ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಅವಳ ಕೊರಳಲ್ಲಿ ಸರ ಕಂಗೊಳಿಸುತ್ತಿತ್ತು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 159

ವೆಂಕಣ್ಣ ಅವರ ಮಾತು ಕೇಳಿದೊಡನೆ ಸಂತೋಷ ತಡೆಯಲಾರದೆ ನಾನು ಜೋರಾಗಿಯೇ ಕೂಗಿಬಿಟ್ಟೆ—” ರಂಜೂ,ಕಳ್ಳ ತಪ್ಪು ಒಪ್ಪಿಕೊಂಡಿದಾನಂತೆ! ಚಿನ್ನ ಸಿಕ್ಕಿದೆಯಂತೆ!”. ನಾವೇನು ಕಮ್ಮಿ ಎಂಬಂತೆ ರಂಜನಿ ಹಾಗೂ ಮಕ್ಕಳೂ ಕೂಡಾ ಜೋರಾಗಿ ಹರ್ಷೋದ್ಗಾರ ಮಾಡಿದರು! ನಮ್ಮ ಸಂಭ್ರಮದ ಅಬ್ಬರ ಕೇಳಿ ವೆಂಕಣ್ಣ ಗಾಬರಿಯೇ ಆಗಿಬಿಟ್ಟರೋ ಏನೋ, “ಆಯ್ತು ಸರ್ , ನಾಳೆ ಸ್ಟೇಷನ್ ಗೆ ಬನ್ನಿ..ಸಾಹೇಬರೇ ಎಲ್ಲಾ ಡೀಟೇಲಾಗಿ ಹೇಳ್ತಾರೆ” ಎಂದು ಫೋನ್ ಇಟ್ಟೇಬಿಟ್ಟರು. ಪೂರ್ತಿ ವಿಷಯ ತಿಳಿಯದೆ ಕೊಂಚ ನಿರಾಸೆಯಾದರೂ ಚಿನ್ನ ಮರಳಿ ಸಿಕ್ಕಿದ ಸಂತೋಷ ಮುಗಿಲುಮುಟ್ಟಿತ್ತು. ಎಲ್ಲರೂ ಮತ್ತೊಮ್ಮೆ ದೀಪ ಹಚ್ಚಿ ದೇವರಿಗೆ ಧನ್ಯವಾದಗಳನ್ನರ್ಪಿಸಿ ವರ್ಣನಾತೀತ ರೋಮಾಂಚನವನ್ನು ಅನುಭವಿಸುತ್ತಾ ಒಬ್ಬರಿಗೊಬ್ಬರು ಒಟ್ಟಿಕೊಂಡು ಕೂತು ಸಂಭ್ರಮಿಸುತ್ತಿದ್ದೆವು. ಆಗಲೇ ಮತ್ತೊಮ್ಮೆ ನನ್ನ ಮೊಬೈಲ್ ರಿಂಗಣಿಸಿತು. ನಂಬರ್ ಮಾತ್ರ ಕಾಣಿಸುತ್ತಿದ್ದರಿಂದ ಫೋನ್ ಸ್ವೀಕರಿಸಿ ‘ಹಲೋ..ಯಾರು?’ ಎಂದೆ. ಆಚಿನಿಂದ ಧ್ವನಿ: “ನಾನು ಸರ್ , ಸನಾವುಲ್ಲಾ.” ನಮ್ಮ ಮನೆಯಲ್ಲಾದ ಕಳ್ಳತನದ ಕೇಸ್ ನ ತನಿಖೆಯ ಜವಾಬ್ದಾರಿ ಹೊತ್ತಿದ್ದ ತಂಡದ ಒಬ್ಬ ಪ್ರಮುಖ ಸದಸ್ಯ ಸನಾವುಲ್ಲಾ. ಕನ್ನಡ ಚಲನಚಿತ್ರಗಳನ್ನೂ ಧಾರಾವಾಹಿಗಳನ್ನೂ ತಪ್ಪದೇ ನೋಡುತ್ತಿದ್ದ ಸನಾವುಲ್ಲಾರಿಗೆ ನನ್ನ ಮೇಲೆ ವಿಶೇಷ ಅಭಿಮಾನ. ಬಹುಶಃ ಕಳ್ಳ ಸಿಕ್ಕಿಬಿದ್ದ ವಿಷಯವನ್ನೇ ಹೇಳಲು ಫೋನ್ ಮಾಡಿರಬೇಕು; ವಿಷಯ ಈಗಾಗಲೇ ನಮಗೆ ತಿಳಿದಿದೆ ಎಂದರೆ ಅವರಿಗೆ ನಿರಾಸೆಯಾಗುವುದು ಖಂಡಿತ ಎಂದು ಯೋಚಿಸಿ ನಾನು ಏನೂ ಅರಿಯದವನಂತೆ, “ಹೇಳಿ ಸನಾವುಲ್ಲಾ, ನಮಗೇನಾದರೂ ಗುಡ್ ನ್ಯೂಸ್ ಇದೆಯಾ?” ಎಂದು ಸಪ್ಪೆ ದನಿಯಲ್ಲಿಯೇ ಕೇಳಿದೆ. ಸನಾವುಲ್ಲಾ ತುಂಬು ಉತ್ಸಾಹದಿಂದ “ಬರೀ ಗುಡ್ ಅಲ್ಲ ಸರ್! ಬೆಸ್ಟ್ ನ್ಯೂಸು! ಗ್ರೇಟ್ ನ್ಯೂಸು! ಇಬ್ರಾಹಿಂ ತಾನೇ ಕದ್ದಿದ್ದು ಅಂತ ಒಪ್ಪಿಕೊಂಡ. ಅಷ್ಟೇ ಅಲ್ಲ, ಅಷ್ಟು ಚಿನ್ನಾನೂ ರಿಕವರ್ ಆಗಿದೆ!” ಎಂದರು. ನಮ್ಮ ಸಂಭ್ರಮದ ಹರ್ಷೋದ್ಗಾರ ಮತ್ತೊಮ್ಮೆ ಪುನರಾವರ್ತನೆಗೊಂಡಿತು! “ಈಗಷ್ಟೇ ಎಲ್ಲಾ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದೀನಿ ಸರ್..ಪಾಪ, ನೀವು ಆತಂಕದಲ್ಲಿ ಇರ್ತೀರಲ್ಲವಾ, ಅದಕ್ಕೇ ಇವತ್ತಾದ್ರೂ ನೆಮ್ಮದಿಯಾಗಿ ನಿದ್ದೆ ಮಾಡಿ ಅಂತ ಈಗಲೇ ನಿಮಗೆ ಸುದ್ದಿ ತಿಳಿಸಿದೆ” ಎಂದರು ಸನಾವುಲ್ಲಾ. “ತುಂಬಾ ಒಳ್ಳೆಯದಾಯಿತು ಸನಾವುಲ್ಲಾ ಅವರೇ.. ನಿಮಗೆ ತೊಂದರೆ ಆಗದಿದ್ರೆ..ಸಮಯ ಇದ್ರೆ ಏನೇನಾಯ್ತು ಅಂತ ಸ್ವಲ್ಪ ಡೀಟೇಲ್ ಆಗಿ ಹೇಳಬಹುದಾ?” ಎಂದೆ ನಾನು. “ಹೇಳ್ತೀನಿ ಸರ್..ಅದಕ್ಕೇನಂತೆ! ” ಎಂದವರೇ ಗಂಟಲು ಸರಿ ಮಾಡಿಕೊಂಡು ಸನಾವುಲ್ಲಾ ನಡೆದದ್ದನ್ನೆಲ್ಲಾ ಹೇಳತೊಡಗಿದರು. ಆ ಕಥಾ ಭಾಗವನ್ನು ಸಂಗ್ರಹಿಸಿ ಈಗ ನಿಮ್ಮ ಮುಂದೆ ಸಾದರ ಪಡಿಸುತ್ತೇನೆ. ಅದಕ್ಕೂ ಮುನ್ನ ಒಂದು ವಿಷಯ ಹೇಳಲೇಬೇಕು: ಅದು ಪೋಲೀಸರ ಕಾರ್ಯವೈಖರಿಯ ಬಗ್ಗೆ. ಒಂದು ಸಣ್ಣ ಸುಳಿವು ಸಿಕ್ಕರೂ ಸಾಕು..ಅದಾವ ಪರಿಯಲ್ಲಿ ಅದರ ಬೆನ್ನು ಹತ್ತಿಬಿಡುತ್ತಾರೆಂದರೆ ಅದೊಂದು ದಡ ಮುಟ್ಟಲೇಬೇಕು, ಅಲ್ಲಿಯ ತನಕ ಬಿಡುವಂತಿಲ್ಲ, ಆದರೆ ಅದರ ಕಿಂಚಿತ್ ಸುಳಿವೂ ಹೊರಗಿನವರಿಗೆ ಸಿಗುವಂತಿಲ್ಲ! ಯಾಕೆ ಹೇಳಿದೆನೆಂದರೆ ನಾನು ಇಬ್ರಾಹಿಂ ಮೇಲೆ ಅನುಮಾನ ಇದೆ ಎಂದು ಹೇಳಿದ್ದೇ ತಡ, ಇಡೀ ತನಿಖಾತಂಡ ಅವನ ಜನ್ಮ ಜಾಲಾಡಿಬಿಟ್ಟಿದೆ! ಅವನ ಬಗೆಗಿನ ಎಲ್ಲಾ ಮಾಹಿತಿಯನ್ನೂ ಗುಡ್ಡೆ ಹಾಕಿಕೊಂಡು ಕುಳಿತ ಅವರಿಗೆ ಸಿಕ್ಕ ಒಂದು ಅತ್ಯಂತ ಪ್ರಮುಖ ಸುಳಿವು ಎಂದರೆ ಇಬ್ರಾಹಿಂನ ಮೊಬೈಲ್ ಫೋನ್! ಆರನೆಯ ತಾರೀಖು ಮಧ್ಯಾಹ್ನ ಕಾರ್ ನಿಲ್ಲಿಸಲು ನಮ್ಮ ಅಪಾರ್ಟ್ ಮೆಂಟ್ ಗೆ ಬಂದ ಇಬ್ರಾಹಿಂ ಒಳಬರುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ! ಸುಮಾರು ಒಂದು ಗಂಟೆಯ ವೇಳೆಗೆ, ನಾನು, ‘ಅವನು ಅಪಾರ್ಟ್ ಮೆಂಟ್ ನಿಂದ ಬೈಕ್ ನಲ್ಲಿ ಹೊರ ಹೋದ ಸಮಯ ‘ಎಂದು ದಾಖಲಿಸಿದ್ದೆನಲ್ಲಾ, ಅದೇ ವೇಳೆಗೆ ಸರಿಯಾಗಿ ಮತ್ತೆ ಮೊಬೈಲ್ ಸ್ವಿಚ್ ಆನ್ ಆಗಿದೆ! ಅಂದರೆ ಕಳ್ಳತನದ ಕೃತ್ಯವೆಸಗುವ ಸಮಯದಲ್ಲಿ ಹೊರಗಿನ ಕರೆಗಳಿಂದ ತೊಂದರೆಯಾಗದಿರಲಿ ಅಂತಲೋ, ತಾನಿರುವ ಜಾಗದ ಸುಳಿವು ಸಿಗದಿರಲಿ ಅಂತಲೋ ಮಹಾ ಬುದ್ಧಿವಂತಿಕೆಯಿಂದ ಮೊಬೈಲ್ ಅನ್ನು ನಿಷ್ಕ್ರಿಯಗೊಳಿಸಿದ್ದಾನೆ! ಪೋಲೀಸರ ಅನುಮಾನ ಗಟ್ಟಿಯಾಗಲು ಅದೊಂದು ಸುಳಿವು ಸಾಕಾಗಿತ್ತು! ಆ ಕಾರಣಕ್ಕೇ ಇಬ್ರಾಹಿಂನನ್ನ ಮನೆಯ ಬಳಿ ಕರೆಸಿ ಎಂದು ಅವರು ನನಗೆ ಹೇಳಿದ್ದು. ಈಗ ನಡೆದ ಪ್ರಸಂಗಕ್ಕೆ ಬರೋಣ.

ನಾನು ಹೇಳಿದ್ದಂತೆ ಇಬ್ರಾಹಿಂ ಆರೂವರೆಗೆ ಸರಿಯಾಗಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದಾನೆ. ಗೇಟ್ ಬಳಿ ಗಾಡಿ ನಿಲ್ಲಿಸುತ್ತಿದ್ದಂತೆಯೇ ನಾಲ್ಕು ಜನ ಮಫ್ತಿಯ ಪೋಲೀಸರು ಸುತ್ತುವರಿದಿದ್ದಾರೆ. “ಇಬ್ರಾಹಿಂ, ಮುಂದೆ ನಮ್ಮ ಜೀಪ್ ಇದೆ..ಹೋಗಿ ಕೂತ್ಕೋ” ಎಂದಿದ್ದಾರೆ ಸನಾವುಲ್ಲಾ. ನಾಲ್ಕಾರು ಬಾರಿ ನನ್ನ ಜೊತೆ ಸ್ಟೆಷನ್ ಗೆ ಬಂದಿದ್ದ ಇಬ್ರಾಹಿಂಗೆ ಫಕ್ಕನೆ ಪೋಲೀಸರ ಗುರುತು ಸಿಕ್ಕಿದೆ! “ಯಾಕೆ ಸರ್? ನಾನ್ಯಾಕೆ ಜೀಪ್ ಹತ್ತಬೇಕು?” ಎಂದು ನಡುಗುವ ದನಿಯಲ್ಲೇ ಕೇಳಿದ್ದಾನೆ. “ಏನಿಲ್ಲ ಬನ್ನಿ..ರಸ್ತೇನಲ್ಲಿ ಗಲಾಟೆ ಮಾಡಬೇಡಿ..ಸುಮ್ಮನೇ ಜೀಪ್ ಹತ್ತಿ..ಹಾಗೇ ಸ್ವಲ್ಪ ಕಷ್ಟಸುಖ ಮಾತಾಡೋಣ” ಎಂದಿದ್ದಾರೆ ಪೋಲೀಸರು. ಒಂದಿಷ್ಟು ಪ್ರತಿರೋಧ ಒಡ್ಡಿದ ಇಬ್ರಾಹಿಂನನ್ನು ತಳ್ಳಿಕೊಂಡೇ ಹೋಗಿ ಜೀಪ್ ಹತ್ತಿಸಿ ಅವನ ಬೈಕ್ ಅನ್ನು ಒಬ್ಬ ಪೋಲೀಸ್ ನವರೇ ಚಲಾಯಿಸಿಕೊಂಡು ಠಾಣೆಗೆ ಹೋಗಿದ್ದಾರೆ.ದಾರಿಯುದ್ದಕ್ಕೂ ಇಬ್ರಾಹಿಂ ಹಲುಬುತ್ತಲೇ ಇದ್ದನಂತೆ! ಅಲ್ಲಿಗೆ ಹೋದಮೇಲೆ ಲಾಕಪ್ ಗೆ ಹಾಕಿ ಎರಡು ತಾಸು ಸುಮ್ಮನೆ ಬಿಟ್ಟುಬಿಟ್ಟರಂತೆ. ಒಂದು ರೀತಿಯ ಮಾನಸಿಕ ಒತ್ತಡವನ್ನು ಹೇರುವ ಉಪಾಯ ಅದು. ಅಪರಾಧಿಯೇ ಆಗಿದ್ದವರು ಆ ಮೌನಕ್ಕೇ ಅರ್ಧ ಬಸವಳಿದುಹೋಗುತ್ತಾರೆ! ಅನಂತರ ಬಾಯಿಬಿಡಿಸುವುದು ಸುಲಭ! ಅಂಥದ್ದರಲ್ಲೂ ಇಬ್ರಾಹಿಂ ಬಡಪೆಟ್ಟಿಗೆ ಬಾಯಿ ಬಿಡಲಿಲ್ಲವಂತೆ! ಎಷ್ಟೆಷ್ಟು ಥರದಲ್ಲಿ ಪ್ರಶ್ನೆ ಮಾಡಿದರೂ “ನಂಗೇನೂ ಗೊತ್ತಿಲ್ಲ ಸರ್..ನನ್ನ ತಮ್ಮನಂಗಿದಾನೆ ಅಂತ ಸಾಹೇಬ್ರೇ ಹೇಳಿದ್ರಲ್ಲವಾ ಸರ್! ಅಂಥವನು ನಾನು ಕಳ್ತನ ಮಾಡಿಬಿಡ್ತೀನಾ? ” ಎಂದೆಲ್ಲಾ ಪರಿಪರಿಯಾಗಿ ಅಲವತ್ತುಕೊಂಡನಂತೆ. ‘ಯಾಕೋ ಈ ಭ್ರಾತೃತ್ವ ಕೊಂಚ ಭಾರಿಯೇ ಆಯಿತು’ ಎಂದು ನನಗನ್ನಿಸಿದ್ದು ಸುಳ್ಳಲ್ಲ! ರಹೀಂ ಸಾಹೇಬರು ಠಾಣೆಗೆ ಬರುವವರೆಗೂ ಇಬ್ರಾಹಿಂ ತಾನು ನಿರಪರಾಧಿ ಎಂದೇ ಸಾಧಿಸುತ್ತಿದ್ದನಂತೆ. ಸಾಹೇಬರು ಬಂದಮೇಲೆ ಪಕ್ಕದಲ್ಲಿ ಕೂರಿಸಿಕೊಂಡು ನಯವಾಗಿಯೇ ಕೇಳಿದರಂತೆ. “ಒಂದು ಸತ್ಯ ಸರ್..ಸ್ಟೇಷನ್ ಗೆ ಬರ್ತಿದ್ದಹಾಗೇ ಎಂಥವರಾದ್ರೂ ತಡಬಡಾಯಿಸಿ ಹೋಗ್ತಾರೆ ಸರ್..ಆಮೇಲೆ ಒಬ್ಬ ಅಫೆನ್ಸ್ ಮಾಡಿದಾನಾ ಇಲ್ಲವಾ ಅಂತ ತಿಳಕೊಳ್ಳೋಕೆ ಪೋಲೀಸರಿಗೆ ಎರಡು ನಿಮಿಷ ಸಾಕು ಸರ್..ನಿಜವಾಗಿ ತಪ್ಪು ಮಾಡಿದೋರು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡೋಕಾಗದೆ ಒಂದೇ ನಿಮಿಷಕ್ಕೆ ಕುಸಿದುಹೋಗ್ತಾರೆ ಸರ್..ಇವನೇ ಭಾಳ ಗಾಂಚಾಲಿ ಮಾಡ್ಬಿಟ್ಟ” ಎಂದಿದ್ದರು ಸನಾವುಲ್ಲಾ. ನಾನು ಸಾಕಷ್ಟು ಅಳುಕಿನಿಂದಲೇ ಕೇಳಿದ್ದೆ—”ಅವನಿಗೆ ಹೊಡೆದು ಬಡಿದು ಮಾಡಲಿಲ್ಲ ತಾನೇ?” ವಾಸ್ತವವಾಗಿ ಸುಮಾರು ಹೊತ್ತು ಮೈ ಮುಟ್ಟಿರಲಿಲ್ಲವಂತೆ. ಅವನೇ ಕಳ್ಳ ಎಂದು ಪೋಲೀಸರಿಗೆ ಖಾತ್ರಿಯಾಗಿದ್ದರೂ ಅವನು ತಪ್ಪೊಪ್ಪಿಕೊಳ್ಳದೇ ಸತಾಯಿಸುತ್ತಿದ್ದ. ಇಷ್ಟು ಸಾಲದೆಂಬಂತೆ ರಹೀಂ ಸಾಹೇಬರು ವಿಚಾರಣೆ ಶುರೀ ಮಾಡಿದಾಗಲೂ “ನಾನು ಕದ್ದಿಲ್ಲ” ಎಂದೇ ಸಾಧಿಸುತ್ತಾ ಪವಿತ್ರ ಗ್ರಂಥದ ಮೇಲೆ ಆಣೆ ಮಾಡಿ ಹೇಳಿಬಿಟ್ಟನಂತೆ! ಅದು ರಹೀಂ ಸಾಹೇಬರನ್ನು ವಿಪರೀತ ಕೆರಳಿಸಿಬಿಟ್ಟಿತು. ಆಗಲೇ ಬೂಟು ಲಾಠಿಗಳು ಕಾರ್ಯೋನ್ಮುಖವಾಗಿದ್ದು..ಬೆನ್ನ ಮೇಲೆ ಬಾಸುಂಡೆ ಮೂಡಿದ್ದು..ಕೈಕಾಲು ಮೂತಿಗಳು ಬಾತುಗೊಂಡಿದ್ದು. ಅಷ್ಟಾಗುತ್ತಿದ್ದಂತೆ ಲಬೋ ಲಬೋ ಬಾಯಿ ಬಡಿದುಕೊಳ್ಳುತ್ತಾ ಇಬ್ರಾಹಿಂ ತಪ್ಪೊಪ್ಪಿಕೊಂಡಿದ್ದಾನೆ! “ಹೊಡೀಬೇಡಿ ಸರ್..ತಪ್ಪಾಯ್ತು ಸರ್..ನಾನೇ ಕದ್ದಿದ್ದು…ದಮ್ಮಯ್ಯ ಅಂತೀನಿ ಹೊಡೀಬೇಡಿ ಸರ್..” ಎಂದು ಅಂಗಲಾಚಿದ್ದಾನೆ.

“ಮೊದಲೇ ಇದನ್ನ ಒದರೋದಕ್ಕೆ ಏನಾಗಿತ್ತೋ ಭಾಡಕೋವ್? ಪೋಲೀಸರ ಕೈಲಿ ಒದೆ ತಿನ್ನೋ ತೆವಲಾ?” ಎನ್ನುತ್ತಾ “ನಡಿ..ಚಿನ್ನ ಎಲ್ಲಿಟ್ಟಿದೀಯಾ ತೋರ್ಸು ನಡಿ” ಎಂದು ಕತ್ತಿನ ಪಟ್ಟಿ ಹಿಡಿದು ಆಗಲೇ ಎಳೆದುಕೊಂಡು ಹೊರಟರಂತೆ. ಮನೆಯಲ್ಲಿ ಅಡುಗೆ ಮನೆಯ ಅಟ್ಟದಲ್ಲಿ ಕೆಟ್ಟು ಕೂತಿದ್ದ ಒಂದು ಪುರಾತನ ಕಾಲದ ಓವನ್ ನಲ್ಲಿ ಹಳೇ ಬಟ್ಟೆಯೊಂದರಲ್ಲಿ ಕದ್ದ ಚಿನ್ನವನ್ನೆಲ್ಲಾ ಸುತ್ತಿಟ್ಟಿದ್ದನಂತೆ ಭೂಪತಿ ಇಬ್ರಾಹಿಂ! “ನಾವಾಗೇ ಹುಡುಕೋದಕ್ಕೆ ಬಂದಿದ್ರೆ ಆ ಜಾಗದಲ್ಲಿ ಹುಡುಕ್ತಿದ್ದೆವೋ ಇಲ್ಲವೋ ಅನುಮಾನ ಸರ್..ಮಹಾ ಐನಾತಿ ಬಡ್ಡೀಮಗ..ಪ್ರೊಫೆಷನಲ್ ಕಳ್ಳ ಅಲ್ಲದಿದ್ರೂ ಪಟ್ಟುಗಳನ್ನೆಲ್ಲಾ ತಿಳಕೊಂಡಿದ್ದ ಘಾಟಿ” ಎಂದರು ಸನಾವುಲ್ಲಾ. “ಏನೋ..ನೀವೆಲ್ಲಾ ಮನಸ್ಸು ಮಾಡಿದ್ದಕ್ಕೆ ನಮ್ಮ ಚಿನ್ನ ನಮಗೆ ಸಿಕ್ತು ಸಾಹೇಬ್ರೇ..ನಿಮಗೆ ಎಷ್ಟು thanks ಹೇಳಿದರೂ ಸಾಲದು” ಎಂದೆ ನಾನು. ನನಗರಿವಿಲ್ಲದೆಯೇ ನನ್ನ ದನಿ ಭಾರವಾಗಿತ್ತು. ಕಣ್ಣಲ್ಲಿ ನೀರು ಜಿನುಗಿತ್ತುˌ. “ನಮ್ಮ ಡ್ಯೂಟಿ ನಾವು ಮಾಡಿದೀವಿ ಸರ್..ನಾಳೆ ಸ್ಟೇಷನ್ ಗೆ ಬಂದು ಸಾಹೇಬ್ರನ್ನ ನೋಡಿ ಮಾತಾಡಿಕೊಂಡು ನಿಮ್ಮ ಸ್ವತ್ತು ತೊಗೊಂಡು ಹೋಗಿ…ಆಯ್ತು ಸರ್..good night” ಎಂದು ನುಡಿದು ಸನಾವುಲ್ಲಾ ಕರೆಯನ್ನು ಮುಕ್ತಾಯಗೊಳಿಸಿದರು.

“ಇಷ್ಟು ದಿನ ಕೊರಗಿನಲ್ಲಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ..ಇವತ್ತು ಸಂತೋಷಕ್ಕೆ ನಿದ್ದೆ ಬರುತ್ತಿಲ್ಲ..ಹಾಗೇ ಒಂದಷ್ಟು ಹೊತ್ತು ಮಾತಾಡಿಕೊಂಡು ಕೂತಿರೋಣ ನಿದ್ದೆ ಬರೋತನಕ” ಅಂದಳು ರಂಜನಿ. ಸರಿ, ಮೊದಲ ದಿನದಿಂದ ನಡೆದ ಘಟನೆಗಳನ್ನೆಲ್ಲಾ ಜ್ಞಾಪಿಸಿಕೊಳ್ಳುತ್ತಾ ಸಮರಾತ್ರಿಯಲ್ಲಿ ಬಿಸಿಬಿಸಿ ಕಾಫಿ ಹೀರುತ್ತಾ ಬೆಳಕು ಹರಿಸಿದೆವು.

ಮರುದಿನ ನಾನು ರಂಜನಿಯನ್ನು ಕರೆದುಕೊಂಡು ಠಾಣೆಗೆ ಹೋದೆ. ಶ್ರೀನಿವಾಸ್ , ರಹೀಂ, ಸನಾವುಲ್ಲಾ, ಪ್ರಕಾಶ್…ಎಲ್ಲರೂ ಠಾಣೆಯಲ್ಲಿ ಉಪಸ್ಥಿತರಿದ್ದರು. ಲಾಕಪ್ ಒಳಗೆ ಇಬ್ರಾಹಿಂ ಮುದುಡಿಕೊಂಡು ಕುಳಿತಿದ್ದ. ನಮ್ಮನ್ನು ನೋಡಿದವನೇ ಎದ್ದು ಬಂದು ಲಾಕಪ್ ಕೋಣೆಯ ಸರಳುಗಳನ್ನು ಹಿಡಿದುಕೊಂಡು,”ಸಾರ್…ಸಾರಿ ಸಾರ್..ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟೆ..ನನ್ನ ಕ್ಷಮಿಸಿಬಿಡಿ ಸಾರ್..ಹೆಂಗಾನಾ ನನ್ನ ಬಿಡಿಸಿಬಿಡಿ ಸಾರ್..ಹೆಂಡತಿ ಮಕ್ಕಳು ಒಂದೇ ಸಮ ಅಳ್ತಿದಾರೆ..ಕಾಪಾಡಿ ಸಾರ್” ಎಂದು ಅಲವತ್ತುಕೊಳ್ಳತೊಡಗಿದ. ಎರಡು ವರ್ಷಗಳ ಅವನ ನಿಷ್ಠಾವಂತ ದುಡಿಮೆಯನ್ನು ನೆನೆದು ನನಗೂ ಕೆಟ್ಟೆನಿಸಿತು. ಪಾಪ, ಅವನ ಪುಟ್ಟ ಮಕ್ಕಳ ಮನಸ್ಸಿಗೆ ಅದೆಷ್ಟು ಘಾಸಿಯಾಗಿರಬಹುದೆಂಬ ಯೋಚನೆಯಿಂದ ಸಂಕಟವಾಯಿತು. ಆದರೆ ಈಗ ನಾನೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಕಾನೂನಿನ ಅಂಗಳಕ್ಕೆ ಚೆಂಡನ್ನು ನೂಕಿಯಾಗಿತ್ತು. ನಾನು ಏನೂ ಪ್ರತಿಕ್ರಿಯಿಸದೆ ಒಳಗೆ ಹೊರಟುಹೋದೆ.

ಠಾಣೆಯಲ್ಲಿ ಎಲ್ಲರೂ ನಮಗೆ ಅಭಿನಂದನೆಗಳನ್ನು ಹೇಳುವವರೇ! “ನಿಮ್ಮ ಹಠ-ನಿಮ್ಮ ಪ್ರಯತ್ನದಿಂದ ನಿಮಗೆ ಚಿನ್ನ ವಾಪಸ್ ಸಿಕ್ಕಿದೆ ಸರ್..ನೀವೇನಾದರೂ ಸುಮ್ಮನಾಗಿಬಿಟ್ಟಿದ್ದಿದ್ರೆ ಜಪ್ಪಯ್ಯ ಅಂದ್ರೂ ಕಳ್ಳ ಸಿಕ್ತಿರಲಿಲ್ಲ. ಆಮೇಲೆ ನಿಮ್ಮ ಜೊತೇಗೇ ಇದ್ದುಗೊಂಡು ಈ ನಮಕ್ ಹರಾಮ್ ಇನ್ನೂ ಏನೇನು ಅನಾಹುತ ಮಾಡ್ತಿದ್ನೋ ಏನೋ” ಎಂದರು ಶ್ರೀನಿವಾಸ್. “ನಿಜ ಸರ್..ಹಾಗೆ ನೋಡಿದರೆ ನೀವು ನಮ್ಮ ಡಿಪಾರ್ಟ್ ಮೆಂಟ್ ಗೆ ಲಾಯಕ್ಕಾದ ವ್ಯಕ್ತಿ..” ಎಂದು ಬೆನ್ನು ತಟ್ಟಿದರು ರಹೀಂ. “ನಮ್ಮ ಪ್ರಭು ಸರ್ ಗೆ ಡಿಟೆಕ್ಟಿವ್ stories ಅಂದ್ರೆ ಭಾರೀ ಪ್ರೀತಿ! ಅಜಿತನ ಸಾಹಸಗಳು, ಸಂಚಿನ ಸುಳಿ, ಡಿಟೆಕ್ಟಿವ್ ಧನುಷ್ ಎಲ್ಲಾ ಸೀರಿಯಲ್ಲನ್ನೂ ನೋಡಿದೀನಿ ಸಾರ್ ನಾನು! ಈಗ ರಿಯಲ್ ಲೈಫಲ್ಲೂ detective ಆಗಿಬಿಟ್ರಿ!” ಎಂದು ಅಭಿಮಾನದಿಂದ ನುಡಿದರು ಸನಾವುಲ್ಲಾ! ಆಹಾ! ಚಿನ್ನದ ಜೊತೆಗೆ ಚಿನ್ನದಂಥಾ ಮೆಚ್ಚುಗೆಯೂ ದೊರೆತು ಮತ್ತಷ್ಟು ಖುಷಿಯಾಯಿತು.

ನಂತರ ರಹೀಂ ಸಾಹೇಬರು ತಮ್ಮ ಕೋಣೆಗೆ ನಮ್ಮನ್ನು ಕರೆದುಕೊಂಡು ಹೋಗಿ ಬೀರುವಿನಿಂದ ಪುಟ್ಟ ಬಟ್ಟೆಯ ಗಂಟೊಂದನ್ನು ತಂದು ಟೇಬಲ್ ಮೇಲಿರಿಸಿ, “ನೋಡಿ ಸರ್ , ಇದೇನಾ ನಿಮ್ಮ ವಸ್ತು? ” ಎಂದು ಗಂಟು ಬಿಚ್ಚಿ ತೋರಿಸಿದರು. ಕಳೆದುಹೋದವೆಂದುಕೊಂಡಿದ್ದ ಒಡವೆಗಳು ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತಿದ್ದಂತೆ ರಂಜನಿಯ ಕಣ್ಣುಗಳು ಮಿನುಗಿದವು! ರಹೀಂ ಸಾಹೇಬರು ಕಳೆದಿದೆಯೆಂದು ರಂಜನಿ ಬರೆದುಕೊಟ್ಟಿದ್ದ ಪಟ್ಟಿಯನ್ನು ಎದುರಿಗಿಟ್ಟುಕೊಂಡು ತಾಳೆ ಹಾಕತೊಡಗಿದರು. ನೋಡಿದರೆ ಸಿಕ್ಕಿರುವ ಎಷ್ಟೋ ಪುಟ್ಟ ಪುಟ್ಟ ಒಡವೆಗಳು ಕಳುವಾದ ವಸ್ತುಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲ! ಅಂದಿನ ಆ ಗಾಬರಿಯ ಕ್ಷಣದಲ್ಲಿ ರಂಜನಿ ಎಷ್ಟೋ ಒಡವೆಗಳನ್ನು ಪಟ್ಟಿಯಲ್ಲಿ ಸೇರಿಸುವುದನ್ನು ಮರೆತಿದ್ದಾಳೆ! “ಅಯ್ಯೋ! ಇದೊಳ್ಳೇ ಸಮಸ್ಯೆ ಆಗಿಹೋಯ್ತೇ!” ಎನ್ನುತ್ತಾ ರಹೀಂ ಗಂಟಿನಲ್ಲಿದ್ದ ಮೆಡಲೊಂದನ್ನು ಕೈಗೆತ್ತಿಕೊಂಡರು. ಅದು ಎಂ. ಎ. first rank ಬಂದಾಗ ನನಗೆ ವಿಶ್ವವಿದ್ಯಾಲಯ ನೀಡಿದ್ದ ಮೆಡಲ್! ಅದರ ಮೇಲೆ ನನ್ನ ಹೆಸರನ್ನೂ ಸ್ಪಷ್ಟವಾಗಿ ಕೆತ್ತಲಾಗಿತ್ತು. ಅದನ್ನು ನೋಡುತ್ತಲೇ ರಹೀಂ ಅವರಿಗೆ ರಂಜನಿ ಆತುರದಲ್ಲಿ ಮಾಡಿರುವ ಎಡವಟ್ಟು ಅರ್ಥವಾಗಿಹೋಯಿತು! ಒಂದು ಕ್ಷಣ ಯೋಚಿಸಿದ ಅವರು ನಂತರ ನಿಧಾನವಾಗಿ ಮತ್ತೆ ಗಂಟು ಕಟ್ಟಿ ಅದನ್ನು ನಮ್ಮ ಕೈಗಿತ್ತು, “ಈಗ formalities ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದು ಬೇಡ..ಚಿನ್ನ ನಿಮ್ಮದೇ ಅಂತ ನಮಗೆ ಖಾತ್ರಿಯಾಗಿದೆ..ನಮ್ಮ ವಸ್ತು ನಮಗೆ ಸಿಕ್ಕಿದೆ ಅಂತ ಒಂದು ಲೆಟರ್ ಬರಕೊಟ್ಟು ನಿಮ್ಮ ಪದಾರ್ಥಾನ ನೀವು ತೊಗೊಂಡು ಹೋಗಿ..ಮುಂದೆ ಒಂದೆರಡು ಸಲ ಕೋರ್ಟ್ ಗೆ ಬರಬೇಕಾಗುತ್ತೆ. ಅದಕ್ಕೆ ಸಂಬಂಧಪಟ್ಟ ಹಾಗೆ ನಾನು ಮೆಸೇಜ್ ಕಳಿಸ್ತೀನಿ” ಅಂದರು. ಎಲ್ಲರಿಗೂ ಧನ್ಯವಾದಗಳನ್ನರ್ಪಿಸಿ ನಾವು ನಮ್ಮ ಪುಟ್ಟಗಂಟನ್ನು ತೆಗೆದುಕೊಂಡು ಅಲ್ಲಿಂದ ಹೊರಟೆವು. ಸಾರ್..ನನ್ನ ಕ್ಷಮಿಸಿಬಿಡಿ ಸಾರ್..ಎಂಬ ಇಬ್ರಾಹಿಂನ ಆರ್ತಧ್ವನಿ ನಾವು ಠಾಣೆಯ ಬಾಗಿಲು ದಾಟಿ ಬೀದಿಗೆ ಬರುವವರೆಗೂ ಕಿವಿಗೆ ಅಪ್ಪಳಿಸುತ್ತಲೇ ಇತ್ತು.
ಮನೆಗೆ ಬಂದ ಮೇಲೂ ಅದೇ ಗುಂಗಿನಲ್ಲಿದ್ದ ಒಂದಷ್ಟು ಹೊತ್ತು ಏನೂ ಮಾತಾಡಲಿಲ್ಲ.

ನಂತರ ನಿಧಾನವಾಗಿ, “ಪ್ರಭೂಜೀ, ನೀವು ದೂರದರ್ಶನದಲ್ಲಿದ್ದಾಗ ಒಂದು ಕಿರುಚಿತ್ರ ಮಾಡಿದ್ರಿ—ಆಗಂತುಕರು ಅಂತ. ಪ್ರೇಮಾ ಭಟ್ ಅವರ ಕಥೆಯನ್ನ ಆಧರಿಸಿದ್ದು..ನೆನಪಿದೆಯಾ?” ಎಂದಳು. ಅರೆ! ಹೌದು! ಅದರಲ್ಲೂ ಹೀಗೆಯೇ ಆಗಂತುಕರಾಗಿ, ಅಕಸ್ಮಾತ್ತಾಗಿ ಒಬ್ಬ ಯುವ ದಂಪತಿಗಳ ಮನೆಗೆ ಬಂದ ಹಿರಿಯ ದಂಪತಿಗಳು ತೀರಾ ಆತ್ಮೀಯರಂತೆ, ನಂಬಿಕಸ್ಥರಂತೆ ನಾಟಕ ಮಾಡಿ ಕೊನೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯಲ್ಲಿದ್ದ ಒಡವೆಗಳನ್ನೆಲ್ಲಾ ದೋಚಿಕೊಂಡು ಹೋಗಿಬಿಡುತ್ತಾರೆ. ನಂಬಿಕೆ ದ್ರೋಹದ ಈ ಕಥೆಯನ್ನು ನಾನು ಕಿರುಚಿತ್ರವಾಗಿಸಿದ್ದೆ. ಬಿ.ವಿ.ರಾಜಾರಾಂ ಹಾಗೂ ನಳಿನಿ ಅಕ್ಕ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಚಿತ್ರದ ಅಂತ್ಯದಲ್ಲಿ ಕೆಲ ಮಾರ್ಮಿಕ ಸಾಲುಗಳನ್ನು ಸೇರಿಸಿದ್ದೆ. ದೂರು ಕೊಡುವ ಸಮಯದಲ್ಲಿ ಪೋಲೀಸರು ‘ಏನೇನು ಕಳುವಾಗಿದೆ ಹೇಳಿಯಮ್ಮಾ..ಬರೆದುಕೊಳ್ತೇವೆ’ ಎಂದಾಗ ಆಕೆ ಹೇಳುತ್ತಾಳೆ: “ಬರಕೊಳ್ಳಿ..ತುಂಬಾ ಬೆಲೆ ಬಾಳೋ ವಸ್ತುಗಳು ಕಳುವಾಗಿ ಬಿಟ್ಟಿವೆ. ನಂಬಿಕೆ, ವಿಶ್ವಾಸ, ಪ್ರೀತಿ ಎಲ್ಲಾ ಕಳುವಾಗಿಬಿಟ್ಟಿವೆ..ದಯವಿಟ್ಟು ಬೇಗ ಹುಡುಕಿಸಿಕೊಡಿ” ಎಂದು ಬಿಕ್ಕುತ್ತಾಳೆ!

ಗೊಂದಲಿತ ಪೋಲೀಸರ ಮುಖಭಾವ, ಹತಾಶೆ-ವ್ಯಾಕುಲತೆಯ ಮನೆಯಾಕೆಯ ಮುಖಭಾವಗಳ ಚಿತ್ರಿಕೆಯೊಂದಿಗೆ ಕಿರುಚಿತ್ರ ಮುಕ್ತಾಯವಾಗುತ್ತದೆ. “ಚಿತ್ರ ಮುಗಿದಮೇಲೆ ಗಾಢ ಮೌನ ಆವರಿಸಿ ಒಂದು ಬಗೆಯ ವಿಷಾದ ಆವರಿಸಿತು”— ಇದು ಚಿತ್ರದ ಬಗ್ಗೆ ಬಂದ ವಿಮರ್ಶೆಯ ಸಾಲು. “ಈಗ ನಮಗಾಗಿರೋದೂ ಇಂಥದೇ ನಂಬಿಕೆ ದ್ರೋಹ” ಎಂದು ನಿಟ್ಟುಸಿರು ಬಿಟ್ಟ ರಂಜನಿ ಮರುಕ್ಷಣವೇ ಚೇತರಿಸಿಕೊಂಡು,”ಛೀ! ಖುಷಿ ಪಡೋ ಹೊತ್ತಲ್ಲಿ ಏನೇನೋ ವಿಚಾರಕ್ಕೆ ದುಃಖ ಪಡೋದು ಬೇಡ! ಮೊದಲು ಏನಾದ್ರೂ ಒಳ್ಳೇ ಸ್ವೀಟ್ ತರಿಸಿ..ಡಿಟೆಕ್ಟೀವ್ ಧನುಷ್ ಪ್ರಭು ಅವರ ಹೊಸ ಸಾಹಸದ ಯಶಸ್ಸನ್ನ ಸೆಲಿಬ್ರೇಟ್ ಮಾಡೋಣ” ಎನ್ನುತ್ತಾ ಒಳಹೋದಳು. ನಾನು ಸ್ವೀಟ್ ತರಿಸಲು ಫೋನ್ ಕರೆಯಲ್ಲಿ ಮಗ್ನನಾದೆ. ಒಂದು ನಿಮಿಷದಲ್ಲೇ ರಂಜನಿ ಕೋಣೆಯಿಂದ ಹೊರಬಂದು ‘ಪ್ರಭೂಜೀ’ ಎಂದಳು. ತಲೆಯೆತ್ತಿ ನೋಡಿದೆ. ರಂಜನಿ ಕೋಣೆಯ ಬಾಗಿಲಲ್ಲಿ ನಗುತ್ತಾ ನಿಂತಿದ್ದಳು.

ಅವಳ ಕೊರಳಲ್ಲಿ ನಾನು ಅವಳ ಹುಟ್ಟುಹಬ್ಬಕ್ಕೆ ಕೊಡಿಸಿದ್ದ ಸರ ಕಂಗೊಳಿಸುತ್ತಿತ್ತು!!!

‍ಲೇಖಕರು Admin

19 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading