ಶ್ರೀನಿವಾಸ ಪ್ರಭು ಅಂಕಣ – ನಾನು ಬೆಂಗಳೂರು ದೂರದರ್ಶನಕ್ಕೆ ಬಂದ ಮೇಲೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

67

ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ತರಬೇತಿಯನ್ನು ಮುಗಿಸಿಕೊಂಡು ಬೆಂಗಳೂರಿಗೂ ಮರಳಿ ಬಂದು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ನಾನು ಕಾರ್ಯ ನಿರ್ವಹಿಸತೊಡಗಿದ್ದು 1984 ಏಪ್ರಿಲ್ ಮಾಹೆಯಲ್ಲಿ. ಎ.ಸತ್ಯನಾರಾಯಣ ಹಾಗೂ ವಿಜಯಲಕ್ಷ್ಮಿ ನನ್ನೊಂದಿಗೇ ಬಂದು ಸೇರಿದ ಇನ್ನಿಬ್ಬರು ನಿರ್ಮಾಪಕರಾದರೆ ಈಶ್ವರರಾವ್ , ಲಲಿತಾಂಬ ಹಾಗೂ ರೋಹಿಣಿ ಮಹಾಸ್ವಾಮಿ ಸಹಾಯಕ ನಿರ್ಮಾಪಕರು; ಸಂಕಲನಕಾರ ಗುಣಶೇಖರನ್ ಹಾಗೂ ಗ್ರಾಫಿಕ್ ಕಲಾವಿದ ಸುರೇಶ್. ಈ ಸುರೇಶ ದೆಹಲಿಯ ನನ್ನ ಆತ್ಮೀಯ ಮಿತ್ರ ಸುಬ್ಬಣ್ಣನ ಸೋದರ. ಬೆಂಗಳೂರು ಕೇಂದ್ರದಲ್ಲಿ ಅದಾಗಲೇ ಕೆಲ ಹಿರಿಯ ನಿರ್ಮಾಪಕರು—ಸಹಾಯಕ ನಿರ್ಮಾಪಕರು—ಕಾರ್ಯಕ್ರಮ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದರು.

ಕೇಂದ್ರದ ನಿರ್ದೇಶಕರಾಗಿದ್ದವರು ಜೆ.ಎನ್. ಕಮಲಾಪುರ್ ಅವರು. ಕಮಲಾಪುರ್ ಅವರು ನಾನು ದೆಹಲಿಯ ನಾಟಕಶಾಲೆಯಲ್ಲಿದ್ದಾಗ ದೆಹಲಿ ದೂರದರ್ಶನ ಕೇಂದ್ರದಲ್ಲಿ ಹಿರಿಯ ಅಧಿಕಾರಿಯಾಗಿದ್ದರು.ಶಾಲೆಗೆ ತುಸು ದೂರದಲ್ಲೇ ಇದ್ದ ಅವರ ಮನೆಗೆ ನಾನೂ ಅಶೋಕನೂ ಹಲವಾರು ಬಾರಿ ಹೋಗಿ ಆತಿಥ್ಯ ಸ್ವೀಕರಿಸಿ ಬಂದದ್ದುಂಟು! ಇನ್ನು ಆಗ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಬಸವರಾಜ್ ಅವರು.ಬಸವರಾಜ್ ಅವರಿಗೂ ರಂಗಭೂಮಿಯೊಂದಿಗೆ ನಂಟಿತ್ತು. ಅವರು ದೂರದರ್ಶನ ಸೇರುವ ಮೊದಲು ಬೇರಾವುದೋ ಸಂಸ್ಥೆಯಲ್ಲಿ—ಬಹುಶಃ ಮೈಸೂರಿನ ಸ್ಪೀಚ್ ಎಂಡ್ ಹಿಯರಿಂಗ್ ಇನ್ಸ್ ಟಿಟ್ಯೂಟ್ ಇರಬೇಕು—ಕೆಲಸ ಮಾಡುತ್ತಿದ್ದಾಗ ಅವರು ತಮ್ಮ ತಂಡದೊಂದಿಗೆ ಕಲಾಕ್ಷೇತ್ರದಲ್ಲಿ ನಡೆದ ಕೈಲಾಸಂ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ “ಬಂಡ್ವಾಳವಿಲ್ಲದ್ ಬಡಾಯಿ” ನಾಟಕವನ್ನು ಪ್ರದರ್ಶಿಸಿದ್ದರು. “ಕೈಲಾಸಂ ಅವರ ಈ ನಾಟಕದಲ್ಲಿ ಒಂದು ವಿಷಾದದ ದನಿ ಅಡಗಿರುವುದನ್ನು ಗುರುತಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ” ಎಂದು ಕರಪತ್ರದಲ್ಲಿ ಅವರು ಹೇಳಿಕೊಂಡಿದ್ದು ನನ್ನ ನೆನಪಿನಲ್ಲಿದೆ. ಮುಖ್ಯಪಾತ್ರದಲ್ಲಿ ಬಸವರಾಜ್ ಅವರು ಮನೋಜ್ಞವಾಗಿ ಅಭಿನಯಿಸಿದ್ದರು ಕೂಡಾ.ನಾಟಕಗಳನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಬಹುದಾದ ಸಾಧ್ಯತೆಗಳನ್ನು ನನ್ನ ಪ್ರಾರಂಭದ ದಿನಗಳಲ್ಲಿ ನನಗೆ ಪರಿಚಯ ಮಾಡಿಕೊಟ್ಟ ಪ್ರಯೋಗಗಳಲ್ಲಿ ಇದೂ ಒಂದು.

ಇನ್ನು ಬೆಂಗಳೂರು ಕೇಂದ್ರದಲ್ಲಿ ನಳಿನಿ ರಾಮಣ್ಣ ,ಹೇಮಲತಾ ಹಾಗೂ ಚಂದ್ರಕುಮಾರ್ ಎಂಬ ಹಿರಿಯ ನಿರ್ಮಾಪಕರು ಅದಾಗಲೇ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ತೊಡಗಿದ್ದರು. ನಳಿನಿ ರಾಮಣ್ಣ ಅವರು, ಹೈದರಾಬಾದ್ ದೂರದರ್ಶನದಲ್ಲಿ ನಿರ್ಮಾಪಕರಾಗಿದ್ದ—ನನ್ನ ಹಲವಾರು ನಾಟಕಗಳನ್ನು ದೂರದರ್ಶನಕ್ಕೆ ಅಳವಡಿಸಿಕೊಂಡಿದ್ದ ಪಿ.ವಿ.ಸತೀಶ್ ಅವರ ಮೂಲಕ ನನಗೆ ಈ ವೇಳೆಗಾಗಲೇ ಪರಿಚಿತರಾಗಿದ್ದರು. ಕಾರ್ಯಕ್ರಮ ನಿರ್ವಾಹಕನಾಗಿದ್ದ ಮೋಹನ ರಾಮ್ ರಂಗಭೂಮಿಯಿಂದಲೇ ಬಂದವನು..ಶ್ರೀರಂಗ, ಕಾರಂತ ಮೇಷ್ಟ್ರು ಮೊದಲಾದವರೊಂದಿಗೆ ರಂಗಭೂಮಿಯಲ್ಲಿ ತೊಡಗಿಕೊಂಡು ಅಪಾರ ಅನುಭವ ಗಳಿಸಿಕೊಂಡಿದ್ದವನು. ರಂಗಭೂಮಿಯಿಂದಾಗಿ ನನಗೆ ಈ ಮೊದಲೇ ಚಿರಪರಿಚಿತನಾಗಿದ್ದ ಮೋಹನ ರಾಮ ನನಗಿಂತ ಹಿರಿಯನೇ ಆದರೂ ಏನೋ ಒಂದು ವಿಶೇಷ ಸಲುಗೆ ಈ ಗೆಳೆಯನಲ್ಲಿ. ತನ್ನ ನೇರ ನಿಷ್ಠುರ ಮಾತು—ಟೀಕೆಗಳಿಂದ ಮಿತ್ರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಅಸಮಾಧಾನಿಗಳನ್ನು ಹೊಂದಿದ್ದ ಈ ಮೋಹನರಾಮನದು ಬಲು ವಿಶಿಷ್ಟ ವ್ಯಕ್ತಿತ್ವ. ಅನೇಕ ಸಂದರ್ಭಗಳಲ್ಲಿ ನನ್ನ ಬೆನ್ನು ತಟ್ಟಿ ಮೆಚ್ಚಿದ್ದಾನೆ.. ಹಲವೊಮ್ಮೆ ಬೈದು ಬುದ್ಧಿ ಹೇಳಿದ್ದಾನೆ..ತಿಳಿಹೇಳಿ ತಿದ್ದಿದ್ದಾನೆ..ಇರಲಿ.

ಹೀಗೆ ಬೆಂಗಳೂರು ದೂರದರ್ಶನಕ್ಕೆ ನಾನು ಬಂದು ಸೇರಿದಾಗ ಯಾವುದೋ ಒಂದು ಅಪರಿಚಿತ ಜಾಗಕ್ಕೆ ಬಂದಿರುವಂತೆ ನನಗೆ ಅನ್ನಿಸಲೇ ಇಲ್ಲ. ಬಂದು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ನಿರ್ದೇಶಕ ಕಮಲಾಪುರ್ ಅವರು, “ನೀವು ನಾಟಕ ವಿಭಾಗವನ್ನು ನೋಡಿಕೊಳ್ಳಬೇಕು.. ಬೇರೆ ಆಯ್ಕೆಯೇ ಇಲ್ಲ” ಎಂದು ಹೇಳಿಬಿಟ್ಟರು! ನನಗೆ ಬೇಕಾದ್ದೂ ಅದೇ ತಾನೇ?! ಅಂದಿನಿಂದ 1998 ರ ತನಕ ದೂರದರ್ಶನ ಕೇಂದ್ರದೊಂದಿಗೆ ನನ್ನದು ಹದಿನಾಲ್ಕು ವರ್ಷಗಳ ಕಾಲದ ಸುದೀರ್ಘ ಪಯಣ. ನನ್ನ ಬದುಕಿನ ಅನೇಕ ಪಲ್ಲಟಗಳಿಗೆ, ಹೊರಳುಗಳಿಗೆ, ಬದಲಾವಣೆಗಳಿಗೆ, ಒಂದಷ್ಟು ಅನಿರೀಕ್ಷಿತ ತಲ್ಲಣಗಳಿಗೆ, ಖುಷಿಗಳಿಗೆ ಸಾಕ್ಷಿಯಾದ ಕಾಲಘಟ್ಟವಿದು. ಆ ಸಮಯದ ಸಾಧ್ಯವಾದಷ್ಟೂ ನೆನಪುಗಳನ್ನು ಮೊಗೆದುಕೊಡುವ ಪ್ರಯತ್ನ ಮಾಡುತ್ತೇನೆ.

ಗೆಳೆಯರು ನೀಡಿದ ಮಾಹಿತಿಗಳನ್ನು ಕ್ರೋಢೀಕರಿಸಿ ಬೆಂಗಳೂರು ದೂರದರ್ಶನದ ಸ್ಥಾಪನೆ—ಬೆಳವಣಿಗೆಗಳನ್ನು ಕೊಂಚ ಗಮನಿಸುವುದಾದರೆ:
ಬೆಂಗಳೂರಿನಲ್ಲಿ 1981 ನವಂಬರ್ 1 ರಂದು ಮರು ಪ್ರಸಾರ ಕೇಂದ್ರ ಸ್ಥಾಪನೆಯಾಯಿತು.
ಆಗ ಬೆಂಗಳೂರು ಕೇಂದ್ರದಿಂದ ಕೇವಲ ಹಿಂದಿ ಹಾಗೂ ತಮಿಳು ಕಾರ್ಯಕ್ರಮಗಳು ಮಾತ್ರ ಪ್ರಸಾರವಾಗುತ್ತಿದ್ದವು. “ಕನ್ನಡ ದೂರದರ್ಶನ ಕೇಂದ್ರದಲ್ಲಿ ಕನ್ನಡ ಕಾರ್ಯಕ್ರಮಗಳ ನಿರ್ಮಾಣವಾಗಬೇಕು—ಪ್ರಸಾರವಾಗಬೇಕು” ಎಂದು ಆ ಸಮಯದಲ್ಲಿ ಒಂದು ಚಳುವಳಿಯನ್ನೇ ನಡೆಸಿದವರು ಡಾ॥ಎಂ.ಚಿದಾನಂದ ಮೂರ್ತಿಗಳು ಹಾಗೂ ಅವರ ಅನೇಕ ಸಂಗಡಿಗರು.

ಈ ಪ್ರತಿಭಟನೆ ಯಾವ ಹಂತ ಮುಟ್ಟಿತೆಂದರೆ 1983 ಆಗಸ್ಟ್ 15 ರಂದು ದೂರದರ್ಶನ ಕೇಂದ್ರದ ವತಿಯಿಂದ ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಭಾಷಣ ಸಹಪ್ರಸಾರ ಆಗಬೇಕಿತ್ತು; ಆದರೆ ಚೀಮೂ ಮತ್ತಿತರ ಕನ್ನಡ ಕಾರ್ಯಕರ್ತರು ಸಹಪ್ರಸಾರಕ್ಕೆ ಅನುವು ಮಾಡಿಕೊಡುತ್ತಿದ್ದ ಡಿಷ್ ನ ದಿಕ್ಕನ್ನೇ ತಿರುಗಿಸಿ ಪ್ರಧಾನಿಗಳ ಭಾಷಣವೇ ಪ್ರಸಾರವಾಗದಂತೆ ಮಾಡಿಬಿಟ್ಟರು! ಅದುವರೆಗೆ ಚಳುವಳಿಗಾರರ ಬೇಡಿಕೆಗೆ ಮಣಿಯದಿದ್ದ ಕೇಂದ್ರಸರಕಾರ ತಕ್ಷಣವೇ ಕಾರ್ಯೋನ್ಮುಖವಾಗಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕನ್ನಡ ಕಾರ್ಯಕ್ರಮಗಳ ನಿರ್ಮಾಣ ಹಾಗೂ ಪ್ರಸಾರಕ್ಕೆ ಹಸಿರು ನಿಶಾನೆ ತೋರಿಸಿಬಿಟ್ಟಿತು! ಆಗಿನ್ನೂ ಈಗ ಮುನಿರೆಡ್ಡಿ ಪಾಳ್ಯದಲ್ಲಿರುವ ಸುಸಜ್ಜಿತ ಕಟ್ಟಡ ಸಿದ್ಧವಿರಲಿಲ್ಲವಾದ್ದರಿಂದ ಕಾಫಿಬೋರ್ಡ್ ನ ಎದುರಲ್ಲಿರುವ ವಿಶ್ವೇಶ್ವರಯ್ಯ ಟವರ್ಸ್ ನ ಮೇಲಿನ ಮೂರು ಮಹಡಿಗಳನ್ನು ಪಡೆದುಕೊಂಡು ಅಲ್ಲಿಯೇ ಬೆಂಗಳೂರು ದೂರದರ್ಶನದ ಕಾರ್ಯ ಕಲಾಪಗಳನ್ನು ಪ್ರಾರಂಭಿಸುವುದೆಂದು ತೀರ್ಮಾನಿಸಲಾಯಿತು.

ಹೀಗೆ ಬೆಂಗಳೂರು ದೂರದರ್ಶನ ಕೇಂದ್ರ ಸ್ವ— ನಿರ್ಮಾಣ ಹಾಗೂ ಪ್ರಸಾರಕೇಂದ್ರವಾಗಿ ರೂಪುಗೊಂಡಿದ್ದು 1983 ನವಂಬರ್ 19ರಂದು. ಸನ್ಮಾನ್ಯ ರಾಮಕೃಷ್ಣ ಹೆಗಡೆಯವರು ಆ ಸಮಯದಲ್ಲಿ ಕರ್ಣಾಟಕದ ಮುಖ್ಯಮಂತ್ರಿಗಳಾಗಿದ್ದರು. ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮೈಸೂರು ಅನಂತಸ್ವಾಮಿ ಹಾಗೂ ತಂಡದವರು ಹಾಡಿದ ರಾಷ್ಟ್ರಕವಿ ಕುವೆಂಪು ಅವರ “ಜಯಭಾರತ ಜನನಿಯ ತನುಜಾತೆ” ಗೀತೆಯ ಗಾಯನದೊಂದಿಗೆ ಬೆಂಗಳೂರು ದೂರದರ್ಶನದ ಪ್ರಾರಂಭೋತ್ಸವಕ್ಕೆ ಚಾಲನೆ ದೊರೆಯಿತು.ಅಂದಿನ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದವರು ಪ್ರಸಿದ್ಧ ಅಭಿನೇತ್ರಿ ವಿಜಯಲಕ್ಷ್ಮಿ ಸಿಂಗ್ ಅವರು. ಅಂದಿನಿಂದಾಚೆಗೆ ಬೆಂಗಳೂರು ದೂರದರ್ಶನದಿಂದ ಸಂಜೆ 7 ರಿಂದ 8 ರವರೆಗೆ ಕನ್ನಡ ಕಾರ್ಯಕ್ರಮಗಳ ಪ್ರಸಾರ ಪ್ರಾರಂಭವಾಯಿತು. ಕನ್ನಡದಲ್ಲಿ ವಾರ್ತೆಗಳು ಹಾಗೂ ಒಂದಷ್ಟು ಚರ್ಚೆ—ಸಂದರ್ಶನಗಳಷ್ಟೆ ಆಗ ಪ್ರಸಾರವಾಗುತ್ತಿದ್ದುದು. ವಾರ್ತೆಗಳು ಸ್ಟುಡಿಯೋದಿಂದ ನೇರಪ್ರಸಾರವಾಗುತ್ತಿದ್ದವು. ಸ್ಟುಡಿಯೋದಲ್ಲಿ ತಯಾರಾಗುತ್ತಿದ್ದ ಕಾರ್ಯಕ್ರಮಗಳೆಲ್ಲವೂ ಕಪ್ಪುಬಿಳುಪಿನಲ್ಲೇ ಪ್ರಸಾರವಾಗುತ್ತಿದ್ದವು. ಪ್ರಪ್ರಥಮ ದಿನದ ವಾರ್ತಾಪ್ರಸಾರದ ಒಂದು ಸಣ್ಣ ಅಚಾತುರ್ಯದ ಘಟನೆಯನ್ನು ಮಿತ್ರರು ನೆನೆಸಿಕೊಂಡದ್ದು ಹೀಗೆ: ಕೃಷ್ಣಾ ಗಲಗಲಿಯವರು ಅಂದಿನ—ಅಂದರೆ ಪ್ರಪ್ರಥಮ ದಿನದ ಪ್ರಸಾರದ ವಾರ್ತಾವಾಚಕಿ. ನೇರಪ್ರಸಾರವೆಂದರೆ ತುಂಬಾ ಜಾಗರೂಕರಾಗಿರಬೇಕಾದುದು ಅತ್ಯಗತ್ಯ.ಅಂದು 7.30 ಆಗುತ್ತಿದ್ದಂತೆ ಅಟ್ಟಣೆಯ ಮೇಲಿದ್ದ ‘ವಾರ್ತೆಗಳು’ ಫಲಕ ಪ್ರಸಾರವಾಯಿತು.

ನಂತರ ಅಲ್ಲೇನೋ ಚಿಕ್ಕ ಗೊಂದಲವಾಗಿ ಒಮ್ಮೆ ಗಲಗಲಿಯವರ ಮುಖ—ಒಮ್ಮೆ ಅಟ್ಟಣೆಯ ಫಲಕ.. ಮತ್ತೊಮ್ಮೆ ಆತಂಕದಿಂದ ನೋಡುತ್ತಿದ್ದ ಗಲಗಲಿಯವರ ಮುಖ….ಹೀಗೆ ಒಂದೆರಡು ಬಾರಿ ಕಲಸುಮೇಲೋಗರವಾದ ಚಿತ್ರಿಕೆಗಳು ಪ್ರಸಾರವಾಗಿಬಿಟ್ಟವು. ಒಂದೆರಡು ಕ್ಷಣಗಳಲ್ಲೇ ತಪ್ಪನ್ನು ಸರಿಪಡಿಸಿಕೊಂಡು ಪ್ರಸಾರ ಮುಂದುವರೆದರೂ ಮಾಧ್ಯಮದವರ ಹದ್ದಿನ ಕಣ್ಣಿನಿಂದ ಈ ಸಣ್ಣ ಅಚಾತುರ್ಯ ತಪ್ಪಿಸಿಕೊಳ್ಳಲಾಗಲಿಲ್ಲ! ಮರುದಿನ “ಕೃಷ್ಣಾ ಗಲಿಬಿಲಿ?!” ಎಂಬ ಹಗುರ ಟೀಕೆ ಕಾಣಿಸಿಕೊಂಡೇ ಬಿಟ್ಟಿತು! ಅದು ಹೊರತಾಗಿ ಸುಗಮವಾಗಿಯೇ ಮುಂದುವರಿದ ಪ್ರಸಾರದಲ್ಲಿ ಅಂದು ಮುಖ್ಯವಾಗಿ ಪ್ರಸಾರಗೊಂಡ ಕಾರ್ಯಕ್ರಮಗಳೆಂದರೆ ಪ್ರಧಾನಿ ಇಂದಿರಾ ಗಾಂಧಿಯವರ ಸಂದೇಶದ ಕನ್ನಡ ಅವತರಣಿಕೆ ಹಾಗೂ ಸುಪ್ರಸಿದ್ಧ ಗುಬ್ಬಿ ಕಂಪನಿಯನ್ನು ಕುರಿತಾದ ಸಾಕ್ಷ್ಯಚಿತ್ರ.

ನಾನು ಬೆಂಗಳೂರು ದೂರದರ್ಶನಕ್ಕೆ ಬಂದಮೇಲೆ ನಾಟಕ ವಿಭಾಗದ ಜವಾಬ್ದಾರಿ ನನ್ನ ಹೆಗಲಿಗೆ ಬಂತೆಂದೆನಲ್ಲಾ, ಇಲ್ಲಿ ನನಗೆ ಸಹಾಯಕನಾಗಿ ನಿಯುಕ್ತಗೊಂಡವರು ರಾಜೇಂದ್ರ ಕಟ್ಟಿ ಎಂಬ ಉತ್ಸಾಹೀ ತರುಣ. ಈತನಿಗೂ ರಂಗಭೂಮಿಯ ಮೇಲೆ ಅಪಾರ ಒಲವು. ಹಾಗಾಗಿ ನಿರ್ದೇಶಕರನ್ನು ವಿನಂತಿಸಿಕೊಂಡು ನಾಟಕ ವಿಭಾಗಕ್ಕೆ ಸಹಾಯಕನಾಗಿ ಬಂದಿದ್ದರು.

ವಾರಕ್ಕೆ ಸುಮಾರು 30 ನಿಮಿಷಗಳ ಒಂದು ನಾಟಕವನ್ನು ನಾವು ಸಿದ್ಧಪಡಿಸಬೇಕಿತ್ತು. ಪ್ರತಿ ಗುರುವಾರ ನಾಟಕ ಪ್ರಸಾರವೆಂದು ನಿಗದಿಯಾಗಿತ್ತೆಂದು ನೆನಪು.ಸಹಾಯಕನಾಗಿದ್ದ ರಾಜೇಂದ್ರ ರಂಗಭೂಮಿಯ ಮೇಲೆ ಅಪಾರ ಒಲವಿದ್ದವನಷ್ಟೇ ಅಲ್ಲ, ಬರವಣಿಗೆ—ನಿರ್ದೇಶನಗಳಲ್ಲೂ ತಕ್ಕಮಟ್ಟಿಗೆ ಪರಿಶ್ರಮ ಹೊಂದಿದವನಾಗಿದ್ದ. ನಾವಿಬ್ಬರೂ ಸೇರಿ ದೂರದರ್ಶನಕ್ಕಾಗಿ ನಿರ್ಮಿಸಿದ ನಾಟಕಗಳು ಅಸಂಖ್ಯಾತ! ವಿಶ್ವೇಶ್ವರಯ್ಯ ಟವರ್ಸ್ ನ 20—21—22 ನೆಯ ಮಹಡಿಗಳಲ್ಲಿ ನಮ್ಮ ಕೇಂದ್ರದ ಕಛೇರಿ—ಸ್ಟುಡಿಯೋಗಳಿದ್ದದ್ದು. ಸ್ಟುಡಿಯೋ ಅಂತೂ ತೀರಾ ಚಿಕ್ಕದು; ಬಹುಶಃ 40—20 ರ ಅಳತೆಯದಿದ್ದಿರಬಹುದು.. ವಾರ್ತಾಪ್ರಸಾರ ಅಥವಾ ಸಂದರ್ಶನಗಳನ್ನು ನಡೆಸಲು ಮಾತ್ರ ಅವಕಾಶವಿದ್ದಷ್ಟು ಸ್ಥಳ! ಸ್ಟುಡಿಯೋದ ಹೆಚ್ಚುಕಡಿಮೆ ಅರ್ಧಭಾಗವನ್ನು ದೈತ್ಯಾಕಾರದ ಮೂರುಕ್ಯಾಮರಾಗಳೇ ಆಕ್ರಮಿಸಿಕೊಂಡು ಬಿಡುತ್ತಿದ್ದವಲ್ಲಾ! ಹಾಗಾಗಿ ಮಹತ್ವಾಕಾಂಕ್ಷೆಯ ದೊಡ್ಡ ನಾಟಕಗಳನ್ನು ಅಲ್ಲಿಗೆ ಹೊಂದಿಸಿಕೊಂಡು ನಿರ್ಮಿಸುವುದು ಅಸಾಧ್ಯದ ಮಾತಾಗಿತ್ತು.ಹಾಗಾಗಿ ಸಾಧ್ಯವಾದ್ದಷ್ಟೂ ಕಡಿಮೆ ಸಂಖ್ಯೆಯ ಪಾತ್ರಗಳಿದ್ದ ಚಿಕ್ಕ ಏಕಾಂಕ ನಾಟಕಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡತೊಡಗಿದೆವು.ಹಾಗೆ ನಾವು ಅಳವಡಿಸಿಕೊಂಡ ಮೊಟ್ಟಮೊದಲ ನಾಟಕ, ವಾರ್ತಾ ಇಲಾಖೆಯವರು ಪ್ರಸ್ತುತ ಪಡಿಸಿದ ‘ಸರ್ವೇಜನಾಃಸುಖಿನೋಭವಂತು”. ನಂತರದಲ್ಲಿ ಕೈಲಾಸಂರ ಅನೇಕ ಏಕಾಂಕ ನಾಟಕಗಳು,ಪರ್ವತವಾಣಿ—ದಾಶರಥಿ ದೀಕ್ಷಿತರ ಕೆಲವು ಆಯ್ದ ನಾಟಕಗಳು, ಆಗ ಬಹುವಾಗಿ ಚಾಲ್ತಿಯಲ್ಲಿದ್ದ ‘ಅಸಂಗತ’ ಪರಂಪರೆಯ ನಾಟಕಗಳು…ಇವೆಲ್ಲವನ್ನೂ ದೂರದರ್ಶನಕ್ಕೆ ಅಳವಡಿಸಿಕೊಂಡು ಪ್ರಸಾರ ಮಾಡಿದೆವು. ಪ್ರಸಿದ್ಧ ನಟ ಶ್ರೀನಿವಾಸ ಮೂರ್ತಿಯವರ ತಂಡದ ಒಂದೆರಡು ನಾಟಕಗಳು, ಪ್ರಸಿದ್ಧ ನಟ—ನಿರ್ದೇಶಕ ಬಿ.ವಿ.ರಾಜಾರಾಂ ಅವರ ನಾಟಕಗಳು ಕೂಡಾ ನಮ್ಮಿಂದ ಪ್ರಸಾರಗೊಂಡು ಸಾಕಷ್ಟು ಜನಪ್ರಿಯವಾದವು.ಏನೇ ಆದರೂ ಸಾಕಷ್ಟು ಇತಿಮಿತಿಗಳಿದ್ದ ಸ್ಟುಡಿಯೋ ಪ್ರಸ್ತುತಿಗಳು ಒಂದಷ್ಟು ಅಪಸ್ವರಗಳಿಗೂ ಕಾರಣವಾಗಿದ್ದವು! ಒಂದು ಸ್ವಾರಸ್ಯಕರ ಪ್ರಸಂಗ ನನಗೆ ನೆನಪಾಗುತ್ತಿದೆ: ಒಂದು ಪೌರಾಣಿಕ ನಾಟಕದಲ್ಲಿ ಗದಾಯುದ್ಧದ ಪ್ರಸಂಗ ಬರುತ್ತದೆ. ಈ ಯುದ್ಧ ನಡೆಯುವುದು ನಾಟಕದ ಕೊನೆಯಲ್ಲಿ. ಕಲಾವಿದರ ಅತ್ಯುತ್ತಮ ಅಭಿನಯವಿದ್ದ ಆ ನಾಟಕವನ್ನು ಸ್ಟುಡಿಯೋದಲ್ಲಿ ಚಿತ್ರೀಕರಿಸುತ್ತಿದ್ದೇವೆ..ಇನ್ನೇನು ಕೊನೆಯ ಹಂತ..ಗದಾಯುದ್ಧ ನಡೆಯುತ್ತಿದೆ..ಹಠಾತ್ತನೆ ಒಬ್ಬ ಕಲಾವಿದರ ಕೈಲಿದ್ದ ಗದೆ ಮುರಿದುಬಿಡುವುದೇ! ಕಲಾವಿದರು ಗದೆಯನ್ನು ಬಿಸುಟು ಹಾಗೆಯೇ ನಾಟಕವನ್ನು ಮುಂದುವರಿಸಿ ಮುಗಿಸಿದ್ದೇನೋ ಆಯಿತು…ಆದರೆ ಗದೆ ಮುರಿದ ಭಾಗವೂ ಚಿತ್ರೀಕರಣವಾಗಿತ್ತಲ್ಲಾ, ಅದನ್ನೇನು ಮಾಡುವುದು? ಆಗೆಲ್ಲಾ ಚಿತ್ರೀಕರಣಕ್ಕೆ ಬಳಸುತ್ತಿದ್ದುದು bcn ಟೇಪ್ ಗಳನ್ನು; ಅವುಗಳನ್ನು ಬಳಸುವಾಗ ಸಂಕಲನವಾಗಲೀ ಕಿತ್ತು ಮರುಜೋಡಿಸುವುದಾಗಲೀ ಆಗುತ್ತಿರಲಿಲ್ಲ.ಇಡೀ ನಾಟಕವನ್ನೇ ಮತ್ತೊಮ್ಮೆ ಚಿತ್ರೀಕರಿಸೋಣವೆಂದರೆ ಸಮಯದ ಅಭಾವ! ಸರಿ, ಆದದ್ದಾಗಲಿ ನೋಡೋಣ ಎಂದು ಕಲಾವಿದರನ್ನು ಕಳಿಸಿಬಿಟ್ಟೆ. ಮರುದಿನವೇ ನಾಟಕದ ಪ್ರಸಾರ ಬೇರೆ ನಿರ್ಧರಿತವಾಗಿಬಿಟ್ಟಿತ್ತು.BCN ಟೇಪ್ ನಿಂದ VCR ಟೇಪ್ ಗೆ ವರ್ಗಾಯಿಸಿಕೊಂಡು ಸಂಕಲನ ಮಾಡೋಣವೆಂದರೆ ಸ್ಟುಡಿಯೋ —ಸಂಕಲನದ ಉಪಕರಣಗಳು ಸಿಗುತ್ತಿಲ್ಲ! ಕೊನೆಗೆ ನಮ್ಮ ಇಂಜಿನಿಯರ್ ಒಬ್ಬರು ಒಂದು ಸಲಹೆ ನೀಡಿದರು: “ಗದೆ ಮುರಿದಿರುವ ಜಾಗವನ್ನು ಗುರುತಿಟ್ಟುಕೊಂಡು ಪ್ರಸಾರದ ಸಮಯದಲ್ಲಿ ಸೂಚನೆ ಕೊಡಿ; ಆ ಸಮಯದಲ್ಲಿ ಕೆಲ ಸೆಕೆಂಡ್ ಗಳು ನಮ್ಮ vision mixer(ಬೇರೆ ಬೇರೆ ಮೂಲಗಳ ಚಿತ್ರಿಕೆಗಳಲ್ಲಿ ತೆರೆಯ ಮೇಲೆ ಮೂಡುವ ಚಿತ್ರಿಕೆಯನ್ನು ಆರಿಸಿ ಕಳಿಸುವ ತಂತ್ರಜ್ಞ) ತೆರೆಯಲ್ಲಿ ಏನೂ ಕಾಣದ ಹಾಗೆ blank ಮಾಡಿಬಿಡುತ್ತಾರೆ.. ಗದೆ ಮುರಿದದ್ದು ವೀಕ್ಷಕರಿಗೆ ತಿಳಿಯುವುದಿಲ್ಲ”!
ನನಗೂ ಇದ್ದುದರಲ್ಲಿ ಇದೇ ಸೂಕ್ತ ಮಾರ್ಗವೆನಿಸಿತು.

ಸರಿ, ನಾಲ್ಕಾರು ಬಾರಿ ಆ ಜಾಗವನ್ನು ನೋಡಿ ಮನನ ಮಾಡಿಕೊಂಡು ನಾಟಕಪ್ರಸಾರದ ಸಮಯದಲ್ಲಿ ನಾನೇ ಹೋಗಿ ವಿಷನ್ ಮಿಕ್ಸರ್ ಪಕ್ಕ ಕುಳಿತೆ.ಅವರಿಗೂ ವಿಷಯ ತಿಳಿಸಿ ನಾನು ಹೇಳಿದೊಡನೆ ಪರದೆಯನ್ನು blank ಮಾಡಲು ವಿನಂತಿಸಿಕೊಂಡೆ.ನಾಟಕದ ಪ್ರಸಾರ ಆರಂಭವಾಯಿತು. ನಾನು ಮೈಎಲ್ಲಾ ಕಣ್ಣಾಗಿ ಕಾಯುತ್ತಿದ್ದೆˌ…ನಾಟಕದ ಕೊನೆಯ ಭಾಗ..ಗದೆ ಮುರಿದ ಭಾಗ ಸಮೀಪಿಸುತ್ತಿದೆ..ಬಂತು..ಬಂತು..ಬಂದೇ ಬಿಟ್ಟಿತು…ನಾನು blank ಎಂದು ಜೋರಾಗಿ ಕೂಗಿದೆ. ನನ್ನ ಕೂಗಿಗೆ ನಮ್ಮ ವಿಷನ್ ಮಿಕ್ಸರ್ ಅರೆಚಣ ವಿಚಲಿತರಾಗಿಬಿಟ್ಟರೆಂದು ಕಾಣುತ್ತದೆ..ಆಗಬಾರದಿದ್ದ ಕ್ಷಣಮಾತ್ರದ ವಿಳಂಬ ಘಟಿಸಿಯೇ ಬಿಟ್ಟಿತು! ಅಯ್ಯೋ! ನೋಡುತ್ತಿದ್ದ ಸಮಸ್ತ ಕನ್ನಡ ವೀಕ್ಷಕರೆದುರು ಗದೆ ಮುರಿದೇಹೋಯಿತು!ಮುರಿದ ಮರುಕ್ಷಣವೇ ಪರದೆಯೂ ಕಪ್ಪಾಗಿ ಏನೂ ಕಾಣದಾಯಿತು! ತಕ್ಷಣವೇ ಮತ್ತೆ ತೆರೆಯ ಮೇಲೆ ನಾಟಕ ಮುಂದುವರಿದರೂ ಆಗಬಾರದ ಅನಾಹುತ ಆಗಿಹೋಗಿತ್ತು! ಒಂದು ಯಡವಟ್ಟು ಮುಚ್ಚಲು ಹೋಗಿ ಮತ್ತೊಂದು ಎಡವಟ್ಟನ್ನೂ ಮೈಮೇಲೆ ಎಳಕೊಂಡಂತಾಗಿ ಹೋಗಿದ್ದಲ್ಲದೆ ಮೊದಲ ಎಡವಟ್ಟನ್ನು ತೋರುಬೆರಳಿಟ್ಟು ತೋರಿಸಿದಂತಾಗಿಹೋಯಿತು! ಎರಡೂ ಅನಾಹುತಗಳು ಮಾಧ್ಯಮ ಮಿತ್ರರ ಗೇಲಿಗೆ ಒಳ್ಳೆಯ ಗ್ರಾಸವನ್ನೊದಗಿಸಿದವು!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: