ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ನೂರು ಚೂರಿಗಳು ಬೆನ್ನಿಗೆ ನಾಟಿದ ಹಾಗೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 157

ಈಗ ನನ್ನ ಎದುರಿಗಿದ್ದ ಬಹು ದೊಡ್ಡ ಸವಾಲೆಂದರೆ ಚಿನ್ನ ಬೆಳ್ಳಿ ವರ್ತಕರ ಮುಷ್ಕರ ಮುಗಿದು ಅವರು ಅಂಗಡಿ ಬಾಗಿಲು ತೆರೆಯುವಷ್ಟರಲ್ಲಿ ನಾನು ಈ ಕಳ್ಳತನದ ಪ್ರಸಂಗಕ್ಕೆ ಮಂಗಳ ಹಾಡಬೇಕು! ಇಲ್ಲದಿದ್ದರೆ ಚಿನ್ನ ಕನಸಿನ ಗಂಟು. ಶಾಹೀನ್ ಪ್ರಸಂಗದಲ್ಲಿ ನಮ್ಮ ಅಪಾರ್ಟ್ ಮೆಂಟ್ ನ ಸಿ ಸಿ ಟಿ ವಿ ಕ್ಯಾಮರಾಗಳು ನೆರವಾಗಿದ್ದವು. ಆಕೆ ಸಂದೇಹಮುಕ್ತರಾದದ್ದು ಅವುಗಳ ನೆರವಿನಿಂದ ತಾನೇ? ಐದನೆಯ ತಾರೀಖಿನಿಂದ ಹದಿನಾರನೇ ತಾರೀಖಿನವರೆಗಿನ ಎಲ್ಲಾ ಸಿ ಸಿ ಟಿ ವಿ ಫುಟೇಜ್ ಅನ್ನು ಗಮನಿಸಿದರೆ ಕಳ್ಳತನದ ಬಗ್ಗೆ ಏನಾದರೂ ಸುಳಿವು ಸಿಗಬಹುದೇನೋ. ಖಚಿತವಾಗಿ ಅಲ್ಲದಿದ್ದರೂ, ಸಂಶಯಾಸ್ಪದ ಚಲನವಲನಗಳನ್ನು ಗುರುತಿಸಲು ಸಾಧ್ಯವಾದರೂ ಸಾಕು, ಒಂದಿಷ್ಟು ಮುಂದುವರಿಯಬಹುದು. ಆದರೆ ಅಷ್ಟು ದಿನಗಳ ಫುಟೇಜ್ ಅನ್ನು ನಮ್ಮ ಅಪಾರ್ಟ್ ಮೆಂಟ್ ನ ಆಫೀಸಿನಲ್ಲಿ ಕುಳಿತು ನೋಡಲು ಸಾಧ್ಯವಿಲ್ಲ.

ನೂರಾರು ಗಂಟೆಗಳ ಫುಟೇಜ್ ಅದು! ಪೆನ್ ಡ್ರೈವ್ ಗೆ ವರ್ಗಾಯಿಸಿಕೊಂಡು ಮನೆಯಲ್ಲಿ ನೋಡಬಹುದು; ಆದರೆ ಅದಕ್ಕೂ ತಂತ್ರಜ್ಞರನ್ನು ಕರೆಸಬೇಕು..ಹತ್ತಾರು ಪೆನ್ ಡ್ರೈವ್ ಗಳನ್ನು ಕೊಂಡು ತರಬೇಕು.. ನೂರಾರು ಗಂಟೆಗಳ ಫುಟೇಜ್ ಅನ್ನು ಕುಳಿತು ನೋಡಬೇಕು…ಉಹೂಂ..ಇದು ಆಗದ ಹೋಗದ ಮಾತು, ಅಷ್ಟು ಸಮಯವೂ ಇಲ್ಲ ಈಗ. ಕಳ್ಳತನ ಇಂಥ ದಿನ ಆಗಿರಬಹುದು ಎನ್ನುವುದು ಖಚಿತವಾಗಿ ಗೊತ್ತಾದರೆ ಮಾತ್ರ ಯಾರು ಕದ್ದಿರಬಹುದೆಂದು ಹುಡುಕಲು ಸಾಧ್ಯವಾಗುತ್ತದೆ. ಆದರೆ ಹೇಗೆ? ನಾವು ಊರಿಗೆ ಹೋದ ಸಮಯದಲ್ಲಿ ಮಗ ಅನಿರುದ್ಧ, ಕಾಲೇಜ್ ನ ಕಾರ್ಯಕ್ರಮಕ್ಕೆ ಹೋಗಿ ಬಂದ ಸಮಯ ಬಿಟ್ಟರೆ ಮಿಕ್ಕ ಸಮಯವೆಲ್ಲಾ ಗೆಳೆಯರೊಂದಿಗೆ ಮನೆಯಲ್ಲೇ ಇದ್ದ. ಹಾಗೆ ನೋಡಿದರೆ ನಾವು ಊರಿನಲ್ಲಿರುವಾಗಲೂ ಬಹಳಷ್ಟು ಸಮಯ ಮನೆಯ ಬೀಗ ಹಾಕಿಯೇ ಇರುತ್ತದೆ. ಮನೆಯ ಮುಂಭಾಗದ, ಲಿಫ್ಟ್ ಗಳಿರುವ ಆವರಣದಲ್ಲಿ ಮತ್ತೂ ಮೂರು ಮನೆಗಳ ಬಾಗಿಲುಗಳಿದ್ದರೂ ಹೆಚ್ಚಿನಂಶ ಎಲ್ಲರ ಮನೆಯ ಬಾಗಿಲೂ ಮುಚ್ಚಿಯೇ ಇರುವುದರಿಂದ ಅಲ್ಲಿ ಆಗುವ ಹೊರಗಿನವರ ಯಾವ ಓಡಾಟಗಳೂ ಯಾರ ಗಮನಕ್ಕೂ ಬರುವುದೇ ಇಲ್ಲ. ಮನೆಯ ಬೀಗ ಒಡೆದಿಲ್ಲವಾದ್ದರಿಂದ ನಕಲಿ ಬೀಗದ ಕೈ ಬಳಸಿಯೇ ಬಾಗಿಲು ತೆರೆದು ಒಳಗೆ ಬಂದಿರಬೇಕು. ವೃತ್ತಿಪರ ಕಳ್ಳರ ಬಳಿ ನಕಲಿ ಬೀಗದ ಕೈಗಳ ಗೊಂಚಲೇ ಇರುತ್ತದೇನೋ ನಿಜ; ಆದರೆ ನಮ್ಮ ಮನೆಯನ್ನೇ ಹೇಗೆ ಆಯ್ದುಕೊಳ್ಳುತ್ತಾರೆ ಕಳ್ಳತನ ಮಾಡಲು? ನಮ್ಮ ಚಲನವಲನಗಳ ಬಗ್ಗೆ ಅವರಿಗೆ ಹೇಗೆ ಗೊತ್ತಿರುತ್ತದೆ? ಹಾಗಾಗಬೇಕಾದರೆ ನಮ್ಮ ಸೆಕ್ಯೂರಿಟಿಯವರು ಕಳ್ಳರೊಂದಿಗೆ ಶಾಮೀಲಾಗಿರಬೇಕು! ನಾವು ಊರಿಗೆ ಹೋಗುವಾಗಲೂ ಸಹಾ ಅವರಿಗೆ ನಾವು ಊರಿಗೆ ಹೋಗುತ್ತಿರುವ ವಿಷಯ ಗೊತ್ತಾಗುವ ರೀತಿಯಲ್ಲಿಯೇ ಒಂದಷ್ಟು ಸೂಚನೆಗಳನ್ನೆಲ್ಲಾ ನೀಡಿ (ಕೊರಿಯರ್ ಇತ್ಯಾದಿಗಳಿಗೆ ಸಂಬಂಧಿಸಿದ ಹಾಗೆ) ಹೊರಟಿದ್ದೆವು!

ಹಲವಾರು ಬಾರಿ ಮಹಾ ಬುದ್ಧಿವಂತಿಕೆಯಿಂದ ಅವರ ಬಳಿಯೇ ಬೀಗದ ಕೈ ಬಿಟ್ಟು ಹೋದದ್ದೂ ಉಂಟು! ದುಷ್ಟ ಬುದ್ಧಿ ತಲೆಯಲ್ಲಿ ಮೊಳಕೆ ಒಡೆದ ಸೆಕ್ಯೂರಿಟಿಯವನೊಬ್ಬ ನಕಲಿ ಕೀ ಮಾಡಿಸಿಕೊಂಡು ಕಳ್ಳರೊಂದಿಗೆ ಶಾಮೀಲಾಗಿ ಕಳ್ಳತನ ಮಾಡಿಸಿರುವ ಸಾಧ್ಯತೆಯ ಘಾಟು ಯಾಕೋ ಜೋರಾಗಿಯೇ ಹೊಡೆಯತೊಡಗಿತು! ಆದರೆ ಖಚಿತವಾಗಿ ಆರೋಪ ಹೊರಿಸುವುದು ಹೇಗೆ? ಜತೆಗೆ ಅವರುಗಳ ಶಿಫ್ಟ್ ಆಗಾಗ್ಗೆ ಬದಲಾಗುತ್ತಲೇ ಇರುತ್ತದೆ; ಹೊಸ ಹೊಸ ಮುಖಗಳೂ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ! ಕೊನೆಯ ಪಕ್ಷ ಕಳ್ಳತನದ ‘ದಿನ’ ಗೊತ್ತಾದರೆ ಅಂದು ಡ್ಯೂಟಿಯಲ್ಲಿದ್ದ ಸೆಕ್ಯೂರಿಟಿಯವರನ್ನು ಒಮ್ಮೆ ‘ಪ್ರೀತಿಯಿಂದ ಮಾತಾಡಿಸಲು’ ಪೋಲೀಸರಿಗೆ ಕೇಳಿಕೊಳ್ಳಬಹುದು!. ಈಗ ಏನಾದರೂ ಕೇಳಿದರೆ ‘ನಿಮ್ಮ ಮಗನ ಸ್ನೇಹಿತರನ್ನು ಒಮ್ಮೆ ವಿಚಾರಿಸಲು ಒಪ್ಪಿಗೆ ಕೊಡಿ ಸರ್..’ ಎಂದು ನನ್ನನ್ನೇ ಇಕ್ಕಟ್ಟಿಗೆ ಸಿಕ್ಕಿಸುತ್ತಾರೆ! ಪೋಲೀಸರ ದೃಷ್ಟಿಯಿಂದ ಮಗನ ಗೆಳೆಯರನ್ನು ಅನುಮಾನಿಸುವುದು ಸಹಜವಾದರೂ ಮನೆಮಕ್ಕಳಂತಿರುವ ಅವರನ್ನು ವಿಚಾರಣೆಗೆ ಒಳಪಡಿಸಿ ಅವರ ಮಾನಸಿಕ ನೆಮ್ಮದಿಯನ್ನು ಕೆಡಿಸುವುದು ಯಾವ ಸೀಮೆಯ ನ್ಯಾಯ? ಸಾಧ್ಯವೇ ಇಲ್ಲ! ಕಳ್ಳತನದ ದಿನಾಂಕದ ಪತ್ತೆಯೊಂದೇ ಈಗ ನನ್ನ ಮುಂದಿರುವ ದೊಡ್ಡ ಸವಾಲು!

ರಂಜನಿ ಮಾಮೂಲಾಗಿ ಕಾಲೇಜ್ ಗೆ ಹೋಗಿಬಂದು ಮಾಡುತ್ತಿದ್ದರೂ, ಸಹಜ ಸ್ಥಿತಿಗೆ ಬಂದಿರುವಂತೆ ತೋರಿಸಿಕೊಳ್ಳುತ್ತಿದ್ದರೂ, ಕಳ್ಳತನ ಅವಳ ಮನಸ್ಸಿನ ಮೇಲೆ ಆಳವಾದ ಗಾಯವನ್ನೇ ಕೆತ್ತಿಬಿಟ್ಟಿತ್ತು. “ನಾವು ಯಾರೂ ಮನೆಯಲ್ಲಿಲ್ಲದ ವೇಳೆಯಲ್ಲಿ ಯಾರೋ ಅಪರಿಚಿತ ದುಷ್ಟ ನಮ್ಮ ಮನೆಯೊಳಗೆ ಪ್ರವೇಶಿಸಿ ಒಂದಷ್ಟು ಸಮಯವನ್ನು ಕಳೆದು ಕಳ್ಳತನ ಮಾಡಿ ಹೋದ ಎಂಬ ಸಂಗತಿಯನ್ನೇ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಪ್ರಭೂಜೀ” ಎಂದು ಹಲುಬುತ್ತಾ ಕಣ್ತುಂಬಿಕೊಳ್ಳುತ್ತಿದ್ದಳು. ಕೆಲವೊಮ್ಮೆ ಒಡವೆಗಳನ್ನಿಟ್ಟಿದ್ದ ಬೀರುವಿನ ಬಾಗಿಲು ತೆರೆದು ಒಡವೆಗಳ ಖಾನೆಯನ್ನೂ ಮುಂದಕ್ಕೆಳೆದು ಏನನ್ನೋ ಹುಡುಕುವವಳಂತೆ ನಿಂತಿರುತ್ತಿದ್ದಳು. “ಯಾಕೆ ರಂಜು”? ಎಂದು ನಾನು ಕೇಳಿದರೆ, “ಅಕಸ್ಮಾತ್ ನೀವು ನನ್ನ ಹುಟ್ಟುಹಬ್ಬಕ್ಕೆ ಕೊಡಿಸಿದ್ದ ಸರಾನ ಅವನು ಬಿಟ್ಟುಹೋಗಿದ್ದು ಅದು ನಮ್ಮ ಕಣ್ಣಿಗೆ ಬೀಳದೆ ಮರೇಲಿದ್ದಿರಬಹುದಾ ಅಂತ ನೋಡ್ತಿದೀನಿ” ಎಂತಲೋ ಮತ್ತೇನನ್ನೋ ಹುಡುಕುತ್ತಿದ್ದೇನೆ ಎಂತಲೋ ಹೇಳುತ್ತಿದ್ದಳು. “ಆ ನೆಕ್ಲೇಸ್ ಒಂದು ಸಿಕ್ಕಿಬಿಟ್ಟರೂ ಸಾಕು..ನೀವು ಅಷ್ಟು ಪ್ರೀತಿಯಿಂದ ನನಗೆ ಕೊಡಿಸಿದ್ದ ಸರಾನ ಈಗ ಯಾವನೋ ಸುಡುಗಾಡು ಕಳ್ಳನ ಹೆಂಡತಿ ಹಾಕ್ಕೊಂಡು ಮೆರೀತಿದಾಳೆ ಅನ್ನೋದನ್ನ ಕಲ್ಪಿಸಿಕೊಳ್ಳೋಕೂ ಆಗ್ತಿಲ್ಲ ನನಗೆ” ಎನ್ನುತ್ತಾ ಬಿಕ್ಕುತ್ತಿದ್ದಳು. ಇವೆಲ್ಲವೂ, ಕಳ್ಳನನ್ನು ಆದಷ್ಟು ಬೇಗ ಹಿಡಿಯಲೇ ಬೇಕೆಂಬ ನನ್ನ ನಿರ್ಧಾರವನ್ನು ಗಟ್ಟಿಮಾಡುತ್ತಿದ್ದವು.

ಒಂದು ದಿನ ನಮ್ಮ ಹತ್ತಿರದ ಸಂಬಂಧಿಯೊಬ್ಬರ ಮನೆಯ ಮದುವೆಗೆ ನಾವಿಬ್ಬರೂ ಹೋಗಲು ಸಿದ್ಧರಾಗುತ್ತಿದ್ದೆವು. “ಇವತ್ತು ನೀವು ಕೊಡಿಸಿದ್ದ ನೆಕ್ಲೇಸ್ ಇದ್ದಿದ್ರೆ ಎಷ್ಟು ಚೆನ್ನಾಗಿರೋದು..ಬೇರೆ ಯಾವ ಒಡವೇನೂ ಬೇಕಾಗ್ತಾನೇ ಇರಲಿಲ್ಲ..ಹೋಗಲಿ, ನಮ್ಮಮ್ಮ ಕೊಟ್ಟಿದ್ದ ವಜ್ರದ ಮೂಗುಬೊಟ್ಟನ್ನ ಹಾಕ್ಕೋತೀನಿ..ಮುಖ ಒಂಚೂರು ಗಲಗಲಾ ಅಂತಿರುತ್ತೆ” ಎನ್ನುತ್ತಾ ರಂಜನಿ ವಜ್ರದ ಮೂಗುಬೊಟ್ಟನ್ನು ಹಾಕಿಕೊಂಡಳು. ಯಾಕೋ ಈ ಮಾತು ಹಿಂದೆಯೂ ಒಮ್ಮೆ ಕೇಳಿದಂತೆ ನನಗೆ ಭಾಸವಾಗತೊಡಗಿತು ! “ರಂಜು, ಇತ್ತೀಚೆಗೆ ಯಾವಾಗಲೋ ನೀನು ಈ ವಜ್ರದ ಮೂಗುಬೊಟ್ಟಿನ ವಿಷಯ ನನ್ನ ಹತ್ತಿರ ಹೇಳಿದ್ದೆಯಾ?” ಎಂದವಳನ್ನು ಕೇಳಿದೆ. ” ಹೂಂ. ಮತ್ತೂರಿಗೆ ಹೊರಡೋ ಹಿಂದಿನ ದಿನ, ಈ ಮೂಗುಬೊಟ್ಟು ಹಾಕಿಕೊಂಡು ಬರಲಾ? ಅಂತ ನಾನು ನಿಮ್ಮನ್ನ ಕೇಳಿದ್ದೆ. ನೀವು ನಿಮ್ಮ ಮಾಮೂಲು ವರಸೇಲಿ ‘ನಿನ್ನಿಷ್ಟ’ ಅಂದಿದ್ರಿ” ಎಂದಳವಳು.

ನಾನು: ” ನೀನು ಮೂಗುಬೊಟ್ಟು ಹಾಕಿಕೊಂಡು ಬಂದಿದ್ದೆಯಾ?”
ರಂಜನಿ: ” ಹೂಂ. ನಮ್ಮಮ್ಮನ ನೆನಪಾಗಿ ಉಳಿದಿರೋದು ಇದೊಂದೇ ಒಡವೆ; ಅದಕ್ಕೇ ಆವಾಗಾವಾಗ ಒಳ್ಳೇ ಫಂಕ್ಷನ್ ಇದ್ದಾಗ ಹಾಕ್ಕೊಳೋಕೆ ಆಸೆ ಆಗುತ್ತೆ”.

ನಾನು: “ಊರಿಂದ ಬಂದ ಮೇಲೆ ಯಾವಾಗ ಇದನ್ನ ಬಿಚ್ಚಿಟ್ಟೆ?”
ರಂಜನಿ: “ಬಂದ ಮಾರನೇ ದಿನಾನೇ ಈ ಚಿಕ್ಕ ಡಬ್ಬೀಲಿ ಹಾಕಿಟ್ಟುಬಿಟ್ಟೆ”. ಎನ್ನುತ್ತಿದ್ದಂತೆ ಇಬ್ಬರಿಗೂ ಮಿಂಚು ಹೊಳೆದ ಹಾಗೆ ಜ್ಞಾನೋದಯವಾಗಿಬಿಟ್ಟಿತು! ಅಂದರೆ ಊರಿನಿಂದ ಬಂದ ಮೇಲೆ ಬಿಚ್ಚಿಟ್ಟಿರುವ ಈ ವಜ್ರದ ಮೂಗುಬೊಟ್ಟು ಬೀರುವಿನ ಖಾನೆಯಲ್ಲೇ ಡಬ್ಬಿಯಲ್ಲಿ ಭದ್ರವಾಗಿ ಕುಳಿತಿದೆ! 16ನೇ ತಾರೀಖು, ಅಂದರೆ ಕಳ್ಳತನವಾಗಿದೆಯೆಂದು ಗೊತ್ತಾದ ದಿನ, ಆ ಕ್ಷಣದ ಗಾಬರಿ ಆತಂಕಗಳಲ್ಲಿ ವಜ್ರದ ಮೂಗುಬೊಟ್ಟಿರುವ ಈ ಚಿಕ್ಕ ಡಬ್ಬಿ ರಂಜನಿಯ ಗಮನಕ್ಕೆ ಬಂದಿಲ್ಲ! ಅಂದರೆ ಊರಿನಿಂದ ಬಂದಮೇಲೆ ಕಳ್ಳತನವಾಗಿದ್ದರೆ ವಜ್ರದ ಮೂಗುಬೊಟ್ಟೂ ಕಳ್ಳತನವಾಗಬೇಕಿತ್ತು. ಊರಿಗೆ ಹೊರಡುವ ಮುನ್ನ ಎಲ್ಲ ಒಡವೆಗಳ ಜೊತೆ ಮೂಗುಬೊಟ್ಟೂ ಇದೆ; ಊರಿಂದ ಬಂದಮೇಲೆ ಖಾನೆಯಲ್ಲಿಟ್ಟಿದ್ದ ಮೂಗುಬೊಟ್ಟು ಇದೆ; ಉಳಿದ ಒಡವೆಗಳು ನಾಪತ್ತೆಯಾಗಿವೆ! ಅಂದರೆ ಬಹುತೇಕ ನಾವು ಊರಿಗೆ ಹೋದ ಸಮಯದಲ್ಲೇ ಕಳ್ಳತನವಾಗಿರಬೇಕು!

ಓಲೆಗಳನ್ನು ಬಿಟ್ಟ ಹಾಗೆ ಕಳ್ಳ ಇದನ್ನೂ ಬಿಟ್ಟಿರಬಹುದಾದ ಸಾಧ್ಯತೆಯೂ ಉಂಟು. ಆದರೆ ಓಲೆಗಳು ಬಟ್ಟಲಲ್ಲಿ ಕಾಣುವಂತಿದ್ದುದರಿಂದ ಖಾನೆ ತೆರೆದೊಡನೆ ಕಾಣದೆ ಹೋದರೆ ಅನುಮಾನ ಬರಬಹುದು ; ತಡವಾಗಿ ವಿಷಯ ತಿಳಿಯಲೆಂಬ ಕಾರಣಕ್ಕೆ ಓಲೆಗಳನ್ನು ಬಿಟ್ಟು ಉಳಿದ ಒಡವೆಗಳನ್ನು ಬಾಕ್ಸ್ ಗಳಿಂದ ತೆಗೆದುಕೊಂಡು ಮರಳಿ ಬಾಕ್ಸ್ ಗಳನ್ನು ಮುಚ್ಚಿಟ್ಟು ಖಾನೆ ಮುಚ್ಚಿ ಹೋಗಿರಬಹುದು! ಖಾನೆಯಲ್ಲಿದ್ದ ಒಂದೆರಡು ಚಿಕ್ಕ ಪುಟ್ಟ ಬೆಳ್ಳಿಯ ವಸ್ತುಗಳನ್ನೇ ಕದ್ದವನು ವಜ್ರದ ಮೂಗುಬೊಟ್ಟು—ಅದೂ ಹಳೆಯ ಕಾಲದ್ದು—ಇದ್ದಿದ್ದರೆ ಬಿಡುತ್ತಿದ್ದನೇ! ರಂಜನಿ ಊರಿಗೆ ಹಾಕಿಕೊಂಡು ಬಂದಿದ್ದ ಕರಿಮಣಿಸರ, ತಾಳಿಸರ ಹಾಗೂ ವಜ್ರದ ಮೂಗುಬೊಟ್ಟು ಸುರಕ್ಷಿತವಾಗಿವೆ! ಬಂದಮೇಲೂ ಸರಗಳು ಕುತ್ತಿಗೆಯಲ್ಲೇ ಇವೆ, ಮೂಗುಬೊಟ್ಟನ್ನು ಮಾತ್ರ ಬಿಚ್ಚಿಟ್ಟಿದ್ದಾಳೆ; ಅದು ಸುರಕ್ಷಿತವಾಗಿದೆ!

ಇಷ್ಟು ವಿಷಯಗಳು ಮನಸ್ಸಿಗೆ ಹೊಳೆಯುತ್ತಿದ್ದಂತೆ ಹೊಸ ಉತ್ಸಾಹ ಮೂಡತೊಡಗಿತು. ನಾವು ಹೊರಟದ್ದು ಐದನೆಯ ತಾರೀಖು ಬೆಳಿಗ್ಗೆ ; ಮರಳಿದ್ದು ಏಳನೆಯ ತಾರೀಖು ಸಂಜೆ. ಇಷ್ಟು ಸಮಯದ ನಡುವೆಯೇ ಕಳ್ಳತನ ನಡೆದಿರಬೇಕು!

ಅಂದು ರಾತ್ರಿ ಹೋಗಿ ಎರಡು ಪೆನ್ ಡ್ರೈವ್ ಗಳನ್ನು ತಂದು ತಂತ್ರಜ್ಞರ ನೆರವಿನಿಂದ ಈ ಸಮಯದ ಸಿ ಸಿ ಟಿ ವಿ ಫುಟೇಜ್ ಅನ್ನು ವರ್ಗಾಯಿಸಿಕೊಂಡೆ.

ಮರುದಿನ ಶೂಟಿಂಗ್ ಗೆ ಲ್ಯಾಪ್ ಟಾಪ್ ಅನ್ನು ತೆಗೆದುಕೊಂಡು ಹೋಗಿ ಪೆನ್ ಡ್ರೈವ್ ನಲ್ಲಿ ದಾಖಲಾಗಿದ್ದ ಸಿ ಸಿ ಟಿ ವಿ ದೃಶ್ಯಾವಳಿಗಳನ್ನು ಬಿಡುವಿನ ಸಮಯದಲ್ಲಿ ಪರಿಶೀಲಿಸತೊಡಗಿದೆ. ಒಂದೇ ಒಂದು ನಿಮಿಷದ ಫುಟೇಜ್ ಅನ್ನೂ ತಪ್ಪಿಸುವಂತಿರಲಿಲ್ಲ ! ನನಗೆ ಬೇಕಾದ ಮಾಹಿತಿ ಆ ಕ್ಷಣದಲ್ಲೇ ಇದ್ದುಬಿಟ್ಟರೆ ! ನನ್ನ ಸಹ ಕಲಾವಿದರಿಗೆಲ್ಲಾ ಆಶ್ಚರ್ಯ: ಇದೇನು..ಲ್ಯಾಪ್ ಟಾಪ್ ನಲ್ಲಿ ಅಪಾರ್ಟ್ ಮೆಂಟ್ ನ ಗೇಟ್ ದೃಶ್ಯವನ್ನೇ ಒಂದೇ ಸಮ ನೋಡುತ್ತಿದ್ದಾನೆ ಎಂದು ! ಅವರಿಗೆ ‘ಈ ಕಾರಣಕ್ಕಾಗಿ ನೋಡುತ್ತಿದ್ದೇನೆ’ ಎಂದು ಹೇಳಿದೆ ; “ಓಹೋ! sherlock holmes in action!” ಎಂದು ನಗುತ್ತಾ ಶುಭ ಹಾರೈಸಿದರು. ಒಂದಿಬ್ಬರು ನನ್ನ ಜತೆಗೇ ಕೂತು ಒಂದೆರಡು ಸಂದರ್ಭಗಳನ್ನು ಗಮನಿಸಲು ಸೂಚಿಸಿದ್ದೂ ಉಂಟು! ಅಂದಿನ ಶೂಟಿಂಗ್ ನ ಬಿಡುವಿನ ಸಮಯದಲ್ಲಿ ಐದನೆಯ ತಾರೀಖಿನ ಫುಟೇಜನ್ನು ಪರಿಶೀಲಿಸಲು ಸಾಧ್ಯವಾಯಿತು. ಹೆಚ್ಚೇನೂ ಪ್ರಯೋಜನವಾಗಲಿಲ್ಲ..ವಿಶೇಷ ಸುಳಿವುಗಳೂ ಸಿಗಲಿಲ್ಲ. ನಿರಾಸೆಯೇ ಆದರೂ ಧೈರ್ಯಗೆಡಲಿಲ್ಲ. ಇನ್ನೂ ಎರಡು ದಿನಗಳ ಫುಟೇಜ್ ಇದೆ! “ಭರವಸೆ ಇಟ್ಟುಕೋ ಪ್ರಭೂ..ಭರವಸೆ ಇಟ್ಟುಕೋ… ಕಡೆಯ ನಗು ನಿನ್ನದೇ!” ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ.

ಅಂದು ರಾತ್ರಿ ಶೂಟಿಂಗ್ ನಿಂದ ಮರಳಿಬಂದ ಮೇಲೆ ಒಂದು ವಿಚಾರ ಹೊಳೆಯಿತು: ಆರನೆಯ ತಾರೀಖು ಅನಿರುದ್ಧನ ಕಾಲೇಜ್ ನಲ್ಲಿ ಕಾರ್ಯಕ್ರಮವಿದ್ದದ್ದು. ಅವನ ಜತೆ ಕೊಂಚ ಮಾತಾಡಿ ವಿವರಗಳನ್ನು ಕಲೆಹಾಕೋಣವೆಂದರೆ ಅವನು ಅವನ ಸ್ನೇಹಿತನ ಮನೆಗೆ combined study ಗೆಂದು ಹೋಗಿದ್ದ. ನಮ್ಮ ಡ್ರೃೈವರ್ ಇಬ್ರಾಹಿಂ ಅವನನ್ನು ಬಿಟ್ಟುಬಂದದ್ದರಿಂದ ಆ ಗೆಳೆಯನ ಮನೆ ಅವನಿಗೆ ಗೊತ್ತಿತ್ತು. ನಾನು, “ಹೋಗಿ ಅನಿರುದ್ಧನನ್ನು ಕರೆದುಕೊಂಡು ಬಂದುಬಿಡಿ ” ಎಂದು ಹೇಳಿ ಇಬ್ರಾಹಿಂನನ್ನು ಕಳಿಸಿದೆ. ಒಂದು ತಾಸಿನಲ್ಲಿ ಅನಿರುದ್ಧ ಮನೆಗೆ ಬಂದ. ಅವನನ್ನು ರೂಂನಲ್ಲಿ ಕೂರಿಸಿಕೊಂಡು , “ಆರನೆಯ ತಾರೀಖು ಏನೇನಾಯಿತು ಅಂತ ಚೆನ್ನಾಗಿ ಜ್ಞಾಪಿಸಿಕೊಂಡು ಹೇಳು ಪುಟ್ಟಣ್ಣಾ” ಎಂದೆ.

ಅನಿರುದ್ಧನ ವಿವರಣೆಯ ಸಾರಾಂಶ ಇದು:
ಅಂದು ಬೆಳಿಗ್ಗೆ ಮಾಮೂಲಿನ ಹಾಗೆ 7.45 ಕ್ಕೆ ಇಬ್ರಾಹಿಂ ಡ್ಯೂಟಿಗೆ ಬಂದಿದ್ದಾನೆ ; ಅನಿರುದ್ಧ ಅವನನ್ನೇ ಕಳುಹಿಸಿ ತಿಂಡಿ ತರಿಸಿಕೊಂಡಿದ್ದಾನೆ ; ಅನಂತರ 9 ಗಂಟೆಯ ಸುಮಾರಿಗೆ ಇಬ್ರಾಹಿಂ ಅನಿರುದ್ಧನನ್ನು ಕಾಲೇಜ್ ಗೆ ಕರೆದುಕೊಂಡು ಹೋಗಿದ್ದಾನೆ ; ಅಂದು ಸಂಜೆಯೂ ಕಾಲೇಜ್ ನಲ್ಲಿ ಕಾರ್ಯಕ್ರಮವಿದ್ದುದರಿಂದ ಅನಿರುದ್ಧ ಇಬ್ರಾಹಿಂನನ್ನು ಮನೆಗೆ ವಾಪಸ್ ಕಳಿಸಿಬಿಟ್ಟಿದ್ದಾನೆ ; “ನಮ್ಮ ಕಾರ್ಯಕ್ರಮ ಮುಗಿದ ಮೇಲೆ ಫೋನ್ ಮಾಡುತ್ತೇನೆ, ಆಗ ಬಂದು ನನ್ನನ್ನೂ ನನ್ನ ಗೆಳೆಯರನ್ನೂ ಕರೆದುಕೊಂಡು ಹೋಗಿ ” ಎಂದು ಸೂಚನೆ ಕೊಟ್ಟಿದ್ದಾನೆ; ಇಬ್ರಾಹಿಂ ಕೂಡಾ,”ಏನೂ ಚಿಂತೆಯಿಲ್ಲ, ಎಷ್ಟು ಹೊತ್ತಾದರೂ ಸರಿ, ಫೋನ್ ಮಾಡಿ. ನಾನೇ ಬಂದು ಕರಕೊಂಡು ಹೋಗ್ತೇನೆ… ನೀವು ರಿಸ್ಕ್ ತೊಗೋಬೇಡಿ” ಎಂದು ಆಶ್ವಾಸನೆ ಕೊಟ್ಟಿದ್ದಾನೆ ; ನಂತರ ಇಬ್ರಾಹಿಂ ಅಪಾರ್ಟ್ ಮೆಂಟ್ ಗೆ ಬಂದು ಕಾರ್ ಅನ್ನು ನಿಲ್ಲಿಸಿ ಹತ್ತಿರದಲ್ಲೇ ಇದ್ದ ತನ್ನ ಮನೆಗೆ ಹೋಗಿದ್ದಾನೆ; ಸಂಜೆಯ ವೇಳೆಗೆ ಅನಿರುದ್ಧನ ಕಾರ್ಯಕ್ರಮ ಮತ್ತೆ ಬದಲಾಗಿ, “ನೀವು ಬರುವ ಅಗತ್ಯವಿಲ್ಲ; ನನ್ನ ಫ್ರೆಂಡ್ ತಂದೆ ನಮ್ಮನ್ನು ಕರೆದುಕೊಂಡು ಬರುತ್ತಾರೆ” ಎಂದು ಇಬ್ರಾಹಿಂಗೆ ಹೇಳಿದ್ದಾನೆ; ನಂತರ ರಾತ್ರಿ ಹನ್ನೊಂದು ಗಂಟೆಯ ವೇಳೆಗೆ ಎಲ್ಲರೂ ಮನೆಗೆ ಬಂದಿದ್ದಾರೆ; ಮರುದಿನವೂ ಬೆಳಿಗ್ಗೆ ಇಬ್ರಾಹಿಂನನ್ನು ಕಳಿಸಿ ತಿಂಡಿ ತರಿಸಿಕೊಂಡಿದ್ದಾರೆ; ನಂತರ ಅನಿರುದ್ಧನ ಗೆಳೆಯರು ಒಬ್ಬೊಬ್ಬರಾಗಿ ಅವರವರ ಮನೆಗೆ ತೆರಳಿದ್ದಾರೆ; ನಾವು ಮತ್ತೂರಿನಿಂದ ಊರಿಗೆ ಮರಳಿ ಬರುವ ವೇಳೆಯ ತನಕ ಅನಿರುದ್ಧ ಮನೆಯಲ್ಲೇ ಇದ್ದಾನೆ.

ಇಷ್ಟು ವಿವರಗಳಿಂದ ಮತ್ತೂ ಒಂದು ವಿಷಯ ಖಚಿತವಾಯಿತು: ಏಳನೆಯ ತಾರೀಖು ಕಳ್ಳತನ ನಡೆದಿರುವ ಸಾಧ್ಯತೆಯೇ ಇಲ್ಲ. ಏನಿದ್ದರೂ ಆರನೆಯ ತಾರೀಖು ಬೆಳಿಗ್ಗೆ 9 ಗಂಟೆಯ ನಂತರ ರಾತ್ರಿ 11 ಗಂಟೆಯ ಒಳಗೆ ನಡೆದಿರಬೇಕು ಕಳ್ಳತನ!

ನನ್ನ ತನಿಖೆ ಈ ಹಂತಕ್ಕೆ ಬಂದು ಮುಟ್ಟಿದ್ದು ತುಂಬಾ ಖುಷಿಯಾಗಿ ಹೋಯಿತು!

ಮರುದಿನ ಶೂಟಿಂಗ್ ನಲ್ಲಿ ಆರನೆಯ ತಾರೀಖಿನ ಸಿ ಸಿ ಟಿ ವಿ ಫುಟೇಜ್ ಅನ್ನು ಪರಿಶೀಲಿಸತೊಡಗಿದೆ. ನನ್ನ ದೃಶ್ಯಗಳೂ ಅಂದು ಹೆಚ್ಚಿರಲಿಲ್ಲವಾದ್ದರಿಂದ ಸಾಕಷ್ಟು ಬಿಡುವಿನ ಸಮಯವೂ ದೊರೆತಿತ್ತು. ವಿಶೇಷವಾಗಿ ಸೆಕ್ಯೂರಿಟಿಯವರ ಚಲನವಲನಗಳ ಮೇಲೇ ನನ್ನ ಗಮನವನ್ನು ಕೇಂದ್ರೀಕರಿಸಿದ್ದೆ. ಸಿ ಸಿ ಟಿ ವಿ ಫುಟೇಜ್ ನಲ್ಲಿ ನಾನು ಎರಡು ಗೇಟ್ ಗಳಿಂದ ಒಳಬರುವ—ಹೊರಹೋಗುವ ವಾಹನ—ವ್ಯಕ್ತಿಗಳನ್ನು , ಹಾಗೆಯೇ ನಮ್ಮ ಬ್ಲಾಕ್ ಗೆ ಹೋಗುವ ವ್ಯಕ್ತಿಗಳನ್ನು ಗುರುತಿಸಬಹುದಿತ್ತು. ಬೆಳಿಗ್ಗೆ 7.45 ಕ್ಕೆ ಇಬ್ರಾಹಿಂ ತನ್ನ ಬೈಕ್ ನಲ್ಲಿ ಅಪಾರ್ಟ್ ಮೆಂಟ್ ಒಳಬಂದ. ತುಸುಹೊತ್ತಿಗೇ ಬೈಕ್ ನಲ್ಲಿಯೇ ಹೊರಹೋಗಿ ಮತ್ತೆ 15 ನಿಮಿಷಗಳಲ್ಲಿ ಮರಳಿ ಬಂದ. ಬಹುಶಃ ಅನಿರುದ್ಧನಿಗೆ ತಿಂಡಿ ತಂದುಕೊಡಲು ಹೋಗಿದ್ದಿರಬೇಕು ಎಂದುಕೊಂಡೆ. ಅನಂತರ 9 ಗಂಟೆಯ ವೇಳೆಗೆ ನಮ್ಮ ತಿಳಿ ಹಸಿರು ಬಣ್ಣದ ಫೋರ್ಡ್ ಕಾರ್ ಗೇಟ್ ನಿಂದ ಆಚೆ ಹೊರಟಿತು. ಓ..ಅನಿರುದ್ಧ ಕಾಲೇಜ್ ಗೆ ಹೊರಟ ಎಂದುಕೊಂಡೆ. ನಂತರ ಒಂದಷ್ಟು ಜನ, ಒಮ್ಮೊಮ್ಮೆ ನಮ್ಮ ಸೆಕ್ಯೂರಿಟಿಯವರು ನಮ್ಮ ಬ್ಲಾಕ್ ಒಳಗೆ ಪ್ರವೇಶಿಸಿದರೂ ಗುಮಾನಿ ಬರುವಷ್ಟು ಸಮಯ ಯಾರೂ ಅಲ್ಲಿ ಉಳಿಯಲಿಲ್ಲ. ಎರಡು ಮೂರು ತಾಸಿನ ನೀರಸ ಫುಟೇಜ್ ಅನ್ನು ನೋಡುತ್ತಾ ನಿರರ್ಥಕವಾಗಿ ಕಾಲ ಕಳೆದ ಮೇಲೆ ಬೇಸರವಾಗತೊಡಗಿತು. ಯಾಕೋ ನನ್ನ ತನಿಖೆ ಹಳ್ಳ ಹಿಡಿಯುತ್ತಿದೆ ಎಂದು ನಿರಾಸೆಯಾಗತೊಡಗಿತು. ಯಾಂತ್ರಿಕವಾಗಿ ಉಳಿದ ಸಮಯದ ಫುಟೇಜ್ ನೋಡತೊಡಗಿದೆ. ಸುಮಾರು ಹನ್ನೆರಡು ಗಂಟೆಯ ವೇಳೆಗೆ ನಮ್ಮ ಫೋರ್ಡ್ ಕಾರ್ ಅಪಾರ್ಟ್ ಮೆಂಟ್ ಪ್ರವೇಶಿಸಿತು. ಓಹೋ..ಅನಿರುದ್ಧ ಹೇಳಿದ್ದಂತೆ ಇಬ್ರಾಹಿಂ ಕಾರ್ ನಿಲ್ಲಿಸಿ ಹೋಗಲು ಬಂದಿದ್ದಾನೆ ; ಒಂದೆರಡು ನಿಮಿಷಗಳಲ್ಲಿ ಬೈಕ್ ತೆಗೆದುಕೊಂಡು ನಿರ್ಗಮನ ದ್ವಾರದಿಂದ ಹೊರಹೋಗುತ್ತಾನೆ ಎಂದುಕೊಳ್ಳುತ್ತಾ ಚಿತ್ರಿಕೆಗಳನ್ನು ನೋಡತೊಡಗಿದೆ. ಯಾರೋ ಒಬ್ಬ ವ್ಯಕ್ತಿ ಗೇಟ್ ಒಳಬಂದವನು ಒಬ್ಬ ಸೆಕ್ಯೂರಿಟಿ ಹುಡುಗನ ಜೊತೆ ಗುಸುಗುಸು ಗುಟ್ಟು ಮಾತಾಡತೊಡಗಿದ್ದು ನನ್ನ ಗಮನ ಸೆಳೆಯಿತು. ಕೆಲ ನಿಮಿಷಗಳಲ್ಲಿ ಆ ವ್ಯಕ್ತಿ ಹೊರ ಹೋದ ಮೇಲೆ ಈ ಸೆಕ್ಯೂರಿಟಿಯವ ಆನಂದದಿಂದ ಯಾವುದೋ ಹಾಡಿಗೆ ನರ್ತಿಸುವಂತೆ ಹೆಜ್ಜೆ ಹಾಕತೊಡಗಿದ್ದು ಯಾಕೋ ಭಾರೀ ಅನುಮಾನಾಸ್ಪದವಾಗಿ ಕಂಡಿತು. ಸಮಯ ಬಂದಾಗ ವಿಚಾರಿಸಬೇಕೆಂದುಕೊಂಡು ಆ ಫುಟೇಜ್ ನ ರೀಡಿಂಗ್ ಗುರುತು ಹಾಕಿಕೊಂಡೆ. ಆ ವೇಳೆಗೆ ನಾಲ್ಕಾರು ನಿಮಿಷಗಳು ಕಳೆದಿದ್ದವು. ಇಬ್ರಾಹಿಂ ಯಾಕೋ ಬೈಕ್ ತೆಗೆದುಕೊಂಡು ಹೊರಗೆ ಹೋದಂತೆ ಅನ್ನಿಸಲಿಲ್ಲ. 10 ನಿಮಿಷಗಳು ಕಳೆದವು. ಇಬ್ರಾಹಿಂ ಕಾಣುತ್ತಿಲ್ಲ. ಬಹುಶಃ ಬೈಕ್ ದು ಏನಾದರೂ ಸಣ್ಣ ಪುಟ್ಟ ತೊಂದರೆ ಆಗಿರಬಹುದು ಎಂದುಕೊಂಡೆ. 20 ನಿಮಿಷಗಳಾದವು..30..40 ನಿಮಿಷಗಳು ಕಳೆದರೂ ಇಬ್ರಾಹಿಂನ ನಿರ್ಗಮನವಾಗಿಲ್ಲ! ಎಂದೂ ತನ್ನ ಕೆಲಸ ಮುಗಿದ ಮೇಲೆ ಇಬ್ರಾಹಿಂ ಹಾಗೆ ಉಳಿದವನಲ್ಲ. ಅಪಾರ್ಟ್ ಮೆಂಟ್ ನಲ್ಲಿ ಯಾರೊಟ್ಟಿಗೂ ಅವನು ಮಾತಾಡಿದ್ದಾಗಲೀ ಗೆಳೆತನ ಬೆಳೆಸಿದ್ದಾಗಲೀ ಇಲ್ಲವೇ ಇಲ್ಲ. ಮತ್ತೇಕೆ ಇಷ್ಟು ತಡ? ಮತ್ತೂ ಹತ್ತು ನಿಮಿಷಗಳು ಉರುಳಿದವು. ಒಳಹೋಗಿ ಬರೋಬ್ಬರಿ 57 ನಿಮಿಷಗಳ ನಂತರ ಕಡೆಗೊಮ್ಮೆ ಇಬ್ರಾಹಿಂನ ಬೈಕ್, ನಿರ್ಗಮನದ ಬದಿಯ ಪ್ಯಾಸೇಜ್ ನಲ್ಲಿ ಕಾಣಿಸಿತು. ನಿಧಾನವಾಗಿಯೇ ಬಂದ ಇಬ್ರಾಹಿಂ ನಿರ್ಗಮನದ ದ್ವಾರವನ್ನು ದಾಟಿಕೊಂಡು ಹೊರಟುಹೋದ. ನನ್ನ ತಲೆ ಗಿರ್ರೆನತೊಡಗಿತು! ಎದೆಬಡಿತ ಹೆಚ್ಚಾಗತೊಡಗಿತು! ಅಂದರೆ..ಇಬ್ರಾಹಿಂ ಈ ಕಳ್ಳತನದ ಕೃತ್ಯ ಎಸಗಿರಬಹುದೇ? ದೇವಾ..ದೇವಾ..!! “ನನ್ನ ತಮ್ಮನಂತಿದ್ದಾನೆ, ಅವನ ವಿಚಾರಣೆ ಬೇಡ” ಎಂದು ನಾನೇ ಪೋಲೀಸರಿಗೆ ಹೇಳಿದ್ದೆ. ಈಗ ಅವನೇ “ಮುಖ್ಯ ಆರೋಪಿ”ಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ!!

ಕಾರ್ ನಿಲ್ಲಿಸಿದ ಮೇಲೆ ಸುಮಾರು 55 ನಿಮಿಷ ಅವನು ಅಪಾರ್ಟ್ ಮೆಂಟ್ ಒಳಗೇ ಇದ್ದಾನೆ! ಆದರೆ ನಮ್ಮ ಮನೆಯೊಳಗೆ ಹೋಗಿದ್ದಾನೆಂಬುದಕ್ಕೆ ಸಾಕ್ಷಿ ಏನೂ ಇಲ್ಲ. ಹಾಗೆ ಹೋಗಲು ಅವನ ಬಳಿ ಮನೆಯ ಬೀಗದ ಕೈ ಎಲ್ಲಿಂದ ಬರಬೇಕು? ಆ ಸಾಧ್ಯತೆಯ ಬಗ್ಗೆಯೇ ನನ್ನ ಗಮನವನ್ನೆಲ್ಲಾ ಕೇಂದ್ರೀಕರಿಸಿ ಯೋಚಿಸತೊಡಗಿದೆ.

ದೇವಾ!!! ದೇವಾ!! ಹೌದು!!! ಹಾಗೊಂದು ಸಾಧ್ಯತೆ ಇದೆ!!! ಹೌದು!!! ಅದು ಹಾಗೆಯೇ ಆಗಿರಬೇಕು!!! ಆ ವಿಚಾರ ಮನಸ್ಸಿಗೆ ಬಂದೊಡನೆ ನಿಂತ ನೆಲವೇ ಕುಸಿದ ಹಾಗೆ, ನೂರು ಚೂರಿಗಳು ಬೆನ್ನಿಗೆ ನಾಟಿದ ಹಾಗೆ ಅನುಭವ!!!

‍ಲೇಖಕರು Admin

6 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading