ಶ್ರೀನಿವಾಸ ಪ್ರಭು ಅಂಕಣ- ಆ ಸುದ್ದಿ ಕೇಳಿ ನಾನು ನಖಶಿಖಾಂತ ಉರಿದುಹೋದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

88

ಗಿರೀಶ್ ಕಾರ್ನಾಡರ ‘ತುಘಲಕ್’ ನನ್ನ ಯಾವತ್ತಿನ ಮೆಚ್ಚಿನ ನಾಟಕ. “ಚರಿತ್ರೆಯನ್ನು ಸಮಕಾಲೀನ ತುರ್ತಿನಲ್ಲಿ ಪುನಾರಚಿಸುವ ಅನಿವಾರ್ಯತೆಯಿಂದಾಗಿಯೇ ವಿಭಿನ್ನರಾಗಿ ಕಾಣುವ ಗಿರೀಶರ ತುಘಲಕ್ ನಾಟಕ ಇಂದಿಗೂ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವ ನಿತ್ಯನೂತನ ಕೃತಿ.” 14ನೇ ಶತಮಾನದಲ್ಲಿ ಆಳುತ್ತಿದ್ದ ತುಘಲಕ್, ಐಲುದೊರೆಯೆಂದೇ ಕುಖ್ಯಾತ.ಮಹತ್ವಾಕಾಂಕ್ಷಿಯೂ ಕನಸುಗಾರನೂ ಆಗಿದ್ದ ತುಘಲಕ್, ಧರ್ಮವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ ಔಚಿತ್ಯವನ್ನು ಮರೆತು ಹಿಂಸೆಯ ಸರಣಿಯನ್ನೇ ನಡೆಸುತ್ತಾ ಕೊನೆಗೆ ಹತಾಶನಾಗಿ ನಿಡುಸುಯ್ಯುತ್ತಾ ಕುಸಿಯುವ ದುರಂತ ನಾಯಕ.

ಕನ್ನಡ ರಂಗಭೂಮಿಯಲ್ಲಿ ಮೊದಲಿಗೆ ತುಘಲಕ್ ನಾಟಕವನ್ನು ನಿರ್ದೇಶಿಸಿ ರಂಗಕ್ಕೆ ತಂದವರು ಪ್ರೊ॥ಬಿ.ಚಂದ್ರಶೇಖರ್ ಅವರು; ಬಿ.ಸಿ. ಎಂದೇ ಕನ್ನಡ ರಂಗಭೂಮಿಯಲ್ಲಿ ಗುರುತಿಸಲ್ಪಟ್ಟವರು. ಶಿಸ್ತಿಗೆ ಇನ್ನೊಂದು ಹೆಸರು ಎಂಬಂತಿದ್ದ ಬಿ.ಸಿ.ಯವರು ಎಂದೂ ಯಾವ ವಿಷಯಕ್ಕೂ ಹೊಂದಾಣಿಕೆ ಮಾಡಿಕೊಂಡವರೇ ಅಲ್ಲ. ತಾಲೀಮಿಗೆ ತಡವಾಗಿ ಬರುತ್ತಿದ್ದವರನ್ನು ನಿರ್ದಾಕ್ಷಿಣ್ಯವಾಗಿ ನಾಟಕದಿಂದ ಕಿತ್ತು ಹಾಕುತ್ತಿದ್ದ ಬಿ ಸಿ ಯವರ ಶಿಸ್ತು—ಸಮಯಪಾಲನೆಗಳ ಕುರಿತಾಗಿ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಈಗಲೂ ರಂಗಭೂಮಿ ಗೆಳೆಯರು ಸ್ಮರಿಸಿಕೊಳ್ಳುತ್ತಾರೆ. ನಿರ್ದೇಶಕರಾಗಿ—ನಾಟಕಕಾರರಾಗಿ ಖ್ಯಾತರಾಗಿದ್ದ ಬಿ.ಸಿ.ಯವರು ಪ್ರಸನ್ನ ಹಾಗೂ ಪಿ.ಲಂಕೇಶರ ನಾಟಕಗಳಲ್ಲಿ ನಟನಾಗಿಯೂ ಮಿಂಚಿದವರು. ಬಿ.ಸಿ.ಯವರು ತುಘಲಕ್ ಪಾತ್ರ ನಿರ್ವಹಿಸಲು ಆರಿಸಿಕೊಂಡದ್ದು ಕನ್ನಡ ರಂಗಭೂಮಿಯ ಮೇರು ಪ್ರತಿಭೆ ಸಿ.ಆರ್.ಸಿಂಹ ಅವರನ್ನು. ಮುಂದಿನ ದಿನಗಳಲ್ಲಿ ಅದೇನು ಕಾರಣವೋ ಏನೋ, ಸಿಂಹ ಅವರು ತಾವೇ ನಿರ್ದೇಶಕ—ಹಾಗೂ ಮುಖ್ಯ ಪಾತ್ರಧಾರಿಯಾಗಿ ನಟರಂಗದ ವತಿಯಿಂದ ತುಘಲಕ್ ನಾಟಕವನ್ನು ರಂಗದ ಮೇಲೆ ಪ್ರದರ್ಶಿಸತೊಡಗಿದರು. ಪ್ರಸಿದ್ಧ ನಟ ಲೋಕೇಶ್ ಅವರು ಅಝೀಝನ ಪಾತ್ರದಲ್ಲಿ, ನಟರಂಗ ರಾಜಾರಾಂ ಅವರು ಅಝಂ ನ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದರು. ಸಿಂಹ ಅವರಂತೂ ತುಘಲಕ್ ದೊರೆಯನ್ನು ಆವಾಹಿಸಿಕೊಂಡವರಂತೆ ಅಭಿನಯಿಸುತ್ತಿದ್ದರು!

ಹಿಂದೆ ಬಿ.ಸಿ.ಅವರನ್ನು ನಮ್ಮ ದೂರದರ್ಶನ ಕೇಂದ್ರಕ್ಕೆ ಕಲಾವಿದರನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ ವಿಶೇಷ ತಜ್ಞರನ್ನಾಗಿ ಆಹ್ವಾನಿಸಿದ್ದೆನಲ್ಲಾ, ಆ ಸಂದರ್ಭದಲ್ಲಿ ‘ತುಘಲಕ್’ ಕುರಿತಾದ ಒಂದು ಸಣ್ಣ ಅಸಮಾಧಾನ ಅವರ ದನಿಯಲ್ಲಿದ್ದುದನ್ನು ನಾನು ಗುರುತಿಸಿದ್ದೆ. ಆಗಲೇ, ನಮ್ಮ ಕೇಂದ್ರದ ಕಲಾವಿದರನ್ನೇ ಬಳಸಿಕೊಂಡು ಬಿ.ಸಿ.ಯವರಿಂದ ತುಘಲಕ್ ನಾಟಕವನ್ನು ಏಕೆ ಮಾಡಿಸಬಾರದು ಎಂಬ ಆಲೋಚನೆ ಥಟ್ಟನೆ ಮನಸ್ಸಿಗೆ ಬಂದುಬಿಟ್ಟಿತ್ತು. ಅದು ಕಾರ್ಯಗತವಾದದ್ದು ಮಾತ್ರ ಒಂದೆರಡು ವರ್ಷಗಳ ನಂತರವೇ..ನಾವು ನಮ್ಮ ಹೊಸ ಸ್ಟುಡಿಯೋಗೆ ಹೋಗಿ ಕಾರ್ಯಾರಂಭ ಮಾಡಿದ ಮೇಲೆಯೇ.

ಆತ್ಮೀಯ ಗೆಳೆಯ, ಪ್ರತಿಭಾವಂತ ನಟ,ಬಿ.ಸಿ.ಅವರ ಪಟ್ಟ ಶಿಷ್ಯ ಬಿ.ವಿ.ರಾಜಾರಾಂ ತುಘಲಕ್ ನ ಪಾತ್ರವನ್ನು ನಿರ್ವಹಿಸಲು ಆಯ್ಕೆಯಾದ.
ಅರಮನೆಯ ಒಳಾಂಗಣದ ದೃಶ್ಯಗಳನ್ನು ನಮ್ಮ ಸ್ಟುಡಿಯೋದಲ್ಲಿಯೇ ಸೆಟ್ ಹಾಕಿ ಮಾಡುವುದೆಂದೂ ಹೊರಾಂಗಣದ ದೃಶ್ಯಗಳನ್ನು ದೇವನಹಳ್ಳಿಯ ಕೋಟೆಯ ಸುತ್ತ ಮುತ್ತ ಚಿತ್ರೀಕರಿಸುವುದೆಂದೂ ಯೋಜನೆ ಹಾಕಿಕೊಂಡೆವು.

ಒಮ್ಮೆ ನಾನು ಹಾಗೂ ರಾಜೇಂದ್ರ ಕಟ್ಟಿ, ಬಿ.ಸಿ.ಅವರೊಂದಿಗೆ ದೇವನಹಳ್ಳಿಗೆ ಹೋಗಿ ಸ್ಥಳ ಪರಿಶೀಲನೆ ಮಾಡಿಕೊಂಡು ಅಗತ್ಯವಿದ್ದ ಪರವಾನಗಿಗಳನ್ನು ಪಡೆದುಕೊಂಡು ಬಂದೆವು. ದೂರದರ್ಶನ ಸರ್ಕಾರಿ ಮಾಧ್ಯಮವೇ ಆದ್ದರಿಂದ ಪರವಾನಗಿ ಪಡೆದುಕೊಳ್ಳುವುದು ಕಷ್ಟವೇನಾಗಲಿಲ್ಲ. ಬಿ.ಸಿ.ಯವರೂ ಸಹಾ ಅತ್ಯುತ್ಸಾಹದಿಂದ ತಾಲೀಮು ಆರಂಭಿಸಿದರು. ಸ್ಟುಡಿಯೋದಲ್ಲಿ ಸೆಟ್ ಗಳ ನಿರ್ಮಾಣಕಾರ್ಯವೂ ಆರಂಭವಾಯಿತು. ಮೊದಲು ಮೂರು ದಿನಗಳ ಕಾಲ ಹೊರಾಂಗಣ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದು ನಂತರ ಸ್ಟುಡಿಯೋದಲ್ಲಿಯೂ ಯಶಸ್ವಿಯಾಗಿ—ಸಮರ್ಪಕವಾಗಿ ಚಿತ್ರೀಕರಣ ಮಾಡಿ ಮುಗಿಸಿದಾಗ ಬಿ.ಸಿ.ಯವರ ಮುಖದ ಮೇಲೆ ಸಮಾಧಾನದ—ತೃಪ್ತಿಯ ಮುಗುಳ್ನಗು! ನಂತರ ಸಂಕಲನ ಕಾರ್ಯ ಆರಂಭವಾಯಿತು. ದೃಶ್ಯಗಳೆಲ್ಲವನ್ನೂ ಅಗತ್ಯ ಅನುಕ್ರಮಣಿಕೆಯಲ್ಲಿ ಜೋಡಿಸಿ ಸಂಗೀತವನ್ನೂ ಅಳವಡಿಸಿ ಪೂರ್ಣ ನಾಟಕವನ್ನು ಸಿದ್ಧ ಪಡಿಸಿದ ಮೇಲೆ ನಮಗೂ ‘ಕನ್ನಡದ ಒಂದು ಶ್ರೇಷ್ಠ ನಾಟಕವನ್ನು ಸಮರ್ಥವಾಗಿ ಕಿರುತೆರೆಗೆ ಅಳವಡಿಸಿದ್ದೇವೆ’ ಎಂಬ ಸಾರ್ಥಕ ಭಾವ. ದೊಡ್ಡ ನಾಟಕವಾದುದರಿಂದ ನಾಲ್ಕೈದು ಕಂತುಗಳಲ್ಲಿ ನಾಟಕವನ್ನು ಪ್ರಸಾರ ಮಾಡಲು ನಿರ್ಧರಿಸಿದೆವು. ಮೂರು ಕಂತುಗಳ ಪ್ರಸಾರ ನಿರ್ವಿಘ್ನವಾಗಿ ನೆರವೇರಿ ನಾಟಕ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿತು. ಮೂರನೆಯ ಕಂತು ಪ್ರಸಾರವಾದ ಮರುದಿನ ಎಂದಿನಂತೆ ಆಫೀಸ್ ಗೆ ಹೋಗಿ ನನ್ನ ಕೆಲಸದಲ್ಲಿ ಮಗ್ನನಾಗಿದ್ದಾಗಲೇ ನಿರ್ದೇಶಕರಿಂದ ಬುಲಾವ್ ಬಂದಿತು. ‘ಮತ್ತಾವ ಹೊಸ ಹೊಣೆ ಹೆಗಲೇರುತ್ತದೋ’ ಎಂದು ಶಂಕಿಸುತ್ತಲೇ ನಿರ್ದೇಶಕರ ಕೊಠಡಿಯೊಳಕ್ಕೆ ಹೋದೆ. ನೋಡಿದರೆ ಅಲ್ಲಿ ನಾಲ್ಕಾರು ಮೌಲ್ವಿಗಳು—ಮುಸ್ಲಿಂ ಧಾರ್ಮಿಕ ಮುಖಂಡರು ಆಸೀನರಾಗಿದ್ದಾರೆ! ಒಳ ಹೋದ ನನ್ನನ್ನೇ ಇರಿಯುವಂತೆ ನೋಡುತ್ತಿದ್ದಾರೆ! ಏನಾಗುತ್ತಿದೆಯೆಂಬ ಹೊಲಬೇ ಇಲ್ಲದ ನಾನು ಗೊಂದಲದಲ್ಲಿ ತೊಳಲುತ್ತಿದ್ದಾಗಲೇ ನಿರ್ದೇಶಕಿ ರುಕ್ಮಿಣಿಯವರು ಎತ್ತರದ ದನಿಯಲ್ಲಿ ಕಿರುಚತೊಡಗಿದರು: “ಪ್ರಭು..ನಿಮಗೆ ಗೊತ್ತಿರಬೇಕು—ನೀವು ಕೆಲಸ ಮಾಡ್ತಿರೋದು ಕೇಂದ್ರ ಸರ್ಕಾರದ ಅಧೀನದ ಕಛೇರಿಯಲ್ಲಿ. ಯಾವುದೇ ಧರ್ಮ ಅಥವಾ ಧಾರ್ಮಿಕ ಗುರುಗಳ ಕುರಿತಾಗಿ ಅವಹೇಳನಕಾರಿಯಾದಂಥ ಹೇಳಿಕೆಗಳು ನಿಮ್ಮ ಕಾರ್ಯಕ್ರಮದಲ್ಲಿ ಇರಕೂಡದು!ಇದು ನಮ್ಮ ನೀತಿಸಂಹಿತೆ. ಅದು ಹೇಗೆ ನೀವು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸೋದಕ್ಕೆ ಸಾಧ್ಯ?”

ನನಗೆ ಆಗಲೂ ಅವರ ಕಿರುಚಾಟ—ದೋಷಾರೋಪಣೆಗಳ ಮೂಲ ಕಾರಣ ಅರ್ಥವಾಗಲಿಲ್ಲ. “ವಿಷಯ ಏನೂಂತ ಹೇಳಿದರೆ ಸೂಕ್ತ ವಿವರಣೆ ಕೊಡೋದಕ್ಕೆ ಪ್ರಯತ್ನಿಸ್ತೇನೆ ಮೇಡಂ” ಎಂದು ನಮ್ರನಾಗಿಯೇ ನುಡಿದೆ.”ನೀವು ನಮ್ಮ ಪ್ರವಾದಿಗಳಿಗೆ ಅವಮಾನವಾಗುವಂತಹ ಮಾತನ್ನು ನಿಮ್ಮ ತುಘಲಕ್ ನಾಟಕದಲ್ಲಿ ಬಳಸಿದ್ದೀರಿ. ಇದು ಅಕ್ಷಮ್ಯ”—ಸಿಡಿದು ಬಂತು ಮೌಲ್ವಿಯೊಬ್ಬರ ವಾಗ್ಬಾಣ. ಪ್ರವಾದಿಗಳ ಬಗ್ಗೆ ಅವಹೇಳನದ ಮಾತೇ! ನನಗಂತೂ ದಿಕ್ಕೇ ತಪ್ಪಿದಂತಾಗಿಹೋಯಿತು. ಒಂದೆಡೆ ನಿರ್ದೇಶಕರ ಚೀರಾಟ..ಮತ್ತೊಂದೆಡೆ ಮುಖಂಡರ ಆರ್ಭಟ..ವಿಷಯವೂ ಸ್ಪಷ್ಟವಾಗದೆ ನಾನು ಹೈರಾಣಾಗಿ ಹೋದೆ. ಕೊಂಚ ಆವೇಶ—ಆರ್ಭಟಗಳು ತಹಬಂದಿಗೆ ಬಂದ ನಂತರ ವಿಷಯವೇನೆಂಬುದು ಅರಿವಿಗೆ ಬರತೊಡಗಿತು: ತುಘಲಕ್ ನಾಟಕದ ಒಂದು ದೃಶ್ಯದಲ್ಲಿ ಹತಾಶೆಯ ಹಂತಕ್ಕೆ ತಲುಪಿದ ದೊರೆ ಸ್ವಾನುಕಂಪೆಯ ಮಾತುಗಳನ್ನಾಡುತ್ತಾ ‘ಜನ ತನ್ನನ್ನು ಹುಚ್ಚನೆಂದು ಕರೆಯುತ್ತಾರೆ..ನಾನು ಜಾಣ ಹೇಗಾಗಲಿ?” ಎಂದು ಅಲವತ್ತುಕೊಳ್ಳುತ್ತಾನೆ. ಹುಚ್ಚನೆಂದು ಕರೆಯುತ್ತಾರೆ—ಎಂದು ಹೇಳುವಾಗ ತನ್ನ ಹೆಸರನ್ನು ಹೇಳಿಕೊಳ್ಳುತ್ತಾನೆ (ಇಲ್ಲಿ ಅದರ ಪುನರಾವರ್ತನೆ ಬೇಡ!). ಅದು ಪ್ರವಾದಿಗಳನ್ನೇ ಉದ್ದೇಶಿಸಿ ಹೇಳಿದ್ದೆಂದು ಈ ಮುಖಂಡರು ಅರ್ಥೈಸಿಕೊಂಡುಬಿಟ್ಟಿದ್ದಾರೆ! ಅಥವಾ ಹಾಗೆ ಯಾರೋ ಅವರ ಮನಸ್ಸಿಗೆ ವಿಷ ತುಂಬಿದ್ದಾರೆ! ಒಮ್ಮೆ ವಿಷಯ ಅರ್ಥವಾದ ಮೇಲೆ ನಾನು ಇನ್ನಿಲ್ಲದಂತೆ ಅವರಿಗೆ ಸನ್ನಿವೇಶವನ್ನು ಅರ್ಥಮಾಡಿಸಲು ಪ್ರಯತ್ನಿಸಿದೆ. “ಪ್ರವಾದಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ; ಅವರ ಬಗ್ಗೆ ಹಗುರಾಗಿ ಹೇಗೆ ತಾನೇ ಮಾತಾಡಲು ಸಾಧ್ಯ? ಅದೂ ಒಂದು ಸರ್ಕಾರೀ ಕೃಪಾಪೋಷಿತ ಕಛೇರಿಯಲ್ಲಿ! ಆ ಮಾತು ತುಘಲಕ್ ತನಗೆ ತಾನೇ ಹೇಳಿಕೊಂಡಂಥ ಮಾತು.. ಅವನ ಹೆಸರೂ ಅದೇ ಆದ್ದರಿಂದ ಹಾಗೆ ಹೇಳಿಕೊಂಡಿದ್ದಾನೆಯೇ ಹೊರತು ಪ್ರವಾದಿಗಳು ಇಲ್ಲೆಲ್ಲೂ ಮುನ್ನೆಲೆಗೆ ಬರುವ ಪ್ರಸಂಗವೇ ಇಲ್ಲ” ಎಂದು ಎಷ್ಟೆಷ್ಟೇ ಅವರಿಗೆ ಅರ್ಥಮಾಡಿಸಲು ಪ್ರಯತ್ನ ಪಟ್ಟರೂ ಅವರು ಜಪ್ಪಯ್ಯ ಅನ್ನಲಿಲ್ಲ! “ನಿಲ್ಲಿಸಿಬಿಡಿ! ಈ ನಾಟಕವನ್ನು ಇಲ್ಲಿಗೇ ನಿಲ್ಲಿಸಿಬಿಡಿ! ಉಳಿದಿರುವ ಕಂತುಗಳನ್ನು ಪ್ರಸಾರ ಮಾಡಬೇಡಿ” ಎಂದು ಹಠ ಹಿಡಿದು ಕುಳಿತುಬಿಟ್ಟರು ಆ ಮುಖಂಡರು.ಅಯ್ಯೋ! ಅಷ್ಟು ಕಷ್ಟಪಟ್ಟು ಚಿತ್ರೀಕರಿಸಿರುವ ನಮ್ಮ ಮಹತ್ವಾಕಾಂಕ್ಷೆಯ ನಾಟಕ ಹೀಗೆ ಅರ್ಧದಲ್ಲೇ ಗೋಣು ಮುರಿದುಕೊಂಡು ಬೀಳಬೇಕೇ? ನನಗಂತೂ ಹೃದಯವೇ ಬಾಯಿಗೆ ಬಂದಂತಾಗಿ ಹೋಯಿತು. “ದಯವಿಟ್ಟು ಹಾಗೆ ಒತ್ತಡ ಹೇರಬೇಡಿ..ನಮ್ಮ ನಾಟಕದಲ್ಲಿ ನೀವಂದುಕೊಂಡಂತಹ ಯಾವ ಆಕ್ಷೇಪಾರ್ಹ ಮಾತುಗಳೂ ಇಲ್ಲ..ಬೇಕಿದ್ದರೆ ನಾಟಕದ ಉಳಿದ ಭಾಗಗಳನ್ನು ನಿಮಗೆ ತೋರಿಸುತ್ತೇನೆ. ನೀವು ನೋಡಿ ಒಪ್ಪಿಕೊಂಡ ಮೇಲೆ ಪ್ರಸಾರ ಮಾಡುತ್ತೇನೆ..ಕನ್ನಡದ ಒಂದು ಶ್ರೇಷ್ಠ ನಾಟಕದ ಪ್ರಸಾರವನ್ನು ಹೀಗೆ ತಡೆ ಹಿಡಿಯಬೇಡಿ” ಎಂದು ಅಂಗಲಾಚಿದೆ. ಬಹುಶಃ ಆ ಮುಖಂಡರು ನನ್ನ ಬೇಡಿಕೆಗೆ ಮಣಿಯುತ್ತಿದ್ದರೇನೋ. ಅಷ್ಟರಲ್ಲಿ ನಮ್ಮ ನಿರ್ದೇಶಕರು ಫರ್ಮಾನ್ ಹೊರಡಿಸಿಬಿಟ್ಟರು: “ನಿಲ್ಲಿಸಿಬಿಡಿ! ನಾಟಕದ ಪ್ರಸಾರ ನಿಲ್ಲಿಸಿಬಿಡಿ! ನನಗೆ ಇಲ್ಲಿ ಯಾವುದೇ ಕಾಂಟ್ರವರ್ಸಿ ಬೇಕಾಗಿಲ್ಲ..ನೀವೇನೋ ಪ್ರಸಾರ ಮಾಡಿ ಕೈ ತೊಳಕೊಂಡು ಬಿಡ್ತೀರಿ..ನಾಳೆ ಏನಾದರೂ ವಿಚಾರಣೆಗೆ ಬಂದರೆ ದೆಹಲಿ ಬಾಸ್ ಗಳನ್ನ ಫೇಸ್ ಮಾಡಬೇಕಾಗೋದು ನಾನು! ಈ ರಗಳೆ ಎಲ್ಲಾ ಏನೂ ಬೇಡ..ನಿಲ್ಲಿಸಿಬಿಡಿ”.

ಅವರು ಹಾಗನ್ನುತ್ತಿದ್ದಂತೆಯೇ ತಟಕ್ಕೆಂದು ಮೇಲೆದ್ದ ಆ ಮುಖಂಡರುಗಳು ‘ಶುಕ್ರಿಯಾ’ ಎನ್ನುತ್ತಾ ನನ್ನನ್ನು ಮತ್ತೊಮ್ಮೆ ಕಣ್ಣ ನೋಟದಲ್ಲೇ ಇರಿದು ಹೊರಟೇಬಿಟ್ಟರು. ರುಕ್ಮಿಣಿಯಮ್ಮ ನಾನು ಹೊರಡಬಹುದೆಂದು ಸೂಚಿಸುವಂತೆ ಮುಂದಿದ್ದ ಫೈಲ್ ಗಳಲ್ಲಿ ಮುಳುಗಿಹೋದರು. ತೀವ್ರ ಹತಾಶೆ—ನಿರಾಸೆಗಳಲ್ಲಿ ಮುಳುಗಿಹೋದ ನಾನು ನಿಧಾನವಾಗಿ ಎದ್ದು ಹೊರಬಂದು ನನ್ನ ಕೋಣೆಯತ್ತ ನಡೆದೆ. ಗೆಳೆಯ ಕಟ್ಟಿಗೆ ವಿಷಯವನ್ನು ವಿವರಿಸಿದಾಗ ಅವನೂ ದಿಗ್ಭ್ರಾಂತನಾಗಿಹೋದ. ಕಾರಣವೇ ಇಲ್ಲದೆ ಹೀಗೆ ಆಪಾದನೆಗಳನ್ನು—ಅದೂ ಧರ್ಮನಿಂದನೆಯ ಆಪಾದನೆಗಳನ್ನು ಹೊತ್ತುಕೊಳ್ಳುವುದೆಂದರೆ ಏನರ್ಥ? ಯಾಕೋ ಸುಮ್ಮನಾಗಲು ಮನಸ್ಸಾಗಲಿಲ್ಲ. ಅನೇಕ ರಂಗಭೂಮಿಯ ಮಿತ್ರರಿಗೆ, ರಂಗಧುರೀಣರಿಗೆ ವಿಷಯ ಮುಟ್ಟಿಸಿ ನಾಟಕವನ್ನು ಪೂರ್ಣವಾಗಿ ಪ್ರಸಾರಮಾಡಲು ನೆರವಾಗುವಂತೆ ಕೇಳಿಕೊಂಡೆ. ಬಾಯಿಮಾತಿನ ಭರವಸೆ ಬೇಕಾದಷ್ಟು ಬಂದರೂ ಬಿ.ಸಿ.ಯವರ ಹೊರತಾಗಿ ಯಾರೊಬ್ಬರೂ ಆ ಕುರಿತು ಚಕಾರವೆತ್ತಲಿಲ್ಲ..ನಿರ್ದೇಶಕರ ಮೇಲೆ ಒತ್ತಡ ಹೇರಲಿಲ್ಲ. “ಇಲ್ಲದ ರಗಳೆ ನಮಗೇಕೆ—ಅದೂ ಹೇಳಿಕೇಳಿ ಇನ್ನೊಂದು ಧರ್ಮದ ವಿಚಾರ” ಎಂದುಕೊಂಡು ಸುಮ್ಮನಾಗಿಬಿಟ್ಟರೋ ಏನೋ! ಒಟ್ಟಿನಲ್ಲಿ ತುಘಲಕ್ ನಾಟಕ ಪ್ರಸಾರ ಅಪೂರ್ಣವಾಗಿಯೇ ಉಳಿದುಹೋಯಿತು. ಹಲವಾರು ದಿನಗಳು ಕಷ್ಟಪಟ್ಟು ಚಿತ್ರೀಕರಣ ಮಾಡಿ ಸಿದ್ಧಪಡಿಸಿದ್ದ ನಮ್ಮ ಮಹತ್ವಾಕಾಂಕ್ಷೆಯ—ಕನಸಿನ ನಾಟಕ ಮತ್ತೆಂದೂ ಪ್ರಸಾರಕ್ಕೆ ದಕ್ಕದಂತೆ ಅಳಿಸಿಹೋಯಿತು. ಕೆಲದಿನಗಳ ನಂತರ ಪ್ರಜಾವಾಣಿಯಲ್ಲಿ ಗಿರೀಶ್ ಕಾರ್ನಾಡರ ಒಂದು ಹೇಳಿಕೆ (ಯಾವುದೋ ಭಾಷಣದಿಂದ ಉದ್ಧರಿಸಿದ್ದು) ಪ್ರಕಟವಾಯಿತು: “ತುಘಲಕ್ ನಾಟಕ ಪ್ರಸಾರಕ್ಕೆ ತಡೆಯೊಡ್ಡಿದಾಗ ಒಂದು ಬಗೆಯ ಮುಸ್ಲಿಂ ಮೂಲಭೂತವಾದಿತ್ವವನ್ನೂ ಮತ್ತೊಂದು ಪ್ರಸಂಗದಲ್ಲಿ ಹಿಂದೂ ಮೂಲಭೂತವಾದಿತ್ವವನ್ನೂ ಅತೀವ ನೋವು—ಸಂಕಟದಿಂದ ಗಮನಿಸಿದ್ದೇನೆ.. ಇದು ನಮ್ಮ ದೇಶಕ್ಕಂಟಿದ ಶಾಪ”…ಎಂಬರ್ಥದ ಮಾತುಗಳು ಆ ಹೇಳಿಕೆಯಲ್ಲಿದ್ದವು. ಅದು ಮೊದಲು.. ಅದು ಕೊನೆ..ತುಘಲಕ್ ಮತ್ತೆ ಉಸಿರೆತ್ತಲಿಲ್ಲ.

ಇದೇ ಕಾಲಮಾನದಲ್ಲಿ ದೂರದರ್ಶನಕ್ಕಾಗಿ ಮಾಡಿದ ಮತ್ತೊಂದು ಪ್ರಮುಖ ಕಾರ್ಯಕ್ರಮವೆಂದರೆ ಮೈಸೂರಿನ ದಸರಾ ಉತ್ಸವದ ನೇರಪ್ರಸಾರ.ಸಾಧಾರಣವಾಗಿ ದೂರದರ್ಶನ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಡುತ್ತಿದ್ದ ನಿರೂಪಕರನ್ನು ಬಿಟ್ಟು ಹೊಸಬರನ್ನು ಆಹ್ವಾನಿಸುವ ವಿಚಾರ ತಲೆಗೆ ಹೊಕ್ಕಿತು! ಗೆಳೆಯರೊಂದಿಗೆ ಚರ್ಚಿಸಿ ಕೊನೆಗೆ ಕವಿ—ಪತ್ರಕರ್ತ ಬಿ.ಎಂ.ಹನೀಫ್ ಹಾಗೂ ಮೈಸೂರಿನ ಮೂಲದವರೇ ಆಗಿದ್ದ ಪ್ರೊ॥ಅರವಿಂದ ಮಾಲಗತ್ತಿಯವರನ್ನು ದಸರಾ ಉತ್ಸವದ ನೇರಪ್ರಸಾರದ ನಿರೂಪಣೆಗಾಗಿ ಆರಿಸಿಕೊಂಡಾಗ ಹಲ ಹುಬ್ಬುಗಳು ಆಶ್ಚರ್ಯ—ಅಪನಂಬಿಕೆಗಳಿಂದ ಮೇಲೇರಿದವು! ಆದರೆ ಮಾಲಗತ್ತಿಯವರು ಹಾಗೂ ಹನೀಫ್ ಅವರು ಅದಾವ ಪರಿಯಲ್ಲಿ ಸಂಶೋಧನೆ ಮಾಡಿ ವಿಷಯ ಸಂಗ್ರಹಣೆ ಮಾಡಿ ಸಮರ್ಥವಾಗಿ ನಿರೂಪಣಾ ಕಾರ್ಯವನ್ನು ನಿರ್ವಹಿಸಿದರೆಂದರೆ ನಂತರದಲ್ಲಿ ಒಂದೇ ಒಂದು ಒಡಕು ಸ್ವರವೂ ಕೇಳಿಬರಲಿಲ್ಲ!

ಒಳಾಂಗಣ—ಹೊರಾಂಗಣಗಳೆರಡರಲ್ಲೂ ಚಿತ್ರೀಕರಣ ನಡೆಸಿ ಸಿದ್ಧಪಡಿಸಿದ ಮತ್ತೊಂದು ಪ್ರಮುಖ ನಾಟಕವೆಂದರೆ ಪರ್ವತವಾಣಿಯವರ ‘ಬಹದ್ದೂರ್ ಗಂಡ’. ಶೇಕ್ಸ್ ಪಿಯರ್ ನ ‘ಟೇಮಿಂಗ್ ಆಫ್ ದಿ ಶ್ರೂ’ ನಾಟಕದ ರೂಪಾಂತರವಾಗಿದ್ದ ‘ಬಹದ್ದೂರ್ ಗಂಡ’ ನಾಟಕವನ್ನು ಒಂದು ಟೆಲಿಚಿತ್ರದಂತೆಯೇ ಚಿತ್ರೀಕರಿಸಿದ್ದೆವು.ಮುಖ್ಯಪಾತ್ರಗಳಲ್ಲಿ ಪ್ರಸಿದ್ಧ ನೃತ್ಯಕಲಾವಿದೆ ವೈಜಯಂತಿ ಕಾಶಿ ಹಾಗೂ ಸೇತುರಾಂ ಬಲ್ಲರವಾಡ ಅವರು ಅಭಿನಯಿಸಿದ್ದರು.ಸಾಕಷ್ಟು ಜನ ಪ್ರೀತಿಯನ್ನು ಗಳಿಸಿಕೊಂಡ ನಾಟಕವಿದು.

ಒಂದು ಸಂಜೆ ಕಲಾಕ್ಷೇತ್ರದಲ್ಲಿ ಭೇಟಿಯಾದ ರಂಗಸಂಘಟಕ ನಾಗರಾಜಮೂರ್ತಿ, “ನಮ್ಮ ಪ್ರಯೋಗರಂಗ ತಂಡಕ್ಕೆ ಒಂದು ನಾಟಕ ಮಾಡಿಸುತ್ತೀಯಾ ಗೆಳೆಯಾ?” ಎಂದು ಕೇಳಿದ. ನಮ್ಮ ತಂಡ ಒಡೆದುಹೋದ ಮೇಲೆ ರಂಗಭೂಮಿಗಾಗಿ ನಾನೂ ಯಾವ ಹೊಸ ನಾಟಕವನ್ನೂ ಮಾಡಿಸಿರಲಿಲ್ಲ.ದೂರದರ್ಶನಕ್ಕಾಗಿ ಅನೇಕ ನಾಟಕ—ಟೆಲಿಚಿತ್ರಗಳನ್ನು ಮಾಡುತ್ತಲೇ ಇದ್ದರೂ ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಪ್ರಕ್ರಿಯೆಯ ಆನಂದವೇ ಬೇರೆ! ಅಲ್ಲಿ ದೊರೆಯುವ ತೃಪ್ತಿ—ರೋಮಾಂಚಗಳ ಬೆರಗೇ ಬೇರೆ!ಹಾಗಾಗಿ ನಾಗರಾಜ ಮೂರ್ತಿ ಕೇಳಿದ ತಕ್ಷಣವೇ ನಾಟಕ ಮಾಡಿಸಲು ಒಪ್ಪಿಕೊಂಡುಬಿಟ್ಟೆ. ಅದಾಗಲೇ ಬರೆದು ಸಿದ್ಧಪಡಿಸಿಟ್ಟುಕೊಂಡಿದ್ದ ಎರಡು ನಾಟಕಗಳು ರಂಗವೇರಲು ಸಜ್ಜಾಗಿದ್ದವು:ವುಡ್ ಹೌಸ್ ಕಥೆ ಆಧರಿಸಿ ಬರೆದಿದ್ದ ‘ಪರಮೇಶಿ ಪ್ರೇಮ ಪ್ರಸಂಗ’ ಎಂಬ ಶುದ್ಧ ಮನರಂಜನೆಯ ನಾಟಕ ಹಾಗೂ ಪೀಟರ್ ಶಫರ್ ನ ‘ರಾಯಲ್ ಹಂಟ್ ಆಫ್ ದಿ ಸನ್’ ನಾಟಕದ ರೂಪಾಂತರವಾದ ‘ರಾಜಬೇಟೆ’. ಪ್ರಯೋಗರಂಗ ತಂಡಕ್ಕೆ ‘ಪರಮೇಶಿ ಪ್ರೇಮಪ್ರಸಂಗ’ವನ್ನೇ ಮಾಡಿಸುವುದೆಂದು ತೀರ್ಮಾನವಾಯಿತು. ಆದರೆ ಈ ಹಿಂದೆಯೇ ಹೇಳಿರುವಂತೆ ‘ಪರಮೇಶಿ ಪ್ರೇಮಪ್ರಸಂಗ’ ಹೆಸರನ್ನು ಶಂಕರ್ ನಾಗ್ ಅವರು ನನ್ನಿಂದ ಪಡೆದು ಅದೇ ಹೆಸರಿನ ಚಿತ್ರವನ್ನು ನಿರ್ಮಿಸಿ ತೆರೆಗೂ ತಂದುಬಿಟ್ಟಿದ್ದರು. ಹಾಗಾಗಿ ನನ್ನ ನಾಟಕಕ್ಕೆ ಬೇರೆ ನಾಮಕರಣ ಮಾಡುವುದು ಅನಿವಾರ್ಯವಾಗಿತ್ತು. ಸಾಕಷ್ಟು ತಲೆ ಕೆಡಿಸಿಕೊಂಡ ನಂತರ ಮೊದಲಿಟ್ಟ ಹೆಸರಿನಷ್ಟು ಆಕರ್ಷಕವಲ್ಲದಿದ್ದರೂ ಇದ್ದದ್ದರಲ್ಲಿ ನಾಟಕದ ವಸ್ತುವಿಗೆ ಹೊಂದುವಂತಹ ‘ಬ್ರಹ್ಮಚಾರಿ ಶರಣಾದ’ ಎಂಬ ಹೆಸರನ್ನು ಇಡಲಾಯಿತು. ಇದ್ದ ಒಂದು ಮುಖ್ಯ ಸಮಸ್ಯೆಯೆಂದರೆ ಈ ನಾಟಕದಲ್ಲಿ ನಾಲ್ಕು ಮುಖ್ಯ ಸ್ತ್ರೀ ಪಾತ್ರಗಳು! ಒಂದು ಸಂಜೆ ರಿಹರ್ಸಲ್ ಗೆ ಪುಟಾಣಿ ರಾಧಿಕಾಳನ್ನೂ ಕರೆದುಕೊಂಡು ಬಂದಿದ್ದ ರಂಜನಿಯನ್ನು ನೋಡಿ ನಾಗರಾಜಮೂರ್ತಿ, “ಮೇಡಂ ಯಾಕೆ ಒಂದು ಪಾತ್ರ ಮಾಡಬಾರದು?” ಎಂದ! ಅರೆ! ಹೌದಲ್ಲಾ! ರಂಜನಿಗೆ ಹೇಗೂ ಶಾಲೆ—ಕಾಲೇಜುಗಳಲ್ಲಿ ನಾಟಕದಲ್ಲಿ ಅಭಿನಯಿಸಿದ ಅನುಭವವಿದೆ;ಕೊಂಚ ತರಬೇತಿ ದೊರೆತರೆ ಚೆನ್ನಾಗಿಯೇ ಅಭಿನಯಿಸಬಲ್ಲಳು ಅನ್ನಿಸಿತು. ನನ್ನ ಜೋಡಿಯಾಗಿಯೇ ಬರುವ ಒಂದು ಮುಖ್ಯ ಪಾತ್ರಕ್ಕೆ ಅವಳನ್ನು ಆರಿಸಿಕೊಂಡೇಬಿಟ್ಟೆ! ಪರಮೇಶಿಯಾಗಿ ಸುದರ್ಶನ್ , ಅವನ ಜೋಡಿ ರಶ್ಮಿಯಾಗಿ ಮಾಲಿನಿ, ಹುಲಿವಾನ್ ಭೂತನಾಥಯ್ಯನಾಗಿ ಶ್ರೀನಿವಾಸ ಮೇಷ್ಟ್ರು,ಅವರ ಘಟವಾಣಿ ಹೆಂಡತಿಯಾಗಿ ಎಂ ಎಸ್ ವಿದ್ಯಾ, ಮನೆ ಕೆಲಸದಾಳು ಪುಂಡರೀಕುವಾಗಿ ಧನಂಜಯ, ಅವನ ಜೋಡಿ ಕಳ್ಳಿ ಚೆನ್ನಿಯಾಗಿ ನಳಿನಿ ಅಕ್ಕ, ಕೃಷ್ಣೋಜಿ ಪಂಡಿತನಾಗಿ ನಾನು, ನನ್ನ ಜೋಡಿ ಶಾಂತಲ ದೇವಿಯಾಗಿ ರಂಜನಿ, ಪೋಲಿಸ್ ಪೇದೆ ವ್ಯಾಕುಲರಾಯನಾಗಿ ಶಿವಮಲ್ಲಯ್ಯ—ಹೀಗೆ ಪಾತ್ರವರ್ಗ ಸಿದ್ಧವಾಯಿತು. ತಾಲೀಮು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಶೆಡ್ ನಲ್ಲಿ ಸಂಭ್ರಮದಿಂದ ಆರಂಭವಾಯಿತು.

ಎಷ್ಟೋ ದಿವಸ ಮಗಳು ರಾಧಿಕಾಳನ್ನೂ ನಮ್ಮೊಟ್ಟಿಗೆ ರಿಹರ್ಸಲ್ ಗೆ ಕರೆದುಕೊಂಡು ಹೋಗುತ್ತಿದ್ದೆವು. ತೀರಾ ಸೌಮ್ಯ ಸ್ವಭಾವದ ಆ ಪುಟಾಣಿ ಒಂದಿಷ್ಟೂ ರಗಳೆ ಮಾಡದೆ ರಿಹರ್ಸಲ್ ನಡೆಯುವಷ್ಟೂ ಹೊತ್ತು ತನ್ನ ಪಾಡಿಗೆ ತಾನು ಡ್ರಾಯಿಂಗ್ ಮಾಡಿಕೊಂಡು ಕುಳಿತಿರುತ್ತಿದ್ದಳು. ಡ್ರಾಯಿಂಗ್ ನಲ್ಲಿ ಅವಳು ಅದೆಷ್ಟು ತಲ್ಲೀನಳಾಗಿ ಬಿಡುತ್ತಿದ್ದಳೆಂದರೆ ಸಮಯ ಸರಿದುದೇ ತಿಳಿಯುತ್ತಿರಲಿಲ್ಲ! ಮುಂದೆ ಲಂಡನ್ ನ ಛೆಲ್ಸಿ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಯನ್ನು ರಾಧಿಕಾ ಪಡೆದದ್ದು ಇದೇ ಚಿತ್ರಕಲೆಯ ವಿಭಾಗದಲ್ಲಿಯೇ ಎಂಬುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ! ಭವಿಷ್ಯದ ಸಾಧನೆಯ ಸೂಚನೆಗಳು ಕಲಾಕ್ಷೇತ್ರದ ಶೆಡ್ ನಲ್ಲೇ ಮೊಳಕೆಯೊಡೆದವೋ ಏನೋ! ನಮ್ಮ ಎಲ್ಲ ಕಲಾವಿದರಿಗೂ ರಾಧಿಕಾ ಎಂದರೆ ತುಂಬಾ ಮುದ್ದು! ಬಹುಶಃ ‘ಬ್ರಹ್ಮಚಾರಿ’ ನಾಟಕದ ತಾಲೀಮಿನ ಸಮಯದಲ್ಲಿ ಪಟ್ಟಷ್ಟು ಖುಷಿ—ಸಂಭ್ರಮ ಮತ್ತೆಲ್ಲೂ ಪಡಲಿಲ್ಲವೇನೋ! ಶುದ್ಧ ಮನರಂಜನೆಯ ಹಾಸ್ಯ ನಾಟಕವಾದುದರಿಂದ ಇಡೀ ನಾಟಕವನ್ನು ಅಲ್ಲಲ್ಲಿ ಸ್ಫೂರ್ತ ವಿಸ್ತರಣದ ಮೂಲಕ ಬೆಳೆಸುತ್ತಾ ಕಟ್ಟುತ್ತಿದ್ದ ಪ್ರಕ್ರಿಯೆಯೇ ರೋಮಾಂಚಕಾರಿಯಾಗಿತ್ತು. ಒಂದೊಂದು ದಿನದ ತಾಲೀಮು ಮುಗಿದಾಗಲೂ ಆಯಾಸವಾಗುವ ಮಾತಂತಿರಲಿ, ಮತ್ತಷ್ಟು ಶಕ್ತಿ ಸಂಚಯವಾದಂತೆ ಭಾಸವಾಗಿ ಮೈಮನಗಳು ಹಗುರವಾಗುತ್ತಿದ್ದವು!

ಹೀಗೆ ನಾಟಕದ ಚಟುವಟಿಕೆ ತೀವ್ರಗತಿಯಲ್ಲಿ ಮುಂದುವರಿದುಕೊಂಡು ಹೋಗುತ್ತಿದ್ದಾಗಲೇ ಒಂದು ದಿನ ನಮ್ಮ ನಿರ್ದೇಶಕರು ಇದ್ದಕ್ಕಿದ್ದಂತೆ ನನ್ನನ್ನು ಕರೆದು ಬಾಂಬ್ ಸಿಡಿಸಿದರು: “ಕಾಶ್ಮೀರಕ್ಕೆ ಹೋಗಿ ಅಲ್ಲಿನ ಸ್ಥಿತಿ ಗತಿಗಳನ್ನು ಚಿತ್ರೀಕರಿಸಿಕೊಂಡು ಬರಲು ಒಂದು ತಂಡ ರಚಿಸಿದ್ದೇವೆ; ನೀವು ಆ ತಂಡದ ಮುಖ್ಯಸ್ಥರು!”. ಆಗಂತೂ ಕಾಶ್ಮೀರದಲ್ಲಿ ಮತೀಯ ಗಲಭೆಗಳು ವಿಪರೀತ ಹೆಚ್ಚಾಗಿಬಿಟ್ಟಿದ್ದವು. ಕಾಶ್ಮೀರವೆಂದರೆ ಒಂದು ಅದ್ಭುತ ಪ್ರವಾಸ ತಾಣವೆಂಬುದು ಎಂದೋ ಹಿನ್ನೆಲೆಗೆ ಸರಿದು ಅಲ್ಲಿ ಸದಾ ಗುಂಡು—ಬಾಂಬುಗಳ ಆಸ್ಫೋಟದ ಸದ್ದು ಕಿವಿಗಪ್ಪಳಿಸುತ್ತಿತ್ತು. ಅಂಥ ವಿಪರೀತ ಪರಿಸ್ಥಿತಿಯಲ್ಲಿ ಕಾಶ್ಮೀರಕ್ಕೆ ಹೋಗುವುದೇ!ಯಾಕೋ ಮನಸ್ಸು ಒಪ್ಪಲಿಲ್ಲ. ಮನೆಯಲ್ಲಿ ಅಮ್ಮನೂ ಸಹಾ ‘ಖಂಡಿತ ಹೋಗಬೇಡ..ನಾನು ಕಳಿಸುವುದಿಲ್ಲ’ ಎಂದು ಹಠ ಹಿಡಿದು ಕೂತುಬಿಟ್ಟರು. ಸೀದಾ ನಿರ್ದೇಶಕರ ಬಳಿ ಹೋಗಿ, “ಇದುವರೆಗೆ ನೀವು ಒಪ್ಪಿಸಿರುವ ಎಲ್ಲ ವಿಶೇಷ ಕೆಲಸಗಳನ್ನೂ ಮುತುವರ್ಜಿಯಿಂದ ಮಾಡಿ ಮುಗಿಸಿದ್ದೇನೆ.. ಈ ಬಾರಿ ನನ್ನನ್ನು ಬಿಟ್ಟುಬಿಡಿ.. ನಾನು ಕಾಶ್ಮೀರಕ್ಕೆ ಹೋಗಲಾರೆ” ಎಂದು ಹೇಳಿಬಿಟ್ಟೆ. ಒಂದೆರಡು ದಿನಗಳ ನಂತರ ಮತ್ತೆ ನಿರ್ದೇಶಕರು ನನ್ನನ್ನು ಕರೆಸಿ, “ಕಾಶ್ಮೀರಕ್ಕೆ ಹೋಗಲು ಬೇರೆ ನಿರ್ಮಾಪಕರು ಯಾರೂ ಒಪ್ಪುತ್ತಿಲ್ಲ..ನೀನೇ ಹೋಗಬೇಕು” ಎಂದರು! ನನಗೂ ಸಿಟ್ಟು ಬಂದಿತು! “ಬೇರೆಯವರು ಆಗುವುದಿಲ್ಲ ಎಂದರೆ ಒಪ್ಪಿಕೊಂಡು ಸುಮ್ಮನಾಗುವ ನೀವು ನನ್ನ ಅಭಿಪ್ರಾಯಕ್ಕೇಕೆ ಮನ್ನಣೆ ನೀಡುತ್ತಿಲ್ಲ? ಜೊತೆಗೆ ಇದು ನನ್ನ ವಿಭಾಗಕ್ಕೆ ಸಂಬಂಧಪಟ್ಟ ಕೆಲಸವೂ ಅಲ್ಲ..ಕ್ಷಮಿಸಿ..ನಾನು ಹೋಗಲಾರೆ” ಎಂದು ಖಡಾಖಂಡಿತವಾಗಿ ಹೇಳಿ ಹೊರನಡೆದುಬಿಟ್ಟೆ. ಅಂದೇ ಸಂಜೆಯ ವೇಳೆಗೆ ಗೆಳೆಯರಿಂದ ಗುಪ್ತ ವರ್ತಮಾನ ಬಂತು: ಕಾಶ್ಮೀರಕ್ಕೆ ನನ್ನನ್ನು ಕಳಿಸಲು ಆದೇಶ ಮಾಡಿರುವ ಸುತ್ತೋಲೆ ಸಿದ್ಧವಾಗಿದೆ! ಸಧ್ಯದಲ್ಲೇ ನನಗೆ ಅದನ್ನು ತಲುಪಿಸಲು ಬರುತ್ತಿದ್ದಾರೆ! ಆ ಸುದ್ದಿ ಕೇಳಿ ನಾನು ನಖಶಿಖಾಂತ ಉರಿದುಹೋದೆ. ನನ್ನ ವಿಭಾಗಕ್ಕೆ ಸಂಬಂಧ ಪಡದಿದ್ದರೂ ಅದೆಷ್ಟೋ ಕಾರ್ಯಕ್ರಮಗಳನ್ನು ದೊಡ್ಡದೊಡ್ಡ ಸಂಭ್ರಮ—ಸಡಗರಾಚರಣೆಗಳನ್ನು ದೂರದರ್ಶನಕ್ಕಾಗಿ ಸಿದ್ಧಪಡಿಸಿಕೊಟ್ಟಿದ್ದೆ; ಇದೊಂದು ಬಾರಿ ನನ್ನನ್ನು ಬಿಟ್ಟುಬಿಡಿ ಎಂದರೆ ಕೇಳುತ್ತಿಲ್ಲ! ಸುತ್ತೋಲೆ ಸಿದ್ಧವಾಗಿದೆಯಂತೆ! ಇರಲಿ. ಅದನ್ನು ನಾನು ಸ್ವೀಕರಿಸಿದರೆ ತಾನೇ ‘ವಿಷಯ ನನಗೆ ಗೊತ್ತಾಗಿದೆ’ಯೆಂದು ಸಿದ್ಧವಾಗುವುದು! ಸುತ್ತೋಲೆಯನ್ನು ತೆಗೆದುಕೊಳ್ಳದೇ ಇದ್ದರೆ? ಮಿಂಚಿನ ವೇಗದಲ್ಲಿ ಹೊರಬಂದು ಬೈಕ್ ಹತ್ತಿ ಹೊರ ಹೊರಟುಬಿಟ್ಟೆ. ಪ್ರಭು ಸರ್..ಸರ್..ಎಂಬ ಕೂಗು ಕಿವಿಗಪ್ಪಳಿಸುತ್ತಿದ್ದರೂ ಕೇಳದವನಂತೆ ಹೊರಟೇಹೋದೆ. ಅಲ್ಲಿಂದ ಶರವೇಗದಲ್ಲಿ ಹೊರಟ ನನ್ನ ಬೈಕ್ ನಿಂತದ್ದು ಬಸವೇಶ್ವರ ನಗರದಲ್ಲಿದ್ದ ಡಾ॥ನಾಗರಾಜಯ್ಯನವರ ಕ್ಲಿನಿಕ್ ಮುಂದೆ. ಕೇಂದ್ರ ಸರ್ಕಾರಿ ನೌಕರರ ಆರೋಗ್ಯ ಸಮಸ್ಯೆಗಳನ್ನು ವಿಚಾರಿಸಿಕೊಳ್ಳಲು ನಮ್ಮ ವಿಭಾಗಕ್ಕೆ ನಿಯುಕ್ತರಾಗಿದ್ದ ವೈದ್ಯರು—ಡಾ॥ನಾಗರಾಜಯ್ಯ. ಅವರಿಗೆ ನನ್ನ ಸಮಸ್ಯೆಯನ್ನು ಇದ್ದಂತೆಯೇ ವಿವರಿಸಿ ಹೇಳಿದೆ. ಕ್ಷಣಕಾಲ ಯೋಚಿಸಿದ ಅವರು, “ನಿಮಗೆ ತೊಂದರೆಯಾಗದಂತೆ, ನಾನೂ ಅಡ್ಡಮಾತಿಗೆ ಸಿಕ್ಕಿಹಾಕಿಕೊಳ್ಳದಂತೆ ಆಗಬೇಕಾದರೆ ಇರುವುದೊಂದೇ ಮಾರ್ಗ” ಎಂದರು. ಪ್ರಶ್ನಾರ್ಥಕವಾಗಿ ನೋಡಿದ ನನ್ನನ್ನೇ ನೋಡುತ್ತಾ ಅವರೆಂದರು:

ಲುಂಬ್ಯಾಗೋ!!!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: