ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಕೃಷ್ಣ ಆಲನಹಳ್ಳಿ ದೋಸ್ತೋವಸ್ಕಿ ಬಗ್ಗೆ ಪಿಎಚ್ಡಿ ಮಾಡಲು ಹೊರಟಿದ್ದರು

prasanna santekadur

ಪ್ರಸನ್ನ ಸಂತೆಕಡೂರು 

ನಾನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮೊದಲ ಬಿಎಸ್ಸಿ ಓದುತ್ತಿದ್ದಾಗ ನಮ್ಮ ಆಂಗ್ಲ ಪಠ್ಯ ಪುಸ್ತಕದಲ್ಲಿ ಅಂಟೋನ್ ಚೆಕಾಫ್ ನ ‘ಗುಮಾಸ್ತನೊಬ್ಬನ ಸಾವು’ ಮತ್ತು ನಿಕೊಲಾಯಿ ಗೋಗಲ್ ನ ‘ನಿಲುವಂಗಿ’ ಕತೆಗಳಿದ್ದವು.

ನನ್ನ ದುರಾದೃಷ್ಟವೋ ಏನೋ ಆ ಕಥೆಗಳ ಮಹತ್ವ ಆಗ ತಿಳಿದಿರಲಿಲ್ಲ. ಭಾಷಾ ಪಠ್ಯವನ್ನ ಪರೀಕ್ಷೆಗೋಸ್ಕರ ಓದುತ್ತಿದ್ದ ವಿಜ್ಞಾನ ವಿದ್ಯಾರ್ಥಿ ಮಿತ್ರರುಗಳಿಗೂ ಆಸಕ್ತಿಯಿರಲಿಲ್ಲ. ಉಪನ್ಯಾಸಕರಿಗೂ ಅದರ ಅವಶ್ಯಕತೆ ಇರಲಿಲ್ಲ.

ಆಮೇಲೆ ಎಷ್ಟೋ ವರ್ಷಗಳ ನಂತರ ಆ ಕಥೆಗಳನ್ನ ಸ್ವಂತ ಆಸಕ್ತಿಯಿಂದ ಓದಿದಾಗ ರಷಿಯಾದ ಸಾಹಿತ್ಯದ ಅಗಾಧತೆ ಬಗ್ಗೆ ಅರಿವು ಮೂಡಿತು.

tolstoyಆ ನಂತರ ಓದುತ್ತಾ ಓದುತ್ತಾ ಹೋದ ಹಾಗೆ ಕನ್ನಡ ಸಾಹಿತಿಗಳ ಮೇಲೆ ರಷಿಯಾದ ಸಾಹಿತಿಗಳ ಪ್ರಭಾವ ತಿಳಿಯುತ್ತಾ ಹೋಯಿತು. ಮಾಸ್ತಿಯವರ ಮೇಲೆ ಜಗತ್ತು ಕಂಡ ಶ್ರೇಷ್ಟ ಸಾಹಿತಿ ಲಿಯೋ ಟಾಲ್ ಸ್ಟಾಯನ ಪ್ರಭಾವ ತುಂಬಾ ಇದೆ. ಮಾಸ್ತಿಯವರು ಟಾಲ್ ಸ್ಟಾಯನ ಕೊನೆಯ ದಿನಗಳ ಬಗ್ಗೆ ಒಂದು ಕಥೆಯನ್ನೇ ಬರೆದಿದ್ದಾರೆ ( ‘ಟಾಲ್ ಸ್ಟಾಯ್ ಪ್ರಭುವಿನ ಭೂರ್ಜ ವೃಕ್ಷಗಳು’). ಕಾರಂತರ ಬೆಟ್ಟದ ಜೀವ ಸ್ವಲ್ಪ ಮಟ್ಟಿಗೆ ಗೋಗಲ್ ನ “ಹಳೆಯ ಕಾಲದ ರೈತರು” ಎಂಬ ಕಥೆಯನ್ನ ಹೋಲುತ್ತದೆ.

ನಿರಂಜನರು ಮ್ಯಾಕ್ಸಿಮ್ ಗಾರ್ಕಿಯ ‘ದಿ ಮದರ್’ ಕಾದಂಬರಿಯನ್ನ ಕನ್ನಡಕ್ಕೆ ತಂದಿದ್ದಾರೆ. ಅದನ್ನೇ ಹೋಲುವ “ಚಿರಸ್ಮರಣೆ” ಕಾದಂಬರಿಯನ್ನ ಕನ್ನಡದಲ್ಲಿ ಬರೆದಿದ್ದಾರೆ. ಅ.ನ.ಕೃ. ಮ್ಯಾಕ್ಸಿಮ್ ಗಾರ್ಕಿಯ ಜೀವನ ಚರಿತ್ರೆಯನ್ನ ಕನ್ನಡದಲ್ಲಿ ಬರೆದಿದ್ದಾರೆ. ತ.ರಾ.ಸು. ಇವಾನ್ ಟುರ್ಗೆನೆವ್ ನ ಒಂದು ಕಾದಂಬರಿಯನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ.

ಪಿ. ಲಂಕೇಶ್ ಅವರು ಟಾಲ್ ಸ್ಟಾಯ್ ನ ತುಂಬಾ ಇಷ್ಟಪಡುತ್ತಿದ್ದರು ಮತ್ತು ಟಾಲ್ ಸ್ಟಾಯನ ಬಗ್ಗೆ ಒಂದು ಕಥೆಯನ್ನ ಬರೆದಿದ್ದಾರೆ. ಬೆಸಗರಹಳ್ಳಿ ರಾಮಣ್ಣ ನವರು ದೋಸ್ತೋವಸ್ಕಿ ಮತ್ತು ಚೆಕಾಫ್ ನ ಕಥೆಗಳಿಂದ ಪ್ರಭಾವಿತರಾಗಿದ್ದರು. ಚೆಕಾಫ್ ನ ‘ಗೋಸುಂಬೆ’ ಕಥೆಯನ್ನ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ದೇ.ಜ.ಗೌ. ಟಾಲ್ ಸ್ಟಾಯನ ‘ಸಮರ ಮತ್ತು ಶಾಂತಿ’, ‘ಅನ್ನಕರೆನಿನಾ’, ‘ಪುನರುತ್ಥಾನ’ವನ್ನ ಕನ್ನಡಕ್ಕೆ ತಂದಿದ್ದಾರೆ.

ಓ.ಎಲ್. ನಾಗಭೂಷಣ್ ಅವರು ‘ಸಮರ ಮತ್ತು ಶಾಂತಿ’ಯನ್ನ ಕನ್ನಡಕ್ಕೆ ತಂದಿದ್ದಾರೆ. ದಿವಾಕರ್ ಎಸ್ ರವರು ಇವಾನ್ ಬುನಿನ್ ನ ‘ಹಳ್ಳಿ’ ಕಾದಂಬರಿಯನ್ನ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದಲ್ಲದೇ ಹಲವಾರು ಸಾಹಿತಿಗಳು ಪುಷ್ಕಿನ್, ಗೋಗಲ್, ಟುರ್ಗೆನೆವ್, ಟಾಲ್ಸ್ಟಾಯ್, ದೋಸ್ತೋವಸ್ಕಿ, ಗಾರ್ಕಿ, ಬಬೆಲ್, ಬುನಿನ್ ನಿಂದ ಇತ್ತೀಚಿನ ರಷಿಯಾದ ಸಾಹಿತಿಗಳ ಕತೆ ಕಾದಂಬರಿಗಳನ್ನ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಮತ್ತು ಅವುಗಳಿಂದ ಪ್ರಭಾವಿತರಾಗಿದ್ದಾರೆ.

ಇನ್ನು ಆಲನಹಳ್ಳಿ ಶ್ರೀಕೃಷ್ಣ ರವರು ದೋಸ್ತೋವಸ್ಕಿಯ ಕುರಿತು ಪಿ.ಎಚ್.ಡಿ. ಮಾಡಲು ಪ್ರಯತ್ನ ಪಟ್ಟಿದ್ದರು. ದೋಸ್ತೋವಸ್ಕಿಯ ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿ ಕನ್ನಡದಲ್ಲಿ ‘ಏಳು ಸುತ್ತಿನ ಕೋಟೆ’ ಚಲನ ಚಿತ್ರವಾಗಿದೆ. ರಷಿಯಾದ ಸಾಹಿತಿಗಳ ಪ್ರಭಾವ ಕನ್ನಡವಷ್ಟೇ ಅಲ್ಲದೆ ಜಗತ್ತಿನ ಎಲ್ಲಾ ಸಾಹಿತಿಗಳ ಮೇಲೂ ಬಹಳವಾಗಿ ಆಗಿದೆ.

‍ಲೇಖಕರು Admin

6 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading