ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ಭೀಕರ ದುರಂತವೊಂದು ಘಟಿಸಿಯೇ ಬಿಟ್ಟಿತು!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

94

ಗುಲ್ಬರ್ಗಾ.

ನಾನು ಗುಲ್ಬರ್ಗಾದಲ್ಲಿದ್ದದ್ದು 1993—95ರ ನಡುವಿನ ಸಮಯದಲ್ಲಿ. ನಾನು ಅಲ್ಲಿಗೆ ಹೋಗುವ ಹಿಂದಿನ ವರ್ಷ ಅಲ್ಲಿ ಕುಡಿಯುವ ನೀರಿನ ಭಾರೀ ಸಮಸ್ಯೆಯಾಗಿ ಜನ ಹನಿ ನೀರಿಗೂ ಪರದಾಡುವಂತಾಗಿತ್ತು. ಆಗಲೇ ಬೇರೆ ಬೇರೆ ಊರುಗಳಿಂದ ರೈಲಿನಲ್ಲಿ ನೀರನ್ನು ಗುಲ್ಬರ್ಗಾಗೆ ಸಾಗಿಸಿ ಸ್ವಲ್ಪವಾದರೂ ನೀರಿನ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನ ಮಾಡಲಾಗಿತ್ತು. ರಂಜನಿ—ರಾಧಿಕಾರನ್ನು ಗುಲ್ಬರ್ಗಾಗೆ ಕರೆದುಕೊಂಡು ಹೊರಟ ಸಮಯದಲ್ಲಿ ಇದೆಲ್ಲಾ ವಿಚಾರಗಳೂ ನನ್ನನ್ನು ಬಾಧಿಸುತ್ತಿದ್ದವು. ಒಂದು ವೇಳೆ ಈ ಬಾರಿಯೂ ಮಳೆ ಬಾರದೇ ಕುಡಿಯುವ ನೀರಿಗೇ ಸಮಸ್ಯೆಯಾಗಿಬಿಟ್ಟರೆ ಅಲ್ಲಿ ಜೀವನ ಮಾಡುವುದಾದರೂ ಹೇಗೆ? ಅವರನ್ನು ಕರೆದುಕೊಂಡು ಬಂದ ನಿರ್ಧಾರವೇ ತಪ್ಪಾಗಿಹೋಯಿತೇ? ಮತ್ತಷ್ಟು ದಿನ ನಾನೇ ಇಲ್ಲಿಂದಲ್ಲಿಗೆ ಓಡಾಡಿಕೊಂಡು ಮರು ವರ್ಗಾವಣೆಗೆ ಯತ್ನಿಸಬಹುದಿತ್ತೇನೋ… ಎಂಬಂತಹ ವಿಚಾರಗಳು ಸದಾ ನನ್ನನ್ನು ಕೊರೆಯುತ್ತಿದ್ದವು. ಅವೆಲ್ಲ ಪ್ರಶ್ನೆಗಳಿಗೆ ಪರಿಹಾರ ರೂಪದ ಉತ್ತರವೆಂಬಂತೆ ನಾವು ಹೋದ ಕೆಲವೇ ದಿನಗಳಲ್ಲಿ ಗುಲ್ಬರ್ಗಾದಲ್ಲಿ ಚೆನ್ನಾಗಿ ಮಳೆ ಸುರಿಯಲು ಪ್ರಾರಂಭವಾಗಿ ನಾವು ನೆಮ್ಮದಿಯಿಂದ ಉಸಿರಾಡುವಂತಾಯಿತು! ಅಲ್ಲಿನ ಪರಿಚಿತರೆಲ್ಲಾ, “ಬೆಂಗಳೂರಿಂದ ಬರ್ತಾ ಸಾಹೇಬರು ಮಳೀನೂ ತಂದಾರ ನೋಡ್ರಿ!” ಎಂದು ಮೆಚ್ಚಿ ನುಡಿದಾಗ ನಾನು ಆಧುನಿಕ ಋಷ್ಯಶೃಂಗನಂತೆ ಬೀಗಿದ್ದೂ ಆಯಿತು!

ಆ ವೇಳೆಯಲ್ಲೇ ಖಾನ್ ಸಾಹೇಬರು ಬಂದು ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿನ ಸ್ಥಿತಿಗತಿಗಳನ್ನು ನೋಡಿದ ಅವರಿಗೆ ಅಲ್ಲಿ ಕಾರ್ಯಕ್ರಮ ನಿರ್ಮಾಣ ಕಾರ್ಯ ಆರಂಭವಾಗುವುದು ಸಾಕಷ್ಟು ದೂರದ ಮಾತು ಎಂಬುದು ಮನದಟ್ಟಾಗಿ ಹೋಯಿತು! “ಯಹಾಂ ತೋ ಕುಛ್ ನಹೀ ಹೈ! ಮೈ ಕ್ಯಾ ಕರೂ ಯಹಾಂ!” ಎಂದು ಬಂದ ಮರುದಿನದಿಂದಲೇ ಗೊಣಗುತ್ತಾ ಬೇರೆಡೆಗೆ ವರ್ಗ ಮಾಡಿಸಿಕೊಳ್ಳುವ ಕೆಲಸ ಆರಂಭಿಸಿಯೇಬಿಟ್ಟರು! ಅಕ್ಷರಶಃ ಏನೆಂದರೆ ಏನೂ ಕೆಲಸವಿಲ್ಲದ್ದರಿಂದ ಬೆಳಿಗ್ಗೆ ಒಮ್ಮೆ ಹೋಗಿ ಹಾಜರಾತಿ ಹಾಕಿ ಮುಖ ತೋರಿಸಿ ಸಮೀಪದಲ್ಲಿದ್ದ ಕ್ಯಾಂಟೀನಿನಲ್ಲಿ ಮಿರ್ಚಿ ಬೋಂಡಾ ತಿಂದು ಅದ್ರಕ್ ಚಹಾ ಕುಡಿದು ಮನೆಗೆ ತೆರಳುತ್ತಿದ್ದೆ! ಗುಲ್ಬರ್ಗಾಗೆ ಹೊರಡುವ ವೇಳೆಗಾಗಲೇ ನಾನು ನನ್ನ ಬೈಕ್ ಮಾರಿಬಿಟ್ಟಿದ್ದೆ. ಗುಲ್ಬರ್ಗಾದಲ್ಲಿ ಓಡಾಟಕ್ಕೆ ಅನುಕೂಲವಾಗಲೆಂದು ವಿಜಯಕ್ಕನ ಮಗಳು ಪ್ರಭೆಯ ಒಂದು ಹಳೆಯ ಲೂನಾವನ್ನು ತಂದಿಟ್ಟುಕೊಂಡಿದ್ದೆ. ರಂಜನಿ—ರಾಧಿಕಾರನ್ನು ಅದೇ ಲೂನಾದ ಮೇಲೆ ಕೂರಿಸಿಕೊಂಡು ಗುಲ್ಬರ್ಗಾದಲ್ಲೆಲ್ಲಾ ಸುತ್ತಿಸಿದ್ದೇ ಸುತ್ತಿಸಿದ್ದು! ನಾವು ಅಲ್ಲಿಗೆ ಹೋದ ಸ್ವಲ್ಪ ದಿನಗಳಲ್ಲೇ ಸಾಕಷ್ಟು ಜನರ ಪರಿಚಯವಾಗಿ ಕೆಲ ದಿನಗಳಲ್ಲೇ ಅವರು ನಮ್ಮ ಆತ್ಮೀಯ ಬಳಗದವರೇ ಆಗಿಬಿಟ್ಟರು. ಆಕಾಶವಾಣಿಯ ಉಮೇಶ್ ಹಾಗೂ ಶಿವಲಿಂಗಯ್ಯ, ವೈಶ್ಯ ಬ್ಯಾಂಕ್ ಉದ್ಯೋಗಿಯಾಗಿದ್ದ ಸುರೇಶ್—ಜಾನಕಿ ದಂಪತಿಗಳು, ಆಕಾಶವಾಣಿಯಲ್ಲೇ ಸಂಗೀತ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ರಾಜೀವ್—ಸರಳಾ ದಂಪತಿಗಳು, ನಮ್ಮ ಹತ್ತಿರದ ಸಂಬಂಧಿಗಳೇ ಆದ ಗುಂಡಣ್ಣ ಹಾಗೂ ನಾಗರಾಜ್ ರ ಕುಟುಂಬಗಳು, ಆತ್ಮೀಯ ಗೆಳೆಯ ಮೋಹನರಾಮ್ ನ ಪತ್ನಿ ರತ್ನಾ ಅವರ ಸೋದರ ರಾಜಶೇಖರ, ರಂಗಕರ್ಮಿಗಳಾದ ಪ್ರಭಾಕರ ಸಾತ್ ಖೇಡ್—ಹೇಮಂತ್ ಮೊದಲಾದವರು, ನಮ್ಮ ಮನೆ ಮಾಲೀಕರಾದ ರಾಘವೇಂದ್ರ ಕಲ್ಲೂರ್ ಕರ್ ಅವರ ಕುಟುಂಬ… ಹೀಗೆ ನಮ್ಮದೇ ಒಂದು ಬಳಗವೇ ಸೃಷ್ಟಿಯಾಗಿ ಅಪರಿಚಿತ ಊರಿನಲ್ಲಿ ಆತ್ಮೀಯ ಒಡನಾಟ ದೊರೆತು ದಿನಗಳು ಎಣಿಕೆಗೇ ಸಿಗದಂತೆ ಉರುಳತೊಡಗಿದವು. ರಂಜನಿ—ರಾಧಿಕಾರಂತೂ ರಾಜೀವ್ ಅವರ ಪತ್ನಿ ಸರಳಾ ಅವರ ಬಳಿ ಕರ್ಣಾಟಕ ಸಂಗೀತ ಪಾಠಕ್ಕೂ ಸೇರಿಬಿಟ್ಟರು! ಎಲ್ಲಕ್ಕಿಂತ ಗುಲ್ಬರ್ಗಾಗೆ ಹೋದದ್ದರಿಂದ ಆದ ಬಹು ದೊಡ್ಡ ಪ್ರಯೋಜನವೆಂದರೆ ರಾಧಿಕಾಳನ್ನು ಅಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಮೊದಲನೇ ತರಗತಿಗೆ ಭರ್ತಿ ಮಾಡಿಸಿದ್ದು! ದೇಶದ ಎಲ್ಲೆಡೆಗಳಲ್ಲಿ ಕೇಂದ್ರೀಯ ವಿದ್ಯಾಲಯದ ಶಾಖೆಗಳಿವೆ.. ಹಾಗಾಗಿ ಯಾವಾಗ ಎಲ್ಲಿಗೇ ವರ್ಗವಾದರೂ ಮಗಳ ಶಿಕ್ಷಣದ ಕುರಿತಾಗಿ ಚಿಂತಿಸಬೇಕಾಗಿಲ್ಲ! ಮೇಲಾಗಿ ಕೇಂದ್ರೀಯ ವಿದ್ಯಾಲಯದ ಪಠ್ಯ ಹಾಗೂ ಬೋಧನಾ ಕ್ರಮಗಳು ಕೂಡಾ ಬಹು ಉನ್ನತ ಮಟ್ಟದವೇ ಆಗಿದ್ದು ನಮ್ಮ ಮತ್ತೂ ನೆಮ್ಮದಿಗೆ ಕಾರಣವಾಯಿತು.

ಆಗ ಗುಲ್ಬರ್ಗಾದಲ್ಲಿದ್ದದ್ದು ಮೂರೋ ನಾಲ್ಕೋ ಥಿಯೇಟರ್ ಗಳು. ಒಂದರಲ್ಲಿ ಕನ್ನಡ ಚಿತ್ರ, ಇನ್ನೊಂದರಲ್ಲಿ ಇಂಗ್ಲೀಷ್, ಮತ್ತೊಂದರಲ್ಲಿ ಹಿಂದಿಚಿತ್ರಗಳು ಪ್ರದರ್ಶಿತವಾಗುತ್ತಿದ್ದವು. ವಾರಕ್ಕೊಮ್ಮೆ ಹೊಸ ಚಿತ್ರದ ಬದಲಾವಣೆ. ಯಾವುದೇ ಥಿಯೇಟರ್ ನ ಯಾವ ಹೊಸ ಚಿತ್ರವನ್ನೂ ನಾವು ಬಿಟ್ಟದ್ದೇ ಇಲ್ಲ! ಬೇಸಗೆಯಲ್ಲಂತೂ ಮಾರುಕಟ್ಟೆ ಪ್ರದೇಶದಲ್ಲಿ ಸಾಲುಸಾಲಾಗಿ ಮೇಲೇಳುತ್ತಿದ್ದ ಕಬ್ಬಿನ ರಸದ ಅಂಗಡಿಗಳ ಮುಂದೆ ನಿಂತು ನಾಲ್ಕಾರು ಗ್ಲಾಸ್ ಹೀರುತ್ತಿದ್ದುದೊಂದು ರಸ ವೈಭವ!

ನಗರದ ಮಧ್ಯಭಾಗದಲ್ಲಿ ಒಂದು ಪುಟ್ಟ ಉದ್ಯಾನವಿತ್ತು—ಮಕ್ಕಳಿಗಾಗಿ. ಅಲ್ಲಿದ್ದ ಮರಿ ಮೃಗಾಲಯದಲ್ಲಿ ಒಂದಷ್ಟು ಪಕ್ಷಿಗಳು.. ಎರಡು ನರಿಗಳು ಹಾಗೂ ಇನ್ನೂ ಒಂದೆರಡು ಪ್ರಾಣಿಗಳು ಇದ್ದವು. ಆ ಉದ್ಯಾನವನವೆಂದರೆ ರಾಧಿಕಾಳ ಕಣ್ಣುಗಳು ಅರಳಿಬಿಡುತ್ತಿದ್ದವು! ವಾರಕ್ಕೊಮ್ಮೆಯಾದರೂ ತಪ್ಪದೇ ಅಲ್ಲಿಗೆ ಹೋಗಿ ಬರುತ್ತಿದ್ದೆವು.

ಅಲ್ಲಿದ್ದ ನಗರ ಕೇಂದ್ರ ಗ್ರಂಥಾಲಯದಿಂದ ಒಂದಷ್ಟು ಪುಸ್ತಕಗಳನ್ನು ತಂದು ಓದುವುದು, ಲೂನಾದಲ್ಲಿಯೇ ಹೋಗಿ ಸುತ್ತಮುತ್ತ ಇದ್ದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬರುವುದು, ಆಗಾಗ್ಗೆ ವಾರಾಂತ್ಯಗಳಲ್ಲಿ ಸುರೇಶ್, ರಾಜೀವ್, ಉಮೇಶ್—ಮೊದಲಾದ ಗೆಳೆಯರ ಮನೆಗಳಿಗೆ ಹೋಗಿ ಬರುವುದು, ಕೆಲವೊಮ್ಮೆ ನಮ್ಮ ಮನೆಯಲ್ಲಿ ಸಂತೋಷಕೂಟ..ಹೀಗೆ ಒಂದು ಪಿಕ್ ನಿಕ್ ಮಾದರಿಯಲ್ಲಿ ಗುಲ್ಬರ್ಗಾದಲ್ಲಿ ಸಮಯ ಕಳೆಯುತ್ತಿತ್ತು. ರಾಧಿಕಾಳಿಗೂ ಶಾಲೆ ತುಂಬಾ ಒಗ್ಗಿತ್ತು. ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆಯುತ್ತಿದ್ದಳು. ಒಮ್ಮೆಯಂತೂ ಯಾರ ನೆರವೂ ಇಲ್ಲದೆ ತಾನೇ ‘ಧಕ್ ಧಕ್ ಕರನೇ ಲಗಾ’ ಹಾಡಿಗೆ ನೃತ್ಯ ಸಂಯೋಜಿಸಿಕೊಂಡು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿಬಿಟ್ಟಳು! “ನಿಮ್ಮ ಮಗಳು ಅದ್ಭುತವಾಗಿ ನರ್ತಿಸಿದಳು. ಆದರೆ ಈ ಧಕ್ ಧಕ್ ಹಾಡಿಗಿಂತ ಯಾವುದಾದರೂ ಜನಪದ ಗೀತೆಗೆ ನೃತ್ಯ ಮಾಡಿದ್ದರೆ ಚಂದಿರುತ್ತಿತ್ತೇನೋ” ಎಂದು ರಾಧಿಕಾಳ ಕ್ಲಾಸ್ ಟೀಚರ್ ನಮಗೆ ಹೇಳಿದಾಗ ಕೊಂಚ ಪೆಚ್ಚಾದದ್ದೇನೋ ನಿಜ! ಏನೇ ಆದರೂ ಮುಂದೆ ರಾಧಿಕಾ ಪ್ರತಿಭಾವಂತ ನರ್ತಕಿಯಾಗಿ ರೂಪುಗೊಳ್ಳುವುದಕ್ಕೆ ಸ್ಫೂರ್ತಿಯ ಬೀಜಾಂಕುರವಾದದ್ದು ಈ ಧಕ್ ಧಕ್ ನೃತ್ಯದಲ್ಲಿಯೇ ಎಂದು ತೋರುತ್ತದೆ!

ಒಂದು ದಿನ ಗೆಳೆಯ ಉಮೇಶ್ ಮನೆಗೆ ಬಂದು, “ಆಕಾಶವಾಣಿಗೆ ಹೊಂದಿಕೆಯಾಗುವಂತಹ ಒಂದೆರಡು ನಾಟಕಗಳನ್ನೇಕೆ ನೀವು ಬರೆದುಕೊಡಬಾರದು?” ಎಂದು ಕೇಳಿದರು.ನಾನು ಎರಡು ಶೆರ್ಲಾಕ್ ಹೋಮ್ಸ್ ನ ಕಥೆಗಳನ್ನೇ ಧ್ವನಿ ಮಾಧ್ಯಮಕ್ಕೆ ಹೊಂದುವ ರೀತಿಯಲ್ಲಿ ರೂಪಾಂತರಿಸಿ ಕೊಟ್ಟೆ. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಉಮೇಶ್ ಅವರು ಬಹಳ ಸೊಗಸಾಗಿ ಅವನ್ನು ಆಕಾಶವಾಣಿ ಮಾಧ್ಯಮಕಕ್ಕೆ ಅಳವಡಿಸಿಕೊಂಡು ಸಿದ್ಧಪಡಿಸಿದರು.ಪ್ರಸಾರವಾದಾಗ ಆ ನಾಟಕಗಳು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡವು.ಮುಂದೆ ಅಲ್ಲಿನ ರಂಗತಂಡದವರು ಆ ನಾಟಕಗಳನ್ನು ರಂಗಭೂಮಿಗೂ ಅಳವಡಿಸಿಕೊಂಡು ಯಶಸ್ವಿಯಾಗಿ ಪ್ರದರ್ಶಿಸಿದರಂತೆ.

ಆಕಾಶವಾಣಿಯಲ್ಲೇ ಕೆಲಸ ಮಾಡುತ್ತಿದ್ದ ಶಿವಲಿಂಗಯ್ಯನವರಿಗೆ ಸಂಖ್ಯಾಶಾಸ್ತ್ರ—ಜ್ಯೋತಿಷ್ಯ ಶಾಸ್ರ್ತಗಳಲ್ಲಿ ವಿಪರೀತ ಆಸಕ್ತಿ.ಆ ಕುರಿತಾಗಿ ಸಾಕಷ್ಟು ಅಧ್ಯಯನ ಕೂಡಾ ಮಾಡುತ್ತಿದ್ದರು. ಒಂದು ದಿನ ಅವರ ಮನೆಗೆ ಹೋಗಿದ್ದಾಗ, “ಸರ್, ನಾನು ಒಂದು ಬೈಕ್ ತೊಗೊಳ್ಳೋಕೆ plan ಮಾಡ್ತೀದೀನಿ.. ನೀವೂ ಯಾಕೆ ತೊಗೋಬಾರದು? ಫ್ಯಾಮಿಲಿ ಜತೆ ಓಡಾಡೋಕೂ ಅನುಕೂಲ.” ಎಂದು ಹುಳ ಬಿಟ್ಟರು! ಯಾಕಾಗಬಾರದು ಅನ್ನಿಸಿತು! ಹುಮ್ನಾಬಾದ್ ರಸ್ತೆಯಲ್ಲಿದ್ದ ನಮ್ಮ ಆಫೀಸಿನ ಸನಿಹದಲ್ಲೇ ಹೀರೋ ಹೋಂಡಾ ಮಳಿಗೆ ಇತ್ತು.ಅಂದೇ ಹೋಗಿ ಔಪಚಾರಿಕತೆಗಳನ್ನೆಲ್ಲಾ ಮುಗಿಸಿಬಂದೆವು.ಒಂದು ವಾರದಲ್ಲಿ ಹೀರೋ ಹೋಂಡಾ ಬೈಕ್ ಮನೆಯ ಮುಂದೆ ನಿಂತಿತ್ತು!

ಈ ವೇಳೆಗಾಗಲೇ ಖಾನ್ ಸಾಹೇಬರು ಗೋವಾಗೆ ವರ್ಗಾವಣೆ ಮಾಡಿಸಿಕೊಂಡು ಹೊರಟುಹೋಗಿದ್ದರು. ಒಂದಷ್ಟು ದಿನಗಳಾದ ಮೇಲೆ ಅವರ ಜಾಗಕ್ಕೆ ಬಂದವರು ಬೆಂಗಳೂರು ಕೇಂದ್ರದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಡಾ॥ಶ್ರೀನಿವಾಸ ಕುಲಕರ್ಣಿ. ಖಾನ್ ಸಾಹೇಬರು ಒಂದೆರಡು ತಿಂಗಳು ವಾಸವಾಗಿದ್ದ ಮನೆಗೇ ವಾಸಕ್ಕೆ ಹೋಗಲು ಸಿದ್ಧರಾಗಿ ಬಂದಿದ್ದರು ಕುಲಕರ್ಣಿಯವರು.ಆದರೆ ಬಸ್ ನಿಂದಿಳಿದು ಸೀದಾ ಅಲ್ಲಿಗೆ ಹೋದವರಿಗೆ ಯಾಕೋ ಆ ವಾತಾವರಣ ಇಷ್ಟವಾಗಲಿಲ್ಲ. “ಒಲ್ಲೆ..ಇಲ್ಲಿ ಇರಾಕ ಆಗಬರಂಗಿಲ್ಲ ನನಗ” ಎಂದು ಪರದಾಡತೊಡಗಿದ ಅವರನ್ನು ಬೇರೆ ದಾರಿ ಕಾಣದೇ ಸೀದಾ ನಮ್ಮ ಮನೆಗೇ ಕರೆದುಕೊಂಡು ಹೋದೆ.”ಒಂದು ನಾಲ್ಕು ದಿನ ಇಲ್ಲಿರಿ.. ಅಷ್ಟರಲ್ಲಿ ಬೇರೆ ಒಳ್ಳೇ ಮನೆ ಹುಡುಕೋಣ” ಎಂದು ಅವರನ್ನು ಸಮಾಧಾನ ಪಡಿಸಿದೆ.ಆದರೆ ಹಾಗೆ ಅವರಿಗೆ ಮನೆ ಹುಡುಕಿಕೊಡುವುದು ಸುಲಭದ ಕೆಲಸವಲ್ಲ ಎಂಬುದು ನನಗೆ ಅರ್ಥವಾಗಲು ತಡವಾಗಲಿಲ್ಲ! 15—20 ದಿನಗಳ ಅವಧಿಯಲ್ಲಿ ಕುಲಕರ್ಣಿ ಸಾಹೇಬರು ಬದಲಿಸಿದ್ದು ಬರೋಬ್ಬರಿ ಐದು ಮನೆಗಳು! ಯಾವ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರೂ ಎರಡೇ ದಿನಕ್ಕೆ ಅವರ ತಕರಾರು ಶುರುವಾಗಿಬಿಡುತ್ತಿತ್ತು! ‘ಈ ಮನೇಲಿ ಸಂಡಾಸ್ ಮನೆ ಹೊರಗಡೆ ಅದ…ರಾತ್ರಿ ವೇಳೆ ತ್ರಾಸ ಆಗ್ತದ’…’ಈ ಮನೆ ಮುಂದನ ಮೋರಿ..ಕೆಟ್ಟ ವಾಸನಿ’…’ಈ ಮನ್ಯಾಗ ಭಾರೀ ಸೊಳ್ಳಿ’….ಹೀಗ ಒಂದಲ್ಲ ಒಂದು ಕಾರಣಕ್ಕೆ ಮನೆ ಖಾಲಿ ಮಾಡಿ ನಮ್ಮ ಮನೆಗೆ ಮರಳುವುದು.. ಮತ್ತೆ ಮನೆ ತಲಾಶ್.. ಹೀಗೇ ನಡೆದಿತ್ತು. ಕೊನೆಗೊಮ್ಮೆ ನಮ್ಮ ಮನೆಯ ರಸ್ತೆಯಲ್ಲಿಯೇ ಇದ್ದ ಬ್ಯಾಂಕ್ ಅಧಿಕಾರಿಯೊಬ್ಬರು ವರ್ಗವಾಗಿ ಹೋದ್ದರಿಂದ ಅವರ ಮನೆ ಖಾಲಿಯಾಗಿ ಅಲ್ಲಿಗೆ ನಮ್ಮ ಕುಲಕರ್ಣಿಯವರನ್ನು ಕರೆದುಕೊಂಡು ಹೋಗಿ,”ಇದಕ್ಕಿಂತ ಒಳ್ಳೇ ಮನೆ ಗುಲ್ಬರ್ಗಾದಲ್ಲಿ ಸಿಗೋದು ಕಷ್ಟ.. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ” ಎಂದು ವಿನಂತಿಸಿಕೊಂಡೆ. ಪುಣ್ಯ, ಮನೆ ಅವರಿಗೆ ಇಷ್ಟವಾಯಿತು! ಯಾವುದೇ ತಕರಾರಿಲ್ಲದೇ ಆ ಮನೆಯನ್ನು “ಭಾಳ ಛಲೋ ಅದ ರೀ” ಎಂದು ಮನಸಾರೆ ಮೆಚ್ಚಿಕೊಂಡದ್ದಷ್ಟೇ ಅಲ್ಲ,ಮೂರು—ನಾಲ್ಕು ದಿನಗಳಲ್ಲೇ ತಮ್ಮ ಹೆಂಡತಿ—ಮಕ್ಕಳನ್ನೂ ಕರೆಸಿಕೊಂಡುಬಿಟ್ಟರು!

ಕುಲಕರ್ಣಿಯವರು ಬಂದ ಮೇಲೆ ಚಿಕ್ಕ ಪುಟ್ಟದಾಗಿ ಕೆಲವು ಕಾರ್ಯಕ್ರಮಗಳನ್ನು ಸಿದ್ಧಪಡಿಸಲು ತೊಡಗಿದೆವು.ಮೊಟ್ಟಮೊದಲಿಗೆ ಯೋಜಿಸಿದ್ದು ಗುಲ್ಬರ್ಗಾ ನಗರವನ್ನು ಕುರಿತ ಸಾಕ್ಷ್ಯಚಿತ್ರ.ಬೆಂಗಳೂರಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಕ್ಯಾಮರಾಮನ್ ಶಂಕರ್ ಅವರೂ ಸಹಾ ಗುಲ್ಗರ್ಗಾ ಕೇಂದ್ರಕ್ಕೆ ವರ್ಗವಾಗಿ ಬಂದಿದ್ದರು.

ಗುಲ್ಬರ್ಗಾ ಕುರಿತ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ನನಗೆ ತುಂಬಾ ನೆರವಾದವರು ಶಂಕರ್. ನಾಲ್ಕಾರು ದಿನಗಳು ಗುಲ್ಬರ್ಗಾ ಕೋಟೆ.. ನಗರದ ಬೀದಿಗಳು.. ಉದ್ಯಾನಗಳು ಹಾಗೂ ಹತ್ತಿರದ ಸ್ಥಳಗಳಲ್ಲೆಲ್ಲಾ ಓಡಾಡಿ ಚಿತ್ರೀಕರಣ ನಡೆಸಿ ಸಾಕ್ಷ್ಯಚಿತ್ರ ಸಿದ್ಧ ಪಡಿಸಿದೆವು.ಗುಲ್ಬರ್ಗಾ ಕೇಂದ್ರದಲ್ಲಿ ನಾನು ಸೃಜನಾತ್ಮಕವಾಗಿ ತೊಡಗಿಕೊಂಡು ಮಾಡಿದ ಮೊಟ್ಟ ಮೊದಲ ಕೆಲಸ ಇದು. ಅದೇ ಸಮಯಕ್ಕೆ ಸರಿಯಾಗಿ ದೆಹಲಿ ಕೆಂದ್ರದಿಂದ ಆದೇಶ ಬಂತು: “ಇನ್ನು 15 ದಿನಗಳಲ್ಲಿ ಗುಲ್ಬರ್ಗಾ ದೂರದರ್ಶನ ಕೇಂದ್ರದ ಉದ್ಘಾಟನೆಯಾಗಲಿದೆ.. ವಾರ್ತಾಸಚಿವರಾದ ಸಿಂಗ್ ದೇವ್ ಅವರು ಉದ್ಘಾಟನೆಗೆ ಬರುತ್ತಿದ್ದಾರೆ.. ಆ ಸಂದರ್ಭಕ್ಕೆ ಒಂದಷ್ಟು ಜಾನಪದ ನೃತ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಕೊಳ್ಳಿ”.
ಸರಿ.. ತರಾತುರಿಯಿಂದ ಪೂರ್ವಸಿದ್ಧತೆಗಳು ಆರಂಭವಾದವು.ಸುತ್ತಮುತ್ತಲ ಊರುಗಳಲ್ಲಿದ್ದ ಕೆಲ ಜನಪದ ಕಲಾವಿದರನ್ನು ಭೇಟಿಮಾಡಿ ಉದ್ಘಾಟನಾ ದಿನದಂದು ಪ್ರದರ್ಶನಕ್ಕೆ ನಿಗದಿ ಮಾಡಿಕೊಂಡು ಬಂದೆವು.ಕೇಂದ್ರದಲ್ಲಿಯೂ ಸಿದ್ಧತೆಗಳು ಭರದಿಂದ ಸಾಗತೊಡಗಿದವು.

ಉದ್ಘಾಟನಾ ಸಮಾರಂಭಕ್ಕೆ 3—4 ದಿನಗಳಷ್ಟೇ ಉಳಿದಿವೆ..ದೆಹಲಿ ದೊರೆಗಳಿಂದ ವರ್ತಮಾನ:”ಸಿಂಗ್ ದೇವ್ ಅವರಿಗೆ ಅನಿವಾರ್ಯ ಕಾರಣಗಳಿಗಾಗಿ ಬರಲಾಗುತ್ತಿಲ್ಲ.. ಹಾಗಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ!” ಹುರುಪು—ಉತ್ಸಾಹಗಳೆಲ್ಲಾ ಜರ್ರನೆ ಇಳಿದುಹೋದವು. “ನನಗ ಗೊತ್ತಿತ್ರೀ. ಈ ಡೆಲ್ಲಿಯೋರೆಲ್ಲಾ ಹಿಂಗss ನೋಡ್ರೀ..ಯಾವಾಗಾರ ಮಾಡ್ಲಿ ಬಿಡ್ರಿ..ನಮಗೇನು” ಎಂದು ನಿರಾಸೆಯಿಂದ ಕೈಚೆಲ್ಲಿದರು ನಿರ್ದೇಶಕ ಕುಲಕರ್ಣಿಯವರು.

ಆಫೀಸಿನಲ್ಲಿ ನಮಗೆ ಮಾಡಲು ಹೆಚ್ಚು ಕೆಲಸವಿರಲಿಲ್ಲ ಎನ್ನುವುದನ್ನು ಬಿಟ್ಟರೆ ನಮ್ಮ ಗುಲ್ಬರ್ಗಾ ವಾಸ ವರ್ಣರಂಜಿತವಾಗಾಯೇ ಇತ್ತು! ಹೆಂಡತಿ—ಮಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶವಾದದ್ದು ಗುಲ್ಬರ್ಗಾದಲ್ಲಿ ಮಾತ್ರ! ಅದರ ಜತೆಗೆ ಯಾವುದೇ ಒತ್ತಡ—ಆತಂಕಗಳಿಲ್ಲದ ಸಮಾಧಾನದ ಬದುಕು. ಬೆಂಗಳೂರನ್ನೂ ಮರೆಯುವಷ್ಟರ ಮಟ್ಟಿಗೆ ನಾವು ಅಲ್ಲಿ ಸುಖ—ನೆಮ್ಮದಿಯಿಂದಿದ್ದೆವು ಎಂದರೆ ಅತಿಶಯೋಕ್ತಿಯಲ್ಲ.
ನಾವು ಗುಲ್ಬರ್ಗಾದಲ್ಲಿದ್ದ ವೇಳೆಯಲ್ಲಿ ಕುಮಾರಣ್ಣಯ್ಯ ಬಾಂಬೆಯಲ್ಲಿದ್ದ. ಪ್ರೀತಿಯ ಅತ್ತಿಗೆ ವತ್ಸಲಾ ಅವರಂತೂ, “ನಮ್ಮ ಹತ್ತಿರದ ನೆಂಟರಿಷ್ಟರು.. ಸ್ನೇಹಿತರು ಎಲ್ಲರೂ ನಮ್ಮ ಬಾಂಬೆ ಮನೇಗೆ ಬಂದು ಹೋಗಿದ್ದಾಯ್ತು.. ತಮ್ಮನಾಗಿ ನಿಮಗೇ ಇನ್ನೂ ಬರೋಕೆ ಪುರುಸೊತ್ತಾಗಿಲ್ಲ” ಎಂದು ಪೇಚಾಡಿಕೊಳ್ಳುತ್ತಿದ್ದರು. ಗುಲ್ಬರ್ಗಾದಿಂದ ಬಾಂಬೆಗೆ ಒಂದು ರಾತ್ರಿಯ ಪ್ರಯಾಣವಷ್ಟೇ. ಹೇಗೂ ಅಷ್ಟು ಹತ್ತಿರದಲ್ಲಿದ್ದೇವೆ; ಆಫೀಸಿನಲ್ಲಿಯೂ ಹೇಗೂ ಏನೂ ಕೆಲಸವಿಲ್ಲ.. ನಾಲ್ಕು ದಿನ ಬಾಂಬೆಗೆ ಹೋಗಿ ಬಂದುಬಿಡೋಣ” ಎಂದು ನಿರ್ಧರಿಸಿದವರೇ ಮರುದಿನವೇ ಅಣ್ಣಯ್ಯನಿಗೆ ವಿಷಯ ಮುಟ್ಟಿಸಿ ಹೊರಟೇಬಿಟ್ಟೆವು. ಬಾಂಬೆಯಲ್ಲಿ ಕುಮಾರಣ್ಣಯ್ಯ,ವತ್ಸಲಾ ಅತ್ತಿಗೆ, ಮುದ್ದು ಮಕ್ಕಳಾದ ಮಾಧವಿ—ಮಾನಸಿ ಇವರುಗಳೊಟ್ಟಿಗೆ ಕಳೆದ ನಾಲ್ಕಾರು ದಿನಗಳು ಸದಾ ಮೆಲುಕು ಹಾಕುವಂತಹ ಮಧುರ ಸಮಯ. ಹಿಂದೆ ಬಾಂಬೆಯ ಮೈಸೂರು ಅಸೋಸಿಯೇಷನ್ ಸಂಸ್ಥೆಯ ಕಲಾವಿದರಿಗೆ ನಾಟಕ ಶಿಬಿರ ನಡೆಸಿ ‘ಬೇಲಿ ಮತ್ತು ಹೊಲ’ ನಾಟಕವನ್ನು ಮಾಡಿಸಿದ್ದ ಸಂದರ್ಭದಲ್ಲಿ ಒಂದು ತಿಂಗಳಿಗೂ ಹೆಚ್ಚುಸಮಯ ಅಲ್ಲಿದ್ದರೂ ಬಾಂಬೆ ನಗರವನ್ನು ನೋಡಲಾಗಿರಲಿಲ್ಲ. ಈಗ ಅಣ್ಣಯ್ಯ, ಅತ್ತಿಗೆ ಹಾಗೂ ಮಕ್ಕಳೊಂದಿಗೆ ಬಾಂಬೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡಿಕೊಂಡು ಬಂದೆವು.

ಈ ವೇಳೆಗಾಗಲೇ ಅಣ್ಣ (ತಂದೆಯವರು) ಸನ್ಯಾಸಾಶ್ರಮವನ್ನು ಸ್ವೀಕರಿಸಿಯಾಗಿತ್ತಲ್ಲಾ, ಅವರು ಒಂದಷ್ಟು ದಿನ ವರದಹಳ್ಳಿಯ ಆಶ್ರಮದಲ್ಲಿದ್ದವರು ಕೆಲ ತಿಂಗಳ ಹಿಂದೆ ಹರಿದ್ವಾರಕ್ಕೆ ಹೋಗಿ ಅಲ್ಲಿ ಒಂದು ಆಶ್ರಮದಲ್ಲಿ ನೆಲೆಸಿದ್ದರು. ಅಣ್ಣ ಬಿಟ್ಟುಹೋದ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಅಮ್ಮ ಬೆಂಗಳೂರಿನಲ್ಲಿ ಅಕ್ಕಂದಿರ ಜೊತೆಗೇ ಇದ್ದರು. ಅವರಿಗೂ ಒಂದು ಬದಲಾವಣೆ ಆದ ಹಾಗಾಗುತ್ತದೆ ಎಂದು ಕೆಲ ದಿನಗಳ ಮಟ್ಟಿಗೆ ಅವರನ್ನು ಗುಲ್ಬರ್ಗಾಗೆ ಕರೆಸಿಕೊಂಡೆ. ಗಾಣಗಾಪುರ ಕ್ಷೇತ್ರ ಗುಲ್ಬರ್ಗಾಗೆ ಸಮೀಪದಲ್ಲೇ ಇರುವಂಥದ್ದು. ಆ ಕ್ಷೇತ್ರದಲ್ಲಿ ದತ್ತಗುರುವಿನ ದೇಗುಲದಲ್ಲಿ ಅರ್ಚಕರಾಗಿದ್ದವರು ನಮ್ಮ ಮನೆಯ ಮಾಲೀಕರಾದ ರಾಘವೇಂದ್ರ ಕಲ್ಲೂರ್ ಕರ್ ಅವರ ಹತ್ತಿರದ ಸಂಬಂಧಿಗಳು. ಅಮ್ಮನನ್ನು ಗಾಣಗಾಪುರ ಕ್ಷೇತ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಿಕೊಟ್ಟು ತುಂಬು ಪ್ರೀತಿಯಿಂದ ಆದರಿಸಿ ಸತ್ಕರಿಸಿದರು ಆ ಅರ್ಚಕ ಕುಟುಂಬದವರು.ನಮ್ಮ ಮನೆಯ ಆರಾಧ್ಯದೈವ ದತ್ತಾತ್ರೇಯರ ಸನ್ನಿಧಿಯಲ್ಲಿ ಅಷ್ಟೆಲ್ಲಾ ಪಾಂಗತ ಪೂಜೆ ಪುನಸ್ಕಾರಗಳು ನಡೆದದ್ದು ಅಮ್ಮನ ನೊಂದ ಮನಸ್ಸಿಗೂ ಅಪಾರ ಸಾಂತ್ವನವನ್ನು ನೀಡಿತು.

ಪ್ರೀತಿಯ ನಾದಿನಿ—ಷಡ್ಡಕಂದಿರಾದ ಪದ್ಮಿನಿ—ರಮೇಶ್ ಅವರು ಮಗ ರಜತ್ ಒಟ್ಟಿಗೆ ನಾಲ್ಕಾರು ದಿನಗಳ ಮಟ್ಟಿಗೆ ಗುಲ್ಬರ್ಗಾದ ನಮ್ಮ ಮನೆಗೆ ಬಂದಿದ್ದರು. ಅವರೊಟ್ಟಿಗೆ ಎರಡು ದಿನಗಳ ಮಟ್ಟಿಗೆ ಹೈದರಾಬಾದ್ ಗೆ ಹೋಗಿ ಸುತ್ತಾಡಿಕೊಂಡು ಬಂದದ್ದು ನಾವು ಸದಾ ನೆನೆಯುವ ಮಧುರ ಭೇಟಿಯ ಮತ್ತೊಂದು ಪ್ರಸಂಗ.

ಆತ್ಮೀಯ ಮಿತ್ರ—ಸಹೋದ್ಯೋಗಿ ರಾಜೇಂದ್ರ ಕಟ್ಟಿ ನಮ್ಮ ಗುಲ್ಬರ್ಗಾ ನಿವಾಸಕ್ಕೆ ಬಂದು ಎರಡು ದಿನ ನಮ್ಮ ಜೊತೆಗಿದ್ದು ತನ್ನ ವಿಶಿಷ್ಟ ಹಾಸ್ಯಪ್ರಜ್ಞೆಯಿಂದ ನಮ್ಮನ್ನು ನಕ್ಕು ನಲಿಸಿದ್ದು ಸಹಾ ನಮ್ಮ ನೆನಪಲ್ಲಿ ಸದಾ ಹಸಿರು.

ಬಿಇಎಮ್ಎಲ್ ಬಡಾವಣೆಯಲ್ಲಿ ಮನೆ ಕಟ್ಟಿಸುವುದರಲ್ಲಿ ನಿರತರಾಗಿ ಕೆಲಸ ಕಾರ್ಯಗಳಲ್ಲಿ ಮುಳುಗಿಹೋಗಿದ್ದರೂ ಎರಡು ದಿನಗಳ ಮಟ್ಟಿಗೆ ಗುಲ್ಬರ್ಗಾದ ಮನೆಗೆ ಬಂದು ಹೋದರು ರಂಜನಿಯ ಅಣ್ಣ ಜಗದೀಶ್ ಬಾಬು.

ಬೇರಾವುದೋ ಕಾರ್ಯನಿಮಿತ್ತ ಗುಲ್ಬರ್ಗಾಗೆ ಬಂದಿದ್ದ ಪ್ರಸಿದ್ಧ ಕವಯಿತ್ರಿ ಹೇಮಾ ಪಟ್ಟಣಶೆಟ್ಟಿಯವರು ನಮ್ಮ ಮನೆಗೆ ಬಂದು ಒಂದೆರಡು ತಾಸು ಕಳೆದು ನಮ್ಮ ಆತಿಥ್ಯವನ್ನು ಸ್ವೀಕರಿಸಿದ್ದು ಸಹಾ ಸದಾ ನೆನೆಯುವ ಸಂಗತಿಯೇ.

ನಾವು ಗುಲ್ಬರ್ಗಾದಲ್ಲಿದ್ದ ಸಮಯದಲ್ಲಿಯೇ ಆಕಾಶವಾಣಿ ಕೇಂದ್ರದವರು ಪ್ರಸಿದ್ಧ ಹಿನ್ನೆಲೆ ಗಾಯಕ—ಗಜ಼ಲ್ ಗಾಯಕ ಹರಿಹರನ್ ಅವರನ್ನು ಗುಲ್ಬರ್ಗಾಗೆ ಕರೆಸಿ ಸಾರ್ವಜನಿಕ ಕಛೇರಿಯನ್ನು ಏರ್ಪಡಿಸಿದ್ದರು. ಮೊದಲೇ ಗಜ಼ಲ್ ಪ್ರೇಮಿಗಳಾದ ನಮಗೆ ಇದಂತೂ ಸಂಗೀತದ ಹಬ್ಬವೇ ಆಗಿಹೋಯಿತು. 3 ತಾಸುಗಳ ಕಾಲ ಮೈಮರೆತು ಭಾವತುಂಬಿ ಹಾಡಿದ ಹರಿಹರನ್ ಅವರ ಅಂದಿನ ಗಾಯನ ಅಪೂರ್ವ, ಮಧುರಾತಿಮಧುರ. ಒಟ್ಟಾರೆ ನಮಗಂತೂ ಗುಲ್ಬರ್ಗಾದಲ್ಲಿ ಸುಖ ಸಂತೋಷ ನೆಮ್ಮದಿಗಳಿಂದ ಹಾಯಾಗಿ ಹಕ್ಕಿಗಳಂತೆ ವಿಹರಿಸುತ್ತಿದ್ದಂತಹ ಅನುಭವ!!

ಆದರೆ ಬಹುಕಾಲ ಈ ಸುಖ ಸಂತೋಷ ನೆಮ್ಮದಿಗಳು ಸ್ಥಾಯಿಯಾಗಿ ಉಳಿದುಬಿಟ್ಟರೆ ಅದು ‘ಜೀವನ’ ಎಂದಾದರೂ ಏಕೆ ಕರೆಸಿಕೊಂಡೀತು! ನಮ್ಮೆಲ್ಲ ಖುಷಿಯ ಬಲೂನಿಗೆ ಸೂಜಿ ಚುಚ್ಚುವಂತಹ, ನೆಮ್ಮದಿ ಸಂತೋಷಗಳನ್ನೆಲ್ಲಾ ಚೂರು ಚೂರು ಮಾಡಿ ದಿಕ್ಕುದಿಕ್ಕುಗಳಿಗೆ ತೂರಿಬಿಡುವಂತಹ ಭೀಕರ ದುರಂತವೊಂದು ಘಟಿಸಿಯೇ ಬಿಟ್ಟಿತು!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

4 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading