ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 167
—————
ಸಂಸರನ್ನು ಕುರಿತ ಚಿತ್ರವನ್ನು ಮಾಡುವುದರ ಬಗ್ಗೆ ಮೂರ್ತಿಯವರು ಆಗಾಗ್ಗೆ ಫೋನ್ ಮಾಡಿ ವಿಚಾರಿಸುತ್ತಿದ್ದರಲ್ಲದೆ ಹಗುರವಾಗಿ ಒತ್ತಾಯವನ್ನೂ ಮಾಡುತ್ತಿದ್ದರು! ಆ ಸಮಯದಲ್ಲೆಲ್ಲಾ ಅವರು ಪದೇ ಪದೇ ಹೇಳುತ್ತಿದ್ದ ಮಾತೆಂದರೆ “ಒಟ್ಟು ಸಿನೆಮಾದ ಅವಧಿ 90 ನಿಮಿಷ ಇರಬೇಕು ಪ್ರಭುಗಳೇ. ಟೈಟಲ್ ಕಾರ್ಡ್ಸ್ ಗಳಿಗೆ 3-4 ನಿಮಿಷ ಅಂದುಕೊಂಡರೂ ನೀವು ಸ್ಕ್ರಿಪ್ಟ್ ಮಾಡೋವಾಗ 90 ನಿಮಿಷದ ಮಿತಿಯನ್ನ ನೆನಪಿನಲ್ಲಿಟ್ಟುಕೊಂಡಿರಿ”—ಅನ್ನುವುದು. ಈ ಮಾತು ಅದೇನೋ ನನ್ನ ಮನಸ್ಸಿನಲ್ಲಿಯೂ ಅಚ್ಚೊತ್ತಿದಂತೆ ಕೂತುಬಿಟ್ಟಿತ್ತು. ಸಂಸರನ್ನು ಕುರಿತ ಚಿತ್ರಕ್ಕೆ ನನಗೆ ವಸ್ತುವಿನ ದೃಷ್ಟಿಯಿಂದ ಸಾಮಗ್ರಿಯ ಕೊರತೆ ಇರದಿದ್ದರೂ ಒಟ್ಟಾರೆ ಕಟ್ಟಡದ್ದೇ ದೊಡ್ಡ ಚಿಂತೆಯಾಗಿತ್ತು. ‘ಒಬ್ಬೇ ಒಬ್ಬ ಪಾತ್ರಧಾರಿಯ ಒಂದೇ ಒಂದು ಶಾಟ್ ನಲ್ಲಿ ಚಿತ್ರವನ್ನು ಮಾಡಬೇಕು” ಎಂದು ನಮಗೆ ನಾವೇ ಚೌಕಟ್ಟು ಹಾಕಿಕೊಂಡಿದ್ದೆವಲ್ಲಾ! ಈ ಪೂರ್ವನಿರ್ಧರಿತ ಚೌಕಟ್ಟಿನೊಳಗೆ ಇಡಿಯ ಸಂಸರ ಬದುಕಿನ—ವ್ಯಕ್ತಿತ್ವದ ಅನಾವರಣವಾಗಬೇಕಿತ್ತು. ಅದೊಂದು ತಂತ್ರ— ಅದೊಂದು ವಿಶೇಷ ಹೊಳಹು ಚಿತ್ರದ ಆಕೃತಿಗೆ ಸಂಬಂಧಪಟ್ಟ ಹಾಗೆ ಹೊಳೆದುಬಿಟ್ಟರೆ ಮಿಕ್ಕಿದ್ದು ಸಲೀಸು. ಹಾಗಾಗಿ ಹಗಲೂ ರಾತ್ರಿ ನನ್ನ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಿದ್ದುದು ಅದೊಂದೇ ಚಿಂತೆ—ಚಿತ್ರದ form!
ಈ ಹೊಳಹುಗಳದ್ದೂ ಒಂದು ವಿಚಿತ್ರ ಚೇಷ್ಟೆ – ಗಾಢ ನಿದ್ರೆಯ ಯಾವುದೋ ಒಂದು ಕ್ಷಣದಲ್ಲಿ ಧುತ್ತೆಂದು ಮನದ ಮೂಲೆಯಲ್ಲಿ ಪುಟಿದೆದ್ದುಬಿಡುವುದು! ನಿದ್ರೆಯಿಂದ ಎಚ್ಚರ ಮಾಡಿಕೊಂಡು ಆಗಲೇ ದಾಖಲಿಸಿಕೊಂಡೆವೋ, ಬಚಾವ್! ಇಲ್ಲದಿದ್ದರೆ ಬೆಳಗಾಗುವ ವೇಳೆಗೆ ನೆನಪಿನಿಂದ ಜಾರಿಹೋಗಿರಬಹುದಾದ ಸಾಧ್ಯತೆಯೇ ಹೆಚ್ಚು! ಅಂದು ಹಾಗೆ ಆ ಹೊಳಹು ಮಿಂಚಿದ್ದು ಸಹಾ ಸಮರಾತ್ರಿಯ ಗಾಢನಿದ್ರೆಯ ಒಂದು ತಣ್ಣನೆಯ ನೀರವ ಕ್ಷಣದಲ್ಲಿ! ಮೂರ್ತಿಯವರ ‘ತೊಂಬತ್ತು ನಿಮಿಷಗಳು’ ಅನ್ನುವ ಚೌಕಟ್ಟಿನ ಸೂಚಕ ತಲೆಯಲ್ಲಿ ಕೊರೆಯುತ್ತಿದ್ದದ್ದು ಥಟ್ಟನೆ ಅದೇ ಚಿತ್ರದ ಆಕೃತಿಯ ಸೂಚಕವಾಗಿಯೂ ಮಾರ್ಪಾಡಾಗಿಬಿಟ್ಟಿತು! 90 ನಿಮಿಷಗಳು! ಸಂಸರ ಬದುಕಿನ ಕೊನೆಯ ತೊಂಬತ್ತು ನಿಮಿಷಗಳು! ಚಿತ್ರದ ಶೀರ್ಷಿಕೆಯೂ ಅದೇ: “ಬಿಂಬ- ಆ ತೊಂಬತ್ತು ನಿಮಿಷಗಳು”!.
ತೊಂಬತ್ತು ನಿಮಿಷಗಳ ಅವಧಿಯಲ್ಲಿ ಸಂಸರ ಬದುಕಿನ ಪುಟಗಳು ತೆರೆದುಕೊಳ್ಳುತ್ತಾ, ಅವರ ವ್ಯಕ್ತಿತ್ವ—ಅವರ ಪ್ರತಿಭೆ—ಅವರಿಗಿದ್ದ ಮಾನಸಿಕ ತುಮುಲಗಳು ಹಾಗೂ ವಿಕಲ್ಪಗಳು, ಅವರು ರಚಿಸಿದ ಕೃತಿಗಳು, ಅವರು ಒಡನಾಡಿದ ವ್ಯಕ್ತಿಗಳು…ಎಲ್ಲ ಸಂಗತಿಗಳೂ ಅನಾವರಣವಾಗುತ್ತಾ ಹೋಗಬೇಕು. ಈ ನಿಟ್ಟಿನಲ್ಲಿ ಚಿಂತಿಸಿ ಚಿಂತಿಸಿ ನಾಲ್ಕಾರು ಬಗೆಯ ನಿರೂಪಣೆಗಳ ಸಾಧ್ಯತೆಗಳನ್ನೂ ಪರಿಶೀಲಿಸಿ ಕಟ್ಟಕಡೆಗೊಮ್ಮೆ ಒಂದು ತೀರ್ಮಾನಕ್ಕೆ ಬಂದು ಚಿತ್ರದ ಓಟದ ಒಟ್ಟು ಸ್ವರೂಪವನ್ನು ನಿರ್ಧರಿಸಿದೆ: ಸಂಸರು ಚಿತ್ರದ ಆರಂಭದಲ್ಲೇ ಆತ್ಮಹತ್ಯೆಗೆ ಅನುವಾಗಿ ವಿಷದ ಬಾಟಲಿಯನ್ನು ಕೈಲಿ ಹಿಡಿದಿರುತ್ತಾರೆ; ಆದರೆ ಸಾವಿಗೊಂದು ‘ಸು’ಮುಹೂರ್ತವನ್ನು ನಿರ್ಧರಿಸಲು ಅವರ ಜ್ಯೋತಿಷ್ಕ ಮನಸ್ಸು ಯೋಚಿಸುತ್ತದೆ; ಆ ಸುಮೂಹುರ್ತ ಇರುವುದು 90 ನಿಮಿಷಗಳ ತರುವಾಯ!
ಅದುವರೆಗಿನ ಸಮಯವನ್ನು ಕಳೆಯಲು ಸಂಸರು ತಮ್ಮ ಮನೆಯಲ್ಲಿರುವ ಕನ್ನಡಿಯೊಂದಿಗೆ ಮಾತನಾಡುತ್ತಾ ಹೋಗುತ್ತಾರೆ; ಅದು ಒಂದು ಬಗೆಯಲ್ಲಿ ನೋಡಿದರೆ ಬಿಂಬ—ಪ್ರತಿಬಿಂಬಗಳ ನಡುವಣ ಸಂಭಾಷಣೆ; ಮತ್ತೊಂದು ಬಗೆಯಲ್ಲಿ ನೋಡಿದರೆ ಅದೊಂದು ಸ್ವಗತ! ಬೇರೆ ಪಾತ್ರಗಳು ನಮ್ಮ ಪೂರ್ವ ನಿರ್ಧರಿತ ಚೌಕಟ್ಟಿನಲ್ಲಿ ಬರುವಂತಿಲ್ಲವಾದರೂ ಧ್ವನಿಗಳು ಬಳಕೆಯಾಗಬಹುದಲ್ಲಾ! ಸಂಸರನ್ನು ನೋಡಲು ಆಗಾಗ್ಗೆ ರಾಜರತ್ನಂ ಅವರು, ಆನಂದರು, ಮತ್ತೂ ಕೆಲ ಹಿತೈಷಿಗಳು ಬರುತ್ತಿದ್ದುದುಂಟು; ಸಂಸರು ಎಷ್ಟೋ ಬಾರಿ ಅವರುಗಳಿಗೆ ಬಾಗಿಲನ್ನೂ ತೆರೆಯದೇ ಕಿಟಕಿಯಿಂದಲೇ ಮಾತಾಡಿಸಿ ಕಳಿಸಿಬಿಡುತ್ತಿದ್ದುದೂ ಉಂಟು! ಇದನ್ನೂ ಒಂದು ತಂತ್ರವಾಗಿಯೇ ಬಳಸಿಕೊಂಡರೆ ಕೊಂಚ ಏಕತಾನತೆಯೂ ನಿವಾರಣೆಯಾಗಬಹುದೆನ್ನಿಸಿ ಚಿತ್ರಕಥೆಗೆ ನಾಲ್ಕೈದು ಧ್ವನಿಗಳನ್ನು ಸೇರಿಸಿಕೊಂಡೆ! ಸಂಸರು ಸಾಯಲು ಮುಹೂರ್ತ ನಿರ್ಧರಿಸಿರುವುದು ರಾತ್ರಿ 9 ಗಂಟೆಯ ಯಮಗಂಡಕಾಲದ ಗಳಿಗೆಗೆ! ನಿರ್ಧಾರ ಮಾಡಿರುವ ಕ್ಷಣದಿಂದ ಆ ಗಳಿಗೆಯವರೆಗೆ 90 ನಿಮಿಷಗಳಿವೆ..9 ಗಂಟೆಯಾದೊಡನೆ ಮೈಸೂರಿನ ದೊಡ್ಡ ಗಡಿಯಾರ 9 ಬಾರಿ ಢಣಢಣ ನಾದ ಹೊಮ್ಮಿಸುತ್ತದೆ..ಯಮಗಂಡಕಾಲದಲ್ಲಿ ಸಂಸರು ವಿಷ ಕುಡಿದು ಗತಪ್ರಾಣರಾಗುತ್ತಾರೆ.
ಹೀಗೆ ಚಿತ್ರಕಥೆಯ ಒಂದು ಚೌಕಟ್ಟು ಸಿದ್ಧವಾಗುತ್ತಿದ್ದಂತೆ ವಿವರಗಳನ್ನು ತುಂಬುವ ಕೆಲಸ ಸಲೀಸಾಗಿಬಿಟ್ಟಿತು! ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಚಿತ್ರಕಥೆಯನ್ನು ಬರೆದು ಮುಗಿಸಿಬಿಟ್ಟೆ. ಬರೆಯುತ್ತಾ ಬರೆಯುತ್ತಾ ಕಥೆಗೆ ಪೂರಕವಾಗಿಯೇ ಇದ್ದ ಒಂದು ದಾಸರ ಪದವನ್ನೂ ಒಂದು ವಚನವನ್ನೂ ಸಹಾ ಚಿತ್ರಕಥೆಯಲ್ಲಿ ಅಳವಡಿಸಿಕೊಂಡೆ. ಒಂದು ಸಲೀಸಾದ ಓಟದಲ್ಲಿ , ಎಲ್ಲಿಯೂ ಬೇಸರಕ್ಕೆ ಅವಕಾಶವಿರದಂತೆ ಚಿತ್ರ ಬೆಳೆಯುತ್ತಾ ಹೋಗುತ್ತದೆನ್ನುವ ವಿಶ್ವಾಸ ಮೂಡಿತು. ಮೂರ್ತಿಯವರಿಗೆ ಈ ಸುದ್ದಿಯನ್ನು ಮುಟ್ಟಿಸಿ, ಮಾತುಗಳನ್ನು ಮನನ ಮಾಡಿಕೊಳ್ಳಲು ನನಗೆ ಕೆಲ ದಿನಗಳ ಅವಕಾಶ ನೀಡಿ ಚಿತ್ರೀಕರಣದ ಬಗ್ಗೆ ಯೋಚಿಸಬಹುದು ಎಂದು ಹೇಳಿದೆ. ಅದಾಗಲೇ ಮೂರ್ತಿಯವರು ಅವರ ಮೆಚ್ಚಿನ ಛಾಯಾಗ್ರಾಹಕರಾದ ಪಿ ಕೆ ಹೆಚ್ ದಾಸ್ ಅವರೊಂದಿಗೆ ಮಾತಾಡಿ ನಮ್ಮ ಚಿತ್ರದ ಛಾಯಾಗ್ರಹಣ ಮಾಡಿಕೊಡಲು ಅವರನ್ನು ಒಪ್ಪಿಸಿಯಾಗಿತ್ತು. ಬೆಂಗಳೂರಿನ ಪುಟ್ಟಣ್ಣ ಸ್ಟುಡಿಯೋದಲ್ಲಿ ಮೇಕಪ್ ಇತ್ಯಾದಿ ಕಾರ್ಯಗಳಿಗಾಗಿ ಒಂದು ಪ್ರತ್ಯೇಕವಾದ ಕೊಠಡಿ ಇದೆ. ಹಳೆಯ ಕಾಲದ ದೊಡ್ಡ ಬಾಗಿಲು; ಒಳಗೂ ಸಹಾ ಹಳೆಯ ಮನೆಯ ವಾತಾವರಣ..ನಮ್ಮ ಚಿತ್ರದಲ್ಲಿ ಸಂಸರ ಕೋಣೆಯಾಗಿ ಈ ಕೊಠಡಿಯನ್ನೇ ಬಳಸಬಹುದು ಅನ್ನಿಸಿತು. ಜಿ.ಮೂರ್ತಿಯವರು ಹೇಳಿ ಕೇಳಿ ನುರಿತ ಕಲಾನಿರ್ದೇಶಕರು! “ನಿಮಗೆ ಬೇಕಾದ ಥರದ ವಾತಾವರಣಾನ ನಾನು ಸೃಷ್ಟಿ ಮಾಡಿಕೊಡ್ತೀನಿ ಪ್ರಭುಗಳೇ, ಚಿಂತೆ ಮಾಡಬೇಡಿ ” ಎಂದು ಆಶ್ವಾಸನೆ ನೀಡಿದರು.
ಇನ್ನು ಚಿತ್ರಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಹಿನ್ನೆಲೆ ಸಂಗೀತಕ್ಕೆ ಯಾರನ್ನು ಕೇಳೋಣವೆಂಬ ಪ್ರಶ್ನೆಯ ಬೆನ್ನಿಗೇ ಮೂರ್ತಿಯವರ ಖಚಿತ ಉತ್ತರ ಸಿದ್ಧವಾಗಿತ್ತು: ಪ್ರವೀಣ್ ಗೋಡಖಿಂಡಿ! ಅಂತಾರಾಷ್ಟ್ರೀಯ ಖ್ಯಾತಿಯ ಅದ್ಭುತ ವೇಣುವಾದಕ ಪ್ರವೀಣ್ ಗೋಡಖಿಂಡಿ. ಮೂರ್ತಿಯವರ ಹಿಂದಿನ ಕೆಲ ಚಿತ್ರಗಳಿಗೂ ಗೋಡಖಿಂಡಿಯವರೇ ಸಂಗೀತ ನಿರ್ದೇಶನ ಮಾಡಿದ್ದರು. ನಮ್ಮ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲು ಪ್ರವೀಣ್ ಸಂತೋಷದಿಂದ ಒಪ್ಪಿಕೊಂಡರು. ಅಲ್ಲಿಗೆ ಎಲ್ಲವೂ ಒಂದು ಘಟ್ಟಕ್ಕೆ ಬಂದು ಮುಟ್ಟಿದಂತಾಯಿತು. ಅಂದು ರಾತ್ರಿ ಮತ್ತೊಂದು ಹೊಳಹು ಜಾಗೃತವಾಗಿಬಿಟ್ಟಿತು: ಪ್ರವೀಣ್ ಅವರು ಅದ್ಭುತ ಕೊಳಲು ವಾದಕರು; ನಮ್ಮ ಇಡೀ ಚಿತ್ರಕ್ಕೆ ಕೇವಲ ಕೊಳಲು ವಾದ್ಯವನ್ನು ಮಾತ್ರವೇ ಹಿನ್ನೆಲೆ ಸಂಗೀತದಲ್ಲಿ ಬಳಸಿದರೆ ಹೇಗೆ??!
ಪ್ರವೀಣ್ ಗೋಡಖಿಂಡಿಯವರ ಬಳಿ ಎಂಟು ಅಡಿ ಉದ್ದದ ಒಂದು ವಿಶೇಷ ವೇಣುವಾದ್ಯವಿದೆ; ಅದ್ಭುತ ರೀತಿಯಲ್ಲಿ ಬಗೆಬಗೆಯ ನಾದಲಹರಿಗಳನ್ನು ಹೊಮ್ಮಿಸುವ ಸಾಮರ್ಥ್ಯವಿರುವ ವಿಶೇಷ ವಾದ್ಯವದು. ಆ ವಾದ್ಯದ ನುಡಿಸಾಣಿಕೆಯಲ್ಲಿ ಪ್ರವೀಣ್ ಗೋಡಖಿಂಡಿಯವರು ಸಿದ್ಧಹಸ್ತರು.
ಒಬ್ಬೇ ಒಬ್ಬ ನಟನ, ಒಂದೇ ಒಂದು ಶಾಟ್ ನ ಚಿತ್ರದಲ್ಲಿ ಒಂದೇ ಒಂದು ವಾದ್ಯವನ್ನು ಬಳಸಿ ಸಂಗೀತ ಸಂಯೋಜನೆ ಮಾಡಿದರೆ ಅದು ಮತ್ತೂ ಒಂದು ವಿಶೇಷವಾಗುತ್ತದೆ! ಇದೆಲ್ಲದರ ಜತೆಗೆ ಇಡೀ ಚಿತ್ರ ನಡೆಯುವುದು ಸಂಸರ ಕೋಣೆಯಲ್ಲಿ! ತಮ್ಮನ್ನು ತಾವೇ ಒಂದು ರೀತಿಯಲ್ಲಿ ಬಂಧಿಸಿಕೊಂಡವರಂತೆ ಏಕಾಂಗಿಯಾಗಿ ಪುಟ್ಟಕೋಣೆಯಲ್ಲಿ ದಿನ ನೂಕುತ್ತಿರುವ ಸಂಸರು ಕೋಣೆಯಿಂದ ಹೊರಬರುವುದೇ ಇಲ್ಲ! ಅಲ್ಲಿಗೆ ಮೂರು ‘ಒಂದು’ಗಳ ಜತೆಗೆ ನಾಲ್ಕನೆಯ ‘ಒಂದೂ’ ಸೇರಿಕೊಂಡಿತು: ಒಂದೇ ಲೊಕೇಷನ್!! ಹೀಗೆ ಹಲಬಗೆಯಲ್ಲಿ ನಮ್ಮ ‘ಬಿಂಬ’ ಚಿತ್ರ ವಿಶೇಷವಾಗಿ ರೂಪುಗೊಳ್ಳಲಿದೆ ಎಂದು ನಾನೂ ಮೂರ್ತಿಯವರೂ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು!
ಇನ್ನು ಮುಖ್ಯವಾಗಿ ಉಳಿದಿರುವುದು ನನ್ನ ತಯಾರಿ! ‘ಸಾಮಿಯ ಸ್ವಗತ’ ನಾಟಕವನ್ನು ಹತ್ತಾರು ಬಾರಿ ರಂಗದ ಮೇಲೆ ಪ್ರದರ್ಶಿಸಿದ್ದರೂ ಈಗ ಚಿತ್ರಕಥೆ ಸಾಕಷ್ಟು ಬದಲಾಗಿ ಹೊಸ ಹೊಸ ಸಂಭಾಷಣೆಗಳೂ ಸೇರಿರುವುದರಿಂದ ಸಾಕಷ್ಟು ಪೂರ್ವತಯಾರಿಯ ಅಗತ್ಯವಿತ್ತು. ಇಡೀ ಚಿತ್ರದ 55 ಪುಟಗಳ ಸಂಭಾಷಣೆಗಳನ್ನು ಕಂಠಸ್ಥ ಮಾಡಿಕೊಳ್ಳಬೇಕಿತ್ತು. ಬೇರೆ ಚಿತ್ರಗಳಿಗಿಂತ ವಿಭಿನ್ನವಾದ ಸವಾಲುಗಳು ಇಲ್ಲಿ ಎದುರಾಗುತ್ತಿದ್ದವು. ” ‘ ಬಿಂಬ’ ನಾಟಕೀಯ ಅಂಶಗಳನ್ನೊಳಗೊಂಡ ಸಿನೆಮಾ ಎನ್ನುವುದೋ ಅಥವಾ ಸಿನಿಮೀಯ ಗುಣಗಳನ್ನಳವಡಿಸಿಕೊಂಡ ನಾಟಕ ಎನ್ನುವುದೋ” ಎಂದು ನಗುತ್ತಾ ಕೇಳಿದ ಮೂರ್ತಿಯವರ ಪ್ರಶ್ನೆಗೆ ಥಟ್ಟನೆ ಉತ್ತರಿಸಲಾಗಲಿಲ್ಲ ನನಗೆ!
ಹಾಗೆ ನೋಡಿದರೆ ಹೀಗೆ ನಾಟಕಗಳನ್ನು ಸಿನೆಮಾಗೆ ಅಳವಡಿಸಿಕೊಳ್ಳುವುದು, ನಾಟಕಗಳನ್ನೇ ಯಥಾವತ್ತಾಗಿ ಚಿತ್ರೀಕರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತೆಯೇ ಆಗಿದೆ. ಆದರೆ ನಾಟಕಗಳನ್ನು ಚಿತ್ರೀಕರಿಸುವಾಗ , ನಾಟಕದಲ್ಲಿಯಂತೆ ಕ್ರಿಯೆಯ ಸ್ಥಳವನ್ನು ಪ್ರೇಕ್ಷಕನ ಕಲ್ಪನೆಗೆ ಬಿಡದೆ ಕ್ರಿಯೆ ನಡೆಯುವ ವಾಸ್ತವ ಸ್ಥಳದಲ್ಲೇ ಚಿತ್ರೀಕರಿಸುವುದು ಈ ‘ಫಿಲ್ಮ್ ಥಿಯೇಟರ್’ ಪ್ರಕಾರದ ವಿಶೇಷ. ನಾಟಕದಲ್ಲಿ ಕಂಸಿನಲ್ಲಿರುವ ಸೂಚನೆಗಳನ್ನು ದೃಶ್ಯಕ್ಕೆ ಸೂಕ್ತವಾಗಿ ಅಳವಡಿಸಿಕೊಳ್ಳುವುದೂ ಈ ಪ್ರಕಾರದಲ್ಲಿ ಬಹಳ ಮುಖ್ಯವಾಗಿರುತ್ತದೆ.
ದೂರದರ್ಶನದಲ್ಲಿದ್ದಾಗ ತುಘಲಕ್ ಹಾಗೂ ಇನ್ನೂ ಕೆಲ ನಾಟಕಗಳನ್ನು ನಾನು ಹೀಗೆ ಚಿತ್ರೀಕರಿಸಿದ್ದುಂಟು. ಲಂಡನ್ ನ ಒಂದು ಪ್ರಖ್ಯಾತ ಕಂಪನಿಯವರು ಶೇಕ್ಸ್ ಪಿಯರ್ ನ ಬಹುತೇಕ ಎಲ್ಲ ನಾಟಕಗಳನ್ನೂ ಈ ಮಾದರಿಯಲ್ಲಿ ಚಲನಚಿತ್ರಗಳಾಗಿ ರೂಪಿಸಿದ್ದಾರೆ. ನಾನು ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ತರಬೇತಿಗೆ ಹೋಗಿದ್ದ ಸಂದರ್ಭದಲ್ಲಿ ಈ ಚಿತ್ರಗಳನ್ನು ನೋಡಿದ್ದೇನೆ. ಹಲವು ನಿರ್ದೇಶಕರು ಈ ಮಾದರಿಯ ಅಳವಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವುದೂ ಉಂಟು! ಬೇರೆ ಬೇರೆ ಸಾಧ್ಯತೆಗಳೇ ಇರುವ ಮಾಧ್ಯಮಗಳನ್ನು ಹೀಗೆ ಬೆಸೆಯುವ ಪ್ರಯೋಗಗಳು ಸಾಧುವೇ ಅಲ್ಲವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿದೆ. ಇಲ್ಲಿ ಸರಿ ತಪ್ಪುಗಳ ನಿರ್ಧಾರಕ್ಕಿಂತಲೂ ಪ್ರಯೋಗ ಕಟ್ಟಿಕೊಡುವ ಸಾಂದ್ರ ಅನುಭವ ಬಹಳ ಮುಖ್ಯ ಎಂಬುದು ‘ಬಿಂಬ’ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ನನ್ನ ಅನುಭವಕ್ಕೆ ಬಂದ ಸಂಗತಿ. ಒಟ್ಟಾರೆ ಒಂದು ಸಾರ್ಥಕ ಕಲಾಕೃತಿಯ ಘನ ಉದ್ದೇಶವೂ ಅದೇ ಅಲ್ಲವೇ?
ಉಳಿದಂತೆ ಹೇಳುವುದಾದರೆ ಅವರವರ ಭಾವಕ್ಕೆ ತಕ್ಕಂತೆ.. ಅವರವರ ಮನೋಧರ್ಮಕ್ಕೆ ತಕ್ಕಂತೆ!!
‘ಬಿಂಬ’ ಚಿತ್ರದ ತಯಾರಿಯ ಜೊತೆಜೊತೆಗೇ ಬೇರೆ ಒಂದಷ್ಟು ಚಿತ್ರಗಳ ಚಿತ್ರೀಕರಣವೂ ನಡೆಯುತ್ತಿತ್ತು. ಯಾವುದೇ ವಿಶೇಷ ಪಾತ್ರಗಳು ನನ್ನ ತೆಕ್ಕೆಗೆ ದಕ್ಕದಿದ್ದರೂ ಒಂದಷ್ಟು ಅವಕಾಶಗಳು ಮಾತ್ರ ಬರುತ್ತಲೇ ಇದ್ದವು. ಕಥೆ – ಪಾತ್ರದ ಬಗ್ಗೆ ಹೇಳುವಾಗ ‘ನಿಮ್ಮ ಪಾತ್ರವೇ ಹೈಲೈಟು ಸಾರ್! ಕಥೆಗೆ ತಿರುವು ಸಿಗೋದೇ ನಿಮ್ಮ ಪಾತ್ರದಿಂದ.. ನಾಲ್ಕು ದಿನ ನಿಮ್ಮ dates ಬೇಕು’ ಎಂದೆಲ್ಲಾ ಕಿವಿಯ ಮೇಲೆ ಹೂವಿಟ್ಟು ಕರೆಸಿಕೊಳ್ಳುವುದು; ಹೋಗಿ ನೋಡಿದರೆ ಒಂದು ದೃಶ್ಯದಲ್ಲಿ ಬಂದು ಹೋಗುವ ಪಾತ್ರ! ಅವರು ನನ್ನ ಕಿವಿಯ ಮೇಲೆ ಇಟ್ಟ ಹೂವು ಸ್ಪರ್ಶಕ್ಕೆ ಸಿಗುವ ವೇಳೆಗೆ ಕಾಲ ಮಿಂಚಿರುತ್ತಿತ್ತು! ಹಾಗೂ ದಬಾಯಿಸಿ ಕೇಳಿದರೆ ಸಿದ್ಧ ಉತ್ತರಗಳು: ‘ಸಾರ್.. ಮುಂದೆ ಬರುತ್ತೆ ಸರ್ .. dates ಹೇಳ್ತೀನಿ’ ಎಂದು ಮತ್ತೊಂದು ಕಿವಿಗೂ ಹೂವು ಪೋಣಿಸುತ್ತಿದ್ದರು! ಆಮೇಲೂ ಬಿಡದೆ ಭಂಡತನದಿಂದ ವಿಚಾರಿಸಿದರೆ ‘ಸ್ಟೋರಿ ಲೈನ್ ಸ್ವಲ್ಪ ಬದಲಾಗಿಬಿಟ್ಟಿದೆ ಸರ್… ವಿಚಾರಿಸಿ ಹೇಳ್ತೀನಿ’ ಎಂದು ಜಾರಿಕೊಳ್ಳುತ್ತಿದ್ದರು! ಹೀಗೇ ಹೂಗಳನ್ನು ಪೋಣಿಸಿ ಪೋಣಿಸಿ ಈಗ ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ ಚಂದದ ಚಪ್ಪರವೇ ಬೆಳೆದುಬಿಟ್ಟಿದೆ!
ಒಂದೆರಡು ಸ್ವಾರಸ್ಯದ ಪ್ರಸಂಗಗಳನ್ನು ಹಂಚಿಕೊಳ್ಳುತ್ತೇನೆ:
ಒಂದು ದೊಡ್ಡ ಚಿತ್ರ.. ದೊಡ್ಡ ಹೀರೋ..ದೊಡ್ಡ ನಿರ್ದೇಶಕರು (ರಂಗಭೂಮಿಯ ಹಿನ್ನೆಲೆಯಿಂದ ಬಂದವರೇ); ಮ್ಯಾನೇಜರ್ ಫೋನ್ ಮಾಡಿ ಆ ಚಿತ್ರಕ್ಕಾಗಿ ಒಂದು ದಿನಾಂಕವನ್ನು ಕಾದಿರಿಸಲು ಕೇಳಿಕೊಂಡರು. ಆಗಲಿ ಎಂದು ಹೇಳಿದ ನಾನು ಪ್ರಾಸಂಗಿಕವಾಗಿ ನನ್ನ ಪಾತ್ರದ ಬಗ್ಗೆ ವಿಚಾರಿಸಿದೆ. “ಒಳ್ಳೇ ಕ್ಯಾರೆಕ್ಟ್ರು ಸಾರ್.. ಎಲ್ಲಾ ದೊಡ್ಡ ದೊಡ್ಡ ಆರ್ಟಿಸ್ಟ್ ಕಾಂಬಿನೇಷನ್ನು.. ಡಾಕ್ಟ್ರ ಪಾತ್ರ” ಎಂದು ನುಡಿದ ಆ ಮ್ಯಾನೇಜರ್ ಮಾತಿನಲ್ಲಿ ‘ಆ ಚಿತ್ರದಲ್ಲಿ ನಾನೊಂದು ಪಾತ್ರ ನಿರ್ವಹಿಸುವುದೇ ನನ್ನ ಪಾಲಿಗೆ ಸೌಭಾಗ್ಯದ ಸಂಗತಿ’ ಎಂಬ ಭಾವವಡಗಿತ್ತು! ನಾನೂ ಹೆಚ್ಚು ಮಾತಾಡದೇ ಸುಮ್ಮನಾದೆ.
ಹೇಳಿದ ದಿನದಂದು ಶೂಟಿಂಗ್ ಗೆ ಕರೆಸಿಕೊಂಡರು; ಗೌರವದಿಂದಲೇ ನಡೆಸಿಕೊಂಡರು; ಊಟೋಪಚಾರಗಳಲ್ಲಿ ಕೊರತೆಯಾಗದಂತೆ ನೋಡಿಕೊಂಡರು. ನಮ್ಮ ದೃಶ್ಯದ ಚಿತ್ರೀಕರಣ ಆರಂಭವಾಯಿತು. ಮ್ಯಾನೇಜರ್ ಅವರು ಹೇಳಿದ್ದಂತೆಯೇ ಅಂಬರೀಶ್ ಅವರಿಂದ ಮೊದಲುಗೊಂಡು ಖ್ಯಾತನಾಮರನೇಕರು ಆ ದೃಶ್ಯದಲ್ಲಿ ಕಾಣಿಸಿಕೊಳ್ಳುವವರಿದ್ದರು. ಡಾಕ್ಟರ್ ಪಾತ್ರಧಾರಿಯಾಗಿದ್ದ ನನಗೆ ಇದ್ದದ್ದು ಅಕ್ಷರಶಃ ಎರಡು ಮಾತುಗಳು! 30 ನಿಮಿಷಗಳಲ್ಲಿ ದೃಶ್ಯ ಮುಗಿದುಹೋಯಿತು; ನನ್ನ ಪಾತ್ರವೂ ಕೂಡಾ!
ಪರಿಚಿತರೇ ಆಗಿದ್ದ ಚಿತ್ರದ ನಿರ್ದೇಶಕರೊಟ್ಟಿಗೆ ಒಂದು ಖಾಸಗಿ ಕ್ಷಣದಲ್ಲಿ, ‘ನೀವು ನನ್ನನ್ನ ಜ್ಞಾಪಿಸಿಕೊಂಡದ್ದು ಖುಷಿಯಾದರೂ ಬೇರೆ ಒಂದೊಳ್ಳೆಯ ಪಾತ್ರಕ್ಕೆ ಜ್ಞಾಪಿಸಿಕೊಂಡಿದ್ರೆ ಇನ್ನೂ ಖುಷಿಯಾಗ್ತಿತ್ತು’ ಎಂದು ನನಗಾಗಿದ್ದ ಬೇಸರವನ್ನು ಹೇಳಿಕೊಂಡೆ. ಅವರು ಗಡ್ಡ ಸವರಿಕೊಳ್ಳುತ್ತಾ , “ಏನು ಮಾಡೋದು ಸರ್… ನೀವೇ ನೋಡಿದ್ರಲ್ಲಾ.. ಫ್ರೇಂ ಭರ್ತಿ ಎಲ್ಲಾ ದೊಡ್ಡ ದೊಡ್ಡ ಆರ್ಟಿಸ್ಟ್ ಗಳು! ಅವರುಗಳ ಮುಂದೆ ಯಾರ್ಯಾರನ್ನೋ ಕರಕೊಂಡು ಬಂದು ನಿಲ್ಲಿಸೋಕಾಗಲ್ಲ ಅಲ್ಲವಾ? ಇರಲಿ ಬಿಡಿ.. ಮುಂದೆ ಒಟ್ಟಿಗೆ ಕೆಲಸ ಮಾಡೋಣ ಬಿಡಿ” ಎಂದು ದೇಶಾವರಿ ನಗು ನಕ್ಕರು. ಮತ್ತೊಂದು ಹೂವು ಕಿವಿಯಿಂದ ಕಿವಿವರೆಗಿನ ಚಪ್ಪರಕ್ಕೇರಿತ್ತು!
ಮತ್ತೊಂದು ‘ಕರಾಳ’ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿಗೆ ಕರೆಸಿಕೊಂಡರು. ಆ ಚಿತ್ರದ್ದೂ ಇದೇ ಕಥೆ! ಚಿತ್ರದ ಆರಂಭದಲ್ಲೇ ಬಂದು ಮಿಂಚದೇ ಮಾಯವಾಗುವ ಪಾತ್ರ.. ನನಗೆ ನೆನಪಿರುವಂತೆ ಮೂಲಕಥೆಗೂ ನನ್ನ ಪಾತ್ರಕ್ಕೂ ಬಹುಶಃ ಸಂಬಂಧವೇ ಇರಲಿಲ್ಲ. ‘ಯಾಕೆ ಇಂಥ ಗೌಣ ಪಾತ್ರಕ್ಕೆ ಕರೆಸಿದಿರಿ?’ ಎಂದರೆ ಮತ್ತೆ ಅಂಥದೇ ಉತ್ತರ: “ಫಿಲ್ಮ್ ಬಿಗಿನಿಂಗು ಸರ್.. ಸ್ವಲ್ಪ known faces ಇದ್ರೆ ಒಳ್ಳೇದು ಅಂತ ಯೋಚನೆ ಮಾಡ್ತಿದ್ವಿ.. ಥಟ್ಟನೆ ನಿಮ್ಮ ಹೆಸರು ಹೊಳೀತು…” known face!!!
ಅಯ್ಯೋ ಕರ್ಮವೇ! ಆ ಸುವರ್ಣಮುಹೂರ್ತದಲ್ಲಿ ನನ್ನ ಹೆಸರೇ ಹೊಳೆಯಬೇಕೇ ಇವರಿಗೆ! ಹಿಂದೆಯೇ ಮತ್ತೊಂದು ಮಾತೂ ತೂರಿ ಬಂತು: “ಚಿಂತೆ ಮಾಡಬೇಡಿ ಸರ್.. ಮುಂದಿನ ತಿಂಗಳು ಹೊಸ ಫಿಲ್ಮ್ ಮುಹೂರ್ತ ಇದೆ!”
ವಾಹ್! ಮತ್ತೊಂದು ಹೂವು ಮುಡಿಗೇರಿಯೇಬಿಟ್ಟಿತು!!






0 Comments