ಶ್ರೀನಿವಾಸ ಪ್ರಭು ಅಂಕಣ- ಅಬ್ಬಾ! ಒಟ್ಟೊಟ್ಟಿಗೇ ಎರಡೆರಡು ಸಿಹಿ ಸುದ್ದಿಗಳು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

29

ಮತ್ತಷ್ಟು ದಿನಗಳು ಹೀಗೇ ಉರುಳಿದವು. ಹಸಿವಿನ.. ಅನ್ನಕ್ಷಾಮದ ದಿನಗಳು. ಬರಬರುತ್ತಾ ‘ಒಡೆಯ’ ನಿಲ್ಲದ ಶಾಲೆಯಲ್ಲೂ ಅರಾಜಕ ಸ್ಥಿತಿ ತಲೆಯೆತ್ತಿತು. ‘ಅನ್ನಬ್ರಹ್ಮದ ದೇಗುಲದಲ್ಲಿ ಬೆಳಗೂ ಬೈಗೂ ಛಿಟಿಛಿಟಿ ಬೆಂಕಿ ದೊಂಬರ ಪೂಜೆಯು ಕಾಗೆಯ ಮಂತ್ರ ಗಾಳಿಯ ಎಡೆಯು ಬೊಬ್ಬೆಯ ಗಂಟೆ’…

ಬೇಂದ್ರೆಯವರ ‘ತುತ್ತಿನ ಚೀಲ’ ಕವಿತೆ ನನಗೆ ಅತ್ಯಂತ ಪ್ರಿಯವಾದ್ದು. ವಿದ್ಯಾರ್ಥಿ ದೆಸೆಯಲ್ಲಂತೂ ಹತ್ತಾರು ಕಡೆ ಈ ಕವಿತೆಯ ವಾಚನ ಮಾಡಿಬಿಟ್ಟಿದ್ದೇನೆ. ಮೇಲ್ಕಾಣಿಸಿದ ಈ ಕವಿತೆಯ ಪ್ರಾರಂಭದ ಸಾಲುಗಳ ಅರ್ಥ ಹೀಗೆ ಪ್ರಾತ್ಯಕ್ಷಿಕವಾಗಿಯೇ ಅನುಭವಕ್ಕೆ ಬರುತ್ತದೆ ಎಂದು ಮಾತ್ರ ಎಂದೂ ಎಣಿಸಿರಲಿಲ್ಲ!

ನಮ್ಮ ಶಾಲೆಯ ನಿರ್ದೇಶಕರಾಗಿದ್ದ ಅಲ್ಕಾಜಿ಼ಯವರು ಶಾಲೆಗೆ ರಾಜೀನಾಮೆ ಕೊಟ್ಟು ಹೋಗಿ ಕೆಲ ತಿಂಗಳುಗಳೇ ಕಳೆದರೂ ಹೊಸ ನಿರ್ದೇಶಕರ ನೇಮಕವಾಗಿರಲಿಲ್ಲ. ನಿರ್ದೇಶಕರ ಸ್ಥಾನಕ್ಕೆ ಹಲವಾರು ಹೆಸರುಗಳು ಚಾಲ್ತಿಯಲ್ಲಿದ್ದು ಆ ಸಂಬಂಧವಾದ ವಿವಿಧ ಗುಂಪುಗಳ ಹುನ್ನಾರ— ರಾಜಕೀಯಗಳ ತುರುಸಿನ ಕಾರ್ಯಾಚರಣೆಗಳೇ ಮುನ್ನೆಲೆಗೆ ಬಂದು, ರಂಗಶಿಕ್ಷಣ ಹಿನ್ನೆಲೆಗೆ ಸರಿದು ಕೊನೆಗೊಮ್ಮೆ ಹೆಚ್ಚುಕಡಿಮೆ ಸ್ಥಗಿತವೇ ಆಗಿಹೋಯಿತು ಎನ್ನಬಹುದು. ನಮ್ಮದಂತೂ ತೀರಾ ಅತಂತ್ರದ ಸ್ಥಿತಿಯಾಗಿಹೋಗಿತ್ತು. ತರಗತಿಗಳು ನೆಟ್ಟಗೆ ನಡೆಯುತ್ತಿರಲಿಲ್ಲ.. ನಾಟಕಗಳ ತಯಾರಿ—ಪ್ರದರ್ಶನಗಳೂ ಆಗುತ್ತಿರಲಿಲ್ಲ… ಹೊಟ್ಟೆಯಂತೂ ತುಂಬುತ್ತಲೇ ಇರಲಿಲ್ಲ.

ಊರಿಗೆ ಮರಳಿ, ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದ ಮೇಲೆ ಬಂದರಾಯಿತು ಎಂದುಕೊಂಡರೂ ರೈಲಿನ ಟಿಕೇಟಿಗಾದರೂ ಹಣ ಬೇಕಲ್ಲಾ! ಮುಂದಿನ ಹೆಜ್ಜೆಯೂರಲು ಹಾದಿಯೇ ಕಾಣದೆ ಹತಾಶರಾಗಿ ಕುಳಿತಿದ್ದವರಿಗೆ ಅಚಾನಕ್ ಆಗಿ ಒಂದು ಪರಮ ಸಂತೋಷದ ಸುದ್ದಿ ಬಂದು ಮುಟ್ಟಿತು: ಬಿ.ವಿ.ಕಾರಂತರು ನಮ್ಮ ಶಾಲೆಯ ನಿರ್ದೇಶಕರಾಗಿ ಬರುವ ಸಾಧ್ಯತೆಗಳು ದಟ್ಟವಾಗಿವೆ! ಆ ಸುದ್ದಿ ಕೇಳಿ ಸಂಭ್ರಮಿಸುತ್ತಿರುವಾಗಲೇ ಬೆಂಗಳೂರಿನಿಂದ ‘ಗೀಜಗನ ಗೂಡು’ ಚಿತ್ರದ ನಿರ್ದೇಶಕ ಟಿ.ಎಸ್.ರಂಗಾ ಅವರ ಪತ್ರ ಬಂದಿತು. ರಂಗಾ ಬರೆದಿದ್ದರು: ‘ನಾವು ಬೆನಕ ತಂಡದವರು ನಾಟಕ ಪ್ರದರ್ಶನಗಳನ್ನು ನೀಡಲು ದೆಹಲಿಗೆ ಬರುತ್ತಿದ್ದೇವೆ!’.

ಅಬ್ಬಾ! ಒಟ್ಟೊಟ್ಟಿಗೇ ಎರಡೆರಡು ಸಿಹಿ ಸುದ್ದಿಗಳು! ರಂಗಾ ಅವರ ಪತ್ರ ಬಂದ ಮಾರನೆಯ ದಿನವೇ ಬೆನಕ ತಂಡ ದೆಹಲಿಗೆ ಬಂದಿಳಿಯಿತು. ಲೋಧಿ ಕಾಲನಿಯಲ್ಲಿದ್ದ ಕನ್ನಡ ಸ್ಕೂಲ್ ನಲ್ಲಿ ಕಲಾವಿದರಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ನಾನು ಹಾಗೂ ಅಶೋಕ ಸಂಜೆಯಾಗುತ್ತಲೇ ಲೋಧಿ ಕಾಲನಿಯತ್ತ ಹೆಜ್ಜೆ ಹಾಕಿದೆವು. ಬಸ್ ಛಾರ್ಜ್ ಗೆ ದುಡ್ಡಿಲ್ಲದ ಕಾರಣಕ್ಕೆ ಹೆಚ್ಚುಕಡಿಮೆ ನಾಲ್ಕು ಕಿ.ಮೀ.ದೂರವನ್ನು ನಡೆದೇ ಕ್ರಮಿಸುವುದು ಅನಿವಾರ್ಯವಾಗಿತ್ತು. ಕನ್ನಡ ಸ್ಕೂಲ್ ಮುಟ್ಟಿದಾಗ ರಾತ್ರಿ ಸುಮಾರು ಎಂಟು ಗಂಟೆ. ಕಲಾವಿದ ಮಿತ್ರರೆಲ್ಲರೂ ಆಗಷ್ಟೇ ಊಟಕ್ಕೆ ಕುಳಿತಿದ್ದಾರೆ.. ಎಲ್ಲರ ಮುಂದೆ ನಳನಳಿಸುವ ಹಸಿರು ಬಾಳೆಎಲೆಗಳು! ಎಲೆಗಳ ಮೇಲೆ ಆಗಷ್ಟೇ ಬಡಿಸಿದ್ದ ಹಬೆಯಾಡುತ್ತಿದ್ದ ಬಿಸಿ ಬಿಸಿ ಬಿಳಿಯ ಅನ್ನದ ಪುಟ್ಟ ಪುಟ್ಟ ಗುಡ್ಡೆಗಳು! ‘ಬನ್ರೋ.. ಸರಿಯಾದ ಸಮಯಕ್ಕೇ ಬಂದಿದೀರಿ.. ಬನ್ನಿ.. ಜೊತೇಲೇ ಊಟ ಮಾಡೋಣ’ ಎಂದು ಯಾರೋ ದೂರದಿಂದ ಕರೆದ ಹಾಗೆ ಭಾಸವಾಗಿದ್ದು ಬಿಟ್ಟರೆ ಮತ್ತೇನೂ ನೆನಪಿಲ್ಲ… ಎಲೆಯ ಮುಂದೆ ಕುಳಿತು ಅಷ್ಟುದಿನಗಳ ಅನ್ನಕ್ಷಾಮವನ್ನು ಮರೆಸುವಂತೆ ಹೊಟ್ಟೆ ಬಿರಿಯುವಂತೆ ಊಟಮಾಡಿ ಜಠರಾಗ್ನಿ ಶಾಂತವಾಗಿ ಸಂತೃಪ್ತರಾದ ಮೇಲಷ್ಟೇ ಗೆಳೆಯರ ಕ್ಷೇಮ ಸಮಾಚಾರ ವಿಚಾರಿಸಲು ತೋಚಿದ್ದು ನಮಗೆ!

ಸುತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿದರೆ ಅಲ್ಲಿದ್ದವರಲ್ಲಿ ಹೆಚ್ಚಿನಂಶ ಅದಾಗಲೇ ನಮಗೆ ಗೀಜಗನ ಗೂಡು ಚಿತ್ರದ ಮೂಲಕ ಪರಿಚಯವಾಗಿದ್ದ ಕಲಾವಿದರೇ! ಟಿ.ಎಸ್.ರಂಗಾ, ಸುಂದರರಾಜ್, ರಮೇಶ್ ಭಟ್, ಕೋಕಿಲಾ ಮೋಹನ್, ಮೇಕಪ್ ರಾಮಕೃಷ್ಣ, ಜೆರ್ರಿ ಅನಂತರಾಮ್… ಜೊತೆಗೆ ವೈಶಾಲಿ, ಸುಂದರಶ್ರೀ, ಪದ್ಮಶ್ರೀ, ರತ್ನಮಾಲಾ ಪ್ರಕಾಶ್…

ಊಟವಾದ ಮೇಲೆ ಗೆಳೆಯರೊಂದಿಗೆ ಮಾತುಕತೆ ಆರಂಭವಾಯಿತು. ಆವರೆಗಿನ ನಮ್ಮ ಬವಣೆಗಳನ್ನೆಲ್ಲಾ ಸಾದ್ಯಂತವಾಗಿ ವಿವರಿಸಿದೆವು. “ಇಲ್ಲಿರಲಾರೆ.. ಅಲ್ಲಿಗೆ ಹೋಗಲಾರೆ” ಎಂಬಂತಾಗಿ ಹೋಗಿದ್ದ ನಮ್ಮ ಚಿಂತಾಜನಕ ಸ್ಥಿತಿಯ ಬಗ್ಗೆ ತಿಳಿದು ಅವರುಗಳಿಗೂ ತುಂಬಾ ಬೇಸರವಾಯಿತು. ಏನೋ ಯೋಚಿಸುತ್ತಾ ಕುಳಿತಿದ್ದ ಸುಂದರನಿಗೆ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ ನಮ್ಮತ್ತ ಹೊರಳಿ ಕೇಳಿದ: “ಈಗ ಏನ್ರಪ್ಪಾ, ನೀವು ಸಧ್ಯದ ಮಟ್ಟಿಗೆ ಬೆಂಗಳೂರಿಗೆ ಹೊರಟು ಬಿಡೋದು ಅಂತ ತೀರ್ಮಾನ ಮಾಡಿಕೊಂಡಿದೀರಾ?” “ಹೂಂ ಸುಂದರ.. ಒಂದ್ಸಲ ಬಂದು ಸ್ಕಾಲರ್ ಶಿಪ್ ವಿಷಯ ಎಲ್ಲಾನೂ ಇತ್ಯರ್ಥ ಮಾಡಿಕೊಂಡು ವಾಪಸ್ ಬರೋದು ಅಂದುಕೋತಿದೀವಿ. ಆದರೆ ಹೊರಡೋದಕ್ಕೆ ಒಂದು ವ್ಯವಸ್ಥೆ ಆದರೆ…” ಎಂದು ನಾನು ಮಾತು ಮುಗಿಸುವ ಮುನ್ನವೇ ಸುಂದರ ನುಡಿದ: “ವ್ಯವಸ್ಥೆ ನಾನು ಮಾಡಿಕೊಡ್ತೀನಿ.. ಯೋಚನೆ ಮಾಡಬೇಡಿ. ನಮ್ಮಇಬ್ಬರು ಕಲಾವಿದರು ಕೊನೇ ಕ್ಷಣದಲ್ಲಿ ಬರೋಕಾಗದೆ ಹೋಗಿದ್ದರಿಂದ ನಮ್ಮ ಹತ್ರ ಎರಡು ಟಿಕೆಟ್ ಉಳಕೊಂಡುಬಿಟ್ಟಿದೆ.. ಅವರ ಹೆಸರಲ್ಲಿ ನೀವು ನಮ್ಮ ಜೊತೆ ಬಂದು ಊರು ಸೇರಿಕೋಬಹುದು” ಎಂದ.

ನಮಗೆ ಆನಂದವೋ ಆನಂದ! ಒಂದು ಬಿಡಿಗಾಸಿನ ಖರ್ಚೂ ಇಲ್ಲದೆ ಊರು ತಲುಪಿಕೋಬಹುದು! ಸುಂದರ ಮುಂದುವರೆಸಿದ: “ಒಂದು ಸಮಸ್ಯೆ ಏನಪ್ಪಾ ಅಂದ್ರೆ ನೀವು ನಮ್ಮ ಟೂರ್ ಮುಗಿಯೋತನಕ ಊರಿಗೆ ಹೋಗೋಕಾಗಲ್ಲ.. ದೆಹಲಿ, ಆಗ್ರಾ, ಭೋಪಾಲ್, ಮದ್ರಾಸ್… ಇಷ್ಟು ಕಡೆ ಶೋ ಮುಗಿಸಿಕೊಂಡ ಮೇಲೇ ನಾವು ಬೆಂಗಳೂರು ತಲುಪೋದು.. ಪರವಾಗಿಲ್ಲವಾ ನಿಮಗೆ?”

“ನಮಗೇನೂ ತೊಂದರೆಯಿಲ್ಲ.. ನಾವು ನಿಮ್ಮ ಜೊತೆ ಬಂದುಬಿಡ್ತೀವಿ” ಎಂದು ಅರೆಚಣವೂ ತಡಮಾಡದೆ ಸುಂದರನಿಗೆ ಹೇಳಿಬಿಟ್ಟೆವು. ಹೊತ್ತುಹೊತ್ತಿಗೆ ಊಟ ತಿಂಡಿ, ಆತ್ಮೀಯ ಗೆಳೆಯರ ಸಹವಾಸ, ಪ್ರತಿದಿನ ನಾಟಕದ ರಿಹರ್ಸಲ್ ಹಾಗೂ ಪ್ರದರ್ಶನಗಳು, ಖರ್ಚಿಲ್ಲದೇ ಮನೆ ಸೇರಿಕೊಳ್ಳುವ ಸುವರ್ಣಾವಕಾಶ… ಬೇಡ ಎಂದು ಕೆಟ್ಟವರುಂಟೇ! “ಸರಿ.. ನಾಳೆ ಕ್ಲಾಸ್ ಗಳನ್ನು ಮುಗಿಸಿಕೊಂಡು ಆದಷ್ಟು ಬೇಗ ಲಗ್ಗೇಜ್ ತೊಗೊಂಡು ಇಲ್ಲಿಗೇ ಬಂದುಬಿಡಿ.. ಎಲ್ಲಾ ಜೊತೇಲಿ ಖುಷಿಯಾಗಿ ಕಾಲ ಕಳೆಯೋಣ” ಎಂದರು ರಂಗಾ. ನಾನು ಆಗಲಿ ಎಂದರೂ ಅಶೋಕನ ತಲೆ ಬೇರೆ ದಿಕ್ಕಿನಲ್ಲಿ ಓಡುತ್ತಿತ್ತು. “ಮುಂಜಾನಿ ಮಟ ಯಾಕೆ ಕಾಯಬೇಕು ರಂಗಾ? ನಾವು ಈಗಲೇ ಹೋಗಿ ಲಗ್ಗೇಜ್ ತಂದುಬಿಡ್ತೀವಿ.. ಕ್ಲಾಸ್ ನೆಟ್ಟಗೆ ನಡೆದರಲ್ಲೇನು ನಾವು ಹೋಗಿ ಅಲ್ಲಿ ಕುಂದ್ರೋದು!” ಎಂದವನೇ ನನ್ನತ್ತ ತಿರುಗಿ, “ನಡೀಲೇ.. ಹೋಗಿ ಲಗ್ಗೇಜ್ ತಂದು ಬಿಡೋಣು” ಎಂದು ಎಬ್ಬಿಸಿಕೊಂಡು ಹೊರಟೇಬಿಟ್ಟ. ಹೊರಗೆ ಬಂದಮೇಲೆ ನಾನು, “ಯಾಕಲೇ ಅಶ್ಯಾ.. ಮುಂಜಾನೆ ಆರಾಮಾಗಿ ಬರಬಹುದಿತ್ತಲ್ಲಾ.. ಈಗ ಒಟ್ಟಿಗೆ ಎರಡೆರಡು ಸಲಾ ನಡೆಯೋದೂ ತಪ್ತಿತ್ತು.. ಯಾಕಷ್ಟು ಅವಸರ ಮಾಡಿದಿ?” ಎಂದರೆ ಅಶೋಕ, “ಏ ಮಬ್ಬಿಡಿಸಿಗಂಡ, ಮುಂಜಾನೆ ಬರೋದು ತಡ ಆಗಿ ನಾಶ್ತಾ ಟೈಮ್ ತೀರಿಹೋದ್ರೆ ಏನು ಮಾಡ್ತೀ? ಮತ್ತೆ ಹೊಯ್ಕ ಬಡ್ಕ” ಎಂದು ಹೇಳಿ ತನ್ನ ಮುಂಜಾಗ್ರತೆಯನ್ನು ತಾನೇ ತಾರೀಫ್ ಮಾಡಿಕೊಂಡ!ಒಟ್ಟಿನಲ್ಲಿ ಬೆಳಕು ಹರಿಯುವುದಕ್ಕೆ ಕಾಯದೇ ಇಬ್ಬರೂ ಆಗಲೇ ಹಾಸ್ಟೆಲ್ ಗೆ ಹೋಗಿ ಅಗತ್ಯ ವಸ್ತುಗಳನ್ನು ಚೀಲಗಳಿಗೆ ತುಂಬಿಕೊಂಡು, ಆ ಸಮರಾತ್ರಿಯಲ್ಲೇ ಖುಷಿಖುಷಿಯಾಗಿ ದಾರಿಯುದ್ದಕ್ಕೂ ಹಾಡು ಹೇಳಿಕೊಳ್ಳುತ್ತಾ ನಡೆದುಕೊಂಡು ಬಂದು ತಂಡವನ್ನು ಸೇರಿಕೊಂಡು ಬಿಟ್ಟೆವು! ಎರಡೆರಡು ಬಾರಿ ನಡೆದುಕೊಂಡೇ ಸುತ್ತಿದರೂ ಒಂದಿಷ್ಟೂ ಆಯಾಸದ ಅನುಭವ ಭಾಸವಾಗದಷ್ಟು ನಿರಾಳದ ಮನಸ್ಥಿತಿ ನಮ್ಮದಾಗಿತ್ತು. ಅಶೋಕನಿಗಂತೂ ಎಷ್ಟೋ ದಿನಗಳ ನಂತರ ಊಟದ ಜೊತೆಗೆ ಸಿಗರೇಟ್ ಕೂಡಾ ಸೇದಲು ಸಿಕ್ಕಿದ್ದು ಮತ್ತೂ ಮಹದಾನಂದಕ್ಕೆ ಕಾರಣವಾಗಿಹೋಯಿತು!

ಆ ಸಂದರ್ಭದಲ್ಲಿ ಗೆಳೆಯರೊಂದಿಗೆ ನಡೆಸಿದ ಮಾತುಕತೆಯಲ್ಲಿ 70ರ ದಶಕದ ಆರಂಭದ ದಿನಗಳ ಹವ್ಯಾಸಿ ರಂಗಭೂಮಿಯನ್ನು ಕುರಿತಾಗಿ ಅನೇಕ ಹೊಸ ವಿಚಾರಗಳು ನಮ್ಮ ಅರಿವಿಗೆ ಬಂದವು. ಬಹಳಷ್ಟು ಸಂಗತಿಗಳು ಕಾರಂತ ಮೇಷ್ಟ್ರ ವಿಶಿಷ್ಟ ಪ್ರಯೋಗಗಳು ಹಾಗೂ ಕನ್ನಡ ರಂಗಭೂಮಿಗೆ ಅವರ ಕೊಡುಗೆಗಳನ್ನೂ ದಾಖಲಿಸುತ್ತವಾದ್ದರಿಂದ ಸಂಕ್ಷಿಪ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಕಾರಂತರು ಗಿರೀಶರ ‘ಹಯವದನ’ ನಾಟಕವನ್ನು ಮೊದಲಬಾರಿಗೆ ಬೆಂಗಳೂರಿನಲ್ಲಿ ಮಾಡಿಸಿದ್ದು 1972ರಲ್ಲಿ.. ಬಯಲು ರಂಗ ಪ್ರಯೋಗಗಳಾಗಿ ಕೆಲ ತಿಂಗಳುಗಳು ಕಳೆದ ಮೇಲೆ. ರಾಮಸ್ವಾಮಿ ಹಾಗೂ ಇಬ್ರಾಹಿಂ ಎಂಬ ಶಿವಮೊಗ್ಗ ಮೂಲದ ಇಬ್ಬರು ಸಹೃದಯಿ ನಾಟಕ ಪ್ರೇಮಿಗಳು (ವೃತ್ತಿಯಿಂದ ಕಂಟ್ರ್ಯಾಕ್ಟರ್ ಗಳು) ‘ಹಯವದನ’ ರಂಗಪ್ರಯೋಗದ ನಿರ್ಮಾಪಕರು. “ರಾಮಸ್ವಾಮಿ ಹಾಗೂ ಇಬ್ರಾಹಿಂ ಅರ್ಪಿಸುವ ನಾಟಕ” ಎಂದೇ ಕರಪತ್ರಗಳು ಹಾಗೂ ಪೋಸ್ಟರ್ ಗಳು ಮುದ್ರಣಗೊಂಡಿದ್ದವು!ಹವ್ಯಾಸೀ ರಂಗಭೂಮಿಯ ಕನ್ನಡ ನಾಟಕವೊಂದಕ್ಕೆ ಹೀಗೆ ತಂಡಗಳ ಹೊರತಾದ ನಿರ್ಮಾಪಕರೊಬ್ಬರು ದೊರೆತದ್ದು ನನ್ನ ಅರಿವಿನ ಮಟ್ಟಿಗೆ ಅದೇ ಮೊದಲು! ಕಾರಂತರು ಎರಡು ಬೇರೆ ಬೇರೆ ನಟವರ್ಗಗಳನ್ನು ಆರಿಸಿಕೊಂಡು ನಾಟಕ ಸಿದ್ಧಪಡಿಸಿದ್ದರು.

ಒಂದು ತಂಡದಲ್ಲಿ ಚಂದ್ರು (ಎಡಕಲ್ಲು ಗುಡ್ಡ) ದೇವದತ್ತನಾಗಿ, ಸುಂದರರಾಜ್ ಕಪಿಲನಾಗಿ ಹಾಗೂ ವೈಶಾಲಿಯವರು ಪದ್ಮಿನಿಯಾಗಿ ಪಾತ್ರ ನಿರ್ವಹಿಸಿದ್ದರೆ ಮತ್ತೊಂದು ತಂಡದಲ್ಲಿ ರಮೇಶ್ ಭಟ್ ದೇವದತ್ತನಾಗಿ, ಟಿ.ಎಸ್.ರಂಗಾ ಕಪಿಲನಾಗಿ ಹಾಗೂ ಸಂಧ್ಯಾ ಎಂಬ ಕಲಾವಿದೆ ಪದ್ಮಿನಿಯಾಗಿ ಅಭಿನಯಿಸುತ್ತಿದ್ದರು. ಸುಂದರರಾಜನಂತೂ ಆ ವೇಳೆಗಾಗಲೇ ‘ಕಾಡು’, ‘ಚೋಮನದುಡಿ’ ಮೊದಲಾದ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿ ಸ್ಟಾರ್ ನಟನಾಗಿಬಿಟ್ಟಿದ್ದ! ರಂಗಸಂಗೀತಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದ ಕಾರಂತರು ‘ಹಯವದನ’ ದಲ್ಲಿ ದೃಶ್ಯಗಳನ್ನು ರಂಗದ ಮೇಲೆ ಕಟ್ಟಿಕೊಟ್ಟ ಪರಿಯಂತೂ ಅನನ್ಯವಾದುದು. ನಂತರ 1975 ರಲ್ಲಿ ಕಾರಂತರು ‘ಶಕಶೈಲೂಷರು’ ತಂಡಕ್ಕೆ ‘ಸತ್ತವರ ನೆರಳು’ ನಾಟಕವನ್ನು ಮಾಡಿಸಿದರು.

1970 ರಲ್ಲಿ ಶ್ರೀರಂಗರು ನಡೆಸಿದ್ದ ಒಂದು ಯಶಸ್ವೀ ರಂಗಕಾರ್ಯಾಗಾರ ಅನೇಕ ಪ್ರತಿಭಾವಂತ ರಂಗಕರ್ಮಿಗಳನ್ನು ಬೆಳಕಿಗೆ ತಂದಿತ್ತು. ಅವರಲ್ಲಿ ಎನ್.ಕೆ.ಮೋಹನ್ ರಾಮ್ , ಎನ್.ಎ.ಸೂರಿ ಹಾಗೂ ಮೇಕಪ್ ರಾಮಕೃಷ್ಣ ಪ್ರಮುಖರು. ಅವರು ನಾಗಾಭರಣ, ಟಿ.ಎಸ್.ರಂಗಾ ಹಾಗೂ ಮತ್ತೂ ಕೆಲ ಗೆಳೆಯರೊಂದಿಗೆ ಸೇರಿ ಕಟ್ಟಿದ ತಂಡವೇ ‘ಶಕಶೈಲೂಷರು’ ತಂಡ. ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ ಇವರು ಪ್ರಯೋಗಿಸಿದ ‘ಜಸ್ಮಾ ಒಡನ್’ ನಾಟಕ, ರಂಗದ ಮೇಲೆ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಂತರದ ಇವರ ‘ಸತ್ತವರ ನೆರಳು’ ಪ್ರಯೋಗವಂತೂ ಕಾರಂತರ ದಕ್ಷ ನಿರ್ದೇಶನ ಹಾಗೂ ವಿಶಿಷ್ಟ ಸಂಗೀತ ಪ್ರಯೋಗದಿಂದಾಗಿ ರಂಗದ ಮೇಲೆ ಅಭೂತಪೂರ್ವ ಯಶಸ್ಸು ಗಳಿಸಿದ್ದು ಹವ್ಯಾಸೀ ಕನ್ನಡ ರಂಗಭೂಮಿಯಲ್ಲಿ ಒಂದು ಮುಖ್ಯ ಮೈಲಿಗಲ್ಲು. ಮಾತ್ರವಲ್ಲ, ಈ ನಾಟಕ ಬೆನಕ ತಂಡದ ಆಶ್ರಯದಲ್ಲಿ ಇಂದಿಗೂ ನಾಡಿನೆಲ್ಲೆಡೆ ಪ್ರಯೋಗಗಳನ್ನು ಕಾಣುತ್ತಿದೆ.

ಮುಂದೆ ಕಾರಂತರು ಬೇರೆ ಬೇರೆ ತಂಡಗಳಿಗೆ ತಾವು ನಿರ್ದೇಶಿಸಿದ್ದ ನಾಟಕಗಳನ್ನು ಒಂದು ತಂಡದ ತೆಕ್ಕೆಗೆ ತರುವ ಉದ್ದೇಶದಿಂದ ಹೊಸ ತಂಡವೊಂದನ್ನು ರೂಪಿಸಲು ನಿರ್ಧರಿಸಿದರು. ಈ ತಂಡಕ್ಕೆ ಮೊದಲು ನಾಮಕರಣವಾದದ್ದು ‘ಬೆಂಚಿನಾಕ’ (ಬೆಂಗಳೂರು ಚಿತ್ರ ನಾಟಕ ಕಲಾವಿದರು) ಎಂಬುದಾಗಿ. ಈ ಹೆಸರನ್ನು ಕೇಳಿ ಸಿಡಿಮಿಡಿಗೊಂಡ YNK ಅವರು, “ಥೂ.. ಥೂ.. ಏನು ಹೆಸರು ರೀ ಅದು? Stupid ಆಗಿದೆ.. ಬೆಂಚಿನಾಕ ಅನ್ನೋದು ಬೆಂಕಿಹಾಕ ಅನ್ನೋ ಥರ ಕೇಳುತ್ತೆ… ಅದರ ಬದಲು simple ಆಗಿ ‘ಬೆನಕ’ ಅನ್ನಿ ಸಾಕು.. ‘ಬೆಂಗಳೂರು ನಗರ ಕಲಾವಿದರು’ ಅಂತಲೂ ಆಗುತ್ತೆ.. ಗಣೇಶನ ಹೆಸರೂ ಆಗುತ್ತೆ” ಅಂದರಂತೆ. ಇದು ‘ಬೆನಕ’ ನಾಟಕ ತಂಡ ಕಾರಂತರ ನೇತೃತ್ವದಲ್ಲಿ ರೂಪುಗೊಂಡ ಬಗೆ. ಆ ತಂಡವೇ ಈಗ ದೆಹಲಿ, ಆಗ್ರಾ, ಭೋಪಾಲ್ ಹಾಗೂ ಮದ್ರಾಸ್ ಗಳಲ್ಲಿ ‘ಸತ್ತವರ ನೆರಳು’ ಹಾಗೂ ‘ಹಯವದನ’ ನಾಟಕಗಳ ಪ್ರದರ್ಶನಕ್ಕಾಗಿ ಹೊರಟಿರುವುದು…

ಹೀಗೆ ಬಿಡುವಿನ ಸಮಯದಲ್ಲೆಲ್ಲಾ ಗೆಳೆಯರು ನೆನಪಿನ ಬುತ್ತಿ ಬಿಚ್ಚಿ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯ ಮೆಟ್ಟಲುಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದರು.

ಮುಂದಿನ ಒಂದಷ್ಟು ದಿನಗಳು ಸಂಭ್ರಮದ ಹಬ್ಬದ ಹಾಗೆ ಕಳೆಯಿತೆಂದೇ ಹೇಳಬೇಕು. ಗೆಳೆಯ ಮೇಕಪ್ ರಾಮಕೃಷ್ಣ ನಮ್ಮ ಕೈಖರ್ಚಿಗೆ ಸ್ವಲ್ಪ ಹಣವನ್ನೂ ಕೊಟ್ಟಿದ್ದ. ಮಧ್ಯಾಹ್ನದ ಹಾಗೆ ಥಿಯೇಟರ್ ಗೆ ಹೋಗಿ ಪ್ರದರ್ಶನಕ್ಕೆ ರಂಗವನ್ನು ಸಜ್ಜುಗೊಳಿಸುವುದು, ಅಗತ್ಯವಿದ್ದ ಸಣ್ಣ ಪುಟ್ಟ ಪಾತ್ರಗಳ ಮಾತುಗಳನ್ನು ಕಲಿತುಕೊಂಡು ರಿಹರ್ಸಲ್ ಮಾಡಿಕೊಳ್ಳುವುದು, ಶೋ ಮುಗಿದ ಬಳಿಕ ಎಲ್ಲರೂ ಒಂದೆಡೆ ಸೇರಿ ಒಂದಷ್ಟು ಹೊತ್ತು ರಂಗಗೀತೆಗಳನ್ನು ಹಾಡುತ್ತಾ ಗೋಷ್ಠಿ ನಡೆಸುವುದು… ಮೇಷ್ಟ್ರೂ ಸಹಾ ಆಗಾಗ್ಗೆ ನಮ್ಮೊಟ್ಟಿಗೆ ಸೇರಿಬಿಟ್ಟರಂತೂ ಗೋಷ್ಠಿಗೆ ವಿಶೇಷ ರಂಗೇರಿಬಿಡುತ್ತಿತ್ತು.

ದೆಹಲಿಯಲ್ಲಿ ಎರಡೂ ನಾಟಕಗಳ ಯಶಸ್ವೀ ಪ್ರದರ್ಶನ ಮುಗಿಸಿಕೊಂಡು ನಾವು ಹೊರಟದ್ದು ಆಗ್ರಾಗೆ. ಇಲ್ಲೊಂದು ಸ್ವಾರಸ್ಯಕರ ಘಟನೆ ನಡೆಯಿತು: ನಾಟಕ ನೋಡಲು ಬಂದಿದ್ದವರಲ್ಲಿ ಬಹುಪಾಲು ಮಂದಿ ಕನ್ನಡೇತರರು. ಹಾಗಾಗಿ ನಾಟಕದ ಬಹು ನಿರೀಕ್ಷಿತ ಸಂದರ್ಭಗಳಲ್ಲೂ ಪ್ರೇಕ್ಷಕರ ನಗು—ಮೆಚ್ಚುಗೆ—ಚಪ್ಪಾಳೆಗಳ ಪ್ರೋತ್ಸಾಹ ದೊರೆಯದೆ ಕಲಾವಿದರು ಹೈರಾಣಾಗಿ ಹೋಗಿದ್ದರು. ಹಾಗೂ ಹೀಗೂ ಮಾಡಿ ನಾಟಕವನ್ನು ಮುಗಿಸಿದರೆ, ನಾಟಕ ಮುಗಿದದ್ದು ಪ್ರೇಕ್ಷಕರ ಅರಿವಿಗೇ ಬಾರದೆ ಕುಳಿತೇ ಇದ್ದರು! ಕೆಲ ನಿಮಿಷಗಳು ಕಾದು ನೋಡಿ ಕೊನೆಗೆ ಮೇಷ್ಟ್ರು ನಾಟಕದಲ್ಲಿಲ್ಲದ ‘ಮಂಗಳಂ ಶುಭ ಮಂಗಳಂ ಮಂಗಳಂ’ ಎಂದು ನಾಟಕ ಮುಗಿಯಿತೆಂದು ಕೈಸನ್ನೆ ಮಾಡಿಕೊಂಡು ಹಾಡತೊಡಗಿದ ಮೇಲೆಯೇ ಪ್ರೇಕ್ಷಕರಿಗೆ ಜ್ಞಾನೋದಯವಾಗಿ ಎದ್ದು ಹೊರಟದ್ದು! ಅಂದು ರಾತ್ರಿಯ ಗೋಷ್ಠಿಯಲ್ಲಿ ಇಂಥದೇ ಪ್ರಸಂಗಗಳನ್ನು ನೆನೆಸಿಕೊಂಡು ನಕ್ಕಿದ್ದೇ ನಕ್ಕಿದ್ದು! ಸುಂದರ ಹೇಳಿದ ಮತ್ತೊಂದು ಪ್ರಸಂಗ ಇದು: “ಹುಬ್ಬಳ್ಳಿಯಲ್ಲಿ ‘ಸತ್ತವರ ನೆರಳು’ ನಾಟಕದ ಪ್ರದರ್ಶನ. ಆಗೆಲ್ಲಾ ನಾಟಕದಲ್ಲಿ ಮೈಕ್ ಗಳನ್ನು ಬಳಸುವ ಪರಿಪಾಠವಿರಲಿಲ್ಲ. ಒಂದು ಸನ್ನಿವೇಶದಲ್ಲಿ ಕಲಾವಿದರ ಸಂಭಾಷಣೆ ಕೇಳಿಸದ ಒಬ್ಬ ಪ್ರೇಕ್ಷಕ ಮಹಾಶಯ ‘ಮೈಕ್’ ಎಂದು ಜೋರಾಗಿ ಕೂಗಿದ. ರಂಗದ ಮೇಲೆ ದಾಸರ ವೇಷದಲ್ಲಿದ್ದ ಮೇಷ್ಟ್ರು ಕೊಂಚ ಮುಂದೆ ಬಂದು ಅವನತ್ತ ತಿರುಗಿ “No mic!” ಎಂದು ಜೋರಾಗಿ ಹೇಳಿ ಕೈಯಲ್ಲಿ ತಾರಮ್ಮಯ್ಯ ಆಡಿಸಿಯೇ ಬಿಟ್ಟರು! ದಾಸರ ಇಂಗ್ಲೀಷ್ ಭಾಷಾ ಪ್ರಯೋಗ ಕೇಳಿ ಸಭಾಂಗಣವಷ್ಟೇ ಅಲ್ಲದೆ ರಂಗದ ಮೇಲೂ ನಗೆ ಬುಗ್ಗೆ!”

ಮುಂದೆ ಭೋಪಾಲ್ ಹಾಗೂ ಮದ್ರಾಸ್ ಗಳಲ್ಲಿ ಯಶಸ್ವೀ ಪ್ರದರ್ಶನಗಳ ನಂತರ ಊರಿಗೆ ಹೊರಡುವ ದಿನ ಬಂದೇಬಿಟ್ಟಿತು. ವಾಸ್ತವವಾಗಿ ಯಾರಿಗೂ ಊರಿಗೆ—ಮನೆಗೆ ಮರಳುವ ಮನಸ್ಸೇ ಇರಲಿಲ್ಲ! ಇಷ್ಟುಬೇಗ ಇಷ್ಟು ಸುಂದರ ರಂಗಯಾತ್ರೆ ಮುಗಿದೇ ಹೋಯಿತೇ ಎಂದು ಹಳಹಳಿಸಿಕೊಂಡು ಎಲ್ಲರೂ ಭಾರವಾದ ಮನಸ್ಸಿನಿಂದಲೇ ಬೀಳ್ಕೊಂಡೆವು.

‘ಗೀಜಗನ ಗೂಡು’ ಶೂಟಿಂಗ್ ಶುರುವಾದಾಗಿನಿಂದ ಮನೆಯವರೊಂದಿಗೆ ನಾನು ಕಳೆದ ಸಮಯ ತುಂಬಾ ಕಡಿಮೆ ಎಂದೇ ಹೇಳಬೇಕು. ಈಗ ಒಂದಷ್ಟು ದಿನ ನೆಮ್ಮದಿಯಾಗಿ ಮನೆಯಲ್ಲಿದ್ದು ಹೊತ್ತುಹೊತ್ತಿಗೆ ಊಟ ತಿಂಡಿ ತಿಂದುಕೊಂಡು ಒಂದಷ್ಟು ಓದು ಬರಹ ಮಾಡಿಕೊಂಡು ಹಾಯಾಗಿದ್ದುಬಿಡುತ್ತೇನೆ ಎಂದೆಲ್ಲಾ ಲೆಕ್ಕಾಚಾರ ಹಾಕಿಕೊಳ್ಳುತ್ತಾ ಮನೆಯೊಳಗೆ ಕಾಲಿರಿಸಿದೆ. ಆಗಿನ ನನ್ನ ಸ್ವರೂಪವನ್ನು ನೋಡಿ ಮನೆಯವರೆಲ್ಲರೂ ಗಾಬರಿಯಾಗಿಹೋದರು. ಮೊದಲೇ ತೆಳ್ಳನೆಯ ದೇಹ ಪ್ರಕೃತಿಯ ನಾನು ನೆಟ್ಟಗೆ ಹೊಟ್ಟೆಗಿಲ್ಲದೆ ವಿಪರೀತ ಸಣ್ಣಗಾಗಿ ಹೋಗಿದ್ದೆ. ಇದರ ಜೊತೆಗೆ ಸುಮಾರು ದಿನಗಳ ಉಪವಾಸದ ನಂತರ ಇದ್ದಕ್ಕಿದ್ದಹಾಗೆ ‘ಬೆನಕ’ ತಂಡದೊಂದಿಗೆ ಮೃಷ್ಟಾನ್ನಭೋಜನಗಳನ್ನು ಸವಿದದ್ದು ವ್ಯತಿರಿಕ್ತ ಪರಿಣಾಮವಾಗಿ ಆರೋಗ್ಯದಲ್ಲಿ ಏರುಪೇರುಗಳಾಗಿ ಹಾಸಿಗೆ ಹಿಡಿದು ಮಲಗಿಬಿಟ್ಟೆ. ಚೇತರಿಸಿಕೊಂಡು ಮೇಲೇಳಲು ಒಂದು ವಾರವೇ ಹಿಡಿಯಿತು.

ಅಮ್ಮನಂತೂ ‘ನಾನು ನಿನ್ನನ್ನು ಮತ್ತೆ ಡೆಲ್ಲಿಗೆ ಕಳಿಸುವುದಿಲ್ಲ… ಇಲ್ಲೇ ಕಣ್ಣೆದುರಿಗಿದ್ದು ಏನು ಬೇಕಾದರೂ ಮಾಡಿಕೋ’ ಎಂದು ಕಣ್ಣೀರಿಡತೊಡಗಿದರು. ಅವರಿಗೊಂದಿಷ್ಟು ಸಮಾಧಾನ ಹೇಳಿ ಗೆಳೆಯರನ್ನು ನೋಡಿಕೊಂಡು ಬರಲು ಕಲಾಕ್ಷೇತ್ರಕ್ಕೆ ಹೋದೆ. ಎಲ್ಲರಿಗೂ ನನ್ನನ್ನು ನೋಡಿ ಒಂದೆಡೆ ಸಂತೋಷ.. ನನ್ನ ಸ್ವರೂಪ ನೋಡಿ ಗಾಬರಿ! ಉಭಯಕುಶಲೋಪರಿಯ ನಂತರ ಅವರ ಅಭಿಪ್ರಾಯಗಳನ್ನು ತಿಳಿಯುವ ಸಲುವಾಗಿ ದೆಹಲಿಯಿಂದಲೇ ಸಿದ್ಧ ಪಡಿಸಿಕೊಂಡು ಬಂದಿದ್ದ ‘ಬೆಳ್ಳಿಗುಂಡು’ ನಾಟಕದ ಒಂದು ರೀಡಿಂಗ್ ಕೊಟ್ಟೆ. ನಾಟಕ ಎಲ್ಲರಿಗೂ ಇಷ್ಟವಾಯಿತು. ರಿಚಿ—ರಿಚರ್ಡ್ ಜಿ ಲೂಯಿಸ್—ಅಂತೂ “ರಿಹರ್ಸಲ್ ಶುರು ಮಾಡಿಬಿಡೋಣ.. show ಮುಗಿಸಿಕೊಂಡು ನೀನು ಡೆಲ್ಲಿಗೆ ಹೊರಡಬಹುದು” ಎಂದ! ಅಯ್ಯಯ್ಯೋ! ನಾನು ಈಗಲೇ ನಿರ್ದೇಶನಕ್ಕಿಳಿಯುವುದೇ! NSD ಯಲ್ಲಿ ಇನ್ನೂ ನೆಟ್ಟಗೆ ಒಂದು ವರ್ಷದ ಓದೂ ಮುಗಿದಿಲ್ಲ.. ಎಂದು ನಾನು ಅನುಮಾನಿಸಿದರೆ ನಳಿನಿ ಅಕ್ಕ ‘ಎಷ್ಟು ದಿವಸದಿಂದ ನಾಟಕ ಮಾಡ್ತಾನೇ ಇದೀಯಲ್ಲಾ.. ಇದೂ ಒಂಥರಾ training ಅಂತಾನೇ ಅಂದುಕೋ’ ಎಂದು ಹುರಿದುಂಬಿಸಿದಳು. ಜೊತೆಗೆ ಎಲ್ಲ ಗೆಳೆಯರ ಉತ್ತೇಜನವೂ ಸೇರಿಕೊಂಡು ಡಿಸೆಂಬರ್ ಕೊನೆಗೆ ‘ಬೆಳ್ಳಿಗುಂಡು’ ನಾಟಕವನ್ನು ನನ್ನ ನಿರ್ದೇಶನದಲ್ಲಿ ರಂಗಕ್ಕೆ ತರುವುದೆಂದು ತೀರ್ಮಾನವಾಗಿಯೇ ಹೋಯಿತು.

ಈಗಾಗಲೇ ಹೇಳಿರುವಂತೆ ‘ಬೆಳ್ಳಿಗುಂಡು’ ನಾಟಕದ ಮೂಲ, ಅಮೇರಿಕನ್ ನಾಟಕಕಾರ ಯೂಜೀನ್ ಓ ನೀಲ್ ನ ‘The Emperor Jones’. ಈ ನಾಟಕಕ್ಕೆ ಅವನು ಮೊದಲು ಇಟ್ಟಿದ್ದ ಹೆಸರು ‘Silver Bullet’! ನನಗೆ ಆ ಹೆಸರೇ ಹೆಚ್ಚು ಸೂಕ್ತವೆನಿಸಿದ್ದರಿಂದ ಕನ್ನಡದಲ್ಲಿ ‘ಬೆಳ್ಳಿಗುಂಡು’ ಎಂದೇ ನಾಮಕರಣ ಮಾಡಿದ್ದೆ. ‘The Emperor Jones’ ಒಂದು ಪ್ರಾಯೋಗಿಕ ನಾಟಕ; ಅಭಿವ್ಯಕ್ತಿ ಪಂಥ (Expressionism) ಹಾಗೂ ವಾಸ್ತವವಾದಿ ಪಂಥ (Realism) ಗಳೆರಡರ ಬೆಸುಗೆಯಂತೆ ಭಾಸವಾಗುವ ಈ ನಾಟಕದ ಹಿನ್ನೆಲೆಯಲ್ಲಿ ಅಮೆರಿಕೆಯ ಸಾಮ್ರಾಜ್ಯಶಾಹಿ ಧೋರಣೆಗಳನ್ನು ಕುರಿತಾದ ಖಂಡನೆಯ ದನಿ ಅಡಗಿತ್ತು. ನಾನು ಇದನ್ನು ಹೇಗೆ ರೂಪಾಂತರಿಸಿದ್ದೆನೆಂಬುದು ಈಗ ನನ್ನ ನೆನಪಿನಿಂದ ಹಾರಿಹೋಗಿದೆ. ಕಾರಣ ಇಷ್ಟೇ: ನಾನು ಬರೆದಿರುವ (ರೂಪಾಂತರ–ಅನುವಾದಗಳೂ ಸೇರಿ) ಸುಮಾರು ಇಪ್ಪತ್ತು ನಾಟಕಗಳ ಪೈಕಿ ನಾನು ಕಳೆದುಕೊಂಡಿರುವ ನಾಟಕವೆಂದರೆ ಇದೊಂದೇ! ಅದು ಯಾವಾಗ—ಹೇಗೆ ನನ್ನ ಕಡತದಿಂದ ಮಾಯವಾಗಿಹೋಯಿತೋ ಕಾಣೆ… ಇರಲಿ.

ಮರುದಿನದಿಂದಲೇ ರಿಹರ್ಸಲ್ ಪ್ರಾರಂಭವಾಗಿ ಹೋಯಿತು. ನಾಟಕದ ನಾಯಕ ಕಾಡು ಮೇಡುಗಳಲ್ಲಿ ಅಲೆಯುವ ದೃಶ್ಯಗಳೇ ಪ್ರಧಾನವಾದ್ದರಿಂದ ಕಲಾಕ್ಷೇತ್ರದ ಬಲಬದಿಗಿದ್ದ ಪುಟ್ಟ ಉದ್ಯಾನ ಹಾಗೂ ಅದಕ್ಕೆ ಹೊಂದಿಕೊಂಡಂತಿದ್ದ ಮೆಟ್ಟಿಲುಗಳ ಭಾಗವನ್ನೇ ಕೇಂದ್ರ ಸ್ಥಳವಾಗಿರಿಸಿಕೊಂಡು ರಂಗವಿನ್ಯಾಸವನ್ನು ರೂಪಿಸಿದೆ. ಗುಡ್ಡಗಾಡು ಜನರೊಂದಿಗಿನ ನಾಯಕನ ಮುಖಾಮುಖಿ ಮತ್ತೊಂದು ಪ್ರಧಾನ ಅಂಶವಾದ್ದರಿಂದ ನಾಟಕದುದ್ದಕ್ಕೂ ತಮಟೆ ವಾದ್ಯಧ್ವನಿಯನ್ನು ಬಳಸಲು ಯೋಜಿಸಿದೆ. ‘ನಾಯಕ’ನ ಮುಖ್ಯಪಾತ್ರಕ್ಕೆ ಬಿ.ವಿ.ರಾಜಾರಾಂ ನನ್ನು ಆರಿಸಿಕೊಂಡೆ. ರಾಜಾರಾಂ 74 ರಲ್ಲಿ ಕಾಲಿಗುಲಾ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಸೊಗಸಾಗಿ ನಟಿಸಿದ್ದು ನನ್ನ ಕಣ್ಣ ಮುಂದಿತ್ತು. ಜತೆಗೆ ಆ ವೇಳೆಗಾಗಲೇ ಕಂಚಿನ ಕಂಠದ, ಎತ್ತರದ ನಿಲುವಿನ ರಾಜಾರಾಂ ಹವ್ಯಾಸೀ ರಂಗಭೂಮಿಯ ಪ್ರತಿಭಾವಂತ ನಟನೆಂದು ಹೆಸರು ಪಡೆದಿದ್ದ. ಮತ್ತೊಂದು ಮುಖ್ಯಪಾತ್ರಕ್ಕೆ ಹಳೆಯ ಸಂಗಾತಿ-ಸಹನಟ ಸತ್ಯನಾರಾಯಣ ಭಟ್ ಅವರನ್ನು ಆರಿಸಿಕೊಂಡೆ. ಉಳಿದ ಪೋಷಕ ಪಾತ್ರಗಳನ್ನು ನಮ್ಮ ‘ಕನ್ನಡ ಸಾಹಿತ್ಯ ಕಲಾಸಂಘ’ದ ಗೆಳೆಯರು ನಿರ್ವಹಿಸುತ್ತಿದ್ದರು. ಹೊಸ ನಾಟಕದ ತಯಾರಿ ಭರದಿಂದ ಸಾಗತೊಡಗಿತು.

ಇದೇ ಸಮಯದಲ್ಲಿ ಒಮ್ಮೆ YNK ಅವರನ್ನು ಪ್ರಜಾವಾಣಿ ಕಛೇರಿಯಲ್ಲಿ ಭೇಟಿಯಾಗಿ ನಾಟಕದ ಬಗ್ಗೆ ಚರ್ಚಿಸಿ ಮಾರ್ಗದರ್ಶನ ಪಡೆದೆ. ನಾಟಕದ ಬಗೆಗಿನ ಚರ್ಚೆ ಮುಗಿದ ನಂತರ ಇದ್ದಕ್ಕಿದ್ದಹಾಗೆ YNK ಕೇಳಿದರು: “ನಾನು ಎರಡು ಮೂರು ದಿನ ಊರಲ್ಲಿರೋಲ್ಲ. ಶ್ರೀಪತಿ (ಅವರ ಸಹಾಯಕ) ಒಬ್ಬನೇ ಇರ್ತಾನೆ.. ಇನ್ನೂ ಚಿಕ್ಕವನು.. ಎರಡು ದಿನ ಅವನ ಜೊತೇಗೆ ನಮ್ಮ ಮನೇಲಿರೋಕೆ ಸಾಧ್ಯವೇ?”. “ಆಗಬಹುದು ಸರ್.. ಏನೂ ತೊಂದರೆ ಇಲ್ಲ.. ಅಲ್ಲೇ ನನ್ನ stage design ಉ ಇತ್ಯಾದಿ ಕೆಲಸಗಳನ್ನು ಮಾಡಿಕೋತೇನೆ.. ನೀವು ನಿಶ್ಚಿಂತೆಯಾಗಿ ಊರಿಗೆ ಹೋಗಿಬನ್ನಿ” ಎಂದು ಅವರಿಗೆ ಆಶ್ವಾಸನೆ ಕೊಟ್ಟು ಹೊರಟೆ.

ಮರುದಿನ ಕೊಂಚ ಬೇಗ ರಿಹರ್ಸಲ್ ಮುಗಿಸಿಕೊಂಡು YNK ಅವರ ಮನೆಗೆ ಹೋದೆ. ಶ್ರೀಪತಿ ನಗುಮೊಗದಿಂದ ಸ್ವಾಗತಿಸಿ ‘ಅವರೆಕಾಳು ಹುಳಿ ಮಾಡಿದೀನಿ.. ನೀವು ಹೇಳಿದಾಗ ಬಡಿಸ್ತೀನಿ’ ಎಂದು ನುಡಿದು ತನ್ನ ಕೆಲಸಗಳಲ್ಲಿ ತೊಡಗಿದ. ನಾನು YNK ಅವರ ರೂಂನಲ್ಲಿ ಕೆಳಗೆ ಹಾಸಿದ್ದ ಕಾರ್ಪೆಟ್ ಮೇಲೆ ನನ್ನ ಸಾಮ್ರಾಜ್ಯವನ್ನು ಹರಡಿಕೊಂಡು ರಂಗವಿನ್ಯಾಸದ ಪರಿಷ್ಕರಣದಲ್ಲಿ ಮಗ್ನನಾದೆ. ಒಂದಷ್ಟು ಸಮಯ ಕಳೆದಿರಬಹುದು. ಕೋಣೆಯ ಬಾಗಿಲ ಕಡೆಯಿಂದ ಧ್ವನಿಯೊಂದು ತೂರಿ ಬಂತು: ‘YNK ಅವರಿಲ್ವಾ?’. ಕತ್ತೆತ್ತಿ ನೋಡುತ್ತೇನೆ — ಬಾಗಿಲಿನಲ್ಲಿ ನಿಂತಿರುವವರು ಅನಂತನಾಗ್!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: