ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಆ ಒಂದು ಕರೆ ನಮ್ಮ ತಲ್ಲಣಗಳಿಗೆ ಕೊನೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 158

ಆ ಸಮಯದಲ್ಲಿ ನಮ್ಮ ಮನೆಯಲ್ಲಿದ್ದದ್ದು ಎರಡು ಕಾರ್ ಗಳು. ಬಿಳಿ ಬಣ್ಣದ etios ಕಾರ್ ಅನ್ನು ನಾನು ಬಳಸುತ್ತಿದ್ದೆ. ತಿಳಿ ಹಸಿರು ಬಣ್ಣದ ಫೋರ್ಡ್ ಕಾರ್ ರಂಜನಿ ಹಾಗೂ ಮಕ್ಕಳ ಅನುಕೂಲಕ್ಕಾಗಿ ಬಳಕೆಯಾಗುತ್ತಿತ್ತು. ಇಬ್ರಾಹಿಂ ಈ ಕಾರ್ ಅನ್ನು ಚಲಾಯಿಸುತ್ತಿದ್ದ. ಎಲ್ಲರೂ ಸ್ಕೂಲು—ಕಾಲೇಜು—ಶೂಟಿಂಗ್— ಎಂದು ಹೊರಗೆ ಓಡಾಡುವವರೇ ಆದ್ದರಿಂದ ಒಬ್ಬೊಬ್ಬರ ಬಳಿಯೂ ಒಂದೊಂದು ಮನೆಯ ಬೀಗದ ಕೈ ಇರುತ್ತಿತ್ತು. ನನ್ನ ಬಳಿ ಇದ್ದ ಮನೆಯ ಬೀಗದ ಕೈ ಅನ್ನು ನಾನು ನನ್ನ ಕಾರ್ ನ ಕೀ ಜೊತೆಗೆ ಕೀ ಬಂಚ್ ನಲ್ಲೇ ಸೇರಿಸಿ ಇಟ್ಟುಕೊಂಡುಬಿಟ್ಟಿದ್ದೆ. ನಿಯಮಿತವಾದ ಹೊತ್ತು ಗೊತ್ತು ಇಲ್ಲದವನು ಮನೆಯಲ್ಲಿ ನಾನೊಬ್ಬನೇ ಆಗಿದ್ದೆನಲ್ಲಾ! ಶೂಟಿಂಗ್ ಗೆ ಸಾಮಾನ್ಯವಾಗಿ ನಾನೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ಅಪರೂಪಕ್ಕೊಮ್ಮೆ ರಂಜನಿಗೆ ಕಾಲೇಜ್ ಗೆ ರಜೆ ಇದ್ದು ನನಗೆ ಶೂಟಿಂಗ್ ಇದ್ದಾಗ ಇಬ್ರಾಹಿಂನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದುದುಂಟು.

ಈಗ ನನ್ನ ಕಾರ್ ನ ಕೀ ಗೊಂಚಲಿನಲ್ಲಿದ್ದ ಮನೆಯ ಬೀಗದ ಕೈ ಇಬ್ರಾಹಿಂಗೆ ಸಿಕ್ಕಿರಬಹುದಾದ ಸಾಧ್ಯತೆಯಾದರೂ ಏನು ಎಂದು ವಿಚಾರ ಮಾಡತೊಡಗಿದಾಗ ಥಟ್ಟನೆ ಒಂದು ವಿಚಾರ ಹೊಳೆಯಿತು : ಒಂದೆರಡು ಬಾರಿ ಇಬ್ರಾಹಿಂ ಚಲಾಯಿಸುತ್ತಿದ್ದ ಫೋರ್ಡ್ ಕಾರ್ ಅನ್ನು ಸರ್ವೀಸ್ ಗೆಂದು ಬಿಟ್ಟ ಸಮಯದಲ್ಲಿ , ಅದು ನನಗೆ ಶೂಟಿಂಗ್ ಇಲ್ಲದಿದ್ದ ದಿನವಾಗಿದ್ದರೆ, ರಂಜನಿಯನ್ನು ಕಾಲೇಜ್ ಗೆ ಕರೆದುಕೊಂಡು ಹೋಗಲು ಇಬ್ರಾಹಿಂಗೆ ನನ್ನ ಕಾರ್ ಅನ್ನೇ ಕೊಟ್ಟು ಕಳಿಸುತ್ತಿದ್ದೆ! ರಂಜನಿಯನ್ನು ಕಾಲೇಜ್ ಗೆ ಬಿಟ್ಟಮೆಲೆ ಇಬ್ರಾಹಿಂ ನಾಲ್ಕಾರು ತಾಸು, ಅಂದರೆ ರಂಜನಿ ಕಾಲೇಜ್ ಮುಗಿಸಿಕೊಂಡು ಬರುವವರೆಗೂ, ಕಾಲೇಜ್ ಆವರಣದಲ್ಲಿಯೇ ಕಾರ್ ನಿಲ್ಲಿಸಿಕೊಂಡಿರುತ್ತಿದ್ದ. ಬೀಗದ ಕೈ ಗೊಂಚಲಲ್ಲಿರುವ ಮನೆಯ ಬೀಗದ ಕೈ ಅವನ ಗಮನಕ್ಕೆ ಬರದೇ ಇರುವುದು ಸಾಧ್ಯವೇ ಇರಲಿಲ್ಲ! ಸ್ವಭಾವತಃ ಮುಗ್ಧನೋ ಒಳ್ಳೆಯ ವ್ಯಕ್ತಿಯೋ ಆದವನಿಗೆ ಬೇರಾವ ದುರಾಲೋಚನೆಯೂ ಮೂಡದಿರಬಹುದು. ಆದರೆ ದುಷ್ಟ ಬುದ್ಧಿಯ ಧೂರ್ತನಿಗೆ ಅನಾಯಾಸವಾಗಿ ಸಿಕ್ಕಿರುವ ಮನೆಯ ಬೀಗದ ಕೈ, ಭಾಗ್ಯನಿಧಿಯ ಬಾಗಿಲಿನ ಬೀಗದ ಕೈ ರೀತಿಯಲ್ಲಿ ಕಂಗೊಳಿಸಿರಲಿಕ್ಕೂ ಸಾಕು! ನಾವು ಅಂದುಕೊಂಡದ್ದು ಇಬ್ರಾಹಿಂ ಒಳ್ಳೆಯ ಮನುಷ್ಯನೆಂದು ; ಆದರೆ ನಮ್ಮ ಅನಿಸಿಕೆ—ಭಾವನೆಗಳು ಸದಾ ದಿಟವೇ ಆಗಿರಬೇಕೆಂದೇನಿಲ್ಲವಲ್ಲ! ಕೆಟ್ಟ ಆಲೋಚನೆ ಮನಸ್ಸಿನಲ್ಲಿ ಚಿಗುರೊಡೆದ ಹೊತ್ತಿನಲ್ಲಿ, “ಇರಲಿ..ಯಾವುದಕ್ಕೂ ಕೈಗಾವಲಿಗಿರಲಿ; ಸೂಕ್ತ ಸಮಯ ಒದಗಿಬಂದಾಗ ಕೈಚಳಕ ತೋರಿಸಿದರಾಯ್ತು” ಎಂದು ಲೆಕ್ಕಾಚಾರ ಹಾಕಿಕೊಂಡು ಮನೆಯ ಬೀಗದ ಕೈ ನ ನಕಲಿ ಕೀ ಯನ್ನು ಇಬ್ರಾಹಿಂ ಮಾಡಿಸಿಟ್ಟುಕೊಂಡಿರಬಹುದು; ಈಗ ನಾವು ಊರಿಗೆ ಹೋದ ಸಂದರ್ಭದಲ್ಲಿ ,ಅನಿರುದ್ಧನೂ ಕಾಲೇಜ್ ಕಾರ್ಯಕ್ರಮಗಳಿಗೆಂದು ಬೆಳಗಿನಿಂದ ರಾತ್ರಿಯವರೆಗೆ ಮನೆಯಿಂದ ಹೊರಗೆ ಇರುವ ಸಮಯದಲ್ಲಿ ಸುವರ್ಣಾವಕಾಶ ತಾನಾಗಿ ಬಂದು ಬಾಗಿಲು ಬಡಿದು ‘ಬಾಗಿಲು ತೆರೆದು ಒಳಹೋಗಲು’ ಕರೆ ನೀಡುತ್ತಿದೆ! ಅದಕ್ಕಾಗಿಯೇ ಕಾಯುತ್ತಿದ್ದವನು ಸಂದರ್ಭ ಒದಗಿದಾಗ ಬಿಟ್ಟಾನೆಯೇ? ಸಲೀಸಾಗಿ ಬಾಗಿಲು ತೆರೆದುಕೊಂಡು ಒಳಬಂದು ಸಾವಕಾಶವಾಗಿ ಬೀರುವಿನ ಬಾಗಿಲು ತೆಗೆದು ಸಿಕ್ಕಿದ್ದೆಲ್ಲವನ್ನೂ ದೋಚಿಕೊಂಡು ಹೋಗಿದ್ದಾನೆ!!

ಇಷ್ಟೂ ಚಿತ್ರಕಥೆ ನನ್ನ ಮನೋಭಿತ್ತಿಯಲ್ಲಿ ಹಂತಹಂತವಾಗಿ ರೂಪುಗೊಂಡುಬಿಟ್ಟಿತು. ಮನೆಯ ಬಾಗಿಲು ತೆಗೆದುಕೊಂಡು ಒಳಹೋಗಿಯೇ ಕಳ್ಳತನ ನಡೆದಿರುವುದರಿಂದ ಆ ಸಾಧ್ಯತೆ ಇದ್ದದ್ದು ಇಬ್ರಾಹಿಂ ಒಬ್ಬನಿಗೆ ಮಾತ್ರ! ಕಳ್ಳತನ ಆದ ತಕ್ಷಣವೇ ಕೆಲಸ ಬಿಟ್ಟುಹೋದರೆ ತನ್ನ ಮೇಲೆ ಅನುಮಾನ ಬಂದೇ ಬರುತ್ತದೆ; ಒಂದೆರಡು ತಿಂಗಳು ಕಳೆದು ವಿಷಯ ತುಸು ತಣ್ಣಗಾದ ಮೇಲೆ, ಚಿನ್ನ ಬೆಳ್ಳಿ ವರ್ತಕರ ಮುಷ್ಕರವೂ ಮುಗಿದ ಮೇಲೆ, ಕದ್ದಮಾಲಿನ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ನಂತರ ಕೆಲಸ ಬಿಟ್ಟುಹೋದರೆ ಯಾರಿಗೂ ಅನುಮಾನ ಬರುವುದಿಲ್ಲ! ಇಷ್ಟೆಲ್ಲಾ ಲೆಕ್ಕಾಚಾರ ಹಾಕಿಕೊಂಡ ಇಬ್ರಾಹಿಂ ಏನೂ ಅರಿಯದ ಅಮಾಯಕನಂತೆ ನಡೆದುಕೊಳ್ಳುತ್ತಿದ್ದಾನೆ! ಕಳ್ಳತನದ ಸುದ್ದಿ ತಿಳಿದಾಗ ಹೌಹಾರಿದವನಂತೆ ನಟಿಸಿದ್ದಾನೆ! ಜೊತೆಯಲ್ಲೇ ಪೋಲೀಸ್ ಸ್ಟೇಷನ್ ಗೆ ಬಂದು ಹೋಗಿ ಮಾಡಿಕೊಂಡು ಆಗುತ್ತಿರುವ ಪ್ರತಿ ಬೆಳವಣಿಗೆಯನ್ನೂ ಗಮನಿಸುತ್ತಾ ತನ್ನ ಮುಂದಿನ ನಡೆಯನ್ನು ಯೋಜಿಸುತ್ತಿದ್ದಾನೆ!
ಹೀಗೆ ಯೋಚಿಸುತ್ತಾ ಹೋದಂತೆ ಇಬ್ರಾಹಿಂನನ್ನು ಬಿಟ್ಟು ಇನ್ನಾರೂ ಕಳ್ಳತನ ಮಾಡಿರಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ನನ್ನ ಮನಸ್ಸು ಧುಮುಕಿಬಿಟ್ಟಿತು.

ಅಂದು ಸಂಜೆ ಶೂಟಿಂಗ್ ನಿಂದ ಮನೆಗೆ ಬಂದವನೇ ರಂಜನಿಯನ್ನೂ ಮಕ್ಕಳನ್ನೂ ಕೂರಿಸಿಕೊಂಡು ನನ್ನ ಮನಸ್ಸಿಗೆ ಬಂದಿದ್ದ ವಿಚಾರವನ್ನೆಲ್ಲಾ ಕೂಲಂಕುಷವಾಗಿ ಬಿಡಿಸಿ ಹೇಳಿದೆ. ಇಬ್ರಾಹಿಂ ಬಗ್ಗೆ ಮನೆಯವರಿಗೆಲ್ಲಾ ಅದಾವ ಪರಿಯ ನಂಬಿಕೆ ಇತ್ತೆಂದರೆ ಅವನೇ ಕಳ್ಳನಿರಬಹುದೆಂಬ ಸಾಧ್ಯತೆಯನ್ನು ಒಪ್ಪಿಕೊಳ್ಳಲು ಅವರಿಗೆ ತುಂಬಾ ಕಷ್ಟವಾಯಿತು! ಆದರೆ ನಡೆದಿರುವ -ತರ್ಕಿಸಿರುವ ಪ್ರತಿಯೊಂದು ವಿವರವೂ ಅವನೆಡೆಗೇ ಬೊಟ್ಟು ಮಾಡುತ್ತಿದ್ದುದರಿಂದ ಬೇರೆ ದಾರಿಯೇ ಇಲ್ಲದೆ ಆ ಸಾಧ್ಯತೆಯನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಹಾಗೆ ಒಂದು ಒಮ್ಮತಕ್ಕೆ ಬರುತ್ತಿದ್ದಂತೆ ರಂಜನಿ ಮತ್ತೊಮ್ಮೆ,”ಅಯ್ಯೋ ರಾಮಾ” ಎಂದು ಚೀರಿದಳು! ಆ ಚೀರುವಿಕೆಯ ಕಾರಣವಿಷ್ಟೇ :

ಸಾಮಾನ್ಯವಾಗಿ ಕಾಲೇಜ್ ನಿಂದ ಬಂದಮೇಲೆ ಬೇಸ್ ಮೆಂಟ್ ನಲ್ಲಿ ಕಾರ್ ನಿಲ್ಲಿಸಿ ಇಬ್ರಾಹಿಂ ತನ್ನ ಮನೆಗೆ ಹೊರಟುಹೋಗುತ್ತಿದ್ದ ; ರಂಜನಿ ಲಿಫ್ಟ್ ಹತ್ತಿಕೊಂಡು ಐದನೇ ಮಹಡಿಯ ನಮ್ಮ ಮನೆಗೆ ಬರುತ್ತಿದ್ದಳು—ಇದು ವಾಡಿಕೆಯಾಗಿತ್ತು. ಕಳ್ಳತನದ ಪ್ರಸಂಗವಾದ ಮೇಲೆ ಹೆಚ್ಚುಕಡಿಮೆ ನಿರ್ಜನವಾಗಿಯೇ ಇರುವ ನಮ್ಮ ಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ನಲ್ಲಿ ಒಬ್ಬಳೇ ಅಡ್ಡಾಡುವುದಕ್ಕೂ ಹೆದರುತ್ತಿದ್ದ ರಂಜನಿ, ಲಿಫ್ಟ್ ನಲ್ಲಿ ಒಬ್ಬಳೇ ಮೇಲೆ ಹೋಗಲೂ ಅಂಜುತ್ತಿದ್ದಳು. ಕೆಲ ಬಾರಿ ,”ಕಳ್ಳತನ ಆದಮೇಲೆ ಒಬ್ಬಳೇ ಹೋಗೋದಕ್ಕೆ ಭಯ ಆಗುತ್ತೆ..ಮನೆ ತನಕ ಬಿಟ್ಟುಹೋಗಿ” ಎಂದು ಇಬ್ರಾಹಿಂನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಳಂತೆ ! “ಇದೆಂಥಾ ವಿಪರ್ಯಾಸ ನೋಡಿ! ಕಳ್ಳ ಇರಬಹುದು ಅಂತ ಈಗ ಊಹಿಸ್ತಿರೋ ಮನುಷ್ಯನನ್ನೇ ನಾನು ಬೆಂಗಾವಲಿಗೆ ಕರಕೊಂಡು ಹೋಗಿದ್ದೀನಲ್ಲಾ!” ಎಂದು ರಂಜನಿ ಉದ್ಗರಿಸುತ್ತಿದ್ದರೆ ಸನ್ನಿವೇಶದ ವ್ಯಂಗ್ಯಕ್ಕೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ ನನಗೆ!

ಹೀಗೆ ಇಬ್ರಾಹಿಂ ಮೇಲೆ ನನ್ನ ಅನುಮಾನ ಗಟ್ಟಿಯಾಗುತ್ತಿದ್ದಂತೆ ‘ಇನ್ನು ತಡ ಮಾಡಬಾರದು’ ಎಂದು ನಿಶ್ಚಯಿಸಿ ನಾನೇ ಪೋಲೀಸ್ ಸ್ಟೇಷನ್ ಗೆ ಫೋನ್ ಮಾಡಿದೆ. ಇನ್ಸ್ ಪೆಕ್ಟರ್ ರಹೀಂ ಅವರು ಠಾಣೆಯಲ್ಲೇ ಇದ್ದರು. “ನನಗೆ ಇಬ್ರಾಹಿಂ ಮೇಲೆ ಅನುಮಾನವಿದೆ ಸರ್ ; ನೀವು ಅವನನ್ನೊಮ್ಮೆ ವಿಚಾರಣೆಗೆ ಒಳಪಡಿಸಬಹುದು” ಎಂದು ನಾನು ಹೇಳಿದರೆ ರಹೀಂ ಅವರು ನಕ್ಕು, “ಏನ್ಸಾರ್ , ನನ್ನ ತಮ್ಮನ ಹಾಗಿದಾನೆ, ಅವನ ವಿಚಾರಣೆ ಬೇಡ ಅಂದಿದ್ರಲ್ಲಾ, ಈಗ ಇದ್ದಕ್ಕಿದ್ದ ಹಾಗೆ ಏನಾಯ್ತು?” ಎಂದರು. ನಾನು ಅವರಿಗೆ ನನ್ನ ವಾದಸರಣಿಯನ್ನೆಲ್ಲಾ ಒಂದಿಷ್ಟೂ ಬಿಡದೆ ವಿವರಿಸಿ ಹೇಳಿದೆ. ಮೊದಲಿನಿಂದ ಅವನು ನಡೆದುಕೊಳ್ಳುತ್ತಿರುವ ಪರಿಗೂ ಈಗ ಅನುಮಾನ ಹುಟ್ಟಿಸುತ್ತಿರುವ ಅವನ ನಡಾವಳಿಗೂ ಇರುವ ಅಂತರವನ್ನು ಅವರಿಗೆ ಮನದಟ್ಟು ಮಾಡಿಕೊಟ್ಟೆ. “ಅನುಮಾನಕ್ಕೂ ಖಚಿತವಾದ ತಳಹದಿ ಇರಬೇಕು ಅಲ್ಲವಾ ಸರ್? ಸುಮ್ಮಸುಮ್ಮನೆ ಒಬ್ಬ ನಿರಪರಾಧೀನ ಅನುಮಾನಿಸಿ ಹಿಂಸೆ ಕೊಟ್ರೆ ಅದು ತುಂಬಾ ದೊಡ್ಡ ತಪ್ಪಾಗಿಬಿಡೋಲ್ಲವಾ ಸರ್?” ಎಂದು ನನ್ನ ವಿಳಂಬ ನಿರ್ಧಾರಕ್ಕೆ ಕಾರಣ ಹೇಳಿದೆ. “ಆಯ್ತು ಸರ್ , ನಾಳೆ ಬೆಳಿಗ್ಗೆ ಅವನು ಡ್ಯೂಟಿಗೆ ಎಷ್ಟು ಹೊತ್ತಿಗೆ ಬರ್ತಾನೆ?” ಎಂದರು ರಹೀಂ. “ಸಾಧಾರಣ 7.45 ಕ್ಕೆ ಬಂದುಬಿಡ್ತಾನೆ ಸರ್…ಒಂದು ವರ್ಷದ ಲಾಗಾಯ್ತು ಇವತ್ತಿನವರೆಗೂ ಒಂದುದಿನವೂ ತಡಮಾಡಿದವನಲ್ಲ” ಎಂದೆ ನಾನು. “ಸರಿ, ನಾಳೆ ಬೆಳಿಗ್ಗೆ ನಾವು ಮಫ್ತೀಲಿ ನಿಮ್ಮ ಅಪಾರ್ಟ್ ಮೆಂಟ್ ಹೊರಗೆ ಒಂದು ನೂರು ಮೀಟರ್ ದೂರದಲ್ಲಿ ನಿಂತು ಕಾಯ್ತಿರ್ತೀವಿ..ಅವನು ಬಂದ ತಕ್ಷಣ ಅವನಿಗೆ ಗೊತ್ತಾಗದ ಹಾಗೆ ನಮಗೊಂದು ಮೆಸೇಜ್ ಕೊಡಿ..ನಾವು ಕವರ್ ಮಾಡಿಕೊಂಡು ಅವನನ್ನ ಎತ್ತ್ಹಾಕ್ಕೊಂಡು ಹೋಗಿ ವಿಚಾರಿಸ್ಕೋತೀವಿ” ಎಂದರು ರಹೀಂ. “ಆಗಲಿ ಸರ್..ಆದ್ರೆ ಸರ್..ದಯವಿಟ್ಟು ತುಂಬಾ ಹೊಡೆದು ಬಡಿದು ಮಾಡಬೇಡಿ..ಕಳ್ಳ ಅಂತ ಪ್ರೂವ್ ಆಗಿಲ್ವಲ್ಲಾ” ಎಂದು ನಾನೆಂದರೆ ರಹೀಂ ಸಾಹೇಬರು ಜೋರಾಗಿ ನಕ್ಕುಬಿಟ್ಟರು. ” ಸರ್ , ಕಳ್ಳ ಅಂತ ಪ್ರೂವ್ ಮಾಡೋದಕ್ಕೇ ನಾಲಕ್ಕು ವದೆ ಕೊಡಬೇಕಾಗುತ್ತೆ..ನೀನು ಕದ್ದಿದೀಯಾಪ್ಪಾ ಅಂತ ಒಳ್ಳೇ ಮಾತಲ್ಲಿ ಮುದ್ದಾಗಿ ಕೇಳಿದರೆ ಯಾವ ಕಳ್ಳಾನೂ ಕದ್ದಿದೀನಿ ಅಂತ ಒಪ್ಪಿಕೊಳ್ಳೋಲ್ಲ..ಕಿವಿ ಕೆಳಗೆ ಎರಡು ಸಲ ತಬಲಾ ಬಾರಿಸಿದರೇನೇ ಒಳಗಿರೋ ಗುಟ್ಟುಗಳನ್ನ ಆಚೆ ಕಾರಿಕೊಳ್ಳೋದು…ಸ್ಟೇಷನ್ ನಲ್ಲಿ ‘ಅಣ್ಣ ತಮ್ಮ’ ನ ಭಾಷೆಗೆ ಬೆಲೆಯಿಲ್ಲ ಸರ್… ಇಲ್ಲೇನಿದ್ರೂ ಬೂಟು ಲಾಠಿಗಳೇ ಮಾತಾಡೋದು..ಬಿಡಿ…ಅದೆಲ್ಲಾ ನಾವು ನೋಡಿಕೋತೀವಿ..ನೀವು ಈಗ ನಾನು ಹೇಳಿದ ಹಾಗೆ ಮಾಡಿ ಸಾಕು…ಯಾವ ಕಾರಣಕ್ಕೂ ಅವನಿಗೆ ಅನುಮಾನ ಬರೋ ಥರಾ ನಡಕೋಬೇಡಿ” ಎಂದು ಎಚ್ಚರಿಸಿ ನನ್ನನ್ನು ಬೀಳ್ಕೊಟ್ಟರು ರಹೀಂ ಸಾಹೇಬ್ರು.

ಮರುದಿನ ನನಗೆ ಶೂಟಿಂಗ್ ಇರಲಿಲ್ಲ. ಅದು ಒಂದು ರೀತಿಯಲ್ಲಿ ಅನುಕೂಲವೇ ಆಯಿತು ಎಂದು ನಾನಂದುಕೊಂಡೆ. ರಾತ್ರಿ ಸರಿಯಾಗಿ ನಿದ್ದೆ ಆಗಿರಲಿಲ್ಲ. ಕಣ್ಣು ಮುಚ್ಚಿದರೆ ರಹೀಂ ಸಾಹೇಬರ ಬೂಟು ಲಾಠಿ ಮಾತೇ ಕಿವಿಯಲ್ಲಿ ಮೊರೆಯುತ್ತಿತ್ತು. ಯಾವಾಗ ಬೆಳಗಾಗುತ್ತದೋ ಯಾವಾಗ ಇಬ್ರಾಹಿಂ ಬರುತ್ತಾನೋ ಎಂದು ಎಲ್ಲರೂ ಕಾತರ ಆತಂಕಗಳಿಂದ ಕಾಯುತ್ತಿದ್ದೆವು. 7.45. ಅವನು ಬರುವ ಸಮಯವಾಯಿತು. ಇಲ್ಲ..ಬರಲಿಲ್ಲ. ಎಂಟು ಗಂಟೆಯಾಯಿತು. ಇಬ್ರಾಹಿಂ ಸುಳಿವೇ ಇಲ್ಲ! 8.20. ಊಂಹೂಂ..ಆಸಾಮಿ ಪತ್ತೆಯೇ ಇಲ್ಲ..ಫೋನ್ ಕೂಡಾ ಇಲ್ಲ! ಇದೇ ಮೊಟ್ಟಮೊದಲ ಬಾರಿ ಇಬ್ರಾಹಿಂ ಹಾಗೆ ಸಮಯಕ್ಕೆ ಸರಿಯಾಗಿ ಬಾರದೇ ಹೋದದ್ದು! ಎಂಟೂವರೆಗೆ ನನ್ನ ಮೊಬೈಲ್ ರಿಂಗಣಿಸಿತು. ಇಬ್ರಾಹಿಂ ಇರಬಹುದೆಂದು ಕಾತರದಿಂದ ತೆಗೆದುಕೊಂಡೆ. ಆ ಬದಿಯಲ್ಲಿದ್ದದ್ದು ಕಾನ್ಸ್ ಟೇಬಲ್ ಪ್ರಕಾಶ್. ವಿಷಯ ತಿಳಿದುಕೊಳ್ಳಲು ಫೋನ್ ಮಾಡಿದ್ದರು. ಅವರಾಗಲೇ ಬಂದು ಹೊರಗಡೆ ಕಾಯುತ್ತಿದ್ದರಂತೆ. ಇಬ್ರಾಹಿಂ ಇನ್ನೂ ಬಂದಿರದ ಸುದ್ದಿ ತಿಳಿಸಿದೆ ಅವರಿಗೆ. ಒಂಬತ್ತಾಯಿತು…ಒಂಬತ್ತೂವರೆಯೂ ಆಯಿತು. ಇಬ್ರಾಹಿಂ ಬರಲಿಲ್ಲ. ಕಾದು ನಿರಾಶರಾಗಿ ಪೋಲೀಸರೂ ಹೊರಟುಹೋದರು. ನಮಗೋ ಆತಂಕ—ಒಂದು ವೇಳೆ ಇಬ್ರಾಹಿಂಗೆ ಅನುಮಾನ ಬಂದು ತಲೆತಪ್ಪಿಸಿಕೊಂಡು ಮಾಲುಸಮೇತ ಊರು ಬಿಟ್ಟು ಹೊರಟುಹೋದರೆ ಎಂಬ ಭಯ ಕಾಡತೊಡಗಿತು. “ಛೆ ಛೆ..ಹಾಗಾಗಲಿಕ್ಕಿಲ್ಲ..ಮೂರು ಮಕ್ಕಳನ್ನು ಇಲ್ಲೇ ಹತ್ತಿರದ ಶಾಲೆಗೆ ಸೇರಿಸಿದ್ದಾನೆ..ಊರು ಬಿಟ್ಟು ಹೊರಟುಹೋಗುವುದು ಶಕ್ಯವಿಲ್ಲ” ಎಂದು ಮರುಗಳಿಗೆ ನಾವೇ ಸಮಾಧಾನ ಮಾಡಿಕೊಂಡೆವು. ಅಂದು ಸಂಜೆಯ ತನಕ ಬರೇ ಕಾಯುವುದೇ ಆಯಿತು. ನಾನಾಗಿ ಫೋನ್ ಮಾಡಲೂ ಇಲ್ಲ ಅವನಿಗೆ.

ಸಂಜೆ ಠಾಣೆಯಿಂದ ಫೋನ್ ಬಂದಿತು. ಆವರೆಗೆ ಇಬ್ರಾಹಿಂ ಫೋನ್ ಮಾಡಿಲ್ಲ ಎನ್ನುವ ವಿಷಯವನ್ನು ಅವರಿಗೆ ಹೇಳಿದೆ. ” ಹೇಗಾದರೂ ಮಾಡಿ ಈಗ ಅವನನ್ನ ಮನೆ ಹತ್ತಿರ ಕರೆಸಿ ಸರ್..ಅನುಮಾನ ಬರದ ಹಾಗೆ ಏನಾದರೂ ಕಾರಣಕ್ಕೆ ಕರೆಸಿ..ನಾವು ಆರು ಗಂಟೇಂದ ಅಲ್ಲೇ ಮಫ್ತೀಲಿ ಕಾಯ್ತಿರ್ತೀವಿ…ಆರೂವರೆ ಹೊತ್ತಿಗೆ ಮನೆ ಹತ್ತಿರ ಬರೋಕೆ ಹೇಳಿ..ನಮಗೂ ಒಂದಷ್ಟು ಎವಿಡೆನ್ಸ್ ಸಿಕ್ಕಿದೆ” ಎಂದರು ರಹೀಂ ಸಾಹೇಬರು.

ಅವರ ಮಾತು ಕೇಳಿ ಖುಷಿಯಾಗಿಹೋಯಿತು! ಅಂದರೆ ನನಗೊಬ್ಬನಿಗೇ ಅಲ್ಲ, ಪೋಲೀಸರಿಗೂ ಅವರದೇ ಕಾರಣಕ್ಕೆ ಅವನ ಮೇಲೆ ಅನುಮಾನ ಬಂದಿದೆ!
ಸರಿ…ಈಗ ನನ್ನ ಮುಂದಿರುವುದು ಅವನನ್ನು ಮನೆಯ ಬಳಿ ಕರೆಸುವ ವಿಚಾರ. ಯೋಚನೆ ಮಾಡಿ ಒಂದು ಕಾರಣ ಸಿದ್ಧ ಪಡಿಸಿಕೊಂಡು ಇಬ್ರಾಹಿಂಗೆ ಫೋನ್ ಮಾಡಿದೆ. ಫೋನ್ ಕರೆಗೆ ಉತ್ತರಿಸುತ್ತಾನೋ ಇಲ್ಲವೋ ಎಂಬ ಅನುಮಾನ ಕಾಡುತ್ತಲೇ ಇತ್ತು! ಅಬ್ಬಾ! ನಾಲ್ಕು ಬಾರಿ ರಿಂಗಣಿಸುತ್ತಲೇ ಕರೆ ಸ್ವೀಕರಿಸಿ ‘ಹಲೋ’ ಎಂದ! ನಾನು ಸಾಧ್ಯವಾದಷ್ಟೂ ಸಹಜವಾಗಿ ಮಾತಾಡಲು ಯತ್ನಿಸುತ್ತಾ ಕೇಳಿದೆ: ” ಯಾಕೆ ಇಬ್ರಾಹಿಂ, ಇವತ್ತು ಬರಲೇ ಇಲ್ಲ? ಮೇಡಂ ಕಾಲೇಜ್ ಗೆ ರಜೆ ಹಾಕಬೇಕಾಯ್ತು”. “ಸಾರಿ ಸರ್..ನಮ್ಮ ನೆಂಟರ ಮನೇಲಿ ಸಾವಾಗಿತ್ತು ಅಂತ ಆಡುಗೋಡಿಗೆ ಹೊರಟುಹೋಗಿದ್ದೆ..ಬೆಳಿಗ್ಗೆ ಬಂದುಬಿಡ್ತೀನಿ” ಎಂದು ಅವನೂ ಅಷ್ಟೇ ಸಹಜವಾಗಿ ನುಡಿದ! ನಾನು, “ಇಬ್ರಾಹಿಂ, ಬಿಡುವಾಗಿದ್ದರೆ ಒಂದರ್ಧ ಗಂಟೆ ಬಂದುಹೋಗ್ತೀರಾ? ಇವತ್ತು ರಾತ್ರಿ ಡಿನ್ನರ್ ಗೆ ನಾಲ್ಕೈದು ಜನ ನೆಂಟರು ಬರ್ತಿದಾರೆ. ಸಂಜಯನಗರದ ಯು ಕೆ ಫುಡ್ ಸ್ಟೋರ್ಸ್ ನಿಂದ ಜೋಳದ ರೊಟ್ಟಿ ಊಟ ಕಟ್ಟಿಸಿಕೊಂಡು ಬರಬೇಕು” ಎಂದೆ. “ಬರ್ತೀನಿ ಸರ್ , ಅದಕ್ಕೇನಂತೆ?” ಎಂದ ಇಬ್ರಾಹಿಂ. “ಆರೂವರೆ ಹೊತ್ತಿಗೆ ಬಂದುಬಿಡಿ.. ನೀವು ಅಂಗಡಿಗೆ ಹೋಗೋ ವೇಳೇಗೆ ಅವರೂ ಅಡಿಗೆ ರೆಡಿ ಮಾಡಿರ್ತಾರೆ” ಎಂದು ನಾನು ಫೋನ್ ಕೆಳಗಿಟ್ಟೆ. ಇಬ್ರಾಹಿಂ ಬರಲೊಪ್ಪಿದ್ದು ಎಷ್ಟೋ ನಿರಾಳವಾಯಿತು. ಕೂಡಲೇ ಸ್ಟೇಷನ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. “ಸರಿ ಸರ್..ಇನ್ನು ಮುಂದಿಂದು ನಾವು ನೋಡ್ಕೋತೀವಿ..ನೀವು ಆರಾಮಾಗಿರಿ” ಎಂದರು ಕಾನ್ಸ್ ಟೇಬಲ್ ಪ್ರಕಾಶ್. ಆರಾಮಾಗಿರುವುದೇ!!! ಆತಂಕ ಒತ್ತಡಗಳಿಂದಾಗಿ ರಕ್ತ ಮೆದುಳಿಗೇ ನುಗ್ಗಿದಂತಾಗಿಹೋಗಿತ್ತು. ಆಗ ವೇಳೆ ಸಂಜೆ 5.45. ಇನ್ನು ಮುಕ್ಕಾಲು ತಾಸಿನಲ್ಲಿ ಚತುರ ಚೋರ ಶಿಖಾಮಣಿ ನಾಟಕದ ಶಿಖರ ಘಟ್ಟ!

ಗಡಿಯಾರದ ಮುಳ್ಳು ಒಂದೇ ಸಮನೆ ತಿರುಗುತ್ತಲೇ ಇತ್ತು. ಕೊನೆಗೂ ನಮ್ಮ ನಿರೀಕ್ಷೆಯ ಆ ಗಳಿಗೆ ಬಂದೇಬಿಟ್ಟಿತು! 6.30 !! ಮುಂದಿನ ಯಾವ ಘಟನಾವಳಿಯಲ್ಲೂ ನಮ್ಮ ನೇರ ಪ್ರವೇಶವಿಲ್ಲ. ಕುಳಿತು ಕಾಯುವುದಷ್ಟೇ ನಮ್ಮ ಪಾಲಿಗಿರುವುದು. ನಾವು ನಾಲ್ಕೂ ಜನ ಮನೆಯ ಹಾಲ್ ನಲ್ಲಿ ಕುಳಿತು ಒಂದೊಂದು ಗಳಿಗೆಗೂ ‘ಈಗ ಹೀಗಾಗಿರಬಹುದು…ಹೀಗಾಗುತ್ತಿರಬಹುದು..’ ಎಂದು ಲೆಕ್ಕಾಚಾರ ಹಾಕಿಕೊಳ್ಳುತ್ತಾ ಚಡಪಡಿಸುತ್ತಾ ಕುಳಿತಿದ್ದೆವು. ಹಾಲ್ ನ ಮಧ್ಯಭಾಗದಲ್ಲಿ ದೀಪವೊಂದನ್ನು ಇಟ್ಟುಕೊಂಡು ಒಕ್ಕೊರಲಿನಿಂದ ಪ್ರಾರ್ಥಿಸುತ್ತಿದ್ದೆವು: “ಆದಷ್ಟು ಬೇಗ ಸುಸೂತ್ರವಾಗಿ ಸುಖಕರವಾಗಿ ಪ್ರಸಂಗ ಕೊನೆಗೊಳ್ಳಲಿ”. ಅನಿರುದ್ಧ, “ಇಬ್ರಾಹಿಂ ಅವರಿಗೆ ಹೊಡೆದು ಬಡಿದು ಮಾಡ್ತಾರಾ ಅಮ್ಮಾ?” ಎಂದು ರಂಜನಿಯನ್ನು ಕೇಳಿದ. “ನಮಗೇನು ಗೊತ್ತು ಕಂದಾ ಈ ಪೋಲೀಸ್ನೋರ ಕಾರ್ಯವೈಖರಿ? ಬಾಯಿಬಿಡಿಸೋದಕ್ಕೆ ನಾಲ್ಕು ಬಾರಿಸ್ತಾರೆ ಅಂತ ಕಾಣುತ್ತೆ” ಅಂದಳು ರಂಜನಿ ನಿಡುಸುಯ್ಯುತ್ತಾ. ಯಾರಲ್ಲೂ ಉತ್ಸಾಹವಿಲ್ಲ..ಲವಲವಿಕೆಯಿಲ್ಲ. ಬರೀ ಆತಂಕ..ತಲ್ಲಣ..ಹೇಳತೀರದ ಒತ್ತಡ.. ಸ್ಟೇಷನ್ ನಿಂದ ಬರುವ ಕರೆಯೊಂದೇ ನಮ್ಮ ತಲ್ಲಣಗಳಿಗೆ ಕೊನೆ ಹೇಳಬಹುದಷ್ಟೇ.

ಯಾಂತ್ರಿಕವಾಗಿ ಒಂಬತ್ತು ಗಂಟೆಯ ವೇಳೆಗೆ ಊಟ ಮುಗಿಸಿದೆವು. ಇಬ್ರಾಹಿಂನನ್ನು ಕರೆದುಕೊಂಡು ಹೋಗಿ ಹೆಚ್ಚುಕಡಿಮೆ ಮೂರು ಗಂಟೆಯಾಗುತ್ತಾ ಬಂತು. ಆದರೂ ಏನೂ ಸುದ್ದಿಯಿಲ್ಲ. ಕೊನೆಗೆ ಸುಮಾರು ಹತ್ತುಗಂಟೆಯ ವೇಳೆಗೆ ಒಂದು ಕರೆ ಬಂತು: ” ಈಗ ವಿಚಾರಣೆ ಶುರುವಾಗ್ತಿದೆ..ರಹೀಂ ಸಾಹೇಬ್ರೇ ಬಂದಿದಾರೆ. ಅವರೇ ವಿಚಾರಿಸ್ಕೋತಿದಾರೆ.”

ನಮಗೆ ಮತ್ತಷ್ಟು ಆತಂಕ! ಒಂದು ವೇಳೆ ಪೋಲೀಸರು ಹೊಡೆದು ಬಡಿದು ಮಾಡಿದರೂ ಅವನು ಒಪ್ಪಿಕೊಳ್ಳದೇ ಹೋದರೆ? ಅವನು ನಿರಪರಾಧಿ ಅಂತಾಗಿಬಿಟ್ಟರೆ? ಆಗ ಅವನು ನಮ್ಮನ್ನು ಸುಮ್ಮನೆ ಬಿಡುತ್ತಾನೆಯೇ? ತನ್ನ ಕಡೆಯ ಜನರನ್ನು ಗುಂಪು ಕಟ್ಟಿಕೊಂಡು ಬಂದು ಮನೆಯ ಮೇಲೆ ದಾಳಿ ಮಾಡಿಬಿಟ್ಟರೆ? ಅಥವಾ ಹೊರಗೆ ಓಡಾಡುವಾಗ ರಂಜನಿಗೋ ಮಕ್ಕಳಿಗೋ ಏನಾದರೂ ತೊಂದರೆ ಮಾಡಿಬಿಟ್ಟರೆ? ಅಯ್ಯೋ ದೇವರೇ! ಯಾಕೆ ಹೀಗೆ ಕೆಟ್ಟ ಆಲೋಚನೆಗಳೇ ಕಾಡುತ್ತಿವೆ? ಅಂದು ರಾತ್ರಿ ಆ ಕೆಲವು ಗಂಟೆಗಳು ನಾವು ಅನುಭವಿಸಿದ ವೇದನೆ..ಆತಂಕ..ತಲ್ಲಣಗಳು ಮಾತಿಗೆ ಮೀರಿದ್ದು. ಗಂಟೆಗಳು ಉರುಳುತ್ತಲೇ ಹೋದವು. ಹನ್ನೊಂದು.. ಹನ್ನೊಂದೂವರೆ…ಹನ್ನೆರಡು…ಹನ್ನೆರಡೂ ಕಾಲು…ಅರೆ!! ಫೋನ್ ರಿಂಗಣಿಸುತ್ತಿದೆ!!! ಯಾವುದೋ ಹೊಸ ನಂಬರ್ ನಿಂದ ಕರೆ ಬರುತ್ತಿದೆ!!! ಫೋನ್ ಕೈಗೆತ್ತಿಕೊಂಡು ಕರೆಯನ್ನು ಸ್ವೀಕರಿಸುತ್ತಾ ನಡುಗುವ ದನಿಯಲ್ಲಿ “ಹಲೋ..ಯಾರು?” ಎಂದೆ. ರಂಜನಿ—ಮಕ್ಕಳು ಆತಂಕದಿಂದ ನನ್ನನ್ನೇ ನೋಡುತ್ತಿದ್ದರು. ಆ ಕಡೆಯಿಂದ ಧ್ವನಿ: “ಸರ್..ನಾನು..ದಫೇದಾರ್ ವೆಂಕಣ್ಣ..”
ನಾನು: “ಹೇಳಿ ಸರ್.”

ವೆಂಕಣ್ಣ: ” CONGRATULATIONS ಸರ್! ಇಬ್ರಾಹಿಂ ತಾನೇ ಕದ್ದಿದ್ದು ಅಂತ ಒಪ್ಪಿಕೊಂಡಿದಾನೆ ! ಅಷ್ಟೇ ಅಲ್ಲ..ನಿಮ್ಮ ಚಿನ್ನ ಎಲ್ಲಾ ರಿಕವರ್ ಆಗಿದೆ!!!”.

‍ಲೇಖಕರು Admin

12 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading