ಶ್ರೀನಿವಾಸ ಪ್ರಭು ಅಂಕಣ: ಬೆನ್ನು ಬಿಡದ ಡಬ್ಬಿಂಗ್ ಭೂತ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 133

ಹೊಸ ಶತಮಾನದ ಮೊದಲ ದಶಕ ಹಾಗೂ ಎರಡನೆಯ ದಶಕದ ಪೂರ್ವಾರ್ಧ ನಾನು ಕಿರುತೆರೆಯಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡ ಕಾಲಘಟ್ಟ. ಕೆಲವು ಧಾರಾವಾಹಿಗಳಂತೂ ಐದಾರು ವರ್ಷಗಳ ಅವಧಿಯವರೆಗೆ ನಡೆದಿರುವುದುಂಟು. ಆ ಸಮಯದಲ್ಲೇ ಒಂದಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿದರೂ ಬಹಳಷ್ಟು ಈಗ ನನ್ನ ನೆನಪಿನಿಂದಲೇ ಜಾರಿಹೋಗಿವೆ! ಹಾಗೆ ನೆನಪಿಟ್ಟುಕೊಳ್ಳಲೇಬೇಕಾದಂತಹ ಚಿತ್ರಗಳಾಗಲೀ ಪಾತ್ರಗಳಾಗಲೀ ನನ್ನ ತೆಕ್ಕೆಗೆ ದಕ್ಕಲಿಲ್ಲ ಅನ್ನುವುದೂ ಸತ್ಯವೇ!

ಧಾರಾವಾಹಿಗಳ ವಿಷಯಕ್ಕೆ ಬಂದರೆ ಆಗ ನಾವು ಎದುರಿಸಿದ ಒಂದು ಮುಖ್ಯವಾದ ಸಮಸ್ಯೆ ನೆನಪಾಗುತ್ತಿದೆ. ಅದೇ ‘ಡಬ್ಬಿಂಗ್ ಸಮಸ್ಯೆ’. ಇದೂ ಕೂಡಾ ಇಮ್ಮುಖನಾದ್ದು! ಬೇರೆ ಭಾಷೆಯ ಚಿತ್ರಗಳನ್ನಾಗಲೀ ಧಾರಾವಾಹಿಗಳನ್ನಾಗಲೀ ಮತ್ತೊಂದು ಭಾಷೆಗೆ ತರುವಾಗ ಒಂದೋ ಅದೇ ಚಿತ್ರ ಯಾ ಧಾರಾವಾಹಿಯನ್ನು ತಮಗೆ ಬೇಕಾದ ಭಾಷೆಯಲ್ಲಿ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಹೊಸದಾಗಿಯೇ ಚಿತ್ರೀಕರಿಸಿ ನಿರ್ಮಾಣ ಮಾಡಬಹುದು. ಇದು ‘ರೀಮೇಕ್ ‘ಅನ್ನಿಸಿಕೊಳ್ಳುತ್ತದೆ; ಇಲ್ಲವೇ ಸಂಗೀತದ ಟ್ರ್ಯಾಕ್ ಆದಿಯಾಗಿ ಎಲ್ಲವನ್ನೂ ಹಾಗೇ ಉಳಿಸಿಕೊಂಡು ಕೇವಲ ಸಂಭಾಷಣೆಗಳನ್ನು ಬೇಕಾದ ಭಾಷೆಯಲ್ಲಿ ಮಾತಾಡಿಸಿ ಅವತರಣಿಕೆಯನ್ನು ಸಿದ್ಧಪಡಿಸುವುದು. ಇದು ಡಬ್ಬಿಂಗ್ ಅನ್ನಿಸಿಕೊಳ್ಳುತ್ತದೆ.

ಹೀಗೆ ಅನೇಕ ಇಂಗ್ಲೀಷ್ ಚಿತ್ರಗಳನ್ನೂ ಒಳಗೊಂಡಂತೆ ಬೇರೆ ಬೇರೆ ಭಾಷೆಯ ಚಿತ್ರಗಳು ಪರಭಾಷೆಗೆ ಡಬ್ ಆಗಿವೆ. ಅಂದರೆ ಕೇವಲ ‘ಭಾಷಾಂತರ’ಗೊಂಡಿವೆ. ವಾಸ್ತವವಾಗಿ ಕನ್ನಡದಲ್ಲಿ ಈ ಬಗೆಯ ‘ಡಬ್ಬಿಂಗ್ ಸಂಸ್ಕೃತಿ’ ಶುರುವಾದದ್ದು ಇತ್ತೀಚೆಗೆ. ಕಾನೂನಾತ್ಮಕವಾಗಿ ಡಬ್ಬಿಂಗ್ ಗೆ ಸಮ್ಮತಿ—ಅನುಕೂಲ—ಅವಕಾಶಗಳಿದ್ದರೂ ಡಬ್ಬಿಂಗ್ ಚಿತ್ರಗಳಿಂದಾಗಿ ಕನ್ನಡದಲ್ಲೇ ಸ್ವತಂತ್ರವಾಗಿ ನೇರವಾಗಿ ತಯಾರಾದ ಚಿತ್ರಗಳಿಗೆ ಹೊಡೆತ ಬೀಳುತ್ತದೆ, ಹಿನ್ನಡೆಯುಂಟಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಚಿತ್ರೋದ್ಯಮ ಡಬ್ಬಿಂಗ್ ಗೆ ಅವಕಾಶ ನೀಡಿರಲಿಲ್ಲ. ಡಾ. ರಾಜಕುಮಾರ್ ಅವರೂ ಸಹಾ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಸಮಸ್ಯೆ ಎದುರಾಗುವುದಾದರೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವುದು ಖಂಡಿತ ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟರೇ ಆಗಿದ್ದ ಡಾ॥ರಾಜ್ ಅವರ ‘ಡಬ್ಬಿಂಗ್ ವಿರೋಧಿ ನಿಲುವನ್ನು’ ಯಾರೂ ಪ್ರಶ್ನಿಸಿರಲಿಲ್ಲ. ಜತೆಗೆ ನಮ್ಮ ಚಿತ್ರೋದ್ಯಮದ ಬೆಳವಣಿಗೆಯೂ ಒಂದು ಮುಖ್ಯ ಕಾರಣವಾಗಿತ್ತಲ್ಲಾ! ಮುಂದೆ ಡಾ॥ರಾಜ್ ಅವರ ನಿಧನಾನಂತರ ಈ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದು ಒಂದಷ್ಟು ಕೋರ್ಟು ಕಛೇರಿಗಳಲ್ಲೆಲ್ಲಾ ಅಡ್ಡಾಡಿ ಕೊನೆಗೊಮ್ಮೆ ಡಬ್ಬಿಂಗ್ ಸಿಂಧುವೇ ಆಗಿ ಹೋಯಿತು.

ಈಗ ಅನೇಕ ಬೇರೆ ಭಾಷೆಯ ಚಿತ್ರಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕನ್ನಡ ಭಾಷೆಯಲ್ಲಿ ಡಬ್ ಆಗಿ ತೆರೆ ಕಾಣುತ್ತಿವೆ. ಅಷ್ಟೇ ಏಕೆ, ಡಬ್ಬಿಂಗ್ ಧಾರಾವಾಹಿಗಳೂ ಸಹಾ ಅನೇಕ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. ಇದು ಒಂದು ಡಬ್ಬಿಂಗ್ ವಿಚಾರವಾದರೆ ಇನ್ನೊಂದು ಬಗೆಯ ಡಬ್ಬಿಂಗ್ ಎಂದರೆ ಪಾತ್ರಗಳಿಗೆ ಧ್ವನಿಯನ್ನು ನೀಡುವುದು. ಸಾಧಾರಣವಾಗಿ ಚಲನಚಿತ್ರಗಳಲ್ಲಿ ಶೂಟಿಂಗ್ ಮುಗಿದ ಮೇಲೆ ಪ್ರಥಮ ಹಂತದ ಸಂಕಲನ ಮುಗಿಸಿ ಡಬ್ಬಿಂಗ್ ಮಾಡುತ್ತಾರೆ. ಅಂದರೆ ಕಲಾವಿದರು ಅಭಿನಯಿಸಿದ ದೃಶ್ಯಗಳ ಅದೇ ಸಂಭಾಷಣೆಗಳನ್ನು ಮತ್ತೆ ಸ್ಟುಡಿಯೋದಲ್ಲಿ ಯಾವುದೇ ಬೇರೆ ಸದ್ದುಗಳು ನುಸುಳದಂತೆ ಧ್ವನಿ ಮುದ್ರಣ ಮಾಡಿಕೊಳ್ಳುತ್ತಾರೆ. ಗುಣಮಟ್ಟದ ದೃಷ್ಟಿಯಿಂದ, ಕೆಲವೊಮ್ಮೆ ಕೊನೆಯ ಕ್ಷಣದ ಬದಲಾವಣೆಗಳನ್ನು ಹೊಂದಿಸಿಕೊಳ್ಳಲು ಇದು ನೆರವಾಗುತ್ತದೆ ಕೂಡಾ. ನಾವು ಅಭಿನಯಿಸಿದ ಪಾತ್ರಕ್ಕೆ ನಾವೇ ಧ್ವನಿ ನೀಡಬಹುದು. ಅಥವಾ ಬೇರೆಯ ಕಲಾವಿದರಿಗೆ ಭಾಷೆ ಸರಿಯಾಗಿ ಬಾರದ ಸಂದರ್ಭಗಳಲ್ಲಿ ಕಂಠದಾನ ಮಾಡಬಹುದು. ನಾನು ರವಿಚಂದ್ರನ್ ಅವರಿಗೆ ಅನೇಕ ಚಿತ್ರಗಳಲ್ಲಿ ಧ್ವನಿಯಾದದ್ದು ಹೀಗೆ. ಅದೇ ಧಾರಾವಾಹಿಗಳ ವಿಷಯಕ್ಕೆ ಬಂದರೆ ಪ್ರಾರಂಭದ ದಿನಗಳಿಂದಲೂ ಇಲ್ಲಿ ಡಬ್ಬಿಂಗ್, ಅಂದರೆ ನಂತರದ ಧ್ವನಿಜೋಡಣೆಯ ಕೆಲಸವಿಲ್ಲ. ಶೂಟಿಂಗ್ ನಡೆಯುವಾಗಲೇ ಕಲಾವಿದರ ಸಂಭಾಷಣೆಗಳು ಚಿತ್ರಿಕೆಯೊಂದಿಗೇ ಮುದ್ರಣಗೊಂಡುಬಿಟ್ಟಿರುತ್ತವೆ. ಹಾಗೆಯೇ ಪ್ರಸಾರವಾಗುತ್ತವೆ ಕೂಡಾ.

ಮಹಾಧಾರಾವಾಹಿಗಳಂತೂ ಹೆಚ್ಚುಕಡಿಮೆ ಪ್ರತಿನಿತ್ಯ ಪ್ರಸಾರವಾಗುವುದರಿಂದ ಸಮಯದ ಅಭಾವವೇ ಪ್ರಮುಖ ಕಾರಣವಾಗಿ ಮತ್ತೆ ಡಬ್ಬಿಂಗ್ ಮಾಡುವುದು ಕಷ್ಟವಾಗುತ್ತದೆ. ಅದು ನಾನು ಹಲವಾರು ಧಾರಾವಾಹಿಗಳಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದ ಸಮಯ. ಹೇಗೋ ಶೂಟಿಂಗ್ ಗೆ ಸಮಯ ಹೊಂದಿಸಿಕೊಂಡು ನಿಭಾಯಿಸುತ್ತಿದ್ದೆ. ಎಲ್ಲವೂ ಸುಸೂತ್ರವಾಗಿಯೇ ನಡೆದುಕೊಂಡು ಹೋಗುತ್ತಿತ್ತು. ಆಗಲೇ ‘ಉದಯ ಟಿ ವಿ’ ಗೆ ಧಾರಾವಾಹಿಗಳನ್ನು ನಿರ್ಮಿಸಲು ಚೆನ್ನೈನಿಂದ ಕೆಲ ನಿರ್ಮಾಪಕರು—ನಿರ್ದೇಶಕರು ಬೆಂಗಳೂರಿಗೆ ಬಂದಿಳಿದರು. ಬೇರೆ ವಾಹಿನಿಗಳ ನಿರ್ಮಾಪಕರೂ ಚೆನ್ನೈ ನಿರ್ದೇಶಕರನ್ನು ಆಹ್ವಾನಿಸಿದ್ದುಂಟು. ಹಾಗೆ ನಾನು ಚೆನ್ನೈ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ ಒಂದು ಧಾರಾವಾಹಿ ಎಂದರೆ ಜೀ಼ ಟಿವಿಯಲ್ಲಿ ಪ್ರಸಾರವಾದ ‘ಗೀತಾಂಜಲಿ’. ಈ ಧಾರಾವಾಹಿಯಲ್ಲಿ ಮಾಲತಿ ಸರದೇಶಪಾಂಡೆ, ಶೈಲಜಾ ಜೋಶಿ, ಸಿರಿ, ಸುದೇಶ್ ಮುಂತಾದವರೆಲ್ಲಾ ನನ್ನ ಸಹಕಲಾವಿದರಾಗಿದ್ದರು. ಚೆನ್ನೈ ನಿರ್ದೇಶಕರು ಪ್ರಾರಂಭದಲ್ಲೇ, “ಕಲಾವಿದರೆಲ್ಲರೂ ಸ್ಟುಡಿಯೋಗೆ ಬಂದು ಡಬ್ಬಿಂಗ್ ಮಾಡಿಕೊಡಬೇಕು. ಶೂಟಿಂಗ್ ಆಗುವಾಗಲೇ ಹೇಳಿದ ಸಂಭಾಷಣೆಗಳನ್ನು ನಾನು ಬಳಸುವುದಿಲ್ಲ” ಎಂದು ಬಾಂಬ್ ಸಿಡಿಸಿದರು. ಆ ಧಾರಾವಾಹಿಯಲ್ಲಿದ್ದವರೆಲ್ಲರೂ ಬಿಡುವಿಲ್ಲದಂತೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರೇ. ನಾವೆಲ್ಲರೂ ಒಕ್ಕೊರಲಿನಿಂದ ಡಬ್ಬಿಂಗ್ ಅನ್ನು ವಿರೋಧಿಸಿದೆವು. ಆದರೂ ನಿರ್ದೇಶಕರು ಜಪ್ಪಯ್ಯ ಅನ್ನಲಿಲ್ಲ.

ಸಿನೆಮಾ ಡಬ್ಬಿಂಗ್ ಆದರೆ ಒಂದೆರಡು ದಿನಗಳಲ್ಲಿ ಮುಗಿದು ಹೋಗುವಂಥದ್ದು; ಹಾಗಾಗಿ ಸಮಯ ಹೊಂದಾಣಿಕೆ ಅಷ್ಟು ಕಷ್ಟವಾಗುವುದಿಲ್ಲ. ಮಹಾ ಧಾರಾವಾಹಿಗಳೆಂದರೆ ವರ್ಷಗಟ್ಟಲೆ ನಡೆಯುವಂಥವು; ಪ್ರತಿ ಕಂತಿಗೂ ಸ್ಟುಡಿಯೋಗೆ ಹೋಗಿ ಡಬ್ ಮಾಡುವುದು ತೀರಾ ಕಷ್ಟದ ಕೆಲಸ; ಹತ್ತಾರು ಕಂತುಗಳನ್ನು ಒಂದು ದಿನದಲ್ಲಿ ಮುಗಿಸೋಣವೆಂದರೆ ಅಷ್ಟು ಚಿತ್ರೀಕರಣ—ಸಂಕಲನಗಳೇ ಆಗಿರುತ್ತಿರಲಿಲ್ಲ! ಇದುವರೆಗೆ ಇಂಥದೊಂದು ಸಮಸ್ಯೆ ಎದುರಾಗಿರಲಿಲ್ಲ. ಅನೇಕ ಧಾರಾವಾಹಿಗಳ ನೂರಾರು ಎಪಿಸೋಡ್ ಗಳಲ್ಲಿ ಅಭಿನಯಿಸಿಯಾಗಿತ್ತು; ಆಗೊಮ್ಮೆ ಈಗೊಮ್ಮೆ ಸಂಭಾಷಣೆ ಸರಿಯಾಗಿ ರೆಕಾರ್ಡ್ ಆಗಿರಲಿಲ್ಲ ಎನ್ನುವ ಕಾರಣಕ್ಕೆ ಆ ಭಾಗವನ್ನು ಮಾತ್ರ ಡಬ್ಬಿಂಗ್ ಮಾಡಿದ್ದೇನೆ ಶಿವಾಯಿ ಇಡೀ ಕಂತು—ಧಾರಾವಾಹಿಗೆ ಡಬ್ಬಿಂಗ್ ಮಾಡಿರಲಿಲ್ಲ. ಆದದ್ದಾಗಲಿ ನೋಡೋಣ ಎಂದು ಕೆಲಸ ಆರಂಭಿಸಿದೆವು. ಒಂದು ವಾರದಲ್ಲೇ ‘ನನ್ನ ಬಿಡುವಿಲ್ಲದ ಚಿತ್ರೀಕರಣಗಳ ನಡುವೆ ಇದು ಬಹಳ ದಿನ ನಡೆಯುವಂಥದ್ದಲ್ಲ. ಇದಕ್ಕೊಂದು ಪರಿಹಾರ ಹುಡುಕಲೇಬೇಕು’ ಎಂದು ಅನ್ನಿಸಿ ಮತ್ತೆ ನಿರ್ದೇಶಕರ ಬಳಿ ಚರ್ಚಿಸಿ ನಮ್ಮ ಸಮಸ್ಯೆ ಹೇಳಿಕೊಂಡೆವು.

ಡಬ್ಬಿಂಗ್ ಮಾಡಲೇಬೇಕೆಂದು ಛಾನಲ್ ವತಿಯಿಂದ ಯಾವುದೇ ಒತ್ತಾಯವಿರಲಿಲ್ಲ, ಅದು ಕೇವಲ ನಿರ್ದೇಶಕರ ಹಠವಾಗಿತ್ತಷ್ಟೇ. ಎಲ್ಲ ಮುಖ್ಯ ಕಲಾವಿದರೂ ಅಸಹಕಾರ ವ್ಯಕ್ತಪಡಿಸಿದ ಮೇಲೆ ಕೊಂಚ ಸೋತ ನಿರ್ದೇಶಕರು, “ಆಗಲಿ, ನಿಮ್ಮ ಇಷ್ಟದಂತೆಯೇ ಆಗಲಿ. ಒಳ್ಳೆಯ ಆಡಿಯೋ ಕನ್ಸೋಲ್ ಅನ್ನೇ ತರಿಸುತ್ತೇನೆ. ನುರಿತ ತಂತ್ರಜ್ಞರೇ ಬರುತ್ತಾರೆ. ಆದರೆ ನನಗೆ ಸಮಾಧಾನವಾಗದಿದ್ದರೆ ಮಾತ್ರ ಮತ್ತೆ ಡಬ್ಬಿಂಗ್ ಮಾಡಲೇಬೇಕು” ಎಂದು ಶರತ್ತು ಹಾಕಿದರು. ‘ಬೀಸುವ ದೊಣ್ಣೆ ತಪ್ಪಲಿ’ ಎಂದು ನಾವೂ ಒಪ್ಪಿಕೊಂಡೆವು! ಒಂದಷ್ಟು ದಿನ ಹೀಗೆ ಕಳೆಯುತ್ತಿದ್ದಂತೆ ನಿರ್ದೇಶಕರ ಹೊಸ ವರಸೆ ಶುರುವಾಯಿತು! ‘ಈ ವ್ಯವಸ್ಥೆಯಿಂದಾಗಿ ಚಿತ್ರೀಕರಣ ತುಂಬಾ ನಿಧಾನವಾಗುತ್ತಿದೆ. ನಿರ್ಮಾಪಕರು ಪ್ರತಿನಿತ್ಯ ಎಷ್ಟು ಶೂಟಿಂಗ್ ಮಾಡಬೇಕೋ ಅಷ್ಟು ಆಗುತ್ತಿಲ್ಲ, ಹೀಗಾದರೆ ನನಗೆ ತುಂಬಾ ನಷ್ಟವಾಗುತ್ತದೆ ಎಂದು ಗೊಣಗುತ್ತಿದ್ದಾರೆ. ಮತ್ತೆ ಡಬ್ಬಿಂಗ್ ವ್ಯವಸ್ಥೆಗೇ ಮರಳೋಣ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು! ಡಬ್ಬಿಂಗ್ ಗಾಗಿ ಕಲಾವಿದರಿಗೇನೂ ಹೆಚ್ಚಿನ ಸಂಭಾವನೆ ನೀಡುವುದಿಲ್ಲ. ಆಗಲೇ ಹೇಳಿದಂತೆ ಸಿನೆಮಾ ಡಬ್ಬಿಂಗ್ ನಲ್ಲಿ ಇದು ಗೌಣವಾಗಿಬಿಡುತ್ತದೆ. ಆದರೆ ಪ್ರತಿ ಕಂತಿಗೂ ಡಬ್ ಮಾಡಬೇಕೆಂದರೆ? ಡಬ್ಬಿಂಗ್ ಇರುವ ಧಾರಾವಾಹಿಯಾದರೆ ಇನ್ನು ಮುಂದೆ ಹೆಚ್ಚಿನ ಸಂಭಾವನೆಯನ್ನಾದರೂ ಕೇಳಬೇಕೆಂದು ನಾವು ಕಲಾವಿದರು ಮಾತಾಡಿಕೊಂಡದ್ದೂ ಉಂಟು! ಹೇಗೋ ವಿಧಿಯಿಲ್ಲದೆ ಡಬ್ಬಿಂಗ್ ವ್ಯವಸ್ಥೆಗೇ ಹೊಂದಿಕೊಂಡು ಕೆಲಸ ಪೂರೈಸಿದೆವು ಅನ್ನಿ. ಆ ಕಾಲಕ್ಕೆ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದ ಧಾರಾವಾಹಿ ‘ಗೀತಾಂಜಲಿ’.

ಅದೇ ಸಮಯದಲ್ಲಿ ಇದೇ ತರಹದ ಸಮಸ್ಯೆ ಎದುರಾದದ್ದು ‘ಮನೆದೇವ್ರು’ ಎಂಬ ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ. ಆ ಧಾರಾವಾಹಿಯ ನಿರ್ಮಾಪಕ—ನಿರ್ದೇಶಕರಿಬ್ಬರೂ ಚೆನ್ನೈನವರೇ. ಯಥಾಪ್ರಕಾರ ಇವರೂ ಸಹಾ ಡಬ್ಬಿಂಗ್ ಮಾಡಬೇಕೆಂದರು! ನನಗೆ ಅರ್ಥವಾಗದ ಸಂಗತಿ ಎಂದರೆ ವಾಹಿನಿಯವರ ಒತ್ತಾಯವಿಲ್ಲ; ಆದರೂ ಅಷ್ಟೂ ಕಲಾವಿದರನ್ನು ಮತ್ತೆ ಮತ್ತೆ ಕರೆಸಿ ಡಬ್ಬಿಂಗ್ ಮಾಡಿಸಿ ಯಾಕೆ ಗೋಳುಹುಯ್ದುಕೊಳ್ಳುತ್ತಾರೆಂಬುದು! ಒಂದು ರೀತಿಯಲ್ಲಿ ಮನೆದೇವ್ರು ಧಾರಾವಾಹಿಯ ಶೂಟಿಂಗ್ ವೇಳೆ ನನಗೆ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ಈ ನಿರ್ದೇಶಕನದೊಂದು ಹೊಸ ರೀತಿಯ ವರಸೆ! ಆತ ನಮಗೆ ದೃಶ್ಯಗಳನ್ನು ಓದಿಕೊಂಡು ಮಾತುಗಳನ್ನು ಮನನ ಮಾಡಿಕೊಳ್ಳಲು ಸಮಯಾವಕಾಶವನ್ನೇ ಕೊಡುತ್ತಿರಲಿಲ್ಲ. ಒಬ್ಬ ಸಹ ನಿರ್ದೇಶಕ ದೃಶ್ಯದ ಹಾಳೆಗಳನ್ನು ಇಟ್ಟುಕೊಂಡು ಕಲಾವಿದರಿಗೆ ಸಂಭಾಷಣೆಗಳನ್ನು ಹೇಳಿಕೊಡಲು ಸಿದ್ಧನಾಗಿ ನಿಂತಿರುತ್ತಿದ್ದ; ನಿರ್ದೇಶಕರು ಕ್ಯಾಮರಾ ಚಾಲೂ ಮಾಡಿಸಿ ACTION ಎಂದು ಚೀರುತ್ತಿದ್ದಂತೆ ಸಹ ನಿರ್ದೇಶಕ ನಿರ್ಭಾವುಕವಾಗಿ ಸಂಭಾಷಣೆಗಳನ್ನು ಒದರುತ್ತಾ ಹೋಗುತ್ತಿದ್ದ. ಅವನು ಹೇಳುತ್ತಾ ಹೋದಂತೆ ಕಲಾವಿದರೂ ಅವನನ್ನು ಅನುಸರಿಸಿ ಸಂಭಾಷಣೆ ಹೇಳುತ್ತಾ ಹೋಗಬೇಕಿತ್ತು! ಎಲ್ಲರ ಸಂಭಾಷಣೆಗಳನ್ನೂ ಅವನೊಬ್ಬನೇ ಏಕಾಂಗವೀರನಾಗಿ ಬಡಬಡಿಸುತ್ತಿದ್ದ!

ಅಯ್ಯೋ ಕರ್ಮವೇ! ಈ ಪುಣ್ಯಾತ್ಮ ಹೇಳಿಕೊಟ್ಟದ್ದೆಲ್ಲವನ್ನೂ ‘ಅದು ತಪ್ಪಿರಲಿ ಒಪ್ಪಿರಲಿ’ ಒಪ್ಪಿಸುತ್ತಾ ಹೋದರೆ ಸಂಭಾಷಣೆ ಹೇಳುವ ಧಾಟಿಯನ್ನು, ಒತ್ತು ಘಾತಗಳನ್ನು ಗಮನಿಸುವುದಾದರೂ ಹೇಗೆ? ಭಾವಾಭಿವ್ಯಕ್ತಿಯ ಕಥೆ ಏನಾಗಬೇಕು? ಇಡೀ ಗಮನ ಆ ವ್ಯಕ್ತಿ ಹೇಳಿಕೊಡುವ ಸಂಭಾಷಣೆಯನ್ನು ಗ್ರಹಿಸುವತ್ತಲೇ ಹೋಗಿಬಿಟ್ಟರೆ ಪಾತ್ರ ನಿರ್ವಹಣೆ ಹಳ್ಳ ಹಿಡಿಯುವುದಿಲ್ಲವೇ? ಇದರ ಮಧ್ಯೆ ಸಹ ನಿರ್ದೇಶಕ ಹೇಳಿಕೊಡುವ ತಪ್ಪುಗಳ ಜತೆಗೆ ಆತುರದಲ್ಲಿ ಹೇಳುವಾಗಿನ ನಮ್ಮ ತಪ್ಪುಗಳ ಕೊಡುಗೆಯೂ ಸೇರಿಕೊಂಡು ಎಲ್ಲಾ ಕಲಸುಮೇಲೋಗರವಾಗಿಬಿಡುವುದಲ್ಲವೇ? ಎಂದೆಲ್ಲಾ ನಿರ್ದೇಶಕನ ಮುಂದೆ ನಾವು ಪೇಚಾಡಿಕೊಂಡರೆ ಆತ ಹೆಮ್ಮೆಯಿಂದ ಮೀಸೆಯ ಅಂಚಲ್ಲಿ ಕಿರುನಗೆ ಸೂಸುತ್ತಾ, “that is why we do dubbing sir! you correct all mistakes there! good quality will be there!” ಎಂದು ಕೊಚ್ಚಿಕೊಳ್ಳುವುದೇ! “ಮುಂಡಾಮೋಚ್ತು! quality ಅಂತೆ quality, ಮಣ್ಣಾಂಗಟ್ಟಿ. ಈವಯ್ಯಂಗೆ ಸುತ್ತೋದೊಂದೇ ಬರೋದು! ಶೂಟಿಂಗ್ ಮುಗಿಸಿಬಿಟ್ರೆ ಸಾಕು. ಇವನ ಜವಾಬ್ದಾರಿ ಮುಗಿದ ಹಾಗೆ. ಆಮೇಲೆ ಸಾಯೋರು ನಾವು ತಾನೇ!” ಎಂದು ಸಹ ಕಲಾವಿದರೊಬ್ಬರು ಜೋರಾಗಿಯೇ ಗೊಣಗಿದರೂ ಆ ತಮಿಳು ನಿರ್ದೇಶಕನಿಗೆ ಕನ್ನಡ ಅರ್ಥವಾಗದ್ದರಿಂದ ‘ಯಾ..ಯಾ..’ ಎಂದು ಪೆಚ್ಚುಪೆಚ್ಚಾಗಿ ನಕ್ಕು ಸುಮ್ಮನಾದ. ನಾನು ಮಾತ್ರ ‘ಹೀಗೆ ಪ್ರಾಂಪ್ಟಿಂಗ್ ತೆಗೆದುಕೊಂಡು ಅಭಿನಯಿಸಲಾರೆ. ನನಗೆ ಏಕಾಗ್ರತೆ ನಷ್ಟವಾಗಿಬಿಡುತ್ತದೆ.

ನನ್ನ ಮಾತುಗಳನ್ನು “ನಾನು ಕಲಿತುಕೊಂಡು ಹೇಳುತ್ತೇನೆ” ಎಂದು ಹಠ ಹಿಡಿದೆ. ಆ ಪುಣ್ಯಾತ್ಮ ಇಡೀ ದೃಶ್ಯವನ್ನು ಒಂದೇ ಶಾಟ್ ನಲ್ಲಿ ಸಂಯೋಜಿಸುತ್ತಿದ್ದ! ನಾನು ಅದಕ್ಕೂ ಸೈ ಎಂದೆ! ಇದಲ್ಲದೇ ಮತ್ತೆ ಮತ್ತೆ ಸ್ಟುಡಿಯೋಗಳಿಗೆ ಹೋಗಿ ಡಬ್ಬಿಂಗ್ ಮಾಡುವ ಶಿಕ್ಷೆ! ಒಟ್ಟಿನಲ್ಲಿ ಯಾಕೋ ಆ ವ್ಯಕ್ತಿಯ ಜತೆ ಹೊಂದಾಣಿಕೆ ಆಗಲೇ ಇಲ್ಲ. ಒಂದು ನಮೂನೆ ಇರುಸು ಮುರುಸು. ಬೆಳಿಗ್ಗೆಯಿಂದ ರಾತ್ರಿ 9—10 ರವರೆಗೂ ಎಡೆಬಿಡದೇ ಒಂದು ನಿಮಿಷವೂ ಪುರುಸೊತ್ತು ಕೊಡದೆ ಅರೆಯುತ್ತಿದ್ದ ಪುಣ್ಯಾತ್ಮ! ಪ್ರತಿನಿತ್ಯ ಶೂಟಿಂಗ್ ಮುಗಿದ ಮೇಲೆ ‘ಅಬ್ಬಾ! ಇನ್ನೇಕು ಮುಪ್ಪದು ಪೇಜಾಚಿ.. ಮುಪ್ಪಂತಂಜು ಪೇಜಾಚಿ” (ಇವತ್ತು ಮೂವತ್ತು ಪೇಜಾಯ್ತು. 35 ಪೇಜಾಯ್ತು) ಎಂದು ಸಂಭ್ರಮಿಸುತ್ತಿದ್ದ. ಇವನ ಸಂಭ್ರಮ—ಅರಚಾಟಗಳ ಅಬ್ಬರದಲ್ಲಿ ನಾವುಗಳು ಬಸವಳಿದುಹೋಗುತ್ತಿದ್ದೆವು. ಕಲಾವಿದರೇನು ಯಂತ್ರಗಳೇ—ನಿಗದಿತ ಸಮಯದಲ್ಲಿ ನಿಗದಿಯಾದಷ್ಟು ಸಾಮಗ್ರಿಯನ್ನು ತಯಾರಿಸಿಕೊಡುವುದಕ್ಕೆ! ಒಬ್ಬ ನಟನಾಗಿ ನನಗೆ ‘ಹೇಗೆ ಅಭಿನಯಿಸಬಾರದು’ ಎಂಬುದನ್ನು ಕಲಿಸಿದ ಧಾರಾವಾಹಿ ಇದು!

‍ಲೇಖಕರು Admin MM

May 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: