸರ್? ಮತ್ತೆ ಯಾಕೆ re-shoot ಮಾಡಬೇಕು?” ಎಂದು ನಾನು ಉಗುಳು ನುಂಗಿಕೊಳ್ಳುತ್ತಾ ಕೇಳಿದೆ. “ಪ್ರಾಬ್ಲಮ್ ಇರೋದು ನಿಮ್ಮ ಕಡೀನೂ ಅಲ್ಲ.. ನಮ್ಮ ಕಡೀನೂ ಅಲ್ಲ.. ಊರ ಮಂದಿ ಕೆಲವರು ಒಂದು ವಿಷಯಕ್ಕೆ ಅಸಮಾಧಾನ ವ್ಯಕ್ತ ಪಡಿಸಿದಾರಂತ ಮತ್ತೆ ಆ ಸೀನ್ ಶೂಟಿಂಗ್ ಮಾಡಬೇಕಾಗದ” ಎಂದು ಗಿರೀಶ್ ನುಡಿದರು.

ಊರವರಿಗೆ ಅಸಮಾಧಾನ ಯಾವ ಕಾರಣಕ್ಕಾಗಿ ಆಗಿತ್ತೆಂಬುದು ಆನಂತರದಲ್ಲಿ ನನಗೆ ಸ್ಪಷ್ಟವಾಯಿತು: ಹೆಗ್ಗಡಿತಿಯನ್ನು ಸೇರೆಗಾರ ರಂಗಪ್ಪ ಸೆಟ್ಟಿ ಬಲೆಗೆ ಹಾಕಿಕೊಳ್ಳುವ ದೃಶ್ಯದಲ್ಲಿ ಹೆಗ್ಗಡಿತಿ ಇನ್ನೂ ಮುತ್ತೈದೆಯಾಗಿಯೇ ಇರುತ್ತಾಳೆ! ಹೆಗ್ಗಡಿತಿಯಂತಹ ಘನತೆಯುಳ್ಳ ಪಾತ್ರ ಗಂಡ ಬದುಕಿರುವಂತೆಯೇ ಪರಪುರುಷನ ತೆಕ್ಕೆಗೆ ಬೀಳುವಂತೆ ಚಿತ್ರೀಕರಿಸಿರುವುದು ಆ ಪಾತ್ರಕ್ಕೆ ಅಪಚಾರ ಮಾಡಿದಂತೆ ಎಂಬುದು ಕೆಲವು ಹಿರಿಯರ ಅಭಿಮತವಾಗಿತ್ತು. ಬಹುಶಃ ಅವರಲ್ಲೇ ಯಾರೋ ಚಿತ್ರೀಕರಣದ ಸಮಯದಲ್ಲಿ ಅಲ್ಲಿದ್ದು ಈ ವಿಚಾರವನ್ನು ಗಮನಿಸಿರಬೇಕು..

ವಾಸ್ತವವಾಗಿ ಮೂಲ ಕಾದಂಬರಿಯಲ್ಲಿ ಚಂದ್ರಯ್ಯಗೌಡರ ನಿಧನಾನಂತರವೇ ಹೆಗ್ಗಡಿತಿ ಸೇರೆಗಾರನ ಸಂಗ ಮಾಡುವುದು. ಅವಳು ಚಂದ್ರಯ್ಯಗೌಡರು ಬದುಕಿರುವಂತೆಯೇ ಸೇರೆಗಾರನ ಸಹವಾಸ ಮಾಡಿದ್ದೆಂಬುದನ್ನು ಉದ್ದೇಶಪೂರ್ವಕವಾಗಿಯೇ ಚಿತ್ರಕಥೆಯಲ್ಲಿ ಅಳವಡಿಸಿಕೊಂಡಿದ್ದರೋ ಅಥವಾ ಚಿತ್ರೀಕರಣದ ಸಂದರ್ಭದಲ್ಲಿ ಆದ ಅಜಾಗರೂಕತೆಯ ಪರಿಣಾಮವಾಗಿ ಈ ತಪ್ಪು ಘಟಿಸಿತೋ ಅನ್ನುವುದು ನನಗೆ ಈಗ ನೆನಪಿಲ್ಲ..

ಒಟ್ಟಿನಲ್ಲಿ ಆ ದೃಶ್ಯವನ್ನು ‘ಚಂದ್ರಯ್ಯಗೌಡರ ನಿಧನಾನಂತರ ತಾಳಿ—ಕುಂಕುಮಗಳಿಲ್ಲದ ವಿಧವೆ ಹೆಗ್ಗಡಿತಿಯನ್ನು ಸೇರೆಗಾರ ತನ್ನ ಬಲೆಗೆ ಕೆಡವಿಕೊಂಡ’ ಎಂಬುದು ಸ್ಪಷ್ಟವಾಗಿ ಬಿಂಬಿತವಾಗುವಂತೆ ಮತ್ತೆ ಚಿತ್ರೀಕರಿಸಲೇಬೇಕಾಗಿ ಬಂತು! ಎರಡನೆಯ ಬಾರಿಯ ಚಿತ್ರೀಕರಣದಲ್ಲಿ ನನ್ನ ನಾಚಿಕೆ—ಮುಜುಗರ—ಸಂಕೋಚಗಳು ಅಷ್ಟಾಗಿ ಕಾಡಲಿಲ್ಲವೆನ್ನಿ… ಒಮ್ಮೆ ಅದೇ ದೃಶ್ಯದಲ್ಲಿ ಅಭಿನಯಿಸಿ ರೂಢಿಯಾಗಿತ್ತಲ್ಲಾ! ನಾಲ್ಕು ದಶಕಗಳ ಹಿಂದೆ ಹ್ಯಾಮ್ಲೆಟ್ ಆಗಿ ಅಭಿನಯಿಸಿದ್ದರೂ ಈಗಲೂ ಯಾವಾಗಲೂ ನನ್ನನ್ನು ಮತ್ತೆ ಮತ್ತೆ ಕಾಡುವ ಆ ನಾಟಕದ ಒಂದು ಸಂಭಾಷಣೆ: “ಅಭ್ಯಾಸ ಪ್ರಕೃತಿಯನ್ನೇ ಬದಲಿಸುತ್ತದೆ!”

ಈ ಕಾಲಮಾನದಲ್ಲೇ ಸಮಾನಾಂತರವಾಗಿ ಘಟಿಸಿದ ಇನ್ನೆರಡು ಸಂಗತಿಗಳನ್ನು ನೆನಪಿಸಿಕೊಳ್ಳುತ್ತೇನೆ.

‘ಹೆಗ್ಗಡಿತಿ’ ಚಿತ್ರೀಕರಣದ ನಡುವೆ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಗೆಳೆಯ ಶಿವರುದ್ರಯ್ಯನವರ ಭೇಟಿಯಾಯಿತು. ಆ ವೇಳೆಗಾಗಲೇ ಅತ್ಯುತ್ತಮ ಸ್ಥಿರಚಿತ್ರಗ್ರಾಹಕರೆಂದು ಖ್ಯಾತರಾಗಿದ್ದ ಕೆ. ಶಿವರುದ್ರಯ್ಯನವರು ತಮ್ಮ ಪ್ರಪ್ರಥಮ ಚಲನಚಿತ್ರವನ್ನು ನಿರ್ದೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ವಿಜಯಶ್ರೀ ಅವರ “ಚೈತ್ರದ ಚಿಗುರು” ಕಾದಂಬರಿಯನ್ನು ಆಧರಿಸಿ ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದರು ಶಿವರುದ್ರಯ್ಯ. ಅದರಲ್ಲಿ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುವಿರಾ ಎಂದು ಶಿವರುದ್ರಯ್ಯ ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡೆ. ಇಡೀ ಚಿತ್ರದ ಚಿತ್ರೀಕರಣ ತೀರ್ಥಹಳ್ಳಿಯಲ್ಲಿ ನಡೆಯುತ್ತದೆ ಎಂದವರು ಹೇಳಿದಾಗ ಮತ್ತೂ ಸಂತೋಷವಾಯಿತು! ‘ಕಾನೂರು ಹೆಗ್ಗಡಿತಿ’ಯ ಚಿತ್ರೀಕರಣವೂ ತೀರ್ಥಹಳ್ಳಿಯ ಆಜುಬಾಜಿನಲ್ಲೇ ನಡೆಯುತ್ತಿದ್ದುದರಿಂದ ಎರಡೂ ಚಿತ್ರಗಳ ನಡುವೆ ಸಮಯದ ಹೊಂದಾಣಿಕೆಯೂ ಸುಲಭವಾಗುತ್ತದೆ ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಕುಮಾರ್ ಬಂಗಾರಪ್ಪ, ಕಾವೇರಿ, ಶಿಲ್ಪಾ, ದತ್ತಣ್ಣ, ನಿಖಿಲ್ ಮಂಜು, ಚಿತ್ರಾ ಶೆಣೈ, ಕರಿಬಸವಯ್ಯ ಮುಂತಾದವರು ಇತರ ಮುಖ್ಯ ಪಾತ್ರಗಳನ್ನು ನಿರ್ವಹಿಸುವವರಿದ್ದರು. ಈ ಚಿತ್ರದ ಇತರ ಮುಖ್ಯ ಅಂಶಗಳೆಂದರೆ ಕೋಟಗಾನಹಳ್ಳಿ ರಾಮಯ್ಯ ಅವರ ಸಂಭಾಷಣೆ; ಆರ್.ಮಂಜುನಾಥ್ ಅವರ ಛಾಯಾಗ್ರಹಣ ಹಾಗೂ ವಿ.ಮನೋಹರ್ ಅವರ ಸಂಗೀತ.

ಕೆ.ಶಿವರುದ್ರಯ್ಯ ಇಂದು ಪ್ರತಿಭಾವಂತ ಪ್ರಯೋಗಶೀಲ ನಿರ್ದೇಶಕರ ಮುಂಚೂಣಿಯಲ್ಲಿರುವಂತಹ ನಿರ್ದೇಶಕ. ಬೆಳ್ಳಿಕಿರಣ, ಮಾರಿಕೊಂಡವರು, ದಾಟು (ಖ್ಯಾತ ಕಥೆಗಾರರಾದ ಅಶ್ವತ್ಥ ಅವರ ಕಾದಂಬರಿ ಆಧಾರಿತ), ಮೂಡಲ ಸೀಮೆಯಲಿ, ಅಮಾಸ, ಭಗವತಿ ಕಾಡು, ಮೇಘವರ್ಷಿಣಿ, ರಾಮನ ಸವಾರಿ ಮೊದಲಾದುವು ಇವರು ನಿರ್ದೇಶಿಸಿರುವ ಚಿತ್ರಗಳು.ಚಾರ್ಲ್ಸ್ ಡಿಕನ್ಸ್ ನ ಕಥೆಯೊಂದನ್ನು ಆಧರಿಸಿ ಇವರು ಮಾಡಿರುವ ಇತ್ತೀಚಿನ ಚಿತ್ರವೆಂದರೆ ಸಿಗ್ನಲ್ ಮ್ಯಾನ್. ದಶಕಗಳ ಹಿಂದೆ ಇದೇ ಕಥೆಯನ್ನು ಆಧರಿಸಿ ಜಿ.ವಿ.ಶಿವಾನಂದ್ ಅವರು ‘ಭ್ರಮೆ’ ಎಂಬ ನಾಟಕವನ್ನು ಮಾಡಿದ್ದರೆಂದು ನನ್ನ ನೆನಪು. ಈವರೆಗೆ ಹನ್ನೊಂದು ಚಿತ್ರಗಳನ್ನು ನಿರ್ದೇಶಿಸಿರುವ ಶಿವರುದ್ರಯ್ಯನವರು ಎರಡು ಸ್ವರ್ಣ ಪದಕಗಳನ್ನೂ ನಾಲ್ಕು ರಜತ ಪದಕಗಳನ್ನೂ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ತಮ್ಮ ಚಿತ್ರಗಳಿಗಾಗಿ ಪಡೆದು ಕನ್ನಡದ ಗರಿಮೆಯನ್ನು ಹೆಚ್ಚಿಸಿದ್ದಾರೆ. ವಿಶೇಷವೆಂದರೆ ನಾನು ಅಭಿನಯಿಸಿದ ಇವರ ಪ್ರಪ್ರಥಮ ಚಿತ್ರ “ಚೈತ್ರದ ಚಿಗುರು” 1999 ರ ಶ್ರೇಷ್ಠ ಕನ್ನಡ ಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನು ಗಳಿಸಿಕೊಂಡಿತು!

ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಒಂದು ಸುಂದರ ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡು ಆ ಕುಟುಂಬದ ಸದಸ್ಯರ ಸಂಬಂಧಗಳ—ಪ್ರೀತಿ—ಸಂಘರ್ಷಗಳ ಸುತ್ತ ನವುರಾಗಿ ಹೆಣೆಯಲಾದ ಕಥೆ ‘ಚೈತ್ರದ ಚಿಗುರು’. ಶಿವರುದ್ರಯ್ಯನವರು ತಮ್ಮ ಮೊದಲ ಚಿತ್ರಕ್ಕೆ ಬಹಳ ಮುತುವರ್ಜಿಯಿಂದಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಎಲ್ಲ ಕೆಲಸಗಳೂ ಹಾಗೆ ಗೆರೆ ಕೊರೆದ ಹಾಗೆ ನಮ್ಮ ಚಿತ್ರರಂಗದಲ್ಲಿ ಎಲ್ಲಾದರೂ ನಡೆಯುವುದುಂಟೇ! ಚಿತ್ರೀಕರಣ ಪ್ರಾರಂಭವಾದ ಒಂದೆರಡು ದಿನಗಳಲ್ಲೇ ನಮ್ಮ ಮಗಳ ಪಾತ್ರ ನಿರ್ವಹಿಸುತ್ತಿದ್ದ ಚೈತಾಲಿ ಎಂಬ ಕಲಾವಿದೆಗೆ, ‘ತನ್ನ ಪಾತ್ರಕ್ಕಿಂತ ಕಾವೇರಿ (ಕೇರಳದ ನಟಿ) ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆಯೆನ್ನಿಸತೊಡಗಿ ತಗಾದೆ ಶುರು ಮಾಡಿದಳು! ಶಿವರುದ್ರಯ್ಯನವರು ಎಷ್ಟೇ ಸಮಜಾಯಿಷಿ ನೀಡಿದರೂ ಹುಡುಗಿ ಕೇಳಲೇ ಇಲ್ಲ! ‘ನಾನು ಈ ಪಾತ್ರ ಮಾಡುವುದಿಲ್ಲ.. ನನ್ನನ್ನು ಕಳಿಸಿಬಿಡಿ’ ಎಂದು ರಗಳೆ ಶುರುಮಾಡಿದಳು. ವಿಧಿಯಿಲ್ಲದೆ ಅವಳನ್ನು ಕಳಿಸಿಕೊಟ್ಟ ಶಿವರುದ್ರಯ್ಯನವರು ಶಿಲ್ಪಾ ಎಂಬ ಕಲಾವಿದೆಯನ್ನು ಆ ಪಾತ್ರ ನಿರ್ವಹಿಸಲು ಕರೆಸಿ ಚಿತ್ರೀಕರಣ ಮುಂದುವರಿಸಿದರು. ಅಲ್ಲೂ ಮತ್ತೆ ಮರು ಚಿತ್ರೀಕರಣದ ಹಾವಳಿ! ಸಧ್ಯ, ಸಮಸ್ಯೆ ಮಾತ್ರ ಬೇರೆಯದಾಗಿತ್ತು!

ಎರಡೂ ಚಿತ್ರಗಳ ಚಿತ್ರೀಕರಣವನ್ನು ಮುಂಚಿತವಾಗಿಯೇ ಯೋಜಿಸಿಕೊಂಡು ಎಲ್ಲೂ ಪರಸ್ಪರ ಘರ್ಷಣೆಯಾಗದಂತೆ ನಿಭಾಯಿಸುತ್ತಿದ್ದರೂ ಒಮ್ಮೆ ಎಡವಟ್ಟಾಗಿಯೇ ಹೋಯಿತು. ನಾನು ‘ಚೈತ್ರದ ಚಿಗುರು’ ಚಿತ್ರದ ಚಿತ್ರೀಕರಣಕ್ಕಾಗಿ ಎರಡು ದಿನಗಳನ್ನು ನೀಡಿ ಮುಂಚಿತವಾಗಿಯೇ ‘ಹೆಗ್ಗಡಿತಿ’ ತಂಡದ ಮ್ಯಾನೇಜರ್ ಅವರಿಗೆ ‘ಈ ಎರಡು ದಿನಗಳು ನಾನು ಲಭ್ಯವಿಲ್ಲ’ ಎಂದು ತಿಳಿಸಿದ್ದರೂ ಅವರು ಅದನ್ನು ಸಹಾಯಕ ನಿರ್ದೇಶಕರಿಗೆ ತಿಳಿಸಲು ಮರೆತುಬಿಟ್ಟರು. ನನ್ನ ಅಲಭ್ಯತೆಯ ಅರಿವಿಲ್ಲದಿದ್ದ ಸಹಾಯಕ ನಿರ್ದೇಶಕರು ಅದೇ ದಿನದಂದು ‘ಹೆಗ್ಗಡಿತಿ’ ಚಿತ್ರದ ನನ್ನ ಒಂದು ಮುಖ್ಯ ದೃಶ್ಯದ ಚಿತ್ರೀಕರಣವನ್ನೂ ನಿಗದಿ ಮಾಡಿಕೊಂಡುಬಿಟ್ಟರು! ಇತರ ಕಲಾವಿದರ ಡೇಟ್ಸ್ ಕಾರಣವಾಗಿ ಅಂದೇ ಚಿತ್ರೀಕರಣ ಮಾಡಿ ಮುಗಿಸುವುದು ಶಿವರುದ್ರಯ್ಯನವರಿಗೂ ಅನಿವಾರ್ಯವಾಗಿತ್ತು. ವಿಷಯ ಗಿರೀಶ್ ಅವರ ತನಕವೂ ಹೋಗಿ ಕೊಂಚ ಇರುಸು ಮುರುಸಿಗೆ ಕಾರಣವಾಯಿತು. ಎಷ್ಟೇ ಮುತುವರ್ಜಿ ವಹಿಸಿದ್ದರೂ ಹೀಗೆ ಅಡಚಣೆಗಳು ಎದುರಾಗಿಬಿಡುತ್ತವಲ್ಲಾ ಎಂದು ನಾನು ಚಿಂತಿಸುತ್ತಾ ಹೋಟಲ್ ರೂಂನಲ್ಲಿ ಕುಳಿತಿದ್ದಾಗಲೇ ಶಿವರುದ್ರಯ್ಯನವರು ಬಂದು, “ಚಿಂತೆ ಮಾಡಬೇಡಿ ಪ್ರಭು ಸರ್.. ನೀವು ‘ಹೆಗ್ಗಡಿತಿ’ ಶೂಟಿಂಗ್ ಮುಗಿಸಿಕೊಂಡು ಬನ್ನಿ.. ನಾನು ರಾತ್ರಿ ಕಾಲ್ ಶೀಟ್ ಹಾಕ್ತೀನಿ.. ಹೇಗೂ ಒಳಾಂಗಣ ದೃಶ್ಯ ನಮ್ಮದು.. ಹಾಗಾಗಿ ಯೋಚನೆ ಇಲ್ಲ.. ಶೂಟಿಂಗ್ ಮುಗಿದ ಮೇಲೆ ಕಾರ್ ನಲ್ಲಿ ನಮ್ಮ ಕಲಾವಿದರನ್ನ ಬೆಂಗಳೂರಿಗೆ ಕಳಿಸೋ ಏರ್ಪಾಟು ಮಾಡ್ತೀನಿ” ಎಂದು ಸಮಸ್ಯೆಗೆ ಪರಿಹಾರ ಒದಗಿಸಿದ ಮೇಲೆ ನೆಮ್ಮದಿಯಾಯಿತು.

ಕಾಡಿನಲ್ಲಿ ‘ಹೆಗ್ಗಡಿತಿ’ಯ ಹೊರಾಂಗಣ ದೃಶ್ಯದ ಚಿತ್ರೀಕರಣ ಮುಗಿಸಿಕೊಂಡು ನಲವತ್ತು ಕಿ ಮೀ ಪ್ರಯಾಣ ಮಾಡಿಕೊಂಡು ಬಂದು ಚೈತ್ರದ ಚಿಗುರು ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡು ದೃಶ್ಯ ಮುಗಿಸಿದಾಗ ನಡುರಾತ್ರಿ ಮೂರು ಗಂಟೆ! ಇಂಥದೇ ಸಮಸ್ಯೆ ಮತ್ತೂ ಒಂದು ದಿನ ಎದುರಾಯಿತಾದರೂ ಅಂದು ‘ಹೆಗ್ಗಡಿತಿ’ ತಂಡದವರು ನನಗೆ ಮುಂಚಿತವಾಗಿ ತಿಳಿಸಿರಲಿಲ್ಲವಾಗಿ ನಾನು ಚೈತ್ರದ ಚಿಗುರು ಚಿತ್ರದ ಶೂಟಿಂಗ್ ಗೆ ಹೊರಟುಹೋದೆ. ಗಿರೀಶ್ ಅವರು ತುಂಬಾ ಬೇಸರಿಸಿಕೊಂಡು ಎಲ್ಲರ ಮೇಲೆ ರೇಗಾಡಿದರೆಂದು ನಂತರ ತಿಳಿದುಬಂತು.ಸಹಾಯಕ ನಿರ್ದೇಶಕ ಸಾವಂತ್ ಅವರಿಗೇ ನನ್ನ ದಿರಿಸನ್ನು ಹಾಕಿ ಸಾಧ್ಯವಾದಷ್ಟೂ ದೂರ ಚಿತ್ರಿಕೆಗಳನ್ನೇ ತೆಗೆದುಕೊಂಡು ಕಷ್ಟಪಟ್ಟು ಚಿತ್ರೀಕರಣ ಮುಗಿಸಿದರಂತೆ.

ಅಂದು ರಾತ್ರಿ ಗಿರೀಶ್ ಅವರನ್ನು ಭೇಟಿಯಾಗಿ ಮಾತಾಡಿಕೊಂಡು ಬರಲು ಅವರ ಕೋಣೆಗೇ ಹೋದೆ. ಮುಂಚಿತವಾಗಿ ನನಗೆ ಹೇಳಿರಲಿಲ್ಲವಾಗಿ ನಾನು ಆ ದಿನಾಂಕವನ್ನು ಚೈತ್ರದ ಚಿಗುರು ಚಿತ್ರಕ್ಕೆ ಕೊಟ್ಟಿದ್ದಾಗಿ ಮನವರಿಕೆ ಮಾಡಿಕೊಟ್ಟೆ. ಗಿರೀಶ್ ಸಮಾಧಾನ ಚಿತ್ತರಾಗಿಯೇ ಹೇಳಿದರು: “ನನಗೆ ಅರ್ಥವಾಗ್ತದ ಶ್ರೀನಿವಾಸ್.. ಆದ್ರ ನಿಮ್ಮ ಈ ಸೇರೆಗಾರನ ಪಾತ್ರ ಇದೆಯಲ್ಲಾ, ಅಂವ ಒಂದು ರೀತಿ omnipresent… ಎಲ್ಲೆಲ್ಲೂ ಇರ್ತಾನ.. ಸರ್ವವ್ಯಾಪಿ ಇದ್ಹಾಂಗ! ಯಾವಾಗ ಯಾವ ದೃಶ್ಯಕ್ಕೆ ಅಂವ ಬೇಕಾಗ್ತಾನ ಹೇಳಾಕ ಬರೂದಿಲ್ಲ! ಅದಕ್ಕೇ ನನ್ನ ಒಂದು ಸಲಹೆ ಏನಂದ್ರ ನಮ್ಮ ಶೂಟಿಂಗ್ ಮುಗಿಯೋ ತನಾ ಬ್ಯಾರೆ ಯಾರಿಗೂ ಡೇಟ್ಸ್ ಕೊಡಬ್ಯಾಡ್ರಿ.. ಹಿಂದಿ ಸೀರಿಯಲ್ ಶೂಟಿಂಗ್ ಅನ್ನೂ ಜೊತೀಲೇ ಮಾಡ್ತಿರೋದ್ರಿಂದ ಯಾರು ಯಾವಾಗ ಬೇಕಾಗ್ತಾರಂತ ಹೇಳೋದು ಕಷ್ಟ.. ಹಂಗಾಗಿ ನಿಮ್ಮ ಸಮಯ ಪೂರ್ತಿ ನಮಗs ಇರಲಿ.. we will try to compensate it later” ಎಂದುಬಿಟ್ಟರು. ಆ ಮಾತು ಕೇಳಿ ತುಂಬಾ ನಾಚಿಕೆಯಾಗಿಹೋಯಿತು. ಕೇವಲ ಹಣಕ್ಕಾಗಿ ನಾನು ಕೆಲಸ ಮಾಡುತ್ತೇನೆಂದು ಗಿರೀಶ್ ಅಂಥವರು ಭಾವಿಸಿಬಿಟ್ಟರೆ ಅದಕ್ಕಿಂತ ದೊಡ್ಡ ಅವಮಾನ ಬೇರೆ ಉಂಟೇ? ನನ್ನ ಉದ್ದೇಶಗಳನ್ನೂ ಎದುರಾದ ಪ್ರಸಂಗಗಳನ್ನೂ ವಿವರಿಸಿದ ಮೇಲೆ ಅವರಿಗೂ ಸಮಾಧಾನವಾದಂತೆ ತೋರಿತು. ಪುಣ್ಯವಶಾತ್ ಆ ವೇಳೆಗೆ ಚೈತ್ರದ ಚಿಗುರು ಚಿತ್ರದ ಶೂಟಿಂಗ್ ಮುಗಿಯುತ್ತಲೇ ಬಂದದ್ದರಿಂದ ಮುಂದಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳೇನೂ ಎದುರಾಗಲಿಲ್ಲ.

ಕಾನೂರು ಹೆಗ್ಗಡಿತಿ ಚಿತ್ರ ಹಾಗೂ ಧಾರಾವಾಹಿಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಮೇಲೆ ಡಬ್ಬಿಂಗ್ ಪ್ರಕ್ರಿಯೆ ಆರಂಭವಾಯಿತು. ಸೇರೆಗಾರನ ಪಾತ್ರದ ಸಂಭಾಷಣಾ ಶೈಲಿ ಹಾಗೂ ಪ್ರಾದೇಶಿಕ ಸೊಗಡಿನ ಭಾಷೆಯ ನಿಖರತೆಯ ಬಗ್ಗೆ ವಿಶೇಷ ಗಮನ ಹರಿಸಿ ಸಾಧ್ಯವಾದಷ್ಟೂ ಅಧಿಕೃತತೆಯನ್ನು ತಂದುಕೊಡಲು ಪ್ರಯತ್ನಿಸಿ ಡಬ್ಬಿಂಗ್ ಮಾಡಿದೆ. ಧಾರಾವಾಹಿಯಲ್ಲಿಯೂ ಸಹಾ ನಾನೇ ಹಿಂದಿ ಸಂಭಾಷಣೆಗಳನ್ನು ಹೇಳಿ ಡಬ್ಬಿಂಗ್ ಮಾಡಿ ಮುಗಿಸಿದೆ. ದೆಹಲಿ ನಾಟಕ ಶಾಲೆಯ ದಿನಗಳಿಂದಲೆ ಹಿಂದಿ ನನಗೆ ಪರಿಚಿತ ಭಾಷೆಯಾಗಿದ್ದಲ್ಲದೆ ಅನೇಕ ಮುಖ್ಯ ಪಾತ್ರಗಳನ್ನು ಹಿಂದಿ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಬೇರೆ ಬೆನ್ನ ಹಿಂದಿತ್ತಲ್ಲಾ! ‘ಕಾನೂರು ಹೆಗ್ಗಡಿತಿ’ ಚಿತ್ರವೂ ಕೂಡಾ ಸಹೃದಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿ ಅನೇಕ ಪ್ರಶಸ್ತಿಗಳನ್ನೂ ತನ್ನ ಮುಡಿಗೇರಿಸಿಕೊಂಡಿತು. ತೀರ್ಥಹಳ್ಳಿಯಲ್ಲಿ ಒಂದೇ ಸಮಯದಲ್ಲಿ ನಾನು ಅಭಿನಯಿಸಿದ ‘ಚೈತ್ರದ ಚಿಗುರು’ ಹಾಗೂ ‘ಕಾನೂರು ಹೆಗ್ಗಡಿತಿ’—ಈ ಎರಡೂ ಚಿತ್ರಗಳು ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡದ್ದು ನನಗೆ ಹೆಮ್ಮೆಯ ಸಂಗತಿ. ವೈಯಕ್ತಿಕವಾಗಿ ನನಗಾವ ಪ್ರಶಸ್ತಿಯೂ ಬಾರದೇ ಹೋದರೂ ‘ಕಾನೂರು ಹೆಗ್ಗಡಿತಿ’ ಯಲ್ಲಿನ ನನ್ನ ಸೇರೆಗಾರನ ಪಾತ್ರನಿರ್ವಹಣೆ ಸಹೃದಯರ—ವಿಮರ್ಶಕರ ಅಪಾರ ಮೆಚ್ಚುಗೆ—ಪ್ರಶಂಸೆಗಳನ್ನು ಗಳಿಸಿಕೊಂಡಿತು ಎನ್ನುವುದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ???!

ಮರೆತಿದ್ದೆ: ಶೂಟಿಂಗ್ ಹಾಗೂ ಡಬ್ಬಿಂಗ್ ನ ಎಲ್ಲಾ ಕೆಲಸಗಳನ್ನೂ ಮುಗಿಸಿಕೊಟ್ಟು ನನ್ನ ಇತರ ಕೆಲಸಗಳತ್ತ ಗಮನ ಹರಿಸುತ್ತಿದ್ದಾಗಲೇ ಒಂದು ದಿನ ಗಿರೀಶ್ ರಿಂದ ಬುಲಾವ್ ಬಂದಿತು. ಮತ್ತಾವುದಾದರೂ ಹೊಸ ಚಿತ್ರವಿರಬಹುದೇ ಎಂಬ ಆಸೆ ಮನಸ್ಸಿನಲ್ಲಿ ಚಿಗುರೊಡೆದಿತ್ತು! ಗಿರೀಶ್ ಅವರ ಮನೆಗೆ ಹೋದಾಗ ಅಲ್ಲೊಂದು ದೊಡ್ಡ ಅಚ್ಚರಿ ನನಗಾಗಿ ಕಾದಿತ್ತು! ಗಿರೀಶ್ ಒಂದು ಲಕೋಟೆಯನ್ನು ನನ್ನ ಕೈಗಿತ್ತು,”ತೊಗೊಳ್ಳಿ ಶ್ರೀನಿವಾಸ್..ಇ ದು ನಿಮ್ಮ ಕೆಲಸಕ್ಕೆ ಸಂಭಾವನೆ” ಅಂದರು! ಆದರೆ ಆ ವೇಳೆಗಾಗಲೇ ನಿಗದಿಯಾಗಿದ್ದ ಹಣ ನನಗೆ ಸಂದಾಯವಾಗಿ ಯಾವುದೋ ಕಾಲವಾಗಿ ಹೋಗಿತ್ತು! ನಾನು,”ಸರ್ ಎಲ್ಲಾ ಕೊಟ್ಟಾಗಿದೆ..ಏನೂ ಬಾಕಿ ಉಳಿದಿಲ್ಲ ” ಎಂದೆ .”ಗೊತ್ತದ..ಆದ್ರ ನಾ ನಿಮ್ಮದು ಭಾಳ dates ತೊಗೊಂಡೀನಿ.. ನಾ ಮಾತಾಡಿದ್ದ ರೊಕ್ಕ ನಿಮ್ಮ ಕೆಲಸಕ್ಕ ಭಾಳ ಕಡಿಮೆ ಆತಂತ ನನಗನ್ನಿಸ್ತು.. ನೀವು ನನ್ನ ಸೇರೆಗಾರನ ಪಾತ್ರಕ್ಕೆ ಉಸಿರು ತುಂಬೀರಿ.. this is just a token of my appreciation..(ಏನನ್ನೋ ನೆನಪಿಸಿಕೊಂಡವರಂತೆ) ಹಾಂ..ಮತ್ತ compensation ಕೊಡಾಕ್ ಹತ್ತೀನಂತ ಭಾವಿಸಬ್ಯಾಡ್ರಿ” ಅಂದು ದೊಡ್ಡದಾಗಿ ನಕ್ಕರು.

ನನಗೆ ನಗು ಬರಲಿಲ್ಲ..ಬದಲಿಗೆ ಕಣ್ಣು ತುಂಬಿಬಂದಿತ್ತು! ಕೊಡುವುದನ್ನು ಕೊಡುವುದಕ್ಕೇ ಸತಾಯಿಸುತ್ತಾ ಬಹಳಷ್ಟು ಸಲ ಉಂಡೆನಾಮವನ್ನೇ ತಿಕ್ಕಿಬಿಡುವ ನಮ್ಮ ಚಿತ್ರರಂಗದ ಪ್ರಭೃತಿಗಳೆಲ್ಲಿ.. ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಪರಮ ಸಂತೋಷದಿಂದ.. ಪ್ರೀತಿಯಿಂದ ನೀಡುತ್ತಿರುವ ಈ ದೊಡ್ಡ ಮನಸ್ಸಿನ ನಿರ್ದೇಶಕರೆಲ್ಲಿ! ಅವರು ಕೊಟ್ಟ ಲಕೋಟೆಯಲ್ಲಿ ಇಪ್ಪತ್ತು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಇತ್ತು! ನಾನು ಕಂಡಂತೆ ಗಿರೀಶ್ ಭಾವನೆಗಳಿಗೆ ಸುಲಭಕ್ಕೆ ಪಕ್ಕಾಗುವವರಲ್ಲವಾದ್ದರಿಂದ ಅವರಿಗೆ ಕಾಣದಂತೆ ಕಣ್ಣೊರೆಸಿಕೊಂಡು ಧನ್ಯವಾದಗಳನ್ನರ್ಪಿಸಿ ಹೊರಬಂದೆ.

ಆ ವೇಳೆಯಲ್ಲಿಯೇ ನನ್ನ ಪಾಲಿಗೆ ಒದಗಿಬಂದ ಒಂದು ದೊಡ್ಡ ಅವಕಾಶವೆಂದರೆ “ಆಸರೆ” ಮೆಗಾ ಧಾರಾವಾಹಿಯ ನಿರ್ದೇಶನ. ಆಸರೆ ಧಾರಾವಾಹಿಯನ್ನು ಮಲ್ಟಿ ಛಾನಲ್ ಸಂಸ್ಥೆಯವರು ಉದಯ ಟಿ ವಿ ಗಾಗಿ ನಿರ್ಮಿಸುವವರಿದ್ದರು. ಆತ್ಮೀಯ ಮಿತ್ರ, ಆಕಾಶವಾಣಿಯ ಉದ್ಯೋಗಿ ಸಿ ಎನ್ ರಾಮಚಂದ್ರ ಕಥೆ—ಚಿತ್ರಕಥೆಯ ಹೊಣೆ ಹೊತ್ತುಕೊಂಡಿದ್ದ.

‘ಆಸರೆ’ ಮೆಗಾ ಧಾರಾವಾಹಿಯನ್ನು ನಿರ್ದೇಶಿಸಲು ಸಾಧ್ಯವೇ ಎಂದು ಗೆಳೆಯ ರಾಮಚಂದ್ರ ಕೇಳಿದಾಗ ನನ್ನ ಸಂತಸಕ್ಕೆ ಪಾರವೇ ಇಲ್ಲ. ಒಂದು ಮೆಗಾ ಧಾರಾವಾಹಿಯನ್ನು ನಿರ್ದೇಶಿಸುವುದೆಂದರೆ ಅದೇನು ಸಾಧಾರಣದ ಮಾತೇ!? ಕೂಡಲೇ ಕಾರ್ಯೋನ್ಮುಖನಾಗಿಯೇ ಬಿಟ್ಟೆ. ನಾಲ್ಕು ಹೆಣ್ಣುಮಕ್ಕಳ ಬದುಕಿನ ಸುತ್ತ, ಅವರ ಆಶೋತ್ತರಗಳ.. ಕನಸು-ಭ್ರಮೆ-ಭ್ರಮನಿರಸನಗಳ ಸುತ್ತ, ಅವರ ನೋವು ನಲಿವು ದುಗುಡ ದುಮ್ಮಾನಗಳ ಸುತ್ತ ಹೆಣೆದ ಕಥೆಯಾಗಿತ್ತು ‘ಆಸರೆ’.

ಮಲ್ಟಿ ಛಾನಲ್ ಸಂಸ್ಥೆಯವರೊಂದಿಗೆ ವ್ಯಾವಹಾರಿಕ ಮಾತುಕತೆ ಮುಗಿಸಿ ಕೆಲಸ ಪ್ರಾರಂಭಿಸಿದೆ. ಮೆಗಾ ಧಾರಾವಾಹಿಯಾದ್ದರಿಂದ, ವಾರಕ್ಕೆ ಐದು ದಿನಗಳು ಪ್ರಸಾರವಾಗಬೇಕಾದ್ದರಿಂದ ಬರವಣಿಗೆಯ ಜವಾಬ್ದಾರಿಯನ್ನು ರಾಮಚಂದ್ರ ಒಬ್ಬನೇ ಹೊತ್ತು ನಿಭಾಯಿಸುವುದು ಕಷ್ಟವೆನಿಸಿ ಇನ್ನಿಬ್ಬರು ಬರಹಗಾರರನ್ನು ಆಹ್ವಾನಿಸಲು ನಿರ್ಧರಿಸಿದೆವು. ಆಗ ನಮಗೆ ಹೊಳೆದ ಎರಡು ಮುಖ್ಯ ಹೆಸರುಗಳೆಂದರೆ ಎಂ ಎನ್ ವ್ಯಾಸರಾವ್ ಹಾಗೂ ನರಹಳ್ಳಿ ಬಾಲಸುಬ್ರಹ್ಮಣ್ಯ! ಇಬ್ಬರೂ ನಮ್ಮಿಬ್ಬರಿಗೂ ಆತ್ಮೀಯ ಗೆಳೆಯರೇ ಆದ್ದರಿಂದ ಹೊಂದಿಕೊಂಡು ಕೆಲಸ ಮಾಡುವುದು ಸುಲಭವಷ್ಟೇ ಅಲ್ಲ—ನಮ್ಮ ಧಾರಾವಾಹಿಗೆ ಅಪರೂಪದ ಒಂದು ಸಾಹಿತ್ಯಿಕ ಸ್ಪರ್ಶ ನೀಡುವುದು ಸಾಧ್ಯವಾಗುತ್ತದೆ ಅನ್ನಿಸಿ ಮನಸ್ಸು ಮುದಗೊಂಡಿತು. ಕವಿ—ಕಥೆಗಾರನಾಗಿ ಅದಾಗಲೇ ವ್ಯಾಸರಾವ್ ಬಹಳ ದೊಡ್ಡ ಹೆಸರು ಗಳಿಸಿದ್ದರೆ ಗೆಳೆಯ ನರಹಳ್ಳಿ ಬಾಲು ಕನ್ನಡದ ಸುವಿಖ್ಯಾತ ವಿಮರ್ಶಕನಾಗಿ ರೂಪುಗೊಂಡಿದ್ದ. ಅವರಿಬ್ಬರೂ ನಮ್ಮ ಜೊತೆಗಿರಲು,ನಮ್ಮ ಧಾರಾವಾಹಿಗೆ ಬರೆದುಕೊಡಲು ಸಂತೋಷದಿಂದ ಒಪ್ಪಿಕೊಂಡರು. ಶ್ರೀದೇವಿ, ಮರೀನಾ ತಾರಾ, ಮಾಧುರಿ ಹಾಗೂ ಸಂಗೀತಾ ಧಾರಾವಾಹಿಯ ನಾಲ್ಕು ಕೇಂದ್ರ ಪಾತ್ರಗಳನ್ನು ನಿರ್ವಹಿಸಲು ಆಯ್ಕೆಯಾದರೆ ಆತ್ಮೀಯ ರಂಗಭೂಮಿಯ ಗೆಳೆಯ ಶ್ರೀಧರ್ ಅಲಿಯಾಸ್ ಚಿದು, ಖ್ಯಾತ ಭರತನಾಟ್ಯ ಕಲಾವಿದ ಸಂಜಯ್ ಶಾಂತಾರಾಂ, ಭಾರ್ಗವಿ ನಾರಾಯಣ್ , ಶ್ರೀನಿವಾಸ ಮೇಷ್ಟ್ರು ಇತರ ಮುಖ್ಯ ಪಾತ್ರಗಳಿಗೆ ಆಯ್ಕೆಯಾದರು. ನಾನೂ ಒಂದು ಮುಖ್ಯ ಭೂಮಿಕೆಯನ್ನು ನಿರ್ವಹಿಸುವವನಿದ್ದೆ.

‘ಜನನಿ’ ನಾನು ಅಭಿನಯಿಸಿದ ಮೊದಲ. ದೈನಂದಿನ ಧಾರಾವಾಹಿಯಾದರೆ ನಾನು ನಿರ್ದೇಶಿಸಿದ ಮೊಟ್ಟಮೊದಲ ದೈನಂದಿನ ಧಾರಾವಾಹಿ—”ಆಸರೆ”.

‍ಲೇಖಕರು avadhi

September 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: