
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
13
ನಾಗರಾಜ ಶರ್ಮ ಅಲಿಯಾಸ್ ದೊಡ್ಡಭಾವ; ಡಾ. ಶ್ರೀನಿವಾಸ ಮೂರ್ತಿ ಅಲಿಯಾಸ್ B R S ಅಲಿಯಾಸ್ ಚಿಕ್ಕ ಭಾವ-ಇವರಿಬ್ಬರೂ ನನ್ನ ವ್ಯಕ್ತಿತ್ವವನ್ನು ತಿದ್ದಿ ತೀಡಿ ರೂಪಿಸಿದ, ನನ್ನ ಮೇಲೆ, ನನ್ನ ಚಿಂತನಾಕ್ರಮದ ಮೇಲೆ ಅಪಾರ ಪ್ರಭಾವ ಬೀರಿದ ಅತಿ ವಿಶೇಷ ವ್ಯಕ್ತಿಗಳು. ಇವರ ಮಾರ್ಗದರ್ಶನದ ನೆರವಿಲ್ಲದೇ ಇಂದಿನ ಈ ಕ್ಷಣದ ತನಕ ಯಾವುದೇ ನಿರ್ಧಾರವನ್ನು ನಾನು ತೆಗೆದುಕೊಂಡದ್ದು ಇಲ್ಲವೇ ಇಲ್ಲ. ಇವರ ಅಸಾಧಾರಣ ವ್ಯಕ್ತಿತ್ವದ ಒಂದು ಸಿಂಹಾವಲೋಕನ ಪರಿಚಯವನ್ನು ಮಾಡಿಕೊಟ್ಟು ನಳಿನಿ ಅಕ್ಕನ ಪ್ರೇಮ ವಿವಾಹ ಪ್ರಸಂಗಕ್ಕೆ ಮರಳುತ್ತೇನೆ.
ಬಸವಾಪಟ್ಟಣದಲ್ಲಿ ನಮ್ಮ ನೆರೆಮನೆಯಲ್ಲಿದ್ದುದೇ ರಾಮಯ್ಯ-ರಂಗಮ್ಮನವರ ಕುಟುಂಬ. ಹದಿಮೂರು ಮಕ್ಕಳ ಆ ತುಂಬು ಕುಟುಂಬದ ಹಿರಿಯ ಮಕ್ಕಳೇ ನಾಗರಾಜ ಹಾಗೂ ಶ್ರೀನಿವಾಸ ಮೂರ್ತಿ. ಎಳಮೆಯಿಂದಲೇ ಇಬ್ಬರೂ ಆತ್ಮವಿಶ್ವಾಸದ ಪ್ರತಿರೂಪಗಳು; ಅನ್ಯಾಯ-ಮೋಸ-ವಂಚನೆಗಳಿಗೆ ಸಿಡಿದೆದ್ದು ಪ್ರತಿಭಟಿಸುವ ಧೈರ್ಯವನ್ನು ಮೈಗೂಡಿಸಿಕೊಂಡಿದ್ದ ಪ್ರಚಂಡ ಸ್ವಾಭಿಮಾನಿಗಳು. ನಾಗರಾಜರು ಹೆಚ್ಚಿನ ಶಿಕ್ಷಣವನ್ನು ಪಡೆಯಲು ಕಾರಣಾಂತರಗಳಿಂದ ವಿಫಲರಾದರೂ ಅವರ ತಿಳುವಳಿಕೆ ಹಾಗೂ ಅಪಾರ ಲೋಕಜ್ಞಾನದ ದೆಸೆಯಿಂದ ಹತ್ತಾರು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದುಂಟು. ಆದರೆ ತಮ್ಮ ಸ್ವಾರ್ಥವನ್ನು ಬದಿಗೊತ್ತಿ, ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿ, ಒಂದು ತಪಸ್ಸಿನಂತೆ ಕುಟುಂಬವನ್ನು ಮುನ್ನಡೆಸಿದರು.
ಎಲ್ಲ ಸೋದರ-ಸೋದರಿಯರಿಗೆ ಶಿಕ್ಷಣ ಕೊಡಿಸುತ್ತಾ, ಮಾರ್ಗದರ್ಶನ ಮಾಡುತ್ತಾ, ತಂದೆಗೆ ನೆರವಾಗುತ್ತಾ ಹಿರಿಯ ಮಗನ ಜವಾಬ್ದಾರಿಯನ್ನು ಸಮರ್ಥವಾಗಿ ಹೊತ್ತು ನಿರ್ವಹಿಸಿದರು. ಏನೇ ಆದರೂ ಧೈರ್ಯ-ಸಾಹಸ ಲಕ್ಷ್ಮಿಯರು ಅಗತ್ಯಕ್ಕಿಂತ ಹೆಚ್ಚು ಒಲವನ್ನೇ ತೋರಿದರೂ ಅದೃಷ್ಟ ಲಕ್ಷ್ಮಿ ಮಾತ್ರ ಮುನಿದವಳಂತೇ ಇದ್ದದ್ದು ಪ್ರಾರಂಭದ ದಿನಗಳ ಅವರ ಬಿರುಸಿನ ಓಟಕ್ಕೆ ತಡೆಯಾಯಿತೆನ್ನಬೇಕು. ಆ ಕಾಲಕ್ಕೇ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರೂ ಒಂದಲ್ಲ ಒಂದು ಕಾರಣಕ್ಕೆ ಯಶಸ್ಸು ಮರೀಚಿಕೆಯಾಗಿ ಹೋಯಿತು.

ಮುಂದೆ ಬೆಂಗಳೂರಿಗೆ ಬಂದಮೇಲೆ ಸೌದೆ ಮಂಡಿ ಇಟ್ಟು ವ್ಯಾಪಾರ ಪ್ರಯತ್ನಿಸಿದರು; ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ದುಡಿದರು; ಶಾಂತಲಾ ಅಡಿಕೆ ಎಂಬ ಕಂಪನಿ ಆರಂಭಿಸಿ ಸುಗಂಧ ಭರಿತ ಅಡಿಕೆಯನ್ನು ಇನ್ನಿಲ್ಲದ ರುಚಿ-ಪರಿಮಳದೊಂದಿಗೆ ಮಾರುಕಟ್ಟೆಗೆ ತಂದರು…. ಉಂಹೂಂ… ಯಾಕೋ ಅದೃಷ್ಟ ಲಕ್ಷ್ಮಿ ದೃಷ್ಟಿ ಹೊರಳಿಸಲಿಲ್ಲ. ವಿಪರ್ಯಾಸವೆಂದರೆ ಇವರಿಂದ ಸುಗಂಧಭರಿತ ಅಡಿಕೆಯ ಸೂತ್ರವನ್ನು ಕಲಿತು (ಕದ್ದು ಅಂದರೆ ಸೂಕ್ತವೇನೋ!) ವ್ಯಾಪಾರ ಶುರು ಮಾಡಿದವರು ಇಂದು ಬಲು ಎತ್ತರಕ್ಕೇರಿದ್ದಾರೆ! ಏನೇ ಕಷ್ಟ ನಷ್ಟಗಳಾದರೂ ಎದೆಗುಂದುವುದು ನಾಗರಾಜರ ಜಾಯಮಾನವೇ ಅಲ್ಲ.
ಚಿಕ್ಕ ವಯಸ್ಸಿನಲ್ಲೇ ತಮ್ಮ ದೊಡ್ಡಪ್ಪನವರಿಂದ ದೇವತಾ ಪೂಜೆ-ವ್ರತಾಚರಣೆಗಳನ್ನು ಸಾಂಗೋಪಾಂಗವಾಗಿ ಕಲಿತಿದ್ದ ನಾಗರಾಜರ ಕೈ ಹಿಡಿದು ಮೇಲೆತ್ತಿದ್ದು ಆ ದೈವವೇ! ಮಗಳು ಜಯಪ್ರಭೆಯ ಬಾಣಂತನಕ್ಕೆಂದು ವಿಜಯಕ್ಕ-ನಾಗರಾಜ ಭಾವ ಅಮೆರಿಕೆಗೆ ಹೋಗಬೇಕಾದ ಪ್ರಸಂಗ ಒದಗಿ ಬಂದಿತು. ಹಾಗೆ ಹೋಗಿದ್ದಾಗ ಆ ಪ್ರಾಂತದಲ್ಲಿದ್ದ ಭಾರತೀಯರು ಇವರ ವಿದ್ವತ್ತು-ಶ್ರಧ್ಧಾಪೂರ್ವಕ ಪೂಜೆ ವ್ರತಾದಿಗಳ ಆಚರಣೆ, ಅಸಾಧಾರಣ ವಾಕ್ಚಾತುರ್ಯ, ಸಂಘಟನಾ ಸಾಮರ್ಥ್ಯ… ಇದೆಲ್ಲವನ್ನೂ ನೋಡಿ ಅಲ್ಲಿನ ದೇಗುಲ ಸಮುಚ್ಚಯದ ಮುಖ್ಯ ಅರ್ಚಕರಾಗಿಯೂ ಮೇಲ್ವಿಚಾರಕರಾಗಿಯೂ ಇವರನ್ನು ನೇಮಿಸಿಯೇಬಿಟ್ಟರು! ಹತ್ತಾರು ವರ್ಷಗಳ ಕಾಲ ಅಲ್ಲಿದ್ದು ಕಾರ್ಯನಿರ್ವಹಿಸಿದ್ದಲ್ಲದೇ ನೂರಾರು ಮದುವೆ – ಮುಂಜಿ – ದೇವತಾ ಪೂಜೆ ಇತ್ಯಾದಿ ಶುಭಕಾರ್ಯಗಳನ್ನು ಯಾವ ಕುಂದೂ ಬಾರದಂತೆ ಅತೀವ ಶ್ರದ್ಧೆಯಿಂದ, ಪ್ರೀತಿಯಿಂದ ನಡೆಸಿಕೊಟ್ಟು ಎಲ್ಲರ ಅಭಿಮಾನ ಪ್ರೀತ್ಯಾದರಗಳನ್ನು ಗಳಿಸಿಕೊಂಡರು ನಮ್ಮ ಪ್ರೀತಿಯ ನಾಗರಾಜ ಭಾವ!
ನನ್ನ ಚಿಕ್ಕ ಭಾವ ಡಾ. ಶ್ರೀನಿವಾಸಮೂರ್ತಿ ಅವರದು ಮಹಾ ಬಂಡಾಯದ ಪ್ರಕೃತಿ. ಅನ್ಯಾಯಗಳನ್ನು ಅರೆಚಣವೂ ಸಹಿಸಿದವರಲ್ಲ.. ಆತ್ಮ ಗೌರವಕ್ಕೆ ಧಕ್ಕೆಯಾಗುವೆಡೆಯಲ್ಲಿ ಗಳಿಗೆಯೂ ನಿಂತವರಲ್ಲ. ಹಾಗಾಗಿ ಅವರು, ‘ಬೇಡ್ರೀ ನಿಮ್ಮ ಈ ಕೆಲಸಕ್ಕೆ ಬಾರದ ಕೆಲಸ’ ಎಂದು ಸೆಡ್ಡು ಹೊಡೆದು ರಾಜೀನಾಮೆ ಎಸೆದು ಹೊರಬಂದ ಸಂಘ ಸಂಸ್ಥೆಗಳ ಯಾದಿ ಬಹು ದೊಡ್ಡದು! ಮೈಸೂರಿನ NIIT ಯಲ್ಲಿ ಓದಿ ಇಂಜಿನಿಯರಿಂಗ್ ಪದವಿ ಪಡೆದು ದೆಹಲಿ IITಯಲ್ಲಿ PHD ಮಾಡುತ್ತಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಮರಳಿ ಬಂದವರು ನಂತರ ಸೇರಿದ್ದು ತುಮಕೂರಿನ SIT ಸಂಸ್ಥೆಗೆ. ಒಂದೂವರೆ ವರ್ಷ ಅಲ್ಲಿ ಸೇವೆ ಸಲ್ಲಿಸಿ ತಾತ್ವಿಕ ಸಂಘರ್ಷದ ಕಾರಣಕ್ಕೆ ಆ ಸಂಸ್ಥೆಯನ್ನು ಬಿಟ್ಟು ಬೆಂಗಳೂರಿನಲ್ಲಿ PWD ನ Irrigation ವಿಭಾಗದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲೂ ಮತ್ತದೇ ತಾತ್ವಿಕ ಸಂಘರ್ಷ.. ರಾಜೀನಾಮೆ ಎಸೆದು ಭಿಲೈನ ಮೆಕಾನ್ ಸಂಸ್ಥೆ ಸೇರಿದರು. ಕೆಲವು ತಿಂಗಳಷ್ಟೇ ಅಲ್ಲಿ ಕೆಲಸ ಮಾಡಿದ ಚಿಕ್ಕ ಭಾವ ಕೌಟುಂಬಿಕ ಕಾರಣಗಳಿಗೆ ಊರಿಗೆ ಮರಳಬೇಕಾಯಿತು.
ನಂತರ ಬೆಂಗಳೂರು UVCE ನಲ್ಲಿ ಪ್ರೊಫೆಸರ್ ಆಗಿ ನೇಮಕಗೊಂಡು 12-13 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಮೆಚ್ಚಿನ BRS Sir ಆದರು. ಅಲ್ಲಿಯೂ ಮತ್ತೆ ಅವರ ಅಸ್ಮಿತೆಗೆ, ತಾತ್ವಿಕ ಬದ್ಧತೆಗೆ ಧಕ್ಕೆ ಬರುವ ಪ್ರಸಂಗ ಬಂದಾಗ ವಿಳಂಬವೇ ಇಲ್ಲದೆ ರಾಜೀನಾಮೆ ಕೊಟ್ಟು ಹೊರಬಂದವರನ್ನು ತನ್ನ ತೆಕ್ಕೆಗೆ ಆಹ್ವಾನಿಸಿ ಬರಮಾಡಿಕೊಂಡಿದ್ದು ಬೆಂಗಳೂರಿನ IISC. ಅಲ್ಲಿ ಮೊದಲು ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ, ಅನಂತರ ‘ಒಬ್ಬ ಆಡಳಿತಗಾರನಾಗಿ ನನ್ನ ಸಾಮರ್ಥ್ಯ ತೋರುತ್ತೇನೆ’ ಎಂದು ಪಣತೊಟ್ಟು ರಿಜಿಸ್ಟ್ರಾರ್ ಆಗಿ ಆಯ್ಕೆಗೊಂಡರು; ಪರಿಶುದ್ಧ ಆಡಳಿತವನ್ನು ಸಮರ್ಥವಾಗಿ, ಯಶಸ್ವಿಯಾಗಿ ನಡೆಸುವ ಮಾರ್ಗದರ್ಶಿಯಾದರು. ಈಗ ನಿವೃತ್ತಿಯ ನಂತರವೂ ದೇಶ ವಿದೇಶಗಳ ನೂರಾರು ಯೋಜನೆಗಳಿಗೆ ನೆರವಾಗುತ್ತಾ, ಅಲ್ಲಿ ತಲೆಯೆತ್ತುವ ನ್ಯೂನತೆಗಳನ್ನು ಸರಿಪಡಿಸುತ್ತಾ ಬಹು ಬೇಡಿಕೆಯ ಅಭಿಯಂತರರಾಗಿರುವ ಡಾ.ಶ್ರೀನಿವಾಸಮೂರ್ತಿ, ನನ್ನ ಮೆಚ್ಚಿನ ಚಿಕ್ಕಭಾವ.
ಅವರೇ ಒಮ್ಮೆ ಹೇಳಿಕೊಂಡ ಅವರ ಬಾಲ್ಯದ ಒಂದು ಘಟನೆ ತುಂಬಾ ಸ್ವಾರಸ್ಯಕರವಾಗಿದೆ. ಒಮ್ಮೆ Arnold English ಕಾಪಿ ಪುಸ್ತಕದಲ್ಲಿ ಹೋಂ ವರ್ಕ್ ಮಾಡುತ್ತಿದ್ದ ಸಂದರ್ಭದಲ್ಲಿ ದೌತಿಕಡ್ಡಿಯನ್ನು ಇಂಕ್ ನಲ್ಲಿ ಅದ್ದಿಕೊಂಡು ಬರೆಯುತ್ತಿದ್ದ ಬಾಲಕ ಶ್ರೀನಿವಾಸಮೂರ್ತಿ ಪುಸ್ತಕದ ಮೇಲೆ ಇಂಕು ಚೆಲ್ಲಿಕೊಂಡು ಒಂದಷ್ಟು ಕಲೆಗಳಾಗಿ ಹೋದವು. ಮಾರನೇ ದಿನ ಅದನ್ನು ನೋಡಿದ ಕೇಶವಯ್ಯ ಮೇಷ್ಟ್ರು ಸಿಟ್ಟಿನಿಂದ ಕೆಂಡವಾಗಿ, ‘ಏನೋ ಇದು ಅಸಹ್ಯ! ಕಾಪಿ ಪುಸ್ತಕದಲ್ಲೆಲ್ಲಾ ಹೇತುಬಿಟ್ಟಿದೀಯಾ!’ ಎಂದು ಅವರನ್ನು ರೇಗುತ್ತಾ ಕಾಪಿ ಪುಸ್ತಕವನ್ನು ಹರಿದು ಬಿಸುಟುಬಿಟ್ಟರು. ಬಾಲಕ ಶ್ರೀನಿವಾಸಮೂರ್ತಿಗೆ ಉರಿದುಹೋಯಿತು. ಪುಸ್ತಕ ಹರಿಯುವುದು ಎಂದರೇನರ್ಥ? ಯಾಕೆ ಹಾಗೆ ಮಾಡಿದಿರಿ? ಎಂದು ಮೇಷ್ಟ್ರಿಗೇ ದಬಾಯಿಸತೊಡಗಿದ! ಎಗರಿ ಮೇಷ್ಟ್ರ ಹೆಗಲಿಗೆ ಜೋತುಬಿದ್ದು, ‘ಬನ್ನಿˌ… ಹೆಡ್ ಮೇಷ್ಟ್ರ ಹತ್ರ ಹೋಗೋಣ.. ಬನ್ನಿ’ ಎಂದು ಬಲವಂತವಾಗಿ ಎಳೆದುಕೊಂಡು ಹೋದ.

ಹೆಡ್ ಮೇಷ್ಟ್ರಾಗಿದ್ದ ಪಿ.ವಿ. ಶ್ರೀಕಂಠಯ್ಯನವರ ಮುಂದೆ ಬಾಲಕ ಮೂರ್ತಿ ಅಲವತ್ತುಕೊಂಡಿದ್ದು ಹೀಗೆ: ‘ನೋಡಿ ಸರ್, ನಮ್ಮಪ್ಪ ನಾಕಾಣೆ ಕೊಟ್ಟು ನನಗೆ ಕಾಪಿ ಪುಸ್ತಕ ಕೊಡಿಸಿದ್ದರು. ನಾನು ಹೋಂ ವರ್ಕ್ ಸರಿಯಾಗಿ ಮಾಡಿಲ್ಲ ಅಂತ ಈ ಮೇಷ್ಟ್ರು ಆ ಪುಸ್ತಕಾನ ಹರಿದು ಹಾಕಿದಾರೆ. ಹಾಗೆ ಹರಿದು ಹಾಕಲು ಇವರಿಗೇನು ಹಕ್ಕಿದೆ? ಬೇಕಾದರೆ ನನಗೆ ಹೊಡೆದು ಶಿಕ್ಷೆ ಕೊಡಲಿ. ಪುಸ್ತಕ ಹರಿದರೆ ನಮ್ಮ ತಂದೆಗೆ ಶಿಕ್ಷೆ ಕೊಟ್ಟಂತಾಗುವುದಿಲ್ಲವೇ? ಮತ್ತೆ ಇನ್ನೊಂದು ಪುಸ್ತಕ ಕೊಡಿಸಲು ನನ್ನ ತಂದೆ ಹಣ ಹೇಗೆ ಹೊಂದಿಸುತ್ತಾರೆ? ಇವರು ಮಾಡಿದ್ದು ತಪ್ಪಲ್ಲವಾ?’ ಹೆಡ್ ಮೇಷ್ಟ್ರಿಗೂ ಹುಡುಗನ ವಾದದಲ್ಲಿ ಹುರುಳಿದೆ ಅನ್ನಿಸಿತು. ‘ಈ ಮಗು ಹೇಳ್ತಿರೋದೂ ಸರಿ ಅಲ್ಲವೇನ್ರೀ ಕೇಶವಯ್ಯನೋರೇ? ಯಾಕೆ ಪುಸ್ತಕ ಹರಿದುಬಿಟ್ಟಿರಿ?’ ಎಂದಾಗ ಕೇಶವಯ್ಯನವರು ಪೆಚ್ಚಾಗಿಬಿಟ್ಟರು. ಹೋಗಲಿ ಬಿಡಿ.. ಇನ್ನು ಮುಂದೆ ಹೀಗೆ ಮಾಡಬೇಡಿ ಎಂದು ಮೇಷ್ಟ್ರಿಗೇ ಬುದ್ಧಿ ಹೇಳಿದ್ದಲ್ಲದೆ ಬಾಲಕನಿಗೆ ಎರಡು ಹೊಸ Arnold English ಕಾಪಿ ಪುಸ್ತಕಗಳನ್ನು ತರಿಸಿ ಉಡುಗೊರೆಯಾಗಿ ಕೊಟ್ಟರು ಶ್ರೀಕಂಠಯ್ಯನವರು!
ಹೀಗೆ ಕೇಶವಯ್ಯನವರಿಗೆ ಆ ಪ್ರಸಂಗದಲ್ಲಿ ಕೊಂಚ ಪೆಚ್ಚಾಯಿತಾದರೂ ಅವರು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಿಲ್ಲ. ಶ್ರೀನಿವಾಸ ಮೂರ್ತಿ ಮುಂದಿನ ದಿನಗಳಲ್ಲಿ ಅವರ ಅಚ್ಚುಮೆಚ್ಚಿನ ಶಿಷ್ಯನಾಗಿಬಿಟ್ಟರು. ಒಮ್ಮೆ ಯಾವುದೋ ಸಂದರ್ಭಕ್ಕೆ ಮೂರ್ತಿಯವರು ಅವರಿಗೆ ಒಂದು ಸ್ವೆಟರ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ. ಕೊನೆಯ ತನಕ ಕೇಶವಯ್ಯನವರು, ‘ಇದು ನನ್ನ ರಾಜ.. ನನ್ನ ಮೂರ್ತಿ ಕೊಟ್ಟಿರೋ ಸ್ವೆಟರ್ರು..’ ಎಂದು ಪ್ರೀತಿಯಿಂದ ಹೇಳುತ್ತಿದ್ದರಂತೆ. ಅವರ ಕೊನೆಯ ಪ್ರಯಾಣದ ಕ್ಷಣದಲ್ಲೂ ಆ ಸ್ವೆಟರ್ ಅವರ ಮೈಮೇಲೇ ಇತ್ತಂತೆ!
ಇಷ್ಟು ಪೀಠಿಕೆಯ ನಂತರ ಮುಖ್ಯ ಪ್ರಸಂಗಕ್ಕೆ ಮರಳುತ್ತೇನೆ.
ನಾಗರಾಜ ಭಾವನೊಂದಿಗೆ ಮದುವೆಯಾದಾಗ ವಿಜಯಕ್ಕನಿಗೆ ಹನ್ನೆರಡು ವರ್ಷ. ಅಕ್ಕಪಕ್ಕದ ಮನೆಯವರೂ ಆದ್ದರಿಂದ ನಳಿನಿ ಅಕ್ಕ ಹಾಗೂ ಮೂರ್ತಿಯವರ ನಡುವೆ ಕೊಂಚ ಸಲುಗೆಯೂ ಬೆಳೆದಿತ್ತು. ಅದಾವ ಮಾಯಕದಲ್ಲಿ ಈ ಸ್ನೇಹದ ಸಲುಗೆ ಮುಂದಿನ ಮಧುರ ಹಂತಕ್ಕೆ ತಿರುಗಿತೋ ಇಬ್ಬರಿಗೂ ಬೋಧವಿಲ್ಲ… ಆದರೆ, ನಾವಿಬ್ಬರೂ ಜೀವನ ಸಂಗಾತಿಗಳಾಗುವುದಾದರೆ ಸರಿ; ಹಾಗಲ್ಲದೇ ಬೇರೆಯವರನ್ನು ಮದುವೆಯಾಗಬೇಕಾದ ಪ್ರಸಂಗ ಎದುರಾದರೆ ಇಬ್ಬರೂ ಆಜೀವ ಪರ್ಯಂತ ಹೀಗೇ ಉಳಿದು ಬಿಡೋಣ, ಬೇರೆಯವರ ಜತೆ ಬಂಧನಕ್ಕೆ ಸಿಲುಕುವುದೇ ಬೇಡ ಎಂದು ಇಬ್ಬರೂ ತೀರ್ಮಾನಿಸಿಕೊಂಡು ಬಿಟ್ಟರು.
ಇತ್ತ ಅಣ್ಣ ಇನ್ನು ಒಂದೆರಡು ವರ್ಷದಲ್ಲೇ ನಳಿನಿಯ ಮದುವೆಯನ್ನೂ ಒಬ್ಬ ಒಳ್ಳೆಯ ಹುಡುಗನೊಂದಿಗೆ ಮಾಡಿ ಮುಗಿಸಿಬಿಟ್ಟರೆ ಜವಾಬ್ದಾರಿ ಕಳೆಯುತ್ತದೆ ಎಂದು ಚಿಂತಿಸುತ್ತಿದ್ದರು. ಆಗಿನ ದಿನಗಳಲ್ಲಿ ಒಂದೇ ಮನೆಗೆ ಅಕ್ಕ ತಂಗಿಯರನ್ನು ಕೊಡುವ ಪರಿಪಾಠವಿರಲಿಲ್ಲ. ಮೇಲಾಗಿ ನಳಿನಿ ಅಕ್ಕನದು ಆಶ್ಲೇಷಾ ನಕ್ಷತ್ರ! ಅತ್ತೆಯಿಲ್ಲದ ಮನೆಯನ್ನೇ ಹುಡುಕಬೇಕು! ಇಂದು ಈ ಸಂಗತಿಗಳು ಅಷ್ಟು ಮುಖ್ಯವೆನಿಸದಿದ್ದರೂ ಅಂದಿನ ದಿನಗಳಲ್ಲಿ, ಅದೂ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಇಂಥ ಸಂಬಂಧಗಳಿಗೆ ಪ್ರಬಲ ವಿರೋಧವೇ ಇತ್ತು. ಹೀಗಾಗಿ ಮದುವೆಯ ಮಾತಿನ ಪ್ರಸ್ತಾಪಕ್ಕೇ ತೊಡಕುಗಳು ಎದುರಾಗಿದ್ದವು. ಅಣ್ಣ ಒಬ್ಬ ಹುಡುಗನನ್ನು ನೋಡಿಕೊಂಡು ಬಂದು ಮದುವೆಯ ಮಾತುಕಥೆಗೆ ಸಿದ್ಧರಾದ ಮೇಲಂತೂ ನಳಿನಿ-ಮೂರ್ತಿಯರಿಗೆ ದಿಕ್ಕೇ ತೋಚದಂತಾಗಿತ್ತು.
ಮೂರ್ತಿಯವರು ದೆಹಲಿಗೆ ಓಡಾಡುತ್ತಿದ್ದ ಸಮಯದಲ್ಲಿ ಮಾರ್ಗ ಮಧ್ಯೆ ನಮ್ಮ ಮನೆಯಲ್ಲಿ ತಂಗುತ್ತಿದ್ದರಷ್ಟೇ. ಅವರು ಮತ್ತೆ ಊರಿಗೆ ಹೊರಟುನಿಂತರೆ ಸಾಕು ನಳಿನಿಯ ಕಣ್ಣಲ್ಲಿ ಗಂಗೆ ಯಮುನೆಯರು ಧುಮುಕುತ್ತಿದ್ದರು. ನಮಗೂ ಮೂರ್ತಿ ಮಾವಯ್ಯ ತುಂಬಾ ಪ್ರಿಯರೇ ಆದ್ದರಿಂದ ಅಳುವುದರಲ್ಲಿ ನಾವೂ ಹಿಂದೆ ಬೀಳುತ್ತಿರಲಿಲ್ಲ. ಈ ಕಣ್ಣೀರಧಾರೆ, ನಳಿನಿ-ಮೂರ್ತಿಯರ ನಡುವಿನ ಕಣ್ಣು ಕಣ್ಣುಗಳ ಮಾತುಕತೆ ಬಹಳಷ್ಟನ್ನು ಸಾಬೀತು ಪಡಿಸುತ್ತಿದ್ದರೂ ಅಸಾಧ್ಯವೆಂದುಕೊಂಡದ್ದರ ಬಗ್ಗೆ ಯೋಚಿಸಲೂ ಯಾರಿಗೂ ಧೈರ್ಯವಾಗುತ್ತಿರಲಿಲ್ಲ. ಆ ಸಮಯದಲ್ಲೇ ಈ ಸಂಬಂಧಕ್ಕೆ ಒಂದು ಸರಿದಾರಿ ತೋರಿ ದಡ ಮುಟ್ಟಿಸಲೆಂಬಂತೇ ಬಂದವರು ನಮ್ಮ ಪ್ರೀತಿಯ ತಾತ-ಅವಧೂತ ಶಿಶುಸ್ವಾಮಿಗಳು. ಈ ಮೊದಲು ಅವರು ನಮ್ಮ ಮನೆಗೆ ಬಂದಿದ್ದ ಸಮಯದಲ್ಲೇ ಅವರಿಗೆ ನಳಿನಿ—ಮೂರ್ತಿಯರು ಪರಸ್ಪರರನ್ನು ಮೆಚ್ಚಿರುವ ಸುಳಿವು ಸಿಕ್ಕಿತ್ತೆಂದು ತೋರುತ್ತದೆ.. ಹಾಗೆ ಮನಸ್ಸುಗಳನ್ನು ಓದುವ ಕಲೆಯಲ್ಲಿ ಅವರು ಸಿದ್ಧ ಹಸ್ತರೇ ಆಗಿದ್ದರು ಕೂಡಾ!
ಒಂದು ಬೆಳಿಗ್ಗೆ ನಳಿನಿ ಅಕ್ಕ ರೇಷನ್ ಅಕ್ಕಿಯಲ್ಲಿ ತುಂಬಿದ್ದ ಕಲ್ಲು-ಮಣ್ಣು ಹೆಂಟೆಗಳನ್ನು ಆರಿಸುತ್ತಾ ಅನ್ಯಮನಸ್ಕಳಾಗಿ ಕುಳಿತಿದ್ದಳು. ತುಸು ಹೊತ್ತು ಅವಳನ್ನೇ ಗಮನಿಸಿದ ತಾತ ಮೆಲ್ಲಗೆ, ‘ಯಾವ ನಾಯಕನ ಬಗ್ಗೆ ಯೋಚನೆ ಮಾಡುತ್ತಿದ್ದೀಯಾ ನಳಿನಿ?’ ಎಂದರು. ಅಕ್ಕ ತಡಬಡಾಯಿಸುತ್ತಾ ‘ಏನಿಲ್ಲ ತಾತ.. ಅಕ್ಕೀಲಿ ಕಲ್ಲು ಆರಿಸ್ತಿದೀನಿ ಅಷ್ಟೇ’ ಎಂದು ತೊದಲಿದಳು. ‘ನನಗೆ ಗೊತ್ತು ಮಗೂ.. ಪರವಾಗಿಲ್ಲ ಹೇಳು… ನಿನ್ನ ಸಮಸ್ಯೆ ಏನಿದ್ದರೂ ನಾವು ಬಗೆಹರಿಸ್ತೀವಿ’ ಅಂದರು ತಾತ.
ಅಷ್ಟು ಆಶ್ವಾಸನೆ ಸಿಕ್ಕಿದ್ದೇ ತಡ ನಳಿನಿ ಅಕ್ಕ ಎಲ್ಲವನ್ನೂ ತಾತನ ಮುಂದೆ ತೋಡಿಕೊಂಡು ಬಿಟ್ಟಳು. ಎಲ್ಲವನ್ನೂ ತದೇಕಚಿತ್ತರಾಗಿ ಕೇಳಿಸಿಕೊಂಡ ತಾತ ನಸುನಗುತ್ತಾ, ‘ಚಿಂತೆ ಮಾಡಬೇಡ ಮಗೂ..ˌಆ ಕುಳ್ಳಪ್ಪನಿಗೆ ಈ ಕುಳ್ಳಮ್ಮನೇ ಸರಿಜೋಡಿ ಅಂತ ನಮಗೂ ಅನ್ನಿಸ್ತಿದೆ.. ನಾವೆಲ್ಲಾ ಸರಿ ಮಾಡ್ತೇವೆ ಬಿಡು’ ಎಂದು ಭರವಸೆ ಕೊಟ್ಟರು. ಆ ವೇಳೆಗಾಗಲೇ ಅಣ್ಣ ನಳಿನಿ ಅಕ್ಕನ ಸಂಕಟವನ್ನು ನೋಡಲಾರದೇ ಮೂರ್ತಿಯವರನ್ನು ಕರೆದು, ‘ನನಗೆ ನಿಮ್ಮ ಸಂಬಂಧ ಪೂರ್ತಿ ಒಪ್ಪಿಗೆಯಾಗಿದೆ. ನಿಮ್ಮ ಮನೆಯ ಕಡೆ ಒಂದುವೇಳೆ ಅಪಸ್ವರಗಳು ಬಂದರೆ ನಾನೇನೂ ಮಾಡಲಾರೆ. ಇಷ್ಟು ಮಾತ್ರ ಹೇಳಬಲ್ಲೆ: ಹಾಗೇನೇ ತೊಂದರೆ ಬಂದರೂ ನೀವು ನನ್ನ ಮಗಳನ್ನು ಕರೆದುಕೊಂಡು ದೂರ ಹೊರಟುಹೋಗಿ ಬದುಕು ಕಟ್ಟಿಕೊಳ್ಳಿ. ನಾನು ಹೃದಯಪೂರ್ವಕವಾಗಿ ಆಶೀರ್ವಾದ ಮಾಡಿ ಕಳಿಸಿಕೊಡುತ್ತೇನೆ.. ಇಲ್ಲಿ ಯಾರು ಏನೇ ಅಂದರೂ ಏನೇ ಸಮಸ್ಯೆ ಎದುರಾದರೂ ನಾನು ನೋಡಿಕೊಳ್ಳುತ್ತೇನೆ’ ಎಂದು ಭರವಸೆ ಕೊಟ್ಟಾಗಿತ್ತು.

ಇಷ್ಟಾಗುತ್ತಲೇ ಸಂಧಾನ ಕಾರ್ಯಗಳು ಶುರುವಾದವು. ನಾಗರಾಜ ಭಾವ ತಮ್ಮ ತಂದೆ-ತಾಯಿಯರೊಂದಿಗೆ ಮಾತಾಡಿ ಅವರನ್ನು ಒಪ್ಪಿಸಲು ಯತ್ನಿಸುತ್ತಿದ್ದರು. ‘ಮನೆಗೆ ಸೊಸೆಯಾಗಿ ಬರುವ ಹುಡುಗಿಯ ತಂಗಿ ಆ ಕುಟುಂಬದವರಿಗೂ ಸೋದರಿಯಾಗುತ್ತಾಳೆ ಎನ್ನುವ ಭಾವನೆ ಇರುವುದರಿಂದ ಒಂದೇ ಮನೆಗೆ ಕೊಡಬಾರದೆಂಬ ವಾಡಿಕೆ ಇದೆಯೇ ಹೊರತು ಯಾವ ಶಾಸ್ತ್ರದಲ್ಲೂ ಅದಕ್ಕೆ ವಿರೋಧವಿಲ್ಲ… ಘನಪಾಠಿಗಳೇ ಈ ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ತಿಳಿ ಹೇಳಿದರು.
ತಾತನವರೂ ಮೂರ್ತಿಯವರ ತಂದೆ ತಾಯಿಯರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತಾಡಿದರು. ‘ಆಶ್ಲೇಷ ನಕ್ಷತ್ರದ ಹುಡುಗಿ ಮನೆಗೆ ಬಂದರೆ ತೊಂದರೆಯಾಗುತ್ತದೆ.. ಜೀವಕ್ಕೇ ಅಪಾಯ ಎಂದೆಲ್ಲಾ ನೀನು ಯೋಚಿಸಲೇಬೇಡ.. ಯಾವ ಸುಡುಗಾಡು ನಕ್ಷತ್ರವೂ ನಿನಗೆ ಸೂಜಿಮೊನೆಯಷ್ಟೂ ಹಾನಿ ಮಾಡುವುದಿಲ್ಲ.. ರಂಗಮ್ಮ, ನಾನು ಹೇಳ್ತೀನಿ ಕೇಳು ತಾಯಿ… ನಿನ್ನ ತಲೆ ಮೇಲೆ ಕಲ್ಲು ಎತ್ತಿಹಾಕಿದರೂ ನಿನ್ನ ಕೂದಲೂ ಕೊಂಕೋಲ್ಲ. ಅದಕ್ಕೆ ನಾನು ಗ್ಯಾರಂಟಿ. ಹೆದರಬೇಡ. ಹಠ ಮಾಡದೆ ಈ ಮದುವೆಗೆ ಒಪ್ಪಿಕೋ’ ಎಂದು ಸಮಾಧಾನ ಹೇಳಿ ಅವರ ಸಮ್ಮತಿ ಮದುವೆಗೆ ದೊರೆಯುವಂತೆ ಮಾಡಿದರು. ಇಷ್ಟಾದ ಮೇಲೆ ಎಲ್ಲವೂ ಒಂದು ಸಮಾಧಾನದ ಸ್ಥಿತಿಗೆ ಬಂದು ಫಲ ತಾಂಬೂಲ ವಿನಿಮಯವಾಗಿ ಮುಂದಿನ ವರ್ಷ ಮದುವೆ ಮಾಡುವುದೆಂದು ತೀರ್ಮಾನವಾಯಿತು.
ಮುಂದೆ ನೆನಪಿನಿಂದ ಜಾರಿಬಿಡಬಹುದೆಂಬ ಭಯಕ್ಕೆ ಈಗಲೇ ಒಂದು ವಿಷಯ ಹೇಳಿಬಿಡುತ್ತೇನೆ: ಆಶ್ಲೇಷ ನಕ್ಷತ್ರದ ಹುಡುಗಿಯನ್ನು ಸೊಸೆಯಾಗಿ ಮಾಡಿಕೊಂಡ ರಂಗಮ್ಮನವರಿಗೆ ಯಾವ ಅಪಘಾತಗಳಾಗಲೀ ಅಪಮೃತ್ಯುವಾಗಲೀ ಕಾಡಲಿಲ್ಲ! ಹೆಚ್ಚು ಕಡಿಮೆ 90 ವರ್ಷಗಳ ಕಾಲ ಅವರು ಮಕ್ಕಳು-ಮೊಮ್ಮಕ್ಕಳೊಂದಿಗೆ ಸುಖ ಸಂತೋಷದಿಂದ ಆರೋಗ್ಯಪೂರ್ಣವಾಗಿ ಬದುಕು ನಡೆಸಿದರು.
| ಇನ್ನು ಮುಂದಿನ ವಾರಕ್ಕೆ |






0 Comments